085 ವಿದುರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 85

ಸಾರ

“ಅವನು ಏನನ್ನು ಬಯಸಿ ಬರುತ್ತಿದ್ದಾನೋ ಅದನ್ನೇ ಅವನಿಗೆ ಕೊಡು” ಎಂದು ಹೇಳಿ ವಿದುರನು ಧೃತರಾಷ್ಟ್ರನ ಕಪಟತನವನ್ನು ಅವನಿಗೇ ತೋರಿಸಿಕೊಟ್ಟಿದುದು (1-17).

05085001 ವಿದುರ ಉವಾಚ।
05085001a ರಾಜನ್ಬಹುಮತಶ್ಚಾಸಿ ತ್ರೈಲೋಕ್ಯಸ್ಯಾಪಿ ಸತ್ತಮಃ।
05085001c ಸಂಭಾವಿತಶ್ಚ ಲೋಕಸ್ಯ ಸಮ್ಮತಶ್ಚಾಸಿ ಭಾರತ।।

ವಿದುರನು ಹೇಳಿದನು: “ರಾಜನ್! ಭಾರತ! ನೀನು ಸತ್ತಮನೆಂದು ಮೂರು ಲೋಕಗಳಲ್ಲಿಯೂ ಬಹುಮತವಿದೆ. ಲೋಕದಲ್ಲಿ ನೀನು ಸಂಭಾವಿತನೆಂದೂ ಸಮ್ಮತಿಯಿದೆ.

05085002a ಯತ್ತ್ವಮೇವಂಗತೇ ಬ್ರೂಯಾಃ ಪಶ್ಚಿಮೇ ವಯಸಿ ಸ್ಥಿತಃ।
05085002c ಶಾಸ್ತ್ರಾದ್ವಾ ಸುಪ್ರತರ್ಕಾದ್ವಾ ಸುಸ್ಥಿರಃ ಸ್ಥವಿರೋ ಹ್ಯಸಿ।।

ಶಾಸ್ತ್ರವನ್ನು ಆಧರಿಸಿ ಅಥವಾ ಉತ್ತಮ ತರ್ಕವನ್ನು ಆಧರಿಸಿ ನೀನು ಏನೇ ಹೇಳಿದರೂ, ಕೊನೆಯ ವಯಸ್ಸಿನಲ್ಲಿರುವ ನೀನು ವೃದ್ಧನಾಗಿರುವುದರಿಂದ ಅದು ಸುಸ್ಥಿರವೆನಿಸಿಕೊಳ್ಳುತ್ತದೆ.

05085003a ಲೇಖಾಶ್ಮನೀವ ಭಾಃ ಸೂರ್ಯೇ ಮಹೋರ್ಮಿರಿವ ಸಾಗರೇ।
05085003c ಧರ್ಮಸ್ತ್ವಯಿ ಮಹಾನ್ರಾಜನ್ನಿತಿ ವ್ಯವಸಿತಾಃ ಪ್ರಜಾಃ।।

ರಾಜನ್! ಕಲ್ಲುಗಳ ಮೇಲೆ ಗೆರೆಗಳಿರುವಂತೆ, ಸೂರ್ಯನಲ್ಲಿ ಬೆಳಕಿರುವಂತೆ ಮತ್ತು ಸಾಗರದಲ್ಲಿ ಅಲೆಗಳಿರುವಂತೆ ನಿನ್ನಲ್ಲಿ ಮಹಾ ಧರ್ಮವಿದೆ ಎಂದು ಪ್ರಜೆಗಳು ತಿಳಿದುಕೊಂಡಿದ್ದಾರೆ.

05085004a ಸದೈವ ಭಾವಿತೋ ಲೋಕೋ ಗುಣೌಘೈಸ್ತವ ಪಾರ್ಥಿವ।
05085004c ಗುಣಾನಾಂ ರಕ್ಷಣೇ ನಿತ್ಯಂ ಪ್ರಯತಸ್ವ ಸಬಾಂಧವಃ।।

ಪಾರ್ಥಿವ! ನಿನ್ನಲ್ಲಿರುವ ಉತ್ತಮ ಗುಣಗಳಿಂದ ಲೋಕವು ಸದಾ ನಿನ್ನನ್ನು ಗೌರವಿಸುತ್ತದೆ. ಬಾಂಧವರೊಂದಿಗೆ ಆ ಗುಣಗಳನ್ನು ಕಾಪಾಡಿಕೊಳ್ಳಲು ನಿತ್ಯವೂ ಪ್ರಯತ್ನಿಸು.

05085005a ಆರ್ಜವಂ ಪ್ರತಿಪದ್ಯಸ್ವ ಮಾ ಬಾಲ್ಯಾದ್ಬಹುಧಾ ನಶೀಃ।
05085005c ರಾಜ್ಯಂ ಪುತ್ರಾಂಶ್ಚ ಪೌತ್ರಾಂಶ್ಚ ಸುಹೃದಶ್ಚಾಪಿ ಸುಪ್ರಿಯಾನ್।।

ಬಾಲ್ಯತನದಿಂದ ಬಹುರೀತಿಯಲ್ಲಿ ನಿನ್ನ ರಾಜ್ಯ, ಮಕ್ಕಳು, ಮೊಮ್ಮೊಕ್ಕಳೂ, ಸುಹೃದಯರು ಮತ್ತು ಪ್ರಿಯರು ನಾಶವಾಗದಂತೆ ಆರ್ಜವವನ್ನು ನಿನ್ನದಾಗಿಸಿಕೋ!

05085006a ಯತ್ತ್ವಂ ದಿತ್ಸಸಿ ಕೃಷ್ಣಾಯ ರಾಜನ್ನತಿಥಯೇ ಬಹು।
05085006c ಏತದನ್ಯಚ್ಚ ದಾಶಾರ್ಹಃ ಪೃಥಿವೀಮಪಿ ಚಾರ್ಹತಿ।।

ರಾಜನ್! ಕೃಷ್ಣನಿಗೆ ನೀನು ಆತಿಥ್ಯದಿಂದ ಏನೆಲ್ಲ ಕೊಡಲು ಬಯಸುವೆಯೋ ಅದಕ್ಕಿಂತಲೂ ಹೆಚ್ಚಿನದಕ್ಕೆ, ಇಡೀ ಭೂಮಿಗೇ, ಆ ದಾಶಾರ್ಹನು ಅರ್ಹ!

05085007a ನ ತು ತ್ವಂ ಧರ್ಮಮುದ್ದಿಶ್ಯ ತಸ್ಯ ವಾ ಪ್ರಿಯಕಾರಣಾತ್।
05085007c ಏತದಿಚ್ಚಸಿ ಕೃಷ್ಣಾಯ ಸತ್ಯೇನಾತ್ಮಾನಮಾಲಭೇ।।

ಆದರೆ ನೀನು ಅವೆಲ್ಲವನ್ನು ಧರ್ಮದ ಉದ್ದೇಶದಿಂದ ಅಥವ ಕೃಷ್ಣನ ಮೇಲೆ ನಿನಗಿರುವ ಪ್ರೀತಿಯ ಕಾರಣದಿಂದ ಕೊಡಲು ಬಯಸುತ್ತಿಲ್ಲ. ನನ್ನ ಆತ್ಮದ ಸಾಕ್ಷಿಯಾಗಿ ಇದು ಸತ್ಯವೆಂದು ಹೇಳುತ್ತೇನೆ.

05085008a ಮಾಯೈಷಾತತ್ತ್ವಮೇವೈತಚ್ಚದ್ಮೈತದ್ಭೂರಿದಕ್ಷಿಣ।
05085008c ಜಾನಾಮಿ ತೇ ಮತಂ ರಾಜನ್ಗೂಢಂ ಬಾಹ್ಯೇನ ಕರ್ಮಣಾ।।

ಭೂರಿದಕ್ಷಿಣ! ಇದೊಂದು ಮೋಸ, ಸುಳ್ಳು, ಮೇಲ್ನೋಟ! ರಾಜನ್! ನೀನು ಹೊರಗಡೆಯವರ ತೋರಿಕೆಗೆ ಮಾಡುವ ಈ ಕೆಲಸದ ಹಿಂದೆ ಅಡಗಿರುವ ಯೋಚನೆಯನ್ನು ನಾನು ತಿಳಿದಿದ್ದೇನೆ.

05085009a ಪಂಚ ಪಂಚೈವ ಲಿಪ್ಸಂತಿ ಗ್ರಾಮಕಾನ್ಪಾಂಡವಾ ನೃಪ।
05085009c ನ ಚ ದಿತ್ಸಸಿ ತೇಭ್ಯಸ್ತಾಂಸ್ತಚ್ಚಮಂ ಕಃ ಕರಿಷ್ಯತಿ।।

ನೃಪ! ಪಾಂಡವರು ಐದೇ ಐದು ಗ್ರಾಮಗಳನ್ನು ಕೇಳುತ್ತಿದ್ದಾರೆ. ಅದನ್ನು ಕೊಡಲೂ ನೀನು ಬಯಸುತ್ತಿಲ್ಲ. ಹೀಗಿರುವಾಗ ಯಾರುತಾನೇ ಶಾಂತಿಯನ್ನುಂಟುಮಾಡುತ್ತಾರೆ?

05085010a ಅರ್ಥೇನ ತು ಮಹಾಬಾಹುಂ ವಾರ್ಷ್ಣೇಯಂ ತ್ವಂ ಜಿಹೀರ್ಷಸಿ।
05085010c ಅನೇನೈವಾಭ್ಯುಪಾಯೇನ ಪಾಂಡವೇಭ್ಯೋ ಬಿಭಿತ್ಸಸಿ।।

ಸಂಪತ್ತಿನಿಂದ ಮಹಾಬಾಹು ವಾರ್ಷ್ಣೇಯನನ್ನು ನೀನು ಗೆಲ್ಲಲು ಬಯಸುತ್ತಿದ್ದೀಯೆ. ಈ ಉಪಾಯಗಳಿಂದ ಅವನನ್ನು ಪಾಂಡವರಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದೀಯೆ.

05085011a ನ ಚ ವಿತ್ತೇನ ಶಕ್ಯೋಽಸೌ ನೋದ್ಯಮೇನ ನ ಗರ್ಹಯಾ।
05085011c ಅನ್ಯೋ ಧನಂಜಯಾತ್ಕರ್ತುಮೇತತ್ತತ್ತ್ವಂ ಬ್ರವೀಮಿ ತೇ।।

ನಾನು ನಿನಗೆ ಹೇಳುತ್ತಿದ್ದೇನೆ. ವಿತ್ತದಿಂದಾಗಲೀ, ಪ್ರಯತ್ನದಿಂದಾಗಲೀ, ಬೈಯುವುದರಿಂದಾಗಲೀ ಅಥವಾ ಬೇರೆ ಯಾವುದರಿಂದಾಗಲೀ ಅವನನ್ನು ಧನಂಜಯನಿಂದ ಬೇರ್ಪಡಿಸಲು ಸಾಧ್ಯವಿಲ್ಲ.

05085012a ವೇದ ಕೃಷ್ಣಸ್ಯ ಮಾಹಾತ್ಮ್ಯಂ ವೇದಾಸ್ಯ ದೃಢಭಕ್ತಿತಾಂ।
05085012c ಅತ್ಯಾಜ್ಯಮಸ್ಯ ಜಾನಾಮಿ ಪ್ರಾಣೈಸ್ತುಲ್ಯಂ ಧನಂಜಯಂ।।

ಕೃಷ್ಣನ ಮಹಾತ್ಮೆಯನ್ನು ತಿಳಿದಿದ್ದೇನೆ. ಅವನ ದೃಢಭಕ್ತಿಯನ್ನು ತಿಳಿದಿದ್ದೇನೆ. ತನ್ನ ಪ್ರಾಣಕ್ಕೆ ಸಮನಾದ ಧನಂಜಯನನ್ನು ಅವನು ತ್ಯಜಿಸುವುದಿಲ್ಲ ಎನ್ನುವುದನ್ನೂ ತಿಳಿದಿದ್ದೇನೆ.

05085013a ಅನ್ಯತ್ಕುಂಭಾದಪಾಂ ಪೂರ್ಣಾದನ್ಯತ್ಪಾದಾವಸೇಚನಾತ್।
05085013c ಅನ್ಯತ್ಕುಶಲಸಂಪ್ರಶ್ನಾನ್ನೈಷಿಷ್ಯತಿ ಜನಾರ್ದನಃ।।

ಪಾದಗಳನ್ನು ತೊಳೆಯಲು ಸಾಕಾಗುವಷ್ಟು ಒಂದು ಬಿಂದಿಗೆ ನೀರು ಮತ್ತು ಕುಶಲದ ಕುರಿತಾದ ಪ್ರಶ್ನೆ ಇವುಗಳನ್ನು ಮಾತ್ರ ನಿನ್ನಿಂದ ಜನಾರ್ದನನು ಬಯಸುತ್ತಾನೆ.

05085014a ಯತ್ತ್ವಸ್ಯ ಪ್ರಿಯಮಾತಿಥ್ಯಂ ಮಾನಾರ್ಹಸ್ಯ ಮಹಾತ್ಮನಃ।
05085014c ತದಸ್ಮೈ ಕ್ರಿಯತಾಂ ರಾಜನ್ಮಾನಾರ್ಹೋ ಹಿ ಜನಾರ್ದನಃ।।

ಆದುದರಿಂದ ಮಾನಾರ್ಹನಾದ ಆ ಮಹಾತ್ಮನಿಗೆ ಪ್ರೀತಿಯ ಆತಿಥ್ಯವನ್ನು ನೀಡಲು ಪ್ರಯತ್ನಿಸು. ಅದನ್ನೇ ಮಾಡು ರಾಜನ್! ಏಕೆಂದರೆ ಜನಾರ್ದನನು ಮಾನಾರ್ಹ.

05085015a ಆಶಂಸಮಾನಃ ಕಲ್ಯಾಣಂ ಕುರೂನಭ್ಯೇತಿ ಕೇಶವಃ।
05085015c ಯೇನೈವ ರಾಜನ್ನರ್ಥೇನ ತದೇವಾಸ್ಮಾ ಉಪಾಕುರು।।

ಕೇಶವನು ಒಂದೇ ಒಂದು ಒಳ್ಳೆಯದನ್ನು ಬಯಸಿ ಕುರುಗಳಲ್ಲಿಗೆ ಬರುತ್ತಿದ್ದಾನೆ. ರಾಜನ್! ಅವನು ಏನನ್ನು ಬಯಸಿ ಬರುತ್ತಿದ್ದಾನೋ ಅದನ್ನೇ ಅವನಿಗೆ ಕೊಡು.

05085016a ಶಮಮಿಚ್ಚತಿ ದಾಶಾರ್ಹಸ್ತವ ದುರ್ಯೋಧನಸ್ಯ ಚ।
05085016c ಪಾಂಡವಾನಾಂ ಚ ರಾಜೇಂದ್ರ ತದಸ್ಯ ವಚನಂ ಕುರು।।

ರಾಜೇಂದ್ರ! ದಾಶಾರ್ಹನು ನಿನ್ನ ದುರ್ಯೋಧನ ಮತ್ತು ಪಾಂಡವರಲ್ಲಿ ಶಾಂತಿಯನ್ನು ಇಚ್ಛಿಸುತ್ತಾನೆ. ಅವನ ಮಾತಿನಂತೆ ಮಾಡು.

05085017a ಪಿತಾಸಿ ರಾಜನ್ಪುತ್ರಾಸ್ತೇ ವೃದ್ಧಸ್ತ್ವಂ ಶಿಶವಃ ಪರೇ।
05085017c ವರ್ತಸ್ವ ಪಿತೃವತ್ತೇಷು ವರ್ತಂತೇ ತೇ ಹಿ ಪುತ್ರವತ್।।

ರಾಜನ್! ನೀನು ಅವರ ತಂದೆ, ಅವರು ನಿನ್ನ ಮಕ್ಕಳು. ನೀನು ವೃದ್ಧ. ಇತರರು ಸಣ್ಣವರು. ಅವರೊಡನೆ ತಂದೆಯಂತೆ ನಡೆದುಕೋ. ಏಕೆಂದರೆ ಅವರು ನಿನ್ನೊಡನೆ ಮಕ್ಕಳಂತೆ ನಡೆದುಕೊಳ್ಳುತ್ತಿದ್ದಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುರವಾಕ್ಯೇ ಪಂಚಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುರವಾಕ್ಯ ಎನ್ನುವ ಎಂಭತ್ತೈದನೆಯ ಅಧ್ಯಾಯವು.