044 ಸನತ್ಸುಜಾತವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸನತ್ಸುಜಾತ ಪರ್ವ

ಅಧ್ಯಾಯ 44

ಸಾರ

ಸನತ್ಸುಜಾತನು ಧೃತರಾಷ್ಟ್ರನಿಗೆ ಬ್ರಹ್ಮಚರ್ಯದ ಕುರಿತು ವಿವರಿಸುವುದು (1-24).

05044001 ಧೃತರಾಷ್ಟ್ರ ಉವಾಚ।
05044001a ಸನತ್ಸುಜಾತ ಯದಿಮಾಂ ಪರಾರ್ಥಾಂ ಬ್ರಾಹ್ಮೀಂ ವಾಚಂ ಪ್ರವದಸಿ ವಿಶ್ವರೂಪಾಂ।
05044001c ಪರಾಂ ಹಿ ಕಾಮೇಷು ಸುದುರ್ಲಭಾಂ ಕಥಾಂ ತದ್ಬ್ರೂಹಿ ಮೇ ವಾಕ್ಯಮೇತತ್ಕುಮಾರ।।

ಧೃತರಾಷ್ಟ್ರನು ಹೇಳಿದನು: “ಸನತ್ಸುಜಾತ! ಕುಮಾರ! ನೀನು ಸರ್ವೋತ್ತಮವಾದ, ಬ್ರಹ್ಮಸಂಬಂಧಿಯಾದ, ಬಹುರೂಪದ ಮಾತನ್ನಾಡಿದ್ದೀಯೆ. ಕಾಮಗಳಲ್ಲಿ ಈ ವಿಷಯದ ಕುರಿತ ಮಾತುಕಥೆಯು ದುರ್ಲಭ. ಆದುದರಿಂದ ಇದನ್ನು ಇನ್ನೂ ವಿಸ್ತಾರವಾಗಿ ಹೇಳಬೇಕು.”

05044002 ಸನತ್ಸುಜಾತ ಉವಾಚ।
05044002a ನೈತದ್ಬ್ರಹ್ಮ ತ್ವರಮಾಣೇನ ಲಭ್ಯಂ ಯನ್ಮಾಂ ಪೃಚ್ಚಸ್ಯಭಿಹೃಷ್ಯಸ್ಯತೀವ।
05044002c ಅವ್ಯಕ್ತವಿದ್ಯಾಮಭಿಧಾಸ್ಯೇ ಪುರಾಣೀಂ ಬುದ್ಧ್ಯಾ ಚ ತೇಷಾಂ ಬ್ರಹ್ಮಚರ್ಯೇಣ ಸಿದ್ಧಾಂ।।

ಸನತ್ಸುಜಾತನು ಹೇಳಿದನು: “ಸಂತೋಷದಿಂದ ನೀನು ನನ್ನನ್ನು ಕೇಳುತ್ತಿರುವ ಈ ಬ್ರಹ್ಮವಿದ್ಯೆಯು ಅವಸರ ಮಾಡಿದರೆ ದೊರೆಯುವುದಿಲ್ಲ. ಈ ಪುರಾಣ, ಅವ್ಯಕ್ತ ವಿದ್ಯೆಯನ್ನು ಬ್ರಹ್ಮಚರ್ಯದಿಂದ ಸಿದ್ಧಿಪಡಿಸಿಕೊಳ್ಳಬಹುದು.”

05044003 ಧೃತರಾಷ್ಟ್ರ ಉವಾಚ।
05044003a ಅವ್ಯಕ್ತವಿದ್ಯಾಮಿತಿ ಯತ್ಸನಾತನೀಂ ಬ್ರವೀಷಿ ತ್ವಂ ಬ್ರಹ್ಮಚರ್ಯೇಣ ಸಿದ್ಧಾಂ।
05044003c ಅನಾರಭ್ಯಾ ವಸತೀಹಾರ್ಯ ಕಾಲೇ ಕಥಂ ಬ್ರಾಹ್ಮಣ್ಯಮಮೃತತ್ವಂ ಲಭೇತ।।

ಧೃತರಾಷ್ಟ್ರನು ಹೇಳಿದನು: “ಬ್ರಹ್ಮಚರ್ಯದಿಂದ ಸಿದ್ಧಿಯಾಗಬಲ್ಲ ಈ ಸನಾತನ ಅವ್ಯಕ್ತ ವಿದ್ಯೆಯ ಕುರಿತು ನೀನು ಹೇಳು. ಅನಾರಭ್ಯವಾದ ಆರ್ಯಕಾಲದಲ್ಲಿ ನೆಲಸಿರುವ ಬ್ರಾಹ್ಮಣ್ಯದ ಅಮೃತತ್ವವನ್ನು ಹೇಗೆ ಪಡೆಯಬಹುದು?”

05044004 ಸನತ್ಸುಜಾತ ಉವಾಚ।
05044004a ಯೇಽಸ್ಮಿಽಲ್ಲೋಕೇ ವಿಜಯಂತೀಹ ಕಾಮಾನ್ ಬ್ರಾಹ್ಮೀಂ ಸ್ಥಿತಿಮನುತಿತಿಕ್ಷಮಾಣಾಃ।
05044004c ತ ಆತ್ಮಾನಂ ನಿರ್ಹರಂತೀಹ ದೇಹಾನ್ ಮುಂಜಾದಿಷೀಕಾಮಿವ ಸತ್ತ್ವಸಂಸ್ಥಾಃ।।

ಸನತ್ಸುಜಾತನು ಹೇಳಿದನು: “ಯಾರು ಈ ಲೋಕದಲ್ಲಿಯೇ ಇದ್ದುಕೊಂಡು ಕಾಮಗಳನ್ನೂ ಜಯಿಸಿ ಬಾಹ್ಮೀ ಸ್ಥಿತಿಯನ್ನು ಅಪೇಕ್ಷಿಸುತ್ತಾ ಇರುವರೋ ಅವರು ಮುಂಜದ ಹುಲ್ಲಿನಿಂದ ಅದರ ಒಳಗಿರುವ ಮೃದುವಾದ ಕಾಂಡವನ್ನು ಬೇರ್ಪಡಿಸುವಂತೆ, ಆತ್ಮವನ್ನು ದೇಹದಿಂದ ಪ್ರತ್ಯೇಕಿಸುತ್ತಿರುತ್ತಾರೆ.

05044005a ಶರೀರಮೇತೌ ಕುರುತಃ ಪಿತಾ ಮಾತಾ ಚ ಭಾರತ।
05044005c ಆಚಾರ್ಯಶಾಸ್ತಾ ಯಾ ಜಾತಿಃ ಸಾ ಸತ್ಯಾ ಸಾಜರಾಮರಾ।।

ಭಾರತ! ತಂದೆ-ತಾಯಿಯರು ಈ ಶರೀರವನ್ನು ಮಾತ್ರ ಮಾಡುತ್ತಾರೆ. ಆದರೆ ಆಚಾರ್ಯನ ಉಪದೇಶದಿಂದ ಯಾವುದು ಹುಟ್ಟುತ್ತದೆಯೋ ಅದು ಸತ್ಯವೂ ಅಜರಾಮರವೂ (ಹುಟ್ಟು-ಸಾವಿಲ್ಲದೂ) ಆದುದು.

05044006a ಆಚಾರ್ಯಯೋನಿಮಿಹ ಯೇ ಪ್ರವಿಶ್ಯ ಭೂತ್ವಾ ಗರ್ಭಂ ಬ್ರಹ್ಮಚರ್ಯಂ ಚರಂತಿ।
05044006c ಇಹೈವ ತೇ ಶಾಸ್ತ್ರಕಾರಾ ಭವಂತಿ ಪ್ರಹಾಯ ದೇಹಂ ಪರಮಂ ಯಾಂತಿ ಯೋಗಂ।।

ಯಾರು ಆಚಾರ್ಯಯೋನಿಯನ್ನು ಪ್ರವೇಶಿಸಿ ಗರ್ಭವಾಗಿ ಬ್ರಹ್ಮಚರ್ಯವನ್ನು ಆಚರಿಸಿಸುತ್ತಾರೋ ಅವರು ಇಲ್ಲಿಯೇ ಶಾಸ್ತ್ರಕಾರರಾಗುತ್ತಾರೆ. ದೇಹವನ್ನು ತೊರೆದು ಪರಮ ಯೋಗವನ್ನು ಹೊಂದುತ್ತಾರೆ.

05044007a ಯ ಆವೃಣೋತ್ಯವಿತಥೇನ ಕರ್ಣಾ ವೃತಂ ಕುರ್ವನ್ನಮೃತಂ ಸಂಪ್ರಯಚ್ಚನ್।
05044007c ತಂ ಮನ್ಯೇತ ಪಿತರಂ ಮಾತರಂ ಚ ತಸ್ಮೈ ನ ದ್ರುಹ್ಯೇತ್ಕೃತಮಸ್ಯ ಜಾನನ್।।

ಯಾರು ಸುಳ್ಳನ್ನು ಸತ್ಯದಿಂದ ಆವೃತಗೊಳಿಸುತ್ತಾನೋ, ಎಲ್ಲವಕ್ಕೂ ಅಮೃತತ್ವವನ್ನು ನೀಡುತ್ತಾನೋ ಅಂಥವನನ್ನು ತಂದೆ-ತಾಯಿಯೆಂದು ಮನ್ನಿಸಬೇಕು. ಅವನಿಗೆ ಮನಸ್ಸಿನಲ್ಲಿಯೂ ದ್ರೋಹವನ್ನೆಸಗಬಾರದು.

05044008a ಗುರುಂ ಶಿಷ್ಯೋ ನಿತ್ಯಮಭಿಮನ್ಯಮಾನಃ ಸ್ವಾಧ್ಯಾಯಮಿಚ್ಚೇಚ್ಚುಚಿರಪ್ರಮತ್ತಃ।
05044008c ಮಾನಂ ನ ಕುರ್ಯಾನ್ನ ದಧೀತ ರೋಷಂ ಏಷ ಪ್ರಥಮೋ ಬ್ರಹ್ಮಚರ್ಯಸ್ಯ ಪಾದಃ।।

ಶಿಷ್ಯನು ಗುರುವಿಗೆ ನಿತ್ಯವೂ ಅಭಿವಂದಿಸಬೇಕು. ಶುಚಿಯಾಗಿದ್ದುಕೊಂಡು, ಅಪ್ರಮತ್ತನಾಗಿ, ಸ್ವಾಧ್ಯಾಯದಲ್ಲಿ ನಿರತನಾಗಿರಬೇಕು. ಅಭಿಮಾನ ಪಡಬಾರದು. ರೋಷಗೊಳ್ಳಬಾರದು. ಇವು ಬ್ರಹ್ಮಚರ್ಯದ ಮೊದಲನೆಯ ಪಾದದ ನಿಯಮಗಳು.

05044009a ಆಚಾರ್ಯಸ್ಯ ಪ್ರಿಯಂ ಕುರ್ಯಾತ್ಪ್ರಾಣೈರಪಿ ಧನೈರಪಿ।
05044009c ಕರ್ಮಣಾ ಮನಸಾ ವಾಚಾ ದ್ವಿತೀಯಃ ಪಾದ ಉಚ್ಯತೇ।।

ಪ್ರಾಣದ ಮೂಲಕವಾದರೂ ಅಥವಾ ಧನದ ಮೂಲಕವಾದರೂ, ಕರ್ಮ, ಮನಸ್ಸು, ಮಾತುಗಳಲ್ಲಿ ಆಚಾರ್ಯನಿಗೆ ಪ್ರಿಯವಾದುದನ್ನು ಮಾಡಬೇಕು. ಇದನ್ನು ಎರಡನೆಯ ಪಾದವೆಂದು ಹೇಳುತ್ತಾರೆ.

05044010a ಸಮಾ ಗುರೌ ಯಥಾ ವೃತ್ತಿರ್ಗುರುಪತ್ನ್ಯಾಂ ತಥಾ ಭವೇತ್।
05044010c ಯಥೋಕ್ತಕಾರೀ ಪ್ರಿಯಕೃತ್ತೃತೀಯಃ ಪಾದ ಉಚ್ಯತೇ।।

ಗುರುವಿನೊಂದಿಗೆ ಯಾವ ರೀತಿಯ ವರ್ತನೆಯಿರುತ್ತದೆಯೋ ಅದಕ್ಕೆ ಸಮನಾದುದು ಗುರುಪತ್ನಿಯಲ್ಲಿಯೂ ಇರಬೇಕು. ಪ್ರಿಯಕೃತ್ಯವನ್ನು ಮಾಡಬೇಕು ಎನ್ನುವುದನ್ನು ಮೂರನೆಯ ಪಾದವೆಂದು ಹೇಳುತ್ತಾರೆ.

05044011a ನಾಚಾರ್ಯಾಯೇಹೋಪಕೃತ್ವಾ ಪ್ರವಾದಂ ಪ್ರಾಜ್ಞಾಃ ಕುರ್ವೀತ ನೈತದಹಂ ಕರೋಮಿ।
05044011c ಇತೀವ ಮನ್ಯೇತ ನ ಭಾಷಯೇತ ಸ ವೈ ಚತುರ್ಥೋ ಬ್ರಹ್ಮಚರ್ಯಸ್ಯ ಪಾದಃ।।

ಆಚಾರ್ಯನಿಗೆ ವರದಿಮಾಡುವಾಗ ಪ್ರಾಜ್ಞನು ನಾನು ಇದನ್ನು ಮಾಡಲಿಲ್ಲ ಎಂದು ಹೇಳಬಾರದು. ಹಾಗೆ ತಿಳಿದುಕೊಂಡರೂ ಹೇಳಬಾರದು. ಇದೇ ಬ್ರಹ್ಮಚರ್ಯದ ನಾಲ್ಕನೆಯ ಪಾದ.

05044012a ಏವಂ ವಸಂತಂ ಯದುಪಪ್ಲವೇದ್ಧನಂ ಆಚಾರ್ಯಾಯ ತದನುಪ್ರಯಚ್ಚೇತ್।
05044012c ಸತಾಂ ವೃತ್ತಿಂ ಬಹುಗುಣಾಮೇವಮೇತಿ ಗುರೋಃ ಪುತ್ರೇ ಭವತಿ ಚ ವೃತ್ತಿರೇಷಾ।।

ಹೀಗೆ ವಾಸಿಸುವಾಗ ಏನನ್ನು ಗಳಿಸುತ್ತಾನೋ ಆ ಧನವನ್ನು ಆಚಾರ್ಯನಿಗೆ ಕೊಡಬೇಕು. ಇದರಿಂದ ಸಂತರ ಸಂಪತ್ತು ಇಮ್ಮಡಿಯಾಗಿ ಬೆಳೆಯುತ್ತದೆ. ಹೀಗೆಯೇ ಗುರುಪುತ್ರನಲ್ಲಿಯೂ ನಡೆದುಕೊಳ್ಳಬೇಕು.

05044013a ಏವಂ ವಸನ್ಸರ್ವತೋ ವರ್ಧತೀಹ ಬಹೂನ್ಪುತ್ರಾಽಲ್ಲಭತೇ ಚ ಪ್ರತಿಷ್ಠಾಂ।
05044013c ವರ್ಷಂತಿ ಚಾಸ್ಮೈ ಪ್ರದಿಶೋ ದಿಶಶ್ಚ ವಸಂತ್ಯಸ್ಮಿನ್ಬ್ರಹ್ಮಚರ್ಯೇ ಜನಾಶ್ಚ।।

ಹೀಗೆ ವಾಸಿಸುವಾಗ ಅವನ ಎಲ್ಲವೂ ವೃದ್ಧಿಯಾಗುತ್ತದೆ: ಬಹಳ ಪುತ್ರರೂ ಪ್ರತಿಷ್ಠೆಯೂ ದೊರೆಯುತ್ತವೆ. ಎಲ್ಲ ದಿಕ್ಕುಗಳಿಂದಲೂ ಮಳೆಯು ಸುರಿಯುತ್ತದೆ. ಬಹಳ ಜನರು ಅವನಲ್ಲಿ ಬ್ರಹ್ಮಚರ್ಯದಲ್ಲಿ ವಾಸಿಸುತ್ತಾರೆ.

05044014a ಏತೇನ ಬ್ರಹ್ಮಚರ್ಯೇಣ ದೇವಾ ದೇವತ್ವಮಾಪ್ನುವನ್।
05044014c ಋಷಯಶ್ಚ ಮಹಾಭಾಗಾ ಬ್ರಹ್ಮಲೋಕಂ ಮನೀಷಿಣಃ।।
05044015a ಗಂಧರ್ವಾಣಾಮನೇನೈವ ರೂಪಮಪ್ಸರಸಾಮಭೂತ್।
05044015c ಏತೇನ ಬ್ರಹ್ಮಚರ್ಯೇಣ ಸೂರ್ಯೋ ಅಹ್ನಾಯ ಜಾಯತೇ।।

ಈ ರೀತಿಯ ಬ್ರಹ್ಮಚರ್ಯದಿಂದ ದೇವತೆಗಳು ದೇವತ್ವವನ್ನು, ಮಹಾಭಾಗ ಮನೀಷೀ ಋಷಿಗಳು ಬ್ರಹ್ಮಲೋಕವನ್ನು, ಗಂಧರ್ವ-ಅಪ್ಸರೆಯರು ತಮ್ಮ ರೂಪವನ್ನು ಪಡೆದರು. ಇದೇ ಬ್ರಹ್ಮಚರ್ಯದಿಂದ ಸೂರ್ಯನು ದಿನದಲ್ಲಿ ಹುಟ್ಟುತ್ತಾನೆ.

05044016a ಯ ಆಶಯೇತ್ಪಾಟಯೇಚ್ಚಾಪಿ ರಾಜನ್ ಸರ್ವಂ ಶರೀರಂ ತಪಸಾ ತಪ್ಯಮಾನಃ।
05044016c ಏತೇನಾಸೌ ಬಾಲ್ಯಮತ್ಯೇತಿ ವಿದ್ವಾನ್ ಮೃತ್ಯುಂ ತಥಾ ರೋಧಯತ್ಯಂತಕಾಲೇ।।

ರಾಜನ್! ಯಾರು ತಪಸ್ಸನ್ನು ತಪಿಸಿ ಶರೀರವೆಲ್ಲವನ್ನೂ ಮಲಗಿಸಿ ಹೊಡೆಯುತ್ತಾನೋ ಅವನು ಬಾಲ್ಯವನ್ನು ಮೀರಿ ವಿದ್ವಾಂಸನಾಗುತ್ತಾನೆ ಮತ್ತು ಕೊನೆಯಲ್ಲಿ ಮೃತ್ಯುವನ್ನೂ ಜಯಿಸುತ್ತಾನೆ.

05044017a ಅಂತವಂತಃ ಕ್ಷತ್ರಿಯ ತೇ ಜಯಂತಿ ಲೋಕಾಂ ಜನಾಃ ಕರ್ಮಣಾ ನಿರ್ಮಿತೇನ।
05044017c ಬ್ರಹ್ಮೈವ ವಿದ್ವಾಂಸ್ತೇನ ಅಭ್ಯೇತಿ ಸರ್ವಂ ನಾನ್ಯಃ ಪಂಥಾ ಅಯನಾಯ ವಿದ್ಯತೇ।।

ಕ್ಷತ್ರಿಯ! ಜನರು ಕರ್ಮದಿಂದ ಗೆಲ್ಲುವ ಲೋಕಗಳು ನಿರ್ಮಾಣದಲ್ಲಿ ಕೊನೆಯುಳ್ಳವುಗಳು. ಬ್ರಹ್ಮವನ್ನು ತಿಳಿದುಕೊಳ್ಳುವುದರಿಂದ ವಿದ್ವಾಂಸನು ಬ್ರಹ್ಮವೆಲ್ಲವನ್ನೂ ಪಡೆಯುತ್ತಾನೆ. ಅದಕ್ಕೆ ಬೇರೆ ಯಾವ ಮಾರ್ಗವೂ ತಿಳಿದಿಲ್ಲ.”

05044018 ಧೃತರಾಷ್ಟ್ರ ಉವಾಚ।
05044018a ಆಭಾತಿ ಶುಕ್ಲಮಿವ ಲೋಹಿತಮಿವ ಅಥೋ ಕೃಷ್ಣಮಥಾಂಜನಂ ಕಾದ್ರವಂ ವಾ।
05044018c ತದ್ಬ್ರಾಹ್ಮಣಃ ಪಶ್ಯತಿ ಯೋಽತ್ರ ವಿದ್ವಾನ್ ಕಥಂರೂಪಂ ತದಮೃತಮಕ್ಷರಂ ಪದಂ।।

ಧೃತರಾಷ್ಟ್ರನು ಹೇಳಿದನು: “ಈ ವಿದ್ವಾಂಸ ಬ್ರಾಹ್ಮಣನು ಕಾಣುವ ಆ ಅಮೃತ, ಅಕ್ಷರವು ಎಲ್ಲಿರುತ್ತದೆ ಮತ್ತು ಯಾವರೂಪದ್ದು? ಬೆಳ್ಳಗಿರುವುದೋ? ಕೆಂಪಾಗಿರುವುದೋ? ಅಥವಾ ಅಂಜನದಂತೆ ಕಪ್ಪಾಗಿರುವುದೋ? ಅಥವಾ ಬೂದುಬಣ್ಣದ್ದಾಗಿರುವುದೋ?”

05044019 ಸನತ್ಸುಜಾತ ಉವಾಚ।
05044019a ನಾಭಾತಿ ಶುಕ್ಲಮಿವ ಲೋಹಿತಮಿವ ಅಥೋ ಕೃಷ್ಣಮಾಯಸಮರ್ಕವರ್ಣಂ।
05044019c ನ ಪೃಥಿವ್ಯಾಂ ತಿಷ್ಠತಿ ನಾಂತರಿಕ್ಷೇ ನೈತತ್ಸಮುದ್ರೇ ಸಲಿಲಂ ಬಿಭರ್ತಿ।।

ಸನತ್ಸುಜಾತನು ಹೇಳಿದನು: “ಅದು ಬಿಳಿಯಾಗಿಯೂ, ಕೆಂಪಾಗಿಯೂ, ಕಪ್ಪಾಗಿಯೂ, ಬೂದುಬಣ್ಣದ್ದಾಗಿಯೂ, ಸೂರ್ಯನ ಬೆಳಕಿನಂತೆಯೂ ಹೊಳೆಯುವುದಿಲ್ಲ. ಅದು ಭೂಮಿಯ ಮೇಲಿಲ್ಲ, ಅಂತರಿಕ್ಷದಲ್ಲಿಲ್ಲ. ಸಮುದ್ರದ ನೀರೂ ಕೂಡ ಅದನ್ನು ಹೊತ್ತಿರುವುದಿಲ್ಲ.

05044020a ನ ತಾರಕಾಸು ನ ಚ ವಿದ್ಯುದಾಶ್ರಿತಂ ನ ಚಾಭ್ರೇಷು ದೃಶ್ಯತೇ ರೂಪಮಸ್ಯ।
05044020c ನ ಚಾಪಿ ವಾಯೌ ನ ಚ ದೇವತಾಸು ನ ತಚ್ಚಂದ್ರೇ ದೃಶ್ಯತೇ ನೋತ ಸೂರ್ಯೇ।।

ಅದು ನಕ್ಷತ್ರಗಳಲ್ಲಿಲ್ಲ; ವಿದ್ಯುತ್ತಿನಲ್ಲಿರುವುದಿಲ್ಲ, ಮತ್ತು ಅದರ ರೂಪವು ಮೋಡಗಳಲ್ಲಿ ಕಾಣಿಸುವುದಿಲ್ಲ. ಅದು ಗಾಳಿಯಲ್ಲಿಲ್ಲ, ದೇವತೆಗಳಲ್ಲಿಯೂ ಇಲ್ಲ. ಅದು ಸೂರ್ಯನಲ್ಲಿಯೂ, ಚಂದ್ರನಲ್ಲಿಯೂ ಕಾಣಿಸುವುದಿಲ್ಲ.

05044021a ನೈವರ್ಕ್ಷು ತನ್ನ ಯಜುಃಷು ನಾಪ್ಯಥರ್ವಸು ನ ಚೈವ ದೃಶ್ಯತ್ಯಮಲೇಷು ಸಾಮಸು।
05044021c ರಥಂತರೇ ಬಾರ್ಹತೇ ಚಾಪಿ ರಾಜನ್ ಮಹಾವ್ರತೇ ನೈವ ದೃಶ್ಯೇದ್ಧ್ರುವಂ ತತ್।।

ರಾಜನ್! ಅದು ಋಕ್ಕಿನಲ್ಲಿ ದೊರೆಯುವುದಿಲ್ಲ, ಯಜುರ್ವೇದದಲ್ಲಿಲ್ಲ, ಅಥರ್ವದಲ್ಲಿಯೂ ಇಲ್ಲ ಮತ್ತು ಅಮಲ ಸಾಮದಲ್ಲಿಯೂ, ರಥಂತರ-ಬಾರ್ಹತಗಳಲ್ಲಿಯೂ ಕಾಣುವುದಿಲ್ಲ. ಮತ್ತು ಮಹಾವ್ರತದಲ್ಲಿಯೂ ಅದು ಕಾಣುವುದಿಲ್ಲವೆನ್ನುವುದು ಸತ್ಯ.

05044022a ಅಪಾರಣೀಯಂ ತಮಸಃ ಪರಸ್ತಾತ್ ತದಂತಕೋಽಪ್ಯೇತಿ ವಿನಾಶಕಾಲೇ।
05044022c ಅಣೀಯರೂಪಂ ಕ್ಷುರಧಾರಯಾ ತನ್ ಮಹಚ್ಚ ರೂಪಂ ತ್ವಪಿ ಪರ್ವತೇಭ್ಯಃ।।

ಕತ್ತಲೆಗಿಂತಲೂ ಆಚೆ ಅದಕ್ಕೆ ಹೋಗಲಿಕ್ಕಿಲ್ಲ. ವಿನಾಶಕಾಲದಲ್ಲಿ ಅಂತಕನೂ ಅದರಲ್ಲಿ ಸಾಯುತ್ತಾನೆ. ಅದು ಕತ್ತಿಯ ಅಲುಗಿಗಿಂತ ತೀಕ್ಷ್ಣವಾದುದು ಆದರೆ ಪರ್ವತದಂತೆ ಅತಿ ದೊಡ್ಡ ರೂಪವುಳ್ಳದ್ದು.

05044023a ಸಾ ಪ್ರತಿಷ್ಠಾ ತದಮೃತಂ ಲೋಕಾಸ್ತದ್ಬ್ರಹ್ಮ ತದ್ಯಶಃ।
05044023c ಭೂತಾನಿ ಜಜ್ಞೈರೇ ತಸ್ಮಾತ್ಪ್ರಲಯಂ ಯಾಂತಿ ತತ್ರ ಚ।।

ಆ ಅಮೃತವಾದುದು ಲೋಕ ಮತ್ತು ಬ್ರಹ್ಮನ ಅಧಾರ. ಅದರಿಂದ ಇರುವವು ಹುಟ್ಟುತ್ತವೆ ಮತ್ತು ಅದರಲ್ಲಿಯೇ ಪ್ರಲಯವಾಗಿ ಹೋಗುತ್ತವೆ.

05044024a ಅನಾಮಯಂ ತನ್ಮಹದುದ್ಯತಂ ಯಶೋ ವಾಚೋ ವಿಕಾರಾನ್ಕವಯೋ ವದಂತಿ।
05044024c ತಸ್ಮಿಂ ಜಗತ್ಸರ್ವಮಿದಂ ಪ್ರತಿಷ್ಠಿತಂ ಯೇ ತದ್ವಿದುರಮೃತಾಸ್ತೇ ಭವಂತಿ।।

ಅನಾಮಯ, ಉಲ್ಭಣಗೊಳ್ಳುವ ಆ ಮಹಾ ಯಶಸ್ಸು ಮಾತಿನ ವಿಕಾರವೆಂದು ಕವಿಗಳು ಹೇಳುತ್ತಾರೆ. ಅದರಿಂದಲೇ ಈ ಜಗತ್ತೆಲ್ಲವೂ ನಿಂತಿದೆ. ಅದನ್ನು ತಿಳಿದುಕೊಂಡವರು ಮೃತ್ಯುವನ್ನು ಜಯಿಸಿದವರಾಗುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ಸನತ್ಸುಜಾತವಾಕ್ಯೇ ಚತುಶ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ಸನತ್ಸುಜಾತವಾಕ್ಯದಲ್ಲಿ ನಲ್ವತ್ನಾಲ್ಕನೆಯ ಅಧ್ಯಾಯವು.