ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 73
ಸಾರ
ಭೀಮನ ಆ ಅಭೂತಪೂರ್ವ ಮೃದುತ್ವವನ್ನು ನೋಡಿ ಕೃಷ್ಣನು ಜೋರಾಗಿ ನಕ್ಕು ಬೆಂಕಿಯನ್ನು ಇನ್ನೂ ಉರಿಸುವ ಗಾಳಿಯಂತಹ ಮಾತುಗಳಿಂದ ಅವನನ್ನು ಚೇಡಿಸಿ ಉತ್ತೇಜಿಸಿದುದು (1-23).
05073001 ವೈಶಂಪಾಯನ ಉವಾಚ।
05073001a ಏತಚ್ಚ್ರುತ್ವಾ ಮಹಾಬಾಹುಃ ಕೇಶವಃ ಪ್ರಹಸನ್ನಿವ।
05073001c ಅಭೂತಪೂರ್ವಂ ಭೀಮಸ್ಯ ಮಾರ್ದವೋಪಗತಂ ವಚಃ।।
ವೈಶಂಪಾಯನನು ಹೇಳಿದನು: “ಭೀಮನ ಈ ಅಭೂತಪೂರ್ವ, ಮೃದು ಮಾತುಗಳನ್ನು ಕೇಳಿ ಮಹಾಬಾಹು ಕೇಶವನು ಜೋರಾಗಿ ನಕ್ಕನು.
05073002a ಗಿರೇರಿವ ಲಘುತ್ವಂ ತಚ್ಚೀತತ್ವಮಿವ ಪಾವಕೇ।
05073002c ಮತ್ವಾ ರಾಮಾನುಜಃ ಶೌರಿಃ ಶಾಂಙ್ರಧನ್ವಾ ವೃಕೋದರಂ।।
05073003a ಸಂತೇಜಯಂಸ್ತದಾ ವಾಗ್ಭಿರ್ಮಾತರಿಶ್ವೇವ ಪಾವಕಂ।
05073003c ಉವಾಚ ಭೀಮಮಾಸೀನಂ ಕೃಪಯಾಭಿಪರಿಪ್ಲುತಂ।।
ಪರ್ವತವೇ ಹಗುರಾಗಿದೆಯೋ, ಬೆಂಕಿಯು ತಣ್ಣಗಾಗಿದೆಯೋ ಎಂದು ಭಾವಿಸಿ ರಾಮನ ತಮ್ಮ, ಶೌರಿ, ಶಾಂಙ್ರಧನ್ವಿಯು ಬೆಂಕಿಯನ್ನು ಇನ್ನೂ ಉರಿಸುವ ಗಾಳಿಯಂತಿರುವ ಮಾತುಗಳಿಂದ, ಕೃಪಾಭರಿತನಾಗಿ ಕುಳಿತುಕೊಂಡಿದ್ದ ವೃಕೋದರ ಭೀಮನಿಗೆ ಹೇಳಿದನು:
05073004a ತ್ವಮನ್ಯದಾ ಭೀಮಸೇನ ಯುದ್ಧಮೇವ ಪ್ರಶಂಸಸಿ।
05073004c ವಧಾಭಿನಂದಿನಃ ಕ್ರೂರಾನ್ಧಾರ್ತರಾಷ್ಟ್ರಾನ್ಮಿಮರ್ದಿಷುಃ।।
“ಭೀಮಸೇನ! ಬೇರೆ ಎಲ್ಲ ಸಮಯಗಳಲ್ಲಿ ನೀನು ಕೊಲ್ಲುವುದರಿಂದ ಆನಂದಪಡುವ ಕ್ರೂರ ಧಾರ್ತರಾಷ್ಟ್ರರನ್ನು ವಿಮರ್ದಿಸುವ ಯುದ್ಧವೇ ಬೇಕೆಂದು ಹೇಳುತ್ತಿದ್ದೆ.
05073005a ನ ಚ ಸ್ವಪಿಷಿ ಜಾಗರ್ಷಿ ನ್ಯುಬ್ಜಃ ಶೇಷೇ ಪರಂತಪ।
05073005c ಘೋರಾಮಶಾಂತಾಂ ರುಶತೀಂ ಸದಾ ವಾಚಂ ಪ್ರಭಾಷಸೇ।।
05073006a ನಿಃಶ್ವಸನ್ನಗ್ನಿವರ್ಣೇನ ಸಂತಪ್ತಃ ಸ್ವೇನ ಮನ್ಯುನಾ।
05073006c ಅಪ್ರಶಾಂತಮನಾ ಭೀಮ ಸಧೂಮ ಇವ ಪಾವಕಃ।।
ಪರಂತಪ! ನೀನು ನಿದ್ದೆಮಾಡುವುದಿಲ್ಲ, ತಲೆಕೆಳಗೆ ಮಾಡಿ ಮಲಗಿಕೊಂಡಿದ್ದರೂ ಎಚ್ಚೆತ್ತೇ ಇರುತ್ತೀಯೆ. ಯಾವಾಗಲೂ ಘೋರವಾದ, ನೋಯಿಸುವ, ಸಿಟ್ಟಿನ ಮಾತನ್ನೇ ಆಡುತ್ತಿರುತ್ತೀಯೆ. ಭೀಮ! ನೀನು ಸಿಟ್ಟಿನಿಂದ ಶಾಂತಿಯಿಲ್ಲದೇ ಹೊಗೆತುಂಬಿದ ಬೆಂಕಿಯಂತೆ ಸಂತಪ್ತನಾಗಿ ಬೆಂಕಿಯ ನಿಟ್ಟುಸಿರನ್ನು ಬಿಡುತ್ತಿರುತ್ತೀಯೆ.
05073007a ಏಕಾಂತೇ ನಿಷ್ಟನಂ ಶೇಷೇ ಭಾರಾರ್ತ ಇವ ದುರ್ಬಲಃ।
05073007c ಅಪಿ ತ್ವಾಂ ಕೇ ಚಿದುನ್ಮತ್ತಂ ಮನ್ಯಂತೇಽತದ್ವಿದೋ ಜನಾಃ।।
ಭಾರವನ್ನು ಹೊರಲಾರದ ದುರ್ಬಲನಂತೆ ನರಳುತ್ತಾ ಏಕಾಂತದಲ್ಲಿ ಬೇರೆಯಾಗಿಯೇ ಮಲಗುತ್ತೀಯೆ. ನಿನ್ನನ್ನು ಚೆನ್ನಾಗಿ ತಿಳಿಯದ ಜನರು ನೀನು ಹುಚ್ಚನೋ ಎಂದೂ ಆಡಿಕೊಳ್ಳುತ್ತಾರೆ.
05073008a ಆರುಜ್ಯ ವೃಕ್ಷಾನ್ನಿರ್ಮೂಲಾನ್ಗಜಃ ಪರಿಭುಜನ್ನಿವ।
05073008c ನಿಘ್ನನ್ಪದ್ಭಿಃ ಕ್ಷಿತಿಂ ಭೀಮ ನಿಷ್ಟನನ್ಪರಿಧಾವಸಿ।।
ಮೇಯುವ ಆನೆಯಂತೆ ಮರಗಳನ್ನು ಕಿತ್ತು ನಿರ್ಮೂಲನ ಮಾಡುತ್ತೀಯೆ ಮತ್ತು ಭೀಮ! ಜೋರಾಗಿ ಕಿರುಚಿ ಕಾಲಿನಿಂದ ಭೂಮಿಯನ್ನು ಮೆಟ್ಟಿ ತುಳಿದು ಓಡುತ್ತಿರುತ್ತೀಯೆ.
05073009a ನಾಸ್ಮಿಂ ಜನೇಽಭಿರಮಸೇ ರಹಃ ಕ್ಷಿಯಸಿ ಪಾಂಡವ।
05073009c ನಾನ್ಯಂ ನಿಶಿ ದಿವಾ ವಾಪಿ ಕದಾ ಚಿದಭಿನಂದಸಿ।।
ಪಾಂಡವ! ನೀನು ಈ ಜನರೊಂದಿಗೆ ರಮಿಸುತ್ತಿಲ್ಲ, ಅವರಿಂದ ದೂರವಿರಲು ಇಷ್ಟಪಡುತ್ತೀಯೆ. ರಾತ್ರಿಯಾಗಲೀ ಹಗಲಾಗಲೀ ನೀನು ಇನ್ನೊಬ್ಬರು ಬರುವುದನ್ನು ಇಷ್ಟಪಡುವುದಿಲ್ಲ.
05073010a ಅಕಸ್ಮಾತ್ಸ್ಮಯಮಾನಶ್ಚ ರಹಸ್ಯಾಸ್ಸೇ ರುದನ್ನಿವ।
05073010c ಜಾನ್ವೋರ್ಮೂರ್ಧಾನಮಾಧಾಯ ಚಿರಮಾಸ್ಸೇ ಪ್ರಮೀಲಿತಃ।।
ಅಕಸ್ಮಾತ್ತಾಗಿ ನಗುತ್ತಾ ಅಥವಾ ಅಳುತ್ತಿರುವಂತೆ ಅಥವಾ ಬಹಳ ಹೊತ್ತು ಕಣ್ಣನ್ನು ಮುಚ್ಚಿಕೊಂಡು ನಿನ್ನ ಮೊಳಕಾಲಮೇಲೆ ತಲೆಯನ್ನಿರಿಸಿ ಕುಳಿತುಕೊಂಡಿರುತ್ತೀಯೆ.
05073011a ಭ್ರುಕುಟಿಂ ಚ ಪುನಃ ಕುರ್ವನ್ನೋಷ್ಠೌ ಚ ವಿಲಿಹನ್ನಿವ।
05073011c ಅಭೀಕ್ಷ್ಣಂ ದೃಶ್ಯಸೇ ಭೀಮ ಸರ್ವಂ ತನ್ಮನ್ಯುಕಾರಿತಂ।।
ಕೆಲವೊಮ್ಮೆ ಕಣ್ಣುಹುಬ್ಬುಗಳನ್ನು ಗಂಟುಹಾಕಿಕೊಂಡಿರುತ್ತೀಯೆ ಅಥವಾ ತುಟಿಯನ್ನು ನೆಕ್ಕುತ್ತಿರುತ್ತೀಯೆ. ಭೀಮ! ಇವೆಲ್ಲವೂ ನೀನು ಸಿಟ್ಟಾಗಿರುವುದರಿಂದಲೇ ಎಂದು ತೋರುತ್ತವೆ.
05073012a ಯಥಾ ಪುರಸ್ತಾತ್ಸವಿತಾ ದೃಶ್ಯತೇ ಶುಕ್ರಮುಚ್ಚರನ್।
05073012c ಯಥಾ ಚ ಪಶ್ಚಾನ್ನಿರ್ಮುಕ್ತೋ ಧ್ರುವಂ ಪರ್ಯೇತಿ ರಶ್ಮಿವಾನ್।।
05073013a ತಥಾ ಸತ್ಯಂ ಬ್ರವೀಮ್ಯೇತನ್ನಾಸ್ತಿ ತಸ್ಯ ವ್ಯತಿಕ್ರಮಃ।
05073013c ಹಂತಾಹಂ ಗದಯಾಭ್ಯೇತ್ಯ ದುರ್ಯೋಧನಮಮರ್ಷಣಂ।।
“ಹೇಗೆ ಪೂರ್ವದಲ್ಲಿ ಸೂರ್ಯನು ಬೆಳಕನ್ನು ಪಸರಿಸಿ ಕಾಣಿಸಿಕೊಳ್ಳುತ್ತಾನೆ, ಮತ್ತು ಹೇಗೆ ಧೃವ ನಕ್ಷತ್ರವನ್ನು ಸುತ್ತುವರಿದು ರಶ್ಮಿವಂತನು ಪಶ್ಚಿಮದಲ್ಲಿ ಮುಳುಗುತ್ತಾನೋ ಹಾಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ - ಅದನ್ನು ಅತಿಕ್ರಮಿಸುವುದಿಲ್ಲ – ಈ ಅಮರ್ಷಣ ದುರ್ಯೋಧನನನ್ನು ನಾನು ಗದೆಯಿಂದ ಹೊಡೆದು ಕೊಲ್ಲುತ್ತೇನೆ.”
05073014a ಇತಿ ಸ್ಮ ಮಧ್ಯೇ ಭ್ರಾತೄಣಾಂ ಸತ್ಯೇನಾಲಭಸೇ ಗದಾಂ।
05073014c ತಸ್ಯ ತೇ ಪ್ರಶಮೇ ಬುದ್ಧಿರ್ಧೀಯತೇಽದ್ಯ ಪರಂತಪ।।
ಎಂದು ನಿನ್ನ ಸಹೋದರರ ಮಧ್ಯೆ, ಹಿಡಿದ ಗದೆಯ ಆಣೆಯಿಟ್ಟು ನೀನು ಪ್ರತಿಜ್ಞೆ ಮಾಡಿದ್ದೆ. ಪರಂತಪ! ಆ ನಿನ್ನ ಬುದ್ಧಿಯೇ ಇಂದು ಈ ಶಾಂತಿಯ ಮಾತುಗಳನ್ನಾಡುತ್ತಿದೆಯೇ?
05073015a ಅಹೋ ಯುದ್ಧಪ್ರತೀಪಾನಿ ಯುದ್ಧಕಾಲ ಉಪಸ್ಥಿತೇ।
05073015c ಪಶ್ಯಸೀವಾಪ್ರತೀಪಾನಿ ಕಿಂ ತ್ವಾಂ ಭೀರ್ಭೀಮ ವಿಂದತಿ।।
ಅಹೋ ಭೀಮ! ಯುದ್ಧದ ಸಮಯವು ಬಂದಿರುವಾಗ, ಯದ್ಧದ ಲಕ್ಷಣಗಳು ಹೌದೋ ಅಲ್ಲವೋ ಎಂದು ಕಾಣುತ್ತಿರುವಾಗ ನೀನು ಭೀತಿಗೊಳ್ಳಲಿಲ್ಲ ತಾನೇ?
05073016a ಅಹೋ ಪಾರ್ಥ ನಿಮಿತ್ತಾನಿ ವಿಪರೀತಾನಿ ಪಶ್ಯಸಿ।
05073016c ಸ್ವಪ್ನಾಂತೇ ಜಾಗರಾಂತೇ ಚ ತಸ್ಮಾತ್ಪ್ರಶಮಮಿಚ್ಚಸಿ।।
ಅಹೋ ಪಾರ್ಥ! ಸ್ವಪ್ನದಲ್ಲಿಯಾಗಲೀ ಎಚ್ಚರವಿರುವಾಗಲಾಗಲೀ ನೀನು ಕೆಟ್ಟ ನಿಮಿತ್ತಗಳನ್ನು ನೋಡುತ್ತಿದ್ದೀಯಾ? ಅದಕ್ಕೇ ಶಾಂತಿಯನ್ನು ಬಯಸುತ್ತಿದ್ದೀಯಾ?
05073017a ಅಹೋ ನಾಶಂಸಸೇ ಕಿಂ ಚಿತ್ಪುಂಸ್ತ್ವಂ ಕ್ಲೀಬ ಇವಾತ್ಮನಿ।
05073017c ಕಶ್ಮಲೇನಾಭಿಪನ್ನೋಽಸಿ ತೇನ ತೇ ವಿಕೃತಂ ಮನಃ।।
ಅಹೋ! ತನ್ನಲ್ಲಿ ಪುರುಷತ್ವವನ್ನು ಕಾಣದ ನಪುಂಸಕನೇನಾದರೂ ಆಗಿಬಿಟ್ಟಿದ್ದೀಯಾ? ಹೇಡಿತನವು ನಿನ್ನನ್ನು ಆವರಿಸಿದೆ. ಅದರಿಂದಲೇ ನಿನ್ನ ಮನಸ್ಸು ವಿಕೃತವಾಗಿದೆ.
05073018a ಉದ್ವೇಪತೇ ತೇ ಹೃದಯಂ ಮನಸ್ತೇ ಪ್ರವಿಷೀದತಿ।
05073018c ಊರುಸ್ತಂಭಗೃಹೀತೋಽಸಿ ತಸ್ಮಾತ್ಪ್ರಶಮಮಿಚ್ಚಸಿ।।
ನಿನ್ನ ಹೃದಯವು ಕಂಪಿಸುತ್ತಿದೆ. ಮನಸ್ಸು ನಿರಾಶೆಗೊಂಡಿದೆ. ನಿನ್ನ ತೊಡೆಗಳು ಮರಗಟ್ಟಿವೆ. ಆದುದರಿಂದಲೇ ನೀನು ಶಾಂತಿಯನ್ನು ಬಯಸುತ್ತಿದ್ದೀಯೆ!
05073019a ಅನಿತ್ಯಂ ಕಿಲ ಮರ್ತ್ಯಸ್ಯ ಚಿತ್ತಂ ಪಾರ್ಥ ಚಲಾಚಲಂ।
05073019c ವಾತವೇಗಪ್ರಚಲಿತಾ ಅಷ್ಠೀಲಾ ಶಾಲ್ಮಲೇರಿವ।।
ಪಾರ್ಥ! ಮನುಷ್ಯನ ಬದಲಾಗುವ ಚಿತ್ತವು ಭಿರುಗಾಳಿಯ ವೇಗದಿಂದ ಸುಯ್ದಾಡುವ ಶಾಲ್ಮಲೀ ಮರದ ಮೇಲಿನ ಗೆಡ್ಡೆಯಂತೆ!
05073020a ತವೈಷಾ ವಿಕೃತಾ ಬುದ್ಧಿರ್ಗವಾಂ ವಾಗಿವ ಮಾನುಷೀ।
05073020c ಮನಾಂಸಿ ಪಾಂಡುಪುತ್ರಾಣಾಂ ಮಜ್ಜಯತ್ಯಪ್ಲವಾನಿವ।।
ಹಸುವಿಗೆ ಮಾತು ಹೇಗೋ ಹಾಗೆ ಈ ಅಭಿಪ್ರಾಯವು ನಿನಗೆ ಸ್ವಾಭಾವಿಕವಾದುದಲ್ಲ. ಇದು ಮುಳುಗುತ್ತಿರುವ ಹಡಗಿನಲ್ಲಿರುವ ಸಮುದ್ರಯಾನಿಗಳಂತಿರುವ ಪಾಂಡುಪುತ್ರರ ಮನಸ್ಸುಗಳನ್ನು ಕುಸಿಯುತ್ತದೆ.
05073021a ಇದಂ ಮೇ ಮಹದಾಶ್ಚರ್ಯಂ ಪರ್ವತಸ್ಯೇವ ಸರ್ಪಣಂ।
05073021c ಯದೀದೃಶಂ ಪ್ರಭಾಷೇಥಾ ಭೀಮಸೇನಾಸಮಂ ವಚಃ।।
ಭೀಮಸೇನ! ನಿನಗೆ ತಕ್ಕುದಲ್ಲದ ಈ ಮಾತನ್ನಾಡುತ್ತಿದ್ದೀಯಾ ಎಂದರೆ ಪರ್ವತವೇ ಹರಿದು ಹೋಗಲು ಪ್ರಾರಂಭಿಸಿದೆಯೋ ಎನ್ನುವಷ್ಟು ಮಹದಾಶ್ಚರ್ಯವಾಗುತ್ತಿದೆ.
05073022a ಸ ದೃಷ್ಟ್ವಾ ಸ್ವಾನಿ ಕರ್ಮಾಣಿ ಕುಲೇ ಜನ್ಮ ಚ ಭಾರತ।
05073022c ಉತ್ತಿಷ್ಠಸ್ವ ವಿಷಾದಂ ಮಾ ಕೃಥಾ ವೀರ ಸ್ಥಿರೋ ಭವ।।
ಭಾರತ! ನಿನ್ನ ಉತ್ತಮ ಕುಲದಲ್ಲಿಯ ಜನ್ಮವನ್ನು ಮತ್ತು ನಿನ್ನ ಮಹತ್ಕಾರ್ಯಗಳನ್ನು ನೋಡಿಕೋ! ವೀರ! ಎದ್ದೇಳು! ವಿಷಾದಿಸಬೇಡ! ಸ್ಥಿರನಾಗಿರು!
05073023a ನ ಚೈತದನುರೂಪಂ ತೇ ಯತ್ತೇ ಗ್ಲಾನಿರರಿಂದಮ।
05073023c ಯದೋಜಸಾ ನ ಲಭತೇ ಕ್ಷತ್ರಿಯೋ ನ ತದಶ್ನುತೇ।।
ಅರಿಂದಮ! ಈ ರೀತಿಯ ಅಸಡ್ಡತನವು ನಿನಗೆ ಅನುರೂಪವಾದುದಲ್ಲ. ಕ್ಷತ್ರಿಯನು ಯಾವುದನ್ನು ತನ್ನ ವೀರ್ಯದಿಂದ ಪಡೆಯುವುದಿಲ್ಲವೋ ಅದನ್ನು ಉಣ್ಣುವುದಿಲ್ಲ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಮೋತ್ತೇಜಕ ಶ್ರೀಕೃಷ್ಣವಾಕ್ಯೇ ತ್ರಿಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಮೋತ್ತೇಜಕ ಶ್ರೀಕೃಷ್ಣವಾಕ್ಯ ಎನ್ನುವ ಎಪ್ಪತ್ಮೂರನೆಯ ಅಧ್ಯಾಯವು.