ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 100
ಸಾರ
ನಾರದನು ಗೋವುಗಳ ಮಾತೆ ಸುರಭಿಯು ವಾಸಿಸುವ ರಸಾತಲವನ್ನು ಮಾತಲಿಗೆ ತೋರಿಸಿದುದು (1-15).
05100001 ನಾರದ ಉವಾಚ।
05100001a ಇದಂ ರಸಾತಲಂ ನಾಮ ಸಪ್ತಮಂ ಪೃಥಿವೀತಲಂ।
05100001c ಯತ್ರಾಸ್ತೇ ಸುರಭಿರ್ಮಾತಾ ಗವಾಮಮೃತಸಂಭವಾ।।
ನಾರದನು ಹೇಳಿದನು: “ಇದು ಪೃಥಿವಿಯ ಕೆಳಗಿರುವ ರಸಾತಲವೆಂಬ ಹೆಸರಿನ ಏಳನೆಯ ಲೋಕ. ಇಲ್ಲಿ ಅಮೃತಸಂಭವೆ ಗೋವುಗಳ ಮಾತೆ ಸುರಭಿಯು ವಾಸಿಸುತ್ತಾಳೆ.
05100002a ಕ್ಷರಂತೀ ಸತತಂ ಕ್ಷೀರಂ ಪೃಥಿವೀಸಾರಸಂಭವಂ।
05100002c ಷಣ್ಣಾಂ ರಸಾನಾಂ ಸಾರೇಣ ರಸಮೇಕಮನುತ್ತಮಂ।।
ಇವಳು ಸತತವೂ ಭೂಮಿಯಲ್ಲಿ ಸಾರಸಂಭವವೆನಿಸಿದ, ಆರು ರಸಗಳಲ್ಲಿ ಒಂದೇ ಅನುತ್ತಮ ರಸಸಾರವಾದ ಹಾಲನ್ನು ಸುರಿಸುತ್ತಾಳೆ.
05100003a ಅಮೃತೇನಾಭಿತೃಪ್ತಸ್ಯ ಸಾರಮುದ್ಗಿರತಃ ಪುರಾ।
05100003c ಪಿತಾಮಹಸ್ಯ ವದನಾದುದತಿಷ್ಠದನಿಂದಿತಾ।।
ಈ ಅನಿಂದಿತೆಯು ಹಿಂದೆ ಅಮೃತದಿಂದ ಸಂತೃಪ್ತನಾಗಿ ಸಾರವನ್ನು ಕಕ್ಕಿದ ಪಿತಾಮಹನ ಬಾಯಿಯಿಂದ ಹೊರಬಿದ್ದಳು.
05100004a ಯಸ್ಯಾಃ ಕ್ಷೀರಸ್ಯ ಧಾರಾಯಾ ನಿಪತಂತ್ಯಾ ಮಹೀತಲೇ।
05100004c ಹ್ರದಃ ಕೃತಃ ಕ್ಷೀರನಿಧಿಃ ಪವಿತ್ರಂ ಪರಮುತ್ತಮಂ।।
ಅವಳ ಹಾಲಿನ ಧಾರೆಯು ಭೂಮಿಯ ಮೇಲೆ ಬೀಳಲು ಪವಿತ್ರವೂ, ಪರಮ ಉತ್ತಮವೂ ಆದ ಕ್ಷೀರನಿಧಿ ಸರೋವರವು ಮಾಡಲ್ಪಟ್ಟಿತು.
05100005a ಪುಷ್ಪಿತಸ್ಯೇವ ಫೇನಸ್ಯ ಪರ್ಯಂತಮನುವೇಷ್ಟಿತಂ।
05100005c ಪಿಬಂತೋ ನಿವಸಂತ್ಯತ್ರ ಫೇನಪಾ ಮುನಿಸತ್ತಮಾಃ।।
ಅದರ ದಡವು ಸುತ್ತಲೂ ಹಾಲಿನ ನೊರೆಯಿಂದ ಕೂಡಿದೆ. ಅಲ್ಲಿ ವಾಸಿಸುವ ಮುನಿಸತ್ತಮರು ಆ ಹಾಲಿನ ನೊರೆಯನ್ನು ಕುಡಿಯುತ್ತಾರೆ.
05100006a ಫೇನಪಾ ನಾಮ ನಾಮ್ನಾ ತೇ ಫೇನಾಹಾರಾಶ್ಚ ಮಾತಲೇ।
05100006c ಉಗ್ರೇ ತಪಸಿ ವರ್ತಂತೇ ಯೇಷಾಂ ಬಿಭ್ಯತಿ ದೇವತಾಃ।।
ಮಾತಲೀ! ಅವರನ್ನು ಫೇನಪಾ ಎಂಬ ಹೆಸರಿನಿಂದ ಕರೆಯುತ್ತಾರೆ. ಏಕೆಂದರೆ ಅವರು ಈ ಹಾಲಿನ ನೊರೆಯನ್ನು ಕುಡಿದು ಮಾತ್ರ ಜೀವಿಸುತ್ತಾರೆ. ಉಗ್ರ ತಪಸ್ಸಿನಲ್ಲಿ ತೊಡಗಿರುವ ಇವರಿಗೆ ದೇವತೆಗಳೂ ಭಯಪಡುತ್ತಾರೆ.
05100007a ಅಸ್ಯಾಶ್ಚತಸ್ರೋ ಧೇನ್ವೋಽನ್ಯಾ ದಿಕ್ಷು ಸರ್ವಾಸು ಮಾತಲೇ।
05100007c ನಿವಸಂತಿ ದಿಶಾಪಾಲ್ಯೋ ಧಾರಯಂತ್ಯೋ ದಿಶಃ ಸ್ಮೃತಾಃ।।
ಮಾತಲೀ! ಅವಳಿಗೆ ಎಲ್ಲ ದಿಕ್ಕುಗಳಲ್ಲಿಯೂ ವಾಸಿಸುವ, ದಿಶಾಪಾಲರು ಇದ್ದಾರೆ. ಅವರು ದಿಕ್ಕುಗಳನ್ನು ಧರಿಸುತ್ತಾರೆ ಎಂದು ಕೇಳಿದ್ದೇವೆ.
05100008a ಪೂರ್ವಾಂ ದಿಶಂ ಧಾರಯತೇ ಸುರೂಪಾ ನಾಮ ಸೌರಭೀ।
05100008c ದಕ್ಷಿಣಾಂ ಹಂಸಕಾ ನಾಮ ಧಾರಯತ್ಯಪರಾಂ ದಿಶಂ।।
ಸುರೂಪ ಎಂಬ ಹೆಸರಿನ ಸೌರಭಿಯು ಪೂರ್ವದಿಕ್ಕನ್ನು ಬೆಂಬಲಿಸುತ್ತಾಳೆ, ಹಂಸಕ ಎಂಬ ಹೆಸರಿನವಳು ಇನ್ನೊಂದು ದಿಕ್ಕು ದಕ್ಷಿಣವನ್ನು ಬೆಂಬಲಿಸುತ್ತಾಳೆ.
05100009a ಪಶ್ಚಿಮಾ ವಾರುಣೀ ದಿಕ್ಚ ಧಾರ್ಯತೇ ವೈ ಸುಭದ್ರಯಾ।
05100009c ಮಹಾನುಭಾವಯಾ ನಿತ್ಯಂ ಮಾತಲೇ ವಿಶ್ವರೂಪಯಾ।।
ಮಾತಲೇ! ಮಹಾನುಭಾವೆ ವಿಶ್ವರೂಪಿ ಸುಭದ್ರೆಯು ವರುಣನ ಪಶ್ಚಿಮ ದಿಕ್ಕನ್ನು ಬೆಂಬಲಿಸುತ್ತಾಳೆ.
05100010a ಸರ್ವಕಾಮದುಘಾ ನಾಮ ಧೇನುರ್ಧಾರಯತೇ ದಿಶಂ।
05100010c ಉತ್ತರಾಂ ಮಾತಲೇ ಧರ್ಮ್ಯಾಂ ತಥೈಲವಿಲಸಂಜ್ಞೈತಾಂ।।
ಮಾತಲೇ! ಸರ್ವಕಾಮದುಘಾ ಎಂಬ ಹೆಸರಿನ ಧೇನುವು ಧರ್ಮಯುಕ್ತವಾದ. ಸಂಪತ್ತಿನ ಒಡೆಯ ಕುಬೇರನದೆಂದು ಸೂಚಿತಗೊಂಡ ಉತ್ತರ ದಿಕ್ಕನ್ನು ಬೆಂಬಲಿಸುತ್ತಾಳೆ.
05100011a ಆಸಾಂ ತು ಪಯಸಾ ಮಿಶ್ರಂ ಪಯೋ ನಿರ್ಮಥ್ಯ ಸಾಗರೇ।
05100011c ಮಂಥಾನಂ ಮಂದರಂ ಕೃತ್ವಾ ದೇವೈರಸುರಸಂಹಿತೈಃ।।
ಇವರ ಹಾಲಿನಿಂದ ಮಿಶ್ರಿತವಾದ ಕ್ಷೀರಸಾಗರವನ್ನು ಅಸುರರೊಂದಿಗೆ ಕೂಡಿ ದೇವತೆಗಳು ಮಂದರವನ್ನು ಕಡಗೋಲನ್ನಾಗಿ ಮಾಡಿ ಕಡೆದರು.
05100012a ಉದ್ಧೃತಾ ವಾರುಣೀ ಲಕ್ಷ್ಮೀರಮೃತಂ ಚಾಪಿ ಮಾತಲೇ।
05100012c ಉಚ್ಚೈಃಶ್ರವಾಶ್ಚಾಶ್ವರಾಜೋ ಮಣಿರತ್ನಂ ಚ ಕೌಸ್ತುಭಂ।।
ಮಾತಲೇ! ಅದರಿಂದ ವಾರುಣೀ ಲಕ್ಷ್ಮೀ, ಅಮೃತ, ಅಶ್ವರಾಜ ಉಚ್ಛೈಃಶ್ರವಸ್, ಮತ್ತು ಮಣಿರತ್ನ ಕೌಸ್ತುಭಗಳು ಹುಟ್ಟಿದವು.
05100013a ಸುಧಾಹಾರೇಷು ಚ ಸುಧಾಂ ಸ್ವಧಾಭೋಜಿಷು ಚ ಸ್ವಧಾಂ।
05100013c ಅಮೃತಂ ಚಾಮೃತಾಶೇಷು ಸುರಭಿಃ ಕ್ಷರತೇ ಪಯಃ।।
ಸುರಭಿಯು ಸುರಿಸುವ ಹಾಲು ಸುಧೆಯನ್ನು ಕುಡಿಯುವವರಿಗೆ ಸುಧೆಯಾಗುತ್ತದೆ, ಸ್ವಧಾವನ್ನು ಕುಡಿಯುವವರಿಗೆ ಸ್ವಧಾ ಆಗುತ್ತದೆ, ಅಮೃತವನ್ನು ಕುಡಿಯುವವರಿಗೆ ಅಮೃತವಾಗುತ್ತದೆ.
05100014a ಅತ್ರ ಗಾಥಾ ಪುರಾ ಗೀತಾ ರಸಾತಲನಿವಾಸಿಭಿಃ।
05100014c ಪೌರಾಣೀ ಶ್ರೂಯತೇ ಲೋಕೇ ಗೀಯತೇ ಯಾ ಮನೀಷಿಭಿಃ।।
ರಸಾತಲವಾಸಿಗಳ ಕುರಿತಾದ ಒಂದು ಪುರಾತನ ಗೀತೆಯೊಂದಿದೆ. ಅದನ್ನು ಮನುಷ್ಯರ ಲೋಕದಲ್ಲಿಯೇ ಕೇಳಿಬರುತ್ತದೆ.
05100015a ನ ನಾಗಲೋಕೇ ನ ಸ್ವರ್ಗೇ ನ ವಿಮಾನೇ ತ್ರಿವಿಷ್ಟಪೇ।
05100015c ಪರಿವಾಸಃ ಸುಖಸ್ತಾದೃಗ್ರಸಾತಲತಲೇ ಯಥಾ।।
ರಸಾತಲದಲ್ಲಿ ವಾಸಿಸುವವರಿಗೆ ಇರುವಷ್ಟು ಸುಖವು ನಾಗಲೋಕದಲ್ಲಿಲ್ಲ, ಸ್ವರ್ಗದಲ್ಲಿಲ್ಲ, ವಿಮಾನದಲ್ಲಿಲ್ಲ ಮತ್ತು ತ್ರಿವಿಷ್ಟಪದಲ್ಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರನೆಯ ಅಧ್ಯಾಯವು.