ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಪ್ರಜಾಗರ ಪರ್ವ
ಅಧ್ಯಾಯ 34
ಸಾರ
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರಿಸಿದುದು (1-83).
05034001 ಧೃತರಾಷ್ಟ್ರ ಉವಾಚ।
05034001a ಜಾಗ್ರತೋ ದಹ್ಯಮಾನಸ್ಯ ಯತ್ಕಾರ್ಯಮನುಪಶ್ಯಸಿ।
05034001c ತದ್ಬ್ರೂಹಿ ತ್ವಂ ಹಿ ನಸ್ತಾತ ಧರ್ಮಾರ್ಥಕುಶಲಃ ಶುಚಿಃ।।
ಧೃತರಾಷ್ಟ್ರನು ಹೇಳಿದನು: “ನಿದ್ದೆ ಬಾರದಿರುವನು ಮತ್ತು ಬೇಗೆಯುಳ್ಳವನು ಏನು ಮಾಡಬೇಕು? ಅದನ್ನು ಹೇಳು! ಅಯ್ಯಾ! ನೀನೇ ಧರ್ಮಾರ್ಥಕುಶಲನೂ ಶುಚಿಯೂ ಅಲ್ಲವೇ?
05034002a ತ್ವಂ ಮಾಂ ಯಥಾವದ್ವಿದುರ ಪ್ರಶಾದಿ ಪ್ರಜ್ಞಾಪೂರ್ವಂ ಸರ್ವಮಜಾತಶತ್ರೋಃ।
05034002c ಯನ್ಮನ್ಯಸೇ ಪಥ್ಯಮದೀನಸತ್ತ್ವ ಶ್ರೇಯಸ್ಕರಂ ಬ್ರೂಹಿ ತದ್ವೈ ಕುರೂಣಾಂ।।
ವಿದುರ! ಅದೀನಸತ್ವ! ಆಜಾತಶತ್ರುವಿಗೆ ಎಲ್ಲರಿಗೂ ಸರಿಯಾಗಿರುವುದು ಏನು ಮತ್ತು ಕುರುಗಳಿಗೆ ಶ್ರೇಯಸ್ಕರವಾದುದು ಏನು ಎಂದು ನಿನಗನ್ನಿಸುತ್ತದೆಯೋ ಅದನ್ನು ಯಥಾವತ್ತಾಗಿ ಹೇಳು.
05034003a ಪಾಪಾಶಂಕೀ ಪಾಪಮೇವಾನುಪಶ್ಯನ್ ಪೃಚ್ಚಾಮಿ ತ್ವಾಂ ವ್ಯಾಕುಲೇನಾತ್ಮನಾಹಂ।
05034003c ಕವೇ ತನ್ಮೇ ಬ್ರೂಹಿ ಸರ್ವಂ ಯಥಾವನ್ ಮನೀಷಿತಂ ಸರ್ವಮಜಾತಶತ್ರೋಃ।।
ಮುಂದೆ ಕೆಡುಕಾಗಬಹುದೆಂದು ಶಂಕಿಸಿ ನಾನು ಹಿಂದೆ ಮಾಡಿದ ಪಾಪಗಳನ್ನೇ ಕಾಣುತ್ತಿದ್ದೇನೆ. ಕವೇ! ವ್ಯಾಕುಲಾತ್ಮನಾಗಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಅಜಾತಶತ್ರುವಿನ ಯೋಚನೆಯಲ್ಲಿರಬಹುದಾದುದೆಲ್ಲವನ್ನೂ ನನಗೆ ಯಥಾವತ್ತಾಗಿ ಹೇಳು.”
05034004 ವಿದುರ ಉವಾಚ।
05034004a ಶುಭಂ ವಾ ಯದಿ ವಾ ಪಾಪಂ ದ್ವೇಷ್ಯಂ ವಾ ಯದಿ ವಾ ಪ್ರಿಯಂ।
05034004c ಅಪೃಷ್ಟಸ್ತಸ್ಯ ತದ್ಬ್ರೂಯಾದ್ಯಸ್ಯ ನೇಚ್ಚೇತ್ಪರಾಭವಂ।।
ವಿದುರನು ಹೇಳಿದನು: “ಯಾರ ಸೋಲನ್ನು ಬಯಸುವುದಿಲ್ಲವೋ ಅವನಿಗೆ, ಕೇಳದೇ ಇದ್ದರೂ, ಅದು ಅವನಿಗೆ ಶುಭವೆಂದೆನಿಸಲಿ ಅಥವಾ ಪಾಪವೆಂದೆನಿಸಲಿ, ದ್ವೇಷ ಅಥವಾ ಪ್ರಿಯವಾದುದೆಂದೆನಿಸಲಿ, ಸತ್ಯವನ್ನೇ ನುಡಿಯಬೇಕು.
05034005a ತಸ್ಮಾದ್ವಕ್ಷ್ಯಾಮಿ ತೇ ರಾಜನ್ಭವಮಿಚ್ಚನ್ಕುರೂನ್ಪ್ರತಿ।
05034005c ವಚಃ ಶ್ರೇಯಸ್ಕರಂ ಧರ್ಮ್ಯಂ ಬ್ರುವತಸ್ತನ್ನಿಬೋಧ ಮೇ।।
ರಾಜನ್! ಆದುದರಿಂದ ಕುರುಗಳಿಗೆ ಒಳ್ಳೆಯದನ್ನೇ ಬಯಸಿ ನಿನಗೆ ಶ್ರೇಯಸ್ಕರವಾದ, ಧರ್ಮಯುಕ್ತ ಮಾತುಗಳನ್ನು ಹೇಳುತ್ತಿದ್ದೇನೆ. ಅರ್ಥಮಾಡಿಕೋ!
05034006a ಮಿಥ್ಯೋಪೇತಾನಿ ಕರ್ಮಾಣಿ ಸಿಧ್ಯೇಯುರ್ಯಾನಿ ಭಾರತ।
05034006c ಅನುಪಾಯಪ್ರಯುಕ್ತಾನಿ ಮಾ ಸ್ಮ ತೇಷು ಮನಃ ಕೃಥಾಃ।।
ಭಾರತ! ಮೋಸ ಮತ್ತು ಕೆಟ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾಗುವ ಕರ್ಮಗಳಲ್ಲಿ ನಿನ್ನ ಮನಸ್ಸನ್ನು ತೊಡಗಿಸಬೇಡ.
05034007a ತಥೈವ ಯೋಗವಿಹಿತಂ ನ ಸಿಧ್ಯೇತ್ಕರ್ಮ ಯನ್ನೃಪ।
05034007c ಉಪಾಯಯುಕ್ತಂ ಮೇಧಾವೀ ನ ತತ್ರ ಗ್ಲಪಯೇನ್ಮನಃ।।
ನೃಪ! ಸರಿಯಾಗಿ ಕೈಗೊಂಡ ಉತ್ತಮ ಕಾರ್ಯವು ಸಿದ್ಧಿಯನ್ನು ಕೊಡದಿದ್ದರೂ ಮೇಧಾವಿಯು ತನ್ನ ಮನಸ್ಸನ್ನು ಆಯಾಸಗೊಳ್ಳಲು ಬಿಡುವುದಿಲ್ಲ.
05034008a ಅನುಬಂಧಾನವೇಕ್ಷೇತ ಸಾನುಬಂಧೇಷು ಕರ್ಮಸು।
05034008c ಸಂಪ್ರಧಾರ್ಯ ಚ ಕುರ್ವೀತ ನ ವೇಗೇನ ಸಮಾಚರೇತ್।।
ಕರ್ಮಗಳೊಂದಿಗೆ ಪರಿಣಾಮಗಳು ಜೋಡಿಕೊಂಡಿರುವುದರಿಂದ ಪರಿಣಾಮಗಳ ಕುರಿತು ಯೋಚಿಸಿ ಕಾರ್ಯಗಳನ್ನು ಕೈಗೊಳ್ಳಬೇಕು; ಅವಸರದಲ್ಲಿ ಮಾಡಬಾರದು.
05034009a ಅನುಬಂಧಂ ಚ ಸಂಪ್ರೇಕ್ಷ್ಯ ವಿಪಾಕಾಂಶ್ಚೈವ ಕರ್ಮಣಾಂ।
05034009c ಉತ್ಥಾನಮಾತ್ಮನಶ್ಚೈವ ಧೀರಃ ಕುರ್ವೀತ ವಾ ನ ವಾ।।
ಕರ್ಮಗಳಿಂದ ಮುಂದಾಗುವ ಪರಿಣಾಮಗಳನ್ನು ಮತ್ತು ಅವುಗಳನ್ನು ಸಹಿಸಿಕೊಳ್ಳಲು ತನ್ನಲ್ಲಿರುವ ಶಕ್ತಿಯನ್ನು ನೋಡಿಕೊಂಡು ಅದನ್ನು ಮಾಡಬೇಕೋ ಅಥವಾ ಇಲ್ಲವೋ ಎಂದು ನಿರ್ಧರಿಸಬೇಕು.
05034010a ಯಃ ಪ್ರಮಾಣಂ ನ ಜಾನಾತಿ ಸ್ಥಾನೇ ವೃದ್ಧೌ ತಥಾ ಕ್ಷಯೇ।
05034010c ಕೋಶೇ ಜನಪದೇ ದಂಡೇ ನ ಸ ರಾಜ್ಯೇಽವತಿಷ್ಠತೇ।।
ಯಾವ ರಾಜನಿಗೆ ಸ್ಥಾನ, ಲಾಭ, ನಷ್ಟ, ಹಣ, ಜನರು ಮತ್ತು ಶಿಕ್ಷೆಗಳ ಪ್ರಮಾಣಗಳು ತಿಳಿದಿಲ್ಲವೋ ಅವನು ಬಹುಕಾಲ ರಾಜನಾಗಿ ಉಳಿಯುವುದಿಲ್ಲ.
05034011a ಯಸ್ತ್ವೇತಾನಿ ಪ್ರಮಾಣಾನಿ ಯಥೋಕ್ತಾನ್ಯನುಪಶ್ಯತಿ।
05034011c ಯುಕ್ತೋ ಧರ್ಮಾರ್ಥಯೋರ್ಜ್ಞಾನೇ ಸ ರಾಜ್ಯಮಧಿಗಚ್ಚತಿ।।
ಯಾರು ಈ ಹಿಂದೆ ಹೇಳಿದ ಪ್ರಮಾಣಗಳನ್ನು ಧರ್ಮಾರ್ಥಯುಕ್ತನಾಗಿ ತಿಳಿದುಕೊಂಡು ನಡೆಯುತ್ತಾನೋ ಅವನು ರಾಜತ್ವವನ್ನು ಪಡೆಯುತ್ತಾನೆ.
05034012a ನ ರಾಜ್ಯಂ ಪ್ರಾಪ್ತಮಿತ್ಯೇವ ವರ್ತಿತವ್ಯಮಸಾಂಪ್ರತಂ।
05034012c ಶ್ರಿಯಂ ಹ್ಯವಿನಯೋ ಹಂತಿ ಜರಾ ರೂಪಮಿವೋತ್ತಮಂ।।
“ರಾಜ್ಯವನ್ನು ಪಡೆದಿದ್ದೇನೆ!” ಎಂದು ಒಳ್ಳೆಯದಾಗಿ ನಡೆದುಕೊಳ್ಳದೇ ಇದ್ದರೆ, ಆ ಅವಿನಯವು, ವೃದ್ಧಾಪ್ಯವು ಉತ್ತಮ ರೂಪವನ್ನು ಹೇಗೋ ಹಾಗೆ, ಸಂಪತ್ತನ್ನು ನಾಶಗೊಳಿಸುತ್ತದೆ.
05034013a ಭಕ್ಷ್ಯೋತ್ತಮಪ್ರತಿಚ್ಚನ್ನಂ ಮತ್ಸ್ಯೋ ಬಡಿಶಮಾಯಸಂ।
05034013c ರೂಪಾಭಿಪಾತೀ ಗ್ರಸತೇ ನಾನುಬಂಧಮವೇಕ್ಷತೇ।।
ಒಂದು ಮೀನು, ತೋರುವಿಕೆಗೆ ಮಾತ್ರ ಹಾರಿ, ಉತ್ತಮ ಆಹಾರದಲ್ಲಿ ಮುಚ್ಚಿಟ್ಟಿರುವ ಉಕ್ಕಿನ ಮುಳ್ಳನ್ನು, ಅದರ ಪರಿಣಾಮವೇನಾಗಬಹುದು ಎಂದು ಯೋಚಿಸದೇ ನುಂಗುತ್ತದೆ.
05034014a ಯಚ್ಚಕ್ಯಂ ಗ್ರಸಿತುಂ ಗ್ರಸ್ಯಂ ಗ್ರಸ್ತಂ ಪರಿಣಮೇಚ್ಚ ಯತ್।
05034014c ಹಿತಂ ಚ ಪರಿಣಾಮೇ ಯತ್ತದದ್ಯಂ ಭೂತಿಮಿಚ್ಚತಾ।।
ಒಳ್ಳೆಯದನ್ನು ಬಯಸುವವನು ಏನನ್ನು ತಿನ್ನಬಹುದೋ ಅದನ್ನು ಹುಡುಕುತ್ತಾನೆ, ತಿಂದ ಮೇಲೆ ಅದು ಹೇಗೆ ಜೀರ್ಣವಾಗುತ್ತದೆ ಎನ್ನುವುದರ ಕುರಿತು ಯೋಚಿಸುತ್ತಾನೆ, ಮತ್ತು ಜೀರ್ಣಗೊಂಡ ನಂತರ ಈ ಆಹಾರವು ಒಳ್ಳೆಯದನ್ನು ಉಂಟುಮಾಡಬಲ್ಲದೋ ಎಂದೂ ಯೋಚಿಸುತ್ತಾನೆ.
05034015a ವನಸ್ಪತೇರಪಕ್ವಾನಿ ಫಲಾನಿ ಪ್ರಚಿನೋತಿ ಯಃ।
05034015c ಸ ನಾಪ್ನೋತಿ ರಸಂ ತೇಭ್ಯೋ ಬೀಜಂ ಚಾಸ್ಯ ವಿನಶ್ಯತಿ।।
ಮರದಿಂದ ಇನ್ನೂ ಹಣ್ಣಾಗಿರದ ಫಲವನ್ನು ಕಿತ್ತರೆ ಅದರ ರಸವೂ ಸಿಗುವುದಿಲ್ಲ ಮತ್ತು ಅದರಲ್ಲಿರುವ ಬೀಜವೂ ನಷ್ಟವಾಗುತ್ತದೆ.
05034016a ಯಸ್ತು ಪಕ್ವಮುಪಾದತ್ತೇ ಕಾಲೇ ಪರಿಣತಂ ಫಲಂ।
05034016c ಫಲಾದ್ರಸಂ ಸ ಲಭತೇ ಬೀಜಾಚ್ಚೈವ ಫಲಂ ಪುನಃ।।
ಆದರೆ ಹಣ್ಣಾದ ಕಾಲದಲ್ಲಿ ಹಣ್ಣನ್ನು ಕಿತ್ತರೆ ಫಲದಿಂದ ರಸವು ದೊರೆಯುತ್ತದೆ ಮತ್ತು ಬೀಜದಿಂದ ಪುನಃ ಫಲವು ದೊರೆಯುತ್ತದೆ.
05034017a ಯಥಾ ಮಧು ಸಮಾದತ್ತೇ ರಕ್ಷನ್ಪುಷ್ಪಾಣಿ ಷಟ್ಪದಃ।
05034017c ತದ್ವದರ್ಥಾನ್ಮನುಷ್ಯೇಭ್ಯ ಆದದ್ಯಾದವಿಹಿಂಸಯಾ।।
ಜೇನು ಹುಳುಗಳು ಹೇಗೆ ಹೂಗಳನ್ನು ರಕ್ಷಿಸಿ ಜೇನನ್ನು ಮಾತ್ರ ಶೇಕರಿಸುತ್ತವೆಯೋ ಹಾಗೆ ಮನುಷ್ಯನೂ ಕೂಡ ಇತರರನ್ನು ಹಿಂಸಿಸದೇ ಸಂಪತ್ತನ್ನು ಗಳಿಸಬೇಕು.
05034018a ಪುಷ್ಪಂ ಪುಷ್ಪಂ ವಿಚಿನ್ವೀತ ಮೂಲಚ್ಚೇದಂ ನ ಕಾರಯೇತ್।
05034018c ಮಾಲಾಕಾರ ಇವಾರಾಮೇ ನ ಯಥಾಂಗಾರಕಾರಕಃ।।
ಮಾಲೆಗಳನ್ನು ಕಟ್ಟಿ ಮಾರುವವನಂತೆ ಹೂವುಗಳನ್ನು ಮಾತ್ರ ಕೀಳಬೇಕೇ ಹೊರತು, ಇದ್ದಲು ಮಾಡಿ ಮಾರುವವನಂತೆ ಬೇರಿನ ಸಹಿತ ಗಿಡವನ್ನು ಕೀಳಬಾರದು.
05034019a ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ।
05034019c ಇತಿ ಕರ್ಮಾಣಿ ಸಂಚಿಂತ್ಯ ಕುರ್ಯಾದ್ವಾ ಪುರುಷೋ ನ ವಾ।।
ಇದನ್ನು ಮಾಡಿದರೆ ನನಗೇನಾಗುತ್ತದೇ? ಮಾಡದೇ ಇದ್ದರೆ ನನಗೆ ಏನಾಗುತ್ತದೆ? ಎಂದು ಪುರುಷನು ಪ್ರತಿಯೊಂದು ಕರ್ಮದ ಕುರಿತೂ ಆಲೋಚಿಸಿ ಅದನ್ನು ಮಾಡಬೇಕು ಅಥವಾ ಮಾಡಬಾರದು.
05034020a ಅನಾರಭ್ಯಾ ಭವಂತ್ಯರ್ಥಾಃ ಕೇ ಚಿನ್ನಿತ್ಯಂ ತಥಾಗತಾಃ।
05034020c ಕೃತಃ ಪುರುಷಕಾರೋಽಪಿ ಭವೇದ್ಯೇಷು ನಿರರ್ಥಕಃ।।
ಕೆಲವೊಂದು ವಿಷಯಗಳ ಕುರಿತು ಏನನ್ನೂ ಮಾಡಬಾರದು, ಮತ್ತು ಅವು ಯಾವಾಗಲೂ ಹಾಗೆಯೇ ಇರುತ್ತವೆ. ಏಕೆಂದರೆ ಅದರ ಕುರಿತು ಪುರುಷನು ಎಷ್ಟೇ ಮಾಡಿದರೂ ಅದು ನಿರರ್ಥಕವಾಗುತ್ತದೆ.
05034021a ಕಾಂಶ್ಚಿದರ್ಥಾನ್ನರಃ ಪ್ರಾಜ್ಞೋ ಲಘುಮೂಲಾನ್ಮಹಾಫಲಾನ್।
05034021c ಕ್ಷಿಪ್ರಮಾರಭತೇ ಕರ್ತುಂ ನ ವಿಘ್ನಯತಿ ತಾದೃಶಾನ್।।
ಇನ್ನು ಕೆಲವು ಕರ್ಮಗಳು ಸ್ವಲ್ಪವೇ ಬೇರುಗಳಿದ್ದರೂ ಹೆಚ್ಚಿನ ಫಲವನ್ನು ನೀಡುವಂಥಹುದು. ಪ್ರಾಜ್ಞ ನರನು ಅಂಥವುಗಳನ್ನು ಕ್ಷಿಪ್ರವಾಗಿ ಕೈಗೊಳ್ಳುತ್ತಾನೆ ಮತ್ತು ಅಂಥವುಗಳಿಗೆ ವಿಘ್ನವನ್ನು ತರುವುದಿಲ್ಲ.
05034022a ಋಜು ಪಶ್ಯತಿ ಯಃ ಸರ್ವಂ ಚಕ್ಷುಷಾನುಪಿಬನ್ನಿವ।
05034022c ಆಸೀನಮಪಿ ತೂಷ್ಣೀಕಮನುರಜ್ಯಂತಿ ತಂ ಪ್ರಜಾಃ।।
ಕಣ್ಣುಗಳಿಂದಲೇ ಕುಡಿಯುವಂತೆ ಯಾರು ಎಲ್ಲವನ್ನೂ ನೇರವಾಗಿ ಕಾಣುತ್ತಾರೋ ಅವರು ಸುಮ್ಮನೆ ಕುಳಿತುಕೊಂಡಿದ್ದರೂ ಪ್ರಜೆಗಳು ಸಂತೋಷಗೊಳ್ಳುತ್ತಾರೆ.
05034023a ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಂ।
05034023c ಪ್ರಸಾದಯತಿ ಲೋಕಂ ಯಃ ತಂ ಲೋಕೋಽನುಪ್ರಸೀದತಿ।।
ಯಾರು ನಾಲ್ಕು ವಿಧಗಳಿಂದ - ದೃಷ್ಟಿ, ಯೋಚನೆ, ಮಾತು ಮತ್ತು ಕೆಲಸ - ಲೋಕವನ್ನು ಪ್ರೀತಿಸುತ್ತಾನೋ ಅವನನ್ನು ಲೋಕವೂ ಪ್ರೀತಿಸುತ್ತದೆ.
05034024a ಯಸ್ಮಾತ್ತ್ರಸ್ಯಂತಿ ಭೂತಾನಿ ಮೃಗವ್ಯಾಧಾನ್ಮೃಗಾ ಇವ।
05034024c ಸಾಗರಾಂತಾಮಪಿ ಮಹೀಂ ಲಬ್ಧ್ವಾ ಸ ಪರಿಹೀಯತೇ।।
ಆದರೆ ಅವನಿಗೆ, ಬೇಟೆಗಾರನಿಗೆ ಜಿಂಕೆಗಳು ಹೇಗೋ ಹಾಗೆ, ಪ್ರಜೆಗಳು ಹೆದರಿದರೆ, ಅವನು ಸಾಗರದ ಅಂಚಿನವರೆಗಿನ ಭೂಮಿಯನ್ನು ಪಡೆದಿದ್ದರೂ ತಿರಸ್ಕರಿಸಲ್ಪಡುತ್ತಾನೆ.
05034025a ಪಿತೃಪೈತಾಮಹಂ ರಾಜ್ಯಂ ಪ್ರಾಪ್ತವಾನ್ಸ್ವೇನ ತೇಜಸಾ।
05034025c ವಾಯುರಭ್ರಮಿವಾಸಾದ್ಯ ಭ್ರಂಶಯತ್ಯನಯೇ ಸ್ಥಿತಃ।।
ತನ್ನದೇ ತೇಜಸ್ಸಿನಿಂದ ಪಿತೃಪೈತಾಮಹರ ರಾಜ್ಯವನ್ನು ಪಡೆಯಬಹುದು. ಆದರೆ ಅವನು ಅನ್ಯಾಯದ ದಾರಿಯಲ್ಲಿ ನಡೆದರೆ ಭಿರುಗಾಳಿಯು ಮೋಡವನ್ನು ಚದುರಿಸುವಂತೆ ಅದನ್ನು ತುಂಡರಿಸಿಬಿಡಬಹುದು.
05034026a ಧರ್ಮಮಾಚರತೋ ರಾಜ್ಞಾಃ ಸದ್ಭಿಶ್ಚರಿತಮಾದಿತಃ।
05034026c ವಸುಧಾ ವಸುಸಂಪೂರ್ಣಾ ವರ್ಧತೇ ಭೂತಿವರ್ಧನೀ।।
ಮೊದಲಿನಿಂದಲೂ ಸಾಧುಗಳು ಆಚರಿಸಿ ಕೊಂಡು ಬಂದಿರುವ ಧರ್ಮವನ್ನು ಆಚರಿಸುವ ರಾಜನ ಭೂಮಿಯು ಅಭಿವೃದ್ಧಿ ಹೊಂದುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.
05034027a ಅಥ ಸಂತ್ಯಜತೋ ಧರ್ಮಮಧರ್ಮಂ ಚಾನುತಿಷ್ಠತಃ।
05034027c ಪ್ರತಿಸಂವೇಷ್ಟತೇ ಭೂಮಿರಗ್ನೌ ಚರ್ಮಾಹಿತಂ ಯಥಾ।।
ಆದರೆ ಧರ್ಮವನ್ನು ತೊರೆದು ಅಧರ್ಮವವನ್ನು ಅನುಸರಿಸುವವನ ಆಸ್ತಿಯು ಬೆಂಕಿಗೆ ತಗುಲಿದ ಚರ್ಮದಂತೆ ಮುದುಡಿಕೊಳ್ಳುವುದು.
05034028a ಯ ಏವ ಯತ್ನಃ ಕ್ರಿಯತೇ ಪರರಾಷ್ಟ್ರಾವಮರ್ದನೇ।
05034028c ಸ ಏವ ಯತ್ನಃ ಕರ್ತವ್ಯಃ ಸ್ವರಾಷ್ಟ್ರಪರಿಪಾಲನೇ।।
ಶತ್ರುಗಳ ರಾಷ್ಟ್ರವನ್ನು ಸದೆಬಡಿಯಲು ಎಷ್ಟು ಪ್ರಯತ್ನ ಮಾಡುತ್ತೇವೆಯೋ ಅಷ್ಟೇ ಪ್ರಯತ್ನವನ್ನು ತನ್ನ ರಾಷ್ಟ್ರದ ಪರಿಪಾಲನೆಯ ಕರ್ತವ್ಯದಲ್ಲಿಯೂ ಮಾಡಬೇಕು.
05034029a ಧರ್ಮೇಣ ರಾಜ್ಯಂ ವಿಂದೇತ ಧರ್ಮೇಣ ಪರಿಪಾಲಯೇತ್।
05034029c ಧರ್ಮಮೂಲಾಂ ಶ್ರಿಯಂ ಪ್ರಾಪ್ಯ ನ ಜಹಾತಿ ನ ಹೀಯತೇ।।
ಧರ್ಮದಿಂದ ರಾಜ್ಯವನ್ನು ಸ್ಥಾಪಿಸಬೇಕು, ಧರ್ಮದಿಂದ ಅದನ್ನು ಪರಿಪಾಲಿಸಬೇಕು. ಧರ್ಮಮೂಲವಾದ ಶ್ರೀಯು ನಷ್ಟವಾಗುವುದಿಲ್ಲ. ಜಯಿಸಲ್ಪಡುವುದೂ ಇಲ್ಲ.
05034030a ಅಪ್ಯುನ್ಮತ್ತಾತ್ಪ್ರಲಪತೋ ಬಾಲಾಚ್ಚ ಪರಿಸರ್ಪತಃ।
05034030c ಸರ್ವತಃ ಸಾರಮಾದದ್ಯಾದಶ್ಮಭ್ಯ ಇವ ಕಾಂಚನಂ।।
ಕಲ್ಲಿನಿಂದ ಕಾಂಚನವನ್ನು ಹೇಗೋ ಹಾಗೆ ಹುಚ್ಚನ ಪ್ರಲಾಪದಿಂದಾಗಲೀ ಹರಿದಾಡುವ ಮಗುವಿನಿಂದಾಗಲೀ ಸಾರವುಳ್ಳ ಏನಾದರೂ ದೊರೆಯುತ್ತದೆಯೇ?
05034031a ಸುವ್ಯಾಹೃತಾನಿ ಸುಧಿಯಾಂ ಸುಕೃತಾನಿ ತತಸ್ತತಃ।
05034031c ಸಂಚಿನ್ವನ್ಧೀರ ಆಸೀತ ಶಿಲಾಹಾರೀ ಶಿಲಂ ಯಥಾ।।
ತಿಳಿದವನು, ಶಿಲಾಹಾರಿಯುವ ಶಿಲವನ್ನು ಹೇಗೋ ಹಾಗೆ, ಸಾಧುಗಳು ಆಗಾಗ ಮಾಡಿದ ಸುವ್ಯವಹಾರ-ಸುಕೃತಗಳನ್ನು ಒಟ್ಟು ಹಾಕಿಕೊಂಡು ಮೆಲಕು ಹಾಕುತ್ತಿರುತ್ತಾನೆ.
05034032a ಗಂಧೇನ ಗಾವಃ ಪಶ್ಯಂತಿ ವೇದೈಃ ಪಶ್ಯಂತಿ ಬ್ರಾಹ್ಮಣಾಃ।
05034032c ಚಾರೈಃ ಪಶ್ಯಂತಿ ರಾಜಾನಶ್ಚಕ್ಷುರ್ಭ್ಯಾಮಿತರೇ ಜನಾಃ।।
ಗೋವುಗಳು ವಾಸನೆಯಿಂದ ನೋಡುತ್ತವೆ, ಬ್ರಾಹ್ಮಣರು ವೇದಗಳ ಮೂಲಕ ನೋಡುತ್ತಾರೆ, ರಾಜರು ಚಾರರ ಮೂಲಕ ನೋಡುತ್ತಾರೆ ಮತ್ತು ಇತರ ಜನರೆಲ್ಲರೂ ಕಣ್ಣುಗಳಿಂದ ನೋಡುತ್ತಾರೆ.
05034033a ಭೂಯಾಂಸಂ ಲಭತೇ ಕ್ಲೇಶಂ ಯಾ ಗೌರ್ಭವತಿ ದುರ್ದುಹಾ।
05034033c ಅಥ ಯಾ ಸುದುಹಾ ರಾಜನ್ನೈವ ತಾಂ ವಿನಯಂತ್ಯಪಿ।।
ಹಾಲನ್ನು ಕೊಡದೇ ಇರುವ ಗೋವು ಕಷ್ಟವನ್ನು ಅನುಭವಿಸಬಹುದು. ಆದರೆ, ರಾಜನ್! ಉತ್ತಮ ಹಾಲುಕರೆಯುವವನನ್ನು ಯಾರೂ ಬಗ್ಗಿಸಲಾರರು.
05034034a ಯದತಪ್ತಂ ಪ್ರಣಮತಿ ನ ತತ್ಸಂತಾಪಯಂತ್ಯಪಿ।
05034034c ಯಚ್ಚ ಸ್ವಯಂ ನತಂ ದಾರು ನ ತತ್ಸಮ್ನಾಮಯಂತ್ಯಪಿ।।
ಕಾಯಿಸದೆಯೇ ಬಗ್ಗಿಸಬಹುದಾದುದನ್ನು ಜನರು ಕಾಯಿಸುವುದಿಲ್ಲ. ಸ್ವಯಂ ಬಗ್ಗುವ ಗಿಡವನ್ನು ಬಗ್ಗಿಸಲು ಬಲವನ್ನು ಉಪಯೋಗಿಸುವುದಿಲ್ಲ.
05034035a ಏತಯೋಪಮಯಾ ಧೀರಃ ಸಮ್ನಮೇತ ಬಲೀಯಸೇ।
05034035c ಇಂದ್ರಾಯ ಸ ಪ್ರಣಮತೇ ನಮತೇ ಯೋ ಬಲೀಯಸೇ।।
ಈ ಉಪಮೇಯದ ಪ್ರಕಾರ ಧೀರನು ತನಗಿಂತ ಹೆಚ್ಚಿನ ಬಲಶಾಲಿಗೆ ಮಣಿಯುತ್ತಾನೆ. ಬಲಶಾಲಿಗೆ ಮಣಿಯುವವರನ್ನು ಇಂದ್ರನೂ ನಮಸ್ಕರಿಸುತ್ತಾನೆ.
05034036a ಪರ್ಜನ್ಯನಾಥಾಃ ಪಶವೋ ರಾಜಾನೋ ಮಿತ್ರಬಾಂಧವಾಃ।
05034036c ಪತಯೋ ಬಾಂಧವಾಃ ಸ್ತ್ರೀಣಾಂ ಬ್ರಾಹ್ಮಣಾ ವೇದಬಾಂಧವಾಃ।।
ಪಶುಗಳಿಗೆ ಮಳೆಯು ನಾಥ, ರಾಜನಿಗೆ ಮಿತ್ರರೇ ಬಾಂಧವರು, ಸ್ತ್ರೀಯರಿಗೆ ಪತಿಗಳೇ ಬಾಂಧವರು, ಮತ್ತು ಬ್ರಾಹ್ಮಣರಿಗೆ ವೇದಗಳೇ ಬಾಂಧವರು.
05034037a ಸತ್ಯೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ।
05034037c ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ।।
ಧರ್ಮವು ಸತ್ಯದಿಂದ ರಕ್ಷಿಸಲ್ಪಡುತ್ತದೆ, ವಿದ್ಯೆಯು ಯೋಗದಿಂದ ರಕ್ಷಿಸಲ್ಪಡುತ್ತದೆ, ತೊಳೆಯುವುದರಿಂದ ರೂಪವು ರಕ್ಷಿಸಲ್ಪಡುತ್ತದೆ ಮತ್ತು ಕುಲವು ನಡತೆಯಿಂದ ರಕ್ಷಿಸಲ್ಪಡುತ್ತದೆ.
05034038a ಮಾನೇನ ರಕ್ಷ್ಯತೇ ಧಾನ್ಯಮಶ್ವಾನ್ರಕ್ಷತ್ಯನುಕ್ರಮಃ।
05034038c ಅಭೀಕ್ಷ್ಣದರ್ಶನಾದ್ಗಾವಃ ಸ್ತ್ರಿಯೋ ರಕ್ಷ್ಯಾಃ ಕುಚೇಲತಃ।।
ಧಾನ್ಯವು ಅಳತೆಯಿಂದ ರಕ್ಷಿಸಲ್ಪಡುತ್ತದೆ, ಅಶ್ವಗಳು ವ್ಯಾಯಾಮದಿಂದ ರಕ್ಷಿಸಲ್ಪಡುತ್ತವೆ, ಕಾಯುವುದರಿಂದ ಗೋವುಗಳು ರಕ್ಷಿಸಲ್ಪಡುತ್ತವೆ ಮತ್ತು ಸ್ತ್ರೀಯರು ಉಡುಪುಗಳಿಂದ ರಕ್ಷಿಸಲ್ಪಡುತ್ತಾರೆ.
05034039a ನ ಕುಲಂ ವೃತ್ತಹೀನಸ್ಯ ಪ್ರಮಾಣಮಿತಿ ಮೇ ಮತಿಃ।
05034039c ಅಂತ್ಯೇಷ್ವಪಿ ಹಿ ಜಾತಾನಾಂ ವೃತ್ತಮೇವ ವಿಶಿಷ್ಯತೇ।।
ಉತ್ತಮ ನಡತೆಯಿಲ್ಲದವನಿಗೆ ಕುಲವು ಪ್ರಮಾಣವಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ ಹೀನ ಕುಲದಲ್ಲಿ ಜನಿಸಿದ್ದರೂ ಅವರ ನಡತೆಯು ವಿಶೇಷವಾಗಿರಬಹುದು.
05034040a ಯ ಈರ್ಷ್ಯುಃ ಪರವಿತ್ತೇಷು ರೂಪೇ ವೀರ್ಯೇ ಕುಲಾನ್ವಯೇ।
05034040c ಸುಖೇ ಸೌಭಾಗ್ಯಸತ್ಕಾರೇ ತಸ್ಯ ವ್ಯಾಧಿರನಂತಕಃ।।
ಇನ್ನೊಬ್ಬರ ಸಂಪತ್ತು, ರೂಪ, ವೀರ್ಯ, ಉತ್ತಮ ಕುಲ, ಸುಖ, ಸೌಭಾಗ್ಯ ಮತ್ತು ಸತ್ಕಾರಗಳ ಬಗ್ಗೆ ಅಸೂಯೆ ಪಡುವವರ ವ್ಯಾಧಿಗೆ ಅಂತ್ಯವಿಲ್ಲ.
05034041a ಅಕಾರ್ಯಕರಣಾದ್ಭೀತಃ ಕಾರ್ಯಾಣಾಂ ಚ ವಿವರ್ಜನಾತ್।
05034041c ಅಕಾಲೇ ಮಂತ್ರಭೇದಾಚ್ಚ ಯೇನ ಮಾದ್ಯೇನ್ನ ತತ್ಪಿಬೇತ್।।
ಮಾಡಬಾರದ್ದನ್ನು ಮಾಡಿಯೇನು ಎಂದು ಭಯವಿರುವಾಗ, ಅಕಾಲದಲ್ಲಿ ಗೊಂದಲಕ್ಕೀಡಾದಾಗ, ಮತ್ತೇರಿಸುವ ಏನನ್ನೂ ಕುಡಿಯಬೇಡ.
05034042a ವಿದ್ಯಾಮದೋ ಧನಮದಸ್ತೃತೀಯೋಽಭಿಜನೋ ಮದಃ।
05034042c ಏತೇ ಮದಾವಲಿಪ್ತಾನಾಮೇತ ಏವ ಸತಾಂ ದಮಾಃ।
ವಿದ್ಯಾಮದ, ಧನಮದ ಮತ್ತು ಮೂರನೆಯದಾಗಿ ಜನಬೆಂಬಲದ ಮದ. ಇವು ಪುರುಷನನ್ನು ಮುಳುಗಿಸುವ ಮದಗಳು. ಇವುಗಳನ್ನೇ ಸಜ್ಜನರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ.
05034043a ಅಸಂತೋಽಭ್ಯರ್ಥಿತಾಃ ಸದ್ಭಿಃ ಕಿಂ ಚಿತ್ಕಾರ್ಯಂ ಕದಾ ಚನ।
05034043c ಮನ್ಯಂತೇ ಸಂತಮಾತ್ಮಾನಮಸಂತಮಪಿ ವಿಶ್ರುತಂ।।
ಸಂತರು ಅಸಂತರಲ್ಲಿ ಏನಾದರೂ ಒಂದು ಕೆಲಸವನ್ನು ಕೇಳಿದರೂ ಕೂಡ, ಅವರು ಅಸಂತರೆಂದು ವಿಶ್ರುತರಾಗಿದ್ದರೂ ತಮ್ಮನ್ನು ತಾವೇ ಸಂತರೆಂದು ತಿಳಿದುಕೊಂಡುಬಿಡುತ್ತಾರೆ.
05034044a ಗತಿರಾತ್ಮವತಾಂ ಸಂತಃ ಸಂತ ಏವ ಸತಾಂ ಗತಿಃ।
05034044c ಅಸತಾಂ ಚ ಗತಿಃ ಸಂತೋ ನ ತ್ವಸಂತಃ ಸತಾಂ ಗತಿಃ।।
ಸಂತರು ಆತ್ಮವಂತರ ಗತಿ, ಸಂತರು ಸತ್ಯವಂತರ ಗತಿ. ಅಸತರನ್ನು ಸಂತರು ನಡೆಸಬಲ್ಲರು ಆದರೆ ಅಸಂತರು ಸಂತರನ್ನು ಎಂದೂ ನಡೆಸುವುದಿಲ್ಲ.
05034045a ಜಿತಾ ಸಭಾ ವಸ್ತ್ರವತಾ ಸಮಾಶಾ ಗೋಮತಾ ಜಿತಾ।
05034045c ಅಧ್ವಾ ಜಿತೋ ಯಾನವತಾ ಸರ್ವಂ ಶೀಲವತಾ ಜಿತಂ।।
ಉತ್ತಮ ಉಡುಪನ್ನು ಧರಿಸಿದವನು ಸಭೆಯನ್ನು ಗೆಲ್ಲಬಹುದು. ಹಲವಾರು ಗೋವುಗಳನ್ನು ಹೊಂದಿದ ಶ್ರೀಮಂತನು ಬಡವರನ್ನು ಗೆಲ್ಲಬಹುದು. ವಾಹನವಿರುವವನು ದಾರಿಯನ್ನು ಗೆಲ್ಲಬಹುದು. ಆದರೆ ಶೀಲವಂತನು ಎಲ್ಲವನ್ನೂ ಗೆಲ್ಲುತ್ತಾನೆ.
05034046a ಶೀಲಂ ಪ್ರಧಾನಂ ಪುರುಷೇ ತದ್ಯಸ್ಯೇಹ ಪ್ರಣಶ್ಯತಿ।
05034046c ನ ತಸ್ಯ ಜೀವಿತೇನಾರ್ಥೋ ನ ಧನೇನ ನ ಬಂಧುಭಿಃ।।
ಪುರುಷನಿಗೆ ಶೀಲವೇ ಪ್ರಧಾನ. ಅದನ್ನು ಕಳೆದುಕೊಂಡರೆ ಅವನಿಗೆ ಜೀವನದಿಂದಲೂ, ಸಂಪತ್ತಿನಿಂದಲೂ, ಬಂಧುಗಳಿಂದಲೂ ಪ್ರಯೋಜನವಾಗುವುದಿಲ್ಲ.
05034047a ಆಢ್ಯಾನಾಂ ಮಾಂಸಪರಮಂ ಮಧ್ಯಾನಾಂ ಗೋರಸೋತ್ತರಂ।
05034047c ಲವಣೋತ್ತರಂ ದರಿದ್ರಾಣಾಂ ಭೋಜನಂ ಭರತರ್ಷಭ।।
ಭರತರ್ಷಭ! ಅತಿ ಶ್ರೀಮಂತನಿಗೆ ಮಾಂಸವು ಪರಮ ಭೋಜನ, ಮಧ್ಯಮರಿಗೆ ಹಸುವಿನ ಹಾಲು ಮತ್ತು ದರಿದ್ರರಿಗೆ ಉಪ್ಪೇ ಪರಮ ಭೋಜನ.
05034048a ಸಂಪನ್ನತರಮೇವಾನ್ನಂ ದರಿದ್ರಾ ಭುಂಜತೇ ಸದಾ।
05034048c ಕ್ಷುತ್ಸ್ವಾದುತಾಂ ಜನಯತಿ ಸಾ ಚಾಢ್ಯೇಷು ಸುದುರ್ಲಭಾ।।
ಆದರೂ ದರಿದ್ರರು ಚೆನ್ನಾಗಿ ಊಟಮಾಡುತ್ತಾರೆ; ಹಸಿವೆಯು ಅವರ ಊಟವನ್ನು ರುಚಿಯಾಗಿಸುತ್ತದೆ. ಅದು ಧನಿಕರಿಗೆ ತುಂಬಾ ದುರ್ಲಭ.
05034049a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ।
05034049c ದರಿದ್ರಾಣಾಂ ತು ರಾಜೇಂದ್ರ ಅಪಿ ಕಾಷ್ಠಂ ಹಿ ಜೀರ್ಯತೇ।।
ರಾಜೇಂದ್ರ! ಲೋಕದಲ್ಲಿ ಶ್ರೀಮಂತರಿಗೆ ಚೆನ್ನಾಗಿ ಹಸಿವೆಯಾಗುವುದಿಲ್ಲ ಎಂದು ಕಂಡುಬರುತ್ತದೆ. ಆದರೆ ದರಿದ್ರರು ಕಟ್ಟಿಗೆಯನ್ನೂ ಕೂಡ ಜೀರ್ಣಿಸಿಕೊಳ್ಳಬಲ್ಲರು.
05034050a ಅವೃತ್ತಿರ್ಭಯಮಂತ್ಯಾನಾಂ ಮಧ್ಯಾನಾಂ ಮರಣಾದ್ಭಯಂ।
05034050c ಉತ್ತಮಾನಾಂ ತು ಮರ್ತ್ಯಾನಾಮವಮಾನಾತ್ಪರಂ ಭಯಂ।।
ಕೆಳಗಿನವರಿಗೆ ಕೆಲಸ ದೊರೆಯದೇ ಇರುವುದರ ಭಯ ಮತ್ತು ಮಧ್ಯಮರಿಗೆ ಮರಣದ ಭಯ. ಉತ್ತಮ ಜನರಿಗೆ ಅವಮಾನವೇ ಪರಮ ಭಯ.
05034051a ಐಶ್ವರ್ಯಮದಪಾಪಿಷ್ಠಾ ಮದಾಃ ಪಾನಮದಾದಯಃ।
05034051c ಐಶ್ವರ್ಯಮದಮತ್ತೋ ಹಿ ನಾಪತಿತ್ವಾ ವಿಬುಧ್ಯತೇ।।
ಮದ್ಯಪಾನದಿಂದುಟಾಗುವ ಮತ್ತಿಗಿಂತ ಐಶ್ವರ್ಯಮದವು ಪಾಪಿಷ್ಠವಾದುದು. ಐಶ್ವರ್ಯ ಮದದಿಂದ ಮತ್ತನಾದವನಿಗೆ ಬಿದ್ದರೂ ಬುದ್ಧಿ ಬರುವುದಿಲ್ಲ.
05034052a ಇಂದ್ರಿಯೈರಿಂದ್ರಿಯಾರ್ಥೇಷು ವರ್ತಮಾನೈರನಿಗ್ರಹೈಃ।
05034052c ತೈರಯಂ ತಾಪ್ಯತೇ ಲೋಕೋ ನಕ್ಷತ್ರಾಣಿ ಗ್ರಹೈರಿವ।।
ತಮ್ಮ ಆಸೆಗಳನ್ನು ಪೂರೈಸಲು ಕಡಿವಾಣವಿಲ್ಲದೇ ನಡೆದುಕೊಳ್ಳುವವರನ್ನು, ನಕ್ಷತ್ರಗಳನ್ನು ಗ್ರಹಗಳು ಹೇಗೋ ಹಾಗೆ, ಇಂದ್ರಿಯಗಳು ಕಾಡುತ್ತವೆ.
05034053a ಯೋ ಜಿತಃ ಪಂಚವರ್ಗೇಣ ಸಹಜೇನಾತ್ಮಕರ್ಶಿನಾ।
05034053c ಆಪದಸ್ತಸ್ಯ ವರ್ಧಂತೇ ಶುಕ್ಲಪಕ್ಷ ಇವೋಡುರಾಟ್।।
ಯಾರ ಸಹಜವಾಗಿರುವ ಐದು ಇಂದ್ರಿಯಗಳು ಆತ್ಮವನ್ನು ಗೆದ್ದು ಎಳೆದುಕೊಂಡು ಹೋಗುತ್ತವೆಯೋ ಅವನ ಆಪತ್ತುಗಳು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತವೆ.
05034054a ಅವಿಜಿತ್ಯ ಯ ಆತ್ಮಾನಮಮಾತ್ಯಾನ್ವಿಜಿಗೀಷತೇ।
05034054c ಅಮಿತ್ರಾನ್ವಾಜಿತಾಮಾತ್ಯಃ ಸೋಽವಶಃ ಪರಿಹೀಯತೇ।।
ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ ತನ್ನ ಅಮಾತ್ಯರನ್ನು ನಿಯಂತ್ರಿಸುವವನು ಮತ್ತು ಅಮಾತ್ಯರನ್ನು ವಶಪಡಿಸಿಕೊಳ್ಳದೇ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸುವವನು ಸೋಲುತ್ತಾನೆ.
05034055a ಆತ್ಮಾನಮೇವ ಪ್ರಥಮಂ ದೇಶರೂಪೇಣ ಯೋ ಜಯೇತ್।
05034055c ತತೋಽಮಾತ್ಯಾನಮಿತ್ರಾಂಶ್ಚ ನ ಮೋಘಂ ವಿಜಿಗೀಷತೇ।।
ದೇಶರೂಪದ ತನ್ನನ್ನೇ ಯಾರು ಮೊದಲು ಗೆಲ್ಲುತ್ತಾನೋ ಅವನಿಗೆ ಅಮಾತ್ಯರನ್ನೂ ಶತ್ರುಗಳನ್ನೂ ಗೆಲ್ಲುವುದು ಕಷ್ಟವಾಗುವುದಿಲ್ಲ.
05034056a ವಶ್ಯೇಂದ್ರಿಯಂ ಜಿತಾಮಾತ್ಯಂ ಧೃತದಂಡಂ ವಿಕಾರಿಷು।
05034056c ಪರೀಕ್ಷ್ಯಕಾರಿಣಂ ಧೀರಮತ್ಯಂತಂ ಶ್ರೀರ್ನಿಷೇವತೇ।।
ಇಂದ್ರಿಯಗಳನ್ನು ಗೆದ್ದಿರುವ, ಅಮಾತ್ಯರನ್ನು ಗೆದ್ದಿರುವ, ಅಪರಾಧಿಗಳನ್ನು ಶಿಕ್ಷಿಸುವ, ಚೆನ್ನಾಗಿ ಪರೀಕ್ಷಿಸಿ ಕಾರ್ಯಮಾಡುವ ಧೀರನನ್ನು ಸಂಪತ್ತು ಬಹಳವಾಗಿ ವರಿಸುತ್ತದೆ.
05034057a ರಥಃ ಶರೀರಂ ಪುರುಷಸ್ಯ ರಾಜನ್ ನಾತ್ಮಾ ನಿಯಂತೇಂದ್ರಿಯಾಣ್ಯಸ್ಯ ಚಾಶ್ವಾಃ।
05034057c ತೈರಪ್ರಮತ್ತಃ ಕುಶಲಃ ಸದಶ್ವೈರ್ ದಾಂತೈಃ ಸುಖಂ ಯಾತಿ ರಥೀವ ಧೀರಃ।।
ರಾಜನ್! ಪುರುಷನ ಶರೀರವು ಒಂದು ರಥವಿದ್ದಂತೆ. ಆತ್ಮವು ಸಾರಥಿ, ಇಂದ್ರಿಯಗಳು ಕುದುರೆಗಳು. ಅಶ್ವಗಳನ್ನು ಚೆನ್ನಾಗಿ ನಿಯಂತ್ರಿಸುವ ಅಪ್ರಮತ್ತ, ಕುಶಲ, ಧೀರ ರಥಿಕನು ಸುಖವನ್ನು ಹೊಂದುತ್ತಾನೆ.
05034058a ಏತಾನ್ಯನಿಗೃಹೀತಾನಿ ವ್ಯಾಪಾದಯಿತುಮಪ್ಯಲಂ।
05034058c ಅವಿಧೇಯಾ ಇವಾದಾಂತಾ ಹಯಾಃ ಪಥಿ ಕುಸಾರಥಿಂ।।
ಅವಿಧೇಯ, ನಿಯಂತ್ರಣದಲ್ಲಿಲ್ಲದ ಕುದುರೆಗಳು ಪ್ರಯಾಣಿಸುತ್ತಿರುವ ಸಾರಥಿಗೆ ಹೇಗೋ ಹಾಗೆ ನಿಯಂತ್ರಣದಲ್ಲಿಲ್ಲದ ಇಂದ್ರಿಯಗಳು ಆಪತ್ತುಗಳನ್ನು ತಂದೊಡ್ಡುತ್ತವೆ.
05034059a ಅನರ್ಥಮರ್ಥತಃ ಪಶ್ಯನ್ನರ್ಥಂ ಚೈವಾಪ್ಯನರ್ಥತಃ।
05034059c ಇಂದ್ರಿಯೈಃ ಪ್ರಸೃತೋ ಬಾಲಃ ಸುದುಃಖಂ ಮನ್ಯತೇ ಸುಖಂ।।
ಇಂದ್ರಿಯಗಳಿಂದ ನಡೆಸಲ್ಪಟ್ಟ ಬಾಲಕನು ಲಾಭವಿಲ್ಲದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ಲಾಭವಿಲ್ಲದುದೆಂದೂ ತಿಳಿದು ಅತೀ ದುಃಖವನ್ನು ತರುವಂಥಹುದನ್ನು ಸುಖವೆಂದು ಪರಿಗಣಿಸುತ್ತಾನೆ.
05034060a ಧರ್ಮಾರ್ಥೌ ಯಃ ಪರಿತ್ಯಜ್ಯ ಸ್ಯಾದಿಂದ್ರಿಯವಶಾನುಗಃ।
05034060c ಶ್ರೀಪ್ರಾಣಧನದಾರೇಭ್ಯ ಕ್ಷಿಪ್ರಂ ಸ ಪರಿಹೀಯತೇ।।
ಧರ್ಮಾರ್ಥಗಳನ್ನು ಪರಿತ್ಯಜಿಸಿ ಇಂದ್ರಿಯಗಳ ವಶನಾಗುವವನನ್ನು ಅದೃಷ್ಟ, ಸಂಪತ್ತು, ಪ್ರಾಣ, ಮತ್ತು ಪತ್ನಿ ಬೇಗನೇ ತೊರೆಯುತ್ತವೆ.
05034061a ಅರ್ಥಾನಾಮೀಶ್ವರೋ ಯಃ ಸ್ಯಾದಿಂದ್ರಿಯಾಣಾಮನೀಶ್ವರಃ।
05034061c ಇಂದ್ರಿಯಾಣಾಮನೈಶ್ವರ್ಯಾದೈಶ್ವರ್ಯಾದ್ಭ್ರಶ್ಯತೇ ಹಿ ಸಃ।।
ಸಂಪತ್ತಿನ ಒಡೆಯನಾಗಿದ್ದರೂ ಇಂದ್ರಿಯಗಳ ಮೇಲೆ ಒಡೆತನವಿಲ್ಲದಿದ್ದರೆ ಒಡೆಯನಿಲ್ಲದ ಇಂದ್ರಿಯಗಳು ಅವನ ಐಶ್ವರ್ಯವನ್ನು ಅವನಿಂದ ದೂರಮಾಡುವವು.
05034062a ಆತ್ಮನಾತ್ಮಾನಮನ್ವಿಚ್ಚೇನ್ಮನೋಬುದ್ಧೀಂದ್ರಿಯೈರ್ಯತೈಃ।
05034062c ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ।।
ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ಒಂದುಗೂಡಿಸಿ ತನ್ನ ಆತ್ಮವನ್ನು ತಾನೇ ಹುಡುಕಿಕೊಳ್ಳಬೇಕು. ಆತ್ಮವೇ ತನ್ನ ಬಂಧು ಮತ್ತು ಆತ್ಮವೇ ತನ್ನ ಶತ್ರುವೂ ಕೂಡ.
05034063a ಕ್ಷುದ್ರಾಕ್ಷೇಣೇವ ಜಾಲೇನ ಝಷಾವಪಿಹಿತಾವುಭೌ।
05034063c ಕಾಮಶ್ಚ ರಾಜನ್ಕ್ರೋಧಶ್ಚ ತೌ ಪ್ರಜ್ಞಾನಂ ವಿಲುಂಪತಃ।।
ರಾಜನ್! ದುರ್ಬಲ ಜಾಲದಲ್ಲಿ ಹಿಡಿದಿಟ್ಟಿರುವ ಎರಡು ಬಲಶಾಲಿ ಮೀನುಗಳಂತೆ ಕಾಮ-ಕ್ರೋಧಗಳೆರಡೂ ಪ್ರಜ್ಞಾನವನ್ನು ಹರಿದು ಚಿಂದಿ ಮಾಡುತ್ತವೆ.
05034064a ಸಮವೇಕ್ಷ್ಯೇಹ ಧರ್ಮಾರ್ಥೌ ಸಂಭಾರಾನ್ಯೋಽಧಿಗಚ್ಚತಿ।
05034064c ಸ ವೈ ಸಂಭೃತಸಂಭಾರಃ ಸತತಂ ಸುಖಮೇಧತೇ।।
ಧರ್ಮಾರ್ಥಗಳೆರಡನ್ನೂ ನೋಡಿಕೊಂಡು ಅವಶ್ಯವಿರುವವುಗಳನ್ನು ಯಾರು ಒಟ್ಟುಗೂಡಿಸಿಕೊಳ್ಳುತ್ತಾರೋ ಅವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಸತತವೂ ಸುಖವಾಗಿರುತ್ತಾರೆ.
05034065a ಯಃ ಪಂಚಾಭ್ಯಂತರಾಂ ಶತ್ರೂನವಿಜಿತ್ಯ ಮತಿಕ್ಷಯಾನ್।
05034065c ಜಿಗೀಷತಿ ರಿಪೂನನ್ಯಾನ್ರಿಪವೋಽಭಿಭವಂತಿ ತಂ।।
ಒಳಗಿರುವ ಈ ಐದು ಶತ್ರುಗಳನ್ನು ಜಯಿಸದೇ ಯಾರು ಹೊರಗಿನ ಶತ್ರುಗಳನ್ನು ಜಯಿಸಲು ಹೊರಡುತ್ತಾನೋ ಅವನನ್ನು ರಿಪುಗಳೇ ಗೆಲ್ಲುತ್ತಾರೆ.
05034066a ದೃಶ್ಯಂತೇ ಹಿ ದುರಾತ್ಮಾನೋ ವಧ್ಯಮಾನಾಃ ಸ್ವಕರ್ಮಭಿಃ।
05034066c ಇಂದ್ರಿಯಾಣಾಮನೀಶತ್ವಾದ್ರಾಜಾನೋ ರಾಜ್ಯವಿಭ್ರಮೈಃ।।
ರಾಜ್ಯದ ಹುಚ್ಚಿನಿಂದಾಗಿ ತಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವ ದುರಾತ್ಮ ರಾಜರುಗಳು ತಮ್ಮದೇ ಕರ್ಮಗಳಿಂದ ಮರಣಹೊಂದಿದುದನ್ನು ನೋಡಿದ್ದೇವಲ್ಲ!
05034067a ಅಸಂತ್ಯಾಗಾತ್ಪಾಪಕೃತಾಮಪಾಪಾಂಸ್ ತುಲ್ಯೋ ದಂಡಃ ಸ್ಪೃಶತೇ ಮಿಶ್ರಭಾವಾತ್।
05034067c ಶುಷ್ಕೇಣಾರ್ದ್ರಂ ದಹ್ಯತೇ ಮಿಶ್ರಭಾವಾತ್ ತಸ್ಮಾತ್ಪಾಪೈಃ ಸಹ ಸಂಧಿಂ ನ ಕುರ್ಯಾತ್।।
ಒಣಹುಲ್ಲಿನ ಜೊತೆಗೆ ಅದರೊಡನೆ ಸೇರಿಕೊಂಡಿದ್ದ ಹಸಿ ಹುಲ್ಲುಕೂಡ ಸುಟ್ಟುಹೋಗುವಂತೆ ಪಾಪಕರ್ಮ ಮಾಡುವವರೊಡನಿರುವ ನಿಷ್ಪಾಪಿಗಳೂ ಕೂಡ ಶಿಕ್ಷೆಯನ್ನು ಅನುಭವಿಸುತ್ತಾರೆ. ಆದುದರಿಂದ ಪಾಪಿಷ್ಟರೊಂದಿಗೆ ಸೇರಿಕೊಳ್ಳಬಾರದು.
05034068a ನಿಜಾನುತ್ಪತತಃ ಶತ್ರೂನ್ಪಂಚ ಪಂಚಪ್ರಯೋಜನಾನ್।
05034068c ಯೋ ಮೋಹಾನ್ನ ನಿಗೃಹ್ಣಾತಿ ತಮಾಪದ್ಗ್ರಸತೇ ನರಂ।।
ಯಾವ ನರನು ಮೋಹದಿಂದ ತನ್ನ ಐದು ಪ್ರಯೋಜನಗಳಿಗೆ ಆಸೆಬುರುಕರಾಗಿರುವ ಐವರು ಶತ್ರುಗಳನ್ನು ನಿಗ್ರಹಿಸಿಟ್ಟುಕೊಳ್ಳುವುದೋ ಅವನನ್ನು ಆಪತ್ತು ಹಿಡಿದುಕೊಳ್ಳುತ್ತದೆ.
05034069a ಅನಸೂಯಾರ್ಜವಂ ಶೌಚಂ ಸಂತೋಷಃ ಪ್ರಿಯವಾದಿತಾ।
05034069c ದಮಃ ಸತ್ಯಮನಾಯಾಸೋ ನ ಭವಂತಿ ದುರಾತ್ಮನಾಂ।।
ಅಸೂಯೆಪಡದಿರುವುದು, ಸರಳತೆ, ಶುಚಿತ್ವ, ಸಂತೋಷ, ಪ್ರಿಯವಾಗಿ ಮಾತನಾಡುವುದು, ಆತ್ಮನಿಗ್ರಹ, ಸತ್ಯ, ಅನಾಯಾಸ ಇವು ಎಂದೂ ದುರಾತ್ಮನದ್ದಾಗುವವಲ್ಲ.
05034070a ಆತ್ಮಜ್ಞಾನಮನಾಯಾಸಸ್ತಿತಿಕ್ಷಾ ಧರ್ಮನಿತ್ಯತಾ।
05034070c ವಾಕ್ಚೈವ ಗುಪ್ತಾ ದಾನಂ ಚ ನೈತಾನ್ಯಂತ್ಯೇಷು ಭಾರತ।।
ಭಾರತ! ಆತ್ಮಜ್ಞಾನ, ಅನಾಯಾಸವಾಗಿ ನಿರಂತರವಾಗಿ ಧರ್ಮದಲ್ಲಿ ನೆಲೆಸಿರುವುದು, ಮಾತು ಮತ್ತು ದಾನಗಳನ್ನು ಗುಪ್ತವಾಗಿಟ್ಟುಕೊಳ್ಳುವುದು ಇವು ಕೀಳು ಜನರಲ್ಲಿ ಇರುವುದಿಲ್ಲ.
05034071a ಆಕ್ರೋಶಪರಿವಾದಾಭ್ಯಾಂ ವಿಹಿಂಸಂತ್ಯಬುಧಾ ಬುಧಾನ್।
05034071c ವಕ್ತಾ ಪಾಪಮುಪಾದತ್ತೇ ಕ್ಷಮಮಾಣೋ ವಿಮುಚ್ಯತೇ।।
05034072a ಹಿಂಸಾ ಬಲಮಸಾಧೂನಾಂ ರಾಜ್ಞಾಂ ದಂಡವಿಧಿರ್ಬಲಂ।
05034072c ಶುಶ್ರೂಷಾ ತು ಬಲಂ ಸ್ತ್ರೀಣಾಂ ಕ್ಷಮಾ ಗುಣವತಾಂ ಬಲಂ।।
ಹಿಂಸೆಯಲ್ಲಿ ಅಸಾಧುಗಳ ಬಲವೂ, ರಾಜರಲ್ಲಿ ದಂಡವನ್ನು ವಿಧಿಸಬಲ್ಲ ಶಕ್ತಿಯೂ, ಸ್ತ್ರೀಯರಲ್ಲಿ ಶುಶ್ರೂಷದ ಬಲವೂ ಗುಣವಂತರಲ್ಲಿ ಕ್ಷಮೆಯ ಬಲವೂ ಇವೆ.
05034073a ವಾಕ್ಸಮ್ಯಮೋ ಹಿ ನೃಪತೇ ಸುದುಷ್ಕರತಮೋ ಮತಃ।
05034073c ಅರ್ಥವಚ್ಚ ವಿಚಿತ್ರಂ ಚ ನ ಶಕ್ಯಂ ಬಹು ಭಾಷಿತುಂ।
ನೃಪತೇ! ವಾಕ್ ಸಂಯಮವು ಎಲ್ಲಕಿಂತ ಸುದುಷ್ಕರವಾದದ್ದು ಎಂಬ ಮತವಿದೆ. ತುಂಬಾ ಮಾತನಾಡುವವನಿಗೆ ಅರ್ಥವತ್ತಾಗಿ ಸ್ವಾರಸ್ಯವಾಗಿ ಹೇಳಲು ಸಾಧ್ಯವಾಗುವುದಿಲ್ಲ.
05034074a ಅಭ್ಯಾವಹತಿ ಕಲ್ಯಾಣಂ ವಿವಿಧಾ ವಾಕ್ಸುಭಾಷಿತಾ।
05034074c ಸೈವ ದುರ್ಭಾಷಿತಾ ರಾಜನ್ನನರ್ಥಾಯೋಪಪದ್ಯತೇ।।
ಒಳ್ಳೆಯ ಮಾತು ವಿವಿಧ ಉತ್ತಮ ಫಲಗಳನ್ನು ನೀಡುತ್ತದೆ. ಆದರೆ ರಾಜನ್! ಕೆಟ್ಟ ಮಾತು ಅನರ್ಥಗಳನ್ನುಂಟುಮಾಡುತ್ತದೆ.
05034075a ಸಂರೋಹತಿ ಶರೈರ್ವಿದ್ಧಂ ವನಂ ಪರಶುನಾ ಹತಂ।
05034075c ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಂ।।
ಬಾಣಗಳಿಂದ ಅಥವಾ ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಚಿಗುರುತ್ತದೆ. ಆದರೆ ಕೆಟ್ಟ ಮಾತುಗಳಿಂದ ನೊಂದ, ಮುದುಡಿದ ಹೃದಯವು ಮತ್ತೆ ಚಿಗುರುವುದಿಲ್ಲ.
05034076a ಕರ್ಣಿನಾಲೀಕನಾರಾಚಾ ನಿರ್ಹರಂತಿ ಶರೀರತಃ।
05034076c ವಾಕ್ಶಲ್ಯಸ್ತು ನ ನಿರ್ಹರ್ತುಂ ಶಕ್ಯೋ ಹೃದಿಶಯೋ ಹಿ ಸಃ।।
ಶರೀರವನ್ನು ಹೊಕ್ಕ ಬಾಣ ಈಟಿ ಮೊದಲಾದ ಆಯುಧಗಳನ್ನು ಕೀಳಬಹುದು. ಆದರೆ ಹೃದಯವನ್ನು ಹೊಕ್ಕ ಮಾತಿನ ಬಾಣವನ್ನು ಕೀಳಲಿಕ್ಕಾಗುವುದಿಲ್ಲ.
05034077a ವಾಕ್ಸಾಯಕಾ ವದನಾನ್ನಿಷ್ಪತಂತಿ ಯೈರಾಹತಃ ಶೋಚತಿ ರಾತ್ರ್ಯಹಾನಿ।
05034077c ಪರಸ್ಯ ನಾಮರ್ಮಸು ತೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು।।
ಮಾತಿನ ಈಟಿಯು ಬಾಯಿಯಿಂದ ಹೊರಬೀಳುತ್ತದೆ. ಇದರಿಂದ ಪೆಟ್ಟುತಿಂದವನು ರಾತ್ರಿ-ದಿನಗಳಲ್ಲಿ ಚಿಂತಿಸುತ್ತಾನೆ. ಪಂಡಿತರು ಇಂತಹ ಈಟಿಯನ್ನು ಅವರ ಮರ್ಮಗಳನ್ನು ಭೇದಿಸಬಾರದೆಂದು ಇತರರ ಮೇಲೆ ಎಂದೂ ಪ್ರಯೋಗಿಸುವುದಿಲ್ಲ.
05034078a ಯಸ್ಮೈ ದೇವಾಃ ಪ್ರಯಚ್ಚಂತಿ ಪುರುಷಾಯ ಪರಾಭವಂ।
05034078c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ।।
ಯಾವ ಪುರುಷನ ಪರಾಭವವನ್ನು ದೇವತೆಗಳು ಇಚ್ಛಿಸುತ್ತಾರೋ ಅವನ ಬುದ್ಧಿಯನ್ನು ಅಪಹರಿಸುತ್ತಾರೆ. ಇದರಿಂದ ಅವನು ಬರುತ್ತಿರುವ ಆಪತ್ತನ್ನು ಕಾಣುವುದಿಲ್ಲ.
05034079a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ।
05034079c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ।।
ಬುದ್ಧಿಯು ಕಲುಷಿತವಾದಾಗ ಭೂತಗಳ ವಿನಾಶವು ಹತ್ತಿರವಾಗುತ್ತದೆ. ಅನ್ಯಾಯವು ನ್ಯಾಯವಾಗಿ ತೋರಿ ಹೃದಯವನ್ನು ಸುತ್ತಿಕೊಳ್ಳುತ್ತದೆ.
05034080a ಸೇಯಂ ಬುದ್ಧಿಃ ಪರೀತಾ ತೇ ಪುತ್ರಾಣಾಂ ತವ ಭಾರತ।
05034080c ಪಾಂಡವಾನಾಂ ವಿರೋಧೇನ ನ ಚೈನಾಮವಬುಧ್ಯಸೇ।।
ಭಾರತ! ಪಾಂಡವರ ವಿರೋಧದಿಂದ ನಿನ್ನ ಪುತ್ರರ ಬುದ್ಧಿಯು ಮಸುಕಾಗಿದೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ.
05034081a ರಾಜಾ ಲಕ್ಷಣಸಂಪನ್ನಸ್ತ್ರೈಲೋಕ್ಯಸ್ಯಾಪಿ ಯೋ ಭವೇತ್।
05034081c ಶಿಷ್ಯಸ್ತೇ ಶಾಸಿತಾ ಸೋಽಸ್ತು ಧೃತರಾಷ್ಟ್ರ ಯುಧಿಷ್ಠಿರಃ।।
05034082a ಅತೀವ ಸರ್ವಾನ್ಪುತ್ರಾಂಸ್ತೇ ಭಾಗಧೇಯಪುರಸ್ಕೃತಃ।
ಧೃತರಾಷ್ಟ್ರ! ಮೂರೂ ಲೋಕಗಳ ರಾಜನೂ ಆಗಬಲ್ಲ ಲಕ್ಷಣ ಸಂಪನ್ನನಾದ ಯುಧಿಷ್ಠಿರನು ನಿನ್ನ ಶಿಷ್ಯ. ಅವನಿಗೆ ಆಳಲು ಬಿಡು. ನಿನ್ನ ಪುತ್ರರೆಲ್ಲರಲ್ಲಿ ಅವನು ತುಂಬಾ ಗೌರವಾನ್ವಿತ ಭಾಗಧೇಯನು.
05034082c ತೇಜಸಾ ಪ್ರಜ್ಞಾಯಾ ಚೈವ ಯುಕ್ತೋ ಧರ್ಮಾರ್ಥತತ್ತ್ವವಿತ್।।
05034083a ಆನೃಶಂಸ್ಯಾದನುಕ್ರೋಶಾದ್ಯೋಽಸೌ ಧರ್ಮಭೃತಾಂ ವರಃ।
05034083c ಗೌರವಾತ್ತವ ರಾಜೇಂದ್ರ ಬಹೂನ್ ಕ್ಲೇಶಾಂಸ್ತಿತಿಕ್ಷತಿ।।
ತೇಜಸ್ಸು ಮತ್ತು ಪ್ರಜ್ಞೆಯಿಂದ ಕೂಡಿದ, ಧರ್ಮಾರ್ಥಗಳ ತತ್ತ್ವವನ್ನು ತಿಳಿದ, ಅನೃಶಂಸನೂ ಅಕ್ರೋಶಾದ್ಯನೂ ಆದ ಈ ಧರ್ಮಭೃತರಲ್ಲಿ ಶ್ರೇಷ್ಠನು ನಿನ್ನ ಗೌರವಕ್ಕಾಗಿ ಬಹಳಷ್ಟು ಕ್ಲೇಶಗಳನ್ನು ಸಹಿಸಿದ್ದಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಚತುಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ನಾಲ್ಕನೆಯ ಅಧ್ಯಾಯವು.