ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 90
ಸಾರ
ಊಟವಾದ ನಂತರ ರಾತ್ರಿ ವಿದುರನು ಕೃಷ್ಣನಿಗೆ “ಬಹುಸಂಖ್ಯೆಯಲ್ಲಿ ಸೇರಿರುವ ಆ ದುಷ್ಟಚೇತಸ ಶತ್ರುಗಳ ಮಧ್ಯೆ ನೀನು ಹೇಗೆ ಹೋಗುತ್ತೀಯೆ?” ಎಂದು ಕೌರವರ ದುಷ್ಟತನವನ್ನೂ ಅವಿಶ್ವಾಸವನ್ನೂ ವರ್ಣಿಸಿದುದು (1-28).
05090001 ವೈಶಂಪಾಯನ ಉವಾಚ।
05090001a ತಂ ಭುಕ್ತವಂತಮಾಶ್ವಸ್ತಂ ನಿಶಾಯಾಂ ವಿದುರೋಽಬ್ರವೀತ್।
05090001c ನೇದಂ ಸಮ್ಯಗ್ವ್ಯವಸಿತಂ ಕೇಶವಾಗಮನಂ ತವ।।
ವೈಶಂಪಾಯನನು ಹೇಳಿದನು: “ಅವನು ಊಟಮಾಡಿ ಚೇತರಿಸಿಕೊಂಡ ನಂತರ ರಾತ್ರಿಯಲ್ಲಿ ವಿದುರನು ಹೇಳಿದನು: “ಕೇಶವ! ನಿನ್ನ ಈ ಆಗಮನವು ಸರಿಯಾಗಿ ವಿಚಾರಮಾಡಿದ್ದುದಲ್ಲ.
05090002a ಅರ್ಥಧರ್ಮಾತಿಗೋ ಮೂಢಃ ಸಂರಂಭೀ ಚ ಜನಾರ್ದನ।
05090002c ಮಾನಘ್ನೋ ಮಾನಕಾಮಶ್ಚ ವೃದ್ಧಾನಾಂ ಶಾಸನಾತಿಗಃ।।
ಯಾಕೆಂದರೆ ಜನಾರ್ದನ! ಇವನು ಅರ್ಥಧರ್ಮಗಳನ್ನು ತಿಳಿಯದವನು ಮತ್ತು ದುಡುಕು ಸ್ವಭಾವದವನು. ಇನ್ನೊಬ್ಬರನ್ನು ಹೀಯಾಳಿಸುತ್ತಾನೆ ಆದರೆ ತಾನು ಮಾತ್ರ ಗೌರವವನ್ನು ಬಯಸುತ್ತಾನೆ. ವೃದ್ಧರ ಮಾತನ್ನು ಮೀರಿ ನಡೆಯುತ್ತಾನೆ.
05090003a ಧರ್ಮಶಾಸ್ತ್ರಾತಿಗೋ ಮಂದೋ ದುರಾತ್ಮಾ ಪ್ರಗ್ರಹಂ ಗತಃ।
05090003c ಅನೇಯಃ ಶ್ರೇಯಸಾಂ ಪಾಪೋ ಧಾರ್ತರಾಷ್ಟ್ರೋ ಜನಾರ್ದನ।।
ಜನಾರ್ದನ! ಧಾರ್ತರಾಷ್ಟ್ರನು ಧರ್ಮಶಾಸ್ತ್ರಗಳನ್ನು ತಿಳಿಯದವನು. ದುರಾತ್ಮ. ವಿಧಿಯ ಗತಿಗೆ ಸಿಲುಕಿದವನು. ಅಳತೆಗೆ ದೊರಕದವನು. ಶ್ರೇಯಸ್ಸನ್ನು ಬಯಸುವವರಿಗೆ ಕೆಟ್ಟದ್ದನ್ನು ಮಾಡುವವನು.
05090004a ಕಾಮಾತ್ಮಾ ಪ್ರಾಜ್ಞಾಮಾನೀ ಚ ಮಿತ್ರಧ್ರುಕ್ಸರ್ವಶಂಕಿತಃ।
05090004c ಅಕರ್ತಾ ಚಾಕೃತಜ್ಞಾಶ್ಚ ತ್ಯಕ್ತಧರ್ಮಃ ಪ್ರಿಯಾನೃತಃ।।
ಅವನು ಕಾಮಾತ್ಮ. ತುಂಬಾ ತಿಳಿದುಕೊಂಡಿದ್ದೇನೆಂದು ಅಭಿಮಾನಪಡುತ್ತಾನೆ. ನಿಜವಾದ ಮಿತ್ರರ ಶತ್ರು. ಎಲ್ಲರನ್ನೂ ಶಂಕಿಸುತ್ತಾನೆ. ಏನನ್ನೂ ಮಾಡುವುದಿಲ್ಲ. ಮಾಡಿದವರಿಗೆ ಅಕೃತಜ್ಞ. ಧರ್ಮವನ್ನು ತ್ಯಜಿಸಿದವನು. ಸುಳ್ಳನ್ನು ಪ್ರೀತಿಸುತ್ತಾನೆ.
05090005a ಏತೈಶ್ಚಾನ್ಯೈಶ್ಚ ಬಹುಭಿರ್ದೋಷೈರೇಷ ಸಮನ್ವಿತಃ।
05090005c ತ್ವಯೋಚ್ಯಮಾನಃ ಶ್ರೇಯೋಽಪಿ ಸಂರಂಭಾನ್ನ ಗ್ರಹೀಷ್ಯತಿ।।
ಇವು ಮತ್ತು ಇನ್ನೂ ಇತರ ಬಹಳಷ್ಟು ದೋಷಗಳಿಂದ ಅವನು ಕೂಡಿದ್ದಾನೆ. ನೀನು ಹೇಳುವುದು ಅವನಿಗೆ ಶ್ರೇಯಸ್ಕರವಾದುದಾದರೂ ಅವನು ದುಡುಕಿನಿಂದ ಅದನ್ನು ಸ್ವೀಕರಿಸುವುದಿಲ್ಲ.
05090006a ಸೇನಾಸಮುದಯಂ ದೃಷ್ಟ್ವಾ ಪಾರ್ಥಿವಂ ಮಧುಸೂದನ।
05090006c ಕೃತಾರ್ಥಂ ಮನ್ಯತೇ ಬಾಲ ಆತ್ಮಾನಮವಿಚಕ್ಷಣಃ।।
ಮಧುಸೂದನ! ತನ್ನ ಸೇನಾಸಮುದಾಯವನ್ನು ನೋಡಿ ಆ ಬಾಲಕ ಪಾರ್ಥಿವನು ತಾನು ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದಾನೆ.
05090007a ಏಕಃ ಕರ್ಣಃ ಪರಾಂ ಜೇತುಂ ಸಮರ್ಥ ಇತಿ ನಿಶ್ಚಿತಂ।
05090007c ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಸ ಶಮಂ ನೋಪಯಾಸ್ಯತಿ।।
ಕರ್ಣನೊಬ್ಬನೇ ಶತ್ರುಗಳನ್ನು ಗೆಲ್ಲಲು ಸಮರ್ಥ ಎಂದು ನಿಶ್ಚಯಿಸಿದ ದುರ್ಬುದ್ಧಿ ಧಾರ್ತರಾಷ್ಟ್ರನು ಶಾಂತಿಯನ್ನು ಬಯಸುವುದಿಲ್ಲ.
05090008a ಭೀಷ್ಮೇ ದ್ರೋಣೇ ಕೃಪೇ ಕರ್ಣೇ ದ್ರೋಣಪುತ್ರೇ ಜಯದ್ರಥೇ।
05090008c ಭೂಯಸೀಂ ವರ್ತತೇ ವೃತ್ತಿಂ ನ ಶಮೇ ಕುರುತೇ ಮನಃ।।
ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೋಣಪುತ್ರ ಮತ್ತು ಜಯದ್ರಥರ ಮೇಲೆ ತುಂಬಾ ನಂಬಿಕೆಯನ್ನು ಇಟ್ಟಿದ್ದಾನೆ. ಆದುದರಿಂದ ಅವನು ಶಾಂತಿಗೆ ಮನಸ್ಸುಮಾಡುವುದಿಲ್ಲ.
05090009a ನಿಶ್ಚಿತಂ ಧಾರ್ತರಾಷ್ಟ್ರಾಣಾಂ ಸಕರ್ಣಾನಾಂ ಜನಾರ್ದನ।
05090009c ಭೀಷ್ಮದ್ರೋಣಕೃಪಾನ್ ಪಾರ್ಥಾ ನ ಶಕ್ತಾಃ ಪ್ರತಿವೀಕ್ಷಿತುಂ।।
ಜನಾರ್ದನ! ಪಾರ್ಥರು ಭೀಷ್ಮ-ದ್ರೋಣ-ಕೃಪರನ್ನು ನೋಡಲೂ ಕೂಡ ಶಕ್ತರಲ್ಲ ಎಂದು ಕರ್ಣನೊಂದಿಗೆ ಧಾರ್ತರಾಷ್ಟ್ರರು ನಿಶ್ಚಯಿಸಿದ್ದಾರೆ.
05090010a ಸಂವಿಚ್ಚ ಧಾರ್ತರಾಷ್ಟ್ರಾಣಾಂ ಸರ್ವೇಷಾಮೇವ ಕೇಶವ।
05090010c ಶಮೇ ಪ್ರಯತಮಾನಸ್ಯ ತವ ಸೌಭ್ರಾತ್ರಕಾಂಕ್ಷಿಣಃ।।
ಕೇಶವ! ಸೌಭ್ರಾತೃತ್ವವನ್ನು ಬಯಸಿ ಶಾಂತಿಗೆ ಪ್ರಯತ್ನಿಸುತ್ತಿರುವ ನೀನು ಧಾರ್ತರಾಷ್ಟ್ರರೆಲ್ಲರನ್ನೂ ಚೆನ್ನಾಗಿ ತಿಳಿದುಕೋ.
05090011a ನ ಪಾಂಡವಾನಾಮಸ್ಮಾಭಿಃ ಪ್ರತಿದೇಯಂ ಯಥೋಚಿತಂ।
05090011c ಇತಿ ವ್ಯವಸಿತಾಸ್ತೇಷು ವಚನಂ ಸ್ಯಾನ್ನಿರರ್ಥಕಂ।।
ಪಾಂಡವರಿಗೆ ಯಥೋಚಿತವಾದುದನ್ನು ನಾವು ಕೊಡುವುದಿಲ್ಲ ಎಂದು ನಿರ್ಧರಿಸಿದ ಧಾರ್ತರಾಷ್ಟ್ರರಿಗೆ ನಿನ್ನ ಮಾತು ನಿರರ್ಥಕವಾಗುತ್ತದೆ.
05090012a ಯತ್ರ ಸೂಕ್ತಂ ದುರುಕ್ತಂ ಚ ಸಮಂ ಸ್ಯಾನ್ಮಧುಸೂದನ।
05090012c ನ ತತ್ರ ಪ್ರಲಪೇತ್ಪ್ರಾಜ್ಞೋ ಬಧಿರೇಷ್ವಿವ ಗಾಯನಃ।।
ಮಧುಸೂದನ! ಎಲ್ಲಿ ಒಳ್ಳೆಯ ಮಾತು ಮತ್ತು ಕೆಟ್ಟ ಮಾತು ಸಮವೆಂದು ಪರಿಗಣಿಸಲ್ಪಡುತ್ತದೆಯೋ ಅಲ್ಲಿ ಪ್ರಾಜ್ಞನು ಕಿವುಡನಿಗೆ ಗಾಯನ ಮಾಡಿದಂತೆ ಎಂದು ಮಾತನಾಡುವುದೇ ಇಲ್ಲ.
05090013a ಅವಿಜಾನತ್ಸು ಮೂಢೇಷು ನಿರ್ಮರ್ಯಾದೇಷು ಮಾಧವ।
05090013c ನ ತ್ವಂ ವಾಕ್ಯಂ ಬ್ರುವನ್ಯುಕ್ತಶ್ಚಾಂಡಾಲೇಷು ದ್ವಿಜೋ ಯಥಾ।।
ಮಾಧವ! ಚಾಂಡಾಲರ ಮುಂದೆ ದ್ವಿಜನ ಮಾತು ಹೇಗೋ ಹಾಗೆ ಯುಕ್ತವಾದ ನಿನ್ನ ಮಾತುಗಳು ತಿಳುವಳಿಕೆಯಿಲ್ಲದಿರುವವರ, ಮೂಢರ ಮತ್ತು ಮರ್ಯಾದೆಯನ್ನು ನೀಡದವರ ಮುಂದೆ.
05090014a ಸೋಽಯಂ ಬಲಸ್ಥೋ ಮೂಢಶ್ಚ ನ ಕರಿಷ್ಯತಿ ತೇ ವಚಃ।
05090014c ತಸ್ಮಿನ್ನಿರರ್ಥಕಂ ವಾಕ್ಯಮುಕ್ತಂ ಸಂಪತ್ಸ್ಯತೇ ತವ।।
ಬಲಶಾಲಿಯಾಗಿರುವ ಈ ಮೂಢನು ನಿನ್ನ ಮಾತನ್ನು ನಡೆಸುವುದಿಲ್ಲ. ನೀನು ಅವನಿಗೆ ಏನೆಲ್ಲ ಮಾತುಗಳನ್ನಾಡುತ್ತೀಯೋ ಅವು ನಿರರ್ಥಕ.
05090015a ತೇಷಾಂ ಸಮುಪವಿಷ್ಟಾನಾಂ ಸರ್ವೇಷಾಂ ಪಾಪಚೇತಸಾಂ।
05090015c ತವ ಮಧ್ಯಾವತರಣಂ ಮಮ ಕೃಷ್ಣ ನ ರೋಚತೇ।।
ಆ ಎಲ್ಲ ಪಾಪಚೇತನರು ಸೇರಿರುವವರ ಮಧ್ಯೆ ನೀನು ಹೋಗುವುದು ನನಗೆ ಸರಿಯೆನಿಸುತ್ತಿಲ್ಲ ಕೃಷ್ಣ!
05090016a ದುರ್ಬುದ್ಧೀನಾಮಶಿಷ್ಟಾನಾಂ ಬಹೂನಾಂ ಪಾಪಚೇತಸಾಂ।
05090016c ಪ್ರತೀಪಂ ವಚನಂ ಮಧ್ಯೇ ತವ ಕೃಷ್ಣ ನ ರೋಚತೇ।।
ಬಹುಸಂಖ್ಯೆಯಲ್ಲಿರುವ ಆ ದುರ್ಬುದ್ಧಿಗಳ, ಅಶಿಷ್ಟರ ಮತ್ತು ಪಾಪಚೇತಸರ ವಿರುದ್ಧ ಅವರ ಮಧ್ಯೆಯೇ ನೀನು ಮಾತನಾಡುವುದು ನನಗೆ ಸರಿಯೆನ್ನಿಸುವುದಿಲ್ಲ, ಕೃಷ್ಣ!
05090017a ಅನುಪಾಸಿತವೃದ್ಧತ್ವಾಚ್ಚ್ರಿಯಾ ಮೋಹಾಚ್ಚ ದರ್ಪಿತಃ।
05090017c ವಯೋದರ್ಪಾದಮರ್ಷಾಚ್ಚ ನ ತೇ ಶ್ರೇಯೋ ಗ್ರಹೀಷ್ಯತಿ।।
ವೃದ್ಧರ ಸೇವೆಯನ್ನು ಮಾಡದೇ ಇರುವ, ಸಂಪತ್ತು ಮೋಹಗಳಿಂದ ದರ್ಪಿತರಾದ, ವಯಸ್ಸಿನಿಂದ ದರ್ಪಿತರಾದ, ಕ್ರೂರರಾದ ಅವರು ನಿನ್ನ ಶ್ರೇಯಸ್ಕರ ಮಾತುಗಳನ್ನು ಸ್ವೀಕರಿಸುವುದಿಲ್ಲ.
05090018a ಬಲಂ ಬಲವದಪ್ಯಸ್ಯ ಯದಿ ವಕ್ಷ್ಯಸಿ ಮಾಧವ।
05090018c ತ್ವಯ್ಯಸ್ಯ ಮಹತೀ ಶಂಕಾ ನ ಕರಿಷ್ಯತಿ ತೇ ವಚಃ।।
ಮಾಧವ! ಅವನು ಬಲವಾದ ಸೇನೆಯನ್ನು ಒಟ್ಟುಗೂಡಿಸಿದ್ದಾನೆ. ಅವನಿಗೆ ನಿನ್ನ ಮೇಲೆ ಮಹಾ ಶಂಕೆಯಿದೆ. ಆದುದರಿಂದ ಅವನು ನಿನ್ನ ಮಾತಿನಂತೆ ಮಾಡುವುದಿಲ್ಲ.
05090019a ನೇದಮದ್ಯ ಯುಧಾ ಶಕ್ಯಮಿಂದ್ರೇಣಾಪಿ ಸಹಾಮರೈಃ।
05090019c ಇತಿ ವ್ಯವಸಿತಾಃ ಸರ್ವೇ ಧಾರ್ತರಾಷ್ಟ್ರಾ ಜನಾರ್ದನ।।
ಜನಾರ್ದನ! ಇಂದು ಯುದ್ಧದಲ್ಲಿ ಅಮರರನ್ನೊಡಗೂಡಿದ ಇಂದ್ರನಿಗೂ ಕೂಡ ತಮ್ಮೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಧಾರ್ತರಾಷ್ಟ್ರರೆಲ್ಲರೂ ನಂಬಿದ್ದಾರೆ.
05090020a ತೇಷ್ವೇವಮುಪಪನ್ನೇಷು ಕಾಮಕ್ರೋಧಾನುವರ್ತಿಷು।
05090020c ಸಮರ್ಥಮಪಿ ತೇ ವಾಕ್ಯಮಸಮರ್ಥಂ ಭವಿಷ್ಯತಿ।।
ಅಂಥಹ ಗಾಢನಂಬಿಕೆಯನ್ನಿಟ್ಟಿರುವವನ ಮತ್ತು ಕಾಮಕ್ರೋಧಗಳಂತೆ ನಡೆದುಕೊಳ್ಳುವವನ ಎದಿರು ನಿನ್ನ ಮಾತುಗಳು ಸಮರ್ಥವಾಗಿದ್ದರೂ ಅಸಮರ್ಥವಾಗುತ್ತವೆ.
05090021a ಮಧ್ಯೇ ತಿಷ್ಠನ್ ಹಸ್ತ್ಯನೀಕಸ್ಯ ಮಂದೋ ರಥಾಶ್ವಯುಕ್ತಸ್ಯ ಬಲಸ್ಯ ಮೂಢಃ।
05090021c ದುರ್ಯೋಧನೋ ಮನ್ಯತೇ ವೀತಮನ್ಯುಃ ಕೃತ್ಸ್ನಾ ಮಯೇಯಂ ಪೃಥಿವೀ ಜಿತೇತಿ।।
ಆನೆಗಳ, ರಥಗಳ, ಅಶ್ವಗಳ ಮತ್ತು ಸೇನೆಯ ಮಧ್ಯೆ ನಿಂತು ಆ ಮೂಢ ಮಂದ ದುರ್ಯೋಧನನು ಭಯವನ್ನು ಕಳೆದುಕೊಂಡು ಈಗಾಗಲೇ ತಾನು ಇಡೀ ಭೂಮಿಯನ್ನೇ ಗೆದ್ದುಬಿಟ್ಟಿದ್ದೇನೆ ಎಂದು ತಿಳಿದುಕೊಂಡಿದ್ದಾನೆ.
05090022a ಆಶಂಸತೇ ಧೃತರಾಷ್ಟ್ರಸ್ಯ ಪುತ್ರೋ ಮಹಾರಾಜ್ಯಮಸಪತ್ನಂ ಪೃಥಿವ್ಯಾಂ।
05090022c ತಸ್ಮಿಂ ಶಮಃ ಕೇವಲೋ ನೋಪಲಭ್ಯೋ ಬದ್ಧಂ ಸಂತಮಾಗತಂ ಮನ್ಯತೇಽರ್ಥಂ।।
ಧೃತರಾಷ್ಟ್ರನ ಪುತ್ರನು ಪ್ರತಿಸ್ಪರ್ಧಿಗಳಿಲ್ಲದೇ ಭೂಮಿಯ ಮಹಾರಾಜ್ಯವನ್ನು ಆಳುತ್ತಿದ್ದಾನೆ. ಅವನಿಂದ ಶಾಂತಿಯು ದೊರೆಯುವುದು ಅಸಂಭವ. ತನ್ನಲ್ಲಿರುವುದೆಲ್ಲ ಕೇವಲ ತನಗೇ ಸೇರಿದ್ದುದು ಎಂದು ತಿಳಿದುಕೊಂಡಿದ್ದಾನೆ.
05090023a ಪರ್ಯಸ್ತೇಯಂ ಪೃಥಿವೀ ಕಾಲಪಕ್ವಾ ದುರ್ಯೋಧನಾರ್ಥೇ ಪಾಂಡವಾನ್ಯೋದ್ಧುಕಾಮಾಃ।
05090023c ಸಮಾಗತಾಃ ಸರ್ವಯೋಧಾಃ ಪೃಥಿವ್ಯಾಂ ರಾಜಾನಶ್ಚ ಕ್ಷಿತಿಪಾಲೈಃ ಸಮೇತಾಃ।।
ಕಾಲದಿಂದ ಪಕ್ವವಾದ ಪೃಥ್ವಿಯ ನಾಶವು ಸಮೀಪಿಸುತ್ತಿರುವಂತಿದೆ. ದುರ್ಯೋಧನನಿಗಾಗಿ ಪಾಂಡವರೊಂದಿಗೆ ಯುದ್ಧಮಾಡಲು ಭೂಮಿಯ ಸರ್ವ ಯೋಧರೂ ರಾಜರೂ ಕ್ಷಿತಿಪಾಲರೂ ಬಂದು ಸೇರಿದ್ದಾರೆ.
05090024a ಸರ್ವೇ ಚೈತೇ ಕೃತವೈರಾಃ ಪುರಸ್ತಾತ್ ತ್ವಯಾ ರಾಜಾನೋ ಹೃತಸಾರಾಶ್ಚ ಕೃಷ್ಣ।
05090024c ತವೋದ್ವೇಗಾತ್ಸಂಶ್ರಿತಾ ಧಾರ್ತರಾಷ್ಟ್ರಾನ್ ಸುಸಂಹತಾಃ ಸಹ ಕರ್ಣೇನ ವೀರಾಃ।।
ಕೃಷ್ಣ! ಇವರೆಲ್ಲರೂ ನಿನ್ನ ಮೇಲೆ ಹಿಂದಿನಿಂದಲೂ ವೈರವನ್ನು ಸಾಧಿಸಿಕೊಂಡು ಬಂದಿದ್ದಾರೆ. ಈ ರಾಜರ ಸಾರವನ್ನೂ ನೀನು ಅಪಹರಿಸಿದ್ದೀಯೆ. ನಿನ್ನ ಕುರಿತಾದ ಉದ್ವೇಗದಿಂದ ಆ ವೀರರು ಕರ್ಣನ ಜೊತೆಸೇರಿಕೊಂಡು ಧಾರ್ತರಾಷ್ಟ್ರರರ ಪಕ್ಷದಲ್ಲಿದ್ದಾರೆ.
05090025a ತ್ಯಕ್ತಾತ್ಮಾನಃ ಸಹ ದುರ್ಯೋಧನೇನ ಸೃಷ್ಟಾ ಯೋದ್ಧುಂ ಪಾಂಡವಾನ್ಸರ್ವಯೋಧಾಃ।
05090025c ತೇಷಾಂ ಮಧ್ಯೇ ಪ್ರವಿಶೇಥಾ ಯದಿ ತ್ವಂ ನ ತನ್ಮತಂ ಮಮ ದಾಶಾರ್ಹ ವೀರ।।
ತಮ್ಮನ್ನು ತಾವೇ ತೊರೆದು ಈ ಎಲ್ಲ ಯೋಧರೂ ದುರ್ಯೋಧನನ ಜೊತೆಗೂಡಿ ಪಾಂಡವರೊಂದಿಗೆ ಯುದ್ಧಮಾಡಲು ದೊರಕಿದೆಯೆಂದು ಸಂತೋಷದಿಂದಿದ್ದಾರೆ. ನೀನು ಅವರ ಮಧ್ಯೆ ಪ್ರವೇಶಿಸುತ್ತೀಯೆ ಎಂದರೆ ನನಗೇನೋ ಹಿಡಿಸುವುದಿಲ್ಲ ವೀರ ದಾಶಾರ್ಹ!
05090026a ತೇಷಾಂ ಸಮುಪವಿಷ್ಟಾನಾಂ ಬಹೂನಾಂ ದುಷ್ಟಚೇತಸಾಂ।
05090026c ಕಥಂ ಮಧ್ಯಂ ಪ್ರಪದ್ಯೇಥಾಃ ಶತ್ರೂಣಾಂ ಶತ್ರುಕರ್ಶನ।।
ಶತ್ರುಕರ್ಶನ! ಬಹುಸಂಖ್ಯೆಯಲ್ಲಿ ಸೇರಿರುವ ಆ ದುಷ್ಟಚೇತಸ ಶತ್ರುಗಳ ಮಧ್ಯೆ ನೀನು ಹೇಗೆ ಹೋಗುತ್ತೀಯೆ?
05090027a ಸರ್ವಥಾ ತ್ವಂ ಮಹಾಬಾಹೋ ದೇವೈರಪಿ ದುರುತ್ಸಹಃ।
05090027c ಪ್ರಭಾವಂ ಪೌರುಷಂ ಬುದ್ಧಿಂ ಜಾನಾಮಿ ತವ ಶತ್ರುಹನ್।।
ಮಹಾಬಾಹೋ! ನೀನು ಸರ್ವಥಾ ದೇವತೆಗಳಿಗೂ ಗೆಲ್ಲಲಸಾಧ್ಯನು. ಶತ್ರುಹನ್! ನಿನ್ನ ಪ್ರಭಾವ, ಪೌರುಷ ಮತ್ತು ಬುದ್ಧಿಯನ್ನು ತಿಳಿದುಕೊಂಡಿದ್ದೇನೆ.
05090028a ಯಾ ಮೇ ಪ್ರೀತಿಃ ಪಾಂಡವೇಷು ಭೂಯಃ ಸಾ ತ್ವಯಿ ಮಾಧವ।
05090028c ಪ್ರೇಮ್ಣಾ ಚ ಬಹುಮಾನಾಚ್ಚ ಸೌಹೃದಾಚ್ಚ ಬ್ರವೀಮ್ಯಹಂ।।
ಆದರೂ ಮಾಧವ! ನಿನ್ನಲ್ಲಿ ಮತ್ತು ಪಾಂಡವರಲ್ಲಿ ನನಗೆ ಪ್ರೀತಿಯಿರುವುದರಿಂದ, ಪ್ರೇಮದಿಂದ, ಸೌಹಾರ್ದತೆಯಿಂದ ಬಹಳ ಗೌರವದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಿದುರಸಂವಾದೇ ನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಿದುರಸಂವಾದ ಎನ್ನುವ ತೊಂಭತ್ತನೆಯ ಅಧ್ಯಾಯವು.