ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 81
ಸಾರ
ಮರುದಿನ ಮುಂಜಾನೆ ಕೃಷ್ಣನು ಸಾತ್ಯಕಿಯನ್ನೊಡಗೂಡಿ ಹಸ್ತಿನಾಪುರಕ್ಕೆ ಹೊರಟಿದುದು (1-32). ಕೃಷ್ಣನೊಡನೆ ಸ್ವಲ್ಪ ದೂರ ಪ್ರಯಾಣಿಸಿದ ಯುಧಿಷ್ಠಿರನು ತಾಯಿ ಕುಂತಿಗೆ ಸಂದೇಶವನ್ನು ಕೃಷ್ಣನಿಗೆ ಹೇಳಿ ಹಿಂದಿರುಗಿದುದು (33-49). ಅರ್ಜುನನು ತನ್ನ ಸಂದೇಶವನ್ನಿತ್ತು ಹಿಂದಿರುಗಿದುದು (50-57). ದಾರಿಯಲ್ಲಿ ಹಸ್ತಿನಾಪುರಿಗೆ ಪ್ರಯಾಣಿಸುತ್ತಿದ್ದ ಮಹರ್ಷಿಗಳನ್ನು ನೋಡಿ ಕೃಷ್ಣನು ಪರಶುರಾಮನೊಂದಿಗೆ ಮಾತನಾಡಿದುದು (58-72).
05081001 ಅರ್ಜುನ ಉವಾಚ।
05081001a ಕುರೂಣಾಮದ್ಯ ಸರ್ವೇಷಾಂ ಭವಾನ್ಸುಹೃದನುತ್ತಮಃ।
05081001c ಸಂಬಂಧೀ ದಯಿತೋ ನಿತ್ಯಮುಭಯೋಃ ಪಕ್ಷಯೋರಪಿ।।
ಅರ್ಜುನನು ಹೇಳಿದನು: “ಇಂದು ಕುರುಗಳೆಲ್ಲರ ಅನುತ್ತಮ ಗೆಳೆಯನು ನೀನೇ. ನೀನು ಯಾವಾಗಲೂ ಎರಡೂ ಪಕ್ಷಗಳ ಪ್ರೀತಿಯ ಸಂಬಂಧಿಯಾಗಿದ್ದೀಯೆ.
05081002a ಪಾಂಡವೈರ್ಧಾರ್ತರಾಷ್ಟ್ರಾಣಾಂ ಪ್ರತಿಪಾದ್ಯಮನಾಮಯಂ।
05081002c ಸಮರ್ಥಃ ಪ್ರಶಮಂ ಚೈಷಾಂ ಕರ್ತುಂ ತ್ವಮಸಿ ಕೇಶವ।।
ಪಾಂಡವರು ಮತ್ತು ಧಾರ್ತರಾಷ್ಟ್ರರ ಕುಶಲವನ್ನು ಪ್ರತಿಪಾದಿಸಬೇಕು. ಕೇಶವ! ಇಬ್ಬರನ್ನೂ ಪ್ರಶಾಂತಗೊಳಿಸಲು ನೀನೇ ಸಮರ್ಥನಾಗಿದ್ದೀಯೆ.
05081003a ತ್ವಮಿತಃ ಪುಂಡರೀಕಾಕ್ಷ ಸುಯೋಧನಮಮರ್ಷಣಂ।
05081003c ಶಾಂತ್ಯರ್ಥಂ ಭಾರತಂ ಬ್ರೂಯಾ ಯತ್ತದ್ವಾಚ್ಯಮಮಿತ್ರಹನ್।।
ಪುಂಡರೀಕಾಕ್ಷ! ಶತ್ರುಹನನ! ಈಗ ನೀನು ಅಮರ್ಷಣ ಸುಯೋಧನನಲ್ಲಿಗೆ ಶಾಂತಿಗಾಗಿ ಹೋಗಿ ಭಾರತರಿಗೆ ಏನು ಹೇಳಬೇಕೋ ಅದನ್ನು ಹೇಳು.
05081004a ತ್ವಯಾ ಧರ್ಮಾರ್ಥಯುಕ್ತಂ ಚೇದುಕ್ತಂ ಶಿವಮನಾಮಯಂ।
05081004c ಹಿತಂ ನಾದಾಸ್ಯತೇ ಬಾಲೋ ದಿಷ್ಟಸ್ಯ ವಶಮೇಷ್ಯತಿ।।
ಮಂಗಳವೂ, ಅನಾಮಯವೂ, ಧರ್ಮಾರ್ಥಯುಕ್ತವೂ ಆದ ನಿನ್ನ ಹಿತವನ್ನು ಅವನು ಸ್ವೀಕರಿಸದೇ ಇದ್ದರೆ ದೈವದ ವಶವಾಗುತ್ತಾನೆ.”
05081005 ಭಗವಾನುವಾಚ।
05081005a ಧರ್ಮ್ಯಮಸ್ಮದ್ಧಿತಂ ಚೈವ ಕುರೂಣಾಂ ಯದನಾಮಯಂ।
05081005c ಏಷ ಯಾಸ್ಯಾಮಿ ರಾಜಾನಂ ಧೃತರಾಷ್ಟ್ರಮಭೀಪ್ಸಯಾ।।
ಭಗವಂತನು ಹೇಳಿದನು: “ಸರಿ! ಧರ್ಮಸಮ್ಮತವಾಗಿ ದೊರೆಯಬೇಕಾದ, ನಮಗೆ ಲಾಭದಾಯಕವಾದ ಮತ್ತು ಕುರುಗಳಿಗೆ ಅನಾಮಯವಾದುದನ್ನು ಪಡೆಯುವ ಆಸೆಯನ್ನಿಟ್ಟುಕೊಂಡು ನಾನು ರಾಜ ಧೃತರಾಷ್ಟ್ರನಲ್ಲಿಗೆ ಹೋಗುತ್ತೇನೆ.””
05081006 ವೈಶಂಪಾಯನ ಉವಾಚ।
05081006a ತತೋ ವ್ಯಪೇತೇ ತಮಸಿ ಸೂರ್ಯೇ ವಿಮಲ ಉದ್ಗತೇ।
05081006c ಮೈತ್ರೇ ಮುಹೂರ್ತೇ ಸಂಪ್ರಾಪ್ತೇ ಮೃದ್ವರ್ಚಿಷಿ ದಿವಾಕರೇ।।
05081007a ಕೌಮುದೇ ಮಾಸಿ ರೇವತ್ಯಾಂ ಶರದಂತೇ ಹಿಮಾಗಮೇ।
05081007c ಸ್ಫೀತಸಸ್ಯಸುಖೇ ಕಾಲೇ ಕಲ್ಯಃ ಸತ್ತ್ವವತಾಂ ವರಃ।।
ವೈಶಂಪಾಯನನು ಹೇಳಿದನು: “ರಾತ್ರಿಯು ಕಳೆದು ವಿಮಲ ಸೂರ್ಯನು ಉದಯಿಸಲು, ದಿವಾಕರನು ಮೃದುವಾಗಿ ಬೆಳಗುತ್ತಿದ್ದ ಮೈತ್ರ ಮುಹೂರ್ತವು ಸಂಪ್ರಾಪ್ತವಾಗಲು, ಕೌಮುದ ಮಾಸದಲ್ಲಿ, ರೇವತೀ ನಕ್ಷತ್ರದಲ್ಲಿ, ಶರದೃತುವು ಮುಗಿದು ಹೇಮಂತ ಋತುವು ಪ್ರಾರಂಭವಾಗುವಾಗ, ಸಸ್ಯಗಳು ಬೆಳೆಯನ್ನು ಹೊತ್ತು ಸುಖವಾಗಿರುವ ಕಾಲದಲ್ಲಿ ಸತ್ವವತರಲ್ಲಿ ಶ್ರೇಷ್ಠನು ಸಿದ್ಧನಾದನು.
05081008a ಮಂಗಲ್ಯಾಃ ಪುಣ್ಯನಿರ್ಘೋಷಾ ವಾಚಃ ಶೃಣ್ವಂಶ್ಚ ಸೂನೃತಾಃ।
05081008c ಬ್ರಾಹ್ಮಣಾನಾಂ ಪ್ರತೀತಾನಾಮೃಷೀಣಾಮಿವ ವಾಸವಃ।।
ವಾಸವನು ಋಷಿಗಳಿಂದ ಕೇಳುವಂತೆ ಹೊರಡುವಾಗ ಅವನು ಬ್ರಾಹ್ಮಣರ ಮಂಗಳ ಘೋಷಗಳನ್ನೂ, ಪುಣ್ಯಾಹ-ವಾಚನಗಳನ್ನೂ, ಸತ್ಯಗಳನ್ನೂ ಕೇಳಿದನು.
05081009a ಕೃತ್ವಾ ಪೌರ್ವಾಹ್ಣಿಕಂ ಕೃತ್ಯಂ ಸ್ನಾತಃ ಶುಚಿರಲಂಕೃತಃ।
05081009c ಉಪತಸ್ಥೇ ವಿವಸ್ವಂತಂ ಪಾವಕಂ ಚ ಜನಾರ್ದನಃ।।
ಜನಾರ್ದನನು ಬೆಳಗಿನ ಆಹ್ನೀಕವನ್ನು ಪೂರೈಸಿ, ಸ್ನಾನಮಾಡಿ, ಶುದ್ಧಿಯಾಗಿ, ಅಲಂಕೃತನಾಗಿ, ಸೂರ್ಯ ಮತ್ತು ಅಗ್ನಿಯ ಉಪಾಸನೆಯನ್ನು ಮಾಡಿದನು.
05081010a ಋಷಭಂ ಪೃಷ್ಠ ಆಲಭ್ಯ ಬ್ರಾಹ್ಮಣಾನಭಿವಾದ್ಯ ಚ।
05081010c ಅಗ್ನಿಂ ಪ್ರದಕ್ಷಿಣಂ ಕೃತ್ವಾ ಪಶ್ಯನ್ಕಲ್ಯಾಣಮಗ್ರತಃ।।
ಹೋರಿಯ ಬೆನ್ನನ್ನು ಸವರಿ, ಬ್ರಾಹ್ಮಣರನ್ನು ವಂದಿಸಿ, ಅಗ್ನಿಯ ಪ್ರದಕ್ಷಿಣೆಯನ್ನು ಮಾಡಿ, ಮುಂದಿರುವ ಕಲ್ಯಾಣ ವಸ್ತುಗಳನ್ನು ನೋಡಿದನು.
05081011a ತತ್ಪ್ರತಿಜ್ಞಾಯ ವಚನಂ ಪಾಂಡವಸ್ಯ ಜನಾರ್ದನಃ।
05081011c ಶಿನೇರ್ನಪ್ತಾರಮಾಸೀನಮಭ್ಯಭಾಷತ ಸಾತ್ಯಕಿಂ।।
ಪಾಂಡವರ ಮಾತನ್ನು ಮನ್ನಿಸಿ ಜನಾರ್ದನನು ಕುಳಿತಿದ್ದ ಶಿನಿ ಸಾತ್ಯಕಿಗೆ ಹೇಳಿದನು:
05081012a ರಥ ಆರೋಪ್ಯತಾಂ ಶಂಖಶ್ಚಕ್ರಂ ಚ ಗದಯಾ ಸಹ।
05081012c ಉಪಾಸಂಗಾಶ್ಚ ಶಕ್ತ್ಯಶ್ಚ ಸರ್ವಪ್ರಹರಣಾನಿ ಚ।।
“ಶಂಖ-ಚಕ್ರಗಳನ್ನೂ ಜೊತೆಗೆ ಗದೆಯನ್ನೂ, ಈಟಿ ಶಕ್ತಿಗಳನ್ನೂ, ಸರ್ವ ಪ್ರಹರಗಳನ್ನೂ ರಥಕ್ಕೆ ಏರಿಸು!
05081013a ದುರ್ಯೋಧನೋ ಹಿ ದುಷ್ಟಾತ್ಮಾ ಕರ್ಣಶ್ಚ ಸಹಸೌಬಲಃ।
05081013c ನ ಚ ಶತ್ರುರವಜ್ಞೇಯಃ ಪ್ರಾಕೃತೋಽಪಿ ಬಲೀಯಸಾ।।
ಏಕೆಂದರೆ ದುರ್ಯೋಧನ, ಕರ್ಣ ಮತ್ತು ಸೌಬಲರು ದುಷ್ಟಾತ್ಮರು. ಬಲಶಾಲಿಯಾದವನು ಶತ್ರುವು ಎಷ್ಟೇ ಕೀಳಾಗಿದ್ದರೂ ಅವರನ್ನು ಪರಿಗಣಿಸದೇ ಇರಬಾರದು.”
05081014a ತತಸ್ತನ್ಮತಮಾಜ್ಞಾಯ ಕೇಶವಸ್ಯ ಪುರಃಸರಾಃ।
05081014c ಪ್ರಸಸ್ರುರ್ಯೋಜಯಿಷ್ಯಂತೋ ರಥಂ ಚಕ್ರಗದಾಭೃತಃ।।
ಆಗ ಕೇಶವನ ಆಜ್ಞೆಯನ್ನು ತಿಳಿದು ಸೇವಕರು ಸಡಗರದಿಂದ ಓಡಾಡುತ್ತಾ ಚಕ್ರ, ಗದೆಗಳಿಂದೊಡಗೂಡಿದ ರಥವನ್ನು ಕಟ್ಟಿದರು.
05081015a ತಂ ದೀಪ್ತಮಿವ ಕಾಲಾಗ್ನಿಮಾಕಾಶಗಮಿವಾಧ್ವಗಂ।
05081015c ಚಂದ್ರಸೂರ್ಯಪ್ರಕಾಶಾಭ್ಯಾಂ ಚಕ್ರಾಭ್ಯಾಂ ಸಮಲಂಕೃತಂ।।
ಆ ರಥವು ಕಲಾಗ್ನಿಯಂತೆ ಬೆಳಗುತ್ತಿತ್ತು ಮತ್ತು ಪಕ್ಷಿಯಂತೆ ಆಕಾಶದಲ್ಲಿ ಹಾರಿಹೋಗುವಂತಿತ್ತು. ಸಮಲಂಕೃತವಾದ ಅದರ ಎರಡು ಚಕ್ರಗಳು ಚಂದ್ರ ಮತ್ತು ಸೂರ್ಯರಂತೆ ಪ್ರಕಾಶಿಸುತ್ತಿದ್ದವು.
05081016a ಅರ್ಧಚಂದ್ರೈಶ್ಚ ಚಂದ್ರೈಶ್ಚ ಮತ್ಸ್ಯೈಃ ಸಮೃಗಪಕ್ಷಿಭಿಃ।
05081016c ಪುಷ್ಪೈಶ್ಚ ವಿವಿಧೈಶ್ಚಿತ್ರಂ ಮಣಿರತ್ನೈಶ್ಚ ಸರ್ವಶಃ।।
05081017a ತರುಣಾದಿತ್ಯಸಂಕಾಶಂ ಬೃಹಂತಂ ಚಾರುದರ್ಶನಂ।
05081017c ಮಣಿಹೇಮವಿಚಿತ್ರಾಂಗಂ ಸುಧ್ವಜಂ ಸುಪತಾಕಿನಂ।।
ಅದರಲ್ಲಿ ಅರ್ಧಚಂದ್ರ, ಪೂರ್ಣಚಂದ್ರಗಳು, ಮೀನುಗಳು, ಮೃಗಪಕ್ಷಿಗಳು, ಹೂವುಗಳು, ವಿವಿಧ ಚಿತ್ರಗಳು, ಮತ್ತು ಮಣಿರತ್ನಗಳಿಂದ ಎಲ್ಲೆಡೆಯೂ ತುಂಬಿದ, ಬೃಹತ್ತಾದ, ನೋಡಲು ಸುಂದರವಾದ, ಮಣಿಹೇಮಚಿತ್ರಗಳನ್ನೊಡಗೂಡಿದ, ಉದಯಿಸುವ ಸೂರ್ಯನಂತಿರುವ, ಉತ್ತಮ ಧ್ವಜ-ಪತಾಕೆಗಳೂ ಇದ್ದವು.
05081018a ಸೂಪಸ್ಕರಮನಾಧೃಷ್ಯಂ ವೈಯಾಘ್ರಪರಿವಾರಣಂ।
05081018c ಯಶೋಘ್ನಂ ಪ್ರತ್ಯಮಿತ್ರಾಣಾಂ ಯದೂನಾಂ ನಂದಿವರ್ಧನಂ।।
ಶತ್ರುಗಳ ಯಶವನ್ನು ತೆಗೆದುಹಾಕುವ ಮತ್ತು ಯದುಗಳ ಆನಂದವನ್ನು ಹೆಚ್ಚಿಸುವ ಆ ಧ್ವಜವು ಸಂಸ್ಕರಿಸಿದ ಚಿನ್ನದಿಂದ ಮಾಡಲ್ಪಟ್ಟಿದ್ದು, ಹುಲಿಯ ಚರ್ಮದಿಂದ ಸುತ್ತಲ್ಪಟ್ಟಿತ್ತು.
05081019a ವಾಜಿಭಿಃ ಸೈನ್ಯಸುಗ್ರೀವಮೇಘಪುಷ್ಪಬಲಾಹಕೈಃ।
05081019c ಸ್ನಾತೈಃ ಸಂಪಾದಯಾಂ ಚಕ್ರುಃ ಸಂಪನ್ನೈಃ ಸರ್ವಸಂಪದಾ।।
ಅದಕ್ಕೆ ಅವನ ಕುದುರೆಗಳು - ಸೈನ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕಗಳನ್ನು ಸ್ನಾನಮಾಡಿಸಿ, ಚೆನ್ನಾಗಿ ಸಿದ್ಧಪಡಿಸಿ ಕಟ್ಟಿದರು.
05081020a ಮಹಿಮಾನಂ ತು ಕೃಷ್ಣಸ್ಯ ಭೂಯ ಏವಾಭಿವರ್ಧಯನ್।
05081020c ಸುಘೋಷಃ ಪತಗೇಂದ್ರೇಣ ಧ್ವಜೇನ ಯುಯುಜೇ ರಥಃ।।
ಆ ಸುಘೋಷ ರಥಕ್ಕೆ ಗರುಡನಿರುವ ಧ್ವಜವನ್ನು ಏರಿಸಿ ಕೃಷ್ಣನ ಮಹಿಮೆಯನ್ನು ಇನ್ನೂ ಹೆಚ್ಚಿಸಿದರು.
05081021a ತಂ ಮೇರುಶಿಖರಪ್ರಖ್ಯಂ ಮೇಘದುಂದುಭಿನಿಸ್ವನಂ।
05081021c ಆರುರೋಹ ರಥಂ ಶೌರಿರ್ವಿಮಾನಮಿವ ಪುಣ್ಯಕೃತ್।।
ಮೇರುಶಿಖರದಂತಿದ್ದ, ಮೇಘದುಂದುಭಿಗಳಂತೆ ಮೊಳಗುತ್ತಿದ್ದ ಆ ರಥವನ್ನು ಪುಣ್ಯಾತ್ಮನು ವಿಮಾನವನ್ನು ಏರುವಂತೆ ಶೌರಿಯು ಏರಿದನು.
05081022a ತತಃ ಸಾತ್ಯಕಿಮಾರೋಪ್ಯ ಪ್ರಯಯೌ ಪುರುಷೋತ್ತಮಃ।
05081022c ಪೃಥಿವೀಂ ಚಾಂತರಿಕ್ಷಂ ಚ ರಥಘೋಷೇಣ ನಾದಯನ್।।
ಆಗ ಸಾತ್ಯಕಿಯನ್ನು ಹತ್ತಿಸಿಕೊಂಡು ಪುರುಷೋತ್ತಮನು ಭೂಮಿ ಅಂತರಿಕ್ಷಗಳನ್ನು ರಥಘೋಷದಿಂದ ಮೊಳಗಿಸುತ್ತಾ ಹೊರಟನು.
05081023a ವ್ಯಪೋಢಾಭ್ರಘನಃ ಕಾಲಃ ಕ್ಷಣೇನ ಸಮಪದ್ಯತ।
05081023c ಶಿವಶ್ಚಾನುವವೌ ವಾಯುಃ ಪ್ರಶಾಂತಮಭವದ್ರಜಃ।।
ಆ ಕ್ಷಣದಲ್ಲಿಯೇ ಹವಾಮಾನವು ಸ್ವಚ್ಛವಾಯಿತು, ಆಕಾಶವು ಮೋಡರಹಿತವಾಯಿತು. ಮಂಗಳ ಗಾಳಿಯು ಬೀಸಿತು ಮತ್ತು ಮೇಲೆದ್ದ ಧೂಳು ಪ್ರಶಾಂತವಾಯಿತು.
05081024a ಪ್ರದಕ್ಷಿಣಾನುಲೋಮಾಶ್ಚ ಮಂಗಲ್ಯಾ ಮೃಗಪಕ್ಷಿಣಃ।
05081024c ಪ್ರಯಾಣೇ ವಾಸುದೇವಸ್ಯ ಬಭೂವುರನುಯಾಯಿನಃ।।
ಮಂಗಲ ಮೃಗಪಕ್ಷಿಗಳು ವಾಸುದೇವನನ್ನು ಅವನ ಪ್ರಯಾಣದಲ್ಲಿ ಅನುಸರಿಸಿ ಬಲಗಡೆಯಿಂದ ಪ್ರದಕ್ಷಿಣೆ ಮಾಡಿ ಹೋದವು.
05081025a ಮಂಗಲ್ಯಾರ್ಥಪದೈಃ ಶಬ್ದೈರನ್ವವರ್ತಂತ ಸರ್ವಶಃ।
05081025c ಸಾರಸಾಃ ಶತಪತ್ರಾಶ್ಚ ಹಂಸಾಶ್ಚ ಮಧುಸೂದನಂ।।
ಮಂಗಲವನ್ನು ಸೂಚಿಸುವಂತೆ ಕೂಗುತ್ತಾ ಸಾರಸಗಳು, ಹಂಸಗಳು ಮತ್ತು ಮರಕುಟುಕ ಪಕ್ಷಿಗಳು ಮಧುಸೂದನನನ್ನು ಎಲ್ಲಕಡೆಯಿಂದ ಸುತ್ತುವರೆದವು.
05081026a ಮಂತ್ರಾಹುತಿಮಹಾಹೋಮೈರ್ಹೂಯಮಾನಶ್ಚ ಪಾವಕಃ।
05081026c ಪ್ರದಕ್ಷಿಣಶಿಖೋ ಭೂತ್ವಾ ವಿಧೂಮಃ ಸಮಪದ್ಯತ।।
ಮಹಾಹೋಮಗಳಲ್ಲಿ ಮಂತ್ರಾಹುತಿಯನ್ನು ಹಾಕಿ, ಉರಿಯುತ್ತಿದ್ದ ಪಾವಕನು ಹೊಗೆಯಿಲ್ಲದೇ ಪ್ರದಕ್ಷಿಣವಾಗಿ ಉರಿಯತೊಡಗಿದನು.
05081027a ವಸಿಷ್ಠೋ ವಾಮದೇವಶ್ಚ ಭೂರಿದ್ಯುಮ್ನೋ ಗಯಃ ಕ್ರಥಃ।
05081027c ಶುಕ್ರನಾರದವಾಲ್ಮೀಕಾ ಮರುತಃ ಕುಶಿಕೋ ಭೃಗುಃ।।
05081028a ಬ್ರಹ್ಮದೇವರ್ಷಯಶ್ಚೈವ ಕೃಷ್ಣಂ ಯದುಸುಖಾವಹಂ।
05081028c ಪ್ರದಕ್ಷಿಣಮವರ್ತಂತ ಸಹಿತಾ ವಾಸವಾನುಜಂ।।
ವಸಿಷ್ಠ, ವಾಮದೇವ, ಭೂರಿದ್ಯುಮ್ನ, ಗಯ, ಕ್ರಥ, ಶುಕ್ರ, ನಾರದ, ವಾಲ್ಮೀಕಾ, ಮರುತ, ಕುಶಿಕ, ಭೃಗು ಮೊದಲಾದ ಬ್ರಹ್ಮರ್ಷಿ-ದೇವರ್ಷಿಗಳು ಯದುಸುಖಾವಹ, ವಾಸವಾನುಜ ಕೃಷ್ಣನನ್ನು ಪ್ರದಕ್ಷಿಣೆಮಾಡಿದರು.
05081029a ಏವಮೇತೈರ್ಮಹಾಭಾಗೈರ್ಮಹರ್ಷಿಗಣಸಾಧುಭಿಃ।
05081029c ಪೂಜಿತಃ ಪ್ರಯಯೌ ಕೃಷ್ಣಃ ಕುರೂಣಾಂ ಸದನಂ ಪ್ರತಿ।।
ಈ ರೀತಿ ಮಹಾಭಾಗ ಮಹರ್ಷಿ ಮತ್ತು ಸಾಧುಗಣಗಳಿಂದ ಪೂಜಿತನಾಗಿ ಕೃಷ್ಣನು ಕುರುಗಳ ಸದನದೆಡೆಗೆ ಪ್ರಯಾಣಿಸಿದನು.
05081030a ತಂ ಪ್ರಯಾಂತಮನುಪ್ರಾಯಾತ್ಕುಂತೀಪುತ್ರೋ ಯುಧಿಷ್ಠಿರಃ।
05081030c ಭೀಮಸೇನಾರ್ಜುನೌ ಚೋಭೌ ಮಾದ್ರೀಪುತ್ರೌ ಚ ಪಾಂಡವೌ।।
05081031a ಚೇಕಿತಾನಶ್ಚ ವಿಕ್ರಾಂತೋ ಧೃಷ್ಟಕೇತುಶ್ಚ ಚೇದಿಪಃ।
05081031c ದ್ರುಪದಃ ಕಾಶಿರಾಜಶ್ಚ ಶಿಖಂಡೀ ಚ ಮಹಾರಥಃ।।
05081032a ಧೃಷ್ಟದ್ಯುಮ್ನಃ ಸಪುತ್ರಶ್ಚ ವಿರಾಟಃ ಕೇಕಯೈಃ ಸಹ।
05081032c ಸಂಸಾಧನಾರ್ಥಂ ಪ್ರಯಯುಃ ಕ್ಷತ್ರಿಯಾಃ ಕ್ಷತ್ರಿಯರ್ಷಭಂ।।
ಮುಂದೆ ಹೋಗುತ್ತಿದ್ದ ಅವನನ್ನು ಕುಂತೀಪುತ್ರ ಯುಧಿಷ್ಠಿರ, ಭೀಮಸೇನ-ಅರ್ಜುನರು, ಪಾಂಡವ ಮಾದ್ರೀಪುತ್ರರಿಬ್ಬರು, ವಿಕ್ರಾಂತ ಚೇಕಿತಾನ, ಚೇದಿಪ ಧೃಷ್ಟಕೇತು, ದ್ರುಪದ, ಕಾಶಿರಾಜ, ಮಹಾರಥಿ ಶಿಖಂಡೀ, ಧೃಷ್ಟದ್ಯುಮ್ನ, ಪುತ್ರರೊಂದಿಗೆ ವಿರಾಟ, ಕೇಕಯ ಎಲ್ಲರೂ ಜೊತೆಗೂಡಿ ಹಿಂಬಾಲಿಸಿದರು. ಕ್ಷತ್ರಿಯರು ಕ್ಷತ್ರಿಯರ್ಷಭನ ಯಶಸ್ಸಿಗೆ ಸಹಾಯಮಾಡಲು ಹೊರಟರು.
05081033a ತತೋಽನುವ್ರಜ್ಯ ಗೋವಿಂದಂ ಧರ್ಮರಾಜೋ ಯುಧಿಷ್ಠಿರಃ।
05081033c ರಾಜ್ಞಾಂ ಸಕಾಶೇ ದ್ಯುತಿಮಾನುವಾಚೇದಂ ವಚಸ್ತದಾ।।
05081034a ಯೋ ನೈವ ಕಾಮಾನ್ನ ಭಯಾನ್ನ ಲೋಭಾನ್ನಾರ್ಥಕಾರಣಾತ್।
05081034c ಅನ್ಯಾಯಮನುವರ್ತೇತ ಸ್ಥಿರಬುದ್ಧಿರಲೋಲುಪಃ।।
05081035a ಧರ್ಮಜ್ಞೋ ಧೃತಿಮಾನ್ಪ್ರಾಜ್ಞಾಃ ಸರ್ವಭೂತೇಷು ಕೇಶವಃ।
05081035c ಈಶ್ವರಃ ಸರ್ವಭೂತಾನಾಂ ದೇವದೇವಃ ಪ್ರತಾಪವಾನ್।।
05081036a ತಂ ಸರ್ವಗುಣಸಂಪನ್ನಂ ಶ್ರೀವತ್ಸಕೃತಲಕ್ಷಣಂ।
05081036c ಸಂಪರಿಷ್ವಜ್ಯ ಕೌಂತೇಯಃ ಸಂದೇಷ್ಟುಮುಪಚಕ್ರಮೇ।।
ಗೋವಿಂದನನ್ನು ಸ್ವಲ್ಪ ದೂರ ಹಿಂಬಾಲಿಸಿದ ಧರ್ಮರಾಜ ಕೌಂತೇಯ ಯುಧಿಷ್ಠಿರನು ರಾಜರ ಸಮಕ್ಷಮದಲ್ಲಿ ದ್ಯುತಿಮಾನ, ಕಾಮ, ಭಯ, ಲೋಭ ಮತ್ತು ಅರ್ಥದ ಕಾರಣದಿಂದ ಅನ್ಯಾಯವಾಗಿ ನಡೆದುಕೊಳ್ಳದೇ ಇದ್ದ, ಸ್ಥಿರಬುದ್ಧಿಯನ್ನು ಹೊಂದಿದ, ಎಂದೂ ಲೋಲುಪನಾಗಿರದ, ಧರ್ಮಜ್ಞ, ಧೃತಿವಂತ, ಸರ್ವಭೂತಗಳಲ್ಲಿ ಪ್ರಾಜ್ಞನಾದ, ಸರ್ವಭೂತಗಳ ಈಶ್ವರ, ದೇವದೇವ, ಪ್ರತಾಪವಾನ್, ಸರ್ವಗುಣಸಂಪನ್ನ, ಶ್ರೀವತ್ಸಕೃತಲಕ್ಷಣ, ಕೇಶವನನ್ನು ಆಲಂಗಿಸಿ ಈ ಮಾತುಗಳನ್ನಾಡಿದನು:
05081037a ಯಾ ಸಾ ಬಾಲ್ಯಾತ್ಪ್ರಭೃತ್ಯಸ್ಮಾನ್ಪರ್ಯವರ್ಧಯತಾಬಲಾ।
05081037c ಉಪವಾಸತಪಃಶೀಲಾ ಸದಾ ಸ್ವಸ್ತ್ಯಯನೇ ರತಾ।।
05081038a ದೇವತಾತಿಥಿಪೂಜಾಸು ಗುರುಶುಶ್ರೂಷಣೇ ರತಾ।
05081038c ವತ್ಸಲಾ ಪ್ರಿಯಪುತ್ರಾ ಚ ಪ್ರಿಯಾಸ್ಮಾಕಂ ಜನಾರ್ದನ।।
05081039a ಸುಯೋಧನಭಯಾದ್ಯಾ ನೋಽತ್ರಾಯತಾಮಿತ್ರಕರ್ಶನ।
05081039c ಮಹತೋ ಮೃತ್ಯುಸಂಬಾಧಾದುತ್ತರನ್ನೌರಿವಾರ್ಣವಾತ್।।
05081040a ಅಸ್ಮತ್ಕೃತೇ ಚ ಸತತಂ ಯಯಾ ದುಃಖಾನಿ ಮಾಧವ।
05081040c ಅನುಭೂತಾನ್ಯದುಃಖಾರ್ಹಾ ತಾಂ ಸ್ಮ ಪೃಚ್ಚೇರನಾಮಯಂ।।
“ಮಾಧವ! ಜನಾರ್ದನ! ಅಮಿತ್ರಕರ್ಶನ! ಬಾಲ್ಯದಿಂದಲೂ ಅಬಲೆಯಾಗಿದ್ದುಕೊಂಡು ನಮ್ಮನ್ನು ಬೆಳೆಸಿದ, ಉಪವಾಸ ತಪಸ್ಸು ಮತ್ತು ಇತರ ವ್ರತಗಳಲ್ಲಿ ಯಾವಾಗಲೂ ನಿರತಳಾಗಿರುವ, ದೇವ-ಅತಿಥಿ ಪೂಜೆಗಳಲ್ಲಿ ಮತ್ತು ಹಿರಿಯರ ಶುಶ್ರೂಷಣೆಯಲ್ಲಿ ನಿರತಳಾಗಿರುವ, ಮಕ್ಕಳನ್ನು ಪ್ರೀತಿ-ವಾತ್ಸಲ್ಯದಿಂದ ಕಾಣುವ, ನಮ್ಮ ಪ್ರಿಯೆಯಾದ, ಸುಯೋಧನನ ಭಯದಿಂದ ನಮ್ಮನ್ನು ರಕ್ಷಿಸಿದ, ಮಹಾ ಮೃತ್ಯುಭಯದಿಂದ ಮುಳುಗುವವರನ್ನು ಹಡಗು ರಕ್ಷಿಸುವಂತೆ ರಕ್ಷಿಸಿದ, ದುಃಖಕ್ಕೆ ಅನರ್ಹಳಾಗಿದ್ದರೂ ನಮಗೋಸ್ಕರ ಸತತವೂ ದುಃಖವನ್ನೇ ಅನುಭವಿಸಿದ ಅವಳ ಆರೋಗ್ಯವನ್ನು ವಿಚಾರಿಸು.
05081041a ಭೃಶಮಾಶ್ವಾಸಯೇಶ್ಚೈನಾಂ ಪುತ್ರಶೋಕಪರಿಪ್ಲುತಾಂ।
05081041c ಅಭಿವಾದ್ಯ ಸ್ವಜೇಥಾಶ್ಚ ಪಾಂಡವಾನ್ಪರಿಕೀರ್ತಯನ್।।
ಪುತ್ರರ ಕುರಿತು ಶೋಕಸಂತಪ್ತಳಾದ ಅವಳನ್ನು ಚೆನ್ನಾಗಿ ಸಂತವಿಸು. ಪಾಂಡವರು ಚೆನ್ನಾಗಿದ್ದಾರೆಂದು ಹೇಳುತ್ತಾ ಅವಳನ್ನು ಆಲಂಗಿಸು.
05081042a ಊಢಾತ್ಪ್ರಭೃತಿ ದುಃಖಾನಿ ಶ್ವಶುರಾಣಾಮರಿಂದಮ।
05081042c ನಿಕಾರಾನತದರ್ಹಾ ಚ ಪಶ್ಯಂತೀ ದುಃಖಮಶ್ನುತೇ।।
ಅರಿಂದಮ! ಮದುವೆಯಾದಾಗಿನಿಂದ ಅವಳು ಮಾವನ ಮನೆಯವರಿಂದ ದುಃಖ-ಮೋಸಗಳನ್ನಲ್ಲದೇ ಬೇರೆ ಏನನ್ನೂ ಕಾಣದೇ ದುಃಖಿಸಿದ್ದಾಳೆ.
05081043a ಅಪಿ ಜಾತು ಸ ಕಾಲಃ ಸ್ಯಾತ್ಕೃಷ್ಣ ದುಃಖವಿಪರ್ಯಯಃ।
05081043c ಯದಹಂ ಮಾತರಂ ಕ್ಲಿಷ್ಟಾಂ ಸುಖೇ ದಧ್ಯಾಮರಿಂದಮ।।
ಕೃಷ್ಣ! ಅರಿಂದಮ! ಅವಳ ದುಃಖವನ್ನು ಕಳೆಯುವ ಹಾಗೆ ನಾನು ಮಾಡುವ, ತಾಯಿಯ ಕಷ್ಟಗಳ ಬದಲಾಗಿ ಸುಖವನ್ನು ನೀಡುವ ಕಾಲವು ಎಂದಾದರೂ ಬರುವುದಿದೆಯೇ?
05081044a ಪ್ರವ್ರಜಂತೋಽನ್ವಧಾವತ್ಸಾ ಕೃಪಣಾ ಪುತ್ರಗೃದ್ಧಿನೀ।
05081044c ರುದತೀಮಪಹಾಯೈನಾಮುಪಗಚ್ಚಾಮ ಯದ್ವನಂ।।
ನಾವು ಹೊರಡುವಾಗ ಅವಳು ದೀನಳಾಗಿ, ಪುತ್ರರ ಮೇಲಿನ ಆಸೆಯಿಂದ ನಮ್ಮ ಹಿಂದೆ ಓಡಿ ಬಂದಳು. ಆದರೂ ನಾವು ರೋದಿಸುತ್ತಿರುವ ಅವಳನ್ನು ಅಲ್ಲಿಯೇ ಬಿಟ್ಟು ವನಕ್ಕೆ ಬಂದೆವು.
05081045a ನ ನೂನಂ ಮ್ರಿಯತೇ ದುಃಖೈಃ ಸಾ ಚೇಜ್ಜೀವತಿ ಕೇಶವ।
05081045c ತಥಾ ಪುತ್ರಾಧಿಭಿರ್ಗಾಢಮಾರ್ತಾ ಹ್ಯಾನರ್ತಸತ್ಕೃತಾ।।
ಪುತ್ರರಿಗಾಗಿ ದುಃಖಿತಳಾಗಿ, ಇತರರಿಂದ ನೋಡಿಕೊಳ್ಳಲ್ಪಟ್ಟ ತಾಯಿಯಿರುವಾಗ ದುಃಖದಿಂದ ಜೀವ ತ್ಯಜಿಸುವುದೂ ಕಷ್ಟವಾಗುತ್ತದೆ ಕೇಶವ!
05081046a ಅಭಿವಾದ್ಯಾ ತು ಸಾ ಕೃಷ್ಣ ತ್ವಯಾ ಮದ್ವಚನಾದ್ವಿಭೋ।
05081046c ಧೃತರಾಷ್ಟ್ರಶ್ಚ ಕೌರವ್ಯೋ ರಾಜಾನಶ್ಚ ವಯೋಽಧಿಕಾಃ।।
05081047a ಭೀಷ್ಮಂ ದ್ರೋಣಂ ಕೃಪಂ ಚೈವ ಮಹಾರಾಜಂ ಚ ಬಾಹ್ಲಿಕಂ।
05081047c ದ್ರೌಣಿಂ ಚ ಸೋಮದತ್ತಂ ಚ ಸರ್ವಾಂಶ್ಚ ಭರತಾನ್ಪೃಥಕ್।।
05081048a ವಿದುರಂ ಚ ಮಹಾಪ್ರಾಜ್ಞಾಂ ಕುರೂಣಾಂ ಮಂತ್ರಧಾರಿಣಂ।
05081048c ಅಗಾಧಬುದ್ಧಿಂ ಧರ್ಮಜ್ಞಾಂ ಸ್ವಜೇಥಾ ಮಧುಸೂದನ।।
ಕೃಷ್ಣ! ವಿಭೋ! ಮಧುಸೂದನ! ನನ್ನ ವಚನದಂತೆ ಅವಳನ್ನು ಅಭಿವಂದಿಸು. ಹಾಗೆಯೇ ವೃದ್ಧರಾಜ ಕೌರವ್ಯ ಧೃತರಾಷ್ಟ್ರ, ಭೀಷ್ಮ, ದ್ರೋಣ, ಕೃಪ, ಮಹಾರಾಜಾ ಬಾಹ್ಲೀಕ, ದ್ರೌಣಿ, ಸೋಮದತ್ತ, ಮತ್ತು ಎಲ್ಲ ಭಾರತರು, ಮಹಾಪ್ರಾಜ್ಞ, ಕುರುಗಳ ಮಂತ್ರಧಾರಿಣಿ, ಅಗಾಧಬುದ್ಧಿ, ದರ್ಮಜ್ಞ ವಿದುರನನ್ನು ಕೂಡ ಅಭಿವಂದಿಸು.”
05081049a ಇತ್ಯುಕ್ತ್ವಾ ಕೇಶವಂ ತತ್ರ ರಾಜಮಧ್ಯೇ ಯುಧಿಷ್ಠಿರಃ।
05081049c ಅನುಜ್ಞಾತೋ ನಿವವೃತೇ ಕೃಷ್ಣಂ ಕೃತ್ವಾ ಪ್ರದಕ್ಷಿಣಂ।।
ಹೀಗೆ ಅಲ್ಲಿ ರಾಜರ ಮಧ್ಯದಲ್ಲಿ ಕೇಶವನಿಗೆ ಹೇಳಿ, ಕೃಷ್ಣನಿಗೆ ಪ್ರದಕ್ಷಿಣೆಮಾಡಿ ಆಜ್ಞೆಯನ್ನು ಪಡೆದು ಯುಧಿಷ್ಠಿರನು ಹಿಂದಿರುಗಿದನು.
05081050a ವ್ರಜನ್ನೇವ ತು ಬೀಭತ್ಸುಃ ಸಖಾಯಂ ಪುರುಷರ್ಷಭಂ।
05081050c ಅಬ್ರವೀತ್ಪರವೀರಘ್ನಂ ದಾಶಾರ್ಹಮಪರಾಜಿತಂ।।
ಆದರೆ ಬೀಭತ್ಸುವು ಸಖನೊಂದಿಗೆ ಮುಂದುವರೆದು ಪುರುಷರ್ಷಭ, ಪರವೀರಘ್ನ, ಅಪರಾಜಿತ ದಾಶಾರ್ಹನಿಗೆ ಹೇಳಿದನು:
05081051a ಯದಸ್ಮಾಕಂ ವಿಭೋ ವೃತ್ತಂ ಪುರಾ ವೈ ಮಂತ್ರನಿಶ್ಚಯೇ।
05081051c ಅರ್ಧರಾಜ್ಯಸ್ಯ ಗೋವಿಂದ ವಿದಿತಂ ಸರ್ವರಾಜಸು।।
“ವಿಭೋ! ಗೋವಿಂದ! ಹಿಂದೆ ನಾವು ಮಂತ್ರಾಲೋಚನೆ ಮಾಡಿ ನಿಶ್ಚಯಿಸಿದ ಅರ್ಧರಾಜ್ಯದ ವಿಷಯವು ರಾಜರೆಲ್ಲರಿಗೂ ತಿಳಿದಿದೆ.
05081052a ತಚ್ಚೇದ್ದದ್ಯಾದಸಂಗೇನ ಸತ್ಕೃತ್ಯಾನವಮನ್ಯ ಚ।
05081052c ಪ್ರಿಯಂ ಮೇ ಸಾನ್ಮಹಾಬಾಹೋ ಮುಚ್ಯೇರನ್ಮಹತೋ ಭಯಾತ್।।
ಮಹಾಬಾಹೋ! ಒಂದು ವೇಳೆ ಅವರು ಅದನ್ನು ಗೌರವಿಸಿ, ತಿರಸ್ಕರಿಸದೇ ಕೊಡುತ್ತಾರೆಂದಾದರೆ ಅದು ನನಗೆ ಮೆಚ್ಚುಗೆಯಾಗುತ್ತದೆ ಮತ್ತು ಅವರನ್ನು ಮಹಾಭಯದಿಂದ ಬಿಡುಗಡೆಗೊಳಿಸುತ್ತದೆ.
05081053a ಅತಶ್ಚೇದನ್ಯಥಾ ಕರ್ತಾ ಧಾರ್ತರಾಷ್ಟ್ರೋಽನುಪಾಯವಿತ್।
05081053c ಅಂತಂ ನೂನಂ ಕರಿಷ್ಯಾಮಿ ಕ್ಷತ್ರಿಯಾಣಾಂ ಜನಾರ್ದನ।।
ಆದರೆ ಧಾರ್ತರಾಷ್ಟ್ರನು ಉಪಾಯವನ್ನು ತಿಳಿಯದೇ ಬೇರೆಯದನ್ನು ಮಾಡಿದರೆ, ಜನಾರ್ದನ! ನಾನು ಕ್ಷತ್ರಿಯರು ಇಲ್ಲದಂತೆ ಮಾಡುತ್ತೇನೆ.”
05081054a ಏವಮುಕ್ತೇ ಪಾಂಡವೇನ ಪರ್ಯಹೃಷ್ಯದ್ವೃಕೋದರಃ।
05081054c ಮುಹುರ್ಮುಹುಃ ಕ್ರೋಧವಶಾತ್ಪ್ರಾವೇಪತ ಚ ಪಾಂಡವಃ।।
ಪಾಂಡವನು ಹೀಗೆ ಹೇಳಲು ವೃಕೋದರನು ಪರಮ ಹರ್ಷಿತನಾದನು. ಕ್ರೋಧಾವೇಶಗೊಂಡು ಪುನಃ ಪುನಃ ಆ ಪಾಂಡವನು ನಡುಗುತ್ತಿದ್ದನು.
05081055a ವೇಪಮಾನಶ್ಚ ಕೌಂತೇಯಃ ಪ್ರಾಕ್ರೋಶನ್ಮಹತೋ ರವಾನ್।
05081055c ಧನಂಜಯವಚಃ ಶ್ರುತ್ವಾ ಹರ್ಷೋತ್ಸಿಕ್ತಮನಾ ಭೃಶಂ।।
ಧನಂಜಯನ ಮಾತನ್ನು ಕೇಳಿ ಹರ್ಷೋತ್ಸಾಹಿಯಾದ ಕೌಂತೇಯನು ನಡುಗುತ್ತಾ ಜೋರಾಗಿ ಗರ್ಜಿಸಿದನು.
05081056a ತಸ್ಯ ತಂ ನಿನದಂ ಶ್ರುತ್ವಾ ಸಂಪ್ರಾವೇಪಂತ ಧನ್ವಿನಃ।
05081056c ವಾಹನಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ।।
ಅವನ ಆ ಕೂಗನ್ನು ಕೇಳಿ ಧನ್ವಿಗಳು ನಡುಗಿದರು, ಮತ್ತು ಎಲ್ಲ ವಾಹನಗಳೂ ಮಲ ಮೂತ್ರಗಳನ್ನು ವಿಸರ್ಜಿಸಿದವು.
05081057a ಇತ್ಯುಕ್ತ್ವಾ ಕೇಶವಂ ತತ್ರ ತಥಾ ಚೋಕ್ತ್ವಾ ವಿನಿಶ್ಚಯಂ।
05081057c ಅನುಜ್ಞಾತೋ ನಿವವೃತೇ ಪರಿಷ್ವಜ್ಯ ಜನಾರ್ದನಂ।।
ಕೇಶವನಿಗೆ ಈ ರೀತಿ ತನ್ನ ನಿಶ್ಚಯವನ್ನು ಹೇಳಿ ಪಾರ್ಥನು ಜನಾರ್ದನನನ್ನು ಆಲಂಗಿಸಿ, ಅಪ್ಪಣೆಪಡೆದು, ಹಿಂದಿರುಗಿದನು.
05081058a ತೇಷು ರಾಜಸು ಸರ್ವೇಷು ನಿವೃತ್ತೇಷು ಜನಾರ್ದನಃ।
05081058c ತೂರ್ಣಮಭ್ಯಪತದ್ಧೃಷ್ಟಃ ಸೈನ್ಯಸುಗ್ರೀವವಾಹನಃ।।
ಆ ಎಲ್ಲ ರಾಜರೂ ಹಿಂದಿರುಗಿ ಹೋದ ನಂತರ ಜನಾರ್ದನನು ಸೈನ್ಯ ಸುಗ್ರೀವ ವಾಹನನಾಗಿ ರೆಕ್ಕೆಗಳ ಮೂಲಕ ಹಾರಿಹೋಗುತ್ತಿರುವವನಂತೆ ಕಂಡನು.
05081059a ತೇ ಹಯಾ ವಾಸುದೇವಸ್ಯ ದಾರುಕೇಣ ಪ್ರಚೋದಿತಾಃ।
05081059c ಪಂಥಾನಮಾಚೇಮುರಿವ ಗ್ರಸಮಾನಾ ಇವಾಂಬರಂ।।
ದಾರುಕನಿಂದ ಪ್ರಚೋದಿತವಾದ ವಾಸುದೇವನ ಆ ಕುದುರೆಗಳು ದಾರಿಯನ್ನು ಬಿಟ್ಟು ಆಕಾಶಕ್ಕೆ ಏರಿ ಹೋಗುತ್ತಿವೆಯೋ ಎಂಬಂತೆ ಸಾಗುತ್ತಿದ್ದವು.
05081060a ಅಥಾಪಶ್ಯನ್ಮಹಾಬಾಹುರ್ಋಷೀನಧ್ವನಿ ಕೇಶವಃ।
05081060c ಬ್ರಾಹ್ಮ್ಯಾ ಶ್ರಿಯಾ ದೀಪ್ಯಮಾನಾನ್ಸ್ಥಿತಾನುಭಯತಃ ಪಥಿ।।
ಆಗ ಆ ಮಹಾಬಾಹು ಕೇಶವನು ದಾರಿಯ ಎರಡೂ ಕಡೆಗಳಲ್ಲಿ ನಿಂತಿದ್ದ ಬ್ರಹ್ಮಶ್ರೀಯಿಂದ ಬೆಳಗುತ್ತಿದ್ದ ಋಷಿಗಳನ್ನು ನೋಡಿದನು.
05081061a ಸೋಽವತೀರ್ಯ ರಥಾತ್ತೂರ್ಣಮಭಿವಾದ್ಯ ಜನಾರ್ದನಃ।
05081061c ಯಥಾವತ್ತಾನೃಷೀನ್ಸರ್ವಾನಭ್ಯಭಾಷತ ಪೂಜಯನ್।।
ತಕ್ಷಣವೇ ಜನಾರ್ದನನು ರಥದಿಂದಿಳಿದು ನಮಸ್ಕರಿಸಿ, ಯಥಾವತ್ತಾಗಿ ಋಷಿಗಳನ್ನು ಪೂಜಿಸಿ ಮಾತನಾಡಿದನು:
05081062a ಕಚ್ಚಿಲ್ಲೋಕೇಷು ಕುಶಲಂ ಕಚ್ಚಿದ್ಧರ್ಮಃ ಸ್ವನುಷ್ಠಿತಃ।
05081062c ಬ್ರಾಹ್ಮಣಾನಾಂ ತ್ರಯೋ ವರ್ಣಾಃ ಕಚ್ಚಿತ್ತಿಷ್ಠಂತಿ ಶಾಸನೇ।।
“ಲೋಕಗಳಲ್ಲಿ ಕುಶಲವೇ? ಧರ್ಮವು ನೆಲೆಗೊಂಡಿದೆಯೇ? ಮೂರೂ ವರ್ಣದವರೂ ಬ್ರಾಹ್ಮಣರ ಶಾಸನದಡಿಯಲ್ಲಿದ್ದಾರೆಯೇ?”
05081063a ತೇಭ್ಯಃ ಪ್ರಯುಜ್ಯ ತಾಂ ಪೂಜಾಂ ಪ್ರೋವಾಚ ಮಧುಸೂದನಃ।
05081063c ಭಗವಂತಃ ಕ್ವ ಸಂಸಿದ್ಧಾಃ ಕಾ ವೀಥೀ ಭವತಾಮಿಹ।।
05081064a ಕಿಂ ವಾ ಭಗವತಾಂ ಕಾರ್ಯಮಹಂ ಕಿಂ ಕರವಾಣಿ ವಃ।
05081064c ಕೇನಾರ್ಥೇನೋಪಸಂಪ್ರಾಪ್ತಾ ಭಗವಂತೋ ಮಹೀತಲಂ।।
ಅವರನ್ನು ಪೂಜಿಸಿ ಮಧುಸೂದನು ಮುಂದುವರಿಸಿದನು: “ಭಗವಂತರೇ! ನಿಮ್ಮ ಸಿದ್ಧಿಯು ಎಲ್ಲಿಯವರೆಗೆ ಬಂದಿದೆ? ಯಾವ ಮಾರ್ಗವು ನಿಮ್ಮನ್ನು ಇಲ್ಲಿಯವರೆಗೆ ಕರೆತಂದಿತು? ನೀವುಗಳು ಏನಾದರೂ ಆಗಬೇಕೆಂದು ಬಯಸಿದ್ದೀರೇ? ನಾನು ನಿಮಗೋಸ್ಕರ ಏನು ಮಾಡಲಿ? ಭಗವಂತರಾದ ನೀವು ಯಾವ ಉದ್ದೇಶದಿಂದ ಈ ಭೂಮಿಗೆ ಬಂದಿದ್ದೀರಿ?”
05081065a ತಮಬ್ರವೀಜ್ಜಾಮದಗ್ನ್ಯ ಉಪೇತ್ಯ ಮಧುಸೂದನಂ।
05081065c ಪರಿಷ್ವಜ್ಯ ಚ ಗೋವಿಂದಂ ಪುರಾ ಸುಚರಿತೇ ಸಖಾ।।
ಜಾಮದಗ್ನಿಯು ಮಧುಸೂದನನ ಬಳಿಸಾರಿ, ಹಿಂದೆ ಉತ್ತಮ ಕಾರ್ಯಗಳಲ್ಲಿ ಸಖನಾಗಿದ್ದ ಗೋವಿಂದನನ್ನು ಆಲಂಗಿಸಿ ಹೇಳಿದನು:
05081066a ದೇವರ್ಷಯಃ ಪುಣ್ಯಕೃತೋ ಬ್ರಾಹ್ಮಣಾಶ್ಚ ಬಹುಶ್ರುತಾಃ।
05081066c ರಾಜರ್ಷಯಶ್ಚ ದಾಶಾರ್ಹ ಮಾನಯಂತಸ್ತಪಸ್ವಿನಃ।।
05081067a ದೇವಾಸುರಸ್ಯ ದ್ರಷ್ಟಾರಃ ಪುರಾಣಸ್ಯ ಮಹಾದ್ಯುತೇ।
“ದಾಶಾರ್ಹ! ಮಹಾದ್ಯುತೇ! ಪುಣ್ಯಕೃತ ದೇವರ್ಷಿಗಳೂ, ಬಹುಶ್ರುತ ಬ್ರಾಹ್ಮಣರೂ, ರಾಜರ್ಷಿಗಳೂ, ಮಾನಯಂತ ತಪಸ್ವಿಗಳೂ ಹಿಂದೆ ನಡೆದಿದ್ದ ದೇವಾಸುರರ ಯುದ್ಧವನ್ನು ನೋಡಿದ್ದರು.
05081067c ಸಮೇತಂ ಪಾರ್ಥಿವಂ ಕ್ಷತ್ರಂ ದಿದೃಕ್ಷಂತಶ್ಚ ಸರ್ವತಃ।।
05081068a ಸಭಾಸದಶ್ಚ ರಾಜಾನಸ್ತ್ವಾಂ ಚ ಸತ್ಯಂ ಜನಾರ್ದನ।
ಈಗ ಅವರು ಇಲ್ಲಿ ಎಲ್ಲೆಡೆಯಿಂದ ಬಂದು ಸೇರಿರುವ ಕ್ಷತ್ರಿಯ ಪಾರ್ಥಿವರನ್ನು, ರಾಜರ ಸಭಾಸದರನ್ನೂ ಜನಾರ್ದನ ನಿನ್ನ ಸತ್ಯವನ್ನೂ ನೋಡಲು ಬಯಸಿದ್ದಾರೆ.
05081068c ಏತನ್ಮಹತ್ಪ್ರೇಕ್ಷಣೀಯಂ ದ್ರಷ್ಟುಂ ಗಚ್ಚಾಮ ಕೇಶವ।।
05081069a ಧರ್ಮಾರ್ಥಸಹಿತಾ ವಾಚಃ ಶ್ರೋತುಮಿಚ್ಚಾಮ ಮಾಧವ।
05081069c ತ್ವಯೋಚ್ಯಮಾನಾಃ ಕುರುಷು ರಾಜಮಧ್ಯೇ ಪರಂತಪ।।
ಈ ಮಹಾದೃಶ್ಯವನ್ನು ನೋಡಲು ನಾವು ಹೋಗುತ್ತಿದ್ದೇವೆ ಕೇಶವ! ಮಾಧವ! ಪರಂತಪ! ಕುರುರಾಜರ ಮಧ್ಯದಲ್ಲಿ ನೀನು ಹೇಳುವ ಧರ್ಮಾರ್ಥಸಹಿತ ಮಾತುಗಳನ್ನು ಕೇಳಲು ಬಯಸುತ್ತೇವೆ.
05081070a ಭೀಷ್ಮದ್ರೋಣಾದಯಶ್ಚೈವ ವಿದುರಶ್ಚ ಮಹಾಮತಿಃ।
05081070c ತ್ವಂ ಚ ಯಾದವಶಾರ್ದೂಲ ಸಭಾಯಾಂ ವೈ ಸಮೇಷ್ಯಥ।।
ಭೀಷ್ಮ, ದ್ರೋಣಾದಿಗಳು, ಮಹಾಮತಿ ವಿದುರ ಮತ್ತು ಯಾದವಶಾರ್ದೂಲ ನೀನೂ ಕೂಡ ಸಭೆಯಲ್ಲಿ ಸೇರುವಿರಿ!
05081071a ತವ ವಾಕ್ಯಾನಿ ದಿವ್ಯಾನಿ ತತ್ರ ತೇಷಾಂ ಚ ಮಾಧವ।
05081071c ಶ್ರೋತುಮಿಚ್ಚಾಮ ಗೋವಿಂದ ಸತ್ಯಾನಿ ಚ ಶುಭಾನಿ ಚ।।
ಮಾಧವ! ಗೋವಿಂದ! ಅಲ್ಲಿ ನಿನ್ನ ಮತ್ತು ಅವರ ಸತ್ಯ-ಶುಭ ವಾಕ್ಯಗಳನ್ನು ಕೇಳಲು ಬಯಸುತ್ತೇವೆ.
05081072a ಆಪೃಷ್ಟೋಽಸಿ ಮಹಾಬಾಹೋ ಪುನರ್ದ್ರಕ್ಷ್ಯಾಮಹೇ ವಯಂ।
05081072c ಯಾಹ್ಯವಿಘ್ನೇನ ವೈ ವೀರ ದ್ರಕ್ಷ್ಯಾಮಸ್ತ್ವಾಂ ಸಭಾಗತಂ।।
ಮಹಾಬಾಹೋ! ಮುಂದೆಸಾಗು! ನಾವು ಪುನಃ ನಿನ್ನನ್ನು ಕಾಣುತ್ತೇವೆ. ವೀರ! ಅವಿಘ್ನನಾಗಿ ಪ್ರಯಾಣಿಸು. ಸಭೆಗೆ ಬಂದು ನಿನ್ನನ್ನು ಕಾಣುತ್ತೇವೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣಪ್ರಸ್ತಾನೇ ಏಕಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣಪ್ರಸ್ತಾನ ಎನ್ನುವ ಎಂಭತ್ತೊಂದನೆಯ ಅಧ್ಯಾಯವು.