056 ಸಂಜಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 56

ಸಾರ

ಪಾಂಡವರ ಸೇನೆಯಲ್ಲಿ ಯಾರ್ಯಾರನ್ನು ನೀನು ನೋಡಿದೆ ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಪಾಂಡವರ ಸೇನೆಯಲ್ಲಿರುವ ಪ್ರಮುಖರ ಕುರಿತು ಹೇಳಿ (1-11) ಅವರಿಲ್ಲಿರುವ ಯಾರು ಕುರುಸೇನೆಯ ಯಾರನ್ನು ಗುರಿಯನ್ನಾಗಿಟ್ಟುಕೊಂಡಿದ್ದಾರೆಂದು (12-25) ಹೇಳಿದುದು. ಅದನ್ನು ಕೇಳಿ ಧೃತರಾಷ್ಟ್ರನು ಯುದ್ಧಕ್ಕೆ ಹೆದರಿ ತನ್ನ ಮಾತುಗಳನ್ನು ಕೇಳದೇ ಮಕ್ಕಳು ಯುದ್ಧಮಾಡಬಯಸುತ್ತಾರೆಂದು ವಿಷಾದಿಸುವುದು (26-35). ದುರ್ಯೋಧನನು ಧೃತರಾಷ್ಟ್ರನಿಗೆ ಭರವಸೆಯನ್ನಿತ್ತರೂ (36-42), ಧೃತರಾಷ್ಟ್ರನು ಪುನಃ ಸಂಜಯನನ್ನು ಪಾಂಡವರ ಕುರಿತು ಪ್ರಶ್ನಿಸುವುದು (43-46). ಆಗ ಸಂಜಯನು ಧೃಷ್ಟದ್ಯುಮ್ನನ ಸಂದೇಶವನ್ನು ಸಭೆಯಲ್ಲಿ ಹೇಳುವುದು (47-60).

05056001 ಧೃತರಾಷ್ಟ್ರ ಉವಾಚ।
05056001a ಕಾಂಸ್ತತ್ರ ಸಂಜಯಾಪಶ್ಯಃ ಪ್ರತ್ಯರ್ಥೇನ ಸಮಾಗತಾನ್।
05056001c ಯೇ ಯೋತ್ಸ್ಯಂತೇ ಪಾಂಡವಾರ್ಥೇ ಪುತ್ರಸ್ಯ ಮಮ ವಾಹಿನೀಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಅಲ್ಲಿ. ಬೇರೆ ಬೇರೆ ಕಾರಣಗಳಿಂದ ಪಾಂಡವರಿಗಾಗಿ ನನ್ನ ಸೇನೆಯೊಡನೆ ಯುದ್ಧಮಾಡಲು ಸೇರಿರುವ ಯಾರ್ಯಾರನ್ನು ನೀನು ನೋಡಿದೆ?”

05056002 ಸಂಜಯ ಉವಾಚ।
05056002a ಮುಖ್ಯಮಂಧಕವೃಷ್ಣೀನಾಮಪಶ್ಯಂ ಕೃಷ್ಣಮಾಗತಂ।
05056002c ಚೇಕಿತಾನಂ ಚ ತತ್ರೈವ ಯುಯುಧಾನಂ ಚ ಸಾತ್ಯಕಿಂ।।

ಸಂಜಯನು ಹೇಳಿದನು: “ಅಂಧಕ-ವೃಷ್ಣಿಯರ ಮುಖ್ಯ ಕೃಷ್ಣನು ಬಂದಿರುವುದನ್ನು ನೋಡಿದೆ. ಚೇಕಿತಾನ ಮತ್ತು ಯುಯುಧಾನ ಸಾತ್ಯಕಿಯೂ ಅಲ್ಲಿದ್ದರು.

05056003a ಪೃಥಗಕ್ಷೌಹಿಣೀಭ್ಯಾಂ ತೌ ಪಾಂಡವಾನಭಿಸಂಶ್ರಿತೌ।
05056003c ಮಹಾರಥೌ ಸಮಾಖ್ಯಾತಾವುಭೌ ಪುರುಷಮಾನಿನೌ।।

ಪುರುಷಮಾನಿಗಳಾದ ಅವರಿಬ್ಬರು ಮಹಾರಥಿಗಳೂ ಒಂದೊಂದು ಅಕ್ಷೌಹಿಣೀಗಳೊಂದಿಗೆ ಪಾಂಡವನನ್ನು ಸೇರಿರುವರು.

05056004a ಅಕ್ಷೌಹಿಣ್ಯಾಥ ಪಾಂಚಾಲ್ಯೋ ದಶಭಿಸ್ತನಯೈರ್ವೃತಃ।
05056004c ಸತ್ಯಜಿತ್ಪ್ರಮುಖೈರ್ವೀರೈರ್ಧೃಷ್ಟದ್ಯುಮ್ನಪುರೋಗಮೈಃ।।
05056005a ದ್ರುಪದೋ ವರ್ಧಯನ್ಮಾನಂ ಶಿಖಂಡಿಪರಿಪಾಲಿತಃ।
05056005c ಉಪಾಯಾತ್ಸರ್ವಸೈನ್ಯಾನಾಂ ಪ್ರತಿಚ್ಚಾದ್ಯ ತದಾ ವಪುಃ।।

ಪಾಂಚಾಲ್ಯ ದ್ರುಪದನು ಅವರ ಮಾನವನ್ನು ಹೆಚ್ಚಿಸಲು ತನ್ನ ಹತ್ತು ಮಕ್ಕಳಿಂದ ಆವೃತವಾಗಿರುವ, ಸತ್ಯಜಿತನೇ ಮೊದಲಾದ ಪ್ರಮುಖ ವೀರರಿಂದ ಕೂಡಿದ, ವೀರ ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ, ಶಿಖಂಡಿಯಿಂದ ರಕ್ಷಿತವಾಗಿರುವ, ಅಕ್ಷೌಹಿಣಿಯನ್ನು ತಂದಿದ್ದಾನೆ. ಅವನ ಸೇನೆಯೆಲ್ಲವಕ್ಕೂ ಉಡುಪಿನ ವ್ಯವಸ್ಥೆಯಿದೆ.

05056006a ವಿರಾಟಃ ಸಹ ಪುತ್ರಾಭ್ಯಾಂ ಶಂಖೇನೈವೋತ್ತರೇಣ ಚ।
05056006c ಸೂರ್ಯದತ್ತಾದಿಭಿರ್ವೀರೈರ್ಮದಿರಾಶ್ವಪುರೋಗಮೈಃ।।
05056007a ಸಹಿತಃ ಪೃಥಿವೀಪಾಲೋ ಭ್ರಾತೃಭಿಸ್ತನಯೈಸ್ತಥಾ।
05056007c ಅಕ್ಷೌಹಿಣ್ಯೈವ ಸೈನ್ಯಸ್ಯ ವೃತಃ ಪಾರ್ಥಂ ಸಮಾಶ್ರಿತಃ।।

ಪೃಥಿವೀಪಾಲ ವಿರಾಟನು ಶಂಖ ಮತ್ತು ಉತ್ತರ ಈ ಇಬ್ಬರು ಪುತ್ರರೊಂದಿಗೆ, ಸೂರ್ಯದತ್ತನೇ ಮೊದಲಾದ ವೀರರೊಂದಿಗೆ, ಮದಿರಾಶ್ವನ ನಾಯಕತ್ವದಲ್ಲಿ, ಸಹೋದರರು ಮಕ್ಕಳೊಂದಿಗೆ ಅಕ್ಷೌಹಿಣೀ ಸೇನೆಯೊಂದಿಗೆ ಪಾರ್ಥನನ್ನು ಸೇರಿದ್ದಾನೆ.

05056008a ಜಾರಾಸಂಧಿರ್ಮಾಗಧಶ್ಚ ಧೃಷ್ಟಕೇತುಶ್ಚ ಚೇದಿರಾಟ್।
05056008c ಪೃಥಕ್ ಪೃಥಗನುಪ್ರಾಪ್ತೌ ಪೃಥಗಕ್ಷೌಹಿಣೀವೃತೌ।।

ಮಾಗಧಿ ಜರಾಸಂಧನ ಮಗ ಮತ್ತು ಚೇದಿರಾಜ ಧೃಷ್ಟಕೇತು ಇಬ್ಬರೂ ಒಂದೊಂದು ಅಕ್ಷೌಹಿಣೀ ಸೇನೆಯೊಂದಿಗೆ ಬಂದಿದ್ದಾರೆ.

05056009a ಕೇಕಯಾ ಭ್ರಾತರಃ ಪಂಚ ಸರ್ವೇ ಲೋಹಿತಕಧ್ವಜಾಃ।
05056009c ಅಕ್ಷೌಹಿಣೀಪರಿವೃತಾಃ ಪಾಂಡವಾನಭಿಸಂಶ್ರಿತಾಃ।।

ಐವರು ಕೇಕಯ ಸಹೋದರರೆಲ್ಲರೂ ಅವರ ಕೆಂಪುಧ್ವಜಗಳನ್ನು ಹಾರಿಸಿ, ಒಂದು ಅಕ್ಷೌಹಿಣಿಯಿಂದ ಪರಿವೃತರಾಗಿ ಪಾಂಡವರನ್ನು ಸೇರಿದ್ದಾರೆ.

05056010a ಏತಾನೇತಾವತಸ್ತತ್ರ ಯಾನಪಶ್ಯಂ ಸಮಾಗತಾನ್।
05056010c ಯೇ ಪಾಂಡವಾರ್ಥೇ ಯೋತ್ಸ್ಯಂತಿ ಧಾರ್ತರಾಷ್ಟ್ರಸ್ಯ ವಾಹಿನೀಂ।।

ಇವರೆಲ್ಲ ಅಲ್ಲಿ ಪಾಂಡವರಿಗಾಗಿ ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಲು ಬಂದು ಸೇರಿರುವುದನ್ನು ನಾನು ನೋಡಿದ್ದೇನೆ.

05056011a ಯೋ ವೇದ ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ।
05056011c ಸ ತಸ್ಯ ಸೇನಾಪ್ರಮುಖೇ ಧೃಷ್ಟದ್ಯುಮ್ನೋ ಮಹಾಮನಾಃ।।

ಮಾನುಷ, ದೇವ, ಗಂಧರ್ವ, ಅಸುರ ವ್ಯೂಹಗಳನ್ನು ತಿಳಿದಿರುವ ಮಹಾಮನಸ್ವಿ ಧೃಷ್ಟದ್ಯುಮ್ನನು ಅವನ ಆ ಸೇನೆಯ ಪ್ರಮುಖನು.

05056012a ಭೀಷ್ಮಃ ಶಾಂತನವೋ ರಾಜನ್ಭಾಗಃ ಕ್ಲುಪ್ತಃ ಶಿಖಂಡಿನಃ।
05056012c ತಂ ವಿರಾಟೋಽನು ಸಮ್ಯಾತಾ ಸಹ ಮತ್ಸ್ಯೈಃ ಪ್ರಹಾರಿಭಿಃ।।

ರಾಜನ್! ಭೀಷ್ಮ ಶಾಂತನವನನ್ನು ಶಿಖಂಡಿಯ ಪಾಲಿಗೆ ಬಿಟ್ಟುಕೊಟ್ಟಿದ್ದಾರೆ. ಸೈನಿಕ ಅಮಾತ್ಯರೊಂದಿಗೆ ಮತ್ಸ್ಯ ವಿರಾಟನು ಅವನಿಗೆ ಸಹಾಯ ಮಾಡುತ್ತಾನೆ.

05056013a ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ಭಾಗೋ ಮದ್ರಾಧಿಪೋ ಬಲೀ।
05056013c ತೌ ತು ತತ್ರಾಬ್ರುವನ್ಕೇ ಚಿದ್ವಿಷಮೌ ನೋ ಮತಾವಿತಿ।।

ಬಲಶಾಲೀ ಮದ್ರಾಧಿಪನು ಹಿರಿಯ ಪಾಂಡುಪುತ್ರನ ಪಾಲಿಗೆ ಹೋಗಿದ್ದಾನೆ. ಅಲ್ಲಿದ್ದ ಕೆಲವರು ಅವರಿಬ್ಬರೂ ವಿಷಮರು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

05056014a ದುರ್ಯೋಧನಃ ಸಹಸುತಃ ಸಾರ್ಧಂ ಭ್ರಾತೃಶತೇನ ಚ।
05056014c ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಭೀಮಸೇನಸ್ಯ ಭಾಗತಃ।।

ಮಗನೊಂದಿಗೆ ದುರ್ಯೋಧನ ಮತ್ತು ಜೊತೆಯಲ್ಲಿ ಅವನ ನೂರು ತಮ್ಮಂದಿರು, ಹಾಗೆಯೇ ಪೂರ್ವ ಮತ್ತು ದಕ್ಷಿಣದ ರಾಜರು ಭೀಮಸೇನನ ಪಾಲಿಗೆ ಹೋಗಿದ್ದಾರೆ.

05056015a ಅರ್ಜುನಸ್ಯ ತು ಭಾಗೇನ ಕರ್ಣೋ ವೈಕರ್ತನೋ ಮತಃ।
05056015c ಅಶ್ವತ್ಥಾಮಾ ವಿಕರ್ಣಶ್ಚ ಸೈಂಧವಶ್ಚ ಜಯದ್ರಥಃ।।

ಅರ್ಜುನನ ಪಾಲಿಗೆ ಕರ್ಣ ವೈಕರ್ತನ, ಅಶ್ವತ್ಥಾಮ, ವಿಕರ್ಣ ಮತ್ತು ಸೈಂಧವ ಜಯದ್ರಥರು ಬರುತ್ತಾರೆ.

05056016a ಅಶಕ್ಯಾಶ್ಚೈವ ಯೇ ಕೇ ಚಿತ್ಪೃಥಿವ್ಯಾಂ ಶೂರಮಾನಿನಃ।
05056016c ಸರ್ವಾಂಸ್ತಾನರ್ಜುನಃ ಪಾರ್ಥಃ ಕಲ್ಪಯಾಮಾಸ ಭಾಗತಃ।।

ಭೂಮಿಯಲ್ಲಿಯೇ ಶೂರರೆಂದು ತಿಳಿದಿರುವ ಇತರ ಗೆಲ್ಲಲಸಾಧ್ಯರೆಲ್ಲರೂ ಪಾರ್ಥ ಅರ್ಜುನನ ಪಾಲಿಗೆಂದೂ ಯೋಚಿಸಲಾಗಿದೆ.

05056017a ಮಹೇಷ್ವಾಸಾ ರಾಜಪುತ್ರಾ ಭ್ರಾತರಃ ಪಂಚ ಕೇಕಯಾಃ।
05056017c ಕೇಕಯಾನೇವ ಭಾಗೇನ ಕೃತ್ವಾ ಯೋತ್ಸ್ಯಂತಿ ಸಂಯುಗೇ।।

ಐವರು ಮಹೇಷ್ವಾಸ ರಾಜಪುತ್ರ ಕೇಕಯ ಸಹೋದರರು ಯುದ್ಧದಲ್ಲಿ ಕೇಕಯರನ್ನು ತಮ್ಮ ಪಾಲಿಗಿರಿಸಿಕೊಂಡು ಯುದ್ಧಮಾಡುವರು.

05056018a ತೇಷಾಮೇವ ಕೃತೋ ಭಾಗೋ ಮಾಲವಾಃ ಶಾಲ್ವಕೇಕಯಾಃ।
05056018c ತ್ರಿಗರ್ತಾನಾಂ ಚ ದ್ವೌ ಮುಖ್ಯೌ ಯೌ ತೌ ಸಂಶಪ್ತಕಾವಿತಿ।।

ಅವರು ತಮ್ಮ ಪಾಲಿಗೆ ಮಾಲವರು, ಶಾಲ್ವರು, ಕೇಕಯರು, ಮತ್ತು ತ್ರಿಗರ್ಥರ ಇಬ್ಬರು ಪ್ರಮುಖರಾದ ಸಂಶಪ್ತಕರನ್ನು ಮಾಡಿಕೊಂಡಿದ್ದಾರೆ.

05056019a ದುರ್ಯೋಧನಸುತಾಃ ಸರ್ವೇ ತಥಾ ದುಃಶಾಸನಸ್ಯ ಚ।
05056019c ಸೌಭದ್ರೇಣ ಕೃತೋ ಭಾಗೋ ರಾಜಾ ಚೈವ ಬೃಹದ್ಬಲಃ।।

ದುರ್ಯೋಧನ ಮತ್ತು ದುಃಶಾಸನನ ಮಕ್ಕಳು ಹಾಗೂ ರಾಜಾ ಬೃಹದ್ಬಲನನ್ನು ಸೌಭದ್ರಿಯು ತನ್ನ ಪಾಲಿಗೆ ಮಾಡಿಕೊಂಡಿದ್ದಾನೆ.

05056020a ದ್ರೌಪದೇಯಾ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ।
05056020c ಧೃಷ್ಟದ್ಯುಮ್ನಮುಖಾ ದ್ರೋಣಮಭಿಯಾಸ್ಯಂತಿ ಭಾರತ।।

ಭಾರತ! ಸುವರ್ಣದಿಂದ ಮಾಡಲ್ಪಟ್ಟ ಧ್ವಜಗಳನ್ನು ಹೊಂದಿದ ಮಹೇಷ್ವಾಸ ದ್ರೌಪದೇಯರು ಧೃಷ್ಟದ್ಯುಮ್ನನ ನೇತೃತ್ವದಲ್ಲಿ ದ್ರೋಣನನ್ನು ಎದುರಿಸುತ್ತಾರೆ.

05056021a ಚೇಕಿತಾನಃ ಸೋಮದತ್ತಂ ದ್ವೈರಥೇ ಯೋದ್ಧುಮಿಚ್ಚತಿ।
05056021c ಭೋಜಂ ತು ಕೃತವರ್ಮಾಣಂ ಯುಯುಧಾನೋ ಯುಯುತ್ಸತಿ।।

ಚೇಕಿತಾನನು ಸೋಮದತ್ತನೊಡನೆ ದ್ವಂದ್ವರಥ ಯುದ್ಧಮಾಡಲು ಬಯಸುತ್ತಾನೆ. ಯುಯುಧಾನನು ಭೋಜ ಕೃತವರ್ಮನೊಡನೆ ಯುದ್ಧ ಮಾಡುತ್ತಾನೆ.

05056022a ಸಹದೇವಸ್ತು ಮಾದ್ರೇಯಃ ಶೂರಃ ಸಂಕ್ರಂದನೋ ಯುಧಿ।
05056022c ಸ್ವಮಂಶಂ ಕಲ್ಪಯಾಮಾಸ ಶ್ಯಾಲಂ ತೇ ಸುಬಲಾತ್ಮಜಂ।।

ಯುದ್ಧದಲ್ಲಿ ಆಕ್ರಂದನಗೈಯುವ ಶೂರ ಮಾದ್ರೇಯ ಸಹದೇವನು ನಿನ್ನ ಬಾವ ಸುಬಲಾತ್ಮಜನು ತನಗೆಂದು ಯೋಚಿಸಿದ್ದಾನೆ.

05056023a ಉಲೂಕಂ ಚಾಪಿ ಕೈತವ್ಯಂ ಯೇ ಚ ಸಾರಸ್ವತಾ ಗಣಾಃ।
05056023c ನಕುಲಃ ಕಲ್ಪಯಾಮಾಸ ಭಾಗಂ ಮಾದ್ರವತೀಸುತಃ।।

ಉಲೂಕ ಕೈತವ್ಯ ಮತ್ತು ಸಾರಸ್ವತ ಗಣಗಳು ಮಾದ್ರವತೀಸುತ ನಕುಲನ ಪಾಲಿಗೆಂದು ಯೋಚಿಸಿದ್ದಾರೆ.

05056024a ಯೇ ಚಾನ್ಯೇ ಪಾರ್ಥಿವಾ ರಾಜನ್ಪ್ರತ್ಯುದ್ಯಾಸ್ಯಂತಿ ಸಂಯುಗೇ।
05056024c ಸಮಾಹ್ವಾನೇನ ತಾಂಶ್ಚಾಪಿ ಪಾಂಡುಪುತ್ರಾ ಅಕಲ್ಪಯನ್।।

ರಾಜನ್! ಇತರ ಪಾರ್ಥಿವರನ್ನು ಪಾಂಡುಪುತ್ರರು ಯುದ್ಧದಲ್ಲಿ ಯಾರು ಯಾರನ್ನು ಎದುರಿಸುವರೋ ಅದರಂತೆ ಪಾಲುಹಂಚುತ್ತಾರೆ.

05056025a ಏವಮೇಷಾಮನೀಕಾನಿ ಪ್ರವಿಭಕ್ತಾನಿ ಭಾಗಶಃ।
05056025c ಯತ್ತೇ ಕಾರ್ಯಂ ಸಪುತ್ರಸ್ಯ ಕ್ರಿಯತಾಂ ತದಕಾಲಿಕಂ।।

ಈ ರೀತಿಯಲ್ಲಿ ಸೇನೆಗಳು ಭಾಗ ಭಾಗಗಳಾಗಿ ಹಂಚಲ್ಪಟ್ಟಿವೆ. ಈಗ ನೀನು ಮತ್ತು ನಿನ್ನ ಮಗನು ಕಾರ್ಯವೆಸಗುವುದರಲ್ಲಿ ವಿಳಂಬ ಮಾಡಬಾರದು.”

05056026 ಧೃತರಾಷ್ಟ್ರ ಉವಾಚ।
05056026a ನ ಸಂತಿ ಸರ್ವೇ ಪುತ್ರಾ ಮೇ ಮೂಢಾ ದುರ್ದ್ಯೂತದೇವಿನಃ।
05056026c ಯೇಷಾಂ ಯುದ್ಧಂ ಬಲವತಾ ಭೀಮೇನ ರಣಮೂರ್ಧನಿ।।

ಧೃತರಾಷ್ಟ್ರನು ಹೇಳಿದನು: “ಕೆಟ್ಟ ದ್ಯೂತವನ್ನಾಡಿದ ಜೂಜುಗಾರ ಮೂಢ ನನ್ನ ಮಕ್ಕಳು ಜೋರಾಗಿ ನಡೆಯುವ ರಣದಲ್ಲಿ ಬಲವಂತ ಭೀಮನೊಡನೆ ಯುದ್ಧಮಾಡಿ ಇಲ್ಲವಾಗುತ್ತಾರೆ.

05056027a ರಾಜಾನಃ ಪಾರ್ಥಿವಾಃ ಸರ್ವೇ ಪ್ರೋಕ್ಷಿತಾಃ ಕಾಲಧರ್ಮಣಾ।
05056027c ಗಾಂಡೀವಾಗ್ನಿಂ ಪ್ರವೇಕ್ಷ್ಯಂತಿ ಪತಂಗಾ ಇವ ಪಾವಕಂ।।

ಕಾಲಧರ್ಮದಿಂದ ಪ್ರೋಕ್ಷಿತರಾದ ಪಾರ್ಥಿವ ರಾಜರೆಲ್ಲರೂ ಬೆಂಕಿಗೆ ಬೀಳುವ ಪತಂಗಗಳಂತೆ ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತಾರೆ.

05056028a ವಿದ್ರುತಾಂ ವಾಹಿನೀಂ ಮನ್ಯೇ ಕೃತವೈರೈರ್ಮಹಾತ್ಮಭಿಃ।
05056028c ತಾಂ ರಣೇ ಕೇಽನುಯಾಸ್ಯಂತಿ ಪ್ರಭಗ್ನಾಂ ಪಾಂಡವೈರ್ಯುಧಿ।।

ಆ ಮಹಾತ್ಮರ ವೈರಸಾಧನೆಯಿಂದ ನನ್ನ ಸೇನೆಯು ನಾಶವಾದುದನ್ನು ಈಗಲೇ ಕಾಣುತ್ತಿದ್ದೇನೆ. ರಣದಲ್ಲಿ ಪಾಂಡವರೊಂದಿಗೆ ಯುದ್ಧಮಾಡಿ ಪುಡಿಯಾಗಿರುವ ಸೇನೆಯನ್ನು ಯಾರುತಾನೇ ಅನುಸರಿಸುತ್ತಾರೆ?

05056029a ಸರ್ವೇ ಹ್ಯತಿರಥಾಃ ಶೂರಾಃ ಕೀರ್ತಿಮಂತಃ ಪ್ರತಾಪಿನಃ।
05056029c ಸೂರ್ಯಪಾವಕಯೋಸ್ತುಲ್ಯಾಸ್ತೇಜಸಾ ಸಮಿತಿಂಜಯಾಃ।।
05056030a ಯೇಷಾಂ ಯುಧಿಷ್ಠಿರೋ ನೇತಾ ಗೋಪ್ತಾ ಚ ಮಧುಸೂದನಃ।
05056030c ಯೋಧೌ ಚ ಪಾಂಡವೌ ವೀರೌ ಸವ್ಯಸಾಚಿವೃಕೋದರೌ।।
05056031a ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
05056031c ಸಾತ್ಯಕಿರ್ದ್ರುಪದಶ್ಚೈವ ಧೃಷ್ಟದ್ಯುಮ್ನಸ್ಯ ಚಾತ್ಮಜಃ।।
05056032a ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ।
05056032c ಶಿಖಂಡೀ ಕ್ಷತ್ರದೇವಶ್ಚ ತಥಾ ವೈರಾಟಿರುತ್ತರಃ।।
05056033a ಕಾಶಯಶ್ಚೇದಯಶ್ಚೈವ ಮತ್ಸ್ಯಾಃ ಸರ್ವೇ ಚ ಸೃಂಜಯಾಃ।
05056033c ವಿರಾಟಪುತ್ರೋ ಬಭ್ರೂಶ್ಚ ಪಾಂಚಾಲಾಶ್ಚ ಪ್ರಭದ್ರಕಾಃ।।

ಯುಧಿಷ್ಠಿರನ ನೇತೃತ್ವದಲ್ಲಿರುವ ಮತ್ತು ಮಧುಸೂದನನ ರಕ್ಷಣೆಯಲ್ಲಿರುವ ಇವರೆಲ್ಲರೂ - ಇಬ್ಬರು ಪಾಂಡವ ವೀರ ಯೋಧರಾದ ಸವ್ಯಸಾಚಿ-ವೃಕೋದರರು. ನಕುಲ-ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ಸಾತ್ಯಕಿ, ದ್ರುಪದ, ಧೃಷ್ಟದ್ಯುಮ್ನನ ಮಗ, ಉತ್ತಮೌಜ ಪಾಂಚಾಲ್ಯ, ಯುಧಾಮನ್ಯು ದುರ್ಜಯ, ಶಿಖಂಡಿ, ಕ್ಷತ್ರದೇವ, ವೈರಾಟೀ ಉತ್ತರ, ಕಾಶಿರಾಜ, ಚೇದಿರಾಜ, ಮತ್ಸ್ಯರು, ಸರ್ವ ಸೃಂಜಯರು, ವಿರಾಟಪುತ್ರ ಬಭ್ರು, ಪಾಂಚಾಲ ಪ್ರಭದ್ರಕ - ಎಲ್ಲರೂ ಅತಿರಥರು, ಶೂರರು, ಕೀರ್ತಿಮಂತರು, ಪ್ರತಾಪಿಗಳು, ತೇಜಸ್ಸಿನಲ್ಲಿ ಸೂರ್ಯ-ಪಾವಕರ ಸಮಾನರು ಮತ್ತು ಯುದ್ಧಗಳಲ್ಲಿ ಜಯಗಳಿಸಿದವರು.

05056034a ಯೇಷಾಮಿಂದ್ರೋಽಪ್ಯಕಾಮಾನಾಂ ನ ಹರೇತ್ಪೃಥಿವೀಮಿಮಾಂ।
05056034c ವೀರಾಣಾಂ ರಣಧೀರಾಣಾಂ ಯೇ ಭಿಂದ್ಯುಃ ಪರ್ವತಾನಪಿ।।

ಇವರು ಬಯಸದಿದ್ದರೆ ಇಂದ್ರನೂ ಕೂಡ ಇವರಿಂದ ಈ ಭೂಮಿಯನ್ನು ಕಸಿದುಕೊಳ್ಳಲಾರ. ಈ ವೀರರು, ರಣಧೀರರು ಪರ್ವತವನ್ನೂ ಪುಡಿಮಾಡಿಯಾರು!

05056035a ತಾನ್ಸರ್ವಾನ್ಗುಣಸಂಪನ್ನಾನಮನುಷ್ಯಪ್ರತಾಪಿನಃ।
05056035c ಕ್ರೋಶತೋ ಮಮ ದುಷ್ಪುತ್ರೋ ಯೋದ್ಧುಮಿಚ್ಚತಿ ಸಂಜಯ।।

ಆ ಎಲ್ಲ ಗುಣಸಂಪನ್ನರನ್ನೂ, ಅಮನುಷ್ಯರನ್ನೂ, ಪ್ರತಾಪಿಗಳನ್ನೂ, ನಾನು ಕೂಗಿ ಅಳುತ್ತಿದ್ದರೂ, ನನ್ನ ದುಷ್ಪುತ್ರರು ಯುದ್ಧಮಾಡಬಯಸುತ್ತಾರೆ ಸಂಜಯ!”

05056036 ದುರ್ಯೋಧನ ಉವಾಚ।
05056036a ಉಭೌ ಸ್ವ ಏಕಜಾತೀಯೌ ತಥೋಭೌ ಭೂಮಿಗೋಚರೌ।
05056036c ಅಥ ಕಸ್ಮಾತ್ಪಾಂಡವಾನಾಮೇಕತೋ ಮನ್ಯಸೇ ಜಯಂ।।

ದುರ್ಯೋಧನನು ಹೇಳಿದನು: “ನಾವಿಬ್ಬರೂ ಒಂದೇ ಜಾತಿಯವರು. ಹಾಗೆಯೇ ಇಬ್ಬರೂ ಭೂಮಿಯ ಮೇಲೇ ನಡೆಯುವವರು. ಹಾಗಿರುವಾಗ ಪಾಂಡವರಿಗೆ ಮಾತ್ರ ಜಯವೆಂದು ನೀನು ಹೇಗೆ ಹೇಳುತ್ತೀಯೆ?

05056037a ಪಿತಾಮಹಂ ಚ ದ್ರೋಣಂ ಚ ಕೃಪಂ ಕರ್ಣಂ ಚ ದುರ್ಜಯಂ।
05056037c ಜಯದ್ರಥಂ ಸೋಮದತ್ತಮಶ್ವತ್ಥಾಮಾನಮೇವ ಚ।।
05056038a ಸುಚೇತಸೋ ಮಹೇಷ್ವಾಸಾನಿಂದ್ರೋಽಪಿ ಸಹಿತೋಽಮರೈಃ।
05056038c ಅಶಕ್ತಃ ಸಮರೇ ಜೇತುಂ ಕಿಂ ಪುನಸ್ತಾತ ಪಾಂಡವಾಃ।।

ಪಿತಾಮಹ, ದ್ರೋಣ, ಕೃಪ, ದುರ್ಜಯ ಕರ್ಣ, ಜಯದ್ರಥ, ಸೋಮದತ್ತ, ಅಶ್ವತ್ಥಾಮ ಇವರೂ ಕೂಡ ಸುಚೇತಸರು, ಮಹೇಷ್ವಾಸರು, ಮತ್ತು ಸಮರದಲ್ಲಿ ಅವರನ್ನು ದೇವತೆಗಳ ಸಹಿತ ಇಂದ್ರನೂ ಗೆಲ್ಲಲು ಅಶಕ್ತನಾಗಿರುವಾಗ ಇನ್ನು ಪಾಂಡವರು ಯಾವ ಲೆಖ್ಕಕ್ಕೆ?

05056039a ಸರ್ವಾ ಚ ಪೃಥಿವೀ ಸೃಷ್ಟಾ ಮದರ್ಥೇ ತಾತ ಪಾಂಡವಾನ್।
05056039c ಆರ್ಯಾನ್ಧೃತಿಮತಃ ಶೂರಾನಗ್ನಿಕಲ್ಪಾನ್ಪ್ರಬಾಧಿತುಂ।।

ಅಪ್ಪಾ! ಈ ಭೂಮಿಯೆಲ್ಲವೂ ನನಗಾಗಿಯೇ ಸೃಷ್ಟಿಯಾಗಿದೆ - ಆರ್ಯರಾದ, ಧೃತಿಮತರಾದ, ಅಗ್ನಿಯಂತೆ ಶೂರರಾದ ಪಾಂಡವರನ್ನು ಕಾಡಿಸಲು.

05056040a ನ ಮಾಮಕಾನ್ಪಾಂಡವಾಸ್ತೇ ಸಮರ್ಥಾಃ ಪ್ರತಿವೀಕ್ಷಿತುಂ।
05056040c ಪರಾಕ್ರಾಂತೋ ಹ್ಯಹಂ ಪಾಂಡೂನ್ಸಪುತ್ರಾನ್ಯೋದ್ಧುಮಾಹವೇ।।

ನನ್ನವರನ್ನು ನಿನ್ನ ಪಾಂಡವರು ತಿರುಗಿ ನೋಡಲೂ ಅಸಮರ್ಥರು. ಪಾರಾಕ್ರಾಂತರಾದ ಇವರು ಪಾಂಡವರನ್ನು ಅವರ ಮಕ್ಕಳೊಂದಿಗೆ ಯುದ್ಧದಲ್ಲಿ ಹೋರಾಡುತ್ತಾರೆ.

05056041a ಮತ್ಪ್ರಿಯಂ ಪಾರ್ಥಿವಾಃ ಸರ್ವೇ ಯೇ ಚಿಕೀರ್ಷಂತಿ ಭಾರತ।
05056041c ತೇ ತಾನಾವಾರಯಿಷ್ಯಂತಿ ಐಣೇಯಾನಿವ ತಂತುನಾ।।

ಭಾರತ! ನನ್ನ ಈ ಪ್ರಿಯ ಪಾರ್ಥಿವರೆಲ್ಲರೂ ಬಲೆಯನ್ನು ಬೀಸಿ ಜಿಂಕೆಗಳನ್ನು ತಡೆಯುವಂತೆ ಅವರನ್ನು ತಡೆಯಲು ಬಯಸುತ್ತಾರೆ.

05056042a ಮಹತಾ ರಥವಂಶೇನ ಶರಜಾಲೈಶ್ಚ ಮಾಮಕೈಃ।
05056042c ಅಭಿದ್ರುತಾ ಭವಿಷ್ಯಂತಿ ಪಾಂಚಾಲಾಃ ಪಾಂಡವೈಃ ಸಹ।।

ನನ್ನವರ ಮಹಾ ರಥಸಮೂಹಗಳಿಂದ ಮತ್ತು ಶರಜಾಲಗಳಿಂದ ಪಾಂಚಾಲರೊಂದಿಗೆ ಪಾಂಡವರು ಇಲ್ಲವಾಗುತ್ತಾರೆ.”

05056043 ಧೃತರಾಷ್ಟ್ರ ಉವಾಚ।
05056043a ಉನ್ಮತ್ತ ಇವ ಮೇ ಪುತ್ರೋ ವಿಲಪತ್ಯೇಷ ಸಂಜಯ।
05056043c ನ ಹಿ ಶಕ್ತೋ ಯುಧಾ ಜೇತುಂ ಧರ್ಮರಾಜಂ ಯುಧಿಷ್ಠಿರಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಹುಚ್ಚುಹಿಡಿದವನಂತೆ ನನ್ನ ಮಗನು ವಿಲಪಿಸುತ್ತಿದ್ದಾನೆ. ಧರ್ಮರಾಜ ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲುವುದಕ್ಕೆ ಇವನು ಶಕ್ತನಿಲ್ಲ.

05056044a ಜಾನಾತಿ ಹಿ ಸದಾ ಭೀಷ್ಮಃ ಪಾಂಡವಾನಾಂ ಯಶಸ್ವಿನಾಂ।
05056044c ಬಲವತ್ತಾಂ ಸಪುತ್ರಾಣಾಂ ಧರ್ಮಜ್ಞಾನಾಂ ಮಹಾತ್ಮನಾಂ।।

ಸುಪುತ್ರರಾದ, ಬಲವತ್ತರಾಗಿರುವ, ಧರ್ಮಜ್ಞರಾದ, ಮಹಾತ್ಮ, ಯಶಸ್ವಿ ಪಾಂಡವರ ಕುರಿತು ಭೀಷ್ಮನಿಗೆ ಸದಾ ತಿಳಿದಿದೆ.

05056045a ಯತೋ ನಾರೋಚಯಮಹಂ ವಿಗ್ರಹಂ ತೈರ್ಮಹಾತ್ಮಭಿಃ।
05056045c ಕಿಂ ತು ಸಂಜಯ ಮೇ ಬ್ರೂಹಿ ಪುನಸ್ತೇಷಾಂ ವಿಚೇಷ್ಟಿತಂ।।

ಅವನು ಆ ಮಹಾತ್ಮರೊಡನೆ ಯುದ್ಧಮಾಡಲು ಇಷ್ಟಪಡುವುದಿಲ್ಲ. ಸಂಜಯ! ನನಗೆ ಇನ್ನೂ ಪುನಃ ಅವರು ಏನುಮಾಡುತ್ತಿದ್ದಾರೆ ಎನ್ನುವುದನ್ನು ಹೇಳು.

05056046a ಕಸ್ತಾಂಸ್ತರಸ್ವಿನೋ ಭೂಯಃ ಸಂದೀಪಯತಿ ಪಾಂಡವಾನ್।
05056046c ಅರ್ಚಿಷ್ಮತೋ ಮಹೇಷ್ವಾಸಾನ್ ಹವಿಷಾ ಪಾವಕಾನಿವ।।

ಯಾವ ತರಸ್ವಿಯು ಮಹೇಷ್ವಾಸ ಪಾಂಡವರನ್ನು ಪುನಃ ಪುನಃ, ಯಾಜ್ಞಿಕರು ತುಪ್ಪದ ಆಹುತಿಯನ್ನು ಅಗ್ನಿಯಲ್ಲಿ ಹಾಗಿ ಉರಿಸುವಂತೆ ಉರಿಸುತ್ತಿದ್ದಾನೆ?”

05056047 ಸಂಜಯ ಉವಾಚ।
05056047a ಧೃಷ್ಟದ್ಯುಮ್ನಃ ಸದೈವೈತಾನ್ಸಂದೀಪಯತಿ ಭಾರತ।
05056047c ಯುಧ್ಯಧ್ವಮಿತಿ ಮಾ ಭೈಷ್ಟ ಯುದ್ಧಾದ್ಭರತಸತ್ತಮಾಃ।।

ಸಂಜಯನು ಹೇಳಿದನು: “ಭಾರತ! “ಯುದ್ಧಮಾಡಿ! ಯುದ್ಧಕ್ಕೆ ಹೆದರಬೇಡಿ!” ಎಂದು ಧೃಷ್ಟದ್ಯುಮ್ನನು ಸದಾ ಆ ಭರತಸತ್ತಮರನ್ನು ಉರಿಸುತ್ತಿದ್ದಾನೆ.

05056048a ಯೇ ಕೇ ಚಿತ್ಪಾರ್ಥಿವಾಸ್ತತ್ರ ಧಾರ್ತರಾಷ್ಟ್ರೇಣ ಸಂವೃತಾಃ।
05056048c ಯುದ್ಧೇ ಸಮಾಗಮಿಷ್ಯಂತಿ ತುಮುಲೇ ಕವಚಹ್ರದೇ।।

“ಧಾರ್ತರಾಷ್ಟ್ರನನ್ನು ಸುತ್ತುವರೆದಿರುವ ಆ ಕೆಲವು ಪಾರ್ಥಿವರು ಯುದ್ಧದ ಹೋರಾಟದಲ್ಲಿ ಆಯುಧಗಳ ಹೊಡೆತವನ್ನು ಎದುರಿಸುವವರಿದ್ದಾರೆ.

05056049a ತಾನ್ಸರ್ವಾನಾಹವೇ ಕ್ರುದ್ಧಾನ್ಸಾನುಬಂಧಾನ್ಸಮಾಗತಾನ್।
05056049c ಅಹಮೇಕಃ ಸಮಾದಾಸ್ಯೇ ತಿಮಿರ್ಮತ್ಸ್ಯಾನಿವೌದಕಾನ್।।

ತಿಮಿಂಗಿಲವು ನೀರಿನಲ್ಲಿರುವ ಮೀನುಗಳನ್ನು ಹೇಗೋ ಹಾಗೆ ನಾನೊಬ್ಬನೇ ಕೃದ್ಧರಾಗಿ ಬಂಧುಗಳೊಂದಿಗೆ ಸೇರಿರುವ ಎಲ್ಲರನ್ನೂ ಯುದ್ಧದಲ್ಲಿ ನಾಶಗೊಳಿಸುತ್ತೇನೆ.

05056050a ಭೀಷ್ಮಂ ದ್ರೋಣಂ ಕೃಪಂ ಕರ್ಣಂ ದ್ರೌಣಿಂ ಶಲ್ಯಂ ಸುಯೋಧನಂ।
05056050c ಏತಾಂಶ್ಚಾಪಿ ನಿರೋತ್ಸ್ಯಾಮಿ ವೇಲೇವ ಮಕರಾಲಯಂ।।

ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೌಣಿ, ಶಲ್ಯ, ಸುಯೋಧನ ಇವರನ್ನೂ ಕೂಡ ಸಮುದ್ರದ ದಡವು ಅಲೆಗಳನ್ನು ತಡೆಯುವಂತೆ ತಡೆಯುತ್ತೇನೆ.”

05056051a ತಥಾ ಬ್ರುವಾಣಂ ಧರ್ಮಾತ್ಮಾ ಪ್ರಾಹ ರಾಜಾ ಯುಧಿಷ್ಠಿರಃ।
05056051c ತವ ಧೈರ್ಯಂ ಚ ವೀರ್ಯಂ ಚ ಪಾಂಚಾಲಾಃ ಪಾಂಡವೈಃ ಸಹ।
05056051e ಸರ್ವೇ ಸಮಧಿರೂಢಾಃ ಸ್ಮ ಸಂಗ್ರಾಮಾನ್ನಃ ಸಮುದ್ಧರ।।

ಹಾಗೆ ಹೇಳುತ್ತಿದ್ದ ಅವನಿಗೆ ಧರ್ಮಾತ್ಮ ರಾಜಾ ಯುಧಿಷ್ಠಿರನು ಹೇಳಿದನು: “ಪಾಂಚಾಲರೊಂದಿಗೆ ಪಾಂಡವರು ಎಲ್ಲರೂ ನಿನ್ನ ಧೈರ್ಯ, ವೀರ್ಯಗಳನ್ನು ಅವಲಂಬಿಸಿದ್ದಾರೆ. ಈ ಸಂಗ್ರಾಮದಿಂದ ನಮ್ಮನ್ನು ರಕ್ಷಿಸಿ ಉದ್ಧರಿಸು.

05056052a ಜಾನಾಮಿ ತ್ವಾಂ ಮಹಾಬಾಹೋ ಕ್ಷತ್ರಧರ್ಮೇ ವ್ಯವಸ್ಥಿತಂ।
05056052c ಸಮರ್ಥಮೇಕಂ ಪರ್ಯಾಪ್ತಂ ಕೌರವಾಣಾಂ ಯುಯುತ್ಸತಾಂ।।

ಮಹಾಬಾಹೋ! ನೀನು ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದೀಯೆ ಎಂದು ತಿಳಿದಿದ್ದೇನೆ. ಕೌರವರೊಂದಿಗೆ ಯುದ್ಧಮಾಡಲು ನೀನೊಬ್ಬನೇ ಸಮರ್ಥನಾಗಿದ್ದೀಯೆ.

05056052e ಭವತಾ ಯದ್ವಿಧಾತವ್ಯಂ ತನ್ನಃ ಶ್ರೇಯಃ ಪರಂತಪ।।
05056053a ಸಂಗ್ರಾಮಾದಪಯಾತಾನಾಂ ಭಗ್ನಾನಾಂ ಶರಣೈಷಿಣಾಂ।

ಪರಂತಪ! ಸಂಗ್ರಾಮಕ್ಕೆ ಸಿದ್ಧರಾಗಿ ಅವರು ನಮ್ಮ ಎದಿರು ಬಂದಾಗ ನೀನು ರಚಿಸುವ ವ್ಯೂಹವು ನಮಗೆ ಶ್ರೇಯಸ್ಕರವಾಗಿರುತ್ತದೆ.

05056053c ಪೌರುಷಂ ದರ್ಶಯಂ ಶೂರೋ ಯಸ್ತಿಷ್ಠೇದಗ್ರತಃ ಪುಮಾನ್।।
05056053e ಕ್ರೀಣೀಯಾತ್ತಂ ಸಹಸ್ರೇಣ ನೀತಿಮನ್ನಾಮ ತತ್ಪದಂ।।

ಪೌರುಷವನ್ನು ತೋರಿಸಿದ ಶೂರನು ಸೈನಿಕರನ್ನು ಮುಂದೆ ನಿಲ್ಲಿಸಿಕೊಂಡು ಹೋರಾಡುವವನನ್ನು ಸಹಸ್ರವನ್ನು ಕೊಟ್ಟಾದರೂ ಪಡೆಯಬೇಕೆಂದು ನೀತಿಯನ್ನು ತಿಳಿದವರು ಹೇಳುತ್ತಾರೆ.

05056054a ಸ ತ್ವಂ ಶೂರಶ್ಚ ವೀರಶ್ಚ ವಿಕ್ರಾಂತಶ್ಚ ನರರ್ಷಭ।
05056054c ಭಯಾರ್ತಾನಾಂ ಪರಿತ್ರಾತಾ ಸಮ್ಯುಗೇಷು ನ ಸಂಶಯಃ।।

ನರರ್ಷಭ! ನೀನು ಶೂರ, ವೀರ ಮತ್ತು ವಿಕ್ರಾಂತ. ಯುದ್ಧದಲ್ಲಿ ಭಯಾರ್ತರ ಪರಿತ್ರಾತಾ ಎನ್ನುವುದರಲ್ಲಿ ಸಂಶಯವಿಲ್ಲ.”

05056055a ಏವಂ ಬ್ರುವತಿ ಕೌಂತೇಯೇ ಧರ್ಮಾತ್ಮನಿ ಯುಧಿಷ್ಠಿರೇ।
05056055c ಧೃಷ್ಟದ್ಯುಮ್ನ ಉವಾಚೇದಂ ಮಾಂ ವಚೋ ಗತಸಾಧ್ವಸಃ।।

ಧರ್ಮಾತ್ಮ ಕೌಂತೇಯ ಯುಧಿಷ್ಠಿರನು ಈ ರೀತಿ ಹೇಳಲು ಧೃಷ್ಟದ್ಯುಮ್ನನು, ಭಯವಿಲ್ಲದೇ, ನನಗೆ ಈ ಮಾತುಗಳನ್ನು ಹೇಳಿದನು:

05056056a ಸರ್ವಾಂ ಜನಪದಾನ್ನ್ಸೂ ಯೋಧಾ ದುರ್ಯೋಧನಸ್ಯ ಯೇ।
05056056c ಸಬಾಹ್ಲೀಕಾನ್ಕುರೂನ್ಬ್ರೂಯಾಃ ಪ್ರಾತಿಪೇಯಾಂ ಶರದ್ವತಃ।।
05056057a ಸೂತಪುತ್ರಂ ತಥಾ ದ್ರೋಣಂ ಸಹಪುತ್ರಂ ಜಯದ್ರಥಂ।
05056057c ದುಃಶಾಸನಂ ವಿಕರ್ಣಂ ಚ ತಥಾ ದುರ್ಯೋಧನಂ ನೃಪಂ।।

“ಸೂತ! ದುರ್ಯೋಧನನಲ್ಲಿರುವ ಎಲ್ಲ ಜನಪದ ಯೋಧರಿಗೆ, ಬಾಹ್ಲೀಕನೇ ಮೊದಲಾದ ಪ್ರಾತಿಪೇಯ ಕುರುಗಳಿಗೆ, ಶರದ್ವತ, ಸೂತಪುತ್ರ, ದ್ರೋಣ, ಅವನ ಮಗ, ಜಯದ್ರಥ, ದುಃಶಾಸನ, ವಿಕರ್ಣ ಮತ್ತು ನೃಪ ದುರ್ಯೋಧನನಿಗೆ ಹೇಳು.

05056058a ಭೀಷ್ಮಂ ಚೈವ ಬ್ರೂಹಿ ಗತ್ವಾ ತ್ವಮಾಶು ಯುಧಿಷ್ಠಿರಂ ಸಾಧುನೈವಾಭ್ಯುಪೇತ।
05056058c ಮಾ ವೋ ವಧೀದರ್ಜುನೋ ದೇವಗುಪ್ತಃ ಕ್ಷಿಪ್ರಂ ಯಾಚಧ್ವಂ ಪಾಂಡವಂ ಲೋಕವೀರಂ।।

ಭೀಷ್ಮನಿಗೆ ಕೂಡ ಹೋಗಿ ಹೇಳು. “ಯುಧಿಷ್ಠಿರನೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳಿ. ದೇವತೆಗಳಿಂದ ರಕ್ಷಿಸಲ್ಪಟ್ಟಿರುವ ಅರ್ಜುನನಿಂದ ವಧೆಗೊಳ್ಳಬೇಡಿ. ಬೇಗನೇ ಲೋಕವೀರ ಪಾಂಡವನನ್ನು ಬೇಡಿಕೊಳ್ಳಿ.

05056059a ನೈತಾದೃಶೋ ಹಿ ಯೋಧೋಽಸ್ತಿ ಪೃಥಿವ್ಯಾಮಿಹ ಕಶ್ಚನ।
05056059c ಯಥಾವಿಧಃ ಸವ್ಯಸಾಚೀ ಪಾಂಡವಃ ಶಸ್ತ್ರವಿತ್ತಮಃ।।

ಶಸ್ತ್ರವಿತ್ತಮ ಪಾಂಡವ ಸವ್ಯಸಾಚಿಯಿರುವ ಹಾಗೆ ಬೇರೆ ಯಾವ ಯೋಧನೂ ಈ ಭೂಮಿಯ ಮೇಲೆ ಇಲ್ಲ.

05056060a ದೇವೈರ್ಹಿ ಸಂಭೃತೋ ದಿವ್ಯೋ ರಥೋ ಗಾಂಡೀವಧನ್ವನಃ।
05056060c ನ ಸ ಜೇಯೋ ಮನುಷ್ಯೇಣ ಮಾ ಸ್ಮ ಕೃಧ್ವಂ ಮನೋ ಯುಧಿ।।

ಗಾಂಡೀವಧನ್ವಿಯ ದಿವ್ಯ ರಥವು ದೇವತೆಗಳಿಂದಲೇ ರಕ್ಷಿತವಾಗಿದೆ. ಮನುಷ್ಯರಿಂದ ಅವನನ್ನು ಗೆಲ್ಲಲಿಕ್ಕಾಗುವುದಿಲ್ಲ. ಆದುದರರಿಂದ ಯುದ್ಧಕ್ಕೆ ಮನಸ್ಸು ಮಾಡಬೇಡಿ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಷಟ್‌ಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ತಾರನೆಯ ಅಧ್ಯಾಯವು.