065 ವ್ಯಾಸಗಾಂಧಾರ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 65

ಸಾರ

ನರೇಶ್ವರರು ಸಭೆಯನ್ನು ಬಿಟ್ಟು ಹೊರಟು ಹೋಗಲು ಏಕಾಂತದಲ್ಲಿ ಧೃತರಾಷ್ಟ್ರನು ಸಂಜಯನನ್ನು “ಇಬ್ಬರಲ್ಲಿ ಯಾರು ಯುದ್ಧದಲ್ಲಿ ನಾಶಹೊಂದುತ್ತಾರೆ?” ಎಂದು ಪ್ರಶ್ನಿಸಿದುದು (1-5). ಆಗ “ಏಕಾಂತದಲ್ಲಿ ನಾನು ನಿನಗೆ ಏನನ್ನೂ ಹೇಳುವುದಿಲ್ಲ. ನಿನ್ನ ತಂದೆಯನ್ನೂ, ಗಾಂಧಾರಿಯನ್ನೂ ಕರೆಯಿಸು” ಎಂದು ಸಂಜಯನು ಕೇಳಿಕೊಳ್ಳಲು ವ್ಯಾಸನು ಅಲ್ಲಿ ಕಾಣಿಸಿಕೊಂಡು ಸಂಜಯನಿಗೆ ತಿಳಿದುದನ್ನು ಹೇಳಲು ಅನುಮತಿಯನ್ನಿತ್ತುದುದು (6-9).

05065001 ವೈಶಂಪಾಯನ ಉವಾಚ।
05065001a ದುರ್ಯೋಧನೇ ಧಾರ್ತರಾಷ್ಟ್ರೇ ತದ್ವಚೋಽಪ್ರತಿನಂದತಿ।
05065001c ತೂಷ್ಣೀಂಭೂತೇಷು ಸರ್ವೇಷು ಸಮುತ್ತಸ್ಥುರ್ನರೇಶ್ವರಾಃ।।

ವೈಶಂಪಾಯನನು ಹೇಳಿದನು: “ಧಾರ್ತರಾಷ್ಟ್ರ ದುರ್ಯೋಧನನು ಆ ಮಾತನ್ನು ಸ್ವೀಕರಿಸದೇ ಇರಲು ಎಲ್ಲರೂ ಸುಮ್ಮನಾದರು. ನರೇಶ್ವರರು ಎದ್ದರು.

05065002a ಉತ್ಥಿತೇಷು ಮಹಾರಾಜ ಪೃಥಿವ್ಯಾಂ ಸರ್ವರಾಜಸು।
05065002c ರಹಿತೇ ಸಂಜಯಂ ರಾಜಾ ಪರಿಪ್ರಷ್ಟುಂ ಪ್ರಚಕ್ರಮೇ।।
05065003a ಆಶಂಸಮಾನೋ ವಿಜಯಂ ತೇಷಾಂ ಪುತ್ರವಶಾನುಗಃ।
05065003c ಆತ್ಮನಶ್ಚ ಪರೇಷಾಂ ಚ ಪಾಂಡವಾನಾಂ ಚ ನಿಶ್ಚಯಂ।।

ಮಹಾರಾಜ! ಭೂಮಿಯ ಸರ್ವ ರಾಜರೂ ಏಳಲು ರಾಜನು, ತಾನು ಯಾರ ವಶದಲ್ಲಿದ್ದನೋ ಆ ತನ್ನ ಮಕ್ಕಳ ವಿಜಯವನ್ನು ಬಯಸಿ, ತನ್ನ, ಇತರರ ಮತ್ತು ಪಾಂಡವರ ಕುರಿತು ನಿಶ್ಚಯಮಾಡಲು, ಏಕಾಂತದಲ್ಲಿ ಸಂಜಯನನ್ನು ಕೇಳತೊಡಗಿದನು.

05065004 ಧೃತರಾಷ್ಟ್ರ ಉವಾಚ।
05065004a ಗಾವಲ್ಗಣೇ ಬ್ರೂಹಿ ನಃ ಸಾರಫಲ್ಗು ಸ್ವಸೇನಾಯಾಂ ಯಾವದಿಹಾಸ್ತಿ ಕಿಂ ಚಿತ್।
05065004c ತ್ವಂ ಪಾಂಡವಾನಾಂ ನಿಪುಣಂ ವೇತ್ಥ ಸರ್ವಂ ಕಿಮೇಷಾಂ ಜ್ಯಾಯಃ ಕಿಮು ತೇಷಾಂ ಕನೀಯಃ।।

ಧೃತರಾಷ್ಟ್ರನು ಹೇಳಿದನು: “ಗಾವಲ್ಗಣೇ! ನಮ್ಮ ಸೇನೆಯಲ್ಲಿರುವಂಥಹ ಬಲ-ನಿರ್ಬಲಗಳ ಕುರಿತು ಹೇಳು. ನೀನು ಪಾಂಡವರ ನಿಪುಣತೆಯೆಲ್ಲವನ್ನೂ ತಿಳಿದಿದ್ದೀಯೆ. ಅವರು ಯಾವುದರಲ್ಲಿ ಮುಂದಿದ್ದಾರೆ? ಯಾವುದರಲ್ಲಿ ಹಿಂದಿದ್ದಾರೆ?

05065005a ತ್ವಮೇತಯೋಃ ಸಾರವಿತ್ಸರ್ವದರ್ಶೀ ಧರ್ಮಾರ್ಥಯೋರ್ನಿಪುಣೋ ನಿಶ್ಚಯಜ್ಞಾಃ।
05065005c ಸ ಮೇ ಪೃಷ್ಟಃ ಸಂಜಯ ಬ್ರೂಹಿ ಸರ್ವಂ ಯುಧ್ಯಮಾನಾಃ ಕತರೇಽಸ್ಮಿನ್ನ ಸಂತಿ।।

ನೀನು ಇಬ್ಬರ ಸಾರಗಳನ್ನೂ ಅರಿತಿದ್ದೀಯೆ. ಧರ್ಮಾರ್ಥಗಳ ನಿಪುಣ ನಿಶ್ಚಯವನ್ನೂ ತಿಳಿದಿದ್ದೀಯೆ. ನಿನ್ನನ್ನು ನಾನು ಕೇಳುತ್ತಿದ್ದೇನೆ ಸಂಜಯ! ಎಲ್ಲವನ್ನೂ ಹೇಳು. ಇಬ್ಬರಲ್ಲಿ ಯಾರು ಯುದ್ಧದಲ್ಲಿ ನಾಶಹೊಂದುತ್ತಾರೆ?”

05065006 ಸಂಜಯ ಉವಾಚ।
05065006a ನ ತ್ವಾಂ ಬ್ರೂಯಾಂ ರಹಿತೇ ಜಾತು ಕಿಂ ಚಿದ್ ಅಸೂಯಾ ಹಿ ತ್ವಾಂ ಪ್ರಸಹೇತ ರಾಜನ್।
05065006c ಆನಯಸ್ವ ಪಿತರಂ ಸಂಶಿತವ್ರತಂ ಗಾಂಧಾರೀಂ ಚ ಮಹಿಷೀಮಾಜಮೀಢ।।

ಸಂಜಯನು ಹೇಳಿದನು: “ಅಜಮೀಢ! ಏಕಾಂತದಲ್ಲಿ ನಾನು ನಿನಗೆ ಏನನ್ನೂ ಹೇಳುವುದಿಲ್ಲ. ರಾಜನ್! ಅಸೂಯೆಯಿಂದ ನೀನು ನನ್ನನ್ನು ಸಹಿಸುವುದಿಲ್ಲ. ಸಂಶಿತವ್ರತನಾದ ನಿನ್ನ ತಂದೆಯನ್ನೂ, ಗಾಂಧಾರಿಯನ್ನೂ ಕರೆಯಿಸು.

05065007a ತೌ ತೇಽಸೂಯಾಂ ವಿನಯೇತಾಂ ನರೇಂದ್ರ ಧರ್ಮಜ್ಞೌ ತೌ ನಿಪುಣೌ ನಿಶ್ಚಯಜ್ಞೌ।
05065007c ತಯೋಸ್ತು ತ್ವಾಂ ಸನ್ನಿಧೌ ತದ್ವದೇಯಂ ಕೃತ್ಸ್ನಂ ಮತಂ ವಾಸುದೇವಾರ್ಜುನಾಭ್ಯಾಂ।।

ನರೇಂದ್ರ! ಅವರಿಬ್ಬರೂ ಅಸೂಯೆಯಿಲ್ಲದವರು, ವಿನಯರು. ಧರ್ಮಜ್ಞರು. ನಿಶ್ಚಯಿಸುವುದರಲ್ಲಿ ನಿಪುಣರು. ಅವರಿಬ್ಬರ ಸನ್ನಿಧಿಯಲ್ಲಿ ನಾನು ನಿನಗೆ ವಾಸುದೇವ-ಅರ್ಜುನರ ಮತವೆಲ್ಲವನ್ನೂ ಹೇಳುತ್ತೇನೆ.””

05065008 ವೈಶಂಪಾಯನ ಉವಾಚ।
05065008a ತತಸ್ತನ್ಮತಮಾಜ್ಞಾಯ ಸಂಜಯಸ್ಯಾತ್ಮಜಸ್ಯ ಚ।
05065008c ಅಭ್ಯುಪೇತ್ಯ ಮಹಾಪ್ರಾಜ್ಞಾಃ ಕೃಷ್ಣದ್ವೈಪಾಯನೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಆಗ ಸಂಜಯ ಮತ್ತು ತನ್ನ ಮಗನ ಇಂಗಿತವನ್ನು ತಿಳಿದ ಮಹಾಪ್ರಾಜ್ಞ ಕೃಷ್ಣ ದ್ವೈಪಾಯನನು ಅಲ್ಲಿ ಕಾಣಿಸಿಕೊಂಡು ಹೇಳಿದನು:

05065009a ಸಂಪೃಚ್ಚತೇ ಧೃತರಾಷ್ಟ್ರಾಯ ಸಂಜಯ ಆಚಕ್ಷ್ವ ಸರ್ವಂ ಯಾವದೇಷೋಽನುಯುಂಕ್ತೇ।
05065009c ಸರ್ವಂ ಯಾವದ್ವೇತ್ಥ ತಸ್ಮಿನ್ಯಥಾವದ್ ಯಾಥಾತಥ್ಯಂ ವಾಸುದೇವೇಽರ್ಜುನೇ ಚ।।

“ಸಂಜಯ! ಧೃತರಾಷ್ಟ್ರನು ಕೇಳಿದ ಎಲ್ಲವನ್ನೂ ಹೇಳು. ವಾಸುದೇವ-ಅರ್ಜುನರ ಕುರಿತು ನಿನಗೆ ತಿಳಿದುದೆಲ್ಲವನ್ನೂ ಯಥಾವತ್ತಾಗಿ, ಯಥಾತಥ್ಯವಾಗಿ ಹೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ವ್ಯಾಸಗಾಂಧಾರ್ಯಾಗಮನೇ ಪಂಚಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ವ್ಯಾಸಗಾಂಧಾರ್ಯಾಗಮನದಲ್ಲಿ ಅರವತ್ತೈದನೆಯ ಅಧ್ಯಾಯವು.