048 ಭೀಷ್ಮದ್ರೋಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 48

ಸಾರ

ದುರ್ಯೋಧನನಿಗೆ ಭೀಷ್ಮನು ಕೃಷ್ಣಾರ್ಜುನರು ನರನಾರಾಯಣರೆಂದು ತಿಳಿಸುವುದು (1-28). ಮಧ್ಯದಲ್ಲಿ ಕರ್ಣನು ಆಕ್ಷೇಪಿಸಲು ಭೀಷ್ಮನು ಧೃತರಾಷ್ಟ್ರನಿಗೆ ಆತ್ಮಶ್ಲಾಘೀ ಕರ್ಣನಿಂದಲೇ ಕುರುವಂಶವು ನಾಶವಾಗಬಹುದೆಂದು ಎಚ್ಚರಿಸುವುದು (29-41). ಆಗ ದ್ರೋಣನು “ಭೀಷ್ಮನು ಹೇಳಿದಂತೆ ಯುದ್ಧಕ್ಕಿಂತ ಮೊದಲು ಪಾಂಡವರೊಂದಿಗೆ ಕೂಡುವುದು ಸಾಧುವೆಂದು ನನಗನ್ನಿಸುತ್ತದೆ” ಎನ್ನಲು ದ್ರೋಣ-ಭೀಷ್ಮರ ಆ ಮಾತುಗಳನ್ನು ಅನಾದರಿಸಿ ರಾಜನು ಪಾಂಡವರ ಕುರಿತು ಸಂಜಯನನ್ನು ಪುನಃ ಪಶ್ನಿಸಿದುದು (42-47).

05048001 ವೈಶಂಪಾಯನ ಉವಾಚ।
05048001a ಸಮವೇತೇಷು ಸರ್ವೇಷು ತೇಷು ರಾಜಸು ಭಾರತ।
05048001c ದುರ್ಯೋಧನಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಭಾರತ! ಆ ರಾಜರುಗಳೆಲ್ಲರೂ ಸೇರಿರುವಾಗ ಶಾಂತನವ ಭೀಷ್ಮನು ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು:

05048002a ಬೃಹಸ್ಪತಿಶ್ಚೋಶನಾ ಚ ಬ್ರಹ್ಮಾಣಂ ಪರ್ಯುಪಸ್ಥಿತೌ।
05048002c ಮರುತಶ್ಚ ಸಹೇಂದ್ರೇಣ ವಸವಶ್ಚ ಸಹಾಶ್ವಿನೌ।।
05048003a ಆದಿತ್ಯಾಶ್ಚೈವ ಸಾಧ್ಯಾಶ್ಚ ಯೇ ಚ ಸಪ್ತರ್ಷಯೋ ದಿವಿ।
05048003c ವಿಶ್ವಾವಸುಶ್ಚ ಗಂಧರ್ವಃ ಶುಭಾಶ್ಚಾಪ್ಸರಸಾಂ ಗಣಾಃ।।

“ಒಮ್ಮೆ ಬೃಹಸ್ಪತಿ ಮತ್ತು ಇಂದ್ರರು ಬ್ರಹ್ಮನ ಉಪಸ್ಥಿತಿಯಲ್ಲಿ ಬಂದರು. ಇಂದ್ರನೊಡನೆ ಮರುತರು, ವಸುಗಳು, ಅಶ್ವಿನಿಯರು, ಆದಿತ್ಯರು, ಸಾಧ್ಯರು, ಸಪ್ತರ್ಷಿಗಳು, ದಿವದಲ್ಲಿರುವ ವಿಶ್ವಾವಸುಗಳು, ಗಂಧರ್ವರು, ಶುಭ ಅಪ್ಸರಗಣಗಳೂ ಇದ್ದರು.

05048004a ನಮಸ್ಕೃತ್ವೋಪಜಗ್ಮುಸ್ತೇ ಲೋಕವೃದ್ಧಂ ಪಿತಾಮಹಂ।
05048004c ಪರಿವಾರ್ಯ ಚ ವಿಶ್ವೇಶಂ ಪರ್ಯಾಸತ ದಿವೌಕಸಃ।।

ಅಲ್ಲಿಗೆ ಹೋಗಿ ಲೋಕವೃದ್ಧ ಪಿತಾಮಹನಿಗೆ ನಮಸ್ಕರಿಸಿ ದಿವೌಕಸರು ವಿಶ್ವೇಶನನ್ನು ಸುತ್ತುವರೆದು ಕುಳಿತುಕೊಂಡರು.

05048005a ತೇಷಾಂ ಮನಶ್ಚ ತೇಜಶ್ಚಾಪ್ಯಾದದಾನೌ ದಿವೌಕಸಾಂ।
05048005c ಪೂರ್ವದೇವೌ ವ್ಯತಿಕ್ರಾಂತೌ ನರನಾರಾಯಣಾವೃಷೀ।।

ಅದೇ ಸಮಯದಲ್ಲಿ ತಮ್ಮ ಮನಸ್ಸಿನಿಂದಲೇ ದಿವೌಕಸರ ತೇಜಸ್ಸನ್ನು ಸೆಳೆಯುತ್ತಾ ಪೂರ್ವದೇವರಾದ ನರ-ನಾರಾಯಣ ಋಷಿಗಳು ಅಲ್ಲಿಂದ ಹೊರಟರು.

05048006a ಬೃಹಸ್ಪತಿಶ್ಚ ಪಪ್ರಚ್ಚ ಬ್ರಾಹ್ಮಣಂ ಕಾವಿಮಾವಿತಿ।
05048006c ಭವಂತಂ ನೋಪತಿಷ್ಠೇತೇ ತೌ ನಃ ಶಂಸ ಪಿತಾಮಹ।।

ಬೃಹಸ್ಪತಿಯು ಬ್ರಹ್ಮನನ್ನು ಇವರು ಯಾರೆಂದು ಪ್ರಶ್ನಿಸಿದನು. “ಅವರಿಬ್ಬರೂ ನಿನ್ನನ್ನು ಪೂಜಿಸದೇ ಹೋದರು. ಪಿತಾಮಹ! ಅವರ ಕುರಿತು ಹೇಳು!”

05048007 ಬ್ರಹ್ಮೋವಾಚ।
05048007a ಯಾವೇತೌ ಪೃಥಿವೀಂ ದ್ಯಾಂ ಚ ಭಾಸಯಂತೌ ತಪಸ್ವಿನೌ।
05048007c ಜ್ವಲಂತೌ ರೋಚಮಾನೌ ಚ ವ್ಯಾಪ್ಯಾತೀತೌ ಮಹಾಬಲೌ।।
05048008a ನರನಾರಾಯಣಾವೇತೌ ಲೋಕಾಲ್ಲೋಕಂ ಸಮಾಸ್ಥಿತೌ।
05048008c ಊರ್ಜಿತೌ ಸ್ವೇನ ತಪಸಾ ಮಹಾಸತ್ತ್ವಪರಾಕ್ರಮೌ।।

ಬ್ರಹ್ಮನು ಹೇಳಿದನು: “ಪೃಥ್ವಿ-ಆಕಾಶಗಳನ್ನು ಬೆಳಗಿಸುವಂತೆ ಪ್ರಜ್ವಲಿಸುತ್ತಿರುವ, ಎಲ್ಲವನ್ನು ವ್ಯಾಪಿಸಿ, ಎಲ್ಲವಕ್ಕೂ ಆಧಾರರಾಗಿರುವ, ಮಹಾಬಲಶಾಲಿಗಳಾದ ಈ ಇಬ್ಬರು ತಪಸ್ವಿಗಳು ನರ-ನಾರಾಯಣರು. ಲೋಕಲೋಕಗಳಲ್ಲಿ ಇರುತ್ತಾರೆ. ಅವರ ತಪಸ್ಸಿನಿಂದ ಊರ್ಜಿತರಾಗಿದ್ದಾರೆ. ಮಹಾಸತ್ವಪರಾಕ್ರಮಿಗಳಾಗಿದ್ದಾರೆ.

05048009a ಏತೌ ಹಿ ಕರ್ಮಣಾ ಲೋಕಾನ್ನಂದಯಾಮಾಸತುರ್ಧ್ರುವೌ।
05048009c ಅಸುರಾಣಾಮಭಾವಾಯ ದೇವಗಂಧರ್ವಪೂಜಿತೌ।।

ಇಬ್ಬರೂ ತಮ್ಮ ಕರ್ಮಗಳಿಂದಲೇ ಲೋಕಗಳಿಗೆ ಆನಂದವನ್ನು ತರುತ್ತಾರೆ. ದೇವಗಂಧರ್ವ ಪೂಜಿತರಾದ ಅವರು ಅಸುರ ವಧೆಗಾಗಿಯೇ ಇದ್ದಾರೆ.””

05048010 ಭೀಷ್ಮ ಉವಾಚ।
05048010a ಜಗಾಮ ಶಕ್ರಸ್ತಚ್ಚ್ರುತ್ವಾ ಯತ್ರ ತೌ ತೇಪತುಸ್ತಪಃ।
05048010c ಸಾರ್ಧಂ ದೇವಗಣೈಃ ಸರ್ವೈರ್ಬೃಹಸ್ಪತಿಪುರೋಗಮೈಃ।।

ಭೀಷ್ಮನು ಹೇಳಿದನು: “ಅದನ್ನು ಕೇಳಿ ಶಕ್ರನು ಬೃಹಸ್ಪತಿಯುನ್ನು ಮುಂದಿಟ್ಟುಕೊಂಡು ದೇವಗಣಗಳೊಂದಿಗೆ ಅವರಿಬ್ಬರೂ ತಪಸ್ಸನ್ನು ತಪಿಸುತ್ತಿದ್ದಲ್ಲಿಗೆ ಹೋದನು.

05048011a ತದಾ ದೇವಾಸುರೇ ಘೋರೇ ಭಯೇ ಜಾತೇ ದಿವೌಕಸಾಂ।
05048011c ಅಯಾಚತ ಮಹಾತ್ಮಾನೌ ನರನಾರಾಯಣೌ ವರಂ।।

ಆಗ ದೇವತೆಗಳಿಗೆ ಅಸುರರಿಂದ ಹುಟ್ಟಿದ ಘೋರ ಭಯದಿಂದ ದಿವೌಕಸರು ಮಹಾತ್ಮ ನರ-ನಾರಾಯಣರಲ್ಲಿ ವರವನ್ನು ಬೇಡಿದರು.

05048012a ತಾವಬ್ರೂತಾಂ ವೃಣೀಷ್ವೇತಿ ತದಾ ಭರತಸತ್ತಮ।
05048012c ಅಥೈತಾವಬ್ರವೀಚ್ಚಕ್ರಃ ಸಾಹ್ಯಂ ನಃ ಕ್ರಿಯತಾಮಿತಿ।।

ಭರತಸತ್ತಮ! ಅವರು ಕೇಳು ಎಂದು ಹೇಳಲು ಶಕ್ರನು ಸಹಾಯ ಮಾಡಬೇಕು ಎಂದು ಅವರಲ್ಲಿ ಕೇಳಿಕೊಂಡನು.

05048013a ತತಸ್ತೌ ಶಕ್ರಮಬ್ರೂತಾಂ ಕರಿಷ್ಯಾವೋ ಯದಿಚ್ಚಸಿ।
05048013c ತಾಭ್ಯಾಂ ಚ ಸಹಿತಃ ಶಕ್ರೋ ವಿಜಿಗ್ಯೇ ದೈತ್ಯದಾನವಾನ್।।

ಆಗ ಅವರಿಬ್ಬರೂ ಶಕ್ರನಿಗೆ ನೀನು ಬಯಸಿದುದನ್ನು ಮಾಡುತ್ತೇವೆ ಎಂದರು. ಅವರಿಬ್ಬರ ಸಹಾಯದಿಂದ ಶಕ್ರನು ದೈತ್ಯದಾನವರನ್ನು ಜಯಿಸಿದನು.

05048014a ನರ ಇಂದ್ರಸ್ಯ ಸಂಗ್ರಾಮೇ ಹತ್ವಾ ಶತ್ರೂನ್ಪರಂತಪಃ।
05048014c ಪೌಲೋಮಾನ್ಕಾಲಖಂಜಾಂಶ್ಚ ಸಹಸ್ರಾಣಿ ಶತಾನಿ ಚ।।

ಪರಂತಪ ನರನು ಸಂಗ್ರಾಮದಲ್ಲಿ ಇಂದ್ರನ ಶತ್ರುಗಳಾದ ಪೌಲೋಮರನ್ನೂ ಕಾಲಖಂಜರನ್ನೂ ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಸಂಹರಿಸಿದನು.

05048015a ಏಷ ಭ್ರಾಂತೇ ರಥೇ ತಿಷ್ಠನ್ಭಲ್ಲೇನಾಪಹರಚ್ಚಿರಃ।
05048015c ಜಂಭಸ್ಯ ಗ್ರಸಮಾನಸ್ಯ ಯಜ್ಞಾಮರ್ಜುನ ಆಹವೇ।।

ಇದೇ ಅರ್ಜುನನು ರಣದಲ್ಲಿ ತಿರುಗುತ್ತಿರುವ ರಥದಲ್ಲಿ ನಿಂತು ನುಂಗಲು ಬರುತ್ತಿದ್ದ ಜಂಭನ ಶಿರವನ್ನು ಭಲ್ಲೆಯಿಂದ ಕತ್ತರಿಸಿದನು.

05048016a ಏಷ ಪಾರೇ ಸಮುದ್ರಸ್ಯ ಹಿರಣ್ಯಪುರಮಾರುಜತ್।
05048016c ಹತ್ವಾ ಷಷ್ಟಿಸಹಸ್ರಾಣಿ ನಿವಾತಕವಚಾನ್ರಣೇ।।

ಇವನೇ ಸಮುದ್ರದ ಆಚೆಯಿರುವ ಹಿರಣ್ಯಪುರದಲ್ಲಿ ವಾಸಿಸುತ್ತಿರುವ ಅರವತ್ತು ಸಾವಿರ ನಿವಾತಕವಚರನ್ನು ರಣದಲ್ಲಿ ಸಂಹರಿಸಿದನು.

05048017a ಏಷ ದೇವಾನ್ಸಹೇಂದ್ರೇಣ ಜಿತ್ವಾ ಪರಪುರಂಜಯಃ।
05048017c ಅತರ್ಪಯನ್ ಮಹಾಬಾಹುರರ್ಜುನೋ ಜಾತವೇದಸಂ।
05048017e ನಾರಾಯಣಸ್ತಥೈವಾತ್ರ ಭೂಯಸೋಽನ್ಯಾಂ ಜಘಾನ ಹ।।

ಈ ಪರಪುರಂಜಯ ಮಹಾಬಾಹು ಅರ್ಜುನನೇ ಇಂದ್ರನೊಡನೆ ದೇವತೆಗಳನ್ನು ಗೆದ್ದು ಜಾತವೇದಸನನ್ನು ತೃಪ್ತಿಗೊಳಿಸಿದನು. ನಾರಾಯಣನೂ ಕೂಡ ಅಲ್ಲಿ ಇನ್ನೂ ಹೆಚ್ಚಿನ ಅನ್ಯರನ್ನು ಸಂಹರಿಸಿದನು.

05048018a ಏವಮೇತೌ ಮಹಾವೀರ್ಯೌ ತೌ ಪಶ್ಯತ ಸಮಾಗತೌ।
05048018c ವಾಸುದೇವಾರ್ಜುನೌ ವೀರೌ ಸಮವೇತೌ ಮಹಾರಥೌ।।

ಆ ಈರ್ವರು ಮಹಾವೀರ್ಯರು ಒಂದಾಗಿದ್ದುದನ್ನು ನೋಡು. ಮಹಾರಥಿ ವೀರ ವಾಸುದೇವ-ಅರ್ಜುನರು ಒಂದಾಗಿದ್ದಾರೆ.

05048019a ನರನಾರಾಯಣೌ ದೇವೌ ಪೂರ್ವದೇವಾವಿತಿ ಶ್ರುತಿಃ।
05048019c ಅಜೇಯೌ ಮಾನುಷೇ ಲೋಕೇ ಸೇಂದ್ರೈರಪಿ ಸುರಾಸುರೈಃ।।

ಅವರೇ ಪೂರ್ವದೇವರಾದ ನರ-ನಾರಾಯಣದೇವರೆಂದು ಕೇಳಿದ್ದೇವೆ. ಮಾನುಷಲೋಕದಲ್ಲಿ ಅವರು ಇಂದ್ರನೂ ಸೇರಿ ಸುರಾಸುರರಿಗೆ ಅಜೇಯರು.

05048020a ಏಷ ನಾರಾಯಣಃ ಕೃಷ್ಣಃ ಫಲ್ಗುನಸ್ತು ನರಃ ಸ್ಮೃತಃ।
05048020c ನಾರಾಯಣೋ ನರಶ್ಚೈವ ಸತ್ತ್ವಮೇಕಂ ದ್ವಿಧಾಕೃತಂ।।

ಆ ನಾರಾಯಣನೇ ಕೃಷ್ಣ. ಫಲ್ಗುನನನು ನರನೆಂದು ಹೇಳುತ್ತಾರೆ. ನಾರಾಯಣ ಮತ್ತು ನರರ ಸತ್ವ ಒಂದೇ. ಆಕೃತಿ ಮಾತ್ರ ಎರಡು.

05048021a ಏತೌ ಹಿ ಕರ್ಮಣಾ ಲೋಕಾನಶ್ನುವಾತೇಽಕ್ಷಯಾನ್ಧ್ರುವಾನ್।
05048021c ತತ್ರ ತತ್ರೈವ ಜಾಯೇತೇ ಯುದ್ಧಕಾಲೇ ಪುನಃ ಪುನಃ।।

ಅವರ ಕರ್ಮಗಳಿಂದ ಇಬ್ಬರೂ ಅಕ್ಷಯ ಲೋಕಗಳನ್ನು ಪಡೆದಿದ್ದಾರೆ. ಯುದ್ಧದ ಕಾಲವು ಬಂದಾಗಲೆಲ್ಲಾ ಪುನಃ ಪುನಃ ಜನ್ಮ ತಾಳುತ್ತಾರೆ.

05048022a ತಸ್ಮಾತ್ಕರ್ಮೈವ ಕರ್ತವ್ಯಮಿತಿ ಹೋವಾಚ ನಾರದಃ।
05048022c ಏತದ್ಧಿ ಸರ್ವಮಾಚಷ್ಟ ವೃಷ್ಣಿಚಕ್ರಸ್ಯ ವೇದವಿತ್।।

ಆದುದರಿಂದ ಅವರ ಕರ್ಮವೇ ಹೋರಾಡುವುದು. ಇದನ್ನು ವೇದವಿದು ನಾರದನು ವೃಷ್ಣಿಗಳೆಲ್ಲರಿಗೆ ಹೇಳಿ ತಿಳಿಸಿದ್ದಾನೆ.

05048023a ಶಂಖಚಕ್ರಗದಾಹಸ್ತಂ ಯದಾ ದ್ರಕ್ಷ್ಯಸಿ ಕೇಶವಂ।
05048023c ಪರ್ಯಾದದಾನಂ ಚಾಸ್ತ್ರಾಣಿ ಭೀಮಧನ್ವಾನಮರ್ಜುನಂ।।
05048024a ಸನಾತನೌ ಮಹಾತ್ಮಾನೌ ಕೃಷ್ಣಾವೇಕರಥೇ ಸ್ಥಿತೌ।
05048024c ದುರ್ಯೋಧನ ತದಾ ತಾತ ಸ್ಮರ್ತಾಸಿ ವಚನಂ ಮಮ।।

ಮಗೂ! ದುರ್ಯೋಧನ! ಎಂದು ನೀನು ಶಂಖ-ಚಕ್ರ-ಗದಾಪಾಣಿಯಾದ ಕೇಶವನನ್ನು, ಮತ್ತು ಅಸ್ತ್ರಗಳನ್ನು ಹಿಡಿದಿರುವ ಭೀಮಧನ್ವಿ ಅರ್ಜುನನನ್ನು, ಆ ಸನಾತನ ಮಹಾವೀರ ಕೃಷ್ಣರಿಬ್ಬರೂ ಒಂದೇ ರಥದಲ್ಲಿ ನೋಡುತ್ತೀಯೋ ಅಂದು ನೀನು ನನ್ನ ಮಾತನ್ನು ನೆನಪಿಸಿಕೊಳ್ಳುತ್ತೀಯೆ.

05048025a ನೋ ಚೇದಯಮಭಾವಃ ಸ್ಯಾತ್ಕುರೂಣಾಂ ಪ್ರತ್ಯುಪಸ್ಥಿತಃ।
05048025c ಅರ್ಥಾಚ್ಚ ತಾತ ಧರ್ಮಾಚ್ಚ ತವ ಬುದ್ಧಿರುಪಪ್ಲುತಾ।।

ಬಹುಷಃ ಕುರುಗಳ ವಿನಾಶವು ಇನ್ನೂ ಬಂದಿಲ್ಲ; ಆದರೆ ಮಗೂ! ನಿನ್ನ ಬುದ್ಧಿಯು ಧರ್ಮ-ಅರ್ಥಗಳಿಂದ ತಪ್ಪಿರಬಹುದೇ?

05048026a ನ ಚೇದ್ಗ್ರಹೀಷ್ಯಸೇ ವಾಕ್ಯಂ ಶ್ರೋತಾಸಿ ಸುಬಹೂನ್ ಹತಾನ್।
05048026c ತವೈವ ಹಿ ಮತಂ ಸರ್ವೇ ಕುರವಃ ಪರ್ಯುಪಾಸತೇ।।

ಈಗ ನನ್ನ ಮಾತುಗಳನ್ನು ನೀನು ತಿಳಿದುಕೊಳ್ಳದೇ ಇದ್ದರೆ ಇದನ್ನೇ ಬಹಳಷ್ಟು ಜನರು ಹತರಾದ ಮೇಲೆ ಕೇಳುತ್ತೀಯೆ. ಎಲ್ಲ ಕುರುಗಳೂ ನಿನ್ನ ಮಾತುಗಳನ್ನೇ ಮನ್ನಿಸುತ್ತಾರೆ.

05048027a ತ್ರಯಾಣಾಮೇವ ಚ ಮತಂ ತತ್ತ್ವಮೇಕೋಽನುಮನ್ಯಸೇ।
05048027c ರಾಮೇಣ ಚೈವ ಶಪ್ತಸ್ಯ ಕರ್ಣಸ್ಯ ಭರತರ್ಷಭ।।
05048028a ದುರ್ಜಾತೇಃ ಸೂತಪುತ್ರಸ್ಯ ಶಕುನೇಃ ಸೌಬಲಸ್ಯ ಚ।
05048028c ತಥಾ ಕ್ಷುದ್ರಸ್ಯ ಪಾಪಸ್ಯ ಭ್ರಾತುರ್ದುಃಶಾಸನಸ್ಯ ಚ।।

ಭರತರ್ಷಭ! ಕೇವಲ ಮೂರು ಮಂದಿಗಳ ಅಭಿಪ್ರಾಯಗಳನ್ನು ನೀನು ಸ್ವೀಕರಿಸುತ್ತೀಯೆ - ರಾಮನಿಂದ ಶಪಿತನಾದ1 ಆ ದುರ್ಜಾತ ಸೂತಪುತ್ರ ಕರ್ಣ, ಸೌಬಲ ಶಕುನಿ ಮತ್ತು ಆ ನಿನ್ನ ನೀಚ ಪಾಪಿ ತಮ್ಮ ದುಃಶಾಸನ.”

05048029 ಕರ್ಣ ಉವಾಚ।
05048029a ನೈವಮಾಯುಷ್ಮತಾ ವಾಚ್ಯಂ ಯನ್ಮಾಮಾತ್ಥ ಪಿತಾಮಹ।
05048029c ಕ್ಷತ್ರಧರ್ಮೇ ಸ್ಥಿತೋ ಹ್ಯಸ್ಮಿ ಸ್ವಧರ್ಮಾದನಪೇಯಿವಾನ್।।

ಕರ್ಣನು ಹೇಳಿದನು: “ಬಹುವರ್ಷ ಬಾಳಿದ ಪಿತಾಮಹ! ನನ್ನ ಕುರಿತು ಆ ರೀತಿ ಮಾತನಾಡಬೇಡ! ಸ್ವಧರ್ಮವನ್ನು ತ್ಯಜಿಸದೇ ಕ್ಷತ್ರಧರ್ಮವನ್ನು ನಾನು ಪಾಲಿಸುತ್ತಿದ್ದೇನೆ.

05048030a ಕಿಂ ಚಾನ್ಯನ್ಮಯಿ ದುರ್ವೃತ್ತಂ ಯೇನ ಮಾಂ ಪರಿಗರ್ಹಸೇ।
05048030c ನ ಹಿ ಮೇ ವೃಜಿನಂ ಕಿಂ ಚಿದ್ಧಾರ್ತರಾಷ್ಟ್ರಾ ವಿದುಃ ಕ್ವ ಚಿತ್।।

ಎಲ್ಲಿ ನಾನು ಕೆಟ್ಟದಾಗಿ ನಡೆದುಕೊಂಡಿದ್ದೇನೆಂದು ನೀನು ನನ್ನನ್ನು ಈ ರೀತಿ ಹೀಯಾಳಿಸುತ್ತಿದ್ದೀಯೆ? ನಾನು ಎಂದಾದರೂ ತಪ್ಪು ಮಾಡಿದ್ದುದು ಧಾರ್ತರಾಷ್ಟ್ರನಿಗೆ ತಿಳಿದಿಲ್ಲವಲ್ಲ?

05048031a ರಾಜ್ಞೋ ಹಿ ಧೃತರಾಷ್ಟ್ರಸ್ಯ ಸರ್ವಂ ಕಾರ್ಯಂ ಪ್ರಿಯಂ ಮಯಾ।
05048031c ತಥಾ ದುರ್ಯೋಧನಸ್ಯಾಪಿ ಸ ಹಿ ರಾಜ್ಯೇ ಸಮಾಹಿತಃ।।

ನನ್ನ ಎಲ್ಲ ಕಾರ್ಯಗಳೂ ರಾಜ ಧೃತರಾಷ್ಟ್ರನಿಗೆ ಮತ್ತು ಹಾಗೆಯೇ ದುರ್ಯೋಧನನಿಗೆ ಕೂಡ ಒಳ್ಳೆಯದಾಗಲೆಂದೇ. ಅವನೇ ರಾಜ್ಯವನ್ನು ನಡೆಸುತ್ತಿದ್ದಾನಲ್ಲ!””

05048032 ವೈಶಂಪಾಯನ ಉವಾಚ।
05048032a ಕರ್ಣಸ್ಯ ತು ವಚಃ ಶ್ರುತ್ವಾ ಭೀಷ್ಮಃ ಶಾಂತನವಃ ಪುನಃ।
05048032c ಧೃತರಾಷ್ಟ್ರಂ ಮಹಾರಾಜಮಾಭಾಷ್ಯೇದಂ ವಚೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಕರ್ಣನ ಆ ಮಾತುಗಳನ್ನು ಕೇಳಿ ಶಾಂತನವ ಭೀಷ್ಮನು ಮಹಾರಾಜ ಧೃತರಾಷ್ಟ್ರನಿಗೆ ಪುನಃ ಈ ಮಾತುಗಳನ್ನಾಡಿದನು:

05048033a ಯದಯಂ ಕತ್ಥತೇ ನಿತ್ಯಂ ಹಂತಾಹಂ ಪಾಂಡವಾನಿತಿ।
05048033c ನಾಯಂ ಕಲಾಪಿ ಸಂಪೂರ್ಣಾ ಪಾಂಡವಾನಾಂ ಮಹಾತ್ಮನಾಂ।।

“ಪಾಂಡವರನ್ನು ನಾನು ಕೊಲ್ಲುತ್ತೇನೆ ಎಂದು ನಿತ್ಯವೂ ಕೊಚ್ಚಿಕೊಳ್ಳುವ ಇವನು ಮಹಾತ್ಮ ಪಾಂಡವರ ಒಂದು ಕಾಲು ಭಾಗಕ್ಕೂ ಸಮನಲ್ಲ.

05048034a ಅನಯೋ ಯೋಽಯಮಾಗಂತಾ ಪುತ್ರಾಣಾಂ ತೇ ದುರಾತ್ಮನಾಂ।
05048034c ತದಸ್ಯ ಕರ್ಮ ಜಾನೀಹಿ ಸೂತಪುತ್ರಸ್ಯ ದುರ್ಮತೇಃ।।

ನಿನ್ನ ದುರಾತ್ಮ ಮಕ್ಕಳಿಗೆ ಬರಲಿರುವ ಗಂಡಾಂತರವು ಈ ದುರ್ಮತಿ ಸೂತಪುತ್ರನ ಕೆಲಸ ಎನ್ನುವುದನ್ನು ತಿಳಿದುಕೋ.

05048035a ಏನಮಾಶ್ರಿತ್ಯ ಪುತ್ರಸ್ತೇ ಮಂದಬುದ್ಧಿಃ ಸುಯೋಧನಃ।
05048035c ಅವಮನ್ಯತ ತಾನ್ವೀರಾನ್ದೇವಪುತ್ರಾನರಿಂದಮಾನ್।।

ಇವನನ್ನು ಆಶ್ರಯಿಸಿ ನಿನ್ನ ಮಗ ಮಂದಬುದ್ಧಿ ಸುಯೋಧನನು ಆ ವೀರ ಅರಿಂದಮ ದೇವಪುತ್ರರನ್ನು ಅಪಮಾನಿಸುತ್ತಿದ್ದಾನೆ.

05048036a ಕಿಂ ಚಾಪ್ಯನೇನ ತತ್ಕರ್ಮ ಕೃತಂ ಪೂರ್ವಂ ಸುದುಷ್ಕರಂ।
05048036c ತೈರ್ಯಥಾ ಪಾಂಡವೈಃ ಸರ್ವೈರೇಕೈಕೇನ ಕೃತಂ ಪುರಾ।।

ಒಬ್ಬೊಬ್ಬರಾಗಿ ಪಾಂಡವರೆಲ್ಲರೂ ಈ ಹಿಂದೆ ಮಾಡಿದಂತಹ ಯಾವ ದುಷ್ಕರ ಕರ್ಮವನ್ನು ಇವನು ಈ ಹಿಂದೆ ಮಾಡಿದ್ದಾನೆ?

05048037a ದೃಷ್ಟ್ವಾ ವಿರಾಟನಗರೇ ಭ್ರಾತರಂ ನಿಹತಂ ಪ್ರಿಯಂ।
05048037c ಧನಂಜಯೇನ ವಿಕ್ರಮ್ಯ ಕಿಮನೇನ ತದಾ ಕೃತಂ।।

ವಿರಾಟನಗರದಲ್ಲಿ ತನ್ನ ಪ್ರಿಯ ತಮ್ಮನೇ ವಿಕ್ರಮಿ ಧನಂಜಯನಿಂದ ಹತನಾಗಲು ಇವನೇನು ಮಾಡಿದ2?

05048038a ಸಹಿತಾನ್ ಹಿ ಕುರೂನ್ಸರ್ವಾನಭಿಯಾತೋ ಧನಂಜಯಃ।
05048038c ಪ್ರಮಥ್ಯ ಚಾಚ್ಚಿನದ್ಗಾವಃ ಕಿಮಯಂ ಪ್ರೋಷಿತಸ್ತದಾ।।

ಕುರುಗಳೆಲ್ಲರನ್ನೂ ಒಟ್ಟಿಗೇ ಧನಂಜಯನು ಆಕ್ರಮಣಿಸಿ, ಸೋಲಿಸಿ ಗೋವುಗಳನ್ನು ಕಸಿದುಕೊಂಡು ಹೋದನು. ಆಗ ಇವನು ಪ್ರವಾಸದಲ್ಲಿದ್ದನೇ?

05048039a ಗಂಧರ್ವೈರ್ಘೋಷಯಾತ್ರಾಯಾಂ ಹ್ರಿಯತೇ ಯತ್ಸುತಸ್ತವ।
05048039c ಕ್ವ ತದಾ ಸೂತಪುತ್ರೋಽಭೂದ್ಯ ಇದಾನೀಂ ವೃಷಾಯತೇ।।

ಘೋಷಯಾತ್ರೆಯಲ್ಲಿ ನಿನ್ನ ಮಗನನ್ನು ಗಂಧರ್ವರು ಎತ್ತಿಕೊಂಡು ಹೋದಾಗ ಈಗ ಗೂಳಿಯಂತೆ ಸೊಕ್ಕಿ ಉರಿಯುತ್ತಿರುವ ಈ ಸೂತಪುತ್ರನು ಎಲ್ಲಿದ್ದ3?

05048040a ನನು ತತ್ರಾಪಿ ಪಾರ್ಥೇನ ಭೀಮೇನ ಚ ಮಹಾತ್ಮನಾ।
05048040c ಯಮಾಭ್ಯಾಮೇವ ಚಾಗಮ್ಯ ಗಂಧರ್ವಾಸ್ತೇ ಪರಾಜಿತಾಃ।।

ಅಲ್ಲಿ ಕೂಡ ಮಹಾತ್ಮ ಪಾರ್ಥ-ಭೀಮರು ಮತ್ತು ಯಮಳರೀರ್ವರು ಬಂದು ಗಂಧರ್ವರನ್ನು ಪರಾಜಿತಗೊಳಿಸಲಿಲ್ಲವೇ?

05048041a ಏತಾನ್ಯಸ್ಯ ಮೃಷೋಕ್ತಾನಿ ಬಹೂನಿ ಭರತರ್ಷಭ।
05048041c ವಿಕತ್ಥನಸ್ಯ ಭದ್ರಂ ತೇ ಸದಾ ಧರ್ಮಾರ್ಥಲೋಪಿನಃ।।

ಭರತರ್ಷಭ! ಈ ಧರ್ಮಾರ್ಥಲೋಪಿ ಆತ್ಮಶ್ಲಾಘಿಯು ಹೇಳುವ ಸುಳ್ಳುಗಳು ಬಹಳಷ್ಟಿವೆ. ನಿನಗೆ ಮಂಗಳವಾಗಲಿ!”

05048042a ಭೀಷ್ಮಸ್ಯ ತು ವಚಃ ಶ್ರುತ್ವಾ ಭಾರದ್ವಾಜೋ ಮಹಾಮನಾಃ।
05048042c ಧೃತರಾಷ್ಟ್ರಮುವಾಚೇದಂ ರಾಜಮಧ್ಯೇಽಭಿಪೂಜಯನ್।।

ಭೀಷ್ಮನ ಆ ಮಾತುಗಳನ್ನು ಕೇಳಿ ಮಹಾಮನಸ್ವಿ ಭಾರದ್ವಾಜನು ರಾಜರ ಮಧ್ಯದಲ್ಲಿ ಧೃತರಾಷ್ಟ್ರನನ್ನು ಗೌರವಿಸಿ ಹೇಳಿದನು:

05048043a ಯದಾಹ ಭರತಶ್ರೇಷ್ಠೋ ಭೀಷ್ಮಸ್ತತ್ಕ್ರಿಯತಾಂ ನೃಪ।
05048043c ನ ಕಾಮಮರ್ಥಲಿಪ್ಸೂನಾಂ ವಚನಂ ಕರ್ತುಮರ್ಹಸಿ।।

“ಭರತಶ್ರೇಷ್ಠ! ನೃಪ! ಭೀಷ್ಮನು ಏನು ಹೇಳುತ್ತಿದ್ದಾನೋ ಅದನ್ನು ಮಾಡುವಂಥವನಾಗು. ತಮ್ಮದೇ ಬಯಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಆಡುವವರ ಮಾತುಗಳನ್ನು ಕೇಳಬಾರದು.

05048044a ಪುರಾ ಯುದ್ಧಾತ್ಸಾಧು ಮನ್ಯೇ ಪಾಂಡವೈಃ ಸಹ ಸಂಗಮಂ।
05048044c ಯದ್ವಾಕ್ಯಮರ್ಜುನೇನೋಕ್ತಂ ಸಂಜಯೇನ ನಿವೇದಿತಂ।।
05048045a ಸರ್ವಂ ತದಭಿಜಾನಾಮಿ ಕರಿಷ್ಯತಿ ಚ ಪಾಂಡವಃ।
05048045c ನ ಹ್ಯಸ್ಯ ತ್ರಿಷು ಲೋಕೇಷು ಸದೃಶೋಽಸ್ತಿ ಧನುರ್ಧರಃ।।

ಯುದ್ಧಕ್ಕಿಂತ ಮೊದಲು ಪಾಂಡವರೊಂದಿಗೆ ಕೂಡುವುದು ಸಾಧುವೆಂದು ನನಗನ್ನಿಸುತ್ತದೆ. ಸಂಜಯನು ಅರ್ಜುನನ ಯಾವ ಮಾತುಗಳನ್ನು ಬಂದು ತಿಳಿಸಿದನೋ ಅವೆಲ್ಲವನ್ನೂ ಆ ಪಾಂಡವನು ಮಾಡುತ್ತಾನೆಂದು ನಾನು ಬಲ್ಲೆ. ಈ ಮೂರು ಲೋಕಗಳಲ್ಲಿಯೂ ಅವನಂತಹ ಧನುರ್ಧರನಿಲ್ಲ.”

05048046a ಅನಾದೃತ್ಯ ತು ತದ್ವಾಕ್ಯಮರ್ಥವದ್ದ್ರೋಣಭೀಷ್ಮಯೋಃ।
05048046c ತತಃ ಸ ಸಂಜಯಂ ರಾಜಾ ಪರ್ಯಪೃಚ್ಚತ ಪಾಂಡವಂ।।

ಆದರೆ ದ್ರೋಣ-ಭೀಷ್ಮರ ಆ ಮಾತುಗಳನ್ನು ಅನಾದರಿಸಿ ರಾಜನು ಪಾಂಡವರ ಕುರಿತು ಸಂಜಯನನ್ನು ಪುನಃ ಪಶ್ನಿಸಿದನು.

05048047a ತದೈವ ಕುರವಃ ಸರ್ವೇ ನಿರಾಶಾ ಜೀವಿತೇಽಭವನ್।
05048047c ಭೀಷ್ಮದ್ರೋಣೌ ಯದಾ ರಾಜಾ ನ ಸಮ್ಯಗನುಭಾಷತೇ।।

ಯಾವಾಗ ರಾಜನು ಭೀಷ್ಮ-ದ್ರೋಣರಿಗೆ ಉತ್ತರವಾಗಿ ಮಾತನಾಡಲಿಲ್ಲವೋ ಆಗಲೇ ಎಲ್ಲ ಕುರುಗಳೂ ಜೀವಿತದ ನಿರಾಶರಾದರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಭೀಷ್ಮದ್ರೋಣವಾಕ್ಯೇ ಅಷ್ಟಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನಲ್ವತ್ತೆಂಟನೆಯ ಅಧ್ಯಾಯವು.


  1. ಮುಂದೆ ಶಾಂತಿ ಪರ್ವದ 2ನೇ ಅಧ್ಯಾಯದಲ್ಲಿ ಕರ್ಣನು ಪರಶುರಾಮನಿಂದ ಶಪಿತನಾದ ಕಥೆಯನ್ನು ನಾರದನು ಯುಧಿಷ್ಠಿರನಿಗೆ ಹೇಳುವ ಪ್ರಸಂಗವು ಬರುತ್ತದೆ. ↩︎

  2. ಕರ್ಣನ ಸೋದರ ಸಂಗ್ರಾಮಜಿತುವನ್ನು ಅರ್ಜುನನು ಸಂಹರಿಸಿದ ವಿಷಯವು ವಿರಾಟಪರ್ವದ ಅಧ್ಯಾಯ 49 ರ ಶ್ಲೋಕ 18ರಲ್ಲಿ ಬಂದಿದೆ. ↩︎

  3. ಘೋಷಯಾತ್ರೆಯ ಸಮಯದಲ್ಲಿ ಗಂಧರ್ವರಾಜ ಚಿತ್ರಸೇನನಿಗೆ ಸೋತು ಕರ್ಣನು ಪಲಾಯನ ಮಾಡಿದ ವಿಷಯವು ಆರಣ್ಯಕ ಪರ್ವದ ಅಧ್ಯಾಯ 230ರಲ್ಲಿ ಬಂದಿದೆ. ↩︎