ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಪ್ರಜಾಗರ ಪರ್ವ
ಅಧ್ಯಾಯ 35
ಸಾರ
ಲೋಕಗಳಲ್ಲಿ ಎಲ್ಲಿಯವರೆಗೆ ಮನುಷ್ಯನ ಪುಣ್ಯಗಳನ್ನು ಹಾಡಲಾಗುತ್ತದೆಯೋ ಅಲ್ಲಿಯ ವರೆಗೆ ಆ ಪುರುಷವ್ಯಾಘ್ರನು ಸ್ವರ್ಗಲೋಕದಲ್ಲಿ ಬೆಳಗುತ್ತಾನೆ ಎನ್ನುವುದಕ್ಕೆ ಸಂಬಂಧಿಸಿದ ಹಿಂದೆ ಕೇಶಿನಿಯ ಕುರಿತಾಗಿ ಸುಧನ್ವ-ವಿರೋಚನರ ನಡುವೆ ನಡೆದ ಸಂವಾದವನ್ನು ವಿದುರನು ಧೃತರಾಷ್ಟ್ರನಿಗೆ ಹೇಳುವುದು (1-31). “ಭೂಮಿಗಾಗಿ ಸುಳ್ಳನ್ನು ಹೇಳಬಾರದು. ಮಗನ ಮೇಲಿನ ಪ್ರೀತಿಯಿಂದಾಗಿ ಸುಳ್ಳನ್ನು ಹೇಳಿ ಮಕ್ಕಳು ಮಂತ್ರಿಗಳೊಂದಿಗೆ ನಾಶವಾಗಬೇಡ” ಎಂದು ಹೇಳುತ್ತಾ ತನ್ನ ನೀತಿಮಾತುಗಳನ್ನು ವಿದುರನು ಮುಂದುವರೆಸಿದುದು (32-67).
05035001 ಧೃತರಾಷ್ಟ್ರ ಉವಾಚ।
05035001a ಬ್ರೂಹಿ ಭೂಯೋ ಮಹಾಬುದ್ಧೇ ಧರ್ಮಾರ್ಥಸಹಿತಂ ವಚಃ।
05035001c ಶೃಣ್ವತೋ ನಾಸ್ತಿ ಮೇ ತೃಪ್ತಿರ್ವಿಚಿತ್ರಾಣೀಹ ಭಾಷಸೇ।।
ಧೃತರಾಷ್ಟ್ರನು ಹೇಳಿದನು: “ಮಹಾಬುದ್ಧೇ! ಧರ್ಮಾರ್ಥಸಹಿತ ವಚನಗಳನ್ನು ಇನ್ನೂ ಹೇಳು. ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ. ತುಂಬಾ ಚೆನ್ನಾಗಿ ಮಾತನಾಡುತ್ತೀಯೆ.”
05035002 ವಿದುರ ಉವಾಚ।
05035002a ಸರ್ವತೀರ್ಥೇಷು ವಾ ಸ್ನಾನಂ ಸರ್ವಭೂತೇಷು ಚಾರ್ಜವಂ।
05035002c ಉಭೇ ಏತೇ ಸಮೇ ಸ್ಯಾತಾಮಾರ್ಜವಂ ವಾ ವಿಶಿಷ್ಯತೇ।।
ವಿದುರನು ಹೇಳಿದನು: “ಸರ್ವತೀರ್ಥಗಳಲ್ಲಿ ಸ್ನಾನಮಾಡುವುದು ಅಥವಾ ಸರ್ವ ಭೂತಗಳ ಮೇಲೆ ದಯೆಯಿಡುವುದು ಇವೆರಡೂ ಒಂದೇ. ಬಹುಷಃ ದಯೆಯೇ ಹೆಚ್ಚಿನದಾಗಿರಬಹುದು.
05035003a ಆರ್ಜವಂ ಪ್ರತಿಪದ್ಯಸ್ವ ಪುತ್ರೇಷು ಸತತಂ ವಿಭೋ।
05035003c ಇಹ ಕೀರ್ತಿಂ ಪರಾಂ ಪ್ರಾಪ್ಯ ಪ್ರೇತ್ಯ ಸ್ವರ್ಗಮವಾಪ್ಸ್ಯಸಿ।।
ವಿಭೋ! ಪುತ್ರರ ಮೇಲೆ ದಯೆ ತೋರು. ಇದರಿಂದ ಇಲ್ಲಿ ಪರಮ ಕೀರ್ತಿಯನ್ನೂ ಮರಣದ ನಂತರ ಸ್ವರ್ಗವನ್ನೂ ಪಡೆಯುತ್ತೀಯೆ.
05035004a ಯಾವತ್ಕೀರ್ತಿರ್ಮನುಷ್ಯಸ್ಯ ಪುಣ್ಯಾ ಲೋಕೇಷು ಗೀಯತೇ।
05035004c ತಾವತ್ಸ ಪುರುಷವ್ಯಾಘ್ರ ಸ್ವರ್ಗಲೋಕೇ ಮಹೀಯತೇ।।
ಲೋಕಗಳಲ್ಲಿ ಎಲ್ಲಿಯವರೆಗೆ ಮನುಷ್ಯನ ಪುಣ್ಯಗಳನ್ನು ಹಾಡಲಾಗುತ್ತದೆಯೋ ಅಲ್ಲಿಯ ವರೆಗೆ ಆ ಪುರುಷವ್ಯಾಘ್ರನು ಸ್ವರ್ಗಲೋಕದಲ್ಲಿ ಬೆಳಗುತ್ತಾನೆ.
05035005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
05035005c ವಿರೋಚನಸ್ಯ ಸಂವಾದಂ ಕೇಶಿನ್ಯರ್ಥೇ ಸುಧನ್ವನಾ।।
ಅದಕ್ಕೆ ಸಂಬಂಧಿಸಿದಂತೆ ಪುರಾತನವಾದ ಇತಿಹಾಸವೊಂದನ್ನು – ಕೇಶಿನಿಯ ಕುರಿತಾಗಿ ಸುಧನ್ವ-ವಿರೋಚನರ ಸಂವಾದವನ್ನು ಉದಾಹರಿಸುತ್ತಾರೆ1.
05035006 ಕೇಶಿನ್ಯುವಾಚ।
05035006a ಕಿಂ ಬ್ರಾಹ್ಮಣಾಃ ಸ್ವಿಚ್ಚ್ರೇಯಾಂಸೋ ದಿತಿಜಾಃ ಸ್ವಿದ್ವಿರೋಚನ।
05035006c ಅಥ ಕೇನ ಸ್ಮ ಪರ್ಯಂಕಂ ಸುಧನ್ವಾ ನಾಧಿರೋಹತಿ।।
ಕೇಶಿನಿಯು ಹೇಳಿದಳು: “ವಿರೋಚನ! ಬ್ರಾಹ್ಮಣರು ಶ್ರೇಯಸ್ಕರೋ ಅಥವಾ ದಿತಿಯ ಮಕ್ಕಳು ಶ್ರೇಯಸ್ಕರೋ? ಮತ್ತು ಸುಧನ್ವನು ಏಕೆ ಈ ಪರ್ಯಂಕವನ್ನು ಏರಬಾರದು?”
05035007 ವಿರೋಚನ ಉವಾಚ।
05035007a ಪ್ರಾಜಾಪತ್ಯಾ ಹಿ ವೈ ಶ್ರೇಷ್ಠಾ ವಯಂ ಕೇಶಿನಿ ಸತ್ತಮಾಃ।
05035007c ಅಸ್ಮಾಕಂ ಖಲ್ವಿಮೇ ಲೋಕಾಃ ಕೇ ದೇವಾಃ ಕೇ ದ್ವಿಜಾತಯಃ।।
ವಿರೋಚನನು ಹೇಳಿದನು: “ಕೇಶಿನಿ! ಪ್ರಜಾಪತಿಯಿಂದಲೇ ಹುಟ್ಟಿದ ನಾವೇ ಸತ್ತಮರು. ಈ ಎಲ್ಲ ಲೋಕಗಳೂ ನಮ್ಮವಲ್ಲವೇ? ಇನ್ನು ದೇವತೆಗಳು ಯಾರು? ದ್ವಿಜರು ಯಾರು?”
05035008 ಕೇಶಿನ್ಯುವಾಚ।
05035008a ಇಹೈವಾಸ್ಸ್ವ ಪ್ರತೀಕ್ಷಾವ ಉಪಸ್ಥಾನೇ ವಿರೋಚನ।
05035008c ಸುಧನ್ವಾ ಪ್ರಾತರಾಗಂತಾ ಪಶ್ಯೇಯಂ ವಾಂ ಸಮಾಗತೌ।।
ಕೇಶಿನಿಯು ಹೇಳಿದಳು: “ವಿರೋಚನ! ಇಲ್ಲಿಯೇ ಕುಳಿತುಕೊಂಡು ಪ್ರತೀಕ್ಷಿಸು. ನಾಳೆ ಬೆಳಿಗ್ಗೆ ಸುಧನ್ವನು ಬರುವವನಿದ್ದಾನೆ. ನಿಮ್ಮಿಬ್ಬರನ್ನೂ ಒಟ್ಟಿಗೇ ನೋಡುತ್ತೇನೆ.”
05035009 ವಿರೋಚನ ಉವಾಚ।
05035009a ತಥಾ ಭದ್ರೇ ಕರಿಷ್ಯಾಮಿ ಯಥಾ ತ್ವಂ ಭೀರು ಭಾಷಸೇ।
05035009c ಸುಧನ್ವಾನಂ ಚ ಮಾಂ ಚೈವ ಪ್ರಾತರ್ದ್ರಷ್ಟಾಸಿ ಸಂಗತೌ।।
ವಿರೋಚನನು ಹೇಳಿದನು: “ಭದ್ರೇ! ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಬೆಳಿಗ್ಗೆ ಸುಧನ್ವನನ್ನೂ ನನ್ನನ್ನೂ ಒಟ್ಟಿಗೇ ನೋಡುವೆಯಂತೆ.”
05035010 ಸುಧನ್ವೋವಾಚ।
05035010a ಅನ್ವಾಲಭೇ ಹಿರಣ್ಮಯಂ ಪ್ರಾಹ್ರಾದೇಽಹಂ ತವಾಸನಂ।
05035010c ಏಕತ್ವಮುಪಸಂಪನ್ನೋ ನ ತ್ವಾಸೇಯಂ ತ್ವಯಾ ಸಹ।।
ಸುಧನ್ವನು ಹೇಳಿದನು: “ಪ್ರಾಹ್ರಾದ! ನಿನ್ನ ಈ ಹಿರಣ್ಮಯ ಆಸನವನ್ನು ಮುಟ್ಟಬಹುದು. ಆದರೆ ಅದರ ಮೇಲೆ ನಿನ್ನೊಡನೆ ಕುಳಿತುಕೊಳ್ಳುವುದು ಸರಿಯಲ್ಲವೆಂದು ನನಗನ್ನಿಸುತ್ತದೆ.”
05035011 ವಿರೋಚನ ಉವಾಚ।
05035011a ಅನ್ವಾಹರಂತು ಫಲಕಂ ಕೂರ್ಚಂ ವಾಪ್ಯಥ ವಾ ಬೃಸೀಂ।
05035011c ಸುಧನ್ವನ್ನ ತ್ವಮರ್ಹೋಽಸಿ ಮಯಾ ಸಹ ಸಮಾಸನಂ।।
ವಿರೋಚನನು ಹೇಳಿದನು: “ಸುಧನ್ವ! ಮಣೆ, ಕೂರ್ಚ ಅಥವಾ ಪ್ರಾಣಿಯ ಚರ್ಮ ಇವುಗಳು ಮಾತ್ರ ನಿನಗೆ ಸರಿಯಾದವುಗಳು. ನನ್ನೊಡನೆ ಆಸನದಲ್ಲಿ ಕುಳಿತುಕೊಳ್ಳುವುದು ನಿನಗೆ ಸರಿಯಲ್ಲ.”
05035012 ಸುಧನ್ವೋವಾಚ।
05035012a ಪಿತಾಪಿ ತೇ ಸಮಾಸೀನಮುಪಾಸೀತೈವ ಮಾಮಧಃ।
05035012c ಬಾಲಃ ಸುಖೈಧಿತೋ ಗೇಹೇ ನ ತ್ವಂ ಕಿಂ ಚನ ಬುಧ್ಯಸೇ।।
ಸುಧನ್ವನು ಹೇಳಿದನು: “ನಿನ್ನ ತಂದೆಯು ನನಗಿಂತಲೂ ಕೆಳ ಸ್ಥಾನದ ಆಸನದಲ್ಲಿ ಕುಳಿತು ನನ್ನನ್ನು ಗೌರವಿಸುತ್ತಿದ್ದನು. ನೀನು ಬಾಲಕ! ಮನೆಯಲ್ಲಿ ಸುಖದಲ್ಲಿ ಬೆಳೆದವನು. ನಿನಗೆ ಏನೂ ಗೊತ್ತಿಲ್ಲ.”
05035013 ವಿರೋಚನ ಉವಾಚ।
05035013a ಹಿರಣ್ಯಂ ಚ ಗವಾಶ್ವಂ ಚ ಯದ್ವಿತ್ತಮಸುರೇಷು ನಃ।
05035013c ಸುಧನ್ವನ್ವಿಪಣೇ ತೇನ ಪ್ರಶ್ನಂ ಪೃಚ್ಚಾವ ಯೇ ವಿದುಃ।।
ವಿರೋಚನನು ಹೇಳಿದನು: “ಸುಧನ್ವನ್! ಅಸುರರಲ್ಲಿ ಇರುವ ಚಿನ್ನ, ಗೋವುಗಳು ಮತ್ತು ಏನೆಲ್ಲ ಸಂಪತ್ತು ಇವೆಯೋ ಅವೆಲ್ಲವನ್ನೂ ಪಣವನ್ನಾಗಿಟ್ಟು ತಿಳಿದವರಲ್ಲಿ ಕೇಳೋಣ.”
05035014 ಸುಧನ್ವೋವಾಚ।
05035014a ಹಿರಣ್ಯಂ ಚ ಗವಾಶ್ವಂ ಚ ತವೈವಾಸ್ತು ವಿರೋಚನ।
05035014c ಪ್ರಾಣಯೋಸ್ತು ಪಣಂ ಕೃತ್ವಾ ಪ್ರಶ್ನಂ ಪೃಚ್ಚಾವ ಯೇ ವಿದುಃ।।
ಸುಧನ್ವನು ಹೇಳಿದನು: “ವಿರೋಚನ! ಚಿನ್ನ ಮತ್ತು ಗೋವುಗಳು ನಿನ್ನದಾದವು. ಪ್ರಾಣವನ್ನೇ ಪಣವನ್ನಾಗಿಟ್ಟು ತಿಳಿದವರಲ್ಲಿ ಪ್ರಶ್ನೆಯನ್ನು ಕೇಳೋಣ.”
05035015 ವಿರೋಚನ ಉವಾಚ।
05035015a ಆವಾಂ ಕುತ್ರ ಗಮಿಷ್ಯಾವಃ ಪ್ರಾಣಯೋರ್ವಿಪಣೇ ಕೃತೇ।
05035015c ನ ಹಿ ದೇವೇಷ್ವಹಂ ಸ್ಥಾತಾ ನ ಮನುಷ್ಯೇಷು ಕರ್ಹಿ ಚಿತ್।।
ವಿರೋಚನನು ಹೇಳಿದನು: “ಪ್ರಾಣವನ್ನು ಪಣವನ್ನಾಗಿಟ್ಟುಕೊಂಡು ನಾವು ಎಲ್ಲಿಗೆ ಹೋಗೋಣ? ನಾನು ದೇವತೆಗಳ ಮುಂದೆ ನಿಲ್ಲುವವನಲ್ಲ, ಮನುಷ್ಯರ ಮುಂದಂತೂ ಎಂದೂ ಇಲ್ಲ.”
05035016 ಸುಧನ್ವೋವಾಚ।
05035016a ಪಿತರಂ ತೇ ಗಮಿಷ್ಯಾವಃ ಪ್ರಾಣಯೋರ್ವಿಪಣೇ ಕೃತೇ।
05035016c ಪುತ್ರಸ್ಯಾಪಿ ಸ ಹೇತೋರ್ಹಿ ಪ್ರಹ್ರಾದೋ ನಾನೃತಂ ವದೇತ್।।
ಸುಧನ್ವನು ಹೇಳಿದನು: “ಪ್ರಾಣಗಳನ್ನು ಪಣವನ್ನಾಗಿಟ್ಟುಕೊಂಡು ನಿನ್ನ ತಂದೆಯಲ್ಲಿಗೆ ಹೋಗೋಣ. ಪ್ರಹ್ಲಾದನು ಮಗನಿಗೂ ಕೂಡ ಸುಳ್ಳನ್ನು ಹೇಳುವುದಿಲ್ಲ.”
05035017 ಪ್ರಹ್ಲಾದ ಉವಾಚ।
05035017a ಇಮೌ ತೌ ಸಂಪ್ರದೃಶ್ಯೇತೇ ಯಾಭ್ಯಾಂ ನ ಚರಿತಂ ಸಹ।
05035017c ಆಶೀವಿಷಾವಿವ ಕ್ರುದ್ಧಾವೇಕಮಾರ್ಗಮಿಹಾಗತೌ।।
ಪ್ರಹ್ಲಾದನು ಹೇಳಿದನು: “ಎಂದೂ ಒಟ್ಟಿಗೇ ನೋಡಿರದ ಇವರಿಬ್ಬರೂ ಒಂದೇ ಮಾರ್ಗದಲ್ಲಿ ಒಟ್ಟಿಗೇ ಸಿಟ್ಟಿಗೆದ್ದ ವಿಷಸರ್ಪಗಳಂತೆ ಇಲ್ಲಿಗೆ ಬರುತ್ತಿದ್ದಾರೆ.
05035018a ಕಿಂ ವೈ ಸಹೈವ ಚರತೋ ನ ಪುರಾ ಚರತಃ ಸಹ।
05035018c ವಿರೋಚನೈತತ್ ಪೃಚ್ಚಾಮಿ ಕಿಂ ತೇ ಸಖ್ಯಂ ಸುಧನ್ವನಾ।।
ಹಿಂದೆ ಎಂದೂ ಒಟ್ಟಿಗೇ ನಡೆಯದೇ ಇದ್ದ ನೀವು ಏಕೆ ಒಟ್ಟಿಗೇ ಬರುತ್ತಿದ್ದೀರಿ? ವಿರೋಚನನಲ್ಲಿ ಕೇಳುತ್ತಿದ್ದೇನೆ - ಸುಧನ್ವನೊಂದಿಗೆ ನಿನಗೆ ಯಾವ ತರಹದ ಸಖ್ಯ?”
05035019 ವಿರೋಚನ ಉವಾಚ।
05035019a ನ ಮೇ ಸುಧನ್ವನಾ ಸಖ್ಯಂ ಪ್ರಾಣಯೋರ್ವಿಪಣಾವಹೇ।
05035019c ಪ್ರಹ್ಲಾದ ತತ್ತ್ವಾಂ ಪೃಚ್ಚಾಮಿ ಮಾ ಪ್ರಶ್ನಮನೃತಂ ವದೀಃ।।
ವಿರೋಚನನು ಹೇಳಿದನು: “ನನಗೆ ಸುಧನ್ವನೊಂದಿಗೆ ಸಖ್ಯವಿಲ್ಲ. ಪ್ರಾಣಗಳನ್ನು ಪಣವಾಗಿಟ್ಟಿದ್ದೇವೆ. ಪ್ರಹ್ಲಾದ! ನಿನಗೆ ಪ್ರಶ್ನೆಯನ್ನು ಕೇಳುತ್ತೇನೆ. ಸುಳ್ಳನ್ನು ಹೇಳಬಾರದು.”
05035020 ಪ್ರಹ್ಲಾದ ಉವಾಚ।
05035020a ಉದಕಂ ಮಧುಪರ್ಕಂ ಚಾಪ್ಯಾನಯಂತು ಸುಧನ್ವನೇ।
05035020c ಬ್ರಹ್ಮನ್ನಭ್ಯರ್ಚನೀಯೋಽಸಿ ಶ್ವೇತಾ ಗೌಃ ಪೀವರೀಕೃತಾ।।
ಪ್ರಹ್ಲಾದನು ಹೇಳಿದನು: “ಸುಧನ್ವನಿಗೆ ಉದಕ ಮಧುಪರ್ಕಗಳನ್ನು ತೆಗೆದುಕೊಂಡು ಬನ್ನಿ. ಬ್ರಹ್ಮನ್! ದಷ್ಟಪುಷ್ಟ ಬಿಳಿಯ ಗೋವನ್ನಿತ್ತು ನಿನ್ನನ್ನು ಅರ್ಚಿಸುತ್ತೇನೆ.”
05035021 ಸುಧನ್ವೋವಾಚ।
05035021a ಉದಕಂ ಮಧುಪರ್ಕಂ ಚ ಪಥ ಏವಾರ್ಪಿತಂ ಮಮ।
05035021c ಪ್ರಹ್ಲಾದ ತ್ವಂ ತು ನೌ ಪ್ರಶ್ನಂ ತಥ್ಯಂ ಪ್ರಬ್ರೂಹಿ ಪೃಚ್ಚತೋಃ।।
ಸುಧನ್ವನು ಹೇಳಿದನು: “ಪ್ರಹ್ಲಾದ! ಉದಕ ಮಧುಪರ್ಕಗಳನ್ನು ನನಗೆ ಅರ್ಪಿಸಿಯಾಯಿತು. ಈಗ ನಾವು ಕೇಳುವ ಪ್ರಶ್ನೆಗೆ ಉತ್ತರವನ್ನು ನೀಡು.”
05035022 ಪ್ರಹ್ಲಾದ ಉವಾಚ।
05035022a ಪುತ್ರೋ ವಾನ್ಯೋ ಭವಾನ್ಬ್ರಹ್ಮನ್ಸಾಕ್ಷ್ಯೇ ಚೈವ ಭವೇತ್ಸ್ಥಿತಃ।
05035022c ತಯೋರ್ವಿವದತೋಃ ಪ್ರಶ್ನಂ ಕಥಮಸ್ಮದ್ವಿಧೋ ವದೇತ್।।
ಪ್ರಹ್ಲಾದನು ಹೇಳಿದನು: “ಬ್ರಹ್ಮನ್! ನನಗೆ ಬೇರೆ ಪುತ್ರರಿಲ್ಲ. ನೀನೂ ಕೂಡ ಇಲ್ಲಿ ಸಾಕ್ಷಾತ್ ನಿಂತಿರುವೆ. ನಿಮ್ಮಿಬ್ಬರು ವಾದಮಾಡಿಕೊಳ್ಳುತ್ತಿರುವ ಪ್ರಶ್ನೆಯ ಕುರಿತು ನಾನು ಹೇಗೆ ಹೇಳಬಲ್ಲೆ?”
05035023a ಅಥ ಯೋ ನೈವ ಪ್ರಬ್ರೂಯಾತ್ಸತ್ಯಂ ವಾ ಯದಿ ವಾನೃತಂ।
05035023c ಏತತ್ಸುಧನ್ವನ್ ಪೃಚ್ಚಾಮಿ ದುರ್ವಿವಕ್ತಾ ಸ್ಮ ಕಿಂ ವಸೇತ್।।
ಸುಧನ್ವನ್! ಸತ್ಯವನ್ನು ಹೇಳದೇ ಸುಳ್ಳನ್ನು ಹೇಳುವವನು ಯಾವ ದುರಾವಸ್ಥೆಯಲ್ಲಿ ವಾಸಿಸುತ್ತಾನೆ ಎಂದು ಕೇಳುತ್ತೇನೆ.”
05035024 ಸುಧನ್ವೋವಾಚ।
05035024a ಯಾಂ ರಾತ್ರಿಮಧಿವಿನ್ನಾ ಸ್ತ್ರೀ ಯಾಂ ಚೈವಾಕ್ಷಪರಾಜಿತಃ।
05035024c ಯಾಂ ಚ ಭಾರಾಭಿತಪ್ತಾಂಗೋ ದುರ್ವಿವಕ್ತಾ ಸ್ಮ ತಾಂ ವಸೇತ್।।
ಸುಧನ್ವನು ಹೇಳಿದನು: “ಸುಳ್ಳನ್ನು ಹೇಳುವವನು ಪರಿತ್ಯಜಿಸಲ್ಪಟ್ಟ ಸ್ತ್ರೀಯು ತನ್ನ ಪತಿಯು ಸವತಿಯ ತೋಳ ಆಲಿಂಗನದಲ್ಲಿರುವುದನ್ನು ನೋಡಿದರೆ ಹೇಗಿರುತ್ತಾಳೋ ಅಂಥಹ ಮತ್ತು ದ್ಯೂತದಲ್ಲಿ ಸೋತವನಿರುವಂಥಹ ದುರಾವಸ್ಥೆಯಲ್ಲಿರುತ್ತಾನೆ.
05035025a ನಗರೇ ಪ್ರತಿರುದ್ಧಃ ಸನ್ಬಹಿರ್ದ್ವಾರೇ ಬುಭುಕ್ಷಿತಃ।
05035025c ಅಮಿತ್ರಾನ್ಭೂಯಸಃ ಪಶ್ಯನ್ದುರ್ವಿವಕ್ತಾ ಸ್ಮ ತಾಂ ವಸೇತ್।।
ನಗರಕ್ಕೆ ಪ್ರವೇಶಪಡೆಯದೇ ದ್ವಾರದ ಹೊರಗೇ ನಿಲ್ಲಿಸಲ್ಪಟ್ಟವನಂತೆ ಸುಳ್ಳುಹೇಳುವವರು ಮತ್ತೆ ಮತ್ತೆ ತಮ್ಮ ಅಮಿತ್ರರನ್ನು ಭೇಟಿಯಾಗುತ್ತಾ ಇರುತ್ತಾರೆ.
05035026a ಪಂಚ ಪಶ್ವನೃತೇ ಹಂತಿ ದಶ ಹಂತಿ ಗವಾನೃತೇ।
05035026c ಶತಮಶ್ವಾನೃತೇ ಹಂತಿ ಸಹಸ್ರಂ ಪುರುಷಾನೃತೇ।।
ಪಶುವಿಗಾಗಿ ಸುಳ್ಳುಹೇಳುವವನು ಐವರನ್ನು ಕೊಂದಂತೆ, ಗೋವಿಗಾಗಿ ಸುಳ್ಳುಹೇಳಿದರೆ ಹತ್ತುಜನರನ್ನು ಕೊಂದಂತೆ, ಕುದುರೆಗಾಗಿ ಸುಳ್ಳುಹೇಳಿದರೆ ನೂರು ಜನರನ್ನು ಕೊಂದಂತೆ ಮತ್ತು ಮನುಷ್ಯನಿಗಾಗಿ ಸುಳ್ಳು ಹೇಳಿದರೆ ಸಾವಿರ ಜನರನ್ನು ಕೊಂದಂತೆ.
05035027a ಹಂತಿ ಜಾತಾನಜಾತಾಂಶ್ಚ ಹಿರಣ್ಯಾರ್ಥೇಽನೃತಂ ವದನ್।
05035027c ಸರ್ವಂ ಭೂಮ್ಯನೃತೇ ಹಂತಿ ಮಾ ಸ್ಮ ಭೂಮ್ಯನೃತಂ ವದೀಃ।।
ಹಿರಣ್ಯಕ್ಕಾಗಿ ಸುಳ್ಳುಹೇಳಿದರೆ ಹುಟ್ಟಿದ ಮತ್ತು ಹುಟ್ಟಲಿರುವ ಎಲ್ಲರನ್ನೂ ಕೊಂದಂತೆ. ಭೂಮಿಗೋಸ್ಕರ ಸುಳ್ಳು ಹೇಳಿದರೆ ಎಲ್ಲವನ್ನು ಕೊಂದ ಹಾಗೆ. ಆದುದರಿಂದ ಭೂಮಿಗಾಗಿ ಎಂದೂ ಸುಳ್ಳನ್ನು ಹೇಳಬಾರದು.”
05035028 ಪ್ರಹ್ಲಾದ ಉವಾಚ।
05035028a ಮತ್ತಃ ಶ್ರೇಯಾನಂಗಿರಾ ವೈ ಸುಧನ್ವಾ ತ್ವದ್ವಿರೋಚನ।
05035028c ಮಾತಾಸ್ಯ ಶ್ರೇಯಸೀ ಮಾತುಸ್ತಸ್ಮಾತ್ತ್ವಂ ತೇನ ವೈ ಜಿತಃ।।
ಪ್ರಹ್ಲಾದನು ಹೇಳಿದನು: “ವಿರೋಚನ! ನನಗಿಂತಲೂ ಅಂಗಿರಸನು ಮತ್ತು ಸುಧನ್ವನು ನಿನಗಿಂತ ಶ್ರೇಯನು. ಅವನ ತಾಯಿಯೂ ನಿನ್ನ ತಾಯಿಗಿಂತ ಶ್ರೇಯಳು. ಆದುದರಿಂದ ನೀನು ಅವನೊಡನೆ ಸೋತೆ.
05035029a ವಿರೋಚನ ಸುಧನ್ವಾಯಂ ಪ್ರಾಣಾನಾಮೀಶ್ವರಸ್ತವ।
05035029c ಸುಧನ್ವನ್ಪುನರಿಚ್ಚಾಮಿ ತ್ವಯಾ ದತ್ತಂ ವಿರೋಚನಂ।।
ವಿರೋಚನ! ಈಗ ಸುಧನ್ವನು ನಿನ್ನ ಪ್ರಾಣದ ಈಶ್ವರ. ಸುಧನ್ವನ್! ಆದರೆ ವಿರೋಚನನನ್ನು ಹಿಂದಿರುಗಿಸು ಎಂದು ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ.”
05035030 ಸುಧನ್ವೋವಾಚ।
05035030a ಯದ್ಧರ್ಮಮವೃಣೀಥಾಸ್ತ್ವಂ ನ ಕಾಮಾದನೃತಂ ವದೀಃ।
05035030c ಪುನರ್ದದಾಮಿ ತೇ ತಸ್ಮಾತ್ಪುತ್ರಂ ಪ್ರಹ್ಲಾದ ದುರ್ಲಭಂ।।
ಸುಧನ್ವನು ಹೇಳಿದನು: “ನೀನು ಧರ್ಮವನ್ನು ಆರಿಸಿಕೊಂಡಿದ್ದೀಯೆ. ಕಾಮದಿಂದ ಸುಳ್ಳನ್ನು ಹೇಳಲಿಲ್ಲ. ಪ್ರಹ್ಲಾದ! ಆದುದರಿಂದ ನಿನ್ನ ದುರ್ಲಭ ಪುತ್ರನನ್ನು ನಿನಗೆ ಹಿಂದಿರುಗಿಸುತ್ತಿದ್ದೇನೆ.
05035031a ಏಷ ಪ್ರಹ್ಲಾದ ಪುತ್ರಸ್ತೇ ಮಯಾ ದತ್ತೋ ವಿರೋಚನಃ।
05035031c ಪಾದಪ್ರಕ್ಷಾಲನಂ ಕುರ್ಯಾತ್ಕುಮಾರ್ಯಾಃ ಸನ್ನ್ನಿಧೌ ಮಮ।।
ಪ್ರಹ್ಲಾದ! ಇದೋ ನಾನು ನಿನ್ನ ಪುತ್ರ ವಿರೋಚನನನ್ನು ಕೊಡುತ್ತಿದ್ದೇನೆ. ಇವನು ಈ ಕುಮಾರಿಯ ಸನ್ನಿಧಿಯಲ್ಲಿ ನನ್ನ ಪಾದಗಳನ್ನು ತೊಳೆಯಬೇಕು.””
05035032 ವಿದುರ ಉವಾಚ।
05035032a ತಸ್ಮಾದ್ರಾಜೇಂದ್ರ ಭೂಮ್ಯರ್ಥೇ ನಾನೃತಂ ವಕ್ತುಮರ್ಹಸಿ।
05035032c ಮಾ ಗಮಃ ಸಸುತಾಮಾತ್ಯೋಽತ್ಯಯಂ ಪುತ್ರಾನನುಭ್ರಮನ್।।
ವಿದುರನು ಹೇಳಿದನು: “ಆದುದರಿಂದ ರಾಜೇಂದ್ರ! ಭೂಮಿಗಾಗಿ ಸುಳ್ಳನ್ನು ಹೇಳಬಾರದು. ಮಗನ ಮೇಲಿನ ಪ್ರೀತಿಯಿಂದಾಗಿ ಸುಳ್ಳನ್ನು ಹೇಳಿ ಮಕ್ಕಳು-ಮಂತ್ರಿಗಳೊಂದಿಗೆ ನಾಶವಾಗಬೇಡ.
05035033a ನ ದೇವಾ ಯಷ್ಟಿಮಾದಾಯ ರಕ್ಷಂತಿ ಪಶುಪಾಲವತ್।
05035033c ಯಂ ತು ರಕ್ಷಿತುಮಿಚ್ಚಂತಿ ಬುದ್ಧ್ಯಾ ಸಂವಿಭಜಂತಿ ತಂ।।
ದೇವತೆಗಳು ದಂಡವನ್ನು ಹಿಡಿದು ಪಶುಪಾಲಕರಂತೆ ರಕ್ಷಿಸುವುದಿಲ್ಲ. ಯಾರನ್ನು ಅವರು ರಕ್ಷಿಸಲು ಬಯಸುತ್ತಾರೋ ಅವರಲ್ಲಿ ಬುದ್ಧಿಯನ್ನು ಹುಟ್ಟಿಸುತ್ತಾರೆ.
05035034a ಯಥಾ ಯಥಾ ಹಿ ಪುರುಷಃ ಕಲ್ಯಾಣೇ ಕುರುತೇ ಮನಃ।
05035034c ತಥಾ ತಥಾಸ್ಯ ಸರ್ವಾರ್ಥಾಃ ಸಿಧ್ಯಂತೇ ನಾತ್ರ ಸಂಶಯಃ।।
ಹೇಗೆ ಹೇಗೆ ಪುರುಷನು ಕಲ್ಯಾಣಕ್ಕೆ ಮನಸ್ಸು ಮಾಡುತ್ತಾನೋ ಹಾಗೆ ಹಾಗೆ ಅವನ ಸರ್ವಾರ್ಥಗಳೂ ಸಿದ್ಧಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
05035035a ನ ಚಂದಾಂಸಿ ವೃಜಿನಾತ್ತಾರಯಂತಿ ಮಾಯಾವಿನಂ ಮಾಯಯಾ ವರ್ತಮಾನಂ।
05035035c ನೀಡಂ ಶಕುಂತಾ ಇವ ಜಾತಪಕ್ಷಾಶ್ ಚಂದಾಂಸ್ಯೇನಂ ಪ್ರಜಹತ್ಯಂತಕಾಲೇ।।
ಮೋಸದಿಂದ ನಡೆದುಕೊಳ್ಳುವ ಮೋಸಗಾರನನ್ನು ಅಂತ್ಯಕಾಲದಲ್ಲಿ ರೆಕ್ಕೆಗಳು ಬಲಿತ ಪಕ್ಷಿಗಳು ಗೂಡನ್ನು ಬಿಟ್ಟು ಹೋಗುವಂತೆ ವೇದಗಳು ಬಿಟ್ಟು ಹೋಗುತ್ತವೆ.
05035036a ಮತ್ತಾಪಾನಂ ಕಲಹಂ ಪೂಗವೈರಂ ಭಾರ್ಯಾಪತ್ಯೋರಂತರಂ ಜ್ಞಾತಿಭೇದಂ।
05035036c ರಾಜದ್ವಿಷ್ಟಂ ಸ್ತ್ರೀಪುಮಾಂಸೋರ್ವಿವಾದಂ ವರ್ಜ್ಯಾನ್ಯಾಹುರ್ಯಶ್ಚ ಪಂಥಾಃ ಪ್ರದುಷ್ಟಃ।।
ಮತ್ತೇರುವ ವರೆಗೆ ಕುಡಿಯುವುದು, ಕಲಹ, ಬಹುಜನರೊಂದಿಗೆ ವೈರ, ಪತಿ-ಪತ್ನಿಯರ ನಡುವೆ ಅಂತರವನ್ನುಂಟುಮಾಡುವುದು, ದಾಯಾದಿಗಳೊಂದಿಗೆ ಜಗಳ, ರಾಜನೊಂದಿಗೆ ದ್ವೇಷ, ಸ್ತ್ರೀ ಮತ್ತು ಪುರುಷನ ವಿವಾದದಲ್ಲಿ ತಲೆಹಾಕುವುದು ಇವನ್ನು ಮತ್ತು ಎಲ್ಲ ದುಷ್ಟ ಮಾರ್ಗಗಳನ್ನೂ ವರ್ಜಿಸಬೇಕು ಎಂದು ಹೇಳುತ್ತಾರೆ.
05035037a ಸಾಮುದ್ರಿಕಂ ವಣಿಜಂ ಚೋರಪೂರ್ವಂ ಶಲಾಕಧೂರ್ತಂ ಚ ಚಿಕಿತ್ಸಕಂ ಚ।
05035037c ಅರಿಂ ಚ ಮಿತ್ರಂ ಚ ಕುಶೀಲವಂ ಚ ನೈತಾನ್ಸಾಕ್ಷ್ಯೇಷ್ವಧಿಕುರ್ವೀತ ಸಪ್ತ।।
ಸಾಮುದ್ರಿಕ, ಮೊದಲು ಕಳ್ಳನಾಗಿದ್ದ ವರ್ತಕ, ಶಲಾಕಧೂರ್ತ, ಚಿಕಿತ್ಸಕ, ಶತ್ರು, ಮಿತ್ರ ಮತ್ತು ಕುಶೀಲವ ಇವರು ಏಳು ಮಂದಿ ಸಾಕ್ಷಿಗಳಾಗಿ ಒಳ್ಳೆಯದನ್ನು ಮಾಡುವುದಿಲ್ಲ.
05035038a ಮಾನಾಗ್ನಿಹೋತ್ರಮುತ ಮಾನಮೌನಂ ಮಾನೇನಾಧೀತಮುತ ಮಾನಯಜ್ಞಾಃ।
05035038c ಏತಾನಿ ಚತ್ವಾರ್ಯಭಯಂಕರಾಣಿ ಭಯಂ ಪ್ರಯಚ್ಚಂತ್ಯಯಥಾಕೃತಾನಿ।।
ಅಭಿಮಾನದಿಂದ ಮಾಡುವ ಅಗ್ನಿಹೋತ್ರ, ಅಭಿಮಾನದಿಂದ ಕೈಗೊಳ್ಳುವ ಮೌನವ್ರತ, ಅಭಿಮಾನದಿಂದ ಮಾಡುವ ಅಧ್ಯಯನ ಮತ್ತು ಅಭಿಮಾನದಿಂದ ಮಾಡುವ ಯಜ್ಞ ಇವು ನಾಲ್ಕು ಭಯಂಕರವಾಗಿದ್ದು, ಮಾಡುವವನಲ್ಲಿ ಭಯವನ್ನುಂಟು ಮಾಡುತ್ತವೆ.
05035039a ಅಗಾರದಾಹೀ ಗರದಃ ಕುಂಡಾಶೀ ಸೋಮವಿಕ್ರಯೀ।
05035039c ಪರ್ವಕಾರಶ್ಚ ಸೂಚೀ ಚ ಮಿತ್ರಧ್ರುಕ್ಪಾರದಾರಿಕಃ।।
05035040a ಭ್ರೂಣಹಾ ಗುರುತಲ್ಪೀ ಚ ಯಶ್ಚ ಸ್ಯಾತ್ಪಾನಪೋ ದ್ವಿಜಃ।
05035040c ಅತಿತೀಕ್ಷ್ಣಶ್ಚ ಕಾಕಶ್ಚ ನಾಸ್ತಿಕೋ ವೇದನಿಂದಕಃ।।
05035041a ಸ್ರುವಪ್ರಗ್ರಹಣೋ ವ್ರಾತ್ಯಃ ಕೀನಾಶಶ್ಚಾರ್ಥವಾನಪಿ।
05035041c ರಕ್ಷೇತ್ಯುಕ್ತಶ್ಚ ಯೋ ಹಿಂಸ್ಯಾತ್ಸರ್ವೇ ಬ್ರಹ್ಮಹಣೈಃ ಸಮಾಃ।।
ಮನೆಗೆ ಬೆಂಕಿಯನ್ನಿಡುವವನು, ವಿಷವನ್ನು ಕೊಡುವವನು, ದಲ್ಲಾಳ, ಸೋಮವನ್ನು ಮಾರುವವನು, ಬಾಣಗಳನ್ನು ತಯಾರಿಸುವವನು, ಜ್ಯೋತಿಷ್ಯಗಾರ, ಮಿತ್ರರನ್ನು ಬಾಧಿಸುವವನು, ಪರರ ಸ್ತ್ರೀಯರನ್ನು ಕೂಡುವವನು, ಭ್ರೂಣವನ್ನು ಕೊಂದವನು, ಗುರುವಿನ ಪತ್ನಿಯೊಂದಿಗೆ ಕೂಡಿದವನು, ಮದ್ಯದ ದಾಸನಾಗಿರುವ ದ್ವಿಜ, ಅತಿ ತೀಕ್ಷ್ಣವಾಗಿ ಮಾತನಾಡುವವನು, ಹಳೆಯ ದ್ವೇಷವನ್ನು ಬೆಳೆಸುವವನು, ನಾಸ್ತಿಕ, ವೇದನಿಂದಕ, ಲಂಚವನ್ನು ತೆಗೆದುಕೊಳ್ಳುವವನು, ಗೋವುಗಳನ್ನು ಕೊಲ್ಲುವವನು, ರಕ್ಷಣೆಯನ್ನು ಕೇಳಿದವನನ್ನು ಕೊಲ್ಲುವವನು - ಇವರೆಲ್ಲರೂ ಹಿಂಸೆಯಲ್ಲಿ ಬ್ರಹ್ಮಹತ್ಯೆಯ ಸಮಾನರು.
05035042a ತೃಣೋಲ್ಕಯಾ ಜ್ಞಾಯತೇ ಜಾತರೂಪಂ ಯುಗೇ ಭದ್ರೋ ವ್ಯವಹಾರೇಣ ಸಾಧುಃ।
05035042c ಶೂರೋ ಭಯೇಷ್ವರ್ಥಕೃಚ್ಚ್ರೇಷು ಧೀರಃ ಕೃಚ್ಚ್ರಾಸ್ವಾಪತ್ಸು ಸುಹೃದಶ್ಚಾರಯಶ್ಚ।।
ಚಿನ್ನಕ್ಕೆ ಅಗ್ನಿಯೇ ಪರೀಕ್ಷೆ. ಉತ್ತಮ ಕುಲದದಲ್ಲಿ ಹುಟ್ಟಿದವನಿಗೆ ಅವನ ಸ್ವಭಾವವೇ ಪರೀಕ್ಷೆ. ಸಾಧುವಿಗೆ ಅವನ ನಡತೆಯೇ ಪರೀಕ್ಷೆ. ಶೂರನಿಗೆ ಭಯವನ್ನು ನೀಡುವ ಸಂದರ್ಭವೇ ಪರೀಕ್ಷೆ. ಧೀರನಿಗೆ ಕಷ್ಟಗಳೇ ಪರೀಕ್ಷೆ. ಆಪತ್ತೇ ಸ್ನೇಹಿತರ ಪರೀಕ್ಷೆ.
05035043a ಜರಾ ರೂಪಂ ಹರತಿ ಹಿ ಧೈರ್ಯಮಾಶಾ ಮೃತ್ಯುಃ ಪ್ರಾಣಾನ್ಧರ್ಮಚರ್ಯಾಮಸೂಯಾ।
05035043c ಕ್ರೋಧಃ ಶ್ರಿಯಂ ಶೀಲಮನಾರ್ಯಸೇವಾ ಹ್ರಿಯಂ ಕಾಮಃ ಸರ್ವಮೇವಾಭಿಮಾನಃ।।
ಮುಪ್ಪು ರೂಪವನ್ನು ಅಪಹರಿಸುತ್ತದೆ. ಆಸೆಯು ಧೈರ್ಯವನ್ನು, ಮೃತ್ಯುವು ಪ್ರಾಣವನ್ನು, ಅಸೂಯೆಯು ಧರ್ಮಚರ್ಯೆಯನ್ನು, ಕಾಮವು ಮಾನವನ್ನು, ಮತ್ತು ಅಭಿಮಾನವು ಎಲ್ಲವನ್ನೂ ಅಪಹರಿಸುತ್ತದೆ.
05035044a ಶ್ರೀರ್ಮಂಗಲಾತ್ಪ್ರಭವತಿ ಪ್ರಾಗಲ್ಭ್ಯಾತ್ಸಂಪ್ರವರ್ಧತೇ।
05035044c ದಾಕ್ಷ್ಯಾತ್ತು ಕುರುತೇ ಮೂಲಂ ಸಂಯಮಾತ್ಪ್ರತಿತಿಷ್ಠತಿ।।
ಸಂಪತ್ತು ಮಂಗಲ ಕಾರ್ಯಗಳಲ್ಲಿ ಹುಟ್ಟುತ್ತದೆ, ಕೆಲಸಗಾರಿಕೆಯಿಂದ ಬೆಳೆಯುತ್ತದೆ, ದಕ್ಷತೆಯಿಂದ ಬೇರು ಬಿಡುತ್ತದೆ ಮತ್ತು ಸಂಯಮದಿಂದ ನೆಲೆಗೊಳ್ಳುತ್ತದೆ.
05035045a ಅಷ್ಟೌ ಗುಣಾಃ ಪುರುಷಂ ದೀಪಯಂತಿ ಪ್ರಜ್ಞಾ ಚ ಕೌಲ್ಯಂ ಚ ದಮಃ ಶ್ರುತಂ ಚ।
05035045c ಪರಾಕ್ರಮಶ್ಚಾಬಹುಭಾಷಿತಾ ಚ ದಾನಂ ಯಥಾಶಕ್ತಿ ಕೃತಜ್ಞಾತಾ ಚ।।
ಈ ಅಷ್ಟಗುಣಗಳು ಪುರುಷನನ್ನು ಬೆಳಗಿಸುತ್ತವೆ: ಪ್ರಜ್ಞೆ, ಉತ್ತಮ ಕುಲದಲ್ಲಿ ಜನ್ಮ, ಆತ್ಮ ನಿಯಂತ್ರಣ, ಶ್ರುತಿಗಳ ಪರಿಚಯ, ಪರಾಕ್ರಮ, ಬಹುಭಾಷಿತಾ, ಯಥಾಶಕ್ತಿ ದಾನ ಮತ್ತು ಕೃತಜ್ಞತೆ.
05035046a ಏತಾನ್ಗುಣಾಂಸ್ತಾತ ಮಹಾನುಭಾವಾನ್ ಏಕೋ ಗುಣಃ ಸಂಶ್ರಯತೇ ಪ್ರಸಹ್ಯ।
05035046c ರಾಜಾ ಯದಾ ಸತ್ಕುರುತೇ ಮನುಷ್ಯಂ ಸರ್ವಾನ್ಗುಣಾನೇಷ ಗುಣೋಽತಿಭಾತಿ।।
ಅಯ್ಯಾ! ಈ ಎಲ್ಲ ಗುಣಗಳನ್ನೂ ಹೊಂದಿದ ಮಹಾನುಭಾವನಲ್ಲಿ ಒಂದೇ ಗುಣವು - ಯಾವ ಮನುಷ್ಯನನ್ನು ರಾಜನು ಸತ್ಕರಿಸುತ್ತಾನೋ ಅವನ ಸರ್ವ ಗುಣಗಳನ್ನೂ ಬೆಳಗಿಸಬಲ್ಲದು.
05035047a ಅಷ್ಟೌ ನೃಪೇಮಾನಿ ಮನುಷ್ಯಲೋಕೇ ಸ್ವರ್ಗಸ್ಯ ಲೋಕಸ್ಯ ನಿದರ್ಶನಾನಿ।
05035047c ಚತ್ವಾರ್ಯೇಷಾಮನ್ವವೇತಾನಿ ಸದ್ಭಿಶ್ ಚತ್ವಾರ್ಯೇಷಾಮನ್ವವಯಂತಿ ಸಂತಃ।।
ನೃಪ! ಈ ಎಂಟು ಮನುಷ್ಯಲೋಕದಲ್ಲಿ ಸ್ವರ್ಗಲೋಕದ ನಿದರ್ಶನಗಳು. ಈ ಕೆಳಗಿನವುಗಳಲ್ಲಿ ಮೊದಲನೆಯ ನಾಲ್ಕು ಸಾಧುಗಳಿಗೆ ಜೋಡಿಕೊಂಡಿದ್ದರೆ, ಕೊನೆಯ ನಾಲ್ಕು ಸಂತರನ್ನು ಅನುಸರಿಸುತ್ತವೆ.
05035048a ಯಜ್ಞೋ ದಾನಮಧ್ಯಯನಂ ತಪಶ್ಚ ಚತ್ವಾರ್ಯೇತಾನ್ಯನ್ವವೇತಾನಿ ಸದ್ಭಿಃ।
05035048c ದಮಃ ಸತ್ಯಮಾರ್ಜವಮಾನೃಶಂಸ್ಯಂ ಚತ್ವಾರ್ಯೇತಾನ್ಯನ್ವವಯಂತಿ ಸಂತಃ।।
ಯಜ್ಞ, ದಾನ, ಅಧ್ಯಯನ, ತಪಸ್ಸು ಈ ನಾಲ್ಕು ಸಾದುಗಳಲ್ಲಿರುತ್ತವೆ. ದಮ, ಸತ್ಯ, ದಯೆ, ಮತ್ತು ಅಹಿಂಸೆ ಈ ನಾಲ್ಕು ಸಂತರನ್ನು ಅನುಸರಿಸುತ್ತವೆ.
05035049a ನ ಸಾ ಸಭಾ ಯತ್ರ ನ ಸಂತಿ ವೃದ್ಧಾ ನ ತೇ ವೃದ್ಧಾ ಯೇ ನ ವದಂತಿ ಧರ್ಮಂ।
05035049c ನಾಸೌ ಧರ್ಮೋ ಯತ್ರ ನ ಸತ್ಯಮಸ್ತಿ ನ ತತ್ಸತ್ಯಂ ಯಚ್ಚಲೇನಾನುವಿದ್ಧಂ।।
ವೃದ್ಧರು ಇಲ್ಲದ ಸಭೆಯು ಸಭೆಯಲ್ಲ ಮತ್ತು ಧರ್ಮವೇನೆಂದು ಹೇಳದ ವೃದ್ಧರು ವೃದ್ಧರಲ್ಲ. ಸತ್ಯವಿಲ್ಲದುದರಲ್ಲಿ ಧರ್ಮವಿರುವುದಿಲ್ಲ ಮತ್ತು ಛಲ ಮತ್ತು ಮೋಸವಿರುವಲ್ಲಿ ಸತ್ಯವಿರುವುದಿಲ್ಲ.
05035050a ಸತ್ಯಂ ರೂಪಂ ಶ್ರುತಂ ವಿದ್ಯಾ ಕೌಲ್ಯಂ ಶೀಲಂ ಬಲಂ ಧನಂ।
05035050c ಶೌರ್ಯಂ ಚ ಚಿತ್ರಭಾಷ್ಯಂ ಚ ದಶ ಸಂಸರ್ಗಯೋನಯಃ।।
ಸತ್ಯ, ರೂಪ, ಶ್ರುತಿಜ್ಞಾನ, ವಿದ್ಯೆ, ಉತ್ತಮ ಕುಲದಲ್ಲಿ ಜನ್ಮ, ಶೀಲ, ಬಲ, ಧನ, ಶೌರ್ಯ ಮತ್ತು ಉತ್ತಮ ಮಾತು ಈ ಹತ್ತು ಯೋನಿಗೆ ಸಂಬಂಧಿಸಿವೆ.
05035051a ಪಾಪಂ ಕುರ್ವನ್ಪಾಪಕೀರ್ತಿಃ ಪಾಪಮೇವಾಶ್ನುತೇ ಫಲಂ।
05035051c ಪುಣ್ಯಂ ಕುರ್ವನ್ಪುಣ್ಯಕೀರ್ತಿಃ ಪುಣ್ಯಮೇವಾಶ್ನುತೇ ಫಲಂ।।
ಪಾಪಕೀರ್ತಿಯು ಪಾಪವನ್ನು ಮಾಡಿ ಪಾಪ ಫಲವನ್ನೇ ಪಡೆಯುತ್ತಾನೆ. ಪುಣ್ಯಕೀರ್ತಿಯು ಪುಣ್ಯವನ್ನು ಮಾಡಿ ಪುಣ್ಯಫಲವನ್ನೇ ಪಡೆಯುತ್ತಾನೆ.
05035052a ಪಾಪಂ ಪ್ರಜ್ಞಾಂ ನಾಶಯತಿ ಕ್ರಿಯಮಾಣಂ ಪುನಃ ಪುನಃ।
05035052c ನಷ್ಟಪ್ರಜ್ಞಾಃ ಪಾಪಮೇವ ನಿತ್ಯಮಾರಭತೇ ನರಃ।।
ಪುನಃ ಪುನಃ ಮಾಡಿದ ಪಾಪಗಳು ಪ್ರಜ್ಞೆಯನ್ನು ನಾಶಪಡಿಸುತ್ತವೆ. ಪ್ರಜ್ಞೆಯನ್ನು ಕಳೆದುಕೊಂಡ ನರನು ನಿತ್ಯವೂ ಪಾಪದಲ್ಲಿಯೇ ನಿರತನಾಗಿರುತ್ತಾನೆ.
05035053a ಪುಣ್ಯಂ ಪ್ರಜ್ಞಾಂ ವರ್ಧಯತಿ ಕ್ರಿಯಮಾಣಂ ಪುನಃ ಪುನಃ।
05035053c ವೃದ್ಧಪ್ರಜ್ಞಾಃ ಪುಣ್ಯಮೇವ ನಿತ್ಯಮಾರಭತೇ ನರಃ।।
ಪುನಃ ಪುನಃ ಪುಣ್ಯ ಕರ್ಮಗಳನ್ನು ಮಾಡುವುದರಿಂದ ಪ್ರಜ್ಞೆಯು ವೃದ್ಧಿಯಾಗುತ್ತದೆ ಮತ್ತು ಪ್ರಜ್ಞೆಯು ವೃದ್ಧಿಯಾದಾಗ ನರನು ನಿತ್ಯವೂ ಪುಣ್ಯಕರ್ಮಗಳಲ್ಲಿ ನಿರತನಾಗಿರುತ್ತಾನೆ.
05035054a ಅಸೂಯಕೋ ದಂದಶೂಕೋ ನಿಷ್ಠುರೋ ವೈರಕೃನ್ನರಃ।
05035054c ಸ ಕೃಚ್ಚ್ರಂ ಮಹದಾಪ್ನೋತಿ ನಚಿರಾತ್ಪಾಪಮಾಚರನ್।।
ಅಸೂಯೆಪಡುವವನು, ಇನ್ನೊಬ್ಬರಿಗೆ ಹಿಂಸೆಮಾಡುವವನು, ನಿಷ್ಟುರನಾಗಿರುವವನು, ಮತ್ತು ವೈರವನ್ನು ಬೆಳೆಸಿಕೊಂಡು ಹೋಗುವವನು ಈ ಪಾಪಗಳನ್ನು ಆಚರಿಸಿ ಬೇಗನೇ ಮಹಾ ಕಷ್ಟಗಳನ್ನು ಅನುಭವಿಸುತ್ತಾನೆ.
05035055a ಅನಸೂಯಃ ಕೃತಪ್ರಜ್ಞಾಃ ಶೋಭನಾನ್ಯಾಚರನ್ಸದಾ।
05035055c ಅಕೃಚ್ಚ್ರಾತ್ಸುಖಮಾಪ್ನೋತಿ ಸರ್ವತ್ರ ಚ ವಿರಾಜತೇ।।
ಅಸೂಯೆಪಡದವನು, ಪ್ರಜ್ಞೆಯಲ್ಲಿದ್ದು ಮಾಡುವವನು, ಸದಾ ಚೆನ್ನಾಗಿ ನಡೆದುಕೊಳ್ಳುವವನು ಕಷ್ಟವಿಲ್ಲದೇ ಸುಖವನ್ನು ಪಡೆದು ಎಲ್ಲೆಡೆಯೂ ವಿರಾಜಿಸುತ್ತಾನೆ.
05035056a ಪ್ರಜ್ಞಾಮೇವಾಗಮಯತಿ ಯಃ ಪ್ರಾಜ್ಞೇಭ್ಯಃ ಸ ಪಂಡಿತಃ।
05035056c ಪ್ರಾಜ್ಞೋ ಹ್ಯವಾಪ್ಯ ಧರ್ಮಾರ್ಥೌ ಶಕ್ನೋತಿ ಸುಖಮೇಧಿತುಂ।।
ಪ್ರಾಜ್ಞರಿಂದ ಪ್ರಜ್ಞೆಯನ್ನು ಪಡೆಯುವವನೇ ಪಂಡಿತ. ಪ್ರಾಜ್ಞನು ಧರ್ಮ ಅರ್ಥಗಳೆರಡನ್ನು ಹೊಂದಿ ಅಧಿಕ ಸುಖವನ್ನು ಹೊಂದಬಹುದು.
05035057a ದಿವಸೇನೈವ ತತ್ಕುರ್ಯಾದ್ಯೇನ ರಾತ್ರೌ ಸುಖಂ ವಸೇತ್।
05035057c ಅಷ್ಟಮಾಸೇನ ತತ್ಕುರ್ಯಾದ್ಯೇನ ವರ್ಷಾಃ ಸುಖಂ ವಸೇತ್।।
ರಾತ್ರಿಯನ್ನು ಸುಖವಾಗಿ ಕಳೆಯಬಹುದಾಗಿರುವಂಥಹ ಕೆಲಸವನ್ನೇ ಹಗಲಿನಲ್ಲಿ ಮಾಡಬೇಕು. ಮಳೆಗಾಲದಲ್ಲಿ ಸುಖವಾಗಿರುವುದಕ್ಕೆ ಸಹಾಯವಾಗುವ ಕೆಲಸವನ್ನೇ ಉಳಿದ ಎಂಟು ತಿಂಗಳುಗಳಲ್ಲಿ ಮಾಡಬೇಕು.
05035058a ಪೂರ್ವೇ ವಯಸಿ ತತ್ಕುರ್ಯಾದ್ಯೇನ ವೃದ್ಧಃ ಸುಖಂ ವಸೇತ್।
05035058c ಯಾವಜ್ಜೀವೇನ ತತ್ಕುರ್ಯಾದ್ಯೇನ ಪ್ರೇತ್ಯ ಸುಖಂ ವಸೇತ್।।
ಕಿರಿಯ ವಯಸ್ಸಿನಲ್ಲಿ ಮುಂದೆ ವೃದ್ಧಾಪ್ಯದಲ್ಲಿ ಸುಖವಾಗಿ ಜೀವಿಸಲು ಏನು ಬೇಕೋ ಅದನ್ನು ಮಾಡಿಕೊಳ್ಳಬೇಕು. ಜೀವಂತವಾಗಿರುವಾಗ ಮರಣದ ನಂತರ ಸುಖವಾಗಿರಲು ಏನು ಬೇಕಾಗುತ್ತದೆಯೋ ಅದನ್ನು ಮಾಡಬೇಕು.
05035059a ಜೀರ್ಣಮನ್ನಂ ಪ್ರಶಂಸಂತಿ ಭಾರ್ಯಾಂ ಚ ಗತಯೌವನಾಂ।
05035059c ಶೂರಂ ವಿಗತಸಂಗ್ರಾಮಂ ಗತಪಾರಂ ತಪಸ್ವಿನಂ।।
ಚೆನ್ನಾಗಿ ಜೀರ್ಣವಾದ ಆಹಾರ, ಯೌವನವನ್ನು ಕಳೆದುಕೊಂಡ ಭಾರ್ಯೆ, ಸಂಗ್ರಾಮವನ್ನು ಮುಗಿಸಿದ ಶೂರ ಮತ್ತು ಸಿದ್ಧಿಯನ್ನು ಪಡೆದ ತಪಸ್ವಿನಿ – ಇವರನ್ನು ಪ್ರಶಂಸಿಸುತ್ತಾರೆ.
05035060a ಧನೇನಾಧರ್ಮಲಬ್ಧೇನ ಯಚ್ಚಿದ್ರಮಪಿಧೀಯತೇ।
05035060c ಅಸಂವೃತಂ ತದ್ಭವತಿ ತತೋಽನ್ಯದವದೀರ್ಯತೇ।।
ಅಧರ್ಮದಿಂದ ಪಡೆದ ಧನದಲ್ಲಿ ಛಿದ್ರಗಳು ಕಾಣುತ್ತವೆ. ಅದನ್ನು ಮುಚ್ಚಿಡಲು ಪ್ರಯತ್ನಿಸಿದರೂ ಬೇರೆ ಕಡೆಗಳಲ್ಲಿ ಛಿದ್ರವು ಕಾಣಿಸಿಕೊಳ್ಳುತ್ತವೆ.
05035061a ಗುರುರಾತ್ಮವತಾಂ ಶಾಸ್ತಾ ಶಾಸ್ತಾ ರಾಜಾ ದುರಾತ್ಮನಾಂ।
05035061c ಅಥ ಪ್ರಚ್ಚನ್ನಪಾಪಾನಾಂ ಶಾಸ್ತಾ ವೈವಸ್ವತೋ ಯಮಃ।।
ಆತ್ಮವತರನ್ನು ಗುರುವು ನಿಯಂತ್ರಿಸುತ್ತಾನೆ, ರಾಜನು ದುರಾತ್ಮರನ್ನು ನಿಯಂತ್ರಿಸುತ್ತಾನೆ, ವೈವಸ್ವತ ಯಮನು ಮುಸುಕಿರುವ ಪಾಪಿಗಳನ್ನು ನಿಯಂತ್ರಿಸುತ್ತಾನೆ.
05035062a ಋಷೀಣಾಂ ಚ ನದೀನಾಂ ಚ ಕುಲಾನಾಂ ಚ ಮಹಾತ್ಮನಾಂ।
05035062c ಪ್ರಭವೋ ನಾಧಿಗಂತವ್ಯಃ ಸ್ತ್ರೀಣಾಂ ದುಶ್ಚರಿತಸ್ಯ ಚ।।
ಋಷಿಗಳ, ನದಿಗಳ ಮತ್ತು ಕುಲಗಳ ಮಹಾತ್ಮೆಯನ್ನು ಮತ್ತು ಸ್ತ್ರೀಯರ ದುಶ್ಚರಿತವನ್ನು ತಿಳಿಯಲು ಸಾದ್ಯವಿಲ್ಲ.
05035063a ದ್ವಿಜಾತಿಪೂಜಾಭಿರತೋ ದಾತಾ ಜ್ಞಾತಿಷು ಚಾರ್ಜವೀ।
05035063c ಕ್ಷತ್ರಿಯಃ ಸ್ವರ್ಗಭಾಗ್ರಾಜಂಶ್ಚಿರಂ ಪಾಲಯತೇ ಮಹೀಂ।।
ರಾಜನ್! ದ್ವಿಜಾತಿಯವರ ಪೂಜೆಯಲ್ಲಿ ನಿರತನಾಗಿರುವ, ದಾನಿಯಾದ, ಬಂಧುಗಳೊಡನೆ ಸರಿಯಾಗಿ ನಡೆದುಕೊಳ್ಳುವ ಕ್ಷತ್ರಿಯನು ಬಹುಕಾಲ ಮಹಿಯನ್ನು ಪಾಲಿಸಿ ಸ್ವರ್ಗದಲ್ಲಿ ಭಾಗಿಯಾಗುತ್ತಾನೆ.
05035064a ಸುವರ್ಣಪುಷ್ಪಾಂ ಪೃಥಿವೀಂ ಚಿನ್ವಂತಿ ಪುರುಷಾಸ್ತ್ರಯಃ।
05035064c ಶೂರಶ್ಚ ಕೃತವಿದ್ಯಶ್ಚ ಯಶ್ಚ ಜಾನಾತಿ ಸೇವಿತುಂ।।
ಈ ಮೂರು ರೀತಿಯ ಪುರುಷರು ಭೂಮಿಯಿಂದ ಸುವರ್ಣಪುಷ್ಪಗಳನ್ನು ಕೊಯ್ಯುತ್ತಾರೆ - ಶೂರ, ವಿದ್ಯಾವಂತ ಮತ್ತು ಇನ್ನೊಬ್ಬರ ಸೇವೆ ಮಾಡಲು ತಿಳಿದವನು.
05035065a ಬುದ್ಧಿಶ್ರೇಷ್ಠಾನಿ ಕರ್ಮಾಣಿ ಬಾಹುಮಧ್ಯಾನಿ ಭಾರತ।
05035065c ತಾನಿ ಜಂಘಾಜಘನ್ಯಾನಿ ಭಾರಪ್ರತ್ಯವರಾಣಿ ಚ।।
ಭಾರತ! ಬುದ್ಧಿಯಿಂದ ಮಾಡುವ ಕರ್ಮಗಳು ಶ್ರೇಷ್ಠ, ಬಾಹುಗಳಿಂದ ಮಾಡುವವು ಮಧ್ಯಮ, ತೊಡೆಗಳನ್ನು ಬಳಸಿ ಮಾಡುವ ಮತ್ತು ಭಾರವನ್ನು ಹೊರುವುದು ಕೀಳು ಕರ್ಮಗಳು.
05035066a ದುರ್ಯೋಧನೇ ಚ ಶಕುನೌ ಮೂಢೇ ದುಃಶಾಸನೇ ತಥಾ।
05035066c ಕರ್ಣೇ ಚೈಶ್ವರ್ಯಮಾಧಾಯ ಕಥಂ ತ್ವಂ ಭೂತಿಮಿಚ್ಚಸಿ।।
ದುರ್ಯೋಧನ, ಶಕುನಿ, ಮೂಢ ದುಃಶಾಸನ ಮತ್ತು ಕರ್ಣರ ಮೇಲೆ ಐಶ್ವರ್ಯವನ್ನು ಇರಿಸಿ ಹೇಗೆ ತಾನೆ ನೀನು ಶಾಂತಿಯನ್ನು ಬಯಸುತ್ತೀಯೆ?
05035067a ಸರ್ವೈರ್ಗುಣೈರುಪೇತಾಶ್ಚ ಪಾಂಡವಾ ಭರತರ್ಷಭ।
05035067c ಪಿತೃವತ್ತ್ವಯಿ ವರ್ತಂತೇ ತೇಷು ವರ್ತಸ್ವ ಪುತ್ರವತ್।।
ಭರತರ್ಷಭ! ಸರ್ವಗುಣಗಳಿಂದ ಕೂಡಿದ ಪಾಂಡವರು ನಿನ್ನಲ್ಲಿ ತಂದೆಯಂತೆ ವರ್ತಿಸುತ್ತಾರೆ. ನೀನೂ ಕೂಡ ಅವರೊಡನೆ ಪುತ್ರರಂತೆ ವರ್ತಿಸು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಪಂಚತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೈದನೆಯ ಅಧ್ಯಾಯವು.
-
ತುಂಬಾ ಸುಂದರಿಯಾದ ಕೇಶಿನಿ ಎನ್ನುವ ಕನ್ಯೆಯು ಸ್ವಯಂವರದಲ್ಲಿ ಹಿರಣ್ಯಕಶಿಪುವಿನ ಮೊಮ್ಮಗ, ಪ್ರಹ್ಲಾದನ ಮಗ ವಿರೋಚನನನ್ನು ಕೇಳುತ್ತಾಳೆ. ↩︎