061 ಕರ್ಣಭೀಷ್ಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 61

ಸಾರ

ಪಾರ್ಥನ ಕುರಿತು ಇನ್ನೂ ಕೇಳತೊಡಗಿರುವ ಧೃತರಾಷ್ಟ್ರನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ದುರ್ಯೋಧನನನ್ನು ಹರ್ಷಗೊಳಿಸುತ್ತಾ ಕರ್ಣನು ತನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳಲು (1-6), ಭೀಷ್ಮನು ಅವನನ್ನು ಹೀಯಾಳಿಸಿದುದು (7-11). ಅದಕ್ಕೆ ನೊಂದು ಕರ್ಣನು “ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ” ಎಂದು ಹೇಳಿ ಸಭಾತ್ಯಾಗ ಮಾಡಿದುದು (12-18).

05061001 ವೈಶಂಪಾಯನ ಉವಾಚ।
05061001a ತಥಾ ತು ಪೃಚ್ಚಂತಮತೀವ ಪಾರ್ಥಾನ್ ವೈಚಿತ್ರವೀರ್ಯಂ ತಮಚಿಂತಯಿತ್ವಾ।
05061001c ಉವಾಚ ಕರ್ಣೋ ಧೃತರಾಷ್ಟ್ರಪುತ್ರಂ ಪ್ರಹರ್ಷಯನ್ಸಂಸದಿ ಕೌರವಾಣಾಂ।।

ವೈಶಂಪಾಯನನು ಹೇಳಿದನು: “ಪಾರ್ಥನ ಕುರಿತು ಇನ್ನೂ ಕೇಳತೊಡಗಿದ ವೈಚಿತ್ರವೀರ್ಯನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ಟ್ರಪುತ್ರನನ್ನು ಹರ್ಷಗೊಳಿಸುತ್ತಾ ಕರ್ಣನು ಹೇಳಿದನು.

05061002a ಮಿಥ್ಯಾ ಪ್ರತಿಜ್ಞಾಯ ಮಯಾ ಯದಸ್ತ್ರಂ ರಾಮಾದ್ಧೃತಂ ಬ್ರಹ್ಮಪುರಂ ಪುರಸ್ತಾತ್।
05061002c ವಿಜ್ಞಾಯ ತೇನಾಸ್ಮಿ ತದೈವಮುಕ್ತಸ್- ತವಾಂತಕಾಲೇಽಪ್ರತಿಭಾಸ್ಯತೀತಿ।।

“ನಾನು ಸುಳ್ಳುಹೇಳಿ ಆ ಪುರಾತನ ಬ್ರಹ್ಮಪುರ ಅಸ್ತ್ರವನ್ನು ರಾಮನಿಂದ ಪಡೆದೆನೆಂದು ತಿಳಿದ ರಾಮನು “ನಿನ್ನ ಅಂತಕಾಲದಲ್ಲಿ ನಿನಗೆ ಇದನ್ನು ಪ್ರಯೋಗಿಸುವ ವಿಧಾನವು ಮರೆತುಹೋಗುತ್ತದೆ!” ಎಂದಿದ್ದನು.

05061003a ಮಹಾಪರಾಧೇ ಹ್ಯಪಿ ಸಂನತೇನ ಮಹರ್ಷಿಣಾಹಂ ಗುರುಣಾ ಚ ಶಪ್ತಃ।
05061003c ಶಕ್ತಃ ಪ್ರದಗ್ಧುಂ ಹ್ಯಪಿ ತಿಗ್ಮತೇಜಾಃ ಸಸಾಗರಾಮಪ್ಯವನಿಂ ಮಹರ್ಷಿಃ।।

ಅಷ್ಟೊಂದು ಮಹಾ ಅಪರಾಧವನ್ನೆಸಗಿದ್ದರೂ ನನ್ನ ಗುರು ಮಹರ್ಷಿಯಿಂದ ಲಘುವಾಗಿಯೇ ಶಪಿಸಲ್ಪಟ್ಟಿದ್ದೇನೆ. ಆ ತಿಗ್ಮತೇಜ ಮಹರ್ಷಿಯು ಸಾಗರಗಳಿಂದೊಡಗೂಡಿದ ಈ ಅವನಿಯನ್ನೂ ಭಸ್ಮಮಾಡಲು ಶಕ್ತ.

05061004a ಪ್ರಸಾದಿತಂ ಹ್ಯಸ್ಯ ಮಯಾ ಮನೋಽಭೂಚ್- ಚುಶ್ರೂಷಯಾ ಸ್ವೇನ ಚ ಪೌರುಷೇಣ।
05061004c ತತಸ್ತದಸ್ತ್ರಂ ಮಮ ಸಾವಶೇಷಂ ತಸ್ಮಾತ್ಸಮರ್ಥೋಽಸ್ಮಿ ಮಮೈಷ ಭಾರಃ।।

ಮನಸ್ಥೈರ್ಯದಿಂದ ಮತ್ತು ಪೌರುಷದಿಂದ ನಾನು ಅವನ ಶುಶ್ರೂಷೆ ಮಾಡಿ ಮೆಚ್ಚಿಸಿದೆ. ಆ ಅಸ್ತ್ರವು ಇನ್ನೂ ನನ್ನಲ್ಲಿದೆ. ಮತ್ತು ನನ್ನ ಆಯಸ್ಸು ಇನ್ನೂ ಮುಗಿದಿಲ್ಲ! ಆದುದರಿಂದ ಸಮರ್ಥನಾಗಿದ್ದೇನೆ. ಆ ಭಾರವು ನನಗಿರಲಿ.

05061005a ನಿಮೇಷಮಾತ್ರಂ ತಮೃಷಿಪ್ರಸಾದಂ ಅವಾಪ್ಯ ಪಾಂಚಾಲಕರೂಷಮತ್ಸ್ಯಾನ್।
05061005c ನಿಹತ್ಯ ಪಾರ್ಥಾಂಶ್ಚ ಸಪುತ್ರಪೌತ್ರಾಽಲ್- ಲೋಕಾನಹಂ ಶಸ್ತ್ರಜಿತಾನ್ಪ್ರಪತ್ಸ್ಯೇ।।

ಆ ಋಷಿಯ ಪ್ರಸಾದದಿಂದ, ಕಣ್ಣುಮುಚ್ಚಿತೆರೆಯುವುದರೊಳಗೆ ನಾನು ಶಸ್ತ್ರದಿಂದ ಪಾಂಚಾಲ, ಕರೂಷ, ಮತ್ಸ್ಯರನ್ನು, ಪಾರ್ಥರನ್ನು ಅವರ ಮಕ್ಕಳು ಮೊಮ್ಮಕ್ಕಳೊಂದಿಗೆ ಲೋಕಗಳನ್ನು ಜಯಿಸಿ ಒಪ್ಪಿಸುತ್ತೇನೆ.

05061006a ಪಿತಾಮಹಸ್ತಿಷ್ಠತು ತೇ ಸಮೀಪೇ ದ್ರೋಣಶ್ಚ ಸರ್ವೇ ಚ ನರೇಂದ್ರಮುಖ್ಯಾಃ।
05061006c ಯಥಾಪ್ರಧಾನೇನ ಬಲೇನ ಯಾತ್ವಾ ಪಾರ್ಥಾನ್ ಹನಿಷ್ಯಾಮಿ ಮಮೈಷ ಭಾರಃ।।

ಪಿತಾಮಹ, ದ್ರೋಣ ಮತ್ತು ನರೇಂದ್ರಮುಖ್ಯರೆಲ್ಲರೂ ನಿನ್ನ ಸಮೀಪದಲ್ಲಿಯೇ ಇರಲಿ. ಪ್ರಧಾನ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಸಂಹರಿಸುತ್ತೇನೆ. ಆ ಭಾರವು ನನಗಿರಲಿ.”

05061007a ಏವಂ ಬ್ರುವಾಣಂ ತಮುವಾಚ ಭೀಷ್ಮಃ ಕಿಂ ಕತ್ಥಸೇ ಕಾಲಪರೀತಬುದ್ಧೇ।
05061007c ನ ಕರ್ಣ ಜಾನಾಸಿ ಯಥಾ ಪ್ರಧಾನೇ ಹತೇ ಹತಾಃ ಸ್ಯುರ್ಧೃತರಾಷ್ಟ್ರಪುತ್ರಾಃ।।

ಹೀಗೆ ಹೇಳುತ್ತಿದ್ದ ಅವನಿಗೆ ಭೀಷ್ಮನು ಹೇಳಿದನು: “ಏನು ಹೇಳುತ್ತಿರುವೆ? ನಿನ್ನ ಅಂತ್ಯವು ಬಂದು ಬುದ್ಧಿ ಕೆಟ್ಟಿದೆ. ಪ್ರಧಾನನು ಹತನಾದರೆ ಎಲ್ಲ ಧೃತರಾಷ್ಟ್ರಪುತ್ರರೂ ಹತರಾಗುತ್ತಾರೆ ಎಂದು ನಿನಗೆ ತಿಳಿದಿಲ್ಲವೇ?

05061008a ಯತ್ಖಾಂಡವಂ ದಾಹಯತಾ ಕೃತಂ ಹಿ ಕೃಷ್ಣದ್ವಿತೀಯೇನ ಧನಂಜಯೇನ।
05061008c ಶ್ರುತ್ವೈವ ತತ್ಕರ್ಮ ನಿಯಂತುಮಾತ್ಮಾ ಶಕ್ಯಸ್ತ್ವಯಾ ವೈ ಸಹ ಬಾಂಧವೇನ।।

ಖಾಂಡವವನ್ನು ಸುಡುವಾಗ ಕೃಷ್ಣನೊಬ್ಬನ ಸಹಾಯದಿಂದಲೇ ಧನಂಜಯನು ಮಾಡಿದುದನ್ನು ಕೇಳಿಯೂ ಕೂಡ, ಬಾಂಧವರೊಂದಿಗೆ ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು.

05061009a ಯಾಂ ಚಾಪಿ ಶಕ್ತಿಂ ತ್ರಿದಶಾಧಿಪಸ್ತೇ ದದೌ ಮಹಾತ್ಮಾ ಭಗವಾನ್ಮಹೇಂದ್ರಃ।
05061009c ಭಸ್ಮೀಕೃತಾಂ ತಾಂ ಪತಿತಾಂ ವಿಶೀರ್ಣಾಂ ಚಕ್ರಾಹತಾಂ ದ್ರಕ್ಷ್ಯಸಿ ಕೇಶವೇನ।।

ಯಾವ ಶಕ್ತಿಯನ್ನು ನಿನಗೆ ತ್ರಿದಶಾಧಿಪ ಮಹಾತ್ಮ ಭಗವಾನ್ ಮಹೇಂದ್ರನು ಕೊಟ್ಟಿದ್ದನೋ ಅದನ್ನೂ ಕೂಡ ಕೇಶವನು ಚಕ್ರದಿಂದ ಹೊಡೆದು ಚೂರಾಗಿ ಭಸ್ಮೀಕೃತವಾಗಿ ಕೆಳಗೆ ಬೀಳಿಸುವುದನ್ನು ನೋಡುವಿಯಂತೆ!

05061010a ಯಸ್ತೇ ಶರಃ ಸರ್ಪಮುಖೋ ವಿಭಾತಿ ಸದಾಗ್ರ್ಯಮಾಲ್ಯೈರ್ಮಹಿತಃ ಪ್ರಯತ್ನಾತ್।
05061010c ಸ ಪಾಂಡುಪುತ್ರಾಭಿಹತಃ ಶರೌಘೈಃ ಸಹ ತ್ವಯಾ ಯಾಸ್ಯತಿ ಕರ್ಣ ನಾಶಂ।।

ಕರ್ಣ! ಯಾವ ಶರವು ಸರ್ಪಮುಖದಲ್ಲಿ ಹೊಳೆಯುತ್ತಿರುವುದೋ, ಪ್ರಯತ್ನ ಪಟ್ಟು ನೀನು ಯಾವುದನ್ನು ಮಾಲೆಗಳನ್ನು ಹಾಕಿ ಪೂಜಿಸುತ್ತಿರುವೆಯೋ ಅದನ್ನು ಕೂಡ ಪಾಂಡುಪುತ್ರನು ಹರಿತ ಶರಗಳಿಂದ ಹೊಡೆದು ನಿನ್ನೊಂದಿಗೆ ಅದೂ ನಾಶವಾಗುತ್ತದೆ.

05061011a ಬಾಣಸ್ಯ ಭೌಮಸ್ಯ ಚ ಕರ್ಣ ಹಂತಾ ಕಿರೀಟಿನಂ ರಕ್ಷತಿ ವಾಸುದೇವಃ।
05061011c ಯಸ್ತ್ವಾದೃಶಾನಾಂ ಚ ಗರೀಯಸಾಂ ಚ ಹಂತಾ ರಿಪೂಣಾಂ ತುಮುಲೇ ಪ್ರಗಾಢೇ।।

ಕರ್ಣ! ಬಾಣ ಮತ್ತು ಭೌಮ (ನರಕ) ರ ಹಂತಕ ವಾಸುದೇವನು ಕಿರೀಟಿಯನ್ನು ರಕ್ಷಿಸುತ್ತಾನೆ. ಪ್ರಗಾಢ ತುಮುಲದಲ್ಲಿ ಅವನು ನಿನ್ನಂಥಹ ಮತ್ತು ನಿನಗಿಂಥಲೂ ಹೆಚ್ಚಿನ ಶತ್ರುಗಳನ್ನು ಹತಗೊಳಿಸುತ್ತಾನೆ.”

05061012 ಕರ್ಣ ಉವಾಚ।
05061012a ಅಸಂಶಯಂ ವೃಷ್ಣಿಪತಿರ್ಯಥೋಕ್ತಸ್- ತಥಾ ಚ ಭೂಯಶ್ಚ ತತೋ ಮಹಾತ್ಮಾ।
05061012c ಅಹಂ ಯದುಕ್ತಃ ಪರುಷಂ ತು ಕಿಂ ಚಿತ್ ಪಿತಾಮಹಸ್ತಸ್ಯ ಫಲಂ ಶೃಣೋತು।।

ಕರ್ಣನು ಹೇಳಿದನು: “ವೃಷ್ಣಿಪತಿಯು ಹೇಳಿದಂತೆಯೇ ಇದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ಮಹಾತ್ಮನು ಅದಕ್ಕಿಂತಲೂ ಹೆಚ್ಚಿನವನು. ಆದರೆ ಪಿತಾಮಹನಾಡಿದ ಈ ಕಠೋರ ಮಾತುಗಳ ಪರಿಣಾಮವನ್ನು ಕೇಳಿ.

05061013a ನ್ಯಸ್ಯಾಮಿ ಶಸ್ತ್ರಾಣಿ ನ ಜಾತು ಸಂಖ್ಯೇ ಪಿತಾಮಹೋ ದ್ರಕ್ಷ್ಯತಿ ಮಾಂ ಸಭಾಯಾಂ।
05061013c ತ್ವಯಿ ಪ್ರಶಾಂತೇ ತು ಮಮ ಪ್ರಭಾವಂ ದ್ರಕ್ಷ್ಯಂತಿ ಸರ್ವೇ ಭುವಿ ಭೂಮಿಪಾಲಾಃ।।

ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ.””

05061014 ವೈಶಂಪಾಯನ ಉವಾಚ।
05061014a ಇತ್ಯೇವಮುಕ್ತ್ವಾ ಸ ಮಹಾಧನುಷ್ಮಾನ್ ಹಿತ್ವಾ ಸಭಾಂ ಸ್ವಂ ಭವನಂ ಜಗಾಮ।
05061014c ಭೀಷ್ಮಸ್ತು ದುರ್ಯೋಧನಮೇವ ರಾಜನ್ ಮಧ್ಯೇ ಕುರೂಣಾಂ ಪ್ರಹಸನ್ನುವಾಚ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಧನುಷ್ಮಂತನು ಸಭೆಯನ್ನು ತೊರೆದು ಸ್ವ-ಭವನಕ್ಕೆ ತೆರಳಿದನು. ರಾಜನ್! ಭೀಷ್ಮನಾದರೋ ಕುರುಗಳ ಮಧ್ಯದಲ್ಲಿ ಜೋರಾಗಿ ನಕ್ಕು ದುರ್ಯೋಧನನಿಗೆ ಹೇಳಿದನು.

05061015a ಸತ್ಯಪ್ರತಿಜ್ಞಾಃ ಕಿಲ ಸೂತಪುತ್ರಸ್- ತಥಾ ಸ ಭಾರಂ ವಿಷಹೇತ ಕಸ್ಮಾತ್।
05061015c ವ್ಯೂಹಂ ಪ್ರತಿವ್ಯೂಹ್ಯ ಶಿರಾಂಸಿ ಭಿತ್ತ್ವಾ ಲೋಕಕ್ಷಯಂ ಪಶ್ಯತ ಭೀಮಸೇನಾತ್।।
05061016a ಆವಂತ್ಯಕಾಲಿಂಗಜಯದ್ರಥೇಷು ವೇದಿಧ್ವಜೇ ತಿಷ್ಠತಿ ಬಾಹ್ಲಿಕೇ ಚ।
05061016c ಅಹಂ ಹನಿಷ್ಯಾಮಿ ಸದಾ ಪರೇಷಾಂ ಸಹಸ್ರಶಶ್ಚಾಯುತಶಶ್ಚ ಯೋಧಾನ್।।

“ಸೂತಪುತ್ರನು ತನ್ನ ಪ್ರತಿಜ್ಞೆಯನ್ನು ಸತ್ಯವಾಗಿಸುತ್ತಾನಲ್ಲವೇ? ಭೀಮಸೇನನು ನೋಡುತ್ತಿದ್ದಂತೆ ವ್ಯೂಹ-ಪ್ರತಿವ್ಯೂಹಗಳ ಶಿರಗಳನ್ನು ಕತ್ತರಿಸಿ ಲೋಕಕ್ಷಯವನ್ನುಂಟುಮಾಡುತ್ತೇನೆ ಮತ್ತು ಅವಂತಿ, ಕಲಿಂಗ, ಜಯದ್ರಥರ ಧ್ವಜಗಳ ಮಧ್ಯದಲ್ಲಿ ಬಾಹ್ಲೀಕನನ್ನು ನಿಲ್ಲಿಸಿ ನಾನು ಸದಾ ಶತ್ರುಗಳ ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ ಎಂದು ಹೇಳಿದ ಅವನು ತನ್ನ ಆ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸುತ್ತಾನೆ?

05061017a ಯದೈವ ರಾಮೇ ಭಗವತ್ಯನಿಂದ್ಯೇ ಬ್ರಹ್ಮ ಬ್ರುವಾಣಃ ಕೃತವಾಂಸ್ತದಸ್ತ್ರಂ।
05061017c ತದೈವ ಧರ್ಮಶ್ಚ ತಪಶ್ಚ ನಷ್ಟಂ ವೈಕರ್ತನಸ್ಯಾಧಮಪೂರುಷಸ್ಯ।।

ಅನಿಂದ್ಯ, ಭಗವಂತ ರಾಮನನಿಗೆ ಬ್ರಾಹ್ಮಣನೆಂದು ಹೇಳಿ ಆ ಅಸ್ತ್ರವನ್ನು ಪಡೆದಾಗಲೇ ಆ ಅಧಮ ಪುರುಷ ವೈಕರ್ತನನ ಧರ್ಮ ತಪಸ್ಸುಗಳು ನಷ್ಟವಾಗಿ ಹೋಗಿದ್ದವು.”

05061018a ಅಥೋಕ್ತವಾಕ್ಯೇ ನೃಪತೌ ತು ಭೀಷ್ಮೇ ನಿಕ್ಷಿಪ್ಯ ಶಸ್ತ್ರಾಣಿ ಗತೇ ಚ ಕರ್ಣೇ।
05061018c ವೈಚಿತ್ರವೀರ್ಯಸ್ಯ ಸುತೋಽಲ್ಪಬುದ್ಧಿರ್- ದುರ್ಯೋಧನಃ ಶಾಂತನವಂ ಬಭಾಷೇ।।

ಶಸ್ತ್ರಗಳನ್ನು ಬಿಸುಟು ಹೊರಟುಹೋದ ಕರ್ಣನ ಕುರಿತು ಭೀಷ್ಮನು ನೃಪತಿಗಳಿಗೆ ಹೇಳಲು ಬುದ್ಧಿಯಿಲ್ಲದ, ವೈಚಿತ್ರವೀರ್ಯನ ಮಗ ದುರ್ಯೋಧನನು ಶಾಂತನವನಿಗೆ ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಕರ್ಣಭೀಷ್ಮವಾಕ್ಯೇ ಏಕಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಕರ್ಣಭೀಷ್ಮವಾಕ್ಯದಲ್ಲಿ ಅರವತ್ತೊಂದನೆಯ ಅಧ್ಯಾಯವು.