ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 66
ಸಾರ
“ಸಾರದಲ್ಲಿ ಜಗತ್ತಿಗಿಂತ ಜನಾರ್ದನನೇ ಹೆಚ್ಚಿನವನು” ಎಂದು ಕೃಷ್ಣನ ರೂಪದಲ್ಲಿದ್ದ ಭಗವಂತನ ಸ್ವರೂಪವನ್ನು ಸಂಜಯನು ಧೃತರಾಷ್ಟ್ರನಿಗೆ ಉಪದೇಶಿಸಿದುದು (1-15).
05066001 ಸಂಜಯ ಉವಾಚ।
05066001a ಅರ್ಜುನೋ ವಾಸುದೇವಶ್ಚ ಧನ್ವಿನೌ ಪರಮಾರ್ಚಿತೌ।
05066001c ಕಾಮಾದನ್ಯತ್ರ ಸಂಭೂತೌ ಸರ್ವಾಭಾವಾಯ ಸಮ್ಮಿತೌ।।
ಸಂಜಯನು ಹೇಳಿದನು: “ಪರಮಾರ್ಚಿತ ಧನ್ವಿಗಳಾದ ಅರ್ಜುನ-ವಾಸುದೇವರಿಬ್ಬರೂ ಇಷ್ಟಪಟ್ಟು ಇನ್ನೊಂದು ಜನ್ಮವನ್ನು ತಾಳಿ ಎಲ್ಲವನ್ನೂ ಇಲ್ಲವಾಗಿಸಲು ಒಂದಾಗಿದ್ದಾರೆ.
05066002a ದ್ಯಾಮಂತರಂ ಸಮಾಸ್ಥಾಯ ಯಥಾಯುಕ್ತಂ ಮನಸ್ವಿನಃ।
05066002c ಚಕ್ರಂ ತದ್ವಾಸುದೇವಸ್ಯ ಮಾಯಯಾ ವರ್ತತೇ ವಿಭೋ।।
ವಿಭೋ! ಆಕಾಶದಲ್ಲಿದ್ದುಕೊಂಡು, ಬೇಕಾದ ಹಾಗೆ ವಾಸುದೇವನ ಆ ಮನಸ್ವೀ ಚಕ್ರವು ಮಾಯೆಯಿಂದ ನಡೆಯುತ್ತದೆ.
05066003a ಸಾಪಹ್ನವಂ ಪಾಂಡವೇಷು ಪಾಂಡವಾನಾಂ ಸುಸಮ್ಮತಂ।
05066003c ಸಾರಾಸಾರಬಲಂ ಜ್ಞಾತ್ವಾ ತತ್ಸಮಾಸೇನ ಮೇ ಶೃಣು।।
ಅದು ಪಾಂಡವರಿಗೆ ಕಾಣಿಸದೇ ಇದ್ದರೂ ಪಾಂಡವರು ಅದನ್ನು ಪೂಜಿಸುತ್ತಾರೆ. ಅವರ ಸಾರಾಸಾರ ಬಲಗಳನ್ನು ಕೇಳಿ ತಿಳಿದುಕೋ.
05066004a ನರಕಂ ಶಂಬರಂ ಚೈವ ಕಂಸಂ ಚೈದ್ಯಂ ಚ ಮಾಧವಃ।
05066004c ಜಿತವಾನ್ಘೋರಸಂಕಾಶಾನ್ಕ್ರೀಡನ್ನಿವ ಜನಾರ್ದನಃ।।
ಆಟದಂತೆ ಮಾಧವ ಜನಾರ್ದನನು ಘೋರಸಂಕಾಶರಾದ ನರಕ, ಶಂಬರ, ಕಂಸ ಮತ್ತು ಚೈದ್ಯರನ್ನು ಗೆದ್ದಿದ್ದಾನೆ.
05066005a ಪೃಥಿವೀಂ ಚಾಂತರಿಕ್ಷಂ ಚ ದ್ಯಾಂ ಚೈವ ಪುರುಷೋತ್ತಮಃ।
05066005c ಮನಸೈವ ವಿಶಿಷ್ಟಾತ್ಮಾ ನಯತ್ಯಾತ್ಮವಶಂ ವಶೀ।।
ಈ ವಿಶಿಷ್ಟಾತ್ಮ ಪುರುಷೋತ್ತಮನು ತನ್ನ ಮನಸ್ಸಿನಿಂದಲೇ ಭೂಮಿ-ಅಂತರಿಕ್ಷ-ದೇವಲೋಕಗಳನ್ನು ತನ್ನ ಆತ್ಮವಶ ಮಾಡಿಕೊಂಡಿದ್ದಾನೆ.
05066006a ಭೂಯೋ ಭೂಯೋ ಹಿ ಯದ್ರಾಜನ್ಪೃಚ್ಚಸೇ ಪಾಂಡವಾನ್ಪ್ರತಿ।
05066006c ಸಾರಾಸಾರಬಲಂ ಜ್ಞಾತುಂ ತನ್ಮೇ ನಿಗದತಃ ಶೃಣು।।
ರಾಜನ್! ಮೇಲಿಂದ ಮೇಲೆ ನೀನು ಪಾಂಡವರ ಸಾರಾಸಾರಬಲಗಳ ಕುರಿತು ತಿಳಿದುಕೊಳ್ಳಲು ಕೇಳಿದ್ದೀಯೆ. ಈಗ ಹೇಳುವುದನ್ನು ಕೇಳು.
05066007a ಏಕತೋ ವಾ ಜಗತ್ಕೃತ್ಸ್ನಮೇಕತೋ ವಾ ಜನಾರ್ದನಃ।
05066007c ಸಾರತೋ ಜಗತಃ ಕೃತ್ಸ್ನಾದತಿರಿಕ್ತೋ ಜನಾರ್ದನಃ।।
ಒಂದು ಕಡೆ ಇಡೀ ಈ ಜಗತ್ತು ಮತ್ತು ಇನ್ನೊಂದೆಡೆ ಜನಾರ್ದನನೊಬ್ಬನೇ ಇದ್ದರೂ ಸಾರದಲ್ಲಿ ಜಗತ್ತಿಗಿಂತ ಜನಾರ್ದನನೇ ಹೆಚ್ಚಿನವನು.
05066008a ಭಸ್ಮ ಕುರ್ಯಾಜ್ಜಗದಿದಂ ಮನಸೈವ ಜನಾರ್ದನಃ।
05066008c ನ ತು ಕೃತ್ಸ್ನಂ ಜಗಚ್ಚಕ್ತಂ ಭಸ್ಮ ಕರ್ತುಂ ಜನಾರ್ದನಂ।।
ಮನಸ್ಸಿನಿಂದಲೇ ಜನಾರ್ದನನು ಈ ಜಗತ್ತನ್ನು ಭಸ್ಮಮಾಡಬಲ್ಲ. ಆದರೆ ಇಡೀ ಜಗತ್ತೇ ಸೇರಿದರೂ ಜನಾರ್ದನನನ್ನು ಭಸ್ಮಮಾಡಲಿಕ್ಕಾಗುವುದಿಲ್ಲ.
05066009a ಯತಃ ಸತ್ಯಂ ಯತೋ ಧರ್ಮೋ ಯತೋ ಹ್ರೀರಾರ್ಜವಂ ಯತಃ।
05066009c ತತೋ ಭವತಿ ಗೋವಿಂದೋ ಯತಃ ಕೃಷ್ಣಸ್ತತೋ ಜಯಃ।।
ಎಲ್ಲಿ ಸತ್ಯವಿದೆಯೋ, ಎಲ್ಲಿ ಧರ್ಮವಿದೆಯೋ, ಎಲ್ಲಿ ವಿನಯ, ಪ್ರಾಮಾಣಿಕತೆಗಳಿವೆಯೋ ಅಲ್ಲಿ ಗೋವಿಂದನಿರುತ್ತಾನೆ. ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ಜಯವಿರುತ್ತದೆ.
05066010a ಪೃಥಿವೀಂ ಚಾಂತರಿಕ್ಷಂ ಚ ದಿವಂ ಚ ಪುರುಷೋತ್ತಮಃ।
05066010c ವಿಚೇಷ್ಟಯತಿ ಭೂತಾತ್ಮಾ ಕ್ರೀಡನ್ನಿವ ಜನಾರ್ದನಃ।।
ಪುರುಷೋತ್ತಮ, ಭೂತಾತ್ಮ ಜನಾರ್ದನನು ಭೂಮಿ-ಅಂತರಿಕ್ಷ-ದೇವಲೋಕಗಳನ್ನು ಆಟದಂತೆ ನಡೆಯಿಸುತ್ತಾನೆ.
05066011a ಸ ಕೃತ್ವಾ ಪಾಂಡವಾನ್ಸತ್ರಂ ಲೋಕಂ ಸಮ್ಮೋಹಯನ್ನಿವ।
05066011c ಅಧರ್ಮನಿರತಾನ್ಮೂಢಾನ್ದಗ್ಧುಮಿಚ್ಚತಿ ತೇ ಸುತಾನ್।।
ಅವನು ಪಾಂಡವರನ್ನು ನೆಪವನ್ನಾಗಿಸಿಕೊಂಡು ಲೋಕವನ್ನು ಸಮ್ಮೋಹಿಸುತ್ತಾ ನಿನ್ನ ಅಧರ್ಮನಿರತ ಮೂಢ ಮಕ್ಕಳನ್ನು ಸುಡಲು ಬಯಸುತ್ತಾನೆ.
05066012a ಕಾಲಚಕ್ರಂ ಜಗಚ್ಚಕ್ರಂ ಯುಗಚಕ್ರಂ ಚ ಕೇಶವಃ।
05066012c ಆತ್ಮಯೋಗೇನ ಭಗವಾನ್ಪರಿವರ್ತಯತೇಽನಿಶಂ।।
ಆತ್ಮಯೋಗದಿಂದ ಭಗವಾನ್ ಕೇಶವನು ಕಾಲಚಕ್ರವನ್ನು, ಜಗಚ್ಚಕ್ರವನ್ನು ಮತ್ತು ಯುಗಚಕ್ರವನ್ನು ನಿಲ್ಲಿಸದೆಯೇ ತಿರುಗಿಸುತ್ತಿರುತ್ತಾನೆ.
05066013a ಕಾಲಸ್ಯ ಚ ಹಿ ಮೃತ್ಯೋಶ್ಚ ಜಂಗಮಸ್ಥಾವರಸ್ಯ ಚ।
05066013c ಈಶತೇ ಭಗವಾನೇಕಃ ಸತ್ಯಮೇತದ್ಬ್ರವೀಮಿ ತೇ।।
ಆ ಭಗವಾನನು ಒಬ್ಬನೇ ಕಾಲ, ಮೃತ್ಯು, ಜಂಗಮ-ಸ್ಥಾವರಗಳನ್ನು ಆಳುತ್ತಾನೆ. ನಾನು ನಿನಗೆ ಈ ಸತ್ಯವನ್ನು ಹೇಳುತ್ತಿದ್ದೇನೆ.
05066014a ಈಶನ್ನಪಿ ಮಹಾಯೋಗೀ ಸರ್ವಸ್ಯ ಜಗತೋ ಹರಿಃ।
05066014c ಕರ್ಮಾಣ್ಯಾರಭತೇ ಕರ್ತುಂ ಕೀನಾಶ ಇವ ದುರ್ಬಲಃ।।
ಮಹಾಯೋಗಿ ಹರಿಯು ಸರ್ವ ಜಗತ್ತುಗಳ ಈಶನಾದರೂ ದುರ್ಬಲ ರೈತನಂತೆ ಕರ್ಮಗಳಲ್ಲಿ ತೊಡಗಿರುತ್ತಾನೆ.
05066015a ತೇನ ವಂಚಯತೇ ಲೋಕಾನ್ಮಾಯಾಯೋಗೇನ ಕೇಶವಃ।
05066015c ಯೇ ತಮೇವ ಪ್ರಪದ್ಯಂತೇ ನ ತೇ ಮುಹ್ಯಂತಿ ಮಾನವಾಃ।।
ಹೀಗೆ ಕೇಶವನು ತನ್ನ ಮಾಯಾಯೋಗದಿಂದ ಲೋಕಗಳನ್ನು ವಂಚಿಸುತ್ತಾನೆ. ಆದರೆ ಅವನನ್ನೇ ಶರಣು ಹೋಗುವ ಮಾನವರು ಮೋಸಹೋಗುವುದಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಷಟ್ಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತಾರನೆಯ ಅಧ್ಯಾಯವು.