053 ಸಂಜಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 53

ಸಾರ

ಪಾಂಡವರನ್ನು ಮೋಸಗೊಳಿಸಿ ವಧಿಸಲು ಮುಂದಾಗಿರುವ ದುರ್ಯೋಧನ ಮತ್ತು ಅವನ ಅನುಯಾಯಿಗಳನ್ನು ತಡೆಯಬೇಕೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು (1-19).

05053001 ಸಂಜಯ ಉವಾಚ।
05053001a ಏವಮೇತನ್ಮಹಾರಾಜ ಯಥಾ ವದಸಿ ಭಾರತ।
05053001c ಯುದ್ಧೇ ವಿನಾಶಃ ಕ್ಷತ್ರಸ್ಯ ಗಾಂಡೀವೇನ ಪ್ರದೃಶ್ಯತೇ।।

ಸಂಜಯನು ಹೇಳಿದನು: “ಮಹಾರಾಜ! ಭಾರತ! ನೀನು ಹೇಳಿದಂತೆಯೇ ಆಗುವುದು. ಯುದ್ಧದಲ್ಲಿ ಗಾಂಡೀವದಿಂದ ಕ್ಷತ್ರಿಯರ ವಿನಾಶವು ಕಾಣುತ್ತಿದೆ.

05053002a ಇದಂ ತು ನಾಭಿಜಾನಾಮಿ ತವ ಧೀರಸ್ಯ ನಿತ್ಯಶಃ।
05053002c ಯತ್ಪುತ್ರವಶಮಾಗಚ್ಚೇಃ ಸತ್ತ್ವಜ್ಞಾಃ ಸವ್ಯಸಾಚಿನಃ।।

ಆದರೆ ನಿನ್ನ ಬುದ್ಧಿಯು ನನಗೆ ಅರ್ಥವಾಗುತ್ತಿಲ್ಲ. ಸವ್ಯಸಾಚಿಯ ಸತ್ವವನ್ನು ತಿಳಿದೂ ಕೂಡ ನೀನು ನಿತ್ಯವೂ ನಿನ್ನ ಮಗನ ವಶವಾಗುತ್ತಿದ್ದೀಯೆ.

05053003a ನೈಷ ಕಾಲೋ ಮಹಾರಾಜ ತವ ಶಶ್ವತ್ಕೃತಾಗಸಃ।
05053003c ತ್ವಯಾ ಹ್ಯೇವಾದಿತಃ ಪಾರ್ಥಾ ನಿಕೃತಾ ಭರತರ್ಷಭ।।

ಮಹಾರಾಜ! ಭರತರ್ಷಭ! ಮೊದಲಿನಿಂದಲೂ ಪಾರ್ಥರಿಗೆ ನೀನು ಕೆಟ್ಟದ್ದನ್ನೇ ಮಾಡಿದ್ದೀಯೆ. ಈಗ ಅವುಗಳ ಕುರಿತು ಪಶ್ಚಾತ್ತಾಪ ಪಡುವ ಕಾಲವಲ್ಲ.

05053004a ಪಿತಾ ಶ್ರೇಷ್ಠಃ ಸುಹೃದ್ಯಶ್ಚ ಸಮ್ಯಕ್ಪ್ರಣಿಹಿತಾತ್ಮವಾನ್।
05053004c ಆಸ್ಥೇಯಂ ಹಿ ಹಿತಂ ತೇನ ನ ದ್ರೋಗ್ಧಾ ಗುರುರುಚ್ಯತೇ।।

ತಂದೆಯ ಸ್ಥಾನದಲ್ಲಿರುವವನು ಯಾವಾಗಲೂ ಸ್ನೇಹಿತನಾಗಿರಬೇಕು, ಮತ್ತು ಒಳ್ಳೆಯದನ್ನೇ ಬಯಸಬೇಕು. ಆದರೆ ಅವರ ಹಿತವನ್ನು ಬಯಸದವನನ್ನು ಹಿರಿಯರ ಸ್ಥಾನದಲ್ಲಿರಬಾರದೆಂದು ಹೇಳುತ್ತಾರೆ.

05053005a ಇದಂ ಜಿತಮಿದಂ ಲಬ್ಧಮಿತಿ ಶ್ರುತ್ವಾ ಪರಾಜಿತಾನ್।
05053005c ದ್ಯೂತಕಾಲೇ ಮಹಾರಾಜ ಸ್ಮಯಸೇ ಸ್ಮ ಕುಮಾರವತ್।।

ಮಹಾರಾಜ! ದ್ಯೂತದ ಸಮಯದಲ್ಲಿ ಅವರು ಸೋತುದನ್ನು ಕೇಳಿದಾಗ ನೀನು ಬಾಲಕನಂತೆ ನಗುತ್ತಾ “ಇದನ್ನು ಗೆದ್ದೆವು! ಇದು ದೊರಕಿತು!” ಎಂದು ಹೇಳಿದ್ದೆ.

05053006a ಪರುಷಾಣ್ಯುಚ್ಯಮಾನಾನ್ಸ್ಮ ಪುರಾ ಪಾರ್ಥಾನುಪೇಕ್ಷಸೇ।
05053006c ಕೃತ್ಸ್ನಂ ರಾಜ್ಯಂ ಜಯಂತೀತಿ ಪ್ರಪಾತಂ ನಾನುಪಶ್ಯಸಿ।।

ಇಡೀ ರಾಜ್ಯವನ್ನು ಗೆದ್ದರು ಎಂಬ ಸಂತೋಷದಲ್ಲಿ ಪಾರ್ಥರಿಗೆ ಕಠೋರವಾಗಿ ಮಾತನಾಡುತ್ತಿದ್ದಾಗ ನೀನು ಉಪೇಕ್ಷಿಸಲಿಲ್ಲ. ನಿನ್ನ ಮುಂದಿರುವ ಪ್ರಪಾತವು ನಿನಗೆ ಕಾಣಲಿಲ್ಲ.

05053007a ಪಿತ್ರ್ಯಂ ರಾಜ್ಯಂ ಮಹಾರಾಜ ಕುರವಸ್ತೇ ಸಜಾಂಗಲಾಃ।
05053007c ಅಥ ವೀರೈರ್ಜಿತಾಂ ಭೂಮಿಮಖಿಲಾಂ ಪ್ರತ್ಯಪದ್ಯಥಾಃ।।

ಮಹಾರಾಜ! ಕುರುಜಂಗಲವು ಮಾತ್ರ ನಿನ್ನ ಪಿತ್ರಾರ್ಜಿತ ರಾಜ್ಯವಾಗಿತ್ತು. ಆ ವೀರರು ಗೆದ್ದನಂತರವೇ ನಿನಗೆ ಈ ಅಖಿಲ ಭೂಮಿಯೂ ದೊರಕಿತು.

05053008a ಬಾಹುವೀರ್ಯಾರ್ಜಿತಾ ಭೂಮಿಸ್ತವ ಪಾರ್ಥೈರ್ನಿವೇದಿತಾ।
05053008c ಮಯೇದಂ ಕೃತಮಿತ್ಯೇವ ಮನ್ಯಸೇ ರಾಜಸತ್ತಮ।।

ರಾಜಸತ್ತಮ! ಪಾಂಡವರು ತಮ್ಮ ಬಾಹುವೀರ್ಯದಿಂದ ಗೆದ್ದ ಭೂಮಿಯನ್ನು ನಿನಗೆ ಒಪ್ಪಿಸಿದ್ದಾರೆ. ಆದರೆ ನೀನು ಇವೆಲ್ಲವನ್ನೂ ನಾನೇ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ.

05053009a ಗ್ರಸ್ತಾನ್ಗಂಧರ್ವರಾಜೇನ ಮಜ್ಜತೋ ಹ್ಯಪ್ಲವೇಽಂಭಸಿ।
05053009c ಆನಿನಾಯ ಪುನಃ ಪಾರ್ಥಃ ಪುತ್ರಾಂಸ್ತೇ ರಾಜಸತ್ತಮ।।

ರಾಜಸತ್ತಮ! ನಿನ್ನ ಪುತ್ರರು ಗಂಧರ್ವರಾಜನಿಂದ ಸೆರೆಹಿಡಿಯಲ್ಪಟ್ಟು ದೋಣಿಯಿಲ್ಲದೇ ಸಾಗರದಲ್ಲಿ ತೇಲುತ್ತಿರುವಂತಿರುವಾಗ ಪಾರ್ಥನೇ ಅವರನ್ನು ಹಿಂದಿರುಗಿ ಪಡೆದು ತಂದನು.

05053010a ಕುಮಾರವಚ್ಚ ಸ್ಮಯಸೇ ದ್ಯೂತೇ ವಿನಿಕೃತೇಷು ಯತ್।
05053010c ಪಾಂಡವೇಷು ವನಂ ರಾಜನ್ಪ್ರವ್ರಜತ್ಸು ಪುನಃ ಪುನಃ।।

ದ್ಯೂತದಲ್ಲಿ ಮೋಸಗೊಂಡು ಪಾಂಡವರು ವನಕ್ಕೆ ಹೊರಡುವಾಗ, ರಾಜನ್! ಬಾಲಕನಂತೆ ನೀನು ಪುನಃ ಪುನಃ ನಗುತ್ತಿದ್ದೆ.

05053011a ಪ್ರವರ್ಷತಃ ಶರವ್ರಾತಾನರ್ಜುನಸ್ಯ ಶಿತಾನ್ಬಹೂನ್।
05053011c ಅಪ್ಯರ್ಣವಾ ವಿಶುಷ್ಯೇಯುಃ ಕಿಂ ಪುನರ್ಮಾಂಸಯೋನಯಃ।।

ಅರ್ಜುನನು ಹರಿತ ಬಾಣಗಳ ಭಾರೀ ಮಳೆಯನ್ನು ಸುರಿಸುವಾಗ ಸಾಗರದ ನೀರೂ ಬತ್ತಿಹೋಗುತ್ತದೆ. ಇನ್ನು ಮಾಂಸಯೋನಿಯಲ್ಲಿ ಜನಿಸಿದ ಮನುಷ್ಯರು ಯಾವ ಲೆಖ್ಕಕ್ಕೆ?

05053012a ಅಸ್ಯತಾಂ ಫಲ್ಗುನಃ ಶ್ರೇಷ್ಠೋ ಗಾಂಡೀವಂ ಧನುಷಾಂ ವರಂ।
05053012c ಕೇಶವಃ ಸರ್ವಭೂತಾನಾಂ ಚಕ್ರಾಣಾಂ ಚ ಸುದರ್ಶನಂ।।

ಬಿಲ್ಗಾರರಲ್ಲಿ ಫಲ್ಗುನನು ಶ್ರೇಷ್ಠ. ಧನುಸ್ಸುಗಳಲ್ಲಿ ಗಾಂಡೀವವು ಶ್ರೇಷ್ಠ. ಸರ್ವಭೂತಗಳಲ್ಲಿ ಕೇಶವ ಮತ್ತು ಚಕ್ರಗಳಲ್ಲಿ ಸುದರ್ಶನವು ಶ್ರೇಷ್ಠ.

05053013a ವಾನರೋ ರೋಚಮಾನಶ್ಚ ಕೇತುಃ ಕೇತುಮತಾಂ ವರಃ।
05053013c ಏವಮೇತಾನಿ ಸರಥೋ ವಹಂ ಶ್ವೇತಹಯೋ ರಣೇ।
05053013e ಕ್ಷಪಯಿಷ್ಯತಿ ನೋ ರಾಜನ್ಕಾಲಚಕ್ರಮಿವೋದ್ಯತಂ।।

ರಾಜನ್! ಧ್ವಜಗಳಲ್ಲಿ ವಾನರನು ಕಾಣುತ್ತಿರುವ ಧ್ವಜವು ಶ್ರೇಷ್ಠ. ಇವೆಲ್ಲವುಗಳನ್ನೂ ಹೊಂದಿರುವ ಶ್ವೇತಹಯಗಳು ಒಯ್ಯುವ ರಥದಿಂದ ರಣದಲ್ಲಿ ಅವನು ಕಾಲಚಕ್ರವು ಉರುಳುವಂತೆ ನಮ್ಮನ್ನು ನಾಶಗೊಳಿಸುತ್ತಾನೆ.

05053014a ತಸ್ಯಾದ್ಯ ವಸುಧಾ ರಾಜನ್ನಿಖಿಲಾ ಭರತರ್ಷಭ।
05053014c ಯಸ್ಯ ಭೀಮಾರ್ಜುನೌ ಯೋಧೌ ಸ ರಾಜಾ ರಾಜಸತ್ತಮ।।

ಭರತರ್ಷಭ! ರಾಜಸತ್ತಮ! ಯಾರೊಡನೆ ಭೀಮಾರ್ಜುನರು ಯೋಧರಾಗಿದ್ದಾರೋ ಅವನೇ ರಾಜ. ಅಖಿಲ ವಸುಧೆಯೂ ಅವನದ್ದೇ ಆಗುತ್ತದೆ.

05053015a ತಥಾ ಭೀಮಹತಪ್ರಾಯಾಂ ಮಜ್ಜಂತೀಂ ತವ ವಾಹಿನೀಂ।
05053015c ದುರ್ಯೋಧನಮುಖಾ ದೃಷ್ಟ್ವಾ ಕ್ಷಯಂ ಯಾಸ್ಯಂತಿ ಕೌರವಾಃ।।

ನಿನ್ನ ಸೇನೆಯು ಭೀಮನಿಂದ ಪುಡಿಯಾಗಿ ಹತಪ್ರಾಯವಾಗುವುದನ್ನು ನೋಡುತ್ತಾ ದುರ್ಯೋಧನನ ನಾಯಕತ್ವದಲ್ಲಿರುವ ಕೌರವರು ನಾಶ ಹೋಗುತ್ತಾರೆ.

05053016a ನ ಹಿ ಭೀಮಭಯಾದ್ಭೀತಾ ಲಪ್ಸ್ಯಂತೇ ವಿಜಯಂ ವಿಭೋ।
05053016c ತವ ಪುತ್ರಾ ಮಹಾರಾಜ ರಾಜಾನಶ್ಚಾನುಸಾರಿಣಃ।।

ಮಹಾರಾಜ! ವಿಭೋ! ನಿನ್ನ ಪುತ್ರರು ಮತ್ತು ಅವರನ್ನು ಅನುಸರಿಸುವ ರಾಜರು ಭೀಮನ ಭಯದಿಂದ ಭೀತರಾಗಿ ವಿಜಯವನ್ನು ಹೊಂದಲಾರರು.

05053017a ಮತ್ಸ್ಯಾಸ್ತ್ವಾಮದ್ಯ ನಾರ್ಚಂತಿ ಪಾಂಚಾಲಾಶ್ಚ ಸಕೇಕಯಾಃ।
05053017c ಶಾಲ್ವೇಯಾಃ ಶೂರಸೇನಾಶ್ಚ ಸರ್ವೇ ತ್ವಾಮವಜಾನತೇ।
05053017e ಪಾರ್ಥಂ ಹ್ಯೇತೇ ಗತಾಃ ಸರ್ವೇ ವೀರ್ಯಜ್ಞಾಸ್ತಸ್ಯ ಧೀಮತಃ।।

ಈಗ ಮತ್ಸ್ಯರು, ಪಾಂಚಾಲರು ಮತ್ತು ಜೊತೆಗೆ ಕೇಕಯರು ನಿನ್ನನ್ನು ಗೌರವಿಸುವುದಿಲ್ಲ. ಶಾಲ್ವರು ಮತ್ತು ಶೂರಸೇನರು ಎಲ್ಲರೂ ನಿನ್ನನ್ನು ಕೀಳಾಗಿ ಕಾಣುತ್ತಾರೆ. ಏಕೆಂದರೆ ಅವರೆಲ್ಲರೂ ವೀರ್ಯಜ್ಞ ಧೀಮತ ಪಾರ್ಥನ ಕಡೆ ಹೋಗಿದ್ದಾರೆ.

05053018a ಅನರ್ಹಾನೇವ ತು ವಧೇ ಧರ್ಮಯುಕ್ತಾನ್ವಿಕರ್ಮಣಾ।
05053018c ಸರ್ವೋಪಾಯೈರ್ನಿಯಂತವ್ಯಃ ಸಾನುಗಃ ಪಾಪಪೂರುಷಃ।
05053018e ತವ ಪುತ್ರೋ ಮಹಾರಾಜ ನಾತ್ರ ಶೋಚಿತುಮರ್ಹಸಿ।।

ಮಹಾರಾಜ! ಅನರ್ಹರಾದ ಆ ಧರ್ಮಯುಕ್ತರನ್ನು ವಧಿಸಲು ಮತ್ತು ಮೋಸಗೊಳಿಸಲು ಮುಂದುವರೆದಿರುವ ನಿನ್ನ ಪುತ್ರ ಪಾಪಪುರುಷನನ್ನು ಅವನ ಅನುಯಾಯಿಗಳೊಂದಿಗೆ ಸರ್ವೋಪಾಯಗಳನ್ನು ಬಳಸಿ ತಡೆಯಬೇಕಾಗಿದೆ. ಅದರಲ್ಲಿ ಶೋಕಿಸಬಾರದು.

05053019a ದ್ಯೂತಕಾಲೇ ಮಯಾ ಚೋಕ್ತಂ ವಿದುರೇಣ ಚ ಧೀಮತಾ।
05053019c ಯದಿದಂ ತೇ ವಿಲಪಿತಂ ಪಾಂಡವಾನ್ಪ್ರತಿ ಭಾರತ।
05053019e ಅನೀಶೇನೇವ ರಾಜೇಂದ್ರ ಸರ್ವಮೇತನ್ನಿರರ್ಥಕಂ।।

ದ್ಯೂತಕಾಲದಲ್ಲಿ ನಾನೂ, ಧೀಮತ ವಿದುರನೂ ಹೇಳಿದ್ದೆವು. ಭಾರತ! ರಾಜೇಂದ್ರ! ಇದಕ್ಕೆಲ್ಲ ನೀನು ಹೊಣೆಗಾರನಲ್ಲ ಎಂದು ಪಾಂಡವರಿಗೋಸ್ಕರ ಈ ರೀತಿ ವಿಲಪಿಸುವುದು ನಿರರ್ಥಕ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ಮೂರನೆಯ ಅಧ್ಯಾಯವು.