039 ವಿದುರನೀತಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಪ್ರಜಾಗರ ಪರ್ವ

ಅಧ್ಯಾಯ 39

ಸಾರ

ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರಿಸಿದುದು (1-70).

05039001 ಧೃತರಾಷ್ಟ್ರ ಉವಾಚ।
05039001a ಅನೀಶ್ವರೋಽಯಂ ಪುರುಷೋ ಭವಾಭವೇ ಸೂತ್ರಪ್ರೋತಾ ದಾರುಮಯೀವ ಯೋಷಾ।
05039001c ಧಾತ್ರಾ ತು ದಿಷ್ಟಸ್ಯ ವಶೇ ಕಿಲಾಯಂ ತಸ್ಮಾದ್ವದ ತ್ವಂ ಶ್ರವಣೇ ಧೃತೋಽಹಂ।।

ಧೃತರಾಷ್ಟ್ರನು ಹೇಳಿದನು: “ಮನುಷ್ಯನು ಆಗುವ ಅಥವಾ ಆಗದಿರುವವುಗಳಿಗೆ ಒಡೆಯನಲ್ಲ. ಅವನು ದಾರಕ್ಕೆ ಕಟ್ಟಿದ ಒಂದು ಮರದ ಗೊಂಬೆಯಂತೆ. ಧಾತನು ಅವನನ್ನು ದೈವದ ವಶನನ್ನಾಗಿ ಮಾಡಿದ್ದಾನೆ. ಆದುದರಿಂದ ನಿನ್ನನ್ನು ಕೇಳಲು ಬಯಸುತ್ತೇನೆ. ಹೇಳು.”

05039002 ವಿದುರ ಉವಾಚ।
05039002a ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್।
05039002c ಲಭತೇ ಬುದ್ಧ್ಯವಜ್ಞಾನಮವಮಾನಂ ಚ ಭಾರತ।।

ವಿದುರನು ಹೇಳಿದನು: “ಭಾರತ! ಸಮಯ ಬರುವುದಕ್ಕೆ ಮೊದಲೇ ಮಾತನ್ನು ಹೇಳಿ ಬುದ್ಧಿಮಾನ ಬೃಹಸ್ಪತಿಯೂ ಕೂಡ ಅಜ್ಞಾನಿಯೆಂದು ಅಪಮಾನಿತನಾದ.

05039003a ಪ್ರಿಯೋ ಭವತಿ ದಾನೇನ ಪ್ರಿಯವಾದೇನ ಚಾಪರಃ।
05039003c ಮಂತ್ರಂ ಮೂಲಬಲೇನಾನ್ಯೋ ಯಃ ಪ್ರಿಯಃ ಪ್ರಿಯ ಏವ ಸಃ।।

ಕೊಡುವುದರಿಂದ ಪ್ರಿಯರೆನಿಸಿಕೊಂಡರೆ ಇತರರು ಚೆನ್ನಾಗಿ ಮಾತನಾಡುವುದರಿಂದ ಪ್ರಿಯರೆನಿಸಿಕೊಳ್ಳುತ್ತಾರೆ. ಇತರರು ಮಂತ್ರ-ಜಡಿಬೂಟಿಗಳ ಬಲದಿಂದ ಪ್ರಿಯರೆನಿಸಿಕೊಂಡರೆ, ನಿಜವಾದ ಪ್ರಿಯರು ಅವರು ತೋರಿಸುವ ಪ್ರೀತಿಯಿಂದ ಮಾತ್ರ ಪ್ರಿಯರೆನಿಸಿಕೊಳ್ಳುತ್ತಾರೆ.

05039004a ದ್ವೇಷ್ಯೋ ನ ಸಾಧುರ್ಭವತಿ ನ ಮೇಧಾವೀ ನ ಪಂಡಿತಃ।
05039004c ಪ್ರಿಯೇ ಶುಭಾನಿ ಕರ್ಮಾಣಿ ದ್ವೇಷ್ಯೇ ಪಾಪಾನಿ ಭಾರತ।।

ಭಾರತ! ದ್ವೇಷಿಸುವವನು ಒಳ್ಳೆಯನಾಗಿರುವುದಿಲ್ಲ, ಮೇಧಾವಿಯಾಗಿರುವುದಿಲ್ಲ, ಪಂಡಿತನಾಗಿರುವುದಿಲ್ಲ. ಪ್ರೀತಿಸುವುದು ಶುಭಕರ್ಮ, ದ್ವೇಷಿಸುವುದು ಪಾಪ ಕರ್ಮ.

05039005a ನ ಸ ಕ್ಷಯೋ ಮಹಾರಾಜ ಯಃ ಕ್ಷಯೋ ವೃದ್ಧಿಮಾವಹೇತ್।
05039005c ಕ್ಷಯಃ ಸ ತ್ವಿಹ ಮಂತವ್ಯೋ ಯಂ ಲಬ್ಧ್ವಾ ಬಹು ನಾಶಯೇತ್।।

ಮಹಾರಾಜ! ಯಾವ ಕ್ಷಯವು ವೃದ್ಧಿಯನ್ನು ತರುತ್ತದೆಯೋ ಅದು ಕ್ಷಯವಲ್ಲ. ಯಾವುದನ್ನು ಪಡೆದು ಬಹಳಷ್ಟು ನಾಶವಾಗುತ್ತದೆಯೋ ಅದನ್ನು ಕ್ಷಯವೆಂದು ತಿಳಿಯಬೇಕು.

05039006a ಸಮೃದ್ಧಾ ಗುಣತಃ ಕೇ ಚಿದ್ಭವಂತಿ ಧನತೋಽಪರೇ।
05039006c ಧನವೃದ್ಧಾನ್ಗುಣೈರ್ಹೀನಾನ್ಧೃತರಾಷ್ಟ್ರ ವಿವರ್ಜಯೇತ್।।

ಧೃತರಾಷ್ಟ್ರ! ಕೆಲವರು ಗುಣದಿಂದಾಗಿ, ಇತರರು ಧನದಿಂದಾಗಿ ಅಭಿವೃದ್ಧಿ ಹೊಂದುತ್ತಾರೆ. ಆದರೆ ಗುಣಗಳಿಲ್ಲದೇ ಧನದಿಂದಾಗಿ ಅಭಿವೃದ್ಧಿಹೊಂದುವರನ್ನು ತೊರೆಯಬೇಕು.”

05039007 ಧೃತರಾಷ್ಟ್ರ ಉವಾಚ।
05039007a ಸರ್ವಂ ತ್ವಮಾಯತೀಯುಕ್ತಂ ಭಾಷಸೇ ಪ್ರಾಜ್ಞಾಸಮ್ಮತಂ।
05039007c ನ ಚೋತ್ಸಹೇ ಸುತಂ ತ್ಯಕ್ತುಂ ಯತೋ ಧರ್ಮಸ್ತತೋ ಜಯಃ।।

ಧೃತರಾಷ್ಟ್ರನು ಹೇಳಿದನು: “ನೀನು ಹೇಳುವುದೆಲ್ಲವೂ ಯುಕ್ತವಾಗಿದೆ. ಪ್ರಾಜ್ಞಸಮ್ಮತವಾದುದನ್ನು ಹೇಳುತ್ತಿದ್ದೀಯೆ. ಆದರೆ ಮಗನನ್ನು ತೊರೆಯಲು ಮನಸ್ಸಿಲ್ಲ. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಾಗುತ್ತದೆ.”

05039008 ವಿದುರ ಉವಾಚ।
05039008a ಸ್ವಭಾವಗುಣಸಂಪನ್ನೋ ನ ಜಾತು ವಿನಯಾನ್ವಿತಃ।
05039008c ಸುಸೂಕ್ಷ್ಮಮಪಿ ಭೂತಾನಾಮುಪಮರ್ದಂ ಪ್ರಯೋಕ್ಷ್ಯತೇ।।

ವಿದುರನು ಹೇಳಿದನು: “ಹುಟ್ಟುವಾಗಲೇ ಸ್ವಭಾವದಲ್ಲಿ ಗುಣಸಂಪನ್ನನಾದ ಮತ್ತು ವಿನಯಾನ್ವಿತನಾದವನು ಇರುವವುಗಳ ತುಂಬಾ ಸೂಕ್ಷ್ಮವಾದ ದುಃಖವನ್ನೂ ಕಡೆಗಣಿಸುವುದಿಲ್ಲ.

05039009a ಪರಾಪವಾದನಿರತಾಃ ಪರದುಃಖೋದಯೇಷು ಚ।
05039009c ಪರಸ್ಪರವಿರೋಧೇ ಚ ಯತಂತೇ ಸತತೋತ್ಥಿತಾಃ।।

ಪರರನ್ನು ನಿಂದಿಸುವುದರಲ್ಲಿ ನಿರತರಾದವರು, ಸತತವೂ ಪರಸ್ಪರರಲ್ಲಿ ವಿರೋಧವನ್ನುಂಟುಮಾಡಲು ಪ್ರಯತ್ನಿಸುವವರು ಪರರಿಗೆ ದುಃಖವನ್ನೇ ನೀಡುತ್ತಾರೆ.

05039010a ಸದೋಷಂ ದರ್ಶನಂ ಯೇಷಾಂ ಸಂವಾಸೇ ಸುಮಹದ್ಭಯಂ।
05039010c ಅರ್ಥಾದಾನೇ ಮಹಾನ್ದೋಷಃ ಪ್ರದಾನೇ ಚ ಮಹದ್ಭಯಂ।।

ಯಾರನ್ನು ನೋಡುವುದು ದೋಷವೋ ಯಾರ ಸಹವಾಸವು ಮಹಾಭಯವನ್ನುಂಟುಮಾಡುತ್ತದೆಯೋ ಅವರಿಗೆ ಆರ್ಥಿಕ ದಾನವನ್ನು ಮಾಡುವುದು ಮಹಾದೋಷ. ಕೊಡುವುದು ಮಹಾ ಭಯ.

05039011a ಯೇ ಪಾಪಾ ಇತಿ ವಿಖ್ಯಾತಾಃ ಸಂವಾಸೇ ಪರಿಗರ್ಹಿತಾಃ।
05039011c ಯುಕ್ತಾಶ್ಚಾನ್ಯೈರ್ಮಹಾದೋಷೈರ್ಯೇ ನರಾಸ್ತಾನ್ವಿವರ್ಜಯೇತ್।।

ಯಾರು ಪಾಪಿಗಳೆಂದು ವಿಖ್ಯಾತರಾಗಿದ್ದಾರೋ, ಮಹಾದೋಷಗಳಿಂದ ಕೂಡಿದ್ದಾರೋ, ಅವರ ಜೊತೆ ಸಹವಾಸವನ್ನು ತೊರೆಯಬೇಕು.

05039012a ನಿವರ್ತಮಾನೇ ಸೌಹಾರ್ದೇ ಪ್ರೀತಿರ್ನೀಚೇ ಪ್ರಣಶ್ಯತಿ।
05039012c ಯಾ ಚೈವ ಫಲನಿರ್ವೃತ್ತಿಃ ಸೌಹೃದೇ ಚೈವ ಯತ್ಸುಖಂ।।

ಸೌಹಾರ್ದತೆಯು ಕಳೆದುಹೋದಾಗ, ಪ್ರೀತಿಯು ಕಡಿಮೆಯಾದಾಗ, ಆ ಸೌಹಾರ್ದತೆಯಿಂದ ದೊರೆಯುತ್ತಿದ್ದ ಫಲವೂ ಸುಖವೂ ಕಡಿಮೆಯಾಗುತ್ತದೆ.

05039013a ಯತತೇ ಚಾಪವಾದಾಯ ಯತ್ನಮಾರಭತೇ ಕ್ಷಯೇ।
05039013c ಅಲ್ಪೇಽಪ್ಯಪಕೃತೇ ಮೋಹಾನ್ನ ಶಾಂತಿಮುಪಗಚ್ಚತಿ।।

ಅವರಿಗೆ ಅಪವಾದವನ್ನು ಹೊರಿಸಿ, ಅವರ ನಾಶದ ಪ್ರಯತ್ನಗಳನ್ನು ಆರಂಭಿಸುತ್ತಾರೆ. ಸ್ವಲ್ಪ ಅಪಕೃತ್ಯವನ್ನು ಮಾಡಿದರೂ ಮೋಹದಿಂದ ಶಾಂತಿಯನ್ನು ಹೊಂದುವುದಿಲ್ಲ.

05039014a ತಾದೃಶೈಃ ಸಂಗತಂ ನೀಚೈರ್ನೃಶಂಸೈರಕೃತಾತ್ಮಭಿಃ।
05039014c ನಿಶಾಮ್ಯ ನಿಪುಣಂ ಬುದ್ಧ್ಯಾ ವಿದ್ವಾನ್ದೂರಾದ್ವಿವರ್ಜಯೇತ್।।

ವಿದ್ವಾಂಸನು ದೂರದಿಂದಲೇ ತನ್ನ ನಿಪುಣ ಬುದ್ಧಿಯಿಂದ ಪರೀಕ್ಷಿಸಿ ಇಂತಹ ನೀಚ, ನೃಶಂಸ ಅಕೃತಾತ್ಮರ ಸಂಗವನ್ನು ವರ್ಜಿಸುತ್ತಾನೆ.

05039015a ಯೋ ಜ್ಞಾತಿಮನುಗೃಹ್ಣಾತಿ ದರಿದ್ರಂ ದೀನಮಾತುರಂ।
05039015c ಸ ಪುತ್ರಪಶುಭಿರ್ವೃದ್ಧಿಂ ಯಶಶ್ಚಾವ್ಯಯಮಶ್ನುತೇ।।

ಯಾರು ದ್ರರಿದ್ರ, ದೀನ, ಆತುರ ಬಂದುಗಳಿಗೆ ಅನುಗ್ರಹಿಸುತ್ತಾನೋ ಅವನು ಪುತ್ರ-ಪಶುಗಳ ಅಭಿವೃದ್ಧಿಯನ್ನು ಹೊಂದಿ ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ.

05039016a ಜ್ಞಾತಯೋ ವರ್ಧನೀಯಾಸ್ತೈರ್ಯ ಇಚ್ಚಂತ್ಯಾತ್ಮನಃ ಶುಭಂ।
05039016c ಕುಲವೃದ್ಧಿಂ ಚ ರಾಜೇಂದ್ರ ತಸ್ಮಾತ್ಸಾಧು ಸಮಾಚರ।।

ತನಗೆ ಶುಭವಾದುದನ್ನು ಬಯಸುವವನು ತನ್ನ ಬಂಧುಗಳ ಅಭಿವೃದ್ಧಿಯನ್ನೂ ನೋಡಿಕೊಳ್ಳಬೇಕು. ಆದುದರಿಂದ, ರಾಜೇಂದ್ರ! ಸಾಧುವಾದ ಕುಲವೃದ್ಧಿಯನ್ನು ನಡೆಸು.

05039017a ಶ್ರೇಯಸಾ ಯೋಕ್ಷ್ಯಸೇ ರಾಜನ್ಕುರ್ವಾಣೋ ಜ್ಞಾತಿಸತ್ಕ್ರಿಯಾಂ।
05039017c ವಿಗುಣಾ ಹ್ಯಪಿ ಸಂರಕ್ಷ್ಯಾ ಜ್ಞಾತಯೋ ಭರತರ್ಷಭ।।

ರಾಜನ್! ನಿನ್ನ ಬಂಧುಗಳಿಗೆ ಒಳ್ಳೆಯದನ್ನು ಮಾಡಿದರೆ ಶ್ರೇಯಸ್ಸನ್ನು ಪಡೆಯುತ್ತೀಯೆ. ಭರತರ್ಷಭ! ಸದ್ಗುಣಿಗಳಲ್ಲದಿದ್ದರೂ ಬಂದುಗಳನ್ನು ಸಂರಕ್ಷಿಸಬೇಕು.

05039018a ಕಿಂ ಪುನರ್ಗುಣವಂತಸ್ತೇ ತ್ವತ್ಪ್ರಸಾದಾಭಿಕಾಂಕ್ಷಿಣಃ।
05039018c ಪ್ರಸಾದಂ ಕುರು ದೀನಾನಾಂ ಪಾಂಡವಾನಾಂ ವಿಶಾಂ ಪತೇ।।

ಹೀಗಿರುವಾಗ ಇನ್ನು ನಿನ್ನ ಕರುಣೆಯ ಆಕಾಂಕ್ಷಿಗಳಾದ ಗುಣವಂತರದ್ದೇನು? ವಿಶಾಂಪತೇ! ದೀನ ಪಾಂಡವರ ಮೇಲೆ ಕರುಣೆಯನ್ನು ತೋರು.

05039019a ದೀಯಂತಾಂ ಗ್ರಾಮಕಾಃ ಕೇ ಚಿತ್ತೇಷಾಂ ವೃತ್ತ್ಯರ್ಥಮೀಶ್ವರ।
05039019c ಏವಂ ಲೋಕೇ ಯಶಃಪ್ರಾಪ್ತೋ ಭವಿಷ್ಯಸಿ ನರಾಧಿಪ।।

ಈಶ್ವರ! ಅವರ ಹೊಟ್ಟೆಪಾಡಿಗೆಂದು ಕೆಲವು ಗ್ರಾಮಗಳನ್ನಾದರೂ ಕೊಡು. ನರಾಧಿಪ! ಈ ರೀತಿ ನೀನು ಲೋಕದಲ್ಲಿ ಯಶಸ್ಸನ್ನು ಗಳಿಸುತ್ತೀಯೆ.

05039020a ವೃದ್ಧೇನ ಹಿ ತ್ವಯಾ ಕಾರ್ಯಂ ಪುತ್ರಾಣಾಂ ತಾತ ರಕ್ಷಣಂ।
05039020c ಮಯಾ ಚಾಪಿ ಹಿತಂ ವಾಚ್ಯಂ ವಿದ್ಧಿ ಮಾಂ ತ್ವದ್ಧಿತೈಷಿಣಂ।।

ನೀನು ವೃದ್ಧ. ಆದುದರಿಂದ ಪುತ್ರರನ್ನು ರಕ್ಷಿಸುವುದು ನಿನ್ನ ಕಾರ್ಯ. ಹಿತವಾಕ್ಯಗಳನ್ನು ನುಡಿಯುವ ನನ್ನನ್ನು ಕೂಡ ನಿನ್ನ ಹಿತೈಷಿಯೆಂದು ತಿಳಿದುಕೋ.

05039021a ಜ್ಞಾತಿಭಿರ್ವಿಗ್ರಹಸ್ತಾತ ನ ಕರ್ತವ್ಯೋ ಭವಾರ್ಥಿನಾ।
05039021c ಸುಖಾನಿ ಸಹ ಭೋಜ್ಯಾನಿ ಜ್ಞಾತಿಭಿರ್ಭರತರ್ಷಭ।।

ಅಯ್ಯಾ! ಒಳ್ಳೆಯದನ್ನು ಬಯಸುವವನು ಬಂಧುಗಳೊಂದಿಗೆ ಜಗಳವಾಡಬಾರದು. ಭರತರ್ಷಭ! ಸುಖಗಳನ್ನು ಬಂಧುಗಳ ಜೊತೆಗೂಡಿ ಭೋಗಿಸಬೇಕು.

05039022a ಸಂಭೋಜನಂ ಸಂಕಥನಂ ಸಂಪ್ರೀತಿಶ್ಚ ಪರಸ್ಪರಂ।
05039022c ಜ್ಞಾತಿಭಿಃ ಸಹ ಕಾರ್ಯಾಣಿ ನ ವಿರೋಧಃ ಕಥಂ ಚನ।।

ಬಂಧುಗಳೊಡನೆ ಒಟ್ಟಿಗೇ ಊಟಮಾಡಬೇಕು, ಒಟ್ಟಿಗೇ ಪರಸ್ಪರರಲ್ಲಿ ಪ್ರೀತಿಯಿಂದ ಮಾತನಾಡಬೇಕು, ಒಟ್ಟಿಗೇ ಕೆಲಸಮಾಡಬೇಕು. ಎಂದೂ ಪರಸ್ಪರ ವಿರೋಧಿಸಬಾರದು.

05039023a ಜ್ಞಾತಯಸ್ತಾರಯಂತೀಹ ಜ್ಞಾತಯೋ ಮಜ್ಜಯಂತಿ ಚ।
05039023c ಸುವೃತ್ತಾಸ್ತಾರಯಂತೀಹ ದುರ್ವೃತ್ತಾ ಮಜ್ಜಯಂತಿ ಚ।।

ಇಲ್ಲಿ ಬಂಧುಗಳೇ ದಾಟಿಸುತ್ತಾರೆ, ಬಂಧುಗಳೇ ಮುಳುಗಿಸುತ್ತಾರೆ ಕೂಡ. ಅವರಲ್ಲಿ ಉತ್ತಮ ನಡತೆಯುಳ್ಳವರು ದಾಟಿಸುತ್ತಾರೆ, ಕೆಟ್ಟ ನಡತೆಯವರು ಮುಳುಗಿಸುತ್ತಾರೆ.

05039024a ಸುವೃತ್ತೋ ಭವ ರಾಜೇಂದ್ರ ಪಾಂಡವಾನ್ಪ್ರತಿ ಮಾನದ।
05039024c ಅಧರ್ಷಣೀಯಃ ಶತ್ರೂಣಾಂ ತೈರ್ವೃತಸ್ತ್ವಂ ಭವಿಷ್ಯಸಿ।।

ಮಾನದ! ರಾಜೇಂದ್ರ! ಪಾಂಡವರೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳುವವನಾಗು. ಅವರಿಂದ ಸುತ್ತುವರೆಯಲ್ಪಟ್ಟ ನೀನು ನಿನ್ನ ಶತ್ರುಗಳಿಗೆ ಗೆಲ್ಲಲಾರದವನಾಗುತ್ತೀಯೆ.

05039025a ಶ್ರೀಮಂತಂ ಜ್ಞಾತಿಮಾಸಾದ್ಯ ಯೋ ಜ್ಞಾತಿರವಸೀದತಿ।
05039025c ದಿಗ್ಧಹಸ್ತಂ ಮೃಗ ಇವ ಸ ಏನಸ್ತಸ್ಯ ವಿಂದತಿ।।

ಶ್ರೀಮಂತ ಬಂಧುವನ್ನು ಸೇರಿ ಯಾವ ಬಂಧುವು, ಬೇಟೆಯಾಡುವವನ ಕೈಗೆ ಸಿಕ್ಕ ಜಿಂಕೆಯಂತೆ ಅವಸಾನವನ್ನು ಹೊಂದುತ್ತಾನೋ, ಅದರ ಪಾಪವು ಶ್ರೀಮಂತನಿಗೆ ಬರುತ್ತದೆ.

05039026a ಪಶ್ಚಾದಪಿ ನರಶ್ರೇಷ್ಠ ತವ ತಾಪೋ ಭವಿಷ್ಯತಿ।
05039026c ತಾನ್ವಾ ಹತಾನ್ಸುತಾನ್ವಾಪಿ ಶ್ರುತ್ವಾ ತದನುಚಿಂತಯ।।

ನರಶ್ರೇಷ್ಠ! ಮುಂದೆ ನಿನ್ನ ಮಕ್ಕಳ ಅಥವಾ ಅವರ ಸಾವನ್ನು ಕೇಳಿ ನೀನು ಚಿಂತಿಸುತ್ತೀಯೆ, ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತೀಯೆ.

05039027a ಯೇನ ಖಟ್ವಾಂ ಸಮಾರೂಢಃ ಪರಿತಪ್ಯೇತ ಕರ್ಮಣಾ।
05039027c ಆದಾವೇವ ನ ತತ್ಕುರ್ಯಾದಧ್ರುವೇ ಜೀವಿತೇ ಸತಿ।।

ಜೀವನವೇ ನಿರ್ಧಿಷ್ಠವಾಗಿರದಿರುವಾಗ, ಕಷ್ಟದ ಕೋಣೆಗೆ ಹೋಗಿ ಪರಿತಪಿಸಬೇಕಾಗಿ ಬರಬಹುದಾದಂತಹ ಕರ್ಮಗಳನ್ನು ಮೊದಲಿನಿಂದಲೇ ತೊರೆಯಬೇಕು.

05039028a ನ ಕಶ್ಚಿನ್ನಾಪನಯತೇ ಪುಮಾನನ್ಯತ್ರ ಭಾರ್ಗವಾತ್।
05039028c ಶೇಷಸಂಪ್ರತಿಪತ್ತಿಸ್ತು ಬುದ್ಧಿಮತ್ಸ್ವೇವ ತಿಷ್ಠತಿ।।
05039029a ದುರ್ಯೋಧನೇನ ಯದ್ಯೇತತ್ಪಾಪಂ ತೇಷು ಪುರಾ ಕೃತಂ।
05039029c ತ್ವಯಾ ತತ್ಕುಲವೃದ್ಧೇನ ಪ್ರತ್ಯಾನೇಯಂ ನರೇಶ್ವರ।।

ನರೇಶ್ವರ! ಹಿಂದೆ ದುರ್ಯೋಧನನು ಅವರ ಕುರಿತು ಪಾಪಕೃತ್ಯಗಳನ್ನು ಎಸಗಿದ್ದರೆ ಅವನ್ನು ಸರಿಪಡಿಸುವುದು ಕುಲವೃದ್ಧನಾದ ನಿನ್ನ ಕರ್ತವ್ಯ.

05039030a ತಾಂಸ್ತ್ವಂ ಪದೇ ಪ್ರತಿಷ್ಠಾಪ್ಯ ಲೋಕೇ ವಿಗತಕಲ್ಮಷಃ।
05039030c ಭವಿಷ್ಯಸಿ ನರಶ್ರೇಷ್ಠ ಪೂಜನೀಯೋ ಮನೀಷಿಣಾಂ।।

ನರಶ್ರೇಷ್ಠ! ಅವರನ್ನು ಅವರ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ನೀನು ವಿಗತಕಲ್ಮಷನಾಗಿ ಮನುಷ್ಯರಲ್ಲಿ ಪೂಜನೀಯನಾಗುತ್ತೀಯೆ.

05039031a ಸುವ್ಯಾಹೃತಾನಿ ಧೀರಾಣಾಂ ಫಲತಃ ಪ್ರವಿಚಿಂತ್ಯ ಯಃ।
05039031c ಅಧ್ಯವಸ್ಯತಿ ಕಾರ್ಯೇಷು ಚಿರಂ ಯಶಸಿ ತಿಷ್ಠತಿ।।

ಧೀರರ ಒಳ್ಳೆಯ ಮಾತುಗಳನ್ನೂ, ಅವುಗಳ ಪರಿಣಾಮಗಳನ್ನೂ ಚೆನ್ನಾಗಿ ಯೋಚಿಸಿ ಕಾರ್ಯಗಳಲ್ಲಿ ತೊಡಗುವವನು ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ.

05039032a ಅವೃತ್ತಿಂ ವಿನಯೋ ಹಂತಿ ಹಂತ್ಯನರ್ಥಂ ಪರಾಕ್ರಮಃ।
05039032c ಹಂತಿ ನಿತ್ಯಂ ಕ್ಷಮಾ ಕ್ರೋಧಮಾಚಾರೋ ಹಂತ್ಯಲಕ್ಷಣಂ।।

ವಿನಯವು ದುರ್ನಡತೆಯನ್ನು ಕೊಲ್ಲುತ್ತದೆ. ಪರಾಕ್ರಮವು ಅನರ್ಥವನ್ನು ಕೊಲ್ಲುತ್ತದೆ. ಕ್ಷಮೆಯು ಯಾವಾಗಲೂ ಕ್ರೋಧವನ್ನು ಕೊಲ್ಲುತ್ತದೆ. ಆಚಾರವು ಅಲಕ್ಷಣವನ್ನು ಕೊಲ್ಲುತ್ತದೆ.

05039033a ಪರಿಚ್ಚದೇನ ಕ್ಷೇತ್ರೇಣ ವೇಶ್ಮನಾ ಪರಿಚರ್ಯಯಾ।
05039033c ಪರೀಕ್ಷೇತ ಕುಲಂ ರಾಜನ್ಭೋಜನಾಚ್ಚಾದನೇನ ಚ।।

ರಾಜನ್! ಒಂದು ಕುಲವನ್ನು ಅದರಲ್ಲಿರುವ ಜನರ ಸಂಖ್ಯೆ, ಆಸ್ತಿ, ಮನೆ, ಪರಿಚಾರಕರು, ಭೋಜನ ಮತ್ತು ಉಡುಪುಗಳಿಂದ ಪರೀಕ್ಷಿಸಬೇಕು.

05039034a ಯಯೋಶ್ಚಿತ್ತೇನ ವಾ ಚಿತ್ತಂ ನೈಭೃತಂ ನೈಭೃತೇನ ವಾ।
05039034c ಸಮೇತಿ ಪ್ರಜ್ಞಾಯಾ ಪ್ರಜ್ಞಾ ತಯೋರ್ಮೈತ್ರೀ ನ ಜೀರ್ಯತೇ।।

ಯಾರ ಚಿತ್ತವು ಚಿತ್ತದೊಂದಿಗೆ, ಗುಟ್ಟುಗಳು ಗುಟ್ಟುಗಳೊಂದಿಗೆ ಮತ್ತು ಪ್ರಜ್ಞೆಯು ಪ್ರಜ್ಞೆಯೊಂದಿಗೆ ಕೂಡುವುದೋ ಅವರ ಮೈತ್ರಿಯು ಕುಂಠಿತವಾಗುವುದಿಲ್ಲ.

05039035a ದುರ್ಬುದ್ಧಿಮಕೃತಪ್ರಜ್ಞಾಂ ಚನ್ನಂ ಕೂಪಂ ತೃಣೈರಿವ।
05039035c ವಿವರ್ಜಯೀತ ಮೇಧಾವೀ ತಸ್ಮಿನ್ಮೈತ್ರೀ ಪ್ರಣಶ್ಯತಿ।।

ಹುಲ್ಲಿನಿಂದ ಮುಚ್ಚಿಕೊಂಡ ಬಾವಿಯಂತಿರುವ ಪ್ರಜ್ಞೆಯಿಲ್ಲದ ದುರ್ಬುದ್ಧಿಯನ್ನು ಮೇಧಾವಿಯು ವರ್ಜಿಸಬೇಕು. ಅವರೊಂದಿಗಿನ ಮೈತ್ರಿಯು ನಾಶವಾಗುತ್ತದೆ.

05039036a ಅವಲಿಪ್ತೇಷು ಮೂರ್ಖೇಷು ರೌದ್ರಸಾಹಸಿಕೇಷು ಚ।
05039036c ತಥೈವಾಪೇತಧರ್ಮೇಷು ನ ಮೈತ್ರೀಮಾಚರೇದ್ಬುಧಃ।।

ಜಂಬವಿರುವ, ಮೂರ್ಖ, ರೌದ್ರ ಸಾಹಿಸಿಗಳೊಂದಿಗೆ ಮತ್ತು ಅಧರ್ಮಿಗಳೊಂದಿಗೆ ತಿಳಿದವರು ಮೈತ್ರಿಯನ್ನು ಬೆಳೆಸಬಾರದು.

05039037a ಕೃತಜ್ಞಾಂ ಧಾರ್ಮಿಕಂ ಸತ್ಯಮಕ್ಷುದ್ರಂ ದೃಢಭಕ್ತಿಕಂ।
05039037c ಜಿತೇಂದ್ರಿಯಂ ಸ್ಥಿತಂ ಸ್ಥಿತ್ಯಾಂ ಮಿತ್ರಮತ್ಯಾಗಿ ಚೇಷ್ಯತೇ।।

ಕೃತಜ್ಞ, ಧಾರ್ಮಿಕ, ಸತ್ಯವಂತ, ಅಕ್ಷುದ್ರ, ದೃಢಭಕ್ತಿಯುಳ್ಳವ, ಜಿತೇಂದ್ರಿಯ, ಸ್ಥಿರವಾಗಿರುವವನೊಂದಿಗೆ ಮಿತ್ರತ್ವವನ್ನು ಬಯಸಬೇಕು.

05039038a ಇಂದ್ರಿಯಾಣಾಮನುತ್ಸರ್ಗೋ ಮೃತ್ಯುನಾ ನ ವಿಶಿಷ್ಯತೇ।
05039038c ಅತ್ಯರ್ಥಂ ಪುನರುತ್ಸರ್ಗಃ ಸಾದಯೇದ್ದೈವತಾನ್ಯಪಿ।।

ಇಂದ್ರಿಯಗಳನ್ನು ಹಿಂದೆ ಎಳೆದಿಟ್ಟುರುವುದು ಸಾವಿಗಿಂತ ಬೇರೆಯದಲ್ಲ. ಅವುಗಳ ಸಂಪೂರ್ಣ ನಿಯಂತ್ರಣವು ದೇವತೆಗಳನ್ನೂ ದೊರಕಿಸುತ್ತದೆ.

05039039a ಮಾರ್ದವಂ ಸರ್ವಭೂತಾನಾಮನಸೂಯಾ ಕ್ಷಮಾ ಧೃತಿಃ।
05039039c ಆಯುಷ್ಯಾಣಿ ಬುಧಾಃ ಪ್ರಾಹುರ್ಮಿತ್ರಾಣಾಂ ಚಾವಿಮಾನನಾ।।

ಸರ್ವಭೂತಗಳಲ್ಲಿ ದಯೆ, ಅನಸೂಯೆ, ಕ್ಷಮೆ, ಧೃತಿ, ಮತ್ತು ಮಿತ್ರರನ್ನು ಗೌರವಿಸುವುದು ಇವು ಆಯುಷ್ಯವನ್ನು ವರ್ಧಿಸುವವು ಎಂದು ತಿಳಿದವರು ಹೇಳುತ್ತಾರೆ.

05039040a ಅಪನೀತಂ ಸುನೀತೇನ ಯೋಽರ್ಥಂ ಪ್ರತ್ಯಾನಿನೀಷತೇ।
05039040c ಮತಿಮಾಸ್ಥಾಯ ಸುದೃಢಾಂ ತದಕಾಪುರುಷವ್ರತಂ।।

ತನ್ನ ಬುದ್ಧಿಯನ್ನು ಆಧರಿಸಿ ಸರಿಯಾಗಿ ನಡೆದುಕೊಂಡು ಹೋಗುತ್ತಿರದವರನ್ನು ಸರಿಮಾಡುವುದೇ ಉತ್ತಮ ಪುರುಷರ ಜೀವಧೋರಣೆಯಾಗಿರಬೇಕು.

05039041a ಆಯತ್ಯಾಂ ಪ್ರತಿಕಾರಜ್ಞಾಸ್ತದಾತ್ವೇ ದೃಢನಿಶ್ಚಯಃ।
05039041c ಅತೀತೇ ಕಾರ್ಯಶೇಷಜ್ಞೋ ನರೋಽರ್ಥೈರ್ನ ಪ್ರಹೀಯತೇ।।

ಭವಿಷ್ಯವನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವವನು, ವರ್ತಮಾನದಲ್ಲಿ ಧೃಢನಿಶ್ಚಯನಾಗಿರುವವನು ಮತ್ತು ಹಿಂದೆ ಮಾಡಿದ ಕರ್ಮಗಳ ಪರಿಣಾಮಗಳನ್ನು ಅರ್ಥಮಾಡಿಕೊಂಡವನು ತನ್ನ ಸಂಪತ್ತಿನಿಂದ ಎಂದೂ ದೂರನಾಗುವುದಿಲ್ಲ.

05039042a ಕರ್ಮಣಾ ಮನಸಾ ವಾಚಾ ಯದಭೀಕ್ಷ್ಣಂ ನಿಷೇವತೇ।
05039042c ತದೇವಾಪಹರತ್ಯೇನಂ ತಸ್ಮಾತ್ಕಲ್ಯಾಣಮಾಚರೇತ್।।

ಕರ್ಮ, ಮನಸ್ಸು ಮತ್ತು ಮಾತುಗಳ ಮೂಲಕ ಏನನ್ನು ಅನುಸರಿಸುತ್ತೀವೋ ಅವೇ ನಮ್ಮನ್ನು ಅಪಹರಿಸಿಕೊಂಡು ಹೋಗುತ್ತವೆ. ಆದುದರಿಂದ ಕಲ್ಯಾಣವಾಗುವ ರೀತಿಯಲ್ಲಿಯೇ ನಡೆದುಕೊಳ್ಳಬೇಕು.

05039043a ಮಂಗಲಾಲಂಭನಂ ಯೋಗಃ ಶ್ರುತಮುತ್ಥಾನಮಾರ್ಜವಂ।
05039043c ಭೂತಿಮೇತಾನಿ ಕುರ್ವಂತಿ ಸತಾಂ ಚಾಭೀಕ್ಷ್ಣದರ್ಶನಂ।।

ಮಂಗಲಕರವಾದುದನ್ನು ಮಾಡುವುದು, ಯೋಗ, ಅಧ್ಯಯನ, ಆರ್ಜವ, ಸಂತರ ಸೇವೆ ಇವುಗಳು ಅಭಿವೃದ್ಧಿಯನ್ನು ತರುತ್ತವೆ.

05039044a ಅನಿರ್ವೇದಃ ಶ್ರಿಯೋ ಮೂಲಂ ದುಃಖನಾಶೇ ಸುಖಸ್ಯ ಚ।
05039044c ಮಹಾನ್ಭವತ್ಯನಿರ್ವಿಣ್ಣಃ ಸುಖಂ ಚಾತ್ಯಂತಮಶ್ನುತೇ।।

ದುಃಖವು ನಾಶವಾಗುತ್ತದೆ ಎಂದು ತಿಳಿದು ದುಃಖಪಡದೇ ಇರುವುದು ಸುಖ ಮತ್ತು ಸಂಪತ್ತಿನ ಮೂಲ. ಅನಿರ್ವಿಣ್ಣನಾಗಿರುವವನು ಮಹಾತ್ಮನಾಗಿ ಅತ್ಯಂತ ಸುಖವನ್ನು ಹೊಂದುತ್ತಾನೆ.

05039045a ನಾತಃ ಶ್ರೀಮತ್ತರಂ ಕಿಂ ಚಿದನ್ಯತ್ಪಥ್ಯತಮಂ ತಥಾ।
05039045c ಪ್ರಭವಿಷ್ಣೋರ್ಯಥಾ ತಾತ ಕ್ಷಮಾ ಸರ್ವತ್ರ ಸರ್ವದಾ।।

ಅಯ್ಯಾ! ಸರ್ವತ್ರವೂ ಸರ್ವದಾ ಕ್ಷಮಿಸುವ ಶಕ್ತಿಶಾಲಿ ಒಡೆಯನಿದ್ದರೆ ಅದಕ್ಕಿಂತಲೂ ಹೆಚ್ಚಿನ ಒಳ್ಳೆಯದು ಮತ್ತು ತೃಪ್ತಿಯು ಬೇರೊಂದಿಲ್ಲ.

05039046a ಕ್ಷಮೇದಶಕ್ತಃ ಸರ್ವಸ್ಯ ಶಕ್ತಿಮಾನ್ಧರ್ಮಕಾರಣಾತ್।
05039046c ಅರ್ಥಾನರ್ಥೌ ಸಮೌ ಯಸ್ಯ ತಸ್ಯ ನಿತ್ಯಂ ಕ್ಷಮಾ ಹಿತಾ।।

ಶಕ್ತಿಯಿಲ್ಲದವನು ಎಲ್ಲವನ್ನೂ ಕ್ಷಮಿಸಬೇಕು. ಶಕ್ತಿವಂತನೂ ಧರ್ಮದ ಕಾರಣದಿಂದ ಎಲ್ಲವನ್ನೂ ಕ್ಷಮಿಸಬೇಕು. ಲಾಭ-ನಷ್ಟಗಳು ಸಮನಾಗಿರುವವನು ನಿತ್ಯವೂ ಕ್ಷಮಿಸುತ್ತಾನೆ.

05039047a ಯತ್ಸುಖಂ ಸೇವಮಾನೋಽಪಿ ಧರ್ಮಾರ್ಥಾಭ್ಯಾಂ ನ ಹೀಯತೇ।
05039047c ಕಾಮಂ ತದುಪಸೇವೇತ ನ ಮೂಢವ್ರತಮಾಚರೇತ್।।

ಯಾವ ಸುಖವನ್ನು ಅನುಭವಿಸುದರಿಂದ ಧರ್ಮ ಮತ್ತು ಅರ್ಥಗಳೆರಡೂ ಕ್ಷಣಿಸುವುದಿಲ್ಲವೋ ಅಂಥಹ ಕಾಮವನ್ನು ಬಯಸಬೇಕು. ಮೂಢರ ವರ್ತನೆಯಂತೆ ನಡೆದುಕೊಳ್ಳಬಾರದು.

05039048a ದುಃಖಾರ್ತೇಷು ಪ್ರಮತ್ತೇಷು ನಾಸ್ತಿಕೇಷ್ವಲಸೇಷು ಚ।
05039048c ನ ಶ್ರೀರ್ವಸತ್ಯದಾಂತೇಷು ಯೇ ಚೋತ್ಸಾಹವಿವರ್ಜಿತಾಃ।।

ದುಃಖಾರ್ತರಾದವರಲ್ಲಿ, ಪ್ರಮತ್ತರಾದವರಲ್ಲಿ, ನಾಸ್ತಿಕರಲ್ಲಿ, ಆಲಸಿಗಳಲ್ಲಿ, ನಿಯಂತ್ರಣವಿಲ್ಲದವರಲ್ಲಿ, ಉತ್ಸಾಹವನ್ನು ತೊರೆದವರಲ್ಲಿ ಅದೃಷ್ಟವು ನೆಲೆಸುವುದಿಲ್ಲ.

05039049a ಆರ್ಜವೇನ ನರಂ ಯುಕ್ತಮಾರ್ಜವಾತ್ಸವ್ಯಪತ್ರಪಂ।
05039049c ಅಶಕ್ತಿಮಂತಂ ಮನ್ಯಂತೋ ಧರ್ಷಯಂತಿ ಕುಬುದ್ಧಯಃ।।

ತನ್ನ ಪ್ರಾಮಾಣಿಕತೆಯನ್ನು ಹೆಚ್ಚಾಗಿ ತೋರಿಸಿಕೊಳ್ಳದೇ ಇದ್ದ ಪ್ರಾಮಾಣಿಕನನ್ನು ಕುಬುದ್ಧಿಗಳು ಅಶಕ್ತರೆಂದು ತಿಳಿದು ಹಿಂಸಿಸುತ್ತಾರೆ.

05039050a ಅತ್ಯಾರ್ಯಮತಿದಾತಾರಮತಿಶೂರಮತಿವ್ರತಂ।
05039050c ಪ್ರಜ್ಞಾಭಿಮಾನಿನಂ ಚೈವ ಶ್ರೀರ್ಭಯಾನ್ನೋಪಸರ್ಪತಿ।।

ಅತಿಯಾದ ಉದಾರಿ ದಾನಿಯ, ಅತಿಶೂರನಾಗಿರುವ ಶೂರನ, ಮತ್ತು ತನ್ನ ಪ್ರಜ್ಞೆಯ ಕುರಿತು ಅಭಿಮಾನಿಯಾಗಿರುವ ಮೂಢನ ಬಳಿಹೋಗಲು ಅದೃಷ್ಟವು ಭಯಪಡುತ್ತದೆ.

05039051a ಅಗ್ನಿಹೋತ್ರಫಲಾ ವೇದಾಃ ಶೀಲವೃತ್ತಫಲಂ ಶ್ರುತಂ।
05039051c ರತಿಪುತ್ರಫಲಾ ದಾರಾ ದತ್ತಭುಕ್ತಫಲಂ ಧನಂ।।

ವೇದಗಳ ಫಲವು ಅಗ್ನಿಹೋತ್ರದಲ್ಲಿದೆ, ವಿದ್ಯೆಯ ಫಲವು ನಡತೆಯಲ್ಲಿದೆ, ಪತ್ನಿಯ ಫಲವು ರತಿಸುಖ ಮತ್ತು ಮಕ್ಕಳಲ್ಲಿದೆ, ಹಾಗೂ ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ.

05039052a ಅಧರ್ಮೋಪಾರ್ಜಿತೈರರ್ಥೈರ್ಯಃ ಕರೋತ್ಯೌರ್ಧ್ವದೇಹಿಕಂ।
05039052c ನ ಸ ತಸ್ಯ ಫಲಂ ಪ್ರೇತ್ಯ ಭುಂಕ್ತೇಽರ್ಥಸ್ಯ ದುರಾಗಮಾತ್।।

ಅಧರ್ಮದಿಂದ ಗಳಿಸಿದ ಧನದಿಂದ ಸಾವಿನ ನಂತರಕ್ಕೆಂದು ಏನೆಲ್ಲ ಮಾಡುತ್ತಾನೋ ಅದರ ಫಲವನ್ನು ಸತ್ತ ನಂತರ ಪಡೆಯುವುದಿಲ್ಲ. ಏಕೆಂದರೆ ಅವನ ಧನವು ಕೆಟ್ಟದರಿಂದ ಬಂದಿರುತ್ತದೆ.

05039053a ಕಾಂತಾರವನದುರ್ಗೇಷು ಕೃಚ್ಚ್ರಾಸ್ವಾಪತ್ಸು ಸಂಭ್ರಮೇ।
05039053c ಉದ್ಯತೇಷು ಚ ಶಸ್ತ್ರೇಷು ನಾಸ್ತಿ ಶೇಷವತಾಂ ಭಯಂ।।

ಜೀವವು ಇನ್ನೂ ಉಳಿದಿರುವವರಿಗೆ ಕಾಂತಾರ-ವನ-ದುರ್ಗಗಳಲ್ಲಿ, ಕಷ್ಟ-ಆಪತ್ತುಗಳಲ್ಲಿ, ಉದ್ವೇಗಗಳಲ್ಲಿ, ಮತ್ತು ಮೇಲೆತ್ತಿರುವ ಶಸ್ತ್ರಗಳಿಂದ ಭಯವಿಲ್ಲ.

05039054a ಉತ್ಥಾನಂ ಸಂಯಮೋ ದಾಕ್ಷ್ಯಮಪ್ರಮಾದೋ ಧೃತಿಃ ಸ್ಮೃತಿಃ।
05039054c ಸಮೀಕ್ಷ್ಯ ಚ ಸಮಾರಂಭೋ ವಿದ್ಧಿ ಮೂಲಂ ಭವಸ್ಯ ತತ್।।

ಏಳಿಗೆಗಾಗಿ ಪ್ರಯತ್ನ, ಸಂಯಮ, ದಕ್ಷತೆ, ಪ್ರಮಾದಗೊಳ್ಳದಿರುವುದು, ಧೃತಿ, ಸ್ಮೃತಿ, ಸಮೀಕ್ಷೆ ಮತ್ತು ಒಳ್ಳೆಯ ಆರಂಭಗಳು ಏಳಿಗೆಯ ಮೂಲಗಳೆಂದು ತಿಳಿ.

05039055a ತಪೋ ಬಲಂ ತಾಪಸಾನಾಂ ಬ್ರಹ್ಮ ಬ್ರಹ್ಮವಿದಾಂ ಬಲಂ।
05039055c ಹಿಂಸಾ ಬಲಮಸಾಧೂನಾಂ ಕ್ಷಮಾ ಗುಣವತಾಂ ಬಲಂ।।

ತಪಸ್ಸು ತಾಪಸರ ಬಲ; ಬ್ರಹ್ಮವು ಬ್ರಹ್ಮವಿದರ ಬಲ; ಹಿಂಸೆಯು ಕೆಟ್ಟವರ ಬಲ ಮತ್ತು ಕ್ಷಮೆಯು ಗುಣವಂತರ ಬಲ.

05039056a ಅಷ್ಟೌ ತಾನ್ಯವ್ರತಘ್ನಾನಿ ಆಪೋ ಮೂಲಂ ಫಲಂ ಪಯಃ।
05039056c ಹವಿರ್ಬ್ರಾಹ್ಮಣಕಾಮ್ಯಾ ಚ ಗುರೋರ್ವಚನಮೌಷಧಂ।।

ಈ ಎಂಟು ವ್ರತವನ್ನು ಕೆಡಿಸುವುದಿಲ್ಲ – ನೀರು, ಗೆಡ್ಡೆ, ಹಣ್ಣು, ಹಾಲು, ಹವಿಸ್ಸು, ಬ್ರಾಹ್ಮಣನ ಬಯಕೆ, ಗುರುವಿನ ಮಾತು ಮತ್ತು ಔಷಧ.

05039057a ನ ತತ್ಪರಸ್ಯ ಸಂದಧ್ಯಾತ್ಪ್ರತಿಕೂಲಂ ಯದಾತ್ಮನಃ।
05039057c ಸಂಗ್ರಹೇಣೈಷ ಧರ್ಮಃ ಸ್ಯಾತ್ಕಾಮಾದನ್ಯಃ ಪ್ರವರ್ತತೇ।।

ಯಾವುದು ತನಗೆ ಪ್ರತಿಕೂಲವಲ್ಲವೋ ಅದನ್ನು ಇತರರಿಗೆ ಮಾಡಬಾರದು. ಇದೇ ಧರ್ಮದ ಸಾರಾಂಶ. ಇದಕ್ಕೆ ಹೊರತಾದುದು ಕಾಮದಿಂದ ನಡೆಯುತ್ತದೆ.

05039058a ಅಕ್ರೋಧೇನ ಜಯೇತ್ಕ್ರೋಧಮಸಾಧುಂ ಸಾಧುನಾ ಜಯೇತ್।
05039058c ಜಯೇತ್ಕದರ್ಯಂ ದಾನೇನ ಜಯೇತ್ಸತ್ಯೇನ ಚಾನೃತಂ।।

ಕ್ರೋಧವನ್ನು ಅಕ್ರೋಧದಿಂದ ಜಯಿಸಬೇಕು; ಅಸಾಧುವಾದುದನ್ನು ಸಾಧುವಾದುದರಿಂದ ಜಯಿಸಬೇಕು; ಜಿಪುಣತೆಯನ್ನು ದಾನದಿಂದ ಜಯಿಸಬೇಕು ಮತ್ತು ಸುಳ್ಳನ್ನು ಸತ್ಯದಿಂದ ಜಯಿಸಬೇಕು.

05039059a ಸ್ತ್ರೀಧೂರ್ತಕೇಽಲಸೇ ಭೀರೌ ಚಂಡೇ ಪುರುಷಮಾನಿನಿ।
05039059c ಚೌರೇ ಕೃತಘ್ನೇ ವಿಶ್ವಾಸೋ ನ ಕಾರ್ಯೋ ನ ಚ ನಾಸ್ತಿಕೇ।।

ಸ್ತ್ರೀಯರಲ್ಲಿ. ಧೂರ್ತರಲ್ಲಿ, ಆಲಸಿಯರಲ್ಲಿ, ಹೇಡಿಗಳಲ್ಲಿ, ಚಂಡರಲ್ಲಿ, ಪೌರುಷದ ಮಾತನಾಡುವವರಲ್ಲಿ, ಚೋರರಲ್ಲಿ, ಕೃತಘ್ನರಲ್ಲಿ, ಮತ್ತು ನಾಸ್ತಿಕರಲ್ಲಿ ವಿಶ್ವಾಸವನ್ನಿಡಬಾರದು.

05039060a ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ।
05039060c ಚತ್ವಾರಿ ಸಂಪ್ರವರ್ಧಂತೇ ಕೀರ್ತಿರಾಯುರ್ಯಶೋಬಲಂ।।

ಅಭಿವಾದನ ನಡತೆಯುಳ್ಳವನ ಮತ್ತು ವೃದ್ಧರ ಸೇವೆಯಲ್ಲಿರುವವನ ಬಳಿ ನಿತ್ಯವೂ ಈ ನಾಲ್ಕು ವೃದ್ಧಿಯಾಗುತ್ತವೆ - ಕೀರ್ತಿ, ಆಯುಷ್ಯ, ಯಶಸ್ಸು ಮತ್ತು ಬಲ.

05039061a ಅತಿಕ್ಲೇಶೇನ ಯೇಽರ್ಥಾಃ ಸ್ಯುರ್ಧರ್ಮಸ್ಯಾತಿಕ್ರಮೇಣ ಚ।
05039061c ಅರೇರ್ವಾ ಪ್ರಣಿಪಾತೇನ ಮಾ ಸ್ಮ ತೇಷು ಮನಃ ಕೃಥಾಃ।।

ತುಂಬಾ ಕಷ್ಟಪಡಬೇಕಾಗಿರುವ, ಅಥವಾ ಧರ್ಮವನ್ನು ಮೀರಿ ನಡೆದುಕೊಳ್ಳಬೇಕಾಗಿರುವ ಅಥವಾ ಶತ್ರುಗಳಿಗೆ ತಲೆಬಾಗಿಸಬೇಕಾಗಿ ಬರುವ ಸಂಪತ್ತಿನ ಮೇಲೆ ಮನಸ್ಸನ್ನಿಡಬೇಡ.

05039062a ಅವಿದ್ಯಃ ಪುರುಷಃ ಶೋಚ್ಯಃ ಶೋಚ್ಯಂ ಮಿಥುನಮಪ್ರಜಂ।
05039062c ನಿರಾಹಾರಾಃ ಪ್ರಜಾಃ ಶೋಚ್ಯಾಃ ಶೋಚ್ಯಂ ರಾಷ್ಟ್ರಮರಾಜಕಂ।।

ವಿದ್ಯೆಯಿಲ್ಲದ ಪುರುಷನು ಶೋಚನೀಯ; ಮಕ್ಕಳಿಲ್ಲದ ದಂಪತಿಗಳು ಶೋಚನೀಯರು; ನಿರಾಹಾರರಾಗಿರುವ ಪ್ರಜೆಗಳು ಶೋಚನೀಯರು ಮತ್ತು ರಾಜನಿಲ್ಲದ ರಾಷ್ಟ್ರವು ಶೋಚನೀಯವಾದುದು.

05039063a ಅಧ್ವಾ ಜರಾ ದೇಹವತಾಂ ಪರ್ವತಾನಾಂ ಜಲಂ ಜರಾ।
05039063c ಅಸಂಭೋಗೋ ಜರಾ ಸ್ತ್ರೀಣಾಂ ವಾಕ್ಶಲ್ಯಂ ಮನಸೋ ಜರಾ।।

ಪ್ರಯಾಣವು ಶರೀರವಿದ್ದವರನ್ನು ಮುಪ್ಪಾಗಿಸುತ್ತದೆ; ಮಳೆಯು ಪರ್ವತಗಳನ್ನು ಮುಪ್ಪಾಗಿಸುತ್ತದೆ; ಸಂಭೋಗಮಾಡದೇ ಇರುವುದರಿಂದ ಸ್ತ್ರೀಯರು ಮುಪ್ಪಾಗುತ್ತಾರೆ; ಕಠೋರ ಮಾತುಗಳು ಮನಸ್ಸನ್ನು ಮುಪ್ಪಾಗಿಸುತ್ತವೆ.

05039064a ಅನಾಮ್ನಾಯಮಲಾ ವೇದಾ ಬ್ರಾಹ್ಮಣಸ್ಯಾವ್ರತಂ ಮಲಂ।
05039064c ಕೌತೂಹಲಮಲಾ ಸಾಧ್ವೀ ವಿಪ್ರವಾಸಮಲಾಃ ಸ್ತ್ರಿಯಃ।।

ಹೇಳದೇ ಇರುವುದರಿಂದ ವೇದಗಳು ಕುಂದುತ್ತವೆ. ವ್ರತಗಳಿಲ್ಲದಿದ್ದರೆ ಬ್ರಾಹ್ಮಣರು ಕುಂದುತ್ತಾರೆ. ಸಾಧ್ವಿಯು ಕುತೂಹಲದಿಂದ ಕುಂದುತ್ತಾಳೆ ಮತ್ತು ಸ್ತ್ರೀಯರು ಮನೆಯ ಹೊರಗೆ ಹೋಗುವುದರಿಂದ ಕುಂದುತ್ತಾರೆ.

05039065a ಸುವರ್ಣಸ್ಯ ಮಲಂ ರೂಪ್ಯಂ ರೂಪ್ಯಸ್ಯಾಪಿ ಮಲಂ ತ್ರಪು।
05039065c ಜ್ಞೇಯಂ ತ್ರಪುಮಲಂ ಸೀಸಂ ಸೀಸಸ್ಯಾಪಿ ಮಲಂ ಮಲಂ।।

ಚಿನ್ನವು ಬೆಳ್ಳಿಯಿಂದ ಕೆಡುತ್ತದೆ, ಬೆಳ್ಳಿಯು ತಗಡಿನಿಂದ ಕೆಡುತ್ತದೆ, ತಗಡು ಸೀಸದಿಂದ ಕೆಡುತ್ತದೆ, ಮತ್ತು ಸೀಸವು ಕೊಳೆಯಿಂದ ಕೆಡುತ್ತದೆ.

05039066a ನ ಸ್ವಪ್ನೇನ ಜಯೇನ್ನಿದ್ರಾಂ ನ ಕಾಮೇನ ಸ್ತ್ರಿಯಂ ಜಯೇತ್।
05039066c ನೇಂಧನೇನ ಜಯೇದಗ್ನಿಂ ನ ಪಾನೇನ ಸುರಾಂ ಜಯೇತ್।।

ಇನ್ನೂ ಮಲಗುವುದರಿಂದ ನಿದ್ರೆಯನ್ನು ಗೆಲ್ಲಲಾಗದು; ಕಾಮದಿಂದ ಸ್ತ್ರೀಯನ್ನು ಗೆಲ್ಲಲಾಗದು; ಇಂಧನದಿಂದ ಬೆಂಕಿಯನ್ನು ಗೆಲ್ಲಲಾಗದು ಮತ್ತು ಕುಡಿಯುವುದರಿಂದ ಮದ್ಯವನ್ನು ಗೆಲ್ಲಲಾಗದು.

05039067a ಯಸ್ಯ ದಾನಜಿತಂ ಮಿತ್ರಮಮಿತ್ರಾ ಯುಧಿ ನಿರ್ಜಿತಾಃ।
05039067c ಅನ್ನಪಾನಜಿತಾ ದಾರಾಃ ಸಫಲಂ ತಸ್ಯ ಜೀವಿತಂ।।

ಕೊಡುವುದರಿಂದ ಮಿತ್ರರನ್ನು ಗಳಿಸಿದವನು, ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದವನು, ಅನ್ನಪಾನಗಳಿಂದ ಪತ್ನಿಯರನ್ನು ಗೆದ್ದವನ ಜೀವನವು ಸಫಲವಾಗುತ್ತದೆ.

05039068a ಸಹಸ್ರಿಣೋಽಪಿ ಜೀವಂತಿ ಜೀವಂತಿ ಶತಿನಸ್ತಥಾ।
05039068c ಧೃತರಾಷ್ಟ್ರಂ ವಿಮುಂಚೇಚ್ಚಾಂ ನ ಕಥಂ ಚಿನ್ನ ಜೀವ್ಯತೇ।।

ಸಾವಿರವಿದ್ದವರೂ ಜೀವಿಸುತ್ತಾರೆ, ಮತ್ತು ಹಾಗೆಯೇ ನೂರಿದ್ದವರೂ ಕೂಡ ಜೀವಿಸುತ್ತಾರೆ. ಆದುದರಿಂದ ಧೃತರಾಷ್ಟ್ರ! ಇಚ್ಛೆಗಳನ್ನು ಬಿಡಬೇಕು. ಬದುಕಲಿಕ್ಕಾಗುವುದಿಲ್ಲ ಎನ್ನುವ ಹಾಗೆ ಏನೂ ಇಲ್ಲ.

05039069a ಯತ್ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ।
05039069c ನಾಲಮೇಕಸ್ಯ ತತ್ಸರ್ವಮಿತಿ ಪಶ್ಯನ್ನ ಮುಹ್ಯತಿ।।

ಈ ಭೂಮಿಯಲ್ಲಿರುವ ಅಕ್ಕಿ, ಬಂಗಾರ, ಪಶುಗಳು ಮತ್ತು ಸ್ತ್ರೀಯರು ಎಲ್ಲವೂ ಒಬ್ಬನಿಗೂ ಸಾಕಾಗುವುದಿಲ್ಲ. ಇದನ್ನು ನೋಡಿ ಮೋಸಹೋಗಬೇಡ.

05039070a ರಾಜನ್ಭೂಯೋ ಬ್ರವೀಮಿ ತ್ವಾಂ ಪುತ್ರೇಷು ಸಮಮಾಚರ।
05039070c ಸಮತಾ ಯದಿ ತೇ ರಾಜನ್ಸ್ವೇಷು ಪಾಂಡುಸುತೇಷು ಚ।।

ರಾಜನ್! ಇನ್ನೊಮ್ಮೆ ಹೇಳುತ್ತಿದ್ದೇನೆ. ರಾಜನ್! ನಿನ್ನ ಮತ್ತು ಪಾಂಡುವಿನ ಮಕ್ಕಳಲ್ಲಿ ಸಮತೆಯಿಂದ ನೀನು ನಡೆದುಕೊಂಡರೆ ನಿನ್ನ ಮಕ್ಕಳೊಂದಿಗೆ ಚೆನ್ನಾಗಿರಬಲ್ಲೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಏಕೋನಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೊಂಭತ್ತನೆಯ ಅಧ್ಯಾಯವು.