070 ಯುಧಿಷ್ಠಿರಕೃತಕೃಷ್ಣಪ್ರೇರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 70

ಸಾರ

ಸಂಜಯನು ಮರಳಿದ ನಂತರ ಯುಧಿಷ್ಠಿರನು ಕೃಷ್ಣನಲ್ಲಿ ಮೊರೆಹೊಗಲು ಕೃಷ್ಣನು ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ ಎನ್ನುವುದು (1-5). ಧೃತರಾಷ್ಟ್ರನು ಒಪ್ಪಂದದಂತೆ ನಡೆದುಕೊಳ್ಳುತ್ತಾನೆಂದೇ ತಾವು ವನವಾಸ ಅಜ್ಞಾತವಾಸಗಳನ್ನು ಮುಗಿಸಿದರೆ ಈಗ ಅವನು ಶಾಂತಿಯನ್ನು ಹುಡುಕುತ್ತಿದ್ದಾನೆಂದೂ, ಬ್ರಾಹ್ಮಣರ ಪ್ರಕಾರ ತಾವು ಒಪ್ಪಂದವನ್ನು ಮುರಿದಿಲ್ಲವೆಂದೂ, ಹೇಗೆ ನೋಡಿದರೂ ಯುದ್ಧವು ಕೆಟ್ಟದಾಗಿರಲು ಈಗ ಧನಹೀನನಾದ ತಾನು ಏನು ಮಾಡಬೇಕೆಂದು ಯುಧಿಷ್ಠಿರನು ಕೃಷ್ಣನ ಸಲಹೆಯನ್ನು ಕೇಳಿದುದು (6-28). ಆಗ ಕೃಷ್ಣನು ನಿಮ್ಮಿಬ್ಬರ ಒಳಿತಿಗಾಗಿ ಕುರುಸಂಸದಕ್ಕೆ ಹೋಗುತ್ತೇನೆ ಎನ್ನಲು ಅದಕ್ಕೆ ಯುಧಿಷ್ಠಿರನು ಒಪ್ಪಿಕೊಳ್ಳದಿರುವುದು (29-84). ಪಾಂಡವರ ಕುರಿತು ಕೆಟ್ಟ ಮಾತು ಬರಬಾರದೆಂದು ತಾನು ಸಂಧಿಗೆ ಪ್ರಯತ್ನಿಸುತ್ತೇನೆ ಎಂದು ಹೇಳಲು ಯುಧಿಷ್ಠಿರನು ಕೃಷ್ಣನಿಗೆ ಶಾಂತಿಯಾಗಲೀ ಅಥವಾ ಯುದ್ಧವಾಗಲೀ, ಯಾವುದು ಧರ್ಮಕ್ಕೆ ಜೋಡಿಕೊಂಡಿದೆಯೋ ಅದೇ ಮಾತನ್ನು ಅವರಿಗೆ ಹೇಳು ಎನ್ನುವುದು (85-93).

05070001 ವೈಶಂಪಾಯನ ಉವಾಚ।
05070001a ಸಂಜಯೇ ಪ್ರತಿಯಾತೇ ತು ಧರ್ಮರಾಜೋ ಯುಧಿಷ್ಠಿರಃ।
05070001c ಅಭ್ಯಭಾಷತ ದಾಶಾರ್ಹಮೃಷಭಂ ಸರ್ವಸಾತ್ವತಾಂ।।

ವೈಶಂಪಾಯನನು ಹೇಳಿದನು: “ಸಂಜಯನು ಮರಳಿದ ನಂತರ ಧರ್ಮರಾಜ ಯುಧಿಷ್ಠಿರನು ಸರ್ವ ಸಾತ್ವತರ ವೃಷಭ ದಾಶಾರ್ಹನಿಗೆ ಹೇಳಿದನು:

05070002a ಅಯಂ ಸ ಕಾಲಃ ಸಂಪ್ರಾಪ್ತೋ ಮಿತ್ರಾಣಾಂ ಮೇ ಜನಾರ್ದನ।
05070002c ನ ಚ ತ್ವದನ್ಯಂ ಪಶ್ಯಾಮಿ ಯೋ ನ ಆಪತ್ಸು ತಾರಯೇತ್।।

“ಜನಾರ್ದನ! ನನ್ನ ಮಿತ್ರರ ಕಾಲವು ಇಗೋ ಬಂದೊದಗಿದೆ. ಈ ಆಪತ್ತಿನಿಂದ ಉದ್ಧರಿಸುವ ಬೇರೆ ಯಾರನ್ನೂ ನಾನು ಕಾಣಲಾರೆ.

05070003a ತ್ವಾಂ ಹಿ ಮಾಧವ ಸಂಶ್ರಿತ್ಯ ನಿರ್ಭಯಾ ಮೋಹದರ್ಪಿತಂ।
05070003c ಧಾರ್ತರಾಷ್ಟ್ರಂ ಸಹಾಮಾತ್ಯಂ ಸ್ವಮಂಶಮನುಯುಂಜ್ಮಹೇ।।

ಮಾಧವ! ನಿನ್ನನ್ನೇ ಆಶ್ರಯಿಸಿ ನಾವು ಅಮಾತ್ಯರೊಂದಿಗಿರುವ ಮೋಹದರ್ಪಿತ ಧಾರ್ತರಾಷ್ಟ್ರನಿಂದ ನಮ್ಮ ಭಾಗವನ್ನು ನಿರ್ಭಯದಿಂದ ಕೇಳಬಲ್ಲೆವು.

05070004a ಯಥಾ ಹಿ ಸರ್ವಾಸ್ವಾಪತ್ಸು ಪಾಸಿ ವೃಷ್ಣೀನರಿಂದಮ।
05070004c ತಥಾ ತೇ ಪಾಂಡವಾ ರಕ್ಷ್ಯಾಃ ಪಾಹ್ಯಸ್ಮಾನ್ಮಹತೋ ಭಯಾತ್।।

ಅರಿಂದಮ! ವೃಷ್ಣಿಯರನ್ನು ಸರ್ವ ಆಪತ್ತುಗಳಿಂದ ಹೇಗೆ ರಕ್ಷಿಸುತ್ತಿಯೋ ಹಾಗೆ ನೀನು ಪಾಂಡವರಾದ ನಮ್ಮನ್ನೂ ಕೂಡ ಈ ಮಹಾ ಭಯದಿಂದ ರಕ್ಷಿಸಬೇಕು.”

05070005 ಭಗವಾನುವಾಚ।
05070005a ಅಯಮಸ್ಮಿ ಮಹಾಬಾಹೋ ಬ್ರೂಹಿ ಯತ್ತೇ ವಿವಕ್ಷಿತಂ।
05070005c ಕರಿಷ್ಯಾಮಿ ಹಿ ತತ್ಸರ್ವಂ ಯತ್ತ್ವಂ ವಕ್ಷ್ಯಸಿ ಭಾರತ।।

ಭಗವಂತನು ಹೇಳಿದನು: “ಮಹಾಬಾಹೋ! ನಾನು ಇಲ್ಲಿಯೇ ಇದ್ದೇನೆ. ಏನು ಹೇಳಬೇಕೆಂದು ಬಯಸುತ್ತೀಯೋ ಅದನ್ನು ಹೇಳು. ಭಾರತ! ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ.”

05070006 ಯುಧಿಷ್ಠಿರ ಉವಾಚ।
05070006a ಶ್ರುತಂ ತೇ ಧೃತರಾಷ್ಟ್ರಸ್ಯ ಸಪುತ್ರಸ್ಯ ಚಿಕೀರ್ಷಿತಂ।
05070006c ಏತದ್ಧಿ ಸಕಲಂ ಕೃಷ್ಣ ಸಂಜಯೋ ಮಾಂ ಯದಬ್ರವೀತ್।।
05070007a ತನ್ಮತಂ ಧೃತರಾಷ್ಟ್ರಸ್ಯ ಸೋಽಸ್ಯಾತ್ಮಾ ವಿವೃತಾಂತರಃ।
05070007c ಯಥೋಕ್ತಂ ದೂತ ಆಚಷ್ಟೇ ವಧ್ಯಃ ಸ್ಯಾದನ್ಯಥಾ ಬ್ರುವನ್।।

ಯುಧಿಷ್ಠಿರನು ಹೇಳಿದನು: “ಧೃತರಾಷ್ಟ್ರ ಮತ್ತು ಅವನ ಮಗನ ಮನಸ್ಸಿನಲ್ಲಿರುವುದನ್ನು ನೀನು ಕೇಳಿದ್ದೀಯೆ. ಕೃಷ್ಣ! ಸಂಜಯನು ನನಗೆ ಏನನ್ನು ಹೇಳಿದನೋ ಅವೆಲ್ಲವೂ ಧೃತರಾಷ್ಟ್ರನ ಮನಸ್ಸಿನಲ್ಲಿರುವವು. ಇವನಲ್ಲಿ ಅವನ ಆತ್ಮವು ವಿಸೃತಗೊಂಡಿದೆ. ಹೇಳಿಕಳುಹಿಸಿದ್ದುದನ್ನು ಮಾತ್ರ ದೂತನು ಆಡಬೇಕು. ಬೇರೆ ಏನನ್ನಾದರೂ ಹೇಳಿದರೆ ಅವನು ವಧಾರ್ಹ.

05070008a ಅಪ್ರದಾನೇನ ರಾಜ್ಯಸ್ಯ ಶಾಂತಿಮಸ್ಮಾಸು ಮಾರ್ಗತಿ।
05070008c ಲುಬ್ಧಃ ಪಾಪೇನ ಮನಸಾ ಚರನ್ನಸಮಮಾತ್ಮನಃ।।

ಲುಬ್ಧನಾಗಿ, ಪಾಪಮನಸ್ಸಿನಿಂದ ಇತರರನ್ನು ಕೀಳಾಗಿ ಕಾಣುತ್ತಾ ಅವನು ರಾಜ್ಯವನ್ನು ಕೊಡದೇ ನಮ್ಮೊಂದಿಗೆ ಶಾಂತಿಯನ್ನು ಹುಡುಕುತ್ತಿದ್ದಾನೆ.

05070009a ಯತ್ತದ್ದ್ವಾದಶ ವರ್ಷಾಣಿ ವನೇ ನಿರ್ವ್ಯುಷಿತಾ ವಯಂ।
05070009c ಚದ್ಮನಾ ಶರದಂ ಚೈಕಾಂ ಧೃತರಾಷ್ಟ್ರಸ್ಯ ಶಾಸನಾತ್।।
05070010a ಸ್ಥಾತಾ ನಃ ಸಮಯೇ ತಸ್ಮಿನ್ಧೃತರಾಷ್ಟ್ರ ಇತಿ ಪ್ರಭೋ।

ಪ್ರಭೋ! ಧೃತರಾಷ್ಟ್ರನ ಆದೇಶದಂತೆ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಿದುದು ಮತ್ತು ಇನ್ನೊಂದು ವರ್ಷ ವೇಷಮರೆಸಿಕೊಂಡಿದ್ದುದು, ಧೃತರಾಷ್ಟ್ರನೂ ಕೂಡ ಆ ಒಪ್ಪಂದದಂತೆ ನಡೆದುಕೊಳ್ಳುತ್ತಾನೆ ಎಂದಲ್ಲವೇ?

05070010c ನಾಹಾಸ್ಮ ಸಮಯಂ ಕೃಷ್ಣ ತದ್ಧಿ ನೋ ಬ್ರಾಹ್ಮಣಾ ವಿದುಃ।।
05070011a ವೃದ್ಧೋ ರಾಜಾ ಧೃತರಾಷ್ಟ್ರಃ ಸ್ವಧರ್ಮಂ ನಾನುಪಶ್ಯತಿ।
05070011c ಪಶ್ಯನ್ವಾ ಪುತ್ರಗೃದ್ಧಿತ್ವಾನ್ಮಂದಸ್ಯಾನ್ವೇತಿ ಶಾಸನಂ।।

ಕೃಷ್ಣ! ನಾವು ಈ ಒಪ್ಪಂದವನ್ನು ಮುರಿದಿಲ್ಲ ಎನ್ನುವುದನ್ನು ಬ್ರಾಹ್ಮಣರು ಚೆನ್ನಾಗಿ ಬಲ್ಲರು. ವೃದ್ಧರಾಜ ಧೃತರಾಷ್ಟ್ರನು ಸ್ವಧರ್ಮವನ್ನು ಕಾಣುತ್ತಿಲ್ಲ. ಅಥವಾ ಅದನ್ನು ಕಂಡರೂ ಪುತ್ರನ ಮೇಲಿನ ಮೋಹದಿಂದ ಆ ಮಂದಬುದ್ಧಿಯ ಆಳ್ವಿಕೆಯಲ್ಲಿದ್ದಾನೆ.

05070012a ಸುಯೋಧನಮತೇ ತಿಷ್ಠನ್ರಾಜಾಸ್ಮಾಸು ಜನಾರ್ದನ।
05070012c ಮಿಥ್ಯಾ ಚರತಿ ಲುಬ್ಧಃ ಸಂಶ್ಚರನ್ಪ್ರಿಯಮಿವಾತ್ಮನಃ।।

ಜನಾರ್ದನ! ಸುಯೋಧನನ ಅನುಮತಿಯಂತೆ ನಿಂತು, ತನ್ನದೇ ಲಾಭವನ್ನು ಬಯಸಿ ಲುಬ್ಧನಾಗಿ ನಮ್ಮೊಂದಿಗೆ ಸುಳ್ಳಾಗಿ ನಡೆದುಕೊಳ್ಳುತ್ತಿದ್ದಾನೆ.

05070013a ಇತೋ ದುಃಖತರಂ ಕಿಂ ನು ಯತ್ರಾಹಂ ಮಾತರಂ ತತಃ।
05070013c ಸಂವಿಧಾತುಂ ನ ಶಕ್ನೋಮಿ ಮಿತ್ರಾಣಾಂ ವಾ ಜನಾರ್ದನ।।
05070014a ಕಾಶಿಭಿಶ್ಚೇದಿಪಾಂಚಾಲೈರ್ಮತ್ಸ್ಯೈಶ್ಚ ಮಧುಸೂದನ।
05070014c ಭವತಾ ಚೈವ ನಾಥೇನ ಪಂಚ ಗ್ರಾಮಾ ವೃತಾ ಮಯಾ।।
05070015a ಕುಶಸ್ಥಲಂ ವೃಕಸ್ಥಲಮಾಸಂದೀ ವಾರಣಾವತಂ।
05070015c ಅವಸಾನಂ ಚ ಗೋವಿಂದ ಕಿಂ ಚಿದೇವಾತ್ರ ಪಂಚಮಂ।।

ಜನಾರ್ದನ! ತಾಯಿ ಮತ್ತು ಮಿತ್ರರನ್ನು ನೋಡಿಕೊಳ್ಳಲು ಶಕ್ಯನಾಗಿಲ್ಲ ಎನ್ನುವುದಕ್ಕಿಂತ ದುಃಖತರವಾದುದು ಏನಿದೆ? ಕಾಶಿ, ಚೇದಿ, ಪಾಂಚಾಲ, ಮತ್ಸ್ಯರು ಮತ್ತು ಗೋವಿಂದ ಮಧುಸೂದನ ನೀನು ನನ್ನ ಪಕ್ಷದಲ್ಲಿರುವಾಗ ನಾನು ಕೇವಲ ಐದು ಗ್ರಾಮಗಳನ್ನು ಕೇಳುತ್ತಿದ್ದೇನೆ - ಕುಶಸ್ಥಲ, ವೃಕಸ್ಥಲ, ಮಾಸಂದೀ, ವಾರಣಾವತ ಮತ್ತು ಐದನೆಯ ಕೊನೆಯದಾಗಿ ಬೇರೆ ಯಾವುದಾದರೂ ಗ್ರಾಮ.

05070016a ಪಂಚ ನಸ್ತಾತ ದೀಯಂತಾಂ ಗ್ರಾಮಾ ವಾ ನಗರಾಣಿ ವಾ।
05070016c ವಸೇಮ ಸಹಿತಾ ಯೇಷು ಮಾ ಚ ನೋ ಭರತಾ ನಶನ್।।

“ತಂದೇ! ಐದು ಗ್ರಾಮಗಳನ್ನಾಗಲೀ ನಗರಗಳನ್ನಾಗಲೀ ಕೊಡು. ಅಲ್ಲಿ ನಾವು ಒಟ್ಟಾಗಿ ವಾಸಿಸುತ್ತೇವೆ. ಭರತರು ನಮ್ಮನ್ನು ಅಲ್ಲಿ ಬಿಟ್ಟುಬಿಡಲಿ.”

05070017a ನ ಚ ತಾನಪಿ ದುಷ್ಟಾತ್ಮಾ ಧಾರ್ತರಾಷ್ಟ್ರೋಽನುಮನ್ಯತೇ।
05070017c ಸ್ವಾಮ್ಯಮಾತ್ಮನಿ ಮತ್ವಾಸಾವತೋ ದುಃಖತರಂ ನು ಕಿಂ।।

ಅದಕ್ಕೂ ಕೂಡ ದುಷ್ಟಾತ್ಮ ಧಾರ್ತರಾಷ್ಟ್ರನು ಒಪ್ಪಿಕೊಳ್ಳುವುದಿಲ್ಲ. ಎಲ್ಲವೂ ತನ್ನದೆಂದು ತಿಳಿದುಕೊಂಡಿದ್ದಾನೆ. ಇದಕ್ಕಿಂತಲೂ ದುಃಖತರವಾದುದು ಏನಿದೆ?

05070018a ಕುಲೇ ಜಾತಸ್ಯ ವೃದ್ಧಸ್ಯ ಪರವಿತ್ತೇಷು ಗೃಧ್ಯತಃ।
05070018c ಲೋಭಃ ಪ್ರಜ್ಞಾನಮಾಹಂತಿ ಪ್ರಜ್ಞಾ ಹಂತಿ ಹತಾ ಹ್ರಿಯಂ।।
05070019a ಹ್ರೀರ್ಹತಾ ಬಾಧತೇ ಧರ್ಮಂ ಧರ್ಮೋ ಹಂತಿ ಹತಃ ಶ್ರಿಯಂ।
05070019c ಶ್ರೀರ್ಹತಾ ಪುರುಷಂ ಹಂತಿ ಪುರುಷಸ್ಯಾಸ್ವತಾ ವಧಃ।।

ಉತ್ತಮ ಕುಲದಲ್ಲಿ ಜನಿಸಿದ ವೃದ್ಧನು ಪರರ ಸಂಪತ್ತಿಗೆ ಆಸೆಪಟ್ಟರೆ ಆ ಲೋಭವು ಅವನ ಪ್ರಜ್ಞೆಯನ್ನು ಕಳೆಯುತ್ತದೆ ಮತ್ತು ನಾಶವಾದ ಪ್ರಜ್ಞೆಯು ನಾಚಿಕೆಯನ್ನು ಕಳೆಯುತ್ತದೆ. ನಾಚಿಕೆಯನ್ನು ಕಳೆದು ಕೊಂಡಾಗ ಧರ್ಮವು ಕೆಡುತ್ತದೆ. ಧರ್ಮವು ನಾಶಗೊಳ್ಳಲು ಸಂಪತ್ತು ನಾಶವಾಗುತ್ತದೆ. ಸಂಪತ್ತು ನಾಶವಾಗಲು ಪುರುಷನು ನಾಶಹೊಂದುತ್ತಾನೆ.

05070020a ಅಸ್ವತೋ ಹಿ ನಿವರ್ತಂತೇ ಜ್ಞಾತಯಃ ಸುಹೃದರ್ತ್ವಿಜಃ।
05070020c ಅಪುಷ್ಪಾದಫಲಾದ್ವೃಕ್ಷಾದ್ಯಥಾ ತಾತ ಪತತ್ರಿಣಃ।।

ಅಯ್ಯಾ! ಹೂ-ಹಣ್ಣುಗಳನ್ನು ಬಿಡದ ಮರದಿಂದ ಹಕ್ಕಿಗಳು ಹೇಗೋ ಹಾಗೆ ಬಡವನಿಂದ ದಾಯಾದಿಗಳು, ಸ್ನೇಹಿತರು ಮತ್ತು ಋತ್ವಿಜರು ದೂರವಾಗುತ್ತಾರೆ.

05070021a ಏತಚ್ಚ ಮರಣಂ ತಾತ ಯದಸ್ಮಾತ್ಪತಿತಾದಿವ।
05070021c ಜ್ಞಾತಯೋ ವಿನಿವರ್ತಂತೇ ಪ್ರೇತಸತ್ತ್ವಾದಿವಾಸವಃ।।

ಅಯ್ಯಾ! ಬಂಧುಗಳು ದೂರವಾದರೆ, ಉಸಿರು ಹೊರಟುಹೋದ ನಂತರ ಕೆಳಗುರುಳುವಂತೆ ಅದೇ ಮರಣ.

05070022a ನಾತಃ ಪಾಪೀಯಸೀಂ ಕಾಂ ಚಿದವಸ್ಥಾಂ ಶಂಬರೋಽಬ್ರವೀತ್।
05070022c ಯತ್ರ ನೈವಾದ್ಯ ನ ಪ್ರಾತರ್ಭೋಜನಂ ಪ್ರತಿದೃಶ್ಯತೇ।।

ಇಂದು ಮತ್ತು ನಾಳೆಗೆ ಊಟವನ್ನು ಕಾಣದೇ ಇರುವಷ್ಟು ಪಾಪದ ಅವಸ್ಥೆಯು ಬೇರೊಂದಿಲ್ಲ ಎಂದು ಶಂಬರನು ಹೇಳಿದ್ದಾನೆ.

05070023a ಧನಮಾಹುಃ ಪರಂ ಧರ್ಮಂ ಧನೇ ಸರ್ವಂ ಪ್ರತಿಷ್ಠಿತಂ।
05070023c ಜೀವಂತಿ ಧನಿನೋ ಲೋಕೇ ಮೃತಾ ಯೇ ತ್ವಧನಾ ನರಾಃ।।

ಧನವು ಪರಮ ಧರ್ಮವೆಂದು ಹೇಳುತ್ತಾರೆ. ಎಲ್ಲವೂ ಧನವನ್ನು ಅವಲಂಬಿಸಿವೆ. ಲೋಕದಲ್ಲಿ ಧನಿಕರು ಜೀವಿಸುತ್ತಾರೆ. ಧನವಿಲ್ಲದ ನರರು ಸಾಯುತ್ತಾರೆ.

05070024a ಯೇ ಧನಾದಪಕರ್ಷಂತಿ ನರಂ ಸ್ವಬಲಮಾಶ್ರಿತಾಃ।
05070024c ತೇ ಧರ್ಮಮರ್ಥಂ ಕಾಮಂ ಚ ಪ್ರಮಥ್ನಂತಿ ನರಂ ಚ ತಂ।।

ತನ್ನದೇ ಬಲವನ್ನುಪಯೋಗಿಸಿ ಯಾವ ನರನು ಇತರರ ಧನವನ್ನು ಕಸಿದುಕೊಳ್ಳುತ್ತಾನೋ ಅವನು ಆ ನರನ ಧರ್ಮವನ್ನೂ, ಅರ್ಥವನ್ನೂ, ಕಾಮವನ್ನೂ ಮತ್ತು ಅವನನ್ನೂ ಕೊಲ್ಲುತ್ತಾನೆ.

05070025a ಏತಾಮವಸ್ಥಾಂ ಪ್ರಾಪ್ಯೈಕೇ ಮರಣಂ ವವ್ರಿರೇ ಜನಾಃ।
05070025c ಗ್ರಾಮಾಯೈಕೇ ವನಾಯೈಕೇ ನಾಶಾಯೈಕೇ ಪ್ರವವ್ರಜುಃ।।

ಈ ಅವಸ್ಥೆಯನ್ನು ಪಡೆದ ಜನರು ಮರಣವನ್ನು ಹೊಂದುತ್ತಾರೆ, ಮತ್ತು ಕೆಲವರು ಗ್ರಾಮದ, ಕೆಲವರು ಕಾಡಿನ ಮತ್ತು ಕೆಲವರು ನಾಶದ ದಾರಿಯನ್ನು ಹಿಡಿಯುವವರು.

05070026a ಉನ್ಮಾದಮೇಕೇ ಪುಷ್ಯಂತಿ ಯಾಂತ್ಯನ್ಯೇ ದ್ವಿಷತಾಂ ವಶಂ।
05070026c ದಾಸ್ಯಮೇಕೇ ನಿಗಚ್ಚಂತಿ ಪರೇಷಾಮರ್ಥಹೇತುನಾ।।

ಧನಕ್ಕಾಗಿ ಕೆಲವರು ಹುಚ್ಚರಾಗುತ್ತಾರೆ, ಇತರರು ಶತ್ರುಗಳ ವಶರಾಗುತ್ತಾರೆ. ಕೆಲವರು ಇತರರ ದಾಸರಾಗುತ್ತಾರೆ.

05070027a ಆಪದೇವಾಸ್ಯ ಮರಣಾತ್ಪುರುಷಸ್ಯ ಗರೀಯಸೀ।
05070027c ಶ್ರಿಯೋ ವಿನಾಶಸ್ತದ್ಧ್ಯಸ್ಯ ನಿಮಿತ್ತಂ ಧರ್ಮಕಾಮಯೋಃ।।

ಸಂಪತ್ತನ್ನು ಕಳೆದುಕೊಳ್ಳುವುದು ಪುರುಷನಿಗೆ ಮರಣಕ್ಕಿಂತಲೂ ದೊಡ್ಡದು. ಸಂಪತ್ತೇ ಧರ್ಮ ಮತ್ತು ಕಾಮಗಳ ಕಾರಣ.

05070028a ಯದಸ್ಯ ಧರ್ಮ್ಯಂ ಮರಣಂ ಶಾಶ್ವತಂ ಲೋಕವರ್ತ್ಮ ತತ್।
05070028c ಸಮಂತಾತ್ಸರ್ವಭೂತಾನಾಂ ನ ತದತ್ಯೇತಿ ಕಶ್ಚನ।।

ಆದರೆ ಸ್ವಾಭಾವಿಕವಾಗಿ ಸಾಯುವುದು ಲೋಕದಲ್ಲಿರುವವುಗಳಿಗೆ ಶಾಶ್ವತವಾಗಿರುವ ಧರ್ಮ. ಇದು ಯಾರಿಗೂ ತಪ್ಪಿದ್ದಲ್ಲ.

05070029a ನ ತಥಾ ಬಾಧ್ಯತೇ ಕೃಷ್ಣ ಪ್ರಕೃತ್ಯಾ ನಿರ್ಧನೋ ಜನಃ।
05070029c ಯಥಾ ಭದ್ರಾಂ ಶ್ರಿಯಂ ಪ್ರಾಪ್ಯ ತಯಾ ಹೀನಃ ಸುಖೈಧಿತಃ।।

ಕೃಷ್ಣ! ಉತ್ತಮ ಸಂಪತ್ತನ್ನು ಒಂದುಗೂಡಿಸಿದವರು ಭೋಗಿಸುವಾಗಲೇ ಅದನ್ನು ಕಳೆದುಕೊಂಡಷ್ಟು ನಿರ್ಧನಿಕರಾದ ಜನರಿಗೆ ಅಷ್ಟೊಂದು ಬಾಧಕವೆನಿಸುವುದಿಲ್ಲ.

05070030a ಸ ತದಾತ್ಮಾಪರಾಧೇನ ಸಂಪ್ರಾಪ್ತೋ ವ್ಯಸನಂ ಮಹತ್।
05070030c ಸೇಂದ್ರಾನ್ಗರ್ಹಯತೇ ದೇವಾನ್ನಾತ್ಮಾನಂ ಚ ಕಥಂ ಚನ।।

ತನ್ನದೇ ಅಪರಾಧದಿಂದ ಮಹಾ ವ್ಯಸನವನ್ನು ಹೊಂದಿದವನು ಇಂದ್ರಾದಿ ದೇವತೆಗಳನ್ನು ನಿಂದಿಸುತ್ತಾನೆಯೇ ಹೊರತು ತನ್ನನ್ನು ಎಂದೂ ನಿಂದಿಸಿಕೊಳ್ಳುವುದಿಲ್ಲ.

05070031a ನ ಚಾಸ್ಮಿನ್ಸರ್ವಶಾಸ್ತ್ರಾಣಿ ಪ್ರತರಂತಿ ನಿಗರ್ಹಣಾಂ।
05070031c ಸೋಽಭಿಕ್ರುಧ್ಯತಿ ಭೃತ್ಯಾನಾಂ ಸುಹೃದಶ್ಚಾಭ್ಯಸೂಯತಿ।।

ಎಲ್ಲ ಶಾಸ್ತ್ರಗಳೂ ಕೂಡ ಅವನಲ್ಲಿರುವ ನಾಚಿಕೆಯನ್ನು ಅಳಿಸಲಾರವು. ತನ್ನ ಸೇವಕರ ಮೇಲೆ ಸಿಟ್ಟಾಗುತ್ತಾನೆ ಮತ್ತು ಸ್ನೇಹಿತರ ಮೇಲೆ ಅಸೂಯೆ ಪಡುತ್ತಾನೆ.

05070032a ತಂ ತದಾ ಮನ್ಯುರೇವೈತಿ ಸ ಭೂಯಃ ಸಂಪ್ರಮುಹ್ಯತಿ।
05070032c ಸ ಮೋಹವಶಮಾಪನ್ನಃ ಕ್ರೂರಂ ಕರ್ಮ ನಿಷೇವತೇ।।

ಆಗ ಕೋಪವು ಅವನನ್ನು ಏರಿ ಮೂರ್ಛೆಗೊಳಿಸುತ್ತದೆ. ಮೋಹದ ವಶಕ್ಕೆ ಬಂದು ಕ್ರೂರ ಕರ್ಮಗಳೆಡೆಗೆ ಒಯ್ಯಲ್ಪಡುತ್ತಾನೆ.

05070033a ಪಾಪಕರ್ಮಾತ್ಯಯಾಯೈವ ಸಂಕರಂ ತೇನ ಪುಷ್ಯತಿ।
05070033c ಸಂಕರೋ ನರಕಾಯೈವ ಸಾ ಕಾಷ್ಠಾ ಪಾಪಕರ್ಮಣಾಂ।।

ಇನ್ನೂ ಪಾಪಕರ್ಮಗಳನ್ನು ಮಾಡಿ ಅವನಿಂದ ಸಂಕರವುಂಟಾಗುವುದು. ಸಂಕರದಿಂದ ಪಾಪಕರ್ಮಗಳ ಕೊನೆಯ ತಾಣ ನರಕಕ್ಕೆ ಹೋಗುತ್ತಾನೆ.

05070034a ನ ಚೇತ್ಪ್ರಬುಧ್ಯತೇ ಕೃಷ್ಣ ನರಕಾಯೈವ ಗಚ್ಚತಿ।
05070034c ತಸ್ಯ ಪ್ರಬೋಧಃ ಪ್ರಜ್ಞೈವ ಪ್ರಜ್ಞಾಚಕ್ಷುರ್ನ ರಿಷ್ಯತಿ।।

ಕೃಷ್ಣ! ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಅವನು ನರಕಕ್ಕೇ ಹೋಗುತ್ತಾನೆ. ಪ್ರಜ್ಞೆಯೇ ಅವನನ್ನು ಎಚ್ಚರಿಸುತ್ತದೆ. ಪ್ರಜ್ಞೆಯ ಕಣ್ಣಿಲ್ಲದಿದ್ದರೆ ಅವನು ಅಧೋಗತಿಗಿಳಿಯುತ್ತಾನೆ.

05070035a ಪ್ರಜ್ಞಾಲಾಭೇ ಹಿ ಪುರುಷಃ ಶಾಸ್ತ್ರಾಣ್ಯೇವಾನ್ವವೇಕ್ಷತೇ।
05070035c ಶಾಸ್ತ್ರನಿತ್ಯಃ ಪುನರ್ಧರ್ಮಂ ತಸ್ಯ ಹ್ರೀರಂಗಮುತ್ತಮಂ।।

ಪ್ರಜ್ಞೆಯನ್ನು ಪಡೆದ ಪುರುಷನು ಶಾಸ್ತ್ರಗಳನ್ನು ನೋಡುತ್ತಾನೆ. ನಿತ್ಯವೂ ಶಾಸ್ತ್ರಗಳನ್ನು ಓದಿ ಪುನಃ ಧರ್ಮ, ನಂತರ ಮಾನವು ಅವನ ಉತ್ತಮ ಅಂಗವಾಗುತ್ತದೆ.

05070036a ಹ್ರೀಮಾನ್ ಹಿ ಪಾಪಂ ಪ್ರದ್ವೇಷ್ಟಿ ತಸ್ಯ ಶ್ರೀರಭಿವರ್ಧತೇ।
05070036c ಶ್ರೀಮಾನ್ಸ ಯಾವದ್ಭವತಿ ತಾವದ್ಭವತಿ ಪೂರುಷಃ।।

ಮಾನವಂತನು ಪಾಪವನ್ನು ದ್ವೇಷಿಸುತ್ತಾನೆ ಮತ್ತು ಅವನ ಅದೃಷ್ಟವು ಅಭಿವೃದ್ಧಿಯಾಗುತ್ತದೆ. ಅವನು ಎಷ್ಟು ಶ್ರೀಮಂತನೋ ಅಷ್ಟು ಪುರುಷನಾಗಿರುತ್ತಾನೆ.

05070037a ಧರ್ಮನಿತ್ಯಃ ಪ್ರಶಾಂತಾತ್ಮಾ ಕಾರ್ಯಯೋಗವಹಃ ಸದಾ।
05070037c ನಾಧರ್ಮೇ ಕುರುತೇ ಬುದ್ಧಿಂ ನ ಚ ಪಾಪೇಷು ವರ್ತತೇ।।

ಧರ್ಮನಿತ್ಯನಾಗಿದ್ದುಕೊಂಡು, ಪ್ರಶಾಂತಾತ್ಮನಾಗಿ, ಕಾರ್ಯಯೋಗದಲ್ಲಿ ಸದಾ ತೊಡಗಿರುವ ಅವನು ಅಧರ್ಮವನ್ನು ಮಾಡುವ ಬುದ್ಧಿಯನ್ನು ಮಾಡುವುದಿಲ್ಲ, ಪಾಪದಲ್ಲಿ ನಡೆದುಕೊಳ್ಳುವುದಿಲ್ಲ.

05070038a ಆಹ್ರೀಕೋ ವಾ ವಿಮೂಢೋ ವಾ ನೈವ ಸ್ತ್ರೀ ನ ಪುನಃ ಪುಮಾನ್।
05070038c ನಾಸ್ಯಾಧಿಕಾರೋ ಧರ್ಮೇಽಸ್ತಿ ಯಥಾ ಶೂದ್ರಸ್ತಥೈವ ಸಃ।।

ನಾಚಿಕೆಯಿಲ್ಲದ ವಿಮೂಢನು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ. ಶೂದ್ರನಿಗೆ ಹೇಗೋ ಹಾಗೆ ಅವನಿಗೆ ಧರ್ಮದಲ್ಲಿ ಅಧಿಕಾರವಿರುವುದಿಲ್ಲ.

05070039a ಹ್ರೀಮಾನವತಿ ದೇವಾಂಶ್ಚ ಪಿತೄನಾತ್ಮಾನಮೇವ ಚ।
05070039c ತೇನಾಮೃತತ್ವಂ ವ್ರಜತಿ ಸಾ ಕಾಷ್ಠಾ ಪುಣ್ಯಕರ್ಮಣಾಂ।।

ಮಾನವಂತನು ದೇವತೆಗಳನ್ನೂ, ಪಿತೃಗಳನ್ನೂ ಮತ್ತು ತನ್ನನ್ನೂ ಪ್ರೀತಿಗೊಳಿಸಿ ಅದರಿಂದ ಪುಣ್ಯಕರ್ಮಗಳ ಅಂತಿಮ ತಾಣ ಅಮೃತತ್ವವನ್ನು ಪಡೆಯುತ್ತಾನೆ.

05070040a ತದಿದಂ ಮಯಿ ತೇ ದೃಷ್ಟಂ ಪ್ರತ್ಯಕ್ಷಂ ಮಧುಸೂದನ।
05070040c ಯಥಾ ರಾಜ್ಯಾತ್ಪರಿಭ್ರಷ್ಟೋ ವಸಾಮಿ ವಸತೀರಿಮಾಃ।।

ಮಧುಸೂದನ! ಇವೆಲ್ಲವನ್ನು – ರಾಜ್ಯವನ್ನು ಕಳೆದುಕೊಂಡು ಹೇಗೆ ನಾನು ಈ ರಾತ್ರಿಗಳನ್ನು ಕಳೆದೆ ಎನ್ನುವುದನ್ನು - ನೀನು ನನ್ನಲ್ಲಿ ಪ್ರತ್ಯಕ್ಷವಾಗಿ ನೋಡಿದ್ದೀಯೆ.

05070041a ತೇ ವಯಂ ನ ಶ್ರಿಯಂ ಹಾತುಮಲಂ ನ್ಯಾಯೇನ ಕೇನ ಚಿತ್।
05070041c ಅತ್ರ ನೋ ಯತಮಾನಾನಾಂ ವಧಶ್ಚೇದಪಿ ಸಾಧು ತತ್।।

ಯಾವುದೇ ನ್ಯಾಯದಿಂದಲೂ ನಾವು ನಮ್ಮ ಸಂಪತ್ತನ್ನು ಬಿಟ್ಟುಬಿಡುವವರಲ್ಲ. ಪ್ರಯತ್ನಮಾಡುವಾಗ ಸತ್ತರೆ ಅದೂ ಕೂಡ ಸರಿಯೇ!

05070042a ತತ್ರ ನಃ ಪ್ರಥಮಃ ಕಲ್ಪೋ ಯದ್ವಯಂ ತೇ ಚ ಮಾಧವ।
05070042c ಪ್ರಶಾಂತಾಃ ಸಮಭೂತಾಶ್ಚ ಶ್ರಿಯಂ ತಾನಶ್ನುವೀಮಹಿ।।

ಮಾಧವ! ನಾವು-ಅವರು ಶಾಂತಿಯಿಂದ ಸಮಭೂತರಾಗಿ ಭೂಮಿಯನ್ನು ಆಳುವುದು ಈಗಿರುವ ಮೊದಲನೆಯ ಮಾರ್ಗವಲ್ಲವೇ?

05070043a ತತ್ರೈಷಾ ಪರಮಾ ಕಾಷ್ಠಾ ರೌದ್ರಕರ್ಮಕ್ಷಯೋದಯಾ।
05070043c ಯದ್ವಯಂ ಕೌರವಾನ್ ಹತ್ವಾ ತಾನಿ ರಾಷ್ಟ್ರಾಣ್ಯಶೀಮಹಿ।।

ಅದರ ನಂತರದ ಮಾರ್ಗವು ಕೌರವರನ್ನು ಕೊಂದು ಅವರಿಂದ ರಾಜ್ಯವನ್ನು ಪಡೆಯುವ ರೌದ್ರ ಕರ್ಮವು ಕ್ಷಯವನ್ನು ಆರಂಭಿಸುತ್ತದೆ.

05070044a ಯೇ ಪುನಃ ಸ್ಯುರಸಂಬದ್ಧಾ ಅನಾರ್ಯಾಃ ಕೃಷ್ಣ ಶತ್ರವಃ।
05070044c ತೇಷಾಮಪ್ಯವಧಃ ಕಾರ್ಯಃ ಕಿಂ ಪುನರ್ಯೇ ಸ್ಯುರೀದೃಶಾಃ।।

ಕೃಷ್ಣ! ಶತ್ರುಗಳು ಸಂಬಂಧಿಕರಾಗಿಲ್ಲದಿದ್ದರೂ ಎಷ್ಟೇ ಅನಾರ್ಯರಾಗಿದ್ದರೂ ಅವರನ್ನು ವಧಿಸಬಾರದು. ಹೀಗಿರುವಾಗ ಇವರಂಥವರಿಗೆ ಹೇಗೆ ಅದನ್ನೇ ಮಾಡಬಹುದು?

05070045a ಜ್ಞಾತಯಶ್ಚ ಹಿ ಭೂಯಿಷ್ಠಾಃ ಸಹಾಯಾ ಗುರವಶ್ಚ ನಃ।
05070045c ತೇಷಾಂ ವಧೋಽತಿಪಾಪೀಯಾನ್ಕಿಂ ನು ಯುದ್ಧೇಽಸ್ತಿ ಶೋಭನಂ।।

ಇವರು ನಮ್ಮ ದಾಯಾದಿಗಳು, ಹೆಚ್ಚಾಗಿ ಸ್ನೇಹಿತರು ಮತ್ತು ಗುರುಗಳಲ್ಲವೇ? ಅವರನ್ನು ವಧಿಸುವುದು ಅತಿ ಪಾಪ. ಯುದ್ಧದಲ್ಲಿ ಏನು ಚಂದವಿದೆ?

05070046a ಪಾಪಃ ಕ್ಷತ್ರಿಯಧರ್ಮೋಽಯಂ ವಯಂ ಚ ಕ್ಷತ್ರಬಾಂಧವಾಃ।
05070046c ಸ ನಃ ಸ್ವಧರ್ಮೋಽಧರ್ಮೋ ವಾ ವೃತ್ತಿರನ್ಯಾ ವಿಗರ್ಹಿತಾ।।

ಈ ಕ್ಷತ್ರಿಯ ಧರ್ಮವೇ ಪಾಪವು. ನಾವಾದರೋ ಕ್ಷತ್ರಿಯರಾಗಿ ಹುಟ್ಟಿದ್ದೇವೆ. ಇದು ನಮ್ಮ ಧರ್ಮವಾಗಲೀ ಅಥವಾ ಅಧರ್ಮವಾಗಲೀ ನಮಗೆ ಬೇರೆ ಯಾವ ವೃತ್ತಿಯೂ ನಿಶೇದವಾಗಿದೆ.

05070047a ಶೂದ್ರಃ ಕರೋತಿ ಶುಶ್ರೂಷಾಂ ವೈಶ್ಯಾ ವಿಪಣಿಜೀವಿನಃ।
05070047c ವಯಂ ವಧೇನ ಜೀವಾಮಃ ಕಪಾಲಂ ಬ್ರಾಹ್ಮಣೈರ್ವೃತಂ।।

ಶೂದ್ರರು ಸೇವೆಯನ್ನು ಮಾಡುತ್ತಾರೆ. ವೈಶ್ಯರು ವ್ಯಾಪಾರಮಾಡಿ ಜೀವಿಸುತ್ತಾರೆ. ನಾವು ವಧಿಸಿ ಜೀವಿಸುತ್ತೇವೆ. ಬ್ರಾಹ್ಮಣರು ಭಿಕ್ಷಾಪಾತ್ರೆಯನ್ನು ಬಳಸುತ್ತಾರೆ.

05070048a ಕ್ಷತ್ರಿಯಃ ಕ್ಷತ್ರಿಯಂ ಹಂತಿ ಮತ್ಸ್ಯೋ ಮತ್ಸ್ಯೇನ ಜೀವತಿ।
05070048c ಶ್ವಾ ಶ್ವಾನಂ ಹಂತಿ ದಾಶಾರ್ಹ ಪಶ್ಯ ಧರ್ಮೋ ಯಥಾಗತಃ।।

ಕ್ಷತ್ರಿಯನು ಕ್ಷತ್ರಿಯನನ್ನು ಕೊಲ್ಲುತ್ತಾನೆ. ಮೀನು ಮೀನಿನಿಂದ ಜೀವಿಸುತ್ತದೆ. ನಾಯಿಯು ನಾಯಿಯು ಕೊಲ್ಲುತ್ತದೆ. ದಾಶಾರ್ಹ! ನಡೆದುಕೊಂಡು ಬಂದಿರುವ ಧರ್ಮವನ್ನು ನೋಡು!

05070049a ಯುದ್ಧೇ ಕೃಷ್ಣ ಕಲಿರ್ನಿತ್ಯಂ ಪ್ರಾಣಾಃ ಸೀದಂತಿ ಸಮ್ಯುಗೇ।
05070049c ಬಲಂ ತು ನೀತಿಮಾತ್ರಾಯ ಹಠೇ ಜಯಪರಾಜಯೌ।।

ಕೃಷ್ಣ! ಯುದ್ಧದಲ್ಲಿ ನಿತ್ಯವೂ ಕಲಿಯಿರುತ್ತಾನೆ. ಹೋರಾಟದಲ್ಲಿ ಪ್ರಾಣಗಳು ಹೋಗುತ್ತವೆ. ಬಲವು ನೀತಿ ಮಾತ್ರ. ಜಯ-ಅಪಜಯಗಳು ಅದೃಷ್ಟ.

05070050a ನಾತ್ಮಚ್ಚಂದೇನ ಭೂತಾನಾಂ ಜೀವಿತಂ ಮರಣಂ ತಥಾ।
05070050c ನಾಪ್ಯಕಾಲೇ ಸುಖಂ ಪ್ರಾಪ್ಯಂ ದುಃಖಂ ವಾಪಿ ಯದೂತ್ತಮ।।

ಯದೂತ್ತಮ! ಜೀವನ-ಮರಣಗಳು ಭೂತಗಳ ಸ್ವ ಇಚ್ಛೆಯಂತೆ ನಡೆಯುವುದಿಲ್ಲ. ಸುಖ ದುಃಖಗಳೆರಡೂ ಕಾಲ ಬಂದೊದಗದೇ ಬರಲಾರವು.

05070051a ಏಕೋ ಹ್ಯಪಿ ಬಹೂನ್ ಹಂತಿ ಘ್ನಂತ್ಯೇಕಂ ಬಹವೋಽಪ್ಯುತ।
05070051c ಶೂರಂ ಕಾಪುರುಷೋ ಹಂತಿ ಅಯಶಸ್ವೀ ಯಶಸ್ವಿನಂ।।

ಒಬ್ಬನೇ ಹಲವರನ್ನು ಕೊಲ್ಲಬಹುದು ಅಥವಾ ಹಲವರು ಸೇರಿ ಒಬ್ಬನನ್ನೇ ಕೊಲ್ಲಬಹುದು. ಶೂರನು ಕಾಪುರುಷನನ್ನೂ ಅಯಶಸ್ವಿಯು ಯಶಸ್ವಿಯನ್ನೂ ಕೊಲ್ಲಬಹುದು.

05070052a ಜಯಶ್ಚೈವೋಭಯೋರ್ದೃಷ್ಟ ಉಭಯೋಶ್ಚ ಪರಾಜಯಃ।
05070052c ತಥೈವಾಪಚಯೋ ದೃಷ್ಟೋ ವ್ಯಪಯಾನೇ ಕ್ಷಯವ್ಯಯೌ।।

ಇಬ್ಬರಲ್ಲಿ ಯಾರಿಗೂ ಜಯವಾಗಬಹುದು. ಇಬ್ಬರಲ್ಲಿ ಯಾರಿಗೂ ಸೋಲಾಗಬಹುದು. ಅವನತಿಯೂ ಹಾಗೆಯೇ. ಅದರಿಂದ ಓಡಿ ಹೋದರೆ ನಾಶ ಮತ್ತು ಮರಣ ಎರಡೂ.

05070053a ಸರ್ವಥಾ ವೃಜಿನಂ ಯುದ್ಧಂ ಕೋ ಘ್ನನ್ನ ಪ್ರತಿಹನ್ಯತೇ।
05070053c ಹತಸ್ಯ ಚ ಹೃಷೀಕೇಶ ಸಮೌ ಜಯಪರಾಜಯೌ।।

ಹೃಷೀಕೇಶ! ಹೇಗೆ ನೋಡಿದರೂ ಯುದ್ಧವು ಕೆಟ್ಟದ್ದು. ಯಾವ ಕೊಲೆಗಾರನನ್ನು ತಿರುಗಿ ಕೊಲ್ಲುವುದಿಲ್ಲ? ಸತ್ತವರಿಗೆ ಸೋಲು-ಗೆಲುವುಗಳೆರಡೂ ಒಂದೇ!

05070054a ಪರಾಜಯಶ್ಚ ಮರಣಾನ್ಮನ್ಯೇ ನೈವ ವಿಶಿಷ್ಯತೇ।
05070054c ಯಸ್ಯ ಸ್ಯಾದ್ವಿಜಯಃ ಕೃಷ್ಣ ತಸ್ಯಾಪ್ಯಪಚಯೋ ಧ್ರುವಂ।।

ಪರಾಜಯವು ಮರಣಕ್ಕಿಂತ ಬೇರೆಯೆಂದು ನನಗನ್ನಿಸುವುದಿಲ್ಲ. ಕೃಷ್ಣ! ಯಾರದ್ದು ಗೆಲುವೋ ಅವರದ್ದೂ ಅಪಚಯವು ನಿಶ್ಚಿತವಾದುದು.

05070055a ಅಂತತೋ ದಯಿತಂ ಘ್ನಂತಿ ಕೇ ಚಿದಪ್ಯಪರೇ ಜನಾಃ।
05070055c ತಸ್ಯಾಂಗ ಬಲಹೀನಸ್ಯ ಪುತ್ರಾನ್ ಭ್ರಾತೄನಪಶ್ಯತಃ।
05070055e ನಿರ್ವೇದೋ ಜೀವಿತೇ ಕೃಷ್ಣ ಸರ್ವತಶ್ಚೋಪಜಾಯತೇ।।

ಕೊನೆಯಲ್ಲಿ ಬೇರೆ ಯಾರೋ ಅವನಿಗೆ ಪ್ರಿಯರಾದವರನ್ನು ಕೊಲ್ಲುತ್ತಾರೆ. ಅವನ ಅಂಗಾಂಗಗಳು ಬಲಹೀನವಾದಾಗ, ಪುತ್ರ ಭ್ರಾತರನ್ನು ಕಾಣದೇ ಎಲ್ಲಕಡೆಯಿಂದಲೂ ಜೀವನದಲ್ಲಿ ಜಿಗುಪ್ಸೆಯು ಬೆಳೆಯುತ್ತದೆ.

05070056a ಯೇ ಹ್ಯೇವ ವೀರಾ ಹ್ರೀಮಂತ ಆರ್ಯಾಃ ಕರುಣವೇದಿನಃ।
05070056c ತ ಏವ ಯುದ್ಧೇ ಹನ್ಯಂತೇ ಯವೀಯಾನ್ಮುಚ್ಯತೇ ಜನಃ।।

ಯಾರು ವೀರರಾಗಿರುವರೋ, ಮಾನವಂತರೋ, ಆರ್ಯರೋ, ಕರುಣವೇದಿನಿಗಳೋ ಅವರೇ ಯುದ್ಧದಲ್ಲಿ ಸಾಯುತ್ತಾರೆ. ಕೀಳು ಜನರು ತಪ್ಪಿಸಿಕೊಂಡು ಬಿಡುತ್ತಾರೆ.

05070057a ಹತ್ವಾಪ್ಯನುಶಯೋ ನಿತ್ಯಂ ಪರಾನಪಿ ಜನಾರ್ದನ।
05070057c ಅನುಬಂಧಶ್ಚ ಪಾಪೋಽತ್ರ ಶೇಷಶ್ಚಾಪ್ಯವಶಿಷ್ಯತೇ।।

ಜನಾರ್ದನ! ಇತರರನ್ನು ಕೊಂದನಂತರವೂ ನಿತ್ಯ ಪಶ್ಚಾತ್ತಾಪವು ಇದ್ದೇ ಇರುತ್ತದೆ. ಇದರ ಫಲಿತಾಂಶವು ಪಾಪವೇ. ಯಾಕೆಂದರೆ ಉಳಿದವರು ಉಳಿದುಕೊಳ್ಳುತ್ತಾರಲ್ಲವೇ?

05070058a ಶೇಷೋ ಹಿ ಬಲಮಾಸಾದ್ಯ ನ ಶೇಷಮವಶೇಷಯೇತ್।
05070058c ಸರ್ವೋಚ್ಚೇದೇ ಚ ಯತತೇ ವೈರಸ್ಯಾಂತವಿಧಿತ್ಸಯಾ।।

ಉಳಿದವರು ಕೂಡ ಬಲವನ್ನು ಮರಳಿ ಪಡೆದು ಉಳಿದವರನ್ನು ಸಂಪೂರ್ಣವಾಗಿ ಕೊಲ್ಲಲು, ವೈರಕ್ಕೆ ಅಂತಿಮ ವಿಧಿಯನ್ನು ನೀಡಲು ಪ್ರಯತ್ನಿಸುತ್ತಾರೆ.

05070059a ಜಯೋ ವೈರಂ ಪ್ರಸೃಜತಿ ದುಃಖಮಾಸ್ತೇ ಪರಾಜಿತಃ।
05070059c ಸುಖಂ ಪ್ರಶಾಂತಃ ಸ್ವಪಿತಿ ಹಿತ್ವಾ ಜಯಪರಾಜಯೌ।।

ಜಯವು ವೈರಕ್ಕೆ ಕಾರಣವಾಗುತ್ತದೆ ಯಾಕೆಂದರೆ ಸೋತವರು ದುಃಖಿತರಾಗಿಯೇ ಇರುತ್ತಾರೆ. ಆದರೆ ಜಯಾಪಜಯಗಳನ್ನು ತೊರೆದು ಶಾಂತಿಯನ್ನು ಹುಡುಕಿದವನೇ ಸುಖವಾಗಿ ನಿದ್ರಿಸಬಲ್ಲನು.

05070060a ಜಾತವೈರಶ್ಚ ಪುರುಷೋ ದುಃಖಂ ಸ್ವಪಿತಿ ನಿತ್ಯದಾ।
05070060c ಅನಿರ್ವೃತೇನ ಮನಸಾ ಸಸರ್ಪ ಇವ ವೇಶ್ಮನಿ।।

ವೈರವನ್ನು ಹುಟ್ಟಿಸಿದ ಪುರುಷನು, ಮನೆಯಲ್ಲಿ ಸರ್ಪಗಳು ತುಂಬಿಯೆವೋ ಎಂಬಂತೆ ಮನಸ್ಸಿನಲ್ಲಿ ಚಿಂತಿಸುತ್ತಾ ನಿತ್ಯವೂ ದುಃಖದಲ್ಲಿ ಮಲಗುತ್ತಾನೆ.

05070061a ಉತ್ಸಾದಯತಿ ಯಃ ಸರ್ವಂ ಯಶಸಾ ಸ ವಿಯುಜ್ಯತೇ।
05070061c ಅಕೀರ್ತಿಂ ಸರ್ವಭೂತೇಷು ಶಾಶ್ವತೀಂ ಸ ನಿಯಚ್ಚತಿ।।

ಎಲ್ಲರನ್ನೂ ನಾಶಪಡಿಸಿದರೆ ಯಶಸ್ಸು ಅವನನ್ನು ತೊರೆಯುತ್ತದೆ. ಸರ್ವಭೂತಗಳಲ್ಲಿ ಶಾಶ್ವತವಾದ ಅಕೀರ್ತಿಯನ್ನು ತಂದುಕೊಳ್ಳುತ್ತಾನೆ.

05070062a ನ ಹಿ ವೈರಾಣಿ ಶಾಮ್ಯಂತಿ ದೀರ್ಘಕಾಲಕೃತಾನ್ಯಪಿ।
05070062c ಆಖ್ಯಾತಾರಶ್ಚ ವಿದ್ಯಂತೇ ಪುಮಾಂಶ್ಚೋತ್ಪದ್ಯತೇ ಕುಲೇ।।

ತುಂಬಾ ಕಾಲದಿಂದ ಇದ್ದರೂ ವೈರವು ಶಾಂತಗೊಳ್ಳುವುದಿಲ್ಲ. ಕುಟುಂಬದಲ್ಲಿ ಹೊಸ ಪುರುಷನು ಹುಟ್ಟುವವರೆಗೆ ಅದನ್ನೇ ಹೇಳಿಕೊಂಡು ಬರುತ್ತಾರೆ.

05070063a ನ ಚಾಪಿ ವೈರಂ ವೈರೇಣ ಕೇಶವ ವ್ಯುಪಶಾಮ್ಯತಿ।
05070063c ಹವಿಷಾಗ್ನಿರ್ಯಥಾ ಕೃಷ್ಣ ಭೂಯ ಏವಾಭಿವರ್ಧತೇ।।

ಕೇಶವ! ವೈರವು ವೈರದಿಂದ ಉಪಶಮನವಾಗುವುದಿಲ್ಲ. ಕೃಷ್ಣ! ಹವಿಸ್ಸಿನಿಂದ ಅಗ್ನಿಯು ಇನ್ನೂ ಚೆನ್ನಾಗಿ ಉರಿಯುವಂತೆ ಬೆಳೆಯುತ್ತ ಹೋಗುತ್ತದೆ.

05070064a ಅತೋಽನ್ಯಥಾ ನಾಸ್ತಿ ಶಾಂತಿರ್ನಿತ್ಯಮಂತರಮಂತತಃ।
05070064c ಅಂತರಂ ಲಿಪ್ಸಮಾನಾನಾಮಯಂ ದೋಷೋ ನಿರಂತರಃ।।

ಇದನ್ನು ಶಾಂತಗೊಳಿಸಲು ಬೇರೆ ಯಾವ ದಾರಿಯೂ ಇಲ್ಲ. ಕೊನೆಯವರೆಗೂ ಈ ಅಂತರವು ಉಳಿದುಕೊಳ್ಳುತ್ತದೆ. ಇದೇ ಭೇದವನ್ನುಂಟುಮಾಡುವವರ ನಿರಂತರ ದೋಷ.

05070065a ಪೌರುಷೇಯೋ ಹಿ ಬಲವಾನಾಧಿರ್ಹೃದಯಬಾಧನಃ।
05070065c ತಸ್ಯ ತ್ಯಾಗೇನ ವಾ ಶಾಂತಿರ್ನಿವೃತ್ತ್ಯಾ ಮನಸೋಽಪಿ ವಾ।।

ಪೌರುಷವೇ ಹೃದಯವನ್ನು ಬಾಧಿಸುವ ಮಹಾ ರೋಗ. ಅದನ್ನು ತ್ಯಜಿಸುವುದರಿಂದ ಅಥವಾ ಮನಸ್ಸನ್ನು ಹಿಂದೆ ತೆಗೆದುಕೊಳ್ಳುವುದರ ಮೂಲಕ ಮಾತ್ರ ಶಾಂತಿಯನ್ನು ಪಡೆಯಬಹುದು.

05070066a ಅಥ ವಾ ಮೂಲಘಾತೇನ ದ್ವಿಷತಾಂ ಮಧುಸೂದನ।
05070066c ಫಲನಿರ್ವೃತ್ತಿರಿದ್ಧಾ ಸ್ಯಾತ್ತನ್ನೃಶಂಸತರಂ ಭವೇತ್।।

ಅಥವಾ ವೈರಿಗಳನ್ನು ಬುಡಸಹಿತ ನಾಶಗೊಳಿಸುವುದರಿಂದ ಇದೇ ಫಲವನ್ನು ಪಡೆಯಬಹುದಾದರೂ ಅದು ತುಂಬಾ ಕ್ರೂರವೆನಿಸುತ್ತದೆ.

05070067a ಯಾ ತು ತ್ಯಾಗೇನ ಶಾಂತಿಃ ಸ್ಯಾತ್ತದೃತೇ ವಧ ಏವ ಸಃ।
05070067c ಸಂಶಯಾಚ್ಚ ಸಮುಚ್ಚೇದಾದ್ದ್ವಿಷತಾಮಾತ್ಮನಸ್ತಥಾ।।

ತ್ಯಾಗದಿಂದ ಕೂಡ ಶಾಂತಿಯು ಬರುವುದಾದರೂ ಅದು ವಧೆಯಂತೆಯೇ. ಯಾಕೆಂದರೆ ತನಗೂ ಮತ್ತು ವೈರಿಗಳಿಗೂ ಸಾವಿನ ಸಂಶಯವು ಇದ್ದೇ ಇರುತ್ತದೆ.

05070068a ನ ಚ ತ್ಯಕ್ತುಂ ತದಿಚ್ಚಾಮೋ ನ ಚೇಚ್ಚಾಮಃ ಕುಲಕ್ಷಯಂ।
05070068c ಅತ್ರ ಯಾ ಪ್ರಣಿಪಾತೇನ ಶಾಂತಿಃ ಸೈವ ಗರೀಯಸೀ।।

ನಾವು ನಮ್ಮ ರಾಜ್ಯವನ್ನು ತ್ಯಜಿಸಲೂ ಇಚ್ಛಿಸುವುದಿಲ್ಲ. ಕುಲಕ್ಷಯವನ್ನೂ ಬಯಸುವುದಿಲ್ಲ. ಶರಣು ಹೋಗುವುದರಿಂದ ದೊರೆಯುವ ಶಾಂತಿಯೇ ದೊಡ್ಡದು.

05070069a ಸರ್ವಥಾ ಯತಮಾನಾನಾಮಯುದ್ಧಮಭಿಕಾಂಕ್ಷತಾಂ।
05070069c ಸಾಂತ್ವೇ ಪ್ರತಿಹತೇ ಯುದ್ಧಂ ಪ್ರಸಿದ್ಧಮಪರಾಕ್ರಮಂ।।

ಎಲ್ಲರೀತಿಯಲ್ಲಿ ಪ್ರಯತ್ನಿಸುವವರು ಯುದ್ಧವನ್ನು ಬಯಸುವುದಿಲ್ಲ. ಆದರೆ ಅವರ ಶಾಂತಿಯ ಕೈಯನ್ನು ತಿರಸ್ಕರಿದರೆ ಯುದ್ಧವು ವಿನಿಶ್ಚಿತ.

05070070a ಪ್ರತಿಘಾತೇನ ಸಾಂತ್ವಸ್ಯ ದಾರುಣಂ ಸಂಪ್ರವರ್ತತೇ।
05070070c ತಚ್ಚುನಾಮಿವ ಗೋಪಾದೇ ಪಂಡಿತೈರುಪಲಕ್ಷಿತಂ।।

ಮಾತುಕತೆಗಳು ಯಶಸ್ವಿಯಾಗದೇ ಇದ್ದಾಗ ಪರಿಣಾಮವು ದಾರುಣವಾದುದು. ಅದು ತೋಳಗಳ ಜಗಳದಂತೆ ಎಂದು ಪಂಡಿತರು ಕಂಡುಕೊಂಡಿದ್ದಾರೆ.

05070071a ಲಾಂಗೂಲಚಾಲನಂ ಕ್ಷ್ವೇಡಃ ಪ್ರತಿರಾವೋ ವಿವರ್ತನಂ।
05070071c ದಂತದರ್ಶನಮಾರಾವಸ್ತತೋ ಯುದ್ಧಂ ಪ್ರವರ್ತತೇ।।

ಬಾಲಗಳನ್ನು ಅಲ್ಲಾಡಿಸುವುದರಿಂದ ಪ್ರಾರಂಭವಾಗುತ್ತದೆ, ನಂತರ ಬೊಗಳುವುದು, ಅದಕ್ಕುತ್ತರವಾಗಿ ಮತ್ತೊಮ್ಮೆ ಬೊಗಳಿಕೆ, ಹಿಂದೆ ಸರಿಯುವುದು, ಹಲ್ಲುಗಳನ್ನು ಕಡಿಯುವುದು, ಜೋರಾದ ಬೊಗಳಿಕೆ ಮತ್ತು ನಂತರ ಕಚ್ಚಾಟ.

05070072a ತತ್ರ ಯೋ ಬಲವಾನ್ಕೃಷ್ಣ ಜಿತ್ವಾ ಸೋಽತ್ತಿ ತದಾಮಿಷಂ।
05070072c ಏವಮೇವ ಮನುಷ್ಯೇಷು ವಿಶೇಷೋ ನಾಸ್ತಿ ಕಶ್ಚನ।।

ಕೃಷ್ಣ! ಅವುಗಳಲ್ಲಿ ಬಲಶಾಲಿಯಾದುದು ಗೆದ್ದು ಮಾಂಸದ ತುಂಡನ್ನು ತಿನ್ನುತ್ತದೆ. ಮನುಷ್ಯರಲ್ಲಿಯೂ ಹೀಗೆಯೇ ನಡೆಯುತ್ತದೆ. ಅದರಲ್ಲಿ ವಿಶೇಷವಾದುದು ಏನೂ ಇಲ್ಲ.

05070073a ಸರ್ವಥಾ ತ್ವೇತದುಚಿತಂ ದುರ್ಬಲೇಷು ಬಲೀಯಸಾಂ।
05070073c ಅನಾದರೋ ವಿರೋಧಶ್ಚ ಪ್ರಣಿಪಾತೀ ಹಿ ದುರ್ಬಲಃ।।

ಯಾವಾಗಲೂ ಬಲಶಾಲಿಗಳು ದುರ್ಬಲರೊಂದಿಗೆ ಹೀಗೆಯೇ ನಡೆದುಕೊಳ್ಳುತ್ತಾರೆ - ಅನಾದರಣೆ ಮತ್ತು ವಿರೋಧ. ದುರ್ಬಲನೇ ಶರಣುಹೋಗುತ್ತಾನೆ.

05070074a ಪಿತಾ ರಾಜಾ ಚ ವೃದ್ಧಶ್ಚ ಸರ್ವಥಾ ಮಾನಮರ್ಹತಿ।
05070074c ತಸ್ಮಾನ್ಮಾನ್ಯಶ್ಚ ಪೂಜ್ಯಶ್ಚ ಧೃತರಾಷ್ಟ್ರೋ ಜನಾರ್ದನ।।

ಜನಾರ್ದನ! ತಂದೆ, ರಾಜ ಮತ್ತು ವೃದ್ಧರು ಸರ್ವಥಾ ಗೌರವಕ್ಕೆ ಅರ್ಹರು. ಆದುದರಿಂದಲೇ ಧೃತರಾಷ್ಟ್ರನನ್ನು ನಾವು ಗೌರವಿಸುತ್ತೇವೆ ಮತ್ತು ಪೂಜಿಸುತ್ತೇವೆ.

05070075a ಪುತ್ರಸ್ನೇಹಸ್ತು ಬಲವಾನ್ಧೃತರಾಷ್ಟ್ರಸ್ಯ ಮಾಧವ।
05070075c ಸ ಪುತ್ರವಶಮಾಪನ್ನಃ ಪ್ರಣಿಪಾತಂ ಪ್ರಹಾಸ್ಯತಿ।।

ಮಾಧವ! ಆದರೆ ಧೃತರಾಷ್ಟ್ರನ ಪುತ್ರಸ್ನೇಹವಾದರೋ ಬಲವಾದದ್ದು. ಅವನು ಪುತ್ರನ ವಶದಲ್ಲಿ ನಮ್ಮ ಶರಣಾಗತಿಯನ್ನು ಪರಿಹಾಸಿಸುತ್ತಾನೆ.

05070076a ತತ್ರ ಕಿಂ ಮನ್ಯಸೇ ಕೃಷ್ಣ ಪ್ರಾಪ್ತಕಾಲಮನಂತರಂ।
05070076c ಕಥಮರ್ಥಾಚ್ಚ ಧರ್ಮಾಚ್ಚ ನ ಹೀಯೇಮಹಿ ಮಾಧವ।।

ಕೃಷ್ಣ! ಬಂದೊದಗಿದ ಈ ಸಮಯದಲ್ಲಿ ನಿನಗೇನಿಸುತ್ತದೆ? ಮಾಧವ! ನಾವು ಹೇಗೆ ಅರ್ಥ ಮತ್ತು ಧರ್ಮಗಳು ಕಡಿಮೆಯಾಗದಂತೆ ನಡೆದುಕೊಳ್ಳಬಹುದು?

05070077a ಈದೃಶೇ ಹ್ಯರ್ಥಕೃಚ್ಚ್ರೇಽಸ್ಮಿನ್ಕಮನ್ಯಂ ಮಧುಸೂದನ।
05070077c ಉಪಸಂಪ್ರಷ್ಟುಮರ್ಹಾಮಿ ತ್ವಾಮೃತೇ ಪುರುಷೋತ್ತಮ।।

ಮಧುಸೂದನ! ಪುರುಷೋತ್ತಮ! ಈ ರೀತಿಯ ಕಷ್ಟ ಬಂದೊದಗಿರುವಾಗ ನಿನ್ನನ್ನು ಬಿಟ್ಟು ಬೇರೆ ಯಾರಲ್ಲಿ ನಾನು ವಿಚಾರಮಾಡಬಹುದು?

05070078a ಪ್ರಿಯಶ್ಚ ಪ್ರಿಯಕಾಮಶ್ಚ ಗತಿಜ್ಞಾಃ ಸರ್ವಕರ್ಮಣಾಂ।
05070078c ಕೋ ಹಿ ಕೃಷ್ಣಾಸ್ತಿ ನಸ್ತ್ವಾದೃಕ್ಸರ್ವನಿಶ್ಚಯವಿತ್ಸುಹೃತ್।।

ಕೃಷ್ಣ! ಎಲ್ಲವನ್ನೂ ನಿರ್ಧರಿಸಬಲ್ಲ ನೀನಲ್ಲದೇ ನಮಗೆ ಎಲ್ಲ ಕೆಲಸಗಳಲ್ಲಿ ದಾರಿಯನ್ನು ತಿಳಿದಿರುವ, ಒಳ್ಳೆಯದನ್ನೇ ಬಯಸುವ ಪ್ರಿಯನು ಬೇರೆ ಯಾರಿದ್ದಾರೆ?””

05070079 ವೈಶಂಪಾಯನ ಉವಾಚ।
05070079a ಏವಮುಕ್ತಃ ಪ್ರತ್ಯುವಾಚ ಧರ್ಮರಾಜಂ ಜನಾರ್ದನಃ।
05070079c ಉಭಯೋರೇವ ವಾಮರ್ಥೇ ಯಾಸ್ಯಾಮಿ ಕುರುಸಂಸದಂ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಧರ್ಮರಾಜನಿಗೆ ಜನಾರ್ದನನು ಉತ್ತರಿಸಿದನು: “ನಿಮ್ಮಿಬ್ಬರ ಒಳಿತಿಗಾಗಿ ಕುರುಸಂಸದಕ್ಕೆ ಹೋಗುತ್ತೇನೆ.

05070080a ಶಮಂ ತತ್ರ ಲಭೇಯಂ ಚೇದ್ಯುಷ್ಮದರ್ಥಮಹಾಪಯನ್।
05070080c ಪುಣ್ಯಂ ಮೇ ಸುಮಹದ್ರಾಜಂಶ್ಚರಿತಂ ಸ್ಯಾನ್ಮಹಾಫಲಂ।।

ನಿನ್ನ ಲಾಭವನ್ನು ಅಪಹರಿಸದೇ ಶಾಂತಿಯು ದೊರೆಯಿತೆಂದರೆ ರಾಜನ್! ಅದು ನನ್ನ ಮಹಾ ಪುಣ್ಯವಾಗುತ್ತದೆ. ಹಾಗೆ ನಡೆದರೆ ಫಲವು ಮಹತ್ತರವಾಗಿರುತ್ತದೆ.

05070081a ಮೋಚಯೇಯಂ ಮೃತ್ಯುಪಾಶಾತ್ಸಂರಬ್ಧಾನ್ಕುರುಸೃಂಜಯಾನ್।
05070081c ಪಾಂಡವಾನ್ಧಾರ್ತರಾಷ್ಟ್ರಾಂಶ್ಚ ಸರ್ವಾಂ ಚ ಪೃಥಿವೀಮಿಮಾಂ।।

ಹೋರಾಡಲು ಸಿದ್ಧರಾಗಿರುವ ಕುರು-ಸೃಂಜಯರು, ಪಾಂಡವರು, ಧಾರ್ತರಾಷ್ಟ್ರರು ಮತ್ತು ಇಡೀ ಭೂಮಿಯನ್ನೇ ಮೃತ್ಯುಪಾಶದಿಂದ ಬಿಡುಗಡೆಗೊಳಿಸುತ್ತೇನೆ.”

05070082 ಯುಧಿಷ್ಠಿರ ಉವಾಚ।
05070082a ನ ಮಮೈತನ್ಮತಂ ಕೃಷ್ಣ ಯತ್ತ್ವಂ ಯಾಯಾಃ ಕುರೂನ್ಪ್ರತಿ।
05070082c ಸುಯೋಧನಃ ಸೂಕ್ತಮಪಿ ನ ಕರಿಷ್ಯತಿ ತೇ ವಚಃ।।

ಯುಧಿಷ್ಠಿರನು ಹೇಳಿದನು: “ಕೃಷ್ಣ! ನೀನು ಕುರುಗಳಲ್ಲಿಗೆ ಹೋಗುವುದಕ್ಕೆ ನಾನು ಒಪ್ಪುವುದಿಲ್ಲ. ಎಷ್ಟೇ ಸೂಕ್ತವಾಗಿದ್ದರೂ ನಿನ್ನ ಮಾತನ್ನು ಸುಯೋಧನನು ನಡೆಸುವುದಿಲ್ಲ.

05070083a ಸಮೇತಂ ಪಾರ್ಥಿವಂ ಕ್ಷತ್ರಂ ಸುಯೋಧನವಶಾನುಗಂ।
05070083c ತೇಷಾಂ ಮಧ್ಯಾವತರಣಂ ತವ ಕೃಷ್ಣ ನ ರೋಚಯೇ।।

ಎಲ್ಲ ಪಾರ್ಥಿವ ಕ್ಷತ್ರಿಯರೂ ಸುಯೋಧನನ ವಶದಲ್ಲಿ ಬಂದಿದ್ದಾರೆ. ಅವರ ಮಧ್ಯೆ ಕೃಷ್ಣ! ನೀನು ಹೋಗುವುದು ನನಗಿಷ್ಟವಿಲ್ಲ.

05070084a ನ ಹಿ ನಃ ಪ್ರೀಣಯೇದ್ದ್ರವ್ಯಂ ನ ದೇವತ್ವಂ ಕುತಃ ಸುಖಂ।
05070084c ನ ಚ ಸರ್ವಾಮರೈಶ್ವರ್ಯಂ ತವ ರೋಧೇನ ಮಾಧವ।।

ಮಾಧವ! ನಿನಗೇನಾದರೂ ಆದರೆ ಪ್ರಪಂಚದ ಯಾವುದೂ - ಸಂಪತ್ತು, ದೇವತ್ವ, ಅಮರರ ಎಲ್ಲ ಐಶ್ವರ್ಯ – ನಮಗೆ ಸುಖವನ್ನು ತರಲಾರವು.”

05070085 ಭಗವಾನುವಾಚ।
05070085a ಜಾನಾಮ್ಯೇತಾಂ ಮಹಾರಾಜ ಧಾರ್ತರಾಷ್ಟ್ರಸ್ಯ ಪಾಪತಾಂ।
05070085c ಅವಾಚ್ಯಾಸ್ತು ಭವಿಷ್ಯಾಮಃ ಸರ್ವಲೋಕೇ ಮಹೀಕ್ಷಿತಾಂ।।

ಭಗವಂತನು ಹೇಳಿದನು: “ಮಹಾರಾಜ! ಧಾರ್ತರಾಷ್ಟ್ರನ ದುಷ್ಟತನವನ್ನು ಬಲ್ಲೆ. ಆದರೆ ಇದರಿಂದ ನಾವು ಸರ್ವ ಲೋಕಗಳಲ್ಲಿ ಮಹೀಕ್ಷಿತರ ಮಾತಿಗೆ ಬರುವುದಿಲ್ಲ.

05070086a ನ ಚಾಪಿ ಮಮ ಪರ್ಯಾಪ್ತಾಃ ಸಹಿತಾಃ ಸರ್ವಪಾರ್ಥಿವಾಃ।
05070086c ಕ್ರುದ್ಧಸ್ಯ ಪ್ರಮುಖೇ ಸ್ಥಾತುಂ ಸಿಂಹಸ್ಯೇವೇತರೇ ಮೃಗಾಃ।।

ಸಿಂಹದ ಎದಿರು ಇತರ ಮೃಗಗಳಂತೆ ಎಲ್ಲ ರಾಜರು ಒಟ್ಟಿಗೇ ಬಂದರೂ ಕ್ರುದ್ಧನಾದ ನನ್ನ ಎದಿರು ನಿಲ್ಲಲು ಸಾಕಾಗಲಿಕ್ಕಿಲ್ಲ.

05070087a ಅಥ ಚೇತ್ತೇ ಪ್ರವರ್ತೇರನ್ಮಯಿ ಕಿಂ ಚಿದಸಾಂಪ್ರತಂ।
05070087c ನಿರ್ದಹೇಯಂ ಕುರೂನ್ಸರ್ವಾನಿತಿ ಮೇ ಧೀಯತೇ ಮತಿಃ।।

ಅವರು ನನ್ನೊಡನೆ ಏನಾದರೂ ಕೆಟ್ಟದ್ದಾಗಿ ನಡೆದುಕೊಂಡರೆ ಎಲ್ಲ ಕುರುಗಳನ್ನೂ ಸುಟ್ಟುಬಿಡುತ್ತೇನೆ ಎಂದು ನಿಶ್ಚಯಿಸಿದ್ದೇನೆ.

05070088a ನ ಜಾತು ಗಮನಂ ತತ್ರ ಭವೇತ್ಪಾರ್ಥ ನಿರರ್ಥಕಂ।
05070088c ಅರ್ಥಪ್ರಾಪ್ತಿಃ ಕದಾ ಚಿತ್ಸ್ಯಾದಂತತೋ ವಾಪ್ಯವಾಚ್ಯತಾ।।

ಪಾರ್ಥ! ನಾನು ಅಲ್ಲಿಗೆ ಹೋಗುವುದು ನಿರರ್ಥಕವಾಗುವುದಿಲ್ಲ. ನಮಗೆ ಎಂದಾದರೂ ಏನಾದರೂ ಲಭ್ಯವಾಗಿಯೇ ಆಗುತ್ತದೆ. ನೀನು ಕೆಟ್ಟ ಮಾತಿಗೆ ಬರಬಾರದೆಂದಷ್ಟೇ!”

05070089 ಯುಧಿಷ್ಠಿರ ಉವಾಚ।
05070089a ಯತ್ತುಭ್ಯಂ ರೋಚತೇ ಕೃಷ್ಣ ಸ್ವಸ್ತಿ ಪ್ರಾಪ್ನುಹಿ ಕೌರವಾನ್।
05070089c ಕೃತಾರ್ಥಂ ಸ್ವಸ್ತಿಮಂತಂ ತ್ವಾಂ ದ್ರಕ್ಷ್ಯಾಮಿ ಪುನರಾಗತಂ।।

ಯುಧಿಷ್ಠಿರನು ಹೇಳಿದನು: “ಕೃಷ್ಣ! ನಿನಗೆ ಇಷ್ಟವಾಗುವುದಾದರೆ ಕೌರವರಲ್ಲಿಗೆ ಹೋಗು. ಮಂಗಳವಾಗಲಿ! ಯಶಸ್ವಿಯಾಗಿ, ಸುರಕ್ಷಿತನಾಗಿ ನಿನ್ನ ಮರಳುವಿಕೆಯನ್ನು ಕಾಯುತ್ತಿರುತ್ತೇನೆ.

05070090a ವಿಷ್ವಕ್ಸೇನ ಕುರೂನ್ಗತ್ವಾ ಭಾರತಾಂ ಶಮಯೇಃ ಪ್ರಭೋ।
05070090c ಯಥಾ ಸರ್ವೇ ಸುಮನಸಃ ಸಹ ಸ್ಯಾಮಃ ಸುಚೇತಸಃ।।

ಪ್ರಭೋ! ವಿಶ್ವಕ್ಸೇನ! ಕುರುಗಳಲ್ಲಿಗೆ ಹೋಗಿ, ಎಲ್ಲರೂ ಸ್ನೇಹ ಮತ್ತು ಸಂತೋಷದಿಂದ ಒಟ್ಟಿಗೇ ಇರುವ ಹಾಗೆ ಭಾರತರನ್ನು ಶಾಂತಗೊಳಿಸು.

05070091a ಭ್ರಾತಾ ಚಾಸಿ ಸಖಾ ಚಾಸಿ ಬೀಭತ್ಸೋರ್ಮಮ ಚ ಪ್ರಿಯಃ।
05070091c ಸೌಹೃದೇನಾವಿಶಂಕ್ಯೋಽಸಿ ಸ್ವಸ್ತಿ ಪ್ರಾಪ್ನುಹಿ ಭೂತಯೇ।।

ನನ್ನ ತಮ್ಮನಂತಿರುವೆ. ನನ್ನ ಮತ್ತು ಬೀಭತ್ಸುವಿನ ಪ್ರಿಯ ಸಖನಾಗಿರುವೆ. ನಿನ್ನ ಸ್ನೇಹದಲ್ಲಿ ಸ್ವಲ್ಪವೂ ಶಂಕೆಯಿಲ್ಲ. ನಮಗೆ ಒಳ್ಳೆಯದನ್ನೇ ತರುತ್ತೀಯೆ.

05070092a ಅಸ್ಮಾನ್ವೇತ್ಥ ಪರಾನ್ವೇತ್ಥ ವೇತ್ಥಾರ್ಥಂ ವೇತ್ಥ ಭಾಷಿತಂ।
05070092c ಯದ್ಯದಸ್ಮದ್ಧಿತಂ ಕೃಷ್ಣ ತತ್ತದ್ವಾಚ್ಯಃ ಸುಯೋಧನಃ।।

ನಮ್ಮನ್ನು ತಿಳಿದಿದ್ದೀಯೆ. ಅವರನ್ನು ತಿಳಿದಿದ್ದೀಯೆ. ಒಳ್ಳೆಯದೇನೆಂದು ತಿಳಿದಿದ್ದೀಯೆ. ಮಾತನ್ನು ತಿಳಿದಿದ್ದೀಯೆ. ಕೃಷ್ಣ! ನಮ್ಮ ಹಿತದಲ್ಲಿರುವ ಏನನ್ನೂ ಸುಯೋಧನನಿಗೆ ಹೇಳು.

05070093a ಯದ್ಯದ್ಧರ್ಮೇಣ ಸಂಯುಕ್ತಮುಪಪದ್ಯೇದ್ಧಿತಂ ವಚಃ।
05070093c ತತ್ತತ್ಕೇಶವ ಭಾಷೇಥಾಃ ಸಾಂತ್ವಂ ವಾ ಯದಿ ವೇತರತ್।।

ಕೇಶವ! ಶಾಂತಿಯಾಗಲೀ ಅಥವಾ ಯುದ್ಧವಾಗಲೀ, ಯಾವುದು ಧರ್ಮಕ್ಕೆ ಜೋಡಿಕೊಂಡಿದೆಯೋ ಅದೇ ಮಾತನ್ನು ಅವರಿಗೆ ಹೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಯುಧಿಷ್ಠಿರಕೃತಕೃಷ್ಣಪ್ರೇರಣೇ ಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಯುಧಿಷ್ಠಿರನು ಕೃಷ್ಣನಿಗೆ ಮಾಡಿದ ಪ್ರೇರಣೆ ಎನ್ನುವ ಎಪ್ಪತ್ತನೆಯ ಅಧ್ಯಾಯವು.