037 ವಿದುರನೀತಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಪ್ರಜಾಗರ ಪರ್ವ

ಅಧ್ಯಾಯ 37

ಸಾರ

ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರೆಸಿದುದು (1-60).

05037001 ವಿದುರ ಉವಾಚ।
05037001a ಸಪ್ತದಶೇಮಾನ್ರಾಜೇಂದ್ರ ಮನುಃ ಸ್ವಾಯಂಭುವೋಽಬ್ರವೀತ್।
05037001c ವೈಚಿತ್ರವೀರ್ಯ ಪುರುಷಾನಾಕಾಶಂ ಮುಷ್ಟಿಭಿರ್ಘ್ನತಃ।।
05037002a ತಾನೇವೇಂದ್ರಸ್ಯ ಹಿ ಧನುರನಾಮ್ಯಂ ನಮತೋಽಬ್ರವೀತ್।
05037002c ಅಥೋ ಮರೀಚಿನಃ ಪಾದಾನನಾಮ್ಯಾನ್ನಮತಸ್ತಥಾ।।

ವಿದುರನು ಹೇಳಿದನು: “ರಾಜೇಂದ್ರ! ವೈಚಿತ್ರವೀರ್ಯ! ಸ್ವಾಯಂಭು ಮನುವು ಈ ಹದಿನೇಳು ತರಹದ ಪುರುಷರು ಆಕಾಶವನ್ನು ಮುಷ್ಟಿಯಿಂದ ಹೊಡೆಯುವವರಂತೆ, ಕಾಮನಬಿಲ್ಲನ್ನು ಬಗ್ಗಿಸಲು ಪ್ರಯತ್ನಿಸುವವರಂತೆ, ಮತ್ತು ಸೂರ್ಯನ ಕಿರಣಗಳನ್ನು ಹಿಡಿಯಲು ಪ್ರಯತ್ನಿಸುವವರಂತೆ ಎಂದು ಹೇಳಿದ್ದಾನೆ:

05037003a ಯಶ್ಚಾಶಿಷ್ಯಂ ಶಾಸತಿ ಯಶ್ಚ ಕುಪ್ಯತೇ ಯಶ್ಚಾತಿವೇಲಂ ಭಜತೇ ದ್ವಿಷಂತಂ।
05037003c ಸ್ತ್ರಿಯಶ್ಚ ಯೋಽರಕ್ಷತಿ ಭದ್ರಮಸ್ತು ತೇ ಯಶ್ಚಾಯಾಚ್ಯಂ ಯಾಚತಿ ಯಶ್ಚ ಕತ್ಥತೇ।।
05037004a ಯಶ್ಚಾಭಿಜಾತಃ ಪ್ರಕರೋತ್ಯಕಾರ್ಯಂ ಯಶ್ಚಾಬಲೋ ಬಲಿನಾ ನಿತ್ಯವೈರೀ।
05037004c ಅಶ್ರದ್ದಧಾನಾಯ ಚ ಯೋ ಬ್ರವೀತಿ ಯಶ್ಚಾಕಾಮ್ಯಂ ಕಾಮಯತೇ ನರೇಂದ್ರ।।
05037005a ವಧ್ವಾ ಹಾಸಂ ಶ್ವಶುರೋ ಯಶ್ಚ ಮನ್ಯತೇ ವಧ್ವಾ ವಸನ್ನುತ ಯೋ ಮಾನಕಾಮಃ।
05037005c ಪರಕ್ಷೇತ್ರೇ ನಿರ್ವಪತಿ ಯಶ್ಚ ಬೀಜಂ ಸ್ತ್ರಿಯಂ ಚ ಯಃ ಪರಿವದತೇಽತಿವೇಲಂ।।
05037006a ಯಶ್ಚೈವ ಲಬ್ಧ್ವಾ ನ ಸ್ಮರಾಮೀತ್ಯುವಾಚ ದತ್ತ್ವಾ ಚ ಯಃ ಕತ್ಥತಿ ಯಾಚ್ಯಮಾನಃ।
05037006c ಯಶ್ಚಾಸತಃ ಸಾಂತ್ವಮುಪಾಸತೀಹ ಏತೇಽನುಯಾಂತ್ಯನಿಲಂ ಪಾಶಹಸ್ತಾಃ।।

ನಿಯಂತ್ರಿಸಲು ಅಸಾಧ್ಯನಾದವನನ್ನು ನಿಯಂತ್ರಿಸಲು ಪ್ರಯತ್ನಿಸುವವನು, ಸ್ವಲ್ಪದರಲ್ಲಿಯೇ ತೃಪ್ತಿಗೊಳ್ಳುವವನು, ದ್ವೇಷಿಸುವವರನ್ನು ವಿನಯಪೂರ್ವಕವಾಗಿ ಮೆಚ್ಚಿಸುವವನು, ಸ್ತ್ರೀಯರ ದೌರ್ಬಲ್ಯತೆಯನ್ನು ಕಡಿಮೆಮಾಡಲು ಪ್ರಯತ್ನಿಸುವವನು, ಯಾರನ್ನು ಕೇಳಬಾರದೋ ಅವನಿಂದ ದಾನವನ್ನು ಕೇಳುವವನು, ಏನು ಮಾಡಿದರೂ ಅಭಿಮಾನದಿಂದ ಹೇಳಿಕೊಳ್ಳುವವನು, ಉತ್ತಮ ಕುಲದಲ್ಲಿ ಜನಿಸಿದ್ದರೂ ಅತ್ಯಾಚಾರದಲ್ಲಿ ತೊಡಗಿರುವವನು, ಅಬಲನಾಗಿದ್ದರೂ ನಿತ್ಯವೂ ಬಲಶಾಲಿಗಳೊಂದಿಗೆ ವೈರವನ್ನು ಬೆಳೆಸುವವನು, ಶ್ರದ್ಧೆಯಿಲ್ಲದೇ ಕೇಳುತ್ತಿರುವವನಿಗೆ ಹೇಳುವವನು, ಆಸೆಪಡಬಾರದುದನ್ನು ಆಸೆಪಡುವವನು, ಮಾವನಾಗಿದ್ದು ಸೊಸೆಯ ಹಾಸ್ಯವನ್ನು ಮಾಡುವವನು, ಸೊಸೆಯಿಂದ ಮನಸ್ಸಿನ ಕಾಮವನ್ನು ಪೂರೈಸಿಕೊಳ್ಳುವವನು, ಬೇರೆಯವರ ಕ್ಷೇತ್ರದಲ್ಲಿ ಬೀಜವನ್ನು ಬಿತ್ತುವವನು, ತನ್ನ ಪತ್ನಿಯ ನಡತೆಯನ್ನು ದೂರುವವನು, ಬೇರೆಯವರಿಂದ ತೆಗೆದುಕೊಂಡು ಮರೆತುಬಿಡುವವನು, ಕೇಳಿದವನಿಗೆ ದಾನವನ್ನಿತ್ತು ಸದಾ ಅದನ್ನೇ ಹೇಳಿಕೊಳ್ಳುವವನು, ಸುಳ್ಳನ್ನು ಸತ್ಯವಾಗಿಸಲು ಪ್ರಯತ್ನಿಸುವವನು.

05037007a ಯಸ್ಮಿನ್ಯಥಾ ವರ್ತತೇ ಯೋ ಮನುಷ್ಯಸ್ ತಸ್ಮಿಂಸ್ತಥಾ ವರ್ತಿತವ್ಯಂ ಸ ಧರ್ಮಃ।
05037007c ಮಾಯಾಚಾರೋ ಮಾಯಯಾ ವರ್ತಿತವ್ಯಃ ಸಾಧ್ವಾಚಾರಃ ಸಾಧುನಾ ಪ್ರತ್ಯುದೇಯಃ।।

ಮನುಷ್ಯನು ತನ್ನೊಂದಿಗೆ ಹೇಗೆ ನಡೆದುಕೊಳ್ಳುತ್ತಾನೋ ಹಾಗೆ ಇತರರೊಂದಿಗೆ ನಡೆದುಕೊಳ್ಳುವುದು ಧರ್ಮ. ಮೋಸಗಾರನೊಂದಿಗೆ ಮೋಸದಿಂದ ನಡೆದುಕೊಳ್ಳಬಹುದು. ಆದರೆ ಸಾಧುಗಳೊಂದಿಗೆ ಸಾಧ್ವಾಚಾರದಲ್ಲಿ ನಡೆದುಕೊಳ್ಳಬೇಕು.”

05037008 ಧೃತರಾಷ್ಟ್ರ ಉವಾಚ।
05037008a ಶತಾಯುರುಕ್ತಃ ಪುರುಷಃ ಸರ್ವವೇದೇಷು ವೈ ಯದಾ।
05037008c ನಾಪ್ನೋತ್ಯಥ ಚ ತತ್ಸರ್ವಮಾಯುಃ ಕೇನೇಹ ಹೇತುನಾ।।

ಧೃತರಾಷ್ಟ್ರನು ಹೇಳಿದನು: “ಮನುಷ್ಯನ ಆಯಸ್ಸು ನೂರುವರ್ಷಗಳೆಂದು ವೇದಗಳಲ್ಲಿ ಹೇಳಿದ್ದಾರೆ. ಆದರೆ ಎಲ್ಲರೂ ಅಷ್ಟು ವರ್ಷಗಳನ್ನು ತಲುಪುವುದಿಲ್ಲ. ಇದು ಯಾವ ಕಾರಣಕ್ಕಾಗಿ?”

05037009 ವಿದುರ ಉವಾಚ।
05037009a ಅತಿವಾದೋಽತಿಮಾನಶ್ಚ ತಥಾತ್ಯಾಗೋ ನರಾಧಿಪ।
05037009c ಕ್ರೋಧಶ್ಚಾತಿವಿವಿತ್ಸಾ ಚ ಮಿತ್ರದ್ರೋಹಶ್ಚ ತಾನಿ ಷಟ್।।
05037010a ಏತ ಏವಾಸಯಸ್ತೀಕ್ಷ್ಣಾಃ ಕೃಂತಂತ್ಯಾಯೂಂಷಿ ದೇಹಿನಾಂ।
05037010c ಏತಾನಿ ಮಾನವಾನ್ಘ್ನಂತಿ ನ ಮೃತ್ಯುರ್ಭದ್ರಮಸ್ತು ತೇ।।

ವಿದುರನು ಹೇಳಿದನು: “ಅತಿ ವಾದ, ಅತಿ ಮಾನ, ಅತಿಯಾದ ಆಹಾರ, ಕ್ರೋಧ, ಭೋಗ, ಮತ್ತು ಮಿತ್ರದ್ರೋಹ ಈ ಆರು ದೇಹಿಗಳ ಆಯಸ್ಸನ್ನು ಕತ್ತರಿಸುವ ತೀಕ್ಷ್ಣ ಖಡ್ಗಗಳು. ಇವು ಮಾನವನನ್ನು ಮೃತ್ಯುವಿನಿಂದ ಹೊಡೆಯುತ್ತವೆ ಎಂದು ತಿಳಿ. ನಿನಗೆ ಮಂಗಳವಾಗಲಿ!

05037011a ವಿಶ್ವಸ್ತಸ್ಯೈತಿ ಯೋ ದಾರಾನ್ಯಶ್ಚಾಪಿ ಗುರುತಲ್ಪಗಃ।
05037011c ವೃಷಲೀಪತಿರ್ದ್ವಿಜೋ ಯಶ್ಚ ಪಾನಪಶ್ಚೈವ ಭಾರತ।।
05037012a ಶರಣಾಗತಹಾ ಚೈವ ಸರ್ವೇ ಬ್ರಹ್ಮಹಣೈಃ ಸಮಾಃ।
05037012c ಏತೈಃ ಸಮೇತ್ಯ ಕರ್ತವ್ಯಂ ಪ್ರಾಯಶ್ಚಿತ್ತಮಿತಿ ಶ್ರುತಿಃ।।

ಭಾರತ! ವಿಶ್ವಾಸದಿಂದ ತನ್ನಲ್ಲಿಟ್ಟಿರುವ ಪರರ ಪತ್ನಿಯನ್ನು ಬಳಸುವವನು, ಗುರುವಿನ ಹಾಸಿಗೆಯನ್ನು ಉಲ್ಲಂಘಿಸುವವನು, ಶೂದ್ರಳನ್ನ್ನು ಮದುವೆಯಾಗುವ ಅಥವಾ ಕುಡಿಯುವ ಬ್ರಾಹ್ಮಣ, ಶರಣಾಗತರಾದವರನ್ನು ಕೊಲ್ಲುವವನು ಇವರೆಲ್ಲರೂ ಬ್ರಾಹ್ಮಣಹಂತಕರ ಸಮರು. ಇವರ ಜೊತೆಸೇರಿದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎಂದು ಶ್ರುತಿಗಳು ಹೇಳುತ್ತವೆ.

05037013a ಗೃಹೀ ವದಾನ್ಯೋಽನಪವಿದ್ಧವಾಕ್ಯಃ ಶೇಷಾನ್ನಭೋಕ್ತಾಪ್ಯವಿಹಿಂಸಕಶ್ಚ।
05037013c ನಾನರ್ಥಕೃತ್ತ್ಯಕ್ತಕಲಿಃ ಕೃತಜ್ಞಾಃ ಸತ್ಯೋ ಮೃದುಃ ಸ್ವರ್ಗಮುಪೈತಿ ವಿದ್ವಾನ್।।

ವಿವೇಕಿಗಳ ಮಾತುಗಳನ್ನು ಸ್ವೀಕರಿಸುವ, ಪಿತೃ-ದೇವತೆ-ಅತಿಥಿಗಳಿಗೆ ಕೊಟ್ಟು ಉಳಿದ ಆಹಾರವನ್ನು ಸೇವಿಸುವ, ಯಾರನ್ನೂ ಹಿಂಸಿಸದ, ಯಾರನ್ನೂ ದ್ವೇಷಿಸದ, ಕೃತಜ್ಞ, ಸತ್ಯವಂತ, ಮತ್ತು ಮೃದು, ವಿದ್ವಾಂಸನು ಸ್ವರ್ಗವನ್ನು ಸೇರುತ್ತಾನೆ.

05037014a ಸುಲಭಾಃ ಪುರುಷಾ ರಾಜನ್ಸತತಂ ಪ್ರಿಯವಾದಿನಃ।
05037014c ಅಪ್ರಿಯಸ್ಯ ತು ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ।।

ರಾಜನ್! ಸತತವೂ ಪ್ರಿಯವಾದುದನ್ನೇ ಹೇಳುವ ಪುರುಷರು ಬಹಳ ದೊರೆಯುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಔಷಧಯುಕ್ತವಾದುದನ್ನು ಹೇಳುವವರೂ ಮತ್ತು ಕೇಳುವವರೂ ದುರ್ಲಭ.

05037015a ಯೋ ಹಿ ಧರ್ಮಂ ವ್ಯಪಾಶ್ರಿತ್ಯ ಹಿತ್ವಾ ಭರ್ತುಃ ಪ್ರಿಯಾಪ್ರಿಯೇ।
05037015c ಅಪ್ರಿಯಾಣ್ಯಾಹ ಪಥ್ಯಾನಿ ತೇನ ರಾಜಾ ಸಹಾಯವಾನ್।।

ಧರ್ಮವನ್ನು ಆಶ್ರಯಿಸಿ ಪ್ರಿಯ-ಅಪ್ರಿಯಗಳನ್ನು ಗಮನಿಸದೇ ಅಪ್ರಿಯವಾದರೂ ಔಷಧಯುಕ್ತವಾದುದನ್ನು ಹೇಳುವ ಸೇವಕನೇ ರಾಜನಿಗೆ ಸಹಾಯ ಮಾಡುವವನು.

05037016a ತ್ಯಜೇತ್ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್।
05037016c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್।।

ಕುಲಕ್ಕಾಗಿ ವ್ಯಕ್ತಿಯನ್ನು ತ್ಯಜಿಸಬೇಕು; ಗ್ರಾಮಕ್ಕಾಗಿ ಕುಲವನ್ನು ತ್ಯಜಿಸಬೇಕು, ಸಮಾಜಕ್ಕಾಗಿ ಗ್ರಾಮವನ್ನು ತ್ಯಜಿಸಬೇಕು ಮತ್ತು ಆತ್ಮಕ್ಕಾಗಿ ಪೃಥ್ವಿಯನ್ನೇ ತ್ಯಜಿಸಬೇಕು.

05037017a ಆಪದರ್ಥಂ ಧನಂ ರಕ್ಷೇದ್ದಾರಾನ್ರಕ್ಷೇದ್ಧನೈರಪಿ।
05037017c ಆತ್ಮಾನಂ ಸತತಂ ರಕ್ಷೇದ್ದಾರೈರಪಿ ಧನೈರಪಿ।।

ಆಪತ್ತಿಗೆ ಬೇಕೆಂದು ಧನವನ್ನು ರಕ್ಷಿಸಬೇಕು, ಧನದಿಂದ ಪತ್ನಿಯನ್ನು ರಕ್ಷಿಸಬೇಕು. ಪತ್ನಿ ಮತ್ತು ಧನಗಳೆರಡರಿಂದಲೂ ಆತ್ಮನನ್ನು ಸತತವಾಗಿ ರಕ್ಷಿಸಿಕೊಳ್ಳಬೇಕು.

05037018a ಉಕ್ತಂ ಮಯಾ ದ್ಯೂತಕಾಲೇಽಪಿ ರಾಜನ್ ನೈವಂ ಯುಕ್ತಂ ವಚನಂ ಪ್ರಾತಿಪೀಯ।
05037018c ತದೌಷಧಂ ಪಥ್ಯಮಿವಾತುರಸ್ಯ ನ ರೋಚತೇ ತವ ವೈಚಿತ್ರವೀರ್ಯ।।

ರಾಜನ್! ದ್ಯೂತದ ಸಮಯದಲ್ಲಿ ಕೂಡ ಅದು ಸರಿಯಲ್ಲವೆಂದು ನಾನು ಹೇಳಿದ್ದೆ. ಆದರೆ, ವೈಚಿತ್ರವೀರ್ಯ! ರೋಗಿಯು ಔಷಧಿಯು ಒಳ್ಳೆಯದಾದರೂ ಬೇಡವೆನ್ನುವಂತೆ ನಿನಗೆ ಅದು ಹಿಡಿಸಲಿಲ್ಲ.

05037019a ಕಾಕೈರಿಮಾಂಶ್ಚಿತ್ರಬರ್ಹಾನ್ಮಯೂರಾನ್ ಪರಾಜೈಷ್ಠಾಃ ಪಾಂಡವಾನ್ಧಾರ್ತರಾಷ್ಟ್ರೈಃ।
05037019c ಹಿತ್ವಾ ಸಿಂಹಾನ್ಕ್ರೋಷ್ಟುಕಾನ್ಗೂಹಮಾನಃ ಪ್ರಾಪ್ತೇ ಕಾಲೇ ಶೋಚಿತಾ ತ್ವಂ ನರೇಂದ್ರ।।

ಕಾಗೆಗಳಂತಿರುವ ಧಾರ್ತರಾಷ್ಟ್ರರನ್ನು ಬಳಸಿ ನವಿಲುಗಳಂತಿರುವ ಪಾಂಡವರನ್ನು ಗೆದ್ದು ಹೊರಗೋಡಿಸಿದ್ದೀಯೆ. ನರೇಂದ್ರ! ಸಿಂಹಗಳನ್ನು ತೊರೆದು ನರಿಗಳನ್ನು ಒಟ್ಟುಗೂಡಿಸಿಕೊಂಡು ನೀನು ಕಾಲವು ಪ್ರಾಪ್ತವಾದಾಗ ಶೋಕಿಸುತ್ತೀಯೆ!

05037020a ಯಸ್ತಾತ ನ ಕ್ರುಧ್ಯತಿ ಸರ್ವಕಾಲಂ ಭೃತ್ಯಸ್ಯ ಭಕ್ತಸ್ಯ ಹಿತೇ ರತಸ್ಯ।
05037020c ತಸ್ಮಿನ್ಭೃತ್ಯಾ ಭರ್ತರಿ ವಿಶ್ವಸಂತಿ ನ ಚೈನಮಾಪತ್ಸು ಪರಿತ್ಯಜಂತಿ।।

ಅಯ್ಯಾ! ಯಾರು ಎಲ್ಲ ಕಾಲದಲ್ಲಿಯೂ ಸಿಟ್ಟಿಗೇಳುವುದಿಲ್ಲವೋ ಅಂಥಹ ಒಡೆಯನ ಹಿತದಲ್ಲಿ ಸೇವಕರು ನಿರತರಾಗಿರುತ್ತಾರೆ. ಅಂಥಹ ಒಡೆಯನ ಮೇಲೆ ಸೇವಕರು ವಿಶ್ವಾಸವನ್ನಿಡುತ್ತಾರೆ ಮತ್ತು ಆಪತ್ತುಗಳು ಬಂದರೂ ಅವರನನ್ನು ಬಿಟ್ಟು ಹೋಗುವುದಿಲ್ಲ.

05037021a ನ ಭೃತ್ಯಾನಾಂ ವೃತ್ತಿಸಂರೋಧನೇನ ಬಾಹ್ಯಂ ಜನಂ ಸಂಜಿಘೃಕ್ಷೇದಪೂರ್ವಂ।
05037021c ತ್ಯಜಂತಿ ಹ್ಯೇನಮುಚಿತಾವರುದ್ಧಾಃ ಸ್ನಿಗ್ಧಾ ಹ್ಯಮಾತ್ಯಾಃ ಪರಿಹೀನಭೋಗಾಃ।।

ಸೇವಕರ ಸಂಬಳವನ್ನು ನಿಲ್ಲಿಸಿ ಹೊರಗಿನ ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸಬಾರದು. ಏಕೆಂದರೆ ಮೊದಲು ಜೊತೆಗಿದ್ದ ಸೇವಕರು ಸುಖವಿಲ್ಲದಿರುವಾಗ ಬಿಟ್ಟುಹೋಗುತ್ತಾರೆ.

05037022a ಕೃತ್ಯಾನಿ ಪೂರ್ವಂ ಪರಿಸಂಖ್ಯಾಯ ಸರ್ವಾಣ್ಯ್ ಆಯವ್ಯಯಾವನುರೂಪಾಂ ಚ ವೃತ್ತಿಂ।
05037022c ಸಂಗೃಹ್ಣೀಯಾದನುರೂಪಾನ್ಸಹಾಯಾನ್ ಸಹಾಯಸಾಧ್ಯಾನಿ ಹಿ ದುಷ್ಕರಾಣಿ।।

ಮಾಡಬೇಕಾದುದೆಲ್ಲವನ್ನೂ ಮೊದಲೇ ಆಲೋಚಿಸಿ, ಆದಾಯ ಖರ್ಚುಗಳಿಗೆ ಅನುರೂಪವಾದ ವೃತ್ತಿಯನ್ನು ಆರಿಸಿಕೊಂಡು, ಅನುರೂಪರಾದ ಸಹಾಯಕರನ್ನು ಒಟ್ಟುಗೂಡಿಸಿಕೊಳ್ಳಬೇಕು. ಏಕೆಂದರೆ ದುಷ್ಕರವಾದವುಗಳನ್ನು ಸಾಧಿಸಲು ಸಹಾಯಕರು ಬೇಕು.

05037023a ಅಭಿಪ್ರಾಯಂ ಯೋ ವಿದಿತ್ವಾ ತು ಭರ್ತುಃ ಸರ್ವಾಣಿ ಕಾರ್ಯಾಣಿ ಕರೋತ್ಯತಂದ್ರೀಃ।
05037023c ವಕ್ತಾ ಹಿತಾನಾಮನುರಕ್ತ ಆರ್ಯಃ ಶಕ್ತಿಜ್ಞಾ ಆತ್ಮೇವ ಹಿ ಸೋಽನುಕಂಪ್ಯಃ।।

ಒಡೆಯನ ಅಭಿಪ್ರಾಯವನ್ನು ತಿಳಿದುಕೊಂಡು ಆಯಾಸಗೊಳ್ಳದೇ ಎಲ್ಲ ಕೆಲಸಗಳನ್ನೂ ಮಾಡಿಕೊಡುವ, ಹಿತವಾದ ಮಾತುಗಳನ್ನಾಡುವ, ಅನುರಕ್ತನಾಗಿರುವ, ಆರ್ಯನಾಗಿರುವ, ಮತ್ತು ತನ್ನ ಶಕ್ತಿಯನ್ನು ತಿಳಿದುಕೊಂಡಿರುವ ಸೇವಕನನ್ನು ತನ್ನ ಹಾಗೆಯೇ ಅನುಕಂಪದಿಂದ ನೋಡಿಕೊಳ್ಳಬೇಕು.

05037024a ವಾಕ್ಯಂ ತು ಯೋ ನಾದ್ರಿಯತೇಽನುಶಿಷ್ಟಃ ಪ್ರತ್ಯಾಹ ಯಶ್ಚಾಪಿ ನಿಯುಜ್ಯಮಾನಃ।
05037024c ಪ್ರಜ್ಞಾಭಿಮಾನೀ ಪ್ರತಿಕೂಲವಾದೀ ತ್ಯಾಜ್ಯಃ ಸ ತಾದೃಕ್ತ್ವರಯೈವ ಭೃತ್ಯಃ।।

ಹೇಳಿದರೂ ಗಮನಿಸದ, ನೀಡಿದ ಆಜ್ಞೆಗೆ ಪ್ರತ್ಯುತ್ತರ ನೀಡುವ, ತನಗೇ ತಿಳಿದಿದೆ ಎಂದು ತಿಳಿದು ತಿರುಗಿ ವಾದಿಸುವ ಸೇವಕನನ್ನು ತಡಮಾಡದೇ ತೆಗೆದು ಹಾಕಬೇಕು.

05037025a ಅಸ್ತಬ್ಧಮಕ್ಲೀಬಮದೀರ್ಘಸೂತ್ರಂ ಸಾನುಕ್ರೋಶಂ ಶ್ಲಕ್ಷ್ಣಮಹಾರ್ಯಮನ್ಯೈಃ।
05037025c ಅರೋಗಜಾತೀಯಮುದಾರವಾಕ್ಯಂ ದೂತಂ ವದಂತ್ಯಷ್ಟಗುಣೋಪಪನ್ನಂ।।

ದೂತನು ಈ ಎಂಟು ಗುಣಗಳನ್ನು ಹೊಂದಿರಬೇಕೆಂದು ಹೇಳುತ್ತಾರೆ: ಅಕಳಂಕನಾಗಿರಬೇಕು, ದುರ್ಬಲನಾಗಿರಬಾರದು, ನಿಧಾನಿಯಾಗಿರಬಾರದು, ಅನುಕಂಪನಾಗಿರಬೇಕು, ಸುಸಂಕೃತನಾಗಿರಬೇಕು, ಆರ್ಯರ ಮಾನನೀಯನಾಗಿರಬೇಕು, ಅರೋಗಿಯಾಗಿರಬೇಕು, ಮತ್ತು ಮಾತಿನಲ್ಲಿ ಉದಾರಿಯಾಗಿರಬೇಕು.

05037026a ನ ವಿಶ್ವಾಸಾಜ್ಜಾತು ಪರಸ್ಯ ಗೇಹಂ ಗಚ್ಚೇನ್ನರಶ್ಚೇತಯಾನೋ ವಿಕಾಲೇ।
05037026c ನ ಚತ್ವರೇ ನಿಶಿ ತಿಷ್ಠೇನ್ನಿಗೂಢೋ ನ ರಾಜನ್ಯಾಂ ಯೋಷಿತಂ ಪ್ರಾರ್ಥಯೀತ।।

ವಿಕಾಲದಲ್ಲಿ ಪರರ ಮನೆಗೆ ಹೋಗುವ, ರಾತ್ರಿವೇಳೆಯಲ್ಲಿ ಚೌಕದಲ್ಲಿ ಅಡಗಿರುವ, ಮತ್ತು ರಾಜಕನ್ಯೆಯನ್ನು ಬಯಸುವ ವಿಶ್ವಾಸವನ್ನು ಬದ್ಧಿಯಿದ್ದ ಯಾರೂ ತಳೆಯುವುದಿಲ್ಲ.

05037027a ನ ನಿಹ್ನವಂ ಸತ್ರಗತಸ್ಯ ಗಚ್ಚೇತ್ ಸಂಸೃಷ್ಟಮಂತ್ರಸ್ಯ ಕುಸಂಗತಸ್ಯ।
05037027c ನ ಚ ಬ್ರೂಯಾನ್ನಾಶ್ವಸಾಮಿ ತ್ವಯೀತಿ ಸಕಾರಣಂ ವ್ಯಪದೇಶಂ ತು ಕುರ್ಯಾತ್।।

ವೇಷಮರೆಸಿಕೊಂಡವರು, ಯಾರ ಸಲಹೆಯು ಮಿಶ್ರಿತವಾಗಿದೆಯೋ, ಯಾರು ಕೆಟ್ಟವರ ಸಹವಾಸದಲ್ಲಿದ್ದಾರೋ, ಅವರಿಗೆ ವಿರುದ್ಧವಾಗಿ ಮಾತನಾಡಬಾರದು. ಅವರಲ್ಲಿ ವಿಶ್ವಾಸವಿಲ್ಲವೆಂದು ಹೇಳಬಾರದು. ಆದರೆ ಬೇರೆ ಏನಾದರೂ ಕಾರಣವನ್ನು ಅಥವಾ ಸನ್ನಿವೇಶವನ್ನು ಹೇಳಬೇಕು.

05037028a ಘೃಣೀ ರಾಜಾ ಪುಂಶ್ಚಲೀ ರಾಜಭೃತ್ಯಃ ಪುತ್ರೋ ಭ್ರಾತಾ ವಿಧವಾ ಬಾಲಪುತ್ರಾ।
05037028c ಸೇನಾಜೀವೀ ಚೋದ್ಧೃತಭಕ್ತ ಏವ ವ್ಯವಹಾರೇ ವೈ ವರ್ಜನೀಯಾಃ ಸ್ಯುರೇತೇ।।

ಇವರೊಂದಿಗೆ ವ್ಯವಹಾರವು ವರ್ಜನೀಯ: ಕರುಣಿ, ರಾಜ, ವೇಶ್ಯೆ, ರಾಜಸೇವಕ, ಮಗ, ಸಹೋದರ, ಬಾಲಕ ಮಗನಿರುವ ವಿಧವೆ, ಸೈನಿಕ, ಮತ್ತು ತುಂಬಾ ಅನುಯಾಯಿಗಳಿರುವವರು.

05037029a ಗುಣಾ ದಶ ಸ್ನಾನಶೀಲಂ ಭಜಂತೇ ಬಲಂ ರೂಪಂ ಸ್ವರವರ್ಣಪ್ರಶುದ್ಧಿಃ।
05037029c ಸ್ಪರ್ಶಶ್ಚ ಗಂಧಶ್ಚ ವಿಶುದ್ಧತಾ ಚ ಶ್ರೀಃ ಸೌಕುಮಾರ್ಯಂ ಪ್ರವರಾಶ್ಚ ನಾರ್ಯಃ।।

ಸ್ನಾನ ಮಾಡುವವನನ್ನು ಈ ಹತ್ತು ಗುಣಗಳು ಅಲಂಕರಿಸುತ್ತವೆ: ಬಲ, ರೂಪ, ಸ್ವರ-ವರ್ಣ ಪ್ರಶುದ್ಧಿ, ಸ್ಪರ್ಷ-ಗಂಧಗಳ ವಿಶುದ್ಧತೆ, ಅದೃಷ್ಟ, ಯೌವನ, ಮತ್ತು ಸುಂದರ ಸ್ತ್ರೀಯರು.

05037030a ಗುಣಾಶ್ಚ ಷಣ್ಮಿತಭುಕ್ತಂ ಭಜಂತೇ ಆರೋಗ್ಯಮಾಯುಶ್ಚ ಸುಖಂ ಬಲಂ ಚ।
05037030c ಅನಾವಿಲಂ ಚಾಸ್ಯ ಭವೇದಪತ್ಯಂ ನ ಚೈನಮಾದ್ಯೂನ ಇತಿ ಕ್ಷಿಪಂತಿ।।

ಕಡಿಮೆ ಊಟಮಾಡುವವನಿಗೆ ಈ ಆರು ಗುಣಗಳು ಇರುತ್ತವೆ: ಆರೋಗ್ಯ, ಆಯುಷ್ಯ, ಸುಖ, ಬಲ, ಅವನಲ್ಲಿ ಹುಟ್ಟುವವರಿಗೂ ರೋಗಗಳಿರುವುದಿಲ್ಲ ಮತ್ತು ಅವನನ್ನು ಯಾರೂ ತಿಂಡಿಪೋತನೆಂದು ದೂರುವುದಿಲ್ಲ.

05037031a ಅಕರ್ಮಶೀಲಂ ಚ ಮಹಾಶನಂ ಚ ಲೋಕದ್ವಿಷ್ಟಂ ಬಹುಮಾಯಂ ನೃಶಂಸಂ।
05037031c ಅದೇಶಕಾಲಜ್ಞಾಮನಿಷ್ಟವೇಷಂ ಏತಾನ್ಗೃಹೇ ನ ಪ್ರತಿವಾಸಯೀತ।।

ಸೋಮಾರಿಯಾದವನನ್ನು, ತುಂಬಾ ಊಟಮಾಡುವವನನ್ನು, ಬಹುಮಂದಿಗೆ ಇಷ್ಟವಾಗಿರದವನನ್ನು, ಮೋಸಗಾರನನ್ನು, ಸುಳ್ಳುಹೇಳುವವನನ್ನು, ದೇಶ-ಕಾಲಗಳ ಜ್ಞಾನವಿಲ್ಲದಿರುವವನ್ನು ಮನೆಯಲ್ಲಿ ವಾಸಕ್ಕೆ ಇಟ್ಟುಕೊಳ್ಳಬಾರದು.

05037032a ಕದರ್ಯಮಾಕ್ರೋಶಕಮಶ್ರುತಂ ಚ ವರಾಕಸಂಭೂತಮಮಾನ್ಯಮಾನಿನಂ।
05037032c ನಿಷ್ಠೂರಿಣಂ ಕೃತವೈರಂ ಕೃತಘ್ನಂ ಏತಾನ್ಭೃಶಾರ್ತೋಽಪಿ ನ ಜಾತು ಯಾಚೇತ್।।

ತುಂಬಾ ಕಷ್ಟದಲ್ಲಿದ್ದರೂ ಇವರ ಸಹಾಯವನ್ನು ಕೇಳಬಾರದು: ಜಿಪುಣ, ಇನ್ನೊಬ್ಬರಿಗೆ ಅಪವಾದ ಹೊರೆಸುವವನು, ವಿದ್ಯೆಯಿಲ್ಲದವನು, ನಿಷ್ಠೂರಿ, ವೈರವನ್ನು ಬೆಳೆಸುವವನು, ಮತ್ತು ಕೃತಘ್ನ.

05037033a ಸಂಕ್ಲಿಷ್ಟಕರ್ಮಾಣಮತಿಪ್ರವಾದಂ ನಿತ್ಯಾನೃತಂ ಚಾದೃಢಭಕ್ತಿಕಂ ಚ।
05037033c ವಿಕೃಷ್ಟರಾಗಂ ಬಹುಮಾನಿನಂ ಚಾಪ್ಯ್ ಏತಾನ್ನ ಸೇವೇತ ನರಾಧಮಾನ್ಷಟ್।।

ಈ ಆರು ಪ್ರಕಾರದ ನರಾಧಮರ ಸೇವೆ ಮಾಡಬಾರದು: ಸಂಕ್ಲಿಷ್ಟಕರ್ಮಿಗಳು, ಅತಿಪ್ರವಾದಿಗಳು, ನಿತ್ಯವೂ ಸುಳ್ಳುಹೇಳುವವರು, ದೃಢಭಕ್ತಿಯಿಲ್ಲದವರು, ವಿಕೃಷ್ಟರಾಗಿಗಳು, ಮತ್ತು ಬಹು ಸೊಕ್ಕಿನವರು.

05037034a ಸಹಾಯಬಂಧನಾ ಹ್ಯರ್ಥಾಃ ಸಹಾಯಾಶ್ಚಾರ್ಥಬಂಧನಾಃ।
05037034c ಅನ್ಯೋನ್ಯಬಂಧನಾವೇತೌ ವಿನಾನ್ಯೋನ್ಯಂ ನ ಸಿಧ್ಯತಃ।।

ಲಾಭವು ಸಹಾಯವನ್ನು ಆಧರಿಸಿದೆ; ಸಹಾಯವು ಲಾಭವನ್ನು ಆಧರಿಸಿದೆ. ಅವೆರಡೂ ಅನ್ಯೋನ್ಯರನ್ನು ಅವಲಂಬಿಸಿವೆ, ಮತ್ತು ಒಂದಿಲ್ಲದೇ ಇನ್ನೊಂದು ಸಿದ್ಧಿಯಾಗುವುದಿಲ್ಲ.

05037035a ಉತ್ಪಾದ್ಯ ಪುತ್ರಾನನೃಣಾಂಶ್ಚ ಕೃತ್ವಾ ವೃತ್ತಿಂ ಚ ತೇಭ್ಯೋಽನುವಿಧಾಯ ಕಾಂ ಚಿತ್।
05037035c ಸ್ಥಾನೇ ಕುಮಾರೀಃ ಪ್ರತಿಪಾದ್ಯ ಸರ್ವಾ ಅರಣ್ಯಸಂಸ್ಥೋ ಮುನಿವದ್ಬುಭೂಷೇತ್।।

ಪುತ್ರರಿಗೆ ಜನ್ಮವಿತ್ತು, ಅವರ ಋಣವನ್ನು ಪೂರೈಸಿ, ಅವರನ್ನು ಯಾವುದಾದರೂ ವೃತ್ತಿಯಲ್ಲಿ ತೊಡಗಿಸಿ, ಎಲ್ಲ ಕುಮಾರಿಯರನ್ನು ಉತ್ತಮ ಸ್ಥಾನಗಳಿಗೆ ಕೊಟ್ಟು, ಅರಣ್ಯಕ್ಕೆ ಹೋಗಿ ಮುನಿಗಳಂತೆ ವಾಸಿಸಬೇಕು.

05037036a ಹಿತಂ ಯತ್ಸರ್ವಭೂತಾನಾಮಾತ್ಮನಶ್ಚ ಸುಖಾವಹಂ।
05037036c ತತ್ಕುರ್ಯಾದೀಶ್ವರೋ ಹ್ಯೇತನ್ಮೂಲಂ ಧರ್ಮಾರ್ಥಸಿದ್ಧಯೇ।।

ಸರ್ವಭೂತಗಳಿಗೆ ಯಾವುದು ಹಿತವೋ ಮತ್ತು ತನಗೆ ಯಾವುದು ಸುಖವನ್ನು ತರುತ್ತದೆಯೋ ಅದನ್ನು ರಾಜನು ಕೈಗೊಳ್ಳಬೇಕು. ಏಕೆಂದರೆ, ಅದೇ ಧರ್ಮಾರ್ಥಸಿದ್ಧಿಗೆ ಮೂಲ.

05037037a ಬುದ್ಧಿಃ ಪ್ರಭಾವಸ್ತೇಜಶ್ಚ ಸತ್ತ್ವಮುತ್ಥಾನಮೇವ ಚ।
05037037c ವ್ಯವಸಾಯಶ್ಚ ಯಸ್ಯ ಸ್ಯಾತ್ತಸ್ಯಾವೃತ್ತಿಭಯಂ ಕುತಃ।।

ಯಾರಲ್ಲಿ ಬುದ್ಧಿ, ಪ್ರಭಾವ, ತೇಜಸ್ಸು, ಸತ್ಯ, ಏಳಿಗೆ, ದುಡಿಮೆಗಳಿವೆಯೋ ಅವನಿಗೆ ವೃತ್ತಿಯ ಕುರಿತು ಯಾವ ಭಯು?

05037038a ಪಶ್ಯ ದೋಷಾನ್ಪಾಂಡವೈರ್ವಿಗ್ರಹೇ ತ್ವಂ ಯತ್ರ ವ್ಯಥೇರನ್ನಪಿ ದೇವಾಃ ಸಶಕ್ರಾಃ।
05037038c ಪುತ್ರೈರ್ವೈರಂ ನಿತ್ಯಮುದ್ವಿಗ್ನವಾಸೋ ಯಶಃಪ್ರಣಾಶೋ ದ್ವಿಷತಾಂ ಚ ಹರ್ಷಃ।।

ಯಾರಿಂದ ದೇವತೆಗಳೂ ಶಕ್ರನೂ ಹೆದರುತ್ತಾರೋ ಅಂಥಹ ಪಾಂಡವರೊಂದಿಗೆ ಜಗಳವಾಡುವುದರ ದುಷ್ಪರಿಣಾಮದ ಕುರಿತು ಯೋಚಿಸು: ಪುತ್ರರೊಂದಿಗೆ ವೈರ, ನಿತ್ಯವೂ ಉದ್ವಿಗ್ನತೆಯ ಬದುಕು, ಕೀರ್ತಿಯ ನಾಶ ಮತ್ತು ಶತ್ರುಗಳಿಗೆ ಸಂತೋಷ.

05037039a ಭೀಷ್ಮಸ್ಯ ಕೋಪಸ್ತವ ಚೇಂದ್ರಕಲ್ಪ ದ್ರೋಣಸ್ಯ ರಾಜ್ಞಾಶ್ಚ ಯುಧಿಷ್ಠಿರಸ್ಯ।
05037039c ಉತ್ಸಾದಯೇಲ್ಲೋಕಮಿಮಂ ಪ್ರವೃದ್ಧಃ ಶ್ವೇತೋ ಗ್ರಹಸ್ತಿರ್ಯಗಿವಾಪತನ್ಖೇ।।

ಇಂದ್ರಕಲ್ಪ ರಾಜ! ಭೀಷ್ಮನ, ನಿನ್ನ, ದ್ರೋಣನ ಮತ್ತು ರಾಜ ಯುಧಿಷ್ಠಿರನ ಕೋಪವು ಅತಿಯಾಗಿ ಹೆಚ್ಚಾದರೆ ಅದು ಆಕಾಶದಲ್ಲಿರುವ ಬಿಳಿಯ ಧೂಮಕೇತುವಿನಂತೆ ಈ ಲೋಕವನ್ನೇ ಉರುಳಿಸಿಬಿಡುತ್ತದೆ.

05037040a ತವ ಪುತ್ರಶತಂ ಚೈವ ಕರ್ಣಃ ಪಂಚ ಚ ಪಾಂಡವಾಃ।
05037040c ಪೃಥಿವೀಮನುಶಾಸೇಯುರಖಿಲಾಂ ಸಾಗರಾಂಬರಾಂ।।

ನಿನ್ನ ನೂರು ಮಕ್ಕಳು, ಕರ್ಣ ಮತ್ತು ಐವರು ಪಾಂಡವರು ಸಾಗರವೇ ಉಡುಪಾಗಿರುವ ಈ ಅಖಿಲ ಪೃಥ್ವಿಯನ್ನು ಆಳಬಲ್ಲರು.

05037041a ಧಾರ್ತರಾಷ್ಟ್ರಾ ವನಂ ರಾಜನ್ವ್ಯಾಘ್ರಾಃ ಪಾಂಡುಸುತಾ ಮತಾಃ।
05037041c ಮಾ ವನಂ ಚಿಂಧಿ ಸವ್ಯಾಘ್ರಂ ಮಾ ವ್ಯಾಘ್ರಾನ್ನೀನಶೋ ವನಾತ್।।

ರಾಜನ್! ಧಾರ್ತರಾಷ್ಟ್ರರು ವನವಿದ್ದಂತೆ ಮತ್ತು ಪಾಂಡುಸುತರು ವ್ಯಾಘ್ರಗಳು. ವ್ಯಾಘ್ರಗಳಿರುವ ಕಾಡನ್ನು ಕಡಿಯಬೇಡ; ಹುಲಿಗಳನ್ನು ಕಾಡಿನಿಂದ ಓಡಿಸಬೇಡ.

05037042a ನ ಸ್ಯಾದ್ವನಮೃತೇ ವ್ಯಾಘ್ರಾನ್ವ್ಯಾಘ್ರಾ ನ ಸ್ಯುರೃತೇ ವನಂ।
05037042c ವನಂ ಹಿ ರಕ್ಷ್ಯತೇ ವ್ಯಾಘ್ರೈರ್ವ್ಯಾಘ್ರಾನ್ರಕ್ಷತಿ ಕಾನನಂ।।

ಹುಲಿಗಳಿಲ್ಲದೇ ಕಾಡು ಉಳಿಯುವುದಿಲ್ಲ; ಕಾಡಿಲ್ಲದೇ ಹುಲಿಗಳು ಉಳಿಯುವುದಿಲ್ಲ. ಕಾಡೇ ಹುಲಿಗಳನ್ನು ರಕ್ಷಿಸುತ್ತದೆ ಮತ್ತು ಹುಲಿಗಳು ಕಾಡನ್ನು ರಕ್ಷಿಸುತ್ತವೆ.

05037043a ನ ತಥೇಚ್ಚಂತ್ಯಕಲ್ಯಾಣಾಃ ಪರೇಷಾಂ ವೇದಿತುಂ ಗುಣಾನ್।
05037043c ಯಥೈಷಾಂ ಜ್ಞಾತುಮಿಚ್ಚಂತಿ ನೈರ್ಗುಣ್ಯಂ ಪಾಪಚೇತಸಃ।।

ಪಾಪಚೇತಸರು ಇತರರ ನಿರ್ಗುಣಗಳನ್ನು ಅರಿಯಲು ಆತುರರಾಗಿರುವಷ್ಟು ಅವರ ಕಲ್ಯಾಣ ಗುಣಗಳನ್ನು ತಿಳಿಯಲು ಆತುರರಾಗಿರುವುದಿಲ್ಲ.

05037044a ಅರ್ಥಸಿದ್ಧಿಂ ಪರಾಮಿಚ್ಚನ್ಧರ್ಮಮೇವಾದಿತಶ್ಚರೇತ್।
05037044c ನ ಹಿ ಧರ್ಮಾದಪೈತ್ಯರ್ಥಃ ಸ್ವರ್ಗಲೋಕಾದಿವಾಮೃತಂ।।

ಅರ್ಥಸಿದ್ಧಿಯನ್ನು ಬಯಸುವವನು ಧರ್ಮದಲ್ಲಿಯೇ ನಡೆಯಬೇಕು. ಏಕೆಂದರೆ ಸ್ವರ್ಗಲೋಕದಿಂದ ಅಮೃತವು ಬೇರೆಯಾಗದಂತೆ ಧರ್ಮದಿಂದ ಅರ್ಥವು ಬೇರೆಯಾಗುವುದಿಲ್ಲ.

05037045a ಯಸ್ಯಾತ್ಮಾ ವಿರತಃ ಪಾಪಾತ್ಕಲ್ಯಾಣೇ ಚ ನಿವೇಶಿತಃ।
05037045c ತೇನ ಸರ್ವಮಿದಂ ಬುದ್ಧಂ ಪ್ರಕೃತಿರ್ವಿಕೃತಿಶ್ಚ ಯಾ।।

ಯಾರ ಆತ್ಮವು ಪಾಪವನ್ನು ತೊರೆದು ಕಲ್ಯಾಣಕಾರ್ಯಗಳಲ್ಲಿ ನಿರತವಾಗಿದೆಯೋ ಅವನಿಗೆ ಪ್ರಕೃತಿ ವಿಕೃತಿಗಳೆಲ್ಲವೂ ತಿಳಿಯುತ್ತದೆ.

05037046a ಯೋ ಧರ್ಮಮರ್ಥಂ ಕಾಮಂ ಚ ಯಥಾಕಾಲಂ ನಿಷೇವತೇ।
05037046c ಧರ್ಮಾರ್ಥಕಾಮಸಂಯೋಗಂ ಸೋಽಮುತ್ರೇಹ ಚ ವಿಂದತಿ।।

ಯಾರು ಯಥಾಕಾಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಅರಸುತ್ತಾರೋ ಅವರಿಗೆ ಧರ್ಮಾರ್ಥಕಾಮಗಳ ಒಟ್ಟು ಫಲವು ಇಲ್ಲಿಯೂ ನಂತರವೂ ದೊರೆಯುತ್ತದೆ.

05037047a ಸಂನ್ನಿಯಚ್ಚತಿ ಯೋ ವೇಗಮುತ್ಥಿತಂ ಕ್ರೋಧಹರ್ಷಯೋಃ।
05037047c ಸ ಶ್ರಿಯೋ ಭಾಜನಂ ರಾಜನ್ಯಶ್ಚಾಪತ್ಸು ನ ಮುಹ್ಯತಿ।।

ಕ್ರೋಧ-ಹರ್ಷಗಳ ಏರುವಿಕೆಯ ವೇಗವನ್ನು ನಿಯಂತ್ರಿಸಿಕೊಂಡವನಿಗೆ ರಾಜನ್! ಅದೃಷ್ಟವು ತುಂಬಿಕೊಳ್ಳುತ್ತದೆ ಮತ್ತು ಅವನನ್ನು ಆಪತ್ತುಗಳು ಕಾಡುವುದಿಲ್ಲ.

05037048a ಬಲಂ ಪಂಚವಿಧಂ ನಿತ್ಯಂ ಪುರುಷಾಣಾಂ ನಿಬೋಧ ಮೇ।
05037048c ಯತ್ತು ಬಾಹುಬಲಂ ನಾಮ ಕನಿಷ್ಠಂ ಬಲಮುಚ್ಯತೇ।।

ಪುರುಷರಿಗೆ ನಿತ್ಯವೂ ಐದು ರೀತಿಯ ಬಲಗಳಿರುತ್ತವೆ ಎಂದು ನನ್ನಿಂದ ತಿಳಿ. ಇವುಗಳಲ್ಲಿ ಬಾಹುಬಲವು ಅತ್ಯಂತ ಕನಿಷ್ಠ ಬಲವೆಂದು ಹೇಳುತ್ತಾರೆ.

05037049a ಅಮಾತ್ಯಲಾಭೋ ಭದ್ರಂ ತೇ ದ್ವಿತೀಯಂ ಬಲಮುಚ್ಯತೇ।
05037049c ಧನಲಾಭಸ್ತೃತೀಯಂ ತು ಬಲಮಾಹುರ್ಜಿಗೀಷವಃ।।

ನಿನಗೆ ಮಂಗಳವಾಗಲಿ! ಉತ್ತಮ ಅಮಾತ್ಯರನ್ನು ಪಡೆಯುವುದು ಎರಡನೆಯ ಬಲವೆಂದು ಹೇಳುತ್ತಾರೆ. ಜಯವನ್ನು ಬಯಸುವವರಿಗೆ ಧನಲಾಭವು ಮೂರನೆಯ ಬಲವೆಂದು ಹೇಳುತ್ತಾರೆ.

05037050a ಯತ್ತ್ವಸ್ಯ ಸಹಜಂ ರಾಜನ್ಪಿತೃಪೈತಾಮಹಂ ಬಲಂ।
05037050c ಅಭಿಜಾತಬಲಂ ನಾಮ ತಚ್ಚತುರ್ಥಂ ಬಲಂ ಸ್ಮೃತಂ।।

ರಾಜನ್! ಸಹಜವಾಗಿರುವ ಪಿತೃಪೈತಾಮಹರ ಬಲ, ಹುಟ್ಟಿನ ಬಲವೆಂಬ ಹೆಸರಿನ ಇದನ್ನು ನಾಲ್ಕನೆಯ ಬಲವೆನ್ನುತ್ತಾರೆ.

05037051a ಯೇನ ತ್ವೇತಾನಿ ಸರ್ವಾಣಿ ಸಂಗೃಹೀತಾನಿ ಭಾರತ।
05037051c ಯದ್ಬಲಾನಾಂ ಬಲಂ ಶ್ರೇಷ್ಠಂ ತತ್ಪ್ರಜ್ಞಾಬಲಮುಚ್ಯತೇ।।

ಭಾರತ! ಆದರೆ ಅವೆಲ್ಲವುಗಳನ್ನೂ ಹಿಡಿದಿಡುವ, ಬಲಗಳಲ್ಲಿಯೇ ಶ್ರೇಷ್ಠಬಲವು ಪ್ರಜ್ಞಾಬಲವೆಂದು ಹೇಳುತ್ತಾರೆ.

05037052a ಮಹತೇ ಯೋಽಪಕಾರಾಯ ನರಸ್ಯ ಪ್ರಭವೇನ್ನರಃ।
05037052c ತೇನ ವೈರಂ ಸಮಾಸಜ್ಯ ದೂರಸ್ಥೋಽಸ್ಮೀತಿ ನಾಶ್ವಸೇತ್।।

ಒಬ್ಬನು ಇನ್ನೊಬ್ಬನಿಗೆ ಅಪಕಾರವನ್ನು ಮಾಡಿ ಮೇಲುಗೈ ಸಾಧಿಸಲು ಬಯಸಿದರೆ ಅದರಿಂದುಂಟಾದ ವೈರದಿಂದ ಅವನು ದೂರದಲ್ಲಿದ್ದರೂ ಸುರಕ್ಷಿತನಾಗಿರುವುದಿಲ್ಲ.

05037053a ಸ್ತ್ರೀಷು ರಾಜಸು ಸರ್ಪೇಷು ಸ್ವಾಧ್ಯಾಯೇ ಶತ್ರುಸೇವಿಷು।
05037053c ಭೋಗೇ ಚಾಯುಷಿ ವಿಶ್ವಾಸಂ ಕಃ ಪ್ರಾಜ್ಞಾಃ ಕರ್ತುಮರ್ಹತಿ।।

ಪ್ರಾಜ್ಞರು ಹೇಗೆ ತಾನೇ ಸ್ತ್ರೀಯರಲ್ಲಿ, ರಾಜರಲ್ಲಿ, ಸರ್ಪಗಳಲ್ಲಿ, ಸ್ವಾಧ್ಯಾಯದಲ್ಲಿ, ಶತ್ರುಗಳ ಸೇವೆಯಲ್ಲಿ, ಭೋಗದಲ್ಲಿ ಮತ್ತು ಆಯುಷ್ಯದಲ್ಲಿ ವಿಶ್ವಾಸವನ್ನಿಡಬಲ್ಲರು?

05037054a ಪ್ರಜ್ಞಾಶರೇಣಾಭಿಹತಸ್ಯ ಜಂತೋಶ್ ಚಿಕಿತ್ಸಕಾಃ ಸಂತಿ ನ ಚೌಷಧಾನಿ।
05037054c ನ ಹೋಮಮಂತ್ರಾ ನ ಚ ಮಂಗಲಾನಿ ನಾಥರ್ವಣಾ ನಾಪ್ಯಗದಾಃ ಸುಸಿದ್ಧಾಃ।।

ಪ್ರಜ್ಞೆಯ ಬಾಣದ ಹೊಡೆತಕ್ಕೆ ಸಿಕ್ಕಿದವನಿಗೆ ಚಿಕಿತ್ಸಕರಾಗಲೀ ಔಷಧಗಳಾಗಲೀ ಇಲ್ಲ. ಹೋಮ, ಮಂತ್ರ, ಆಶೀರ್ವಾದ, ಅಥವಾ ಔಷಧಗಳು ಅವನಿಗೆ ಸಹಾಯವಾಗಲಾರವು.

05037055a ಸರ್ಪಶ್ಚಾಗ್ನಿಶ್ಚ ಸಿಂಹಶ್ಚ ಕುಲಪುತ್ರಶ್ಚ ಭಾರತ।
05037055c ನಾವಜ್ಞೇಯಾ ಮನುಷ್ಯೇಣ ಸರ್ವೇ ತೇ ಹ್ಯತಿತೇಜಸಃ।।

ಭಾರತ! ಮನುಷ್ಯನು ಸರ್ಪ, ಅಗ್ನಿ, ಸಿಂಹ ಮತ್ತು ಉತ್ತಮ ಕುಲದಲ್ಲಿ ಜನಿಸಿದವನನ್ನು ಅವಹೇಳನ ಮಾಡಬಾರದು. ಏಕೆಂದರೆ ಅವರೆಲ್ಲರೂ ಅತಿ ತೇಜಸ್ಸುಳ್ಳವರು.

05037056a ಅಗ್ನಿಸ್ತೇಜೋ ಮಹಲ್ಲೋಕೇ ಗೂಢಸ್ತಿಷ್ಠತಿ ದಾರುಷು।
05037056c ನ ಚೋಪಯುಂಕ್ತೇ ತದ್ದಾರು ಯಾವನ್ನೋ ದೀಪ್ಯತೇ ಪರೈಃ।।

ಲೋಕದಲ್ಲಿ ಅಗ್ನಿಯು ಮಹಾ ತೇಜಸ್ಸುಳ್ಳದ್ದು. ಅದು ಕಟ್ಟಿಗೆಯಲ್ಲಿ ಅಡಗಿರುತ್ತದೆ. ಇನ್ನೊಂದರಿಂದ ಹತ್ತಿಸದೇ ಅದು ಆ ಕಟ್ಟಿಗೆಯನ್ನು ಸುಡುವುದಿಲ್ಲ.

05037057a ಸ ಏವ ಖಲು ದಾರುಭ್ಯೋ ಯದಾ ನಿರ್ಮಥ್ಯ ದೀಪ್ಯತೇ।
05037057c ತದಾ ತಚ್ಚ ವನಂ ಚಾನ್ಯನ್ನಿರ್ದಹತ್ಯಾಶು ತೇಜಸಾ।।

ಆದರೆ ಎರಡು ಮರಗಳಿಗೆ ತಾಗಿ, ಘರ್ಷಿಸಿ ಉರಿದಾಗ ಅದು ಆ ಮರವನ್ನೂ ವನವನ್ನೂ ಉಳಿದುದೆಲ್ಲವನ್ನೂ ತನ್ನ ತೇಜಸ್ಸಿನಿಂದ ಸುಟ್ಟುಹಾಕುತ್ತದೆ.

05037058a ಏವಮೇವ ಕುಲೇ ಜಾತಾಃ ಪಾವಕೋಪಮತೇಜಸಃ।
05037058c ಕ್ಷಮಾವಂತೋ ನಿರಾಕಾರಾಃ ಕಾಷ್ಠೇಽಗ್ನಿರಿವ ಶೇರತೇ।।

ಹಾಗೆಯೇ ಉತ್ತಮ ಕುಲದಲ್ಲಿ ಜನಿಸಿದವರು ಪಾವಕನಂತೆ ತೇಜಸ್ವಿಗಳಾಗಿರುತ್ತಾರೆ. ಕಾಷ್ಠದಲ್ಲಿ ಅಗ್ನಿಯಿರುವಂತೆ ಕ್ಷಮಾವಂತರೂ ನಿರಾಕಾರರಾಗಿಯೂ ಆಗಿರುತ್ತಾರೆ.

05037059a ಲತಾಧರ್ಮಾ ತ್ವಂ ಸಪುತ್ರಃ ಶಾಲಾಃ ಪಾಂಡುಸುತಾ ಮತಾಃ।
05037059c ನ ಲತಾ ವರ್ಧತೇ ಜಾತು ಮಹಾದ್ರುಮಮನಾಶ್ರಿತಾ।।

ನೀನು ಮತ್ತು ನಿನ್ನ ಮಕ್ಕಳು ಬಳ್ಳಿಗಳಂತೆ ಮತ್ತು ಪಾಂಡುಪುತ್ರರು ಶಾಲವೃಕ್ಷಗಳಂತೆ. ಯಾವ ಬಳ್ಳಿಯೂ ಎತ್ತರದ ಮರವನ್ನು ಆಶ್ರಯಿಸದೇ ಬೆಳೆಯುವುದಿಲ್ಲ.

05037060a ವನಂ ರಾಜಂಸ್ತ್ವಂ ಸಪುತ್ರೋಂಽಬಿಕೇಯ ಸಿಂಹಾನ್ವನೇ ಪಾಂಡವಾಂಸ್ತಾತ ವಿದ್ಧಿ।
05037060c ಸಿಂಹೈರ್ವಿಹೀನಂ ಹಿ ವನಂ ವಿನಶ್ಯೇತ್ ಸಿಂಹಾ ವಿನಶ್ಯೇಯುರ್ಋತೇ ವನೇನ।।

ಅಂಬಿಕೇಯ! ರಾಜನ್! ಅಯ್ಯಾ! ಪುತ್ರರೊಂದಿಗೆ ನೀನು ಒಂದು ವನದಂತೆ. ಮತ್ತು ಪಾಂಡವರು ವನದಲ್ಲಿರುವ ಸಿಂಹಗಳಂತೆ ಎಂದು ತಿಳಿ. ಸಿಂಹಗಳನ್ನು ಕಳೆದುಕೊಂಡರೆ ವನವು ವಿನಾಶವಾಗುತ್ತದೆ. ವನವಿಲ್ಲದೇ ಸಿಂಹಗಳು ವಿನಾಶಗೊಳ್ಳುತ್ತವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಸಪ್ತತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೇಳನೆಯ ಅಧ್ಯಾಯವು.