089 ಶ್ರೀಕೃಷ್ಣದುಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 89

ಸಾರ

ದುರ್ಯೋಧನನು ಭೋಜನಕ್ಕೆ ಕರೆದಾಗ ಕೃಷ್ಣನು ಆಮಂತ್ರಣವನ್ನು ಸ್ವೀಕರಿಸದೇ ಇದ್ದುದು (1-11). ದುರ್ಯೋಧನನು ಕಾರಣವನ್ನು ಕೇಳಲು ಕೃಷ್ಣನು “ದೂತರು ಬಂದ ಕೆಲಸವು ಯಶಸ್ವಿಯಾದರೆ ಊಟಮಾಡುತ್ತಾರೆ ಮತ್ತು ಸತ್ಕಾರವನ್ನು ಸ್ವೀಕರಿಸುತ್ತಾರೆ. ನಾನು ಯಶಸ್ವಿಯಾದರೆ ನೀನು ಅಮಾತ್ಯರೊಂದಿಗೆ ನನ್ನನ್ನು ಸತ್ಕರಿಸಬಲ್ಲೆ” ಎನ್ನುವುದು (12-18). ದೂತನಾಗಿ ಅಲ್ಲ ಸಂಬಂಧಿಯಾಗಿ ನಿನ್ನನ್ನು ಸತ್ಕರಿಸಲು ಬಯಸುತ್ತೇನೆಂದು ದುರ್ಯೋದನನು ಪುನಃ ಕಾರಣವನ್ನು ಕೇಳಲು ಕೃಷ್ಣನು “ಪ್ರೀತಿಯಿಂದ ಅಥವಾ ಆಪತ್ತಿನಲ್ಲಿರುವಾಗ ಇನ್ನೊಬ್ಬರಲ್ಲಿ ಊಟಮಾಡುತ್ತಾರೆ. ಆದರೆ ನೀನು ನನಗೆ ಪ್ರೀತಿಪಾತ್ರನಲ್ಲ ಮತ್ತು ನಾವು ಆಪತ್ತಿನಲ್ಲಿಲ್ಲ…ದುಷ್ಟತನದಿಂದ ಕಲುಷಿತವಾಗಿರುವ ಈ ಎಲ್ಲ ಅನ್ನವೂ ನನಗೆ ಅಭೋಜ್ಯವಾಗಿದೆ” ಎಂದು ಹೇಳಿ ವಿದುರನ ಮನೆಗೆ ತೆರಳಿದುದು (19-34). ಇತರ ಕುರುಗಳು ಅವನನ್ನು ತಮ್ಮ ಮನೆಗಳಿಗೆ ಕರೆದರೂ ಇಲ್ಲವೆಂದು ಕಳುಹಿಸಿ ಕೃಷ್ಣನು ವಿದುರನ ಮನೆಯಲ್ಲಿಯೇ ಊಟಮಾಡಿದುದು (35-41).

05089001 ವೈಶಂಪಾಯನ ಉವಾಚ।
05089001a ಪೃಥಾಮಾಮಂತ್ರ್ಯ ಗೋವಿಂದಃ ಕೃತ್ವಾ ಚಾಪಿ ಪ್ರದಕ್ಷಿಣಂ।
05089001c ದುರ್ಯೋಧನಗೃಹಂ ಶೌರಿರಭ್ಯಗಚ್ಚದರಿಂದಮಃ।।

ವೈಶಂಪಾಯನನು ಹೇಳಿದನು: “ಪ್ರದಕ್ಷಿಣೆ ಮಾಡಿ ಪೃಥೆಯನ್ನು ಬೀಳ್ಕೊಂಡು ಗೋವಿಂದ, ಶೌರಿ, ಅರಿಂದಮನು ದುರ್ಯೋಧನನ ಮನೆಗೆ ಹೋದನು.

05089002a ಲಕ್ಷ್ಮ್ಯಾ ಪರಮಯಾ ಯುಕ್ತಂ ಪುರಂದರಗೃಹೋಪಮಂ।
05089002c ತಸ್ಯ ಕಕ್ಷ್ಯಾ ವ್ಯತಿಕ್ರಮ್ಯ ತಿಸ್ರೋ ದ್ವಾಃಸ್ಥೈರವಾರಿತಃ।।
05089003a ತತೋಽಭ್ರಘನಸಂಕಾಶಂ ಗಿರಿಕೂಟಮಿವೋಚ್ಚ್ರಿತಂ।
05089003c ಶ್ರಿಯಾ ಜ್ವಲಂತಂ ಪ್ರಾಸಾದಮಾರುರೋಹ ಮಹಾಯಶಾಃ।।

ಪುರಂದರನ ಮನೆಯಂತೆ ಪರಮಸಂಪತ್ತಿನಿಂದ ಕೂಡಿದ್ದ, ಆಕಾಶದಲ್ಲಿ ಮೋಡದಂತಿರುವ ಮನೆಯ ಮೂರು ಕಕ್ಷೆಗಳನ್ನು ದ್ವಾರಪಾಲಕರಿಂದ ತಡೆಯಲ್ಪಡದೇ ಆ ಗಿರಿಕೂಟದಂತೆ ಎತ್ತರವಾಗಿರುವ, ಐಶ್ವರ್ಯದಿಂದ ಬೆಳಗುತ್ತಿರುವ, ಮಹಾಯಶಸ್ವಿ ಪ್ರಾಸಾದಗಳನ್ನು ಏರಿ ಹೋದನು.

05089004a ತತ್ರ ರಾಜಸಹಸ್ರೈಶ್ಚ ಕುರುಭಿಶ್ಚಾಭಿಸಂವೃತಂ।
05089004c ಧಾರ್ತರಾಷ್ಟ್ರಂ ಮಹಾಬಾಹುಂ ದದರ್ಶಾಸೀನಮಾಸನೇ।।

ಅಲ್ಲಿ ಸಹಸ್ರಾರು ರಾಜರುಗಳಿಂದ ಮತ್ತು ಕುರುಗಳಿಂದ ಪರಿವೃತನಾಗಿ ಆಸನದಲ್ಲಿ ಕುಳಿತಿದ್ದ ಮಹಾಬಾಹು ಧಾರ್ತರಾಷ್ಟ್ರನನ್ನು ಕಂಡನು.

05089005a ದುಃಶಾಸನಂ ಚ ಕರ್ಣಂ ಚ ಶಕುನಿಂ ಚಾಪಿ ಸೌಬಲಂ।
05089005c ದುರ್ಯೋಧನಸಮೀಪೇ ತಾನಾಸನಸ್ಥಾನ್ದದರ್ಶ ಸಃ।।

ದುರ್ಯೋಧನನ ಸಮೀಪದಲ್ಲಿ ತಮ್ಮ ತಮ್ಮ ಆಸನಗಳಲ್ಲಿದ್ದ ದುಃಶಾಸನ, ಕರ್ಣ, ಸೌಬಲ ಶಕುನಿಯರನ್ನೂ ಅವನು ನೋಡಿದನು.

05089006a ಅಭ್ಯಾಗಚ್ಚತಿ ದಾಶಾರ್ಹೇ ಧಾರ್ತರಾಷ್ಟ್ರೋ ಮಹಾಯಶಾಃ।
05089006c ಉದತಿಷ್ಠತ್ಸಹಾಮಾತ್ಯಃ ಪೂಜಯನ್ಮಧುಸೂದನಂ।।

ದಾಶಾರ್ಹನು ಹತ್ತಿರ ಬರಲು ಮಹಾಯಶಸ್ವಿ ಧಾರ್ತರಾಷ್ಟ್ರನು ಅಮಾತ್ಯರೊಂದಿಗೆ ಎದ್ದು ಮಧುಸೂದನನನ್ನು ಪೂಜಿಸಿದನು.

05089007a ಸಮೇತ್ಯ ಧಾರ್ತರಾಷ್ಟ್ರೇಣ ಸಹಾಮಾತ್ಯೇನ ಕೇಶವಃ।
05089007c ರಾಜಭಿಸ್ತತ್ರ ವಾರ್ಷ್ಣೇಯಃ ಸಮಾಗಚ್ಚದ್ಯಥಾವಯಃ।।

ವಾರ್ಷ್ಣೇಯ ಕೇಶವನು ಅಮಾತ್ಯರೊಂದಿಗೆ ಧಾರ್ತರಾಷ್ಟ್ರರನ್ನೂ ಭೇಟಿಮಾಡಿ ಅಲ್ಲಿದ್ದ ರಾಜರನ್ನೂ ಕೂಡ ವಯಸ್ಸಿಗೆ ತಕ್ಕುದಾಗಿ ಭೇಟಿ ಮಾಡಿದನು.

05089008a ತತ್ರ ಜಾಂಬೂನದಮಯಂ ಪರ್ಯಂಕಂ ಸುಪರಿಷ್ಕೃತಂ।
05089008c ವಿವಿಧಾಸ್ತರಣಾಸ್ತೀರ್ಣಮಭ್ಯುಪಾವಿಶದಚ್ಯುತಃ।।

ಅಲ್ಲಿ ಅಚ್ಯುತನು ವಿವಿಧ ರತ್ನಗಳಿಂದ ಅಲಂಕರಿಸಲ್ಪಟ್ಟ ಬಂಗಾರದ ಪರ್ಯಂಕದ ಮೇಲೆ ಕುಳಿತುಕೊಂಡನು.

05089009a ತಸ್ಮಿನ್ಗಾಂ ಮಧುಪರ್ಕಂ ಚ ಉಪಹೃತ್ಯ ಜನಾರ್ದನೇ।
05089009c ನಿವೇದಯಾಮಾಸ ತದಾ ಗೃಹಾನ್ರಾಜ್ಯಂ ಚ ಕೌರವಃ।।

ಆಗ ಕೌರವನು ಜನಾರ್ದನನಿಗೆ ಗೋವು ಮಧುಪರ್ಕಗಳನ್ನಿತ್ತು ಮನೆಗಳನ್ನೂ ರಾಜ್ಯವನ್ನೂ ಅವನಿಗೆ ನಿವೇದಿಸಿದನು.

05089010a ತತ್ರ ಗೋವಿಂದಮಾಸೀನಂ ಪ್ರಸನ್ನಾದಿತ್ಯವರ್ಚಸಂ।
05089010c ಉಪಾಸಾಂ ಚಕ್ರಿರೇ ಸರ್ವೇ ಕುರವೋ ರಾಜಭಿಃ ಸಹ।।

ಅಲ್ಲಿ ಕುಳಿತಿದ್ದ ಪ್ರಸನ್ನಾದಿತ್ಯವರ್ಚಸ ಗೋವಿಂದನನ್ನು ಕುರುಗಳು ರಾಜರೊಂದಿಗೆ ಉಪಾಸಿಸಿದರು.

05089011a ತತೋ ದುರ್ಯೋಧನೋ ರಾಜಾ ವಾರ್ಷ್ಣೇಯಂ ಜಯತಾಂ ವರಂ।
05089011c ನ್ಯಮಂತ್ರಯದ್ಭೋಜನೇನ ನಾಭ್ಯನಂದಚ್ಚ ಕೇಶವಃ।।

ಆಗ ರಾಜಾ ದುರ್ಯೋಧನನು ಜಯಂತರಲ್ಲಿ ಶ್ರೇಷ್ಠನಾದ ವಾರ್ಷ್ಣೇಯನನ್ನು ಭೋಜನಕ್ಕೆ ಆಮಂತ್ರಿಸಿದನು. ಆದರೆ ಕೇಶವನು ಆಮಂತ್ರಣವನ್ನು ಸ್ವೀಕರಿಸಲಿಲ್ಲ.

05089012a ತತೋ ದುರ್ಯೋಧನಃ ಕೃಷ್ಣಮಬ್ರವೀದ್ರಾಜಸಂಸದಿ।
05089012c ಮೃದುಪೂರ್ವಂ ಶಠೋದರ್ಕಂ ಕರ್ಣಮಾಭಾಷ್ಯ ಕೌರವಃ।।

ಆಗ ರಾಜಸಂಸದಿಯಲ್ಲಿ ದುರ್ಯೊಧನನು ಮೃದುವಾದ ಆದರೆ ವ್ಯಂಗ್ಯದ ದಾಟಿಯಲ್ಲಿ, ಕರ್ಣನನ್ನು ನೋಡುತ್ತಾ, ಕೃಷ್ಣನಿಗೆ ಹೇಳಿದನು:

05089013a ಕಸ್ಮಾದನ್ನಾನಿ ಪಾನಾನಿ ವಾಸಾಂಸಿ ಶಯನಾನಿ ಚ।
05089013c ತ್ವದರ್ಥಮುಪನೀತಾನಿ ನಾಗ್ರಹೀಸ್ತ್ವಂ ಜನಾರ್ದನ।।

“ಜನಾರ್ದನ! ಏಕೆ ನೀನು ನಿನಗಾಗಿ ತಯಾರಿಸಿದ ಅನ್ನ-ಪಾನೀಯಗಳನ್ನು, ವಸ್ತ್ರ-ಹಾಸಿಗೆಗಳನ್ನು ಸ್ವೀಕರಿಸುತ್ತಿಲ್ಲ?

05089014a ಉಭಯೋಶ್ಚಾದದಃ ಸಾಹ್ಯಮುಭಯೋಶ್ಚ ಹಿತೇ ರತಃ।
05089014c ಸಂಬಂಧೀ ದಯಿತಶ್ಚಾಸಿ ಧೃತರಾಷ್ಟ್ರಸ್ಯ ಮಾಧವ।।

ಮಾಧವ! ಎರಡೂ ಪಕ್ಷದವರಿಗೆ ನೀನು ಸಹಾಯಮಾಡುತ್ತಿದ್ದೀಯೆ. ಇಬ್ಬರ ಹಿತದಲ್ಲಿಯೂ ಇರುವೆ. ಧೃತರಾಷ್ಟ್ರನ ಸಂಬಂಧಿಯೂ ಪ್ರೀತಿಪಾತ್ರನೂ ಆಗಿದ್ದೀಯೆ.

05089015a ತ್ವಂ ಹಿ ಗೋವಿಂದ ಧರ್ಮಾರ್ಥೌ ವೇತ್ಥ ತತ್ತ್ವೇನ ಸರ್ವಶಃ।
05089015c ತತ್ರ ಕಾರಣಮಿಚ್ಚಾಮಿ ಶ್ರೋತುಂ ಚಕ್ರಗದಾಧರ।।

ಗೋವಿಂದ! ಚಕ್ರಗದಾಧರ! ನೀನು ಧರ್ಮ-ಅರ್ಥಗಳೆರಡನ್ನೂ ಎಲ್ಲ ತತ್ವಗಳನ್ನೂ ತಿಳಿದಿದ್ದೀಯೆ. ಇದರ ಕಾರಣವನ್ನು ಕೇಳಲು ಬಯಸುತ್ತೇನೆ.”

05089016a ಸ ಏವಮುಕ್ತೋ ಗೋವಿಂದಃ ಪ್ರತ್ಯುವಾಚ ಮಹಾಮನಾಃ।
05089016c ಓಘಮೇಘಸ್ವನಃ ಕಾಲೇ ಪ್ರಗೃಹ್ಯ ವಿಪುಲಂ ಭುಜಂ।।
05089017a ಅನಂಬೂಕೃತಮಗ್ರಸ್ತಮನಿರಸ್ತಮಸಂಕುಲಂ।
05089017c ರಾಜೀವನೇತ್ರೋ ರಾಜಾನಂ ಹೇತುಮದ್ವಾಕ್ಯಮುತ್ತಮಂ।।

ಆಗ ಗೋವಿಂದ, ಮಹಾಮನಸ್ವಿ, ರಾಜೀವನೇತ್ರನು ತನ್ನ ವಿಪುಲ ಭುಜವನ್ನು ಹಿಡಿದು ಗುಡುಗಿನಂಥಹ ಸ್ವರದಲ್ಲಿ, ಸ್ಪಷ್ಟವಾದ, ಉತ್ತಮವಾಗಿ ರಚಿಸಲ್ಪಟ್ಟ, ಮುಚ್ಚುಮರೆಯಿಲ್ಲದ, ನೀರಸವಲ್ಲದ, ಯಾವ ಶಬ್ಧವನ್ನೂ ನುಂಗದೇ ರಾಜನಿಗೆ ಕಾರಣದ ಕುರಿತು ಉತ್ತರಿಸಿದನು:

05089018a ಕೃತಾರ್ಥಾ ಭುಂಜತೇ ದೂತಾಃ ಪೂಜಾಂ ಗೃಹ್ಣತಿ ಚೈವ ಹಿ।
05089018c ಕೃತಾರ್ಥಂ ಮಾಂ ಸಹಾಮಾತ್ಯಸ್ತ್ವಮರ್ಚಿಷ್ಯಸಿ ಭಾರತ।।

“ಭಾರತ! ದೂತರು ಬಂದ ಕೆಲಸವು ಯಶಸ್ವಿಯಾದರೆ ಊಟಮಾಡುತ್ತಾರೆ ಮತ್ತು ಸತ್ಕಾರವನ್ನು ಸ್ವೀಕರಿಸುತ್ತಾರೆ. ನಾನು ಯಶಸ್ವಿಯಾದರೆ ನೀನು ಅಮಾತ್ಯರೊಂದಿಗೆ ನನ್ನನ್ನು ಸತ್ಕರಿಸಬಲ್ಲೆ!”

05089019a ಏವಮುಕ್ತಃ ಪ್ರತ್ಯುವಾಚ ಧಾರ್ತರಾಷ್ಟ್ರೋ ಜನಾರ್ದನಂ।
05089019c ನ ಯುಕ್ತಂ ಭವತಾಸ್ಮಾಸು ಪ್ರತಿಪತ್ತುಮಸಾಂಪ್ರತಂ।।

ಹೀಗೆ ಹೇಳಲು ಧಾರ್ತರಾಷ್ಟ್ರನು ಜನಾರ್ದನನಿಗೆ ಹೇಳಿದನು: “ನಮ್ಮೊಡನೆ ಈ ರೀತಿ ವ್ಯವಹರಿಸುವುದು ಸರಿಯಲ್ಲ.

05089020a ಕೃತಾರ್ಥಂ ಚಾಕೃತಾರ್ಥಂ ಚ ತ್ವಾಂ ವಯಂ ಮಧುಸೂದನ।
05089020c ಯತಾಮಹೇ ಪೂಜಯಿತುಂ ಗೋವಿಂದ ನ ಚ ಶಕ್ನುಮಃ।।

ಮಧುಸೂದನ! ಗೋವಿಂದ! ನೀನು ನಿನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತೀಯೋ ಅಥವಾ ಇಲ್ಲವೋ, ನಿನಗೆ ನಮ್ಮೊಂದಿಗಿರುವ ಸಂಬಂಧದ ಕಾರಣ ನಾವು ನಿನಗೆ ಪೂಜೆ ಸಲ್ಲಿಸಬಲ್ಲೆವು.

05089021a ನ ಚ ತತ್ಕಾರಣಂ ವಿದ್ಮೋ ಯಸ್ಮಿನ್ನೋ ಮಧುಸೂದನ।
05089021c ಪೂಜಾಂ ಕೃತಾಂ ಪ್ರೀಯಮಾಣೈರ್ನಾಮಂಸ್ಥಾಃ ಪುರುಷೋತ್ತಮ।।

ಮಧುಸೂದನ! ಪುರುಷೋತ್ತಮ! ಆದರೂ ಪ್ರೀತಿಯಿಂದ ಮಾಡಿದ ಪೂಜೆಯನ್ನು ನೀನು ಸ್ವೀಕರಿಸದೇ ಇದ್ದುದರ ಕಾರಣವು ನಮಗೆ ತಿಳಿಯಲಿಲ್ಲ.

05089022a ವೈರಂ ನೋ ನಾಸ್ತಿ ಭವತಾ ಗೋವಿಂದ ನ ಚ ವಿಗ್ರಹಃ।
05089022c ಸ ಭವಾನ್ಪ್ರಸಮೀಕ್ಷ್ಯೈತನ್ನೇದೃಶಂ ವಕ್ತುಮರ್ಹತಿ।।

ಗೋವಿಂದ! ನಿನ್ನೊಂದಿಗೆ ನಮ್ಮ ವೈರವೂ ಇಲ್ಲ, ಕದನವೂ ಇಲ್ಲ. ಆದುದರಿಂದ ಯೋಚಿಸಿದರೆ ನಿನ್ನ ಈ ಮಾತುಗಳು ನಿನಗೆ ತಕ್ಕುದಲ್ಲ.”

05089023a ಏವಮುಕ್ತಃ ಪ್ರತ್ಯುವಾಚ ಧಾರ್ತರಾಷ್ಟ್ರಂ ಜನಾರ್ದನಃ।
05089023c ಅಭಿವೀಕ್ಷ್ಯ ಸಹಾಮಾತ್ಯಂ ದಾಶಾರ್ಹಃ ಪ್ರಹಸನ್ನಿವ।।

ಹೀಗೆ ಹೇಳಲು ಜನಾರ್ದನ ದಾಶಾರ್ಹನು ಅಮಾತ್ಯರೊಂದಿಗಿದ್ದ ಧಾರ್ತರಾಷ್ಟ್ರನನ್ನು ನೋಡಿ ನಗುತ್ತಾ ಉತ್ತರಿಸಿದನು:

05089024a ನಾಹಂ ಕಾಮಾನ್ನ ಸಂರಂಭಾನ್ನ ದ್ವೇಷಾನ್ನಾರ್ಥಕಾರಣಾತ್।
05089024c ನ ಹೇತುವಾದಾಲ್ಲೋಭಾದ್ವಾ ಧರ್ಮಂ ಜಹ್ಯಾಂ ಕಥಂ ಚನ।।

“ನಾನು ಕಾಮಕ್ಕಾಗಲೀ, ಅನುಮಾನದಿಂದಾಗಲೀ, ದ್ವೇಷದಿಂದಾಗಲೀ, ಸಂಪತ್ತಿಗಾಗಲೀ, ಲೋಭದ ಕಾರಣದಿಂದಾಗಲೀ ಎಂದೂ ಧರ್ಮವನ್ನು ಬಿಡುವವನಲ್ಲ.

05089025a ಸಂಪ್ರೀತಿಭೋಜ್ಯಾನ್ಯನ್ನಾನಿ ಆಪದ್ಭೋಜ್ಯಾನಿ ವಾ ಪುನಃ।
05089025c ನ ಚ ಸಂಪ್ರೀಯಸೇ ರಾಜನ್ನ ಚಾಪ್ಯಾಪದ್ಗತಾ ವಯಂ।।

ಪ್ರೀತಿಯಿಂದ ಅಥವಾ ಆಪತ್ತಿನಲ್ಲಿರುವಾಗ ಇನ್ನೊಬ್ಬರಲ್ಲಿ ಊಟಮಾಡುತ್ತಾರೆ. ರಾಜನ್! ನೀನು ನನಗೆ ಪ್ರೀತಿಪಾತ್ರನಲ್ಲ ಮತ್ತು ನಾವು ಆಪತ್ತಿನಲ್ಲಿಲ್ಲ.

05089026a ಅಕಸ್ಮಾದ್ದ್ವಿಷಸೇ ರಾಜಂ ಜನ್ಮಪ್ರಭೃತಿ ಪಾಂಡವಾನ್।
05089026c ಪ್ರಿಯಾನುವರ್ತಿನೋ ಭ್ರಾತೄನ್ಸರ್ವೈಃ ಸಮುದಿತಾನ್ಗುಣೈಃ।।

ರಾಜನ್! ಸರ್ವ ಗುಣಗಳಿಂದ ಸಮುದಿತರಾಗಿರುವ, ನಿನ್ನೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನಿನ್ನ ಸಹೋದರ ಪಾಂಡವರನ್ನು ನೀನು ಅವರು ಹುಟ್ಟಿದಾಗಲಿಂದಲೂ, ವಿನಾಕಾರಣ, ದ್ವೇಷಿಸಿಕೊಂಡು ಬಂದಿದ್ದೀಯೆ.

05089027a ಅಕಸ್ಮಾಚ್ಚೈವ ಪಾರ್ಥಾನಾಂ ದ್ವೇಷಣಂ ನೋಪಪದ್ಯತೇ।
05089027c ಧರ್ಮೇ ಸ್ಥಿತಾಃ ಪಾಂಡವೇಯಾಃ ಕಸ್ತಾನ್ಕಿಂ ವಕ್ತುಮರ್ಹತಿ।।

ಪಾರ್ಥರ ಮೇಲಿರುವ ಈ ಕಾರಣವಿಲ್ಲದ ದ್ವೇಷವು ನಿನಗೆ ಸರಿಯಲ್ಲ. ಧರ್ಮದಲ್ಲಿ ಸ್ಥಿತರಾಗಿರುವ ಪಾಂಡವರಿಗೆ ಯಾರು ತಾನೇ ಕೇಡನ್ನು ಬಯಸಿಯಾರು?

05089028a ಯಸ್ತಾನ್ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತಾನನು ಸ ಮಾಮನು।
05089028c ಐಕಾತ್ಮ್ಯಂ ಮಾಂ ಗತಂ ವಿದ್ಧಿ ಪಾಂಡವೈರ್ಧರ್ಮಚಾರಿಭಿಃ।।

ಯಾರು ಅವರನ್ನು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವರನ್ನು ಪ್ರೀತಿಸುವವರು ನನ್ನನ್ನೂ ಪ್ರೀತಿಸುತ್ತಾರೆ. ಧರ್ಮಚಾರಿಗಳಾದ ಪಾಂಡವರ ಮತ್ತು ನನ್ನ ಆತ್ಮಗಳು ಒಂದೇ ಎನ್ನುವುದನ್ನು ತಿಳಿ.

05089029a ಕಾಮಕ್ರೋಧಾನುವರ್ತೀ ಹಿ ಯೋ ಮೋಹಾದ್ವಿರುರುತ್ಸತೇ।
05089029c ಗುಣವಂತಂ ಚ ಯೋ ದ್ವೇಷ್ಟಿ ತಮಾಹುಃ ಪುರುಷಾಧಮಂ।।

ಯಾರು ಕಾಮ-ಕ್ರೋಧಗಳನ್ನು ಅನುಸರಿಸಿ ಮೋಹದಿಂದ ಗುಣವಂತರಾದವರನ್ನು ದ್ವೇಷಿಸುತ್ತಾನೋ ಅವನನ್ನು ಪುರುಷಾಧಮನೆಂದು ಹೇಳುತ್ತಾರೆ.

05089030a ಯಃ ಕಲ್ಯಾಣಗುಣಾಂ ಜ್ಞಾತೀನ್ಮೋಹಾಲ್ಲೋಭಾದ್ದಿದೃಕ್ಷತೇ।
05089030c ಸೋಽಜಿತಾತ್ಮಾಜಿತಕ್ರೋಧೋ ನ ಚಿರಂ ತಿಷ್ಠತಿ ಶ್ರಿಯಂ।।

ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ, ಕ್ರೋಧವನ್ನು ಜಯಿಸದೇ ಕಲ್ಯಾಣಗುಣಗಳನ್ನು ಹೊಂದಿದ ಬಾಂಧವರನ್ನು ಮೋಹ-ಲೋಭಗಳಿಂದ ನೋಡುವವನು ತುಂಬಾ ಸಮಯ ಸಂಪತ್ತನ್ನು ಹೊಂದಿರುವುದಿಲ್ಲ.

05089031a ಅಥ ಯೋ ಗುಣಸಂಪನ್ನಾನ್ ಹೃದಯಸ್ಯಾಪ್ರಿಯಾನಪಿ।
05089031c ಪ್ರಿಯೇಣ ಕುರುತೇ ವಶ್ಯಾಂಶ್ಚಿರಂ ಯಶಸಿ ತಿಷ್ಠತಿ।।

ಆದರೆ ಹೃದಯದಲ್ಲಿ ಅಪ್ರಿಯತೆಯನ್ನಿಟ್ಟುಕೊಂಡಿದ್ದರೂ ಗುಣಸಂಪನ್ನರಿಗೆ ಪ್ರಿಯವಾದುದನ್ನು ಮಾಡಿ ಅವರನ್ನು ವಶಪಡೆಸಿಕೊಳ್ಳುವವನು ದೀರ್ಘಕಾಲದ ಯಶಸ್ಸನ್ನು ಪಡೆಯುತ್ತಾನೆ.

05089032a ಸರ್ವಮೇತದಭೋಕ್ತವ್ಯಮನ್ನಂ ದುಷ್ಟಾಭಿಸಂಹಿತಂ।
05089032c ಕ್ಷತ್ತುರೇಕಸ್ಯ ಭೋಕ್ತವ್ಯಮಿತಿ ಮೇ ಧೀಯತೇ ಮತಿಃ।।

ದುಷ್ಟತನದಿಂದ ಕಲುಷಿತವಾಗಿರುವ ಈ ಎಲ್ಲ ಅನ್ನವೂ ನನಗೆ ಅಭೋಜ್ಯವಾಗಿದೆ. ಕ್ಷತ್ತನು ನೀಡಿದುದು ಮಾತ್ರ ನನಗೆ ಭೋಕ್ತವ್ಯ ಎಂದು ನನ್ನ ಮತಿಗೆ ತಿಳಿದಿದೆ.”

05089033a ಏವಮುಕ್ತ್ವಾ ಮಹಾಬಾಹುರ್ದುರ್ಯೋಧನಮಮರ್ಷಣಂ।
05089033c ನಿಶ್ಚಕ್ರಾಮ ತತಃ ಶುಭ್ರಾದ್ಧಾರ್ತರಾಷ್ಟ್ರನಿವೇಶನಾತ್।।

ಹೀಗೆ ಹೇಳಿ ಆ ಮಹಾಬಾಹುವು ದುರ್ಯೋಧನ, ಅಮರ್ಷಣ, ಧಾರ್ತರಾಷ್ಟ್ರನ ಶುಭ್ರನಿವೇಶನದಿಂದ ಹೊರಬಂದನು.

05089034a ನಿರ್ಯಾಯ ಚ ಮಹಾಬಾಹುರ್ವಾಸುದೇವೋ ಮಹಾಮನಾಃ।
05089034c ನಿವೇಶಾಯ ಯಯೌ ವೇಶ್ಮ ವಿದುರಸ್ಯ ಮಹಾತ್ಮನಃ।। ।

ಹೊರಟುಬಂದು ಮಹಾಬಾಹು ವಾಸುದೇವ ಮಹಾಮನಸ್ವಿಯು ಮಹಾತ್ಮ ವಿದುರನ ಮನೆಗೆ ಬಂದನು.

05089035a ತಮಭ್ಯಗಚ್ಚದ್ದ್ರೋಣಶ್ಚ ಕೃಪೋ ಭೀಷ್ಮೋಽಥ ಬಾಹ್ಲಿಕಃ।
05089035c ಕುರವಶ್ಚ ಮಹಾಬಾಹುಂ ವಿದುರಸ್ಯ ಗೃಹೇ ಸ್ಥಿತಂ।।

ಆ ಮಹಾಬಾಹುವು ವಿದುರನ ಮನೆಯಲ್ಲಿದ್ದಾಗ ಅಲ್ಲಿಗೆ ದ್ರೋಣ, ಕೃಪ, ಭೀಷ್ಮ, ಬಾಹ್ಲಿಕ ಮತ್ತು ಇತರ ಕುರುಗಳು ಬಂದರು.

05089036a ತೇಽಭಿಗಮ್ಯಾಬ್ರುವಂಸ್ತತ್ರ ಕುರವೋ ಮಧುಸೂದನಂ।
05089036c ನಿವೇದಯಾಮೋ ವಾರ್ಷ್ಣೇಯ ಸರತ್ನಾಂಸ್ತೇ ಗೃಹಾನ್ವಯಂ।।

ಅಲ್ಲಿಗೆ ಬಂದ ಕುರುಗಳು ಮಧುಸೂದನನಿಗೆ “ವಾರ್ಷ್ಣೇಯ! ರತ್ನಗಳನ್ನುಳ್ಳ ನಮ್ಮ ಮನೆಗಳನ್ನು ನಿನಗೆ ಕೊಡುತ್ತೇವೆ” ಎಂದು ಹೇಳಿದರು.

05089037a ತಾನುವಾಚ ಮಹಾತೇಜಾಃ ಕೌರವಾನ್ಮಧುಸೂದನಃ।
05089037c ಸರ್ವೇ ಭವಂತೋ ಗಚ್ಚಂತು ಸರ್ವಾ ಮೇಽಪಚಿತಿಃ ಕೃತಾ।।

ಆ ಮಹಾತೇಜಸ್ವಿ ಕೌರವರಿಗೆ ಮಧುಸೂದನನು “ನೀವೆಲ್ಲರೂ ಹೋಗಿ. ನಿಮ್ಮೆಲ್ಲರಿಂದ ನಾನು ಸತ್ಕೃತನಾಗಿದ್ದೇನೆ” ಎಂದನು.

05089038a ಯಾತೇಷು ಕುರುಷು ಕ್ಷತ್ತಾ ದಾಶಾರ್ಹಮಪರಾಜಿತಂ।
05089038c ಅಭ್ಯರ್ಚಯಾಮಾಸ ತದಾ ಸರ್ವಕಾಮೈಃ ಪ್ರಯತ್ನವಾನ್।।

ಕುರುಗಳು ಹೊರಟು ಹೋಗಲು ಕ್ಷತ್ತನು ದಾಶಾರ್ಹ, ಅಪರಾಜಿತನನ್ನು ಸರ್ಮ ಕಾಮಗಳಿಂದ ಪ್ರಯತ್ನಪಟ್ಟು ಅರ್ಚಿಸಿದನು.

05089039a ತತಃ ಕ್ಷತ್ತಾನ್ನಪಾನಾನಿ ಶುಚೀನಿ ಗುಣವಂತಿ ಚ।
05089039c ಉಪಾಹರದನೇಕಾನಿ ಕೇಶವಾಯ ಮಹಾತ್ಮನೇ।।

ಆಗ ಕ್ಷತ್ತನು ಮಹಾತ್ಮ ಕೇಶವನಿಗೆ ಶುಚಿಯಾದ, ಉತ್ತಮ ಗುಣದ ಅನ್ನ ಪಾನೀಯಗಳನ್ನೂ ಅನೇಕ ಉಪಾಹರಗಳನ್ನು ನೀಡಿದನು.

05089040a ತೈರ್ತರ್ಪಯಿತ್ವಾ ಪ್ರಥಮಂ ಬ್ರಾಹ್ಮಣಾನ್ಮಧುಸೂದನಃ।
05089040c ವೇದವಿದ್ಭ್ಯೋ ದದೌ ಕೃಷ್ಣಃ ಪರಮದ್ರವಿಣಾನ್ಯಪಿ।।

ಪ್ರಥಮವಾಗಿ ಬ್ರಾಹ್ಮಣರನ್ನು ತೃಪ್ತಿಪಡಿಸಿ, ಆ ವೇದವಿದರಿಗೆ ಪರಮ ದ್ರವ್ಯಗಳನ್ನೂ ದಾನವಾಗಿತ್ತನು.

05089041a ತತೋಽನುಯಾಯಿಭಿಃ ಸಾರ್ಧಂ ಮರುದ್ಭಿರಿವ ವಾಸವಃ।
05089041c ವಿದುರಾನ್ನಾನಿ ಬುಭುಜೇ ಶುಚೀನಿ ಗುಣವಂತಿ ಚ।।

ಅನಂತರ ತನ್ನ ಅನುಯಾಯಿಗಳೊಂದಿಗೆ, ಮರುತರೊಂದಿಗೆ ವಾಸವನು ಹೇಗೋ ಹಾಗೆ, ವಿದುರನ ಶುಚಿಯಾದ ಮತ್ತು ಗುಣವಂತ ಆಹಾರವನ್ನು ಭುಂಜಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣದುಯೋಧನಸಂವಾದೇ ಏಕೋನನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣದುಯೋಧನಸಂವಾದ ಎನ್ನುವ ಎಂಭತ್ತೊಂಭತ್ತನೆಯ ಅಧ್ಯಾಯವು.