084 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 84

ಸಾರ

ಕೃಷ್ಣನಿಗೆ ಏನೆಲ್ಲ ಉಡುಗೊರೆಗಳನ್ನಿತ್ತು ಸತ್ಕರಿಸುತ್ತೇನೆಂದು ಧೃತರಾಷ್ಟ್ರನು ವಿದುರನಿಗೆ ಹೇಳಿಕೊಳ್ಳುವುದು (1-21).

05084001 ಧೃತರಾಷ್ಟ್ರ ಉವಾಚ।
05084001a ಉಪಪ್ಲವ್ಯಾದಿಹ ಕ್ಷತ್ತರುಪಯಾತೋ ಜನಾರ್ದನಃ।
05084001c ವೃಕಸ್ಥಲೇ ನಿವಸತಿ ಸ ಚ ಪ್ರಾತರಿಹೇಷ್ಯತಿ।।

ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಉಪಪ್ಲವದಿಂದ ಇಲ್ಲಿಗೆ ಜನಾರ್ದನನು ಬರುತ್ತಿದ್ದಾನೆ. ವೃಕಸ್ಥಲದಲ್ಲಿ ರಾತ್ರಿಯನ್ನು ಕಳೆಯುತ್ತಿದ್ದಾನೆ ಮತ್ತು ಅವನು ನಾಳೆ ಬೆಳಿಗ್ಗೆ ಇಲ್ಲಿಗೆ ಬರುತ್ತಾನೆ.

05084002a ಆಹುಕಾನಾಮಧಿಪತಿಃ ಪುರೋಗಃ ಸರ್ವಸಾತ್ವತಾಂ।
05084002c ಮಹಾಮನಾ ಮಹಾವೀರ್ಯೋ ಮಹಾಮಾತ್ರೋ ಜನಾರ್ದನಃ।।
05084003a ಸ್ಫೀತಸ್ಯ ವೃಷ್ಣಿವಂಶಸ್ಯ ಭರ್ತಾ ಗೋಪ್ತಾ ಚ ಮಾಧವಃ।
05084003c ತ್ರಯಾಣಾಮಪಿ ಲೋಕಾನಾಂ ಭಗವಾನ್ಪ್ರಪಿತಾಮಹಃ।।

ಆಹುಕರ ಅಧಿಪತಿ, ಸರ್ವಸಾತ್ವತರ ನಾಯಕ, ಮಹಾಮನಸ್ವಿ, ಮಹಾವೀರ, ಮಹಾಮಾತ್ರ ಜನಾರ್ದನ ಮಾಧವನು ವೃಷ್ಣೀ ವಂಶದ ಒಡೆಯ ಮತ್ತು ರಕ್ಷಕ. ಅವನು ಮೂರೂ ಲೋಕಗಳ ಭಗವಾನ್ ಪಿತಾಮಹ.

05084004a ವೃಷ್ಣ್ಯಂಧಕಾಃ ಸುಮನಸೋ ಯಸ್ಯ ಪ್ರಜ್ಞಾಮುಪಾಸತೇ।
05084004c ಆದಿತ್ಯಾ ವಸವೋ ರುದ್ರಾ ಯಥಾ ಬುದ್ಧಿಂ ಬೃಹಸ್ಪತೇಃ।।

ಹೇಗೆ ಆದಿತ್ಯರು, ವಸುಗಳು ಮತ್ತು ರುದ್ರರು ಬೃಹಸ್ಪತಿಯ ಬುದ್ಧಿಯನ್ನು ಹೇಗೋ ಹಾಗೆ ವೃಷ್ಣಿ ಅಂಧಕರು ಈ ಸುಮನಸನ ಬುದ್ಧಿಯನ್ನು ಗೌರವಿಸುತ್ತಾರೆ.

05084005a ತಸ್ಮೈ ಪೂಜಾಂ ಪ್ರಯೋಕ್ಷ್ಯಾಮಿ ದಾಶಾರ್ಹಾಯ ಮಹಾತ್ಮನೇ।
05084005c ಪ್ರತ್ಯಕ್ಷಂ ತವ ಧರ್ಮಜ್ಞಾ ತನ್ಮೇ ಕಥಯತಃ ಶೃಣು।।

ಆ ಮಹಾತ್ಮ ದಾಶಾರ್ಹನಿಗೆ ಪೂಜೆಯನ್ನು ಸಲ್ಲಿಸುತ್ತೇನೆ. ಹೇಗೆ ಎಂದು ನಾನು ಹೇಳುತ್ತೇನೆ. ಧರ್ಮಜ್ಞನಾದ ನೀನು ಪ್ರತ್ಯಕ್ಷವಾಗಿ ಕೇಳು.

05084006a ಏಕವರ್ಣೈಃ ಸುಕೃಷ್ಣಾಂಗೈರ್ಬಾಹ್ಲಿಜಾತೈರ್ಹಯೋತ್ತಮೈಃ।
05084006c ಚತುರ್ಯುಕ್ತಾನ್ರಥಾಂಸ್ತಸ್ಮೈ ರೌಕ್ಮಾನ್ದಾಸ್ಯಾಮಿ ಷೋಡಶ।।

ನಾನು ಅವನಿಗೆ ಪ್ರತಿಯೊಂದೂ ನಾಲ್ಕು ಬಾಹ್ಲಿಯಲ್ಲಿ ಹುಟ್ಟಿದ, ಕಪ್ಪುಬಣ್ಣದ ಒಂದೇ ತರಹದ ಉತ್ತಮ ಕುದುರೆಗಳನ್ನು ಕಟ್ಟಲ್ಪಟ್ಟ ಹದಿನಾರು ರಥಗಳನ್ನು ಕೊಡುತ್ತೇನೆ.

05084007a ನಿತ್ಯಪ್ರಭಿನ್ನಾನ್ಮಾತಂಗಾನೀಷಾದಂತಾನ್ಪ್ರಹಾರಿಣಃ।
05084007c ಅಷ್ಟಾನುಚರಮೇಕೈಕಮಷ್ಟೌ ದಾಸ್ಯಾಮಿ ಕೇಶವೇ।।

ಈಟಿಯಂಥ ಕೋರೆದಾಡೆಗಳುಳ್ಳ, ನಿತ್ಯವೂ ಮದದಿಂದ ಪ್ರಹಾರಮಾಡುವ, ಒಂದೊಂದಕ್ಕೂ ಎಂಟು ಅನುಚರರಿರುವ ಎಂಟು ಆನೆಗಳನ್ನು ನಾನು ಕೇಶವನಿಗೆ ಕೊಡುತ್ತೇನೆ.

05084008a ದಾಸೀನಾಮಪ್ರಜಾತಾನಾಂ ಶುಭಾನಾಂ ರುಕ್ಮವರ್ಚಸಾಂ।
05084008c ಶತಮಸ್ಮೈ ಪ್ರದಾಸ್ಯಾಮಿ ದಾಸಾನಾಮಪಿ ತಾವತಃ।।

ನಾನು ಅವನಿಗೆ ಇನ್ನೂ ಮಕ್ಕಳನ್ನು ಹಡೆಯದೇ ಇದ್ದ, ಬಂಗಾರದ ಬಣ್ಣದ ನೂರು ಸುಂದರ ದಾಸಿಯರನ್ನೂ ಅಷ್ಟೇ ಸಂಖ್ಯೆಯ ದಾಸರನ್ನೂ ಕೊಡುತ್ತೇನೆ.

05084009a ಆವಿಕಂ ಬಹು ಸುಸ್ಪರ್ಶಂ ಪಾರ್ವತೀಯೈರುಪಾಹೃತಂ।
05084009c ತದಪ್ಯಸ್ಮೈ ಪ್ರದಾಸ್ಯಾಮಿ ಸಹಸ್ರಾಣಿ ದಶಾಷ್ಟ ಚ।।
05084010a ಅಜಿನಾನಾಂ ಸಹಸ್ರಾಣಿ ಚೀನದೇಶೋದ್ಭವಾನಿ ಚ।
05084010c ತಾನ್ಯಪ್ಯಸ್ಮೈ ಪ್ರದಾಸ್ಯಾಮಿ ಯಾವದರ್ಹತಿ ಕೇಶವಃ।।

ಕೇಶವನಿಗೆ ಅರ್ಹವಾದ, ಪರ್ವತದ ಜನರು ನನಗೆ ತಂದು ಕೊಟ್ಟಿರುವ ಹದಿನೆಂಟು ಸಾವಿರ ಮೃದು ಕಂಬಳಿಗಳನ್ನು ಮತ್ತು ಚೀನದೇಶದಿಂದ ಬಂದ ಸಹಸ್ರಾರು ಜಿನ ಚರ್ಮಗಳನ್ನು ಸಲ್ಲಿಸುತ್ತೇನೆ.

05084011a ದಿವಾ ರಾತ್ರೌ ಚ ಭಾತ್ಯೇಷ ಸುತೇಜಾ ವಿಮಲೋ ಮಣಿಃ।
05084011c ತಮಪ್ಯಸ್ಮೈ ಪ್ರದಾಸ್ಯಾಮಿ ತಮಪ್ಯರ್ಹತಿ ಕೇಶವಃ।।

ಈ ವಿಮಲ ಮಣಿಯು ಹಗಲು ಮತ್ತು ರಾತ್ರಿ ತೇಜಸ್ಸಿನಿಂದ ಹೊಳೆಯುತ್ತದೆ. ಇದೂ ಕೂಡ ಕೇಶವನಿಗೆ ಅರ್ಹವಾದುದು. ಅವನಿಗೆ ಇದನ್ನೂ ಸಮರ್ಪಿಸುತ್ತೇನೆ.

05084012a ಏಕೇನಾಪಿ ಪತತ್ಯಹ್ನಾ ಯೋಜನಾನಿ ಚತುರ್ದಶ।
05084012c ಯಾನಮಶ್ವತರೀಯುಕ್ತಂ ದಾಸ್ಯೇ ತಸ್ಮೈ ತದಪ್ಯಹಂ।।

ಒಂದೇ ದಿನದಲ್ಲಿ ಹದಿನಾಲ್ಕು ಯೋಜನ ದೂರ ಹೋಗಬಲ್ಲ ಅಶ್ವತರಿಯಿಂದೊಡಗೂಡಿದ ವಾಹನವನ್ನು ಕೂಡ ಅವನಿಗೆ ಕೊಡುತ್ತೇನೆ.

05084013a ಯಾವಂತಿ ವಾಹನಾನ್ಯಸ್ಯ ಯಾವಂತಃ ಪುರುಷಾಶ್ಚ ತೇ।
05084013c ತತೋಽಷ್ಟಗುಣಮಪ್ಯಸ್ಮೈ ಭೋಜ್ಯಂ ದಾಸ್ಯಾಮ್ಯಹಂ ಸದಾ।।

ಪ್ರತಿದಿನವೂ ಅವನೊಂದಿಗೆ ಬಂದಿರುವ ವಾಹನ ಪುರುಷರಿಗೆ ಬೇಕಾದುದಕ್ಕಿಂತ ಎಂಟು ಪಟ್ಟು ಹೆಚ್ಚಿನ ಭೋಜನವನ್ನು ಅವನಿಗೆ ನೀಡುತ್ತೇನೆ.

05084014a ಮಮ ಪುತ್ರಾಶ್ಚ ಪೌತ್ರಾಶ್ಚ ಸರ್ವೇ ದುರ್ಯೋಧನಾದೃತೇ।
05084014c ಪ್ರತ್ಯುದ್ಯಾಸ್ಯಂತಿ ದಾಶಾರ್ಹಂ ರಥೈರ್ಮೃಷ್ಟೈರಲಂಕೃತಾಃ।।

ದುರ್ಯೋಧನನನ್ನು ಬಿಟ್ಟು ನನ್ನ ಎಲ್ಲ ಮಕ್ಕಳೂ ಮೊಮ್ಮಕ್ಕಳೂ ಚೆನ್ನಾಗಿ ಅಲಂಕೃತಗೊಂಡ ರಥಗಳಲ್ಲಿ ದಾಶಾರ್ಹನನ್ನು ಬರಮಾಡಿಕೊಳ್ಳಲು ಹೋಗುತ್ತಾರೆ.

05084015a ಸ್ವಲಂಕೃತಾಶ್ಚ ಕಲ್ಯಾಣ್ಯಃ ಪಾದೈರೇವ ಸಹಸ್ರಶಃ।
05084015c ವಾರಮುಖ್ಯಾ ಮಹಾಭಾಗಂ ಪ್ರತ್ಯುದ್ಯಾಸ್ಯಂತಿ ಕೇಶವಂ।।

ಅಲಂಕೃತರಾದ ಸುಂದರ ಪದಾತಿಗಳೂ ಆಸ್ಥಾನಿಕರೂ ಸಹಸ್ರಾರು ಸಂಖ್ಯೆಗಳಲ್ಲಿ ಆ ಮಹಾಭಾಗ ಕೇಶವನನ್ನು ಸ್ವಾಗತಿಸಲು ಹೋಗುತ್ತಾರೆ.

05084016a ನಗರಾದಪಿ ಯಾಃ ಕಾಶ್ಚಿದ್ಗಮಿಷ್ಯಂತಿ ಜನಾರ್ದನಂ।
05084016c ದ್ರಷ್ಟುಂ ಕನ್ಯಾಶ್ಚ ಕಲ್ಯಾಣ್ಯಸ್ತಾಶ್ಚ ಯಾಸ್ಯಂತ್ಯನಾವೃತಾಃ।।

ಜನಾರ್ದನನನ್ನು ನೋಡಲು ನಗರದಿಂದ ಯಾರೆಲ್ಲ ಕಲ್ಯಾಣ ಕನ್ಯೆಯರು ಹೋಗುತ್ತಾರೋ ಅವರು ಅನಾವೃತರಾಗಿ ಹೋಗುತ್ತಾರೆ.

05084017a ಸಸ್ತ್ರೀಪುರುಷಬಾಲಂ ಹಿ ನಗರಂ ಮಧುಸೂದನಂ।
05084017c ಉದೀಕ್ಷತೇ ಮಹಾತ್ಮಾನಂ ಭಾನುಮಂತಮಿವ ಪ್ರಜಾಃ।।

ಸ್ತ್ರೀ ಪುರುಷ ಬಾಲಕರೊಂದಿಗೆ ಇಡೀ ನಗರದ ಪ್ರಜೆಗಳು ಮಹಾತ್ಮ ಮಧುಸೂದನನನ್ನು ಸೂರ್ಯನನ್ನು ಹೇಗೋ ಹಾಗೆ ನೋಡಲಿದ್ದಾರೆ.

05084018a ಮಹಾಧ್ವಜಪತಾಕಾಶ್ಚ ಕ್ರಿಯಂತಾಂ ಸರ್ವತೋದಿಶಂ।
05084018c ಜಲಾವಸಿಕ್ತೋ ವಿರಜಾಃ ಪಂಥಾಸ್ತಸ್ಯೇತಿ ಚಾನ್ವಶಾತ್।।

ಅವನು ಬರುವ ದಾರಿಯಲ್ಲಿ ಎಲ್ಲ ಕಡೆಗಳಲ್ಲಿ ಮಹಾಧ್ವಜ ಪತಾಕೆಗಳನ್ನು ಏರಿಸಲಿ. ನೀರನ್ನು ಸಿಂಪಡಿಸಿ ಧೂಳಾಗದಂತೆ ಮಾಡಲಿ.

05084019a ದುಃಶಾಸನಸ್ಯ ಚ ಗೃಹಂ ದುರ್ಯೋಧನಗೃಹಾದ್ವರಂ।
05084019c ತದಸ್ಯ ಕ್ರಿಯತಾಂ ಕ್ಷಿಪ್ರಂ ಸುಸಮ್ಮೃಷ್ಟಮಲಂಕೃತಂ।।
05084020a ಏತದ್ಧಿ ರುಚಿರಾಕಾರೈಃ ಪ್ರಾಸಾದೈರುಪಶೋಭಿತಂ।
05084020c ಶಿವಂ ಚ ರಮಣೀಯಂ ಚ ಸರ್ವರ್ತು ಸುಮಹಾಧನಂ।।

ಅವನಿಗಾಗಿ ದುರ್ಯೋಧನನ ಮನೆಗಿಂಥ ಚೆನ್ನಾಗಿರುವ ದುಃಶಾಸನನ ಮನೆಯನ್ನು ಬೇಗನೆ ಚೆನ್ನಾಗಿ ಅಲಂಕರಿಸಿ ಸಿದ್ಧಗೊಳಿಸಲ್ಪಡಲಿ. ಅದು ಸುಂದರ ಪ್ರಾಕಾರಗಳಿಂದ ಕೂಡಿದೆ, ರಮಣೀಯವಾಗಿದೆ, ಮಂಗಳಕರವಾಗಿದೆ, ಎಲ್ಲ ಋತುಗಳಲ್ಲಿಯೂ ಮಹಾಧನದಿಂದ ಕೂಡಿರುತ್ತದೆ.

05084021a ಸರ್ವಮಸ್ಮಿನ್ಗೃಹೇ ರತ್ನಂ ಮಮ ದುರ್ಯೋಧನಸ್ಯ ಚ।
05084021c ಯದ್ಯದರ್ಹೇತ್ಸ ವಾರ್ಷ್ಣೇಯಸ್ತತ್ತದ್ದೇಯಮಸಂಶಯಂ।।

ಆ ಮನೆಯಲ್ಲಿ ವಾರ್ಷ್ಣೇಯನಿಗೆ ತಕ್ಕುದಾದ ನನ್ನ ಮತ್ತು ದುರ್ಯೋಧನನ ರತ್ನಗಳಿವೆ. ಅದರಲ್ಲಿ ಸಂಶಯವೇ ಇಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಧೃತರಾಷ್ಟ್ರವಾಕ್ಯೇ ಚತುರಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಎಂಭತ್ನಾಲ್ಕನೆಯ ಅಧ್ಯಾಯವು.