076 ಅರ್ಜುನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 76

ಸಾರ

“ಪಾಂಡವರಿಗೆ ಯಾವುದು ಒಳ್ಳೆಯದೆಂದು ತಿಳಿದಿದ್ದೀಯೋ ಅದನ್ನು ಬೇಗನೇ ಮಾಡಿ, ಮುಂದೆ ಮಾಡಬೇಕಾಗಿರುವುದನ್ನು ನಮಗೆ ಬಿಡು!” ಎಂದು ಅರ್ಜುನನು ಕೃಷ್ಣನಿಗೆ ತಿಳಿಸಿದುದು (1-20).

05076001 ಅರ್ಜುನ ಉವಾಚ।
05076001a ಉಕ್ತಂ ಯುಧಿಷ್ಠಿರೇಣೈವ ಯಾವದ್ವಾಚ್ಯಂ ಜನಾರ್ದನ।
05076001c ತವ ವಾಕ್ಯಂ ತು ಮೇ ಶ್ರುತ್ವಾ ಪ್ರತಿಭಾತಿ ಪರಂತಪ।।
05076002a ನೈವ ಪ್ರಶಮಮತ್ರ ತ್ವಂ ಮನ್ಯಸೇ ಸುಕರಂ ಪ್ರಭೋ।
05076002c ಲೋಭಾದ್ವಾ ಧೃತರಾಷ್ಟ್ರಸ್ಯ ದೈನ್ಯಾದ್ವಾ ಸಮುಪಸ್ಥಿತಾತ್।।

ಅರ್ಜುನನು ಹೇಳಿದನು: “ಜನಾರ್ದನ! ಹೇಳಬೇಕಾದುದೆಲ್ಲವನ್ನೂ ಯುಧಿಷ್ಠಿರನು ಹೇಳಿದ್ದಾನೆ. ಪರಂತಪ! ಪ್ರಭೋ! ನಿನ್ನ ಮಾತನ್ನು ಕೇಳಿದರೆ ಧೃತರಾಷ್ಟ್ರನ ಲೋಭದಿಂದ ಅಥವಾ ನಮ್ಮಲ್ಲಿ ಸಾಕಷ್ಟು ಬಲವಿಲ್ಲದೇ ಇರುವುದರಿಂದ ಸುಲಭದಲ್ಲಿ ಶಾಂತಿಯನ್ನು ತರಬಹುದು ಎಂದು ನಿನಗನ್ನಿಸುವುದಿಲ್ಲ ಎಂದನ್ನಿಸುತ್ತದೆ.

05076003a ಅಫಲಂ ಮನ್ಯಸೇ ಚಾಪಿ ಪುರುಷಸ್ಯ ಪರಾಕ್ರಮಂ।
05076003c ನ ಚಾಂತರೇಣ ಕರ್ಮಾಣಿ ಪೌರುಷೇಣ ಫಲೋದಯಃ।।

ಹಾಗೆಯೇ ಪುರುಷನ ಪರಾಕ್ರಮವು ಫಲವನ್ನು ನೀಡದೇ ಇರುವುದಿಲ್ಲ ಮತ್ತು ಪುರುಷ ಪ್ರಯತ್ನವಿಲ್ಲದೇ ಯಾವುದೂ ಫಲಿಸುವುದಿಲ್ಲ ಎಂದೂ ಅಭಿಪ್ರಾಯಪಡುತ್ತಿದ್ದೀಯೆ.

05076004a ತದಿದಂ ಭಾಷಿತಂ ವಾಕ್ಯಂ ತಥಾ ಚ ನ ತಥೈವ ಚ।
05076004c ನ ಚೈತದೇವಂ ದ್ರಷ್ಟವ್ಯಮಸಾಧ್ಯಮಿತಿ ಕಿಂ ಚನ।।

ನೀನು ಹೇಳಿದ ಮಾತಿನಂತೆಯೇ ಆಗಬಹುದು ಆಗದೆಯೂ ಇರಬಹುದು. ಆದರೆ ಯಾವುದನ್ನೂ ಅಸಾಧ್ಯವೆಂದು ಕಾಣಬಾರದು.

05076005a ಕಿಂ ಚೈತನ್ಮನ್ಯಸೇ ಕೃಚ್ಚ್ರಮಸ್ಮಾಕಂ ಪಾಪಮಾದಿತಃ।
05076005c ಕುರ್ವಂತಿ ತೇಷಾಂ ಕರ್ಮಾಣಿ ಯೇಷಾಂ ನಾಸ್ತಿ ಫಲೋದಯಃ।।

ಮತ್ತು ನಮ್ಮ ಈ ಕಷ್ಟಗಳೆಲ್ಲವಕ್ಕೂ ಕಾರಣ ಅವರು ಮಾಡಿದ ಪಾಪ ಎಂದು ತಿಳಿದುಕೊಂಡಿದ್ದೀಯಲ್ಲವೇ? ಆದರೆ ಅವರಿಗೆ ಇದೂವರೆಗೆ ಯಾವ ಫಲವೂ ದೊರೆತಂತಿಲ್ಲ!

05076006a ಸಂಪಾದ್ಯಮಾನಂ ಸಮ್ಯಕ್ಚ ಸ್ಯಾತ್ಕರ್ಮ ಸಫಲಂ ಪ್ರಭೋ।
05076006c ಸ ತಥಾ ಕೃಷ್ಣ ವರ್ತಸ್ವ ಯಥಾ ಶರ್ಮ ಭವೇತ್ಪರೈಃ।।

ಪ್ರಭೋ! ಚೆನ್ನಾಗಿ ನಡೆಸಿದ ಕಾರ್ಯಕ್ಕೆ ಫಲವೊಂದಿರುತ್ತದೆಯಲ್ಲವೇ? ಕೃಷ್ಣ! ಇತರರೊಂದಿಗೆ ಶಾಂತಿಯುಂಟಾಗುವಂತೆ ವರ್ತಿಸು.

05076007a ಪಾಂಡವಾನಾಂ ಕುರೂಣಾಂ ಚ ಭವಾನ್ಪರಮಕಃ ಸುಹೃತ್।
05076007c ಸುರಾಣಾಮಸುರಾಣಾಂ ಚ ಯಥಾ ವೀರ ಪ್ರಜಾಪತಿಃ।।

ವೀರ! ನೀನು ಸುರಾಸುರರಿಗೆ ಪ್ರಜಾಪತಿಯು ಹೇಗೋ ಹಾಗೆ ಪಾಂಡವ-ಕುರುಗಳಿಗೆ ನೀನು ಪರಮ ಮಿತ್ರ.

05076008a ಕುರೂಣಾಂ ಪಾಂಡವಾನಾಂ ಚ ಪ್ರತಿಪತ್ಸ್ವ ನಿರಾಮಯಂ।
05076008c ಅಸ್ಮದ್ಧಿತಮನುಷ್ಠಾತುಂ ನ ಮನ್ಯೇ ತವ ದುಷ್ಕರಂ।।

ಕುರುಗಳಿಗೆ ಮತ್ತು ಪಾಂಡವರಿಗೆ ಒಳ್ಳೆಯದಾಗುವ ಹಾಗೆ ಮಾಡು. ಇದನ್ನು ನಡೆಸಿಕೊಡುವುದು ನಿನಗೆ ದುಷ್ಕರವಲ್ಲ ಎಂದು ತಿಳಿದಿದ್ದೇವೆ.

05076009a ಏವಂ ಚೇತ್ಕಾರ್ಯತಾಮೇತಿ ಕಾರ್ಯಂ ತವ ಜನಾರ್ದನ।
05076009c ಗಮನಾದೇವಮೇವ ತ್ವಂ ಕರಿಷ್ಯಸಿ ನ ಸಂಶಯಃ।।

ಜನಾರ್ದನ! ಈ ಕಾರ್ಯವನ್ನು ನೀನು ಅಲ್ಲಿ ಹೋಗುವುದರ ಮೂಲಕವೇ ಮಾಡಿ ಮುಗಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.

05076010a ಚಿಕೀರ್ಷಿತಮಥಾನ್ಯತ್ತೇ ತಸ್ಮಿನ್ವೀರ ದುರಾತ್ಮನಿ।
05076010c ಭವಿಷ್ಯತಿ ತಥಾ ಸರ್ವಂ ಯಥಾ ತವ ಚಿಕೀರ್ಷಿತಂ।।

ವೀರ! ಆ ದುರಾತ್ಮನೊಂದಿಗೆ ಯಾವ ರೀತಿಯಾದರೂ ನೀನು ಬಯಸಿದಂತೆ ನಡೆದುಕೋ. ಆಗುವುದೆಲ್ಲವೂ ನೀನು ಬಯಸಿದಂತೆಯೇ ಆಗುತ್ತದೆ.

05076011a ಶರ್ಮ ತೈಃ ಸಹ ವಾ ನೋಽಸ್ತು ತವ ವಾ ಯಚ್ಚಿಕೀರ್ಷಿತಂ।
05076011c ವಿಚಾರ್ಯಮಾಣೋ ಯಃ ಕಾಮಸ್ತವ ಕೃಷ್ಣ ಸ ನೋ ಗುರುಃ।।

ಅವರೊಂದಿಗೆ ಶಾಂತಿ ನೆಲೆಸುತ್ತದೆಯೋ ಅಥವಾ ಇಲ್ಲವೋ ಅದು ನೀನು ಬಯಸಿದಂತೆ. ಕೃಷ್ಣ! ನಿನ್ನ ಇಚ್ಛೆ ಮತ್ತು ವಿಚಾರಗಳು ನಮಗೆ ದೊಡ್ಡವು.

05076012a ನ ಸ ನಾರ್ಹತಿ ದುಷ್ಟಾತ್ಮಾ ವಧಂ ಸಸುತಬಾಂಧವಃ।
05076012c ಯೇನ ಧರ್ಮಸುತೇ ದೃಷ್ಟ್ವಾ ನ ಸಾ ಶ್ರೀರುಪಮರ್ಷಿತಾ।।

ಧರ್ಮಸುತನಲ್ಲಿರುವ ಶ್ರೀಯನ್ನು ಕಂಡು ಅಸೂಯೆಗೊಂಡ ಆ ದುಷ್ಟಾತ್ಮನು ಮಕ್ಕಳು ಬಾಂಧವರೊಂದಿಗೆ ವಧೆಗೆ ಅರ್ಹನಲ್ಲವೇ?

05076013a ಯಚ್ಚಾಪ್ಯಪಶ್ಯತೋಪಾಯಂ ಧರ್ಮಿಷ್ಠಂ ಮಧುಸೂದನ।
05076013c ಉಪಾಯೇನ ನೃಶಂಸೇನ ಹೃತಾ ದುರ್ದ್ಯೂತದೇವಿನಾ।।

ಮಧುಸೂದನ! ಧರ್ಮಿಷ್ಠವಾದ ಉಪಾಯವನ್ನು ಕಾಣದೇ ಅವನು ಅದನ್ನು ಕೆಟ್ಟ ದ್ಯೂತದಲ್ಲಿ ಪಣವಾಗಿ, ಮೋಸದ ಉಪಾಯದಿಂದ, ಅಪಹರಿಸಿದನು.

05076014a ಕಥಂ ಹಿ ಪುರುಷೋ ಜಾತಃ ಕ್ಷತ್ರಿಯೇಷು ಧನುರ್ಧರಃ।
05076014c ಸಮಾಹೂತೋ ನಿವರ್ತೇತ ಪ್ರಾಣತ್ಯಾಗೇಽಪ್ಯುಪಸ್ಥಿತೇ।।

ಪ್ರಾಣತ್ಯಾಗವನ್ನು ಮಾಡಬೇಕಾಗಿ ಬಂದರೂ ಕ್ಷತ್ರಿಯರಲ್ಲಿ ಹುಟ್ಟಿದ ಧನುರ್ಧರ ಪುರುಷನು ಹೇಗೆ ತಾನೇ ಯುದ್ಧಕ್ಕೆ ಹಿಂಜರಿಯಬಲ್ಲ?

05076015a ಅಧರ್ಮೇಣ ಜಿತಾನ್ದೃಷ್ಟ್ವಾ ವನೇ ಪ್ರವ್ರಜಿತಾಂಸ್ತಥಾ।
05076015c ವಧ್ಯತಾಂ ಮಮ ವಾರ್ಷ್ಣೇಯ ನಿರ್ಗತೋಽಸೌ ಸುಯೋಧನಃ।।

ವಾರ್ಷ್ಣೇಯ! ನಮ್ಮನ್ನು ಅಧರ್ಮದಿಂದ ಗೆದ್ದುದನ್ನು ಮತ್ತು ವನಕ್ಕೆ ಕಳುಹಿಸುದುದನ್ನು ನೋಡಿದಾಗಲೇ ಸುಯೋಧನನು ನನಗೆ ವಧಾರ್ಹನಾದ.

05076016a ನ ಚೈತದದ್ಭುತಂ ಕೃಷ್ಣ ಮಿತ್ರಾರ್ಥೇ ಯಚ್ಚಿಕೀರ್ಷಸಿ।
05076016c ಕ್ರಿಯಾ ಕಥಂ ನು ಮುಖ್ಯಾ ಸ್ಯಾನ್ಮೃದುನಾ ವೇತರೇಣ ವಾ।।

ಕೃಷ್ಣ! ಮಿತ್ರರಿಗಾಗಿ ನೀನು ಏನು ಮಾಡಲಿಕ್ಕೆ ಹೊರಟಿರುವಿಯೋ ಅದು ಅದ್ಭುತವೇನೂ ಅಲ್ಲ. ಆದರೆ ಮುಖ್ಯ ಕಾರ್ಯವು ಹೇಗೆ ಆಗುತ್ತದೆ - ಮೃದುತ್ವದಿಂದ ಅಥವಾ ಕಲಹದಿಂದ?

05076017a ಅಥ ವಾ ಮನ್ಯಸೇ ಜ್ಯಾಯಾನ್ವಧಸ್ತೇಷಾಮನಂತರಂ।
05076017c ತದೇವ ಕ್ರಿಯತಾಮಾಶು ನ ವಿಚಾರ್ಯಮತಸ್ತ್ವಯಾ।।

ಅಥವಾ ಅವರನ್ನು ಕೂಡಲೇ ವಧಿಸುವುದು ಒಳ್ಳೆಯದು ಎಂದು ನಿನಗನ್ನಿಸಿದರೆ ಅದನ್ನೇ ಮಾಡೋಣ. ಅದರಲ್ಲಿ ನೀನು ವಿಚಾರಮಾಡಬೇಡ!

05076018a ಜಾನಾಸಿ ಹಿ ಯಥಾ ತೇನ ದ್ರೌಪದೀ ಪಾಪಬುದ್ಧಿನಾ।
05076018c ಪರಿಕ್ಲಿಷ್ಟಾ ಸಭಾಮಧ್ಯೇ ತಚ್ಚ ತಸ್ಯಾಪಿ ಮರ್ಷಿತಂ।।

ಮಾಧವ! ಆ ಪಾಪಬುದ್ಧಿಯು ಹೇಗೆ ದ್ರೌಪದಿಯನ್ನು ಸಭಾಮಧ್ಯದಲ್ಲಿ ಕಾಡಿಸಿದ ಮತ್ತು ಹೇಗೆ ಇತರರು ಅದನ್ನು ಆಗಲು ಬಿಟ್ಟರು ಎನ್ನುವುದನ್ನು ನೀನು ತಿಳಿದಿದ್ದೀಯೆ.

05076019a ಸ ನಾಮ ಸಮ್ಯಗ್ವರ್ತೇತ ಪಾಂಡವೇಷ್ವಿತಿ ಮಾಧವ।
05076019c ನ ಮೇ ಸಂಜಾಯತೇ ಬುದ್ಧಿರ್ಬೀಜಮುಪ್ತಮಿವೋಷರೇ।।

ಮಾಧವ! ಅಂಥಹ ಮನುಷ್ಯನು ಪಾಂಡವರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಾನೆ ಎಂದು ನನಗೆ ನಂಬಿಕೆಯಿಲ್ಲ. ಅದು ಉಪ್ಪು ನೆಲದಲ್ಲಿ ಬೀಜವನ್ನು ಬಿತ್ತಿದಂತೆ.

05076020a ತಸ್ಮಾದ್ಯನ್ಮನ್ಯಸೇ ಯುಕ್ತಂ ಪಾಂಡವಾನಾಂ ಚ ಯದ್ಧಿತಂ।
05076020c ತದಾಶು ಕುರು ವಾರ್ಷ್ಣೇಯ ಯನ್ನಃ ಕಾರ್ಯಮನಂತರಂ।।

ಆದುದರಿಂದ, ವಾರ್ಷ್ಣೇಯ! ಪಾಂಡವರಿಗೆ ಯಾವುದು ಒಳ್ಳೆಯದೆಂದು ತಿಳಿದಿದ್ದೀಯೋ ಅದನ್ನು ಬೇಗನೇ ಮಾಡಿ, ಮುಂದೆ ಮಾಡಬೇಕಾಗಿರುವುದನ್ನು ನಮಗೆ ಬಿಡು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಅರ್ಜುನವಾಕ್ಯೇ ಷಟ್‌ಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಎಪ್ಪತ್ತಾರನೆಯ ಅಧ್ಯಾಯವು.