ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 51
ಸಾರ
ಅರ್ಜುನನ ಕುರಿತು ತನಗಿದ್ದ ಭಯವನ್ನು ಧೃತರಾಷ್ಟ್ರನು ಸಭೆಯಲ್ಲಿ ಹೇಳಿಕೊಂಡಿದುದು (1-19).
05051001 ಧೃತರಾಷ್ಟ್ರ ಉವಾಚ।
05051001a ಯಸ್ಯ ವೈ ನಾನೃತಾ ವಾಚಃ ಪ್ರವೃತ್ತಾ ಅನುಶುಶ್ರುಮಃ।
05051001c ತ್ರೈಲೋಕ್ಯಮಪಿ ತಸ್ಯ ಸ್ಯಾದ್ಯೋದ್ಧಾ ಯಸ್ಯ ಧನಂಜಯಃ।।
ಧೃತರಾಷ್ಟ್ರನು ಹೇಳಿದನು: “ಯಾರ ತುಟಿಗಳಿಂದ ನಾವು ಒಂದಾದರೂ ಸುಳ್ಳು ಮಾತನ್ನು ಕೇಳಿರದ ಮತ್ತು ಯಾರ ಯೋಧನು ಧನಂಜಯನೋ ಅವನು ತ್ರಿಲೋಕಗಳನ್ನೂ ಆಳಬಹುದು.
05051002a ತಸ್ಯೈವ ಚ ನ ಪಶ್ಯಾಮಿ ಯುಧಿ ಗಾಂಡೀವಧನ್ವನಃ।
05051002c ಅನಿಶಂ ಚಿಂತಯಾನೋಽಪಿ ಯಃ ಪ್ರತೀಯಾದ್ರಥೇನ ತಂ।।
ಹಗಲೂ ರಾತ್ರಿ ನಾನು ಚಿಂತಿಸಿದರೂ ಯುದ್ಧದಲ್ಲಿ ಆ ಗಾಂಡೀವ ಧನ್ವಿಯನ್ನು ರಥದಲ್ಲಿ ಎದುರಿಸುವ ಯಾರನ್ನೂ ಕಾಣಲಾರೆ!
05051003a ಅಸ್ಯತಃ ಕರ್ಣಿನಾಲೀಕಾನ್ಮಾರ್ಗಣಾನ್ ಹೃದಯಚ್ಚಿದಃ।
05051003c ಪ್ರತ್ಯೇತಾ ನ ಸಮಃ ಕಶ್ಚಿದ್ಯುಧಿ ಗಾಂಡೀವಧನ್ವನಃ।।
ಯುದ್ಧದಲ್ಲಿ ಗಾಂಡೀವಧನ್ವಿಯು ಹೃದಯಗಳನ್ನು ಭೇದಿಸುವ ಕರ್ಣಿ-ನಾಲೀಕಗಳನ್ನು ಮತ್ತು ಮಾರ್ಗಣಗಳನ್ನು ಪ್ರತಿದ್ವಂದಿಸುವ ಸರಿಸಮನು ಯಾರೂ ಇಲ್ಲ.
05051004a ದ್ರೋಣಕರ್ಣೌ ಪ್ರತೀಯಾತಾಂ ಯದಿ ವೀರೌ ನರರ್ಷಭೌ।
05051004c ಮಾಹಾತ್ಮ್ಯಾತ್ಸಂಶಯೋ ಲೋಕೇ ನ ತ್ವಸ್ತಿ ವಿಜಯೋ ಮಮ।।
ಒಂದುವೇಳೆ ವೀರ ನರರ್ಷಭರಾದ ದ್ರೋಣ-ಕರ್ಣರು ಅವನನ್ನು ಎದುರಿಸಿನಿಂತರೂ ಮಹಾತ್ಮರಾದ ಅವರಿಗೆ ಅಲ್ಪವೇ ಅವಕಾಶವಿರಬಹುದು. ನನಗೆ ವಿಜಯವು ಇಲ್ಲವೆಂಬುದರಲ್ಲಿ ಸಂಶಯವಿಲ್ಲ.
05051005a ಘೃಣೀ ಕರ್ಣಃ ಪ್ರಮಾದೀ ಚ ಆಚಾರ್ಯಃ ಸ್ಥವಿರೋ ಗುರುಃ।
05051005c ಸಮರ್ಥೋ ಬಲವಾನ್ಪಾರ್ಥೋ ದೃಢಧನ್ವಾ ಜಿತಕ್ಲಮಃ।
05051005e ಭವೇತ್ಸುತುಮುಲಂ ಯುದ್ಧಂ ಸರ್ವಶೋಽಪ್ಯಪರಾಜಯಃ।।
ಕರ್ಣನು ಕನಿಕರವುಳ್ಳವನು ಮತ್ತು ಪ್ರಮಾದಕ್ಕೊಳಗಾಗುವನು. ಆಚಾರ್ಯನು ವೃದ್ಧ ಮತ್ತು ಗುರು. ಬಲವಾನ್ ಪಾರ್ಥನು ದೃಢಧನ್ವಿ ಮತ್ತು ಇಬ್ಬರನ್ನೂ ಗೆಲ್ಲಲು ಸಮರ್ಥ. ನಡೆಯುವ ತುಮಲ ಯುದ್ಧದಲ್ಲಿ ಎಲ್ಲರಿಗೂ ಪರಾಜಯವೇ ಆಗುತ್ತದೆ.
05051006a ಸರ್ವೇ ಹ್ಯಸ್ತ್ರವಿದಃ ಶೂರಾಃ ಸರ್ವೇ ಪ್ರಾಪ್ತಾ ಮಹದ್ಯಶಃ।
05051006c ಅಪಿ ಸರ್ವಾಮರೈಶ್ವರ್ಯಂ ತ್ಯಜೇಯುರ್ನ ಪುನರ್ಜಯಂ।
05051006e ವಧೇ ನೂನಂ ಭವೇಚ್ಚಾಂತಿಸ್ತಯೋರ್ವಾ ಫಲ್ಗುನಸ್ಯ ವಾ।।
ಎಲ್ಲರೂ ಅಸ್ತ್ರವಿದರು, ಶೂರರು ಮತ್ತು ಎಲ್ಲರೂ ಮಹಾ ಯಶಸ್ಸನ್ನು ಪಡೆದಿದ್ದಾರೆ. ಎಲ್ಲರೂ ಅಮರ ಐಶ್ವರ್ಯವನ್ನು ತ್ಯಜಿಸಿಯಾರು ಆದರೆ ಜಯವನ್ನಲ್ಲ. ಇವರಿಬ್ಬರ ಅಥವಾ ಅರ್ಜುನನ ವಧೆಯಾದರೆ ಮಾತ್ರ ಶಾಂತಿಯುಂಟಾಗುತ್ತದೆ.
05051007a ನ ತು ಜೇತಾರ್ಜುನಸ್ಯಾಸ್ತಿ ಹಂತಾ ಚಾಸ್ಯ ನ ವಿದ್ಯತೇ।
05051007c ಮನ್ಯುಸ್ತಸ್ಯ ಕಥಂ ಶಾಮ್ಯೇನ್ಮಂದಾನ್ಪ್ರತಿ ಯ ಉತ್ಥಿತಃ।।
ಆದರೂ ಅರ್ಜುನನ್ನು ಗೆಲ್ಲುವವನಾಗಲೀ ಕೊಲ್ಲುವವನಾಗಲೀ ಇಲ್ಲಿರುವುದು ತಿಳಿದಿಲ್ಲ. ನನ್ನ ಮಂದಬುದ್ಧಿಯವರ ಪ್ರತಿ ಹೆಚ್ಚಾಗಿರುವ ಅವನ ಕೋಪವನ್ನು ಹೇಗೆ ತಣಿಸಬಹುದು?
05051008a ಅನ್ಯೇಽಪ್ಯಸ್ತ್ರಾಣಿ ಜಾನಂತಿ ಜೀಯಂತೇ ಚ ಜಯಂತಿ ಚ।
05051008c ಏಕಾಂತವಿಜಯಸ್ತ್ವೇವ ಶ್ರೂಯತೇ ಫಲ್ಗುನಸ್ಯ ಹ।।
ಇತರರೂ ಕೂಡ ಅಸ್ತ್ರಗಳನ್ನು ತಿಳಿದಿದ್ದಾರೆ. ಅವರು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ ಕೂಡ. ಆದರೆ ಫಲ್ಗುನನಿಗೆ ವಿಜಯವೊಂದನ್ನೇ ಕೇಳಿದ್ದೇವೆ.
05051009a ತ್ರಯಸ್ತ್ರಿಂಶತ್ಸಮಾಹೂಯ ಖಾಂಡವೇಽಗ್ನಿಮತರ್ಪಯತ್।
05051009c ಜಿಗಾಯ ಚ ಸುರಾನ್ಸರ್ವಾನ್ನಾಸ್ಯ ವೇದ್ಮಿ ಪರಾಜಯಂ।।
ಅವನು ಮೂವತ್ತ್ಮೂರು ದೇವತೆಗಳನ್ನು ಎದುರಿಸಿ ಖಾಂಡವದಲ್ಲಿ ಅಗ್ನಿಯನ್ನು ತೃಪ್ತಪಡಿಸಿದನು. ಅವನು ಸುರರೆಲ್ಲರನ್ನೂ ಗೆದ್ದನು. ಅವನಿಗೆ ಪರಾಜಯವಾದುದು ನನಗೆ ತಿಳಿದಿಲ್ಲ.
05051010a ಯಸ್ಯ ಯಂತಾ ಹೃಷೀಕೇಶಃ ಶೀಲವೃತ್ತಸಮೋ ಯುಧಿ।
05051010c ಧ್ರುವಸ್ತಸ್ಯ ಜಯಸ್ತಾತ ಯಥೇಂದ್ರಸ್ಯ ಜಯಸ್ತಥಾ।।
ಅಯ್ಯಾ! ಯುದ್ಧದಲ್ಲಿ ಯಾರ ಸಾರಥಿಯು ಶೀಲ, ನಡತೆಗಳಲ್ಲಿ ಸರಿಸಮನಾಗಿರುವ ಹೃಷೀಕೇಶನೋ ಅವನ ಜಯವು, ಇಂದ್ರನಿಗೆ ಜಯವು ಹೇಗೋ ಹಾಗೆ ನಿಶ್ಚಯವಾದುದು.
05051011a ಕೃಷ್ಣಾವೇಕರಥೇ ಯತ್ತಾವಧಿಜ್ಯಂ ಗಾಂಡಿವಂ ಧನುಃ।
05051011c ಯುಗಪತ್ತ್ರೀಣಿ ತೇಜಾಂಸಿ ಸಮೇತಾನ್ಯನುಶುಶ್ರುಮಃ।।
ಕೃಷ್ಣರಿಬ್ಬರು ಮತ್ತು ಗಾಂಡೀವ ಧನುಸ್ಸು ಈ ಮೂರೂ ತೇಜಸ್ಸುಗಳೂ ಒಂದೇ ರಥದಲ್ಲಿ ಸೇರಿಕೊಂಡಿವೆ ಎಂದು ಕೇಳಿದ್ದೇವೆ.
05051012a ನೈವ ನೋಽಸ್ತಿ ಧನುಸ್ತಾದೃಂ ನ ಯೋದ್ಧಾ ನ ಚ ಸಾರಥಿಃ।
05051012c ತಚ್ಚ ಮಂದಾ ನ ಜಾನಂತಿ ದುರ್ಯೋಧನವಶಾನುಗಾಃ।।
ಅದರಂಥಹ ಧನುಸ್ಸಾಗಲೀ ಅವರಂಥಹ ಸಾರಥಿಯಾಗಲೀ ಯೋಧನಾಗಲೀ ನಮ್ಮಲ್ಲಿಲ್ಲ. ಇದು ಮಂದಬುದ್ಧಿ ದುರ್ಯೋಧನನಿಗೆ ಮತ್ತು ಅವನ ಅನುಯಾಯಿಗಳಿಗೆ ತಿಳಿದಿಲ್ಲ.
05051013a ಶೇಷಯೇದಶನಿರ್ದೀಪ್ತೋ ನಿಪತನ್ಮೂರ್ಧ್ನಿ ಸಂಜಯ।
05051013c ನ ತು ಶೇಷಂ ಶರಾಃ ಕುರ್ಯುರಸ್ತಾಸ್ತಾತ ಕಿರೀಟಿನಾ।।
ಮೇಲಿಂದ ಬಿದ್ದ ಸಿಡಿಲು ತಲೆಯ ಮೇಲೆ ಸ್ವಲ್ಪವನ್ನಾದರೂ ಉಳಿಸೀತು. ಆದರೆ ಸಂಜಯ! ಕಿರೀಟಿಯು ಪ್ರಯೋಗಿಸಿದ ಬಾಣವು ಏನನ್ನೂ ಉಳಿಸುವುದಿಲ್ಲ.
05051014a ಅಪಿ ಚಾಸ್ಯನ್ನಿವಾಭಾತಿ ನಿಘ್ನನ್ನಿವ ಚ ಫಲ್ಗುನಃ।
05051014c ಉದ್ಧರನ್ನಿವ ಕಾಯೇಭ್ಯಃ ಶಿರಾಂಸಿ ಶರವೃಷ್ಟಿಭಿಃ।।
ಫಲ್ಗುನನು ಈಗಲೇ ಕೊಲ್ಲುತ್ತಿರುವಂತೆ, ತನ್ನ ಶರವೃಷ್ಟಿಯಿಂದ ಕಾಯಗಳಿಂದ ತಲೆಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ.
05051015a ಅಪಿ ಬಾಣಮಯಂ ತೇಜಃ ಪ್ರದೀಪ್ತಮಿವ ಸರ್ವತಃ।
05051015c ಗಾಂಡೀವೇದ್ಧಂ ದಹೇತಾಜೌ ಪುತ್ರಾಣಾಂ ಮಮ ವಾಹಿನೀಂ।।
ಎಲ್ಲೆಡೆಯೂ ಸುಡುತ್ತಿರುವ ತೇಜಸ್ಸಿನಿಂದ ಉರಿಯುತ್ತಿರುವ ಅವನ ಗಾಂಡೀವದಿಂದ ಹೊರಬಂದ ಬಾಣಗುಂಪುಗಳು ನನ್ನ ಮಕ್ಕಳ ಸೇನೆಯನ್ನು ಸುಡದೆಯೇ ಇರುತ್ತದೆಯೇ?
05051016a ಅಪಿ ಸಾ ರಥಘೋಷೇಣ ಭಯಾರ್ತಾ ಸವ್ಯಸಾಚಿನಃ।
05051016c ವಿತ್ರಸ್ತಾ ಬಹುಲಾ ಸೇನಾ ಭಾರತೀ ಪ್ರತಿಭಾತಿ ಮೇ।।
ಆ ಸವ್ಯಸಾಚಿಯ ರಥಘೋಷದಿಂದಲೇ ಭಯಾರ್ತರಾಗಿ ಭಾರತ ಸೇನೆಯು ಬಹುಸಂಖ್ಯೆಗಳಲ್ಲಿ ನಡುಗುತ್ತಿರುವಂತೆ ನನಗೆ ತೋರುತ್ತಿದೆ.
05051017a ಯಥಾ ಕಕ್ಷಂ ದಹತ್ಯಗ್ನಿಃ ಪ್ರವೃದ್ಧಃ ಸರ್ವತಶ್ಚರನ್।
05051017c ಮಹಾರ್ಚಿರನಿಲೋದ್ಧೂತಸ್ತದ್ವದ್ಧಕ್ಷ್ಯತಿ ಮಾಮಕಾನ್।।
ಒಣಗಿದ ಮರಗಳನ್ನು ಸುಟ್ಟು ಹೆಚ್ಚಾಗಿ ಎಲ್ಲಕಡೆ ಪಸರಿಸುವಂತೆ, ಗಾಳಿಯಿಂದ ಬೆಂಕಿಯು ಭುಗಿಲೆದ್ದು ಸುಡುವಂತೆ ಅವನು ನನ್ನವರನ್ನು ಸುಟ್ಟು ಹಾಕುತ್ತಾನೆ.
05051018a ಯದೋದ್ವಮನ್ನಿಶಿತಾನ್ಬಾಣಸಂಘಾನ್ ಸ್ಥಾತಾತತಾಯೀ ಸಮರೇ ಕಿರೀಟೀ।
05051018c ಸೃಷ್ಟೋಽಂತಕಃ ಸರ್ವಹರೋ ವಿಧಾತ್ರಾ ಯಥಾ ಭವೇತ್ತದ್ವದವಾರಣೀಯಃ।।
ನಿಶಿತ ಬಾಣಸಂಘಗಳನ್ನು ಉಗುಳುತ್ತಾ ಸಮರಕ್ಕೆ ಸನ್ನದ್ಧನಾಗಿ ನಿಂತ ಕಿರೀಟಿಯು, ವಿಧಾತ್ರನು ಸೃಷ್ಟಿಸಿದ, ಸರ್ವವನ್ನೂ ಕಳೆಯುವ ಅಂತಕನಂತೆ ತಪ್ಪಿಸಿಕೊಳ್ಳಲಾರದಂತೆ ಇರುತ್ತಾನೆ.
05051019a ಯದಾ ಹ್ಯಭೀಕ್ಷ್ಣಂ ಸುಬಹೂನ್ಪ್ರಕಾರಾಂ ಶ್ರೋತಾಸ್ಮಿ ತಾನಾವಸಥೇ ಕುರೂಣಾಂ।
05051019c ತೇಷಾಂ ಸಮಂತಾಚ್ಚ ತಥಾ ರಣಾಗ್ರೇ ಕ್ಷಯಃ ಕಿಲಾಯಂ ಭರತಾನುಪೈತಿ।।
ಈಗ ಕುರುಗಳಿರುವಲ್ಲಿ, ಅವರು ಸೇರಿರುವಲ್ಲಿ, ರಣದ ಮೊದಲು ಬಹಳ ಪ್ರಕಾರದ ಕುರುಹಗಳ ಕುರಿತು ಕೇಳಿದಾಗ, ಭರತರ ಕ್ಷಯವು ಬಂದಿದೆ ಎಂದು ನನಗನ್ನಿಸುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೊಂದನೆಯ ಅಧ್ಯಾಯವು.