063 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 63

ಸಾರ

ಕೃಷ್ಣಾರ್ಜುನರೊಂದಿಗೆ ಯುದ್ಧಕ್ಕೆ ಹಠ ಬೇಡವೆಂದು ಪುನಃ ಧೃತರಾಷ್ಟ್ರನು ಮಗನಿಗೆ ಹೇಳಿದುದು (1-16).

05063001 ಧೃತರಾಷ್ಟ್ರ ಉವಾಚ।
05063001a ದುರ್ಯೋಧನ ವಿಜಾನೀಹಿ ಯತ್ತ್ವಾಂ ವಕ್ಷ್ಯಾಮಿ ಪುತ್ರಕ।
05063001c ಉತ್ಪಥಂ ಮನ್ಯಸೇ ಮಾರ್ಗಮನಭಿಜ್ಞಾ ಇವಾಧ್ವಗಃ।।

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಪುತ್ರಕ! ನಾನು ಹೇಳುವುದನ್ನು ಅರ್ಥಮಾಡಿಕೋ! ದಾರಿಯನ್ನು ತಿಳಿಯದವನಂತೆ ನೀನು ತಪ್ಪು ದಾರಿಯನ್ನು ಸರಿಯಾದ ದಾರಿಯೆಂದು ಮನ್ನಿಸುತ್ತಿದ್ದೀಯೆ.

05063002a ಪಂಚಾನಾಂ ಪಾಂಡುಪುತ್ರಾಣಾಂ ಯತ್ತೇಜಃ ಪ್ರಮಿಮೀಷಸಿ।
05063002c ಪಂಚಾನಾಮಿವ ಭೂತಾನಾಂ ಮಹತಾಂ ಸುಮಹಾತ್ಮನಾಂ।।

ಪಂಚ ಭೂತಗಳಂತೆ ಮಹತ್ತರರಾದ ಸುಮಹಾತ್ಮ ಪಂಚ ಪಾಂಡುಪುತ್ರರ ತೇಜಸ್ಸನ್ನು ಕುಂದಿಸಲು ಬಯಸುತ್ತಿರುವೆ.

05063003a ಯುಧಿಷ್ಠಿರಂ ಹಿ ಕೌಂತೇಯಂ ಪರಂ ಧರ್ಮಮಿಹಾಸ್ಥಿತಂ।
05063003c ಪರಾಂ ಗತಿಮಸಂಪ್ರೇಕ್ಷ್ಯ ನ ತ್ವಂ ವೇತ್ತುಮಿಹಾರ್ಹಸಿ।।

ನಿನ್ನ ಜೀವನದಲ್ಲಿ ಸ್ವಲ್ಪವನ್ನು ತ್ಯಜಿಸದೇ ಧಾರ್ಮಿಕರಲ್ಲಿ ಶ್ರೇಷ್ಠ ಕೌಂತೇಯ ಯುಧಿಷ್ಠಿರನನ್ನು ಗೆಲ್ಲಲಾರೆ.

05063004a ಭೀಮಸೇನಂ ಚ ಕೌಂತೇಯಂ ಯಸ್ಯ ನಾಸ್ತಿ ಸಮೋ ಬಲೇ।
05063004c ರಣಾಂತಕಂ ತರ್ಕಯಸೇ ಮಹಾವಾತಮಿವ ದ್ರುಮಃ।।

ಮಹಾ ಭಿರುಗಾಳಿಯನ್ನು ಎದುರಿಸುವ ಮರದಂತೆ ಬಲದಲ್ಲಿ ಸರಿಸಾಟಿಯಿಲ್ಲದ, ರಣಾಂತಕನಾದ ಕೌಂತೇಯ ಭೀಮಸೇನನನ್ನು ಎದುರಿಸಲು ತರ್ಕಿಸುತ್ತಿರುವೆ.

05063005a ಸರ್ವಶಸ್ತ್ರಭೃತಾಂ ಶ್ರೇಷ್ಠಂ ಮೇರುಂ ಶಿಖರಿಣಾಮಿವ।
05063005c ಯುಧಿ ಗಾಂಡೀವಧನ್ವಾನಂ ಕೋ ನು ಯುಧ್ಯೇತ ಬುದ್ಧಿಮಾನ್।।

ಶಿಖರಗಳಲ್ಲಿ ಮೇರುವಿನಂತಿರುವ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾಗಿರುವ ಗಾಂಡೀವಧನ್ವಿಯನ್ನು ಯುದ್ಧದಲ್ಲಿ ಯಾವ ಬುದ್ಧಿವಂತನು ತಾನೇ ಹೋರಾಡಿಯಾನು?

05063006a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಕಮಿವಾದ್ಯ ನ ಶಾತಯೇತ್।
05063006c ಶತ್ರುಮಧ್ಯೇ ಶರಾನ್ಮುಂಚನ್ದೇವರಾಡಶನೀಮಿವ।।

ವಜ್ರಾಯುಧವನ್ನು ಪ್ರಯೋಗಿಸುವ ದೇವರಾಜನಂತೆ ಶತ್ರುಗಳ ಮಧ್ಯೆ ಶರಗಳನ್ನು ಪ್ರಯೋಗಿಸುವ ಪಾಂಚಾಲ್ಯ ಧೃಷ್ಟದ್ಯುಮ್ನನು ಯಾರನ್ನು ನಾಶಗೊಳಿಸಲಾರ?

05063007a ಸಾತ್ಯಕಿಶ್ಚಾಪಿ ದುರ್ಧರ್ಷಃ ಸಮ್ಮತೋಽಂಧಕವೃಷ್ಣಿಷು।
05063007c ಧ್ವಂಸಯಿಷ್ಯತಿ ತೇ ಸೇನಾಂ ಪಾಂಡವೇಯಹಿತೇ ರತಃ।।

ಪಾಂಡವೇಯರ ಹಿತದಲ್ಲಿಯೇ ನಿರತನಾಗಿರುವ, ಅಂಧಕ-ವೃಷ್ಣಿಯರಿಗೆ ಸಮ್ಮತನಾದ ದುರ್ಧರ್ಷ ಸಾತ್ಯಕಿಯೂ ಕೂಡ ನಿನ್ನ ಸೇನೆಯನ್ನು ಧ್ವಂಸಗೊಳಿಸುತ್ತಾನೆ.

05063008a ಯಃ ಪುನಃ ಪ್ರತಿಮಾನೇನ ತ್ರೀಽಲ್ಲೋಕಾನತಿರಿಚ್ಯತೇ।
05063008c ತಂ ಕೃಷ್ಣಂ ಪುಂಡರೀಕಾಕ್ಷಂ ಕೋ ನು ಯುಧ್ಯೇತ ಬುದ್ಧಿಮಾನ್।।

ಅಳತೆಯಲ್ಲಿ ಮೂರು ಲೋಕಗಳನ್ನೂ ಮೀರುವ ಕೃಷ್ಣ ಪುಂಡರೀಕಾಕ್ಷನೊಡನೆ ಯಾವ ಬುದ್ಧಿವಂತನು ತಾನೇ ಯುದ್ಧಮಾಡಿಯಾನು?

05063009a ಏಕತೋ ಹ್ಯಸ್ಯ ದಾರಾಶ್ಚ ಜ್ಞಾತಯಶ್ಚ ಸಬಾಂಧವಾಃ।
05063009c ಆತ್ಮಾ ಚ ಪೃಥಿವೀ ಚೇಯಮೇಕತಶ್ಚ ಧನಂಜಯಃ।।

ಒಂದು ಕಡೆ ಅವನ ಮಡದಿಯರು, ದಾಯಾದಿಗಳು, ಬಾಂಧವರು, ತಾನು ಮತ್ತು ಭೂಮಿಯೇ ಇದ್ದರೆ ಇನ್ನೊಂದು ಕಡೆ ಧನಂಜಯನಿದ್ದಾನೆ.

05063010a ವಾಸುದೇವೋಽಪಿ ದುರ್ಧರ್ಷೋ ಯತಾತ್ಮಾ ಯತ್ರ ಪಾಂಡವಃ।
05063010c ಅವಿಷಹ್ಯಂ ಪೃಥಿವ್ಯಾಪಿ ತದ್ಬಲಂ ಯತ್ರ ಕೇಶವಃ।।

ಯಾರ ಮೇಲೆ ಪಾಂಡವನು ಅವಲಂಬಿಸಿರುವನೋ ಆ ವಾಸುದೇವನು ದುರ್ಧರ್ಷನು. ಕೇಶವನೆಲ್ಲಿರುವನೋ ಆ ಸೇನೆಯು ಭೂಮಿಯಲ್ಲಿಯೇ ಜಯಿಸಲಸಾಧ್ಯವಾಗಿರುತ್ತದೆ.

05063011a ತಿಷ್ಠ ತಾತ ಸತಾಂ ವಾಕ್ಯೇ ಸುಹೃದಾಮರ್ಥವಾದಿನಾಂ।
05063011c ವೃದ್ಧಂ ಶಾಂತನವಂ ಭೀಷ್ಮಂ ತಿತಿಕ್ಷಸ್ವ ಪಿತಾಮಹಂ।।

ಆದುದರಿಂದ ಮಗೂ! ನಿನ್ನ ಒಳ್ಳೆಯದಕ್ಕಾಗಿಯೇ ಹೇಳುವ ಸುಹೃದಯರ, ಸತ್ಯವಂತರ ಮಾತಿನಂತೆ ನಡೆದುಕೋ. ವೃದ್ಧ ಪಿತಾಮಹ ಶಾಂತನವ ಭೀಷ್ಮನನ್ನು ಮಾರ್ಗದರ್ಶಕನನ್ನಾಗಿ ಸ್ವೀಕರಿಸು.

05063012a ಮಾಂ ಚ ಬ್ರುವಾಣಂ ಶುಶ್ರೂಷ ಕುರೂಣಾಮರ್ಥವಾದಿನಂ।
05063012c ದ್ರೋಣಂ ಕೃಪಂ ವಿಕರ್ಣಂ ಚ ಮಹಾರಾಜಂ ಚ ಬಾಹ್ಲಿಕಂ।।

ನಾನು ಹೇಳುವುದನ್ನು ಕೇಳು. ಕುರುಗಳ ಒಳ್ಳೆಯದಕ್ಕಾಗಿಯೇ ಹೇಳುವ ದ್ರೋಣ, ಕೃಪ, ವಿಕರ್ಣ ಮತ್ತು ಮಹಾರಾಜ ಬಾಹ್ಲೀಕನನ್ನು ಕೇಳು.

05063013a ಏತೇ ಹ್ಯಪಿ ಯಥೈವಾಹಂ ಮಂತುಮರ್ಹಸಿ ತಾಂಸ್ತಥಾ।
05063013c ಸರ್ವೇ ಧರ್ಮವಿದೋ ಹ್ಯೇತೇ ತುಲ್ಯಸ್ನೇಹಾಶ್ಚ ಭಾರತ।।

ಇವರೆಲ್ಲರೂ ನನ್ನಂತೆಯೇ. ನೀನು ನನ್ನನ್ನು ಹೇಗೋ ಹಾಗೆ ಇವರನ್ನೂ ಮನ್ನಿಸಬೇಕು. ಭಾರತ! ಇವರೆಲ್ಲರೂ ಧರ್ಮವನ್ನು ತಿಳಿದುಕೊಂಡಿರುವವರು ಮತ್ತು ನನ್ನಷ್ಟೇ ಸ್ನೇಹವುಳ್ಳವರು.

05063014a ಯತ್ತದ್ವಿರಾಟನಗರೇ ಸಹ ಭ್ರಾತೃಭಿರಗ್ರತಃ।
05063014c ಉತ್ಸೃಜ್ಯ ಗಾಃ ಸುಸಂತ್ರಸ್ತಂ ಬಲಂ ತೇ ಸಮಶೀರ್ಯತ।।

ವಿರಾಟನಗರದಲ್ಲಿ ಸಹೋದರರೊಡನೆ ನಿನ್ನ ಸೇನೆಯು ಗೋವುಗಳನ್ನು ಬಿಟ್ಟು ತುಂಬಾ ಸಂತ್ರಸ್ತರಾಗಿ ಹಿಂದೆಸರಿಯಿತು.

05063015a ಯಚ್ಚೈವ ತಸ್ಮಿನ್ನಗರೇ ಶ್ರೂಯತೇ ಮಹದದ್ಭುತಂ।
05063015c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ।।

ಆ ನಗರದಲ್ಲಿ ನಡೆದ ಯಾವ ಮಹದದ್ಭುತವನ್ನು – ಒಬ್ಬನೇ ಬಹುಮಂದಿಗಳಿಗೆ ಪೂರೈಸಿದನು - ನಾವು ಕೇಳಿದ್ದೇವೋ ಅದೇ ನಿದರ್ಶನವೇ ಸಾಕು.

05063016a ಅರ್ಜುನಸ್ತತ್ತಥಾಕಾರ್ಷೀತ್ಕಿಂ ಪುನಃ ಸರ್ವ ಏವ ತೇ।
05063016c ಸಭ್ರಾತೄನಭಿಜಾನೀಹಿ ವೃತ್ತ್ಯಾ ಚ ಪ್ರತಿಪಾದಯ।।

ಅರ್ಜುನನು ಒಬ್ಬನೇ ಅವೆಲ್ಲವನ್ನೂ ಸಾಧಿಸಿರುವಾಗ ಇನ್ನು ಅವರೆಲ್ಲರೂ ಒಂದಾದಾಗ ಏನಾದೀತು? ನಿನ್ನ ಸಹೋದರರ ಕೈಹಿಡಿದು ಅವರೊಂದಿಗೆ ಭೂಮಿಯನ್ನು ಹಂಚಿಕೊಂಡು ಸ್ನೇಹಭಾವದಿಂದಿರು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ತ್ರಿಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಅರವತ್ಮೂರನೆಯ ಅಧ್ಯಾಯವು.