ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಪ್ರಜಾಗರ ಪರ್ವ
ಅಧ್ಯಾಯ 38
ಸಾರ
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರೆಸಿದುದು (1-44).
05038001 ವಿದುರ ಉವಾಚ।
05038001a ಊರ್ಧ್ವಂ ಪ್ರಾಣಾ ಹ್ಯುತ್ಕ್ರಾಮಂತಿ ಯೂನಃ ಸ್ಥವಿರ ಆಯತಿ।
05038001c ಪ್ರತ್ಯುತ್ಥಾನಾಭಿವಾದಾಭ್ಯಾಂ ಪುನಸ್ತಾನ್ಪ್ರತಿಪದ್ಯತೇ।।
ವಿದುರನು ಹೇಳಿದನು: “ವೃದ್ಧನು ಬಂದಾಗ ಯುವಕನ ಪ್ರಾಣವು ಮೇಲೇರುತ್ತದೆ. ಆದರೆ ಮೇಲೆದ್ದು ಅವನನ್ನು ನಮಸ್ಕರಿಸುವುದರಿಂದ ಅದನ್ನು ಪುನಃ ಹಿಂದೆ ಪಡೆಯುತ್ತಾನೆ.
05038002a ಪೀಠಂ ದತ್ತ್ವಾ ಸಾಧವೇಽಭ್ಯಾಗತಾಯ ಆನೀಯಾಪಃ ಪರಿನಿರ್ಣಿಜ್ಯ ಪಾದೌ।
05038002c ಸುಖಂ ಪೃಷ್ಟ್ವಾ ಪ್ರತಿವೇದ್ಯಾತ್ಮಸಂಸ್ಥಂ ತತೋ ದದ್ಯಾದನ್ನಮವೇಕ್ಷ್ಯ ಧೀರಃ।।
ಬಂದಿರುವ ಸಾಧುವಿಗೆ ಪೀಠವನ್ನು ನೀಡಿ, ನೀರನ್ನು ತಂದು, ಪಾದಗಳನ್ನು ತೊಳೆದು, ಸುಖವನ್ನು ಕೇಳಿ, ತನ್ನ ಪರಿಸ್ಥಿತಿಯ ಕುರಿತು ಹೇಳಿ, ನಂತರ ಗಮನವಿಟ್ಟು ಊಟವನ್ನು ನೀಡಬೇಕು.
05038003a ಯಸ್ಯೋದಕಂ ಮಧುಪರ್ಕಂ ಚ ಗಾಂ ಚ ನಮಂತ್ರವಿತ್ಪ್ರತಿಗೃಹ್ಣಾತಿ ಗೇಹೇ।
05038003c ಲೋಭಾದ್ಭಯಾದರ್ಥಕಾರ್ಪಣ್ಯತೋ ವಾ ತಸ್ಯಾನರ್ಥಂ ಜೀವಿತಮಾಹುರಾರ್ಯಾಃ।।
ಲೋಭದಿಂದಾಗಲೀ, ಭಯದಿಂದಾಗಲೀ, ಕಾರ್ಪಣ್ಯತೆಯಿಂದಾಗಲೀ ಯಾರ ಮನೆಯಲ್ಲಿ ಮಂತ್ರವತ್ತಾಗಿ ನೀರು, ಮಧುಪರ್ಕ ಮತ್ತು ಗೋವಿನ ಸ್ವೀಕಾರವಾಗುವುದಿಲ್ಲವೋ ಅವನ ಜೀವನವು ಅನರ್ಥವಾದುದು ಎಂದು ಆರ್ಯರು ಹೇಳುತ್ತಾರೆ.
05038004a ಚಿಕಿತ್ಸಕಃ ಶಲ್ಯಕರ್ತಾವಕೀರ್ಣೀ ಸ್ತೇನಃ ಕ್ರೂರೋ ಮದ್ಯಪೋ ಭ್ರೂಣಹಾ ಚ।
05038004c ಸೇನಾಜೀವೀ ಶ್ರುತಿವಿಕ್ರಾಯಕಶ್ಚ ಭೃಶಂ ಪ್ರಿಯೋಽಪ್ಯತಿಥಿರ್ನೋದಕಾರ್ಹಃ।।
ಎಷ್ಟೇ ಪ್ರಿಯರಾಗಿದ್ದರೂ ಈ ಅತಿಥಿಗಳು ಅರ್ಘ್ಯಕ್ಕೆ ಅರ್ಹರಲ್ಲ: ಚಿಕಿತ್ಸಕ, ಬಾಣಗಳನ್ನು ಮಾಡುವವನು, ಅಶ್ಲೀಲ ನಡತೆಯುಳ್ಳವನು, ಕಳ್ಳ, ಕ್ರೂರ, ಕುಡುಕ, ಭ್ರೂಣಹಂತಕ, ಸೈನಿಕ, ಮತ್ತು ವೇದಗಳನ್ನು ಮಾರುವವನು.
05038005a ಅವಿಕ್ರೇಯಂ ಲವಣಂ ಪಕ್ವಮನ್ನಂ ದಧಿ ಕ್ಷೀರಂ ಮಧು ತೈಲಂ ಘೃತಂ ಚ।
05038005c ತಿಲಾ ಮಾಂಸಂ ಮೂಲಫಲಾನಿ ಶಾಕಂ ರಕ್ತಂ ವಾಸಃ ಸರ್ವಗಂಧಾ ಗುಡಶ್ಚ।।
ಇವುಗಳನ್ನು ಮಾರಬಾರದು: ಉಪ್ಪು, ಬೇಯಿಸಿದ ಅನ್ನ, ಮೊಸರು, ಹಾಲು, ಜೇನುತುಪ್ಪ, ಎಣ್ಣೆ, ತುಪ್ಪ, ಎಳ್ಳು, ಮಾಂಸ, ಗೆಡ್ಡೆ-ಹಣ್ಣುಗಳು, ತರಕಾರಿಗಳು, ರಕ್ತ, ಉಡುಪುಗಳು, ಎಲ್ಲ ರೀತಿಯ ಸುಗಂಧಗಳು ಮತ್ತು ಬೆಲ್ಲ.
05038006a ಅರೋಷಣೋ ಯಃ ಸಮಲೋಷ್ಟಕಾಂಚನಃ ಪ್ರಹೀಣಶೋಕೋ ಗತಸಂಧಿವಿಗ್ರಹಃ।
05038006c ನಿಂದಾಪ್ರಶಂಸೋಪರತಃ ಪ್ರಿಯಾಪ್ರಿಯೇ ಚರನ್ನುದಾಸೀನವದೇಷ ಭಿಕ್ಷುಕಃ।।
ಸಿಟ್ಟಿಗೇಳದವನು, ಮಣ್ಣು-ಕಾಂಚನಗಳನ್ನು ಸಮನಾಗಿ ಕಾಣುವವನು, ಶೋಕವನ್ನು ತೊರೆದವನು, ಗೆಳೆತನ-ವೈರ, ನಿಂದೆ-ಪ್ರಶಂಸೆ, ಮತ್ತು ಪ್ರಿಯ-ಅಪ್ರಿಯಗಳನ್ನು ದಾಟಿಹೋದವನು, ಉದಾಸೀನನಾಗಿ ಸಂಚರಿಸುವವನೇ ನಿಜವಾದ ಭಿಕ್ಷುಕ.
05038007a ನೀವಾರಮೂಲೇಂಗುದಶಾಕವೃತ್ತಿಃ ಸುಸಮ್ಯತಾತ್ಮಾಗ್ನಿಕಾರ್ಯೇಷ್ವಚೋದ್ಯಃ।
05038007c ವನೇ ವಸನ್ನತಿಥಿಷ್ವಪ್ರಮತ್ತೋ ಧುರಂಧರಃ ಪುಣ್ಯಕೃದೇಷ ತಾಪಸಃ।।
ಕಾಡುಅಕ್ಕಿ, ಗೆಡ್ಡೆಗಳು, ಬೀಜಗಳು, ಮತ್ತು ತಪ್ಪಲು ಪಲ್ಲೆಗಳನ್ನು ತಿಂದು ಜೀವಿಸುವ, ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ತಾನಾಗಿಯೇ ಅಗ್ನಿಕಾರ್ಯವನ್ನು ಮಾಡುವ, ವನದಲ್ಲಿ ವಾಸಿಸಿಕೊಂಡೂ ಅತಿಥಿಗಳಿಗೆ ನಿರಾಕರಿಸದವನೇ ಧುರಂಧರ ಪುಣ್ಯವಂತ ತಾಪಸಿ.
05038008a ಅಪಕೃತ್ವಾ ಬುದ್ಧಿಮತೋ ದೂರಸ್ಥೋಽಸ್ಮೀತಿ ನಾಶ್ವಸೇತ್।
05038008c ದೀರ್ಘೌ ಬುದ್ಧಿಮತೋ ಬಾಹೂ ಯಾಭ್ಯಾಂ ಹಿಂಸತಿ ಹಿಂಸಿತಃ।।
ಬುದ್ಧಿವಂತನಿಗೆ ಕೆಡುಕನ್ನು ಮಾಡಿ ದೂರದಲ್ಲಿದ್ದೇನೆ ಎಂದು ವಿಶ್ವಾಸದಿಂದಿರಬಾರದು. ಏಕೆಂದರೆ, ಬುದ್ಧಿವಂತರ ಕೈ ತುಂಬಾ ಉದ್ದವಾಗಿರುತ್ತದೆ. ಅದರಿಂದ ಅವರು ಹಿಂಸೆಕೊಟ್ಟವರನ್ನು ಹಿಂಸಿಸುತ್ತಾರೆ.
05038009a ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್।
05038009c ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃಂತತಿ।।
ವಿಶ್ವಾಸವಿಡಬಾರದವರಲ್ಲಿ ವಿಶ್ವಾಸವಿಡಬಾರದು; ವಿಶ್ವಾಸವನ್ನಿಟ್ಟವರಲ್ಲಿ ಅತಿಯಾದ ವಿಶ್ವಾಸವನ್ನಿಡಬಾರದು. ವಿಶ್ವಾಸದಿಂದ ಭಯವು ಹುಟ್ಟುತ್ತದೆ. ಅದು ಮೂಲವನ್ನೇ ಕಿತ್ತೊಗೆಯುತ್ತದೆ.
05038010a ಅನೀರ್ಷ್ಯುರ್ಗುಪ್ತದಾರಃ ಸ್ಯಾತ್ಸಂವಿಭಾಗೀ ಪ್ರಿಯಂವದಃ।
05038010c ಶ್ಲಕ್ಷ್ಣೋ ಮಧುರವಾಕ್ಸ್ತ್ರೀಣಾಂ ನ ಚಾಸಾಂ ವಶಗೋ ಭವೇತ್।।
ಯಾರನ್ನೂ ದ್ವೇಷಿಸಬಾರದು. ಪತ್ನಿಯನ್ನು ಸುರಕ್ಷಿತವಾಗಿಟ್ಟುಕೊಂಡಿರಬೇಕು. ಇದ್ದುದನ್ನು ಹಂಚಿಕೊಳ್ಳಬೇಕು. ಪ್ರಿಯವಾದ ಮಾತುಗಳನ್ನಾಡಬೇಕು. ಸ್ತ್ರೀಯರೊಂದಿಗೆ ಮೃದುವಾಗಿ ಮಧುರವಾಗಿ ಮಾತನ್ನಾಡಬೇಕು. ಆದರೆ ಅವರ ವಶನಾಗಬಾರದು.
05038011a ಪೂಜನೀಯಾ ಮಹಾಭಾಗಾಃ ಪುಣ್ಯಾಶ್ಚ ಗೃಹದೀಪ್ತಯಃ।
05038011c ಸ್ತ್ರಿಯಃ ಶ್ರಿಯೋ ಗೃಹಸ್ಯೋಕ್ತಾಸ್ತಸ್ಮಾದ್ರಕ್ಷ್ಯಾ ವಿಶೇಷತಃ।।
ಮನೆಯ ದೀಪ ಬೆಳಗಿಸುವ ಪೂಜನೀಯ, ಮಹಾಭಾಗ, ಪುಣ್ಯ ಸ್ತ್ರೀಯರು ಮನೆಯ ಸಂಪತ್ತು. ಅವರನ್ನು ವಿಶೇಷವಾಗಿ ರಕ್ಷಿಸಬೇಕು.
05038012a ಪಿತುರಂತಃಪುರಂ ದದ್ಯಾನ್ಮಾತುರ್ದದ್ಯಾನ್ಮಹಾನಸಂ।
05038012c ಗೋಷು ಚಾತ್ಮಸಮಂ ದದ್ಯಾತ್ಸ್ವಯಮೇವ ಕೃಷಿಂ ವ್ರಜೇತ್।
05038012e ಭೃತ್ಯೈರ್ವಣಿಜ್ಯಾಚಾರಂ ಚ ಪುತ್ರೈಃ ಸೇವೇತ ಬ್ರಾಹ್ಮಣಾನ್।।
ಅಂತಃಪುರವನ್ನು ತಂದೆಗೆ ಒಪ್ಪಿಸಬೇಕು, ಅಡುಗೆ ಮನೆಯನ್ನು ತಾಯಿಗೆ ವಹಿಸಬೇಕು, ಗೋವುಗಳನ್ನು ತನ್ನಂತಿರುವವನಿಗೆ ಒಪ್ಪಿಸಬೇಕು, ಮತ್ತು ಕೃಷಿಯನ್ನು ತಾನೇ ಮಾಡಬೇಕು, ಸೇವಕರ ಮೂಲಕ ವ್ಯಾಪಾರಗಳನ್ನು ಮಾಡಿಸಬೇಕು ಮತ್ತು ಪುತ್ರರ ಮೂಲಕ ಬ್ರಾಹ್ಮಣರ ಸೇವೆಯನ್ನು ಮಾಡಬೇಕು.
05038013a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಂ।
05038013c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ।।
ನೀರಿನಿಂದ ಅಗ್ನಿಯು, ಬ್ರಹ್ಮತ್ವದಿಂದ ಕ್ಷತ್ರಿಯತ್ವವು, ಕಲ್ಲಿನಿಂದ ಲೋಹವು ಉತ್ಪತ್ತಿಯಾಗುತ್ತವೆ. ಆದರೆ ಅವೆಲ್ಲವುಗಳ ತೇಜಸ್ಸು ಯಾವುದರಿಂದ ಅವು ಹುಟ್ಟಿದವೋ ಅವುಗಳಲ್ಲಿ ನಾಶವಾಗುತ್ತದೆ.
05038014a ನಿತ್ಯಂ ಸಂತಃ ಕುಲೇ ಜಾತಾಃ ಪಾವಕೋಪಮತೇಜಸಃ।
05038014c ಕ್ಷಮಾವಂತೋ ನಿರಾಕಾರಾಃ ಕಾಷ್ಠೇಽಗ್ನಿರಿವ ಶೇರತೇ।।
ಉತ್ತಮ ಕುಲದಲ್ಲಿ ಹುಟ್ಟಿ ನಿತ್ಯವೂ ಸಂತರಾಗಿರುವವರು ಪಾವಕನಂತಿರುವ ತಮ್ಮ ತೇಜಸ್ಸನ್ನು ಕಾಷ್ಠದಲ್ಲಿರುವ ಅಗ್ನಿಯಂತೆ ಕ್ಷಮಾವಂತರಾಗಿ ನಿರಾಕಾರರಾಗಿ ಅಡಗಿಸಿಟ್ಟುಕೊಂಡಿರುತ್ತಾರೆ.
05038015a ಯಸ್ಯ ಮಂತ್ರಂ ನ ಜಾನಂತಿ ಬಾಹ್ಯಾಶ್ಚಾಭ್ಯಂತರಾಶ್ಚ ಯೇ।
05038015c ಸ ರಾಜಾ ಸರ್ವತಶ್ಚಕ್ಷುಶ್ಚಿರಮೈಶ್ವರ್ಯಮಶ್ನುತೇ।।
ಯಾರ ಉಪಾಯಗಳನ್ನು ಹೊರಗಿನವರೂ ಒಳಗಿನವರೂ ಯಾರೂ ತಿಳಿದಿಲ್ಲವೋ ಅಂಥಹ ರಾಜನು ಎಲ್ಲಕಡೆ ಕಣ್ಣಿಟ್ಟುಕೊಂಡು ಐಶ್ವರ್ಯವನ್ನು ಕಳೆದುಕೊಳ್ಳುವುದಿಲ್ಲ.
05038016a ಕರಿಷ್ಯನ್ನ ಪ್ರಭಾಷೇತ ಕೃತಾನ್ಯೇವ ಚ ದರ್ಶಯೇತ್।
05038016c ಧರ್ಮಕಾಮಾರ್ಥಕಾರ್ಯಾಣಿ ತಥಾ ಮಂತ್ರೋ ನ ಭಿದ್ಯತೇ।।
ಏನು ಮಾಡುವವನಿದ್ದೇನೆಂದು ಹೇಳುವುದಿಲ್ಲ, ಮಾಡಿದ ನಂತರ ಆ ಧರ್ಮಕರ್ಮಾರ್ಥ ಕಾರ್ಯಗಳನ್ನು ತೋರಿಸುತ್ತಾನೆ. ಆಗ ಅವನ ಉಪಾಯವನ್ನು ಭೇದಿಸುವುದಿಲ್ಲ.
05038017a ಗಿರಿಪೃಷ್ಠಮುಪಾರುಹ್ಯ ಪ್ರಾಸಾದಂ ವಾ ರಹೋಗತಃ।
05038017c ಅರಣ್ಯೇ ನಿಃಶಲಾಕೇ ವಾ ತತ್ರ ಮಂತ್ರೋ ವಿಧೀಯತೇ।।
ಗಿರಿಶಿಖರವನ್ನು ಏರಿ ಅಥವಾ ಮನೆಯ ಪ್ರಾಸಾದದ ಮೇಲಿರುವಾಗ ಅಥವಾ ಅರಣ್ಯದಲ್ಲಿ ಏಕಾಂತದಲ್ಲಿರುವಾಗ ಉಪಾಯವನ್ನು ಮಾಡಬೇಕು.
05038018a ನಾಸುಹೃತ್ಪರಮಂ ಮಂತ್ರಂ ಭಾರತಾರ್ಹತಿ ವೇದಿತುಂ।
05038018c ಅಪಂಡಿತೋ ವಾಪಿ ಸುಹೃತ್ಪಂಡಿತೋ ವಾಪ್ಯನಾತ್ಮವಾನ್।
05038018e ಅಮಾತ್ಯೇ ಹ್ಯರ್ಥಲಿಪ್ಸಾ ಚ ಮಂತ್ರರಕ್ಷಣಮೇವ ಚ।।
ಭಾರತ! ಸ್ನೇಹಿತನಾಗಿರದವನು ಅಥವಾ ಸ್ನೇಹಿತನಾಗಿದ್ದರೂ ಅಪಂಡಿತನಾಗಿರುವವನು ಅಥವಾ ಪಂಡಿತನಾಗಿದ್ದರೂ ಆತ್ಮವಂತನಲ್ಲದವನು ಅಂತಿಮ ಉಪಾಯವನ್ನು ತಿಳಿದಿರಬಾರದು. ಏಕೆಂದರೆ ಉಪಾಯವನ್ನು ರಕ್ಷಿಸಿ ಅದು ಉತ್ತಮ ಫಲಿತಾಂಶವನ್ನು ನೀಡುವಂತೆ ಮಾಡುವ ಜವಾಬ್ಧಾರಿಯು ಮಂತ್ರಿಯದಾಗಿರುತ್ತದೆ.
05038019a ಕೃತಾನಿ ಸರ್ವಕಾರ್ಯಾಣಿ ಯಸ್ಯ ವಾ ಪಾರ್ಷದಾ ವಿದುಃ।
05038019c ಗೂಢಮಂತ್ರಸ್ಯ ನೃಪತೇಸ್ತಸ್ಯ ಸಿದ್ಧಿರಸಂಶಯಂ।।
ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದ ನಂತರವೇ ಇತರರು ತಿಳಿದ, ಅಲ್ಲಿಯವರೆಗೆ ಗೂಢವಾಗಿರಿಸಿದ್ದ ನೃಪತಿಯ ಉಪಾಯಗಳು ಸಿದ್ಧಿಯಾಗುವುದರಲ್ಲಿ ಸಂಶಯವಿಲ್ಲ.
05038020a ಅಪ್ರಶಸ್ತಾನಿ ಕರ್ಮಾಣಿ ಯೋ ಮೋಹಾದನುತಿಷ್ಠತಿ।
05038020c ಸ ತೇಷಾಂ ವಿಪರಿಭ್ರಂಶೇ ಭ್ರಶ್ಯತೇ ಜೀವಿತಾದಪಿ।।
ಮೋಹದಿಂದ ಅಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಅದು ಮಧ್ಯದಲ್ಲಿ ನಿಂತುಹೋಗುವುದಲ್ಲದೇ ಹಾಗೆ ಮಾಡಿದವನ ಜೀವನವನ್ನೂ ನಾಶಗೊಳಿಸುತ್ತದೆ.
05038021a ಕರ್ಮಣಾಂ ತು ಪ್ರಶಸ್ತಾನಾಮನುಷ್ಠಾನಂ ಸುಖಾವಹಂ।
05038021c ತೇಷಾಮೇವಾನನುಷ್ಠಾನಂ ಪಶ್ಚಾತ್ತಾಪಕರಂ ಮಹತ್।।
ಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಸುಖವನ್ನು ತರುತ್ತದೆ. ಅವುಗಳನ್ನು ಕಾರ್ಯಗತಗೊಳಿಸದಿದ್ದರೆ ಮಹತ್ತರ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ.
05038022a ಸ್ಥಾನವೃದ್ಧಿಕ್ಷಯಜ್ಞಾಸ್ಯ ಷಾಡ್ಗುಣ್ಯವಿದಿತಾತ್ಮನಃ।
05038022c ಅನವಜ್ಞಾತಶೀಲಸ್ಯ ಸ್ವಾಧೀನಾ ಪೃಥಿವೀ ನೃಪ।।
ನೃಪ! ಯಾರು ಸ್ಥಾನ, ವೃದ್ಧಿ, ಕ್ಷಯಗಳ ಜ್ಞಾನಿಯೋ, ಆರುಗುಣಗಳನ್ನು ತಿಳಿದುಕೊಂಡಿದ್ದಾನೋ, ಕೀಳೆಂದು ಪರಿಗಣಿಸಲ್ಪಟ್ಟ ನಡತೆಯುಳ್ಳವನಲ್ಲವೋ ಅವನಿಗೆ ಪೃಥ್ವಿಯು ಸ್ವಾಧೀನವಾಗಿರುತ್ತದೆ.
05038023a ಅಮೋಘಕ್ರೋಧಹರ್ಷಸ್ಯ ಸ್ವಯಂ ಕೃತ್ಯಾನ್ವವೇಕ್ಷಿಣಃ।
05038023c ಆತ್ಮಪ್ರತ್ಯಯಕೋಶಸ್ಯ ವಸುಧೇಯಂ ವಸುಂಧರಾ।।
ಯಾವ ರಾಜ್ಯದ ರಾಜನು ಅವನ ಕ್ರೋಧ-ಹರ್ಷಗಳು ಫಲವನ್ನು ನೀಡುವಂತೆ ಮಾಡುತ್ತಾನೋ, ತಾನೇ ತನ್ನ ಕೆಲಸಗಳನ್ನು ಮಾಡುತ್ತಾನೋ, ಮತ್ತು ತಾನೇ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರುತ್ತಾನೋ ಅದು ಕೋಶವನ್ನು ಉಳಿಸಿಕೊಳ್ಳುತ್ತದೆ.
05038024a ನಾಮಮಾತ್ರೇಣ ತುಷ್ಯೇತ ಚತ್ರೇಣ ಚ ಮಹೀಪತಿಃ।
05038024c ಭೃತ್ಯೇಭ್ಯೋ ವಿಸೃಜೇದರ್ಥಾನ್ನೈಕಃ ಸರ್ವಹರೋ ಭವೇತ್।।
ಮಹೀಪತಿಯು ತನ್ನ ಹೆಸರು-ಗೌರವಗಳಿಂದ ಸಂತುಷ್ಟನಾಗಿರಬೇಕು. ಸಂಪತ್ತನ್ನು ತನ್ನ ಅವಲಂಬಿತರೊಂದಿಗೆ ಹಂಚಿಕೊಳ್ಳಬೇಕು. ಎಲ್ಲವನ್ನೂ ತಾನೊಬ್ಬನೇ ಇಟ್ಟುಕೊಳ್ಳಬಾರದು.
05038025a ಬ್ರಾಹ್ಮಣೋ ಬ್ರಾಹ್ಮಣಂ ವೇದ ಭರ್ತಾ ವೇದ ಸ್ತ್ರಿಯಂ ತಥಾ।
05038025c ಅಮಾತ್ಯಂ ನೃಪತಿರ್ವೇದ ರಾಜಾ ರಾಜಾನಮೇವ ಚ।।
ಬ್ರಾಹ್ಮನು ಬ್ರಾಹ್ಮಣನನ್ನು ತಿಳಿದಿರುತ್ತಾನೆ. ಹಾಗೆಯೇ ಗಂಡನು ಹೆಂಡತಿಯನ್ನು ತಿಳಿದಿರುತ್ತಾನೆ. ಅಮಾತ್ಯನು ನೃಪತಿಯನ್ನು ತಿಳಿದಿರುತ್ತಾನೆ ಮತ್ತು ರಾಜನೇ ರಾಜನನ್ನು ತಿಳಿದಿರುತ್ತಾನೆ.
05038026a ನ ಶತ್ರುರಂಕಮಾಪನ್ನೋ ಮೋಕ್ತವ್ಯೋ ವಧ್ಯತಾಂ ಗತಃ।
05038026c ಅಹತಾದ್ಧಿ ಭಯಂ ತಸ್ಮಾಜ್ಜಾಯತೇ ನಚಿರಾದಿವ।।
ವಧೆಗೆ ಅರ್ಹನಾಗಿರುವ ಶತ್ರುವನ್ನು ತನ್ನ ಪಕ್ಷಕ್ಕೆ ಬಂದಿದ್ದಾನೆಂದು ಬಿಡುಗಡೆಮಾಡಬಾರದು. ಅವನು ಸ್ವಲ್ಪವೇ ಸಮಯದಲ್ಲಿ ಭಯಕ್ಕೆ ಕಾರಣನಾಗಬಹುದು.
05038027a ದೈವತೇಷು ಚ ಯತ್ನೇನ ರಾಜಸು ಬ್ರಾಹ್ಮಣೇಷು ಚ।
05038027c ನಿಯಂತವ್ಯಃ ಸದಾ ಕ್ರೋಧೋ ವೃದ್ಧಬಾಲಾತುರೇಷು ಚ।।
ಯಾವಾಗಲೂ ದೇವರಮೇಲಿನ, ರಾಜನ ಮೇಲಿನ, ಬ್ರಾಹ್ಮಣರ ಮೇಲಿನ, ವೃದ್ಧರು ಮತ್ತು ಬಾಲಕರ ಮೇಲಿನ ಕೋಪವನ್ನು ನಿಯಂತ್ರಿಸಬೇಕು.
05038028a ನಿರರ್ಥಂ ಕಲಹಂ ಪ್ರಾಜ್ಞೋ ವರ್ಜಯೇನ್ಮೂಢಸೇವಿತಂ।
05038028c ಕೀರ್ತಿಂ ಚ ಲಭತೇ ಲೋಕೇ ನ ಚಾನರ್ಥೇನ ಯುಜ್ಯತೇ।।
ಪ್ರಾಜ್ಞನು ಮೂಢರು ನಡೆಸುವ ಅರ್ಥವಿಲ್ಲದ ವಿವಾದಗಳನ್ನು ವರ್ಜಿಸಬೇಕು. ಇದರಿಂದ ಲೋಕದಲ್ಲಿ ಅವನಿಗೆ ಕೀರ್ತಿಯು ದೊರೆಯುತ್ತದೆ ಮತ್ತು ಯಾವುದೇ ಅನರ್ಥವು ಬಂದೊದಗುವುದಿಲ್ಲ.
05038029a ಪ್ರಸಾದೋ ನಿಷ್ಫಲೋ ಯಸ್ಯ ಕ್ರೋಧಶ್ಚಾಪಿ ನಿರರ್ಥಕಃ।
05038029c ನ ತಂ ಭರ್ತಾರಮಿಚ್ಚಂತಿ ಷಂಢಂ ಪತಿಮಿವ ಸ್ತ್ರಿಯಃ।।
ಷಂಡನನ್ನು ಪತಿಯನ್ನಾಗಿ ಸ್ತ್ರೀಯರು ಹೇಗೆ ಬಯಸುವುದಿಲ್ಲವೋ ಹಾಗೆ ಯಾರ ಕರುಣೆಯು ನಿಷ್ಫಲವಾಗಿದೆಯೋ ಮತ್ತು ಕ್ರೋಧವು ನಿರರ್ಥಕವಾಗಿದೆಯೋ ಅಂಥವರನ್ನು ಒಡೆಯನನ್ನಾಗಿ ಇಚ್ಛಿಸುವುದಿಲ್ಲ.
05038030a ನ ಬುದ್ಧಿರ್ಧನಲಾಭಾಯ ನ ಜಾಡ್ಯಮಸಮೃದ್ಧಯೇ।
05038030c ಲೋಕಪರ್ಯಾಯವೃತ್ತಾಂತಂ ಪ್ರಾಜ್ಞೋ ಜಾನಾತಿ ನೇತರಃ।।
ಬುದ್ಧಿಯು ಯಾವಾಗಲೂ ಧನಲಾಭವನ್ನು ನೀಡುವುದಿಲ್ಲ. ಜಾಡ್ಯತನವು ಯಾವಾಗಲೂ ಅಸಮೃದ್ಧಿಯನ್ನುಂಟುಮಾಡುವುದಿಲ್ಲ. ಲೋಕದಲ್ಲಿ ನಡೆಯುವ ಏರು ಇಳಿತಗಳನ್ನು ಪಾಜ್ಞರು ತಿಳಿದಿರುತ್ತಾರೆ. ಇತರರಿಗೆ ಇದು ತಿಳಿದಿರುವುದಿಲ್ಲ.
05038031a ವಿದ್ಯಾಶೀಲವಯೋವೃದ್ಧಾನ್ಬುದ್ಧಿವೃದ್ಧಾಂಶ್ಚ ಭಾರತ।
05038031c ಧನಾಭಿಜನವೃದ್ಧಾಂಶ್ಚ ನಿತ್ಯಂ ಮೂಢೋಽವಮನ್ಯತೇ।।
ಭಾರತ! ಮೂಢರು ವಿದ್ಯಾಶೀಲರನ್ನು, ವಯೋವೃದ್ಧರನ್ನು, ಬುದ್ಧಿವೃದ್ಧರನ್ನು, ಧನ ಮತ್ತು ಅಭಿಜನ ವೃದ್ಧರನ್ನು ನಿತ್ಯವೂ ಅವಮಾನಿಸುತ್ತಾರೆ.
05038032a ಅನಾರ್ಯವೃತ್ತಮಪ್ರಾಜ್ಞಾಮಸೂಯಕಮಧಾರ್ಮಿಕಂ।
05038032c ಅನರ್ಥಾಃ ಕ್ಷಿಪ್ರಮಾಯಾಂತಿ ವಾಗ್ದುಷ್ಟಂ ಕ್ರೋಧನಂ ತಥಾ।।
ಅನಾರ್ಯನಂತೆ ನಡೆದುಕೊಳ್ಳುವ, ಪ್ರಜ್ಞೆಯಿಲ್ಲದಿರುವ, ಅಸೂಯೆಗೊಳ್ಳುವ, ಅಧಾರ್ಮಿಕ, ದುಷ್ಟಮಾತುಗಳನ್ನಾಡುವ, ಕೋಪಿಷ್ಟನಾದವನಿಗೆ ಅನರ್ಥಗಳು ಬೇಗ ಬೇಗನೇ ಬರುತ್ತಿರುತ್ತವೆ.
05038033a ಅವಿಸಂವಾದನಂ ದಾನಂ ಸಮಯಸ್ಯಾವ್ಯತಿಕ್ರಮಃ।
05038033c ಆವರ್ತಯಂತಿ ಭೂತಾನಿ ಸಮ್ಯಕ್ಪ್ರಣಿಹಿತಾ ಚ ವಾಕ್।
ಪ್ರಾಮಾಣಿಕತೆ, ದಾನ, ಒಪ್ಪಂದವನ್ನು ಅತಿಕ್ರಮಿಸದೇ ಇರುವುದು, ಮತ್ತು ಸರಿಯಾಗಿ ಮಾತನಾಡುವುದು ಇವು ಇತರರನ್ನು ಹತ್ತಿರ ಆಕರ್ಶಿಸುತ್ತವೆ.
05038034a ಅವಿಸಂವಾದಕೋ ದಕ್ಷಃ ಕೃತಜ್ಞೋ ಮತಿಮಾನೃಜುಃ।
05038034c ಅಪಿ ಸಂಕ್ಷೀಣಕೋಶೋಽಪಿ ಲಭತೇ ಪರಿವಾರಣಂ।।
ಪ್ರಾಮಾಣಿಕ, ದಕ್ಷ, ಕೃತಜ್ಞ, ಬುದ್ಧಿವಂತ, ಸತ್ಯಶೀಲನು, ಕಡಿಮೆ ಧನವನ್ನು ಹೊಂದಿದ್ದರೂ ಅನುಯಾಯಿಗಳನ್ನು ಪಡೆಯುತ್ತಾನೆ.
05038035a ಧೃತಿಃ ಶಮೋ ದಮಃ ಶೌಚಂ ಕಾರುಣ್ಯಂ ವಾಗನಿಷ್ಠುರಾ।
05038035c ಮಿತ್ರಾಣಾಂ ಚಾನಭಿದ್ರೋಹಃ ಸಪ್ತೈತಾಃ ಸಮಿಧಃ ಶ್ರಿಯಃ।।
ಧೃತಿ, ಶಾಂತಿ, ಆತ್ಮನಿಯಂತ್ರಣ, ಶುಚಿತ್ವ, ಕರುಣೆ, ನಿಷ್ಠೂರವಾಗಿ ಮಾತನಾಡದಿರುವುದು, ಮಿತ್ರರಿಗೆ ದ್ರೋಹಮಾಡದೇ ಇರುವುದು - ಈ ಏಳು ಸಂಪತ್ತಿಗೆ ಸಮಿಧಗಳಿದ್ದಂತೆ.
05038036a ಅಸಂವಿಭಾಗೀ ದುಷ್ಟಾತ್ಮಾ ಕೃತಘ್ನೋ ನಿರಪತ್ರಪಃ।
05038036c ತಾದೃಂ ನರಾಧಮೋ ಲೋಕೇ ವರ್ಜನೀಯೋ ನರಾಧಿಪ।।
ನರಾಧಿಪ! ಹಂಚಿಕೊಳ್ಳದೇ ಇರುವ, ದುಷ್ಟಾತ್ಮ, ಕೃತಘ್ನ, ನಾಚಿಕೆಯಿಲ್ಲದಿರುವ ನರಾಧಮನು ಲೋಕದಲ್ಲಿ ವರ್ಜನೀಯ.
05038037a ನ ಸ ರಾತ್ರೌ ಸುಖಂ ಶೇತೇ ಸಸರ್ಪ ಇವ ವೇಶ್ಮನಿ।
05038037c ಯಃ ಕೋಪಯತಿ ನಿರ್ದೋಷಂ ಸದೋಷೋಽಭ್ಯಂತರಂ ಜನಂ।।
ತನ್ನದೇ ದೋಷವಾಗಿದ್ದರೂ, ಮನೆಯೊಳಗಿರುವ ನಿರ್ದೋಷೀ ಜನರ ಮೇಲೆ ಕೋಪಗೊಳ್ಳುವವನು ಬಿಲದಲ್ಲಿರುವ ಹಾವಿನಂತೆ ರಾತ್ರಿಯಲ್ಲಿ ಸುಖವಾಗಿ ಮಲಗುವುದಿಲ್ಲ.
05038038a ಯೇಷು ದುಷ್ಟೇಷು ದೋಷಃ ಸ್ಯಾದ್ಯೋಗಕ್ಷೇಮಸ್ಯ ಭಾರತ।
05038038c ಸದಾ ಪ್ರಸಾದನಂ ತೇಷಾಂ ದೇವತಾನಾಮಿವಾಚರೇತ್।।
ಭಾರತ! ಯೋಗಕ್ಷೇಮಕ್ಕೆ ಬಾಧೆತರುವ ದುಷ್ಟರನ್ನು ದೇವತೆಗಳಂತೆ ಸದಾ ಮೆಚ್ಚಿಸುತ್ತಿರಬೇಕು.
05038039a ಯೇಽರ್ಥಾಃ ಸ್ತ್ರೀಷು ಸಮಾಸಕ್ತಾಃ ಪ್ರಥಮೋತ್ಪತಿತೇಷು ಚ।
05038039c ಯೇ ಚಾನಾರ್ಯಸಮಾಸಕ್ತಾಃ ಸರ್ವೇ ತೇ ಸಂಶಯಂ ಗತಾಃ।।
ಸ್ತ್ರೀಯರಲ್ಲಿ ಸಮಾಸಕ್ತರಾದವರಲ್ಲಿ, ಮೊದಲಿನಿಂದಲೂ ಪತಿತರಾದವರಲ್ಲಿ, ಅನಾರ್ಯರಲ್ಲಿ ಸಮಾಸಕ್ತರಾದವರಲ್ಲಿ ಇರುವ ಧನವೆಲ್ಲವೂ ಸಂಶಯವಾಗಿ ಹೋಗುತ್ತವೆ.
05038040a ಯತ್ರ ಸ್ತ್ರೀ ಯತ್ರ ಕಿತವೋ ಯತ್ರ ಬಾಲೋಽನುಶಾಸ್ತಿ ಚ।
05038040c ಮಜ್ಜಂತಿ ತೇಽವಶಾ ದೇಶಾ ನದ್ಯಾಮಶ್ಮಪ್ಲವಾ ಇವ।।
ಸ್ತ್ರೀ, ಮಗು ಅಥವಾ ಜೂಜುಗಾರನು ಆಳುತ್ತಿರುವ ದೇಶವು ಕಲ್ಲನ್ನು ಕಟ್ಟಿ ನದಿಯಲ್ಲಿ ಬಿಟ್ಟ ತೆಪ್ಪದಂತೆ ಮುಳುಗಿಹೋಗುತ್ತದೆ.
05038041a ಪ್ರಯೋಜನೇಷು ಯೇ ಸಕ್ತಾ ನ ವಿಶೇಷೇಷು ಭಾರತ।
05038041c ತಾನಹಂ ಪಂಡಿತಾನ್ಮನ್ಯೇ ವಿಶೇಷಾ ಹಿ ಪ್ರಸಂಗೇನಃ।
ಭಾರತ! ವಿಶೇಷವಾದವುಗಳಲ್ಲದೇ ಪ್ರಯೋಜನಗಳಲ್ಲಿ ಆಸಕ್ತಿಯಿರುವವರನ್ನು ನಾನು ಪಂಡಿತರೆಂದು ತಿಳಿಯುತ್ತೇನೆ. ಏಕೆಂದರೆ ವಿಶೇಷಗಳು ಪ್ರಾಸಂಗಿಕ.
05038042a ಯಂ ಪ್ರಶಂಸಂತಿ ಕಿತವಾ ಯಂ ಪ್ರಶಂಸಂತಿ ಚಾರಣಾಃ।
05038042c ಯಂ ಪ್ರಶಂಸಂತಿ ಬಂಧಕ್ಯೋ ನ ಸ ಜೀವತಿ ಮಾನವಃ।।
ಯಾರನ್ನು ಜೂಜುಗಾರರು ಪ್ರಶಂಸಿಸುತ್ತಾರೋ, ಯಾರನ್ನು ಚಾರಣರು ಪ್ರಶಂಸಿಸುತ್ತಾರೋ, ಯಾರನ್ನು ವೈಶ್ಯೆಯರು ಪ್ರಶಂಸಿಸುತ್ತಾರೋ ಅಂಥಹ ಮಾನವರು ಜೀವಿಸುವುದಿಲ್ಲ.
05038043a ಹಿತ್ವಾ ತಾನ್ಪರಮೇಷ್ವಾಸಾನ್ಪಾಂಡವಾನಮಿತೌಜಸಃ।
05038043c ಆಹಿತಂ ಭಾರತೈಶ್ವರ್ಯಂ ತ್ವಯಾ ದುರ್ಯೋಧನೇ ಮಹತ್।।
ಆ ಪರಮೇಷ್ವಾಸ, ಅಮಿತೌಜಸ ಪಾಂಡವರನ್ನು ತೊರೆದು ಭಾರತರ ಐಶ್ವರ್ಯವನ್ನು ದುರ್ಯೋಧನನಿಗಿತ್ತು ನೀನು ಮಹಾ ಅಹಿತವನ್ನು ಮಾಡುತ್ತಿದ್ದೀಯೆ.
05038044a ತಂ ದ್ರಕ್ಷ್ಯಸಿ ಪರಿಭ್ರಷ್ಟಂ ತಸ್ಮಾತ್ತ್ವಂ ನಚಿರಾದಿವ।
05038044c ಐಶ್ವರ್ಯಮದಸಮ್ಮೂಢಂ ಬಲಿಂ ಲೋಕತ್ರಯಾದಿವ।।
ಐಶ್ವರ್ಯಮದಸಮ್ಮೂಢ ಬಲಿಯು ಮೂರೂಲೋಕಗಳಿಂದ ಪರಿಭ್ರಷ್ಟನಾದಂತೆ ಇವನೂ ಕೂಡ ಬೇಗನೇ ಪರಿಭ್ರಷ್ಟನಾಗುವುದನ್ನು ನೀನು ನೋಡುತ್ತೀಯೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಅಷ್ಟ್ರತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೆಂಟನೆಯ ಅಧ್ಯಾಯವು.