ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 67
ಸಾರ
ಧೃತರಾಷ್ಟ್ರ-ಗಾಂಧಾರಿಯರು ಹೇಳಿದರೂ ದುರ್ಯೋಧನನು ಒಪ್ಪಿಕೊಳ್ಳದಿರಲು (1-10), ವ್ಯಾಸನು ಧೃತರಾಷ್ಟ್ರನಿಗೆ ಸಂಜಯನ ಮಾತನ್ನು ಕೇಳು ಎಂದು ಉಪದೇಶಿಸುವುದು (11-21).
05067001 ಧೃತರಾಷ್ಟ್ರ ಉವಾಚ।
05067001a ಕಥಂ ತ್ವಂ ಮಾಧವಂ ವೇತ್ಥ ಸರ್ವಲೋಕಮಹೇಶ್ವರಂ।
05067001c ಕಥಮೇನಂ ನ ವೇದಾಹಂ ತನ್ಮಮಾಚಕ್ಷ್ವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಹೇಗೆ ಸರ್ವಲೋಕಮಹೇಶ್ವರ ಮಾಧವನನ್ನು ತಿಳಿದಿರುವೆ? ನಾನು ಹೇಗೆ ಅವನನ್ನು ತಿಳಿದಿಲ್ಲ ಎನ್ನುವುದನ್ನು ನನಗೆ ಹೇಳು.”
05067002 ಸಂಜಯ ಉವಾಚ।
05067002a ವಿದ್ಯಾ ರಾಜನ್ನ ತೇ ವಿದ್ಯಾ ಮಮ ವಿದ್ಯಾ ನ ಹೀಯತೇ।
05067002c ವಿದ್ಯಾಹೀನಸ್ತಮೋಧ್ವಸ್ತೋ ನಾಭಿಜಾನಾತಿ ಕೇಶವಂ।।
ಸಂಜಯನು ಹೇಳಿದನು: “ರಾಜನ್! ನಿನಗೆ ವಿದ್ಯೆ-ತಿಳುವಳಿಕೆಯಿಲ್ಲ. ನನ್ನ ವಿದ್ಯೆ-ತಿಳುವಳಿಕೆಯಲ್ಲಿ ಕಡಿಮೆಯಿಲ್ಲ. ವಿದ್ಯಾಹೀನನಾಗಿ, ಕತ್ತಲೆಯಿಂದ ಆವರಿಸಿದವನಾಗಿ ನಿನಗೆ ಕೇಶವನು ಅರ್ಥವಾಗುತ್ತಿಲ್ಲ.
05067003a ವಿದ್ಯಯಾ ತಾತ ಜಾನಾಮಿ ತ್ರಿಯುಗಂ ಮಧುಸೂದನಂ।
05067003c ಕರ್ತಾರಮಕೃತಂ ದೇವಂ ಭೂತಾನಾಂ ಪ್ರಭವಾಪ್ಯಯಂ।।
ಅಯ್ಯಾ! ವಿದ್ಯೆಯಿಂದಲೇ ನಾನು ಮೂರೂ ಯುಗಗಳ ಮಧುಸೂದನನನ್ನು, ಸ್ವತಃ ಪಾಡಲ್ಪಟ್ಟಿಲ್ಲದಿದ್ದರೂ ಬೇರೆ ಎಲ್ಲವನ್ನೂ ಮಾಡುವ, ಇರುವ ಎಲ್ಲವಕ್ಕೂ ಒಡೆಯನಾದ, ಪ್ರಭು ಅಪ್ಯಯನನ್ನು ತಿಳಿದಿದ್ದೇನೆ.”
05067004 ಧೃತರಾಷ್ಟ್ರ ಉವಾಚ।
05067004a ಗಾವಲ್ಗಣೇಽತ್ರ ಕಾ ಭಕ್ತಿರ್ಯಾ ತೇ ನಿತ್ಯಾ ಜನಾರ್ದನೇ।
05067004c ಯಯಾ ತ್ವಮಭಿಜಾನಾಸಿ ತ್ರಿಯುಗಂ ಮಧುಸೂದನಂ।।
ಧೃತರಾಷ್ಟ್ರನು ಹೇಳಿದನು: “ಗಾವಲ್ಗಣೇ! ಜನಾರ್ದನನಲ್ಲಿ ನಿತ್ಯವೂ ನೀನು ತೋರಿಸುವ ಈ ಭಕ್ತಿ - ಯಾವುದರಿಂದ ನೀನು ತ್ರಿಯುಗಗಳ ಮಧುಸೂದನನನ್ನು ತಿಳಿದಿದ್ದೀಯೋ - ಆ ಭಕ್ತಿಯೇನು?”
05067005 ಸಂಜಯ ಉವಾಚ।
05067005a ಮಾಯಾಂ ನ ಸೇವೇ ಭದ್ರಂ ತೇ ನ ವೃಥಾಧರ್ಮಮಾಚರೇ।
05067005c ಶುದ್ಧಭಾವಂ ಗತೋ ಭಕ್ತ್ಯಾ ಶಾಸ್ತ್ರಾದ್ವೇದ್ಮಿ ಜನಾರ್ದನಂ।।
ಸಂಜಯನು ಹೇಳಿದನು: “ನಿನಗೆ ಮಂಗಳವಾಗಲಿ! ಮಾಯೆಯನ್ನು ನಾನು ಸೇವಿಸುವುದಿಲ್ಲ. ನಾನು ಸ್ವಲ್ಪವೂ ಅಧರ್ಮವನ್ನು ಆಚರಿಸುವುದಿಲ್ಲ. ಶುದ್ಧ ಭಕ್ತಿ ಭಾವದಿಂದ ನಡೆಯುತ್ತೇನೆ. ಶಾಸ್ತ್ರಗಳಿಂದ ಜನಾರ್ದನನನ್ನು ತಿಳಿದಿದ್ದೇನೆ.”
05067006 ಧೃತರಾಷ್ಟ್ರ ಉವಾಚ।
05067006a ದುರ್ಯೋಧನ ಹೃಷೀಕೇಶಂ ಪ್ರಪದ್ಯಸ್ವ ಜನಾರ್ದನಂ।
05067006c ಆಪ್ತೋ ನಃ ಸಂಜಯಸ್ತಾತ ಶರಣಂ ಗಚ್ಚ ಕೇಶವಂ।।
ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಹೃಷೀಕೇಶ ಜನಾರ್ದನನನ್ನು ಮೆಚ್ಚಿಸು. ಮಗೂ! ಸಂಜಯನಷ್ಟು ಆಪ್ತರಿಲ್ಲ. ಕೇಶವನನ್ನು ಶರಣು ಹೋಗು!”
05067007 ದುರ್ಯೋಧನ ಉವಾಚ।
05067007a ಭಗವಾನ್ದೇವಕೀಪುತ್ರೋ ಲೋಕಂ ಚೇನ್ನಿಹನಿಷ್ಯತಿ।
05067007c ಪ್ರವದನ್ನರ್ಜುನೇ ಸಖ್ಯಂ ನಾಹಂ ಗಚ್ಚೇಽದ್ಯ ಕೇಶವಂ।।
ದುರ್ಯೋಧನನು ಹೇಳಿದನು: “ಅರ್ಜುನನ ಸಖನೆಂದು ಹೇಳಿಕೊಂಡು ಆ ಭಗವಾನ್ ದೇವಕಿಪುತ್ರನು ಲೋಕವನ್ನು ನಾಶಪಡಿಸುವವನಾದರೆ, ನಾನು ಕೇಶವನ ಮೊರೆಹೋಗುವುದಿಲ್ಲ!”
05067008 ಧೃತರಾಷ್ಟ್ರ ಉವಾಚ।
05067008a ಅವಾಗ್ಗಾಂಧಾರಿ ಪುತ್ರಾಸ್ತೇ ಗಚ್ಚತ್ಯೇಷ ಸುದುರ್ಮತಿಃ।
05067008c ಈರ್ಷ್ಯುರ್ದುರಾತ್ಮಾ ಮಾನೀ ಚ ಶ್ರೇಯಸಾಂ ವಚನಾತಿಗಃ।।
ಧೃತರಾಷ್ಟ್ರನು ಹೇಳಿದನು: “ಇಗೋ ಗಾಂಧಾರೀ! ನಿನ್ನ ಈ ಸುದುರ್ಮತಿ ದುರಾತ್ಮ ಮಗನು ತನ್ನ ಈರ್ಷ್ಯೆ, ಅಭಿಮಾನಗಳಿಂದಾಗಿ ಶ್ರೇಯಸ್ಕರ ಮಾತುಗಳಂತೆ ನಡೆದುಕೊಳ್ಳದೇ ಅಧೋಗತಿಗಿಳಿಯುತ್ತಿದ್ದಾನೆ!”
05067009 ಗಾಂಧಾರ್ಯುವಾಚ।
05067009a ಐಶ್ವರ್ಯಕಾಮ ದುಷ್ಟಾತ್ಮನ್ವೃದ್ಧಾನಾಂ ಶಾಸನಾತಿಗ।
05067009c ಐಶ್ವರ್ಯಜೀವಿತೇ ಹಿತ್ವಾ ಪಿತರಂ ಮಾಂ ಚ ಬಾಲಿಶ।।
05067010a ವರ್ಧಯನ್ದುರ್ಹೃದಾಂ ಪ್ರೀತಿಂ ಮಾಂ ಚ ಶೋಕೇನ ವರ್ಧಯನ್।
05067010c ನಿಹತೋ ಭೀಮಸೇನೇನ ಸ್ಮರ್ತಾಸಿ ವಚನಂ ಪಿತುಃ।।
ಗಾಂಧಾರಿಯು ಹೇಳಿದಳು: “ಐಶ್ವರ್ಯಕಾಮೀ! ದುಷ್ಟಾತ್ಮ! ವೃದ್ಧರ ಶಾಸನವನ್ನು ಅಲ್ಲಗಳೆಯುವವನೇ! ಮೂಢ! ಐಶ್ವರ್ಯ-ಜೀವಗಳನ್ನು, ತಂದೆ ತಾಯಿಯರನ್ನು ತೊರೆದವನೇ! ಶತ್ರುಗಳ ಸಂತೋಷವನ್ನು ಹೆಚ್ಚಿಸುವವನೇ! ನನ್ನ ಶೋಕವನ್ನು ಹೆಚ್ಚಿಸುವವನೇ! ಭೀಮಸೇನನ ಪೆಟ್ಟು ತಿಂದಾಗ ನಿನ್ನ ತಂದೆಯ ಮಾತನ್ನು ನೆನಪಿಸಿಕೊಳ್ಳುವೆ!”
05067011 ವ್ಯಾಸ ಉವಾಚ।
05067011a ದಯಿತೋಽಸಿ ರಾಜನ್ ಕೃಷ್ಣಸ್ಯ ಧೃತರಾಷ್ಟ್ರ ನಿಬೋಧ ಮೇ।
05067011c ಯಸ್ಯ ತೇ ಸಂಜಯೋ ದೂತೋ ಯಸ್ತ್ವಾಂ ಶ್ರೇಯಸಿ ಯೋಕ್ಷ್ಯತೇ।।
ವ್ಯಾಸನು ಹೇಳಿದನು: “ರಾಜನ್! ನೀನು ಕೃಷ್ಣನಿಗೆ ಬೇಕಾದವನು. ಧೃತರಾಷ್ಟ್ರ! ನನ್ನನ್ನು ಕೇಳು. ನಿನ್ನ ದೂತನಾಗಿರುವ ಸಂಜಯನು ನಿನ್ನನ್ನು ಶ್ರೇಯಸ್ಸಿನೆಡೆಗೆ ಕೊಂಡೊಯ್ಯುತ್ತಿದ್ದಾನೆ.
05067012a ಜಾನಾತ್ಯೇಷ ಹೃಷೀಕೇಶಂ ಪುರಾಣಂ ಯಚ್ಚ ವೈ ನವಂ।
05067012c ಶುಶ್ರೂಷಮಾಣಮೇಕಾಗ್ರಂ ಮೋಕ್ಷ್ಯತೇ ಮಹತೋ ಭಯಾತ್।।
ಅವನು ಈ ಹೃಷೀಕೇಶನನ್ನು – ಅವನ ಪುರಾತನ ಮತ್ತು ಹೊಸ ರೂಪಗಳಲ್ಲಿ – ತಿಳಿದುಕೊಂಡಿದ್ದಾನೆ. ಅವನನ್ನು ಏಕಾಗ್ರನಾಗಿ ಕೇಳುವುದರಿಂದ ಮಹಾ ಭಯದಿಂದ ಮುಕ್ತನಾಗುತ್ತೀಯೆ.
05067013a ವೈಚಿತ್ರವೀರ್ಯ ಪುರುಷಾಃ ಕ್ರೋಧಹರ್ಷತಮೋವೃತಾಃ।
05067013c ಸಿತಾ ಬಹುವಿಧೈಃ ಪಾಶೈರ್ಯೇ ನ ತುಷ್ಟಾಃ ಸ್ವಕೈರ್ಧನೈಃ।।
ವೈಚಿತ್ರವೀರ್ಯ! ಕ್ರೋಧ-ಹರ್ಷಗಳ ಕತ್ತಲೆಯಿಂದ ಆವೃತರಾಗಿ, ಬಹುವಿಧದ ಪಾಶಗಳ ಬಂಧನಕ್ಕೊಳಗಾಗಿ, ತಮ್ಮಲ್ಲಿರುವ ಧನಗಳಿಂದ ಸಂತುಷ್ಟರಾಗಿರುವುದಿಲ್ಲ.
05067014a ಯಮಸ್ಯ ವಶಮಾಯಾಂತಿ ಕಾಮಮೂಢಾಃ ಪುನಃ ಪುನಃ।
05067014c ಅಂಧನೇತ್ರಾ ಯಥೈವಾಂಧಾ ನೀಯಮಾನಾಃ ಸ್ವಕರ್ಮಭಿಃ।।
ಕಾಮಮೂಢರು ಕುರುಡನು ಕುರುಡನಿಂದ ಕರೆದೊಯ್ಯಲ್ಪಡುವಂತೆ ತಾವೇ ಮಾಡಿದ ಕರ್ಮಗಳಿಂದ ಪುನಃ ಪುನಃ ಯಮನ ವಶದಲ್ಲಿ ಬರುತ್ತಾರೆ.
05067015a ಏಷ ಏಕಾಯನಃ ಪಂಥಾ ಯೇನ ಯಾಂತಿ ಮನೀಷಿಣಃ।
05067015c ತಂ ದೃಷ್ಟ್ವಾ ಮೃತ್ಯುಮತ್ಯೇತಿ ಮಹಾಂಸ್ತತ್ರ ನ ಸಜ್ಜತೇ।।
ಮನೀಷಿಗಳು ಹೋಗುವ ಒಂದೇ ಒಂದು ಮಾರ್ಗವಿದೆ. ಅದನ್ನು ನೋಡಿ ಮೃತ್ಯುವನ್ನು ಜಯಿಸುತ್ತಾರೆ. ಮಹಾತ್ಮರು ಅಲ್ಲಿ ಅಂಟಿಕೊಳ್ಳುವುದಿಲ್ಲ!”
05067016 ಧೃತರಾಷ್ಟ್ರ ಉವಾಚ।
05067016a ಅಂಗ ಸಂಜಯ ಮೇ ಶಂಸ ಪಂಥಾನಮಕುತೋಭಯಂ।
05067016c ಯೇನ ಗತ್ವಾ ಹೃಷೀಕೇಶಂ ಪ್ರಾಪ್ನುಯಾಂ ಶಾಂತಿಮುತ್ತಮಾಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಭಯವನ್ನು ಹೋಗಲಾಡಿಸುವ, ಯಾವುದರ ಮೂಲಕ ಹೃಷೀಕೇಶನನ್ನು ತಲುಪಿ ಉತ್ತಮ ಶಾಂತಿಯನ್ನು ಪಡೆಯಬಲ್ಲೆನೋ ಆ ಮಾರ್ಗದ ಕುರಿತು ಹೇಳು ಬಾ!”
05067017 ಸಂಜಯ ಉವಾಚ।
05067017a ನಾಕೃತಾತ್ಮಾ ಕೃತಾತ್ಮಾನಂ ಜಾತು ವಿದ್ಯಾಜ್ಜನಾರ್ದನಂ।
05067017c ಆತ್ಮನಸ್ತು ಕ್ರಿಯೋಪಾಯೋ ನಾನ್ಯತ್ರೇಂದ್ರಿಯನಿಗ್ರಹಾತ್।।
ಸಂಜಯನು ಹೇಳಿದನು: “ಅಕೃತಾತ್ಮನು ಕೃತಾತ್ಮನಾದ ಜನಾರ್ದನನನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರಿಯನಿಗ್ರಹವಿಲ್ಲದೇ ತನ್ನ ಕ್ರಿಯೆಗಳನ್ನು ಮಾಡುವುದು ಉಪಾಯವಲ್ಲ.
05067018a ಇಂದ್ರಿಯಾಣಾಮುದೀರ್ಣಾನಾಂ ಕಾಮತ್ಯಾಗೋಽಪ್ರಮಾದತಃ।
05067018c ಅಪ್ರಮಾದೋಽವಿಹಿಂಸಾ ಚ ಜ್ಞಾನಯೋನಿರಸಂಶಯಂ।।
ಉತ್ತೇಜನಗೊಂಡ ಇಂದ್ರಿಯಗಳು ಬಯಸುವ ವಸ್ತುಗಳನ್ನು ಅಪ್ರಮಾದನಾಗಿದ್ದುಕೊಂಡು ತ್ಯಜಿಸುವುದು, ಅಪ್ರಮಾದನಾಗಿರುವುದು, ಮತ್ತು ಅಹಿಂಸೆ ಇವು ಜ್ಞಾನವನ್ನು ಹುಟ್ಟಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
05067019a ಇಂದ್ರಿಯಾಣಾಂ ಯಮೇ ಯತ್ತೋ ಭವ ರಾಜನ್ನತಂದ್ರಿತಃ।
05067019c ಬುದ್ಧಿಶ್ಚ ಮಾ ತೇ ಚ್ಯವತು ನಿಯಚ್ಚೈತಾಂ ಯತಸ್ತತಃ।।
ರಾಜನ್! ಯಾವಾಗಲೂ ಆಯಾಸಗೊಳ್ಳದೇ ಇಂದ್ರಿಯಗಳನ್ನು ನಿಯಂತ್ರಿಸು. ನಿನ್ನ ಬುದ್ಧಿಯು ದಾರಿತಪ್ಪದಿರಲಿ. ಪ್ರತಿಸಾರಿಯೂ ನಿರ್ದಿಷ್ಟಪಡಿಸಿಕೋ.
05067020a ಏತಜ್ಞಾನಂ ವಿದುರ್ವಿಪ್ರಾ ಧ್ರುವಮಿಂದ್ರಿಯಧಾರಣಂ।
05067020c ಏತಜ್ಞಾನಂ ಚ ಪಂಥಾಶ್ಚ ಯೇನ ಯಾಂತಿ ಮನೀಷಿಣಃ।।
ಈ ಇಂದ್ರಿಯ ಧಾರಣೆಯನ್ನು ವಿಪ್ರರು ನಿಶ್ಚಿತವಾಗಿಯೂ ಜ್ಞಾನವನ್ನು ನೀಡುತ್ತದೆಯೆಂದು ತಿಳಿದಿದ್ದಾರೆ. ಇದೇ ಮನೀಷಿಗಳು ಹೋಗುವ ಜ್ಞಾನದ ಮಾರ್ಗ.
05067021a ಅಪ್ರಾಪ್ಯಃ ಕೇಶವೋ ರಾಜನ್ನಿಂದ್ರಿಯೈರಜಿತೈರ್ನೃಭಿಃ।
05067021c ಆಗಮಾಧಿಗತೋ ಯೋಗಾದ್ವಶೀ ತತ್ತ್ವೇ ಪ್ರಸೀದತಿ।।
ರಾಜನ್! ಇಂದ್ರಿಯಗಳನ್ನು ಗೆಲ್ಲದೇ ಕೇಶವನನ್ನು ಮನುಷ್ಯರು ತಲುಪುವುದಿಲ್ಲ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು, ಆಗಮಗಳನ್ನು ತಿಳಿದುಕೊಂಡಿರುವವನು ಯೋಗದ ಮೂಲಕ ತತ್ವದಲ್ಲಿ ಶಾಂತನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗಪರ್ವಣಿ ಯಾನಸಂಧಿಪರ್ವಣಿ ಸಂಜಯವಾಕ್ಯೇ ಸಪ್ತಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗಪರ್ವದಲ್ಲಿ ಯಾನಸಂಧಿಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತೇಳನೆಯ ಅಧ್ಯಾಯವು.