ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 54
ಸಾರ
“ನಮಗಾಗಿ ನೀನು ಶೋಕಿಸಬೇಕಿಲ್ಲ. ಹೆದರಬೇಕಿಲ್ಲ. ನಾವು ಶತ್ರುಗಳನ್ನು ಸಮರದಲ್ಲಿ ಜಯಿಸಲು ಸಮರ್ಥರಾಗಿದ್ದೇವೆ.” ಎಂದು ತನ್ನ ಜೊತೆಗಿರುವ ಭೀಷ್ಮ, ದ್ರೋಣ, ಕೃಪ, ಕರ್ಣ ಮೊದಲಾದವರ ಪರಾಕ್ರಮವನ್ನು ವರ್ಣಿಸುತ್ತಾ ದುರ್ಯೋಧನನು ಧೃತರಾಷ್ಟ್ರನಿಗೆ ಆಶ್ವಾಸನೆಯನ್ನು ನೀಡಿದುದು (1-66).
05054001 ದುರ್ಯೋಧನ ಉವಾಚ।
05054001a ನ ಭೇತವ್ಯಂ ಮಹಾರಾಜ ನ ಶೋಚ್ಯಾ ಭವತಾ ವಯಂ।
05054001c ಸಮರ್ಥಾಃ ಸ್ಮ ಪರಾನ್ರಾಜನ್ವಿಜೇತುಂ ಸಮರೇ ವಿಭೋ।।
ದುರ್ಯೋಧನನು ಹೇಳಿದನು: “ಮಹಾರಾಜ! ನಮಗಾಗಿ ನೀನು ಶೋಕಿಸಬೇಕಿಲ್ಲ. ಹೆದರಬೇಕಿಲ್ಲ. ರಾಜನ್! ವಿಭೋ! ನಾವು ಶತ್ರುಗಳನ್ನು ಸಮರದಲ್ಲಿ ಜಯಿಸಲು ಸಮರ್ಥರಾಗಿದ್ದೇವೆ.
05054002a ವನಂ ಪ್ರವ್ರಾಜಿತಾನ್ಪಾರ್ಥಾನ್ಯದಾಯಾನ್ಮಧುಸೂದನಃ।
05054002c ಮಹತಾ ಬಲಚಕ್ರೇಣ ಪರರಾಷ್ಟ್ರಾವಮರ್ದಿನಾ।।
05054003a ಕೇಕಯಾ ಧೃಷ್ಟಕೇತುಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
05054003c ರಾಜಾನಶ್ಚಾನ್ವಯುಃ ಪಾರ್ಥಾನ್ಬಹವೋಽನ್ಯೇಽನುಯಾಯಿನಃ।।
ಪಾರ್ಥರು ವನಕ್ಕೆ ತೆರಳಿದಾಗ ಮಧುಸೂದನನು ಪರರಾಷ್ಟ್ರಗಳನ್ನು ಮರ್ದಿಸಿದ ಕೇಕಯ, ಧೃಷ್ಟಕೇತು, ಪಾರ್ಷತ ಧೃಷ್ಟದ್ಯುಮ್ನ ಮತ್ತು ಪಾರ್ಥರನ್ನು ಅನುಯಾಯಿಸಿದ ಅನ್ಯ ರಾಜರ ಬೃಹತ್ತಾದ ಮಹಾ ಸೇನೆಯನ್ನು ಒಂದುಗೂಡಿಸಿ ಬಂದಿದ್ದನು.
05054004a ಇಂದ್ರಪ್ರಸ್ಥಸ್ಯ ಚಾದೂರಾತ್ಸಮಾಜಗ್ಮುರ್ಮಹಾರಥಾಃ।
05054004c ವ್ಯಗರ್ಹಯಂಶ್ಚ ಸಂಗಮ್ಯ ಭವಂತಂ ಕುರುಭಿಃ ಸಹ।।
ಇಂದ್ರಪ್ರಸ್ಥದ ಅನತಿದೂರದಲ್ಲಿಯೇ ಆ ಮಹಾರಥರು ಬಂದು ಸೇರಿ ನಿನ್ನ ಮತ್ತು ಕುರುಗಳ ವಿರುದ್ಧ ವ್ಯವಹರಿಸಿದರು.
05054005a ತೇ ಯುಧಿಷ್ಠಿರಮಾಸೀನಮಜಿನೈಃ ಪ್ರತಿವಾಸಿತಂ।
05054005c ಕೃಷ್ಣಪ್ರಧಾನಾಃ ಸಂಹತ್ಯ ಪರ್ಯುಪಾಸಂತ ಭಾರತ।।
ಭಾರತ! ಪಕ್ಕದಲ್ಲಿ ವಾಸಿಸುವ ಅವರು ಕೃಷ್ಣನನ್ನು ಪ್ರಧಾನನನ್ನಾಗಿ ಇಟ್ಟುಕೊಂಡು ಜಿನಗಳ ಮೇಲೆ ಕುಳಿತಿದ್ದ ಯುಧಿಷ್ಠಿರನನ್ನು ಪೂಜಿಸಿದರು.
05054006a ಪ್ರತ್ಯಾದಾನಂ ಚ ರಾಜ್ಯಸ್ಯ ಕಾರ್ಯಮೂಚುರ್ನರಾಧಿಪಾಃ।
05054006c ಭವತಃ ಸಾನುಬಂಧಸ್ಯ ಸಮುಚ್ಚೇದಂ ಚಿಕೀರ್ಷವಃ।।
ಆ ನರಾಧಿಪರು ರಾಜ್ಯವನ್ನು ಹಿಂದೆ ತೆಗೆದುಕೊಳ್ಳಲು ಹೇಳಿದರು. ಅವರು ನಿನ್ನನ್ನು, ನಿನ್ನ ಬಂಧುಗಳೊಂದಿಗೆ, ತೆಗೆದುಹಾಕಲು ಬಯಸಿದರು.
05054007a ಶ್ರುತ್ವಾ ಚೈತನ್ಮಯೋಕ್ತಾಸ್ತು ಭೀಷ್ಮದ್ರೋಣಕೃಪಾಸ್ತದಾ।
05054007c ಜ್ಞಾತಿಕ್ಷಯಭಯಾದ್ರಾಜನ್ಭೀತೇನ ಭರತರ್ಷಭ।।
ಇದನ್ನು ಕೇಳಿ ರಾಜನ್! ಭರತರ್ಷಭ! ನಾನು ಬಾಂಧವರ ಕ್ಷಯದ ಭಯದಿಂದ ಭೀತನಾಗಿ ಭೀಷ್ಮ, ದ್ರೋಣ, ಕೃಪರಿಗೆ ಆಗ ಹೇಳಿದ್ದೆನು:
05054008a ನ ತೇ ಸ್ಥಾಸ್ಯಂತಿ ಸಮಯೇ ಪಾಂಡವಾ ಇತಿ ಮೇ ಮತಿಃ।
05054008c ಸಮುಚ್ಚೇದಂ ಹಿ ನಃ ಕೃತ್ಸ್ನಂ ವಾಸುದೇವಶ್ಚಿಕೀರ್ಷತಿ।।
“ವಾಸುದೇವನು ನಮ್ಮನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಬಯಸುತ್ತಾನೆ. ಆದುದರಿಂದ ಪಾಂಡವರು ಒಪ್ಪಂದದಂತೆ ನಡೆದುಕೊಳ್ಳುವುದಿಲ್ಲ ಎಂದು ನನಗನ್ನಿಸುತ್ತದೆ.
05054009a ಋತೇ ಚ ವಿದುರಂ ಸರ್ವೇ ಯೂಯಂ ವಧ್ಯಾ ಮಹಾತ್ಮನಃ।
05054009c ಧೃತರಾಷ್ಟ್ರಶ್ಚ ಧರ್ಮಜ್ಞೋ ನ ವಧ್ಯಃ ಕುರುಸತ್ತಮಃ।।
ವಿದುರನನ್ನು ಬಿಟ್ಟು ನೀವೆಲ್ಲ ಮಹಾತ್ಮರೂ ವಧ್ಯರು. ಕುರುಸತ್ತಮ ಧರ್ಮಜ್ಞ ಧೃತರಾಷ್ಟ್ರನು ವಧ್ಯನಲ್ಲ.
05054010a ಸಮುಚ್ಚೇದಂ ಚ ಕೃತ್ಸ್ನಂ ನಃ ಕೃತ್ವಾ ತಾತ ಜನಾರ್ದನಃ।
05054010c ಏಕರಾಜ್ಯಂ ಕುರೂಣಾಂ ಸ್ಮ ಚಿಕೀರ್ಷತಿ ಯುಧಿಷ್ಠಿರೇ।।
ನಮ್ಮನ್ನು ಸಂಪೂರ್ಣವಾಗಿ ಕಿತ್ತೊಗೆದು ಯುಧಿಷ್ಠಿರನಡಿಯಲ್ಲಿ ಕುರುಗಳ ಒಂದು ರಾಜ್ಯವನ್ನು ಮಾಡಲು ಜನಾರ್ದನನು ಬಯಸುತ್ತಾನೆ.
05054011a ತತ್ರ ಕಿಂ ಪ್ರಾಪ್ತಕಾಲಂ ನಃ ಪ್ರಣಿಪಾತಃ ಪಲಾಯನಂ।
05054011c ಪ್ರಾಣಾನ್ವಾ ಸಂಪರಿತ್ಯಜ್ಯ ಪ್ರತಿಯುಧ್ಯಾಮಹೇ ಪರಾನ್।।
ಈಗ ಸಮಯವು ಪ್ರಾಪ್ತವಾಗಿದೆ. ಯಾವುದಕ್ಕೆ? ಶರಣುಹೋಗಲು? ಪಲಾಯನ ಮಾಡಲು? ಅಥವಾ ಪ್ರಾಣಗಳನ್ನು ತೊರೆದು ಶತ್ರುಗಳ ವಿರುದ್ಧ ಯುದ್ಧ ಮಾಡಬೇಕೇ?
05054012a ಪ್ರತಿಯುದ್ಧೇ ತು ನಿಯತಃ ಸ್ಯಾದಸ್ಮಾಕಂ ಪರಾಜಯಃ।
05054012c ಯುಧಿಷ್ಠಿರಸ್ಯ ಸರ್ವೇ ಹಿ ಪಾರ್ಥಿವಾ ವಶವರ್ತಿನಃ।।
ಎದುರಿಸಿ ಯುದ್ಧಮಾಡಿದರೆ ಅದರಲ್ಲಿ ನಮ್ಮ ಪರಾಜಯವು ನಿಶ್ಚಿತವಾದುದು. ಏಕೆಂದರೆ ಎಲ್ಲ ಪಾರ್ಥಿವರೂ ಯುಧಿಷ್ಠಿರನ ವಶದಲ್ಲಿದ್ದಾರೆ.
05054013a ವಿರಕ್ತರಾಷ್ಟ್ರಾಶ್ಚ ವಯಂ ಮಿತ್ರಾಣಿ ಕುಪಿತಾನಿ ನಃ।
05054013c ಧಿಕ್ಕೃತಾಃ ಪಾರ್ಥಿವೈಃ ಸರ್ವೈಃ ಸ್ವಜನೇನ ಚ ಸರ್ವಶಃ।।
ನಮ್ಮ ರಾಷ್ಟ್ರವು ವಿರಕ್ತವಾಗುತ್ತದೆ. ಮಿತ್ರರು ಕುಪಿತರಾಗುತ್ತಾರೆ. ಎಲ್ಲ ಪಾರ್ಥಿವರೂ, ಸ್ವಜನರೂ ಎಲ್ಲ ಕಡೆಗಳಿಂದ ನಮ್ಮನ್ನು ಧಿಕ್ಕರಿಸುತ್ತಾರೆ.
05054014a ಪ್ರಣಿಪಾತೇ ತು ದೋಷೋಽಸ್ತಿ ಬಂಧೂನಾಂ ಶಾಶ್ವತೀಃ ಸಮಾಃ।
05054014c ಪಿತರಂ ತ್ವೇವ ಶೋಚಾಮಿ ಪ್ರಜ್ಞಾನೇತ್ರಂ ಜನೇಶ್ವರಂ।
05054014e ಮತ್ಕೃತೇ ದುಃಖಮಾಪನ್ನಂ ಕ್ಲೇಶಂ ಪ್ರಾಪ್ತಮನಂತಕಂ।।
ಶರಣು ಹೋದರೆ ಶಾಶ್ವತ ವರ್ಷಗಳ ವರೆಗೆ ಬಂಧುಗಳಲ್ಲಿ ದೋಷವುಳಿಯುತ್ತದೆ. ಪ್ರಜ್ಞಾನೇತ್ರ, ಜನೇಶ್ವರ, ತಂದೇ ನಿನ್ನ ಕುರಿತು ಶೋಕಿಸುತ್ತೇನೆ. ನನ್ನಿಂದಾಗಿ ಅವನು ಕೊನೆಯಿಲ್ಲದ ಕಷ್ಟಗಳನ್ನು ಪಡೆದಿದ್ದಾನೆ. ದುಃಖವನ್ನು ಹೊಂದಿದ್ದಾನೆ.
05054015a ಕೃತಂ ಹಿ ತವ ಪುತ್ರೈಶ್ಚ ಪರೇಷಾಮವರೋಧನಂ।
05054015c ಮತ್ಪ್ರಿಯಾರ್ಥಂ ಪುರೈವೈತದ್ವಿದಿತಂ ತೇ ನರೋತ್ತಮ।।
ಏಕೆಂದರೆ ನನಗೆ ಪ್ರಿಯವಾದುದನ್ನು ಮಾಡಲೋಸುಗ ನಿನ್ನ ಪುತ್ರರೇ ಶತ್ರುಗಳು ಮುಂದುವರೆಯುವುದನ್ನು ತಡೆದಿದ್ದಾರೆ. ನರೋತ್ತಮ! ಇದು ನಿನಗೆ ಸಂಪೂರ್ಣವಾಗಿ ತಿಳಿದಿದೆ.
05054016a ತೇ ರಾಜ್ಞೋ ಧೃತರಾಷ್ಟ್ರಸ್ಯ ಸಾಮಾತ್ಯಸ್ಯ ಮಹಾರಥಾಃ।
05054016c ವೈರಂ ಪ್ರತಿಕರಿಷ್ಯಂತಿ ಕುಲೋಚ್ಚೇದೇನ ಪಾಂಡವಾಃ।।
ಮಹಾರಥಿ ಪಾಂಡವರು ಅಮಾತ್ಯರೊಂದಿಗೆ ರಾಜ ಧೃತರಾಷ್ಟ್ರನ ಕುಲವನ್ನು ಕಿತ್ತೊಗೆದು ವೈರಕ್ಕೆ ಪ್ರತೀಕಾರಗೊಳಿಸುತ್ತಾರೆ.”
05054017a ತತೋ ದ್ರೋಣೋಽಬ್ರವೀದ್ಭೀಷ್ಮಃ ಕೃಪೋ ದ್ರೌಣಿಶ್ಚ ಭಾರತ।
05054017c ಮತ್ವಾ ಮಾಂ ಮಹತೀಂ ಚಿಂತಾಮಾಸ್ಥಿತಂ ವ್ಯಥಿತೇಂದ್ರಿಯಂ।।
ಭಾರತ! ಆಗ ದ್ರೋಣ, ಭೀಷ್ಮ, ಕೃಪ ಮತ್ತು ದ್ರೌಣಿಯರು, ನಾನು ಮಹಾ ಚಿಂತೆಯಲ್ಲಿದ್ದೇನೆಂದು ಮತ್ತು ನನ್ನ ಇಂದ್ರಿಯಗಳು ವ್ಯಥಿತವಾಗಿವೆಯೆಂದು ಆಲೋಚಿಸಿ ಹೇಳಿದ್ದರು:
05054018a ಅಭಿದ್ರುಗ್ಧಾಃ ಪರೇ ಚೇನ್ನೋ ನ ಭೇತವ್ಯಂ ಪರಂತಪ।
05054018c ಅಸಮರ್ಥಾಃ ಪರೇ ಜೇತುಮಸ್ಮಾನ್ಯುಧಿ ಜನೇಶ್ವರ।।
“ಪರಂತಪ! ಜನೇಶ್ವರ! ಇತರರು ನಮಗೆ ಬೆದರಿಕೆ ಹಾಕಿದರೆ ನಾವು ಭಯಪಡಬೇಕಾಗಿಲ್ಲ. ಇತರರು ನಮ್ಮನ್ನು ಯುದ್ಧದಲ್ಲಿ ಜಯಿಸಲು ಅಸಮರ್ಥರು.
05054019a ಏಕೈಕಶಃ ಸಮರ್ಥಾಃ ಸ್ಮೋ ವಿಜೇತುಂ ಸರ್ವಪಾರ್ಥಿವಾನ್।
05054019c ಆಗಚ್ಚಂತು ವಿನೇಷ್ಯಾಮೋ ದರ್ಪಮೇಷಾಂ ಶಿತೈಃ ಶರೈಃ।।
ಒಬ್ಬೊಬ್ಬರಾಗಿ ನಾವು ಸರ್ವ ಪಾರ್ಥಿವರನ್ನು ಗೆಲ್ಲಲು ಸಮರ್ಥರು. ಬರಲಿ! ಅವರ ದರ್ಪವನ್ನು ಈ ಹರಿತ ಬಾಣಗಳಿಂದ ನಾಶಪಡಿಸುತ್ತೇವೆ.
05054020a ಪುರೈಕೇನ ಹಿ ಭೀಷ್ಮೇಣ ವಿಜಿತಾಃ ಸರ್ವಪಾರ್ಥಿವಾಃ।
05054020c ಮೃತೇ ಪಿತರ್ಯಭಿಕ್ರುದ್ಧೋ ರಥೇನೈಕೇನ ಭಾರತ।।
ಭಾರತ! ಹಿಂದೆ ಅವನ ತಂದೆಯು ಮೃತನಾದ ನಂತರ ಭೀಷ್ಮನು ಕ್ರುದ್ಧನಾಗಿ ಸರ್ವ ಪಾರ್ಥಿವರನ್ನು ಒಂದೇ ರಥದಿಂದ ಗೆದ್ದಿದ್ದನು.
05054021a ಜಘಾನ ಸುಬಹೂಂಸ್ತೇಷಾಂ ಸಂರಬ್ಧಃ ಕುರುಸತ್ತಮಃ।
05054021c ತತಸ್ತೇ ಶರಣಂ ಜಗ್ಮುರ್ದೇವವ್ರತಮಿಮಂ ಭಯಾತ್।।
ಕೋಪದಿಂದ ಕುರುಸತ್ತಮನು ಅವರಲ್ಲಿ ಬಹಳರನ್ನು ಸಂಹರಿಸಿದನು. ಆಗ ಅವರು ಭಯದಿಂದ ದೇವವ್ರತನ ಶರಣು ಹೋದರು.
05054022a ಸ ಭೀಷ್ಮಃ ಸುಸಮರ್ಥೋಽಯಮಸ್ಮಾಭಿಃ ಸಹಿತೋ ರಣೇ।
05054022c ಪರಾನ್ವಿಜೇತುಂ ತಸ್ಮಾತ್ತೇ ವ್ಯೇತು ಭೀರ್ಭರತರ್ಷಭ।
05054022e ಇತ್ಯೇಷಾಂ ನಿಶ್ಚಯೋ ಹ್ಯಾಸೀತ್ತತ್ಕಾಲಮಮಿತೌಜಸಾಂ।।
ನಮ್ಮೊಂದಿಗೆ ಈ ಭೀಷ್ಮನು ರಣದಲ್ಲಿ ಶತ್ರುಗಳನ್ನು ಗೆಲ್ಲಲು ಸುಸಮರ್ಥನು. ಆದುದರಿಂದ ಭರತರ್ಷಭ! ನಿನ್ನ ಭೀತಿಯನ್ನು ಕಳೆದುಕೋ!” ಇದು ಆ ಸಮಯದಲ್ಲಿ ಈ ಅಮಿತೌಜಸರ ನಿಶ್ಚಯವಾಗಿತ್ತು.
05054023a ಪುರಾ ಪರೇಷಾಂ ಪೃಥಿವೀ ಕೃತ್ಸ್ನಾಸೀದ್ವಶವರ್ತಿನೀ।
05054023c ಅಸ್ಮಾನ್ಪುನರಮೀ ನಾದ್ಯ ಸಮರ್ಥಾ ಜೇತುಮಾಹವೇ।
05054023e ಚಿನ್ನಪಕ್ಷಾಃ ಪರೇ ಹ್ಯದ್ಯ ವೀರ್ಯಹೀನಾಶ್ಚ ಪಾಂಡವಾಃ।।
ಹಿಂದೆ ಇಡೀ ಭೂಮಿಯು ಶತ್ರುಗಳ ವಶದಲ್ಲಿತ್ತು. ಈಗ ಅವರು ಯುದ್ಧದಲ್ಲಿ ನಮ್ಮನ್ನು ಗೆಲ್ಲಲು ಸಮರ್ಥರಿಲ್ಲ. ಏಕೆಂದರೆ ಶತ್ರು ಪಕ್ಷವು ಒಡೆದಿದೆ. ಪಾಂಡವರು ಇಂದು ತಮ್ಮ ವೀರ್ಯವನ್ನು ಕಳೆದುಕೊಂಡಿದ್ದಾರೆ.
05054024a ಅಸ್ಮತ್ಸಂಸ್ಥಾ ಚ ಪೃಥಿವೀ ವರ್ತತೇ ಭರತರ್ಷಭ।
05054024c ಏಕಾರ್ಥಾಃ ಸುಖದುಃಖೇಷು ಮಯಾನೀತಾಶ್ಚ ಪಾರ್ಥಿವಾಃ।।
ಭರತರ್ಷಭ! ಈಗ ಪೃಥ್ವಿಯ ಆಗುಹೋಗುಗಳು ನಮ್ಮ ಮೇಲೆ ನಿಂತಿವೆ. ನಾನು ಕರೆದು ತಂದಿರುವ ರಾಜರು ಸುಖ ದುಃಖಗಳಲ್ಲಿ ಒಂದೇ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
05054025a ಅಪ್ಯಗ್ನಿಂ ಪ್ರವಿಶೇಯುಸ್ತೇ ಸಮುದ್ರಂ ವಾ ಪರಂತಪ।
05054025c ಮದರ್ಥೇ ಪಾರ್ಥಿವಾಃ ಸರ್ವೇ ತದ್ವಿದ್ಧಿ ಕುರುಸತ್ತಮ।।
ಕುರುಸತ್ತಮ! ಪರಂತಪ! ನನಗಾಗಿ ಈ ರಾಜರು ಎಲ್ಲರೂ ಅಗ್ನಿಯನ್ನಾದರೂ ಅಥವಾ ಸಮುದ್ರವನ್ನಾದರೂ ಹೊಗಬಲ್ಲರು. ಅದನ್ನು ತಿಳಿದುಕೋ!
05054026a ಉನ್ಮತ್ತಮಿವ ಚಾಪಿ ತ್ವಾಂ ಪ್ರಹಸಂತೀಹ ದುಃಖಿತಂ।
05054026c ವಿಲಪಂತಂ ಬಹುವಿಧಂ ಭೀತಂ ಪರವಿಕತ್ಥನೇ।।
ನೀನು ದುಃಖಿಸುತ್ತಿರುವುದನ್ನು ನೋಡಿ ನಿನಗೆ ಹುಚ್ಚೇನಾದರೂ ಹಿಡಿದಿದೆಯೋ ಎಂದು ಅವರು ನಗುತ್ತಿದ್ದಾರೆ. ಭೀತನಾಗಿ ಬಹುವಿಧದಲ್ಲಿ ವಿಲಪಿಸುತ್ತಿರುವ ನೀನು ಶತ್ರುಗಳನ್ನು ಹೊಗಳುತ್ತಿದ್ದೀಯೆ.
05054027a ಏಷಾಂ ಹ್ಯೇಕೈಕಶೋ ರಾಜ್ಞಾಂ ಸಮರ್ಥಃ ಪಾಂಡವಾನ್ಪ್ರತಿ।
05054027c ಆತ್ಮಾನಂ ಮನ್ಯತೇ ಸರ್ವೋ ವ್ಯೇತು ತೇ ಭಯಮಾಗತಂ।।
ಇಲ್ಲಿರುವ ಒಬ್ಬೊಬ್ಬ ರಾಜನೂ ಪಾಂಡವರನ್ನು ಎದುರಿಸಲು ಸಮರ್ಥನು. ಎಲ್ಲರೂ ಆತ್ಮಪೂರ್ವಕವಾಗಿ ಅದನ್ನು ತಿಳಿದಿದ್ದಾರೆ. ನಿನಗೆ ಬಂದಿರುವ ಭಯವನ್ನು ತೆಗೆದುಹಾಕು.
05054028a ಸರ್ವಾಂ ಸಮಗ್ರಾಂ ಸೇನಾಂ ಮೇ ವಾಸವೋಽಪಿ ನ ಶಕ್ನುಯಾತ್।
05054028c ಹಂತುಮಕ್ಷಯ್ಯರೂಪೇಯಂ ಬ್ರಹ್ಮಣಾಪಿ ಸ್ವಯಂಭುವಾ।।
ನಮ್ಮ ಈ ಸಮಗ್ರ ಸೇನೆಯೆಲ್ಲವನ್ನೂ ನಾಶಗೊಳಿಸಲು ವಾಸವನಿಗೂ, ಅಕ್ಷಯರೂಪೀ, ಸ್ವಯಂಭು ಬ್ರಹ್ಮನಿಗೂ ಸಾಧ್ಯವಿಲ್ಲ.
05054029a ಯುಧಿಷ್ಠಿರಃ ಪುರಂ ಹಿತ್ವಾ ಪಂಚ ಗ್ರಾಮಾನ್ಸ ಯಾಚತಿ।
05054029c ಭೀತೋ ಹಿ ಮಾಮಕಾತ್ಸೈನ್ಯಾತ್ಪ್ರಭಾವಾಚ್ಚೈವ ಮೇ ಪ್ರಭೋ।।
ಪ್ರಭೋ! ನನ್ನ ಪ್ರಭಾವ ಮತ್ತು ಸೇನೆಗೆ ಹೆದರಿ ಯುಧಿಷ್ಠಿರನು ಪುರವನ್ನು ಬಿಟ್ಟು ಐದು ಗ್ರಾಮಗಳನ್ನು ಬೇಡುತ್ತಿದ್ದಾನೆ!
05054030a ಸಮರ್ಥಂ ಮನ್ಯಸೇ ಯಚ್ಚ ಕುಂತೀಪುತ್ರಂ ವೃಕೋದರಂ।
05054030c ತನ್ಮಿಥ್ಯಾ ನ ಹಿ ಮೇ ಕೃತ್ಸ್ನಂ ಪ್ರಭಾವಂ ವೇತ್ಥ ಭಾರತ।।
ಕುಂತೀಪುತ್ರ ವೃಕೋದರನು ಸಮರ್ಥ ಎಂದು ನೀನು ಏನು ಅಭಿಪ್ರಾಯ ಪಡುತ್ತೀಯೋ ಅದು ಸುಳ್ಳು. ಭಾರತ! ನಿನಗೆ ನನ್ನ ಸಂಪೂರ್ಣ ಪ್ರಭಾವವು ತಿಳಿದಿಲ್ಲ.
05054031a ಮತ್ಸಮೋ ಹಿ ಗದಾಯುದ್ಧೇ ಪೃಥಿವ್ಯಾಂ ನಾಸ್ತಿ ಕಶ್ಚನ।
05054031c ನಾಸೀತ್ಕಶ್ಚಿದತಿಕ್ರಾಂತೋ ಭವಿತಾ ನ ಚ ಕಶ್ಚನ।।
ಗದಾಯುದ್ಧದಲ್ಲಿ ನನಗೆ ಸಮನಾದವನು ಭೂಮಿಯಲ್ಲಿಯೇ ಯಾರೂ ಇಲ್ಲ. ಯಾರೂ ನನ್ನನ್ನು ಮೀರಿಸಿಲ್ಲ. ಯಾರೂ ಮೀರಿಸುವುದೂ ಇಲ್ಲ.
05054032a ಯುಕ್ತೋ ದುಃಖೋಚಿತಶ್ಚಾಹಂ ವಿದ್ಯಾಪಾರಗತಸ್ತಥಾ।
05054032c ತಸ್ಮಾನ್ನ ಭೀಮಾನ್ನಾನ್ಯೇಭ್ಯೋ ಭಯಂ ಮೇ ವಿದ್ಯತೇ ಕ್ವ ಚಿತ್।।
ಉದ್ದೇಶವನ್ನಿಟ್ಟುಕೊಂಡೇ ಕಷ್ಟಪಟ್ಟು ನಾನು ಈ ವಿದ್ಯೆಯಲ್ಲಿ ಪಾರಂಗತನಾಗಿದ್ದೇನೆ. ಆದುದರಿಂದ ನನಗೆ ಭೀಮನ ಸ್ವಲ್ಪವೇ ಭಯವೆನ್ನುವುದನ್ನೂ ತಿಳಿದಿಲ್ಲ.
05054033a ದುರ್ಯೋಧನಸಮೋ ನಾಸ್ತಿ ಗದಾಯಾಮಿತಿ ನಿಶ್ಚಯಃ।
05054033c ಸಂಕರ್ಷಣಸ್ಯ ಭದ್ರಂ ತೇ ಯತ್ತದೈನಮುಪಾವಸಂ।।
ಸಂಕರ್ಷಣನಲ್ಲಿ ನಾನು ಕಲಿಯುತ್ತಿದ್ದಾಗ ಗದಾಯುದ್ಧದಲ್ಲಿ ದುರ್ಯೋಧನನ ಸಮನಿಲ್ಲ ಎಂದು ನಿಶ್ಚಯವಾಗಿತ್ತು. ನಿನಗೆ ಮಂಗಳವಾಗಲಿ!
05054034a ಯುದ್ಧೇ ಸಂಕರ್ಷಣಸಮೋ ಬಲೇನಾಭ್ಯಧಿಕೋ ಭುವಿ।
05054034c ಗದಾಪ್ರಹಾರಂ ಭೀಮೋ ಮೇ ನ ಜಾತು ವಿಷಹೇದ್ಯುಧಿ।।
ಯುದ್ಧದಲ್ಲಿ ನಾನು ಸಂಕರ್ಷಣನ ಸಮ. ಬಲದಲ್ಲಿ ಭುವಿಯಲ್ಲಿ ಅವನಿಗಿಂತಲೂ ಅಧಿಕ. ಯುದ್ಧದಲ್ಲಿ ಭೀಮನು ನನ್ನ ಗದಾಪ್ರಹಾರವನ್ನು ಸಹಿಸಿಕೊಳ್ಳುವುದನ್ನು ತಿಳಿದಿಲ್ಲ.
05054035a ಏಕಂ ಪ್ರಹಾರಂ ಯಂ ದದ್ಯಾಂ ಭೀಮಾಯ ರುಷಿತೋ ನೃಪ।
05054035c ಸ ಏವೈನಂ ನಯೇದ್ಘೋರಂ ಕ್ಷಿಪ್ರಂ ವೈವಸ್ವತಕ್ಷಯಂ।।
ನೃಪ! ರೋಷದಿಂದ ಒಂದೇ ಒಂದು ಹೊಡೆತವನ್ನು ಭೀಮನಿಗೆ ಕೊಟ್ಟರೆ ಅವನನ್ನು ಬೇಗನೆ ವೈವಸ್ವತಕ್ಷಯಕ್ಕೆ ಕೊಂಡೊಯ್ಯಲು ಸಾಕು.
05054036a ಇಚ್ಚೇಯಂ ಚ ಗದಾಹಸ್ತಂ ರಾಜನ್ದ್ರಷ್ಟುಂ ವೃಕೋದರಂ।
05054036c ಸುಚಿರಂ ಪ್ರಾರ್ಥಿತೋ ಹ್ಯೇಷ ಮಮ ನಿತ್ಯಂ ಮನೋರಥಃ।।
ರಾಜನ್! ವೃಕೋದರನು ಕೈಯಲ್ಲಿ ಗದೆಯನ್ನು ಹಿಡಿದಿರುವುದನ್ನು ನೋಡಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಬಹುಕಾಲದಿಂದ ಪ್ರಾರ್ಥಿಸುತ್ತಿದ್ದೆ. ಅದೇ ನನ್ನ ನಿತ್ಯ ಮನೋರಥವಾಗಿತ್ತು.
05054037a ಗದಯಾ ನಿಹತೋ ಹ್ಯಾಜೌ ಮಮ ಪಾರ್ಥೋ ವೃಕೋದರಃ।
05054037c ವಿಶೀರ್ಣಗಾತ್ರಃ ಪೃಥಿವೀಂ ಪರಾಸುಃ ಪ್ರಪತಿಷ್ಯತಿ।।
ನನ್ನ ಗದೆಯಿಂದ ಹೊಡೆಯಲ್ಪಟ್ಟು ಪಾರ್ಥ ವೃಕೋದರನು ತನ್ನ ದೇಹವು ಜಜ್ಜಿಹೋಗಿ ಭೂಮಿಯ ಮೇಲೆ ಅಸುನೀಗಿ ಬೀಳುತ್ತಾನೆ.
05054038a ಗದಾಪ್ರಹಾರಾಭಿಹತೋ ಹಿಮವಾನಪಿ ಪರ್ವತಃ।
05054038c ಸಕೃನ್ಮಯಾ ವಿಶೀರ್ಯೇತ ಗಿರಿಃ ಶತಸಹಸ್ರಧಾ।।
ನನ್ನ ಗದೆಯ ಪ್ರಹಾರಕ್ಕೆ ಸಿಲುಕಿದ ಹಿಮಾಲಯ ಪರ್ವತವೂ ಸಹ ನೂರಾರು ಸಹಸ್ರಾರು ಪುಡಿಯಾಗಿ ಕೆಳಗುರುಳುತ್ತದೆ.
05054039a ಸ ಚಾಪ್ಯೇತದ್ವಿಜಾನಾತಿ ವಾಸುದೇವಾರ್ಜುನೌ ತಥಾ।
05054039c ದುರ್ಯೋಧನಸಮೋ ನಾಸ್ತಿ ಗದಾಯಾಮಿತಿ ನಿಶ್ಚಯಃ।।
ಇದು ಅವನಿಗೆ ಮತ್ತು ಹಾಗೆಯೇ ವಾಸುದೇವ-ಅರ್ಜುನರಿಬ್ಬರಿಗೂ ಕೂಡ ತಿಳಿದಿದೆ. ಗದಾಯುದ್ಧದಲ್ಲಿ ದುರ್ಯೋಧನನ ಸಮನಾದವನು ಇಲ್ಲ ಎನ್ನುವುದು ನಿಶ್ಚಯವಾಗಿಹೋಗಿದೆ.
05054040a ತತ್ತೇ ವೃಕೋದರಮಯಂ ಭಯಂ ವ್ಯೇತು ಮಹಾಹವೇ।
05054040c ವ್ಯಪನೇಷ್ಯಾಮ್ಯಹಂ ಹ್ಯೇನಂ ಮಾ ರಾಜನ್ವಿಮನಾ ಭವ।।
ಆದುದರಿಂದ ಮಹಾಹವದಲ್ಲಿ ವೃಕೋದರನ ಕುರಿತು ಭಯವನ್ನು ತೆಗೆದುಹಾಕು. ರಾಜನ್! ನಾನು ಅವನನ್ನು ಕಳುಹಿಸುತ್ತೇನೆ. ಚಿಂತೆಯಿಲ್ಲದವನಾಗು.
05054041a ತಸ್ಮಿನ್ಮಯಾ ಹತೇ ಕ್ಷಿಪ್ರಮರ್ಜುನಂ ಬಹವೋ ರಥಾಃ।
05054041c ತುಲ್ಯರೂಪಾ ವಿಶಿಷ್ಟಾಶ್ಚ ಕ್ಷೇಪ್ಸ್ಯಂತಿ ಭರತರ್ಷಭ।।
ಭರತರ್ಷಭ! ಅವನು ನನ್ನಿಂದ ಹತನಾದ ತಕ್ಷಣ ಸರಿಸಾಟಿಯರಾದ ಮತ್ತು ಅವನಿಗಿಂತಲೂ ಮೀರಿದ ರಥಿಗಳು ಅರ್ಜುನನನ್ನು ಸೋಲಿಸುತ್ತಾರೆ.
05054042a ಭೀಷ್ಮೋ ದ್ರೋಣಃ ಕೃಪೋ ದ್ರೌಣಿಃ ಕರ್ಣೋ ಭೂರಿಶ್ರವಾಸ್ತಥಾ।
05054042c ಪ್ರಾಗ್ಜ್ಯೋತಿಷಾಧಿಪಃ ಶಲ್ಯಃ ಸಿಂಧುರಾಜೋ ಜಯದ್ರಥಃ।।
05054043a ಏಕೈಕ ಏಷಾಂ ಶಕ್ತಸ್ತು ಹಂತುಂ ಭಾರತ ಪಾಂಡವಾನ್।
05054043c ಸಮಸ್ತಾಸ್ತು ಕ್ಷಣೇನೈತಾನ್ನೇಷ್ಯಂತಿ ಯಮಸಾದನಂ।।
ಭಾರತ! ಭೀಷ್ಮ, ದ್ರೋಣ, ಕೃಪ, ದ್ರೌಣಿ, ಕರ್ಣ, ಭೂರಿಶ್ರವ, ಪ್ರಾಗ್ಜ್ಯೋತಿಷಾಧಿಪ, ಶಲ್ಯ, ಸಿಂಧುರಾಜ ಜಯದ್ರಥ ಇವರು ಒಬ್ಬೊಬ್ಬರೇ ಪಾಂಡವರನ್ನು ಸಂಹರಿಸಲು ಶಕ್ತರು. ಒಟ್ಟಾಗಿ ಇವರು ಕ್ಷಣದಲ್ಲಿ ಅವರನ್ನು ಯಮಸಾದನಕ್ಕೆ ಕಳುಹಿಸುತ್ತಾರೆ.
05054044a ಸಮಗ್ರಾ ಪಾರ್ಥಿವೀ ಸೇನಾ ಪಾರ್ಥಮೇಕಂ ಧನಂಜಯಂ।
05054044c ಕಸ್ಮಾದಶಕ್ತಾ ನಿರ್ಜೇತುಮಿತಿ ಹೇತುರ್ನ ವಿದ್ಯತೇ।।
ಸಮಗ್ರ ಪಾರ್ಥಿವರ ಸೇನೆಯು ಪಾರ್ಥ ಧನಂಜಯನನ್ನು ಒಬ್ಬನನ್ನೇ ಸೋಲಿಸಲು ಅಶಕ್ತರಾಗಿರುವುದು ಹೇಗೆ? ಕಾರಣವು ತಿಳಿಯುತ್ತಿಲ್ಲ.
05054045a ಶರವ್ರಾತೈಸ್ತು ಭೀಷ್ಮೇಣ ಶತಶೋಽಥ ಸಹಸ್ರಶಃ।
05054045c ದ್ರೋಣದ್ರೌಣಿಕೃಪೈಶ್ಚೈವ ಗಂತಾ ಪಾರ್ಥೋ ಯಮಕ್ಷಯಂ।।
ಭೀಷ್ಮನಿಂದ, ದ್ರೋಣ, ದ್ರೌಣಿ, ಕೃಪರಿಂದ ಪ್ರಯೋಗಿಸಲ್ಪಟ್ಟ ನೂರಾರು ಸಹಸ್ರಾರು ಬಾಣಗಳು ಪಾರ್ಥನನ್ನು ಯಮಕ್ಷಯಕ್ಕೆ ಕಳುಹಿಸುವವು.
05054046a ಪಿತಾಮಹೋ ಹಿ ಗಾಂಗೇಯಃ ಶಂತನೋರಧಿ ಭಾರತ।
05054046c ಬ್ರಹ್ಮರ್ಷಿಸದೃಶೋ ಜಜ್ಞೇ ದೇವೈರಪಿ ದುರುತ್ಸಹಃ।
05054046e ಪಿತ್ರಾ ಹ್ಯುಕ್ತಃ ಪ್ರಸನ್ನೇನ ನಾಕಾಮಸ್ತ್ವಂ ಮರಿಷ್ಯಸಿ।।
ಭಾರತ! ಪಿತಾಮಹ ಗಾಂಗೇಯನಾದರೋ ಬ್ರಹ್ಮರ್ಷಿಸದೃಷನಾದ, ದೇವತೆಗಳಿಗೂ ಗೆಲ್ಲಲು ಅಸಾಧ್ಯನಾದ ಶಂತನುವಿಗೆ ಜನಿಸಿದನು. “ನೀನು ಬಯಸದೇ ಸಾಯುವುದಿಲ್ಲ!” ಎಂದು ಪ್ರಸನ್ನನಾದ ಅವನ ತಂದೆಯು ಹೇಳಿದ್ದನು.
05054047a ಬ್ರಹ್ಮರ್ಷೇಶ್ಚ ಭರದ್ವಾಜಾದ್ದ್ರೋಣ್ಯಾಂ ದ್ರೋಣೋ ವ್ಯಜಾಯತ।
05054047c ದ್ರೋಣಾಜ್ಜಜ್ಞೇ ಮಹಾರಾಜ ದ್ರೌಣಿಶ್ಚ ಪರಮಾಸ್ತ್ರವಿತ್।।
ದ್ರೋಣನು ದ್ರೋಣಿಯಲ್ಲಿ ಬ್ರಹ್ಮರ್ಷಿ ಭರದ್ವಾಜನಿಗೆ ಜನಿಸಿದನು. ದ್ರೋಣನಲ್ಲಿ ಪರಮಾಸ್ತ್ರವನ್ನು ತಿಳಿದಿರುವ ದ್ರೌಣಿಯು ಜನಿಸಿದನು.
05054048a ಕೃಪಶ್ಚಾಚಾರ್ಯಮುಖ್ಯೋಽಯಂ ಮಹರ್ಷೇರ್ಗೌತಮಾದಪಿ।
05054048c ಶರಸ್ತಂಬೋದ್ಭವಃ ಶ್ರೀಮಾನವಧ್ಯ ಇತಿ ಮೇ ಮತಿಃ।।
ಆಚಾರ್ಯ ಮುಖ್ಯನಾಗಿರುವ ಈ ಕೃಪನು ಮಹರ್ಷಿ ಗೌತಮನಿಗೆ ಶರಸ್ತಂಭದಲ್ಲಿ ಜನಿಸಿದನು. ಈ ಶ್ರೀಮಾನನು ಅವಧ್ಯನೆಂದು ನನಗನ್ನಿಸುತ್ತದೆ.
05054049a ಅಯೋನಿಜಂ ತ್ರಯಂ ಹ್ಯೇತತ್ಪಿತಾ ಮಾತಾ ಚ ಮಾತುಲಃ।
05054049c ಅಶ್ವತ್ಥಾಮ್ನೋ ಮಹಾರಾಜ ಸ ಚ ಶೂರಃ ಸ್ಥಿತೋ ಮಮ।।
ಮಹಾರಾಜ! ಈ ಮೂವರು ಅಯೋನಿಜರನ್ನು ತಂದೆ, ತಾಯಿ ಮತ್ತು ಸೋದರ ಮಾವನನ್ನಾಗಿ ಪಡೆದ ಅಶ್ವತ್ಥಾಮನು ನನಗೆ ಶೂರನಾಗಿಯೇ ಇದ್ದಾನೆ.
05054050a ಸರ್ವ ಏತೇ ಮಹಾರಾಜ ದೇವಕಲ್ಪಾ ಮಹಾರಥಾಃ।
05054050c ಶಕ್ರಸ್ಯಾಪಿ ವ್ಯಥಾಂ ಕುರ್ಯುಃ ಸಮ್ಯುಗೇ ಭರತರ್ಷಭ।।
ಭರತರ್ಷಭ! ಮಹಾರಾಜ! ಇವರೆಲ್ಲರೂ ದೇವಸಮಾನ ಮಹಾರಥಿಗಳು. ಇವರು ಯುದ್ಧದಲ್ಲಿ ಶಕ್ರನನ್ನೂ ವ್ಯಥೆಗೊಳಿಸಬಲ್ಲರು.
05054051a ಭೀಷ್ಮದ್ರೋಣಕೃಪಾಣಾಂ ಚ ತುಲ್ಯಃ ಕರ್ಣೋ ಮತೋ ಮಮ।
05054051c ಅನುಜ್ಞಾತಶ್ಚ ರಾಮೇಣ ಮತ್ಸಮೋಽಸೀತಿ ಭಾರತ।।
ಭೀಷ್ಮ-ದ್ರೋಣ-ಕೃಪರನ್ನು ಕರ್ಣನು ಹೋಲುತ್ತಾನೆಂದು ನನಗನ್ನಿಸುತ್ತದೆ. ಭಾರತ! “ನನ್ನ ಸಮನಾಗಿದ್ದೀಯೆ!” ಎಂದು ರಾಮನಿಂದ ಅವನು ಹೇಳಿಸಿಕೊಂಡಿದ್ದಾನೆ.
05054052a ಕುಂಡಲೇ ರುಚಿರೇ ಚಾಸ್ತಾಂ ಕರ್ಣಸ್ಯ ಸಹಜೇ ಶುಭೇ।
05054052c ತೇ ಶಚ್ಯರ್ಥೇ ಮಹೇಂದ್ರೇಣ ಯಾಚಿತಃ ಸ ಪರಂತಪಃ।
05054052e ಅಮೋಘಯಾ ಮಹಾರಾಜ ಶಕ್ತ್ಯಾ ಪರಮಭೀಮಯಾ।।
ಹುಟ್ಟುವಾಗಲೇ ಕರ್ಣನು ಹೊಳೆಯುವ ಸುಂದರ ಕುಂಡಲಗಳನ್ನು ಪಡೆದಿದ್ದನು. ಅದನ್ನು ಶಚಿಗೋಸ್ಕರವಾಗಿ ಮಹೇಂದ್ರನು ಪರಂತಪನಿಂದ ಕೇಳಿ ಪಡೆದನು. ಮಹಾರಾಜ! ಬದಲಾಗಿ ಪರಮ ಭಯಂಕರ ಶಕ್ತಿಯನ್ನಿತ್ತನು.
05054053a ತಸ್ಯ ಶಕ್ತ್ಯೋಪಗೂಢಸ್ಯ ಕಸ್ಮಾಜ್ಜೀವೇದ್ಧನಂಜಯಃ।
05054053c ವಿಜಯೋ ಮೇ ಧ್ರುವಂ ರಾಜನ್ಫಲಂ ಪಾಣಾವಿವಾಹಿತಂ।
05054053e ಅಭಿವ್ಯಕ್ತಃ ಪರೇಷಾಂ ಚ ಕೃತ್ಸ್ನೋ ಭುವಿ ಪರಾಜಯಃ।।
ಆ ಶಕ್ತಿಯಿಂದ ರಕ್ಷಿತನಾದ ಅವನನ್ನು ಧನಂಜಯನು ಹೇಗೆ ಗೆಲ್ಲುತ್ತಾನೆ? ರಾಜನ್! ಕೈಯಲ್ಲಿ ಹಿಡಿದ ಫಲದಂತೆ ವಿಜಯವು ನನಗೆ ನಿಶ್ಚಯವಾದುದು. ಶತ್ರುಗಳ ಸಂಪೂರ್ಣ ಪರಾಜಯವು ಭೂಮಿಯಲ್ಲಿ ಅಭಿವ್ಯಕ್ತವಾಗಿವೆ.
05054054a ಅಹ್ನಾ ಹ್ಯೇಕೇನ ಭೀಷ್ಮೋಽಯಮಯುತಂ ಹಂತಿ ಭಾರತ।
05054054c ತತ್ಸಮಾಶ್ಚ ಮಹೇಷ್ವಾಸಾ ದ್ರೋಣದ್ರೌಣಿಕೃಪಾ ಅಪಿ।।
ಈ ಭೀಷ್ಮನು ಒಂದೇ ದಿನದಲ್ಲಿ ಹತ್ತುಸಾವಿರ ಯೋಧರನ್ನು ಸಂಹರಿಸುತ್ತಾನೆ. ದ್ರೋಣ, ದ್ರೌಣಿ, ಕೃಪರೂ ಕೂಡ ಅವನಿಗೆ ಸರಿಸಮನಾಗಿರುವವರೇ.
05054055a ಸಂಶಪ್ತಾನಿ ಚ ವೃಂದಾನಿ ಕ್ಷತ್ರಿಯಾಣಾಂ ಪರಂತಪ।
05054055c ಅರ್ಜುನಂ ವಯಮಸ್ಮಾನ್ವಾ ಧನಂಜಯ ಇತಿ ಸ್ಮ ಹ।।
ಪರಂತಪ! ಕ್ಷತ್ರಿಯ ಸಂಶಪ್ತಕರ ಗುಂಪು “ನಾವು ಅರ್ಜುನನನ್ನು ಅಥವಾ ಅರ್ಜುನನು ನಮ್ಮನ್ನು ಕೊಲ್ಲಬೇಕು!” ಎಂದು ಪ್ರತಿಜ್ಞೆಯನ್ನು ಮಾಡಿರುವರು.
05054056a ತಾಂಶ್ಚಾಲಮಿತಿ ಮನ್ಯಂತೇ ಸವ್ಯಸಾಚಿವಧೇ ವಿಭೋ।
05054056c ಪಾರ್ಥಿವಾಃ ಸ ಭವಾನ್ರಾಜನ್ನಕಸ್ಮಾದ್ವ್ಯಥತೇ ಕಥಂ।।
ವಿಭೋ! ಹಾಗೆಯೇ ಇನ್ನೂ ಅನೇಕ ರಾಜರು ಸವ್ಯಸಾಚಿಯನ್ನು ವಧಿಸುತ್ತೇವೆ ಎಂದು ತಿಳಿದಿದ್ದಾರೆ. ರಾಜನ್! ಏಕೆ ನೀನು ವ್ಯಥೆಗೊಳ್ಳುತ್ತಿರುವೆ?
05054057a ಭೀಮಸೇನೇ ಚ ನಿಹತೇ ಕೋಽನ್ಯೋ ಯುಧ್ಯೇತ ಭಾರತ।
05054057c ಪರೇಷಾಂ ತನ್ಮಮಾಚಕ್ಷ್ವ ಯದಿ ವೇತ್ಥ ಪರಂತಪ।।
ಭಾರತ! ಪರಂತಪ! ಭೀಮಸೇನನು ಹತನಾದ ನಂತರ ಯುದ್ಧಮಾಡಲು ಬೇರೆ ಯಾರಿದ್ದಾರೆ? ಶತ್ರುಗಳ ಕುರಿತು ನೀನು ತಿಳಿದುಕೊಂಡಿದ್ದೇ ಆದರೆ ಇದನ್ನು ನನಗೆ ಹೇಳು.
05054058a ಪಂಚ ತೇ ಭ್ರಾತರಃ ಸರ್ವೇ ಧೃಷ್ಟದ್ಯುಮ್ನೋಽಥ ಸಾತ್ಯಕಿಃ।
05054058c ಪರೇಷಾಂ ಸಪ್ತ ಯೇ ರಾಜನ್ಯೋಧಾಃ ಪರಮಕಂ ಬಲಂ।।
ರಾಜನ್! ಅವರು ಎಲ್ಲ ಐವರು ಸಹೋದರರು, ಧೃಷ್ಟದ್ಯುಮ್ನ ಮತ್ತು ಸಾತ್ಯಕಿ ಈ ಏಳು ಮಂದಿ ಮಾತ್ರ ಶತ್ರುಗಳ ಪರಮ ಬಲಶಾಲಿ ಯೋದ್ಧರು.
05054059a ಅಸ್ಮಾಕಂ ತು ವಿಶಿಷ್ಟಾ ಯೇ ಭೀಷ್ಮದ್ರೋಣಕೃಪಾದಯಃ।
05054059c ದ್ರೌಣಿರ್ವೈಕರ್ತನಃ ಕರ್ಣಃ ಸೋಮದತ್ತೋಽಥ ಬಾಹ್ಲಿಕಃ।।
05054060a ಪ್ರಾಗ್ಜ್ಯೋತಿಷಾಧಿಪಃ ಶಲ್ಯ ಆವಂತ್ಯೋಽಥ ಜಯದ್ರಥಃ।
05054060c ದುಃಶಾಸನೋ ದುರ್ಮುಖಶ್ಚ ದುಃಸ್ಸಹಶ್ಚ ವಿಶಾಂ ಪತೇ।।
05054061a ಶ್ರುತಾಯುಶ್ಚಿತ್ರಸೇನಶ್ಚ ಪುರುಮಿತ್ರೋ ವಿವಿಂಶತಿಃ।
05054061c ಶಲೋ ಭೂರಿಶ್ರವಾಶ್ಚೋಭೌ ವಿಕರ್ಣಶ್ಚ ತವಾತ್ಮಜಃ।।
ವಿಶಾಂಪತೇ! ಆದರೆ ನಮ್ಮಲ್ಲಿ ಇವರು ವಿಶಿಷ್ಟರಾಗಿದ್ದಾರೆ: ಭೀಷ್ಮ, ದ್ರೋಣ, ಕೃಪ, ದ್ರೌಣಿ, ವೈಕರ್ತನ ಕರ್ಣ, ಸೋಮದತ್ತ, ಬಾಹ್ಲೀಕ, ಪ್ರಾಗ್ಜ್ಯೋತಿಷಾಧಿಪ, ಶಲ್ಯ, ಅವಂತಿಯವರಿಬ್ಬರು (ವಿಂದ ಮತ್ತು ಅನುವಿಂದ), ಜಯದ್ರಥ, ದುಃಶಾಸನ, ದುರ್ಮುಖ, ದುಃಸ್ಸಹ, ಶ್ರುತಾಯು, ಚಿತ್ರಸೇನ, ಪುರುಮಿತ್ರ, ವಿವಿಂಶತಿ, ಶಲ, ಭೂರಿಶ್ರವ ಮತ್ತು ನಿನ್ನ ಮಗ ವಿಕರ್ಣ.
05054062a ಅಕ್ಷೌಹಿಣ್ಯೋ ಹಿ ಮೇ ರಾಜನ್ದಶೈಕಾ ಚ ಸಮಾಹೃತಾಃ।
05054062c ನ್ಯೂನಾಃ ಪರೇಷಾಂ ಸಪ್ತೈವ ಕಸ್ಮಾನ್ಮೇ ಸ್ಯಾತ್ಪರಾಜಯಃ।।
ರಾಜನ್! ನಾನು ಹನ್ನೊಂದು ಅಕ್ಷೌಹಿಣಿಗಳನ್ನು ಒಟ್ಟುಹಾಕಿದ್ದೇನೆ. ಶತ್ರುಗಳದ್ದು ಏಳೇ ಇರುವಾಗ ನಾನು ಹೇಗೆ ಪರಾಜಯ ಹೊಂದುತ್ತೇನೆ?
05054063a ಬಲಂ ತ್ರಿಗುಣತೋ ಹೀನಂ ಯೋಧ್ಯಂ ಪ್ರಾಹ ಬೃಹಸ್ಪತಿಃ।
05054063c ಪರೇಭ್ಯಸ್ತ್ರಿಗುಣಾ ಚೇಯಂ ಮಮ ರಾಜನ್ನನೀಕಿನೀ।।
ಮೂರನೇ ಒಂದು ಭಾಗ ಕಡಿಮೆಯಿರುವ ಸೇನೆಯೊಂದಿಗೆ ಯುದ್ಧಮಾಡಬೇಕೆಂದು ಬೃಹಸ್ಪತಿಯು ಹೇಳಿದ್ದಾನೆ. ರಾಜನ್! ನನ್ನ ಸೇನೆಯು ಶತ್ರುಗಳ ಸೇನೆಗಿಂತ ಮೂರನೇ ಒಂದು ಭಾಗ ಹೆಚ್ಚಿದೆ.
05054064a ಗುಣಹೀನಂ ಪರೇಷಾಂ ಚ ಬಹು ಪಶ್ಯಾಮಿ ಭಾರತ।
05054064c ಗುಣೋದಯಂ ಬಹುಗುಣಮಾತ್ಮನಶ್ಚ ವಿಶಾಂ ಪತೇ।।
ವಿಶಾಂಪತೇ! ಶತ್ರುಗಳಲ್ಲಿ ನಾನು ಬಹಳಷ್ಟು ಗುಣಹೀನತೆಯನ್ನು ಮತ್ತು ನಮ್ಮಲ್ಲಿ ಬಹುಮಟ್ಟಿನ ಗುಣೋದಯವನ್ನು ಕಾಣುತ್ತೇನೆ.
05054065a ಏತತ್ಸರ್ವಂ ಸಮಾಜ್ಞಾಯ ಬಲಾಗ್ರ್ಯಂ ಮಮ ಭಾರತ।
05054065c ನ್ಯೂನತಾಂ ಪಾಂಡವಾನಾಂ ಚ ನ ಮೋಹಂ ಗಂತುಮರ್ಹಸಿ।।
ಭಾರತ! ಈ ಎಲ್ಲ ನನ್ನ ಬಲದ ಹೆಚ್ಚಿನದನ್ನು ಮತ್ತು ಪಾಂಡವರ ನ್ಯೂನತೆಗಳನ್ನು ಅರ್ಥಮಾಡಿಕೊಂಡು ನೀನು ದುಃಖಿಸಬಾರದು.””
05054066 ವೈಶಂಪಾಯನ ಉವಾಚ।
05054066a ಇತ್ಯುಕ್ತ್ವಾ ಸಂಜಯಂ ಭೂಯಃ ಪರ್ಯಪೃಚ್ಚತ ಭಾರತ।
05054066c ವಿಧಿತ್ಸುಃ ಪ್ರಾಪ್ತಕಾಲಾನಿ ಜ್ಞಾತ್ವಾ ಪರಪುರಂಜಯಃ।।
ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿ ಆ ಸಮಯದಲ್ಲಿ ಏನನ್ನು ತಿಳಿದುಕೊಳ್ಳಬೇಕು ಎಂದು ಅರಿತಿರುವ ಆ ಪರಪುರಂಜಯನು ಸಂಜಯನನ್ನು ಪುನಃ ಕೇಳಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ದುರ್ಯೋಧನವಾಕ್ಯೇ ಚತುಃಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ಐವತ್ನಾಲ್ಕನೆಯ ಅಧ್ಯಾಯವು.