036 ವಿದುರನೀತಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಪ್ರಜಾಗರ ಪರ್ವ

ಅಧ್ಯಾಯ 36

ಸಾರ

ವಿದುರನು ಧೃತರಾಷ್ಟ್ರನಿಗೆ ದತ್ತಾತ್ರೇಯ ಮತ್ತು ಸಾಧ್ಯರ ನಡುವೆ ನಡೆದ ಸಂಭಾಷಣೆಯನ್ನು ಉದಾಹರಿಸುವುದು (1-21). ಮಹಾಕುಲಗಳು ಹೇಗಾಗುತ್ತವೆಯೆಂದು ವಿವರಿಸುವುದು (22-46). ಮತ್ತು ತನ್ನ ನೀತಿಮಾತುಗಳನ್ನು ಮುಂದುವರಿಸಿದುದು (47-72).

05036001 ವಿದುರ ಉವಾಚ।
05036001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಂ।
05036001c ಆತ್ರೇಯಸ್ಯ ಚ ಸಂವಾದಂ ಸಾಧ್ಯಾನಾಂ ಚೇತಿ ನಃ ಶ್ರುತಂ।।

ವಿದುರನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ನಾವು ಕೇಳಿದ ಪುರಾತನವಾದ ಇತಿಹಾಸ - ಅತ್ರಿಯ ಮಗ ಮತ್ತು ಸಾಧ್ಯರ ಸಂವಾದವಿದೆ.

05036002a ಚರಂತಂ ಹಂಸರೂಪೇಣ ಮಹರ್ಷಿಂ ಸಂಶಿತವ್ರತಂ।
05036002c ಸಾಧ್ಯಾ ದೇವಾ ಮಹಾಪ್ರಾಜ್ಞಾಂ ಪರ್ಯಪೃಚ್ಚಂತ ವೈ ಪುರಾ।।

ಹಿಂದೆ ಅತ್ರಿಯ ಮಗ ಸಂಶಿತವ್ರತ ಮಹರ್ಷಿಯು ಹಂಸರೂಪದಲ್ಲಿ ಸಂಚರಿಸುತ್ತಿರುವಾಗ ಆ ಮಹಾಪ್ರಾಜ್ಞನನ್ನು ಸಾಧ್ಯ ದೇವತೆಗಳು ಪ್ರಶ್ನಿಸಿದರು:

05036003a ಸಾಧ್ಯಾ ದೇವಾ ವಯಮಸ್ಮೋ ಮಹರ್ಷೇ ದೃಷ್ಟ್ವಾ ಭವಂತಂ ನ ಶಕ್ನುಮೋಽನುಮಾತುಂ।
05036003c ಶ್ರುತೇನ ಧೀರೋ ಬುದ್ಧಿಮಾಂಸ್ತ್ವಂ ಮತೋ ನಃ ಕಾವ್ಯಾಂ ವಾಚಂ ವಕ್ತುಮರ್ಹಸ್ಯುದಾರಾಂ।।

“ಮಹರ್ಷೇ! ನಾವು ಸಾಧ್ಯಾ ದೇವತೆಗಳು. ನಿನ್ನನ್ನು ನೋಡಿ ನೀನು ಯಾರೆಂದು ಗುರುತಿಸಲಾರೆವು. ಶ್ರುತಿಗಳಿಂದ ನೀನು ಧೀರ ಮತ್ತು ಬುದ್ಧಿವಂತನೆಂದು ನಮಗನ್ನಿಸುತ್ತದೆ. ಆದುದರಿಂದ ಉದಾರವಾಗಿ ನಮ್ಮೊಂದಿಗೆ ಅರ್ಥಭರಿತ ಮಾತುಗಳನ್ನಾಡಬೇಕು.”

05036004 ಹಂಸ ಉವಾಚ।
05036004a ಏತತ್ಕಾರ್ಯಮಮರಾಃ ಸಂಶ್ರುತಂ ಮೇ ಧೃತಿಃ ಶಮಃ ಸತ್ಯಧರ್ಮಾನುವೃತ್ತಿಃ।
05036004c ಗ್ರಂಥಿಂ ವಿನೀಯ ಹೃದಯಸ್ಯ ಸರ್ವಂ ಪ್ರಿಯಾಪ್ರಿಯೇ ಚಾತ್ಮವಶಂ ನಯೀತ।।

ಹಂಸವು ಹೇಳಿತು: “ಅಮರರೇ! ನಾನು ಈ ಕಾರ್ಯವನ್ನು ಚೆನ್ನಾಗಿ ಕೇಳಿದ್ದೇನೆ - ಧೃತಿ, ಶಮ, ಮತ್ತು ಸತ್ಯಧರ್ಮಗಳನ್ನುಪಯೋಗಿಸಿ ಹೃದಯದ ಎಲ್ಲ ಗಂಟುಗಳನ್ನು ಬಿಡಿಸಿ, ಪ್ರಿಯ-ಅಪ್ರಿಯಗಳೆರಡನ್ನೂ ತನ್ನ ವಶದಲ್ಲಿ ತಂದುಕೊಳ್ಳಬೇಕು.

05036005a ಆಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷಿತಃ।
05036005c ಆಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ।।

ನೋವನ್ನು ನೀಡುವವರಿಗೆ ನೋವನ್ನು ನೀಡಬಾರದು. ಸುಮ್ಮನೇ ಸಹಿಸಿಕೊಂಡರೆ ಅದರಿಂದ ಉಂಟಾಗುವ ಕೋಪವೇ ಆ ನೋವನ್ನು ನೀಡಿದವನನ್ನು ಸುಡುತ್ತದೆ. ನೋವನ್ನು ಅನುಭವಿಸಿದವನಿಗೆ ನೋವನ್ನು ನೀಡಿದವನು ಮಾಡಿದ ಪುಣ್ಯವು ದೊರೆಯುತ್ತದೆ.

05036006a ನಾಕ್ರೋಶೀ ಸ್ಯಾನ್ನಾವಮಾನೀ ಪರಸ್ಯ ಮಿತ್ರದ್ರೋಹೀ ನೋತ ನೀಚೋಪಸೇವೀ।
05036006c ನ ಚಾತಿಮಾನೀ ನ ಚ ಹೀನವೃತ್ತೋ ರೂಕ್ಷಾಂ ವಾಚಂ ರುಶತೀಂ ವರ್ಜಯೀತ।।

ಇನ್ನೊಬ್ಬರನ್ನು ನೋಯಿಸಬೇಡ, ಅಪಮಾನಿಸಬೇಡ. ಮಿತ್ರದ್ರೋಹಿಯಾಗಬೇಡ. ನೀಚರೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬೇಡ. ಅತಿ ಅಭಿಮಾನಿಯಾಗಿ ಮತ್ತು ಹೀನನಾಗಿ ವರ್ತಿಸಬೇಡ. ಕ್ರೂರವಾದ ಮತ್ತು ರೋಷಯುಕ್ತವಾದ ಮಾತನ್ನು ವರ್ಜಿಸಬೇಕು.

05036007a ಮರ್ಮಾಣ್ಯಸ್ಥೀನಿ ಹೃದಯಂ ತಥಾಸೂನ್ ಘೋರಾ ವಾಚೋ ನಿರ್ದಹಂತೀಹ ಪುಂಸಾಂ।
05036007c ತಸ್ಮಾದ್ವಾಚಂ ರುಶತೀಂ ರೂಕ್ಷರೂಪಾಂ ಧರ್ಮಾರಾಮೋ ನಿತ್ಯಶೋ ವರ್ಜಯೀತ।।

ಘೋರ ಮಾತು ಮರ್ಮಗಳನ್ನು, ಎದೆ ಹೃದಯವನ್ನು ಮತ್ತು ಪುರುಷನ ಒಳಕೇಂದ್ರವನ್ನೇ ಸುಡುತ್ತದೆ. ಆದುದರಿಂದ, ಧರ್ಮವಂತನು ರೋಷಯುಕ್ತ, ಕ್ರೂರ ಮಾತನ್ನು ನಿತ್ಯವೂ ವರ್ಜಿಸಬೇಕು.

05036008a ಅರುಂತುದಂ ಪರುಷಂ ರೂಕ್ಷವಾಚಂ ವಾಕ್ಕಂಟಕೈರ್ವಿತುದಂತಂ ಮನುಷ್ಯಾನ್।
05036008c ವಿದ್ಯಾದಲಕ್ಷ್ಮೀಕತಮಂ ಜನಾನಾಂ ಮುಖೇ ನಿಬದ್ಧಾಂ ನಿರೃತಿಂ ವಹಂತಂ।।

ಕ್ರೂರವಾಗಿ ಮಾತನಾಡುವ, ಮನುಷ್ಯರನ್ನು ಮಾತಿನ ಮುಳ್ಳಿನಿಂದ ಚುಚ್ಚುವ, ನಾಲಿಗೆಯಮೇಲೆ ನರಕವನ್ನು ಹೊತ್ತಿರುವ ಅತ್ಯಂತ ಅಧಮ ಪುರುಷನು ಮನುಷ್ಯರಿಗೆ ಯಾವಾಗಲೂ ಅಲಕ್ಷ್ಮಿಯನ್ನು ತರುವವನೆಂದು ತಿಳಿಯಬೇಕು.

05036009a ಪರಶ್ಚೇದೇನಮಧಿವಿಧ್ಯೇತ ಬಾಣೈಃ ಭೃಶಂ ಸುತೀಕ್ಷ್ಣೈರನಲಾರ್ಕದೀಪ್ತೈಃ।
05036009c ವಿರಿಚ್ಯಮಾನೋಽಪ್ಯತಿರಿಚ್ಯಮಾನೋ ವಿದ್ಯಾತ್ಕವಿಃ ಸುಕೃತಂ ಮೇ ದಧಾತಿ।।

ಸುತೀಕ್ಷ್ಣ ಸೂರ್ಯನಂತೆ ಸುಡುತ್ತಿರುವ ಇನ್ನೊಬ್ಬರ ಮಾತಿನ ಬಾಣಗಳಿಂದ ಚೆನ್ನಾಗಿ ಗಾಯಗೊಂಡ ಬುದ್ಧಿವಂತನು ಇದು ನನಗೆ ಅವನ ಪುಣ್ಯಗಳನ್ನು ಕೊಡುತ್ತದೆ ಎಂದು ಅದನ್ನು ಸುಮ್ಮನೇ ಸಹಿಸಿಕೊಳ್ಳುತ್ತಾನೆ.

05036010a ಯದಿ ಸಂತಂ ಸೇವತೇ ಯದ್ಯಸಂತಂ ತಪಸ್ವಿನಂ ಯದಿ ವಾ ಸ್ತೇನಮೇವ।
05036010c ವಾಸೋ ಯಥಾ ರಂಗವಶಂ ಪ್ರಯಾತಿ ತಥಾ ಸ ತೇಷಾಂ ವಶಮಭ್ಯುಪೈತಿ।।

ಯಾವ ಬಣ್ಣದ ಬಟ್ಟೆಯೊಂದಿಗೆ ನೆನೆಸಲ್ಪಟ್ಟಿದೆಯೋ ಆ ಬಟ್ಟೆಯ ಬಣ್ಣವನ್ನು ಪಡೆಯುವಂತೆ, ಯಾವ ಸಂತ, ಅಸಂತ, ತಪಸ್ವಿ, ಕಳ್ಳರ ಸೇವೆಯನ್ನು ಮಾಡುತ್ತೇವೋ ಅವರ ಗುಣಗಳನ್ನು ಪಡೆಯುತ್ತೇವೆ.

05036011a ವಾದಂ ತು ಯೋ ನ ಪ್ರವದೇನ್ನ ವಾದಯೇದ್ ಯೋ ನಾಹತಃ ಪ್ರತಿಹನ್ಯಾನ್ನ ಘಾತಯೇತ್।
05036011c ಯೋ ಹಂತುಕಾಮಸ್ಯ ನ ಪಾಪಮಿಚ್ಚೇತ್ ತಸ್ಮೈ ದೇವಾಃ ಸ್ಪೃಹಯಂತ್ಯಾಗತಾಯ।।

ಕ್ರೂರವಾಗಿ ಮಾತನಾಡಿದವರಿಗೆ ಅದೇ ಕ್ರೂರತೆಯಿಂದ ಉತ್ತರವನ್ನು ಕೊಡದ, ಘಾಯಕ್ಕೊಳಗಾದರೂ ಘಾಯಗೊಳಿಸಿದವನಿಗೆ ತಿರುಗಿ ಘಾಯಗೊಳಿಸದ, ಪೆಟ್ಟುಕೊಟ್ಟವನಿಗೆ ತಿರುಗಿ ಪೆಟ್ಟುಕೊಡದವರನ್ನು ದೇವತೆಗಳೂ ಅರಸಿಕೊಂಡು ಬರುತ್ತಾರೆ.

05036012a ಅವ್ಯಾಹೃತಂ ವ್ಯಾಹೃತಾಚ್ಚ್ರೇಯ ಆಹುಃ ಸತ್ಯಂ ವದೇದ್ವ್ಯಾಹೃತಂ ತದ್ದ್ವಿತೀಯಂ।
05036012c ಪ್ರಿಯಂ ವದೇದ್ವ್ಯಾಹೃತಂ ತತ್ತೃತೀಯಂ ಧರ್ಮ್ಯಂ ವದೇದ್ವ್ಯಾಹೃತಂ ತಚ್ಚತುರ್ಥಂ।।

ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಶ್ರೇಯ. ಮಾತನಾಡಲೇ ಬೇಕಾಗಿಬಂದರೆ ಮೊದಲನೆಯದಾಗಿ ಶ್ರೇಯವಾದುದನ್ನು ಹೇಳಬೇಕು, ಎರಡನೆಯದಾಗಿ ಸತ್ಯವನ್ನೇ ಮಾತನಾಡಬೇಕು, ಮೂರನೆಯದಾಗಿ ಪ್ರಿಯವಾದುದನ್ನು ಹೇಳಬೇಕು ಮತ್ತು ನಾಲ್ಕನೆಯದಾಗಿ ಧರ್ಮವನ್ನು ಹೇಳಬೇಕು1.

05036013a ಯಾದೃಶೈಃ ಸಂವಿವದತೇ ಯಾದೃಶಾಂಶ್ಚೋಪಸೇವತೇ।
05036013c ಯಾದೃಗಿಚ್ಚೇಚ್ಚ ಭವಿತುಂ ತಾದೃಗ್ಭವತಿ ಪೂರುಷಃ।।

ಮನುಷ್ಯನು ಯಾರ ಜೊತೆಗೆ ಜೀವಿಸುತ್ತಾನೋ, ಯಾರ ಉಪಸೇವನೆಯನ್ನು ಮಾಡುತ್ತಾನೋ, ಯಾರ ಹಾಗೆ ಆಗಲು ಬಯಸುತ್ತಾನೋ ಅವರ ಹಾಗೆಯೇ ಆಗುತ್ತಾನೆ.

05036014a ಯತೋ ಯತೋ ನಿವರ್ತತೇ ತತಸ್ತತೋ ವಿಮುಚ್ಯತೇ।
05036014c ನಿವರ್ತನಾದ್ಧಿ ಸರ್ವತೋ ನ ವೇತ್ತಿ ದುಃಖಮಣ್ವಪಿ।।

ಯಾವ ಯಾವ ವಿಷಯಗಳಿಂದ ದೂರವಿರುತ್ತಾನೋ ಅವುಗಳೆಲ್ಲವುಗಳಿಂದ ಮುಕ್ತಿ ದೊರೆಯುತ್ತದೆ. ಎಲ್ಲವುಗಳಿಂದ ದೂರವಿದ್ದರೆ ದುಃಖವೆನ್ನುವುದೇ ಇರುವುದಿಲ್ಲ.

05036015a ನ ಜೀಯತೇ ನೋತ ಜಿಗೀಷತೇಽನ್ಯಾನ್ ನ ವೈರಕೃಚ್ಚಾಪ್ರತಿಘಾತಕಶ್ಚ।
05036015c ನಿಂದಾಪ್ರಶಂಸಾಸು ಸಮಸ್ವಭಾವೋ ನ ಶೋಚತೇ ಹೃಷ್ಯತಿ ನೈವ ಚಾಯಂ।।

ಅಂಥಹ ವ್ಯಕ್ತಿಯು ಬೇರೆಯವರನ್ನು ಗೆಲ್ಲುವುದಿಲ್ಲ, ಗೆಲ್ಲಲ್ಪಡುವುದಿಲ್ಲ, ವೈರವನ್ನು ಬೆಳೆಸುವುದಿಲ್ಲ, ಬೇರೆಯವರಿಗೆ ಕಷ್ಟವನ್ನು ನೀಡುವುದಿಲ್ಲ ಮತ್ತು ನಿಂದಿಸುವುದಿಲ್ಲ. ನಿಂದೆ ಮತ್ತು ಪ್ರಶಂಸೆಗಳಲ್ಲಿ ಸಮಭಾವವನ್ನಿಟ್ಟುಕೊಂಡು ಶೋಕಿಸುವುದೂ ಇಲ್ಲ ಹರ್ಷಿಸುವುದೂ ಇಲ್ಲ.

05036016a ಭಾವಮಿಚ್ಚತಿ ಸರ್ವಸ್ಯ ನಾಭಾವೇ ಕುರುತೇ ಮತಿಂ।
05036016c ಸತ್ಯವಾದೀ ಮೃದುರ್ದಾಂತೋ ಯಃ ಸ ಉತ್ತಮಪೂರುಷಃ।।

ಎಲ್ಲರಿಗೂ ಒಳ್ಳೆಯದನ್ನು ಬಯಸುವವನು, ಕೆಟ್ಟದಕ್ಕೆ ಮನಸ್ಸುಮಾಡದವನು, ಸತ್ಯವಾದೀ, ಮೃದು, ದಾಂತನು ಉತ್ತಮ ಪುರುಷನು.

05036017a ನಾನರ್ಥಕಂ ಸಾಂತ್ವಯತಿ ಪ್ರತಿಜ್ಞಾಯ ದದಾತಿ ಚ।
05036017c ರಾದ್ಧಾಪರಾದ್ಧೇ ಜಾನಾತಿ ಯಃ ಸ ಮಧ್ಯಮಪೂರುಷಃ।।

ಕಷ್ಟದಲ್ಲಿರುವವರನ್ನು ಸಂತವಿಸದ, ಮಾತುಕೊಟ್ಟಂತೆ ನೀಡದ ಮತ್ತು ಇನ್ನೊಬ್ಬರ ಅಪರಾಧಗಳನ್ನು ಹುಡುಕುವವನು ಮಧ್ಯಮ ಪುರುಷ.

05036018a ದುಃಶಾಸನಸ್ತೂಪಹಂತಾ ನ ಶಾಸ್ತಾ ನಾವರ್ತತೇ ಮನ್ಯುವಶಾತ್ಕೃತಘ್ನಃ।
05036018c ನ ಕಸ್ಯ ಚಿನ್ಮಿತ್ರಮಥೋ ದುರಾತ್ಮಾ ಕಲಾಶ್ಚೈತಾ ಅಧಮಸ್ಯೇಹ ಪುಂಸಃ।।

ಇವು ಅಧಮ ಪುರುಷನ ಲಕ್ಷಣಗಳು: ನಿಯಂತ್ರಿಸಲು ಅಸಾಧ್ಯನಾಗಿರುವುದು, ಆಪತ್ತನ್ನು ತರುವುದು, ಸುಲಭವಾಗಿ ಸಿಟ್ಟಾಗುವುದು, ಕೃತಘ್ನತೆ, ಯಾರೊಂದಿಗೂ ಮಿತ್ರನಾಗಿರದೇ ಇರುವುದು, ಮತ್ತು ದುರಾತ್ಮನಾಗಿರುವುದು.

05036019a ನ ಶ್ರದ್ದಧಾತಿ ಕಲ್ಯಾಣಂ ಪರೇಭ್ಯೋಽಪ್ಯಾತ್ಮಶಂಕಿತಃ।
05036019c ನಿರಾಕರೋತಿ ಮಿತ್ರಾಣಿ ಯೋ ವೈ ಸೋಽಧಮಪೂರುಷಃ।।

ಇತರರು ಮಾಡುವ ಒಳ್ಳೆಯದರ ಮೇಲೆ ಶ್ರದ್ಧೆಯಿಲ್ಲದವನು, ಇತರರನ್ನು ಪಾಪಿಗಳೆಂದು ಶಂಕಿಸುವವನು, ಮಿತ್ರರನ್ನು ದೂರವಿಡುವವನನ್ನು ಕೂಡ ಅಧಮಪುರುಷನೆಂದು ಹೇಳುತ್ತಾರೆ.

05036020a ಉತ್ತಮಾನೇವ ಸೇವೇತ ಪ್ರಾಪ್ತೇ ಕಾಲೇ ತು ಮಧ್ಯಮಾನ್।
05036020c ಅಧಮಾಂಸ್ತು ನ ಸೇವೇತ ಯ ಇಚ್ಚೇಚ್ಚ್ರೇಯ ಆತ್ಮನಃ।।

ತನಗೆ ಶ್ರೇಯಸ್ಸನ್ನು ಬಯಸುವವನು ಉತ್ತಮರ ಸೇವೆಯನ್ನೇ ಮಾಡಬೇಕು. ಸಮಯ ಬಂದರೆ ಮಧ್ಯಮರ ಸೇವೆಯನ್ನೂ ಮಾಡಬಹುದು. ಆದರೆ ಅಧಮರ ಸೇವೆಯನ್ನು ಎಂದೂ ಮಾಡಬಾರದು.

05036021a ಪ್ರಾಪ್ನೋತಿ ವೈ ವಿತ್ತಮಸದ್ಬಲೇನ ನಿತ್ಯೋತ್ಥಾನಾತ್ಪ್ರಜ್ಞಾಯಾ ಪೌರುಷೇಣ।
05036021c ನ ತ್ವೇವ ಸಮ್ಯಗ್ಲಭತೇ ಪ್ರಶಂಸಾಂ ನ ವೃತ್ತಮಾಪ್ನೋತಿ ಮಹಾಕುಲಾನಾಂ।।

ಅಧಮನು ಬಲವನ್ನುಪಯೋಗಿಸಿ, ನಿತ್ಯವೂ ಪ್ರಯತ್ನಪಟ್ಟು, ಬುದ್ಧಿಶಕ್ತಿಯಿಂದ, ಪೌರುಷದಿಂದ ವಿತ್ತವನ್ನು ಗಳಿಸಬಲ್ಲ. ಆದರೆ ಅವನು ತನ್ನ ನಡತೆಯಿಂದ ಮಹಾಕುಲಗಳ ಪ್ರಶಂಸೆಯನ್ನು ಪಡೆಯುವುದಿಲ್ಲ.”

05036022 ಧೃತರಾಷ್ಟ್ರ ಉವಾಚ।
05036022a ಮಹಾಕುಲಾನಾಂ ಸ್ಪೃಹಯಂತಿ ದೇವಾ ಧರ್ಮಾರ್ಥವೃದ್ಧಾಶ್ಚ ಬಹುಶ್ರುತಾಶ್ಚ।
05036022c ಪೃಚ್ಚಾಮಿ ತ್ವಾಂ ವಿದುರ ಪ್ರಶ್ನಮೇತಂ ಭವಂತಿ ವೈ ಕಾನಿ ಮಹಾಕುಲಾನಿ।।

ಧೃತರಾಷ್ಟ್ರನು ಹೇಳಿದನು: “ವಿದುರ! ದೇವತೆಗಳು ಧರ್ಮಾರ್ಥಗಳಲ್ಲಿ ವೃದ್ಧಿಹೊಂದಿದ ಬಹುಶ್ರುತ ಮಹಾಕುಲಗಳನ್ನು ಪ್ರಶಂಸಿಸುತ್ತಾರೆ. ನಿನ್ನಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಆ ಮಹಾಕುಲಗಳು ಹೇಗಾಗುತ್ತವೆ?”

05036023 ವಿದುರ ಉವಾಚ।
05036023a ತಪೋ ದಮೋ ಬ್ರಹ್ಮವಿತ್ತ್ವಂ ವಿತಾನಾಃ ಪುಣ್ಯಾ ವಿವಾಹಾಃ ಸತತಾನ್ನದಾನಂ।
05036023c ಯೇಷ್ವೇವೈತೇ ಸಪ್ತ ಗುಣಾ ಭವಂತಿ ಸಮ್ಯಗ್ವೃತ್ತಾಸ್ತಾನಿ ಮಹಾಕುಲಾನಿ।।

ವಿದುರನು ಹೇಳಿದನು: “ತಪಸ್ಸು, ಆತ್ಮನಿಯಂತ್ರಣ, ಬ್ರಹ್ಮಜ್ಞಾನ, ಯಜ್ಞಗಳು, ಪುಣ್ಯವಿವಾಹಗಳು, ಸತತ ಅನ್ನದಾನ - ಈ ಏಳು ಗುಣಗಳು ಮಹಾಕುಲಗಳಲ್ಲಿ ಇರುತ್ತವೆ ಮತ್ತು ಅವುಗಳನ್ನು ನಡೆಸಿಕೊಂಡು ಬರುತ್ತವೆ.

05036024a ಯೇಷಾಂ ನ ವೃತ್ತಂ ವ್ಯಥತೇ ನ ಯೋನಿರ್ ವೃತ್ತಪ್ರಸಾದೇನ ಚರಂತಿ ಧರ್ಮಂ।
05036024c ಯೇ ಕೀರ್ತಿಮಿಚ್ಚಂತಿ ಕುಲೇ ವಿಶಿಷ್ಟಾಂ ತ್ಯಕ್ತಾನೃತಾಸ್ತಾನಿ ಮಹಾಕುಲಾನಿ।।
05036025a ಅನಿಜ್ಯಯಾವಿವಾಹೈಶ್ಚ ವೇದಸ್ಯೋತ್ಸಾದನೇನ ಚ।
05036025c ಕುಲಾನ್ಯಕುಲತಾಂ ಯಾಂತಿ ಧರ್ಮಸ್ಯಾತಿಕ್ರಮೇಣ ಚ।।

ಯಜ್ಞಗಳನ್ನು ಮಾಡದೇ ಇರುವುದರಿಂದ, ಪುಣ್ಯ ವಿವಾಹಗಳನ್ನು ಮಾಡದೇ ಇರುವುದರಿಂದ, ವೇದಗಳನ್ನು ತ್ಯಜಿಸುವುದರಿಂದ, ಧರ್ಮವನ್ನು ಅತಿಕ್ರಮಿಸಿ ಮಹಾಕುಲಗಳು ಅಧಮ ಕುಲಗಳಾಗುತ್ತವೆ.

05036026a ದೇವದ್ರವ್ಯವಿನಾಶೇನ ಬ್ರಹ್ಮಸ್ವಹರಣೇನ ಚ।
05036026c ಕುಲಾನ್ಯಕುಲತಾಂ ಯಾಂತಿ ಬ್ರಾಹ್ಮಣಾತಿಕ್ರಮೇಣ ಚ।।

ಇನ್ನೊಬ್ಬರು ಇರಿಸಿದ ದ್ರವ್ಯವನ್ನು ವಿನಾಶಗೊಳಿಸುವುದರಿಂದ, ಬ್ರಾಹ್ಮಣರನ್ನು ಅತಿಕ್ರಮಿಸುವುದರಿಂದ, ಬ್ರಾಹ್ಮಣರನ್ನು ಗೌರವಿಸದೇ ಇರುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ.

05036027a ಬ್ರಾಹ್ಮಣಾನಾಂ ಪರಿಭವಾತ್ಪರಿವಾದಾಚ್ಚ ಭಾರತ।
05036027c ಕುಲಾನ್ಯಕುಲತಾಂ ಯಾಂತಿ ನ್ಯಾಸಾಪಹರಣೇನ ಚ।।

ಭಾರತ! ಬ್ರಾಹ್ಮಣರ ಕುರಿತು ಕೆಟ್ಟದ್ದನ್ನು ಮಾತನಾಡುವುದರಿಂದ, ಅವರೊಂದಿಗೆ ವಾದಿಸುವುದರಿಂದ ಮತ್ತು ನ್ಯಾಸವನ್ನು ಅಪಹರಿಸುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ.

05036028a ಕುಲಾನಿ ಸಮುಪೇತಾನಿ ಗೋಭಿಃ ಪುರುಷತೋಽಶ್ವತಃ।
05036028c ಕುಲಸಂಖ್ಯಾಂ ನ ಗಚ್ಚಂತಿ ಯಾನಿ ಹೀನಾನಿ ವೃತ್ತತಃ।।

ತುಂಬಾ ಜನರಿರುವ, ಸಂಪತ್ತಿರುವ ಕುಲಗಳು ಉತ್ತಮ ನಡತೆಯಿಲ್ಲದಿದ್ದರೆ ಹೀನ ಕುಲಗಳೆಂತೆನಿಸಿಕೊಳ್ಳುತ್ತವೆ.

05036029a ವೃತ್ತತಸ್ತ್ವವಿಹೀನಾನಿ ಕುಲಾನ್ಯಲ್ಪಧನಾನ್ಯಪಿ।
05036029c ಕುಲಸಂಖ್ಯಾಂ ತು ಗಚ್ಚಂತಿ ಕರ್ಷಂತಿ ಚ ಮಹದ್ಯಶಃ।।

ಸ್ವಲ್ಪವೇ ಜನರಿದ್ದರೂ, ಅಲ್ಪವೇ ಧನವಿದ್ದರೂ ಉತ್ತಮ ನಡತೆಯುಳ್ಳ ಕುಲವು ಮಹಾ ಯಶಸ್ಸನ್ನು ಪಡೆಯುತ್ತದೆ.

05036030a ಮಾ ನಃ ಕುಲೇ ವೈರಕೃತ್ಕಶ್ಚಿದಸ್ತು ರಾಜಾಮಾತ್ಯೋ ಮಾ ಪರಸ್ವಾಪಹಾರೀ।
05036030c ಮಿತ್ರದ್ರೋಹೀ ನೈಕೃತಿಕೋಽನೃತೀ ವಾ ಪೂರ್ವಾಶೀ ವಾ ಪಿತೃದೇವಾತಿಥಿಭ್ಯಃ।।

ನಮ್ಮ ಕುಲದಲ್ಲಿ ಯಾರೂ ವೈರವನ್ನು ಬೆಳೆಸದಿರಲಿ, ರಾಜರಿಗೆ ಅಮಾತ್ಯರಾಗದಿರಲಿ, ಪರರ ಸ್ವತ್ತನ್ನು ಅಪಹರಿಸದಿರಲಿ, ಮಿತ್ರದ್ರೋಹಿಗಳಾಗದಿರಲಿ, ಮೋಸ ಮತ್ತು ಅಪ್ರಾಮಾಣಿಕರಾಗದಿರಲಿ, ಮತ್ತು ಪಿತೃಗಳಿಗೆ, ದೇವತೆಗಳಿಗೆ ಮತ್ತು ಅತಿಥಿಗಳಿಗೆ ನೀಡುವ ಮೊದಲೇ ಊಟಮಾಡದಿರಲಿ.

05036031a ಯಶ್ಚ ನೋ ಬ್ರಾಹ್ಮಣಂ ಹನ್ಯಾದ್ಯಶ್ಚ ನೋ ಬ್ರಾಹ್ಮಣಾನ್ದ್ವಿಷೇತ್।
05036031c ನ ನಃ ಸ ಸಮಿತಿಂ ಗಚ್ಚೇದ್ಯಶ್ಚ ನೋ ನಿರ್ವಪೇತ್ಕೃಷಿಂ।।

ನಮ್ಮಲ್ಲಿ ಯಾರು ಬ್ರಾಹ್ಮಣರನ್ನು ಕೊಲ್ಲುತ್ತಾನೋ, ಯಾರು ಬ್ರಾಹ್ಮಣರನ್ನು ದ್ವೇಷಿಸುತ್ತಾನೋ, ಕೃಷಿಯನ್ನು ಬೆಂಬಲಿಸುವುದಿಲ್ಲವೋ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬಾರದು.

05036032a ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನೃತಾ।
05036032c ಸತಾಮೇತಾನಿ ಗೇಹೇಷು ನೋಚ್ಚಿದ್ಯಂತೇ ಕದಾ ಚನ।।

ಚಾಪೆ, ನೆಲ, ನೀರು ಮತ್ತು ಸೌಮ್ಯವಾದ ಮಾತು ಇವು ನಾಲ್ಕು ಉತ್ತಮ ಮನೆಗಳಲ್ಲಿ ಎಂದೂ ಇರುತ್ತವೆ.

05036033a ಶ್ರದ್ಧಯಾ ಪರಯಾ ರಾಜನ್ನುಪನೀತಾನಿ ಸತ್ಕೃತಿಂ।
05036033c ಪ್ರವೃತ್ತಾನಿ ಮಹಾಪ್ರಾಜ್ಞಾ ಧರ್ಮಿಣಾಂ ಪುಣ್ಯಕರ್ಮಣಾಂ।।
05036034a ಸೂಕ್ಷ್ಮೋಽಪಿ ಭಾರಂ ನೃಪತೇ ಸ್ಯಂದನೋ ವೈ ಶಕ್ತೋ ವೋಢುಂ ನ ತಥಾನ್ಯೇ ಮಹೀಜಾಃ।
05036034c ಏವಂ ಯುಕ್ತಾ ಭಾರಸಹಾ ಭವಂತಿ ಮಹಾಕುಲೀನಾ ನ ತಥಾನ್ಯೇ ಮನುಷ್ಯಾಃ।।

ನೃಪತೇ! ಸೂಕ್ಷ್ಮವಾದರೂ ಹೇಗೆ ಗಂಧದ ಮರವು ಇತರ ಮರಗಳ ರೆಂಬೆಗಳ ಭಾರವನ್ನು ಹೊರಲು ಶಕ್ತವಾಗಿರುತ್ತದೆಯೋ ಹಾಗೆ ಮಹಾಕುಲಗಳು ಕೂಡ ಇತರ ಮನುಷ್ಯರ ಭಾರವನ್ನು ಹೊರಲು ಸಮರ್ಥವಾಗಿರುತ್ತವೆ.

05036035a ನ ತನ್ಮಿತ್ರಂ ಯಸ್ಯ ಕೋಪಾದ್ಬಿಭೇತಿ ಯದ್ವಾ ಮಿತ್ರಂ ಶಂಕಿತೇನೋಪಚರ್ಯಂ।
05036035c ಯಸ್ಮಿನ್ಮಿತ್ರೇ ಪಿತರೀವಾಶ್ವಸೀತ ತದ್ವೈ ಮಿತ್ರಂ ಸಂಗತಾನೀತರಾಣಿ।।

ಯಾರ ಕೋಪಕ್ಕೆ ಭಯಪಡುತ್ತೇವೋ ಅಥವಾ ಯಾರೊಂದಿಗೆ ಭಯದಿಂದ ನಡೆದುಕೊಳ್ಳಬೇಕಾಗುತ್ತದೆಯೋ ಅವನು ಮಿತ್ರನಲ್ಲ. ಆದರೆ ಯಾವ ಮಿತ್ರನ ಮೇಲೆ ತಂದೆಯ ಮೇಲಿಡುವ ವಿಶ್ವಾಸವನ್ನು ಇಡಬಹುದೋ ಅವನೇ ನಿಜವಾದ ಮಿತ್ರ. ಇತರ ಸಂಬಂಧಗಳು ಮಿತ್ರತ್ವಗಳಲ್ಲ.

05036036a ಯದಿ ಚೇದಪ್ಯಸಂಬಂಧೋ ಮಿತ್ರಭಾವೇನ ವರ್ತತೇ।
05036036c ಸ ಏವ ಬಂಧುಸ್ತನ್ಮಿತ್ರಂ ಸಾ ಗತಿಸ್ತತ್ಪರಾಯಣಂ।।

ರಕ್ತಸಂಬಂಧಿಯಲ್ಲದಿದ್ದರೂ ಯಾರು ಮಿತ್ರಭಾವದಿಂದ ವರ್ತಿಸುತ್ತಾನೋ ಅವನೇ ಬಂಧುವೂ, ಮಿತ್ರನೂ, ಗತಿಯೂ, ತತ್ಪರಾಯಣನೂ ಆಗಿರುತ್ತಾನೆ.

05036037a ಚಲಚಿತ್ತಸ್ಯ ವೈ ಪುಂಸೋ ವೃದ್ಧಾನನುಪಸೇವತಃ।
05036037c ಪಾರಿಪ್ಲವಮತೇರ್ನಿತ್ಯಮಧ್ರುವೋ ಮಿತ್ರಸಂಗ್ರಹಃ।।

ಚಂಚಲ ಚಿತ್ತವನ್ನುಳ್ಳ, ವೃದ್ಧರ ಸೇವೆ ಮಾಡಿರದ ಅಥವಾ ಧೃಢವಾದ ಮನಸ್ಸಿಲ್ಲದ ಪುರುಷನು ಮಿತ್ರರನ್ನು ಮಾಡಿಕೊಳ್ಳಲಾರ.

05036038a ಚಲಚಿತ್ತಮನಾತ್ಮಾನಮಿಂದ್ರಿಯಾಣಾಂ ವಶಾನುಗಂ।
05036038c ಅರ್ಥಾಃ ಸಮತಿವರ್ತಂತೇ ಹಂಸಾಃ ಶುಷ್ಕಂ ಸರೋ ಯಥಾ।।

ಚಂಚಲ ಚಿತ್ತವುಳ್ಳ, ತನ್ನಂತಿರದ, ಇಂದ್ರಿಯಗಳ ವಶಕ್ಕೆ ಸಿಲುಕಿದವನನ್ನು ಯಶಸ್ಸು, ಒಣಗಿದ ಸರೋವರವನ್ನು ಹಂಸಗಳು ಬಿಟ್ಟು ಹೋಗುವಂತೆ ತೊರೆಯುತ್ತದೆ.

05036039a ಅಕಸ್ಮಾದೇವ ಕುಪ್ಯಂತಿ ಪ್ರಸೀದಂತ್ಯನಿಮಿತ್ತತಃ।
05036039c ಶೀಲಮೇತದಸಾಧೂನಾಮಭ್ರಂ ಪಾರಿಪ್ಲವಂ ಯಥಾ।।

ಅಸಾಧುಗಳಂತೆ ವರ್ತಿಸುವ, ಅಕಸ್ಮಾತ್ತಾಗಿ ಕೋಪಿಸಿಕೊಳ್ಳುವ, ಕಾರಣವಿಲ್ಲದೇ ಸಂತೋಷಗೊಳ್ಳುವವರು ಮೋಡಗಳಂತೆ ಚಂಚಲರಾಗಿತ್ತಾರೆ.

05036040a ಸತ್ಕೃತಾಶ್ಚ ಕೃತಾರ್ಥಾಶ್ಚ ಮಿತ್ರಾಣಾಂ ನ ಭವಂತಿ ಯೇ।
05036040c ತಾನ್ಮೃತಾನಪಿ ಕ್ರವ್ಯಾದಾಃ ಕೃತಘ್ನಾನ್ನೋಪಭುಂಜತೇ।।

ಮಿತ್ರರಿಂದ ಸತ್ಕೃತರಾಗಿ ಕೃತಾರ್ಥರಾಗಿದ್ದರೂ ಕೃತಘ್ನರಾಗಿರುವವರನ್ನು ಸತ್ತನಂತರವೂ ಹದ್ದುಗಳು ತಿನ್ನುವುದಿಲ್ಲ.

05036041a ಅರ್ಥಯೇದೇವ ಮಿತ್ರಾಣಿ ಸತಿ ವಾಸತಿ ವಾ ಧನೇ।
05036041c ನಾನರ್ಥಯನ್ವಿಜಾನಾತಿ ಮಿತ್ರಾಣಾಂ ಸಾರಫಲ್ಗುತಾಂ।।

ಧನಿಕನಾಗಿರಲಿ ಅಥವಾ ಬಡವನಾಗಿರಲಿ ಮಿತ್ರರಿಗೆ ಸಹಾಯಮಾಡಬೇಕು. ಸಹಾಯವನ್ನು ಕೇಳದೇ ಮಿತ್ರರ ಸಾರ ಪಕ್ವತೆಯು ತಿಳಿಯುವುದಿಲ್ಲ.

05036042a ಸಂತಾಪಾದ್ಭ್ರಶ್ಯತೇ ರೂಪಂ ಸಂತಾಪಾದ್ಭ್ರಶ್ಯತೇ ಬಲಂ।
05036042c ಸಂತಾಪಾದ್ಭ್ರಶ್ಯತೇ ಜ್ಞಾನಂ ಸಂತಾಪಾದ್ವ್ಯಾಧಿಮೃಚ್ಚತಿ।।

ಸಂತಾಪವು ರೂಪವನ್ನು ಕುಂದಿಸುತ್ತದೆ, ಸಂತಾಪವು ಬಲವನ್ನು ಕುಂದಿಸುತ್ತದೆ, ಸಂತಾಪದಿಂದ ಜ್ಞಾನವು ಕುಂದುತ್ತದೆ, ಮತ್ತು ಸಂತಾಪದಿಂದ ವ್ಯಾಧಿಯು ಹೆಚ್ಚಾಗುತ್ತದೆ.

05036043a ಅನವಾಪ್ಯಂ ಚ ಶೋಕೇನ ಶರೀರಂ ಚೋಪತಪ್ಯತೇ।
05036043c ಅಮಿತ್ರಾಶ್ಚ ಪ್ರಹೃಷ್ಯಂತಿ ಮಾ ಸ್ಮ ಶೋಕೇ ಮನಃ ಕೃಥಾಃ।।

ಶೋಕವು ಬೇಕಾದುದನ್ನು ಪಡೆಯಲು ಸಹಾಯಮಾಡುವುದಿಲ್ಲ. ಶರೀರವನ್ನು ಒಣಗಿಸುತ್ತದೆ. ಇದರಿಂದ ಅಮಿತ್ರರು ಹರ್ಷಪಡುತ್ತಾರೆ. ಆದುದರಿಂದ ಮನಸ್ಸಿನಲ್ಲಿ ಶೋಕಿಸಬೇಡ.

05036044a ಪುನರ್ನರೋ ಮ್ರಿಯತೇ ಜಾಯತೇ ಚ ಪುನರ್ನರೋ ಹೀಯತೇ ವರ್ಧತೇ ಪುನಃ।
05036044c ಪುನರ್ನರೋ ಯಾಚತಿ ಯಾಚ್ಯತೇ ಚ ಪುನರ್ನರಃ ಶೋಚತಿ ಶೋಚ್ಯತೇ ಪುನಃ।।

ನರರು ಸಾಯುತ್ತಾರೆ ಮತ್ತು ಪುನಃ ಹುಟ್ಟುತ್ತಾರೆ. ನರರು ಬೀಳುತ್ತಾರೆ ಮತ್ತು ಪುನಃ ಏಳುತ್ತಾರೆ. ನರರು ಕೇಳುತ್ತಾರೆ ಮತ್ತು ಪುನಃ ಕೊಡುತ್ತಾರೆ. ನರರು ಶೋಕಿಸುತ್ತಾರೆ ಮತ್ತು ಪುನಃ ಶೋಕವನ್ನು ಕೊಡುತ್ತಾರೆ.

05036045a ಸುಖಂ ಚ ದುಃಖಂ ಚ ಭವಾಭವೌ ಚ ಲಾಭಾಲಾಭೌ ಮರಣಂ ಜೀವಿತಂ ಚ।
05036045c ಪರ್ಯಾಯಶಃ ಸರ್ವಮಿಹ ಸ್ಪೃಶಂತಿ ತಸ್ಮಾದ್ಧೀರೋ ನೈವ ಹೃಷ್ಯೇನ್ನ ಶೋಚೇತ್।।

ಸುಖ ಮತ್ತು ದುಃಖ, ಇರುವುದು ಮತ್ತು ಇಲ್ಲದಿರುವುದು (ಭಾವ ಮತ್ತು ಅಭಾವ), ಲಾಭ-ನಷ್ಟ ಮತ್ತು ಮರಣ-ಜೀವನ ಇವೆಲ್ಲವೂ ಒಂದರ ನಂತರ ಇನ್ನೊಂದರಂತೆ ಬರುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಹರ್ಷಪಡುವುದೂ ಇಲ್ಲ, ಶೋಕಿಸುವುದೂ ಇಲ್ಲ.

05036046a ಚಲಾನಿ ಹೀಮಾನಿ ಷಡಿಂದ್ರಿಯಾಣಿ ತೇಷಾಂ ಯದ್ಯದ್ವರ್ತತೇ ಯತ್ರ ಯತ್ರ।
05036046c ತತಸ್ತತಃ ಸ್ರವತೇ ಬುದ್ಧಿರಸ್ಯ ಚಿದ್ರೋದಕುಂಭಾದಿವ ನಿತ್ಯಮಂಭಃ।।

ಈ ಆರು ಇಂದ್ರಿಯಗಳು ಯಾವಾಗಲೂ ಚಂಚಲ. ಛಿದ್ರಗಳಿರುವ ಕೊಡದಿಂದ ನೀರು ಹರಿದು ಹೋಗುವಂತೆ, ಇವುಗಳು ಎಲ್ಲೆಲ್ಲಿ ನಡೆಯುತ್ತವೆಯೋ ಅಲ್ಲಲ್ಲಿಗೆ ಬುದ್ಧಿಯು ಹರಿದು ಹೋಗುತ್ತದೆ.”

05036047 ಧೃತರಾಷ್ಟ್ರ ಉವಾಚ।
05036047a ತನುರುಚ್ಚಃ ಶಿಖೀ ರಾಜಾ ಮಿಥ್ಯೋಪಚರಿತೋ ಮಯಾ।
05036047c ಮಂದಾನಾಂ ಮಮ ಪುತ್ರಾಣಾಂ ಯುದ್ಧೇನಾಂತಂ ಕರಿಷ್ಯತಿ।।

ಧೃತರಾಷ್ಟ್ರನು ಹೇಳಿದನು: “ಉರಿಯುವ ಅಗ್ನಿ ಜ್ವಾಲೆಯಂತಿರುವ ರಾಜ ಯುಧಿಷ್ಠಿರನಿಗೆ ನಾನು ಮೋಸಮಾಡಿದೆ. ಅವನು ನನ್ನ ಮಂದ ಪುತ್ರರನ್ನು ಯುದ್ಧದಲ್ಲಿ ಮುಗಿಸಿಬಿಡುತ್ತಾನೆ.

05036048a ನಿತ್ಯೋದ್ವಿಗ್ನಮಿದಂ ಸರ್ವಂ ನಿತ್ಯೋದ್ವಿಗ್ನಮಿದಂ ಮನಃ।
05036048c ಯತ್ತತ್ಪದಮನುದ್ವಿಗ್ನಂ ತನ್ಮೇ ವದ ಮಹಾಮತೇ।।

ಇವೆಲ್ಲವೂ ನನ್ನನ್ನು ನಿತ್ಯವೂ ಉದ್ವಿಗ್ನಗೊಳಿಸುತ್ತಿದೆ, ಈ ಮನಸ್ಸು ನಿತ್ಯವೂ ಉದ್ವಿಗ್ನವಾಗಿರುತ್ತದೆ. ಮಹಾಮತೇ! ನನ್ನನ್ನು ಅನುದ್ವಿಗ್ನನನ್ನಾಗಿ ಮಾಡಬಲ್ಲ ಮಾತುಗಳನ್ನು ಹೇಳು.”

05036049 ವಿದುರ ಉವಾಚ।
05036049a ನಾನ್ಯತ್ರ ವಿದ್ಯಾತಪಸೋರ್ನಾನ್ಯತ್ರೇಂದ್ರಿಯನಿಗ್ರಹಾತ್।
05036049c ನಾನ್ಯತ್ರ ಲೋಭಸಂತ್ಯಾಗಾಚ್ಚಾಂತಿಂ ಪಶ್ಯಾಮಿ ತೇಽನಘ।।

ವಿದುರನು ಹೇಳಿದನು: “ಅನಘ! ವಿದ್ಯೆ-ತಪಸ್ಸುಗಳಲ್ಲದೇ, ಇಂದ್ರಿಯ ನಿಗ್ರಹವಲ್ಲದೇ, ಲೋಭವನ್ನು ತ್ಯಜಿಸುವುದಲ್ಲದೇ ಬೇರೆ ಯಾವುದರಲ್ಲಿಯೂ ನಿನಗೆ ಶಾಂತಿಯು ಕಾಣುತ್ತಿಲ್ಲ.

05036050a ಬುದ್ಧ್ಯಾ ಭಯಂ ಪ್ರಣುದತಿ ತಪಸಾ ವಿಂದತೇ ಮಹತ್।
05036050c ಗುರುಶುಶ್ರೂಷಯಾ ಜ್ಞಾನಂ ಶಾಂತಿಂ ತ್ಯಾಗೇನ ವಿಂದತಿ।।

ಬುದ್ಧಿಯಿಂದ ಭಯವು ನಾಶವಾಗುತ್ತದೆ, ತಪಸ್ಸಿನಿಂದ ಮಹತ್ತರವಾದುದನ್ನೂ ಸಾಧಿಸಬಹುದು, ಗುರುಶುಶ್ರೂಷೆಯಿಂದ ಜ್ಞಾನ ಮತ್ತು ತ್ಯಾಗದಿಂದ ಶಾಂತಿಯನ್ನು ಗಳಿಸಬಹುದು.

05036051a ಅನಾಶ್ರಿತಾ ದಾನಪುಣ್ಯಂ ವೇದಪುಣ್ಯಮನಾಶ್ರಿತಾಃ।
05036051c ರಾಗದ್ವೇಷವಿನಿರ್ಮುಕ್ತಾ ವಿಚರಂತೀಹ ಮೋಕ್ಷಿಣಃ।।
05036052a ಸ್ವಧೀತಸ್ಯ ಸುಯುದ್ಧಸ್ಯ ಸುಕೃತಸ್ಯ ಚ ಕರ್ಮಣಃ।
05036052c ತಪಸಶ್ಚ ಸುತಪ್ತಸ್ಯ ತಸ್ಯಾಂತೇ ಸುಖಮೇಧತೇ।।

ಸ್ವ-ಅಧ್ಯಯನ, ಧರ್ಮಯುಕ್ತವಾದ ಯುದ್ಧ, ಚೆನ್ನಾಗಿ ಮಾಡಿದ ಕೆಲಸ, ಉತ್ತಮವಾಗಿ ತಪಿಸಿದ ತಪಸ್ಸು ಅಂತ್ಯದಲ್ಲಿ ಸುಖವನ್ನು ನೀಡುತ್ತವೆ.

05036053a ಸ್ವಾಸ್ತೀರ್ಣಾನಿ ಶಯನಾನಿ ಪ್ರಪನ್ನಾ ನ ವೈ ಭಿನ್ನಾ ಜಾತು ನಿದ್ರಾಂ ಲಭಂತೇ।
05036053c ನ ಸ್ತ್ರೀಷು ರಾಜನ್ರತಿಮಾಪ್ನುವಂತಿ ನ ಮಾಗಧೈಃ ಸ್ತೂಯಮಾನಾ ನ ಸೂತೈಃ।।

ರಾಜನ್! ಉತ್ತಮ ಹಾಸಿಗೆಗಳಿದ್ದರೂ ಸುಖನಿದ್ರೆಯನ್ನು ಪಡೆಯದ ಮತ್ತು ಬಂಧುಗಳೊಂದಿಗೆ ಜಗಳವಾಡುವವರು ಸ್ತ್ರೀಯರಿಂದ ರತಿಸುಖವನ್ನು ಪಡೆಯುವುದಿಲ್ಲ ಮತ್ತು ಸೂತ-ಮಾಗಧರಿಂದ ಸ್ತುತಿಸಲ್ಪಟ್ಟರೂ ಸಂತೋಷವನ್ನು ಹೊಂದುವುದಿಲ್ಲ.

05036054a ನ ವೈ ಭಿನ್ನಾ ಜಾತು ಚರಂತಿ ಧರ್ಮಂ ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾಃ।
05036054c ನ ವೈ ಭಿನ್ನಾ ಗೌರವಂ ಮಾನಯಂತಿ ನ ವೈ ಭಿನ್ನಾಃ ಪ್ರಶಮಂ ರೋಚಯಂತಿ।।

ಅಂಥವರು ಧರ್ಮದಲ್ಲಿ ನಡೆಯಲಾರರು. ಅಂಥವರು ಸುಖವನ್ನು ಹೊಂದುವುದಿಲ್ಲ. ಅಂಥವರು ಗೌರವ-ಮಾನಗಳನ್ನು ಪಡೆಯುವುದಿಲ್ಲ. ಮತ್ತು ಅಂಥವರಿಗೆ ಶಾಂತಿಯು ಇಷ್ಟವಾಗುವುದಿಲ್ಲ.

05036055a ನ ವೈ ತೇಷಾಂ ಸ್ವದತೇ ಪಥ್ಯಮುಕ್ತಂ ಯೋಗಕ್ಷೇಮಂ ಕಲ್ಪತೇ ನೋತ ತೇಷಾಂ।
05036055c ಭಿನ್ನಾನಾಂ ವೈ ಮನುಜೇಂದ್ರ ಪರಾಯಣಂ ನ ವಿದ್ಯತೇ ಕಿಂ ಚಿದನ್ಯದ್ವಿನಾಶಾತ್।।

ಅವರಿಗೆ ಒಳ್ಳೆಯ ಮಾತುಗಳು ಇಷ್ಟವಾಗುವುದಿಲ್ಲ. ಅವರಿಗೆ ಇಲ್ಲದುದನ್ನು ಪಡೆಯಲೂ ಇದ್ದುದನ್ನು ಉಳಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಮನುಜೇಂದ್ರ! ಅಂಥವರಿಗೆ ವಿನಾಶವೊಂದನ್ನು ಬಿಟ್ಟರೆ ಬೇರೆ ಏನೂ ಗತಿಯು ತಿಳಿಯುವುದಿಲ್ಲ.

05036056a ಸಂಭಾವ್ಯಂ ಗೋಷು ಸಂಪನ್ನಂ ಸಂಭಾವ್ಯಂ ಬ್ರಾಹ್ಮಣೇ ತಪಃ।
05036056c ಸಂಭಾವ್ಯಂ ಸ್ತ್ರೀಷು ಚಾಪಲ್ಯಂ ಸಂಭಾವ್ಯಂ ಜ್ಞಾತಿತೋ ಭಯಂ।।

ಗೋವುಗಳಲ್ಲಿ ಸಂಪನ್ನತೆಯು ಸಂಭವಿಸಿರುವಂತೆ, ಬ್ರಾಹ್ಮಣರಲ್ಲಿ ತಪಸ್ಸು ಸಂಭವಿಸಿರುವಂತೆ, ಸ್ತ್ರೀಯರಲ್ಲಿ ಚಾಪಲ್ಯವು ಸಂಭವಿಸಿರುವಂತೆ, ಬಂಧುಗಳಿಂದ ಭಯವು ಸಂಭವಿಸುತ್ತದೆ.

05036057a ತಂತವೋಽಪ್ಯಾಯತಾ ನಿತ್ಯಂ ತಂತವೋ ಬಹುಲಾಃ ಸಮಾಃ।
05036057c ಬಹೂನ್ಬಹುತ್ವಾದಾಯಾಸಾನ್ಸಹಂತೀತ್ಯುಪಮಾ ಸತಾಂ।।
05036058a ಧೂಮಾಯಂತೇ ವ್ಯಪೇತಾನಿ ಜ್ವಲಂತಿ ಸಹಿತಾನಿ ಚ।
05036058c ಧೃತರಾಷ್ಟ್ರೋಲ್ಮುಕಾನೀವ ಜ್ಞಾತಯೋ ಭರತರ್ಷಭ।।

ಧೃತರಾಷ್ಟ್ರ! ಭರತರ್ಷಭ! ಒಂದೇ ಅಳತೆಯ ಸಣ್ಣ ಸಣ್ಣ ದಾರಗಳನ್ನು ಒಟ್ಟುಸೇರಿಸಿದ ಜಾಲವು ಬಹಳಷ್ಟು ಭಾರದ, ವೇಗವಾಗಿ ಹೋಗಬಲ್ಲ ವಸ್ತುವನ್ನು ಹೊರಬಲ್ಲದು. ಹಾಗೆಯೇ ಕಟ್ಟಿಗೆಗಳು ಒಂದೊಂದಾಗಿದ್ದರೆ ಕೇವಲ ಹೊಗೆಯನ್ನು ನೀಡುತ್ತವೆ. ಆದರೆ ಒಟ್ಟಾಗಿದ್ದರೆ ಚೆನ್ನಾಗಿ ಉರಿಯುತ್ತವೆ. ಬಂಧುಗಳು ಹಾಗೆ.

05036059a ಬ್ರಾಹ್ಮಣೇಷು ಚ ಯೇ ಶೂರಾಃ ಸ್ತ್ರೀಷು ಜ್ಞಾತಿಷು ಗೋಷು ಚ।
05036059c ವೃಂತಾದಿವ ಫಲಂ ಪಕ್ವಂ ಧೃತರಾಷ್ಟ್ರ ಪತಂತಿ ತೇ।।

ಧೃತರಾಷ್ಟ್ರ! ಬ್ರಾಹ್ಮಣರನ್ನು, ಸ್ತ್ರೀಯರನ್ನು, ಬಂಧುಗಳನ್ನು ಮತ್ತು ಗೋವುಗಳನ್ನು ಕಾಡಿಸುವವರು ಗಳಿತ ಹಣ್ಣಿನಂತೆ ರೆಂಬೆಯಿಂದ ಬೀಳುತ್ತಾರೆ.

05036060a ಮಹಾನಪ್ಯೇಕಜೋ ವೃಕ್ಷೋ ಬಲವಾನ್ಸುಪ್ರತಿಷ್ಠಿತಃ।
05036060c ಪ್ರಸಹ್ಯ ಏವ ವಾತೇನ ಶಾಖಾಸ್ಕಂಧಂ ವಿಮರ್ದಿತುಂ।।

ಒಂಟಿಯಾಗಿರುವ ಮರವು, ಎಷ್ಟೇ ದೊಡ್ಡದಾಗಿದ್ದರೂ, ಬಲಶಾಲಿಯಾಗಿದ್ದರೂ, ಚೆನ್ನಾಗಿ ಬೇರೂರಿದ್ದರೂ, ಭಿರುಗಾಳಿಗೆ ಸಿಲುಕಿ ಬೇಗ ರೆಂಬೆ-ಕಾಂಡಗಳು ಮುರಿದು ಕೆಳಗುರುಳುತ್ತದೆ.

05036061a ಅಥ ಯೇ ಸಹಿತಾ ವೃಕ್ಷಾಃ ಸಂಘಶಃ ಸುಪ್ರತಿಷ್ಠಿತಾಃ।
05036061c ತೇ ಹಿ ಶೀಘ್ರತಮಾನ್ವಾತಾನ್ಸಹಂತೇಽನ್ಯೋನ್ಯಸಂಶ್ರಯಾತ್।।

ಆದರೆ ಒಟ್ಟಿಗೆ ಬೆಳೆದಿರುವ, ಒಟ್ಟಿಗೇ ಬೇರೂರಿರುವ ಮರಗಳು, ಪರಸ್ಪರರ ಬೆಂಬಲದಿಂದ, ಅಂಥಹ ಶೀಘ್ರವಾಗಿ ಬೀಸುವ ಗಾಳಿಗಳನ್ನು ಸಹಿಸಿಕೊಳ್ಳಬಲ್ಲವು.

05036062a ಏವಂ ಮನುಷ್ಯಮಪ್ಯೇಕಂ ಗುಣೈರಪಿ ಸಮನ್ವಿತಂ।
05036062c ಶಕ್ಯಂ ದ್ವಿಷಂತೋ ಮನ್ಯಂತೇ ವಾಯುರ್ದ್ರುಮಮಿವೈಕಜಂ।।

ಹೀಗೆ ಒಂಟಿಯಾಗಿರುವ ಮನುಷ್ಯನನ್ನು, ಎಷ್ಟೇ ಗುಣಗಳಿಂದ ಕೂಡಿದ್ದರೂ, ಒಂಟಿಮರವನ್ನು ಗಾಳಿಯು ಉರುಳಿಸಬಹುದಂತೆ ಉರುಳಿಸಬಹುದು ಎಂದು ಶತ್ರುಗಳು ತಿಳಿದುಕೊಳ್ಳುತ್ತಾರೆ.

05036063a ಅನ್ಯೋನ್ಯಸಮುಪಷ್ಟಂಭಾದನ್ಯೋನ್ಯಾಪಾಶ್ರಯೇಣ ಚ।
05036063c ಜ್ಞಾತಯಃ ಸಂಪ್ರವರ್ಧಂತೇ ಸರಸೀವೋತ್ಪಲಾನ್ಯುತ।।

ಬಂಧುಗಳು ಅನ್ಯೋನ್ಯರನ್ನು ಅವಲಂಬಿಸಿಕೊಂಡು ಅನ್ಯೋನ್ಯರಿಗೆ ಬೆಂಬಲವನ್ನು ನೀಡುತ್ತಾ ಸರೋವರದಲ್ಲಿರುವ ಕಮಲಗಳಂತೆ ಬೆಳೆಯುತ್ತಾರೆ.

05036064a ಅವಧ್ಯಾ ಬ್ರಾಹ್ಮಣಾ ಗಾವಃ ಸ್ತ್ರಿಯೋ ಬಾಲಾಶ್ಚ ಜ್ಞಾತಯಃ।
05036064c ಯೇಷಾಂ ಚಾನ್ನಾನಿ ಭುಂಜೀತ ಯೇ ಚ ಸ್ಯುಃ ಶರಣಾಗತಾಃ।।

ಇವರು ಅವಧ್ಯರು: ಬ್ರಾಹ್ಮಣರು, ಗೋವುಗಳು, ಸ್ತ್ರೀಯರು, ಬಾಲಕರು, ಸಂಬಂಧಿಗಳು, ಯಾರ ಅನ್ನವನ್ನು ಉಂಡಿದ್ದೇವೋ ಅವರು ಮತ್ತು ಶರಣಾಗತರಾದವರು.

05036065a ನ ಮನುಷ್ಯೇ ಗುಣಃ ಕಶ್ಚಿದನ್ಯೋ ಧನವತಾಮಪಿ।
05036065c ಅನಾತುರತ್ವಾದ್ಭದ್ರಂ ತೇ ಮೃತಕಲ್ಪಾ ಹಿ ರೋಗಿಣಃ।।

ನಿನಗೆ ಮಂಗಳವಾಗಲಿ! ಕೆಲವು ಮನುಷ್ಯರು ಧನವಂತರಾಗಿದ್ದರೂ ಅನಾರೋಗ್ಯದಿಂದಾಗ ಉತ್ತಮ ಗುಣದ ಜೀವನವನ್ನು ಬದುಕಲಿಕ್ಕಾಗುವುದಿಲ್ಲ. ಏಕೆಂದರೆ, ರೋಗಿಯು ಸತ್ತಹಾಗೆಯೇ.

05036066a ಅವ್ಯಾಧಿಜಂ ಕಟುಕಂ ಶೀರ್ಷರೋಗಂ ಪಾಪಾನುಬಂಧಂ ಪರುಷಂ ತೀಕ್ಷ್ಣಮುಗ್ರಂ।
05036066c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ।।

ಸಿಟ್ಟು ವ್ಯಾಧಿಯಿಂದ ಹುಟ್ಟಿರದ, ಕಹಿಯಾದ ತಲೆನೋವು. ಪಾಪಕ್ಕೆ ಅಂಟಿಕೊಂಡಿರುತ್ತದೆ. ಖಾರ, ತೀಕ್ಷ್ಣ ಮತ್ತು ಉಗ್ರವಾದುದು. ಇದನ್ನು ಕುಡಿದು ಸಂತರೂ ಅಸಂತರಾಗುತ್ತಾರೆ. ಮಹಾರಾಜ! ಅದನ್ನು ನುಂಗಿ ಶಾಂತನಾಗು.

05036067a ರೋಗಾರ್ದಿತಾ ನ ಫಲಾನ್ಯಾದ್ರಿಯಂತೇ ನ ವೈ ಲಭಂತೇ ವಿಷಯೇಷು ತತ್ತ್ವಂ।
05036067c ದುಃಖೋಪೇತಾ ರೋಗಿಣೋ ನಿತ್ಯಮೇವ ನ ಬುಧ್ಯಂತೇ ಧನಭೋಗಾನ್ನ ಸೌಖ್ಯಂ।।

ರೋಗದಿಂದ ಭಾದಿತರಾದವರು ಫಲಗಳನ್ನು ಸವಿಯುವುದಿಲ್ಲ. ವಿಷಯ ಭೋಗಗಳಲ್ಲಿರುವ ಸಾರವನ್ನು ಸವಿಯುವುದಿಲ್ಲ. ರೋಗಿಗಳು ನಿತ್ಯವೂ ದುಃಖಿಗಳಾಗಿರುತ್ತಾರೆ. ಧನ-ಭೋಗಗಳ ಸುಖವನ್ನೇ ತಿಳಿಯದವರಾಗಿರುತ್ತಾರೆ.

05036068a ಪುರಾ ಹ್ಯುಕ್ತೋ ನಾಕರೋಸ್ತ್ವಂ ವಚೋ ಮೇ ದ್ಯೂತೇ ಜಿತಾಂ ದ್ರೌಪದೀಂ ಪ್ರೇಕ್ಷ್ಯ ರಾಜನ್।
05036068c ದುರ್ಯೋಧನಂ ವಾರಯೇತ್ಯಕ್ಷವತ್ಯಾಂ ಕಿತವತ್ವಂ ಪಂಡಿತಾ ವರ್ಜಯಂತಿ।।

ರಾಜನ್! ಹಿಂದೆ ದ್ಯೂತದಲ್ಲಿ ದ್ರೌಪದಿಯನ್ನು ಗೆದ್ದಾಗ ನಾನು ನಿನಗೆ ಹೇಳಿದ್ದೆ: ದುರ್ಯೋಧನನನ್ನು ನಿಲ್ಲಿಸು. ಮೋಸದ ಜೂಜನ್ನು ಪಂಡಿತರು ತಿರಸ್ಕರಿಸುತ್ತಾರೆ. ಆದರೆ ನೀನು ಅದನ್ನು ಮಾಡಲಿಲ್ಲ.

05036069a ನ ತದ್ಬಲಂ ಯನ್ಮೃದುನಾ ವಿರುಧ್ಯತೇ ಮಿಶ್ರೋ ಧರ್ಮಸ್ತರಸಾ ಸೇವಿತವ್ಯಃ।
05036069c ಪ್ರಧ್ವಂಸಿನೀ ಕ್ರೂರಸಮಾಹಿತಾ ಶ್ರೀರ್ ಮೃದುಪ್ರೌಢಾ ಗಚ್ಚತಿ ಪುತ್ರಪೌತ್ರಾನ್।।

ಮೃದುತ್ವವನ್ನು ವಿರೋಧಿಸುವುದು ಬಲವಲ್ಲ. ಆದರೆ ಅವುಗಳ ಮಿಶ್ರಣವು ಉತ್ತಮ ಧರ್ಮ. ಅದನ್ನು ಪಾಲಿಸಬೇಕು. ಕ್ರೂರತೆಯಿಂದ ಒಟ್ಟುಗೂಡಿಸಿದ ಸಂಪತ್ತು ನಾಶವಾಗುವಂಥಹುದು. ಆದರೆ ಮೃದುತ್ವ ಮತ್ತು ಪ್ರೌಢತೆಗಳಿಂದ ಒಟ್ಟುಗೂಡಿಸಿದ ಧನವು ಮಕ್ಕಳು-ಮೊಮ್ಮಕ್ಕಳಿಗೂ ಬರುತ್ತದೆ.

05036070a ಧಾರ್ತರಾಷ್ಟ್ರಾಃ ಪಾಂಡವಾನ್ಪಾಲಯಂತು ಪಾಂಡೋಃ ಸುತಾಸ್ತವ ಪುತ್ರಾಂಶ್ಚ ಪಾಂತು।
05036070c ಏಕಾರಿಮಿತ್ರಾಃ ಕುರವೋ ಹ್ಯೇಕಮಂತ್ರಾ ಜೀವಂತು ರಾಜನ್ಸುಖಿನಃ ಸಮೃದ್ಧಾಃ।।

ರಾಜನ್! ಧಾರ್ತರಾಷ್ಟ್ರರು ಪಾಂಡವರನ್ನು ಪಾಲಿಸಲಿ. ಪಾಂಡುವಿನ ಮಕ್ಕಳು ನಿನ್ನ ಮಕ್ಕಳನ್ನು ಪಾಲಿಸಲಿ. ಒಂದೇ ಶತ್ರು-ಮಿತ್ರರನ್ನು ಹೊಂದಿ, ಒಂದೇ ಯೋಚನೆಯಿಂದ ಕುರುಗಳು ಸಮೃದ್ಧರಾಗಿ ಸುಖಿಗಳಾಗಿರಲಿ.

05036071a ಮೇಢೀಭೂತಃ ಕೌರವಾಣಾಂ ತ್ವಮದ್ಯ ತ್ವಯ್ಯಾಧೀನಂ ಕುರುಕುಲಮಾಜಮೀಢ।
05036071c ಪಾರ್ಥಾನ್ಬಾಲಾನ್ವನವಾಸಪ್ರತಪ್ತಾನ್ ಗೋಪಾಯಸ್ವ ಸ್ವಂ ಯಶಸ್ತಾತ ರಕ್ಷನ್।।

ಇಂದು ನೀನು ಕೌರವರ ರಕ್ಷಕ. ಅಜಮೀಢ! ಕುರುಕುಲವು ನಿನ್ನ ಅಧೀನದಲ್ಲಿದೆ. ನಿನ್ನ ಕೀರ್ತಿಯನ್ನೂ ರಕ್ಷಿಸಿಕೊಂಡು ವನವಾಸದಿಂದ ಸೋತುಹೋಗಿರುವ ಬಾಲಕ ಪಾರ್ಥರನ್ನು ಪಾಲಿಸು.

05036072a ಸಂಧತ್ಸ್ವ ತ್ವಂ ಕೌರವಾನ್ಪಾಂಡುಪುತ್ರೈರ್ ಮಾ ತೇಂಽತರಂ ರಿಪವಃ ಪ್ರಾರ್ಥಯಂತು।
05036072c ಸತ್ಯೇ ಸ್ಥಿತಾಸ್ತೇ ನರದೇವ ಸರ್ವೇ ದುರ್ಯೋಧನಂ ಸ್ಥಾಪಯ ತ್ವಂ ನರೇಂದ್ರ।।

ಕೌರವ! ಪಾಂಡುಪುತ್ರರೊಂದಿಗೆ ನೀನು ಸಂಧಿಯನ್ನು ಮಾಡಿಕೋ. ಶತ್ರುಗಳಿಗೆ ನಿನ್ನ ದರ್ಬಲತೆಯನ್ನು ತೋರಿಸಬೇಡ. ನರದೇವ! ನರೇಂದ್ರ! ಅವರೆಲ್ಲರೂ ಸತ್ಯದಲ್ಲಿ ನೆಲೆಸಿದ್ದಾರೆ. ನೀನು ದುರ್ಯೋಧನನನ್ನು ತಡೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಷಟ್‌ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತಾರನೆಯ ಅಧ್ಯಾಯವು.


  1. ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಉತ್ತಮವೆಂದು ಹೇಳುತ್ತಾರೆ. ಮಾತನಾಡಲೇ ಬೇಕಾದರೆ ಸತ್ಯವನ್ನು ಹೇಳಬೇಕು. ಸತ್ಯವನ್ನೇ ಹೇಳಬೇಕಾಗಿಬಂದರೆ ಪ್ರಿಯವಾದ ಸತ್ಯವನ್ನು ಹೇಳಬೇಕು. ಪ್ರಿಯವಾದ ಸತ್ಯವನ್ನೇ ಹೇಳಬೇಕಾಗಿಬಂದರೆ ಧರ್ಮವಾದುದನ್ನು ಹೇಳಬೇಕು. ↩︎