ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 78
ಸಾರ
ಬರುವ ಆಪತ್ತನ್ನೆಲ್ಲವನ್ನೂ ನೀನು ತಡೆಯಬಲ್ಲೆ ಎಂದು ನಕುಲನು ಕೃಷ್ಣನಿಗೆ ಹೇಳಿದುದು (1-18).
05078001 ನಕುಲ ಉವಾಚ।
05078001a ಉಕ್ತಂ ಬಹುವಿಧಂ ವಾಕ್ಯಂ ಧರ್ಮರಾಜೇನ ಮಾಧವ।
05078001c ಧರ್ಮಜ್ಞೇನ ವದಾನ್ಯೇನ ಧರ್ಮಯುಕ್ತಂ ಚ ತತ್ತ್ವತಃ।।
ನಕುಲನು ಹೇಳಿದನು: “ಮಾಧವ! ಧರ್ಮರಾಜನು ಬಹುವಿಧದಲ್ಲಿ ಮಾತುಗಳನ್ನಾಡಿದ್ದಾನೆ. ಧರ್ಮಜ್ಞನ ಈ ಮಾತುಗಳು ಧರ್ಮಯುಕ್ತವಾಗಿಯೂ ತತ್ತ್ವಯುಕ್ತವಾಗಿಯೂ ಇವೆ.
05078002a ಮತಮಾಜ್ಞಾಯ ರಾಜ್ಞಾಶ್ಚ ಭೀಮಸೇನೇನ ಮಾಧವ।
05078002c ಸಂಶಮೋ ಬಾಹುವೀರ್ಯಂ ಚ ಖ್ಯಾಪಿತಂ ಮಾಧವಾತ್ಮನಃ।।
ಮಾಧವ! ರಾಜನ ಮತವನ್ನು ತಿಳಿದ ಭೀಮಸೇನನು ಶಮ ಮತ್ತು ಬಾಹುವೀರ್ಯ ಎರಡರ ಕುರಿತೂ ಮಾತನಾಡಿದ್ದಾನೆ.
05078003a ತಥೈವ ಫಲ್ಗುನೇನಾಪಿ ಯದುಕ್ತಂ ತತ್ತ್ವಯಾ ಶ್ರುತಂ।
05078003c ಆತ್ಮನಶ್ಚ ಮತಂ ವೀರ ಕಥಿತಂ ಭವತಾಸಕೃತ್।।
ಹಾಗೆಯೇ ಫಲ್ಗುನನು ಏನು ಹೇಳಬೇಕೆಂದಿದ್ದನೋ ಅದನ್ನೂ ಕೂಡ ನೀನು ಕೇಳಿದ್ದೀಯೆ. ವೀರ! ನಿನ್ನ ಸ್ವಂತ ಮತವನ್ನು ಕೂಡ ನೀನು ಪುನಃ ಪುನಃ ಹೇಳಿದ್ದೀಯೆ.
05078004a ಸರ್ವಮೇತದತಿಕ್ರಮ್ಯ ಶ್ರುತ್ವಾ ಪರಮತಂ ಭವಾನ್।
05078004c ಯತ್ಪ್ರಾಪ್ತಕಾಲಂ ಮನ್ಯೇಥಾಸ್ತತ್ಕುರ್ಯಾಃ ಪುರುಷೋತ್ತಮ।।
ಪುರುಷೋತ್ತಮ! ಈಗ ನೀನು ಕೇಳಿದ ಎಲ್ಲವನ್ನೂ ಬದಿಗೊತ್ತಿ, ಬಂದೊದಗಿರುವ ಈ ಸಮಯದಲ್ಲಿ ಏನನ್ನು ಮಾಡಬೇಕೆಂದು ನಿನಗನ್ನಿಸುತ್ತದೆಯೋ ಅದನ್ನು ಮಾಡು.
05078005a ತಸ್ಮಿಂಸ್ತಸ್ಮಿನ್ನಿಮಿತ್ತೇ ಹಿ ಮತಂ ಭವತಿ ಕೇಶವ।
05078005c ಪ್ರಾಪ್ತಕಾಲಂ ಮನುಷ್ಯೇಣ ಸ್ವಯಂ ಕಾರ್ಯಮರಿಂದಮ।।
ಕೇಶವ! ಅರಿಂದಮ! ಪ್ರತಿಯೊಂದಕ್ಕೂ ಅಭಿಪ್ರಾಯಗಳು ಇರುತ್ತವೆ. ಆದರೆ ಬಂದಿರುವ ಕಾಲವನ್ನು ನೋಡಿ ಮನುಷ್ಯನು ಸ್ವತಃ ಕಾರ್ಯವನ್ನು ನಿರ್ಧರಿಸಬೇಕು.
05078006a ಅನ್ಯಥಾ ಚಿಂತಿತೋ ಹ್ಯರ್ಥಃ ಪುನರ್ಭವತಿ ಸೋಽನ್ಯಥಾ।
05078006c ಅನಿತ್ಯಮತಯೋ ಲೋಕೇ ನರಾಃ ಪುರುಷಸತ್ತಮ।।
ಪುರುಷಸತ್ತಮ! ವಿಷಯವನ್ನು ಒಂದು ರೀತಿಯಲ್ಲಿ ಯೋಚಿಸಿದರೆ ಅದು ಬೇರೆಯೇ ರೀತಿಯಲ್ಲಿ ನಡೆಯಬಹುದು. ಈ ಲೋಕದಲ್ಲಿ ಜನರ ಅಭಿಪ್ರಾಯಗಳು ಬದಲಾಗುತ್ತಿರುತ್ತವೆ.
05078007a ಅನ್ಯಥಾ ಬುದ್ಧಯೋ ಹ್ಯಾಸನ್ನಸ್ಮಾಸು ವನವಾಸಿಷು।
05078007c ಅದೃಶ್ಯೇಷ್ವನ್ಯಥಾ ಕೃಷ್ಣ ದೃಶ್ಯೇಷು ಪುನರನ್ಯಥಾ।।
ಕೃಷ್ಣ! ನಾವು ವನವಾಸದಲ್ಲಿರುವಾಗ ನಮ್ಮಲ್ಲಿ ಒಂದು ರೀತಿಯ ಯೋಚನೆಯಿತ್ತು, ಅಜ್ಞಾತವಾಸದಲ್ಲಿರುವಾಗ ಬೇರೆ ಯೋಚನೆಯಿತ್ತು, ಮತ್ತು ಈಗ ಪುನಃ ಎಲ್ಲರಿಗೂ ಕಾಣಿಸುವಂತಿರುವಾಗ ಬೇರೆಯೇ ಯೋಚನೆಯಿದೆ.
05078008a ಅಸ್ಮಾಕಮಪಿ ವಾರ್ಷ್ಣೇಯ ವನೇ ವಿಚರತಾಂ ತದಾ।
05078008c ನ ತಥಾ ಪ್ರಣಯೋ ರಾಜ್ಯೇ ಯಥಾ ಸಂಪ್ರತಿ ವರ್ತತೇ।।
ವಾರ್ಷ್ಣೇಯ! ಅಂದು ವನದಲ್ಲಿ ಅಲೆಯುತ್ತಿರುವಾಗ ನಮಗೆ ರಾಜ್ಯದ ಕುರಿತು, ಈಗ ಇರುವಷ್ಟು ಆಸೆಯಿರಲಿಲ್ಲ.
05078009a ನಿವೃತ್ತವನವಾಸಾನ್ನಃ ಶ್ರುತ್ವಾ ವೀರ ಸಮಾಗತಾಃ।
05078009c ಅಕ್ಷೌಹಿಣ್ಯೋ ಹಿ ಸಪ್ತೇಮಾಸ್ತ್ವತ್ಪ್ರಸಾದಾಜ್ಜನಾರ್ದನ।।
ವೀರ! ಜನಾರ್ದನ! ವನವಾಸದಿಂದ ಹಿಂದಿರುಗಿದ್ದಾರೆ ಎಂದು ಕೇಳಿದ ನಿನ್ನ ಪ್ರಸಾದದಿಂದಲೇ ಈ ಏಳು ಅಕ್ಷೌಹಿಣಿಗಳು ಬಂದು ಸೇರಿವೆ.
05078010a ಇಮಾನ್ ಹಿ ಪುರುಷವ್ಯಾಘ್ರಾನಚಿಂತ್ಯಬಲಪೌರುಷಾನ್।
05078010c ಆತ್ತಶಸ್ತ್ರಾನ್ ರಣೇ ದೃಷ್ಟ್ವಾ ನ ವ್ಯಥೇದಿಹ ಕಃ ಪುಮಾನ್।।
ಯೋಚಿಸಲೂ ಅಸಾಧ್ಯವಾದ ಬಲಪೌರುಷಗಳುಳ್ಳ, ಶಸ್ತ್ರಗಳನ್ನು ಹಿಡಿಯುವ ಈ ಪುರುಷವ್ಯಾಘ್ರರನ್ನು ಕಂಡು ರಣದಲ್ಲಿ ಯಾವ ಪುರುಷನು ವ್ಯಥೆಗೊಳ್ಳುವುದಿಲ್ಲ?
05078011a ಸ ಭವಾನ್ಕುರುಮಧ್ಯೇ ತಂ ಸಾಂತ್ವಪೂರ್ವಂ ಭಯಾನ್ವಿತಂ।
05078011c ಬ್ರೂಯಾದ್ವಾಕ್ಯಂ ಯಥಾ ಮಂದೋ ನ ವ್ಯಥೇತ ಸುಯೋಧನಃ।।
ಕುರುಮಧ್ಯದಲ್ಲಿ ನೀನು ಮಂದಬುದ್ಧಿ ಸುಯೋಧನನು ವ್ಯಥಿತನಾಗದಂತೆ ಸಾಂತ್ವಪೂರ್ವಕನಾಗಿ ಭಯಾನ್ವಿತನಾಗಿ ಮಾತನಾಡಬೇಕು.
05078012a ಯುಧಿಷ್ಠಿರಂ ಭೀಮಸೇನಂ ಬೀಭತ್ಸುಂ ಚಾಪರಾಜಿತಂ।
05078012c ಸಹದೇವಂ ಚ ಮಾಂ ಚೈವ ತ್ವಾಂ ಚ ರಾಮಂ ಚ ಕೇಶವ।।
05078013a ಸಾತ್ಯಕಿಂ ಚ ಮಹಾವೀರ್ಯಂ ವಿರಾಟಂ ಚ ಸಹಾತ್ಮಜಂ।
05078013c ದ್ರುಪದಂ ಚ ಸಹಾಮಾತ್ಯಂ ಧೃಷ್ಟದ್ಯುಮ್ನಂ ಚ ಪಾರ್ಷತಂ।।
05078014a ಕಾಶಿರಾಜಂ ಚ ವಿಕ್ರಾಂತಂ ಧೃಷ್ಟಕೇತುಂ ಚ ಚೇದಿಪಂ।
05078014c ಮಾಂಸಶೋಣಿತಭೃನ್ಮರ್ತ್ಯಃ ಪ್ರತಿಯುಧ್ಯೇತ ಕೋ ಯುಧಿ।।
ಕೇಶವ! ರಕ್ತಮಾಂಸಗಳಿಂದ ಕೂಡಿದ ಯಾವ ಮನುಷ್ಯನು ತಾನೇ ಯುದ್ಧದಲ್ಲಿ ಇವರ ಯದುರಾಳಿಯಾಗಿ ಹೋರಾಡುತ್ತಾನೆ? - ಯುಧಿಷ್ಠಿರ, ಭೀಮಸೇನ, ಅಪರಾಜಿತ ಬೀಭತ್ಸು, ಸಹದೇವ, ನಾನು, ನೀನು, ರಾಮ, ಸಾತ್ಯಕಿ, ಮಕ್ಕಳೊಂದಿಗೆ ಮಹಾವೀರ್ಯ ವಿರಾಟ, ಅಮಾತ್ಯ-ದೃಷ್ಟದ್ಯುಮ್ನನೊಂದಿಗೆ ಪಾರ್ಷತ ದ್ರುಪದ, ವಿಕ್ರಾಂತ ಕಾಶಿರಾಜ ಮತ್ತು ಚೇದಿಪತಿ ಧೃಷ್ಟಕೇತು.
05078015a ಸ ಭವಾನ್ಗಮನಾದೇವ ಸಾಧಯಿಷ್ಯತ್ಯಸಂಶಯಂ।
05078015c ಇಷ್ಟಮರ್ಥಂ ಮಹಾಬಾಹೋ ಧರ್ಮರಾಜಸ್ಯ ಕೇವಲಂ।।
ಮಹಾಬಾಹೋ! ಕೇವಲ ಹೋಗುವುದರಿಂದಲೇ ನೀನು ಧರ್ಮರಾಜನ ಇಷ್ಟವನ್ನು ಒಳಿತನ್ನು ಸಾಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.
05078016a ವಿದುರಶ್ಚೈವ ಭೀಷ್ಮಶ್ಚ ದ್ರೋಣಶ್ಚ ಸಹಬಾಹ್ಲಿಕಃ।
05078016c ಶ್ರೇಯಃ ಸಮರ್ಥಾ ವಿಜ್ಞಾತುಮುಚ್ಯಮಾನಂ ತ್ವಯಾನಘ।।
ಅನಘ! ನೀನು ಹೇಳಹೊರಟಿರುವುದು ಶ್ರೇಯಸ್ಕರವಾದುದು ಎನ್ನುವುದನ್ನು ವಿದುರ, ಭೀಷ್ಮ, ದ್ರೋಣ ಮತ್ತು ಬಾಹ್ಲೀಕರು ಅರ್ಥಮಾಡಿಕೊಳ್ಳಲು ಸಮರ್ಥರು.
05078017a ತೇ ಚೈನಮನುನೇಷ್ಯಂತಿ ಧೃತರಾಷ್ಟ್ರಂ ಜನಾಧಿಪಂ।
05078017c ತಂ ಚ ಪಾಪಸಮಾಚಾರಂ ಸಹಾಮಾತ್ಯಂ ಸುಯೋಧನಂ।।
ಅವರೇ ಜನಾಧಿಪ ಧೃತರಾಷ್ಟ್ರನನ್ನು, ಅಮಾತ್ಯರೂ ಕೂಡಿ ಪಾಪಿ ಸುಯೋಧನನನ್ನು ದಾರಿಗೆ ತರುತ್ತಾರೆ.
05078018a ಶ್ರೋತಾ ಚಾರ್ಥಸ್ಯ ವಿದುರಸ್ತ್ವಂ ಚ ವಕ್ತಾ ಜನಾರ್ದನ।
05078018c ಕಮಿವಾರ್ಥಂ ವಿವರ್ತಂತಂ ಸ್ಥಾಪಯೇತಾಂ ನ ವರ್ತ್ಮನಿ।।
ಜನಾರ್ದನ! ಉರುಳಿಕೊಂಡು ಬರುತ್ತಿರುವ ಏನನ್ನು ತಾನೇ ಅರ್ಥವತ್ತಾಗಿ ಹೇಳುವ ನೀನು ಮತ್ತು ಕೇಳಿ ಅರ್ಥೈಸಿಕೊಳ್ಳುವ ವಿದುರ ಇಬ್ಬರಿಗೂ ತಡೆದು ನಿಲ್ಲಿಸಲಿಕ್ಕಾಗುವುದಿಲ್ಲ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ನಕುಲವಾಕ್ಯೇ ಅಷ್ಟಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ನಕುಲವಾಕ್ಯ ಎನ್ನುವ ಎಪ್ಪತ್ತೆಂಟನೆಯ ಅಧ್ಯಾಯವು.