ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 102
ಸಾರ
ನಾರದನು ಸುಮುಖನ ಅಜ್ಜ ಆರ್ಯಕನಿಗೆ ಮಾತಲಿಯ ಪರಿಚಯ ಮಾಡಿಕೊಟ್ಟು, ಗುಣಕೇಶಿಯನ್ನು ಸುಮುಖನ ಪತ್ನಿಯನ್ನಾಗಿ ಸ್ವೀಕರಿಸಬೇಕೆಂದು ಕೇಳಿದುದು (1-11). ಆಗ ಆರ್ಯಕನು ಇನ್ನೊಂದು ತಿಂಗಳಿನಲ್ಲಿ ಗರುಡನು ಸುಮುಖನನ್ನು ಭಕ್ಷಿಸುವವನಿದ್ದಾನೆಂದು ತಿಳಿಸಿದುದು (12-16). ಅನಂತರ ಮಾತಲಿ-ನಾರದರು ಸುಮುಖನನ್ನು ಕರೆದುಕೊಂಡು ಇಂದ್ರನಲ್ಲಿಗೆ ಬಂದು ವಿಷಯವೆಲ್ಲವನ್ನೂ ತಿಳಿಸಲು ಅಲ್ಲಿದ್ದ ವಿಷ್ಣುವು ಸುಮುಖನಿಗೆ ಅಮೃತವನ್ನು ಕೊಡೆಂದು ಸೂಚಿಸಿದುದು ಮತ್ತು ಇಂದ್ರನು ಅವನಿಗೆ ದೀರ್ಘ ಆಯುಸ್ಸನ್ನು ನೀಡಿದುದು (17-29).
05102001 ನಾರದ ಉವಾಚ।
05102001a ಸೂತೋಽಯಂ ಮಾತಲಿರ್ನಾಮ ಶಕ್ರಸ್ಯ ದಯಿತಃ ಸುಹೃತ್।
05102001c ಶುಚಿಃ ಶೀಲಗುಣೋಪೇತಸ್ತೇಜಸ್ವೀ ವೀರ್ಯವಾನ್ಬಲೀ।।
ನಾರದನು ಹೇಳಿದನು: “ಇವನು ಮಾತಲಿಯೆಂಬ ಹೆಸರಿನ ಶಕ್ರನ ಸೂತ ಮತ್ತು ಅವನ ಪ್ರೀತಿಯ ಸ್ನೇಹಿತ. ಇವನು ಶುಚಿ, ಶೀಲಗುಣೋಪೇತ, ತೇಜಸ್ವೀ, ವೀರ್ಯವಂತ ಮತ್ತು ಬಲಶಾಲಿಯೂ ಕೂಡ.
05102002a ಶಕ್ರಸ್ಯಾಯಂ ಸಖಾ ಚೈವ ಮಂತ್ರೀ ಸಾರಥಿರೇವ ಚ।
05102002c ಅಲ್ಪಾಂತರಪ್ರಭಾವಶ್ಚ ವಾಸವೇನ ರಣೇ ರಣೇ।।
ಇವನು ಶಕ್ರನ ಸಖ, ಮಂತ್ರಿ ಮತ್ತು ಸಾರಥಿಯೂ ಕೂಡ. ರಣ ರಣಗಳಲ್ಲಿಯೂ ಪ್ರಭಾವದಲ್ಲಿ ಇವನ ಮತ್ತು ವಾಸವನ ನಡುವೆ ಸ್ವಲ್ಪವೇ ವ್ಯತ್ಯಾಸವಿರುವುದು ಕಾಣಿಸುತ್ತದೆ.
05102003a ಅಯಂ ಹರಿಸಹಸ್ರೇಣ ಯುಕ್ತಂ ಜೈತ್ರಂ ರಥೋತ್ತಮಂ।
05102003c ದೇವಾಸುರೇಷು ಯುದ್ಧೇಷು ಮನಸೈವ ನಿಯಚ್ಚತಿ।।
ದೇವಾಸುರರ ಯುದ್ಧಗಳಲ್ಲಿ ಇವನೇ ಸಹಸ್ರ ಕುದುರೆಗಳನ್ನು ಕಟ್ಟಿದ ಉತ್ತಮ ಚೈತ್ರ ರಥವನ್ನು ಮನಸ್ಸಿನಲ್ಲಿಯೇ ನಡೆಸಿದ್ದಾನೆ.
05102004a ಅನೇನ ವಿಜಿತಾನಶ್ವೈರ್ದೋರ್ಭ್ಯಾಂ ಜಯತಿ ವಾಸವಃ।
05102004c ಅನೇನ ಪ್ರಹೃತೇ ಪೂರ್ವಂ ಬಲಭಿತ್ಪ್ರಹರತ್ಯುತ।।
ಇವನು ಅಶ್ವಗಳ ಮೇಲೆ ವಿಜಯವನ್ನು ಸಾಧಿಸಿದುದರಿಂದ ವಾಸವನು ಅರಿಗಳನ್ನು ಜಯಿಸಿದನು. ಮೊದಲೇ ಇವನು ಹೊಡೆದವರ ಮೇಲೆ ಬಲಭಿತನು ಹೊಡೆದನು.
05102005a ಅಸ್ಯ ಕನ್ಯಾ ವರಾರೋಹಾ ರೂಪೇಣಾಸದೃಶೀ ಭುವಿ।
05102005c ಸತ್ತ್ವಶೀಲಗುಣೋಪೇತಾ ಗುಣಕೇಶೀತಿ ವಿಶ್ರುತಾ।।
ಇವನ ಕನ್ಯೆ, ವರಾರೋಹೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಾಳೆ. ಸತ್ವಶೀಲಗುಣೋಪೇತಳಾದ ಅವಳು ಗುಣಕೇಶೀ ಎಂದು ವಿಶ್ರುತಳಾಗಿದ್ದಾಳೆ.
05102006a ತಸ್ಯಾಸ್ಯ ಯತ್ನಾಚ್ಚರತಸ್ತ್ರೈಲೋಕ್ಯಮಮರದ್ಯುತೇ।
05102006c ಸುಮುಖೋ ಭವತಃ ಪೌತ್ರೋ ರೋಚತೇ ದುಹಿತುಃ ಪತಿಃ।।
ಈ ಅಮರದ್ಯುತಿಯು ಅವಳಿಗೆ ವರನನ್ನು ಹುಡುಕಿಕೊಂಡು ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದಾನೆ. ನಿನ್ನ ಮೊಮ್ಮಗ ಸುಮುಖನು ತನ್ನ ಮಗಳಿಗೆ ಪತಿಯಾಗಬೇಕೆಂದು ಬಯಸಿದ್ದಾನೆ.
05102007a ಯದಿ ತೇ ರೋಚತೇ ಸೌಮ್ಯ ಭುಜಗೋತ್ತಮ ಮಾಚಿರಂ।
05102007c ಕ್ರಿಯತಾಮಾರ್ಯಕ ಕ್ಷಿಪ್ರಂ ಬುದ್ಧಿಃ ಕನ್ಯಾಪ್ರತಿಗ್ರಹೇ।।
ಆರ್ಯಕ! ಭುಜಗೋತ್ತಮ! ಸೌಮ್ಯ! ಒಂದುವೇಳೆ ನಿನಗೂ ಇದು ಇಷ್ಟವಾದರೆ, ಬೇಗನೇ ಕನ್ಯೆಯನ್ನು ಸ್ವೀಕರಿಸುವ ಮನಸ್ಸು ಮಾಡಬೇಕು.
05102008a ಯಥಾ ವಿಷ್ಣುಕುಲೇ ಲಕ್ಷ್ಮೀರ್ಯಥಾ ಸ್ವಾಹಾ ವಿಭಾವಸೋಃ।
05102008c ಕುಲೇ ತವ ತಥೈವಾಸ್ತು ಗುಣಕೇಶೀ ಸುಮಧ್ಯಮಾ।।
ವಿಷ್ಣುವಿನ ಕುಲದಲ್ಲಿ ಲಕ್ಷ್ಮಿಯು ಹೇಗೋ, ವಿಭಾವಸುವಿನಲ್ಲಿ ಸ್ವಾಹಾಳು ಹೇಗೋ ಹಾಗೆ ಸುಮಧ್ಯಮೆ ಗುಣಕೇಶಿಯು ನಿನ್ನ ಕುಲದಲ್ಲಿ ಇರುವಂತಾಗಲಿ.
05102009a ಪೌತ್ರಸ್ಯಾರ್ಥೇ ಭವಾಂಸ್ತಸ್ಮಾದ್ಗುಣಕೇಶೀಂ ಪ್ರತೀಚ್ಚತು।
05102009c ಸದೃಶೀಂ ಪ್ರತಿರೂಪಸ್ಯ ವಾಸವಸ್ಯ ಶಚೀಮಿವ।।
ಆದುದರಿಂದ ನೀನು ಮೊಮ್ಮಗನಿಗಾಗಿ ವಾಸವನಿಗೆ ಶಚಿಯಂತೆ ಸದೃಶಳೂ, ಪ್ರತಿರೂಪಳೂ ಆಗಿರುವ ಗುಣಕೇಶಿಯನ್ನು ಸ್ವೀಕರಿಸಬೇಕು.
05102010a ಪಿತೃಹೀನಮಪಿ ಹ್ಯೇನಂ ಗುಣತೋ ವರಯಾಮಹೇ।
05102010c ಬಹುಮಾನಾಚ್ಚ ಭವತಸ್ತಥೈವೈರಾವತಸ್ಯ ಚ।
05102010e ಸುಮುಖಸ್ಯ ಗುಣೈಶ್ಚೈವ ಶೀಲಶೌಚದಮಾದಿಭಿಃ।।
ನಿನ್ನ ಮತ್ತು ಐರಾವತನ ಬಹಳ ಮಾನವನ್ನು ಅರಿತು, ತಂದೆಯನ್ನು ಕಳೆದುಕೊಂಡಿದ್ದರೂ, ಸುಮುಖನ ಗುಣ, ಶೀಲ, ಶೌಚಗಳನ್ನು ತಿಳಿದು ಗುಣವಂತನಾದ ಇವನನ್ನು ವರನನ್ನಾಗಿ ಆರಿಸಿಕೊಂಡಿದ್ದೇವೆ.
05102011a ಅಭಿಗಮ್ಯ ಸ್ವಯಂ ಕನ್ಯಾಮಯಂ ದಾತುಂ ಸಮುದ್ಯತಃ।
05102011c ಮಾತಲೇಸ್ತಸ್ಯ ಸಮ್ಮಾನಂ ಕರ್ತುಮರ್ಹೋ ಭವಾನಪಿ।।
ಇವನು ಸ್ವಯಂ ಬಂದು ಕನ್ಯೆಯನ್ನು ಕೊಡಲು ಸಿದ್ಧನಿದ್ದಾನೆ. ನೀನೂ ಕೂಡ ಈ ಮಾತಲಿಯ ಸಮ್ಮಾನವನ್ನು ಮಾಡಬೇಕು.””
05102012 ಕಣ್ವ ಉವಾಚ।
05102012a ಸ ತು ದೀನಃ ಪ್ರಹೃಷ್ಟಶ್ಚ ಪ್ರಾಹ ನಾರದಮಾರ್ಯಕಃ।
05102012c ವ್ರಿಯಮಾಣೇ ತಥಾ ಪೌತ್ರೇ ಪುತ್ರೇ ಚ ನಿಧನಂ ಗತೇ।।
ಕಣ್ವನು ಹೇಳಿದನು: “ನಾರದನು ಹೀಗೆ ಹೇಳಲು ಆರ್ಯಕನು ಮಗನ ಮರಣವನ್ನು ನೆನೆದು ದುಃಖಿತನೂ ಮತ್ತು ಮೊಮ್ಮಗನನ್ನು ಕೇಳುತ್ತಿದ್ದಾರೆಂದು ಹರ್ಷಿತನೂ ಆಗಿ ಹೇಳಿದನು.
05102013a ನ ಮೇ ನೈತದ್ಬಹುಮತಂ ದೇವರ್ಷೇ ವಚನಂ ತವ।
05102013c ಸಖಾ ಶಕ್ರಸ್ಯ ಸಂಯುಕ್ತಃ ಕಸ್ಯಾಯಂ ನೇಪ್ಸಿತೋ ಭವೇತ್।।
“ದೇವರ್ಷೇ! ನಿನ್ನ ಮಾತಿಗೆ ಬಹುಮತವಿಲ್ಲದೇ ಇಲ್ಲ. ಯಾರು ತಾನೇ ಶಕ್ರನ ಈ ಸಖನೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುವುದಿಲ್ಲ?
05102014a ಕಾರಣಸ್ಯ ತು ದೌರ್ಬಲ್ಯಾಚ್ಚಿಂತಯಾಮಿ ಮಹಾಮುನೇ।
05102014c ಅಸ್ಯ ದೇಹಕರಸ್ತಾತ ಮಮ ಪುತ್ರೋ ಮಹಾದ್ಯುತೇ।
05102014e ಭಕ್ಷಿತೋ ವೈನತೇಯೇನ ದುಃಖಾರ್ತಾಸ್ತೇನ ವೈ ವಯಂ।।
ಮಹಾಮುನೇ! ಆದರೆ ನಮ್ಮ ದೌರ್ಬಲ್ಯದ ಕಾರಣದ ಕುರಿತು ಚಿಂತಿಸುತ್ತಿದ್ದೇನೆ. ಅಯ್ಯಾ! ಇವನ ತಂದೆ, ನನ್ನ ಮಗ ಮಹಾದ್ಯುತಿಯನ್ನು ವೈನತೇಯನು ಭಕ್ಷಿಸಿದನು. ಅದರಿಂದಲೇ ನಾವು ದುಃಖಾರ್ತರಾಗಿದ್ದೇವೆ.
05102015a ಪುನರೇವ ಚ ತೇನೋಕ್ತಂ ವೈನತೇಯೇನ ಗಚ್ಚತಾ।
05102015c ಮಾಸೇನಾನ್ಯೇನ ಸುಮುಖಂ ಭಕ್ಷಯಿಷ್ಯ ಇತಿ ಪ್ರಭೋ।।
ಪ್ರಭೋ! ಹೋಗುವಾಗ ವೈನತೇಯನು ಪುನಃ ಹೇಳಿದ್ದಾನೆ - ಇನ್ನೊಂದು ತಿಂಗಳಲ್ಲಿ ಸುಮುಖನನ್ನು ಭಕ್ಷಿಸುತ್ತೇನೆ - ಎಂದು.
05102016a ಧ್ರುವಂ ತಥಾ ತದ್ಭವಿತಾ ಜಾನೀಮಸ್ತಸ್ಯ ನಿಶ್ಚಯಂ।
05102016c ತೇನ ಹರ್ಷಃ ಪ್ರನಷ್ಟೋ ಮೇ ಸುಪರ್ಣವಚನೇನ ವೈ।।
ಅದರಂತೆಯೇ ನಿಶ್ಚಯವಾಗಿಯೂ ಆಗುತ್ತದೆ ಎಂದು ನಮಗೆ ತಿಳಿದಿದೆ. ಸುಪರ್ಣನ ಈ ಮಾತಿನಿಂದ ನಮ್ಮ ಸಂತೋಷವೆಲ್ಲವೂ ನಷ್ಟವಾಗಿದೆ.”
05102017a ಮಾತಲಿಸ್ತ್ವಬ್ರವೀದೇನಂ ಬುದ್ಧಿರತ್ರ ಕೃತಾ ಮಯಾ।
05102017c ಜಾಮಾತೃಭಾವೇನ ವೃತಃ ಸುಮುಖಸ್ತವ ಪುತ್ರಜಃ।।
ಆಗ ಮಾತಲಿಯು ಇದನ್ನು ಹೇಳಿದನು: “ನಾನೊಂದು ಯೋಚನೆಯನ್ನು ಮಾಡಿದ್ದೇನೆ. ನಿನ್ನ ಮೊಮ್ಮಗ ಸುಮುಖನನ್ನು ನನ್ನ ಅಳಿಯನೆಂದು ಆರಿಸಿಕೊಂಡಿದ್ದೇನೆ.
05102018a ಸೋಽಯಂ ಮಯಾ ಚ ಸಹಿತೋ ನಾರದೇನ ಚ ಪನ್ನಗಃ।
05102018c ತ್ರಿಲೋಕೇಶಂ ಸುರಪತಿಂ ಗತ್ವಾ ಪಶ್ಯತು ವಾಸವಂ।।
ಈ ಪನ್ನಗನು ನನ್ನ ಮತ್ತು ನಾರದನೊಡನೆ ಬರಲಿ. ಹೋಗಿ ತ್ರಿಲೋಕೇಶ ಸುರಪತಿ ವಾಸವನನ್ನು ಕಾಣೋಣ.
05102019a ಶೇಷೇಣೈವಾಸ್ಯ ಕಾರ್ಯೇಣ ಪ್ರಜ್ಞಾಸ್ಯಾಮ್ಯಹಮಾಯುಷಃ।
05102019c ಸುಪರ್ಣಸ್ಯ ವಿಘಾತೇ ಚ ಪ್ರಯತಿಷ್ಯಾಮಿ ಸತ್ತಮ।।
ಸತ್ತಮ! ಸುಪರ್ಣನ ಕಾರ್ಯದಲ್ಲಿ ವಿಘ್ನವನ್ನು ತರಲು ಪ್ರಯತ್ನಿಸುತ್ತೇನೆ. ಇವನಿಗೆ ಸಾಕಷ್ಟು ಆಯುಷ್ಯವು ಉಳಿಯುವಂತೆಯೂ ಮಾಡೋಣ.
05102020a ಸುಮುಖಶ್ಚ ಮಯಾ ಸಾರ್ಧಂ ದೇವೇಶಮಭಿಗಚ್ಚತು।
05102020c ಕಾರ್ಯಸಂಸಾಧನಾರ್ಥಾಯ ಸ್ವಸ್ತಿ ತೇಽಸ್ತು ಭುಜಂಗಮ।।
ಕಾರ್ಯ ಸಿದ್ಧಿಗಾಗಿ ನನ್ನೊಡನೆ ಸುಮುಖನೂ ಕೂಡ ದೇವೇಶನಲ್ಲಿಗೆ ಬರಬೇಕು. ಭುಜಂಗಮ! ನಿನಗೆ ಮಂಗಳವಾಗಲಿ!”
05102021a ತತಸ್ತೇ ಸುಮುಖಂ ಗೃಹ್ಯ ಸರ್ವ ಏವ ಮಹೌಜಸಃ।
05102021c ದದೃಶುಃ ಶಕ್ರಮಾಸೀನಂ ದೇವರಾಜಂ ಮಹಾದ್ಯುತಿಂ।।
ಆಗ ಆ ಮಹೌಜಸ ಸುಮುಖನನ್ನು ಕರೆದುಕೊಂಡು ಎಲ್ಲರೂ ಆಸೀನನಾಗಿದ್ದ ದೇವರಾಜ, ಮಹಾದ್ಯುತಿ ಶಕ್ರನನ್ನು ಕಂಡರು.
05102022a ಸಂಗತ್ಯಾ ತತ್ರ ಭಗವಾನ್ವಿಷ್ಣುರಾಸೀಚ್ಚತುರ್ಭುಜಃ।
05102022c ತತಸ್ತತ್ಸರ್ವಮಾಚಖ್ಯೌ ನಾರದೋ ಮಾತಲಿಂ ಪ್ರತಿ।।
ಅಲ್ಲಿ ಅವನೊಡನೆ ಚತುರ್ಭುಜ ಭಗವಾನ್ ವಿಷ್ಣುವೂ ಇದ್ದನು. ಅವರಿಗೆ ಮಾತಲಿ ನಾರದರಿಬ್ಬರೂ ಎಲ್ಲವನ್ನೂ ಹೇಳಿದರು.
05102023a ತತಃ ಪುರಂದರಂ ವಿಷ್ಣುರುವಾಚ ಭುವನೇಶ್ವರಂ।
05102023c ಅಮೃತಂ ದೀಯತಾಮಸ್ಮೈ ಕ್ರಿಯತಾಮಮರೈಃ ಸಮಃ।।
ಆಗ ವಿಷ್ಣುವು ಭುವನೇಶ್ವರ ಪುರಂದರನಿಗೆ ಹೇಳಿದನು: “ಇವನಿಗೆ ಅಮೃತವನ್ನಿತ್ತು ಅಮರರ ಸಮನನ್ನಾಗಿ ಮಾಡು.
05102024a ಮಾತಲಿರ್ನಾರದಶ್ಚೈವ ಸುಮುಖಶ್ಚೈವ ವಾಸವ।
05102024c ಲಭಂತಾಂ ಭವತಃ ಕಾಮಾತ್ಕಾಮಮೇತಂ ಯಥೇಪ್ಸಿತಂ।।
ವಾಸವ! ಇದರಿಂದ ಮಾತಲಿ, ನಾರದ, ಸುಮುಖರಿಗೆ ಬೇಕಾದುದನ್ನು ನಿನ್ನ ಕೃಪೆಯಿಂದ ಪಡೆಯುವಂತಾಗುತ್ತದೆ.’
05102025a ಪುರಂದರೋಽಥ ಸಂಚಿಂತ್ಯ ವೈನತೇಯಪರಾಕ್ರಮಂ।
05102025c ವಿಷ್ಣುಮೇವಾಬ್ರವೀದೇನಂ ಭವಾನೇವ ದದಾತ್ವಿತಿ।।
ವೈನತೇಯನ ಪರಾಕ್ರಮದ ಕುರಿತು ಯೋಚಿಸಿ ಪುರಂದರನು ವಿಷ್ಣುವಿಗೆ “ಅದನ್ನು ನೀನೇ ಕೊಡು!” ಎಂದನು.
05102026 ವಿಷ್ಣುರುವಾಚ।
05102026a ಈಶಸ್ತ್ವಮಸಿ ಲೋಕಾನಾಂ ಚರಾಣಾಮಚರಾಶ್ಚ ಯೇ।
05102026c ತ್ವಯಾ ದತ್ತಮದತ್ತಂ ಕಃ ಕರ್ತುಮುತ್ಸಹತೇ ವಿಭೋ।।
ವಿಷ್ಣುವು ಹೇಳಿದನು: “ವಿಭೋ! ಚರಾಚರ ಲೋಕಗಳ ಈಶನು ನೀನು! ನೀನು ಕೊಡುವುದನ್ನು ಕೊಡಬಾರದಂತೆ ಮಾಡಲು ಯಾರು ತಾನೇ ಮುಂದೆಬಂದಾರು?””
05102027 ಕಣ್ವ ಉವಾಚ।
05102027a ಪ್ರಾದಾಚ್ಚಕ್ರಸ್ತತಸ್ತಸ್ಮೈ ಪನ್ನಗಾಯಾಯುರುತ್ತಮಂ।
05102027c ನ ತ್ವೇನಮಮೃತಪ್ರಾಶಂ ಚಕಾರ ಬಲವೃತ್ರಹಾ।।
ಕಣ್ವನು ಹೇಳಿದನು: “ಬಲವೃತ್ರಹನು ಆ ಪನ್ನಗನಿಗೆ ಉತ್ತಮ ಆಯುಸ್ಸನ್ನು ಅನುಗ್ರಹಿಸಿದನು. ಅವನಿಗೆ ಅಮೃತಪ್ರಾಶನವನ್ನು ಮಾಡಿಸಲಿಲ್ಲ.
05102028a ಲಬ್ಧ್ವಾ ವರಂ ತು ಸುಮುಖಃ ಸುಮುಖಃ ಸಂಬಭೂವ ಹ।
05102028c ಕೃತದಾರೋ ಯಥಾಕಾಮಂ ಜಗಾಮ ಚ ಗೃಹಾನ್ಪ್ರತಿ।।
ಸುಮುಖನಾದರೋ ಆ ವರವನ್ನು ಪಡೆದು ಸುಮುಖನಾದನು. ಮದುವೆಮಾಡಿಕೊಂಡು, ಸಂತೋಷದಿಂದ ಮನೆಗೆ ತೆರಳಿದನು.
05102029a ನಾರದಸ್ತ್ವಾರ್ಯಕಶ್ಚೈವ ಕೃತಕಾರ್ಯೌ ಮುದಾ ಯುತೌ।
05102029c ಪ್ರತಿಜಗ್ಮತುರಭ್ಯರ್ಚ್ಯ ದೇವರಾಜಂ ಮಹಾದ್ಯುತಿಂ।।
ನಾರದ-ಆರ್ಯಕರೂ ಕೂಡ ಕಾರ್ಯಗಳನ್ನು ಪೂರೈಸಿ ಸಂತೋಷಗೊಂಡು ಮಹಾದ್ಯುತಿ ದೇವರಾಜನನ್ನು ಅರ್ಚಿಸಿ ಹಿಂದಿರುಗಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ದ್ವ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಎರಡನೆಯ ಅಧ್ಯಾಯವು.