087 ಧೃತರಾಷ್ಟ್ರಗೃಹಪ್ರವೇಶಪೂರ್ವಕಂ ಶ್ರೀಕೃಷ್ಣಸ್ಯ ವಿದುರಗೃಹಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 87

ಸಾರ

ಕೃಷ್ಣನು ಹಸ್ತಿನಾಪುರವನ್ನು ಪ್ರವೇಶಿಸಿ ಧೃತರಾಷ್ಟ್ರನನ್ನು ಮತ್ತು ಇತರ ರಾಜರನ್ನು ಭೇಟಿಯಾದುದು (1-21). ಅನಂತರ ವಿದುರನ ಮನೆಗೆ ನಡೆದುದು (22-26).

05087001 ವೈಶಂಪಾಯನ ಉವಾಚ।
05087001a ಪ್ರಾತರುತ್ಥಾಯ ಕೃಷ್ಣಸ್ತು ಕೃತವಾನ್ಸರ್ವಮಾಹ್ನಿಕಂ।
05087001c ಬ್ರಾಹ್ಮಣೈರಭ್ಯನುಜ್ಞಾತಃ ಪ್ರಯಯೌ ನಗರಂ ಪ್ರತಿ।।

ವೈಶಂಪಾಯನನು ಹೇಳಿದನು: “ಕೃಷ್ಣನಾದರೋ ಬೆಳಿಗ್ಗೆ ಎದ್ದು ಆಹ್ನೀಕವನ್ನೆಲ್ಲ ಪೂರೈಸಿ, ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ನಗರದ ಕಡೆ ಪ್ರಯಾಣಿಸಿದನು.

05087002a ತಂ ಪ್ರಯಾಂತಂ ಮಹಾಬಾಹುಮನುಜ್ಞಾಪ್ಯ ತತೋ ನೃಪ।
05087002c ಪರ್ಯವರ್ತಂತ ತೇ ಸರ್ವೇ ವೃಕಸ್ಥಲನಿವಾಸಿನಃ।।

ನೃಪ! ಹೊರಟ ಆ ಮಹಾಬಾಹುವುವನ್ನು ಬೀಳ್ಕೊಂಡು ವೃಕಸ್ಥಲ ನಿವಾಸಿಗಳೆಲ್ಲರೂ ಹಿಂದಿರುಗಿದರು.

05087003a ಧಾರ್ತರಾಷ್ಟ್ರಾಸ್ತಮಾಯಾಂತಂ ಪ್ರತ್ಯುಜ್ಜಗ್ಮುಃ ಸ್ವಲಂಕೃತಾಃ।
05087003c ದುರ್ಯೋಧನಮೃತೇ ಸರ್ವೇ ಭೀಷ್ಮದ್ರೋಣಕೃಪಾದಯಃ।।

ದುರ್ಯೋಧನನನ್ನು ಬಿಟ್ಟು ಎಲ್ಲ ಧಾರ್ತರಾಷ್ಟ್ರರೂ, ಭೀಷ್ಮ, ದ್ರೋಣ, ಕೃಪ ಮೊದಲಾದವರೂ ಸ್ವಲಂಕೃತರಾಗಿ ಅವನನ್ನು ಭೇಟಿಮಾಡಲು ಹೊರಟರು.

05087004a ಪೌರಾಶ್ಚ ಬಹುಲಾ ರಾಜನ್ ಹೃಷೀಕೇಶಂ ದಿದೃಕ್ಷವಃ।
05087004c ಯಾನೈರ್ಬಹುವಿಧೈರನ್ಯೇ ಪದ್ಭಿರೇವ ತಥಾಪರೇ।।

ರಾಜನ್! ಬಹಳ ಮಂದಿ ಪೌರರೂ ಕೂಡ ಬಹುವಿಧದ ಯಾನಗಳ ಮೇಲೆ ಮತ್ತು ಇತರರು ಕಾಲ್ನಡುಗೆಯಲ್ಲಿ, ಹೃಷೀಕೇಶನನ್ನು ನೋಡಲು ಹೊರಟರು.

05087005a ಸ ವೈ ಪಥಿ ಸಮಾಗಮ್ಯ ಭೀಷ್ಮೇಣಾಕ್ಲಿಷ್ಟಕರ್ಮಣಾ।
05087005c ದ್ರೋಣೇನ ಧಾರ್ತರಾಷ್ಟ್ರೈಶ್ಚ ತೈರ್ವೃತೋ ನಗರಂ ಯಯೌ।।

ದಾರಿಯಲ್ಲಿ ಅಕ್ಲಿಷ್ಟಕರ್ಮಿ ಭೀಷ್ಮ, ದ್ರೋಣ, ಮತ್ತು ಧಾರ್ತರಾಷ್ಟ್ರರನ್ನು ಭೇಟಿ ಮಾಡಿ ಅವರಿಂದ ಸುತ್ತುವರೆದು ನಗರಕ್ಕೆ ಬಂದನು.

05087006a ಕೃಷ್ಣಸಮ್ಮಾನನಾರ್ಥಂ ಚ ನಗರಂ ಸಮಲಂಕೃತಂ।
05087006c ಬಭೂವೂ ರಾಜಮಾರ್ಗಾಶ್ಚ ಬಹುರತ್ನಸಮಾಚಿತಾಃ।।

ಕೃಷ್ಣನ ಸಮ್ಮಾನಾರ್ಥವಾಗಿ ನಗರವು ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು. ರಾಜಮಾರ್ಗಗಳನ್ನು ಬಹುವಿಧದ ರತ್ನಗಳಿಂದ ಅಲಂಕರಿಸಲಾಗಿತ್ತು.

05087007a ನ ಸ್ಮ ಕಶ್ಚಿದ್ಗೃಹೇ ರಾಜಂಸ್ತದಾಸೀದ್ಭರತರ್ಷಭ।
05087007c ನ ಸ್ತ್ರೀ ನ ವೃದ್ಧೋ ನ ಶಿಶುರ್ವಾಸುದೇವದಿದೃಕ್ಷಯಾ।।

ರಾಜನ್! ಭರತರ್ಷಭ! ಆಗ ವಾಸುದೇವನನ್ನು ನೋಡುವ ಇಚ್ಛೆಯಿಂದ ಯಾವ ಸ್ತ್ರೀಯೂ, ವೃದ್ಧನೂ, ಶಿಶುವೂ, ಯಾವುದೇ ಮನೆಯ ಒಳಗೆ ಇದ್ದಿರಲಿಲ್ಲ.

05087008a ರಾಜಮಾರ್ಗೇ ನರಾ ನ ಸ್ಮ ಸಂಭವಂತ್ಯವನಿಂ ಗತಾಃ।
05087008c ತಥಾ ಹಿ ಸುಮಹದ್ರಾಜನ್ ಹೃಷೀಕೇಶಪ್ರವೇಶನೇ।।

ರಾಜನ್! ಹೃಷೀಕೇಶನು ಪ್ರವೇಶಿಸುವಾಗ ರಾಜ ಮಾರ್ಗಗಳಲ್ಲಿ ಬಹುಸಂಖ್ಯೆಗಳಲ್ಲಿ ನರರು ನಿಂತು ನೆಲವನ್ನು ನೋಡುತ್ತಾ ಅವನನ್ನು ಗೌರವಿಸಿದರು.

05087009a ಆವೃತಾನಿ ವರಸ್ತ್ರೀಭಿರ್ಗೃಹಾಣಿ ಸುಮಹಾಂತ್ಯಪಿ।
05087009c ಪ್ರಚಲಂತೀವ ಭಾರೇಣ ದೃಶ್ಯಂತೇ ಸ್ಮ ಮಹೀತಲೇ।।

ಎತ್ತರದ ಮನೆಗಳ ಗಚ್ಚುಗಳು ಬಹು ಸಂಖ್ಯೆಗಳ ವರಸ್ತ್ರೀಯರ ಭಾರದಿಂದ ಕುಸಿದು ಬೀಳುತ್ತವೆಯೋ ಎಂಬಂತೆ ತೋರುತ್ತಿದ್ದವು.

05087010a ತಥಾ ಚ ಗತಿಮಂತಸ್ತೇ ವಾಸುದೇವಸ್ಯ ವಾಜಿನಃ।
05087010c ಪ್ರನಷ್ಟಗತಯೋಽಭೂವನ್ರಾಜಮಾರ್ಗೇ ನರೈರ್ವೃತೇ।।

ವಾಸುದೇವನ ಕುದುರೆಗಳು ಅತಿ ವೇಗದಲ್ಲಿ ಚಲಿಸಬಹುದಾಗಿದ್ದರೂ, ಮನುಷ್ಯರಿಂದ ತುಂಬಿಹೋಗಿದ್ದ ರಾಜಮಾರ್ಗದಲ್ಲಿ ತಮ್ಮ ವೇಗವನ್ನು ಕಳೆದುಕೊಂಡವು.

05087011a ಸ ಗೃಹಂ ಧೃತರಾಷ್ಟ್ರಸ್ಯ ಪ್ರಾವಿಶಚ್ಚತ್ರುಕರ್ಶನಃ।
05087011c ಪಾಂಡುರಂ ಪುಂಡರೀಕಾಕ್ಷಃ ಪ್ರಾಸಾದೈರುಪಶೋಭಿತಂ।।

ಪುಂಡರೀಕಾಕ್ಷ ಶತ್ರುಕರ್ಶನನು ಉಪ ಪ್ರಾಸಾದಗಳಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಬೂದುಬಣ್ಣದ ಅರಮನೆಯನ್ನು ಪ್ರವೇಶಿಸಿದನು.

05087012a ತಿಸ್ರಃ ಕಕ್ಷ್ಯಾ ವ್ಯತಿಕ್ರಮ್ಯ ಕೇಶವೋ ರಾಜವೇಶ್ಮನಃ।
05087012c ವೈಚಿತ್ರವೀರ್ಯಂ ರಾಜಾನಮಭ್ಯಗಚ್ಚದರಿಂದಮಃ।।

ಆ ರಾಜಗೃಹದ ಮೂರು ಕಕ್ಷೆಗಳನ್ನು ದಾಟಿ ಅರಿಂದಮ ಕೇಶವನು ರಾಜ ವೈಚಿತ್ರವೀರ್ಯನ ಬಳಿ ಬಂದನು.

05087013a ಅಭ್ಯಾಗಚ್ಚತಿ ದಾಶಾರ್ಹೇ ಪ್ರಜ್ಞಾಚಕ್ಷುರ್ನರೇಶ್ವರಃ।
05087013c ಸಹೈವ ದ್ರೋಣಭೀಷ್ಮಾಭ್ಯಾಮುದತಿಷ್ಠನ್ಮಹಾಯಶಾಃ।।

ದಾಶಾರ್ಹನು ಆಗಮಿಸುತ್ತಿದ್ದಂತೆ ಪ್ರಜ್ಞಾಚಕ್ಷು ನರೇಶ್ವರನು ಮಹಾಯಶರಾದ ದ್ರೋಣ-ಭೀಷ್ಮಾದಿಗಳೊಂದಿಗೆ ಮೇಲೆದ್ದು ನಿಂತನು.

05087014a ಕೃಪಶ್ಚ ಸೋಮದತ್ತಶ್ಚ ಮಹಾರಾಜಶ್ಚ ಬಾಹ್ಲಿಕಃ।
05087014c ಆಸನೇಭ್ಯೋಽಚಲನ್ಸರ್ವೇ ಪೂಜಯಂತೋ ಜನಾರ್ದನಂ।।

ಕೃಪ, ಸೋಮದತ್ತ, ಮತ್ತು ಮಹಾರಾಜ ಬಾಹ್ಲಿಕ ಎಲ್ಲರೂ ಜನಾರ್ದನನನ್ನು ಗೌರವಿಸುತ್ತಾ ಆಸನಗಳಿಂದ ಮೇಲೆದ್ದು ನಿಂತರು.

05087015a ತತೋ ರಾಜಾನಮಾಸಾದ್ಯ ಧೃತರಾಷ್ಟ್ರಂ ಯಶಸ್ವಿನಂ।
05087015c ಸ ಭೀಷ್ಮಂ ಪೂಜಯಾಮಾಸ ವಾರ್ಷ್ಣೇಯೋ ವಾಗ್ಭಿರಂಜಸಾ।।

ಆಗ ವಾರ್ಷ್ಣೇಯನು ಯಶಸ್ವಿ ರಾಜ ಧೃತರಾಷ್ಟ್ರನನ್ನೂ ಭೀಷ್ಮನನ್ನೂ ಸಮೀಪಿಸಿ ಪೂಜಿಸಿದನು.

05087016a ತೇಷು ಧರ್ಮಾನುಪೂರ್ವೀಂ ತಾಂ ಪ್ರಯುಜ್ಯ ಮಧುಸೂದನಃ।
05087016c ಯಥಾವಯಃ ಸಮೀಯಾಯ ರಾಜಭಿಸ್ತತ್ರ ಮಾಧವಃ।।

ಮಧುಸೂದನ ಮಾಧವನು ಧರ್ಮಾನುಸಾರವಾಗಿ, ವಯಸ್ಸಿಗೆ ತಕ್ಕಂತೆ ಅಲ್ಲಿರುವ ರಾಜರನ್ನು ಭೇಟಿಮಾಡಿದನು.

05087017a ಅಥ ದ್ರೋಣಂ ಸಪುತ್ರಂ ಸ ಬಾಹ್ಲೀಕಂ ಚ ಯಶಸ್ವಿನಂ।
05087017c ಕೃಪಂ ಚ ಸೋಮದತ್ತಂ ಚ ಸಮೀಯಾಯ ಜನಾರ್ದನಃ।।

ಆಗ ಪುತ್ರನೊಂದಿಗೆ ದ್ರೋಣ, ಯಶಸ್ವಿ ಬಾಹ್ಲೀಕ, ಕೃಪ ಮತ್ತು ಸೋಮದತ್ತರನ್ನು ಭೇಟಿಮಾಡಿದನು.

05087018a ತತ್ರಾಸೀದೂರ್ಜಿತಂ ಮೃಷ್ಟಂ ಕಾಂಚನಂ ಮಹದಾಸನಂ।
05087018c ಶಾಸನಾದ್ಧೃತರಾಷ್ಟ್ರಸ್ಯ ತತ್ರೋಪಾವಿಶದಚ್ಯುತಃ।।

ಅಲ್ಲಿದ್ದ ದೊಡ್ಡದಾದ ಗಟ್ಟಿಯಾದ ಕಾಂಚನದಿಂದ ಮಾಡಲ್ಪಟ್ಟ ಆಸನದಲ್ಲಿ ಧೃತರಾಷ್ಟ್ರನ ಶಾಸನದಂತೆ ಅಚ್ಯುತನು ಕುಳಿತುಕೊಂಡನು.

05087019a ಅಥ ಗಾಂ ಮಧುಪರ್ಕಂ ಚಾಪ್ಯುದಕಂ ಚ ಜನಾರ್ದನೇ।
05087019c ಉಪಜಹ್ರುರ್ಯಥಾನ್ಯಾಯಂ ಧೃತರಾಷ್ಟ್ರಪುರೋಹಿತಾಃ।।

ಆಗ ಧೃತರಾಷ್ಟ್ರನ ಪುರೋಹಿತರು ಜನಾರ್ದನನಿಗೆ ಯಥಾನ್ಯಾಯವಾಗಿ ಗೋವು, ಮಧುಪರ್ಕ ಮತ್ತು ನೀರನ್ನು ನೀಡಿದರು.

05087020a ಕೃತಾತಿಥ್ಯಸ್ತು ಗೋವಿಂದಃ ಸರ್ವಾನ್ಪರಿಹಸನ್ಕುರೂನ್।
05087020c ಆಸ್ತೇ ಸಂಬಂಧಕಂ ಕುರ್ವನ್ಕುರುಭಿಃ ಪರಿವಾರಿತಃ।।

ಆತಿಥ್ಯವಾದ ನಂತರ ಗೋವಿಂದನು ಎಲ್ಲ ಕುರುಗಳಿಂದ ಸುತ್ತುವರೆಯಲ್ಪಟ್ಟು ನಗುತ್ತಾ ಎಲ್ಲರೊಡನೆ ವ್ಯವಹರಿಸಿದನು.

05087021a ಸೋಽರ್ಚಿತೋ ಧೃತರಾಷ್ಟ್ರೇಣ ಪೂಜಿತಶ್ಚ ಮಹಾಯಶಾಃ।
05087021c ರಾಜಾನಂ ಸಮನುಜ್ಞಾಪ್ಯ ನಿರಾಕ್ರಾಮದರಿಂದಮಃ।।

ಧೃತರಾಷ್ಟ್ರನಿಂದ ಅರ್ಚಿತನಾಗಿ, ಮಹಾಯಶರಿಂದ ಪೂಜಿತನಾಗಿ ಆ ಅರಿಂದಮನು ರಾಜನ ಅನುಮತಿಯನ್ನು ಪಡೆದು ಬೀಳ್ಕೊಂಡನು.

05087022a ತೈಃ ಸಮೇತ್ಯ ಯಥಾನ್ಯಾಯಂ ಕುರುಭಿಃ ಕುರುಸಂಸದಿ।
05087022c ವಿದುರಾವಸಥಂ ರಮ್ಯಮುಪಾತಿಷ್ಠತ ಮಾಧವಃ।।

ಯಥಾನ್ಯಾಯವಾಗಿ ಕುರುಸಂಸದಿಯಲ್ಲಿ ಕುರುಗಳೊಂದಿಗೆ ಕಲೆತು ಮಾಧವನು ವಿದುರನ ರಮ್ಯ ವಸತಿಯಕಡೆ ನಡೆದನು.

05087023a ವಿದುರಃ ಸರ್ವಕಲ್ಯಾಣೈರಭಿಗಮ್ಯ ಜನಾರ್ದನಂ।
05087023c ಅರ್ಚಯಾಮಾಸ ದಾಶಾರ್ಹಂ ಸರ್ವಕಾಮೈರುಪಸ್ಥಿತಂ।।

ವಿದುರನು ಸರ್ವ ಕಲ್ಯಾಣಗಳಿಂದ ಜನಾರ್ದನನನ್ನು ಸ್ವಾಗತಿಸಿ ದಾಶಾರ್ಹನಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಅರ್ಚಿಸಿದನು.

05087024a ಕೃತಾತಿಥ್ಯಂ ತು ಗೋವಿಂದಂ ವಿದುರಃ ಸರ್ವಧರ್ಮವಿತ್।
05087024c ಕುಶಲಂ ಪಾಂಡುಪುತ್ರಾಣಾಮಪೃಚ್ಚನ್ಮಧುಸೂದನಂ।।

ಗೋವಿಂದನಿಗೆ ಆತಿಥ್ಯವನ್ನು ಪೂರೈಸಿ ಸರ್ವಧರ್ಮವಿದು ವಿದುರನು ಮಧುಸೂದನನಿಗೆ ಪಾಂಡುಪುತ್ರರ ಕುಶಲದ ಕುರಿತು ಪ್ರಶ್ನಿಸಿದನು.

05087025a ಪ್ರೀಯಮಾಣಸ್ಯ ಸುಹೃದೋ ವಿದುಷೋ ಬುದ್ಧಿಸತ್ತಮಃ।
05087025c ಧರ್ಮನಿತ್ಯಸ್ಯ ಚ ತದಾ ಗತದೋಷಸ್ಯ ಧೀಮತಃ।।
05087026a ತಸ್ಯ ಸರ್ವಂ ಸವಿಸ್ತಾರಂ ಪಾಂಡವಾನಾಂ ವಿಚೇಷ್ಟಿತಂ।
05087026c ಕ್ಷತ್ತುರಾಚಷ್ಟ ದಾಶಾರ್ಹಃ ಸರ್ವಪ್ರತ್ಯಕ್ಷದರ್ಶಿವಾನ್।।

ಆಗ ತನ್ನ ಪ್ರೀತಿಯ ಗೆಳೆಯ, ವಿದುಷ, ಬುದ್ಧಿಸತ್ತಮ, ಧರ್ಮನಿತ್ಯ, ದೋಷಗಳಿಲ್ಲದ ಧೀಮಂತ ಕ್ಷತ್ತನಿಗೆ ಎಲ್ಲವನ್ನು ಪ್ರತ್ಯಕ್ಷವಾಗಿ ಕಂಡಿರುವ ದಾಶಾರ್ಹನು ಪಾಂಡವರು ನಡೆಸಿದುದನ್ನು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಧೃತರಾಷ್ಟ್ರಗೃಹಪ್ರವೇಶಪೂರ್ವಕಂ ಶ್ರೀಕೃಷ್ಣಸ್ಯ ವಿದುರಗೃಹಪ್ರವೇಶೇ ಸಪ್ತಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಧೃತರಾಷ್ಟ್ರನ ಗೃಹಪ್ರವೇಶದ ಪೂರ್ವಕವಾಗಿ ಶ್ರೀಕೃಷ್ಣನು ವಿದುರನ ಗೃಹಪ್ರವೇಶಿಸಿದುದು ಎನ್ನುವ ಎಂಭತ್ತೇಳನೆಯ ಅಧ್ಯಾಯವು.