ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 79
ಸಾರ
“ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು” ಎಂದು ಸಹದೇವನು ಕೃಷ್ಣನಿಗೆ ಹೇಳಲು (1-4), “ಈ ಶೂರ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ” ಎಂದು ಸಾತ್ಯಕಿಯು ಸಹದೇವನನ್ನು ಅನುಮೋದಿಸಿದುದು (5-9).
05079001 ಸಹದೇವ ಉವಾಚ।
05079001a ಯದೇತತ್ಕಥಿತಂ ರಾಜ್ಞಾ ಧರ್ಮ ಏಷ ಸನಾತನಃ।
05079001c ಯಥಾ ತು ಯುದ್ಧಮೇವ ಸ್ಯಾತ್ತಥಾ ಕಾರ್ಯಮರಿಂದಮ।।
ಸಹದೇವನು ಹೇಳಿದನು: “ಅರಿಂದಮ! ರಾಜನು ಏನು ಹೇಳಿದನೋ ಅದು ಸನಾತನ ಧರ್ಮ. ಹಾಗಿದ್ದರೂ ಯುದ್ಧವೇ ನಡೆಯುವ ಹಾಗೆ ಮಾಡು!
05079002a ಯದಿ ಪ್ರಶಮಮಿಚ್ಚೇಯುಃ ಕುರವಃ ಪಾಂಡವೈಃ ಸಹ।
05079002c ತಥಾಪಿ ಯುದ್ಧಂ ದಾಶಾರ್ಹ ಯೋಜಯೇಥಾಃ ಸಹೈವ ತೈಃ।।
ದಾಶಾರ್ಹ! ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು.
05079003a ಕಥಂ ನು ದೃಷ್ಟ್ವಾ ಪಾಂಚಾಲೀಂ ತಥಾ ಕ್ಲಿಷ್ಟಾಂ ಸಭಾಗತಾಂ।
05079003c ಅವಧೇನ ಪ್ರಶಾಮ್ಯೇತ ಮಮ ಮನ್ಯುಃ ಸುಯೋಧನೇ।।
ಸುಯೋಧನನ ವಧೆಯಾಗದೇ ಪಾಂಚಾಲಿಯನ್ನು ಸಭೆಗೆ ಎಳೆತಂದು ಕಾಡಿಸಿದುದನ್ನು ನೋಡಿದ ನನ್ನ ಈ ಸಿಟ್ಟು ಹೇಗೆ ಶಾಂತಗೊಳ್ಳುತ್ತದೆ?
05079004a ಯದಿ ಭೀಮಾರ್ಜುನೌ ಕೃಷ್ಣ ಧರ್ಮರಾಜಶ್ಚ ಧಾರ್ಮಿಕಃ।
05079004c ಧರ್ಮಮುತ್ಸೃಜ್ಯ ತೇನಾಹಂ ಯೋದ್ಧುಮಿಚ್ಚಾಮಿ ಸಮ್ಯುಗೇ।।
ಕೃಷ್ಣ! ಒಂದು ವೇಳೆ ಭೀಮಾರ್ಜುನರಿಬ್ಬರೂ ಮತ್ತು ಧರ್ಮರಾಜನೂ ಧಾರ್ಮಿಕರಾಗಿದ್ದರೆ, ನಾನು ಧರ್ಮವನ್ನು ತೊರೆದು ಯುದ್ಧದಲ್ಲಿ ಅವರೊಂದಿಗೆ ಹೋರಾಡಲು ಬಯಸುತ್ತೇನೆ.”
05079005 ಸಾತ್ಯಕಿರುವಾಚ।
05079005a ಸತ್ಯಮಾಹ ಮಹಾಬಾಹೋ ಸಹದೇವೋ ಮಹಾಮತಿಃ।
05079005c ದುರ್ಯೋಧನವಧೇ ಶಾಂತಿಸ್ತಸ್ಯ ಕೋಪಸ್ಯ ಮೇ ಭವೇತ್।।
ಸಾತ್ಯಕಿಯು ಹೇಳಿದನು: “ಮಹಾಬಾಹೋ! ಮಹಾಮತಿ ಸಹದೇವನು ಸತ್ಯವನ್ನೇ ನುಡಿದಿದ್ದಾನೆ. ದುರ್ಯೋದನನ ವಧೆಯಿಂದ ಮಾತ್ರ ಅವನ ಮೇಲೆ ನನಗಿರುವ ಕೋಪವು ಶಾಂತವಾಗುವುದು.
05079006a ಜಾನಾಸಿ ಹಿ ಯಥಾ ದೃಷ್ಟ್ವಾ ಚೀರಾಜಿನಧರಾನ್ವನೇ।
05079006c ತವಾಪಿ ಮನ್ಯುರುದ್ಭೂತೋ ದುಃಖಿತಾನ್ಪ್ರೇಕ್ಷ್ಯ ಪಾಂಡವಾನ್।।
ವನದಲ್ಲಿ ಚೀರಜಿನಗಳನ್ನು ಧರಿಸಿ ದುಃಖಿತರಾಗಿದ್ದ ಪಾಂಡವರನ್ನು ನೋಡಿ ನಿನಗೂ ಕೂಡ ಕೋಪವುಂಟಾಗಿತ್ತು ಎಂದು ನಿನಗೆ ತಿಳಿದಿದೆ.
05079007a ತಸ್ಮಾನ್ಮಾದ್ರೀಸುತಃ ಶೂರೋ ಯದಾಹ ಪುರುಷರ್ಷಭಃ।
05079007c ವಚನಂ ಸರ್ವಯೋಧಾನಾಂ ತನ್ಮತಂ ಪುರುಷೋತ್ತಮ।।
ಪುರುಷೋತ್ತಮ! ಆದುದರಿಂದ ಈ ಶೂರ ಪುರುಷರ್ಷಭ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ!””
05079008 ವೈಶಂಪಾಯನ ಉವಾಚ।
05079008a ಏವಂ ವದತಿ ವಾಕ್ಯಂ ತು ಯುಯುಧಾನೇ ಮಹಾಮತೌ।
05079008c ಸುಭೀಮಃ ಸಿಂಹನಾದೋಽಭೂದ್ಯೋಧಾನಾಂ ತತ್ರ ಸರ್ವಶಃ।।
ವೈಶಂಪಾಯನನು ಹೇಳಿದನು: “ಮಹಾಮತಿ ಯುಯುಧಾನನು ಹೀಗೆ ಮಾತನ್ನಾಡಲು ಅಲ್ಲಿ ಎಲ್ಲ ಯೋಧರಿಂದ ಭಯಂಕರ ಸಿಂಹನಾದವು ಮೊಳಗಿತು.
05079009a ಸರ್ವೇ ಹಿ ಸರ್ವತೋ ವೀರಾಸ್ತದ್ವಚಃ ಪ್ರತ್ಯಪೂಜಯನ್।
05079009c ಸಾಧು ಸಾಧ್ವಿತಿ ಶೈನೇಯಂ ಹರ್ಷಯಂತೋ ಯುಯುತ್ಸವಃ।।
ಎಲ್ಲಾ ಕಡೆಯಿಂದ ಎಲ್ಲರೂ ಆ ವೀರನ ಮಾತನ್ನು ಗೌರವಿಸಿ “ಸಾಧು! ಸಾಧು!” ಎಂದು ಕೂಗುತ್ತಾ ಶೈನಿಯನ್ನು ಹರ್ಷಗೊಳಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಸಹದೇವಸಾತ್ಯಕಿವಾಕ್ಯೇ ಏಕೋನಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಸಹದೇವಸಾತ್ಯಕಿವಾಕ್ಯ ಎನ್ನುವ ಎಪ್ಪತ್ತೊಂಭತ್ತನೆಯ ಅಧ್ಯಾಯವು.