047 ಅರ್ಜುನವಾಕ್ಯನಿವೇದನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 47

ಸಾರ

ಅರ್ಜುನನು ಏನು ಹೇಳಿದನೆಂದು ಧೃತರಾಷ್ಟ್ರನು ಕೇಳಲು ಸಂಜಯನು ರಾಜ ಸಭೆಯಲ್ಲಿ ಅರ್ಜುನನ ಸಂದೇಶವನ್ನು ಹೇಳಿದುದು (1-103).

05047001 ಧೃತರಾಷ್ಟ್ರ ಉವಾಚ।
05047001a ಪೃಚ್ಚಾಮಿ ತ್ವಾಂ ಸಂಜಯ ರಾಜಮಧ್ಯೇ ಕಿಮಬ್ರವೀದ್ವಾಕ್ಯಮದೀನಸತ್ತ್ವಃ।
05047001c ಧನಂಜಯಸ್ತಾತ ಯುಧಾಂ ಪ್ರಣೇತಾ ದುರಾತ್ಮನಾಂ ಜೀವಿತಚ್ಚಿನ್ಮಹಾತ್ಮಾ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಈ ರಾಜರ ಮಧ್ಯದಲ್ಲಿ ನಿನ್ನನ್ನು ಕೇಳುತ್ತೇನೆ - ಸತ್ವಾಧೀನ, ಯೋದ್ಧರಲ್ಲಿ ಪ್ರಣೀತ, ದುರಾತ್ಮರ ಜೀವವನ್ನು ಕಸಿದುಕೊಳ್ಳುವ ಮಗ ಮಹಾತ್ಮ ಧನಂಜಯನು ಏನು ಹೇಳಿದನು?”

05047002 ಸಂಜಯ ಉವಾಚ।
05047002a ದುರ್ಯೋಧನೋ ವಾಚಮಿಮಾಂ ಶೃಣೋತು ಯದಬ್ರವೀದರ್ಜುನೋ ಯೋತ್ಸ್ಯಮಾನಃ।
05047002c ಯುಧಿಷ್ಠಿರಸ್ಯಾನುಮತೇ ಮಹಾತ್ಮಾ ಧನಂಜಯಃ ಶೃಣ್ವತಃ ಕೇಶವಸ್ಯ।।

ಸಂಜಯನು ಹೇಳಿದನು: “ಯುಧಿಷ್ಠಿರನ ಅನುಮತಿಯಂತೆ ಮತ್ತು ಕೇಶವನು ಕೇಳುವಂತೆ ಯುದ್ಧಕ್ಕೆ ಉತ್ಸುಕನಾಗಿರುವ ಮಹಾತ್ಮ ಧನಂಜಯ ಅರ್ಜುನನು ಹೇಳಿದ ಈ ಮಾತುಗಳನ್ನು ದುರ್ಯೋಧನನು ಕೇಳಬೇಕು.

05047003a ಅನ್ವತ್ರಸ್ತೋ ಬಾಹುವೀರ್ಯಂ ವಿದಾನ ಉಪಹ್ವರೇ ವಾಸುದೇವಸ್ಯ ಧೀರಃ।
05047003c ಅವೋಚನ್ಮಾಂ ಯೋತ್ಸ್ಯಮಾನಃ ಕಿರೀಟೀ ಮಧ್ಯೇ ಬ್ರೂಯಾ ಧಾರ್ತರಾಷ್ಟ್ರಂ ಕುರೂಣಾಂ।।

ಸಂಪೂರ್ಣ ವಿಶ್ವಾಸದಿಂದ, ತನ್ನ ಬಾಹುವಿರ್ಯವನ್ನು ಅರ್ಥಮಾಡಿಕೊಂಡು, ವಾಸುದೇವನ ಸಮಕ್ಷಮದಲ್ಲಿ ಧೀರನಾಗಿ, ಯುದ್ಧಕ್ಕೆ ಸಿದ್ಧನಾಗಿದ್ದ ಕಿರೀಟಿಯು ನನಗೆ ಹೇಳಿದನು: “ಕುರುಗಳ ಮಧ್ಯದಲ್ಲಿಧಾರ್ತರಾಷ್ಟ್ರರಿಗೆ ಹೇಳು.

05047004a ಯೇ ವೈ ರಾಜಾನಃ ಪಾಂಡವಾಯೋಧನಾಯ ಸಮಾನೀತಾಃ ಶೃಣ್ವತಾಂ ಚಾಪಿ ತೇಷಾಂ।
05047004c ಯಥಾ ಸಮಗ್ರಂ ವಚನಂ ಮಯೋಕ್ತಂ ಸಹಾಮಾತ್ಯಂ ಶ್ರಾವಯೇಥಾ ನೃಪಂ ತಂ।।

ಪಾಂಡವರೊಂದಿಗೆ ಯುದ್ಧಮಾಡಲು ಯಾವ ಯಾವ ರಾಜರು ಬಂದು ಸೇರಿದ್ದಾರೋ ಅವರಿಗೂ ಕೇಳುವಂತೆ ಹೇಳು. ನಾನು ಹೇಳುವ ಮಾತುಗಳನ್ನು ಸಮಗ್ರವಾಗಿ ಅಮಾತ್ಯರೊಂದಿಗೆ ನೃಪನಿಗೆ ಕೇಳಿಸು.”

05047005a ಯಥಾ ನೂನಂ ದೇವರಾಜಸ್ಯ ದೇವಾಃ ಶುಶ್ರೂಷಂತೇ ವಜ್ರಹಸ್ತಸ್ಯ ಸರ್ವೇ।
05047005c ತಥಾಶೃಣ್ವನ್ಪಾಂಡವಾಃ ಸೃಂಜಯಾಶ್ಚ ಕಿರೀಟಿನಾ ವಾಚಮುಕ್ತಾಂ ಸಮರ್ಥಾಂ।।

ವಜ್ರಹಸ್ತ ದೇವರಾಜನು ಹೇಳಿದುದನ್ನು ಎಲ್ಲ ದೇವತೆಗಳೂ ಕೇಳುವಂತೆ ಸೃಂಜಯರೂ ಪಾಂಡವರೂ ಸಮರ್ಥ ಕಿರೀಟಿಯ ಮಾತುಗಳನ್ನು ಕೇಳಿದರು.

05047006a ಇತ್ಯಬ್ರವೀದರ್ಜುನೋ ಯೋತ್ಸ್ಯಮಾನೋ ಗಾಂಡೀವಧನ್ವಾ ಲೋಹಿತಪದ್ಮನೇತ್ರಃ।
05047006c ನ ಚೇದ್ರಾಜ್ಯಂ ಮುಂಚತಿ ಧಾರ್ತರಾಷ್ಟ್ರೋ ಯುಧಿಷ್ಠಿರಸ್ಯಾಜಮೀಢಸ್ಯ ರಾಜ್ಞಾಃ।।
05047006e ಅಸ್ತಿ ನೂನಂ ಕರ್ಮ ಕೃತಂ ಪುರಸ್ತಾದ್ ಅನಿರ್ವಿಷ್ಟಂ ಪಾಪಕಂ ಧಾರ್ತರಾಷ್ಟ್ರೈಃ।।

ಯೋತ್ಸಮಾನ, ಗಾಂಡೀವಧನ್ವಿ, ಲೋಹಿತಪದ್ಮನೇತ್ರ ಅರ್ಜುನನು ಹೀಗೆ ಹೇಳಿದನು: “ರಾಜ ಅಜಮೀಢ ಯುಧಿಷ್ಠಿರನ ರಾಜ್ಯವನ್ನು ಧಾರ್ತರಾಷ್ಟ್ರನು ಬಿಟ್ಟುಕೊಡದೇ ಇದ್ದರೆ ನಿಜವಾಗಿಯೂ ಶಿಕ್ಷಾರ್ಹವಾದ ಪಾಪಕರ್ಮವನ್ನು ಧಾರ್ತರಾಷ್ಟ್ರರು ಎಸಗಿದಂತೆ.

05047007a ಯೇಷಾಂ ಯುದ್ಧಂ ಭೀಮಸೇನಾರ್ಜುನಾಭ್ಯಾಂ ತಥಾಶ್ವಿಭ್ಯಾಂ ವಾಸುದೇವೇನ ಚೈವ।
05047007c ಶೈನೇಯೇನ ಧ್ರುವಮಾತ್ತಾಯುಧೇನ ಧೃಷ್ಟದ್ಯುಮ್ನೇನಾಥ ಶಿಖಂಡಿನಾ ಚ।।
05047007e ಯುಧಿಷ್ಠಿರೇಣೇಂದ್ರಕಲ್ಪೇನ ಚೈವ ಯೋಽಪಧ್ಯಾನಾನ್ನಿರ್ದಹೇದ್ಗಾಂ ದಿವಂ ಚ।

ಭೀಮಾರ್ಜುನರೊಂದಿಗೆ, ಅಶ್ವಿನೀಪುತ್ರರೊಂದಿಗೆ, ವಾಸುದೇವನೊಂದಿಗೆ, ಆಯುಧವನ್ನು ಎತ್ತಿಹಿಡಿದಿರುವ ಶೈನಿಯೊಂದಿಗೆ, ಧೃಷ್ಟಧ್ಯುಮ್ನ ಮತ್ತು ಶಿಖಂಡಿಯೊಡನೆ, ಮತ್ತು ಒಂದೇ ಅಪಧ್ಯಾನದಿಂದ ಭೂಮಿ-ಆಕಾಶಗಳನ್ನು ಸುಟ್ಟುಬಿಡಬಲ್ಲ ಇಂದ್ರಸಮಾನ ಯುಧಿಷ್ಠಿರನೊಂದಿಗೆ ಯುದ್ಧಮಾಡಲು ಬಯಸುತ್ತಾರೆ ಎಂದಂತೆ.

05047008a ತೈಶ್ಚೇದ್ಯುದ್ಧಂ ಮನ್ಯತೇ ಧಾರ್ತರಾಷ್ಟ್ರೋ ನಿರ್ವೃತ್ತೋಽರ್ಥಃ ಸಕಲಃ ಪಾಂಡವಾನಾಂ।।
05047008c ಮಾ ತತ್ಕಾರ್ಷೀಃ ಪಾಂಡವಾರ್ಥಾಯ ಹೇತೋರ್- ಉಪೈಹಿ ಯುದ್ಧಂ ಯದಿ ಮನ್ಯಸೇ ತ್ವಂ।।

ಅವರೊಂದಿಗೆ ಧಾರ್ತರಾಷ್ಟ್ರನು ಯುದ್ಧಮಾಡಲು ಬಯಸಿದರೆ, ಪಾಂಡವರ ಸಕಲ ಉದ್ದೇಶಗಳೂ ಪೂರ್ಣಗೊಂಡಂತೆ! ಪಾಂಡವರಿಗಾಗಿ ಬೇರೆ ಏನನ್ನೂ ಮಾಡುವುದು ಬೇಡ. ಮನಸಿದ್ದರೆ ನೀನು ಬಂದು ಯುದ್ಧಮಾಡು.

05047009a ಯಾಂ ತಾಂ ವನೇ ದುಃಖಶಯ್ಯಾಮುವಾಸ ಪ್ರವ್ರಾಜಿತಃ ಪಾಂಡವೋ ಧರ್ಮಚಾರೀ।
05047009c ಆಶಿಷ್ಯತೇ ದುಃಖತರಾಮನರ್ಥಾಂ ಅಂತ್ಯಾಂ ಶಯ್ಯಾಂ ಧಾರ್ತರಾಷ್ಟ್ರಃ ಪರಾಸುಃ।।

ಪ್ರವ್ರಾಜಿತ ಪಾಂಡವರು ಧರ್ಮವನ್ನಾಚರಿಸಿ ವನದಲ್ಲಿ ದುಃಖದ ಹಾಸಿಗೆಯ ಮೇಲೆ ಮಲಗಿದ್ದೇ ಆದರೆ, ಧಾರ್ತರಾಷ್ಟ್ರನು ಅದಕ್ಕಿಂತಲೂ ದುಃಖತರವಾದ, ಅವನ ಅಂತ್ಯದ ಹಾಸಿಗೆಯ ಮೇಲೆ ಮಲಗಿ ಸಾಯುತ್ತಾನೆ.

05047010a ಹ್ರಿಯಾ ಜ್ಞಾನೇನ ತಪಸಾ ದಮೇನ ಕ್ರೋಧೇನಾಥೋ ಧರ್ಮಗುಪ್ತ್ಯಾ ಧನೇನ।
05047010c ಅನ್ಯಾಯವೃತ್ತಃ ಕುರುಪಾಂಡವೇಯಾನ್ ಅಧ್ಯಾತಿಷ್ಠದ್ಧಾರ್ತರಾಷ್ಟ್ರೋ ದುರಾತ್ಮಾ।।

ಧರ್ಮರಾಜನು ವಿನಯ, ಜ್ಞಾನ, ತಪಸ್ಸು, ದಮ, ಕ್ರೋಧ, ಅನಾಥರನ್ನು ಧರ್ಮ ಮತ್ತು ಧನಗಳಿಂದ ರಕ್ಷಿಸುತ್ತಿದ್ದರೆ, ದುರಾತ್ಮ ಧಾರ್ತರಾಷ್ಟ್ರನು ಕುರು-ಪಾಂಡವರೊಂದಿಗೆ ಅನ್ಯಾಯವಾಗಿ ನಡೆದುಕೊಂಡು ಆಳುತ್ತಿದ್ದಾನೆ.

05047011a ಮಾಯೋಪಧಃ ಪ್ರಣಿಧಾನಾರ್ಜವಾಭ್ಯಾಂ ತಪೋದಮಾಭ್ಯಾಂ ಧರ್ಮಗುಪ್ತ್ಯಾ ಬಲೇನ।
05047011c ಸತ್ಯಂ ಬ್ರುವನ್ಪ್ರೀತಿಯುಕ್ತ್ಯಾನೃತೇನ ತಿತಿಕ್ಷಮಾಣಃ ಕ್ಲಿಶ್ಯಮಾನೋಽತಿವೇಲಂ।।

ಮೋಸಕ್ಕೊಳಗಾದರೂ ಗೌರವ ಮತ್ತು ಆರ್ಜವಗಳಿಂದ, ತಪಸ್ಸು-ದಮಗಳಿಂದ, ಧರ್ಮವನ್ನು ರಕ್ಷಿಸುವ ಬಲದಿಂದ, ಸುಳ್ಳನ್ನು ಹೇಳಲ್ಪಟ್ಟಿದ್ದರೂ ಸತ್ಯವನ್ನೇ ಹೇಳಿಕೊಂಡು, ಪ್ರೀತಿಯುಕ್ತನಾಗಿದ್ದುಕೊಂಡು ಯುಧಿಷ್ಠಿರನು ಮಿತಿಯಿಲ್ಲದ ಕಷ್ಟಗಳನ್ನು ಸಹಿಸಿದನು.

05047012a ಯದಾ ಜ್ಯೇಷ್ಠಃ ಪಾಂಡವಃ ಸಂಶಿತಾತ್ಮಾ ಕ್ರೋಧಂ ಯತ್ತಂ ವರ್ಷಪೂಗಾನ್ಸುಘೋರಂ।
05047012c ಅವಸ್ರಷ್ಟಾ ಕುರುಷೂದ್ವೃತ್ತಚೇತಾಸ್ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಸಂಶಿತಾತ್ಮ ಜ್ಯೇಷ್ಠ ಪಾಂಡವನು ಹಲವಾರು ವರ್ಷಗಳು ಹಿಡಿದಿಟ್ಟುಕೊಂಡಿರುವ ಘೋರ ಕ್ರೋಧವನ್ನು ಕುರುಗಳ ಮೇಲೆ ಎಸೆಯುತ್ತಾನೋ ಆಗ ಧಾರ್ತರಾಷ್ಟ್ರರು ಆ ಯುದ್ಧದಲ್ಲಿ ಪರಿತಪಿಸುತ್ತಾರೆ.

05047013a ಕೃಷ್ಣವರ್ತ್ಮೇವ ಜ್ವಲಿತಃ ಸಮಿದ್ಧೋ ಯಥಾ ದಹೇತ್ಕಕ್ಷಮಗ್ನಿರ್ನಿದಾಘೇ।
05047013c ಏವಂ ದಗ್ಧಾ ಧಾರ್ತರಾಷ್ಟ್ರಸ್ಯ ಸೇನಾಂ ಯುಧಿಷ್ಠಿರಃ ಕ್ರೋಧದೀಪ್ತೋಽನುವೀಕ್ಷ್ಯ।।

ಬೇಸಿಗೆಯಲ್ಲಿ ಹೊಗೆಬಿಟ್ಟು ಉರಿಯುವ ಬೆಂಕಿಯು ಒಣಗಿದ ಮರಗಳನ್ನು ಹೇಗೆ ಸುಟ್ಟುಹಾಕುವುದೋ ಹಾಗೆ ಯುಧಿಷ್ಠಿರನು ಕ್ರೋಧದಿಂದ ಉರಿಯುವ ದೃಷ್ಟಿಮಾತ್ರದಿಂದ ಧಾರ್ತರಾಷ್ಟ್ರರ ಸೇನೆಯನ್ನು ಸುಟ್ಟುಬಿಡುತ್ತಾನೆ.

05047014a ಯದಾ ದ್ರಷ್ಟಾ ಭೀಮಸೇನಂ ರಣಸ್ಥಂ ಗದಾಹಸ್ತಂ ಕ್ರೋಧವಿಷಂ ವಮಂತಂ।
05047014c ದುರ್ಮರ್ಷಣಂ ಪಾಂಡವಂ ಭೀಮವೇಗಂ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಗದೆಯನ್ನು ಹಿಡಿದು, ಕ್ರೋಧದ ವಿಷವನ್ನು ಕಾರುತ್ತಾ ರಣಸ್ಥನಾಗಿರುವ ದುರ್ಮರ್ಷಣ, ಭೀಮವೇಗಿ, ಪಾಂಡವ ಭೀಮಸೇನನನ್ನು ನೋಡಿ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ.

05047015a ಮಹಾಸಿಂಹೋ ಗಾವ ಇವ ಪ್ರವಿಶ್ಯ ಗದಾಪಾಣಿರ್ಧಾರ್ತರಾಷ್ಟ್ರಾನುಪೇತ್ಯ।
05047015c ಯದಾ ಭೀಮೋ ಭೀಮರೂಪೋ ನಿಹಂತಾ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಮಹಾಸಿಂಹವು ಗೋವುಗಳ ಹಿಂಡನ್ನು ಪ್ರವೇಶಿಸುವಂತೆ ಆ ಭೀಮರೂಪ ಭೀಮನು ಗದಾಪಾಣಿಯಾಗಿ ಧಾರ್ತರಾಷ್ಟ್ರರ ಮೇಲೆರಗಿ ಕೊಲ್ಲುವಾಗ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ.

05047016a ಮಹಾಭಯೇ ವೀತಭಯಃ ಕೃತಾಸ್ತ್ರಃ ಸಮಾಗಮೇ ಶತ್ರುಬಲಾವಮರ್ದೀ।
05047016c ಸಕೃದ್ರಥೇನ ಪ್ರತಿಯಾದ್ರಥೌಘಾನ್ ಪದಾತಿಸಂಘಾನ್ಗದಯಾಭಿನಿಘ್ನನ್।।
05047017a ಸೈನ್ಯಾನನೇಕಾಂಸ್ತರಸಾ ವಿಮೃದ್ನನ್ ಯದಾ ಕ್ಷೇಪ್ತಾ ಧಾರ್ತರಾಷ್ಟ್ರಸ್ಯ ಸೈನ್ಯಂ।
05047017c ಚಿಂದನ್ವನಂ ಪರಶುನೇವ ಶೂರಸ್ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಮಹಾಭಯದಲ್ಲಿಯೂ ಭಯವನ್ನು ಕಳೆದುಕೊಳ್ಳುವ ಆ ಅಸ್ತ್ರಪ್ರವೀಣನು ಶತ್ರುಬಲವನ್ನು ತಲುಪಿ ಕೋಪಗೊಂಡು ರಥದಿಂದ ಇತರ ರಥಸಮೂಹಗಳನ್ನು ಚೆನ್ನಾಗಿ ಅಪ್ಪಳಿಸಿ, ಪದಾತಿಪಡೆಗಳನ್ನು ಗದೆಯಿಂದ ಹೊಡೆದುರುಳಿಸಿ, ಅನೇಕ ಸೇನೆಗಳನ್ನು ಕ್ಷಣದಲ್ಲಿಯೇ ಮರ್ದಿಸಿ, ಕೊಡಲಿಯಿಂದ ವನವನ್ನು ಚಿಂದಿ ಚಿಂದಿಯಾಗಿ ಕತ್ತರಿಸುವಂತೆ ಧಾರ್ತರಾಷ್ಟ್ರರ ಸೇನೆಯನ್ನು ನಾಶಗೊಳಿಸುವಾಗ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ.

05047018a ತೃಣಪ್ರಾಯಂ ಜ್ವಲನೇನೇವ ದಗ್ಧಂ ಗ್ರಾಮಂ ಯಥಾ ಧಾರ್ತರಾಷ್ಟ್ರಃ ಸಮೀಕ್ಷ್ಯ।
05047018c ಪಕ್ವಂ ಸಸ್ಯಂ ವೈದ್ಯುತೇನೇವ ದಗ್ಧಂ ಪರಾಸಿಕ್ತಂ ವಿಪುಲಂ ಸ್ವಂ ಬಲೌಘಂ।।
05047019a ಹತಪ್ರವೀರಂ ವಿಮುಖಂ ಭಯಾರ್ತಂ ಪರಾಮ್ಮುಖಂ ಪ್ರಾಯಶೋಽಧೃಷ್ಟಯೋಧಂ।
05047019c ಶಸ್ತ್ರಾರ್ಚಿಷಾ ಭೀಮಸೇನೇನ ದಗ್ಧಂ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಹುಲ್ಲಿನ ಮನೆಗಳಿಂದ ಕೂಡಿದ ಗ್ರಾಮವನ್ನು ಸುಟ್ಟು ಭಸ್ಮಮಾಡುವಂತೆ, ಬೆಳೆದ ಬೆಳೆಯು ಮಿಂಚುಹೊಡೆದಂತೆ ಸುಟ್ಟುಹೋಗುವ ಧಾರ್ತರಾಷ್ಟ್ರರನ್ನು ನೋಡಿ, ಭೀಮಸೇನನ ಶಸ್ತ್ರಗಳಿಂದ ಸುಟ್ಟುಹೋಗುತ್ತಿರುವ, ಪ್ರಮುಖ ಯೋಧರು ಹತರಾಗಿ, ಭಯಾರ್ತರಾಗಿ ವಿಮುಖರಾಗಿ, ಪರಾಙ್ಮುಖರಾಗಿ ಓಡಿಹೋಗುತ್ತಿರುವುದನ್ನು ನೋಡಿ, ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ.

05047020a ಉಪಾಸಂಗಾದುದ್ಧರನ್ದಕ್ಷಿಣೇನ ಪರಃಶತಾನ್ನಕುಲಶ್ಚಿತ್ರಯೋಧೀ।
05047020c ಯದಾ ರಥಾಗ್ರ್ಯೋ ರಥಿನಃ ಪ್ರಚೇತಾ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಆ ಚಿತ್ರಯೋಧೀ ನಕುಲನು ತನ್ನ ಬಲಗೈಯಿಂದ ಭತ್ತಳಿಕೆಯಲ್ಲಿರುವ ಬಾಣಗಳನ್ನು ತೆಗೆದು ನೂರಾರು ಶತ್ರು ರಥಿಕರನ್ನು ರಥದಮೇಲಿದ್ದುಕೊಂಡು ಸದೆಬಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047021a ಸುಖೋಚಿತೋ ದುಃಖಶಯ್ಯಾಂ ವನೇಷು ದೀರ್ಘಂ ಕಾಲಂ ನಕುಲೋ ಯಾಮಶೇತ।
05047021c ಆಶೀವಿಷಃ ಕ್ರುದ್ಧ ಇವ ಶ್ವಸನ್ ಭೃಶಂ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಸುಖೋಚಿತನಾಗಿದ್ದರೂ ವನಗಳಲ್ಲಿ ದೀರ್ಘಕಾಲ ದುಃಖದ ಹಾಸಿಗೆಯಲ್ಲಿ ಮಲಗಿದ ನಕುಲನು ಸಿಟ್ಟಿನಿಂದ ಹಾವಿನಂತೆ ಭುಸುಗುಟ್ಟುತ್ತ ವಿಷವನ್ನು ಕಾರುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047022a ತ್ಯಕ್ತಾತ್ಮಾನಃ ಪಾರ್ಥಿವಾಯೋಧನಾಯ ಸಮಾದಿಷ್ಟಾ ಧರ್ಮರಾಜೇನ ವೀರಾಃ।
05047022c ರಥೈಃ ಶುಭ್ರೈಃ ಸೈನ್ಯಮಭಿದ್ರವಂತೋ ದೃಷ್ಟ್ವಾ ಪಶ್ಚಾತ್ತಪ್ಸ್ಯತೇ ಧಾರ್ತರಾಷ್ಟ್ರಃ।।

ಧರ್ಮರಾಜನಿಂದ ಒಟ್ಟುಗೂಡಿಸಿದ, ಜೀವವನ್ನು ತ್ಯಜಿಸಲು ಸಿದ್ಧರಾಗಿರುವ ಪಾರ್ಥಿವ ಯೋಧರು ಶುಭ್ರ ರಥಗಳಲ್ಲಿ ಸೈನ್ಯವನ್ನು ಧ್ವಂಸಮಾಡುತ್ತಿರುವನ್ನು ನೋಡಿ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ.

05047023a ಶಿಶೂನ್ ಕೃತಾಸ್ತ್ರಾನಶಿಶುಪ್ರಕಾಶಾನ್ ಯದಾ ದ್ರಷ್ಟಾ ಕೌರವಃ ಪಂಚ ಶೂರಾನ್।
05047023c ತ್ಯಕ್ತ್ವಾ ಪ್ರಾಣಾನ್ಕೇಕಯಾನಾದ್ರವಂತಸ್ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಐವರು ಶೂರ ಮಕ್ಕಳನ್ನು – ಮಕ್ಕಳಾಗಿದ್ದರೂ ಕೃತಾಸ್ತ್ರರಾಗಿ ಪ್ರಕಾಶಿಸುವ, ಪ್ರಾಣಗಳನ್ನೂ ತೊರೆಯಲು ಸಿದ್ಧರಾಗಿ, ಕೇಕೆ ಹಾಕಿ ಆಕ್ರಮಣ ಮಾಡುತ್ತಿದ್ದವರನ್ನು ಕೌರವನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047024a ಯದಾ ಗತೋದ್ವಾಹಮಕೂಜನಾಕ್ಷಂ ಸುವರ್ಣತಾರಂ ರಥಮಾತತಾಯೀ।
05047024c ದಾಂತೈರ್ಯುಕ್ತಂ ಸಹದೇವೋಽಧಿರೂಢಃ ಶಿರಾಂಸಿ ರಾಜ್ಞಾಂ ಕ್ಷೇಪ್ಸ್ಯತೇ ಮಾರ್ಗಣೌಘೈಃ।।
05047025a ಮಹಾಭಯೇ ಸಂಪ್ರವೃತ್ತೇ ರಥಸ್ಥಂ ವಿವರ್ತಮಾನಂ ಸಮರೇ ಕೃತಾಸ್ತ್ರಂ।
05047025c ಸರ್ವಾಂ ದಿಶಂ ಸಂಪತಂತಂ ಸಮೀಕ್ಷ್ಯ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ವಿರೋಧವಿಲ್ಲದ, ಸುವರ್ಣ ತಾರೆಗಳ ಮತ್ತು ಸದ್ದಿಲ್ಲದೇ ಚಲಿಸುವ, ಪಳಗಿದ ಕುದುರೆಗಳನ್ನು ಕಟ್ಟಿದ ತನ್ನ ರಥವನ್ನೇರಿ ಸಹದೇವನು ಬಾಣಗಳಿಂದ ರಾಜರ ಶಿರವನ್ನು ಚೆಲ್ಲಾಡುವಾಗ, ರಥಸ್ಥನಾಗಿದ್ದು ಮಹಾಭಯವನ್ನುಂಟುಮಾಡಿ ಸಮರದಲ್ಲಿ, ಎಲ್ಲ ದಿಕ್ಕುಗಳಲ್ಲಿಯೂ ನೋಡಿ ಬಾಣಗಳನ್ನು ಸುರಿಸಿ ಹಿಂದೆ ಕಳುಹಿಸುತ್ತಿರುವ ಆ ಕೃತಾಸ್ತ್ರನನ್ನು ಯಾವಾಗ ನೋಡುತ್ತಾನೋ ಆಗ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ.

05047026a ಹ್ರೀನಿಷೇಧೋ ನಿಪುಣಃ ಸತ್ಯವಾದೀ ಮಹಾಬಲಃ ಸರ್ವಧರ್ಮೋಪಪನ್ನಃ।
05047026c ಗಾಂಧಾರಿಮಾರ್ಚ್ಚಂಸ್ತುಮುಲೇ ಕ್ಷಿಪ್ರಕಾರೀ ಕ್ಷೇಪ್ತಾ ಜನಾನ್ಸಹದೇವಸ್ತರಸ್ವೀ।।

ವಿನಯದ ಹಿಡಿತದಲ್ಲಿರುವ, ನಿಪುಣ, ಸತ್ಯವಾದೀ, ಮಹಾಬಲಿ, ಸರ್ವ ಧರ್ಮೋಪಪನ್ನ, ತರಸ್ವೀ ಸಹದೇವನು ಗಾಂಧಾರಿ ಶಕುನಿಯ ಮಾರ್ಗದಲ್ಲಿ ಬರುವ ಎಲ್ಲರನ್ನೂ ಸದೆಬಡಿಯುತ್ತಾನೆ.

05047027a ಯದಾ ದ್ರಷ್ಟಾ ದ್ರೌಪದೇಯಾನ್ಮಹೇಷೂಂ ಶೂರಾನ್ಕೃತಾಸ್ತ್ರಾನ್ರಥಯುದ್ಧಕೋವಿದಾನ್।
05047027c ಆಶೀವಿಷಾನ್ಘೋರವಿಷಾನಿವಾಯತಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಮಹಾಧನ್ವಿಗಳಾದ ಶೂರ, ಕೃತಾಸ್ತ್ರ, ರಥಯುದ್ಧ ಕೋವಿದ, ದ್ರೌಪದಿಯ ಮಕ್ಕಳು ಘೋರವಿಷವುಳ್ಳ ಸರ್ಪದಂತೆ ವಿಷಕಾರುತ್ತಾ ಮುಂದುವರೆಯುತ್ತಾರೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047028a ಯದಾಭಿಮನ್ಯುಃ ಪರವೀರಘಾತೀ ಶರೈಃ ಪರಾನ್ಮೇಘ ಇವಾಭಿವರ್ಷನ್।
05047028c ವಿಗಾಹಿತಾ ಕೃಷ್ಣಸಮಃ ಕೃತಾಸ್ತ್ರಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಪರವೀರಘಾತೀ, ಕೃಷ್ಣನಂತೆ ಕೃತಾಸ್ತ್ರನಾದ ಅಭಿಮನ್ಯುವು ಶತ್ರುಗಳ ಮೇಲೆ ಮೋಡವು ಮಳೆಸುರಿಸುವಂತೆ ಬಾಣಗಳನ್ನು ಸುರಿಸಿ ಹೋರಾಡುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047029a ಯದಾ ದ್ರಷ್ಟಾ ಬಾಲಮಬಾಲವೀರ್ಯಂ ದ್ವಿಷಚ್ಚಮೂಂ ಮೃತ್ಯುಮಿವಾಪತಂತಂ।
05047029c ಸೌಭದ್ರಮಿಂದ್ರಪ್ರತಿಮಂ ಕೃತಾಸ್ತ್ರಂ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಬಾಲಕನಾಗಿ ಕಂಡರೂ ಪ್ರೌಢನ ವೀರ್ಯವುಳ್ಳ, ಇಂದ್ರನಿಗೆ ಸಮಾನನಾದ ಕೃತಾಸ್ತ್ರ ಸೌಭದ್ರನು ಮೃತ್ಯುವಿನಂತೆ ಅರಿಸೇನೆಯಮೇಲೆ ಬೀಳುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047030a ಪ್ರಭದ್ರಕಾಃ ಶೀಘ್ರತರಾ ಯುವಾನೋ ವಿಶಾರದಾಃ ಸಿಂಹಸಮಾನವೀರ್ಯಾಃ।
05047030c ಯದಾ ಕ್ಷೇಪ್ತಾರೋ ಧಾರ್ತರಾಷ್ಟ್ರಾನ್ಸಸೈನ್ಯಾಂಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಶೀಘ್ರತರರಾದ, ವಿಶಾರದರಾದ, ಸಿಂಹಸಮಾನವೀರ್ಯರಾದ ಪ್ರಭದ್ರಕ ಯುವಕರು ಯಾವಾಗ ಸೇನೆಗಳೊಂದಿಗೆ ಧಾರ್ತರಾಷ್ಟ್ರರನ್ನು ಸದೆಬಡಿಯುತ್ತಾರೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047031a ವೃದ್ಧೌ ವಿರಾಟದ್ರುಪದೌ ಮಹಾರಥೌ ಪೃಥಕ್ಚಮೂಭ್ಯಾಮಭಿವರ್ತಮಾನೌ।
05047031c ಯದಾ ದ್ರಷ್ಟಾರೌ ಧಾರ್ತರಾಷ್ಟ್ರಾನ್ಸಸೈನ್ಯಾಂಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಮಹಾರಥಿಗಳಾದ ವಿರಾಟ-ದ್ರುಪದ ವೃದ್ಧರೀರ್ವರು ಜೋರಾಗಿ ಸೇನೆಗಳನ್ನು ಸದೆಬಡಿಯುವುದನ್ನು ಸೇನೆಗಳೊಂದಿಗೆ ಧಾರ್ತರಾಷ್ಟ್ರರು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047032a ಯದಾ ಕೃತಾಸ್ತ್ರೋ ದ್ರುಪದಃ ಪ್ರಚಿನ್ವಂ ಶಿರಾಂಸಿ ಯೂನಾಂ ಸಮರೇ ರಥಸ್ಥಃ।
05047032c ಕ್ರುದ್ಧಃ ಶರೈಶ್ಚೇತ್ಸ್ಯತಿ ಚಾಪಮುಕ್ತೈಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಕೃತಾಸ್ತ್ರ ದ್ರುಪದನು ಸಮರದಲ್ಲಿ ರಥಸ್ಥನಾಗಿದ್ದುಕೊಂಡು ಕ್ರೋಧದಿಂದ ತನ್ನ ಬಿಲ್ಲಿನಿಂದ ಬಿಟ್ಟ ಶರಗಳಿಂದ ಯುವಕರ ಶಿರಗಳನ್ನು ಕತ್ತರಿಸುವನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047033a ಯದಾ ವಿರಾಟಃ ಪರವೀರಘಾತೀ ಮರ್ಮಾಂತರೇ ಶತ್ರುಚಮೂಂ ಪ್ರವೇಷ್ಟಾ।
05047033c ಮತ್ಸ್ಯೈಃ ಸಾರ್ಧಮನೃಶಂಸರೂಪೈಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಪರವೀರಘಾತೀ ವಿರಾಟನು, ಬಿರುಸಾಗಿ ತೋರುವ ಮತ್ಸ್ಯರ ಸೇನೆಯನ್ನು ಕರೆದುಕೊಂಡು ಮರ್ಮಾಂತರಗಳಲ್ಲಿ ಸೇನೆಯನ್ನು ಪ್ರವೇಶಿಸುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047034a ಜ್ಯೇಷ್ಠಂ ಮಾತ್ಸ್ಯಾನಾಮನೃಶಂಸರೂಪಂ ವಿರಾಟಪುತ್ರಂ ರಥಿನಂ ಪುರಸ್ತಾತ್।
05047034c ಯದಾ ದ್ರಷ್ಟಾ ದಂಶಿತಂ ಪಾಂಡವಾರ್ಥೇ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಭಿರುಸಾಗಿ ಕಾಣುವ ಮತ್ಸ್ಯರ ಜ್ಯೇಷ್ಠ ವಿರಾಟಪುತ್ರ ರಥಿಕನು ಮುಂದುವರೆದು ಪಾಂಡವರಿಗಾಗಿ ಕವಚಗಳನ್ನು ಧರಿಸುವುದನ್ನು ನೋಡಿ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047035a ರಣೇ ಹತೇ ಕೌರವಾಣಾಂ ಪ್ರವೀರೇ ಶಿಖಂಡಿನಾ ಸತ್ತಮೇ ಶಂತನೂಜೇ।
05047035c ನ ಜಾತು ನಃ ಶತ್ರವೋ ಧಾರಯೇಯುರ್- ಅಸಂಶಯಂ ಸತ್ಯಮೇತದ್ಬ್ರವೀಮಿ।।

ಕೌರವರ ಪ್ರವೀರ ಸತ್ತಮ ಶಂತನೂಜನು ಶಿಖಂಡಿಯಿಂದ ರಣದಲ್ಲಿ ಹತನಾಗಲು, ನಿಸ್ಸಂಶಯುವಾಗಿ ಸತ್ಯವನ್ನು ಹೇಳುತ್ತಿದ್ದೇನೆ, ಶತ್ರುಗಳು ಜೀವವನ್ನು ತಳೆದಿರುವುದಿಲ್ಲ.

05047036a ಯದಾ ಶಿಖಂಡೀ ರಥಿನಃ ಪ್ರಚಿನ್ವನ್ ಭೀಷ್ಮಂ ರಥೇನಾಭಿಯಾತಾ ವರೂಥೀ।
05047036c ದಿವ್ಯೈರ್ಹಯೈರವಮೃದ್ನನ್ರಥೌಘಾಂಸ್ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಶಿಖಂಡಿಯು ರಥಿಗಳನ್ನು ಕತ್ತರಿಸಿ ರಥದ ಮೇಲಿದ್ದುಕೊಂಡು, ದಿವ್ಯ ಹಯಗಳು ಶತ್ರುಗಳ ರಥಗಳನ್ನು ತುಳಿಯುತ್ತಿರಲು, ವರೂಥೀ ಭೀಷ್ಮನ ಮೇಲೆ ಆಕ್ರಮಣ ಮಾಡುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047037a ಯದಾ ದ್ರಷ್ಟಾ ಸೃಂಜಯಾನಾಮನೀಕೇ ಧೃಷ್ಟದ್ಯುಮ್ನಂ ಪ್ರಮುಖೇ ರೋಚಮಾನಂ।
05047037c ಅಸ್ತ್ರಂ ಯಸ್ಮೈ ಗುಹ್ಯಮುವಾಚ ಧೀಮಾನ್ ದ್ರೋಣಸ್ತದಾ ತಪ್ಸ್ಯತಿ ಧಾರ್ತರಾಷ್ಟ್ರಃ।।

ಸೃಂಜಯರ ಸೇನೆಯಲ್ಲಿ ಪ್ರಮುಖನಾಗಿ ಮಿಂಚುತ್ತಿರುವ, ಯಾರಿಗೆ ದ್ರೋಣನು ಗುಹ್ಯವಾದ ಅಸ್ತ್ರವನ್ನು ನೀಡಿದನೋ ಆ ಧೃಷ್ಟದ್ಯುಮ್ನನನ್ನು ಯಾವಾಗ ನೋಡುತ್ತಾನೋ ಆಗ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ.

05047038a ಯದಾ ಸ ಸೇನಾಪತಿರಪ್ರಮೇಯಃ ಪರಾಭವನ್ನಿಷುಭಿರ್ಧಾರ್ತರಾಷ್ಟ್ರಾನ್।
05047038c ದ್ರೋಣಂ ರಣೇ ಶತ್ರುಸಹೋಽಭಿಯಾತಾ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಯಾವಾಗ ಆ ಅಪ್ರಮೇಯ ಸೇನಾಪತಿಯು ಧಾರ್ತರಾಷ್ಟ್ರರನ್ನು ಪರಾಭವಗೊಳಿಸಿ ರಣದಲ್ಲಿ ಶತ್ರುಗಳೊಂದಿರುವ ದ್ರೋಣನ ಮೇಲೆ ಆಕ್ರಮಣ ಮಾಡುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047039a ಹ್ರೀಮಾನ್ಮನೀಷೀ ಬಲವಾನ್ಮನಸ್ವೀ ಸ ಲಕ್ಷ್ಮೀವಾನ್ಸೋಮಕಾನಾಂ ಪ್ರಬರ್ಹಃ।
05047039c ನ ಜಾತು ತಂ ಶತ್ರವೋಽನ್ಯೇ ಸಹೇರನ್ ಯೇಷಾಂ ಸ ಸ್ಯಾದಗ್ರಣೀರ್ವೃಷ್ಣಿಸಿಂಹಃ।।

ಆ ಸೋಮಕರ ನಾಯಕ ಹ್ರೀಮಾನ, ಮನೀಷೀ, ಬಲಶಾಲೀ, ಮನಸ್ವೀ ಮತ್ತು ಲಕ್ಷೀವಂತ ವೃಷ್ಣಿಸಿಂಹನು ಯಾರ ಬಲದ ನಾಯಕನಾಗಿರುವನೋ ಆ ಸೇನೆಯನ್ನು ಎದುರಿಸಿ ಶತ್ರುಗಳು ಜೀವಿತರಾಗಿರಲಾರರು.

05047040a ಬ್ರೂಯಾಚ್ಚ ಮಾ ಪ್ರವೃಣೀಷ್ವೇತಿ ಲೋಕೇ ಯುದ್ಧೇಽದ್ವಿತೀಯಂ ಸಚಿವಂ ರಥಸ್ಥಂ।
05047040c ಶಿನೇರ್ನಪ್ತಾರಂ ಪ್ರವೃಣೀಮ ಸಾತ್ಯಕಿಂ ಮಹಾಬಲಂ ವೀತಭಯಂ ಕೃತಾಸ್ತ್ರಂ।।

“ಇನ್ನು ಆರಿಸುವುದು ಬೇಡ!” ಎಂದು ಜನರಿಗೆ ಹೇಳು. ಏಕೆಂದರೆ ಯುದ್ಧದಲ್ಲಿ ಅದ್ವಿತೀಯ, ರಥಸ್ಥ, ಶಿನಿಯ ಮೊಮ್ಮಗ, ಮಹಾಬಲಿ, ಭಯವಿಲ್ಲದ ಕೃತಾಸ್ತ್ರ ಸಾತ್ಯಕಿಯನ್ನು ಸಚಿವನನ್ನಾಗಿ ಆರಿಸಿಕೊಂಡಿದ್ದೇವೆ.

05047041a ಯದಾ ಶಿನೀನಾಮಧಿಪೋ ಮಯೋಕ್ತಃ ಶರೈಃ ಪರಾನ್ಮೇಘ ಇವ ಪ್ರವರ್ಷನ್।
05047041c ಪ್ರಚ್ಚಾದಯಿಷ್ಯಂ ಶರಜಾಲೇನ ಯೋಧಾಂಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ನಾನು ಹೇಳಿದಂತೆ ಶಿನಿಗಳ ಅಧಿಪನು ಮೇಘಗಳಂತೆ ಶತ್ರುಗಳ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಶರಜಾಲಗಳಿಂದ ಯೋಧರನ್ನು ಮುಚ್ಚುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047042a ಯದಾ ಧೃತಿಂ ಕುರುತೇ ಯೋತ್ಸ್ಯಮಾನಃ ಸ ದೀರ್ಘಬಾಹುರ್ದೃಢಧನ್ವಾ ಮಹಾತ್ಮಾ।
05047042c ಸಿಂಹಸ್ಯೇವ ಗಂಧಮಾಘ್ರಾಯ ಗಾವಃ ಸಂವೇಷ್ಟಂತೇ ಶತ್ರವೋಽಸ್ಮಾದ್ಯಥಾಗ್ನೇಃ।।

ಯಾವಾಗ ಆ ದೀರ್ಘಬಾಹು, ದೃಢಧನ್ವಿ, ಮಹಾತ್ಮನು ಧೃತಿಯಿಂದ ಯುದ್ಧ ಮಾಡುತ್ತಾನೋ ಆಗ ಶತ್ರುಗಳು ಸಿಂಹದ ವಾಸನೆಯನ್ನು ಮೂಸಿದ ಗೋವುಗಳಂತೆ ಮತ್ತು ಬೆಂಕಿಗೆ ಸಿಲುಕಿದಂತೆ ಒಣಗಿ ಹೋಗುತ್ತಾರೆ.

05047043a ಸ ದೀರ್ಘಬಾಹುರ್ದೃಢಧನ್ವಾ ಮಹಾತ್ಮಾ ಭಿಂದ್ಯಾದ್ಗಿರೀನ್ಸಂಹರೇತ್ಸರ್ವಲೋಕಾನ್।
05047043c ಅಸ್ತ್ರೇ ಕೃತೀ ನಿಪುಣಃ ಕ್ಷಿಪ್ರಹಸ್ತೋ ದಿವಿ ಸ್ಥಿತಃ ಸೂರ್ಯ ಇವಾಭಿಭಾತಿ।।

ದೀರ್ಘಬಾಹು, ದೃಢಧನ್ವಿ, ಮಹಾತ್ಮನು ಗಿರಿಗಳನ್ನು ಭೇದಿಸಬಲ್ಲ, ಸರ್ವಲೋಕಗಳನ್ನೂ ಸಂಹರಿಸಬಲ್ಲ. ಅಸ್ತ್ರಗಳನ್ನು ಬಳಸುವುದರಲ್ಲಿ ನಿಪುಣನಾದ, ಕ್ಷಿಪ್ರ ಕೈಚಳಕವಿರುವ ಅವನು ದಿವಿಯಲ್ಲಿ ಸೂರ್ಯನಂತೆ ಹೊಳೆಯುತ್ತಾನೆ.

05047044a ಚಿತ್ರಃ ಸೂಕ್ಷ್ಮಃ ಸುಕೃತೋ ಯಾದವಸ್ಯ ಅಸ್ತ್ರೇ ಯೋಗೋ ವೃಷ್ಣಿಸಿಂಹಸ್ಯ ಭೂಯಾನ್।
05047044c ಯಥಾವಿಧಂ ಯೋಗಮಾಹುಃ ಪ್ರಶಸ್ತಂ ಸರ್ವೈರ್ಗುಣೈಃ ಸಾತ್ಯಕಿಸ್ತೈರುಪೇತಃ।।

ಆ ಯಾದವ ವೃಷ್ಣಿಸಿಂಹನು ಅಸ್ತ್ರಗಳಲ್ಲಿ ಅತ್ಯಂತ ಪ್ರಶಸ್ತವಾದ ಯೋಗವೆಂದು ಯಾವುದಕ್ಕೆ ಹೇಳುತ್ತಾರೋ ಆ ವಿಚಿತ್ರ, ಸೂಕ್ಷ್ಮ ಯೋಗವನ್ನು ಸಿದ್ಧಿಗೊಳಿಸಿಕೊಂಡಿದ್ದಾನೆ. ಸಾತ್ಯಕಿಯು ಸರ್ವಗುಣಗಳಿಂದ ಕೂಡಿದ್ದಾನೆ.

05047045a ಹಿರಣ್ಮಯಂ ಶ್ವೇತಹಯೈಶ್ಚತುರ್ಭಿರ್- ಯದಾ ಯುಕ್ತಂ ಸ್ಯಂದನಂ ಮಾಧವಸ್ಯ।
05047045c ದ್ರಷ್ಟಾ ಯುದ್ಧೇ ಸಾತ್ಯಕೇರ್ವೈ ಸುಯೋಧನಸ್- ತದಾ ತಪ್ಸ್ಯತ್ಯಕೃತಾತ್ಮಾ ಸ ಮಂದಃ।।

ಯುದ್ಧದಲ್ಲಿ ಮಾಧವ ಸಾತ್ಯಕಿಯ ನಾಲ್ಕು ಬಿಳಿಯ ಕುದುರೆಗಳನ್ನು ಕಟ್ಟಿದ ಹಿರಣ್ಮಯ ರಥವನ್ನು ನೋಡಿ ಆ ಮಂದ ಸುಯೋಧನನು ಪಶ್ಚಾತ್ತಾಪ ಪಡುತ್ತಾನೆ.

05047046a ಯದಾ ರಥಂ ಹೇಮಮಣಿಪ್ರಕಾಶಂ ಶ್ವೇತಾಶ್ವಯುಕ್ತಂ ವಾನರಕೇತುಮುಗ್ರಂ।
05047046c ದ್ರಷ್ಟಾ ರಣೇ ಸಮ್ಯತಂ ಕೇಶವೇನ ತದಾ ತಪ್ಸ್ಯತ್ಯಕೃತಾತ್ಮಾ ಸ ಮಂದಃ।।

ಯಾವಾಗ ಅವನು ಕೇಶವನೊಡನೆ ಹೇಮಮಣಿಪ್ರಕಾಶಿತ, ಶ್ವೇತಾಶ್ವಯುಕ್ತ, ಉಗ್ರ ವಾನರಕೇತುವನ್ನು ಹೊಂದಿದ ರಥವನ್ನು ನೋಡುತ್ತಾನೋ ಆಗ ಆ ಮಂದನು ಪಶ್ಚಾತ್ತಾಪ ಪಡುತ್ತಾನೆ.

05047047a ಯದಾ ಮೌರ್ವ್ಯಾಸ್ತಲನಿಷ್ಪೇಷಮುಗ್ರಂ ಮಹಾಶಬ್ದಂ ವಜ್ರನಿಷ್ಪೇಷತುಲ್ಯಂ।
05047047c ವಿಧೂಯಮಾನಸ್ಯ ಮಹಾರಣೇ ಮಯಾ ಗಾಂಡೀವಸ್ಯ ಶ್ರೋಷ್ಯತಿ ಮಂದಬುದ್ಧಿಃ।।

ಯಾವಾಗ ನನ್ನ ಗಾಂಡೀವದ ಮಿಡಿತದಿಂದ ಉಂಟಾದ ಸಿಡಿಲಿನಂತಹ ಮಹಾಶಬ್ಧವನ್ನು ಮಹಾರಣದಲ್ಲಿ ಕೇಳುತ್ತಾನೋ ಆಗ ಆ ಮಂದಬುದ್ಧಿಯು ಶೋಕಿಸುತ್ತಾನೆ.

05047048a ತದಾ ಮೂಢೋ ಧೃತರಾಷ್ಟ್ರಸ್ಯ ಪುತ್ರಸ್- ತಪ್ತಾ ಯುದ್ಧೇ ದುರ್ಮತಿರ್ದುಃಸ್ಸಹಾಯಃ।
05047048c ದೃಷ್ಟ್ವಾ ಸೈನ್ಯಂ ಬಾಣವರ್ಷಾಂಧಕಾರಂ ಪ್ರಭಜ್ಯಂತಂ ಗೋಕುಲವದ್ರಣಾಗ್ರೇ।।

ನನ್ನ ಬಾಣಗಳ ಸುರಿಮಳೆಯಿಂದುಂಟಾದ ಅಂಧಕಾರದಿಂದ ಗೋವುಗಳ ಹಿಂಡುಗಳು ಚದುರಿ ಓಡುವಂತೆ ಅವನ ಸೇನೆಯು ರಣದಿಂದ ಎಲ್ಲ ಕಡೆ ಓಡಿಹೋಗುವುದನ್ನು ನೋಡಿ ಧೃತರಾಷ್ಟ್ರನ ದುರ್ಮತಿ ದುಃಸ್ಸಹ ಮೂಢ ಮಗನು ಯುದ್ಧಕ್ಕೆ ತಪಿಸುತ್ತಾನೆ.

05047049a ಬಲಾಹಕಾದುಚ್ಚರಂತೀವ ವಿದ್ಯುತ್ ಸಹಸ್ರಘ್ನೀ ದ್ವಿಷತಾಂ ಸಂಗಮೇಷು।
05047049c ಅಸ್ಥಿಚ್ಚಿದೋ ಮರ್ಮಭಿದೋ ವಮೇಚ್ಚರಾಂಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಮೋಡಗಳಿಂದ ಹೊರಹೊಮ್ಮುವ ಮಿಂಚುಗಳಂತೆ ಹೊರಡುವ ಸಹಸ್ರಾರು ಶತ್ರುಗಳನ್ನು ಕೊಲ್ಲಬಲ್ಲ, ಎಲುಬುಗಳನ್ನೂ ಹೊಕ್ಕಿ, ಮರ್ಮಗಳನ್ನು ಭೇದಿಸಬಲ್ಲ ನನ್ನ ಬಾಣಗಳನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047050a ಯದಾ ದ್ರಷ್ಟಾ ಜ್ಯಾಮುಖಾದ್ಬಾಣಸಂಘಾನ್ ಗಾಂಡೀವಮುಕ್ತಾನ್ಪತತಃ ಶಿತಾಗ್ರಾನ್।
05047050c ನಾಗಾನ್ ಹಯಾನ್ವರ್ಮಿಣಶ್ಚಾದದಾನಾಂಸ್ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ತೀಕ್ಷ್ಣಮೊನೆಗಳನ್ನುಳ್ಳ, ಬಂಗಾರದ ಮುಖವುಳ್ಳ, ರೆಕ್ಕೆಗಳನ್ನುಳ್ಳ ಬಾಣಸಂಘಗಳು ನನ್ನ ಗಾಂಡೀವದಿಂದ ಹೊರಬಂದು ಆನೆ, ಕುದುರೆಗಳ ವರ್ಮಗಳನ್ನು ಭೇದಿಸುವುದನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047051a ಯದಾ ಮಂದಃ ಪರಬಾಣಾನ್ವಿಮುಕ್ತಾನ್ ಮಮೇಷುಭಿರ್ಹ್ರಿಯಮಾಣಾನ್ಪ್ರತೀಪಂ।
05047051c ತಿರ್ಯಗ್ವಿದ್ವಾಂಶ್ಚಿದ್ಯಮಾನಾನ್ ಕ್ಷುರಪ್ರೈಸ್- ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ಶತ್ರುಗಳು ಬಿಟ್ಟಬಾಣಗಳನ್ನು ನನ್ನ ಬಾಣಗಳು ಆರಿಸಿದಾಗ, ಅಥವಾ ಹಿಂದಿರುಗಿಸಿದಾಗ ಅಥವಾ ತುಂಡರಿಸಿದಾಗ ಆ ಮಂದಬುದ್ಧಿ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047052a ಯದಾ ವಿಪಾಠಾ ಮದ್ಭುಜವಿಪ್ರಮುಕ್ತಾ ದ್ವಿಜಾಃ ಫಲಾನೀವ ಮಹೀರುಹಾಗ್ರಾತ್।
05047052c ಪ್ರಚ್ಚೇತ್ತಾರ ಉತ್ತಮಾಂಗಾನಿ ಯೂನಾಂ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ನನ್ನ ಭುಜಗಳಿಂದ ಪ್ರಯೋಗಿಸಲ್ಪಟ್ಟ ವಿಪಾಠಗಳು ಪಕ್ಷಿಗಳು ಮರದ ಮೇಲಿರುವ ಹಣ್ಣುಗಳನ್ನು ಕೀಳುವಂತೆ ಅವರ ಯುವಕರ ಶಿರಗಳನ್ನು ಕೀಳುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047053a ಯದಾ ದ್ರಷ್ಟಾ ಪತತಃ ಸ್ಯಂದನೇಭ್ಯೋ ಮಹಾಗಜೇಭ್ಯೋಽಶ್ವಗತಾಂಶ್ಚ ಯೋಧಾನ್।
05047053c ಶರೈರ್ ಹತಾನ್ಪಾತಿತಾಂಶ್ಚೈವ ರಂಗೇ ತದಾ ಯುದ್ಧಂ ಧಾರ್ತರಾಷ್ಟ್ರೋಽನ್ವತಪ್ಸ್ಯತ್।।

ರಣದಲ್ಲಿ ನನ್ನ ಶರಗಳಿಂದ ಹೊಡೆತತಿಂದು ಅವನ ಯೋಧರು ರಥಗಳಿಂದ, ಮಹಾಗಜಗಳಿಂದ, ಕುದುರೆಗಳ ಮೇಲಿಂದ ಬೀಳುವುದನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047054a ಪದಾತಿಸಂಘಾನ್ರಥಸಂಘಾನ್ಸಮಂತಾದ್ ವ್ಯಾತ್ತಾನನಃ ಕಾಲ ಇವಾತತೇಷುಃ।
05047054c ಪ್ರಣೋತ್ಸ್ಯಾಮಿ ಜ್ವಲಿತೈರ್ಬಾಣವರ್ಷೈಃ ಶತ್ರೂಂಸ್ತದಾ ತಪ್ಸ್ಯತಿ ಮಂದಬುದ್ಧಿಃ।।

ಯಾವಾಗ ನಾನು ಬಾಯಿಕಳೆದ ಕಾಲನಂತೆ ಶತ್ರುವಿನ ಪದಾತಿಸಮೂಹಗಳನ್ನು, ರಥಸಮೂಹಗಳನ್ನು ಎಲ್ಲ ಕಡೆಯಿಂದ ಉರಿಯುತ್ತಿರುವ ಬಾಣವರ್ಷಗಳಿಂದ ಅಂತ್ಯಗೊಳಿಸುವೆನೋ ಆಗ ಆ ಮಂದಬುದ್ಧಿಯು ಪರಿತಪಿಸುತ್ತಾನೆ.

05047055a ಸರ್ವಾ ದಿಶಃ ಸಂಪತತಾ ರಥೇನ ರಜೋಧ್ವಸ್ತಂ ಗಾಂಡಿವೇನಾಪಕೃತ್ತಂ।
05047055c ಯದಾ ದ್ರಷ್ಟಾ ಸ್ವಬಲಂ ಸಂಪ್ರಮೂಢಂ ತದಾ ಪಶ್ಚಾತ್ತಪ್ಸ್ಯತಿ ಮಂದಬುದ್ಧಿಃ।।

ಗಾಂಡೀವದಿಂದ ಹೊಡೆದುರಿಳಿಸಲ್ಪಟ್ಟ ರಥಗಳಿಂದ ಎಲ್ಲ ದಿಕ್ಕುಗಳಲ್ಲಿಯೂ ಮೇಲೇಳುವ ಧೂಳಿನಿಂದ ಮುಸುಕಲ್ಪಟ್ಟು ದಿಕ್ಕುತೋಚದಂತಾದ ಅವನ ಸೇನೆಯನ್ನು ನೋಡಿ ಆ ಮಂದಬುದ್ಧಿಯು ಪಶ್ಚಾತ್ತಾಪ ಪಡುತ್ತಾನೆ.

05047056a ಕಾಂದಿಗ್ಭೂತಂ ಚಿನ್ನಗಾತ್ರಂ ವಿಸಂಜ್ಞಾಂ ದುರ್ಯೋಧನೋ ದ್ರಕ್ಷ್ಯತಿ ಸರ್ವಸೈನ್ಯಂ।
05047056c ಹತಾಶ್ವವೀರಾಗ್ರ್ಯನರೇಂದ್ರನಾಗಂ ಪಿಪಾಸಿತಂ ಶ್ರಾಂತಪತ್ರಂ ಭಯಾರ್ತಂ।।

ದುರ್ಯೋಧನನು ತನ್ನ ಎಲ್ಲ ಸೇನೆಯೂ ಸಣ್ಣದಾಗುವುದನ್ನು, ಸಂಜ್ಞೆಯನ್ನು ಕಳೆದುಕೊಳ್ಳುವುದನ್ನು, ಅಶ್ವ, ವೀರಾಗ್ರ, ನರೇಂದ್ರ, ಗಜಗಳನ್ನು ಕಳೆದುಕೊಂಡು ಬಾಯಾರಿ, ಭಯಾರ್ತರಾಗಿ, ಆಯಾಸಗೊಳ್ಳುವುದನ್ನು ನೋಡುತ್ತಾನೆ.

05047057a ಆರ್ತಸ್ವರಂ ಹನ್ಯಮಾನಂ ಹತಂ ಚ ವಿಕೀರ್ಣಕೇಶಾಸ್ಥಿಕಪಾಲಸಂಘಂ।
05047057c ಪ್ರಜಾಪತೇಃ ಕರ್ಮ ಯಥಾರ್ಧನಿಷ್ಠಿತಂ ತದಾ ದೃಷ್ಟ್ವಾ ತಪ್ಸ್ಯತೇ ಮಂದಬುದ್ಧಿಃ।।

ಹತರಾದ, ಹತರಾಗುತ್ತಿರುವವರ ಆರ್ತಸ್ವರ, ಪ್ರಜಾಪತಿಯ ಅರ್ಧ ಮುಗಿಸಿದ ಕೆಲಸವೋ ಎಂಬಂತೆ ಕೇಶ, ಎಲುಬು, ಮತ್ತು ಬುರುಡೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಆ ಮಂದಬುದ್ಧಿಯು ಪರಿತಪಿಸುತ್ತಾನೆ.

05047058a ಯದಾ ರಥೇ ಗಾಂಡಿವಂ ವಾಸುದೇವಂ ದಿವ್ಯಂ ಶಂಖಂ ಪಾಂಚಜನ್ಯಂ ಹಯಾಂಶ್ಚ।
05047058c ತೂಣಾವಕ್ಷಯ್ಯೌ ದೇವದತ್ತಂ ಚ ಮಾಂ ಚ ದ್ರಷ್ಟಾ ಯುದ್ಧೇ ಧಾರ್ತರಾಷ್ಟ್ರಃ ಸಮೇತಾನ್।।

ಯಾವಾಗ ರಥದಲ್ಲಿ ಗಾಂಡೀವ, ವಾಸುದೇವ, ದಿವ್ಯ ಶಂಖ ಪಾಂಚಜನ್ಯ, ಕುದುರೆಗಳು, ಅಕ್ಷಯವಾದ ಎರಡು ಭತ್ತಳಿಕೆಗಳು ಮತ್ತು ನನ್ನ ದೇವದತ್ತವನ್ನು ಅವನು ನೋಡುತ್ತಾನೋ ಆಗ ಧಾರ್ತರಾಷ್ಟ್ರನು ಈ ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ.

05047059a ಉದ್ವರ್ತಯನ್ದಸ್ಯುಸಂಘಾನ್ಸಮೇತಾನ್ ಪ್ರವರ್ತಯನ್ಯುಗಮನ್ಯದ್ಯುಗಾಂತೇ।
05047059c ಯದಾ ಧಕ್ಷ್ಯಾಮ್ಯಗ್ನಿವತ್ಕೌರವೇಯಾಂಸ್- ತದಾ ತಪ್ತಾ ಧೃತರಾಷ್ಟ್ರಃ ಸಪುತ್ರಃ।।

ಯುಗವು ಕಳೆದು ಇನ್ನೊಂದು ಯುಗವು ಬರುವಾಗ ಸೇರಿರುವ ಎಲ್ಲ ದಸ್ಯುಸಂಘಗಳನ್ನು ಅಗ್ನಿಯು ಹೇಗೆ ಕಬಳಿಸುತ್ತಾನೋ ಹಾಗೆ ನಾನು ಕೌರವರನ್ನು ನಾಶಪಡಿಸುವಾಗ ಪುತ್ರರೊಂದಿಗೆ ಧೃತರಾಷ್ಟ್ರನು ಪರಿತಪಿಸುತ್ತಾನೆ.

05047060a ಸಹಭ್ರಾತಾ ಸಹಪುತ್ರಃ ಸಸೈನ್ಯೋ ಭ್ರಷ್ಟೈಶ್ವರ್ಯಃ ಕ್ರೋಧವಶೋಽಲ್ಪಚೇತಾಃ।
05047060c ದರ್ಪಸ್ಯಾಂತೇ ವಿಹಿತೇ ವೇಪಮಾನಃ ಪಶ್ಚಾನ್ಮಂದಸ್ತಪ್ಸ್ಯತಿ ಧಾರ್ತರಾಷ್ಟ್ರಃ।।

ಕ್ರೋಧವಶನಾದ ಅಲ್ಪಚೇತಸನಾದ ಮಂದ ಧಾರ್ತರಾಷ್ಟ್ರನು ಭ್ರಾತರೊಂದಿಗೆ ಪುತ್ರರೊಂದಿಗೆ ಮತ್ತು ಸೈನ್ಯದೊಂದಿಗೆ ಐಶ್ವರ್ಯವನ್ನು, ದರ್ಪವನ್ನು ಕಳೆದುಕೊಂಡು ನಡುಗುತ್ತಿರುವಾಗ ಪರಿತಪಿಸುತ್ತಾನೆ.

05047061a ಪೂರ್ವಾಹ್ಣೇ ಮಾಂ ಕೃತಜಪ್ಯಂ ಕದಾ ಚಿದ್ ವಿಪ್ರಃ ಪ್ರೋವಾಚೋದಕಾಂತೇ ಮನೋಜ್ಞಾಂ।
05047061c ಕರ್ತವ್ಯಂ ತೇ ದುಷ್ಕರಂ ಕರ್ಮ ಪಾರ್ಥ ಯೋದ್ಧವ್ಯಂ ತೇ ಶತ್ರುಭಿಃ ಸವ್ಯಸಾಚಿನ್।।

ಒಂದು ಬೆಳಿಗ್ಗೆ ಜಪವನ್ನು ಮಾಡಿ ಮುಗಿಸಿರುವಾಗ ಏಕಾಂತದಲ್ಲಿ ಓರ್ವ ಮನೋಜ್ಞ ವಿಪ್ರನು ನನಗೆ ಹೇಳಿದ್ದನು: ‘ಸವ್ಯಸಾಚೀ! ಪಾರ್ಥ! ನಿನಗೆ ಒಂದು ದುಷ್ಕರವಾದ ಕೆಲಸವನ್ನು ಮಾಡಬೇಕಾಗಿದೆ. ಶತ್ರುಗಳೊಡನೆ ನೀನು ಹೋರಾಡುತ್ತೀಯೆ.

05047062a ಇಂದ್ರೋ ವಾ ತೇ ಹರಿವಾನ್ವಜ್ರಹಸ್ತಃ ಪುರಸ್ತಾದ್ಯಾತು ಸಮರೇಽರೀನ್ವಿನಿಘ್ನನ್।
05047062c ಸುಗ್ರೀವಯುಕ್ತೇನ ರಥೇನ ವಾ ತೇ ಪಶ್ಚಾತ್ಕೃಷ್ಣೋ ರಕ್ಷತು ವಾಸುದೇವಃ।।

ಹರಿವಾನ್ ವಜ್ರಹಸ್ತ ಇಂದ್ರನು ನಿನ್ನ ಮುಂದೆ ಹೋಗಿ ಸಮರದಲ್ಲಿ ಅರಿಗಳನ್ನು ಸಂಹರಿಸುತ್ತಾನೆ. ಅಥವಾ ಸುಗ್ರೀವವನ್ನು ಕಟ್ಟಿದ ನಿನ್ನ ರಥದಲ್ಲಿ ಹಿಂದಿನಿಂದ ವಾಸುದೇವನು ರಕ್ಷಿಸುತ್ತಾನೆ.’

05047063a ವವ್ರೇ ಚಾಹಂ ವಜ್ರಹಸ್ತಾನ್ಮಹೇಂದ್ರಾದ್ ಅಸ್ಮಿನ್ಯುದ್ಧೇ ವಾಸುದೇವಂ ಸಹಾಯಂ।
05047063c ಸ ಮೇ ಲಬ್ಧೋ ದಸ್ಯುವಧಾಯ ಕೃಷ್ಣೋ ಮನ್ಯೇ ಚೈತದ್ವಿಹಿತಂ ದೈವತೈರ್ಮೇ।।

ವಜ್ರಹಸ್ತ ಮಹೇಂದ್ರನನ್ನು ಮೀರಿ ಈ ಯುದ್ಧದಲ್ಲಿ ನಾನು ವಾಸುದೇವನ ಸಹಾಯವನ್ನು ಆರಿಸಿಕೊಂಡಿದ್ದೇನೆ. ದಸ್ಯುಗಳ ವಧೆಗಾಗಿಯೇ ನನಗೆ ಕೃಷ್ಣನು ದೊರಕಿದ್ದಾನೆ. ಇವೆಲ್ಲವುಗಳಲ್ಲಿ ದೈವದ ನಿಶ್ಚಯವಿದೆ ಎಂದು ನನಗೆ ತೋರುತ್ತಿದೆ.

05047064a ಅಯುಧ್ಯಮಾನೋ ಮನಸಾಪಿ ಯಸ್ಯ ಜಯಂ ಕೃಷ್ಣಃ ಪುರುಷಸ್ಯಾಭಿನಂದೇತ್।
05047064c ಧ್ರುವಂ ಸರ್ವಾನ್ಸೋಽಭ್ಯತೀಯಾದಮಿತ್ರಾನ್ ಸೇಂದ್ರಾನ್ದೇವಾನ್ಮಾನುಷೇ ನಾಸ್ತಿ ಚಿಂತಾ।।

ಯುದ್ಧವನ್ನು ಮಾಡದೆಯೇ ಯಾವ ಪುರುಷನಿಗೆ ಜಯವಾಗಲೆಂದು ಕೃಷ್ಣನು ಮನಸ್ಸಿನಲ್ಲಿಯಾದರೂ ಆಲೋಚಿಸುತ್ತಾನೋ ಅವನಿಗೆ, ಶತ್ರುಗಳು ಇಂದ್ರನೊಡನೆ ದೇವತೆಗಳೇ ಆಗಿರಲಿ, ಎಲ್ಲ ರೀತಿಯಿಂದ ಯಶಸ್ಸುಂಟಾಗುವುದು ಸತ್ಯ. ಇನ್ನು ಮನುಷ್ಯರೆಂದರೆ ಅದರಲ್ಲಿ ಚಿಂತೆಯೇ ಇಲ್ಲ.

05047065a ಸ ಬಾಹುಭ್ಯಾಂ ಸಾಗರಮುತ್ತಿತೀರ್ಷೇನ್ ಮಹೋದಧಿಂ ಸಲಿಲಸ್ಯಾಪ್ರಮೇಯಂ।
05047065c ತೇಜಸ್ವಿನಂ ಕೃಷ್ಣಮತ್ಯಂತಶೂರಂ ಯುದ್ಧೇನ ಯೋ ವಾಸುದೇವಂ ಜಿಗೀಷೇತ್।।

ಯುದ್ಧದಲ್ಲಿ ಯಾರು ತೇಜಸ್ವಿ, ಅತ್ಯಂತ ಶೂರ, ಕೃಷ್ಣ ವಾಸುದೇವನನ್ನು ಗೆಲ್ಲಲು ಬಯಸುತ್ತಾರೋ ಅವರು ಅಳತೆಯಿಲ್ಲದ ಮಹಾಸಾಗರದ ನೀರಿನಲ್ಲಿ ಎರಡೂ ತೋಳುಗಳಿಂದ ಈಸಿ ಸಾಗರವನ್ನು ದಾಟಲು ಬಯಸಿದಂತೆ.

05047066a ಗಿರಿಂ ಯ ಇಚ್ಚೇತ ತಲೇನ ಭೇತ್ತುಂ ಶಿಲೋಚ್ಚಯಂ ಶ್ವೇತಮತಿಪ್ರಮಾಣಂ।
05047066c ತಸ್ಯೈವ ಪಾಣಿಃ ಸನಖೋ ವಿಶೀರ್ಯೇನ್ ನ ಚಾಪಿ ಕಿಂ ಚಿತ್ಸ ಗಿರೇಸ್ತು ಕುರ್ಯಾತ್।।

ಅತಿ ದೊಡ್ಡದಾದ ಶಿಲೆಗಳಿಂದ ತುಂಬಿದ ಶ್ವೇತ ಗಿರಿಯನ್ನು ತನ್ನ ಅಂಗೈಯಿಂದ ಪುಡಿಮಾಡಲು ಬಯಸುವವನ ಕೈ-ಉಗುರುಗಳೇ ಪುಡಿಯಾಗುತ್ತವೆಯೋ ಹೊರತು ಆ ಗಿರಿಗೆ ಏನನ್ನೂ ಮಾಡಿದಂತಾಗುವುದಿಲ್ಲ.

05047067a ಅಗ್ನಿಂ ಸಮಿದ್ಧಂ ಶಮಯೇದ್ಭುಜಾಭ್ಯಾಂ ಚಂದ್ರಂ ಚ ಸೂರ್ಯಂ ಚ ನಿವಾರಯೇತ।
05047067c ಹರೇದ್ದೇವಾನಾಮಮೃತಂ ಪ್ರಸಹ್ಯ ಯುದ್ಧೇನ ಯೋ ವಾಸುದೇವಂ ಜಿಗೀಷೇತ್।।

ಯುದ್ಧದಲ್ಲಿ ವಾಸುದೇವನನ್ನು ಗೆಲ್ಲಲು ಬಯಸುವವನು ಉರಿಯುತ್ತಿರುವ ಬೆಂಕಿಯನ್ನು ಕೈಗಳಿಂದಲೇ ಆರಿಸಬಹುದು, ಚಂದ್ರ-ಸೂರ್ಯರನ್ನು ನಿಲ್ಲಿಸಬಹುದು ಮತ್ತು ದೇವತೆಗಳಿಂದ ಸುಲಭವಾಗಿ ಅಮೃತವನ್ನು ಅಪಹರಿಸಿಕೊಂಡು ಬರಬಹುದು.

05047068a ಯೋ ರುಕ್ಮಿಣೀಮೇಕರಥೇನ ಭೋಜ್ಯಾಂ ಉತ್ಸಾದ್ಯ ರಾಜ್ಞಾಂ ವಿಷಯಂ ಪ್ರಸಹ್ಯ।
05047068c ಉವಾಹ ಭಾರ್ಯಾಂ ಯಶಸಾ ಜ್ವಲಂತೀಂ ಯಸ್ಯಾಂ ಜಜ್ಞೇ ರೌಕ್ಮಿಣೇಯೋ ಮಹಾತ್ಮಾ।।

ಅವನು ರಾಜರ ದೇಶಗಳನ್ನು ಸದೆಬಡಿದನು ಮತ್ತು ಒಂದೇ ರಥದಲ್ಲಿ ಏಕಾಂಗಿಯಾಗಿ ಭೋಜರ ಯಶಸ್ಸಿನಿಂದ ಬೆಳಗುತ್ತಿರುವ ರುಕ್ಮಿಣಿಯನ್ನು ಅಪಹರಿಸಿ ವಿವಾಹವಾದನು. ಅವಳಿಂದ ಮಹಾತ್ಮ ರೌಕ್ಮಿಣೇಯನು ಜನಿಸಿದನು.

05047069a ಅಯಂ ಗಾಂಧಾರಾಂಸ್ತರಸಾ ಸಂಪ್ರಮಥ್ಯ ಜಿತ್ವಾ ಪುತ್ರಾನ್ನಗ್ನಜಿತಃ ಸಮಗ್ರಾನ್।
05047069c ಬದ್ಧಂ ಮುಮೋಚ ವಿನದಂತಂ ಪ್ರಸಹ್ಯ ಸುದರ್ಶನೀಯಂ ದೇವತಾನಾಂ ಲಲಾಮಂ।।

ಅವನು ತರಸದಿಂದ ಗಾಂಧಾರರನ್ನು ಸದೆಬಡಿದು, ನಗ್ನಜಿತನ ಎಲ್ಲ ಮಕ್ಕಳನ್ನು ಗೆದ್ದು, ಅವನ ಸೆರೆಯಿಂದ ದೇವತೆಗಳ ಲಲಾಮ ಸುದರ್ಶನೀಯನನ್ನು ಬಿಡಿಸಿದನು.

05047070a ಅಯಂ ಕವಾಟೇ ನಿಜಘಾನ ಪಾಂಡ್ಯಂ ತಥಾ ಕಲಿಂಗಾನ್ದಂತಕೂರೇ ಮಮರ್ದ।
05047070c ಅನೇನ ದಗ್ಧಾ ವರ್ಷಪೂಗಾನ್ವಿನಾಥಾ ವಾರಾಣಸೀ ನಗರೀ ಸಂಬಭೂವ।

ಅವನು ಕವಾಟದಲ್ಲಿ ಪಾಂಡ್ಯನನ್ನು ಕೊಂದು ಹಾಗೆಯೇ ದಂತಕೂರದಲ್ಲಿ ಕಲಿಂಗರನ್ನು ಮರ್ದಿಸಿದನು. ಅವನಿಂದ ಸುಡಲ್ಪಟ್ಟ ವಾರಾಣಸೀ ನಗರಿಯು ಬಹಳ ವರ್ಷಗಳವರೆಗೆ ರಾಜನಿಲ್ಲದೇ ಇದ್ದಿತ್ತು.

05047071a ಯಂ ಸ್ಮ ಯುದ್ಧೇ ಮನ್ಯತೇಽನ್ಯೈರಜೇಯಂ ಏಕಲವ್ಯಂ ನಾಮ ನಿಷಾದರಾಜಂ।
05047071c ವೇಗೇನೇವ ಶೈಲಮಭಿಹತ್ಯ ಜಂಭಃ ಶೇತೇ ಸ ಕೃಷ್ಣೇನ ಹತಃ ಪರಾಸುಃ।।

ಯುದ್ಧದಲ್ಲಿ ಅಜೇಯನೆಂದು ಇತರರು ತಿಳಿದುಕೊಂಡಿದ್ದ ಏಕಲವ್ಯ ಎಂಬ ಹೆಸರಿನ ನಿಷಾದರಾಜ ಮತ್ತು ಸಿಟ್ಟಿನಿಂದ ಶೈಲವನ್ನು ಆಕ್ರಮಣಮಾಡಿದ ಜಂಭ ಇವರುಗಳು ಕೃಷ್ಣನಿಂದಲೇ ಹತರಾಗಿ ಅಸುವನ್ನು ನೀಗಿ ಮಲಗಿದರು.

05047072a ತಥೋಗ್ರಸೇನಸ್ಯ ಸುತಂ ಪ್ರದುಷ್ಟಂ ವೃಷ್ಣ್ಯಂಧಕಾನಾಂ ಮಧ್ಯಗಾಂ ತಪಂತಂ।
05047072c ಅಪಾತಯದ್ಬಲದೇವದ್ವಿತೀಯೋ ಹತ್ವಾ ದದೌ ಚೋಗ್ರಸೇನಾಯ ರಾಜ್ಯಂ।।

ಉಗ್ರಸೇನನ ಮಗ, ಅತಿ ದುಷ್ಟ ಅಂಧಕ-ವೃಷ್ಣಿಗಳ ಮಧ್ಯೆ ಸುಡುತ್ತಿದ್ದವನನ್ನು ಬಲದೇವನೊಡನೆ ಸೇರಿ ಸಂಹರಿಸಿ ರಾಜ್ಯವನ್ನು ಉಗ್ರಸೇನನಿಗಿತ್ತನು.

05047073a ಅಯಂ ಸೌಭಂ ಯೋಧಯಾಮಾಸ ಖಸ್ಥಂ ವಿಭೀಷಣಂ ಮಾಯಯಾ ಶಾಲ್ವರಾಜಂ।
05047073c ಸೌಭದ್ವಾರಿ ಪ್ರತ್ಯಗೃಹ್ಣಾಚ್ಚತಘ್ನೀಂ ದೋರ್ಭ್ಯಾಂ ಕ ಏನಂ ವಿಷಹೇತ ಮರ್ತ್ಯಃ।।

ಆಕಾಶದಲ್ಲಿ ನಿಂತು ಶತಘ್ನಿಯನ್ನು ಹಿಡಿದು ಸೌಭದಿಂದ ಮಾಯಾಯುದ್ಧವನ್ನು ಮಾಡುತ್ತಿರುವ ವಿಭೀಷಣ ಶಾಲ್ವರಾಜನನ್ನು ಸೌಭದ ದ್ವಾರದಲ್ಲಿಯೇ ಹಿಡಿದು ಕೊಂದವನನ್ನು ಯಾವ ಮರ್ತ್ಯನು ಎದುರಿಸಿಯಾನು?

05047074a ಪ್ರಾಗ್ಜ್ಯೋತಿಷಂ ನಾಮ ಬಭೂವ ದುರ್ಗಂ ಪುರಂ ಘೋರಮಸುರಾಣಾಮಸಹ್ಯಂ।
05047074c ಮಹಾಬಲೋ ನರಕಸ್ತತ್ರ ಭೌಮೋ ಜಹಾರಾದಿತ್ಯಾ ಮಣಿಕುಂಡಲೇ ಶುಭೇ।।

ಪ್ರಾಗ್ಜ್ಯೋತಿಷ ಎಂಬ ಹೆಸರಿನ, ಭೇದಿಸಲಸಾಧ್ಯವಾದ, ಘೋರವಾದ, ಅಸಹ್ಯವಾದ ಅಸುರರ ಪುರವೊಂದಿತ್ತು. ಅಲ್ಲಿದ್ದ ಭೂಮಿಯ ಮಗ ಮಹಾಬಲಿ ನರಕನು ಅದಿತಿಯ ಶುಭ ಕುಂಡಲಗಳನ್ನು ಅಪಹರಿಸಿದನು.

05047075a ನ ತಂ ದೇವಾಃ ಸಹ ಶಕ್ರೇಣ ಸೇಹಿರೇ ಸಮಾಗತಾ ಆಹರಣಾಯ ಭೀತಾಃ।
05047075c ದೃಷ್ಟ್ವಾ ಚ ತೇ ವಿಕ್ರಮಂ ಕೇಶವಸ್ಯ ಬಲಂ ತಥೈವಾಸ್ತ್ರಮವಾರಣೀಯಂ।।

ಶಕ್ರನೊಂದಿಗೆ ದೇವತೆಗಳು ಒಟ್ಟಾಗಿ ಅವುಗಳನ್ನು ಹಿಂದೆತೆಗೆದುಕೊಳ್ಳಲು ಹೋದಾಗ ಅವನ ಬಲವನ್ನು ಸಹಿಸಲಾಗದೇ ಭೀತರಾದರು. ಆಗ ಕೇಶವನ ವಿಕ್ರಮ, ಬಲ ಮತ್ತು ಶ್ರೇಷ್ಠ ಅಸ್ತ್ರಗಳನ್ನು ನೋಡಿದರು.

05047076a ಜಾನಂತೋಽಸ್ಯ ಪ್ರಕೃತಿಂ ಕೇಶವಸ್ಯ ನ್ಯಯೋಜಯನ್ದಸ್ಯುವಧಾಯ ಕೃಷ್ಣಂ।
05047076c ಸ ತತ್ಕರ್ಮ ಪ್ರತಿಶುಶ್ರಾವ ದುಷ್ಕರಂ ಐಶ್ವರ್ಯವಾನ್ಸಿದ್ಧಿಷು ವಾಸುದೇವಃ।।

ಕೇಶವನ ಪ್ರಕೃತಿಯನ್ನು ತಿಳಿದುಕೊಂಡು ಅವರು ಕೃಷ್ಣನನ್ನು ದಸ್ಯುವಧೆಗೆ ನಿಯೋಜಿಸಿದರು. ಆ ದುಷ್ಕರವಾದ ಕೆಲಸವನ್ನು ಮಾಡಲು ಸಿದ್ಧಿಗಳಲ್ಲಿ ಐಶ್ವರ್ಯವಂತ ವಾಸುದೇವನು ಒಪ್ಪಿಕೊಂಡನು.

05047077a ನಿರ್ಮೋಚನೇ ಷಟ್ಸಹಸ್ರಾಣಿ ಹತ್ವಾ ಸಂಚಿದ್ಯ ಪಾಶಾನ್ಸಹಸಾ ಕ್ಷುರಾಂತಾನ್।
05047077c ಮುರಂ ಹತ್ವಾ ವಿನಿಹತ್ಯೌಘರಾಕ್ಷಸಂ ನಿರ್ಮೋಚನಂ ಚಾಪಿ ಜಗಾಮ ವೀರಃ।।

ನಿರ್ಮೋಚನದಲ್ಲಿ ಮೊನಚಾದ ಪಾಶಗಳನ್ನು ಜೋರಾಗಿ ತುಂಡರಿಸಿ ಆರು ಸಾವಿರರನ್ನು ಕೊಂದು, ಮುರ ಮತ್ತು ಅವನ ರಾಕ್ಷಸ ಪಡೆಯನ್ನು ಸಂಹರಿಸಿ ಆ ವೀರನು ನಿರ್ಮೋಚನವನ್ನು ಪ್ರವೇಶಿಸಿದನು.

05047078a ತತ್ರೈವ ತೇನಾಸ್ಯ ಬಭೂವ ಯುದ್ಧಂ ಮಹಾಬಲೇನಾತಿಬಲಸ್ಯ ವಿಷ್ಣೋಃ।
05047078c ಶೇತೇ ಸ ಕೃಷ್ಣೇನ ಹತಃ ಪರಾಸುರ್- ವಾತೇನೇವ ಮಥಿತಃ ಕರ್ಣಿಕಾರಃ।।

ಅಲ್ಲಿಯೇ ಆ ಮಹಾಬಲ ಮತ್ತು ಅತಿಬಲ ವಿಷ್ಣುವಿನ ನಡುವೆ ಯುದ್ಧವು ನಡೆಯಿತು. ಗಾಳಿಯಿಂದ ಕೆಳಗುರುಳಿದ ಕರ್ಣಿಕಾರ ವೃಕ್ಷದಂತೆ ಕೃಷ್ಣನಿಂದ ಹತನಾಗಿ ಅವನು ಅಸುವನ್ನು ತೊರೆದು ಮಲಗಿದನು.

05047079a ಆಹೃತ್ಯ ಕೃಷ್ಣೋ ಮಣಿಕುಂಡಲೇ ತೇ ಹತ್ವಾ ಚ ಭೌಮಂ ನರಕಂ ಮುರಂ ಚ।
05047079c ಶ್ರಿಯಾ ವೃತೋ ಯಶಸಾ ಚೈವ ಧೀಮಾನ್ ಪ್ರತ್ಯಾಜಗಾಮಾಪ್ರತಿಮಪ್ರಭಾವಃ।।

ಹೀಗೆ ಆ ಮಣಿಕುಂಡಲಗಳನ್ನು ಹಿಂದೆಪಡೆದುಕೊಂಡು ಭೌಮ ನರಕನನ್ನೂ ಮುರನನ್ನೂ ಕೊಂದು, ಶ್ರೀ ಮತ್ತು ಯಶಸ್ಸಿನಿಂದ ಆವೃತನಾಗಿ ಆ ಧೀಮಂತ, ಅಪ್ರತಿಮ ಪ್ರಭಾವಿ ಕೃಷ್ಣನು ಹಿಂದುರಿಗಿದನು.

05047080a ತಸ್ಮೈ ವರಾನದದಂಸ್ತತ್ರ ದೇವಾ ದೃಷ್ಟ್ವಾ ಭೀಮಂ ಕರ್ಮ ರಣೇ ಕೃತಂ ತತ್।
05047080c ಶ್ರಮಶ್ಚ ತೇ ಯುಧ್ಯಮಾನಸ್ಯ ನ ಸ್ಯಾದ್ ಆಕಾಶೇ ವಾ ಅಪ್ಸು ಚೈವ ಕ್ರಮಃ ಸ್ಯಾತ್।।

ಅಲ್ಲಿ ರಣದಲ್ಲಿ ಅವನು ನಡೆಸಿದ ಭೀಮಕೃತ್ಯಗಳನ್ನು ಕಂಡು ದೇವತೆಗಳು ಅವನಿಗೆ ವರವನ್ನಿತ್ತರು: “ಯುದ್ಧಮಾಡುವಾಗ ನಿನಗೆ ಶ್ರಮವಾಗದಿರಲಿ! ಆಕಾಶದಲ್ಲಿ ಅಥವಾ ನೀರಿನಲ್ಲಿ ನಿನ್ನ ವಿಕ್ರಮವನ್ನು ಸಾಧಿಸು.

05047081a ಶಸ್ತ್ರಾಣಿ ಗಾತ್ರೇ ಚ ನ ತೇ ಕ್ರಮೇರನ್ನ್ ಇತ್ಯೇವ ಕೃಷ್ಣಶ್ಚ ತತಃ ಕೃತಾರ್ಥಃ।
05047081c ಏವಂರೂಪೇ ವಾಸುದೇವೇಽಪ್ರಮೇಯೇ ಮಹಾಬಲೇ ಗುಣಸಂಪತ್ಸದೈವ।।

ಯಾವುದೇ ಶಸ್ತ್ರಗಳು ನಿನ್ನ ದೇಹವನ್ನು ಪ್ರವೇಶಿಸಿದಿರಲಿ!” ಈ ರೀತಿ ಕೃಷ್ಣನು ಆಗ ಕೃತಾರ್ಥನಾದನು. ಇದು ಅಪ್ರಮೇಯ, ಮಹಾಬಲ, ಸದೈವ ಗುಣಸಂಪತ್ತಿನ ವಾಸುದೇವನ ಸ್ವರೂಪ.

05047082a ತಮಸಹ್ಯಂ ವಿಷ್ಣುಮನಂತವೀರ್ಯಂ ಆಶಂಸತೇ ಧಾರ್ತರಾಷ್ಟ್ರೋ ಬಲೇನ।
05047082c ಯದಾ ಹ್ಯೇನಂ ತರ್ಕಯತೇ ದುರಾತ್ಮಾ ತಚ್ಚಾಪ್ಯಯಂ ಸಹತೇಽಸ್ಮಾನ್ಸಮೀಕ್ಷ್ಯ।।

ಅಂಥಹ ಅನಂತವೀರ್ಯ ಮೀರಲಸಾಧ್ಯನಾದ ವಿಷ್ಣುವನ್ನು ಬಲದಿಂದ ಸೋಲಿಸಲು ಧಾರ್ತರಾಷ್ಟ್ರನು ಯೋಚಿಸುತ್ತಿದ್ದಾನೆ! ಈ ರೀತಿ ದುರಾತ್ಮನು ತರ್ಕಿಸುತ್ತಿರಲು ಅವನು ನಮ್ಮ ಕಡೆ ಪ್ರೀತಿಯಿಂದ ನೋಡುತ್ತಾನೆ.

05047083a ಪರ್ಯಾಗತಂ ಮಮ ಕೃಷ್ಣಸ್ಯ ಚೈವ ಯೋ ಮನ್ಯತೇ ಕಲಹಂ ಸಂಪ್ರಯುಜ್ಯ।
05047083c ಶಕ್ಯಂ ಹರ್ತುಂ ಪಾಂಡವಾನಾಂ ಮಮತ್ವಂ ತದ್ವೇದಿತಾ ಸಮ್ಯುಗಂ ತತ್ರ ಗತ್ವಾ।।

ಕೃಷ್ಣ ಮತ್ತು ನನ್ನ ನಡುವೆ ಕಲಹವನ್ನು ಹುಟ್ಟಿಸಿ ಪಾಂಡವರ ಸಂಪತ್ತನ್ನು ಅಪಹರಿಸಲು ಅವನು ಯೋಜಿಸಿದರೆ, ಯುದ್ಧಕ್ಕೆ ಬಂದಾಗ ಅವನಿಗೆ ಗೊತ್ತಾಗುತ್ತದೆ.

05047084a ನಮಸ್ಕೃತ್ವಾ ಶಾಂತನವಾಯ ರಾಜ್ಞೇ ದ್ರೋಣಾಯಾಥೋ ಸಹಪುತ್ರಾಯ ಚೈವ।
05047084c ಶಾರದ್ವತಾಯಾಪ್ರತಿದ್ವಂದ್ವಿನೇ ಚ ಯೋತ್ಸ್ಯಾಮ್ಯಹಂ ರಾಜ್ಯಮಭೀಪ್ಸಮಾನಃ।।

ರಾಜ ಶಾಂತನವನಿಗೆ, ದ್ರೋಣನಿಗೆ, ಅವನ ಪುತ್ರನಿಗೆ, ಮತ್ತು ಪ್ರತಿದ್ವಂದ್ವಿಯಿರದ ಶಾರದ್ವತನಿಗೆ ನಮಸ್ಕರಿಸಿ ನಮ್ಮ ರಾಜ್ಯವನ್ನು ಪಡೆಯಲೋಸುಗ ನಾನು ಯುದ್ಧವನ್ನು ಮಾಡುತ್ತೇನೆ.

05047085a ಧರ್ಮೇಣಾಸ್ತ್ರಂ ನಿಯತಂ ತಸ್ಯ ಮನ್ಯೇ ಯೋ ಯೋತ್ಸ್ಯತೇ ಪಾಂಡವೈರ್ಧರ್ಮಚಾರೀ।
05047085c ಮಿಥ್ಯಾಗ್ಲಹೇ ನಿರ್ಜಿತಾ ವೈ ನೃಶಂಸೈಃ ಸಂವತ್ಸರಾನ್ದ್ವಾದಶ ಪಾಂಡುಪುತ್ರಾಃ।।

ಧರ್ಮಚಾರಿಗಳಾದ ಪಾಂಡವರೊಡನೆ ಯಾರು ಯುದ್ಧಮಾಡುತ್ತಾರೋ ಅವರಿಗೆ ಧರ್ಮವು ಅಸ್ತ್ರಗಳ ಗುರಿಯಿಡುತ್ತದೆ ಎಂದು ನನ್ನ ಅಭಿಪ್ರಾಯ. ಮೋಸಗಾರರಿಂದ ಸುಳ್ಳಿನ ಜೂಜಿನಲ್ಲಿ ಸೋತು ಪಾಂಡುಪುತ್ರರು ಹನ್ನೆರಡು ವರ್ಷಗಳು ಕಾದಿದ್ದಾರೆ.

05047086a ಅವಾಪ್ಯ ಕೃಚ್ಚ್ರಂ ವಿಹಿತಂ ಹ್ಯರಣ್ಯೇ ದೀರ್ಘಂ ಕಾಲಂ ಚೈಕಮಜ್ಞಾತಚರ್ಯಾಂ।
05047086c ತೇ ಹ್ಯಕಸ್ಮಾಜ್ಜೀವಿತಂ ಪಾಂಡವಾನಾಂ ನ ಮೃಷ್ಯಂತೇ ಧಾರ್ತರಾಷ್ಟ್ರಾಃ ಪದಸ್ಥಾಃ।।

ಅರಣ್ಯದಲ್ಲಿ ಬಂದೊದಗಿದ ಕಷ್ಟಗಳನ್ನು ಸಹಿಸಿ, ದೀರ್ಘಕಾಲದ ಅಜ್ಞಾತವಾಸವನ್ನೂ ಪೂರೈಸಿ ಅಕಸ್ಮಾತ್ತಾಗಿ ಜೀವಿತರಾಗಿರುವ ಪಾಂಡವರನ್ನು ಪದಸ್ಥರಾಗಿರುವ ಧಾರ್ತರಾಷ್ಟ್ರರು ಸಹಿಸಿಕೊಳ್ಳಲಾರರು!

05047087a ತೇ ಚೇದಸ್ಮಾನ್ಯುಧ್ಯಮಾನಾಂ ಜಯೇಯುರ್ ದೇವೈರಪೀಂದ್ರಪ್ರಮುಖೈಃ ಸಹಾಯೈಃ।
05047087c ಧರ್ಮಾದಧರ್ಮಶ್ಚರಿತೋ ಗರೀಯಾನ್ ಇತಿ ಧ್ರುವಂ ನಾಸ್ತಿ ಕೃತಂ ನ ಸಾಧು।।

ಈ ಯುದ್ಧದಲ್ಲಿ ನಮ್ಮನ್ನು ಅವರು, ಇಂದ್ರಪ್ರಮುಖನಾದ ದೇವತೆಗಳ ಸಹಾಯದಿಂದಲಾದರೂ ಗೆಲ್ಲುವುದಾದರೆ, ಧರ್ಮದಿಂದ ನಡೆದುಕೊಳ್ಳುವುದಕ್ಕಿಂತ ಅಧರ್ಮವನ್ನು ಆಚರಿಸುವುದೇ ಹೆಚ್ಚಿನದೆಂದೆನಿಸಿಕೊಳ್ಳುತ್ತದೆ. ಅಂದಿನಿಂದ ಯಾರೂ ಒಳ್ಳೆಯದನ್ನು ಮಾಡುವುದಿಲ್ಲ.

05047088a ನ ಚೇದಿಮಂ ಪುರುಷಂ ಕರ್ಮಬದ್ಧಂ ನ ಚೇದಸ್ಮಾನ್ಮನ್ಯತೇಽಸೌ ವಿಶಿಷ್ಟಾನ್।
05047088c ಆಶಂಸೇಽಹಂ ವಾಸುದೇವದ್ವಿತೀಯೋ ದುರ್ಯೋಧನಂ ಸಾನುಬಂಧಂ ನಿಹಂತುಂ।।

ಪುರುಷನು ಮಾಡಿದ ಕರ್ಮಕ್ಕೆ ಬದ್ಧನಲ್ಲವೆಂದು ಅವನು ತಿಳಿದುಕೊಂಡಿದ್ದರೆ, ನಾವು ವಿಶಿಷ್ಟರಲ್ಲ ಎಂದು ತಿಳಿದುಕೊಂಡಿದ್ದರೆ ನಾನು ವಾಸುದೇವನ ಸಹಾಯದಿಂದ ಅವನ ಅನುಯಾಯಿಗಳೊಂದಿಗೆ ದುರ್ಯೋಧನನನ್ನು ಕೊಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

05047089a ನ ಚೇದಿದಂ ಕರ್ಮ ನರೇಷು ಬದ್ಧಂ ನ ವಿದ್ಯತೇ ಪುರುಷಸ್ಯ ಸ್ವಕರ್ಮ।
05047089c ಇದಂ ಚ ತಚ್ಚಾಪಿ ಸಮೀಕ್ಷ್ಯ ನೂನಂ ಪರಾಜಯೋ ಧಾರ್ತರಾಷ್ಟ್ರಸ್ಯ ಸಾಧುಃ।।

ನರರು ಕರ್ಮಗಳಿಗೆ ಬದ್ಧರಲ್ಲವೆಂದರೂ, ಪುರುಷನಿಗೆ ಸ್ವಕರ್ಮವೆನ್ನುವುದು ಇಲ್ಲವೆಂದು ತಿಳಿದುಕೊಂಡರೂ, ಮತ್ತು ಇವೆರಡನ್ನೂ ಸಮೀಕ್ಷಿಸಿದರೆ ಧಾರ್ತರಾಷ್ಟ್ರನ ಪರಾಜಯವು ಒಳ್ಳೆಯದೇ!

05047090a ಪ್ರತ್ಯಕ್ಷಂ ವಃ ಕುರವೋ ಯದ್ಬ್ರವೀಮಿ ಯುಧ್ಯಮಾನಾ ಧಾರ್ತರಾಷ್ಟ್ರಾ ನ ಸಂತಿ।
05047090c ಅನ್ಯತ್ರ ಯುದ್ಧಾತ್ಕುರವಃ ಪರೀಪ್ಸನ್ ನ ಯುಧ್ಯತಾಂ ಶೇಷ ಇಹಾಸ್ತಿ ಕಶ್ಚಿತ್।।

ಕುರುಗಳೇ! ಸತ್ಯವನ್ನು ಹೇಳುತ್ತಿದ್ದೇನೆ. ಯುದ್ಧಮಾಡಿದರೆ ಧಾರ್ತರಾಷ್ಟ್ರರು ಇರುವುದಿಲ್ಲ. ಯುದ್ಧವನ್ನು ಮಾಡದೇ ಅವರು ತಮ್ಮ ಗುರಿಯನ್ನು ಸಾಧಿಸಲಿ. ಯುದ್ಧ ಮಾಡದಿರಲಿ. ಇದರಿಂದಲಾದರೂ ಅವರು ಉಳಿಯುತ್ತಾರೆ.

05047091a ಹತ್ವಾ ತ್ವಹಂ ಧಾರ್ತರಾಷ್ಟ್ರಾನ್ಸಕರ್ಣಾನ್ ರಾಜ್ಯಂ ಕುರೂಣಾಮವಜೇತಾ ಸಮಗ್ರಂ।
05047091c ಯದ್ವಃ ಕಾರ್ಯಂ ತತ್ಕುರುಧ್ವಂ ಯಥಾಸ್ವಂ ಇಷ್ಟಾನ್ದಾರಾನಾತ್ಮಜಾಂಶ್ಚೋಪಭುಂಕ್ತ।।

ನಾನು ಕರ್ಣನೊಂದಿಗೆ ಧಾರ್ತರಾಷ್ಟ್ರರನ್ನು ಸಂಹರಿಸಿ ಕುರುಗಳ ಸಮಗ್ರ ರಾಜ್ಯವನ್ನು ಗೆಲ್ಲುತ್ತೇನೆ. ಆದುದರಿಂದ ಯಾವುದನ್ನು ಮಾಡಬೇಕೋ ಯಾವುದನ್ನು ಮಾಡಬಲ್ಲಿರೋ ಅದನ್ನು ಮಾಡಿ, ಪ್ರೀತಿಯ ಹೆಂಡತಿ ಮಕ್ಕಳೊಂದಿಗೆ ಉಪಭೋಗಿಸಿ.

05047092a ಅಪ್ಯೇವಂ ನೋ ಬ್ರಾಹ್ಮಣಾಃ ಸಂತಿ ವೃದ್ಧಾ ಬಹುಶ್ರುತಾಃ ಶೀಲವಂತಃ ಕುಲೀನಾಃ।
05047092c ಸಾಂವತ್ಸರಾ ಜ್ಯೋತಿಷಿ ಚಾಪಿ ಯುಕ್ತಾ ನಕ್ಷತ್ರಯೋಗೇಷು ಚ ನಿಶ್ಚಯಜ್ಞಾಃ।।

ನಮ್ಮಲ್ಲಿಯೂ ಕೂಡ ಬಹುಶ್ರುತರಾದ, ಶೀಲವಂತ, ಕುಲೀನ, ಸಂವತ್ಸರ-ಜ್ಯೋತಿಷ್ಯಗಳಲ್ಲಿ ತೊಡಗಿಸಿಕೊಂಡ, ನಕ್ಷತ್ರ-ಯೋಗ-ನಿಶ್ಚಯಗಳನ್ನು ತಿಳಿದಿರುವ ವೃದ್ಧ ಬ್ರಾಹ್ಮಣರಿದ್ದಾರೆ.

05047093a ಉಚ್ಚಾವಚಂ ದೈವಯುಕ್ತಂ ರಹಸ್ಯಂ ದಿವ್ಯಾಃ ಪ್ರಶ್ನಾ ಮೃಗಚಕ್ರಾ ಮುಹೂರ್ತಾಃ।
05047093c ಕ್ಷಯಂ ಮಹಾಂತಂ ಕುರುಸೃಂಜಯಾನಾಂ ನಿವೇದಯಂತೇ ಪಾಂಡವಾನಾಂ ಜಯಂ ಚ।।

ಮೇಲಿನ ಮತ್ತು ಕೆಳಗಿನ ದೈವಯುಕ್ತ ರಹಸ್ಯವನ್ನು, ದಿವ್ಯ ಪ್ರಶ್ನೆಗಳು, ಮೃಗಚಕ್ರಗಳು ಮತ್ತು ಮುಹೂರ್ತಗಳನ್ನು ಅರಿತ ಅವರು ಕುರು-ಸೃಂಜಯರ ಮಹಾ ಕ್ಷಯವನ್ನು ಮತ್ತು ಪಾಂಡವರ ಜಯವನ್ನು ಅರುಹಿದ್ದಾರೆ.

05047094a ತಥಾ ಹಿ ನೋ ಮನ್ಯತೇಽಜಾತಶತ್ರುಃ ಸಂಸಿದ್ಧಾರ್ಥೋ ದ್ವಿಷತಾಂ ನಿಗ್ರಹಾಯ।
05047094c ಜನಾರ್ದನಶ್ಚಾಪ್ಯಪರೋಕ್ಷವಿದ್ಯೋ ನ ಸಂಶಯಂ ಪಶ್ಯತಿ ವೃಷ್ಣಿಸಿಂಹಃ।।

ನಮ್ಮ ಅಜಾತಶತ್ರುವೂ ವೈರಿಗಳ ನಿಗ್ರಹದಲ್ಲಿ ಸಿದ್ಧಿಯನ್ನು ಕಾಣುತ್ತಾನೆ. ಅಪರೋಕ್ಷವಿದ್ಯೆಯನ್ನು ತಿಳಿದ ವೃಷ್ಣಿಸಿಂಹ ಜನಾರ್ದನನೂ ಕೂಡ ಇದರಲ್ಲಿ ಸಂಶಯಪಡುವುದಿಲ್ಲ.

05047095a ಅಹಂ ಚ ಜಾನಾಮಿ ಭವಿಷ್ಯರೂಪಂ ಪಶ್ಯಾಮಿ ಬುದ್ಧ್ಯಾ ಸ್ವಯಮಪ್ರಮತ್ತಃ।
05047095c ದೃಷ್ಟಿಶ್ಚ ಮೇ ನ ವ್ಯಥತೇ ಪುರಾಣೀ ಯುಧ್ಯಮಾನಾ ಧಾರ್ತರಾಷ್ಟ್ರಾ ನ ಸಂತಿ।।

ನಾನೂ ಕೂಡ ಭವಿಷ್ಯದ ರೂಪವನ್ನು ಬಲ್ಲೆ. ಅಪ್ರಮತ್ತನಾಗಿ ಬುದ್ಧಿಯಿಂದ ನೋಡುತ್ತೇನೆ. ನನ್ನ ಪುರಾತನ ದೃಷ್ಟಿಯು ವ್ಯಥಿತವಾಗಿಲ್ಲ. ಯುದ್ಧಮಾಡುವ ಧಾರ್ತರಾಷ್ಟ್ರರು ಇಲ್ಲವಾಗುತ್ತಾರೆ.

05047096a ಅನಾಲಬ್ಧಂ ಜೃಂಭತಿ ಗಾಂಡಿವಂ ಧನುರ್ ಅನಾಲಬ್ಧಾ ಕಂಪತಿ ಮೇ ಧನುರ್ಜ್ಯಾ।
05047096c ಬಾಣಾಶ್ಚ ಮೇ ತೂಣಮುಖಾದ್ವಿಸೃಜ್ಯ ಮುಹುರ್ಮುಹುರ್ಗಂತುಮುಶಂತಿ ಚೈವ।।

ಹಿಡಿಯದೆಯೇ ನನ್ನ ಗಾಂಡೀವವು ಜೃಂಭಿಸುತ್ತಿದೆ. ಮುಟ್ಟದೆಯೇ ನನ್ನ ಧನುಸ್ಸಿನ ದಾರವು ಕಂಪಿಸುತ್ತಿದೆ. ಬಾಣಗಳು ಕೂಡ ನನ್ನ ಭತ್ತಳಿಕೆಯ ಬಾಯಿಯಿಂದ ಹಾರುತ್ತಿವೆ. ಪುನಃ ಪುನಃ ಅವುಗಳು ಹಾರಿಹೋಗಲು ಬಯಸುತ್ತಿವೆ.

05047097a ಸೈಕ್ಯಃ ಕೋಶಾನ್ನಿಃಸರತಿ ಪ್ರಸನ್ನೋ ಹಿತ್ವೇವ ಜೀರ್ಣಾಮುರಗಸ್ತ್ವಚಂ ಸ್ವಾಂ।
05047097c ಧ್ವಜೇ ವಾಚೋ ರೌದ್ರರೂಪಾ ವದಂತಿ ಕದಾ ರಥೋ ಯೋಕ್ಷ್ಯತೇ ತೇ ಕಿರೀಟಿನ್।।

ಹಾವು ಜೀರ್ಣವಾದ ತನ್ನ ಪೊರೆಯನ್ನು ಕಳಚಿಕೊಳ್ಳುವಂತೆ ನನ್ನ ಖಡ್ಗವು ಪ್ರಸನ್ನವಾಗಿ ಕೋಶದಿಂದ ಹೊರಬರುತ್ತದೆ. ನನ್ನ ಧ್ವಜದಲ್ಲಿರುವ ರೌದ್ರರೂಪಿಗಳು ‘ಕಿರೀಟೀ! ಎಂದು ನಿನ್ನ ರಥವನ್ನು ಕಟ್ಟುತ್ತೀಯೆ?’ ಎಂದು ಹೇಳುತ್ತವೆ.

05047098a ಗೋಮಾಯುಸಂಘಾಶ್ಚ ವದಂತಿ ರಾತ್ರೌ ರಕ್ಷಾಂಸ್ಯಥೋ ನಿಷ್ಪತಂತ್ಯಂತರಿಕ್ಷಾತ್।
05047098c ಮೃಗಾಃ ಶೃಗಾಲಾಃ ಶಿತಿಕಂಠಾಶ್ಚ ಕಾಕಾ ಗೃಧ್ರಾ ಬಡಾಶ್ಚೈವ ತರಕ್ಷವಶ್ಚ।।

ರಾತ್ರಿಯಲ್ಲಿ ನರಿಗಳ ಪಡೆಗಳು ಕೂಗುತ್ತವೆ. ಆಕಾಶದಿಂದ ರಾಕ್ಷಸರು ಬೀಳುತ್ತಿದ್ದಾರೆ. ಮೃಗಗಳು, ನರಿಗಳು, ಶಿತಿಕಂಠಗಳು, ಕಾಗೆಗಳು, ಹದ್ದುಗಳು, ಗಿಡುಗಗಳು, ಮತ್ತು ಹಯೀನಗಳು ಹೊರಬಂದಿವೆ.

05047099a ಸುಪರ್ಣಪಾತಾಶ್ಚ ಪತಂತಿ ಪಶ್ಚಾದ್ ದೃಷ್ಟ್ವಾ ರಥಂ ಶ್ವೇತಹಯಪ್ರಯುಕ್ತಂ।
05047099c ಅಹಂ ಹ್ಯೇಕಃ ಪಾರ್ಥಿವಾನ್ಸರ್ವಯೋಧಾಂ ಶರಾನ್ವರ್ಷನ್ಮೃತ್ಯುಲೋಕಂ ನಯೇಯಂ।।

ಬಿಳಿಯ ಕುದುರೆಗಳನ್ನು ಕಟ್ಟಿದ ನನ್ನ ರಥವನ್ನು ನೋಡಿ ಹಿಂದೆ ಹಿಂದೆ ಗರುಡಗಳು ಹಾರುತ್ತವೆ. ನಾನೊಬ್ಬನೇ ಬಾಣಗಳ ಮಳೆಯನ್ನು ಸುರಿಸಿ ಪಾರ್ಥಿವ ಯೋಧರನೆಲ್ಲ ಮೃತ್ಯುಲೋಕಕ್ಕೆ ಕಳುಹಿಸುತ್ತೇನೆ.

05047100a ಸಮಾದದಾನಃ ಪೃಥಗಸ್ತ್ರಮಾರ್ಗಾನ್ ಯಥಾಗ್ನಿರಿದ್ಧೋ ಗಹನಂ ನಿದಾಘೇ।
05047100c ಸ್ಥೂಣಾಕರ್ಣಂ ಪಾಶುಪತಂ ಚ ಘೋರಂ ತಥಾ ಬ್ರಹ್ಮಾಸ್ತ್ರಂ ಯಚ್ಚ ಶಕ್ರೋ ವಿವೇದ।।

ಬೇಸಿಗೆಯಲ್ಲಿ ಗಹನವಾದ ಕಾಡನ್ನು ಸುಡುವ ಅಗ್ನಿಯಂತೆ ನಾನು ನನ್ನ ಪ್ರತ್ಯೇಕ ಅಸ್ತ್ರ – ಸ್ಥೂಣಕರ್ಣ, ಘೋರ ಪಾಶುಪತ, ಬ್ರಹ್ಮಾಸ್ತ್ರ ಮತ್ತು ಶಕ್ರನು ತಿಳಿಸಿದ ಅಸ್ತ್ರ - ಮಾರ್ಗಗಳನ್ನು ಮಾಡಿಕೊಳ್ಳುತ್ತೇನೆ.

05047101a ವಧೇ ಧೃತೋ ವೇಗವತಃ ಪ್ರಮುಂಚನ್ ನಾಹಂ ಪ್ರಜಾಃ ಕಿಂ ಚಿದಿವಾವಶಿಷ್ಯೇ।
05047101c ಶಾಂತಿಂ ಲಪ್ಸ್ಯೇ ಪರಮೋ ಹ್ಯೇಷ ಭಾವಃ ಸ್ಥಿರೋ ಮಮ ಬ್ರೂಹಿ ಗಾವಲ್ಗಣೇ ತಾನ್।।

ಕೊಲ್ಲುವುದನ್ನೇ ಗುರಿಯಾಗಿಟ್ಟುಕೊಂಡು, ವೇಗವಾಗಿ ಬಾಣಪ್ರಯೋಗಮಾಡಿ ನಾನು ಪ್ರಜೆಗಳು ಯಾರನ್ನೂ ಉಳಿಸುವುದಿಲ್ಲ. ಇದೇ ಭಾವದಲ್ಲಿ ನನಗೆ ಪರಮ ಶಾಂತಿಯು ದೊರೆಯುತ್ತದೆ. ನನ್ನ ಸ್ಥಿರತೆಯ ಕುರಿತು ಅವರಿಗೆ ಹೇಳು ಗಾವಲ್ಗಣೇ!

05047102a ನಿತ್ಯಂ ಪುನಃ ಸಚಿವೈರ್ಯೈರವೋಚದ್ ದೇವಾನಪೀಂದ್ರಪ್ರಮುಖಾನ್ಸಹಾಯಾನ್।
05047102c ತೈರ್ಮನ್ಯತೇ ಕಲಹಂ ಸಂಪ್ರಯುಜ್ಯ ಸ ಧಾರ್ತರಾಷ್ಟ್ರಃ ಪಶ್ಯತ ಮೋಹಮಸ್ಯ।।

ಯಾರ ಸಹಾಯದಿಂದ ತಮ್ಮ ವೈರಿಗಳನ್ನು – ಇಂದ್ರಪ್ರಮುಖರಾದ ದೇವತೆಗಳ ಸಹಾಯವೇ ಅವರಿಗಿದ್ದರೂ - ಗೆಲ್ಲಬಲ್ಲ ಸಚಿವರೊಂದಿಗೆ ಅವರು ಕಲಹವನ್ನು ಹೂಡುತ್ತಿದ್ದಾರೆ? ಧಾರ್ತರಾಷ್ಟ್ರನ ಈ ಮೂಢತನವನ್ನು ನೋಡು!

05047103a ವೃದ್ಧೋ ಭೀಷ್ಮಃ ಶಾಂತನವಃ ಕೃಪಶ್ಚ ದ್ರೋಣಃ ಸಪುತ್ರೋ ವಿದುರಶ್ಚ ಧೀಮಾನ್।
05047103c ಏತೇ ಸರ್ವೇ ಯದ್ವದಂತೇ ತದಸ್ತು ಆಯುಷ್ಮಂತಃ ಕುರವಃ ಸಂತು ಸರ್ವೇ।।

ವೃದ್ಧ ಭೀಷ್ಮ ಶಾಂತನವ, ಕೃಪ, ದ್ರೋಣ, ಅವನ ಮಗ, ಧೀಮಂತ ವಿದುರ ಇವರೆಲ್ಲರೂ ಇದನ್ನೇ ಹೇಳಿರಬಹುದು. ಕುರುಗಳೆಲ್ಲರೂ ಆಯುಷ್ಮಂತರಾಗಿರಲಿ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಅರ್ಜುನವಾಕ್ಯನಿವೇದನೇ ಸಪ್ತಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಅರ್ಜುನವಾಕ್ಯನಿವೇದನದಲ್ಲಿ ನಲ್ವತ್ತೇಳನೆಯ ಅಧ್ಯಾಯವು.