088 ಕೃಷ್ಣಕುಂತೀಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 88

ಸಾರ

ಕೃಷ್ಣನು ತನ್ನ ಅತ್ತೆ ಕುಂತಿಯನ್ನು ಭೇಟಿಯಾಗಲು ಅವಳು ಅವನಲ್ಲಿ ತನ್ನ ದುಃಖವನ್ನು ತೋಡಿಕೊಂಡಿದುದು (1-88). ಆಗ ಕೃಷ್ಣನು ಕುಂತಿಗೆ ಆಶ್ವಾಸನೆಯನ್ನು ನೀಡಿ, ದುರ್ಯೋಧನನ ಮನೆಗೆ ಹೋದುದು (89-104).

05088001 ವೈಶಂಪಾಯನ ಉವಾಚ।
05088001a ಅಥೋಪಗಮ್ಯ ವಿದುರಮಪರಾಹ್ಣೇ ಜನಾರ್ದನಃ।
05088001c ಪಿತೃಷ್ವಸಾರಂ ಗೋವಿಂದಃ ಸೋಽಭ್ಯಗಚ್ಚದರಿಂದಮಃ।।

ವೈಶಂಪಾಯನನು ಹೇಳಿದನು: “ಜನಾರ್ದನ ಗೋವಿಂದ ಅರಿಂದಮನು ವಿದುರನನ್ನು ಭೇಟಿ ಮಾಡಿದ ನಂತರ ತಂದೆಯ ತಂಗಿಯಿದ್ದಲ್ಲಿಗೆ ಹೋದನು.

05088002a ಸಾ ದೃಷ್ಟ್ವಾ ಕೃಷ್ಣಮಾಯಾಂತಂ ಪ್ರಸನ್ನಾದಿತ್ಯವರ್ಚಸಂ।
05088002c ಕಂಠೇ ಗೃಹೀತ್ವಾ ಪ್ರಾಕ್ರೋಶತ್ಪೃಥಾ ಪಾರ್ಥಾನನುಸ್ಮರನ್।।

ಪ್ರಸನ್ನ ಆದಿತ್ಯ ವರ್ಚಸನಾಗಿ ಬಂದ ಕೃಷ್ಣನನ್ನು ಕಂಡು ಪೃಥಾಳು ಪಾರ್ಥರನ್ನು ನೆನಪಿಸಿಕೊಂಡು ಅವನ ಕುತ್ತಿಗೆಯನ್ನು ತನ್ನ ಕೈಗಳಿಂದ ಬಳಸಿ ರೋದಿಸಿದಳು.

05088003a ತೇಷಾಂ ಸತ್ತ್ವವತಾಂ ಮಧ್ಯೇ ಗೋವಿಂದಂ ಸಹಚಾರಿಣಂ।
05088003c ಚಿರಸ್ಯ ದೃಷ್ಟ್ವಾ ವಾರ್ಷ್ಣೇಯಂ ಬಾಷ್ಪಮಾಹಾರಯತ್ಪೃಥಾ।।

ಆ ಸತ್ಯವತರ ಮಧ್ಯೆ ಸಹಚಾರಿಯಾಗಿದ್ದ ಗೋವಿಂದನನ್ನು ಬಹುಕಾಲದ ನಂತರ ನೋಡಿ ಪೃಥೆಯು ಕಣ್ಣೀರು ಸುರಿಸಿದಳು.

05088004a ಸಾಬ್ರವೀತ್ಕೃಷ್ಣಮಾಸೀನಂ ಕೃತಾತಿಥ್ಯಂ ಯುಧಾಂ ಪತಿಂ।
05088004c ಬಾಷ್ಪಗದ್ಗದಪೂರ್ಣೇನ ಮುಖೇನ ಪರಿಶುಷ್ಯತಾ।।

ಯೋಧರಲ್ಲಿ ಶ್ರೇಷ್ಠನಾದ ಕೃಷ್ಣನಿಗೆ ಆತಿಥ್ಯವನ್ನು ಮಾಡಿ ಕುಳ್ಳಿರಿಸಿ ಆ ಶೋಕಪೀಡಿತ ಮುಖದ ಅವಳು ಕಣ್ಣೀರಿನಿಂದ ಕಟ್ಟಿಹೋದ ಗಂಟಲಿನಲ್ಲಿ ಅವನಿಗೆ ಹೇಳಿದಳು:

05088005a ಯೇ ತೇ ಬಾಲ್ಯಾತ್ಪ್ರಭೃತ್ಯೇವ ಗುರುಶುಶ್ರೂಷಣೇ ರತಾಃ।
05088005c ಪರಸ್ಪರಸ್ಯ ಸುಹೃದಃ ಸಮ್ಮತಾಃ ಸಮಚೇತಸಃ।।
05088006a ನಿಕೃತ್ಯಾ ಭ್ರಂಶಿತಾ ರಾಜ್ಯಾಜ್ಜನಾರ್ಹಾ ನಿರ್ಜನಂ ಗತಾಃ।
05088006c ವಿನೀತಕ್ರೋಧಹರ್ಷಾಶ್ಚ ಬ್ರಹ್ಮಣ್ಯಾಃ ಸತ್ಯವಾದಿನಃ।।
05088007a ತ್ಯಕ್ತ್ವಾ ಪ್ರಿಯಸುಖೇ ಪಾರ್ಥಾ ರುದಂತೀಮಪಹಾಯ ಮಾಂ।
05088007c ಅಹಾರ್ಷುಶ್ಚ ವನಂ ಯಾಂತಃ ಸಮೂಲಂ ಹೃದಯಂ ಮಮ।।
05088008a ಅತದರ್ಹಾ ಮಹಾತ್ಮಾನಃ ಕಥಂ ಕೇಶವ ಪಾಂಡವಾಃ।
05088008c ಊಷುರ್ಮಹಾವನೇ ತಾತ ಸಿಂಹವ್ಯಾಘ್ರಗಜಾಕುಲೇ।।

“ಕೇಶವ! ಮಗೂ! ಬಾಲ್ಯದಿಂದಲೂ ಗುರುಶುಶ್ರೂಷಣೆಯಲ್ಲಿ ನಿರತರಾಗಿರುವ, ಪರಸ್ಪರರೊಂದಿಗೆ ಸುಹೃದಯರಾಗಿದ್ದು ಒಂದೇ ಮತ ಚೇತನರಾಗಿರುವ, ಮೋಸದಿಂದ ರಾಜ್ಯವನ್ನು ಕಳೆದುಕೊಂಡು ಜನಾರ್ಹರಾಗಿದ್ದರೂ ನಿರ್ಜನ ಪ್ರದೇಶಕ್ಕೆ ಹೋಗಿರುವ, ಕ್ರೋಧ-ಹರ್ಷಗಳನ್ನು ತೊರೆದು ಬ್ರಹ್ಮಣ್ಯರೂ ಸತ್ಯವಾದಿಗಳೂ ಆಗಿರುವ, ಪ್ರೀತಿಸುಖಗಳನ್ನು ತ್ಯಜಿಸಿ, ರೋದಿಸುತ್ತಿರುವ ನನ್ನನ್ನು ಹಿಂದೆಯೇ ಬಿಟ್ಟುಹೋದ, ನನ್ನ ಹೃದಯವನ್ನು ಸಮೂಲವಾಗಿ ಕಿತ್ತು ವನಕ್ಕೆ ತೆರಳಿದ, ಮಹಾತ್ಮ ಪಾಂಡವರು ಸಿಂಹ-ವ್ಯಾಘ್ರ-ಗಜಸಂಕುಲಗಳಿಂದ ಕೂಡಿರುವ ವನದಲ್ಲಿ ಹೇಗೆ ವಾಸಿಸಿದರು?

05088009a ಬಾಲಾ ವಿಹೀನಾಃ ಪಿತ್ರಾ ತೇ ಮಯಾ ಸತತಲಾಲಿತಾಃ।
05088009c ಅಪಶ್ಯಂತಃ ಸ್ವಪಿತರೌ ಕಥಮೂಷುರ್ಮಹಾವನೇ।।

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರನ್ನು ನಾನು ಸತತವೂ ಲಾಲಿಸಿ ಬೆಳೆಸಿದ್ದೆ. ಈಗ ತಂದೆ-ತಾಯಿಗಳಿಬ್ಬರನ್ನೂ ಕಾಣದೇ ಅವರು ಮಹಾವನದಲ್ಲಿ ಹೇಗೆ ವಾಸಿಸಿದರು?

05088010a ಶಂಖದುಂದುಭಿನಿರ್ಘೋಷೈರ್ಮೃದಂಗೈರ್ವೈಣವೈರಪಿ।
05088010c ಪಾಂಡವಾಃ ಸಮಬೋಧ್ಯಂತ ಬಾಲ್ಯಾತ್ಪ್ರಭೃತಿ ಕೇಶವ।।

ಕೇಶವ! ಬಾಲ್ಯದಿಂದಲೂ ಪಾಂಡವರು ಶಂಖ-ದುಂಧುಭಿಗಳ ನಿರ್ಘೋಷಗಳಿಂದ, ಮೃದಂಗ-ವೇಣುನಾದಗಳಿಂದ ಎಬ್ಬಿಸಲ್ಪಡುತ್ತಿದ್ದರು.

05088011a ಯೇ ಸ್ಮ ವಾರಣಶಬ್ದೇನ ಹಯಾನಾಂ ಹೇಷಿತೇನ ಚ।
05088011c ರಥನೇಮಿನಿನಾದೈಶ್ಚ ವ್ಯಬೋಧ್ಯಂತ ಸದಾ ಗೃಹೇ।।
05088012a ಶಂಖಭೇರೀನಿನಾದೇನ ವೇಣುವೀಣಾನುನಾದಿನಾ।
05088012c ಪುಣ್ಯಾಹಘೋಷಮಿಶ್ರೇಣ ಪೂಜ್ಯಮಾನಾ ದ್ವಿಜಾತಿಭಿಃ।।
05088013a ವಸ್ತ್ರೈ ರತ್ನೈರಲಂಕಾರೈಃ ಪೂಜಯಂತೋ ದ್ವಿಜನ್ಮನಃ।
05088013c ಗೀರ್ಭಿರ್ಮಂಗಲಯುಕ್ತಾಭಿರ್ಬ್ರಾಹ್ಮಣಾನಾಂ ಮಹಾತ್ಮನಾಂ।।
05088014a ಅರ್ಚಿತೈರರ್ಚನಾರ್ಹೈಶ್ಚ ಸ್ತುವದ್ಭಿರಭಿನಂದಿತಾಃ।
05088014c ಪ್ರಾಸಾದಾಗ್ರೇಷ್ವಬೋಧ್ಯಂತ ರಾಂಕವಾಜಿನಶಾಯಿನಃ।।
05088015a ತೇ ನೂನಂ ನಿನದಂ ಶ್ರುತ್ವಾ ಶ್ವಾಪದಾನಾಂ ಮಹಾವನೇ।
05088015c ನ ಸ್ಮೋಪಯಾಂತಿ ನಿದ್ರಾಂ ವೈ ಅತದರ್ಹಾ ಜನಾರ್ದನ।।

ಜನಾರ್ದನ! ಮನೆಯಲ್ಲಿರುವಾಗ ಆನೆಗಳ ಘೀಂಕಾರ, ಕುದುರೆಗಳ ಹೇಂಕಾರ, ರಥಗಾಲಿಗಳ ಶಬ್ಧ ಇವುಗಳಿಂದ ಎಚ್ಚರಗೊಳ್ಳುತ್ತಿದ್ದ, ಶಂಖ-ಭೇರಿ ನಿನಾದ, ವೇಣೂ-ವೀಣಾ ನಾದನಗಳಿಂದ, ಪುಣ್ಯಾಹ ಮಂತ್ರ-ಘೋಷಗಳಿಂದ ದ್ವಿಜರು ಪೂಜಿಸುತ್ತಿರಲು, ವಸ್ತ್ರ ರತ್ನ ಅಲಂಕಾರಗಳಿಂದ ದ್ವಿಜರನ್ನು ಪೂಜಿಸುತ್ತಿದ್ದ, ಅರ್ಚನಾರ್ಹರನ್ನು ಅರ್ಚಿಸಿ, ಸ್ತುತಿಗಳಿಂದ ಅಭಿನಂದಿತರಾಗಿ, ರಂಕದ ಚರ್ಮದಿಂದ ಮಾಡಿದ ಹಾಸಿಗೆಯಮೇಲೆ ಮಲಗಿ ಪ್ರಾಸಾದಗಳಲ್ಲಿ ಎಚ್ಚರಗೊಳ್ಳುತ್ತಿದ್ದ ಅವರು ಆ ಮಹಾವನದಲ್ಲಿ ಮೃಗಗಳ ನಿನಾದವನ್ನು ಕೇಳಿ ಏಳಬೇಕಾದ ನನ್ನ ಮಕ್ಕಳು ಹೇಗೆ ತಾನೇ ನಿದ್ದೆಮಾಡುತ್ತಿದ್ದರು?

05088016a ಭೇರೀಮೃದಂಗನಿನದೈಃ ಶಂಖವೈಣವನಿಸ್ವನೈಃ।
05088016c ಸ್ತ್ರೀಣಾಂ ಗೀತನಿನಾದೈಶ್ಚ ಮಧುರೈರ್ಮಧುಸೂದನ।।
05088017a ಬಂದಿಮಾಗಧಸೂತೈಶ್ಚ ಸ್ತುವದ್ಭಿರ್ಬೋಧಿತಾಃ ಕಥಂ।
05088017c ಮಹಾವನೇ ವ್ಯಬೋಧ್ಯಂತ ಶ್ವಾಪದಾನಾಂ ರುತೇನ ತೇ।।

ಮಧುಸೂದನ! ಭೇರೀ-ಮೃದಂಗ ನಿನಾದಗಳಿಂದ, ಶಂಖ-ವೇಣುಗಳ ಸುಸ್ವರದಿಂದ, ಸ್ತ್ರೀಯರ ಮಧುರ ಗೀತನಿನಾದಗಳಿಂದ, ಬಂದಿ-ಮಾಗದ-ಸೂತರ ಸ್ತುವಗಳನ್ನು ಕೇಳಿ ಏಳುವ ಅವರು ಮಹಾವನದಲ್ಲಿ ಹೇಗೆ ಮೃಗಗಳ ಕೂಗುಗಳನ್ನು ಕೇಳಿ ಏಳುತ್ತಿದ್ದರು?

05088018a ಹ್ರೀಮಾನ್ಸತ್ಯಧೃತಿರ್ದಾಂತೋ ಭೂತಾನಾಮನುಕಂಪಿತಾ।
05088018c ಕಾಮದ್ವೇಷೌ ವಶೇ ಕೃತ್ವಾ ಸತಾಂ ವರ್ತ್ಮಾನುವರ್ತತೇ।।
05088019a ಅಂಬರೀಷಸ್ಯ ಮಾಂಧಾತುರ್ಯಯಾತೇರ್ನಹುಷಸ್ಯ ಚ।
05088019c ಭರತಸ್ಯ ದಿಲೀಪಸ್ಯ ಶಿಬೇರೌಶೀನರಸ್ಯ ಚ।।
05088020a ರಾಜರ್ಷೀಣಾಂ ಪುರಾಣಾನಾಂ ಧುರಂ ಧತ್ತೇ ದುರುದ್ವಹಾಂ।
05088020c ಶೀಲವೃತ್ತೋಪಸಂಪನ್ನೋ ಧರ್ಮಜ್ಞಾಃ ಸತ್ಯಸಂಗರಃ।।
05088021a ರಾಜಾ ಸರ್ವಗುಣೋಪೇತಸ್ತ್ರೈಲೋಕ್ಯಸ್ಯಾಪಿ ಯೋ ಭವೇತ್।
05088021c ಅಜಾತಶತ್ರುರ್ಧರ್ಮಾತ್ಮಾ ಶುದ್ಧಜಾಂಬೂನದಪ್ರಭಃ।।
05088022a ಶ್ರೇಷ್ಠಃ ಕುರುಷು ಸರ್ವೇಷು ಧರ್ಮತಃ ಶ್ರುತವೃತ್ತತಃ।
05088022c ಪ್ರಿಯದರ್ಶನೋ ದೀರ್ಘಭುಜಃ ಕಥಂ ಕೃಷ್ಣ ಯುಧಿಷ್ಠಿರಃ।।

ಕೃಷ್ಣ! ನಾಚಿಕೆಸ್ವಭಾವದ, ಸತ್ಯಧೃತಿ, ದಾಂತ, ಇರುವವುಗಳ ಮೇಲೆ ಅನುಕಂಪಿತನಾಗಿರುವ, ಕಾಮದ್ವೇಷಗಳನ್ನು ವಶಮಾಡಿಕೊಂಡು ಸಂತರ ನಡತೆಯಂತೆ ನಡೆದುಕೊಳ್ಳುವ, ಅಂಬರೀಷ, ಮಾಂಧಾತ, ಯಯಾತಿ, ನಹುಷ, ಭರತ, ದಿಲೀಪ, ಶಿಬಿ, ಔಶೀನರ ಮೊದಲಾದ ಭಾರವನ್ನು ಹೊತ್ತ ಈ ಪುರಾಣ ರಾಜರ್ಷಿಗಳ ಭಾರವನ್ನು ಹೊರುವ, ಶೀಲವೃತ್ತ, ಉಪಸಂಪನ್ನ, ಧರ್ಮಜ್ಞ, ಸತ್ಯಸಂಗರ, ತ್ರೈಲೋಕಗಳಲ್ಲಿಯೇ ಯಾರು ಸರ್ವಗುಣೋಪೇತ ರಾಜನೆನಿಸಿಕೊಂಡಿದ್ದಾನೋ ಆ ಅಜಾತಶತ್ರು, ಧರ್ಮಾತ್ಮ, ಶುದ್ಧಜಾಂಬೂನದಪ್ರಭ, ಸರ್ವ ಕುರುಗಳಲ್ಲಿಯೇ ಶ್ರೇಷ್ಠ, ಧರ್ಮತ, ಶ್ರುತವೃತ್ತತ, ಪ್ರಿಯದರ್ಶನ, ದೀರ್ಘಭುಜ ಯುಧಿಷ್ಠಿರನು ಹೇಗಿದ್ದಾನೆ?

05088023a ಯಃ ಸ ನಾಗಾಯುತಪ್ರಾಣೋ ವಾತರಂಹಾ ವೃಕೋದರಃ।
05088023c ಅಮರ್ಷೀ ಪಾಂಡವೋ ನಿತ್ಯಂ ಪ್ರಿಯೋ ಭ್ರಾತುಃ ಪ್ರಿಯಂಕರಃ।।
05088024a ಕೀಚಕಸ್ಯ ಚ ಸಜ್ಞಾತೇರ್ಯೋ ಹಂತಾ ಮಧುಸೂದನ।
05088024c ಶೂರಃ ಕ್ರೋಧವಶಾನಾಂ ಚ ಹಿಡಿಂಬಸ್ಯ ಬಕಸ್ಯ ಚ।।
05088025a ಪರಾಕ್ರಮೇ ಶಕ್ರಸಮೋ ವಾಯುವೇಗಸಮೋ ಜವೇ।
05088025c ಮಹೇಶ್ವರಸಮಃ ಕ್ರೋಧೇ ಭೀಮಃ ಪ್ರಹರತಾಂ ವರಃ।।
05088026a ಕ್ರೋಧಂ ಬಲಮಮರ್ಷಂ ಚ ಯೋ ನಿಧಾಯ ಪರಂತಪಃ।
05088026c ಜಿತಾತ್ಮಾ ಪಾಂಡವೋಽಮರ್ಷೀ ಭ್ರಾತುಸ್ತಿಷ್ಠತಿ ಶಾಸನೇ।।
05088027a ತೇಜೋರಾಶಿಂ ಮಹಾತ್ಮಾನಂ ಬಲೌಘಮಮಿತೌಜಸಂ।
05088027c ಭೀಮಂ ಪ್ರದರ್ಶನೇನಾಪಿ ಭೀಮಸೇನಂ ಜನಾರ್ದನ।।
05088027e ತಂ ಮಮಾಚಕ್ಷ್ವ ವಾರ್ಷ್ಣೇಯ ಕಥಮದ್ಯ ವೃಕೋದರಃ।।

ಮಧುಸೂದನ! ಜನಾರ್ದನ! ವಾರ್ಷ್ಣೇಯ! ಸಾವಿರ ಆನೆಗಳ ಬಲವನ್ನುಳ್ಳ, ವಾಯುವಿನ ವೇಗವುಳ್ಳ, ವೃಕೋದರ, ಪಾಂಡವರಲ್ಲಿ ನಿತ್ಯವೂ ಕೋಪಿಷ್ಟನಾಗಿರುವ, ತನ್ನ ಸಹೋದರರಿಗೆ ಯಾವಾಗಲೂ ಒಳ್ಳೆಯದನ್ನೇ ಮಾಡುವ, ಅವರಿಗೆ ಪ್ರಿಯನಾದ, ಬಾಂಧವರೊಂದಿಗೆ ಕೀಚಕನನ್ನು ಮತ್ತು ಕ್ರೋಧವಶರಾದ ಹಿಡಿಂಬ ಮತ್ತು ಬಕರನ್ನು ಸಂಹರಿಸಿದ ಶೂರ, ಪರಾಕ್ರಮದಲ್ಲಿ ಶಕ್ರಸಮನಾದ, ವೇಗದಲ್ಲಿ ವಾಯುವೇಗದ ಸಮನಾದ, ಕ್ರೋಧದಲ್ಲಿ ಮಹೇಶ್ವರನ ಸಮನಾದ, ಪ್ರಹಾರಿಗಳಲ್ಲಿ ಶ್ರೇಷ್ಠ, ಕ್ರೋಧ, ಬಲ, ಸಿಟ್ಟನ್ನು ತಡೆದಿಟ್ಟುಕೊಂಡ ಪರಂತಪ, ಕೋಪದಲ್ಲಿದ್ದರೂ ಜಿತಾತ್ಮನಾಗಿ ಅಣ್ಣನ ಶಾಸನದಡಿಯಲ್ಲಿರುವ ಪಾಂಡವ, ತೇಜೋರಾಶಿ, ಮಹಾತ್ಮ, ಬಲೌಘ, ಅಮಿತ ತೇಜಸ್ವಿ, ನೋಡುವುದಕ್ಕೇ ಭಯಂಕರನಾಗಿರುವ ಭೀಮಸೇನ ವೃಕೋದರನ ಕುರಿತು ಹೇಳು.

05088028a ಆಸ್ತೇ ಪರಿಘಬಾಹುಃ ಸ ಮಧ್ಯಮಃ ಪಾಂಡವೋಽಚ್ಯುತ।
05088028c ಅರ್ಜುನೇನಾರ್ಜುನೋ ಯಃ ಸ ಕೃಷ್ಣ ಬಾಹುಸಹಸ್ರಿಣಾ।।
05088028e ದ್ವಿಬಾಹುಃ ಸ್ಪರ್ಧತೇ ನಿತ್ಯಮತೀತೇನಾಪಿ ಕೇಶವ।।
05088029a ಕ್ಷಿಪತ್ಯೇಕೇನ ವೇಗೇನ ಪಂಚ ಬಾಣಶತಾನಿ ಯಃ।
05088029c ಇಷ್ವಸ್ತ್ರೇ ಸದೃಶೋ ರಾಜ್ಞಾಃ ಕಾರ್ತವೀರ್ಯಸ್ಯ ಪಾಂಡವಃ।।
05088030a ತೇಜಸಾದಿತ್ಯಸದೃಶೋ ಮಹರ್ಷಿಪ್ರತಿಮೋ ದಮೇ।
05088030c ಕ್ಷಮಯಾ ಪೃಥಿವೀತುಲ್ಯೋ ಮಹೇಂದ್ರಸಮವಿಕ್ರಮಃ।।
05088031a ಆಧಿರಾಜ್ಯಂ ಮಹದ್ದೀಪ್ತಂ ಪ್ರಥಿತಂ ಮಧುಸೂದನ।
05088031c ಆಹೃತಂ ಯೇನ ವೀರ್ಯೇಣ ಕುರೂಣಾಂ ಸರ್ವರಾಜಸು।।
05088032a ಯಸ್ಯ ಬಾಹುಬಲಂ ಘೋರಂ ಕೌರವಾಃ ಪರ್ಯುಪಾಸತೇ।
05088032c ಸ ಸರ್ವರಥಿನಾಂ ಶ್ರೇಷ್ಠಃ ಪಾಂಡವಃ ಸತ್ಯವಿಕ್ರಮಃ।।
05088033a ಯೋಽಪಾಶ್ರಯಃ ಪಾಂಡವಾನಾಂ ದೇವಾನಾಮಿವ ವಾಸವಃ।
05088033c ಸ ತೇ ಭ್ರಾತಾ ಸಖಾ ಚೈವ ಕಥಮದ್ಯ ಧನಂಜಯಃ।।

ಅಚ್ಯುತ! ಕೃಷ್ಣ! ಕೇಶವ! ಮಧುಸೂದನ! ಪರಿಘದಂತಹ ಬಾಹುಗಳನ್ನುಳ್ಳ ಆ ಮಧ್ಯಮ, ಸಹಸ್ರಬಾಹುಗಳ ಅರ್ಜುನನೊಂದಿಗೆ ನಿತ್ಯವೂ ಸ್ಪರ್ಧಿಸುವ ಎರಡು ಕೈಗಳ ಅರ್ಜುನ, ಒಂದೇ ಸಲ ವೇಗದಿಂದ ಐನೂರು ಬಾಣಗಳನ್ನು ಬಿಡಬಲ್ಲ, ಅಸ್ತ್ರಗಳಲ್ಲಿ ರಾಜ ಕಾರ್ತವೀರ್ಯನ ಸಮನಾಗಿರುವ ಪಾಂಡವ, ತೇಜಸ್ಸಿನಲ್ಲಿ ಆದಿತ್ಯಸದೃಶನಾಗಿರುವ, ದಮದಲ್ಲಿ ಮಹರ್ಷಿಗೆ ಸಮನಾಗಿರುವ, ಕ್ಷಮೆಯಲ್ಲಿ ಪೃಥ್ವಿಯ ಸಮನಾಗಿರುವ, ವಿಕ್ರಮದಲ್ಲಿ ಮಹೇಂದ್ರನ ಸಮನಾಗಿರುವ, ಈ ಮಹಾರಾಜ್ಯವನ್ನು ಗೆದ್ದಿರುವ ದೀಪ್ತ ತೇಜಸ್ವಿ, ಯಾರ ಘೋರ ಬಾಹುಬಲವನ್ನು ಕೌರವರು ಉಪಾಸಿಸುವರೋ, ದೇವತೆಗಳು ವಾಸವನನ್ನು ಹೇಗೋ ಹಾಗೆ ಯಾರನ್ನು ಪಾಂಡವರು ಆಶ್ರಯಿಸಿರುವರೋ ಆ ನಿನ್ನ ಭ್ರಾತಾ ಸಖ ಧನಂಜಯನು ಇಂದು ಹೇಗಿದ್ದಾನೆ?

05088034a ದಯಾವಾನ್ಸರ್ವಭೂತೇಷು ಹ್ರೀನಿಷೇಧೋ ಮಹಾಸ್ತ್ರವಿತ್।
05088034c ಮೃದುಶ್ಚ ಸುಕುಮಾರಶ್ಚ ಧಾರ್ಮಿಕಶ್ಚ ಪ್ರಿಯಶ್ಚ ಮೇ।।
05088035a ಸಹದೇವೋ ಮಹೇಷ್ವಾಸಃ ಶೂರಃ ಸಮಿತಿಶೋಭನಃ।
05088035c ಭ್ರಾತೄಣಾಂ ಕೃಷ್ಣ ಶುಶ್ರೂಷುರ್ಧರ್ಮಾರ್ಥಕುಶಲೋ ಯುವಾ।।
05088036a ಸದೈವ ಸಹದೇವಸ್ಯ ಭ್ರಾತರೋ ಮಧುಸೂದನ।
05088036c ವೃತ್ತಂ ಕಲ್ಯಾಣವೃತ್ತಸ್ಯ ಪೂಜಯಂತಿ ಮಹಾತ್ಮನಃ।।
05088037a ಜ್ಯೇಷ್ಠಾಪಚಾಯಿನಂ ವೀರಂ ಸಹದೇವಂ ಯುಧಾಂ ಪತಿಂ।
05088037c ಶುಶ್ರೂಷುಂ ಮಮ ವಾರ್ಷ್ಣೇಯ ಮಾದ್ರೀಪುತ್ರಂ ಪ್ರಚಕ್ಷ್ವ ಮೇ।।

ಕೃಷ್ಣ! ಸರ್ವಭೂತಗಳಿಗೂ ದಯಾವಂತನಾದ, ವಿನಯದಿಂದ ಹಿಡಿಯಲ್ಪಟ್ಟ, ಮಹಾಸ್ತ್ರವಿದು, ಮೃದು, ಸುಕುಮಾರ, ಧಾರ್ಮಿಕ, ನನಗೆ ಪ್ರಿಯನಾದ ಸಹದೇವನು ಮಹೇಷ್ವಾಸ, ಶೂರ, ಸಮಿತಿಶೋಭನ, ಸಹೋದರರ ಶುಶ್ರೂಷೆಯನ್ನು ಮಾಡುವ, ಧರ್ಮರ್ಥಕುಶಲ, ಯುವಕ. ಮಧುಸೂದನ! ಮಹಾತ್ಮ ಸಹದೇವನನ್ನು ಮತ್ತು ಸದಾ ಅವನ ಕಲ್ಯಾಣ ನಡತೆಯನ್ನು ಸಹೋದರರು ಪೂಜಿಸುತ್ತಾರೆ. ವಾರ್ಷ್ಣೇಯ! ಅಣ್ಣಂದಿರಿಗೆ ವಿಧೇಯನಾಗಿರುವ, ನನ್ನನ್ನು ಶುಶ್ರೂಷೆಮಾಡುವ, ಯೋಧರ ನಾಯಕ ಮಾದ್ರೀಪುತ್ರ ವೀರ ಸಹದೇವನ ಕುರಿತು ನನಗೆ ಹೇಳು.

05088038a ಸುಕುಮಾರೋ ಯುವಾ ಶೂರೋ ದರ್ಶನೀಯಶ್ಚ ಪಾಂಡವಃ।
05088038c ಭ್ರಾತೄಣಾಂ ಕೃಷ್ಣ ಸರ್ವೇಷಾಂ ಪ್ರಿಯಃ ಪ್ರಾಣೋ ಬಹಿಶ್ಚರಃ।।
05088039a ಚಿತ್ರಯೋಧೀ ಚ ನಕುಲೋ ಮಹೇಷ್ವಾಸೋ ಮಹಾಬಲಃ।
05088039c ಕಚ್ಚಿತ್ಸ ಕುಶಲೀ ಕೃಷ್ಣ ವತ್ಸೋ ಮಮ ಸುಖೈಧಿತಃ।।

ಕೃಷ್ಣ! ಆ ಸುಕುಮಾರ, ಯುವಕ, ಶೂರ, ದರ್ಶನೀಯ ಪಾಂಡವ, ಎಲ್ಲ ಸಹೋದರರಿಗೆ ತಮ್ಮ ಪ್ರಾಣಗಳಷ್ಟೇ ಪ್ರಿಯನಾಗಿರುವ, ಚಿತ್ರಯೋಧೀ, ಮಹೇಷ್ವಾಸ, ಮಹಾಬಲಶಾಲಿ, ನನ್ನ ಮಗ, ಸುಖದಲ್ಲಿಯೇ ಬೆಳೆದ ನಕುಲನು ಕುಶಲನಾಗಿದ್ದಾನೆಯೇ?

05088040a ಸುಖೋಚಿತಮದುಃಖಾರ್ಹಂ ಸುಕುಮಾರಂ ಮಹಾರಥಂ।
05088040c ಅಪಿ ಜಾತು ಮಹಾಬಾಹೋ ಪಶ್ಯೇಯಂ ನಕುಲಂ ಪುನಃ।।

ಸುಖೋಚಿತನಾದ, ದುಃಖಕ್ಕೆ ಅನರ್ಹನಾದ ಸುಕುಮಾರ ಮಹಾರಥಿ ಮಹಾಬಾಹು ನಕುಲನನ್ನು ನಾನು ಪುನಃ ನೋಡುತ್ತೇನೆಯೇ?

05088041a ಪಕ್ಷ್ಮಸಂಪಾತಜೇ ಕಾಲೇ ನಕುಲೇನ ವಿನಾಕೃತಾ।
05088041c ನ ಲಭಾಮಿ ಸುಖಂ ವೀರ ಸಾದ್ಯ ಜೀವಾಮಿ ಪಶ್ಯ ಮಾಂ।।

ವೀರ! ಒಂದು ಕ್ಷಣವೂ ನಕುಲನ ವಿನಃ ನನಗೆ ಶಾಂತಿಯಿರಲಿಲ್ಲ. ಈಗ ನೋಡು! ನಾನು ಇನ್ನೂ ಜೀವಿಸಿದ್ದೇನೆ!

05088042a ಸರ್ವೈಃ ಪುತ್ರೈಃ ಪ್ರಿಯತಮಾ ದ್ರೌಪದೀ ಮೇ ಜನಾರ್ದನ।
05088042c ಕುಲೀನಾ ಶೀಲಸಂಪನ್ನಾ ಸರ್ವೈಃ ಸಮುದಿತಾ ಗುಣೈಃ।।
05088043a ಪುತ್ರಲೋಕಾತ್ಪತಿಲೋಕಾನ್ವೃಣ್ವಾನಾ ಸತ್ಯವಾದಿನೀ।
05088043c ಪ್ರಿಯಾನ್ಪುತ್ರಾನ್ಪರಿತ್ಯಜ್ಯ ಪಾಂಡವಾನನ್ವಪದ್ಯತ।।
05088044a ಮಹಾಭಿಜನಸಂಪನ್ನಾ ಸರ್ವಕಾಮೈಃ ಸುಪೂಜಿತಾ।
05088044c ಈಶ್ವರೀ ಸರ್ವಕಲ್ಯಾಣೀ ದ್ರೌಪದೀ ಕಥಮಚ್ಯುತ।।

ಜನಾರ್ದನ! ಎಲ್ಲ ಪುತ್ರರಿಗಿಂತಲೂ ನನಗೆ ಪ್ರಿಯತಮೆಯಾದ ದ್ರೌಪದೀ, ಕುಲೀನೆ, ಶೀಲಸಂಪನ್ನೆ, ಸರ್ವ ಗುಣಗಳಿಂದ ಕೂಡಿರುವ, ಪುತ್ರರ ಲೋಕಕ್ಕಿಂತ ಪತಿಗಳ ಲೋಕವನ್ನು ಆರಿಸಿಕೊಂಡಿರುವ ಸತ್ಯವಾದಿನೀ, ಪ್ರಿಯ ಪುತ್ರರನ್ನು ಪರಿತ್ಯಜಿಸಿ ಪಾಂಡವರನ್ನು ಅನುಸರಿಸಿಹೋದ, ಮಹಾಭಿಜನಸಂಪನ್ನೆ, ಸರ್ವಕಾಮಗಳಿಂದ ಸುಪೂಜಿತೆ, ಈಶ್ವರೀ, ಸರ್ವಕಲ್ಯಾಣೀ ದ್ರೌಪದಿಯು ಹೇಗಿದ್ದಾಳೆ, ಅಚ್ಯುತ?

05088045a ಪತಿಭಿಃ ಪಂಚಭಿಃ ಶೂರೈರಗ್ನಿಕಲ್ಪೈಃ ಪ್ರಹಾರಿಭಿಃ।
05088045c ಉಪಪನ್ನಾ ಮಹೇಷ್ವಾಸೈರ್ದ್ರೌಪದೀ ದುಃಖಭಾಗಿನೀ।।

ಶೂರರೂ, ಅಗ್ನಿಸಮಾನರೂ, ಪ್ರಹಾರಿಗಳೂ, ಮಹೇಷ್ವಾಸರೂ ಆದ ಐವರು ಪತಿಯಂದಿರನ್ನು ಪಡೆದ ದ್ರೌಪದಿಗೂ ದುಃಖವೇ ಪಾಲಾಯಿತು.

05088046a ಚತುರ್ದಶಮಿಮಂ ವರ್ಷಂ ಯನ್ನಾಪಶ್ಯಮರಿಂದಮ।
05088046c ಪುತ್ರಾಧಿಭಿಃ ಪರಿದ್ಯೂನಾಂ ದ್ರೌಪದೀಂ ಸತ್ಯವಾದಿನೀಂ।।

ಅರಿಂದಮ! ತನ್ನ ಪುತ್ರರ ಕುರಿತೇ ಕೊರಗುತ್ತಿರುವ ಸತ್ಯವಾದಿನೀ ದ್ರೌಪದಿಯನ್ನು ಕಾಣದೇ ಇರುವುದು ಇದು ಹದಿನಾಲ್ಕನೆಯ ವರ್ಷ.

05088047a ನ ನೂನಂ ಕರ್ಮಭಿಃ ಪುಣ್ಯೈರಶ್ನುತೇ ಪುರುಷಃ ಸುಖಂ।
05088047c ದ್ರೌಪದೀ ಚೇತ್ತಥಾವೃತ್ತಾ ನಾಶ್ನುತೇ ಸುಖಮವ್ಯಯಂ।।

ಉನ್ನತ ನಡತೆಯ ಆ ದ್ರೌಪದಿಗೇ ಅವ್ಯಯ ಸುಖವು ದೊರೆಯುತ್ತಿಲ್ಲ ಎಂದರೆ ಪುಣ್ಯಕರ್ಮಗಳಿಂದಲೂ ಪುರುಷನು ಸುಖವನ್ನು ಹೊಂದುವುದಿಲ್ಲ ಎಂದಾಯಿತು.

05088048a ನ ಪ್ರಿಯೋ ಮಮ ಕೃಷ್ಣಾಯ ಬೀಭತ್ಸುರ್ನ ಯುಧಿಷ್ಠಿರಃ।
05088048c ಭೀಮಸೇನೋ ಯಮೌ ವಾಪಿ ಯದಪಶ್ಯಂ ಸಭಾಗತಾಂ।।

ಸಭೆಯಲ್ಲಿ ನಡೆದುದನ್ನು ನೋಡಿದಾಗಲಿಂದ ನನಗೆ ಕೃಷ್ಣೆಗಿಂತ ಅಧಿಕ ಪ್ರಿಯನು ಬೀಭತ್ಸುವೂ ಅಲ್ಲ, ಯುಧಿಷ್ಠಿರನೂ ಅಲ್ಲ, ಭೀಮಸೇನನೂ ಅಲ್ಲ, ಯಮಳರೂ ಅಲ್ಲ.

05088049a ನ ಮೇ ದುಃಖತರಂ ಕಿಂ ಚಿದ್ಭೂತಪೂರ್ವಂ ತತೋಽಧಿಕಂ।
05088049c ಯದ್ದ್ರೌಪದೀಂ ನಿವಾತಸ್ಥಾಂ ಶ್ವಶುರಾಣಾಂ ಸಮೀಪಗಾಂ।।
05088050a ಆನಾಯಿತಾಮನಾರ್ಯೇಣ ಕ್ರೋಧಲೋಭಾನುವರ್ತಿನಾ।
05088050c ಸರ್ವೇ ಪ್ರೈಕ್ಷಂತ ಕುರವ ಏಕವಸ್ತ್ರಾಂ ಸಭಾಗತಾಂ।।

ಯಾವಾಗ ದ್ರೌಪದಿಯನ್ನು, ಬಯಲಿನಲ್ಲಿ ಒಬ್ಬಳೇ ನಿಂತಿರುವಂತೆ ಮಾವನ ಸಮೀಪದಲ್ಲಿ ನಿಂತಿರುವುದನ್ನು, ಕ್ರೋಧಲೋಭಾನುವರ್ತಿಗಳು ಅನಾರ್ಯರೀತಿಯಲ್ಲಿ ಏಕವಸ್ತ್ರಳಾದ ಅವಳನ್ನು ಸಭೆಗೆ ಎಳೆದು ತಂದುದನ್ನು ನೋಡಿದುದಕ್ಕಿಂತ ಅಧಿಕ ದುಃಖವನ್ನು ಅದರ ಹಿಂದೆ ಏನೂ ನನಗೆ ಕೊಟ್ಟಿರಲಿಲ್ಲ.

05088051a ತತ್ರೈವ ಧೃತರಾಷ್ಟ್ರಶ್ಚ ಮಹಾರಾಜಶ್ಚ ಬಾಹ್ಲಿಕಃ।
05088051c ಕೃಪಶ್ಚ ಸೋಮದತ್ತಶ್ಚ ನಿರ್ವಿಣ್ಣಾಃ ಕುರವಸ್ತಥಾ।।
05088052a ತಸ್ಯಾಂ ಸಂಸದಿ ಸರ್ವಸ್ಯಾಂ ಕ್ಷತ್ತಾರಂ ಪೂಜಯಾಮ್ಯಹಂ।
05088052c ವೃತ್ತೇನ ಹಿ ಭವತ್ಯಾರ್ಯೋ ನ ಧನೇನ ನ ವಿದ್ಯಯಾ।।

ಅಲ್ಲಿಯೇ ಮಹಾರಾಜ ಧೃತರಾಷ್ಟ್ರನೂ, ಬಾಹ್ಲೀಕನೂ, ಕೃಪನೂ, ಸೋಮದತ್ತನೂ ಮತ್ತು ನಿರ್ವಿಣ್ಣರಾದ ಕುರುಗಳು ಇದ್ದಿದ್ದರೂ ಆ ಸಂಸದಿಯಲ್ಲಿದ್ದ ಎಲ್ಲರಿಗಿಂತಲೂ ಕ್ಷತ್ತನನ್ನು ನಾನು ಗೌರವಿಸುತ್ತೇನೆ, ಏಕೆಂದರೆ ಅವನೊಬ್ಬನೇ ಆರ್ಯನಂತೆ, ಧನ ಮತ್ತು ವಿದ್ಯೆಯ ಆಧಾರದ ಮೇಲಲ್ಲ, ನಡೆದುಕೊಂಡ.

05088053a ತಸ್ಯ ಕೃಷ್ಣ ಮಹಾಬುದ್ಧೇರ್ಗಂಭೀರಸ್ಯ ಮಹಾತ್ಮನಃ।
05088053c ಕ್ಷತ್ತುಃ ಶೀಲಮಲಂಕಾರೋ ಲೋಕಾನ್ವಿಷ್ಟಭ್ಯ ತಿಷ್ಠತಿ।।

ಕೃಷ್ಣ! ಆ ಮಹಾಬುದ್ಧಿ, ಗಂಭೀರ, ಮಹಾತ್ಮ ಕ್ಷತ್ತನು ಲೋಕಗಳೇ ಯಾವುದರ ಮೇಲೆ ನಿಂತಿವೆಯೋ ಅಂಥಹ ಶೀಲದಿಂದ ಅಲಂಕೃತನಾಗಿದ್ದಾನೆ.”

05088054a ಸಾ ಶೋಕಾರ್ತಾ ಚ ಹೃಷ್ಟಾ ಚ ದೃಷ್ಟ್ವಾ ಗೋವಿಂದಮಾಗತಂ।
05088054c ನಾನಾವಿಧಾನಿ ದುಃಖಾನಿ ಸರ್ವಾಣ್ಯೇವಾನ್ವಕೀರ್ತಯತ್।।

ಗೋವಿಂದನು ಬಂದುದನ್ನು ನೋಡಿ ಸಂತೋಷ ಮತ್ತು ದುಃಖಗಳಿಂದ ಶೋಕಾರ್ತಳಾದ ಅವಳು ನಾನಾವಿಧದ ಎಲ್ಲ ದುಃಖಗಳನ್ನೂ ತೋಡಿಕೊಂಡಳು.

05088055a ಪೂರ್ವೈರಾಚರಿತಂ ಯತ್ತತ್ಕುರಾಜಭಿರರಿಂದಮ।
05088055c ಅಕ್ಷದ್ಯೂತಂ ಮೃಗವಧಃ ಕಚ್ಚಿದೇಷಾಂ ಸುಖಾವಹಂ।।

“ಅರಿಂದಮ! ಹಿಂದೆ ರಾಜರು ಆಚರಿಸುತ್ತಿದ್ದ ಅಕ್ಷದ್ಯೂತ, ಮೃಗವಧೆ ಮೊದಲಾದವುಗಳು ಅವರಿಗೆ ನಿಜವಾಗಿಯೂ ಸುಖವನ್ನು ನೀಡುತ್ತಿದ್ದವೇ?

05088056a ತನ್ಮಾಂ ದಹತಿ ಯತ್ಕೃಷ್ಣಾ ಸಭಾಯಾಂ ಕುರುಸನ್ನಿಧೌ।
05088056c ಧಾರ್ತರಾಷ್ಟ್ರೈಃ ಪರಿಕ್ಲಿಷ್ಟಾ ಯಥಾ ನಕುಶಲಂ ತಥಾ।।

ಅಂದು ಕುರುಸನ್ನಿಧಿಯ ಸಭೆಯಲ್ಲಿ ಕೃಷ್ಣೆಯನ್ನು ಧಾರ್ತರಾಷ್ಟ್ರರು ಕಷ್ಟಕ್ಕೊಳಪಡಿಸಿದರು ಎನ್ನುವುದು ಒಳ್ಳೆಯದಲ್ಲ!

05088057a ನಿರ್ವಾಸನಂ ಚ ನಗರಾತ್ಪ್ರವ್ರಜ್ಯಾ ಚ ಪರಂತಪ।
05088057c ನಾನಾವಿಧಾನಾಂ ದುಃಖಾನಾಮಾವಾಸೋಽಸ್ಮಿ ಜನಾರ್ದನ।।
05088057e ಅಜ್ಞಾತಚರ್ಯಾ ಬಾಲಾನಾಮವರೋಧಶ್ಚ ಕೇಶವ।।

ಪರಂತಪ! ಜನಾರ್ದನ! ಕೇಶವ! ಅವರು ನಗರದಿಂದ ಹೊರಹಾಕಲ್ಪಟ್ಟಿದ್ದು, ನಂತರದ ವನವಾಸ, ಅವರು ಅಜ್ಞಾತವಾಸವನ್ನು ನಡೆಸಿದುದು, ಬಾಲಕರಿಂದ ದೂರವಿದ್ದುದು ಹೀಗೆ ನಾನಾ ವಿಧದ ದುಃಖಗಳನ್ನು ಪಡೆದಿದ್ದೇನೆ.

05088058a ನ ಸ್ಮ ಕ್ಲೇಶತಮಂ ಮೇ ಸ್ಯಾತ್ಪುತ್ರೈಃ ಸಹ ಪರಂತಪ।
05088058c ದುರ್ಯೋಧನೇನ ನಿಕೃತಾ ವರ್ಷಮದ್ಯ ಚತುರ್ದಶಂ।।

ಪರಂತಪ! ಅದಕ್ಕಿಂತಲೂ ಹೆಚ್ಚಿನ ಕ್ಲೇಶವೇನೆಂದರೆ ನಾನು ಪುತ್ರರೊಂದಿಗೆ ಈ ಹದಿನಾಲ್ಕನೆಯ ವರ್ಷವೂ ದುರ್ಯೋಧನನಿಂದ ಮೋಸಹೋಗುತ್ತಿದ್ದೇನೆ.

05088059a ದುಃಖಾದಪಿ ಸುಖಂ ನ ಸ್ಯಾದ್ಯದಿ ಪುಣ್ಯಫಲಕ್ಷಯಃ।
05088059c ನ ಮೇ ವಿಶೇಷೋ ಜಾತ್ವಾಸೀದ್ಧಾರ್ತರಾಷ್ಟ್ರೇಷು ಪಾಂಡವೈಃ।।

ದುಃಖವು ಸುಖಕ್ಕೆ ಎಡೆಮಾಡಿಕೊಡುವುದಿಲ್ಲ ಎಂದರೆ ಪುಣ್ಯದ ಫಲವು ಕ್ಷಯವಾಗಿಹೋಗುತ್ತದೆ. ನಾನು ಯಾವಾಗಲೂ ಪಾಂಡವರು ಮತ್ತು ಧಾರ್ತರಾಷ್ಟ್ರರಲ್ಲಿ ಬೇಧವನ್ನು ಕಾಣಲಿಲ್ಲ.

05088060a ತೇನ ಸತ್ಯೇನ ಕೃಷ್ಣ ತ್ವಾಂ ಹತಾಮಿತ್ರಂ ಶ್ರಿಯಾ ವೃತಂ।
05088060c ಅಸ್ಮಾದ್ವಿಮುಕ್ತಂ ಸಂಗ್ರಾಮಾತ್ಪಶ್ಯೇಯಂ ಪಾಂಡವೈಃ ಸಹ।
05088060e ನೈವ ಶಕ್ಯಾಃ ಪರಾಜೇತುಂ ಸತ್ತ್ವಂ ಹ್ಯೇಷಾಂ ತಥಾಗತಂ।।

ಕೃಷ್ಣ! ಇದೇ ಸತ್ಯದ ಮೂಲಕ ನೀನು ಅಮಿತ್ರರನ್ನು ಸಂಹರಿಸಿ ಶ್ರೀಯಿಂದ ಆವೃತನಾಗಿ ಪಾಂಡವರೊಂದಿಗೆ ನಮ್ಮನ್ನು ಈ ಸಂಗ್ರಾಮದಿಂದ ಉಳಿಸುತ್ತೀಯೆ ಎಂದು ಕಾಣುತ್ತಿದ್ದೇನೆ. ಅವರ ಸತ್ವದಂತೆ ಹೋದರೆ ಅವರನ್ನು ಸೋಲಿಸುವುದು ಶಕ್ಯವಿಲ್ಲ.

05088061a ಪಿತರಂ ತ್ವೇವ ಗರ್ಹೇಯಂ ನಾತ್ಮಾನಂ ನ ಸುಯೋಧನಂ।
05088061c ಯೇನಾಹಂ ಕುಂತಿಭೋಜಾಯ ಧನಂ ಧೂರ್ತೈರಿವಾರ್ಪಿತಾ।।

ನಾನು ನನ್ನನ್ನು ಅಥವಾ ಸುಯೋಧನನನ್ನಲ್ಲ. ನನ್ನ ತಂದೆಯನ್ನು ದೂರುತ್ತೇನೆ. ಅವನು ಧನವನ್ನು ಧೂರ್ತರಿಗೆ ಅರ್ಪಿಸುವಂತೆ ನನ್ನನ್ನು ಕುಂತಿಭೋಜನಿಗೆ ಕೊಟ್ಟನು.

05088062a ಬಾಲಾಂ ಮಾಮಾರ್ಯಕಸ್ತುಭ್ಯಂ ಕ್ರೀಡಂತೀಂ ಕಂದುಹಸ್ತಕಾಂ।
05088062c ಅದದಾತ್ಕುಂತಿಭೋಜಾಯ ಸಖಾ ಸಖ್ಯೇ ಮಹಾತ್ಮನೇ।।

ನಾನು ಬಾಲಕಿಯಾಗಿದ್ದೆ. ಚಂಡಿನೊಂದಿಗೆ ಆಡುತ್ತಿರುವಾಗ ನಿನ್ನ ಅಜ್ಜನು ನನ್ನನ್ನು ಸಖ್ಯದಲ್ಲಿ ಮಹಾತ್ಮ ಕುಂತಿಭೋಜನಿಗಿತ್ತನು.

05088063a ಸಾಹಂ ಪಿತ್ರಾ ಚ ನಿಕೃತಾ ಶ್ವಶುರೈಶ್ಚ ಪರಂತಪ।
05088063c ಅತ್ಯಂತದುಃಖಿತಾ ಕೃಷ್ಣ ಕಿಂ ಜೀವಿತಫಲಂ ಮಮ।।

ಪರಂತಪ! ನಾನು ಪಿತನಿಂದ ಮತ್ತು ಮಾವನಿಂದಲೂ ಮೋಸಗೊಂಡು ಅತ್ಯಂತ ದುಃಖಿತಳಾಗಿದ್ದೇನೆ. ಕೃಷ್ಣ! ನಾನು ಜೀವಿಸಿ ಫಲವೇನು?

05088064a ಯನ್ಮಾ ವಾಗಬ್ರವೀನ್ನಕ್ತಂ ಸೂತಕೇ ಸವ್ಯಸಾಚಿನಃ।
05088064c ಪುತ್ರಸ್ತೇ ಪೃಥಿವೀಂ ಜೇತಾ ಯಶಶ್ಚಾಸ್ಯ ದಿವಂ ಸ್ಪೃಶೇತ್।।

ನಾನು ಸವ್ಯಸಾಚಿಗೆ ಜನ್ಮವಿತ್ತಾಗ ರಾತ್ರಿಯಲ್ಲಿ ಧ್ವನಿಯೊಂದು ಹೇಳಿತ್ತು: “ನಿನ್ನ ಪುತ್ರನು ಪೃಥ್ವಿಯನ್ನು ಗೆದ್ದು ಅವನ ಯಶಸ್ಸು ದೇವಲೋಕವನ್ನೂ ಮುಟ್ಟುತ್ತದೆ!

05088065a ಹತ್ವಾ ಕುರೂನ್ಗ್ರಾಮಜನ್ಯೇ ರಾಜ್ಯಂ ಪ್ರಾಪ್ಯ ಧನಂಜಯಃ।
05088065c ಭ್ರಾತೃಭಿಃ ಸಹ ಕೌಂತೇಯಸ್ತ್ರೀನ್ಮೇಧಾನಾಹರಿಷ್ಯತಿ।।

ಜನರು ಸೇರಿರುವ ಯುದ್ಧದಲ್ಲಿ ಕುರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದು ಧನಂಜಯ ಕೌಂತೇಯನು ಸಹೋದರರೊಡನೆ ಮೂರು ಯಾಗಗಳನ್ನು ಮಾಡುವನು!”

05088066a ನಾಹಂ ತಾಮಭ್ಯಸೂಯಾಮಿ ನಮೋ ಧರ್ಮಾಯ ವೇಧಸೇ।
05088066c ಕೃಷ್ಣಾಯ ಮಹತೇ ನಿತ್ಯಂ ಧರ್ಮೋ ಧಾರಯತಿ ಪ್ರಜಾಃ।।

ಅದನ್ನು ನಾನು ಎಂದೂ ಅನುಮಾನಪಡಲಿಲ್ಲ. ಧರ್ಮ ವೇಧಸನಿಗೆ ನಮಸ್ಕಾರ. ಕೃಷ್ಣ! ಇದೇ ಪ್ರಜೆಗಳನ್ನು ನಿತ್ಯವೂ ಹೊರುವ ಮಹಾ ಧರ್ಮ!

05088067a ಧರ್ಮಶ್ಚೇದಸ್ತಿ ವಾರ್ಷ್ಣೇಯ ತಥಾ ಸತ್ಯಂ ಭವಿಷ್ಯತಿ।
05088067c ತ್ವಂ ಚಾಪಿ ತತ್ತಥಾ ಕೃಷ್ಣ ಸರ್ವಂ ಸಂಪಾದಯಿಷ್ಯಸಿ।।

ವಾರ್ಷ್ಣೇಯ! ಧರ್ಮವಿದ್ದರೆ ಸತ್ಯವು ಆಗುತ್ತದೆ. ಕೃಷ್ಣ! ಆಗ ನೀನೂ ಕೂಡ ಎಲ್ಲವನ್ನು ಸಂಪಾದಿಸಲು ಸಾಧ್ಯ.

05088068a ನ ಮಾಂ ಮಾಧವ ವೈಧವ್ಯಂ ನಾರ್ಥನಾಶೋ ನ ವೈರಿತಾ।
05088068c ತಥಾ ಶೋಕಾಯ ಭವತಿ ಯಥಾ ಪುತ್ರೈರ್ವಿನಾಭವಃ।।

ಮಾಧವ! ನಾನೋರ್ವ ವಿಧವೆ. ಸಂಪತ್ತನ್ನು ಕಳೆದುಕೊಂಡಿದ್ದೇನೆ. ವೈರಿಗಳನ್ನಲ್ಲ! ಅದಕ್ಕಿಂತಲೂ ಹೆಚ್ಚಾಗಿ ಪುತ್ರರಿಲ್ಲವಲ್ಲ ಎಂದು ಶೋಕಪಡುತ್ತಿದ್ದೇನೆ.

05088069a ಯಾಹಂ ಗಾಂಡೀವಧನ್ವಾನಂ ಸರ್ವಶಸ್ತ್ರಭೃತಾಂ ವರಂ।
05088069c ಧನಂಜಯಂ ನ ಪಶ್ಯಾಮಿ ಕಾ ಶಾಂತಿರ್ಹೃದಯಸ್ಯ ಮೇ।।

ಗಾಂಡೀವ ಧನ್ವಿಯನ್ನು, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನನ್ನು, ಧನಂಜಯನನ್ನು ನೋಡದೇ ನನ್ನ ಹೃದಯಕ್ಕೆ ಯಾವ ರೀತಿಯ ಶಾಂತಿಯಿರಬಲ್ಲದು?

05088070a ಇದಂ ಚತುರ್ದಶಂ ವರ್ಷಂ ಯನ್ನಾಪಶ್ಯಂ ಯುಧಿಷ್ಠಿರಂ।
05088070c ಧನಂಜಯಂ ಚ ಗೋವಿಂದ ಯಮೌ ತಂ ಚ ವೃಕೋದರಂ।।

ಗೋವಿಂದ! ಯುಧಿಷ್ಠಿರನನ್ನು, ಧನಂಜಯನನ್ನು, ಯಮಳರನ್ನು ಮತ್ತು ವೃಕೋದರನನ್ನು ನಾನು ನೋಡದೇ ಇರುವುದು ಇದು ಹದಿನಾಲ್ಕನೆಯ ವರ್ಷ.

05088071a ಜೀವನಾಶಂ ಪ್ರನಷ್ಟಾನಾಂ ಶ್ರಾದ್ಧಂ ಕುರ್ವಂತಿ ಮಾನವಾಃ।
05088071c ಅರ್ಥತಸ್ತೇ ಮಮ ಮೃತಾಸ್ತೇಷಾಂ ಚಾಹಂ ಜನಾರ್ದನ।।

ಮಾನವರು ಕಾಣದೇ ಹೋದವರಿಗೆ ತೀರಿಕೊಂಡಿದ್ದಿರಬಹುದೆಂದು ಶ್ರಾದ್ಧವನ್ನು ಮಾಡುತ್ತಾರೆ. ಜನಾರ್ದನ! ಒಂದು ರೀತಿಯಲ್ಲಿ ನನಗೆ ಅವರು ಮತ್ತು ನಾನು ಅವರಿಗೆ ಮೃತರಾದಂತೆ!

05088072a ಬ್ರೂಯಾ ಮಾಧವ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ।
05088072c ಭೂಯಾಂಸ್ತೇ ಹೀಯತೇ ಧರ್ಮೋ ಮಾ ಪುತ್ರಕ ವೃಥಾ ಕೃಥಾಃ।।

ಮಾಧವ! ರಾಜ ಧರ್ಮಾತ್ಮ ಯುಧಿಷ್ಠಿರನಿಗೆ ಹೇಳು: “ಪುತ್ರಕ! ನಿನ್ನ ಧರ್ಮವು ಹೀನವಾಗುತ್ತದೆ. ಸುಮ್ಮನೇ ನಾಟಕವಾಡಬೇಡ!”

05088073a ಪರಾಶ್ರಯಾ ವಾಸುದೇವ ಯಾ ಜೀವಾಮಿ ಧಿಗಸ್ತು ಮಾಂ।
05088073c ವೃತ್ತೇಃ ಕೃಪಣಲಬ್ಧಾಯಾ ಅಪ್ರತಿಷ್ಠೈವ ಜ್ಯಾಯಸೀ।।

ವಾಸುದೇವ! ಇಲ್ಲಿ ನಾನು ಪರಾಶ್ರಯದಲ್ಲಿ ಬದುಕುತ್ತಿದ್ದೇನೆ. ನನಗೆ ಧಿಕ್ಕಾರ! ಭಿಕ್ಷೆಬೇಡಿ ಜೀವಿಸುವುದಕ್ಕಿಂತ ಬೇರೆಯವರ ಆಶ್ರಯದಲ್ಲಿರುವುದು ಉತ್ತಮ.

05088074a ಅಥೋ ಧನಂಜಯಂ ಬ್ರೂಯಾ ನಿತ್ಯೋದ್ಯುಕ್ತಂ ವೃಕೋದರಂ।
05088074c ಯದರ್ಥಂ ಕ್ಷತ್ರಿಯಾ ಸೂತೇ ತಸ್ಯ ಕಾಲೋಽಯಮಾಗತಃ।।

ಈಗ ನಿತ್ಯವೂ ಉದ್ಯುಕ್ತರಾಗಿರುವ ಧನಂಜಯ-ವೃಕೋದರರಿಗೆ ಹೇಳು: “ಕ್ಷತ್ರಿಯಳಾದ ನಾನು ನಿಮ್ಮನ್ನು ಯಾವ ಉದ್ದೇಶಕ್ಕೆ ಹಡೆದಿದ್ದೆನೋ ಅದರ ಕಾಲವು ಬಂದಿದೆ.

05088075a ಅಸ್ಮಿಂಶ್ಚೇದಾಗತೇ ಕಾಲೇ ಕಾಲೋ ವೋಽತಿಕ್ರಮಿಷ್ಯತಿ।
05088075c ಲೋಕಸಂಭಾವಿತಾಃ ಸಂತಃ ಸುನೃಶಂಸಂ ಕರಿಷ್ಯಥ।।

ಈಗ ಬಂದಿರುವ ಕಾಲವು ಹೊರಟುಹೋದರೆ ನೀವು ಎಷ್ಟೇ ಲೋಕಸಂಭಾವಿತರು ಸಂತರೆಂದು ಎನಿಸಿಕೊಂಡಿದ್ದರೂ ನೀವು ಹಿಂಸೆಯನ್ನು ಮಾಡಿದಂತೆ!

05088076a ನೃಶಂಸೇನ ಚ ವೋ ಯುಕ್ತಾಂಸ್ತ್ಯಜೇಯಂ ಶಾಶ್ವತೀಃ ಸಮಾಃ।
05088076c ಕಾಲೇ ಹಿ ಸಮನುಪ್ರಾಪ್ತೇ ತ್ಯಕ್ತವ್ಯಮಪಿ ಜೀವಿತಂ।।

ನೀವು ಈ ಕ್ರೂರ ಕೃತ್ಯವನ್ನು ಮಾಡಿದಿರೆಂದರೆ ನಾನು ನಿಮ್ಮನ್ನು ಕೊನೆಯವರೆಗೆ ತ್ಯಜಿಸುತ್ತೇನೆ. ಸಮಯವು ಕೂಡಿ ಬಂದಾಗ ಜೀವವನ್ನೂ ಹಿಂದೆ ಪಡೆಯಬಹುದು.”

05088077a ಮಾದ್ರೀಪುತ್ರೌ ಚ ವಕ್ತವ್ಯೌ ಕ್ಷತ್ರಧರ್ಮರತೌ ಸದಾ।
05088077c ವಿಕ್ರಮೇಣಾರ್ಜಿತಾನ್ಭೋಗಾನ್ವೃಣೀತಂ ಜೀವಿತಾದಪಿ।।

ಸದಾ ಕ್ಷತ್ರಧರ್ಮದಲ್ಲಿ ನಿರತರಾಗಿರುವ ಮಾದ್ರೀಪುತ್ರರೀರ್ವರಿಗೆ ಹೇಳು: “ಜೀವ ಹೋದರೂ ವಿಕ್ರಮದಿಂದ ಗಳಿಸಿದ ಭೋಗಗಳನ್ನು ಆರಿಸಿಕೊಳ್ಳಬೇಕು.

05088078a ವಿಕ್ರಮಾಧಿಗತಾ ಹ್ಯರ್ಥಾಃ ಕ್ಷತ್ರಧರ್ಮೇಣ ಜೀವತಃ।
05088078c ಮನೋ ಮನುಷ್ಯಸ್ಯ ಸದಾ ಪ್ರೀಣಂತಿ ಪುರುಷೋತ್ತಮ।।

ಏಕೆಂದರೆ ಪುರುಷೋತ್ತಮರೇ! ವಿಕ್ರಮದಿಂದ ಗಳಿಸಿದ ಸಂಪತ್ತು ಕ್ಷತ್ರಧರ್ಮದಿಂದ ಜೀವಿಸುವ ಮನುಷ್ಯನ ಮನಸ್ಸನ್ನು ಸದಾ ಸಂತೋಷಗೊಳಿಸುತ್ತದೆ.”

05088079a ಗತ್ವಾ ಬ್ರೂಹಿ ಮಹಾಬಾಹೋ ಸರ್ವಶಸ್ತ್ರಭೃತಾಂ ವರಂ।
05088079c ಅರ್ಜುನಂ ಪಾಂಡವಂ ವೀರಂ ದ್ರೌಪದ್ಯಾಃ ಪದವೀಂ ಚರ।।

ಮಹಾಬಾಹೋ! “ದ್ರೌಪದಿಯ ಹೆಜ್ಜೆಗಳಲ್ಲಿ ನಡೆ!” ಎಂದು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ, ವೀರ, ಅರ್ಜುನ ಪಾಂಡವನಿಗೆ ಹೇಳು.

05088080a ವಿದಿತೌ ಹಿ ತವಾತ್ಯಂತಂ ಕ್ರುದ್ಧಾವಿವ ಯಥಾಂತಕೌ।
05088080c ಭೀಮಾರ್ಜುನೌ ನಯೇತಾಂ ಹಿ ದೇವಾನಪಿ ಪರಾಂ ಗತಿಂ।।

ನಿನಗೆ ತಿಳಿದೇ ಇದೆ. ಕೃದ್ಧರಾದ ಭೀಮಾರ್ಜುನರು ಅಂತಕರಂತೆ; ಅವರು ದೇವತೆಗಳನ್ನು ಕೂಡ ಪರಮ ಗತಿಗೆ ಎಳೆದೊಯ್ಯುತ್ತಾರೆ.

05088081a ತಯೋಶ್ಚೈತದವಜ್ಞಾನಂ ಯತ್ಸಾ ಕೃಷ್ಣಾ ಸಭಾಂ ಗತಾ।
05088081c ದುಃಶಾಸನಶ್ಚ ಕರ್ಣಶ್ಚ ಪರುಷಾಣ್ಯಭ್ಯಭಾಷತಾಂ।।

ಕೃಷ್ಣೆಯನ್ನು ಸಭೆಗೆ ಎಳೆದು ತರಲಾಯಿತು ಮತ್ತು ದುಃಶಾಸನ-ಕರ್ಣರು ಕ್ರೂರವಾಗಿ ಮಾತನಾಡಿದರು ಎನ್ನುವುದು ಅವರಿಗಾದ ಅಪಮಾನ.

05088082a ದುರ್ಯೋಧನೋ ಭೀಮಸೇನಮಭ್ಯಗಚ್ಚನ್ಮನಸ್ವಿನಂ।
05088082c ಪಶ್ಯತಾಂ ಕುರುಮುಖ್ಯಾನಾಂ ತಸ್ಯ ದ್ರಕ್ಷ್ಯತಿ ಯತ್ಫಲಂ।।

ಮನಸ್ವಿಯಾದ ಭೀಮಸೇನನನ್ನು ದುರ್ಯೋಧನನು ಕುರುಮುಖ್ಯರು ನೋಡುತ್ತಿರುವಾಗಲೇ ಎದುರಿಸಿದನು. ಅದರ ಫಲವನ್ನು ಅವನು ಕಾಣುತ್ತಾನೆ.

05088083a ನ ಹಿ ವೈರಂ ಸಮಾಸಾದ್ಯ ಪ್ರಶಾಮ್ಯತಿ ವೃಕೋದರಃ।
05088083c ಸುಚಿರಾದಪಿ ಭೀಮಸ್ಯ ನ ಹಿ ವೈರಂ ಪ್ರಶಾಮ್ಯತಿ।
05088083e ಯಾವದಂತಂ ನ ನಯತಿ ಶಾತ್ರವಾಂ ಶತ್ರುಕರ್ಶನಃ।।

ವೈರವನ್ನು ಕಟ್ಟಿಕೊಂಡ ವೃಕೋದರನಿಗೆ ಶಾಂತಿಯಾಗುವುದಿಲ್ಲ. ಎಷ್ಟೇ ಹಳತಾದರೂ ಶತ್ರುವಿಗೆ ಅಂತ್ಯವನ್ನು ತೋರಿಸುವವರೆಗೆ ಆ ಶತ್ರುಕರ್ಶನ ಭೀಮನ ವೈರವು ಶಾಂತಗೊಳ್ಳುವುದಿಲ್ಲ.

05088084a ನ ದುಃಖಂ ರಾಜ್ಯಹರಣಂ ನ ಚ ದ್ಯೂತೇ ಪರಾಜಯಃ।
05088084c ಪ್ರವ್ರಾಜನಂ ಚ ಪುತ್ರಾಣಾಂ ನ ಮೇ ತದ್ದುಃಖಕಾರಣಂ।।
05088085a ಯತ್ತು ಸಾ ಬೃಹತೀ ಶ್ಯಾಮಾ ಏಕವಸ್ತ್ರಾ ಸಭಾಂ ಗತಾ।
05088085c ಅಶೃಣೋತ್ಪರುಷಾ ವಾಚಸ್ತತೋ ದುಃಖತರಂ ನು ಕಿಂ।।

ರಾಜ್ಯಹರಣ, ದ್ಯೂತದಲ್ಲಿ ಪರಾಜಯ, ಮಕ್ಕಳ ವನವಾಸ ಇವೆಲ್ಲವೂ ನನ್ನ ದುಃಖಕ್ಕೆ ಕಾರಣವಲ್ಲ. ಆದರೆ ಆ ಕಪ್ಪುವರ್ಣದ ದೊಡ್ಡದೇಹದವಳನ್ನು ಏಕವಸ್ತ್ರದಲ್ಲಿ ಸಭೆಗೆ ಎಳೆದುಕೊಂಡು ಹೋಗಿ ಕ್ರೂರವಾದ ಮಾತುಗಳನ್ನು ಕೇಳಿಸಿದರಲ್ಲ ಅದಕ್ಕಿಂತ ಹೆಚ್ಚಿನ ದುಃಖವೇನಿದೆ?

05088086a ಸ್ತ್ರೀಧರ್ಮಿಣೀ ವರಾರೋಹಾ ಕ್ಷತ್ರಧರ್ಮರತಾ ಸದಾ।
05088086c ನಾಧ್ಯಗಚ್ಚತ್ತಥಾ ನಾಥಂ ಕೃಷ್ಣಾ ನಾಥವತೀ ಸತೀ।।

ಸದಾ ಕ್ಷತ್ರಧರ್ಮವನ್ನು ಪಾಲಿಸುವ, ಋತುವಿನಲ್ಲಿದ್ದ ಆ ವರಾರೋಹೆ ಸತೀ ಕೃಷ್ಣೆಯು ತನ್ನ ನಾಥರು ಅಲ್ಲಿದ್ದರೂ ಅನಾಥಳಾಗಿದ್ದಳು.

05088087a ಯಸ್ಯಾ ಮಮ ಸಪುತ್ರಾಯಾಸ್ತ್ವಂ ನಾಥೋ ಮಧುಸೂದನ।
05088087c ರಾಮಶ್ಚ ಬಲಿನಾಂ ಶ್ರೇಷ್ಠಃ ಪ್ರದ್ಯುಮ್ನಶ್ಚ ಮಹಾರಥಃ।।
05088088a ಸಾಹಮೇವಂವಿಧಂ ದುಃಖಂ ಸಹೇಽದ್ಯ ಪುರುಷೋತ್ತಮ।
05088088c ಭೀಮೇ ಜೀವತಿ ದುರ್ಧರ್ಷೇ ವಿಜಯೇ ಚಾಪಲಾಯಿನಿ।।

ಪುತ್ರರೊಂದಿಗೆ ನನ್ನ ನಾಥನು ನೀನು ಮಧುಸೂದನ! ಮತ್ತು ಬಲಿಗಳಲ್ಲಿ ಶ್ರೇಷ್ಠ ರಾಮ ಮತ್ತು ಮಹಾರಥಿ ಪ್ರದ್ಯುಮ್ನ. ಪುರುಷೋತ್ತಮ! ದುರ್ಧರ್ಷನಾದ ಭೀಮ ಮತ್ತು ಯುದ್ಧದಲ್ಲಿ ಹಿಂದೆಸರಿಯದ ವಿಜಯನು ಜೀವಿತರಿರುವವರೆಗೂ ನಾನು ಈ ದುಃಖವನ್ನು ಸಹಿಸಿಕೊಂಡಿರಬಲ್ಲೆ.”

05088089a ತತ ಆಶ್ವಾಸಯಾಮಾಸ ಪುತ್ರಾಧಿಭಿರಭಿಪ್ಲುತಾಂ।
05088089c ಪಿತೃಷ್ವಸಾರಂ ಶೋಚಂತೀಂ ಶೌರಿಃ ಪಾರ್ಥಸಖಃ ಪೃಥಾಂ।।

ಆಗ ಪಾರ್ಥಸಖ ಶೌರಿಯು ಪುತ್ರರ ಕಷ್ಟಗಳ ಕುರಿತು ಶೋಕಿಸುತ್ತಿದ್ದ ತನ್ನ ತಂದೆಯ ತಂಗಿಗೆ ಆಶ್ವಾಸನೆಯನ್ನಿತ್ತನು.

05088090a ಕಾ ನು ಸೀಮಂತಿನೀ ತ್ವಾದೃಗ್ಲೋಕೇಷ್ವಸ್ತಿ ಪಿತೃಷ್ವಸಃ।
05088090c ಶೂರಸ್ಯ ರಾಜ್ಞೋ ದುಹಿತಾ ಆಜಮೀಢಕುಲಂ ಗತಾ।।
05088091a ಮಹಾಕುಲೀನಾ ಭವತೀ ಹ್ರದಾದ್ಧ್ರದಮಿವಾಗತಾ।
05088091c ಈಶ್ವರೀ ಸರ್ವಕಲ್ಯಾಣೀ ಭರ್ತ್ರಾ ಪರಮಪೂಜಿತಾ।।
05088092a ವೀರಸೂರ್ವೀರಪತ್ನೀ ಚ ಸರ್ವೈಃ ಸಮುದಿತಾ ಗುಣೈಃ।
05088092c ಸುಖದುಃಖೇ ಮಹಾಪ್ರಾಜ್ಞೇ ತ್ವಾದೃಶೀ ಸೋಢುಮರ್ಹತಿ।।

“ಅತ್ತೇ! ನಿನ್ನಂತಹ ಸೀಮಂತಿನಿಯು ಲೋಕದಲ್ಲಿ ಯಾರಾದರೂ ಇದ್ದಾರೆಯೇ? ರಾಜ ಶೂರನ ಮಗಳು, ಅಜಮೀಢನ ಕುಲಕ್ಕೆ ಹೋದವಳು, ಮಹಾಕುಲೀನಳು, ಕೊಳದಿಂದ ಕೊಳಕ್ಕೆ ಹೋದ ಕಮಲದಂತವಳು, ಈಶ್ವರೀ, ಸರ್ವ ಕಲ್ಯಾಣೀ, ಪತಿಯಿಂದ ಪರಮಪೂಜಿತಳಾದ, ವೀರರ ತಾಯಿ ಮತ್ತು ವೀರನ ಪತ್ನಿ, ಸರ್ವ ಗುಣಗಳಿಂದ ಸುಮದಿತಳಾಗಿರುವ ನಿನ್ನಂಥಹ ಮಹಾಪ್ರಾಜ್ಞಳು ಮಾತ್ರ ಈ ರೀತಿಯ ಸುಖ-ದುಃಖಗಳನ್ನು ಸಹಿಸಿಕೊಳ್ಳಬಲ್ಲಳು.

05088093a ನಿದ್ರಾತಂದ್ರೀ ಕ್ರೋಧಹರ್ಷೌ ಕ್ಷುತ್ಪಿಪಾಸೇ ಹಿಮಾತಪೌ।
05088093c ಏತಾನಿ ಪಾರ್ಥಾ ನಿರ್ಜಿತ್ಯ ನಿತ್ಯಂ ವೀರಾಃ ಸುಖೇ ರತಾಃ।।

ನಿದ್ರೆ, ಆಲಸ್ಯ, ಕ್ರೋಧ, ಹರ್ಷ, ಹಸಿವು, ಬಾಯಾರಿಕೆ, ಛಳಿ, ಬಿಸಿಲು ಇವೆಲ್ಲವನ್ನೂ ಜಯಿಸಿ ವೀರ ಪಾರ್ಥರು ನಿತ್ಯಸುಖವನ್ನು ಬಯಸುತ್ತಿದ್ದಾರೆ.

05088094a ತ್ಯಕ್ತಗ್ರಾಮ್ಯಸುಖಾಃ ಪಾರ್ಥಾ ನಿತ್ಯಂ ವೀರಸುಖಪ್ರಿಯಾಃ।
05088094c ನ ತೇ ಸ್ವಲ್ಪೇನ ತುಷ್ಯೇಯುರ್ಮಹೋತ್ಸಾಹಾ ಮಹಾಬಲಾಃ।।

ಪಾರ್ಥರು ಗ್ರಾಮಸುಖವನ್ನು ತೊರೆದಿದ್ದಾರೆ. ಅವರು ಈಗ ವೀರರ, ಮಹೋತ್ಸಾಹರ ಮಹಾಬಲರ ಸುಖವನ್ನು ಬಯಸುತ್ತಿದ್ದಾರೆ. ಸ್ವಲ್ಪದರಲ್ಲಿಯೇ ಅವರು ತೃಪ್ತರಾಗುತ್ತಿಲ್ಲ.

05088095a ಅಂತಂ ಧೀರಾ ನಿಷೇವಂತೇ ಮಧ್ಯಂ ಗ್ರಾಮ್ಯಸುಖಪ್ರಿಯಾಃ।
05088095c ಉತ್ತಮಾಂಶ್ಚ ಪರಿಕ್ಲೇಶಾನ್ಭೋಗಾಂಶ್ಚಾತೀವ ಮಾನುಷಾನ್।।

ಧೀರರು ಅತ್ಯುನ್ನತವಾದುದನ್ನು ಬಯಸುತ್ತಾರೆ; ಗ್ರಾಮದವರು ಮಧ್ಯಮ ಸುಖವನ್ನು ಬಯಸುತ್ತಾರೆ. ಉತ್ತಮರು ಮಾನುಷ ಭೋಗಗಳಿಗಿಂತ ಅತೀವವಾದವುಗಳಿಗೆ ಕಷ್ಟಪಡುತ್ತಾರೆ.

05088096a ಅಂತೇಷು ರೇಮಿರೇ ಧೀರಾ ನ ತೇ ಮಧ್ಯೇಷು ರೇಮಿರೇ।
05088096c ಅಂತಪ್ರಾಪ್ತಿಂ ಸುಖಾಮಾಹುರ್ದುಃಖಮಂತರಮಂತಯೋಃ।।

ಧೀರರು ಕೊನೆಯದನ್ನು ಬಯಸುತ್ತಾರೆ, ಮಧ್ಯದಲ್ಲಿರುವುದನ್ನಲ್ಲ. ಕೊನೆಯದನ್ನು ಪಡೆಯುವುದು ಸುಖ ಮತ್ತು ಎರಡು ಕೊನೆಗಳ ಮಧ್ಯದಲ್ಲಿರುವುದನ್ನು ಪಡೆಯುವುದು ದುಃಖ ಎಂದು ಹೇಳುತ್ತಾರೆ.

05088097a ಅಭಿವಾದಯಂತಿ ಭವತೀಂ ಪಾಂಡವಾಃ ಸಹ ಕೃಷ್ಣಯಾ।
05088097c ಆತ್ಮಾನಂ ಚ ಕುಶಲಿನಂ ನಿವೇದ್ಯಾಹುರನಾಮಯಂ।।

ಕೃಷ್ಣೆಯೂ ಕೂಡಿ ಪಾಂಡವರು ನಿನಗೆ ಅಭಿವಾದಿಸುತ್ತಾರೆ. ಅವರು ಕುಶಲರಾಗಿದ್ದಾರೆಂದು ತಿಳಿಸಿ ನಿನ್ನ ಆರೋಗ್ಯದ ಕುರಿತು ಕೇಳುತ್ತಾರೆ.

05088098a ಅರೋಗಾನ್ಸರ್ವಸಿದ್ಧಾರ್ಥಾನ್ ಕ್ಷಿಪ್ರಂ ದ್ರಕ್ಷ್ಯಸಿ ಪಾಂಡವಾನ್।
05088098c ಈಶ್ವರಾನ್ಸರ್ವಲೋಕಸ್ಯ ಹತಾಮಿತ್ರಾಂ ಶ್ರಿಯಾ ವೃತಾನ್।।

ಅಮಿತ್ರರನ್ನು ನಾಶಪಡಿಸಿ, ಶ್ರೀಯಿಂದ ಆವೃತರಾಗಿ, ಸರ್ವಲೋಕದ ಒಡೆಯರಾದ ಪಾಂಡವರನ್ನು ಆರೋಗ್ಯದಿಂದಿದ್ದು ಸರ್ವವನ್ನೂ ಸಾಧಿಸಿದವರಾಗಿರುವುದನ್ನು ಶೀಘ್ರದಲ್ಲಿಯೇ ನೋಡುತ್ತೀಯೆ.”

05088099a ಏವಮಾಶ್ವಾಸಿತಾ ಕುಂತೀ ಪ್ರತ್ಯುವಾಚ ಜನಾರ್ದನಂ।
05088099c ಪುತ್ರಾಧಿಭಿರಭಿಧ್ವಸ್ತಾ ನಿಗೃಹ್ಯಾಬುದ್ಧಿಜಂ ತಮಃ।।

ಈ ರೀತಿ ಆಶ್ವಾಸನೆಯನ್ನು ಪಡೆದ ಕುಂತಿಯು, ಪುತ್ರರಿಗಾಗಿ ಇನ್ನೂ ದುಃಖಿಸುತ್ತಾ, ಬುದ್ಧಿಯಲ್ಲಿ ಹುಟ್ಟಿದ ಕತ್ತಲೆಯನ್ನು ನಿಯಂತ್ರಿಸಿಕೊಂಡು ಜನಾರ್ದನನಿಗೆ ತಿರುಗಿ ಹೇಳಿದಳು:

05088100a ಯದ್ಯತ್ತೇಷಾಂ ಮಹಾಬಾಹೋ ಪಥ್ಯಂ ಸ್ಯಾನ್ಮಧುಸೂದನ।
05088100c ಯಥಾ ಯಥಾ ತ್ವಂ ಮನ್ಯೇಥಾಃ ಕುರ್ಯಾಃ ಕೃಷ್ಣ ತಥಾ ತಥಾ।।
05088101a ಅವಿಲೋಪೇನ ಧರ್ಮಸ್ಯ ಅನಿಕೃತ್ಯಾ ಪರಂತಪ।

“ಮಧುಸೂದನ! ಕೃಷ್ಣ! ಮಹಾಬಾಹೋ! ಅವರಿಗೆ ಏನು ಒಳ್ಳೆಯದೆಂದು ನೀನು ತಿಳಿಯುತ್ತೀಯೋ ಅದನ್ನು ನಿನಗಿಷ್ಟವಾದ ಹಾಗೆ - ಆದರೆ ಪರಂತಪ! ಧರ್ಮಕ್ಕೆ ಲೋಪಬಾರದ ಹಾಗೆ ಮತ್ತು ಮೋಸವನ್ನು ಬಳಸದೇ - ಮಾಡು.

05088101c ಪ್ರಭಾವಜ್ಞಾಸ್ಮಿ ತೇ ಕೃಷ್ಣ ಸತ್ಯಸ್ಯಾಭಿಜನಸ್ಯ ಚ।।
05088102a ವ್ಯವಸ್ಥಾಯಾಂ ಚ ಮಿತ್ರೇಷು ಬುದ್ಧಿವಿಕ್ರಮಯೋಸ್ತಥಾ।

ಕೃಷ್ಣ! ನಿನ್ನ ಉನ್ನತ ಜನ್ಮವನ್ನೂ, ಸತ್ಯತೆಯನ್ನೂ, ನಿನ್ನ ಮಿತ್ರರಿಗೆ ಬುದ್ಧಿ ವಿಕ್ರಮಗಳನ್ನು ಉಪಯೋಗಿಸಿ ವ್ಯವಸ್ಥೆಮಾಡುವುದನ್ನೂ ನಾನು ತಿಳಿದುಕೊಂಡಿದ್ದೇನೆ.

05088102c ತ್ವಮೇವ ನಃ ಕುಲೇ ಧರ್ಮಸ್ತ್ವಂ ಸತ್ಯಂ ತ್ವಂ ತಪೋ ಮಹತ್।।
05088103a ತ್ವಂ ತ್ರಾತಾ ತ್ವಂ ಮಹದ್ಬ್ರಹ್ಮ ತ್ವಯಿ ಸರ್ವಂ ಪ್ರತಿಷ್ಠಿತಂ।
05088103c ಯಥೈವಾತ್ಥ ತಥೈವೈತತ್ತ್ವಯಿ ಸತ್ಯಂ ಭವಿಷ್ಯತಿ।।

ನಿನ್ನ ಕುಲದಲ್ಲಿ ನೀನೇ ಧರ್ಮ, ನೀನೇ ಸತ್ಯ, ನೀನೇ ಮಹಾತಪಸ್ಸು. ನೀನೇ ತ್ರಾತಾ, ನೀನೇ ಮಹಾಬ್ರಹ್ಮ, ಮತ್ತು ನಿನ್ನಲ್ಲಿಯೇ ಎಲ್ಲವೂ ನೆಲೆಸಿವೆ. ನೀನು ಹೇಳಿದಂತೆಯೇ ಆಗುತ್ತದೆ; ನಿನ್ನಲ್ಲಿಯೇ ಸತ್ಯವಿರುತ್ತದೆ.”

05088104a ತಾಮಾಮಂತ್ರ್ಯ ಚ ಗೋವಿಂದಃ ಕೃತ್ವಾ ಚಾಭಿಪ್ರದಕ್ಷಿಣಂ।
05088104c ಪ್ರಾತಿಷ್ಠತ ಮಹಾಬಾಹುರ್ದುರ್ಯೋಧನಗೃಹಾನ್ಪ್ರತಿ।।

ಗೋವಿಂದನು ಅವಳಿಗೆ ಪ್ರದಕ್ಷಿಣೆ ಮಾಡಿ ಬೀಳ್ಕೊಂಡನು. ಅನಂತರ ಮಹಾಬಾಹುವು ದುರ್ಯೋಧನನ ಮನೆಯ ಕಡೆ ನಡೆದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕೃಷ್ಣಕುಂತೀಸಂವಾದೇ ಅಷ್ಟಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕೃಷ್ಣಕುಂತೀಸಂವಾದ ಎನ್ನುವ ಎಂಭತ್ತೆಂಟನೆಯ ಅಧ್ಯಾಯವು.