ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 97
ಸಾರ
ನಾರದನು ಮಾತಲಿಗೆ ನಾಗಲೋಕದ ನಾಭಿಸ್ಥಳವಾದ ದೈತ್ಯರ ಪಾತಾಲಪುರವನ್ನು ತೋರಿಸಿದುದು (1-20).
05097001 ನಾರದ ಉವಾಚ।
05097001a ಏತತ್ತು ನಾಗಲೋಕಸ್ಯ ನಾಭಿಸ್ಥಾನೇ ಸ್ಥಿತಂ ಪುರಂ।
05097001c ಪಾತಾಲಮಿತಿ ವಿಖ್ಯಾತಂ ದೈತ್ಯದಾನವಸೇವಿತಂ।।
ನಾರದನು ಹೇಳಿದನು: “ಇಲ್ಲಿ, ನಾಗಲೋಕದ ನಾಭಿಸ್ಥಳದಲ್ಲಿ ಪಾತಾಲವೆಂದು ವಿಖ್ಯಾತ ದೈತ್ಯ-ದಾನವ ಸೇವಿತ ಪುರವಿದೆ.
05097002a ಇದಮದ್ಭಿಃ ಸಮಂ ಪ್ರಾಪ್ತಾ ಯೇ ಕೇ ಚಿದ್ಧ್ರುವಜಂಗಮಾಃ।
05097002c ಪ್ರವಿಶಂತೋ ಮಹಾನಾದಂ ನದಂತಿ ಭಯಪೀಡಿತಾಃ।।
ನೀರಿನ ಪ್ರವಾಹದಿಂದ ಎಳೆದು ತರಲ್ಪಟ್ಟ ಭೂಮಿಯ ಜೀವಿಗಳು ಭಯಪೀಡಿತರಾಗಿ ಜೋರಾಗಿ ಚೀರುತ್ತಾ ಇದನ್ನು ಪ್ರವೇಶಿಸುತ್ತವೆ.
05097003a ಅತ್ರಾಸುರೋಽಗ್ನಿಃ ಸತತಂ ದೀಪ್ಯತೇ ವಾರಿಭೋಜನಃ।
05097003c ವ್ಯಾಪಾರೇಣ ಧೃತಾತ್ಮಾನಂ ನಿಬದ್ಧಂ ಸಮಬುಧ್ಯತ।।
ನೀರನ್ನೇ ಉಣ್ಣುವ ಅಸುರೋಗ್ನಿಯು ಸತತವೂ ಇಲ್ಲಿ ಉರಿಯುತ್ತಿರುತ್ತದೆ. ಧೃತಾತ್ಮರ ವ್ಯಾಪಾರದಿಂದ ನಿಬದ್ಧವಾಗಿ ಚಲಿಸದೇ ನಿಂತಿದೆ.
05097004a ಅತ್ರಾಮೃತಂ ಸುರೈಃ ಪೀತ್ವಾ ನಿಹಿತಂ ನಿಹತಾರಿಭಿಃ।
05097004c ಅತಃ ಸೋಮಸ್ಯ ಹಾನಿಶ್ಚ ವೃದ್ಧಿಶ್ಚೈವ ಪ್ರದೃಶ್ಯತೇ।।
ಇಲ್ಲಿಯೇ ಸುರರು ಶತ್ರುಗಳನ್ನು ಸಂಹರಿಸಿ ಅಮೃತವನ್ನು ಕುಡಿದು, ಉಳಿದುದನ್ನು ಇಟ್ಟರು. ಇಲ್ಲಿಯೇ ಚಂದ್ರನ ಹಾನಿ-ವೃದ್ಧಿಗಳು ತೋರುತ್ತವೆ.
05097005a ಅತ್ರ ದಿವ್ಯಂ ಹಯಶಿರಃ ಕಾಲೇ ಪರ್ವಣಿ ಪರ್ವಣಿ।
05097005c ಉತ್ತಿಷ್ಠತಿ ಸುವರ್ಣಾಭಂ ವಾರ್ಭಿರಾಪೂರಯಂ ಜಗತ್।।
ಅಲ್ಲಿಯೇ ದಿವ್ಯ ಹಯಶಿರನು ಪರ್ವ ಪರ್ವಗಳ ಕಾಲಗಳಲ್ಲಿ ಮೇಲೆದ್ದು ಜಗತ್ತನ್ನು ಸುವರ್ಣ ಪ್ರಕಾಶದಿಂದ ಮತ್ತು ವೇದಘೋಷದಿಂದ ತುಂಬಿಸುತ್ತಾನೆ.
05097006a ಯಸ್ಮಾದತ್ರ ಸಮಗ್ರಾಸ್ತಾಃ ಪತಂತಿ ಜಲಮೂರ್ತಯಃ।
05097006c ತಸ್ಮಾತ್ಪಾತಾಲಮಿತ್ಯೇತತ್ಖ್ಯಾಯತೇ ಪುರಮುತ್ತಮಂ।।
ಎಲ್ಲ ಜಲಮೂರ್ತಯಗಳು ಇಲ್ಲಿ ನೀರನ್ನು ಸುರಿಸುವುದರಿಂದ ಈ ಉತ್ತಮ ಪುರವನ್ನು ಪಾತಾಲವೆಂದು ಕರೆಯುತ್ತಾರೆ.
05097007a ಐರಾವತೋಽಸ್ಮಾತ್ಸಲಿಲಂ ಗೃಹೀತ್ವಾ ಜಗತೋ ಹಿತಃ।
05097007c ಮೇಘೇಷ್ವಾಮುಂಚತೇ ಶೀತಂ ಯನ್ಮಹೇಂದ್ರಃ ಪ್ರವರ್ಷತಿ।।
ಇಲ್ಲಿಂದಲೇ ಜಗತ್ತಿನ ಹಿತಕ್ಕಾಗಿ ಐರಾವತವು ನೀರನ್ನು ಹಿಡಿದು ಮೇಘಗಳ ಮೇಲೆ ಚೆಲ್ಲುತ್ತದೆ. ಅದನ್ನೇ ಮಹೇಂದ್ರನು ಶೀತಲ ಮಳೆಯಾಗಿ ಸುರಿಸುತ್ತಾನೆ.
05097008a ಅತ್ರ ನಾನಾವಿಧಾಕಾರಾಸ್ತಿಮಯೋ ನೈಕರೂಪಿಣಃ।
05097008c ಅಪ್ಸು ಸೋಮಪ್ರಭಾಂ ಪೀತ್ವಾ ವಸಂತಿ ಜಲಚಾರಿಣಃ।।
ಅಲ್ಲಿ ನಾನಾ ವಿಧದ, ಆಕಾರದ, ತಿಮಿ ಮೊದಲಾದ ಜಲಚಾರಿಣಿಗಳು ಸೋಮಪ್ರಭೆಯನ್ನು ಕುಡಿದು ನೀರಿನಲ್ಲಿ ವಾಸಿಸುತ್ತವೆ.
05097009a ಅತ್ರ ಸೂರ್ಯಾಂಶುಭಿರ್ಭಿನ್ನಾಃ ಪಾತಾಲತಲಮಾಶ್ರಿತಾಃ।
05097009c ಮೃತಾ ದಿವಸತಃ ಸೂತ ಪುನರ್ಜೀವಂತಿ ತೇ ನಿಶಿ।।
ಸೂತ! ಅಲ್ಲಿ ಪಾತಾಲತಲದಲ್ಲಿ ವಾಸಿಸುವವು ಸೂರ್ಯನ ಕಿರಣಗಳಿಂದ ಸೀಳಿ ಹಗಲಿನಲ್ಲಿ ಸಾಯುತ್ತವೆ ಮತ್ತು ಅವು ರಾತ್ರಿಯಲ್ಲಿ ಪುನಃ ಜೀವಿಸುತ್ತವೆ.
05097010a ಉದಯೇ ನಿತ್ಯಶಶ್ಚಾತ್ರ ಚಂದ್ರಮಾ ರಶ್ಮಿಭಿರ್ವೃತಃ।
05097010c ಅಮೃತಂ ಸ್ಪೃಶ್ಯ ಸಂಸ್ಪರ್ಶಾತ್ಸಂಜೀವಯತಿ ದೇಹಿನಃ।।
ನಿತ್ಯವೂ ರಾತ್ರಿಯಲ್ಲಿ ಉದಯಿಸುವ ಚಂದ್ರನು ತನ್ನ ರಶ್ಮಿಗಳಿಂದ ಅಮೃತವನ್ನು ಮುಟ್ಟಿ ದೇಹಿಗಳನ್ನು ಮುಟ್ಟಿ ಅವುಗಳನ್ನು ಜೀವಂತಗೊಳಿಸುತ್ತಾನೆ.
05097011a ಅತ್ರ ತೇಽಧರ್ಮನಿರತಾ ಬದ್ಧಾಃ ಕಾಲೇನ ಪೀಡಿತಾಃ।
05097011c ದೈತೇಯಾ ನಿವಸಂತಿ ಸ್ಮ ವಾಸವೇನ ಹೃತಶ್ರಿಯಃ।।
ಅಲ್ಲಿ ಅಧರ್ಮನಿರತ ದೈತ್ಯರು ಕಾಲನಿಂದ ಕಟ್ಟಲ್ಪಟ್ಟು ಪೀಡಿತರಾಗಿ, ವಾಸವನಿಂದ ಶ್ರೀಯನ್ನು ಕಳೆದುಕೊಂಡು ವಾಸಿಸುತ್ತಿದ್ದಾರೆ.
05097012a ಅತ್ರ ಭೂತಪತಿರ್ನಾಮ ಸರ್ವಭೂತಮಹೇಶ್ವರಃ।
05097012c ಭೂತಯೇ ಸರ್ವಭೂತಾನಾಮಚರತ್ತಪ ಉತ್ತಮಂ।।
ಅಲ್ಲಿ ಸರ್ವಭೂತಮಹೇಶ್ವರ ಭೂತಪತಿಯು ಸರ್ವಭೂತಗಳಿಗಾಗಿ ಉತ್ತಮ ತಪಸ್ಸನ್ನು ತಪಿಸಿದ್ದನು.
05097013a ಅತ್ರ ಗೋವ್ರತಿನೋ ವಿಪ್ರಾಃ ಸ್ವಾಧ್ಯಾಯಾಮ್ನಾಯಕರ್ಶಿತಾಃ।
05097013c ತ್ಯಕ್ತಪ್ರಾಣಾ ಜಿತಸ್ವರ್ಗಾ ನಿವಸಂತಿ ಮಹರ್ಷಯಃ।।
ಅಲ್ಲಿ ಸ್ವಾಧ್ಯಾಯದಿಂದ ಬಡಕಲಾಗಿ ಪ್ರಾಣಗಳನ್ನು ತೊರೆದು ಸ್ವರ್ಗಗಳನ್ನು ಗೆದ್ದ ಗೋವ್ರತಿ ವಿಪ್ರ ಮಹರ್ಷಿಗಳು ವಾಸಿಸುತ್ತಾರೆ.
05097014a ಯತ್ರತತ್ರಶಯೋ ನಿತ್ಯಂ ಯೇನಕೇನಚಿದಾಶಿತಃ।
05097014c ಯೇನಕೇನಚಿದಾಚ್ಚನ್ನಃ ಸ ಗೋವ್ರತ ಇಹೋಚ್ಯತೇ।।
ಎಲ್ಲಿರುವನೋ ಅಲ್ಲಿಯೇ ನಿತ್ಯವೂ ಮಲಗುವ, ಇತರರು ನೀಡಿದುದನ್ನು ತಿನ್ನುವ, ಇತರರು ನೀಡಿದುದನ್ನು ಉಟ್ಟುಕೊಳ್ಳುವವನನ್ನು ಗೋವ್ರತ ಎಂದು ಹೇಳುತ್ತಾರೆ.
05097015a ಐರಾವತೋ ನಾಗರಾಜೋ ವಾಮನಃ ಕುಮುದೋಽಂಜನಃ।
05097015c ಪ್ರಸೂತಾಃ ಸುಪ್ರತೀಕಸ್ಯ ವಂಶೇ ವಾರಣಸತ್ತಮಾಃ।।
ಸುಪ್ರತೀಕನ ವಂಶದಲ್ಲಿ ವಾರಣಸತ್ತಮರಾದ ನಾಗರಾಜ ಐರಾವತ, ವಾಮನ, ಕುಮುದ, ಮತ್ತು ಅಂಜನರು ಜನಿಸಿದರು.
05097016a ಪಶ್ಯ ಯದ್ಯತ್ರ ತೇ ಕಶ್ಚಿದ್ರೋಚತೇ ಗುಣತೋ ವರಃ।
05097016c ವರಯಿಷ್ಯಾವ ತಂ ಗತ್ವಾ ಯತ್ನಮಾಸ್ಥಾಯ ಮಾತಲೇ।।
ಮಾತಲೀ! ಇಲ್ಲಿ ಯಾರಾದರೂ ನಿನಗಿಷ್ಟನಾದ ಗುಣವಂತ ವರನಿದ್ದಾನೆಯೋ ನೋಡು. ಅವನಲ್ಲಿಗೆ ಹೋಗಿ ನಿನ್ನ ಮಗಳನ್ನು ವರಿಸುವಂತೆ ಪ್ರಯತ್ನಿಸೋಣ.
05097017a ಅಂಡಮೇತಜ್ಜಲೇ ನ್ಯಸ್ತಂ ದೀಪ್ಯಮಾನಮಿವ ಶ್ರಿಯಾ।
05097017c ಆ ಪ್ರಜಾನಾಂ ನಿಸರ್ಗಾದ್ವೈ ನೋದ್ಭಿದ್ಯತಿ ನ ಸರ್ಪತಿ।।
ಈ ನೀರಿನಲ್ಲಿ ಶ್ರೀಯಿಂದ ಬೆಳಗುತ್ತಿರುವ ಅಂಡವನ್ನು ನೋಡು! ಸೃಷ್ಟಿಯ ಸಮಯದಿಂದ ಇದು ಇಲ್ಲಿದೆ. ಒಡೆಯುವುದೂ ಇಲ್ಲ, ಚಲಿಸುವುದೂ ಇಲ್ಲ.
05097018a ನಾಸ್ಯ ಜಾತಿಂ ನಿಸರ್ಗಂ ವಾ ಕಥ್ಯಮಾನಂ ಶೃಣೋಮಿ ವೈ।
05097018c ಪಿತರಂ ಮಾತರಂ ವಾಪಿ ನಾಸ್ಯ ಜಾನಾತಿ ಕಶ್ಚನ।।
ಇದರ ಹುಟ್ಟಿನ ಅಥವಾ ಸ್ವಭಾವದ ಕುರಿತು ಮಾತನಾಡಿದ್ದುದನ್ನು ನಾನು ಕೇಳಲಿಲ್ಲ. ಇದರ ತಂದೆ-ತಾಯಿಯರನ್ನು ಕೂಡ ಯಾರೂ ಅರಿಯರು.
05097019a ಅತಃ ಕಿಲ ಮಹಾನಗ್ನಿರಂತಕಾಲೇ ಸಮುತ್ಥಿತಃ।
05097019c ಧಕ್ಷ್ಯತೇ ಮಾತಲೇ ಸರ್ವಂ ತ್ರೈಲೋಕ್ಯಂ ಸಚರಾಚರಂ।।
ಮಾತಲೀ! ಅಂತಕಾಲವು ಬಂದಾಗ ಇದರಿಂದ ಮಹಾನ್ ಅಗ್ನಿಯು ಹೊರಹೊಮ್ಮಿ, ಮೂರು ಲೋಕಗಳಲ್ಲಿರುವ ಸರ್ವ ಸಚರಾಚರಗಳನ್ನೂ ಸುಡುತ್ತದೆ ಎಂದು ಕೇಳಿದ್ದೇವೆ.””
05097020 ಕಣ್ವ ಉವಾಚ।
05097020a ಮಾತಲಿಸ್ತ್ವಬ್ರವೀಚ್ಚ್ರುತ್ವಾ ನಾರದಸ್ಯಾಥ ಭಾಷಿತಂ।
05097020c ನ ಮೇಽತ್ರ ರೋಚತೇ ಕಶ್ಚಿದನ್ಯತೋ ವ್ರಜ ಮಾಚಿರಂ।।
ಕಣ್ವನು ಹೇಳಿದನು: “ನಾರದನ ಮಾತುಗಳನ್ನು ಕೇಳಿದ ಮಾತಲಿಯು “ಇಲ್ಲಿ ನನಗೆ ಯಾರೂ ಇಷ್ಟವಾಗಲಿಲ್ಲ. ಬೇರೆ ಎಲ್ಲಿಯಾದರೂ ಬೇಗನೇ ಹೋಗೋಣ!” ಎಂದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಸಪ್ತನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೇಳನೆಯ ಅಧ್ಯಾಯವು.