ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 68
ಸಾರ
ಸಂಜಯನು ಧೃತರಾಷ್ಟ್ರನಿಗೆ ಕೃಷ್ಣನ ನಾಮಾರ್ಥಗಳನ್ನು ತಿಳಿಸಿದುದು (1-14).
05068001 ಧೃತರಾಷ್ಟ್ರ ಉವಾಚ।
05068001a ಭೂಯೋ ಮೇ ಪುಂಡರೀಕಾಕ್ಷಂ ಸಂಜಯಾಚಕ್ಷ್ವ ಪೃಚ್ಚತೇ।
05068001c ನಾಮಕರ್ಮಾರ್ಥವಿತ್ತಾತ ಪ್ರಾಪ್ನುಯಾಂ ಪುರುಷೋತ್ತಮಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಪುಂಡರೀಕಾಕ್ಷನ ಕುರಿತು ನಾನು ಕೇಳಿದುದಕ್ಕೆ ಇನ್ನೂ ಹೆಚ್ಚು ಹೇಳು. ಅಯ್ಯಾ! ಅವನ ಹೆಸರು ಮತ್ತು ಕಾರ್ಯಗಳ ಅರ್ಥವನ್ನು ಮಾಡಿಕೊಂಡರೆ ಆ ಪುರುಷೋತ್ತಮನನ್ನು ತಲುಪಬಹುದು.”
05068002 ಸಂಜಯ ಉವಾಚ।
05068002a ಶ್ರುತಂ ಮೇ ತಸ್ಯ ದೇವಸ್ಯ ನಾಮನಿರ್ವಚನಂ ಶುಭಂ।
05068002c ಯಾವತ್ತತ್ರಾಭಿಜಾನೇಽಹಮಪ್ರಮೇಯೋ ಹಿ ಕೇಶವಃ।।
ಸಂಜಯನು ಹೇಳಿದನು: “ನಾನು ಆ ದೇವನ ಶುಭನಾಮಗಳ ವಿವರಣೆಗಳನ್ನು ಕೇಳಿದ್ದೇನೆ. ನನಗೆ ತಿಳಿದಂತೆ ಕೇಶವನು ಅಪ್ರಮೇಯನು.
05068003a ವಸನಾತ್ಸರ್ವಭೂತಾನಾಂ ವಸುತ್ವಾದ್ದೇವಯೋನಿತಃ।
05068003c ವಾಸುದೇವಸ್ತತೋ ವೇದ್ಯೋ ವೃಷತ್ವಾದ್ವೃಷ್ಣಿರುಚ್ಯತೇ।।
ಸರ್ವಭೂತಗಳಿಗೆ ವಸನವನ್ನೀಯುವುದರಿಂದ, ವಸುವಾಗಿರುವುದರಿಂದ, ಮತ್ತು ದೇವಯೋನಿಯಾಗಿರುವುದರಿಂದ ಅವನನ್ನು ವಾಸುದೇವನೆಂದು ತಿಳಿಯುತ್ತಾರೆ. ವೃಷತ್ವದಿಂದಾಗಿ ವಿಷ್ಣುವೆಂದು ಕರೆಯುತ್ತಾರೆ.
05068004a ಮೌನಾದ್ಧ್ಯಾನಾಚ್ಚ ಯೋಗಾಚ್ಚ ವಿದ್ಧಿ ಭಾರತ ಮಾಧವಂ।
05068004c ಸರ್ವತತ್ತ್ವಲಯಾಚ್ಚೈವ ಮಧುಹಾ ಮಧುಸೂದನಃ।।
ಭಾರತ! ಮುನಿಯಾಗಿದ್ದುದರಿಂದ, ಯೋಗಿಯಾಗಿರುವುದರಿಂದ ಅವನನ್ನು ಮಾಧವನೆಂದು ತಿಳಿ. ಸರ್ವತತ್ವಗಳನ್ನೂ ಲಯಗೊಳಿಸುವುದರಿಂದ ಮತ್ತು ಮಧುವಿನ ಸಂಹಾರಕನಾಗಿದುದರಿಂದ ಅವನು ಮಧುಸೂದನ.
05068005a ಕೃಷಿರ್ಭೂವಾಚಕಃ ಶಬ್ದೋ ಣಶ್ಚ ನಿರ್ವೃತಿವಾಚಕಃ।
05068005c ಕೃಷ್ಣಸ್ತದ್ಭಾವಯೋಗಾಚ್ಚ ಕೃಷ್ಣೋ ಭವತಿ ಶಾಶ್ವತಃ।।
‘ಕೃಷಿ’ ಶಬ್ಧವು ಭೂಮಿಯನ್ನು ಸೂಚಿಸುತ್ತದೆ ಮತ್ತು ‘ಣ’ ವು ನಿವೃತ್ತಿಯನ್ನು ಸೂಚಿಸುತ್ತದೆ. ಕೃಷ್ಣನಲ್ಲಿ ಇವೆರಡೂ ಸೇರಿರುವುದರಿಂದ ಕೃಷ್ಣನು ಶಾಶ್ವತನೆಂದಾಗುತ್ತಾನೆ.
05068006a ಪುಂಡರೀಕಂ ಪರಂ ಧಾಮ ನಿತ್ಯಮಕ್ಷಯಮಕ್ಷರಂ।
05068006c ತದ್ಭಾವಾತ್ಪುಂಡರೀಕಾಕ್ಷೋ ದಸ್ಯುತ್ರಾಸಾಜ್ಜನಾರ್ದನಃ।।
ಪುಂಡರೀಕವು ನಿತ್ಯವೂ, ಅಕ್ಷಯವೂ, ಅಕ್ಷರವೂ ಆದ ಪರಮ ಧಾಮ. ಆದುದರಿಂದ ಅವನು ಪುಂಡರೀಕಾಕ್ಷ. ದಸ್ಯುಗಳನ್ನು ಕಾಡುವುದರಿಂದ ಅವನು ಜನಾರ್ದನ.
05068007a ಯತಃ ಸತ್ತ್ವಂ ನ ಚ್ಯವತೇ ಯಚ್ಚ ಸತ್ತ್ವಾನ್ನ ಹೀಯತೇ।
05068007c ಸತ್ತ್ವತಃ ಸಾತ್ವತಸ್ತಸ್ಮಾದಾರ್ಷಭಾದ್ವೃಷಭೇಕ್ಷಣಃ।।
ಯಾರಲ್ಲಿ ಸತ್ವವು ತೋರಿಸಿಕೊಳ್ಳುವುದಿಲ್ಲವೋ, ಯಾರಲ್ಲಿ ಸತ್ವವು ಕಡಿಮೆಯಾಗುವುದಿಲ್ಲವೋ, ಅಂಥಹ ಸತ್ವಕ್ಕಾಗಿ ಅವನು ಸಾತ್ವತ. ವೃಷಭನಂತಿರುವುದರಿಂದ ಅವನು ವೃಷಭೇಕ್ಷಣ.
05068008a ನ ಜಾಯತೇ ಜನಿತ್ರ್ಯಾಂ ಯದಜಸ್ತಸ್ಮಾದನೀಕಜಿತ್।
05068008c ದೇವಾನಾಂ ಸ್ವಪ್ರಕಾಶತ್ವಾದ್ದಮಾದ್ದಾಮೋದರಂ ವಿದುಃ।।
ಜನನಿಯಲ್ಲಿ ಜನಿಸದೇ ಇರುವುದರಿಂದ, ಜಯಿಸಲಸಾಧ್ಯನಾಗಿರುವುದರಿಂದ ಅವನು ಅಜ (ಜನ್ಮವಿಲ್ಲದವನು). ದೇವತೆಗಳ ಸ್ವಪ್ರಕಾಶವಿರುವುದರಿಂದ ಅವನನ್ನು ದಾಮೋದರನೆಂದು ತಿಳಿಯುತ್ತಾರೆ.
05068009a ಹರ್ಷಾತ್ಸೌಖ್ಯಾತ್ಸುಖೈಶ್ವರ್ಯಾದ್ಧೃಷೀಕೇಶತ್ವಮಶ್ನುತೇ।
05068009c ಬಾಹುಭ್ಯಾಂ ರೋದಸೀ ಬಿಭ್ರನ್ಮಹಾಬಾಹುರಿತಿ ಸ್ಮೃತಃ।।
ಹರ್ಷ, ಸುಖ ಮತ್ತು ಐಶ್ವರ್ಯಗಳಿಂದ ಅವನು ಹೃಷೀಕೇಶನಾಗಿದ್ದಾನೆ. ಭೂಮಿ-ಆಕಾಶಗಳನ್ನು ಎರಡು ಬಾಹುಗಳಲ್ಲಿ ಹೊತ್ತಿರುವುದರಿಂದ ಅವನು ಮಹಾಬಾಹುವೆಂದು ವಿಶ್ರುತನಾಗಿದ್ದಾನೆ.
05068010a ಅಧೋ ನ ಕ್ಷೀಯತೇ ಜಾತು ಯಸ್ಮಾತ್ತಸ್ಮಾದಧೋಕ್ಷಜಃ।
05068010c ನರಾಣಾಮಯನಾಚ್ಚಾಪಿ ತೇನ ನಾರಾಯಣಃ ಸ್ಮೃತಃ।
ಕೆಳಮುಖವಾಗಿ ಕ್ಷೀಣವಾಗದೇ ಇರುವುದರಿಂದ ಅವನು ಅಧೋಕ್ಷಜ. ನರರ ಪ್ರಯಾಣನಾಗಿದ್ದುದರಿಂದ ಅವನು ನಾರಾಯಣನೆಂದೂ ಕರೆಯಲ್ಪಡುತ್ತಾನೆ.
05068010e ಪೂರಣಾತ್ಸದನಾಚ್ಚೈವ ತತೋಽಸೌ ಪುರುಷೋತ್ತಮಃ।।
05068011a ಅಸತಶ್ಚ ಸತಶ್ಚೈವ ಸರ್ವಸ್ಯ ಪ್ರಭವಾಪ್ಯಯಾತ್।
05068011c ಸರ್ವಸ್ಯ ಚ ಸದಾ ಜ್ಞಾನಾತ್ಸರ್ವಮೇನಂ ಪ್ರಚಕ್ಷತೇ।।
ಪೂರ್ಣಗೊಳಿಸುವವನು ಮತ್ತು ಕಡಿಮೆಮಾಡುವವನಾಗಿರುವುದರಿಂದ ಅವನು ಪುರುಷೋತ್ತಮ. ಇರುವ ಮತ್ತು ಇಲ್ಲದಿರುವ ಎಲ್ಲವುಗಳ ಪ್ರಭುವಾದುದರಿಂದ ಮತ್ತು ಜ್ಞಾನದ ಮೂಲಕ ಎಲ್ಲವನ್ನೂ ಕಾಣುವುದರಿಂದ ಅವನು ಸರ್ವ.
05068012a ಸತ್ಯೇ ಪ್ರತಿಷ್ಠಿತಃ ಕೃಷ್ಣಃ ಸತ್ಯಮತ್ರ ಪ್ರತಿಷ್ಠಿತಂ।
05068012c ಸತ್ಯಾತ್ಸತ್ಯಂ ಚ ಗೋವಿಂದಸ್ತಸ್ಮಾತ್ಸತ್ಯೋಽಪಿ ನಾಮತಃ।।
ಕೃಷ್ಣನು ಸತ್ಯದಲ್ಲಿ ನೆಲೆಸಿದ್ದಾನೆ ಮತ್ತು ಸತ್ಯವು ಅವನಲ್ಲಿ ನೆಲೆಸಿದೆ. ಗೋವಿಂದನು ಸತ್ಯ ಅಸತ್ಯಗಳೆರಡೂ. ಆದುದರಿಂದ ಅವನಿಗೆ ಸತ್ಯ ಎಂಬ ಹೆಸರೂ ಇದೆ.
05068013a ವಿಷ್ಣುರ್ವಿಕ್ರಮಣಾದೇವ ಜಯನಾಜ್ಜಿಷ್ಣುರುಚ್ಯತೇ।
05068013c ಶಾಶ್ವತತ್ವಾದನಂತಶ್ಚ ಗೋವಿಂದೋ ವೇದನಾದ್ಗವಾಂ।।
ವಿಕ್ರಮದಿಂದಾಗಿ ಅವನು ವಿಷ್ಣು. ಜಯದಿಂದಾಗಿ ಜಿಷ್ಣು ಎನ್ನುತ್ತಾರೆ. ಶಾಶ್ವತನಾಗಿರುವುದರಿಂದ ಅನಂತನೆಂದೂ ಗೋವುಗಳನ್ನು ತಿಳಿದುಕೊಂಡಿದುದಕ್ಕೆ ಗೋವಿಂದನೆಂದೂ ಕರೆಯುತ್ತಾರೆ.
05068014a ಅತತ್ತ್ವಂ ಕುರುತೇ ತತ್ತ್ವಂ ತೇನ ಮೋಹಯತೇ ಪ್ರಜಾಃ।
05068014c ಏವಂವಿಧೋ ಧರ್ಮನಿತ್ಯೋ ಭಗವಾನ್ಮುನಿಭಿಃ ಸಹ।
05068014e ಆಗಂತಾ ಹಿ ಮಹಾಬಾಹುರಾನೃಶಂಸ್ಯಾರ್ಥಮಚ್ಯುತಃ।।
ತತ್ತ್ವವಲ್ಲದವುಗಳನ್ನು ತತ್ತ್ವವುಳ್ಳವುಗಳನ್ನಾಗಿ ಮಾಡಿ ಪ್ರಜೆಗಳನ್ನು ಮೋಹಗೊಳಿಸುತ್ತಾನೆ. ಈ ರೀತಿಯಾಗಿ ಧರ್ಮನಿತ್ಯನಾದ ಭಗವಾನ್ ಮಹಾಬಾಹು ಅಚ್ಯುತನು ಹಿಂಸೆಯನ್ನು ತಡೆಯಲು ಮುನಿಗಳೊಂದಿಗೆ ಇಲ್ಲಿಗೆ ಬರುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಅಷ್ಟಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತೆಂಟನೆಯ ಅಧ್ಯಾಯವು.