058 ಶ್ರೀಕೃಷ್ಣವಾಕ್ಯಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 58

ಸಾರ

ಕೃಷ್ಣಾರ್ಜುನರ ಸಂದೇಶವೇನೆಂದು ಧೃತರಾಷ್ಟ್ರನು ಸಂಜಯನನ್ನು ಕೇಳಲು ಸಂಜಯನು ಅವನಿಗೆ ಅವರ ಸಂದೇಶಗಳನ್ನು ಹೇಳಿದುದು (1-30).

05058001 ಧೃತರಾಷ್ಟ್ರ ಉವಾಚ।
05058001a ಯದಬ್ರೂತಾಂ ಮಹಾತ್ಮಾನೌ ವಾಸುದೇವಧನಂಜಯೌ।
05058001c ತನ್ಮೇ ಬ್ರೂಹಿ ಮಹಾಪ್ರಾಜ್ಞಾ ಶುಶ್ರೂಷೇ ವಚನಂ ತವ।।

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮಹಾತ್ಮರಾದ ವಾಸುದೇವ-ಧನಂಜಯರು ಏನು ಹೇಳಿದರೆಂಬುದನ್ನು ನನಗೆ ಹೇಳು. ಅದನ್ನು ಕೇಳಲು ತವಕವಿದೆ.”

05058002 ಸಂಜಯ ಉವಾಚ।
05058002a ಶೃಣು ರಾಜನ್ಯಥಾ ದೃಷ್ಟೌ ಮಯಾ ಕೃಷ್ಣಧನಂಜಯೌ।
05058002c ಊಚತುಶ್ಚಾಪಿ ಯದ್ವೀರೌ ತತ್ತೇ ವಕ್ಷ್ಯಾಮಿ ಭಾರತ।।

ಸಂಜಯನು ಹೇಳಿದನು: “ರಾಜನ್! ಭಾರತ! ನಾನು ಕೃಷ್ಣ-ಧನಂಜಯರನ್ನು ಹೇಗಿದ್ದಾಗ ನೋಡಿದೆನೆನ್ನುವುದನ್ನೂ, ಆ ವೀರರಿಬ್ಬರೂ ನನಗೆ ಏನು ಹೇಳಿ ಕಳುಹಿಸಿದ್ದಾರೆನ್ನುವುದನ್ನೂ ನಿನಗೆ ಹೇಳುತ್ತೇನೆ.

05058003a ಪಾದಾಂಗುಲೀರಭಿಪ್ರೇಕ್ಷನ್ಪ್ರಯತೋಽಹಂ ಕೃತಾಂಜಲಿಃ।
05058003c ಶುದ್ಧಾಂತಂ ಪ್ರಾವಿಶಂ ರಾಜನ್ನಾಖ್ಯಾತುಂ ನರದೇವಯೋಃ।।

ರಾಜನ್! ಕಾಲಿನ ಬೆರಳುಗಳನ್ನು ನೋಡುತ್ತಾ, ತಲೆಬಾಗಿ, ಕೈಮುಗಿದು ಶುದ್ಧನಾಗಿ ಅವರಿಗೆ ಹೇಳಲು ನಾನು ಆ ನರದೇವರ ಅಂತಃಪುರವನ್ನು ಪ್ರವೇಶಿಸಿದೆ.

05058004a ನೈವಾಭಿಮನ್ಯುರ್ನ ಯಮೌ ತಂ ದೇಶಮಭಿಯಾಂತಿ ವೈ।
05058004c ಯತ್ರ ಕೃಷ್ಣೌ ಚ ಕೃಷ್ಣಾ ಚ ಸತ್ಯಭಾಮಾ ಚ ಭಾಮಿನೀ।।

ಕೃಷ್ಣರಿಬ್ಬರೂ, ಕೃಷ್ಣೆ ಮತ್ತು ಭಾಮಿನೀ ಸತ್ಯಭಾಮೆಯರಿರುವ ಆ ಪ್ರದೇಶವನ್ನು ಅಭಿಮನ್ಯುವಾಗಲೀ ಯಮಳರಾಗಲೀ ಹೋಗಲಾರರು.

05058005a ಉಭೌ ಮಧ್ವಾಸವಕ್ಷೀಬಾವುಭೌ ಚಂದನರೂಷಿತೌ।
05058005c ಸ್ರಗ್ವಿಣೌ ವರವಸ್ತ್ರೌ ತೌ ದಿವ್ಯಾಭರಣಭೂಷಿತೌ।।

ಇಬ್ಬರೂ ಹಾರಗಳನ್ನು ಹಾಕಿಕೊಂಡು, ವರವಸ್ತ್ರಗಳನ್ನು ಧರಿಸಿ, ದಿವ್ಯಾಭರಣ ಭೂಷಿತರಾಗಿ, ಚಂದನಲೇಪಿತರಾಗಿ, ಮಧುವನ್ನು ಸೇವಿಸುತ್ತಾ ಕುಳಿತಿದ್ದರು.

05058006a ನೈಕರತ್ನವಿಚಿತ್ರಂ ತು ಕಾಂಚನಂ ಮಹದಾಸನಂ।
05058006c ವಿವಿಧಾಸ್ತರಣಾಸ್ತೀರ್ಣಂ ಯತ್ರಾಸಾತಾಮರಿಂದಮೌ।।

ಅನೇಕ ವಿಚಿತ್ರ ರತ್ನಗಳಿಂದ ಕೂಡಿದ ಕಾಂಚನದ ಮಹದಾಸನದ ಮೇಲೆ, ವಿವಿಧ ನೆಲಗಂಬಳಿಗಳನ್ನು ಹಾಸಿದ್ದಲ್ಲಿ ಆ ಅರಿಂದಮರಿಬ್ಬರೂ ಕುಳಿತುಕೊಂಡಿದ್ದರು.

05058007a ಅರ್ಜುನೋತ್ಸಂಗಗೌ ಪಾದೌ ಕೇಶವಸ್ಯೋಪಲಕ್ಷಯೇ।
05058007c ಅರ್ಜುನಸ್ಯ ಚ ಕೃಷ್ಣಾಯಾಂ ಸತ್ಯಾಯಾಂ ಚ ಮಹಾತ್ಮನಃ।।

ಕೇಶವನ ಪಾದಗಳು ಅರ್ಜುನನ ತೊಡೆಯಮೇಲಿದ್ದುದನ್ನು, ಮತ್ತು ಮಹಾತ್ಮ ಅರ್ಜುನನ ಪಾದಗಳು ಕೃಷ್ಣೆ ಮತ್ತು ಸತ್ಯಭಾಮೆಯರ ತೊಡೆಯಮೇಲಿರುವುದನ್ನು ನೋಡಿದೆನು.

05058008a ಕಾಂಚನಂ ಪಾದಪೀಠಂ ತು ಪಾರ್ಥೋ ಮೇ ಪ್ರಾದಿಶತ್ತದಾ।
05058008c ತದಹಂ ಪಾಣಿನಾ ಸ್ಪೃಷ್ಟ್ವಾ ತತೋ ಭೂಮಾವುಪಾವಿಶಂ।।

ಪಾರ್ಥನು ನನಗೆ ಕಾಂಚನದ ಪಾದಪೀಠವೊಂದನ್ನು ತೋರಿಸಿದನು. ಅದನ್ನು ನಾನು ಕೈಯಲ್ಲಿ ಮುಟ್ಟಿ ನೆಲದ ಮೇಲೆ ಕುಳಿತುಕೊಂಡೆನು.

05058009a ಊರ್ಧ್ವರೇಖತಲೌ ಪಾದೌ ಪಾರ್ಥಸ್ಯ ಶುಭಲಕ್ಷಣೌ।
05058009c ಪಾದಪೀಠಾದಪಹೃತೌ ತತ್ರಾಪಶ್ಯಮಹಂ ಶುಭೌ।।

ಪಾದಪೀಠದಿಂದ ಕಾಲನ್ನು ಹಿಂದೆ ತೆಗೆದುಕೊಳ್ಳುವಾಗ ನಾನು ಪಾರ್ಥನ ಆ ಪಾದಗಳಲ್ಲಿರುವ ಶುಭಲಕ್ಷಣ ಊರ್ಧ್ವರೇಖೆಗಳಿರುವ ತಲವನ್ನು ನೋಡಿದೆನು.

05058010a ಶ್ಯಾಮೌ ಬೃಹಂತೌ ತರುಣೌ ಶಾಲಸ್ಕಂಧಾವಿವೋದ್ಗತೌ।
05058010c ಏಕಾಸನಗತೌ ದೃಷ್ಟ್ವಾ ಭಯಂ ಮಾಂ ಮಹದಾವಿಶತ್।।

ಶ್ಯಾಮವರ್ಣದ, ದೊಡ್ಡದೇಹದ, ತರುಣರಾದ, ಶಾಲಸ್ಕಂಧದಂತೆ ಎತ್ತರವಾಗಿರುವ ಅವರಿಬ್ಬರೂ ಒಂದೇ ಆಸನದಲ್ಲಿ ಕುಳಿತಿರುವುದನ್ನು ನೋಡಿ ನನಗೆ ಮಹಾ ಭಯವು ಆವರಿಸಿತು.

05058011a ಇಂದ್ರವಿಷ್ಣುಸಮಾವೇತೌ ಮಂದಾತ್ಮಾ ನಾವಬುಧ್ಯತೇ।
05058011c ಸಂಶ್ರಯಾದ್ದ್ರೋಣಭೀಷ್ಮಾಭ್ಯಾಂ ಕರ್ಣಸ್ಯ ಚ ವಿಕತ್ಥನಾತ್।।

ಇಂದ್ರ-ವಿಷ್ಣು ಇಬ್ಬರೂ ಸೇರಿರುವುದು ದ್ರೋಣ, ಭೀಷ್ಮ ಮತ್ತು ತನ್ನನ್ನು ತಾನು ಹೊಗಳಿಕೊಳ್ಳುವ ಕರ್ಣನನ್ನು ಸಂಶ್ರಯಿಸಿರುವ ಮಂದಾತ್ಮನಿಗೆ ತಿಳಿದಿಲ್ಲ.

05058012a ನಿದೇಶಸ್ಥಾವಿಮೌ ಯಸ್ಯ ಮಾನಸಸ್ತಸ್ಯ ಸೇತ್ಸ್ಯತೇ।
05058012c ಸಂಕಲ್ಪೋ ಧರ್ಮರಾಜಸ್ಯ ನಿಶ್ಚಯೋ ಮೇ ತದಾಭವತ್।।

ಆ ಕ್ಷಣದಲ್ಲಿ ನನಗೆ ನಿಶ್ಚಯವಾಯಿತು - ಯಾರ ನಿರ್ದೇಶನದಂತೆ ಅವರಿಬ್ಬರು ನಡೆದುಕೊಳ್ಳುತ್ತಾರೋ ಯಾರ ಮನಸ್ಸನ್ನು ಅವರು ಸೇವಿಸುತ್ತಾರೋ ಆ ಧರ್ಮರಾಜನ ಸಂಕಲ್ಪದಂತೆಯೇ ಆಗುತ್ತದೆ.

05058013a ಸತ್ಕೃತಶ್ಚಾನ್ನಪಾನಾಭ್ಯಾಮಾಚ್ಚನ್ನೋ ಲಬ್ಧಸತ್ಕ್ರಿಯಃ।
05058013c ಅಂಜಲಿಂ ಮೂರ್ಧ್ನಿ ಸಂಧಾಯ ತೌ ಸಂದೇಶಮಚೋದಯಂ।।

ಅನ್ನ ಪಾನಗಳಿಂದ ಸತ್ಕೃತನಾಗಿ ಮತ್ತು ಇತರ ಸತ್ಕ್ರಿಯೆಗಳಿಂದ ಸಮ್ಮಾನಿತನಾಗಿ ತಲೆಯ ಮೇಲೆ ಕೈಗಳನ್ನು ಮುಗಿದು ನಿನ್ನ ಸಂದೇಶವನ್ನು ಅವರಿಗೆ ಹೇಳಿದೆ.

05058014a ಧನುರ್ಬಾಣೋಚಿತೇನೈಕಪಾಣಿನಾ ಶುಭಲಕ್ಷಣಂ।
05058014c ಪಾದಮಾನಮಯನ್ಪಾರ್ಥಃ ಕೇಶವಂ ಸಮಚೋದಯತ್।

ಆಗ ಪಾರ್ಥನು ಧನುರ್ಬಾಣಗಳನ್ನು ಹಿಡಿಯುವ ಕೈಯಿಂದ ಕೇಶವನ ಶುಭಲಕ್ಷಣಯುತ ಕಾಲನ್ನು ಸರಿಸಿ, ಅವನಿಗೆ ಮಾತನಾಡಲು ಒತ್ತಾಯಿಸಿದನು.

05058015a ಇಂದ್ರಕೇತುರಿವೋತ್ಥಾಯ ಸರ್ವಾಭರಣಭೂಷಿತಃ।
05058015c ಇಂದ್ರವೀರ್ಯೋಪಮಃ ಕೃಷ್ಣಃ ಸಂವಿಷ್ಟೋ ಮಾಭ್ಯಭಾಷತ।।

ಸರ್ವಾಭರಣಭೂಷಿತ ಇಂದ್ರವೀರ್ಯೋಪಮ ಕೃಷ್ಣನು ಇಂದ್ರಧ್ವಜದಂತೆ ಮೇಲೆದ್ದು ನನ್ನನ್ನು ಉದ್ದೇಶಿಸಿ ಹೇಳಿದನು:

05058016a ವಾಚಂ ಸ ವದತಾಂ ಶ್ರೇಷ್ಠೋ ಹ್ಲಾದಿನೀಂ ವಚನಕ್ಷಮಾಂ।
05058016c ತ್ರಾಸನೀಂ ಧಾರ್ತರಾಷ್ಟ್ರಾಣಾಂ ಮೃದುಪೂರ್ವಾಂ ಸುದಾರುಣಾಂ।।

ಆ ಮಾತುನಾಡುವವರಲ್ಲಿ ಶ್ರೇಷ್ಠನ ಮಾತುಗಳು ದಾರುಣವಾಗಿದ್ದು ಧಾರ್ತರಾಷ್ಟ್ರರನ್ನು ಕಾಡುವಂತಿದ್ದರೂ, ಆನಂದದಾಯಕವಾಗಿದ್ದವು, ಮನಸೆಳೆಯುವಂತಿದ್ದವು ಮತ್ತು ಮೃದುಪೂರ್ವಕವಾಗಿದ್ದವು.

05058017a ವಾಚಂ ತಾಂ ವಚನಾರ್ಹಸ್ಯ ಶಿಕ್ಷಾಕ್ಷರಸಮನ್ವಿತಾಂ।
05058017c ಅಶ್ರೌಷಮಹಮಿಷ್ಟಾರ್ಥಾಂ ಪಶ್ಚಾದ್ಧೃದಯಶೋಷಿಣೀಂ।

ಆ ಮಾತುಗಳನ್ನಾಡಲು ಅವನೋರ್ವನೇ ಅರ್ಹನಾಗಿದ್ದನು. ಅವು ಶಿಕ್ಷಾಕ್ಷರ ಸಮನ್ವಿತವಾಗಿತ್ತು. ಅರ್ಥಗರ್ಭಿತವಾಗಿತ್ತು. ಆದರೂ ಕೊನೆಯಲ್ಲಿ ಅದು ಹೃದಯವನ್ನು ಶೋಷಿಸುವಂತಿತ್ತು.

05058018 ವಾಸುದೇವ ಉವಾಚ।
05058018a ಸಂಜಯೇದಂ ವಚೋ ಬ್ರೂಯಾ ಧೃತರಾಷ್ಟ್ರಂ ಮನೀಷಿಣಂ।
05058018c ಶೃಣ್ವತಃ ಕುರುಮುಖ್ಯಸ್ಯ ದ್ರೋಣಸ್ಯಾಪಿ ಚ ಶೃಣ್ವತಃ।।

ವಾಸುದೇವನು ಹೇಳಿದನು: “ಸಂಜಯ! ಮನೀಷಿ ಧೃತರಾಷ್ಟ್ರನಿಗೆ ಈ ಮಾತುಗಳನ್ನು ಹೇಳು. ಕುರುಮುಖ್ಯರಿಗೂ ಕೇಳಿಸು ಮತ್ತು ದ್ರೋಣನಿಗೂ ಕೇಳಿಸು.

05058019a ಯಜಧ್ವಂ ವಿಪುಲೈರ್ಯಜ್ಞೈರ್ವಿಪ್ರೇಭ್ಯೋ ದತ್ತ ದಕ್ಷಿಣಾಃ।
05058019c ಪುತ್ರೈರ್ದಾರೈಶ್ಚ ಮೋದಧ್ವಂ ಮಹದ್ವೋ ಭಯಮಾಗತಂ।।

ವಿಪ್ರರಿಗೆ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಯಾಜಿಸಿರಿ. ಹೆಂಡತಿ ಮಕ್ಕಳೊಂದಿಗೆ ಆನಂದಿಸಿಕೊಳ್ಳಿ. ಮಹಾಭಯವು ಬಂದೊದಗಿದೆ.

05058020a ಅರ್ಥಾಂಸ್ತ್ಯಜತ ಪಾತ್ರೇಭ್ಯಃ ಸುತಾನ್ಪ್ರಾಪ್ನುತ ಕಾಮಜಾನ್।
05058020c ಪ್ರಿಯಂ ಪ್ರಿಯೇಭ್ಯಶ್ಚರತ ರಾಜಾ ಹಿ ತ್ವರತೇ ಜಯೇ।।

ಸಂಪತ್ತನ್ನು ಪಾತ್ರರಲ್ಲಿ ಹಂಚಿ. ಬೇಕಾದ ಸುತರನ್ನು ಪಡೆಯಿರಿ. ಪ್ರಿಯರೊಡನೆ ಪ್ರೀತಿಯಿಂದ ನಡೆದುಕೊಳ್ಳಿ. ಏಕೆಂದರೆ ರಾಜಾ ಯುಧಿಷ್ಠಿರನು ಜಯಕ್ಕೆ ಕಾತರನಾಗಿದ್ದಾನೆ.

05058021a ಋಣಮೇತತ್ಪ್ರವೃದ್ಧಂ ಮೇ ಹೃದಯಾನ್ನಾಪಸರ್ಪತಿ।
05058021c ಯದ್ಗೋವಿಂದೇತಿ ಚುಕ್ರೋಶ ಕೃಷ್ಣಾ ಮಾಂ ದೂರವಾಸಿನಂ।।
05058022a ತೇಜೋಮಯಂ ದುರಾಧರ್ಷಂ ಗಾಂಡೀವಂ ಯಸ್ಯ ಕಾರ್ಮುಕಂ।
05058022c ಮದ್ದ್ವಿತೀಯೇನ ತೇನೇಹ ವೈರಂ ವಃ ಸವ್ಯಸಾಚಿನಾ।।

ನಾನು ದೂರದಲ್ಲಿರುವಾಗ ಕೃಷ್ಣೆಯು “ಗೋವಿಂದ!” ಎಂದು ಶೋಕದಿಂದ ಕೂಗಿ ಕರೆದಿದ್ದುದರ, ಯಾರ ಕಾರ್ಮುಕವು ತೇಜೋಮಯ, ದುರಾಧರ್ಷ ಗಾಂಡೀವವೋ ಆ ಸವ್ಯಸಾಚಿ – ನನ್ನ ಎರಡನೆಯವನೊಡನೆ ನೀವೇನು ವೈರ ಸಾಧಿಸಿದ್ದೀರೋ ಅವುಗಳ ಋಣವು ಬೆಳೆದು ನನ್ನ ಹೃದಯವನ್ನು ಆವರಿಸಿದೆ.

05058023a ಮದ್ದ್ವಿತೀಯಂ ಪುನಃ ಪಾರ್ಥಂ ಕಃ ಪ್ರಾರ್ಥಯಿತುಮಿಚ್ಚತಿ।
05058023c ಯೋ ನ ಕಾಲಪರೀತೋ ವಾಪ್ಯಪಿ ಸಾಕ್ಷಾತ್ಪುರಂದರಃ।।

ನನಗೆ ಎರಡನೆಯವನಾದ ಪಾರ್ಥನನ್ನು ಯಾರುತಾನೇ - ಅವನು ಸಾಕ್ಷಾತ್ ಪುರಂದರನೇ ಆಗಿದ್ದರೂ - ಅವನ ಕಾಲವು ಮುಗಿದಿಲ್ಲವಾಗಿದ್ದರೆ ಎದುರಿಸಲು ಬಯಸುತ್ತಾನೆ?

05058024a ಬಾಹುಭ್ಯಾಮುದ್ವಹೇದ್ಭೂಮಿಂ ದಹೇತ್ಕ್ರುದ್ಧ ಇಮಾಃ ಪ್ರಜಾಃ।
05058024c ಪಾತಯೇತ್ತ್ರಿದಿವಾದ್ದೇವಾನ್ಯೋಽರ್ಜುನಂ ಸಮರೇ ಜಯೇತ್।।

ಅರ್ಜುನನನ್ನು ಸಮರದಲ್ಲಿ ಯಾರು ಗೆಲ್ಲುತ್ತಾನೋ ಅವನು ಎರಡೂ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಹುದು, ಕೃದ್ಧನಾಗಿ ಈ ಪ್ರಜೆಗಳನ್ನು ಸುಟ್ಟುಬಿಡಬಲ್ಲನು, ಮತ್ತು ದೇವತೆಗಳೊಂದಿಗೆ ದಿವಿಯನ್ನು ಕೆಳಗೆ ಬೀಳಿಸಿಯಾನು.

05058025a ದೇವಾಸುರಮನುಷ್ಯೇಷು ಯಕ್ಷಗಂಧರ್ವಭೋಗಿಷು।
05058025c ನ ತಂ ಪಶ್ಯಾಮ್ಯಹಂ ಯುದ್ಧೇ ಪಾಂಡವಂ ಯೋಽಭ್ಯಯಾದ್ರಣೇ।।

ರಣದಲ್ಲಿ ಪಾಂಡವನೊಂದಿಗೆ ಯುದ್ಧಮಾಡಿ ಎದುರಿಸುವವನನ್ನು ದೇವಾಸುರಮನುಷ್ಯರಲ್ಲಿ, ಯಕ್ಷ-ಗಂಧರ್ವ-ನಾಗರಲ್ಲಿ ನಾನು ಕಾಣಲಾರೆ.

05058026a ಯತ್ತದ್ವಿರಾಟನಗರೇ ಶ್ರೂಯತೇ ಮಹದದ್ಭುತಂ।
05058026c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ।।

ವಿರಾಟನಗರದಲ್ಲಿ ನಡೆದ ಮಹಾ ಅದ್ಭುತದ ಕುರಿತು ಏನು ಕೇಳಿದ್ದೇವೋ - ಓರ್ವನೇ ಬಹುಯೋಧರನ್ನು ಎದುರಿಸಿದುದು - ಅದೇ ಇದಕ್ಕೆ ನಿದರ್ಶನವು.

05058027a ಏಕೇನ ಪಾಂಡುಪುತ್ರೇಣ ವಿರಾಟನಗರೇ ಯದಾ।
05058027c ಭಗ್ನಾಃ ಪಲಾಯಂತ ದಿಶಃ ಪರ್ಯಾಪ್ತಂ ತನ್ನಿದರ್ಶನಂ।।

ವಿರಾಟನಗರದಲ್ಲಿ ಪಾಂಡುಪುತ್ರನೊಬ್ಬನಿಂದಲೇ ಎದುರಿಸಲ್ಪಟ್ಟಾಗ, ಭಗ್ನರಾಗಿ ದಿಕ್ಕುಗಳಲ್ಲಿ ಪಲಾಯನ ಮಾಡಿದುದೇ ಅದಕ್ಕೆ ನಿದರ್ಶನವು.

05058028a ಬಲಂ ವೀರ್ಯಂ ಚ ತೇಜಶ್ಚ ಶೀಘ್ರತಾ ಲಘುಹಸ್ತತಾ।
05058028c ಅವಿಷಾದಶ್ಚ ಧೈರ್ಯಂ ಚ ಪಾರ್ಥಾನ್ನಾನ್ಯತ್ರ ವಿದ್ಯತೇ।।

ಪಾರ್ಥನಲ್ಲಿರುವ ಬಲ, ವೀರ್ಯ, ತೇಜಸ್ಸು, ಶೀಘ್ರತೆ, ಕೈಚಳಕ, ಆಯಾಸಗೊಳ್ಳದಿರುವಿಕೆ, ಮತ್ತು ಧೈರ್ಯವು ಬೇರೆ ಯಾರಲ್ಲಿಯೂ ಇದ್ದುದು ಗೊತ್ತಿಲ್ಲ.””

05058029 ಸಂಜಯ ಉವಾಚ।
05058029a ಇತ್ಯಬ್ರವೀದ್ಧೃಷೀಕೇಶಃ ಪಾರ್ಥಮುದ್ಧರ್ಷಯನ್ಗಿರಾ।
05058029c ಗರ್ಜನ್ಸಮಯವರ್ಷೀವ ಗಗನೇ ಪಾಕಶಾಸನಃ।।

ಸಂಜಯನು ಹೇಳಿದನು: “ಹೀಗೆ ಗಗನದಲ್ಲಿ ಪಾಕಶಾಸನನು ಮಳೆಸುರಿಸುವಾಗ ಕೇಳಿಬರುವ ಗುಡುಗಿನ ಧ್ವನಿಯಲ್ಲಿ ಪಾರ್ಥನನ್ನು ಉತ್ತೇಜಿಸುವ ಈ ಮಾತುಗಳನ್ನಾಡಿದನು.

05058030a ಕೇಶವಸ್ಯ ವಚಃ ಶ್ರುತ್ವಾ ಕಿರೀಟೀ ಶ್ವೇತವಾಹನಃ।
05058030c ಅರ್ಜುನಸ್ತನ್ಮಹದ್ವಾಕ್ಯಮಬ್ರವೀಲ್ಲೋಮಹರ್ಷಣಂ।।

ಕೇಶವನ ಮಾತುಗಳನ್ನು ಕೇಳಿ ಶ್ವೇತವಾಹನ ಕಿರೀಟಿ ಅರ್ಜುನನು ಆ ಲೋಮಹರ್ಷಣ ಮಹಾಮಾತನ್ನು ಆಡಿದನು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಶ್ರೀಕೃಷ್ಣವಾಕ್ಯಕಥನೇ ಅಷ್ಟಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಶ್ರೀಕೃಷ್ಣವಾಕ್ಯಕಥನದಲ್ಲಿ ಐವತ್ತೆಂಟನೆಯ ಅಧ್ಯಾಯವು.