ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 50
ಸಾರ
ಭೀಮಸೇನನ ಕುರಿತು ತನಗಿದ್ದ ಭಯವನ್ನು ಧೃತರಾಷ್ಟ್ರನು ಸಭೆಯಲ್ಲಿ ಹೇಳಿಕೊಂಡಿದುದು (1-61).
05050001 ಧೃತರಾಷ್ಟ್ರ ಉವಾಚ।
05050001a ಸರ್ವ ಏತೇ ಮಹೋತ್ಸಾಹಾ ಯೇ ತ್ವಯಾ ಪರಿಕೀರ್ತಿತಾಃ।
05050001c ಏಕತಸ್ತ್ವೇವ ತೇ ಸರ್ವೇ ಸಮೇತಾ ಭೀಮ ಏಕತಃ।।
ಧೃತರಾಷ್ಟ್ರನು ಹೇಳಿದನು: “ನೀನು ಹೇಳಿದ ಈ ಎಲ್ಲರೂ ಮಹೋತ್ಸಾಹಿಗಳು. ಇವರೆಲ್ಲರೂ ಒಂದಾಗಿ ಸೇರಿ ಭೀಮನೊಬ್ಬನಿಗೇ ಸಮಾನರು.
05050002a ಭೀಮಸೇನಾದ್ಧಿ ಮೇ ಭೂಯೋ ಭಯಂ ಸಂಜಾಯತೇ ಮಹತ್।
05050002c ಕ್ರುದ್ಧಾದಮರ್ಷಣಾತ್ತಾತ ವ್ಯಾಘ್ರಾದಿವ ಮಹಾರುರೋಃ।।
ಭೀಮಸೇನನ ಕುರಿತು ಯೋಚಿಸಿದಾಗಲೆಲ್ಲ ನನಗೆ ಮತ್ತೆ ಮತ್ತೆ ಮಹಾ ಭಯವು ಹುಟ್ಟುತ್ತದೆ. ಮಗೂ! ಕೃದ್ಧನಾದ ಭೀಮನನ್ನು ನೋಡಿ ನನಗೆ ಹುಲಿಯನ್ನು ಕಂಡ ಮಹಾ ರುರುವಿನಂತೆ ಭಯವಾಗುತ್ತದೆ.
05050003a ಜಾಗರ್ಮಿ ರಾತ್ರಯಃ ಸರ್ವಾ ದೀರ್ಘಮುಷ್ಣಂ ಚ ನಿಃಶ್ವಸನ್।
05050003c ಭೀತೋ ವೃಕೋದರಾತ್ತಾತ ಸಿಂಹಾತ್ಪಶುರಿವಾಬಲಃ।।
ಎಲ್ಲ ರಾತ್ರಿಗಳೂ ನಾನು, ಅಬಲ ಪಶುವು ಸಿಂಹದಿಂದ ಹೇಗೋ ಹಾಗೆ ವೃಕೋದರನಿಂದ ಭೀತನಾಗಿ ದೀರ್ಘ ಬಿಸಿ ನಿಃಶ್ವಾಸಗಳನ್ನು ಬಿಡುತ್ತಾ ಎದ್ದಿರುತ್ತೇನೆ.
05050004a ನ ಹಿ ತಸ್ಯ ಮಹಾಬಾಹೋಃ ಶಕ್ರಪ್ರತಿಮತೇಜಸಃ।
05050004c ಸೈನ್ಯೇಽಸ್ಮಿನ್ಪ್ರತಿಪಶ್ಯಾಮಿ ಯ ಏನಂ ವಿಷಹೇದ್ಯುಧಿ।।
ತೇಜಸ್ಸಿನಲ್ಲಿ ಶಕ್ರನಿಗೆ ಸರಿಸಮನಾದ ಆ ಮಾಹಾಬಾಹುವಿನ ಸರಿಸಮನಾದವ ಯಾರನ್ನೂ ನಾನು ಈ ಸೇನೆಯಲ್ಲಿ ಕಾಣುವುದಿಲ್ಲ.
05050005a ಅಮರ್ಷಣಶ್ಚ ಕೌಂತೇಯೋ ದೃಢವೈರಶ್ಚ ಪಾಂಡವಃ।
05050005c ಅನರ್ಮಹಾಸೀ ಸೋನ್ಮಾದಸ್ತಿರ್ಯಕ್ಪ್ರೇಕ್ಷೀ ಮಹಾಸ್ವನಃ।।
ಆ ಕೌಂತೇಯ ಪಾಂಡವನು ಅಮರ್ಷಣ, ಪಕ್ಕಾ ವೈರವನ್ನಿಟ್ಟುಕೊಳ್ಳುವವನು, ತಮಾಷೆಗೂ ನಗುವವನಲ್ಲ, ಸಿಟ್ಟಿನಲ್ಲಿ ಹುಚ್ಚಾಗುತ್ತಾನೆ, ಕೀಳಾಗಿ ನೋಡುತ್ತಾನೆ ಮತ್ತು ಗುಡುಗಿನ ಧ್ವನಿಯಲ್ಲಿ ಮಾತನಾಡುತ್ತಾನೆ.
05050006a ಮಹಾವೇಗೋ ಮಹೋತ್ಸಾಹೋ ಮಹಾಬಾಹುರ್ಮಹಾಬಲಃ।
05050006c ಮಂದಾನಾಂ ಮಮ ಪುತ್ರಾಣಾಂ ಯುದ್ಧೇನಾಂತಂ ಕರಿಷ್ಯತಿ।।
ಆ ಮಹಾವೇಗಿ, ಮಹೋತ್ಸಾಹೀ, ಮಹಾಬಾಹು ಮಹಾಬಲನು ಯುದ್ಧದಲ್ಲಿ ನನ್ನ ಮಂದ ಮಕ್ಕಳನ್ನು ಅಂತ್ಯಗೊಳಿಸುತ್ತಾನೆ.
05050007a ಊರುಗ್ರಾಹಗೃಹೀತಾನಾಂ ಗದಾಂ ಬಿಭ್ರದ್ವೃಕೋದರಃ।
05050007c ಕುರೂಣಾಮೃಷಭೋ ಯುದ್ಧೇ ದಂಡಪಾಣಿರಿವಾಂತಕಃ।।
ಅಂತಕ ಯಮನು ದಂಡವನ್ನು ಹಿಡಿದು ಹೇಗೋ ಹಾಗೆ ಗದೆಯನ್ನು ತಿರುಗಿಸುತ್ತಾ ಆ ಕುರುಗಳ ವೃಷಭ ವೃಕೋದರನು ಯುದ್ಧದಲ್ಲಿ ಹೋರಾಡುತ್ತಾನೆ.
05050008a ಶೈಕ್ಯಾಯಸಮಯೀಂ ಘೋರಾಂ ಗದಾಂ ಕಾಂಚನಭೂಷಿತಾಂ।
05050008c ಮನಸಾಹಂ ಪ್ರಪಶ್ಯಾಮಿ ಬ್ರಹ್ಮದಂಡಮಿವೋದ್ಯತಂ।।
ಈಗಲೂ ಕೂಡ ಉಕ್ಕಿನಿಂದ ಮಾಡಲ್ಪಟ್ಟ, ಕಾಂಚನಭೂಷಿತ ಆ ಘೋರ ದಂಡವನ್ನು ನೆನೆಸಿಕೊಂಡಾಗಲೆಲ್ಲ ಅದನ್ನು ಎತ್ತಿ ಹಿಡಿದಿರುವ ಒಂದು ಬ್ರಹ್ಮದಂಡದಂತೆ ಕಾಣುತ್ತೇನೆ.
05050009a ಯಥಾ ರುರೂಣಾಂ ಯೂಥೇಷು ಸಿಂಹೋ ಜಾತಬಲಶ್ಚರೇತ್।
05050009c ಮಾಮಕೇಷು ತಥಾ ಭೀಮೋ ಬಲೇಷು ವಿಚರಿಷ್ಯತಿ।।
ಬಲಶಾಲಿ ಸಿಂಹವು ರುರುಗಳ ಗುಂಪುಗಳ ಮಧ್ಯೆ ಹೇಗೆ ಸುಳಿದಾಡುವುದೋ ಹಾಗೆ ಭೀಮನು ನನ್ನ ಸೇನೆಗಳ ಮಧ್ಯೆ ಸಂಚರಿಸುತ್ತಾನೆ.
05050010a ಸರ್ವೇಷಾಂ ಮಮ ಪುತ್ರಾಣಾಂ ಸ ಏಕಃ ಕ್ರೂರವಿಕ್ರಮಃ।
05050010c ಬಹ್ವಾಶೀ ವಿಪ್ರತೀಪಶ್ಚ ಬಾಲ್ಯೇಽಪಿ ರಭಸಃ ಸದಾ।।
ಅವನೊಬ್ಬನೇ ನನ್ನ ಮಕ್ಕಳಮೇಲೆ ಕ್ರೂರ ವಿಕ್ರಮವನ್ನು ತೋರಿಸಿದವನು. ಬಾಲಕನಾಗಿದ್ದಲೂ ಕೂಡ ಅವನು ಹೆಚ್ಚು ತಿಂದು ರಭಸದಿಂದ ಯಾವಾಗಲೂ ಅವರನ್ನು ಕಾಡುತ್ತಿದ್ದನು.
05050011a ಉದ್ವೇಪತೇ ಮೇ ಹೃದಯಂ ಯದಾ ದುರ್ಯೋಧನಾದಯಃ।
05050011c ಬಾಲ್ಯೇಽಪಿ ತೇನ ಯುಧ್ಯಂತೋ ವಾರಣೇನೇವ ಮರ್ದಿತಾಃ।।
ಬಾಲ್ಯದಲ್ಲಿ ದುರ್ಯೋಧನಾದಿಗಳು ಅವನೊಡನೆ ಯುದ್ಧಮಾಡುವಾಗ ಆನೆಯಿಂದಲೋ ಎಂಬಂತೆ ಪೀಡಿತರಾದಾಗ ನನ್ನ ಹೃದಯವು ಉದ್ವೇಗಗೊಳ್ಳುತ್ತಿತ್ತು.
05050012a ತಸ್ಯ ವೀರ್ಯೇಣ ಸಂಕ್ಲಿಷ್ಟಾ ನಿತ್ಯಮೇವ ಸುತಾ ಮಮ।
05050012c ಸ ಏವ ಹೇತುರ್ಭೇದಸ್ಯ ಭೀಮೋ ಭೀಮಪರಾಕ್ರಮಃ।।
ನಿತ್ಯವೂ ನನ್ನ ಮಕ್ಕಳು ಅವನ ವೀರ್ಯದಿಂದ ಕಷ್ಟವನ್ನು ಅನುಭವಿಸಿದರು. ಆ ಭೀಮಪರಾಕ್ರಮಿ ಭೀಮನೇ ಈ ಒಡಕಿಗೆ ಕಾರಣ.
05050013a ಗ್ರಸಮಾನಮನೀಕಾನಿ ನರವಾರಣವಾಜಿನಾಂ।
05050013c ಪಶ್ಯಾಮೀವಾಗ್ರತೋ ಭೀಮಂ ಕ್ರೋಧಮೂರ್ಛಿತಮಾಹವೇ।
ಯುದ್ಧದಲ್ಲಿ ಕ್ರೋಧಮೂರ್ಛಿತನಾದ ಭೀಮ, ನಮ್ಮ ಸೇನೆಯ ಸೈನಿಕರು, ಆನೆಗಳು ಮತ್ತು ಕುದುರೆಗಳನ್ನು ಹಿಡಿದು ಮುಂದುವರೆಯುವ ಭೀಮನನ್ನು ನಾನು ಕಾಣುತ್ತಿದ್ದೇನೆ.
05050014a ಅಸ್ತ್ರೇ ದ್ರೋಣಾರ್ಜುನಸಮಂ ವಾಯುವೇಗಸಮಂ ಜವೇ।
05050014c ಸಂಜಯಾಚಕ್ಷ್ವ ಮೇ ಶೂರಂ ಭೀಮಸೇನಮಮರ್ಷಣಂ।।
ಸಂಜಯ! ಅಸ್ತ್ರಗಳಲ್ಲಿ ದ್ರೋಣಾರ್ಜುನರ ಸಮಾನನಾದ, ವೇಗದಲ್ಲಿ ವಾಯುವೇಗಕ್ಕೆ ಸಮನಾದ ಅಮರ್ಷಣ ಶೂರ ಭೀಮಸೇನನ ಕುರಿತು ನನಗೆ ಹೇಳು!
05050015a ಅತಿಲಾಭಂ ತು ಮನ್ಯೇಽಹಂ ಯತ್ತೇನ ರಿಪುಘಾತಿನಾ।
05050015c ತದೈವ ನ ಹತಾಃ ಸರ್ವೇ ಮಮ ಪುತ್ರಾ ಮನಸ್ವಿನಾ।।
ಆ ರಿಪುಘಾತಿ ಮನಸ್ವಿಯು ಅಂದೇ ನನ್ನ ಮಕ್ಕಳೆಲ್ಲರನ್ನೂ ಕೊಲ್ಲಲಿಲ್ಲ ಎನ್ನುವುದೇ ಅತಿಯಾದ ಲಾಭ ಎಂದು ತಿಳಿದುಕೊಳ್ಳುತ್ತೇನೆ.
05050016a ಯೇನ ಭೀಮಬಲಾ ಯಕ್ಷಾ ರಾಕ್ಷಸಾಶ್ಚ ಸಮಾಹತಾಃ।
05050016c ಕಥಂ ತಸ್ಯ ರಣೇ ವೇಗಂ ಮಾನುಷಃ ಪ್ರಸಹಿಷ್ಯತಿ।।
ಯಾರ ಭೀಮಬಲದಿಂದ ಯಕ್ಷ-ರಾಕ್ಷಸರು ಹತರಾದರೋ ಅವನ ವೇಗವನ್ನು ರಣದಲ್ಲಿ ಮನುಷ್ಯರು ಹೇಗೆ ಸಹಿಸಿಕೊಂಡಾರು?
05050017a ನ ಸ ಜಾತು ವಶೇ ತಸ್ಥೌ ಮಮ ಬಾಲೋಽಪಿ ಸಂಜಯ।
05050017c ಕಿಂ ಪುನರ್ಮಮ ದುಷ್ಪುತ್ರೈಃ ಕ್ಲಿಷ್ಟಃ ಸಂಪ್ರತಿ ಪಾಂಡವಃ।।
ಸಂಜಯ! ಬಾಲಕನಾಗಿದ್ದಾಗಲೂ ಕೂಡ ಅವನು ಸಂಪೂರ್ಣ ನನ್ನ ವಶದಲ್ಲಿ ಬಂದಿರಲೇ ಇಲ್ಲ. ಈಗ ಪುನಃ ದುಷ್ಕೃತ್ಯಗಳಿಂದ ರೋಷಗೊಂಡ ಆ ಪಾಂಡವನು ಹೇಗೆ ತಾನೇ ನನ್ನ ಹಿಡಿತಕ್ಕೆ ಬರುತ್ತಾನೆ?
05050018a ನಿಷ್ಠುರಃ ಸ ಚ ನೈಷ್ಠುರ್ಯಾದ್ಭಜ್ಯೇದಪಿ ನ ಸಮ್ನಮೇತ್।
05050018c ತಿರ್ಯಕ್ಪ್ರೇಕ್ಷೀ ಸಂಹತಭ್ರೂಃ ಕಥಂ ಶಾಮ್ಯೇದ್ವೃಕೋದರಃ।।
ನಿಷ್ಠೂರಮಾಡದಿದ್ದರೂ ನಿಷ್ಠುರಗೊಳ್ಳುವ, ಭಜಿಸಿದರೂ ಸೌಮ್ಯಗೊಳ್ಳದ, ಹುಬ್ಬುಗಳನ್ನು ಗಂಟಿಕ್ಕಿ ಕೆಳನೋಡುವ ವೃಕೋದರನನ್ನು ಹೇಗೆ ಶಾಂತಗೊಳಿಸಬೇಕು?
05050019a ಬೃಹದಂಸೋಽಪ್ರತಿಬಲೋ ಗೌರಸ್ತಾಲ ಇವೋದ್ಗತಃ।
05050019c ಪ್ರಮಾಣತೋ ಭೀಮಸೇನಃ ಪ್ರಾದೇಶೇನಾಧಿಕೋಽರ್ಜುನಾತ್।।
05050020a ಜವೇನ ವಾಜಿನೋಽತ್ಯೇತಿ ಬಲೇನಾತ್ಯೇತಿ ಕುಂಜರಾನ್।
05050020c ಅವ್ಯಕ್ತಜಲ್ಪೀ ಮಧ್ವಕ್ಷೋ ಮಧ್ಯಮಃ ಪಾಂಡವೋ ಬಲೀ।।
ಬಹುನಾಯಕತ್ವವುಳ್ಳ, ಅಪ್ರತಿಮ ಬಲಶಾಲಿ ಮತ್ತು ಗೌರವರ್ಣದ, ತಾಳವೃಕ್ಷದಂತೆ ಎತ್ತರನಾಗಿರುವ, ಭೀಮಸೇನನು ಪ್ರಮಾಣದಲ್ಲಿ ಅರ್ಜುನನಿಗಿಂತ ಒಂದು ಬೆರಳು ಹೆಚ್ಚಾಗಿದ್ದಾನೆ. ಆ ಬಲಶಾಲಿ ಮಧ್ಯಮ ಪಾಂಡವನು ವೇಗದಲ್ಲಿ ಕುದುರೆಗಳಂತೆ, ಬಲದಲ್ಲಿ ಆನೆಗಳಂತೆ ಇದ್ದಾನೆ. ಚೆನ್ನಾಗಿ ಮಾತನಾಡುತ್ತಾನೆ. ಅವನ ಕಣ್ಣುಗಳು ಜೇನಿನ ಬಣ್ಣದ್ದು.
05050021a ಇತಿ ಬಾಲ್ಯೇ ಶ್ರುತಃ ಪೂರ್ವಂ ಮಯಾ ವ್ಯಾಸಮುಖಾತ್ಪುರಾ।
05050021c ರೂಪತೋ ವೀರ್ಯತಶ್ಚೈವ ಯಾಥಾತಥ್ಯೇನ ಪಾಂಡವಃ।।
ರೂಪ ಮತ್ತು ವೀರ್ಯದಲ್ಲಿ ಆ ಪಾಂಡವನು ಹಾಗೆಯೇ ಬಾಲ್ಯದಲ್ಲಿಯೂ ಇದ್ದಿದ್ದನೆಂದು ನಾನು ಹಿಂದೆ ವ್ಯಾಸನ ಬಾಯಿಯಿಂದಲೇ ಕೇಳಿದ್ದೆ.
05050022a ಆಯಸೇನ ಸ ದಂಡೇನ ರಥಾನ್ನಾಗಾನ್ ಹಯಾನ್ನರಾನ್।
05050022c ಹನಿಷ್ಯತಿ ರಣೇ ಕ್ರುದ್ಧೋ ಭೀಮಃ ಪ್ರಹರತಾಂ ವರಃ।।
ಪ್ರಹಾರಿಗಳಲ್ಲಿ ಶ್ರೇಷ್ಠನಾದ ಬೀಮನು ಕ್ರುದ್ಧನಾಗಿ ರಣದಲ್ಲಿ ಅವನ ಉಕ್ಕಿನ ಗದೆಯಿಂದ ರಥಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ನರರನ್ನೂ ಕೊಲ್ಲುತ್ತಾನೆ.
05050023a ಅಮರ್ಷೀ ನಿತ್ಯಸಂರಬ್ಧೋ ರೌದ್ರಃ ಕ್ರೂರಪರಾಕ್ರಮಃ।
05050023c ಮಮ ತಾತ ಪ್ರತೀಪಾನಿ ಕುರ್ವನ್ಪೂರ್ವಂ ವಿಮಾನಿತಃ।।
ಅಯ್ಯಾ! ಆ ಅಮರ್ಷಿ, ನಿತ್ಯಸಂರಬ್ಧ, ರೌದ್ರ, ಕ್ರೂರಪರಾಕ್ರಮಿಯನ್ನು ನಾನು ಹಿಂದೆ ಅವನ ಇಚ್ಛೆಗೆ ವಿರುದ್ಧವಾಗಿ ಮಾಡಿ ಅವನನ್ನು ಅಪಮಾನಿಸಿದೆ.
05050024a ನಿಷ್ಕೀರ್ಣಾಮಾಯಸೀಂ ಸ್ಥೂಲಾಂ ಸುಪರ್ವಾಂ ಕಾಂಚನೀಂ ಗದಾಂ।
05050024c ಶತಘ್ನೀಂ ಶತನಿರ್ಹ್ರಾದಾಂ ಕಥಂ ಶಕ್ಷ್ಯಂತಿ ಮೇ ಸುತಾಃ।।
ಹೇಗೆ ತಾನೇ ನನ್ನ ಮಕ್ಕಳು ನೇರವಾಗಿರುವ, ಹರಿತವಾಗಿರುವ, ದಪ್ಪಗಿರುವ, ಸುಂದರ ಕೊನೆಗಳನ್ನುಳ್ಳ, ಬಂಗಾರದಿಂದ ಅಲಂಕೃತವಾಗಿರುವ, ನೂರುಜನರನ್ನು ಕೊಲ್ಲಬಲ್ಲ, ಮತ್ತು ಎಸೆದರೆ ಅಮೋಘ ಶಬ್ಧವನ್ನುಂಟುಮಾಡುವ ಆ ಗದೆಯನ್ನು ಸಹಿಸಿಕೊಳ್ಳುತ್ತಾರೆ?
05050025a ಅಪಾರಮಪ್ಲವಾಗಾಧಂ ಸಮುದ್ರಂ ಶರವೇಗಿನಂ।
05050025c ಭೀಮಸೇನಮಯಂ ದುರ್ಗಂ ತಾತ ಮಂದಾಸ್ತಿತೀರ್ಷವಃ।।
ಅಯ್ಯಾ! ಭೀಮಸೇನಮಯವಾದ ಅಪಾರವಾದ ಆಳವಾದ ನೀರುಳ್ಳ, ಶರಗಳ ವೇಗದಿಂದ ಅಲ್ಲೋಲಕಲ್ಲೋಲಗೊಂಡು ದಾಟಲು ಅಸಾಧ್ಯವಾದ ಸಮುದ್ರವನ್ನು ಈ ಮಂದಮತಿಗಳು ಹೇಗೆ ದಾಟುತ್ತಾರೆ?
05050026a ಕ್ರೋಶತೋ ಮೇ ನ ಶೃಣ್ವಂತಿ ಬಾಲಾಃ ಪಂಡಿತಮಾನಿನಃ।
05050026c ವಿಷಮಂ ನಾವಬುಧ್ಯಂತೇ ಪ್ರಪಾತಂ ಮಧುದರ್ಶಿನಃ।।
ಪಂಡಿತರೆಂದು ತಿಳಿದುಕೊಂಡಿರುವ, ಆದರೂ ಬಾಲಕರಂತಿರುವ ಅವರು ನಾನೆಷ್ಟು ಕೂಗಿ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ. ಕೇವಲ ಜೇನುತುಪ್ಪವನ್ನು ನೋಡಿದ ಅವರಿಗೆ ಎದುರಿಗಿರುವ ಆಳವಾದ ಪ್ರಪಾತವು ಕಾಣಿಸುವುದಿಲ್ಲ.
05050027a ಸಮ್ಯುಗಂ ಯೇ ಕರಿಷ್ಯಂತಿ ನರರೂಪೇಣ ವಾಯುನಾ।
05050027c ನಿಯತಂ ಚೋದಿತಾ ಧಾತ್ರಾ ಸಿಂಹೇನೇವ ಮಹಾಮೃಗಾಃ।।
ನರರೂಪದಲ್ಲಿರುವ ಆ ವಾಯುವಿನೊಂದಿಗೆ ಯಾರು ಯುದ್ಧವನ್ನು ಮಾಡುತ್ತಾರೋ ಅವರು ಧಾತ್ರನಿಂದ ಚೋದಿತರಾಗಿ ಸಿಂಹದಿಂದ ಮಹಾಮೃಗವು ಕೊಲ್ಲಲ್ಪಡುವಂತೆ ನಾಶಹೊಂದುತ್ತಾರೆ.
05050028a ಶೈಕ್ಯಾಂ ತಾತ ಚತುಷ್ಕಿಷ್ಕುಂ ಷಡಸ್ರಿಮಮಿತೌಜಸಂ।
05050028c ಪ್ರಹಿತಾಂ ದುಃಖಸಂಸ್ಪರ್ಶಾಂ ಕಥಂ ಶಕ್ಷ್ಯಂತಿ ಮೇ ಸುತಾಃ।।
ಅಯ್ಯಾ! ಪೂರ್ಣ ನಾಲ್ಕು ಅಡಿ ಉದ್ದವಾಗಿರುವ, ಆರೂ ಕಡೆಯಲ್ಲಿ ಅಮಿತ ಬಲಶಾಲಿಯಾಗಿರುವ, ಮುಟ್ಟಿದರೆ ನೋವಾಗುವ ಆ ಗದೆಯನ್ನು ಎಸೆದರೆ ನನ್ನ ಮಕ್ಕಳು ಹೇಗೆ ತಾನೆ ಸಹಿಸಿಯಾರು?
05050029a ಗದಾಂ ಭ್ರಾಮಯತಸ್ತಸ್ಯ ಭಿಂದತೋ ಹಸ್ತಿಮಸ್ತಕಾನ್।
05050029c ಸೃಕ್ಕಿಣೀ ಲೇಲಿಹಾನಸ್ಯ ಬಾಷ್ಪಮುತ್ಸೃಜತೋ ಮುಹುಃ।।
05050030a ಉದ್ದಿಶ್ಯ ಪಾತಾನ್ಪತತಃ ಕುರ್ವತೋ ಭೈರವಾನ್ರವಾನ್।
05050030c ಪ್ರತೀಪಾನ್ಪತತೋ ಮತ್ತಾನ್ಕುಂಜರಾನ್ಪ್ರತಿಗರ್ಜತಃ।।
05050031a ವಿಗಾಹ್ಯ ರಥಮಾರ್ಗೇಷು ವರಾನುದ್ದಿಶ್ಯ ನಿಘ್ನತಃ।
05050031c ಅಗ್ನೇಃ ಪ್ರಜ್ವಲಿತಸ್ಯೇವ ಅಪಿ ಮುಚ್ಯೇತ ಮೇ ಪ್ರಜಾ।।
ಅವನು ಗದೆಯನ್ನು ತಿರುಗಿಸುತ್ತಾ ಆನೆಗಳ ತಲೆಗಳನ್ನು ಒಡೆಯುವಾಗ, ನಾಲಿಗೆಯಿಂದ ತನ್ನ ಬಾಯಿಯ ಅಂಚುಗಳನ್ನು ನೆಕ್ಕುತ್ತಿರುವಾಗ, ದೀರ್ಘ ನಿಟ್ಟುಸಿರುಬಿಡುತ್ತಿರುವಾಗ, ಬೀಳುತ್ತಿರುವ ಮೃಗಗಳ ಭೈರವ ಕೂಗಿಗೆ ಪ್ರತ್ಯುತ್ತರವಾಗಿ ಕೂಗುತ್ತಾ, ವಿರುದ್ಧವಾಗಿ ಬಂದು ಬೀಳುತ್ತಿರುವ ಮದಿಸಿ ಗರ್ಜಿಸುತ್ತಿರುವ ಆನೆಗಳನ್ನು ಎದುರಿಸುವಾಗ, ಮಾರ್ಗಗಳಲ್ಲಿ ರಥಗಳನ್ನೂ ರಥಿಕರನ್ನೂ ಗುರಿಯಿಟ್ಟು ಸಂಹರಿಸುವಾಗ, ಆ ಪ್ರಜ್ವಲಿತ ಅಗ್ನಿಯಿಂದ ಕೂಡ ನನ್ನ ಪ್ರಜೆಗಳು ಉಳಿಯುವುದಿಲ್ಲ.
05050032a ವೀಥೀಂ ಕುರ್ವನ್ಮಹಾಬಾಹುರ್ದ್ರಾವಯನ್ಮಮ ವಾಹಿನೀಂ।
05050032c ನೃತ್ಯನ್ನಿವ ಗದಾಪಾಣಿರ್ಯುಗಾಂತಂ ದರ್ಶಯಿಷ್ಯತಿ।।
ನನ್ನ ಸೇನೆಯನ್ನು ಕತ್ತರಿಸಿ ದಾರಿಯನ್ನು ಮಾಡಿಕೊಂಡು ಓಡಿ ಮುಂದೆ ಬರುವ ಆ ಮಹಾಬಾಹು ಗದಾಪಾಣಿಯು ನರ್ತಿಸುತ್ತಿರುವ ಯುಗಾಂತನಂತೆ ಕಾಣಿಸುತ್ತಾನೆ.
05050033a ಪ್ರಭಿನ್ನ ಇವ ಮಾತಂಗಃ ಪ್ರಭಂಜನ್ಪುಷ್ಪಿತಾನ್ದ್ರುಮಾನ್।
05050033c ಪ್ರವೇಕ್ಷ್ಯತಿ ರಣೇ ಸೇನಾಂ ಪುತ್ರಾಣಾಂ ಮೇ ವೃಕೋದರಃ।।
ಹೂವಿರುವ ಮರಗಳನ್ನು ಕೆಳಗುರುಳಿಸಿ ಬರುವ ಆನೆಗಳಂತೆ ವೃಕೋದರನು ರಣದಲ್ಲಿ ನನ್ನ ಪುತ್ರರ ಸೇನೆಯನ್ನು ಉರುಳಿಸಿ ಮುಂದುವರೆಯುತ್ತಾನೆ.
05050034a ಕುರ್ವನ್ರಥಾನ್ವಿಪುರುಷಾನ್ವಿಧ್ವಜಾನ್ಭಗ್ನಪುಷ್ಕರಾನ್।
05050034c ಆರುಜನ್ಪುರುಷವ್ಯಾಘ್ರೋ ರಥಿನಃ ಸಾದಿನಸ್ತಥಾ।।
05050035a ಗಂಗಾವೇಗ ಇವಾನೂಪಾಂಸ್ತೀರಜಾನ್ವಿವಿಧಾನ್ದ್ರುಮಾನ್।
05050035c ಪ್ರವೇಕ್ಷ್ಯತಿ ಮಹಾಸೇನಾಂ ಪುತ್ರಾಣಾಂ ಮಮ ಸಂಜಯ।।
ಸಂಜಯ! ರಥಗಳನ್ನು ಜನರಿಲ್ಲದಂತೆ ಮಾಡಿ, ಧ್ವಜಗಳಿಲ್ಲದಂತೆ ಮಾಡಿ, ರಥಗಳನ್ನೇರಿ ಹೋರಾಡುವ ಪರುಷವ್ಯಾಘ್ರರನ್ನು ಭಗ್ನ ಮಾಡಿ ಗಂಗೆಯು ವೇಗದಿಂದ ಪ್ರವಾಹದಲ್ಲಿ ವಿವಿಧ ಮರಗಳನ್ನು ಕೊಚ್ಚಿಕೊಂಡು ಹೋಗುವಂತೆ ಅವನು ನನ್ನ ಪುತ್ರರ ಮಹಾಸೇನೆಯನ್ನು ಪ್ರವೇಶಿಸುತ್ತಾನೆ.
05050036a ವಶಂ ನೂನಂ ಗಮಿಷ್ಯಂತಿ ಭೀಮಸೇನಬಲಾರ್ದಿತಾಃ।
05050036c ಮಮ ಪುತ್ರಾಶ್ಚ ಭೃತ್ಯಾಶ್ಚ ರಾಜಾನಶ್ಚೈವ ಸಂಜಯ।।
ಸಂಜಯ! ಭೀಮಸೇನನ ಬಲದಿಂದ ಪೀಡಿತರಾಗಿ ನನ್ನ ಪುತ್ರರೂ, ಅವರ ಸೇವಕರೂ ಮತ್ತು ರಾಜರು ಕೂಡ ಎಲ್ಲ ದಿಕ್ಕುಗಳಲ್ಲಿ ಚದುರಿ ಓಡಿಹೋಗುತ್ತಾರೆ.
05050037a ಯೇನ ರಾಜಾ ಮಹಾವೀರ್ಯಃ ಪ್ರವಿಶ್ಯಾಂತಃಪುರಂ ಪುರಾ।
05050037c ವಾಸುದೇವಸಹಾಯೇನ ಜರಾಸಂಧೋ ನಿಪಾತಿತಃ।।
05050038a ಕೃತ್ಸ್ನೇಯಂ ಪೃಥಿವೀ ದೇವೀ ಜರಾಸಂಧೇನ ಧೀಮತಾ।
05050038c ಮಾಗಧೇಂದ್ರೇಣ ಬಲಿನಾ ವಶೇ ಕೃತ್ವಾ ಪ್ರತಾಪಿತಾ।।
ಅವನು ವಾಸುದೇವನ ಸಹಾಯದಿಂದ ವಯಸ್ಸಾದ ಮಹಾವೀರ ರಾಜ ಜರಾಸಂಧನನ್ನು ಅವನ ಅಂತಃಪುರವನ್ನು ಪ್ರವೇಶಿಸಿ ಉರುಳಿಸಿದನು. ಆ ಧೀಮತ ಮಾಗಧೇಂದ್ರ ಜರಾಸಂಧನಾದರೋ ಈ ದೇವಿ ಪೃಥ್ವಿಯನ್ನಿಡೀ ತನ್ನ ಬಲದಿಂದ ವಶಪಡಿಸಿಕೊಂಡು ಮೆರೆಯುತ್ತಿದ್ದನು.
05050039a ಭೀಷ್ಮಪ್ರತಾಪಾತ್ಕುರವೋ ನಯೇನಾಂಧಕವೃಷ್ಣಯಃ।
05050039c ತೇ ನ ತಸ್ಯ ವಶಂ ಜಗ್ಮುಃ ಕೇವಲಂ ದೈವಮೇವ ವಾ।।
ಭೀಷ್ಮನ ಪ್ರತಾಪದಿಂದ ಕುರುಗಳು ಮತ್ತು ನೀತಿಯಿಂದ ಅಂಧಕ-ವೃಷ್ಣಿಯರು ಅವನ ವಶದಲ್ಲಿ ಬರಲಿಲ್ಲ ಎನ್ನುವುದು ದೈವವೇ ಸರಿ.
05050040a ಸ ಗತ್ವಾ ಪಾಂಡುಪುತ್ರೇಣ ತರಸಾ ಬಾಹುಶಾಲಿನಾ।
05050040c ಅನಾಯುಧೇನ ವೀರೇಣ ನಿಹತಃ ಕಿಂ ತತೋಽಧಿಕಂ।।
ಅವನಲ್ಲಿಗೆ ಹೋಗಿ ಆ ವೀರ ಪಾಂಡುಪುತ್ರನು ತನ್ನ ಬಾಹುಬಲದಿಂದ ಅವಸರದಲ್ಲಿ ಅನಾಯುಧನಾಗಿ ಅವನನ್ನು ಕೊಂದ ಎನ್ನುವುದಕ್ಕಿಂತ ಹೆಚ್ಚಿನದು ಏನಿದೆ?
05050041a ದೀರ್ಘಕಾಲೇನ ಸಂಸಿಕ್ತಂ ವಿಷಮಾಶೀವಿಷೋ ಯಥಾ।
05050041c ಸ ಮೋಕ್ಷ್ಯತಿ ರಣೇ ತೇಜಃ ಪುತ್ರೇಷು ಮಮ ಸಂಜಯ।।
ಬಹಳ ಸಮಯದಿಂದ ವಿಷವನ್ನು ಶೇಖರಿಸಿಟ್ಟುಕೊಂಡಿರುವ ಹಾವಿನಂತೆ ಅವನು ರಣದಲ್ಲಿ ನನ್ನ ಮಕ್ಕಳ ಮೇಲೆ ತನ್ನ ತೀಕ್ಷ್ಣ ವಿಷವನ್ನು ಕಾರುವವನಿದ್ದಾನೆ ಸಂಜಯ!
05050042a ಮಹೇಂದ್ರ ಇವ ವಜ್ರೇಣ ದಾನವಾನ್ದೇವಸತ್ತಮಃ।
05050042c ಭೀಮಸೇನೋ ಗದಾಪಾಣಿಃ ಸೂದಯಿಷ್ಯತಿ ಮೇ ಸುತಾನ್।।
ದೇವಸತ್ತಮ ಮಹೇಂದ್ರನು ವಜ್ರದಿಂದ ದಾನವರನ್ನು ಹೇಗೋ ಹಾಗೆ ಗದಾಪಾಣಿ ಭೀಮಸೇನನು ನನ್ನ ಮಕ್ಕಳನ್ನು ಕೊಲ್ಲುತ್ತಾನೆ.
05050043a ಅವಿಷಹ್ಯಮನಾವಾರ್ಯಂ ತೀವ್ರವೇಗಪರಾಕ್ರಮಂ।
05050043c ಪಶ್ಯಾಮೀವಾತಿತಾಮ್ರಾಕ್ಷಮಾಪತಂತಂ ವೃಕೋದರಂ।।
ಎದುರಿಸಲಾಗದ, ತಪ್ಪಿಸಿಕೊಳ್ಳಲಾರದ ತೀವ್ರವೇಗ ಪರಾಕ್ರಮಿಯು ತಾಮ್ರದಂತೆ ಕೆಂಪುಕಣ್ಣುಗಳೊಂದಿಗೆ ಮೇಲೆ ಬೀಳುವ ವೃಕೋದರನನ್ನು ನಾನು ಕಾಣುತ್ತಿದ್ದೇನೆ.
05050044a ಅಗದಸ್ಯಾಪ್ಯಧನುಷೋ ವಿರಥಸ್ಯ ವಿವರ್ಮಣಃ।
05050044c ಬಾಹುಭ್ಯಾಂ ಯುಧ್ಯಮಾನಸ್ಯ ಕಸ್ತಿಷ್ಠೇದಗ್ರತಃ ಪುಮಾನ್।।
ಭೀಮನು ಗದೆಯನ್ನು ಹಿಡಿಯದೇ, ಧನುಸ್ಸೂ ಇಲ್ಲದೇ, ವಿರಥನಾಗಿ, ಕವಚಗಳಿಲ್ಲದೇ ಬಾಹುಗಳಿಂದ ಯುದ್ಧಮಾಡುತ್ತಿದ್ದರೂ ಅವನನ್ನು ಎದುರಿಸುವ ಪುರುಷನು ಯಾರಿದ್ದಾನೆ?
05050045a ಭೀಷ್ಮೋ ದ್ರೋಣಶ್ಚ ವಿಪ್ರೋಽಯಂ ಕೃಪಃ ಶಾರದ್ವತಸ್ತಥಾ।
05050045c ಜಾನಂತ್ಯೇತೇ ಯಥೈವಾಹಂ ವೀರ್ಯಜ್ಞಾಸ್ತಸ್ಯ ಧೀಮತಃ।।
ಭೀಷ್ಮ, ವಿಪ್ರ ದ್ರೋಣ, ಕೃಪ ಶಾರದ್ವತರು ನಾನು ತಿಳಿದಂತೆ ಆ ಧೀಮತನ ವೀರ್ಯವನ್ನು ತಿಳಿದಿದ್ದಾರೆ.
05050046a ಆರ್ಯವ್ರತಂ ತು ಜಾನಂತಃ ಸಂಗರಾನ್ನ ಬಿಭಿತ್ಸವಃ।
05050046c ಸೇನಾಮುಖೇಷು ಸ್ಥಾಸ್ಯಂತಿ ಮಾಮಕಾನಾಂ ನರರ್ಷಭಾಃ।।
ಇದನ್ನು ತಿಳಿದೂ ಆರ್ಯರಂತೆ ನಡೆದುಕೊಳ್ಳುವ ಮತ್ತು ಸಂಗರದಲ್ಲಿ ಜೀವತೊರೆಯಲು ಬಯಸುವ ಈ ನರರ್ಷಭರು ನನ್ನವರ ಸೇನಾಮುಖದಲ್ಲಿ ನಿಲ್ಲುತ್ತಾರೆ.
05050047a ಬಲೀಯಃ ಸರ್ವತೋ ದಿಷ್ಟಂ ಪುರುಷಸ್ಯ ವಿಶೇಷತಃ।
05050047c ಪಶ್ಯನ್ನಪಿ ಜಯಂ ತೇಷಾಂ ನ ನಿಯಚ್ಚಾಮಿ ಯತ್ಸುತಾನ್।।
ದೈವವು ಎಲ್ಲೆಲ್ಲಿಯೂ, ಅದರಲ್ಲಿಯು ವಿಶೇಷವಾಗಿ ಪುರುಷನ ವಿಷಯದಲ್ಲಿ, ಬಲಶಾಲಿ. ಅವರದೇ ಜಯವನ್ನು ಕಾಣುತ್ತೇನಾದರೂ ಯುದ್ಧಮಾಡುವವರನ್ನು ನಿಯಂತ್ರಿಸಲಾಗುತ್ತಿಲ್ಲ.
05050048a ತೇ ಪುರಾಣಂ ಮಹೇಷ್ವಾಸಾ ಮಾರ್ಗಮೈಂದ್ರಂ ಸಮಾಸ್ಥಿತಾಃ।
05050048c ತ್ಯಕ್ಷ್ಯಂತಿ ತುಮುಲೇ ಪ್ರಾಣಾನ್ರಕ್ಷಂತಃ ಪಾರ್ಥಿವಂ ಯಶಃ।।
ಆ ಮಹೇಷ್ವಾಸರು ಪುರಾತನವಾದ ಇಂದ್ರಮಾರ್ಗದಲ್ಲಿ ಹೋಗಲು ಸಿದ್ಧರಾಗಿದ್ದಾರೆ. ಅವರು ತುಮುಲದಲ್ಲಿ ಪಾರ್ಥಿವ ಯಶಸ್ಸನ್ನು ರಕ್ಷಿಸುತ್ತಾ ಪ್ರಾಣಗಳನ್ನು ತ್ಯಜಿಸುತ್ತಾರೆ.
05050049a ಯಥೈಷಾಂ ಮಾಮಕಾಸ್ತಾತ ತಥೈಷಾಂ ಪಾಂಡವಾ ಅಪಿ।
05050049c ಪೌತ್ರಾ ಭೀಷ್ಮಸ್ಯ ಶಿಷ್ಯಾಶ್ಚ ದ್ರೋಣಸ್ಯ ಚ ಕೃಪಸ್ಯ ಚ।।
ಅಯ್ಯಾ! ನನ್ನ ಮಕ್ಕಳು ಹೇಗೋ ಹಾಗೆ ಪಾಂಡವರೂ ಕೂಡ ಭೀಷ್ಮನ ಮೊಮ್ಮಕ್ಕಳು ಮತ್ತು ದ್ರೋಣ-ಕೃಪರ ಶಿಷ್ಯರು.
05050050a ಯತ್ತ್ವಸ್ಮದಾಶ್ರಯಂ ಕಿಂ ಚಿದ್ದತ್ತಮಿಷ್ಟಂ ಚ ಸಂಜಯ।
05050050c ತಸ್ಯಾಪಚಿತಿಮಾರ್ಯತ್ವಾತ್ಕರ್ತಾರಃ ಸ್ಥವಿರಾಸ್ತ್ರಯಃ।।
ಸಂಜಯ! ಈ ಮೂವರು ವೃದ್ಧರಿಗೆ ನಾವು ಏನೋ ಸ್ವಲ್ಪ ಸಂತೋಷವನ್ನೂ ಆಶ್ರಯವನ್ನೂ ಕೊಟ್ಟಿದ್ದೇವೆ. ಅದಕ್ಕೆ ಬದಲಾಗಿ ನಮಗೆ ಈ ಆರ್ಯರು ಇದನ್ನು ಮಾಡುತ್ತಿದ್ದಾರೆ.
05050051a ಆದದಾನಸ್ಯ ಶಸ್ತ್ರಂ ಹಿ ಕ್ಷತ್ರಧರ್ಮಂ ಪರೀಪ್ಸತಃ।
05050051c ನಿಧನಂ ಬ್ರಾಹ್ಮಣಸ್ಯಾಜೌ ವರಮೇವಾಹುರುತ್ತಮಂ।।
ಶಸ್ತ್ರವನ್ನು ಹಿಡಿದು ಕ್ಷತ್ರಧರ್ಮವನ್ನು ಅನುಸರಿಸಿ ರಣದಲ್ಲಿ ನಿಧನಹೊಂದುವುದು ಈ ಇಬ್ಬರು ಬ್ರಾಹ್ಮಣರ ಉತ್ತಮ ವರವೆಂದೇ ಹೇಳುತ್ತಾರೆ.
05050052a ಸ ವೈ ಶೋಚಾಮಿ ಸರ್ವಾನ್ವೈ ಯೇ ಯುಯುತ್ಸಂತಿ ಪಾಂಡವಾನ್।
05050052c ವಿಕ್ರುಷ್ಟಂ ವಿದುರೇಣಾದೌ ತದೇತದ್ಭಯಮಾಗತಂ।।
ಪಾಂಡವರೊಂದಿಗೆ ಯುದ್ಧಮಾಡುವ ಎಲ್ಲರ ಕುರಿತು ಶೋಕಿಸುತ್ತಿದ್ದೇನೆ. ವಿದುರನು ಮೊಡಲೇ ಕಂಡುಕೊಂಡಿದ್ದ ಆ ಭಯವು ಬಂದಂತಿದೆ.
05050053a ನ ತು ಮನ್ಯೇ ವಿಘಾತಾಯ ಜ್ಞಾನಂ ದುಃಖಸ್ಯ ಸಂಜಯ।
05050053c ಭವತ್ಯತಿಬಲೇ ಹ್ಯೇತಜ್ಞಾನಮಪ್ಯುಪಘಾತಕಂ।।
ಸಂಜಯ! ಜ್ಞಾನವು ದುಃಖವನ್ನು ನಾಶಪಡಿಸುತ್ತದೆ ಎಂದು ಅನ್ನಿಸುವುದಿಲ್ಲ. ಆದರೆ ಅತಿದೊಡ್ಡ ದುಃಖವು ಜ್ಞಾನದ ನಾಶಕ್ಕೆ ಕಾರಣವಾಗಬಹುದು.
05050054a ಋಷಯೋ ಹ್ಯಪಿ ನಿರ್ಮುಕ್ತಾಃ ಪಶ್ಯಂತೋ ಲೋಕಸಂಗ್ರಹಾನ್।
05050054c ಸುಖೇ ಭವಂತಿ ಸುಖಿನಸ್ತಥಾ ದುಃಖೇನ ದುಃಖಿತಾಃ।।
ಲೋಕಸಂಗ್ರಹಗಳಿಂದ ನಿರ್ಮುಕ್ತರಾದ ಋಷಿಗಳು ಕೂಡ ಸುಖಿಗಳು ಸುಖದಲ್ಲಿರುವುದನ್ನು, ದುಃಖಿತರು ದುಃಖದಲ್ಲಿರುವುದನ್ನು ನೋಡುತ್ತಾರೆ.
05050055a ಕಿಂ ಪುನರ್ಯೋಽಹಮಾಸಕ್ತಸ್ತತ್ರ ತತ್ರ ಸಹಸ್ರಧಾ।
05050055c ಪುತ್ರೇಷು ರಾಜ್ಯದಾರೇಷು ಪೌತ್ರೇಷ್ವಪಿ ಚ ಬಂಧುಷು।।
ಹಾಗಿರುವಾಗ ಇನ್ನು - ಸಹಸ್ರಾರು ವಿಷಯಗಳಲ್ಲಿ – ಪುತ್ರರು, ರಾಜ್ಯ, ಪತ್ನಿಯರು, ಮೊಮ್ಮಕ್ಕಳು ಮತ್ತು ಬಂಧುಗಳಲ್ಲಿ – ಆಸಕ್ತನಾಗಿರುವ ನಾನು ಯಾವ ಲೆಕ್ಕಕ್ಕೆ?
05050056a ಸಂಶಯೇ ತು ಮಹತ್ಯಸ್ಮಿನ್ಕಿಂ ನು ಮೇ ಕ್ಷಮಮುತ್ತಮಂ।
05050056c ವಿನಾಶಂ ಹ್ಯೇವ ಪಶ್ಯಾಮಿ ಕುರೂಣಾಮನುಚಿಂತಯನ್।।
ಇಂತಹ ಮಹಾ ಸಂಶಯವು ಬಂದೊದಗಿರುವಾಗ ನನಗೆ ಉತ್ತಮವಾದುದಾದರೂ ಏನು ಆಗಬಹುದು? ಎಷ್ಟೇ ಚಿಂತಿಸಿದರೂ ಕುರುಗಳ ವಿನಾಶವನ್ನೇ ಕಾಣುತ್ತೇನೆ.
05050057a ದ್ಯೂತಪ್ರಮುಖಮಾಭಾತಿ ಕುರೂಣಾಂ ವ್ಯಸನಂ ಮಹತ್।
05050057c ಮಂದೇನೈಶ್ವರ್ಯಕಾಮೇನ ಲೋಭಾತ್ಪಾಪಮಿದಂ ಕೃತಂ।।
ಆ ದ್ಯೂತವೇ ಕುರುಗಳ ಈ ಮಹಾ ವ್ಯಸನಕ್ಕೆ ಮುಖ್ಯ ಕಾರಣವೆಂದು ತೋರುತ್ತಿದೆ. ಲೋಭದಿಂದ ಐಶ್ವರ್ಯವನ್ನು ಬಯಸಿ ಈ ಮಂದಬುದ್ಧಿಯು ಆ ಪಾಪದ ಕೆಲಸವನ್ನು ಮಾಡಿದನು.
05050058a ಮನ್ಯೇ ಪರ್ಯಾಯಧರ್ಮೋಽಯಂ ಕಾಲಸ್ಯಾತ್ಯಂತಗಾಮಿನಃ।
05050058c ಚಕ್ರೇ ಪ್ರಧಿರಿವಾಸಕ್ತೋ ನಾಸ್ಯ ಶಕ್ಯಂ ಪಲಾಯಿತುಂ।।
ಇದು ಅತ್ಯಂತವೇಗದಲ್ಲಿ ಚಲಿಸುತ್ತಿರುವ ಕಾಲದ ಪರ್ಯಾಯ ಧರ್ಮವೆಂದು ನನಗನ್ನಿಸುತ್ತದೆ. ಚಕ್ರದ ಪರಿಧಿಯಲ್ಲಿ ಸಿಲುಕಿಕೊಂಡಿರುವ ನನಗೆ ಬಿಟ್ಟು ಓಡಿಹೋಗಲು ಆಗುತ್ತಿಲ್ಲ.
05050059a ಕಿಂ ನು ಕಾರ್ಯಂ ಕಥಂ ಕುರ್ಯಾಂ ಕ್ವ ನು ಗಚ್ಚಾಮಿ ಸಂಜಯ।
05050059c ಏತೇ ನಶ್ಯಂತಿ ಕುರವೋ ಮಂದಾಃ ಕಾಲವಶಂ ಗತಾಃ।।
ಸಂಜಯ! ಏನು ಮಾಡಲಿ? ಹೇಗೆ ಮಾಡಲಿ? ಎಲ್ಲಿ ಹೋಗಲಿ? ಕಾಲದ ವಶದಲ್ಲಿ ಬಂದಿರುವ ಈ ಮಂದ ಕುರುಗಳು ನಾಶವಾಗುತ್ತಾರೆ.
05050060a ಅವಶೋಽಹಂ ಪುರಾ ತಾತ ಪುತ್ರಾಣಾಂ ನಿಹತೇ ಶತೇ।
05050060c ಶ್ರೋಷ್ಯಾಮಿ ನಿನದಂ ಸ್ತ್ರೀಣಾಂ ಕಥಂ ಮಾಂ ಮರಣಂ ಸ್ಪೃಶೇತ್।।
ಅಯ್ಯಾ! ನೂರು ಮಕ್ಕಳು ಹತರಾಗಿ ಸ್ತ್ರೀಯರ ಕೂಗನ್ನು ಕೇಳುವುದರ ಮೊದಲೇ ನನಗೆ ಮರಣವು ಏಕೆ ಬರುವುದಿಲ್ಲ ಎಂದು ಶೋಕಿಸುತ್ತಿದ್ದೇನೆ.
05050061a ಯಥಾ ನಿದಾಘೇ ಜ್ವಲನಃ ಸಮಿದ್ಧೋ ದಹೇತ್ಕಕ್ಷಂ ವಾಯುನಾ ಚೋದ್ಯಮಾನಃ।
05050061c ಗದಾಹಸ್ತಃ ಪಾಂಡವಸ್ತದ್ವದೇವ ಹಂತಾ ಮದೀಯಾನ್ಸಹಿತೋಽರ್ಜುನೇನ।।
ಗಾಳಿಯಿಂದ ಪ್ರಚೋದನಗೊಂಡು ಉರಿಯುವ ಬೆಂಕಿಯು ಕಟ್ಟಿಗೆಯನ್ನು ಹೇಗೆ ಸುಡುವುದೋ ಹಾಗೆ ನನ್ನವರು ಗದಾಹಸ್ತನಾದ ಪಾಂಡವನಿಂದ, ಅರ್ಜುನನ ಸಹಾಯದಿಂದ, ಹತರಾಗುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತನೆಯ ಅಧ್ಯಾಯವು.