ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 96
ಸಾರ
ಮಾರ್ಗದಲ್ಲಿ ಮಾತಲಿಯು ವರುಣನನ್ನು ಕಾಣಲು ಹೋಗುತ್ತಿದ್ದ ನಾರದನನ್ನು ಭೇಟಿಯಾಗಿ, ಇಬ್ಬರೂ ಒಟ್ಟಿಗೇ ವರುಣನನ್ನು ಕಂಡಿದುದು; ನಾರದನಿಂದ ವರುಣ ಸಭೆಯ ವರ್ಣನೆ (1-25).
05096001 ಕಣ್ವ ಉವಾಚ।
05096001a ಮಾತಲಿಸ್ತು ವ್ರಜನ್ಮಾರ್ಗೇ ನಾರದೇನ ಮಹರ್ಷಿಣಾ।
05096001c ವರುಣಂ ಗಚ್ಚತಾ ದ್ರಷ್ಟುಂ ಸಮಾಗಚ್ಚದ್ಯದೃಚ್ಚಯಾ।।
ಕಣ್ವನು ಹೇಳಿದನು: “ಮಾರ್ಗದಲ್ಲಿ ಮುಂದುವರೆಯುತ್ತಿರುವಾಗ ಮಾತಲಿಯು ವರುಣನನ್ನು ಕಾಣಲು ಬಯಸಿ ಹೋಗುತ್ತಿರುವ ಮಹರ್ಷಿ ನಾರದನನ್ನು ಭೇಟಿ ಮಾಡಿದನು.
05096002a ನಾರದೋಽಥಾಬ್ರವೀದೇನಂ ಕ್ವ ಭವಾನ್ಗಂತುಮುದ್ಯತಃ।
05096002c ಸ್ವೇನ ವಾ ಸೂತ ಕಾರ್ಯೇಣ ಶಾಸನಾದ್ವಾ ಶತಕ್ರತೋಃ।।
ಆಗ ನಾರದನು ಅವನನ್ನು ಕೇಳಿದನು: “ಸೂತ! ನೀನು ಎಲ್ಲಿಗೆ ಹೋಗುತ್ತಿರುವೆ? ನಿನ್ನದೇ ಕಾರಣಕ್ಕೆ ಅಥವಾ ಶತಕ್ರತುವಿನ ಶಾಸನದಂತೆ ಹೋಗುತ್ತಿದ್ದೀಯೋ?”
05096003a ಮಾತಲಿರ್ನಾರದೇನೈವಂ ಸಂಪೃಷ್ಟಃ ಪಥಿ ಗಚ್ಚತಾ।
05096003c ಯಥಾವತ್ಸರ್ವಮಾಚಷ್ಟ ಸ್ವಕಾರ್ಯಂ ವರುಣಂ ಪ್ರತಿ।।
ದಾರಿಯಲ್ಲಿ ಹೋಗುತ್ತಿರುವಾಗ ನಾರದನಿಂದ ಹೀಗೆ ಪ್ರಶ್ನಿಸಲ್ಪಟ್ಟ ಮಾತಲಿಯು ಅವನಿಗೆ ವರುಣನಲ್ಲಿ ತನಗಿರುವ ಕೆಲಸದ ಕುರಿತು ಎಲ್ಲವನ್ನೂ ಹೇಳಿದನು.
05096004a ತಮುವಾಚಾಥ ಸ ಮುನಿರ್ಗಚ್ಚಾವಃ ಸಹಿತಾವಿತಿ।
05096004c ಸಲಿಲೇಶದಿದೃಕ್ಷಾರ್ಥಮಹಮಪ್ಯುದ್ಯತೋ ದಿವಃ।।
ಆಗ ಆ ಮನಿಯು ಅವನಿಗೆ “ಇಬ್ಬರೂ ಒಟ್ಟಿಗೇ ಹೋಗೋಣ! ನಾನೂ ಕೂಡ ಸಲಿಲೇಶನನ್ನು ಕಾಣಲು ದಿವದಿಂದ ಇಳಿದು ಬಂದಿದ್ದೇನೆ.
05096005a ಅಹಂ ತೇ ಸರ್ವಮಾಖ್ಯಾಸ್ಯೇ ದರ್ಶಯನ್ವಸುಧಾತಲಂ।
05096005c ದೃಷ್ಟ್ವಾ ತತ್ರ ವರಂ ಕಂ ಚಿದ್ರೋಚಯಿಷ್ಯಾವ ಮಾತಲೇ।।
ವಸುಧಾತಲವನ್ನು ನೋಡುತ್ತಾ ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ. ಮಾತಲಿ! ಅಲ್ಲಿ ನೋಡಿ ಯಾರಾದರೂ ವರನನ್ನು ಆರಿಸೋಣ!”
05096006a ಅವಗಾಹ್ಯ ತತೋ ಭೂಮಿಮುಭೌ ಮಾತಲಿನಾರದೌ।
05096006c ದದೃಶಾತೇ ಮಹಾತ್ಮಾನೌ ಲೋಕಪಾಲಮಪಾಂ ಪತಿಂ।।
ಆಗ ಮಾತಲಿ-ನಾರದರಿಬ್ಬರೂ ಭೂಮಿಯನ್ನು ಹೊಕ್ಕು ಲೋಕಪಾಲಕ ಅಪಾಂಪತಿಯನ್ನು ಕಂಡರು.
05096007a ತತ್ರ ದೇವರ್ಷಿಸದೃಶೀಂ ಪೂಜಾಂ ಪ್ರಾಪ ಸ ನಾರದಃ।
05096007c ಮಹೇಂದ್ರಸದೃಶೀಂ ಚೈವ ಮಾತಲಿಃ ಪ್ರತ್ಯಪದ್ಯತ।।
ಅಲ್ಲಿ ನಾರದನು ದೇವರ್ಷಿಗೆ ತಕ್ಕುದಾದ ಪೂಜೆಯನ್ನೂ, ಮಾತಲಿಯು ಮಹೇಂದ್ರನಿಗೆ ತಕ್ಕುದಾದ ಪೂಜೆಯನ್ನೂ ಪಡೆದರು.
05096008a ತಾವುಭೌ ಪ್ರೀತಮನಸೌ ಕಾರ್ಯವತ್ತಾಂ ನಿವೇದ್ಯ ಹ।
05096008c ವರುಣೇನಾಭ್ಯನುಜ್ಞಾತೌ ನಾಗಲೋಕಂ ವಿಚೇರತುಃ।।
ಅವರಿಬ್ಬರೂ ಸಂತೋಷಗೊಂಡು ತಮ್ಮ ಕಾರ್ಯದ ಕುರಿತು ನಿವೇದಿಸಿದರು. ನಂತರ ವರುಣನ ಅಪ್ಪಣೆಯನ್ನು ಪಡೆದು ನಾಗಲೋಕದಲ್ಲಿ ಸಂಚರಿಸಿದರು.
05096009a ನಾರದಃ ಸರ್ವಭೂತಾನಾಮಂತರ್ಭೂಮಿನಿವಾಸಿನಾಂ।
05096009c ಜಾನಂಶ್ಚಕಾರ ವ್ಯಾಖ್ಯಾನಂ ಯಂತುಃ ಸರ್ವಮಶೇಷತಃ।।
ಭೂಮಿಯ ಒಳಗೆ ನಿವಾಸಿಸುತ್ತಿರುವ ಎಲ್ಲರನ್ನೂ ತಿಳಿದಿದ್ದ ನಾರದನು ಎಲ್ಲರ ಕುರಿತೂ ವಿವರಿಸುತ್ತಾ ಹೋದನು.
05096010 ನಾರದ ಉವಾಚ।
05096010a ದೃಷ್ಟಸ್ತೇ ವರುಣಸ್ತಾತ ಪುತ್ರಪೌತ್ರಸಮಾವೃತಃ।
05096010c ಪಶ್ಯೋದಕಪತೇಃ ಸ್ಥಾನಂ ಸರ್ವತೋಭದ್ರಮೃದ್ಧಿಮತ್।।
ನಾರದನು ಹೇಳಿದನು: “ಅಯ್ಯಾ! ನೀನು ಪುತ್ರಪೌತ್ರರಿಂದ ಆವೃತನಾಗಿರುವ ವರುಣನನ್ನು ನೋಡಿದೆ. ಸರ್ವತೋಭದ್ರವಾಗಿರುವ ಸಮೃದ್ಧವಾಗಿರುವ ಉದಕಪತಿಯ ಸ್ಥಾನವನ್ನು ನೋಡು!
05096011a ಏಷ ಪುತ್ರೋ ಮಹಾಪ್ರಾಜ್ಞೋ ವರುಣಸ್ಯೇಹ ಗೋಪತೇಃ।
05096011c ಏಷ ತಂ ಶೀಲವೃತ್ತೇನ ಶೌಚೇನ ಚ ವಿಶಿಷ್ಯತೇ।।
ಇವನು ಗೋಪತಿ ವರುಣನ ಮಹಾಪ್ರಾಜ್ಞ ಮಗ. ಅವನು ಶೀಲದಲ್ಲಿ, ಶೌಚದಲ್ಲಿ ವಿಶಿಷ್ಟನಾಗಿದ್ದಾನೆ.
05096012a ಏಷೋಽಸ್ಯ ಪುತ್ರೋಽಭಿಮತಃ ಪುಷ್ಕರಃ ಪುಷ್ಕರೇಕ್ಷಣಃ।
05096012c ರೂಪವಾನ್ದರ್ಶನೀಯಶ್ಚ ಸೋಮಪುತ್ರ್ಯಾ ವೃತಃ ಪತಿಃ।।
ಪುಷ್ಕರೇಕ್ಷಣ ಈ ಪುಷ್ಕರನು ಅವನ ಪ್ರೀತಿಪಾತ್ರ ಮಗ - ರೂಪವಂತ, ಸುಂದರ. ಇವನನ್ನು ಸೋಮನ ಪುತ್ರಿಯು ಪತಿಯನ್ನಾಗಿ ವರಿಸಿದ್ದಾಳೆ.
05096013a ಜ್ಯೋತ್ಸ್ನಾಕಾಲೀತಿ ಯಾಮಾಹುರ್ದ್ವಿತೀಯಾಂ ರೂಪತಃ ಶ್ರಿಯಂ।
05096013c ಆದಿತ್ಯಸ್ಯೈವ ಗೋಃ ಪುತ್ರೋ ಜ್ಯೇಷ್ಠಃ ಪುತ್ರಃ ಕೃತಃ ಸ್ಮೃತಃ।।
ರೂಪದಲ್ಲಿ ಲಕ್ಷ್ಮಿಗೆ ಎರಡನೆಯವಳಾಗಿರುವ ಅವಳನ್ನು ಜ್ಯೋತ್ಸ್ನಾಕಾಲೀ ಎಂದು ಕರೆಯುತ್ತಾರೆ. ಹಿಂದೆ ಅವಳು ಅದಿತಿಯ ಶೇಷ್ಠ ಪುತ್ರನನ್ನು ಪತಿಯನ್ನಾಗಿ ವರಿಸಿದ್ದಳೆಂದು ಕೇಳಿದ್ದೇವೆ.
05096014a ಭವನಂ ಪಶ್ಯ ವಾರುಣ್ಯಾ ಯದೇತತ್ಸರ್ವಕಾಂಚನಂ।
05096014c ಯಾಂ ಪ್ರಾಪ್ಯ ಸುರತಾಂ ಪ್ರಾಪ್ತಾಃ ಸುರಾಃ ಸುರಪತೇಃ ಸಖೇ।।
ಎಲ್ಲೆಡೆಯೂ ಕಾಂಚನದಿಂದ ಕೂಡಿದ ವರುಣನ ಭವನವನ್ನು ನೋಡು! ಸುರಪತಿಯ ಸಖನಲ್ಲಿರುವ ಸುರೆಯನ್ನು ಕುಡಿದು ಸುರರು ಸುರತ್ವವನ್ನು ಪಡೆದರು.
05096015a ಏತಾನಿ ಹೃತರಾಜ್ಯಾನಾಂ ದೈತೇಯಾನಾಂ ಸ್ಮ ಮಾತಲೇ।
05096015c ದೀಪ್ಯಮಾನಾನಿ ದೃಶ್ಯಂತೇ ಸರ್ವಪ್ರಹರಣಾನ್ಯುತ।।
ಮಾತಲಿ! ನೀನು ನೋಡುತ್ತಿರುವ ಈ ದೀಪ್ಯಮಾನ ಆಯುಧಗಳೆಲ್ಲವೂ ರಾಜ್ಯವನ್ನು ಕಳೆದುಕೊಂಡ ದೈತ್ಯರಿಗೆ ಸೇರಿದವು.
05096016a ಅಕ್ಷಯಾಣಿ ಕಿಲೈತಾನಿ ವಿವರ್ತಂತೇ ಸ್ಮ ಮಾತಲೇ।
05096016c ಅನುಭಾವಪ್ರಯುಕ್ತಾನಿ ಸುರೈರವಜಿತಾನಿ ಹ।।
ಮಾತಲಿ! ಈ ಆಯುಧಗಳು ಅಕ್ಷಯವಾದವುಗಳು: ಶತ್ರುಗಳ ಮೇಲೆ ಪ್ರಯೋಗಿಸುವವನ ಕೈಗೇ ಹಿಂದಿರುಗಿ ಬಂದು ಸೇರುತ್ತವೆ. ಸುರರು ಗೆದ್ದಿರುವ ಈ ಆಯುಧವನ್ನು ಪ್ರಯೋಗಿಸಲು ಅನುಭವವಿರಬೇಕಾಗುತ್ತದೆ.
05096017a ಅತ್ರ ರಾಕ್ಷಸಜಾತ್ಯಶ್ಚ ಭೂತಜಾತ್ಯಶ್ಚ ಮಾತಲೇ।
05096017c ದಿವ್ಯಪ್ರಹರಣಾಶ್ಚಾಸನ್ಪೂರ್ವದೈವತನಿರ್ಮಿತಾಃ।।
ಮಾತಲಿ! ಹಿಂದೆ ಇಲ್ಲಿ ದಿವ್ಯಪ್ರಹರಣ ಮಾಡುವ ಹಲವಾರು ರಾಕ್ಷಸ ಜಾತಿಯ ಮತ್ತು ಭೂತಜಾತಿಯವರು ವಾಸಿಸುತ್ತಿದ್ದರು. ಅವರು ದೇವತೆಗಳಿಂದ ಜಯಿಸಲ್ಪಟ್ಟರು.
05096018a ಅಗ್ನಿರೇಷ ಮಹಾರ್ಚಿಷ್ಮಾಂ ಜಾಗರ್ತಿ ವರುಣಹ್ರದೇ।
05096018c ವೈಷ್ಣವಂ ಚಕ್ರಮಾವಿದ್ಧಂ ವಿಧೂಮೇನ ಹವಿಷ್ಮತಾ।।
ಅಲ್ಲಿ ವರುಣ ಸರೋವರದಲ್ಲಿ ಚೆನ್ನಾಗಿ ಉರಿಯುತ್ತಿರುವ ಅಗ್ನಿಯಿದೆ. ಹೊಗೆಯಿಲ್ಲದ ಬೆಂಕಿಯಿಂದ ಆವೃತವಾಗಿರುವ ಇದು ವಿಷ್ಣುವಿನ ಚಕ್ರ.
05096019a ಏಷ ಗಾಂಡೀಮಯಶ್ಚಾಪೋ ಲೋಕಸಂಹಾರಸಂಭೃತಃ।
05096019c ರಕ್ಷ್ಯತೇ ದೈವತೈರ್ನಿತ್ಯಂ ಯತಸ್ತದ್ಗಾಂಡಿವಂ ಧನುಃ।।
ಈ ಚಾಪವು ಲೋಕಸಂಹಾರಸಂಭೃತ ಗಾಂಡೀವವು. ಈ ಗಾಂಡೀವ ಧನುಸ್ಸನ್ನು ದೇವತೆಗಳು ನಿತ್ಯವೂ ರಕ್ಷಿಸುತ್ತಾರೆ.
05096020a ಏಷ ಕೃತ್ಯೇ ಸಮುತ್ಪನ್ನೇ ತತ್ತದ್ಧಾರಯತೇ ಬಲಂ।
05096020c ಸಹಸ್ರಶತಸಂಖ್ಯೇನ ಪ್ರಾಣೇನ ಸತತಂ ಧ್ರುವಂ।।
ಕಾಲವು ಬಂದಾಗ ಇದು ಸಹಸ್ರಶತ ಸಂಖ್ಯೆಗಳಲ್ಲಿ ಪ್ರಾಣಗಳನ್ನು ಹುಟ್ಟಿಸುತ್ತದೆ ಮತ್ತು ಧರಿಸುತ್ತದೆ.
05096021a ಅಶಾಸ್ಯಾನಪಿ ಶಾಸ್ತ್ಯೇಷ ರಕ್ಷೋಬಂಧುಷು ರಾಜಸು।
05096021c ಸೃಷ್ಟಃ ಪ್ರಥಮಜೋ ದಂಡೋ ಬ್ರಹ್ಮಣಾ ಬ್ರಹ್ಮವಾದಿನಾ।।
ಇದು ರಾಕ್ಷಸರ ಪಕ್ಷವನ್ನು ಸೇರಿದ ಅಶಾಸನೀಯ ರಾಜರನ್ನು ನಿಯಂತ್ರಿಸಲು ಇರುವ, ಬ್ರಹ್ಮವಾದಿನಿ ಬ್ರಹ್ಮನು ಸೃಷ್ಟಿಸಿದ ಪ್ರಥಮ ದಂಡ.
05096022a ಏತಚ್ಚತ್ರಂ ನರೇಂದ್ರಾಣಾಂ ಮಹಚ್ಚಕ್ರೇಣ ಭಾಷಿತಂ।
05096022c ಪುತ್ರಾಃ ಸಲಿಲರಾಜಸ್ಯ ಧಾರಯಂತಿ ಮಹೋದಯಂ।।
ಇದು ಶಕ್ರನಿಂದ ಭಾಷಿತವಾದ, ನರೇಂದ್ರರ ಮಹಾ ಶಸ್ತ್ರ. ಇದು ಮಹೋದಯ ಸಲಿಲರಾಜನ ಪುತ್ರರನ್ನು ಧರಿಸುತ್ತದೆ.
05096023a ಏತತ್ಸಲಿಲರಾಜಸ್ಯ ಛತ್ರಂ ಛತ್ರಗೃಹೇ ಸ್ಥಿತಂ।
05096023c ಸರ್ವತಃ ಸಲಿಲಂ ಶೀತಂ ಜೀಮೂತ ಇವ ವರ್ಷತಿ।।
ಸಲಿಲರಾಜನ ಛತ್ರಗೃಹದಲ್ಲಿರುವ ಈ ಛತ್ರವು ಮೋಡದಂತೆ ಎಲ್ಲ ಕಡೆಯಿಂದಲೂ ಶೀತಲ ಮಳೆಯನ್ನು ಸುರಿಸುತ್ತದೆ.
05096024a ಏತಚ್ಚತ್ರಾತ್ಪರಿಭ್ರಷ್ಟಂ ಸಲಿಲಂ ಸೋಮನಿರ್ಮಲಂ।
05096024c ತಮಸಾ ಮೂರ್ಚಿತಂ ಯಾತಿ ಯೇನ ನಾರ್ಚತಿ ದರ್ಶನಂ।।
ಈ ಛತ್ರದಿಂದ ಬೀಳುವ ನೀರು ಚಂದ್ರನಂತೆ ನಿರ್ಮಲವಾಗಿರುತ್ತದೆ. ಆದರೆ ಕತ್ತಲೆಯಿಂದ ತುಂಬಿದ ಇದು ಯಾರಿಗೂ ಕಾಣಿಸುವುದಿಲ್ಲ.
05096025a ಬಹೂನ್ಯದ್ಭುತರೂಪಾಣಿ ದ್ರಷ್ಟವ್ಯಾನೀಹ ಮಾತಲೇ।
05096025c ತವ ಕಾರ್ಯೋಪರೋಧಸ್ತು ತಸ್ಮಾದ್ಗಚ್ಚಾವ ಮಾಚಿರಂ।।
ಮಾತಲಿ! ಇಲ್ಲಿ ಇನ್ನೂ ಇತರ ಅದ್ಭುತ ರೂಪಗಳನ್ನು ನೋಡಬಹುದು. ಆದರೆ ಅದು ನಿನ್ನ ಕಾರ್ಯದಲ್ಲಿ ಅಡ್ಡಿಯನ್ನು ತರುತ್ತವೆ. ಆದುದರಿಂದ ಬೇಗನೇ ಮುಂದುವರೆಯೋಣ!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಷಣ್ಣಾನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತಾರನೆಯ ಅಧ್ಯಾಯವು.