ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಪ್ರಜಾಗರ ಪರ್ವ
ಅಧ್ಯಾಯ 40
ಸಾರ
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರೆಸಿದುದು (1-30).
05040001 ವಿದುರ ಉವಾಚ।
05040001a ಯೋಽಭ್ಯರ್ಥಿತಃ ಸದ್ಭಿರಸಜ್ಜಮಾನಃ ಕರೋತ್ಯರ್ಥಂ ಶಕ್ತಿಮಹಾಪಯಿತ್ವಾ।
05040001c ಕ್ಷಿಪ್ರಂ ಯಶಸ್ತಂ ಸಮುಪೈತಿ ಸಂತಮಲಂ ಪ್ರಸನ್ನಾ ಹಿ ಸುಖಾಯ ಸಂತಃ।।
ವಿದುರನು ಹೇಳಿದನು: “ಒಳ್ಳೆಯವರು ಹೇಳಿದಂತೆ, ಏನೂ ಸಿದ್ಧತೆಗಳಿಲ್ಲದೇ, ಬಹಳ ಶಕ್ತಿಯನ್ನುಪಯೋಗಿಸಿದೇ ಕಾರ್ಯವನ್ನು ಮಾಡುವವರಿಗೆ ಬೇಗನೇ ಯಶಸ್ಸು ದೊರೆಯುತ್ತದೆ. ಪ್ರಸನ್ನವಾಗಿದ್ದಾಗಲೇ ಒಳ್ಳೆಯದು ಸುಖವನ್ನು ತರುತ್ತದೆ.
05040002a ಮಹಾಂತಮಪ್ಯರ್ಥಮಧರ್ಮಯುಕ್ತಂ ಯಃ ಸಂತ್ಯಜತ್ಯನುಪಾಕ್ರುಷ್ಟ ಏವ।
05040002c ಸುಖಂ ಸ ದುಃಖಾನ್ಯವಮುಚ್ಯ ಶೇತೇ ಜೀರ್ಣಾಂ ತ್ವಚಂ ಸರ್ಪ ಇವಾವಮುಚ್ಯ।।
ಅಧರ್ಮಯುಕ್ತವಾದ ಮಹಾ ಕಾರ್ಯವನ್ನು ಯಾವ ಸಂತನು ಎಚ್ಚರಿಕೆಯನ್ನು ನೀಡದೇ ನಿಲ್ಲಿಸುತ್ತಾನೋ ಅವನು ಸುಖವಾದ ನಿದ್ದೆಯನ್ನು ಪಡೆಯುತ್ತಾನೆ ಮತ್ತು ಸರ್ಪವು ಪೊರೆಬಿಡುವಂತೆ ತನ್ನ ದುಃಖಗಳನ್ನು ಕಳಚಿಕೊಳ್ಳುತ್ತಾನೆ.
05040003a ಅನೃತಂ ಚ ಸಮುತ್ಕರ್ಷೇ ರಾಜಗಾಮಿ ಚ ಪೈಶುನಂ।
05040003c ಗುರೋಶ್ಚಾಲೀಕನಿರ್ಬಂಧಃ ಸಮಾನಿ ಬ್ರಹ್ಮಹತ್ಯಯಾ।।
ಒಳ್ಳೆಯದಕ್ಕಾಗಿ ಚರ್ಚೆನಡೆಯುತ್ತಿರುವಾಗ ಸುಳ್ಳನ್ನು ಹೇಳುವುದು, ರಾಜ ದ್ರೋಹ, ಮತ್ತು ಗುರುವಿನ ಎದಿರು ಅಪ್ರಮಾಣೀಕನಾಗಿರುವುದು ಇವು ಬ್ರಹ್ಮಹತ್ಯೆಯ ಸಮ.
05040004a ಅಸೂಯೈಕಪದಂ ಮೃತ್ಯುರತಿವಾದಃ ಶ್ರಿಯೋ ವಧಃ।
05040004c ಅಶುಶ್ರೂಷಾ ತ್ವರಾ ಶ್ಲಾಘಾ ವಿದ್ಯಾಯಾಃ ಶತ್ರವಸ್ತ್ರಯಃ।।
ಅಸೂಯೆ, ಮೃತ್ಯು ಮತ್ತು ಅತಿವಾದದ ಒಂದೇ ಒಂದು ಪದವೂ ಶ್ರೀಯನ್ನು ಕೊಲ್ಲುತ್ತದೆ. ಅವಿಧೇಯತೆ, ಅವಸರ ಮತ್ತು ಶ್ಲಾಘನೆಗಳು ವಿದ್ಯೆಯ ಮೂರು ಶತ್ರುಗಳು.
05040005a ಸುಖಾರ್ಥಿನಃ ಕುತೋ ವಿದ್ಯಾ ನಾಸ್ತಿ ವಿದ್ಯಾರ್ಥಿನಃ ಸುಖಂ।
05040005c ಸುಖಾರ್ಥೀ ವಾ ತ್ಯಜೇದ್ವಿದ್ಯಾಂ ವಿದ್ಯಾರ್ಥೀ ವಾ ಸುಖಂ ತ್ಯಜೇತ್।।
ಸುಖಾರ್ಥಿಯು ಹೇಗೆ ವಿದ್ಯೆಯನ್ನು ಪಡೆಯುತ್ತಾನೆ? ವಿದ್ಯಾರ್ಥಿಗೆ ಸುಖವಿಲ್ಲ. ಸುಖಾರ್ಥಿಯು ವಿದ್ಯೆಯನ್ನು ತೊರೆಯಬೇಕು ಅಥವಾ ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು.
05040006a ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃ।
05040006c ನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾ।।
ಅಗ್ನಿಗೆ ಕಟ್ಟಿಗೆಯ ತೃಪ್ತಿಯೆಂಬುದಿಲ್ಲ, ಸಾಗರಕ್ಕೆ ನದಿಗಳ ತೃಪ್ತಿಯಾಯಿತು ಎನ್ನುವುದಿಲ್ಲ, ಯಮನಿಗೆ ಸರ್ವಭೂತಗಳ ಮತ್ತು ಪುರುಷರಿಗೆ ಸುಂದರ ಕಣ್ಣಿನ ಸ್ತ್ರೀಯರ ತೃಪ್ತಿಯೆನ್ನುವುದಿಲ್ಲ.
05040007a ಆಶಾ ಧೃತಿಂ ಹಂತಿ ಸಮೃದ್ಧಿಮಂತಕಃ ಕ್ರೋಧಃ ಶ್ರಿಯಂ ಹಂತಿ ಯಶಃ ಕದರ್ಯತಾ।
05040007c ಅಪಾಲನಂ ಹಂತಿ ಪಶೂಂಶ್ಚ ರಾಜನ್ನ್ ಏಕಃ ಕ್ರುದ್ಧೋ ಬ್ರಾಹ್ಮಣೋ ಹಂತಿ ರಾಷ್ಟ್ರಂ।।
ರಾಜನ್! ಆಸೆಯು ಧೃತಿಯನ್ನು ಕೊಲ್ಲುತ್ತದೆ. ಸಮೃದ್ಧಿಯನ್ನು ಮರಣವು ಕೊಲ್ಲುತ್ತದೆ. ಕ್ರೋಧವು ಶ್ರೀಯನ್ನು ಮತ್ತು ಕದರ್ಯತೆಯು ಯಶಸ್ಸನ್ನು ಕೊಲ್ಲುತ್ತದೆ. ಅಪಾಲನೆಯು ಪಶುಗಳನ್ನು ಕೊಲ್ಲುತ್ತದೆ ಮತ್ತು ಕೃದ್ಧನಾದ ಒಬ್ಬನೇ ಬ್ರಾಹ್ಮಣನು ರಾಷ್ಟ್ರವನ್ನು ಕೊಲ್ಲುತ್ತಾನೆ.
05040008a ಅಜಶ್ಚ ಕಾಂಸ್ಯಂ ಚ ರಥಶ್ಚ ನಿತ್ಯಂ ಮಧ್ವಾಕರ್ಷಃ ಶಕುನಿಃ ಶ್ರೋತ್ರಿಯಶ್ಚ।
05040008c ವೃದ್ಧೋ ಜ್ಞಾತಿರವಸನ್ನೋ ವಯಸ್ಯ ಏತಾನಿ ತೇ ಸಂತು ಗೃಹೇ ಸದೈವ।।
ಮನೆಯಲ್ಲಿ ಯಾವಾಗಲೂ ಇವುಗಳನ್ನು ಇಟ್ಟುಕೊಂಡಿರಬೇಕು: ಆಡು, ಕಂಚು, ರಥ, ಮಧು, ಔಷಧಿ, ಪಕ್ಷಿ, ಶ್ರೋತ್ರಿ, ಸಂಬಂಧಿಕನಾದ ವೃದ್ಧ, ಮತ್ತು ಕಷ್ಟದ ದಿನಗಳನ್ನು ಎದುರಿಸುತ್ತಿರುವ ಗೆಳೆಯ.
05040009a ಅಜೋಕ್ಷಾ ಚಂದನಂ ವೀಣಾ ಆದರ್ಶೋ ಮಧುಸರ್ಪಿಷೀ।
05040009c ವಿಷಮೌದುಂಬರಂ ಶಂಖಃ ಸ್ವರ್ಣಂ ನಾಭಿಶ್ಚ ರೋಚನಾ।।
05040010a ಗೃಹೇ ಸ್ಥಾಪಯಿತವ್ಯಾನಿ ಧನ್ಯಾನಿ ಮನುರಬ್ರವೀತ್।
05040010c ದೇವಬ್ರಾಹ್ಮಣಪೂಜಾರ್ಥಮತಿಥೀನಾಂ ಚ ಭಾರತ।।
ಭಾರತ! ಅದೃಷ್ಟಕ್ಕೆ ಮತ್ತು ದೇವ, ಬ್ರಾಹ್ಮಣ ಮತ್ತು ಅತಿಥಿಗಳ ಪೂಜನಕ್ಕಾಗಿ ಮನೆಯಲ್ಲಿ ಇವನ್ನು ಇಟ್ಟುಕೊಳ್ಳಬೇಕೆಂದು ಮನುವು ಹೇಳಿದ್ದಾನೆ: ಆಡು, ಎತ್ತು, ಚಂದನ, ವೀಣೆ, ಕನ್ನಡಿ, ಜೇನುತುಪ್ಪ ಮತ್ತು ಬೆಣ್ಣೆ, ವಿಷ, ಔದುಂಬರ, ಶಂಖ, ಸುವರ್ಣ, ಸುಗಂಧ, ಮತ್ತು ರೋಚನ.
05040011a ಇದಂ ಚ ತ್ವಾಂ ಸರ್ವಪರಂ ಬ್ರವೀಮಿ ಪುಣ್ಯಂ ಪದಂ ತಾತ ಮಹಾವಿಶಿಷ್ಟಂ।
05040011c ನ ಜಾತು ಕಾಮಾನ್ನ ಭಯಾನ್ನ ಲೋಭಾದ್ ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋಃ।।
ಅಯ್ಯಾ! ಈಗ ನಾನು ಹೇಳುವುದು ಸರ್ವಪರವಾದುದು, ಪುಣ್ಯ ಪದವಾದುದು ಮತ್ತು ಮಹಾವಿಶಿಷ್ಟವಾದುದು. ಕಾಮಕ್ಕಾಗಲೀ, ಭಯಕ್ಕಾಗಲೀ, ಲೋಭಕ್ಕಾಗಲೀ ಮತ್ತು ಜೀವದ ಕಾರಣಕ್ಕಾಗಲೀ ಧರ್ಮವನ್ನು ತ್ಯಜಿಸಬಾರದು.
05040012a ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ ನಿತ್ಯೋ ಜೀವೋ ಧಾತುರಸ್ಯ ತ್ವನಿತ್ಯಃ।
05040012c ತ್ಯಕ್ತ್ವಾನಿತ್ಯಂ ಪ್ರತಿತಿಷ್ಠಸ್ವ ನಿತ್ಯೇ ಸಂತುಷ್ಯ ತ್ವಂ ತೋಷಪರೋ ಹಿ ಲಾಭಃ।।
ಧರ್ಮವು ನಿತ್ಯ. ಸುಖ-ದುಃಖಗಳು ಅನಿತ್ಯ. ಜೀವವು ನಿತ್ಯ. ದೇಹವು ಅನಿತ್ಯ. ಅನಿತ್ಯವನ್ನು ತೊರೆದು ನಿತ್ಯದಲ್ಲಿ ನೆಲೆಸು. ಅದರಿಂದ ಸಂತೋಷ, ಅತಿಯಾದ ತೃಪ್ತಿ, ಮತ್ತು ಲಾಭವನ್ನೂ ಪಡೆಯುತ್ತೀಯೆ.
05040013a ಮಹಾಬಲಾನ್ಪಶ್ಯ ಮಹಾನುಭಾವಾನ್ ಪ್ರಶಾಸ್ಯ ಭೂಮಿಂ ಧನಧಾನ್ಯಪೂರ್ಣಾಂ।
05040013c ರಾಜ್ಯಾನಿ ಹಿತ್ವಾ ವಿಪುಲಾಂಶ್ಚ ಭೋಗಾನ್ ಗತಾನ್ನರೇಂದ್ರಾನ್ವಶಮಂತಕಸ್ಯ।।
ಮಹಾಸೇನೆಗಳನ್ನು ಮಹಾನುಭಾವರನ್ನು ನೋಡು: ಧನಧಾನ್ಯಗಳಿಂದ ತುಂಬಿದ ಭೂಮಿಯನ್ನು ಆಳಿ, ವಿಪುಲ ಭೋಗಗಳನ್ನೂ, ರಾಜ್ಯಗಳನ್ನೂ ತೊರೆದು ನರೇಂದ್ರರು ಅಂತಕನ ವಶರಾಗಿ ಹೋದರು.
05040014a ಮೃತಂ ಪುತ್ರಂ ದುಃಖಪುಷ್ಟಂ ಮನುಷ್ಯಾ ಉತ್ಕ್ಷಿಪ್ಯ ರಾಜನ್ಸ್ವಗೃಹಾನ್ನಿರ್ಹರಂತಿ 05040014c ತಂ ಮುಕ್ತಕೇಶಾಃ ಕರುಣಂ ರುದಂತಶ್ ಚಿತಾಮಧ್ಯೇ ಕಾಷ್ಠಮಿವ ಕ್ಷಿಪಂತಿ।।
ಮೃತನ ಪುತ್ರನು ದುಃಖದಿಂದ ತುಂಬಿರಲು ಮನುಷ್ಯರು ಅವನನ್ನು ಎತ್ತಿಕೊಂಡು ಸ್ವಗೃಹದ ಹೊರಗೆ ತೆಗೆದುಕೊಂಡು ಹೋಗಿ, ಆ ಕೂದಲು ಕೆದರಿದ, ಕರುಣವಾಗಿ ರೋದಿಸುತ್ತಿರುವವರು ಅವನನ್ನು ಚಿತೆಯ ಮಧ್ಯದಲ್ಲಿ ಕಟ್ಟಿಗೆಯಂತೆ ಎಸೆಯುತ್ತಾರೆ.
05040015a ಅನ್ಯೋ ಧನಂ ಪ್ರೇತಗತಸ್ಯ ಭುಂಕ್ತೇ ವಯಾಂಸಿ ಚಾಗ್ನಿಶ್ಚ ಶರೀರಧಾತೂನ್।
05040015c ದ್ವಾಭ್ಯಾಮಯಂ ಸಹ ಗಚ್ಚತ್ಯಮುತ್ರ ಪುಣ್ಯೇನ ಪಾಪೇನ ಚ ವೇಷ್ಟ್ಯಮಾನಃ।।
ತೀರಿಕೊಂಡವನ ಶರೀರವನ್ನು ಕಾಗೆ-ಅಗ್ನಿಗಳು ಮುಗಿಸುವಂತೆ ಅವನ ಧನವನ್ನು ಬೇರೆಯವರು ಭೋಗಿಸುತ್ತಾರೆ. ಇಲ್ಲಿಂದ ಅಲ್ಲಿಗೆ ಎರಡೇ ವಿಷಯಗಳನ್ನು ತೆಗೆದುಕೊಂಡು ಹೋಗುತ್ತೇವೆ: ಪುಣ್ಯ ಮತ್ತು ಪಾಪ.
05040016a ಉತ್ಸೃಜ್ಯ ವಿನಿವರ್ತಂತೇ ಜ್ಞಾತಯಃ ಸುಹೃದಃ ಸುತಾಃ।
05040016c ಅಗ್ನೌ ಪ್ರಾಸ್ತಂ ತು ಪುರುಷಂ ಕರ್ಮಾನ್ವೇತಿ ಸ್ವಯಂಕೃತಂ।।
ಬಾಂಧವರು, ಸ್ನೇಹಿತರು ಮತ್ತು ಮಕ್ಕಳು ಅಗ್ನಿಗೆ ಹಾಕಿ ಹಿಂದಿರುಗಿ ಹೋಗುತ್ತಾರೆ. ಸ್ವಯಂಕೃತ ಕರ್ಮಗಳೇ ಪುರುಷನನ್ನು ಹಿಂಬಾಲಿಸಿ ಬರುತ್ತವೆ.
05040017a ಅಸ್ಮಾಲ್ಲೋಕಾದೂರ್ಧ್ವಮಮುಷ್ಯ ಚಾಧೋ ಮಹತ್ತಮಸ್ತಿಷ್ಠತಿ ಹ್ಯಂಧಕಾರಂ।
05040017c ತದ್ವೈ ಮಹಾಮೋಹನಮಿಂದ್ರಿಯಾಣಾಂ ಬುಧ್ಯಸ್ವ ಮಾ ತ್ವಾಂ ಪ್ರಲಭೇತ ರಾಜನ್।।
ಈ ಲೋಕದ ಮೇಲೂ ಮತ್ತು ಕೆಳಗೂ ಮಹಾ ಅಂಧಕಾರದ ಲೋಕಗಳಿವೆ. ರಾಜನ್! ಅಲ್ಲಿಯೇ ಇಂದ್ರಿಯಗಳು ಮಹಾ ಮೋಹಕ್ಕೊಳಗಾಗುತ್ತವೆ ಎಂದು ತಿಳಿದುಕೋ.
05040018a ಇದಂ ವಚಃ ಶಕ್ಷ್ಯಸಿ ಚೇದ್ಯಥಾವನ್ ನಿಶಮ್ಯ ಸರ್ವಂ ಪ್ರತಿಪತ್ತುಮೇವಂ।
05040018c ಯಶಃ ಪರಂ ಪ್ರಾಪ್ಸ್ಯಸಿ ಜೀವಲೋಕೇ ಭಯಂ ನ ಚಾಮುತ್ರ ನ ಚೇಹ ತೇಽಸ್ತಿ।।
ಈ ಮಾತುಗಳನ್ನು ಜಾಗ್ರತೆಯಿಂದ ಕೇಳಿಕೊಂಡು ಅದರಂತೆಯೇ ನಡೆದುಕೊಂಡರೆ ನೀನು ಜೀವ ಲೋಕದಲ್ಲಿ ಪರಮ ಯಶಸ್ಸನ್ನು ಪಡೆಯುತ್ತೀಯೆ. ಇಲ್ಲಿ ಅಥವಾ ಅಲ್ಲಿ ನಿನಗೆ ಭಯವಿರುವುದಿಲ್ಲ.
05040019a ಆತ್ಮಾ ನದೀ ಭಾರತ ಪುಣ್ಯತೀರ್ಥಾ ಸತ್ಯೋದಕಾ ಧೃತಿಕೂಲಾ ದಮೋರ್ಮಿಃ।
05040019c ತಸ್ಯಾಂ ಸ್ನಾತಃ ಪೂಯತೇ ಪುಣ್ಯಕರ್ಮಾ ಪುಣ್ಯೋ ಹ್ಯಾತ್ಮಾ ನಿತ್ಯಮಂಭೋಂಽಭ ಏವ।।
ಭಾರತ! ಆತ್ಮವನ್ನು ನದಿಯೆಂದೂ, ಮಾಡಿದ ಪುಣ್ಯಗಳು ಅದರ ತೀರ್ಥಗಳೆಂದು, ಸತ್ಯವು ಅದರಲ್ಲಿರುವ ನೀರೆಂದೂ, ಧೃತಿಯು ಅದರ ದಡವೆಂದೂ, ಕರುಣೆಯು ಅದರ ಅಲೆಗಳೆಂದೂ ಹೇಳುತ್ತಾರೆ. ಪುಣ್ಯಕರ್ಮಿಯು ಅದರಲ್ಲಿ ಸ್ನಾನಮಾಡಿ ಶುದ್ಧನಾಗುತ್ತಾನೆ. ಆತ್ಮವು ಪುಣ್ಯಕರವು.
05040020a ಕಾಮಕ್ರೋಧಗ್ರಾಹವತೀಂ ಪಂಚೇಂದ್ರಿಯಜಲಾಂ ನದೀಂ।
05040020c ಕೃತ್ವಾ ಧೃತಿಮಯೀಂ ನಾವಂ ಜನ್ಮದುರ್ಗಾಣಿ ಸಂತರ।
ಕಾಮಕ್ರೋಧಗಳು ಈ ನದಿಯ ಮೊಸಳೆಗಳು, ಪಂಚೇಂದ್ರಿಯಗಳು ನೀರು. ಧೃತಿಯನ್ನು ನಾವೆಯನ್ನಾಗಿ ಮಾಡಿಕೊಂಡು ಜನ್ಮವೆನ್ನುವ ಕಂದರವನ್ನು ದಾಟು.
05040021a ಪ್ರಜ್ಞಾವೃದ್ಧಂ ಧರ್ಮವೃದ್ಧಂ ಸ್ವಬಂಧುಂ ವಿದ್ಯಾವೃದ್ಧಂ ವಯಸಾ ಚಾಪಿ ವೃದ್ಧಂ।
05040021c ಕಾರ್ಯಾಕಾರ್ಯೇ ಪೂಜಯಿತ್ವಾ ಪ್ರಸಾದ್ಯ ಯಃ ಸಂಪೃಚ್ಚೇನ್ನ ಸ ಮುಹ್ಯೇತ್ಕದಾ ಚಿತ್।
ಯಾರು ಪ್ರಜ್ಞಾವೃದ್ಧ, ಧರ್ಮವೃದ್ಧ, ವಿದ್ಯಾವೃದ್ಧ ಮತ್ತು ವಯಸ್ಸಿನಲ್ಲಿಯೂ ವೃದ್ಧನಾದ ಸ್ವಬಂಧುವನ್ನು ಕಾರ್ಯಾಕಾರ್ಯಗಳಲ್ಲಿ ಪೂಜಿಸಿ, ಸಂತೋಷಗೊಳಿಸಿ, ಕೇಳಿ ತಿಳಿದುಕೊಳ್ಳುತ್ತಾನೋ ಅವನು ಎಂದೂ ದಾರಿ ತಪ್ಪುವುದಿಲ್ಲ.
05040022a ಧೃತ್ಯಾ ಶಿಶ್ನೋದರಂ ರಕ್ಷೇತ್ಪಾಣಿಪಾದಂ ಚ ಚಕ್ಷುಷಾ।
05040022c ಚಕ್ಷುಃಶ್ರೋತ್ರೇ ಚ ಮನಸಾ ಮನೋ ವಾಚಂ ಚ ಕರ್ಮಣಾ।।
ಧೃತಿಯಿಂದ ಶಿಶ್ನ-ಹೊಟ್ಟೆಗಳನ್ನು, ಕಣ್ಣಿನಿಂದ ಕೈಕಾಲುಗಳನ್ನು, ಮನಸ್ಸಿನಿಂದ ಕಣ್ಣು-ಕಿವಿಗಳನ್ನು ಮತ್ತು ಕರ್ಮಗಳಿಂದ ಮನಸ್ಸು-ಮಾತುಗಳನ್ನು ರಕ್ಷಿಸಿಕೊಳ್ಳಬೇಕು.
05040023a ನಿತ್ಯೋದಕೀ ನಿತ್ಯಯಜ್ಞೋಪವೀತೀ ನಿತ್ಯಸ್ವಾಧ್ಯಾಯೀ ಪತಿತಾನ್ನವರ್ಜೀ।
05040023c ಋತಂ ಬ್ರುವನ್ಗುರವೇ ಕರ್ಮ ಕುರ್ವನ್ ನ ಬ್ರಾಹ್ಮಣಶ್ಚ್ಯವತೇ ಬ್ರಹ್ಮಲೋಕಾತ್।।
ನಿತ್ಯವೂ ಸ್ನಾನಮಾಡುವ, ನಿತ್ಯವೂ ಯಜ್ಞೋಪವೀತವನ್ನು ಧರಿಸುವ, ನಿತ್ಯವೂ ಸ್ವಾಧ್ಯಾಯದಲ್ಲಿ ತೊಡಗಿರುವ, ಅಶುದ್ಧ ಆಹಾರವನ್ನು ವರ್ಜಿಸುವ, ಸತ್ಯವನ್ನು ಹೇಳುವ, ಗುರುವಿನ ಕೆಲಸವನ್ನು ಮಾಡಿಕೊಡುವ ಬ್ರಾಹ್ಮಣನು ಬ್ರಹ್ಮಲೋಕದಿಂದ ಬೀಳುವುದಿಲ್ಲ.
05040024a ಅಧೀತ್ಯ ವೇದಾನ್ಪರಿಸಂಸ್ತೀರ್ಯ ಚಾಗ್ನೀನ್ ಇಷ್ಟ್ವಾ ಯಜ್ಞೈಃ ಪಾಲಯಿತ್ವಾ ಪ್ರಜಾಶ್ಚ।
05040024c ಗೋಬ್ರಾಹ್ಮಣಾರ್ಥೇ ಶಸ್ತ್ರಪೂತಾಂತರಾತ್ಮಾ ಹತಃ ಸಂಗ್ರಾಮೇ ಕ್ಷತ್ರಿಯಃ ಸ್ವರ್ಗಮೇತಿ।।
ವೇದಾಧ್ಯಯನ ಮಾಡಿ, ಅಗ್ನಿಯನ್ನು ಇಷ್ಟಿ-ಯಜ್ಞಗಳಿಂದ ಪರಿಪಾಲಿಸಿಕೊಂಡು ಪ್ರಜೆಗಳನ್ನು ಪಾಲಿಸುವ, ಗೋ-ಬ್ರಾಹ್ಮಣರ ಸಲುವಾಗಿ ಶಸ್ತ್ರಗಳನ್ನುಪಯೋಗಿಸಿ ಅಂತರಾತ್ಮನನ್ನು ಶುದ್ಧೀಕರಿಸಿಕೊಂಡ, ಮತ್ತು ಸಂಗ್ರಾಮದಲ್ಲಿ ಹತನಾದ ಕ್ಷತ್ರಿಯನು ಸ್ವರ್ಗವನ್ನೇರುತ್ತಾನೆ.
05040025a ವೈಶ್ಯೋಽಧೀತ್ಯ ಬ್ರಾಹ್ಮಣಾನ್ ಕ್ಷತ್ರಿಯಾಂಶ್ಚ ಧನೈಃ ಕಾಲೇ ಸಂವಿಭಜ್ಯಾಶ್ರಿತಾಂಶ್ಚ।
05040025c ತ್ರೇತಾಪೂತಂ ಧೂಮಮಾಘ್ರಾಯ ಪುಣ್ಯಂ ಪ್ರೇತ್ಯ ಸ್ವರ್ಗೇ ದೇವಸುಖಾನಿ ಭುಂಕ್ತೇ।।
ಅಧ್ಯಯನ ಮಾಡಿದ, ಕಾಲಕ್ಕೆ ತಕ್ಕಂತೆ ಧನವನ್ನು ಬ್ರಾಹ್ಮಣರಲ್ಲಿ, ಕ್ಷತ್ರಿಯರಲ್ಲಿ ಮತ್ತು ಆಶ್ರಿತರಲ್ಲಿ ಹಂಚಿಕೊಂಡ, ಮೂರು ಅಗ್ನಿಗಳಿಂದ ಶುದ್ಧೀಕರಿಸಲ್ಪಟ್ಟ ಪುಣ್ಯ ಧೂಮವನ್ನು ಆಘ್ರಾಣಿಸಿದ ವೈಶ್ಯನು ಮರಣದ ನಂತರ ಸ್ವರ್ಗದಲ್ಲಿ ದೇವಸುಖವನ್ನು ಭೋಗಿಸುತ್ತಾನೆ.
05040026a ಬ್ರಹ್ಮಕ್ಷತ್ರಂ ವೈಶ್ಯವರ್ಣಂ ಚ ಶೂದ್ರಃ ಕ್ರಮೇಣೈತಾನ್ನ್ಯಾಯತಃ ಪೂಜಯಾನಃ।
05040026c ತುಷ್ಟೇಷ್ವೇತೇಷ್ವವ್ಯಥೋ ದಗ್ಧಪಾಪಸ್ ತ್ಯಕ್ತ್ವಾ ದೇಹಂ ಸ್ವರ್ಗಸುಖಾನಿ ಭುಂಕ್ತೇ।।
ಕ್ರಮೇಣವಾಗಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯವರ್ಣದವರನ್ನು ಸರಿಯಾಗಿ ಪೂಜಿಸಿದ ಶೂದ್ರನು, ತನ್ನ ಪಾಪಗಳನ್ನು ದಹಿಸಿಕೊಂಡು, ದೇಹವನ್ನು ತೊರೆದ ನಂತರ, ವ್ಯಥೆಗಳಿಲ್ಲದ ಸ್ವರ್ಗಸುಖಗಳನ್ನು ಭೋಗಿಸುತ್ತಾನೆ.
05040027a ಚಾತುರ್ವರ್ಣ್ಯಸ್ಯೈಷ ಧರ್ಮಸ್ತವೋಕ್ತೋ ಹೇತುಂ ಚಾತ್ರ ಬ್ರುವತೋ ಮೇ ನಿಬೋಧ।
05040027c ಕ್ಷಾತ್ರಾದ್ಧರ್ಮಾದ್ಧೀಯತೇ ಪಾಂಡುಪುತ್ರಸ್ ತಂ ತ್ವಂ ರಾಜನ್ರಾಜಧರ್ಮೇ ನಿಯುಂಕ್ಷ್ವ।।
ನಾನು ಏಕೆ ನಿನಗೆ ಚಾತ್ರುರ್ವಣ್ಯಗಳ ಧರ್ಮದ ಕುರಿತು ಹೇಳಿದೆನೆನ್ನುವುದನ್ನು ಕೇಳು. ಪಾಂಡುಪುತ್ರನು ಕ್ಷಾತ್ರಧರ್ಮದ ಕೊರತೆಯಲ್ಲಿದ್ದಾನೆ. ರಾಜನ್! ನೀನು ಅವನಿಗೆ ರಾಜಧರ್ಮದೊಂದಿಗೆ ಜೋಡಿಸು.”
05040028 ಧೃತರಾಷ್ಟ್ರ ಉವಾಚ।
05040028a ಏವಮೇತದ್ಯಥಾ ಮಾಂ ತ್ವಮನುಶಾಸಸಿ ನಿತ್ಯದಾ।
05040028c ಮಮಾಪಿ ಚ ಮತಿಃ ಸೌಮ್ಯ ಭವತ್ಯೇವಂ ಯಥಾತ್ಥ ಮಾಂ।।
ಧೃತರಾಷ್ಟ್ರನು ಹೇಳಿದನು: “ಸೌಮ್ಯ! ಇದನ್ನೇ ನೀನು ನಿತ್ಯವೂ ನನಗೆ ಹೇಳಿಕೊಂಡು ಬಂದಿದ್ದೀಯೆ. ನನ್ನ ಬುದ್ಧಿಯೂ ಕೂಡ ನೀನು ಹೇಳುವುದಕ್ಕೆ ಸ್ಪಂದಿಸುತ್ತದೆ.
05040029a ಸಾ ತು ಬುದ್ಧಿಃ ಕೃತಾಪ್ಯೇವಂ ಪಾಂಡವಾನ್ಪ್ರತಿ ಮೇ ಸದಾ।
05040029c ದುರ್ಯೋಧನಂ ಸಮಾಸಾದ್ಯ ಪುನರ್ವಿಪರಿವರ್ತತೇ।।
ಸದಾ ನನ್ನ ಬುದ್ಧಿಯು ಪಾಂಡವರ ಕಡೆಯೇ ಇರುತ್ತದೆ. ಆದರೆ ದುರ್ಯೋಧನನೊಡನೆ ಇರುವಾಗ ಪುನಃ ಅದು ಹಿಂದಿರುಗುತ್ತದೆ.
05040030a ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಮರ್ತ್ಯೇನ ಕೇನ ಚಿತ್।
05040030c ದಿಷ್ಟಮೇವ ಕೃತಂ ಮನ್ಯೇ ಪೌರುಷಂ ತು ನಿರರ್ಥಕಂ।।
ಯಾವ ಮನುಷ್ಯನೂ ತನ್ನ ವಿಧಿಯನ್ನು ಅತಿಕ್ರಮಿಸಲು ಶಕ್ಯನಿಲ್ಲ. ವಿಧಿಯೇ ಎಲ್ಲವನ್ನೂ ಮಾಡುತ್ತದೆ. ಪುರುಷ ಪ್ರಯತ್ನವು ನಿರರ್ಥಕ ಎಂದು ನನಗನ್ನಿಸುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ನಲ್ವತ್ತನೆಯ ಅಧ್ಯಾಯವು.