093 ಶ್ರೀಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 93

ಸಾರ

ಕೃಷ್ಣನು ಕುರುಸಭೆಯಲ್ಲಿ ಧೃತರಾಷ್ಟ್ರನಿಗೆ “ವೀರರ ನಾಶವಾಗದೇ ಕುರುಗಳಲ್ಲಿ ಮತ್ತು ಪಾಂಡವರಲ್ಲಿ ಶಾಂತಿಯನ್ನುಂಟುಮಾಡುವ ಪ್ರಯತ್ನದಿಂದ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಪ್ರಾರಂಭಿಸಿ “ನೀನು ಪುತ್ರರನ್ನು ತಡೆ! ನಾನು ಇತರರನ್ನು ತಡೆಯುತ್ತೇನೆ…ಆದರೆ ಯುದ್ಧವೇ ಆಗಬೇಕೆಂದರೆ ಮಹಾನಾಶವು ಕಾಣುತ್ತಿದೆ…ಎಲ್ಲಿ ಧರ್ಮವು ಅಧರ್ಮದಿಂದ ಮತ್ತು ಸತ್ಯವು ಸುಳ್ಳಿನಿಂದ ಸಾಯಿಸಲ್ಪಡುತ್ತದೆಯೋ ಅದನ್ನು ಅಲ್ಲಿದ್ದು ನೋಡುತ್ತಿರುವ ಸಭಾಸದರೂ ಹತರಾಗುತ್ತಾರೆ…ಪಾಂಡವರಿಗೆ ಯಥೋಚಿತವಾಗಿ ಅವರ ಪಿತೃಗಳ ಅಂಶವನ್ನು ಕೊಡು!…ಪಾರ್ಥರು ನಿನ್ನ ಸೇವೆಮಾಡಲು ಸಿದ್ಧರಾಗಿದ್ದಾರೆ, ಯುದ್ದಕ್ಕೂ ಸಿದ್ಧರಾಗಿದ್ದಾರೆ” ಎಂದೇ ಮೊದಲಾಗಿ ಹೇಳಿದುದು (1-62).

05093001 ವೈಶಂಪಾಯನ ಉವಾಚ।
05093001a ತೇಷ್ವಾಸೀನೇಷು ಸರ್ವೇಷು ತೂಷ್ಣೀಂಭೂತೇಷು ರಾಜಸು।
05093001c ವಾಕ್ಯಮಭ್ಯಾದದೇ ಕೃಷ್ಣಃ ಸುದಂಷ್ಟ್ರೋ ದುಂದುಭಿಸ್ವನಃ।।

ವೈಶಂಪಾಯನನು ಹೇಳಿದನು: “ಆ ಸರ್ವ ರಾಜರೂ ಆಸೀನರಾಗಿ ಸುಮ್ಮನಾದ ನಂತರ, ಸುದಂಷ್ಟ್ರ ಕೃಷ್ಣನು ಗುಡುಗಿನ ಸ್ವರದಲ್ಲಿ ಮಾತನ್ನು ಪ್ರಾರಂಭಿಸಿದನು.

05093002a ಜೀಮೂತ ಇವ ಘರ್ಮಾಂತೇ ಸರ್ವಾನ್ಸಂಶ್ರಾವಯನ್ಸಭಾಂ।
05093002c ಧೃತರಾಷ್ಟ್ರಮಭಿಪ್ರೇಕ್ಷ್ಯ ಸಮಭಾಷತ ಮಾಧವಃ।।

ಮೋಡವು ಮೊಳಗುವಂತೆ, ಮಾಧವನು ಸಭೆಯಲ್ಲಿ ಎಲ್ಲರಿಗೂ ಕೇಳಿಸುವಂತೆ, ಧೃತರಾಷ್ಟ್ರನನ್ನು ಉದ್ದೇಶಿಸಿ ಈ ಉತ್ತಮ ಮಾತುಗಳನ್ನು ಹೇಳಿದನು.

05093003a ಕುರೂಣಾಂ ಪಾಂಡವಾನಾಂ ಚ ಶಮಃ ಸ್ಯಾದಿತಿ ಭಾರತ।
05093003c ಅಪ್ರಯತ್ನೇನ ವೀರಾಣಾಮೇತದ್ಯತಿತುಮಾಗತಃ।।

“ಭಾರತ! ವೀರರ ನಾಶವಾಗದೇ ಕುರುಗಳಲ್ಲಿ ಮತ್ತು ಪಾಂಡವರಲ್ಲಿ ಶಾಂತಿಯನ್ನುಂಟುಮಾಡುವ ಪ್ರಯತ್ನದಿಂದ ನಾನು ಇಲ್ಲಿಗೆ ಬಂದಿದ್ದೇನೆ.

05093004a ರಾಜನ್ನಾನ್ಯತ್ಪ್ರವಕ್ತವ್ಯಂ ತವ ನಿಃಶ್ರೇಯಸಂ ವಚಃ।
05093004c ವಿದಿತಂ ಹ್ಯೇವ ತೇ ಸರ್ವಂ ವೇದಿತವ್ಯಮರಿಂದಮ।।

ಅರಿಂದಮ! ರಾಜನ್! ಇದರ ಹೊರತಾಗಿರುವ ಬೇರೆ ಯಾವ ಶ್ರೇಯಸ್ಕರ ಮಾತನ್ನೂ ನಾನು ಹೇಳುವುದಿಲ್ಲ. ಏಕೆಂದರೆ ತಿಳಿಯಬೇಕಾಗಿರುವ ಎಲ್ಲವೂ ನಿನಗೆ ತಿಳಿದೇ ಇದೆ.

05093005a ಇದಮದ್ಯ ಕುಲಂ ಶ್ರೇಷ್ಠಂ ಸರ್ವರಾಜಸು ಪಾರ್ಥಿವ।
05093005c ಶ್ರುತವೃತ್ತೋಪಸಂಪನ್ನಂ ಸರ್ವೈಃ ಸಮುದಿತಂ ಗುಣೈಃ।।

ಪಾರ್ಥಿವ! ಈ ಕುಲವು ಇಂದು ಅಧ್ಯಯನ, ನಡತೆಗಳಿಂದ ಕೂಡಿದ್ದು ಸರ್ವ ಗುಣಗಳಿಂದ ತುಂಬಿದ್ದು ಎಲ್ಲ ರಾಜರಲ್ಲಿ ಶ್ರೇಷ್ಠವೆನಿಸಿಕೊಂಡಿದೆ.

05093006a ಕೃಪಾನುಕಂಪಾ ಕಾರುಣ್ಯಮಾನೃಶಂಸ್ಯಂ ಚ ಭಾರತ।
05093006c ತಥಾರ್ಜವಂ ಕ್ಷಮಾ ಸತ್ಯಂ ಕುರುಷ್ವೇತದ್ವಿಶಿಷ್ಯತೇ।।

ಭಾರತ! ವಿಶೇಷವಾಗಿ ಕೃಪೆ, ಅನುಕಂಪ, ಕಾರುಣ್ಯ, ಅಹಿಂಸೆ, ಆರ್ಜವ, ಕ್ಷಮೆ, ಹಾಗೆ ಸತ್ಯ ಇವು ಕುರುಗಳಲ್ಲಿವೆ.

05093007a ತಸ್ಮಿನ್ನೇವಂವಿಧೇ ರಾಜನ್ಕುಲೇ ಮಹತಿ ತಿಷ್ಠತಿ।
05093007c ತ್ವನ್ನಿಮಿತ್ತಂ ವಿಶೇಷೇಣ ನೇಹ ಯುಕ್ತಮಸಾಂಪ್ರತಂ।।

ರಾಜನ್! ಈ ವಿಧಗಳಲ್ಲಿ ಎತ್ತರವಾಗಿ ನಿಂತಿರುವ ಈ ಕುಲದಲ್ಲಿ ಸರಿಯಾಗಿರದಿದ್ದುದು ಯಾವುದೂ, ವಿಶೇಷವಾಗಿ ನಿನ್ನಿಂದ, ನಡೆಯಬಾರದು.

05093008a ತ್ವಂ ಹಿ ವಾರಯಿತಾ ಶ್ರೇಷ್ಠಃ ಕುರೂಣಾಂ ಕುರುಸತ್ತಮ।
05093008c ಮಿಥ್ಯಾ ಪ್ರಚರತಾಂ ತಾತ ಬಾಹ್ಯೇಷ್ವಾಭ್ಯಂತರೇಷು ಚ।।

ಕುರುಸತ್ತಮ! ಕುರುಶ್ರೇಷ್ಠ! ಕುರುಗಳಲ್ಲಿ ಯಾರಾದರೂ ಒಳಗಿನವರಲ್ಲಿ ಅಥವಾ ಹೊರಗಿನವರಲ್ಲಿ ಸುಳ್ಳಾಗಿ ನಡೆದುಕೊಳ್ಳುವುದನ್ನು ನೀನೇ ನಿಲ್ಲಿಸಬಹುದು.

05093009a ತೇ ಪುತ್ರಾಸ್ತವ ಕೌರವ್ಯ ದುರ್ಯೋಧನಪುರೋಗಮಾಃ।
05093009c ಧರ್ಮಾರ್ಥೌ ಪೃಷ್ಠತಃ ಕೃತ್ವಾ ಪ್ರಚರಂತಿ ನೃಶಂಸವತ್।।
05093010a ಅಶಿಷ್ಟಾ ಗತಮರ್ಯಾದಾ ಲೋಭೇನ ಹೃತಚೇತಸಃ।
05093010c ಸ್ವೇಷು ಬಂಧುಷು ಮುಖ್ಯೇಷು ತದ್ವೇತ್ಥ ಭರತರ್ಷಭ।।

ಕೌರವ್ಯ! ನಿನ್ನ ಪುತ್ರರು, ದುರ್ಯೋಧನನ ನಾಯಕತ್ವದಲ್ಲಿ, ಧರ್ಮ-ಅರ್ಥಗಳನ್ನು ಹಿಂದೊತ್ತಿ, ಅಶಿಷ್ಟರಾಗಿ, ಮರ್ಯಾದೆಯನ್ನು ಕಳೆದುಕೊಂಡು, ಲೋಭದಿಂದ ಬುದ್ಧಿ ಕಳೆದುಕೊಂಡು ನಿನ್ನ ಬಂಧುಮುಖ್ಯರಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಭರತರ್ಷಭ! ಇದು ನಿನಗೆ ತಿಳಿದೇ ಇದೆ.

05093011a ಸೇಯಮಾಪನ್ಮಹಾಘೋರಾ ಕುರುಷ್ವೇವ ಸಮುತ್ಥಿತಾ।
05093011c ಉಪೇಕ್ಷ್ಯಮಾಣಾ ಕೌರವ್ಯ ಪೃಥಿವೀಂ ಘಾತಯಿಷ್ಯತಿ।।

ಕೌರವ್ಯ! ಈ ಮಹಾಘೋರ ಸನ್ನಿವೇಶವು ಕುರುಗಳಿಂದಲೇ ಉತ್ಪನ್ನವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಇಡೀ ಪೃಥ್ವಿಯನ್ನೇ ಅದು ಘಾತಿಗೊಳಿಸುತ್ತದೆ.

05093012a ಶಕ್ಯಾ ಚೇಯಂ ಶಮಯಿತುಂ ತ್ವಂ ಚೇದಿಚ್ಚಸಿ ಭಾರತ।
05093012c ನ ದುಷ್ಕರೋ ಹ್ಯತ್ರ ಶಮೋ ಮತೋ ಮೇ ಭರತರ್ಷಭ।।

ಭಾರತ! ನೀನು ಇಚ್ಛಿಸಿದರೆ ಇದನ್ನು ಶಾಂತಗೊಳಿಸಲು ಶಕ್ಯವಿದೆ. ಭರತರ್ಷಭ! ಏಕೆಂದರೆ ಇಲ್ಲಿ ಶಾಂತಿಯನ್ನು ತರುವುದು ದುಷ್ಕರವೇನಲ್ಲ ಎಂದು ನನ್ನ ಅನಿಸಿಕೆ.

05093013a ತ್ವಯ್ಯಧೀನಃ ಶಮೋ ರಾಜನ್ಮಯಿ ಚೈವ ವಿಶಾಂ ಪತೇ।
05093013c ಪುತ್ರಾನ್ಸ್ಥಾಪಯ ಕೌರವ್ಯ ಸ್ಥಾಪಯಿಷ್ಯಾಮ್ಯಹಂ ಪರಾನ್।।

ವಿಶಾಂಪತೇ! ರಾಜನ್! ಶಾಂತಿಯು ನಿನ್ನ ಮತ್ತು ನನ್ನ ಅಧೀನದಲ್ಲಿದೆ. ಕೌರವ್ಯ! ನೀನು ಪುತ್ರರನ್ನು ತಡೆ! ನಾನು ಇತರರನ್ನು ತಡೆಯುತ್ತೇನೆ.

05093014a ಆಜ್ಞಾ ತವ ಹಿ ರಾಜೇಂದ್ರ ಕಾರ್ಯಾ ಪುತ್ರೈಃ ಸಹಾನ್ವಯೈಃ।
05093014c ಹಿತಂ ಬಲವದಪ್ಯೇಷಾಂ ತಿಷ್ಠತಾಂ ತವ ಶಾಸನೇ।।

ರಾಜೇಂದ್ರ! ತಮ್ಮ ಅನುಯಾಯಿಗಳೊಂದಿಗೆ ಪುತ್ರರು ನಿನ್ನ ಆಜ್ಞೆಯಂತೆ ಮಾಡಬೇಕು. ಇವರನ್ನು ನಿನ್ನ ಶಾಸನದಡಿಯಲ್ಲಿ ಬಲವತ್ತಾಗಿ ಹಿಡಿದಿಟ್ಟುಕೊಳ್ಳುವುದೇ ಹಿತಕರವಾದುದು.

05093015a ತವ ಚೈವ ಹಿತಂ ರಾಜನ್ಪಾಂಡವಾನಾಮಥೋ ಹಿತಂ।
05093015c ಶಮೇ ಪ್ರಯತಮಾನಸ್ಯ ಮಮ ಶಾಸನಕಾಂಕ್ಷಿಣಾಂ।।

ರಾಜನ್! ನಿನಗೆ ಹಿತವಾದುದು ನಿನ್ನ ಶಾಸನದಲ್ಲಿರಲು ಬಯಸುವ ಪಾಂಡವರಿಗೆ ಕೂಡ, ಮತ್ತು ಶಾಂತಿಯನ್ನು ಪ್ರಯತ್ನಿಸುತ್ತಿರುವ ನನಗೂ ಹಿತವಾದುದು.

05093016a ಸ್ವಯಂ ನಿಷ್ಕಲಮಾಲಕ್ಷ್ಯ ಸಂವಿಧತ್ಸ್ವ ವಿಶಾಂ ಪತೇ।
05093016c ಸಹಭೂತಾಸ್ತು ಭರತಾಸ್ತವೈವ ಸ್ಯುರ್ಜನೇಶ್ವರ।।

ವಿಶಾಂಪತೇ! ಸ್ವಯಂ ನೀನೇ ಇದನ್ನು ವಿಚಾರಿಸಿ ನಿರ್ಧರಿಸು. ಜನೇಶ್ವರ! ನೀನೇ ಭಾರತರನ್ನು ಒಂದಾಗಿಸಬಹುದು.

05093017a ಧರ್ಮಾರ್ಥಯೋಸ್ತಿಷ್ಠ ರಾಜನ್ಪಾಂಡವೈರಭಿರಕ್ಷಿತಃ।
05093017c ನ ಹಿ ಶಕ್ಯಾಸ್ತಥಾಭೂತಾ ಯತ್ನಾದಪಿ ನರಾಧಿಪ।।

ರಾಜನ್! ನರಾಧಿಪ! ಪಾಂಡವರಿಂದ ರಕ್ಷಿತನಾಗಿ ಧರ್ಮಾರ್ಥಗಳಲ್ಲಿ ನೆಲೆಸು. ಪ್ರಯತ್ನಿಸಿದರೂ ಅವರನ್ನು ಇಲ್ಲವಾಗಿಸಲು ಸಾಧ್ಯವಾಗುವುದಿಲ್ಲ.

05093018a ನ ಹಿ ತ್ವಾಂ ಪಾಂಡವೈರ್ಜೇತುಂ ರಕ್ಷ್ಯಮಾಣಂ ಮಹಾತ್ಮಭಿಃ।
05093018c ಇಂದ್ರೋಽಪಿ ದೇವೈಃ ಸಹಿತಃ ಪ್ರಸಹೇತ ಕುತೋ ನೃಪಾಃ।।

ಮಹಾತ್ಮ ಪಾಂಡವರಿಂದ ರಕ್ಷಿತನಾದ ನಿನ್ನನ್ನು ದೇವತೆಗಳ ಸಹಿತ ಇಂದ್ರನೂ ಕೂಡ ಜಯಿಸಲು ಸಾಧ್ಯವಿಲ್ಲ. ಇತರ ನೃಪರು ಎಲ್ಲಿ?

05093019a ಯತ್ರ ಭೀಷ್ಮಶ್ಚ ದ್ರೋಣಶ್ಚ ಕೃಪಃ ಕರ್ಣೋ ವಿವಿಂಶತಿಃ।
05093019c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತೋಽಥ ಬಾಹ್ಲಿಕಃ।।
05093020a ಸೈಂಧವಶ್ಚ ಕಲಿಂಗಶ್ಚ ಕಾಂಬೋಜಶ್ಚ ಸುದಕ್ಷಿಣಃ।
05093020c ಯುಧಿಷ್ಠಿರೋ ಭೀಮಸೇನಃ ಸವ್ಯಸಾಚೀ ಯಮೌ ತಥಾ।।
05093021a ಸಾತ್ಯಕಿಶ್ಚ ಮಹಾತೇಜಾ ಯುಯುತ್ಸುಶ್ಚ ಮಹಾರಥಃ।
05093021c ಕೋ ನು ತಾನ್ವಿಪರೀತಾತ್ಮಾ ಯುಧ್ಯೇತ ಭರತರ್ಷಭ।।

ಯಾರ ಕಡೆ ಭೀಷ್ಮ, ದ್ರೋಣ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಬಾಹ್ಲಿಕ ಸೋಮದತ್ತ, ಸೈಂಧವ, ಕಲಿಂಗ, ಕಾಂಭೋಜ, ಸುದಕ್ಷಿಣ, ಯುಧಿಷ್ಠಿರ, ಭೀಮಸೇನ, ಸವ್ಯಸಾಚೀ ಮತ್ತು ಯಮಳರು, ಮಹಾತೇಜ ಸಾತ್ಯಕಿ ಮತ್ತು ಮಹಾರಥಿ ಯುಯುತ್ಸುವು ಇದ್ದಾರೋ ಅವರೊಡನೆ ಭರತರ್ಷಭ! ಯಾವ ಹುಚ್ಚನು ತಾನೇ ಯುದ್ಧಮಾಡಿಯಾನು?

05093022a ಲೋಕಸ್ಯೇಶ್ವರತಾಂ ಭೂಯಃ ಶತ್ರುಭಿಶ್ಚಾಪ್ರಧೃಷ್ಯತಾಂ।
05093022c ಪ್ರಾಪ್ಸ್ಯಸಿ ತ್ವಮಮಿತ್ರಘ್ನ ಸಹಿತಃ ಕುರುಪಾಂಡವೈಃ।।

ಅಮಿತ್ರಘ್ನ! ಕುರುಪಾಂಡವರೊಡನೆ ನೀನು ಲೋಕೇಶ್ವರತ್ವವನ್ನು ಪಡೆಯುತ್ತೀಯೆ ಮತ್ತು ಶತ್ರುಗಳಿಗೆ ಅಜೇಯನಾಗುತ್ತೀಯೆ.

05093023a ತಸ್ಯ ತೇ ಪೃಥಿವೀಪಾಲಾಸ್ತ್ವತ್ಸಮಾಃ ಪೃಥಿವೀಪತೇ।
05093023c ಶ್ರೇಯಾಂಸಶ್ಚೈವ ರಾಜಾನಃ ಸಂಧಾಸ್ಯಂತೇ ಪರಂತಪ।।

ಪೃಥಿವೀಪತೇ! ಪರಂತಪ! ಈಗ ನಿನ್ನ ಸರಿಸಮರಾಗಿರುವ ಅಥವಾ ನಿನಗಿಂಥಲೂ ಉತ್ತಮರಾಗಿರುವ ರಾಜರು ನಿನ್ನೊಡನೆ ಸಂಧಿ ಮಾಡಿಕೊಳ್ಳುವರು.

05093024a ಸ ತ್ವಂ ಪುತ್ರೈಶ್ಚ ಪೌತ್ರೈಶ್ಚ ಭ್ರಾತೃಭಿಃ ಪಿತೃಭಿಸ್ತಥಾ।
05093024c ಸುಹೃದ್ಭಿಃ ಸರ್ವತೋ ಗುಪ್ತಃ ಸುಖಂ ಶಕ್ಷ್ಯಸಿ ಜೀವಿತುಂ।।

ಆಗ ನೀನು ಎಲ್ಲ ಕಡೆಯಿಂದ ಮಕ್ಕಳು-ಮೊಮ್ಮಕ್ಕಳು, ಸಹೋದರರು, ಪಿತೃಗಳು, ಸ್ನೇಹಿತರಿಂದ ರಕ್ಷಿಸಲ್ಪಟ್ಟು ಸುಖವಾದ ಜೀವನವನ್ನು ನಡೆಸಲು ಶಕ್ಯನಾಗುತ್ತೀಯೆ.

05093025a ಏತಾನೇವ ಪುರೋಧಾಯ ಸತ್ಕೃತ್ಯ ಚ ಯಥಾ ಪುರಾ।
05093025c ಅಖಿಲಾಂ ಭೋಕ್ಷ್ಯಸೇ ಸರ್ವಾಂ ಪೃಥಿವೀಂ ಪೃಥಿವೀಪತೇ।।

ಅವರನ್ನು ಮುಂದೆ ಇರಿಸಿ ಹಿಂದಿನಂತೆಯೇ ಸತ್ಕರಿಸು. ಇದರಿಂದ ಪೃಥಿವೀಪತೇ! ಇಡೀ ಪೃಥ್ವಿಯ ಎಲ್ಲವನ್ನೂ ಭೋಗಿಸಬಲ್ಲೆ.

05093026a ಏತೈರ್ಹಿ ಸಹಿತಃ ಸರ್ವೈಃ ಪಾಂಡವೈಃ ಸ್ವೈಶ್ಚ ಭಾರತ।
05093026c ಅನ್ಯಾನ್ವಿಜೇಷ್ಯಸೇ ಶತ್ರೂನೇಷ ಸ್ವಾರ್ಥಸ್ತವಾಖಿಲಃ।।

ಭಾರತ! ಪಾಂಡವರು ಮತ್ತು ನಿನ್ನವರೆಲ್ಲರೂ ಒಟ್ಟಿಗೇ ಇತರ ಶತ್ರುಗಳೆಲ್ಲರನ್ನು ಗೆಲ್ಲಬಹುದು. ಇದು ಸಂಪೂರ್ಣವಾಗಿ ನಿನ್ನದೇ ಸ್ವಾರ್ಥದಲ್ಲಿದೆ.

05093027a ತೈರೇವೋಪಾರ್ಜಿತಾಂ ಭೂಮಿಂ ಭೋಕ್ಷ್ಯಸೇ ಚ ಪರಂತಪ।
05093027c ಯದಿ ಸಂಪತ್ಸ್ಯಸೇ ಪುತ್ರೈಃ ಸಹಾಮಾತ್ಯೈರ್ನರಾಧಿಪ।।

ಪರಂತಪ! ನರಾಧಿಪ! ಒಂದುವೇಳೆ ಪುತ್ರರೊಂದಿಗೆ ಅಮಾತ್ಯರೊಂದಿಗೆ ಒಂದಾದೆಯಾದರೆ, ಅವರು ನಿನಗೆ ಗಳಿಸಿಕೊಡುವ ಭೂಮಿಯನ್ನು ನೀನು ಭೋಗಿಸಬಹುದು.

05093028a ಸಂಯುಗೇ ವೈ ಮಹಾರಾಜ ದೃಶ್ಯತೇ ಸುಮಹಾನ್ ಕ್ಷಯಃ।
05093028c ಕ್ಷಯೇ ಚೋಭಯತೋ ರಾಜನ್ಕಂ ಧರ್ಮಮನುಪಶ್ಯಸಿ।।

ಆದರೆ ರಾಜನ್! ಮಹಾರಾಜ! ಯುದ್ಧವೇ ಆಗಬೇಕೆಂದರೆ ಮಹಾನಾಶವು ಕಾಣುತ್ತಿದೆ. ಎರಡೂ ಕಡೆಯವರು ಕ್ಷಯವಾಗುವುದರಲ್ಲಿ ನೀನು ಯಾವ ಧರ್ಮವನ್ನು ಕಾಣುತ್ತೀಯೆ?

05093029a ಪಾಂಡವೈರ್ನಿಹತೈಃ ಸಂಖ್ಯೇ ಪುತ್ರೈರ್ವಾಪಿ ಮಹಾಬಲೈಃ।
05093029c ಯದ್ವಿಂದೇಥಾಃ ಸುಖಂ ರಾಜಂಸ್ತದ್ಬ್ರೂಹಿ ಭರತರ್ಷಭ।।

ರಾಜನ್! ಭರತರ್ಷಭ! ಯುದ್ಧದಲ್ಲಿ ಮಹಾಬಲ ಪಾಂಡವರು ಮತ್ತು ನಿನ್ನ ಪುತ್ರರೂ ಕೂಡ ಹತರಾಗುವುದರಲ್ಲಿ ಎಂಥಹ ಸುಖವಿದೆ ಹೇಳು.

05093030a ಶೂರಾಶ್ಚ ಹಿ ಕೃತಾಸ್ತ್ರಾಶ್ಚ ಸರ್ವೇ ಯುದ್ಧಾಭಿಕಾಂಕ್ಷಿಣಃ।
05093030c ಪಾಂಡವಾಸ್ತಾವಕಾಶ್ಚೈವ ತಾನ್ರಕ್ಷ ಮಹತೋ ಭಯಾತ್।।

ಪಾಂಡವರು ಮತ್ತು ನಿನ್ನವರು ಎಲ್ಲರೂ ಶೂರರು. ಕೃತಾಸ್ತ್ರರಾಗಿದ್ದಾರೆ. ಯುದ್ಧಾಕಾಂಕ್ಷಿಗಳಾಗಿದ್ದಾರೆ. ಅವರನ್ನು ಈ ಮಹಾಭಯದಿಂದ ರಕ್ಷಿಸು.

05093031a ನ ಪಶ್ಯೇಮ ಕುರೂನ್ಸರ್ವಾನ್ಪಾಂಡವಾಂಶ್ಚೈವ ಸಂಯುಗೇ।
05093031c ಕ್ಷೀಣಾನುಭಯತಃ ಶೂರಾನ್ರಥೇಭ್ಯೋ ರಥಿಭಿರ್ಹತಾನ್।।

ಆ ಶೂರರು ರಥಿಗಳಿಂದ ರಥಗಳು ಪುಡಿಯಾಗಿ ಯುದ್ಧದಲ್ಲಿ ನಾಶವನ್ನು ಹೊಂದಿದರೆ ಕುರುಗಳನ್ನೂ ಪಾಂಡವರೆಲ್ಲರನ್ನೂ ನಾವು ನೋಡಲಾರೆವು.

05093032a ಸಮವೇತಾಃ ಪೃಥಿವ್ಯಾಂ ಹಿ ರಾಜಾನೋ ರಾಜಸತ್ತಮ।
05093032c ಅಮರ್ಷವಶಮಾಪನ್ನಾ ನಾಶಯೇಯುರಿಮಾಃ ಪ್ರಜಾಃ।।

ರಾಜಸತ್ತಮ! ಪೃಥ್ವಿಯ ರಾಜರು ಸಿಟ್ಟಿನ ವಶರಾಗಿ ಈ ಪ್ರಜೆಗಳನ್ನು ನಾಶಪಡಿಸುವ ಉದ್ದೇಶದಿಂದ ಸೇರಿದ್ದಾರೆ.

05093033a ತ್ರಾಹಿ ರಾಜನ್ನಿಮಂ ಲೋಕಂ ನ ನಶ್ಯೇಯುರಿಮಾಃ ಪ್ರಜಾಃ।
05093033c ತ್ವಯಿ ಪ್ರಕೃತಿಮಾಪನ್ನೇ ಶೇಷಂ ಸ್ಯಾತ್ಕುರುನಂದನ।।

ಕುರುನಂದನ! ರಾಜನ್! ಈ ಲೋಕವನ್ನು ಉಳಿಸು. ನಿನ್ನ ಪ್ರಜೆಗಳು ನಾಶವಾಗಲು ಬಿಡಬೇಡ. ನಿನ್ನ ಸ್ವಭಾವವನ್ನು ಹೊಂದಿ ಎಲ್ಲವನ್ನೂ ಉಳಿಯುವಂತೆ ಮಾಡು.

05093034a ಶುಕ್ಲಾ ವದಾನ್ಯಾ ಹ್ರೀಮಂತ ಆರ್ಯಾಃ ಪುಣ್ಯಾಭಿಜಾತಯಃ।
05093034c ಅನ್ಯೋನ್ಯಸಚಿವಾ ರಾಜಂಸ್ತಾನ್ಪಾಹಿ ಮಹತೋ ಭಯಾತ್।।

ರಾಜನ್! ಶುಚಿಯಾಗಿರುವ, ಉದಾರಿಗಳಾದ, ವಿನೀತರಾದ, ಆರ್ಯರಾದ, ಪುಣ್ಯಗಳಿಂದ ಹುಟ್ಟಿದ, ಅನ್ಯೋನ್ಯರೊಡನೆ ಒಂದಾಗಿರುವ ಇವರನ್ನು ಮಹಾ ಭಯದಿಂದ ರಕ್ಷಿಸು.

05093035a ಶಿವೇನೇಮೇ ಭೂಮಿಪಾಲಾಃ ಸಮಾಗಮ್ಯ ಪರಸ್ಪರಂ।
05093035c ಸಹ ಭುಕ್ತ್ವಾ ಚ ಪೀತ್ವಾ ಚ ಪ್ರತಿಯಾಂತು ಯಥಾಗೃಹಂ।।
05093036a ಸುವಾಸಸಃ ಸ್ರಗ್ವಿಣಶ್ಚ ಸತ್ಕೃತ್ಯ ಭರತರ್ಷಭ।
05093036c ಅಮರ್ಷಾಂಶ್ಚ ನಿರಾಕೃತ್ಯ ವೈರಾಣಿ ಚ ಪರಂತಪ।।

ಭರತರ್ಷಭ! ಪರಂತಪ! ಈ ಭೂಮಿಪಾಲಕರು ಶಾಂತಿಯುತವಾಗಿ ಪರಸ್ಪರರನ್ನು ಸೇರಲಿ, ಒಟ್ಟಿಗೇ ತಿಂದು ಕುಡಿದು, ಉತ್ತಮ ಉಡುಗೆಗಳನ್ನು ತೊಟ್ಟು, ಮಾಲೆಗಳನ್ನು ಧರಿಸಿ ಸತ್ಕೃತರಾಗಿ, ಸಿಟ್ಟು-ವೈರಗಳನ್ನು ತೊರೆದು, ತಮ್ಮ ತಮ್ಮ ಮನೆಗಳಿಗೆ ತೆರಳಲಿ.

05093037a ಹಾರ್ದಂ ಯತ್ಪಾಂಡವೇಷ್ವಾಸೀತ್ಪ್ರಾಪ್ತೇಽಸ್ಮಿನ್ನಾಯುಷಃ ಕ್ಷಯೇ।
05093037c ತದೇವ ತೇ ಭವತ್ವದ್ಯ ಶಶ್ವಚ್ಚ ಭರತರ್ಷಭ।।

ಭರತರ್ಷಭ! ಈಗ ನಿನ್ನ ಜೀವನದ ಹೆಚ್ಚುಕಾಲವು ಕಳೆದುಹೋಗಿರಲು, ನಿನಗೆ ಹಿಂದೆ ಪಾಂಡವರೊಡನಿದ್ದ ಸೌಹಾರ್ದತೆಯ ಇನ್ನೊಮ್ಮೆ ತೋರಿಬರಲಿ.

05093038a ಬಾಲಾ ವಿಹೀನಾಃ ಪಿತ್ರಾ ತೇ ತ್ವಯೈವ ಪರಿವರ್ಧಿತಾಃ।
05093038c ತಾನ್ಪಾಲಯ ಯಥಾನ್ಯಾಯಂ ಪುತ್ರಾಂಶ್ಚ ಭರತರ್ಷಭ।।

ಭರತರ್ಷಭ! ಬಾಲಕರಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಅವರು ನಿನ್ನಿಂದಲೇ ಬೆಳೆದರು. ಪುತ್ರರಂತೆ ಯಥಾನ್ಯಾಯವಾಗಿ ಅವರನ್ನು ಪಾಲಿಸಬೇಕು.

05093039a ಭವತೈವ ಹಿ ರಕ್ಷ್ಯಾಸ್ತೇ ವ್ಯಸನೇಷು ವಿಶೇಷತಃ।
05093039c ಮಾ ತೇ ಧರ್ಮಸ್ತಥೈವಾರ್ಥೋ ನಶ್ಯೇತ ಭರತರ್ಷಭ।।

ವಿಶೇಷವಾಗಿ ವ್ಯಸನದಲ್ಲಿರುವಾಗ ಅವರಿಗೆ ನಿನ್ನದೇ ರಕ್ಷಣೆಯು ಬೇಕು. ಭರತರ್ಷಭ! ಇಲ್ಲದಿದ್ದರೆ ನಿನ್ನ ಧರ್ಮಾರ್ಥಗಳು ನಾಶವಾಗುತ್ತದೆ.

05093040a ಆಹುಸ್ತ್ವಾಂ ಪಾಂಡವಾ ರಾಜನ್ನಭಿವಾದ್ಯ ಪ್ರಸಾದ್ಯ ಚ।
05093040c ಭವತಃ ಶಾಸನಾದ್ದುಃಖಮನುಭೂತಂ ಸಹಾನುಗೈಃ।।
05093041a ದ್ವಾದಶೇಮಾನಿ ವರ್ಷಾಣಿ ವನೇ ನಿರ್ವ್ಯುಷಿತಾನಿ ನಃ।
05093041c ತ್ರಯೋದಶಂ ತಥಾಜ್ಞಾತೈಃ ಸಜನೇ ಪರಿವತ್ಸರಂ।।

ರಾಜನ್! ಪಾಂಡವನು ನಿನ್ನನ್ನು ಅಭಿವಂದಿಸಿ ಕರುಣೆಯನ್ನು ಬೇಡಿ ಕೇಳಿಕೊಳ್ಳುತ್ತಿದ್ದಾರೆ: “ನಿನ್ನ ಶಾಸನದಂತೆ ಅನುಗರೊಂದಿಗೆ ದುಃಖವನ್ನು ಸಹಿಸಿಕೊಂಡು ಈ ಹನ್ನೆರಡು ವರ್ಷಗಳು ವನದಲ್ಲಿ ಮತ್ತು ಹಾಗೆಯೇ ಹದಿಮೂರನೆಯ ವರ್ಷವನ್ನು ಜನರ ಮಧ್ಯೆ ಯಾರಿಗೂ ತಿಳಿಯದಂತೆ ಕಳೆದಿದ್ದೇವೆ.

05093042a ಸ್ಥಾತಾ ನಃ ಸಮಯೇ ತಸ್ಮಿನ್ಪಿತೇತಿ ಕೃತನಿಶ್ಚಯಾಃ।
05093042c ನಾಹಾಸ್ಮ ಸಮಯಂ ತಾತ ತಚ್ಚ ನೋ ಬ್ರಾಹ್ಮಣಾ ವಿದುಃ।।

ತಂದೆಯು ಒಪ್ಪಂದದಂತೆ ನಡೆದುಕೊಳ್ಳುತ್ತಾನೆ ಎಂದು ಯೋಚಿಸಿ ನಾವು ನಡೆದುಕೊಂಡೆವು. ಅಪ್ಪಾ! ನಾವು ಒಪ್ಪಂದವನ್ನು ಮುರಿಯಲಿಲ್ಲ. ಇದನ್ನು ಬ್ರಾಹ್ಮಣರು ತಿಳಿದಿದ್ದಾರೆ.

05093043a ತಸ್ಮಿನ್ನಃ ಸಮಯೇ ತಿಷ್ಠ ಸ್ಥಿತಾನಾಂ ಭರತರ್ಷಭ।
05093043c ನಿತ್ಯಂ ಸಂಕ್ಲೇಶಿತಾ ರಾಜನ್ಸ್ವರಾಜ್ಯಾಂಶಂ ಲಭೇಮಹಿ।।

ಆದುದರಿಂದ ಭರತರ್ಷಭ! ಒಪ್ಪಂದದಂತೆ ನಡೆದುಕೊಂಡು ಬಂದವರೊಡನೆ ಒಪ್ಪಂದದಂತೆ ನಡೆದುಕೋ! ರಾಜನ್! ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಈಗ ನಮಗೆ ನಮ್ಮ ರಾಜ್ಯಾಂಶವು ದೊರೆಯಬೇಕು.

05093044a ತ್ವಂ ಧರ್ಮಮರ್ಥಂ ಯುಂಜಾನಃ ಸಂಯಂ ನಸ್ತ್ರಾತುಮರ್ಹಸಿ।
05093044c ಗುರುತ್ವಂ ಭವತಿ ಪ್ರೇಕ್ಷ್ಯ ಬಹೂನ್ಕ್ಲೇಶಾಂಸ್ತಿತಿಕ್ಷ್ಮಹೇ।।

ಧರ್ಮ-ಅರ್ಥಗಳನ್ನು ಚೆನ್ನಾಗಿ ಜೋಡಿಸಿ ನಮ್ಮನ್ನು ನೀನು ರಕ್ಷಿಸಬೇಕು. ನಿನ್ನನ್ನು ಗುರುವೆಂದು ಸ್ವೀಕರಿಸಿ ನಾವು ಬಹಳ ಕ್ಲೇಶಗಳನ್ನು ಅನುಭವಿಸಿದ್ದೇವೆ.

05093045a ಸ ಭವಾನ್ಮಾತೃಪಿತೃವದಸ್ಮಾಸು ಪ್ರತಿಪದ್ಯತಾಂ।
05093045c ಗುರೋರ್ಗರೀಯಸೀ ವೃತ್ತಿರ್ಯಾ ಚ ಶಿಷ್ಯಸ್ಯ ಭಾರತ।।

ನಮ್ಮನ್ನು ನೀನು ತಂದೆ-ತಾಯಿಯಂತೆ ಪಾಲಿಸಬೇಕು. ಭಾರತ! ಗುರುವಿನ ಕಡೆ ಶಿಷ್ಯರು ನಡೆದುಕೊಳ್ಳುವ ರೀತಿಯು ಅತಿ ದೊಡ್ಡದು.

05093046a ಪಿತ್ರಾ ಸ್ಥಾಪಯಿತವ್ಯಾ ಹಿ ವಯಮುತ್ಪಥಮಾಸ್ಥಿತಾಃ।
05093046c ಸಂಸ್ಥಾಪಯ ಪಥಿಷ್ವಸ್ಮಾಂಸ್ತಿಷ್ಠ ರಾಜನ್ಸ್ವವರ್ತ್ಮನಿ।।

ನಾವು ದಾರಿತಪ್ಪಿರುವವರಾದರೆ ತಂದೆಯಾಗಿ ನೀನೇ ನಮ್ಮನ್ನು ನಿಲ್ಲಿಸಬೇಕು. ರಾಜನ್! ನೀನು ನಮ್ಮನ್ನು ದಾರಿಯಲ್ಲಿ ಇರಿಸಿ ನೀನೂ ಕೂಡ ಸರಿಯಾದ ದಾರಿಯಲ್ಲಿ ನಿಂತಿರು.”

05093047a ಆಹುಶ್ಚೇಮಾಂ ಪರಿಷದಂ ಪುತ್ರಾಸ್ತೇ ಭರತರ್ಷಭ।
05093047c ಧರ್ಮಜ್ಞೇಷು ಸಭಾಸತ್ಸು ನೇಹ ಯುಕ್ತಮಸಾಂಪ್ರತಂ।।

ಭರತರ್ಷಭ! ನಿನ್ನ ಮಕ್ಕಳು ಈ ಪರಿಷತ್ತಿಗೆ ಇದನ್ನು ಹೇಳಿಕಳುಹಿಸಿದ್ದಾರೆ: “ಧರ್ಮವನ್ನು ತಿಳಿದಿರುವ ಈ ಸಭಾಸದರಲ್ಲಿ ಅಸಾಂಪ್ರತವು ಸರಿಯಲ್ಲ.

05093048a ಯತ್ರ ಧರ್ಮೋ ಹ್ಯಧರ್ಮೇಣ ಸತ್ಯಂ ಯತ್ರಾನೃತೇನ ಚ।
05093048c ಹನ್ಯತೇ ಪ್ರೇಕ್ಷಮಾಣಾನಾಂ ಹತಾಸ್ತತ್ರ ಸಭಾಸದಃ।।

ಎಲ್ಲಿ ಧರ್ಮವು ಅಧರ್ಮದಿಂದ ಮತ್ತು ಸತ್ಯವು ಸುಳ್ಳಿನಿಂದ ಸಾಯಿಸಲ್ಪಡುತ್ತದೆಯೋ ಅದನ್ನು ಅಲ್ಲಿದ್ದು ನೋಡುತ್ತಿರುವ ಸಭಾಸದರೂ ಹತರಾಗುತ್ತಾರೆ.

05093049a ವಿದ್ಧೋ ಧರ್ಮೋ ಹ್ಯಧರ್ಮೇಣ ಸಭಾಂ ಯತ್ರ ಪ್ರಪದ್ಯತೇ।
05093049c ನ ಚಾಸ್ಯ ಶಲ್ಯಂ ಕೃಂತಂತಿ ವಿದ್ಧಾಸ್ತತ್ರ ಸಭಾಸದಃ।
05093049e ಧರ್ಮ ಏತಾನಾರುಜತಿ ಯಥಾ ನದ್ಯನುಕೂಲಜಾನ್।।

ಅಧರ್ಮದಿಂದ ಚುಚ್ಚಲ್ಪಟ್ಟ ಧರ್ಮವು ಸಭೆಗೆ ಬಂದಾಗ ಆ ಮುಳ್ಳನ್ನು ಅವರು ಕಿತ್ತು ತೆಗಿಯದೇ ಇದ್ದರೆ, ಅದು ಆ ಸಭಾಸದರನ್ನೇ ಚುಚ್ಚುತ್ತದೆ. ನದಿಯು ತನ್ನ ದಂಡೆಯಲ್ಲಿರುವ ಮರಗಳನ್ನು ಕೊಚ್ಚಿಕೊಂಡು ಹೋಗುವಂತೆ ಧರ್ಮವು ಅವರನ್ನೂ ಕೊಚ್ಚಿಕೊಂಡು ಹೋಗುತ್ತದೆ.”

05093050a ಯೇ ಧರ್ಮಮನುಪಶ್ಯಂತಸ್ತೂಷ್ಣೀಂ ಧ್ಯಾಯಂತ ಆಸತೇ।
05093050c ತೇ ಸತ್ಯಮಾಹುರ್ಧರ್ಮಂ ಚ ನ್ಯಾಯ್ಯಂ ಚ ಭರತರ್ಷಭ।।

ಭರತರ್ಷಭ! ಧರ್ಮವನ್ನು ನೋಡಿಕೊಂಡು, ಧ್ಯಾನಾಸಕ್ತರಾಗಿದ್ದುಕೊಂಡು ಅವರು ಸತ್ಯವನ್ನೇ ಹೇಳುತ್ತಿದ್ದಾರೆ. ಇಲ್ಲಿ ಧರ್ಮವೇ ನ್ಯಾಯವು.

05093051a ಶಕ್ಯಂ ಕಿಮನ್ಯದ್ವಕ್ತುಂ ತೇ ದಾನಾದನ್ಯಜ್ಜನೇಶ್ವರ।
05093051c ಬ್ರುವಂತು ವಾ ಮಹೀಪಾಲಾಃ ಸಭಾಯಾಂ ಯೇ ಸಮಾಸತೇ।
05093051e ಧರ್ಮಾರ್ಥೌ ಸಂಪ್ರಧಾರ್ಯೈವ ಯದಿ ಸತ್ಯಂ ಬ್ರವೀಮ್ಯಹಂ।।

ಜನೇಶ್ವರ! ಅವರಿಗೆ ಕೊಡುತ್ತೇನೆ ಎನ್ನುವುದಲ್ಲದೇ ಬೇರೆ ಏನನ್ನು ಹೇಳಲು ಸಾಧ್ಯ? ನಾನು ಧರ್ಮಾರ್ಥಗಳನ್ನು ಯೋಚಿಸಿ ಸತ್ಯವನ್ನು ಹೇಳುತ್ತಿದ್ದೇನೆ ಎಂದಾದರೆ ಈ ಸಭೆಯಲ್ಲಿ ಸೇರಿರುವ ಮಹೀಪಾಲರ್ಯಾರಾದರೂ ಹೇಳಲಿ.

05093052a ಪ್ರಮುಂಚೇಮಾನ್ಮೃತ್ಯುಪಾಶಾತ್ಕ್ಷತ್ರಿಯಾನ್ ಕ್ಷತ್ರಿಯರ್ಷಭ।
05093052c ಪ್ರಶಾಮ್ಯ ಭರತಶ್ರೇಷ್ಠ ಮಾ ಮನ್ಯುವಶಮನ್ವಗಾಃ।।

ಕ್ಷತ್ರಿಯರ್ಷಭ! ಈ ಕ್ಷತ್ರಿಯರನ್ನು ಮೃತ್ಯುಪಾಶದಿಂದ ಬಿಡುಗಡೆ ಮಾಡು. ಶಾಂತನಾಗು ಭರತಶ್ರೇಷ್ಠ! ಕೋಪವಶನಾಗಬೇಡ!

05093053a ಪಿತ್ರ್ಯಂ ತೇಭ್ಯಃ ಪ್ರದಾಯಾಂಶಂ ಪಾಂಡವೇಭ್ಯೋ ಯಥೋಚಿತಂ।
05093053c ತತಃ ಸಪುತ್ರಃ ಸಿದ್ಧಾರ್ಥೋ ಭುಂಕ್ಷ್ವ ಭೋಗಾನ್ಪರಂತಪ।।

ಪಾಂಡವರಿಗೆ ಯಥೋಚಿತವಾಗಿ ಅವರ ಪಿತೃಗಳ ಅಂಶವನ್ನು ಕೊಟ್ಟುಬಿಡು! ಅನಂತರ ಪರಂತಪ! ಪುತ್ರರೊಂದಿಗೆ ಅರ್ಥಸಿದ್ಧಿಯನ್ನು ಹೊಂದಿ ಭೋಗಗಳನ್ನು ಭೋಗಿಸು.

05093054a ಅಜಾತಶತ್ರುಂ ಜಾನೀಷೇ ಸ್ಥಿತಂ ಧರ್ಮೇ ಸತಾಂ ಸದಾ।
05093054c ಸಪುತ್ರೇ ತ್ವಯಿ ವೃತ್ತಿಂ ಚ ವರ್ತತೇ ಯಾಂ ನರಾಧಿಪ।।

ಸದಾ ಸಂತರ ಧರ್ಮದಲ್ಲಿ ನಡೆಯುವ ಅಜಾತಶತ್ರುವನ್ನು ನೀನು ತಿಳಿದಿದ್ದೀಯೆ. ನರಾಧಿಪ! ಹಾಗೆಯೇ ಅವನು ನಿನ್ನ ಮತ್ತು ನಿನ್ನ ಮಕ್ಕಳೊಡನೆಯೂ ಕೂಡ ನಡೆದುಕೊಳ್ಳುತ್ತಿದ್ದಾನೆ.

05093055a ದಾಹಿತಶ್ಚ ನಿರಸ್ತಶ್ಚ ತ್ವಾಮೇವೋಪಾಶ್ರಿತಃ ಪುನಃ।
05093055c ಇಂದ್ರಪ್ರಸ್ಥಂ ತ್ವಯೈವಾಸೌ ಸಪುತ್ರೇಣ ವಿವಾಸಿತಃ।।

ಸುಡುವ ಪ್ರಯತ್ನಕ್ಕೊಳಪಟ್ಟಿದ್ದ, ಹೊರಗಟ್ಟಲ್ಪಟ್ಟ, ಪುತ್ರರೊಂದಿಗೆ ನಿನ್ನಿಂದ ಇಂದ್ರಪ್ರಸ್ಥಕ್ಕೆ ಕಳುಹಿಸಲ್ಪಟ್ಟ ಅವನು ಪುನಃ ನಿನ್ನ ಆಶ್ರಿತನಾಗಿರಲು ಬಯಸುತ್ತಾನೆ.

05093056a ಸ ತತ್ರ ನಿವಸನ್ಸರ್ವಾನ್ವಶಮಾನೀಯ ಪಾರ್ಥಿವಾನ್।
05093056c ತ್ವನ್ಮುಖಾನಕರೋದ್ರಾಜನ್ನ ಚ ತ್ವಾಮತ್ಯವರ್ತತ।।

ರಾಜನ್! ಅಲ್ಲಿ ವಾಸಿಸಿರುವಾಗ ಅವನು ಸರ್ವ ಪಾರ್ಥಿವರನ್ನೂ ಗೆದ್ದರೂ ನಿನ್ನನ್ನು ಎಂದೂ ಮೀರಿಸಲಿಲ್ಲ.

05093057a ತಸ್ಯೈವಂ ವರ್ತಮಾನಸ್ಯ ಸೌಬಲೇನ ಜಿಹೀರ್ಷತಾ।
05093057c ರಾಷ್ಟ್ರಾಣಿ ಧನಧಾನ್ಯಂ ಚ ಪ್ರಯುಕ್ತಃ ಪರಮೋಪಧಿಃ।।

ಹೀಗೆ ಅವನು ನಡೆದುಕೊಳ್ಳುತ್ತಿರಲು ಸೌಬಲನು ಅವನ ರಾಷ್ಟ್ರಗಳನ್ನು, ಧನಧಾನ್ಯಗಳನ್ನು ಗೆಲ್ಲುವ ಆಸೆಯಿಂದ ಪರಮ ಉಪಾಯವನ್ನು ಬಳಸಿದನು.

05093058a ಸ ತಾಮವಸ್ಥಾಂ ಸಂಪ್ರಾಪ್ಯ ಕೃಷ್ಣಾಂ ಪ್ರೇಕ್ಷ್ಯ ಸಭಾಗತಾಂ।
05093058c ಕ್ಷತ್ರಧರ್ಮಾದಮೇಯಾತ್ಮಾ ನಾಕಂಪತ ಯುಧಿಷ್ಠಿರಃ।।

ಆ ಅವಸ್ಥೆಯನ್ನು ಪಡೆದು, ಕೃಷ್ಣೆಯನ್ನು ಸಭೆಗೆ ಎಳೆದುತಂದುದನ್ನು ನೋಡಿಯೂ ಆ ಅಮೇಯಾತ್ಮ ಯುಧಿಷ್ಠಿರನು ಕ್ಷತ್ರಧರ್ಮದಿಂದ ಅಲುಗಾಡಲಿಲ್ಲ.

05093059a ಅಹಂ ತು ತವ ತೇಷಾಂ ಚ ಶ್ರೇಯ ಇಚ್ಚಾಮಿ ಭಾರತ।
05093059c ಧರ್ಮಾದರ್ಥಾತ್ಸುಖಾಚ್ಚೈವ ಮಾ ರಾಜನ್ನೀನಶಃ ಪ್ರಜಾಃ।।

ಭಾರತ! ಧರ್ಮ, ಅರ್ಥ ಮತ್ತು ಸುಖಗಳಲ್ಲಿ ನಾನು ನಿಮ್ಮ ಮತ್ತು ಅವರ ಶ್ರೇಯಸ್ಸನ್ನು ಬಯಸುತ್ತಿದ್ದೇನೆ. ರಾಜನ್! ಪ್ರಜೆಗಳನ್ನು ನಾಶಪಡಿಸಬೇಡ!

05093060a ಅನರ್ಥಮರ್ಥಂ ಮನ್ವಾನಾ ಅರ್ಥಂ ವಾನರ್ಥಮಾತ್ಮನಃ।
05093060c ಲೋಭೇಽತಿಪ್ರಸೃತಾನ್ಪುತ್ರಾನ್ನಿಗೃಹ್ಣೀಷ್ವ ವಿಶಾಂ ಪತೇ।।

ವಿಶಾಂಪತೇ! ಅನರ್ಥವಾದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ತಮಗೆ ಸರಿಯಲ್ಲ ಎಂದು ತಿಳಿದಿರುವ, ಲೋಭದಲ್ಲಿ ಬಹಳ ಮುಂದುವರೆದಿರುವ ನಿನ್ನ ಮಕ್ಕಳನ್ನು ಹಿಡಿದಿಡು!

05093061a ಸ್ಥಿತಾಃ ಶುಶ್ರೂಷಿತುಂ ಪಾರ್ಥಾಃ ಸ್ಥಿತಾ ಯೋದ್ಧುಮರಿಂದಮಾಃ।
05093061c ಯತ್ತೇ ಪಥ್ಯತಮಂ ರಾಜಂಸ್ತಸ್ಮಿಂಸ್ತಿಷ್ಠ ಪರಂತಪ।।

ಅರಿಂದಮ ಪಾರ್ಥರು ನಿನ್ನ ಸೇವೆಮಾಡಲು ಸಿದ್ಧರಾಗಿದ್ದಾರೆ, ಯುದ್ದಕ್ಕೂ ಸಿದ್ಧರಾಗಿದ್ದಾರೆ. ರಾಜನ್! ಪರಂತಪ! ನಿನಗೆ ಯಾವುದು ಉತ್ತಮವೆನಿಸುತ್ತದೆಯೋ ಅದರಂತೆ ನಿರ್ಧರಿಸು.”

05093062a ತದ್ವಾಕ್ಯಂ ಪಾರ್ಥಿವಾಃ ಸರ್ವೇ ಹೃದಯೈಃ ಸಮಪೂಜಯನ್।
05093062c ನ ತತ್ರ ಕಶ್ಚಿದ್ವಕ್ತುಂ ಹಿ ವಾಚಂ ಪ್ರಾಕ್ರಾಮದಗ್ರತಃ।।

ಪಾರ್ಥಿವರೆಲ್ಲರೂ ಅವನ ಆ ಮಾತುಗಳನ್ನು ಹೃದಯದಲ್ಲಿಯೇ ಮೆಚ್ಚಿದರು. ಆದರೆ ಅಲ್ಲಿ ಯಾರೂ ಏನನ್ನು ಹೇಳಲೂ ಮುಂದೆ ಬರಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಾಕ್ಯೇ ತ್ರಿನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಾಕ್ಯದಲ್ಲಿ ತೊಂಭತ್ಮೂರನೆಯ ಅಧ್ಯಾಯವು.