ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 77
ಸಾರ
“ಮಾತು ಮತ್ತು ಕರ್ಮಗಳಿಂದ ಏನೆಲ್ಲ ಮಾಡಲಿಕ್ಕೆ ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತೇನೆ. ಆದರೆ ಅವರೊಂದಿಗೆ ಶಾಂತಿಯಾಗುತ್ತದೆ ಎಂದು ನನಗನ್ನಿಸುವುದಿಲ್ಲ” ಎಂದು ಕೃಷ್ಣನು ಅರ್ಜುನನಿಗೆ ಉತ್ತರಿಸಿದುದು (1-21).
05077001 ಭಗವಾನುವಾಚ।
05077001a ಏವಮೇತನ್ಮಹಾಬಾಹೋ ಯಥಾ ವದಸಿ ಪಾಂಡವ।
05077001c ಸರ್ವಂ ತ್ವಿದಂ ಸಮಾಯತ್ತಂ ಬೀಭತ್ಸೋ ಕರ್ಮಣೋರ್ದ್ವಯೋಃ।।
ಭಗವಂತನು ಹೇಳಿದನು: “ಮಹಾಬಾಹೋ! ಪಾಂಡವ! ಇದು ನೀನು ಹೇಳಿದಂತೆಯೇ! ಬೀಭತ್ಸೋ! ಆದರೂ ಇವೆಲ್ಲವೂ ಎರಡು ರೀತಿಯ ಕರ್ಮಗಳ ಮೇಲೆ ಅವಲಂಬಿಸಿವೆ.
05077002a ಕ್ಷೇತ್ರಂ ಹಿ ರಸವಚ್ಚುದ್ಧಂ ಕರ್ಷಕೇಣೋಪಪಾದಿತಂ।
05077002c ಋತೇ ವರ್ಷಂ ನ ಕೌಂತೇಯ ಜಾತು ನಿರ್ವರ್ತಯೇತ್ಫಲಂ।।
ರಸವತ್ತಾದ ಶುದ್ಧ ಭೂಮಿಯನ್ನು ಕೃಷಿಕನು ಸಿದ್ಧಗೊಳಿಸಬಹುದು. ಆದರೆ, ಕೌಂತೇಯ! ಅಲ್ಲಿ ಮಳೆಯೇ ಬೀಳದಿದ್ದರೆ ಬೆಳೆಯನ್ನು ತೆಗೆಯಲು ಸೋಲುತ್ತಾನೆ.
05077003a ತತ್ರ ವೈ ಪೌರುಷಂ ಬ್ರೂಯುರಾಸೇಕಂ ಯತ್ನಕಾರಿತಂ।
05077003c ತತ್ರ ಚಾಪಿ ಧ್ರುವಂ ಪಶ್ಯೇಚ್ಚೋಷಣಂ ದೈವಕಾರಿತಂ।।
ಅಲ್ಲಿ ಪುರುಷನ ಪ್ರಯತ್ನದಿಂದ ಏರ್ಪಡಿಸಿದ ನೀರಾವರಿಯ ವ್ಯವಸ್ಥೆಯು ಬೆಳೆಯನ್ನು ತೆಗೆಯಲು ಸಾಧ್ಯಮಾಡುತ್ತದೆ ಎಂದು ಹೇಳುತ್ತಾರೆ. ಆದರೆ ಅಲ್ಲಿಯೂ ಕೂಡ ದೈವವು ಮಾಡಿಟ್ಟಂತೆ ಒಣಗಿ ಹೋಗುವುದನ್ನು ಖಂಡಿತವಾಗಿ ಕಾಣಬಹುದು.
05077004a ತದಿದಂ ನಿಶ್ಚಿತಂ ಬುದ್ಧ್ಯಾ ಪೂರ್ವೈರಪಿ ಮಹಾತ್ಮಭಿಃ।
05077004c ದೈವೇ ಚ ಮಾನುಷೇ ಚೈವ ಸಮ್ಯುಕ್ತಂ ಲೋಕಕಾರಣಂ।।
ನಮ್ಮ ಮಹಾತ್ಮ ಪೂರ್ವಜರು ತಮ್ಮ ಬುದ್ಧಿಯಿಂದ ಇದರ ಕುರಿತು ನಿಶ್ಚಯವನ್ನು ಕೊಟ್ಟಿದ್ದಾರೆ: ಲೋಕದ ಆಗುಹೋಗುಗಳು ದೈವ ಮತ್ತು ಮಾನುಷ ಕಾರಣಗಳೆರಡರ ಮೇಲೂ ನಿಂತಿದೆ.
05077005a ಅಹಂ ಹಿ ತತ್ಕರಿಷ್ಯಾಮಿ ಪರಂ ಪುರುಷಕಾರತಃ।
05077005c ದೈವಂ ತು ನ ಮಯಾ ಶಕ್ಯಂ ಕರ್ಮ ಕರ್ತುಂ ಕಥಂ ಚನ।।
ನಾನಾದರೋ ಪುರುಷನು ಕೊನೆಯದಾಗಿ ಏನನ್ನು ಮಾಡಬಲ್ಲನೋ ಅದನ್ನು ಮಾತ್ರ ಮಾಡುತ್ತೇನೆ. ಆದರೆ ದೈವದ ಕೆಲಸವನ್ನು ಮಾಡಲು ನಾನು ಎಂದೂ ಶಕ್ಯನಿಲ್ಲ.
05077006a ಸ ಹಿ ಧರ್ಮಂ ಚ ಸತ್ಯಂ ಚ ತ್ಯಕ್ತ್ವಾ ಚರತಿ ದುರ್ಮತಿಃ।
05077006c ನ ಹಿ ಸಂತಪ್ಯತೇ ತೇನ ತಥಾರೂಪೇಣ ಕರ್ಮಣಾ।।
ಆ ದುರ್ಮತಿಯಾದರೋ ಸತ್ಯ ಧರ್ಮಗಳನ್ನು ಬಿಸುಟು ನಡೆದುಕೊಳ್ಳುತ್ತಿದ್ದಾನೆ. ಆ ರೀತಿಯ ಕರ್ಮವು ಅವನನ್ನು ಸುಡುತ್ತಲೂ ಇಲ್ಲ.
05077007a ತಾಂ ಚಾಪಿ ಬುದ್ಧಿಂ ಪಾಪಿಷ್ಠಾಂ ವರ್ಧಯಂತ್ಯಸ್ಯ ಮಂತ್ರಿಣಃ।
05077007c ಶಕುನಿಃ ಸೂತಪುತ್ರಶ್ಚ ಭ್ರಾತಾ ದುಃಶಾಸನಸ್ತಥಾ।।
ಅವನ ಪಾಪಿಷ್ಠ ಬುದ್ಧಿಯನ್ನು ಅವನ ಮಂತ್ರಿಗಳಾದ ಶಕುನಿ, ಸೂತಪುತ್ರ, ಮತ್ತು ಸಹೋದರ ದುಃಶಾಸನರು ಬೆಳೆಸುತ್ತಿದ್ದಾರೆ.
05077008a ಸ ಹಿ ತ್ಯಾಗೇನ ರಾಜ್ಯಸ್ಯ ನ ಶಮಂ ಸಮುಪೇಷ್ಯತಿ।
05077008c ಅಂತರೇಣ ವಧಾತ್ಪಾರ್ಥ ಸಾನುಬಂಧಃ ಸುಯೋಧನಃ।।
ಪಾರ್ಥ! ಅವನು ರಾಜ್ಯವನ್ನು ಕೊಡುವುದರ ಮೂಲಕ ಶಾಂತಿಯನ್ನು ಬಯಸುವುದಿಲ್ಲ. ಅದಕ್ಕೆ ಮೊದಲು ಅನುಯಾಯಿಗಳೊಂದಿಗೆ ಸುಯೋಧನನನ್ನು ವಧಿಸಬೇಕಾಗುತ್ತದೆ.
05077009a ನ ಚಾಪಿ ಪ್ರಣಿಪಾತೇನ ತ್ಯಕ್ತುಮಿಚ್ಚತಿ ಧರ್ಮರಾಟ್।
05077009c ಯಾಚ್ಯಮಾನಸ್ತು ರಾಜ್ಯಂ ಸ ನ ಪ್ರದಾಸ್ಯತಿ ದುರ್ಮತಿಃ।।
ಶರಣು ಹೋಗುವುದರ ಮೂಲಕವೂ ಧರ್ಮರಾಜನು ರಾಜ್ಯವನ್ನು ತ್ಯಜಿಸಲು ಬಯಸುವುದಿಲ್ಲ. ಆ ದುರ್ಮತಿಯು ಕೇಳುವುದರಿಂದ ರಾಜ್ಯವನ್ನು ಕೊಡುವುದಿಲ್ಲ.
05077010a ನ ತು ಮನ್ಯೇ ಸ ತದ್ವಾಚ್ಯೋ ಯದ್ಯುಧಿಷ್ಠಿರಶಾಸನಂ।
05077010c ಉಕ್ತಂ ಪ್ರಯೋಜನಂ ತತ್ರ ಧರ್ಮರಾಜೇನ ಭಾರತ।।
ಭಾರತ! ಅಲ್ಲಿ ಧರ್ಮರಾಜನು ಹೇಳಿದ ಯುಧಿಷ್ಠಿರನ ಶಾಸನವನ್ನು ಹೇಳುವುದರಿಂದ ಏನಾದರೂ ಪ್ರಯೋಜನವಿದೆಯೆಂದು ನನಗನ್ನಿಸುವುದಿಲ್ಲ.
05077011a ತಥಾ ಪಾಪಸ್ತು ತತ್ಸರ್ವಂ ನ ಕರಿಷ್ಯತಿ ಕೌರವಃ।
05077011c ತಸ್ಮಿಂಶ್ಚಾಕ್ರಿಯಮಾಣೇಽಸೌ ಲೋಕವಧ್ಯೋ ಭವಿಷ್ಯತಿ।।
ಆ ಪಾಪಿ ಕೌರವನು ಹೇಳಿದಂತೆ ಏನನ್ನೂ ಮಾಡುವವನಲ್ಲ. ಹಾಗೆ ಮಾಡದೇ ಇದ್ದಲ್ಲಿ ಅವನು ಲೋಕದಲ್ಲಿ ಯಾರಿಂದಲೂ ವಧಿಸಲ್ಪಡಲು ಅರ್ಹ.
05077012a ಮಮ ಚಾಪಿ ಸ ವಧ್ಯೋ ವೈ ಜಗತಶ್ಚಾಪಿ ಭಾರತ।
05077012c ಯೇನ ಕೌಮಾರಕೇ ಯೂಯಂ ಸರ್ವೇ ವಿಪ್ರಕೃತಾಸ್ತಥಾ।।
ಭಾರತ! ಕುಮಾರರಾಗಿರುವಾಗಲೇ ನಿಮ್ಮೆಲ್ಲರನ್ನೂ ಮೋಸದಿಂದ ಕಾಡಿದ ಅವನನ್ನು ನಾನೂ, ಜಗತ್ತೂ, ಕೊಲ್ಲಬಹುದು.
05077013a ವಿಪ್ರಲುಪ್ತಂ ಚ ವೋ ರಾಜ್ಯಂ ನೃಶಂಸೇನ ದುರಾತ್ಮನಾ।
05077013c ನ ಚೋಪಶಾಮ್ಯತೇ ಪಾಪಃ ಶ್ರಿಯಂ ದೃಷ್ಟ್ವಾ ಯುಧಿಷ್ಠಿರೇ।।
ಯುಧಿಷ್ಠಿರನಲ್ಲಿದ್ದ ಐಶ್ವರ್ಯವನ್ನು ನೋಡಿದ ನಂತರ ಶಾಂತಿಯನ್ನು ಕಾಣದ ಆ ದುರಾತ್ಮ ಪಾಪಿಯು ನಿಮ್ಮಿಂದ ರಾಜ್ಯವನ್ನು ಮೋಸದಿಂದ ಅಪಹರಿಸಿದನು.
05077014a ಅಸಕೃಚ್ಚಾಪ್ಯಹಂ ತೇನ ತ್ವತ್ಕೃತೇ ಪಾರ್ಥ ಭೇದಿತಃ।
05077014c ನ ಮಯಾ ತದ್ಗೃಹೀತಂ ಚ ಪಾಪಂ ತಸ್ಯ ಚಿಕೀರ್ಷಿತಂ।।
ಪಾರ್ಥ! ನನ್ನ ಮತ್ತು ನಿಮ್ಮ ನಡುವೆ ಭೇದವನ್ನು ತರಲು ಅವನು ಬಹುಬಾರಿ ಪ್ರಯತ್ನಿಸಿದ್ದಾನೆ. ಆದರೆ ನಾನು ಅವನ ಪಾಪ ಬುದ್ಧಿಯನ್ನು ಸ್ವೀಕರಿಸಲಿಲ್ಲ.
05077015a ಜಾನಾಸಿ ಹಿ ಮಹಾಬಾಹೋ ತ್ವಮಪ್ಯಸ್ಯ ಪರಂ ಮತಂ।
05077015c ಪ್ರಿಯಂ ಚಿಕೀರ್ಷಮಾಣಂ ಚ ಧರ್ಮರಾಜಸ್ಯ ಮಾಮಪಿ।।
ಮಹಾಬಾಹೋ! ಅವನ ಪರಮ ಮತವೇನೆಂದು ಮತ್ತು ನಾನು ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಲು ಹೊರಟಿರುವೆನೆಂದು ನಿನಗೆ ತಿಳಿದಿದೆ.
05077016a ಸ ಜಾನಂಸ್ತಸ್ಯ ಚಾತ್ಮಾನಂ ಮಮ ಚೈವ ಪರಂ ಮತಂ।
05077016c ಅಜಾನನ್ನಿವ ಚಾಕಸ್ಮಾದರ್ಜುನಾದ್ಯಾಭಿಶಂಕಸೇ।।
ಅರ್ಜುನ! ಅವನ ಮತ್ತು ನನ್ನ ಪರಮ ಮತವನ್ನೂ ತಿಳಿದಿದ್ದೀಯೆ. ಆದರೂ ಏನನ್ನೂ ತಿಳಿದಿಲ್ಲದವನಂತೆ ನಮ್ಮನ್ನು ಶಂಕಿಸುತ್ತಿದ್ದೀಯೆ.
05077017a ಯಚ್ಚಾಪಿ ಪರಮಂ ದಿವ್ಯಂ ತಚ್ಚಾಪ್ಯವಗತಂ ತ್ವಯಾ।
05077017c ವಿಧಾನವಿಹಿತಂ ಪಾರ್ಥ ಕಥಂ ಶರ್ಮ ಭವೇತ್ಪರೈಃ।।
ಪಾರ್ಥ! ಪರಮ ದೈವವು ಏನನ್ನು ನಿರ್ಧರಿಸಿದೆಯೋ ಅದೂ ನಿನಗೆ ತಿಳಿದಿದೆ. ಹೀಗಿರುವಾಗ ಅವರೊಂದಿಗೆ ಶಾಂತಿಯು ಹೇಗಾಗುತ್ತದೆ?
05077018a ಯತ್ತು ವಾಚಾ ಮಯಾ ಶಕ್ಯಂ ಕರ್ಮಣಾ ಚಾಪಿ ಪಾಂಡವ।
05077018c ಕರಿಷ್ಯೇ ತದಹಂ ಪಾರ್ಥ ನ ತ್ವಾಶಂಸೇ ಶಮಂ ಪರೈಃ।।
ಪಾಂಡವ! ಪಾರ್ಥ! ಮಾತು ಮತ್ತು ಕರ್ಮಗಳಿಂದ ಏನೆಲ್ಲ ಮಾಡಲಿಕ್ಕೆ ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತೇನೆ. ಆದರೆ ಅವರೊಂದಿಗೆ ಶಾಂತಿಯಾಗುತ್ತದೆ ಎಂದು ನನಗನ್ನಿಸುವುದಿಲ್ಲ.
05077019a ಕಥಂ ಗೋಹರಣೇ ಬ್ರೂಯಾದಿಚ್ಚಂ ಶರ್ಮ ತಥಾವಿಧಂ।
05077019c ಯಾಚ್ಯಮಾನೋಽಪಿ ಭೀಷ್ಮೇಣ ಸಂವತ್ಸರಗತೇಽಧ್ವನಿ।।
ಕಳೆದ ವರ್ಷ ಗೋಹರಣದ ಸಮಯದಲ್ಲಿ ಭೀಷ್ಮನು ಕೇಳಿಕೊಂಡರೂ ಅವನು ಶಾಂತಿಯನ್ನು ನೀಡಿದನೇ?
05077020a ತದೈವ ತೇ ಪರಾಭೂತಾ ಯದಾ ಸಂಕಲ್ಪಿತಾಸ್ತ್ವಯಾ।
05077020c ಲವಶಃ ಕ್ಷಣಶಶ್ಚಾಪಿ ನ ಚ ತುಷ್ಟಃ ಸುಯೋಧನಃ।।
ಅದೇ ದಿವಸ ನೀನು ಸಂಕಲ್ಪಿಸಿದಂತೆ ಅವರನ್ನು ಪರಾಜಯಗೊಳಿಸಿದೆ. ಸುಯೋಧನನು ಸ್ವಲ್ಪವನ್ನೂ ಸ್ವಲ್ಪಸಮಯಕ್ಕಾಗಿಯೂ ಕೊಡಲು ಬಯಸುವುದಿಲ್ಲ.
05077021a ಸರ್ವಥಾ ತು ಮಯಾ ಕಾರ್ಯಂ ಧರ್ಮರಾಜಸ್ಯ ಶಾಸನಂ।
05077021c ವಿಭಾವ್ಯಂ ತಸ್ಯ ಭೂಯಶ್ಚ ಕರ್ಮ ಪಾಪಂ ದುರಾತ್ಮನಃ।।
ಹೇಗಿದ್ದರೂ ನಾನು ಧರ್ಮರಾಜನ ಶಾಸನವನ್ನು ಕಾರ್ಯಗತಗೊಳಿಸಬೇಕು. ಆ ದುರಾತ್ಮನ ಪಾಪ ಕರ್ಮಗಳನ್ನು ಇನ್ನೊಮ್ಮೆ ಮನಸ್ಸಿಗೆ ತೆಗೆದುಕೊಳ್ಳಬಾರದು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣವಾಕ್ಯೇ ಸಪ್ತಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ಎಪ್ಪತ್ತೇಳನೆಯ ಅಧ್ಯಾಯವು.