033 ವಿದುರನೀತಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಪ್ರಜಾಗರ ಪರ್ವ

ಅಧ್ಯಾಯ 33

ಸಾರ

ಸಂಜಯನು ನಿಂದಿಸಿ ಹೋಗಲು, ಯುಧಿಷ್ಠಿರನ ಸಂದೇಶವೇನೆಂದು ತಿಳಿಯದೇ, ಭಯಾನ್ವಿತನಾಗಿ ನಿದ್ದೆಗೆಟ್ಟ ಧೃತರಾಷ್ಟ್ರನು ವಿದುರನನ್ನು ಕರೆಯಿಸಿದುದು (1-8). “ನಿದ್ದೆ ಬರುತ್ತಿಲ್ಲ… ಸುಡುತ್ತಿರುವ ಮತ್ತು ನಿದ್ದೆಮಾಡಲಿಕ್ಕಾಗದೇ ಇರುವವನಿಗೆ ಒಳ್ಳೆಯದು ಏನಾದರೂ ಇದೆಯೇ ಹೇಳು.” ಎಂದು ವಿದುರನನ್ನು ಕೇಳಿದುದು (9-15). ವಿದುರನು ನಿದ್ದೆಯನ್ನು ಕಳೆದುಕೊಂಡ ಧೃತರಾಷ್ಟ್ರನಿಗೆ ಧರ್ಮವತ್ತಾದ ಮಾತುಗಳನ್ನು ಹೇಳಲು ಪ್ರಾರಂಭಿಸಿ, ಪಂಡಿತರ ಲಕ್ಷಣಗಳು (16-29), ಮೂಢರ ಲಕ್ಷಣಗಳು (30-38), ಒಂದರ ವಿಷಯವನ್ನೂ (39-42), ಎರಡರ ನಿಶ್ಚಯವನ್ನೂ (43-54), ವಶಪಡಿಸಿಕೊಳ್ಳಬೇಕಾದ ಮೂರನ್ನೂ (55-57), ನಾಲ್ಕುವಿಷಯಗಳು (58-61), ಐದು ವಿಷಯಗಳನ್ನೂ (62-65), ಆರು ವಿಷಯಗಳನ್ನೂ (66-69), ಏಳು ವಿಷಯಗಳನ್ನೂ (70-74), ಎಂಟು ವಿಷಯಗಳನ್ನೂ (75-80), ಒಂಭತ್ತು ಮತ್ತು ಹತ್ತು ವಿಷಯಗಳನ್ನೂ (81-83) ವರ್ಣಿಸಿದುದು. ಅಸುರ ಸುಧನ್ವನು ತನ್ನ ಮಗನಿಗೆ ಕೊಟ್ಟ ಉಪದೇಶವನ್ನು ವಿದುರನು ಧೃತರಾಷ್ಟ್ರನಿಗೆ ಹೇಳಿದುದು (84-104).

05033001 ವೈಶಂಪಾಯನ ಉವಾಚ।
05033001a ದ್ವಾಃಸ್ಥಂ ಪ್ರಾಹ ಮಹಾಪ್ರಾಜ್ಞೋ ಧೃತರಾಷ್ಟ್ರೋ ಮಹೀಪತಿಃ।
05033001c ವಿದುರಂ ದ್ರಷ್ಟುಮಿಚ್ಚಾಮಿ ತಮಿಹಾನಯ ಮಾಚಿರಂ।।

ವೈಶಂಪಾಯನನು ಹೇಳಿದನು: “ಮಹಾಪ್ರಾಜ್ಞ, ಮಹೀಪತಿ, ಧೃತರಾಷ್ಟ್ರನು ದ್ವಾರದಲ್ಲಿ ನಿಂತಿದ್ದವನಿಗೆ ಹೇಳಿದನು: “ವಿದುರನನ್ನು ಕಾಣಲು ಬಯಸುತ್ತೇನೆ. ಅವನನ್ನು ಬೇಗನೆ ಇಲ್ಲಿಗೆ ಕರೆದು ತಾ!”

05033002a ಪ್ರಹಿತೋ ಧೃತರಾಷ್ಟ್ರೇಣ ದೂತಃ ಕ್ಷತ್ತಾರಮಬ್ರವೀತ್।
05033002c ಈಶ್ವರಸ್ತ್ವಾಂ ಮಹಾರಾಜೋ ಮಹಾಪ್ರಾಜ್ಞಾ ದಿದೃಕ್ಷತಿ।।

ಧೃತರಾಷ್ಟ್ರನಿಂದ ಕಳುಹಿಸಲ್ಪಟ್ಟ ದೂತನು ಕ್ಷತ್ತನಿಗೆ ಹೇಳಿದನು: “ಮಹಾಪ್ರಾಜ್ಞ ಮಹಾರಾಜ ಒಡೆಯನು ನಿನ್ನನ್ನು ನೋಡಲು ಬಯಸುತ್ತಾನೆ.”

05033003a ಏವಮುಕ್ತಸ್ತು ವಿದುರಃ ಪ್ರಾಪ್ಯ ರಾಜನಿವೇಶನಂ।
05033003c ಅಬ್ರವೀದ್ಧೃತರಾಷ್ಟ್ರಾಯ ದ್ವಾಃಸ್ಥ ಮಾಂ ಪ್ರತಿವೇದಯ।।

ಇದನ್ನು ಕೇಳಿದ ವಿದುರನು ರಾಜನಿವೇಶನವನ್ನು ತಲುಪಿ ದ್ವಾರಪಾಲಕನಿಗೆ ಹೇಳಿದನು: “ಧೃತರಾಷ್ಟ್ರನಿಗೆ ನಾನು ಬಂದಿರುವುದನ್ನು ತಿಳಿಸು!”

05033004 ದ್ವಾಃಸ್ಥ ಉವಾಚ।
05033004a ವಿದುರೋಽಯಮನುಪ್ರಾಪ್ತೋ ರಾಜೇಂದ್ರ ತವ ಶಾಸನಾತ್।
05033004c ದ್ರಷ್ಟುಮಿಚ್ಚತಿ ತೇ ಪಾದೌ ಕಿಂ ಕರೋತು ಪ್ರಶಾಧಿ ಮಾಂ।।

ದ್ವಾರಪಾಲಕನು ಹೇಳಿದನು: “ರಾಜೇಂದ್ರ! ನಿನ್ನ ಆಜ್ಞೆಯಂತೆ ವಿದುರನು ನಿಮ್ಮ ಪಾದಗಳನ್ನು ಕಾಣಲು ಬಂದಿದ್ದಾನೆ. ಏನು ಮಾಡಬೇಕೆಂದು ಆಜ್ಞಾಪಿಸಿ!”

05033005 ಧೃತರಾಷ್ಟ್ರ ಉವಾಚ।
05033005a ಪ್ರವೇಶಯ ಮಹಾಪ್ರಾಜ್ಞಾಂ ವಿದುರಂ ದೀರ್ಘದರ್ಶಿನಂ।
05033005c ಅಹಂ ಹಿ ವಿದುರಸ್ಯಾಸ್ಯ ನಾಕಾಲ್ಯೋ ಜಾತು ದರ್ಶನೇ।।

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ ದೀರ್ಘದರ್ಶಿ ವಿದುರನು ಒಳಬರಲಿ. ವಿದುರನನ್ನು ಕಾಣಲು ನನಗೆ ಅಕಾಲವೆನ್ನುವುದೇ ಇಲ್ಲ.”

05033006 ದ್ವಾಃಸ್ಥ ಉವಾಚ।
05033006a ಪ್ರವಿಶಾಂತಃಪುರಂ ಕ್ಷತ್ತರ್ಮಹಾರಾಜಸ್ಯ ಧೀಮತಃ।
05033006c ನ ಹಿ ತೇ ದರ್ಶನೇಽಕಾಲ್ಯೋ ಜಾತು ರಾಜಾ ಬ್ರವೀತಿ ಮಾಂ।।

ದ್ವಾರಪಾಲಕನು ಹೇಳಿದನು: “ಕ್ಷತ್ತ! ಧೀಮತ ಮಹಾರಾಜನ ಅಂತಃಪುರವನ್ನು ಪ್ರವೇಶಿಸು! ನಿನ್ನನ್ನು ನೋಡಲು ಅವನಿಗೆ ಅಕಾಲವೆನ್ನುವುದೇ ಇಲ್ಲ ಎಂದು ರಾಜನು ನನಗೆ ಹೇಳಿದ್ದಾನೆ.””

05033007 ವೈಶಂಪಾಯನ ಉವಾಚ।
05033007a ತತಃ ಪ್ರವಿಶ್ಯ ವಿದುರೋ ಧೃತರಾಷ್ಟ್ರನಿವೇಶನಂ।
05033007c ಅಬ್ರವೀತ್ಪ್ರಾಂಜಲಿರ್ವಾಕ್ಯಂ ಚಿಂತಯಾನಂ ನರಾಧಿಪಂ।।

ವೈಶಂಪಾಯನನು ಹೇಳಿದನು: “ಆಗ ವಿದುರನು ಧೃತರಾಷ್ಟ್ರನ ನಿವೇಶನವನ್ನು ಪ್ರವೇಶಿಸಿ ಚಿಂತೆಯಲ್ಲಿದ್ದ ನರಾಧಿಪನಿಗೆ ಕೈಮುಗಿದು ಈ ಮಾತನ್ನು ಹೇಳಿದನು:

05033008a ವಿದುರೋಽಹಂ ಮಹಾಪ್ರಾಜ್ಞಾ ಸಂಪ್ರಾಪ್ತಸ್ತವ ಶಾಸನಾತ್।
05033008c ಯದಿ ಕಿಂ ಚನ ಕರ್ತವ್ಯಮಯಮಸ್ಮಿ ಪ್ರಶಾಧಿ ಮಾಂ।।

“ಮಹಾಪ್ರಾಜ್ಞ! ನಾನು ವಿದುರ! ನಿನ್ನ ಆಜ್ಞೆಯಂತೆ ಬಂದಿದ್ದೇನೆ. ಯಾವುದೇ ಕಾರ್ಯವನ್ನು ನಡೆಸಬೇಕಾದರೆ ನಾನಿಲ್ಲಿ ಇದ್ದೇನೆ. ಅಪ್ಪಣೆ ಕೊಡು!”

05033009 ಧೃತರಾಷ್ಟ್ರ ಉವಾಚ।
05033009a ಸಂಜಯೋ ವಿದುರ ಪ್ರಾಪ್ತೋ ಗರ್ಹಯಿತ್ವಾ ಚ ಮಾಂ ಗತಃ।
05033009c ಅಜಾತಶತ್ರೋಃ ಶ್ವೋ ವಾಕ್ಯಂ ಸಭಾಮಧ್ಯೇ ಸ ವಕ್ಷ್ಯತಿ।।

ಧೃತರಾಷ್ಟ್ರನು ಹೇಳಿದನು: “ವಿದುರ! ಸಂಜಯನು ಬಂದು ನನಗೆ ಬೈದು ಹೋಗಿದ್ದಾನೆ. ನಾಳೆ ಅವನು ಸಭಾಮಧ್ಯದಲ್ಲಿ ಅಜಾತಶತ್ರುವಿನ ಸಂದೇಶವನ್ನು ಹೇಳುವವನಿದ್ದಾನೆ.

05033010a ತಸ್ಯಾದ್ಯ ಕುರುವೀರಸ್ಯ ನ ವಿಜ್ಞಾತಂ ವಚೋ ಮಯಾ।
05033010c ತನ್ಮೇ ದಹತಿ ಗಾತ್ರಾಣಿ ತದಕಾರ್ಷೀತ್ಪ್ರಜಾಗರಂ।।

ಕುರುವೀರನ ಸಂದೇಶವೇನೆಂದು ಇಂದು ನನಗೆ ತಿಳಿಯಲಿಕ್ಕಾಗಲಿಲ್ಲ. ಆದುದರಿಂದ ನನ್ನ ದೇಹವು ಸುಡುತ್ತಿದೆ. ನಿದ್ದೆಬರುತ್ತಿಲ್ಲ.

05033011a ಜಾಗ್ರತೋ ದಹ್ಯಮಾನಸ್ಯ ಶ್ರೇಯೋ ಯದಿಹ ಪಶ್ಯಸಿ।
05033011c ತದ್ಬ್ರೂಹಿ ತ್ವಂ ಹಿ ನಸ್ತಾತ ಧರ್ಮಾರ್ಥಕುಶಲೋ ಹ್ಯಸಿ।।

ಸುಡುತ್ತಿರುವ ಮತ್ತು ನಿದ್ದೆಮಾಡಲಿಕ್ಕಾಗದೇ ಇರುವವನಿಗೆ ಒಳ್ಳೆಯದು ಏನಾದರೂ ಇದೆಯೇ ಹೇಳು. ಅಯ್ಯಾ! ನೀನು ಧರ್ಮ ಮತ್ತು ಅರ್ಥಗಳಲ್ಲಿ ಕುಶಲನಾಗಿದ್ದೀಯೆ.

05033012a ಯತಃ ಪ್ರಾಪ್ತಃ ಸಂಜಯಃ ಪಾಂಡವೇಭ್ಯೋ ನ ಮೇ ಯಥಾವನ್ಮನಸಃ ಪ್ರಶಾಂತಿಃ।
05033012c ಸರ್ವೇಂದ್ರಿಯಾಣ್ಯಪ್ರಕೃತಿಂ ಗತಾನಿ ಕಿಂ ವಕ್ಷ್ಯತೀತ್ಯೇವ ಹಿ ಮೇಽದ್ಯ ಚಿಂತಾ।।

ಸಂಜಯನು ಪಾಂಡವರ ಕಡೆಯಿಂದ ಮರಳಿ ಬಂದಾಗಿನಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲದಂತಾಗಿದೆ. ಅವನು ಏನು ಹೇಳುತ್ತಾನೋ ಎಂಬ ಚಿಂತೆಯಲ್ಲಿ ಇಂದು ನನ್ನ ಸರ್ವೇಂದ್ರಿಯಗಳೂ ಕೆಟ್ಟು ಹೋಗಿವೆ.”

05033013 ವಿದುರ ಉವಾಚ।
05033013a ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಂ।
05033013c ಹೃತಸ್ವಂ ಕಾಮಿನಂ ಚೋರಮಾವಿಶಂತಿ ಪ್ರಜಾಗರಾಃ।।

ವಿದುರನು ಹೇಳಿದನು: “ಪ್ರಜಾಗರವು (ನಿದ್ದೆಬಾರದಿರುವುದು) ದುರ್ಬಲನನ್ನು, ಬಡವನನ್ನು, ಕಳೆದುಕೊಂಡವನನ್ನು, ಕಾಮಿಯನ್ನು, ಮತ್ತು ಕಳ್ಳನನ್ನು ಆವರಿಸುತ್ತದೆ.

05033014a ಕಚ್ಚಿದೇತೈರ್ಮಹಾದೋಷೈರ್ನ ಸ್ಪೃಷ್ಟೋಽಸಿ ನರಾಧಿಪ।
05033014c ಕಚ್ಚಿನ್ನ ಪರವಿತ್ತೇಷು ಗೃಧ್ಯನ್ವಿಪರಿತಪ್ಯಸೇ।।

ನರಾಧಿಪ! ಇವುಗಳಲ್ಲಿ ಯಾವ ಮಹಾ ದೋಷವೂ ನಿನ್ನನ್ನು ಮುಟ್ಟಿಲ್ಲ ತಾನೇ? ಪರವಿತ್ತವನ್ನು ಕಸಿದುಕೊಂಡು ಪರಿತಪಿಸುತ್ತಿಲ್ಲ ತಾನೇ?”

05033015 ಧೃತರಾಷ್ಟ್ರ ಉವಾಚ।
05033015a ಶ್ರೋತುಮಿಚ್ಚಾಮಿ ತೇ ಧರ್ಮ್ಯಂ ಪರಂ ನೈಃಶ್ರೇಯಸಂ ವಚಃ।
05033015c ಅಸ್ಮಿನ್ರಾಜರ್ಷಿವಂಶೇ ಹಿ ತ್ವಮೇಕಃ ಪ್ರಾಜ್ಞಾಸಮ್ಮತಃ।।

ಧೃತರಾಷ್ಟ್ರನು ಹೇಳಿದನು: “ನಿನ್ನಿಂದ ಧರ್ಮವತ್ತಾದ ಪರಮ ಶ್ರೇಯಸ್ಕರ ಮಾತನ್ನು ಕೇಳಬಯಸುತ್ತೇನೆ. ಈ ರಾಜವಂಶದಲ್ಲಿ ಪ್ರಾಜ್ಞರಿಂದ ಸಮ್ಮತಿಯನ್ನು ಪಡೆದವನು ನೀನೊಬ್ಬನೇ.”

05033016 ವಿದುರ ಉವಾಚ।
05033016a ನಿಷೇವತೇ ಪ್ರಶಸ್ತಾನಿ ನಿಂದಿತಾನಿ ನ ಸೇವತೇ।
05033016c ಅನಾಸ್ತಿಕಃ ಶ್ರದ್ದಧಾನ ಏತತ್ಪಂಡಿತಲಕ್ಷಣಂ।।

ವಿದುರನು ಹೇಳಿದನು: “ಪ್ರಶಂಸೆಗಳಿಗೆ ಮರುಳಾಗದಿರುವುದು ನಿಂದನೆಗಳಿಗೆ ಗಮನಕೊಡದಿರುವುದು, ಅನಾಸ್ತಿಕನಾಗಿರುವುದು ಮತ್ತು ಶ್ರದ್ಧಾವಂತನಾಗಿರುವುದು ಪಂಡಿತನ ಲಕ್ಷಣ.

05033017a ಕ್ರೋಧೋ ಹರ್ಷಶ್ಚ ದರ್ಪಶ್ಚ ಹ್ರೀಸ್ತಂಭೋ ಮಾನ್ಯಮಾನಿತಾ।
05033017c ಯಮರ್ಥಾನ್ನಾಪಕರ್ಷಂತಿ ಸ ವೈ ಪಂಡಿತ ಉಚ್ಯತೇ।।

ಯಾರನ್ನು ಕ್ರೋಧ, ಹರ್ಷ, ದರ್ಪ, ನಾಚಿಕೆ, ಕಪಟ, ಗೌರವಗಳು ಅವರ ಉದ್ದೇಶಗಳಿಂದ ಅಪಕರ್ಷಿಸುವುದಿಲ್ಲವೋ ಅವರನ್ನೇ ಪಂಡಿತರೆಂದು ಕರೆಯುತ್ತಾರೆ.

05033018a ಯಸ್ಯ ಕೃತ್ಯಂ ನ ಜಾನಂತಿ ಮಂತ್ರಂ ವಾ ಮಂತ್ರಿತಂ ಪರೇ।
05033018c ಕೃತಮೇವಾಸ್ಯ ಜಾನಂತಿ ಸ ವೈ ಪಂಡಿತ ಉಚ್ಯತೇ।।

ಯಾರ ಸ್ವತಃ ಆಲೋಚಿಸಿದ ಅಥವಾ ಮಂತ್ರಿಗಳೊಂದಿಗೆ ಆಲೋಚಿಸಿದ ಕೆಲಸಗಳು ಕಾರ್ಯಗತ ಗೊಳಿಸುವುದರ ಒಳಗೆ ಶತ್ರುಗಳಿಗೆ ಗೊತ್ತಿರುವುದಿಲ್ಲವೋ ಅವರನ್ನು ಪಂಡಿತರೆಂದು ಕರೆಯುತ್ತಾರೆ.

05033019a ಯಸ್ಯ ಕೃತ್ಯಂ ನ ವಿಘ್ನಂತಿ ಶೀತಮುಷ್ಣಂ ಭಯಂ ರತಿಃ।
05033019c ಸಮೃದ್ಧಿರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ।।

ಯಾರ ಕೆಲಸವು ಛಳಿ, ಬಿಸಿ, ಭಯ, ಕಾಮ, ಸಮೃದ್ಧಿ ಅಥವಾ ಅಸಮೃದ್ಧಿಗಳಿಂದಾಗಿ ನಿಲ್ಲುವುದಿಲ್ಲವೋ ಅವರನ್ನು ಪಂಡಿತರೆಂದು ಕರೆಯುತ್ತಾರೆ.

05033020a ಯಸ್ಯ ಸಂಸಾರಿಣೀ ಪ್ರಜ್ಞಾ ಧರ್ಮಾರ್ಥಾವನುವರ್ತತೇ।
05033020c ಕಾಮಾದರ್ಥಂ ವೃಣೀತೇ ಯಃ ಸ ವೈ ಪಂಡಿತ ಉಚ್ಯತೇ।।

ಯಾರ ಸಾಂಸಾರಿಕ ಪ್ರಜ್ಞೆಯು ಧರ್ಮ-ಅರ್ಥಗಳನ್ನು ಅನುಸರಿಸುತ್ತದೆಯೋ, ಯಾರು ಕಾಮಕ್ಕಿಂತ ಅರ್ಥವನ್ನು ಆರಿಸಿಕೊಳ್ಳುತ್ತಾರೋ ಅವರನ್ನು ಪಂಡಿತರೆಂದು ಕರೆಯುತ್ತಾರೆ.

05033021a ಯಥಾಶಕ್ತಿ ಚಿಕೀರ್ಷಂತಿ ಯಥಾಶಕ್ತಿ ಚ ಕುರ್ವತೇ।
05033021c ನ ಕಿಂ ಚಿದವಮನ್ಯಂತೇ ಪಂಡಿತಾ ಭರತರ್ಷಭ।।

ಭರತರ್ಷಭ! ಯಥಾಶಕ್ತಿಯಾಗಿ ಪ್ರಯತ್ನಿಸುವವರು, ಯಥಾಶಕ್ತಿಯಾಗಿ ಕಾರ್ಯ ನಿರ್ವಹಿಸುವವರು, ಮತ್ತು ಯಾವುದನ್ನೂ ಮುಖ್ಯವಾದುದೆಲ್ಲವೆಂದು ಕಡೆಗಾಣದೇ ಇರುವವರು ಪಂಡಿತರು.

05033022a ಕ್ಷಿಪ್ರಂ ವಿಜಾನಾತಿ ಚಿರಂ ಶೃಣೋತಿ ವಿಜ್ಞಾಯ ಚಾರ್ಥಂ ಭಜತೇ ನ ಕಾಮಾತ್।
05033022c ನಾಸಂಪೃಷ್ಟೋ ವ್ಯುಪಯುಂಕ್ತೇ ಪರಾರ್ಥೇ ತತ್ ಪ್ರಜ್ಞಾನಂ ಪ್ರಥಮಂ ಪಂಡಿತಸ್ಯ।।

ಬೇಗನೆ ಅರ್ಥಮಾಡಿಕೊಳ್ಳುವವರು, ತಾಳ್ಮೆಯಿಂದ ಕೇಳುವವರು, ವಿಷಯಗಳನ್ನು ತಿಳಿದುಕೊಂಡು, ಕಾಮದಿಂದಲ್ಲ, ಬಯಸುವವರು, ಕೇಳದೆಯೇ ಇತರರ ವಿಷಯದಲ್ಲಿ ತನ್ನ ಉಸಿರನ್ನು ಕಳೆಯದಿರುವವರು ಪಂಡಿತರ ಉಚ್ಛ ಜ್ಞಾನವನ್ನು ಪಡೆದವರು.

05033023a ನಾಪ್ರಾಪ್ಯಮಭಿವಾಂಚಂತಿ ನಷ್ಟಂ ನೇಚ್ಚಂತಿ ಶೋಚಿತುಂ।
05033023c ಆಪತ್ಸು ಚ ನ ಮುಹ್ಯಂತಿ ನರಾಃ ಪಂಡಿತಬುದ್ಧಯಃ।।

ಪಂಡಿತರ ಬುದ್ಧಿಯುಳ್ಳ ನರನು ಸಿಗಲಸಾಧ್ಯವಾದವುಗಳ ಹಿಂದೆ ಹೋಗುವುದಿಲ್ಲ; ನಷ್ಟವಾಗಿ ಹೋದುದರ ಕುರಿತು ಶೋಕಿಸುವುದಿಲ್ಲ; ಮತ್ತು ಆಪತ್ತುಗಳು ಬಂದೊದಗಿದಾಗ ಬುದ್ಧಿಯನ್ನು ಕಳೆದುಕೊಳ್ಳುವುದಿಲ್ಲ.

05033024a ನಿಶ್ಚಿತ್ಯ ಯಃ ಪ್ರಕ್ರಮತೇ ನಾಂತರ್ವಸತಿ ಕರ್ಮಣಃ।
05033024c ಅವಂಧ್ಯಕಾಲೋ ವಶ್ಯಾತ್ಮಾ ಸ ವೈ ಪಂಡಿತ ಉಚ್ಯತೇ।।

ಪ್ರಾರಂಭಿಸಿದ ಕಾರ್ಯವು ಮುಗಿಯುವ ತನಕ ದುಡಿಯುವನನ್ನು, ಸಮಯವನ್ನು ಕಳೆಯದೇ ಇರುವವನನ್ನು, ಆತ್ಮವನ್ನು ವಶದಲ್ಲಿಟ್ಟುಕೊಂಡಿರುವವನನ್ನು ಪಂಡಿತನೆಂದು ಕರೆಯುತ್ತಾರೆ.

05033025a ಆರ್ಯಕರ್ಮಣಿ ರಜ್ಯಂತೇ ಭೂತಿಕರ್ಮಾಣಿ ಕುರ್ವತೇ।
05033025c ಹಿತಂ ಚ ನಾಭ್ಯಸೂಯಂತಿ ಪಂಡಿತಾ ಭರತರ್ಷಭ।।

ಭರತರ್ಷಭ! ಪಂಡಿತರು ಆರ್ಯಕರ್ಮಗಳಲ್ಲಿ ಸಂತೋಷಪಡುತ್ತಾರೆ, ಅವರಿಗೆ ಹಿತವನ್ನು ತರುವ ಕರ್ಮಗಳನ್ನು ಮಾಡುತ್ತಾರೆ ಮತ್ತು ಒಳ್ಳೆಯದರ ಕುರಿತು ಎಂದೂ ಅಸೂಯೆಪಡುವುದಿಲ್ಲ.

05033026a ನ ಹೃಷ್ಯತ್ಯಾತ್ಮಸಮ್ಮಾನೇ ನಾವಮಾನೇನ ತಪ್ಯತೇ।
05033026c ಗಾಂಗೋ ಹ್ರದ ಇವಾಕ್ಷೋಭ್ಯೋ ಯಃ ಸ ಪಂಡಿತ ಉಚ್ಯತೇ।।

ಯಾರು ಆತ್ಮಸನ್ಮಾನದಿಂದ ಹರ್ಷಗೊಳ್ಳದೇ, ಅವಮಾನದಿಂದ ಸುಡದೇ, ಗಂಗೆಯ ಸರೋವರದ ನೀರಿನಂತೆ ಇರುತ್ತಾರೋ ಅಂಥವರನ್ನು ಪಂಡಿತರೆಂದು ಕರೆಯುತ್ತಾರೆ.

05033027a ತತ್ತ್ವಜ್ಞಾಃ ಸರ್ವಭೂತಾನಾಂ ಯೋಗಜ್ಞಾಃ ಸರ್ವಕರ್ಮಣಾಂ।
05033027c ಉಪಾಯಜ್ಞೋ ಮನುಷ್ಯಾಣಾಂ ನರಃ ಪಂಡಿತ ಉಚ್ಯತೇ।।

ಸರ್ವಭೂತಗಳ ತತ್ವಗಳನ್ನೂ ತಿಳಿದಿರುವ, ಸರ್ವಕರ್ಮಗಳ ಯೋಗಗಳನ್ನು ತಿಳಿದಿರುವ, ಮನುಷ್ಯರ ಉಪಾಯಗಳನ್ನು ತಿಳಿದಿರುವ ನರನನ್ನು ಪಂಡಿತನೆಂದು ಕರೆಯುತ್ತಾರೆ.

05033028a ಪ್ರವೃತ್ತವಾಕ್ಚಿತ್ರಕಥ ಊಹವಾನ್ಪ್ರತಿಭಾನವಾನ್।
05033028c ಆಶು ಗ್ರಂಥಸ್ಯ ವಕ್ತಾ ಚ ಸ ವೈ ಪಂಡಿತ ಉಚ್ಯತೇ।।

ಧಿಟ್ಟನಾಗಿ ಮಾತನಾಡುವವನು, ಬಹಳ ವಿಷಯಗಳ ಕುರಿತು ಮಾತನಾಡುವ ಪ್ರತಿಭೆಯುಳ್ಳವನು, ಗ್ರಂಥಗಳನ್ನು ವಾದಿಸಿ ಮಾತನಾಡಬಲ್ಲವನು ಅಂಥವನನ್ನೇ ಪಂಡಿತನೆಂದು ಕರೆಯುತ್ತಾರೆ.

05033029a ಶ್ರುತಂ ಪ್ರಜ್ಞಾನುಗಂ ಯಸ್ಯ ಪ್ರಜ್ಞಾ ಚೈವ ಶ್ರುತಾನುಗಾ।
05033029c ಅಸಂಭಿನ್ನಾರ್ಯಮರ್ಯಾದಃ ಪಂಡಿತಾಖ್ಯಾಂ ಲಭೇತ ಸಃ।।

ಯಾರ ಶ್ರುತಿಗಳ ಪಾಂಡಿತ್ಯವು ಪ್ರಜ್ಞೆಯನ್ನು ಅನುಸರಿಸುತ್ತದೆಯೋ, ಯಾರ ಪ್ರಜ್ಞೆಯು ಶ್ರುತಿಗಳನ್ನು ಅನುಸರಿಸಿದೆಯೋ, ಯಾರು ಆರ್ಯರನ್ನು ಮರ್ಯಾದಿಸುವುದರಿಂದ ದೂರವಿರುವುದಿಲ್ಲವೋ ಅವರಿಗೆ ಪಂಡಿತ ಎಂಬ ಹೆಸರು ದೊರೆಯುತ್ತದೆ.

05033030a ಅಶ್ರುತಶ್ಚ ಸಮುನ್ನದ್ಧೋ ದರಿದ್ರಶ್ಚ ಮಹಾಮನಾಃ।
05033030c ಅರ್ಥಾಂಶ್ಚಾಕರ್ಮಣಾ ಪ್ರೇಪ್ಸುರ್ಮೂಢ ಇತ್ಯುಚ್ಯತೇ ಬುಧೈಃ।।

ಶ್ರುತಿಗಳನ್ನು ತಿಳಿದುಕೊಳ್ಳದೇ ಇದ್ದರೂ ಮುನ್ನುಗ್ಗುವ, ದರಿದ್ರನಾಗಿದ್ದರೂ ಸೊಕ್ಕಿರುವ, ಮಾಡಬಾರದ ಕೆಲಸಗಳನ್ನು ಮಾಡಿ ಸಂಪಾದನೆ ಮಾಡುವವನನ್ನು ತಿಳಿದವರು ಮೂಢನೆನ್ನುತ್ತಾರೆ.

05033031a ಸ್ವಮರ್ಥಂ ಯಃ ಪರಿತ್ಯಜ್ಯ ಪರಾರ್ಥಮನುತಿಷ್ಠತಿ।
05033031c ಮಿಥ್ಯಾ ಚರತಿ ಮಿತ್ರಾರ್ಥೇ ಯಶ್ಚ ಮೂಢಃ ಸ ಉಚ್ಯತೇ।।

ತನ್ನ ಧನವನ್ನು ಬಿಟ್ಟು ಇನ್ನೊಬ್ಬರ ಧನದ ಹಿಂದೆ ಯಾರು ಹೋಗುತ್ತಾರೋ, ಮಿತ್ರರಿಗೇ ಯಾರು ಮೋಸಮಾಡುತ್ತಾರೋ ಅವರನ್ನು ಮೂಢರೆಂದು ಕರೆಯುತ್ತಾರೆ.

05033032a ಅಕಾಮಾನ್ಕಾಮಯತಿ ಯಃ ಕಾಮಯಾನಾನ್ಪರಿದ್ವಿಷನ್।
05033032c ಬಲವಂತಂ ಚ ಯೋ ದ್ವೇಷ್ಟಿ ತಮಾಹುರ್ಮೂಢಚೇತಸಂ।।

ಯಾರು ಬಯಸಬಾರದುದನ್ನು ಬಯಸುತ್ತಾರೋ, ಬಯಸಬೇಕಾದುದನ್ನು ತೊರೆಯುತ್ತಾರೋ, ಬಲಶಾಲಿಗಳೊಂದಿಗೆ ದ್ವೇಷವನ್ನು ಬೆಳೆಸುತ್ತಾರೋ ಅವರನ್ನು ಮೂಢಚೇತಸರೆಂದು ಹೇಳುತ್ತಾರೆ.

05033033a ಅಮಿತ್ರಂ ಕುರುತೇ ಮಿತ್ರಂ ಮಿತ್ರಂ ದ್ವೇಷ್ಟಿ ಹಿನಸ್ತಿ ಚ।
05033033c ಕರ್ಮ ಚಾರಭತೇ ದುಷ್ಟಂ ತಮಾಹುರ್ಮೂಢಚೇತಸಂ।।

ಅಮಿತ್ರರನ್ನು ಮಿತ್ರರನ್ನಾಗಿ ಮಾಡಿಕೊಳ್ಳುವವರನ್ನು, ಮಿತ್ರರನ್ನು ದ್ವೇಷಿಸಿ ದೂರವಿಡುವವರನ್ನು, ದುಷ್ಟಕರ್ಮಗಳನ್ನು ಮಾಡುವವರನ್ನು ಮೂಢಚೇತಸರೆಂದು ಕರೆಯುತ್ತಾರೆ.

05033034a ಸಂಸಾರಯತಿ ಕೃತ್ಯಾನಿ ಸರ್ವತ್ರ ವಿಚಿಕಿತ್ಸತೇ।
05033034c ಚಿರಂ ಕರೋತಿ ಕ್ಷಿಪ್ರಾರ್ಥೇ ಸ ಮೂಢೋ ಭರತರ್ಷಭ।।

ಭರತರ್ಷಭ! ಮಾಡುವುದೆಲ್ಲವನ್ನೂ ಹೇಳಿಕೊಳ್ಳುವವನು, ಎಲ್ಲವನ್ನೂ ಪರೀಕ್ಷಿಸುವವನು, ಮತ್ತು ಬೇಗನೇ ಮಾಡಿ ಮುಗಿಸಬಹುದಾದುದನ್ನು ಮಾಡಲು ತುಂಬಾ ಸಮಯ ತೆಗೆದುಕೊಳ್ಳುವವನು ಮೂಢನು.

05033035a ಅನಾಹೂತಃ ಪ್ರವಿಶತಿ ಅಪೃಷ್ಟೋ ಬಹು ಭಾಷತೇ।
05033035c ವಿಶ್ವಸತ್ಯಪ್ರಮತ್ತೇಷು ಮೂಢಚೇತಾ ನರಾಧಮಃ।।

ಆಮಂತ್ರಣವಿಲ್ಲದೇ ಪ್ರವೇಶಿಸುವ, ಕೇಳದೆಯೇ ಬಹಳ ಮತನಾಡುವ, ಅಪ್ರಮತ್ತರಾಗಿರುವವರ ಮೇಲೆ ವಿಶ್ವಾಸವನ್ನಿಡುವ ನರಾಧಮನು ಮೂಢಚೇತಸನು.

05033036a ಪರಂ ಕ್ಷಿಪತಿ ದೋಷೇಣ ವರ್ತಮಾನಃ ಸ್ವಯಂ ತಥಾ।
05033036c ಯಶ್ಚ ಕ್ರುಧ್ಯತ್ಯನೀಶಃ ಸನ್ಸ ಚ ಮೂಢತಮೋ ನರಃ।।

ತಪ್ಪು ತನ್ನದಾಗಿದ್ದರೂ ಇತರರನ್ನು ದೂಷಿಸುವ, ದುರ್ಬಲನಾಗಿದ್ದರೂ ಕೋಪಗೊಳ್ಳುವ ನರನು ಅತ್ಯಂತ ಮೂಢ.

05033037a ಆತ್ಮನೋ ಬಲಮಜ್ಞಾಯ ಧರ್ಮಾರ್ಥಪರಿವರ್ಜಿತಂ।
05033037c ಅಲಭ್ಯಮಿಚ್ಚನ್ನೈಷ್ಕರ್ಮ್ಯಾನ್ಮೂಢಬುದ್ಧಿರಿಹೋಚ್ಯತೇ।।

ತನ್ನ ಶಕ್ತಿಯನ್ನು ತಿಳಿದುಕೊಳ್ಳದೆಯೇ ಧರ್ಮಾರ್ಥಗಳನ್ನು ತೊರೆದು, ಸರಿಯಾದ ಯೋಜನೋಪಾಯಗಳನ್ನು ಬಳಸದೇ, ಅಲಭ್ಯವಾದುದನ್ನು ಪಡೆಯಲು ಮುಂದುವರೆದವನನ್ನು ಮೂಢಬುದ್ಧಿಯೆಂದು ಹೇಳುತ್ತಾರೆ.

05033038a ಅಶಿಷ್ಯಂ ಶಾಸ್ತಿ ಯೋ ರಾಜನ್ಯಶ್ಚ ಶೂನ್ಯಮುಪಾಸತೇ।
05033038c ಕದರ್ಯಂ ಭಜತೇ ಯಶ್ಚ ತಮಾಹುರ್ಮೂಢಚೇತಸಂ।।

ರಾಜನ್! ಯಾರು ಶಿಕ್ಷೆಗೆ ಅನರ್ಹರಾದವರನ್ನು ಶಿಕ್ಷಿಸುತ್ತಾರೋ, ಪೊಳ್ಳಾಗಿರುವವರನ್ನು ಪೂಜಿಸುತ್ತಾರೋ, ಜಿಪುಣರನ್ನು ಬೇಡುತ್ತಾರೋ ಅವರನ್ನು ಮೂಢಚೇತಸರೆನ್ನುತ್ತಾರೆ.

05033039a ಅರ್ಥಂ ಮಹಾಂತಮಾಸಾದ್ಯ ವಿದ್ಯಾಮೈಶ್ವರ್ಯಮೇವ ವಾ।
05033039c ವಿಚರತ್ಯಸಮುನ್ನದ್ಧೋ ಯಃ ಸ ಪಂಡಿತ ಉಚ್ಯತೇ।।

ಅತುಲ ಸಂಪತ್ತನ್ನು ಪಡೆದು, ಜೊತೆಗೆ ವಿದ್ಯೆಯ ಐಶ್ವರ್ಯವನ್ನೂ ಪಡೆದು ಸೊಕ್ಕಿಲ್ಲದೇ ನಡೆದುಕೊಳ್ಳುವವನನ್ನು ಪಂಡಿತನೆಂದು ಕರೆಯುತ್ತಾರೆ.

05033040a ಏಕಃ ಸಂಪನ್ನಮಶ್ನಾತಿ ವಸ್ತೇ ವಾಸಶ್ಚ ಶೋಭನಂ।
05033040c ಯೋಽಸಂವಿಭಜ್ಯ ಭೃತ್ಯೇಭ್ಯಃ ಕೋ ನೃಶಂಸತರಸ್ತತಃ।।

ಸಂಪತ್ತಿದ್ದೂ, ಸೇವಕರಲ್ಲಿ ಹಂಚಿಕೊಳ್ಳದೇ, ಒಬ್ಬನೇ ತಿನ್ನುವವನು ಮತ್ತು ಸುಂದರ ವಸ್ತ್ರಗಳನ್ನು ತೊಡುವವನು ಕಠಿಣ ಹೃದಯಿಯಲ್ಲದೇ ಬೇರೆ ಯಾರಿರಬಹುದು?

05033041a ಏಕಃ ಪಾಪಾನಿ ಕುರುತೇ ಫಲಂ ಭುಂಕ್ತೇ ಮಹಾಜನಃ।
05033041c ಭೋಕ್ತಾರೋ ವಿಪ್ರಮುಚ್ಯಂತೇ ಕರ್ತಾ ದೋಷೇಣ ಲಿಪ್ಯತೇ।।

ಒಬ್ಬನೇ ಮಾಡಿದ ಪಾಪದ ಫಲವನ್ನು ಬಹಳ ಮಂದಿ ಉಣ್ಣಬಹುದು. ಆದರೆ ದೋಷವು ಮಾಡಿದವನಿಗೆ ಮಾತ್ರ ತಲುಪುತ್ತದೆ. ಉಣ್ಣುವವರು ಅದರಿಂದ ತೊಂದರೆಯಿಲ್ಲದೇ ತಪ್ಪಿಸಿಕೊಂಡುಬಿಡುತ್ತಾರೆ.

05033042a ಏಕಂ ಹನ್ಯಾನ್ನ ವಾ ಹನ್ಯಾದಿಷುರ್ಮುಕ್ತೋ ಧನುಷ್ಮತಾ।
05033042c ಬುದ್ಧಿರ್ಬುದ್ಧಿಮತೋತ್ಸೃಷ್ಟಾ ಹನ್ಯಾದ್ರಾಷ್ಟ್ರಂ ಸರಾಜಕಂ।।

ಧನುರ್ಧಾರಿಯು ಒಬ್ಬನನ್ನಾದರೂ ಹೊಡೆಯುವುದರಲ್ಲಿ ಯಶಸ್ವಿಯಾಗಬಹುದು ಅಥವಾ ಯಶಸ್ವಿಯಾಗದೇ ಇರಬಹುದು. ಆದರೆ ಬುದ್ಧಿವಂತನು ತನ್ನ ಬುದ್ಧಿಯನ್ನು ಬಳಸಿ ರಾಜನೊಂದಿಗೆ ರಾಷ್ಟ್ರವನ್ನೂ ನಾಶಗೊಳಿಸಬಹುದು.

05033043a ಏಕಯಾ ದ್ವೇ ವಿನಿಶ್ಚಿತ್ಯ ತ್ರೀಂಶ್ಚತುರ್ಭಿರ್ವಶೇ ಕುರು।
05033043c ಪಂಚ ಜಿತ್ವಾ ವಿದಿತ್ವಾ ಷಟ್ಸಪ್ತ ಹಿತ್ವಾ ಸುಖೀ ಭವ।।

ಎರಡರಲ್ಲಿ ಒಂದನ್ನು ನಿಶ್ಚಯಿಸಿ, ನಾಲ್ಕರಲ್ಲಿ ಮೂರನ್ನು ವಶಮಾಡಿಕೋ. ಐದನ್ನು ಗೆದ್ದು, ಆರನ್ನು ಅರ್ಥಮಾಡಿಕೊಂಡು, ಏಳನ್ನು ತೊರೆದು ಸುಖಿಯಾಗಿರು.

05033044a ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ವಧ್ಯತೇ।
05033044c ಸರಾಷ್ಟ್ರಂ ಸಪ್ರಜಂ ಹಂತಿ ರಾಜಾನಂ ಮಂತ್ರವಿಸ್ರವಃ।।

ವಿಷವು ಒಬ್ಬನನ್ನೇ ಕೊಲ್ಲುತ್ತದೆ. ಖಡ್ಗವು ಅನೇಕರನ್ನು ವಧಿಸುತ್ತದೆ. ಆದರೆ ಕೆಟ್ಟ ಸಲಹೆಗಾರರು ರಾಜ ಮತ್ತು ಪ್ರಜೆಗಳೊಂದಿಗೆ ಸಂಪೂರ್ಣ ರಾಷ್ಟ್ರವನ್ನು ಕೊಲ್ಲುತ್ತಾರೆ.

05033045a ಏಕಃ ಸ್ವಾದು ನ ಭುಂಜೀತ ಏಕಶ್ಚಾರ್ಥಾನ್ನ ಚಿಂತಯೇತ್।
05033045c ಏಕೋ ನ ಗಚ್ಚೇದಧ್ವಾನಂ ನೈಕಃ ಸುಪ್ತೇಷು ಜಾಗೃಯಾತ್।।

ರುಚಿಯಾಗಿದ್ದುದನ್ನು ಒಬ್ಬನೇ ತಿನ್ನಬಾರದು. ಸಂಪಾದನೆಯ ಕುರಿತು ಒಬ್ಬನೇ ಚಿಂತಿಸಬಾರದು. ಒಬ್ಬನೇ ಪ್ರವಾಸಕ್ಕೆ ಹೋಗಬಾರದು. ಎಲ್ಲರೂ ಮಲಗಿರುವಾಗ ಒಬ್ಬನೇ ಎಚ್ಚೆತ್ತಿರಬಾರದು.

05033046a ಏಕಮೇವಾದ್ವಿತೀಯಂ ತದ್ಯದ್ರಾಜನ್ನಾವಬುಧ್ಯಸೇ।
05033046c ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ।।

ರಾಜನ್! ಎರಡನೆಯವನಿಲ್ಲದ ಯಾವ ಏಕನನ್ನು ನೀನು ತಿಳಿದಿಲ್ಲವೋ ಅವನೇ ಸತ್ಯ, ಸ್ವರ್ಗದ ಸೋಪಾನ, ಮತ್ತು ಸಮುದ್ರದಲ್ಲಿರುವ ನಾವೆಯಂತೆ.

05033047a ಏಕಃ ಕ್ಷಮಾವತಾಂ ದೋಷೋ ದ್ವಿತೀಯೋ ನೋಪಲಭ್ಯತೇ।
05033047c ಯದೇನಂ ಕ್ಷಮಯಾ ಯುಕ್ತಮಶಕ್ತಂ ಮನ್ಯತೇ ಜನಃ।।

ಕ್ಷಮಾವಂತನಲ್ಲಿ ಒಂದೇ ಒಂದು ದೋಷವಿದೆ. ಎರಡನೆಯದಿಲ್ಲ. ಅದೇನೆಂದರೆ - ಜನರು ಕ್ಷಮಾಯುಕ್ತನನ್ನು ಅಶಕ್ತನೆಂದು ತಿಳಿದುಬಿಡುತ್ತಾರೆ.

05033048a ಏಕೋ ಧರ್ಮಃ ಪರಂ ಶ್ರೇಯಃ ಕ್ಷಮೈಕಾ ಶಾಂತಿರುತ್ತಮಾ।
05033048c ವಿದ್ಯೈಕಾ ಪರಮಾ ದೃಷ್ಟಿರಹಿಂಸೈಕಾ ಸುಖಾವಹಾ।।

ಕ್ಷಮೆಯೇ ಒಂದು ಪರಮ ಶ್ರೇಯಸ್ಕರ ಧರ್ಮ. ಕ್ಷಮೆಯೊಂದೇ ಉತ್ತಮ ಶಾಂತಿ. ತಿಳುವಳಿಕೆಯೊಂದೇ ಪರಮ ದೃಷ್ಟಿ. ಅಹಿಂಸೆಯೊಂದೇ ಪರಮ ಸುಖ.

05033049a ದ್ವಾವಿಮೌ ಗ್ರಸತೇ ಭೂಮಿಃ ಸರ್ಪೋ ಬಿಲಶಯಾನಿವ।
05033049c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಂ।।

ಬಿಲದಲ್ಲಿ ವಾಸಿಸುವವುಗಳನ್ನು ಸರ್ಪವು ನುಂಗುವಂತೆ ಭೂಮಿಯು ಇವರಿಬ್ಬರನ್ನು ನುಂಗುತ್ತದೆ: ಹೋರಾಡಲು ಅಸಮರ್ಥನಾದ ರಾಜ ಮತ್ತು ಪ್ರವಾಸಮಾಡದೇ ಇರುವ ಬ್ರಾಹ್ಮಣ.

05033050a ದ್ವೇ ಕರ್ಮಣೀ ನರಃ ಕುರ್ವನ್ನಸ್ಮಿಽಲ್ಲೋಕೇ ವಿರೋಚತೇ।
05033050c ಅಬ್ರುವನ್ಪರುಷಂ ಕಿಂ ಚಿದಸತೋ ನಾರ್ಥಯಂಸ್ತಥಾ।।

ಎರಡು ಕರ್ಮಗಳನ್ನು ಮಾಡಿ ನರನು ಲೋಕದಲ್ಲಿ ವಿರಾಜಿಸುತ್ತಾನೆ: ಚುಚ್ಚುವ ಮಾತುಗಳನ್ನಾಡದೇ ಇರುವುದರಿಂದ ಮತ್ತು ಸತ್ಪುರುಷರಲ್ಲದವರನ್ನು ಆದರಿಸದೇ ಇರುವುದರಿಂದ.

05033051a ದ್ವಾವಿಮೌ ಪುರುಷವ್ಯಾಘ್ರ ಪರಪ್ರತ್ಯಯಕಾರಿಣೌ।
05033051c ಸ್ತ್ರಿಯಃ ಕಾಮಿತಕಾಮಿನ್ಯೋ ಲೋಕಃ ಪೂಜಿತಪೂಜಕಃ।।

ಪುರುಷವ್ಯಾಘ್ರ! ಈ ಇಬ್ಬರಿಗೂ ತಮ್ಮದೇ ಆದ ಕಾರಣಗಳಿಲ್ಲ: ಇತರರು ಕಾಮಿಸುತ್ತಿರುವನನನ್ನು ಕಾಮಿಸುವ ಸ್ತ್ರೀ ಮತ್ತು ಇತರರು ಪೂಜಿಸುತ್ತಾರೆಂದು ಪೂಜಿಸುವವನು.

05033052a ದ್ವಾವಿಮೌ ಕಂಟಕೌ ತೀಕ್ಷ್ಣೌ ಶರೀರಪರಿಶೋಷಣೌ।
05033052c ಯಶ್ಚಾಧನಃ ಕಾಮಯತೇ ಯಶ್ಚ ಕುಪ್ಯತ್ಯನೀಶ್ವರಃ।।

ಇವೆರಡು ಶರೀರವನ್ನು ಪರಿಶೋಷಿಸುವ ತೀಕ್ಷ್ಣ ಕಂಟಕಗಳು: ಬಡವನ ಆಸೆ ಮತ್ತು ಸೇವಕನ ಕೋಪ.

05033053a ದ್ವಾವಿಮೌ ಪುರುಷೌ ರಾಜನ್ಸ್ವರ್ಗಸ್ಯೋಪರಿ ತಿಷ್ಠತಃ।
05033053c ಪ್ರಭುಶ್ಚ ಕ್ಷಮಯಾ ಯುಕ್ತೋ ದರಿದ್ರಶ್ಚ ಪ್ರದಾನವಾನ್।।

ರಾಜನ್! ಈ ಈರ್ವರು ಪುರುಷರು ಸ್ವರ್ಗಕ್ಕೂ ಮೇಲೆ ನಿಲ್ಲುತ್ತಾರೆ: ಕ್ಷಮಾವಂತನಾದ ಪ್ರಭು ಮತ್ತು ದಾನಿಯಾಗಿರುವ ದರಿದ್ರ.

05033054a ನ್ಯಾಯಾಗತಸ್ಯ ದ್ರವ್ಯಸ್ಯ ಬೋದ್ಧವ್ಯೌ ದ್ವಾವತಿಕ್ರಮೌ।
05033054c ಅಪಾತ್ರೇ ಪ್ರತಿಪತ್ತಿಶ್ಚ ಪಾತ್ರೇ ಚಾಪ್ರತಿಪಾದನಂ।।

ನ್ಯಾಯವಾಗಿ ಪಡೆದಿರುವ ಸಂಪತ್ತಿನ ದುರುಪಯೋಗವು ಎರಡು ರೀತಿಯಲ್ಲಾಗುತ್ತದೆ ಎಂದು ತಿಳಿಯಲ್ಪಟ್ಟಿದೆ: ಅಪಾತ್ರನಿಗೆ ದಾನ ಮಾಡುವುದು ಮತ್ತು ಪಾತ್ರನಾದವನಿಗೆ ದಾನವನ್ನು ನಿರಾಕರಿಸುವುದು.

05033055a ತ್ರಯೋ ನ್ಯಾಯಾ ಮನುಷ್ಯಾಣಾಂ ಶ್ರೂಯಂತೇ ಭರತರ್ಷಭ।
05033055c ಕನೀಯಾನ್ಮಧ್ಯಮಃ ಶ್ರೇಷ್ಠ ಇತಿ ವೇದವಿದೋ ವಿದುಃ।।

ಭರತರ್ಷಭ! ಮನುಷ್ಯರಿಗೆ ಮೂರು ನ್ಯಾಯಗಳಿವೆಯೆಂದು ಕೇಳಿದ್ದೇವೆ. ಕನಿಷ್ಟ, ಮಧ್ಯಮ ಮತ್ತು ಶ್ರೇಷ್ಠ ಎಂದು ವೇದವಿದರು ತಿಳಿದಿದ್ದಾರೆ.

05033056a ತ್ರಿವಿಧಾಃ ಪುರುಷಾ ರಾಜನ್ನುತ್ತಮಾಧಮಮಧ್ಯಮಾಃ।
05033056c ನಿಯೋಜಯೇದ್ಯಥಾವತ್ತಾಂಸ್ತ್ರಿವಿಧೇಷ್ವೇವ ಕರ್ಮಸು।।

ರಾಜನ್! ಮೂರು ವಿಧದ ಪುರುಷರಿದ್ದಾರೆ: ಉತ್ತಮ, ಅಧಮ ಮತ್ತು ಮಧ್ಯಮ. ಅವರ ಗುಣಕ್ಕೆ ತಕ್ಕಂತೆ ಅವರು ಮೂರು ವಿಧದ ಕರ್ಮಗಳಲ್ಲಿ ತೊಡಗಿರಬೇಕು.

05033057a ತ್ರಯ ಏವಾಧನಾ ರಾಜನ್ಭಾರ್ಯಾ ದಾಸಸ್ತಥಾ ಸುತಃ।
05033057c ಯತ್ತೇ ಸಮಧಿಗಚ್ಚಂತಿ ಯಸ್ಯ ತೇ ತಸ್ಯ ತದ್ಧನಂ।।

ರಾಜನ್! ಈ ಮೂವರಲ್ಲಿ ತಮ್ಮದೇ ಸಂಪತ್ತು ಇರುವುದಿಲ್ಲ: ಹೆಂಡತಿ, ಸೇವಕ ಮತ್ತು ಮಗ. ಅವರು ಸಂಪಾದಿಸಿದ ಧನವು ಅವರನ್ನು ಪಡೆದವರಿಗೇ ಸೇರುತ್ತದೆ.

05033058a ಚತ್ವಾರಿ ರಾಜ್ಞಾ ತು ಮಹಾಬಲೇನ ವರ್ಜ್ಯಾನ್ಯಾಹುಃ ಪಂಡಿತಸ್ತಾನಿ ವಿದ್ಯಾತ್।
05033058c ಅಲ್ಪಪ್ರಜ್ಞೈಃ ಸಹ ಮಂತ್ರಂ ನ ಕುರ್ಯಾನ್ ನ ದೀರ್ಘಸೂತ್ರೈರಲಸೈಶ್ಚಾರಣೈಶ್ಚ।।

ಎಷ್ಟೇ ಬಲಶಾಲಿಯಾಗಿದ್ದರೂ ರಾಜನು ಈ ನಾಲ್ವರ ಸಲಹೆಯನ್ನು ತಿರಸ್ಕರಿಸಬೇಕು ಎಂದು ಪಂಡಿತರು ಅವರ ತಿಳುವಳಿಕೆಯಿಂದ ಹೇಳುತ್ತಾರೆ: ಸಣ್ಣಬುದ್ಧಿಯುಳ್ಳವರು, ವಿಷಯವನ್ನು ಎಳೆಯುವವರು, ಸೋಮಾರಿಗಳು ಮತ್ತು ಹೊಗಳುಭಟ್ಟರು.

05033059a ಚತ್ವಾರಿ ತೇ ತಾತ ಗೃಹೇ ವಸಂತು ಶ್ರಿಯಾಭಿಜುಷ್ಟಸ್ಯ ಗೃಹಸ್ಥಧರ್ಮೇ।
05033059c ವೃದ್ಧೋ ಜ್ಞಾತಿರವಸನ್ನಃ ಕುಲೀನಃ ಸಖಾ ದರಿದ್ರೋ ಭಗಿನೀ ಚಾನಪತ್ಯಾ।।

ಸ್ವಾಮೀ! ಶ್ರೀಮಂತ ಗೃಹಸ್ಥನ ಮನೆಯಲ್ಲಿ ಈ ನಾಲ್ಕು ನೆಲೆಸಿರಬೇಕು: ವೃದ್ಧ ದಾಯಾದಿಗಳು, ಉತ್ತಮ ಕುಲದಲ್ಲಿ ಹುಟ್ಟಿ ಕಷ್ಟದಲ್ಲಿರುವವರು, ದರಿದ್ರನಾಗಿರುವ ಸಖ ಮತ್ತು ಮಕ್ಕಳಿಲ್ಲದಿರುವ ತಂಗಿ.

05033060a ಚತ್ವಾರ್ಯಾಹ ಮಹಾರಾಜ ಸದ್ಯಸ್ಕಾನಿ ಬೃಹಸ್ಪತಿಃ।
05033060c ಪೃಚ್ಚತೇ ತ್ರಿದಶೇಂದ್ರಾಯ ತಾನೀಮಾನಿ ನಿಬೋಧ ಮೇ।।
05033061a ದೇವತಾನಾಂ ಚ ಸಂಕಲ್ಪಮನುಭಾವಂ ಚ ಧೀಮತಾಂ।
05033061c ವಿನಯಂ ಕೃತವಿದ್ಯಾನಾಂ ವಿನಾಶಂ ಪಾಪಕರ್ಮಣಾಂ।।

ಮಹಾರಾಜ! ಸದ್ಯದಲ್ಲಿಯೇ ಫಲವನ್ನು ನೀಡುವ ನಾಲ್ಕು ವಿಷಯಗಳನ್ನು ತ್ರಿದಶೇಂದ್ರನು ಬೃಹಸ್ಪತಿಯಲ್ಲಿ ಕೇಳಿದಾಗ ಅವನು ಹೇಳಿದುದನ್ನು ನನ್ನಿಂದ ಕೇಳು: ದೇವತೆಗಳ ಸಂಕಲ್ಪ, ಧೀಮತರ ಅನುಭವ, ವಿದ್ಯಾವಂತರ ವಿನಯ, ಮತ್ತು ಪಾಪಕರ್ಮಿಗಳ ವಿನಾಶ.

05033062a ಪಂಚಾಗ್ನಯೋ ಮನುಷ್ಯೇಣ ಪರಿಚರ್ಯಾಃ ಪ್ರಯತ್ನತಃ।
05033062c ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ಭರತರ್ಷಭ।।

ಭರತರ್ಷಭ! ಮನುಷ್ಯನು ಈ ಪಂಚಾಗ್ನಿಗಳ ಸೇವೆಯನ್ನು ಪ್ರಯತ್ನಪಟ್ಟು ಮಾಡಬೇಕು: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು.

05033063a ಪಂಚೈವ ಪೂಜಯನ್ಲೋಕೇ ಯಶಃ ಪ್ರಾಪ್ನೋತಿ ಕೇವಲಂ।
05033063c ದೇವಾನ್ಪಿತೄನ್ಮನುಷ್ಯಾಂಶ್ಚ ಭಿಕ್ಷೂನತಿಥಿಪಂಚಮಾನ್।।

ಕೇವಲ ಈ ಐದನ್ನು ಪೂಜಿಸಿ ಲೋಕದಲ್ಲಿ ಯಶವನ್ನು ಹೊಂದಬಹುದು: ದೇವತೆಗಳು, ಪಿತೃಗಳು, ಮನುಷ್ಯರು, ಭಿಕ್ಷುಗಳು ಮತ್ತು ಐದನೆಯದಾಗಿ ಅತಿಥಿಗಳು.

05033064a ಪಂಚ ತ್ವಾನುಗಮಿಷ್ಯಂತಿ ಯತ್ರ ಯತ್ರ ಗಮಿಷ್ಯಸಿ।
05033064c ಮಿತ್ರಾಣ್ಯಮಿತ್ರಾ ಮಧ್ಯಸ್ಥಾ ಉಪಜೀವ್ಯೋಪಜೀವಿನಃ।।

ನೀನು ಹೋಗುವಲ್ಲೆಲ್ಲ ಈ ಐದು ನಿನ್ನನ್ನು ಅನುಸರಿಸಿ ಬರುತ್ತವೆ: ಮಿತ್ರರು, ವೈರಿಗಳು, ಮಧ್ಯಸ್ಥರು, ಉಪಜೀವಿಗಳು ಮತ್ತು ಉಪಜೀವಿಗಳಲ್ಲದೇ ಇರುವವರು.

05033065a ಪಂಚೇಂದ್ರಿಯಸ್ಯ ಮರ್ತ್ಯಸ್ಯ ಚಿದ್ರಂ ಚೇದೇಕಮಿಂದ್ರಿಯಂ।
05033065c ತತೋಽಸ್ಯ ಸ್ರವತಿ ಪ್ರಜ್ಞಾ ದೃತೇಃ ಪಾದಾದಿವೋದಕಂ।।

ಮನುಷ್ಯನ ಪಂಚೇಂದ್ರಿಯಗಳಲ್ಲಿ ಕೇವಲ ಒಂದು ಇಂದ್ರಿಯದಲ್ಲಿ ತೂತು ಕಂಡುಬಂದರೂ, ಸೀಳುಬಂದ ಗಡಿಗೆಯಿಂದ ಎಲ್ಲ ನೀರೂ ಸುರಿದು ಹೋಗುವಂತೆ ಅಲ್ಲಿಂದ ಅವನ ಪ್ರಜ್ಞೆಯಲ್ಲವೂ ಸುರಿದುಹೋಗುತ್ತದೆ.

05033066a ಷಡ್ದೋಷಾಃ ಪುರುಷೇಣೇಹ ಹಾತವ್ಯಾ ಭೂತಿಮಿಚ್ಚತಾ।
05033066c ನಿದ್ರಾ ತಂದ್ರೀ ಭಯಂ ಕ್ರೋಧ ಆಲಸ್ಯಂ ದೀರ್ಘಸೂತ್ರತಾ।।

ಆಗಬೇಕೆಂದು ಬಯಸುವ ಪುರುಷನು ಈ ಆರು ದೋಷಗಳನ್ನು ತೊರೆಯಬೇಕು: ನಿದ್ರೆ, ಇಂದ್ರಿಯ ಸುಖ, ಭಯ, ಕ್ರೋಧ, ಆಲಸ್ಯ, ಮತ್ತು ವಿಷಯವನ್ನು ಎಳೆದುಕೊಂಡು ಹೋಗುವುದು.

05033067a ಷಡಿಮಾನ್ಪುರುಷೋ ಜಹ್ಯಾದ್ಭಿನ್ನಾಂ ನಾವಮಿವಾರ್ಣವೇ।
05033067c ಅಪ್ರವಕ್ತಾರಮಾಚಾರ್ಯಮನಧೀಯಾನಮೃತ್ವಿಜಂ।।
05033068a ಅರಕ್ಷಿತಾರಂ ರಾಜಾನಂ ಭಾರ್ಯಾಂ ಚಾಪ್ರಿಯವಾದಿನೀಂ।
05033068c ಗ್ರಾಮಕಾಮಂ ಚ ಗೋಪಾಲಂ ವನಕಾಮಂ ಚ ನಾಪಿತಂ।।

ಈ ಆರನ್ನು ಪುರುಷನು ಒಡೆದುಹೋದ ದೋಣಿಯನ್ನು ಸಮುದ್ರದಲ್ಲಿ ಹೇಗೋ ಹಾಗೆ ಬಿಸಾಡಬೇಕು: ಪ್ರವಕ್ತಾರನಲ್ಲದ ಆಚಾರ್ಯ, ಅರ್ಥಮಾಡಿಕೊಳ್ಳದೇ ಇರುವ ಋತ್ವಿಜ, ರಕ್ಷಣೆ ನೀಡಲಾರದ ರಾಜ, ಅಪ್ರಿಯವಾಗಿ ಮಾತನಾಡುವ ಹೆಂಡತಿ, ಊರಿನಲ್ಲಿಯೇ ಉಳಿಯಲು ಬಯಸುವ ಗೋಪಾಲಕ ಮತ್ತು ವನಕ್ಕೆ ಹೋಗಬಯಸುವ ಕ್ಷೌರಿಕ.

05033069a ಷಡೇವ ತು ಗುಣಾಃ ಪುಂಸಾ ನ ಹಾತವ್ಯಾಃ ಕದಾ ಚನ।
05033069c ಸತ್ಯಂ ದಾನಮನಾಲಸ್ಯಮನಸೂಯಾ ಕ್ಷಮಾ ಧೃತಿಃ।।

ಹಾಗೆಯೇ ಈ ಆರು ಗುಣಗಳನ್ನು ಪುರುಷನು ಎಂದೂ ತೊರೆಯಬಾರದು: ಸತ್ಯ, ದಾನ, ಆಲಸ್ಯದಿಂದಿಲ್ಲದಿರುವುದು, ಅಸೂಯೆ ಪಡದಿರುವುದು, ಕ್ಷಮೆ ಮತ್ತು ತಾಳ್ಮೆ.

05033070a ಷಣ್ಣಾಮಾತ್ಮನಿ ನಿತ್ಯಾನಾಮೈಶ್ವರ್ಯಂ ಯೋಽಧಿಗಚ್ಚತಿ।
05033070c ನ ಸ ಪಾಪೈಃ ಕುತೋಽನರ್ಥೈರ್ಯುಜ್ಯತೇ ವಿಜಿತೇಂದ್ರಿಯಃ।।

ನಿತ್ಯವೂ ಆತ್ಮನಲ್ಲಿ ನೆಲೆಸಿರುವ ಆರು ಐಶ್ವರ್ಯಗಳನ್ನು ಯಾರು ಜಿತೇಂದ್ರಿಯರಾಗಿದ್ದುಕೊಂಡು ಗೆಲ್ಲುತ್ತಾರೋ ಅವರು ಹೇಗೆ ಪಾಪಗಳನ್ನು ಮಾಡುತ್ತಾರೆ ಮತ್ತು ಹೇಗೆ ವಿಪತ್ತನ್ನು ಹೊಂದುತ್ತಾರೆ?

05033071a ಷಡಿಮೇ ಷಟ್ಸು ಜೀವಂತಿ ಸಪ್ತಮೋ ನೋಪಲಭ್ಯತೇ।
05033071c ಚೋರಾಃ ಪ್ರಮತ್ತೇ ಜೀವಂತಿ ವ್ಯಾಧಿತೇಷು ಚಿಕಿತ್ಸಕಾಃ।।
05033072a ಪ್ರಮದಾಃ ಕಾಮಯಾನೇಷು ಯಜಮಾನೇಷು ಯಾಜಕಾಃ।
05033072c ರಾಜಾ ವಿವದಮಾನೇಷು ನಿತ್ಯಂ ಮೂರ್ಖೇಷು ಪಂಡಿತಾಃ।।

ಈ ಆರು ಆರರ ಮೇಲೆ ಜೀವಿಸುತ್ತವೆ: ಕಳ್ಳರು ಜಾಗರೂಕತೆಯಿಂದ ಇಲ್ಲದಿರುವವರ ಮೇಲೆ, ವೈದ್ಯರು ರೋಗವನ್ನು ಪಡೆಯುವವರ ಮೇಲೆ, ಸ್ತ್ರೀಯರು ಕಾಮಿಗಳ ಮೇಲೆ, ಪುರೋಹಿತರು ಯಜಮಾನನ ಮೇಲೆ, ರಾಜನು ಜಗಳಮಾಡುವವರ ಮೇಲೆ ಮತ್ತು ಕೊನೆಯಲ್ಲಿ ಪಂಡಿತರು ಮೂರ್ಖರ ಮೇಲೆ.

05033073a ಸಪ್ತ ದೋಷಾಃ ಸದಾ ರಾಜ್ಞಾ ಹಾತವ್ಯಾ ವ್ಯಸನೋದಯಾಃ।
05033073c ಪ್ರಾಯಶೋ ಯೈರ್ವಿನಶ್ಯಂತಿ ಕೃತಮೂಲಾಶ್ಚ ಪಾರ್ಥಿವಾಃ।।
05033074a ಸ್ತ್ರಿಯೋಽಕ್ಷಾ ಮೃಗಯಾ ಪಾನಂ ವಾಕ್ಪಾರುಷ್ಯಂ ಚ ಪಂಚಮಂ।
05033074c ಮಹಚ್ಚ ದಂಡಪಾರುಷ್ಯಮರ್ಥದೂಷಣಮೇವ ಚ।।

ರಾಜನು ಸದಾ ವ್ಯಸನವನ್ನು ತರುವ, ಮತ್ತು ಚೆನ್ನಾಗಿ ನೆಲೆಗೊಂಡಿರುವ ಪಾರ್ಥಿವರನ್ನೂ ಪ್ರಾಯಶಃ ವಿನಾಶಮಾಡಬಲ್ಲ, ಈ ಏಳು ದೋಷಗಳನ್ನೂ ತೊರೆಯಬೇಕು: ಸ್ತ್ರೀ, ಜೂಜು, ಬೇಟೆ, ಕುಡಿತ, ಐದನೆಯದಾಗಿ ಕ್ರೂರ ಮಾತು, ಮಹಾ ದಂಡನೆ, ಮತ್ತು ಸಂಪತ್ತಿನ ದುರುಪಯೋಗ.

05033075a ಅಷ್ಟೌ ಪೂರ್ವನಿಮಿತ್ತಾನಿ ನರಸ್ಯ ವಿನಶಿಷ್ಯತಃ।
05033075c ಬ್ರಾಹ್ಮಣಾನ್ಪ್ರಥಮಂ ದ್ವೇಷ್ಟಿ ಬ್ರಾಹ್ಮಣೈಶ್ಚ ವಿರುಧ್ಯತೇ।।
05033076a ಬ್ರಾಹ್ಮಣಸ್ವಾನಿ ಚಾದತ್ತೇ ಬ್ರಾಹ್ಮಣಾಂಶ್ಚ ಜಿಘಾಂಸತಿ।
05033076c ರಮತೇ ನಿಂದಯಾ ಚೈಷಾಂ ಪ್ರಶಂಸಾಂ ನಾಭಿನಂದತಿ।।
05033077a ನೈತಾನ್ಸ್ಮರತಿ ಕೃತ್ಯೇಷು ಯಾಚಿತಶ್ಚಾಭ್ಯಸೂಯತಿ।

ಮನುಷ್ಯನ ವಿನಾಶವನ್ನು ಈ ಎಂಟು ಲಕ್ಷಣಗಳು ಮೊದಲೇ ಸೂಚಿಸುತ್ತವೆ: ಮೊದಲನೆಯದಾಗಿ ಬ್ರಾಹ್ಮಣರನ್ನು ದ್ವೇಷಿಸುವುದು, ಬ್ರಾಹ್ಮಣರನ್ನು ವಿರೋಧಿಸುವುದು, ಬ್ರಾಹ್ಮಣರ ಸ್ವತ್ತನ್ನು ಕಸಿದುಕೊಳ್ಳುವುದು, ಬ್ರಾಹ್ಮಣರನ್ನು ಕೊಲ್ಲುವುದು, ಅವರ ನಿಂದನೆಯಲ್ಲಿ ಖುಷಿ ಪಡುವುದು, ಅವರ ಪ್ರಶಂಸನೆಯನ್ನು ಒಪ್ಪಿಕೊಳ್ಳದೇ ಇರುವುದು, ಕಾರ್ಯಗಳಲ್ಲಿ ಅವರನ್ನು ಮರೆತುಬಿಡುವುದು, ಮತ್ತು ಏನನ್ನಾದರೂ ಅವರು ಕೇಳಿದಾಗ ಅವರನ್ನು ಕೀಳಾಗಿ ಕಾಣುವುದು.

05033078a ಅಷ್ಟಾವಿಮಾನಿ ಹರ್ಷಸ್ಯ ನವನೀತಾನಿ ಭಾರತ।
05033078c ವರ್ತಮಾನಾನಿ ದೃಶ್ಯಂತೇ ತಾನ್ಯೇವ ಸುಸುಖಾನ್ಯಪಿ।।
05033079a ಸಮಾಗಮಶ್ಚ ಸಖಿಭಿರ್ಮಹಾಂಶ್ಚೈವ ಧನಾಗಮಃ।
05033079c ಪುತ್ರೇಣ ಚ ಪರಿಷ್ವಂಗಃ ಸಮ್ನಿಪಾತಶ್ಚ ಮೈಥುನೇ।।
05033080a ಸಮಯೇ ಚ ಪ್ರಿಯಾಲಾಪಃ ಸ್ವಯೂಥೇಷು ಚ ಸಮ್ನತಿಃ।
05033080c ಅಭಿಪ್ರೇತಸ್ಯ ಲಾಭಶ್ಚ ಪೂಜಾ ಚ ಜನಸಂಸದಿ।।

ಭಾರತ! ಈ ಎಂಟು ಹರ್ಷವನ್ನು ತರುವ ಬೆಣ್ಣೆಗಳು. ಇವೇ ಇಲ್ಲಿ ವರ್ತಮಾನದಲ್ಲಿ ಸುಖವನ್ನು ತರುವವೆಂದು ಕಾಣುತ್ತವೆ: ಸಖಿಯರೊಂದಿಗೆ ಸಮಾಗಮ, ಅತಿ ದೊಡ್ಡ ಧನಲಾಭ, ಪುತ್ರನ ಆಲಿಂಗನ, ಸಂಭೋಗದ ಮಿಲನ, ಸಮಯದಲ್ಲಿ ಪ್ರಿಯರೊಂದಿಗೆ ಸಂಭಾಷಣೆ, ತನ್ನದೇ ಪಕ್ಷವು ಮುಂದುವರೆಯುವುದು, ನಿರೀಕ್ಷಿಸಿದ ಲಾಭವು ದೊರೆಯುವುದು ಮತ್ತು ಜನರ ಸಂಸದಿಯಲ್ಲಿ ಸನ್ಮಾನ.

05033081a ನವದ್ವಾರಮಿದಂ ವೇಶ್ಮ ತ್ರಿಸ್ಥೂಣಂ ಪಂಚಸಾಕ್ಷಿಕಂ।
05033081c ಕ್ಷೇತ್ರಜ್ಞಾಧಿಷ್ಠಿತಂ ವಿದ್ವಾನ್ಯೋ ವೇದ ಸ ಪರಃ ಕವಿಃ।।

ಇದು ಒಂಭತ್ತು ದ್ವಾರಗಳುಳ್ಳ, ಮೂರು ಸ್ಥಂಭಗಳನ್ನುಳ್ಳ, ಐದು ಸಾಕ್ಷಿಗಳನ್ನುಳ್ಳ, ಕ್ಷೇತ್ರಜ್ಞನ ಯಜಮಾನಿಕೆಯಲ್ಲಿರುವ ಮನೆ ಎನ್ನುವುದನ್ನು ಯಾವ ವಿದ್ವಾಂಸನು ಅರಿತುಕೊಂಡಿದ್ದಾನೋ ಅವನೇ ಪರಮ ಕವಿ.

05033082a ದಶ ಧರ್ಮಂ ನ ಜಾನಂತಿ ಧೃತರಾಷ್ಟ್ರ ನಿಬೋಧ ತಾನ್।
05033082c ಮತ್ತಃ ಪ್ರಮತ್ತ ಉನ್ಮತ್ತಃ ಶ್ರಾಂತಃ ಕ್ರುದ್ಧೋ ಬುಭುಕ್ಷಿತಃ।।
05033083a ತ್ವರಮಾಣಶ್ಚ ಭೀರುಶ್ಚ ಲುಬ್ಧಃ ಕಾಮೀ ಚ ತೇ ದಶ।

ಧೃತರಾಷ್ಟ್ರ! ಈ ಹತ್ತು ಮಂದಿಗೆ ಧರ್ಮವೇನೆಂದು ತಿಳಿದಿರುವುದಿಲ್ಲ. ಅವರನ್ನು ತಿಳಿದುಕೋ: ಅಮಲಿನಲ್ಲಿರುವವ, ಮೂರ್ಛೆಗೊಂಡಿರುವವ, ಉನ್ಮತ್ತನಾದವ, ಆಯಾಸಗೊಂಡಿರುವವ, ಕ್ರೋಧದಲ್ಲಿರುವವ, ಹಸಿವೆಯಲ್ಲಿರುವವ, ಅವಸರದಲ್ಲಿರುವವ, ಕಪಟ, ಆಸೆಬುರುಕ, ಮತ್ತು ಕಾಮುಕ. ಆದುದರಿಂದ ಈ ಹತ್ತು ಭಾವಗಳಿರುವವರೊಂದಿಗೆ ಪಂಡಿತನು ಸೇರುವುದಿಲ್ಲ.

05033084a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಂ।
05033084c ಪುತ್ರಾರ್ಥಮಸುರೇಂದ್ರೇಣ ಗೀತಂ ಚೈವ ಸುಧನ್ವನಾ।।

ಇದಕ್ಕೆ ಉದಾಹರಣೆಯಾಗಿ ಪುರಾತನ ಇತಿಹಾಸವೊಂದಿದೆ. ಪುತ್ರನಿಗಾಗಿ ಅಸುರೇಂದ್ರ ಸುಧನ್ವನು ಹೇಳಿದ ಗೀತೆ.

05033085a ಯಃ ಕಾಮಮನ್ಯೂ ಪ್ರಜಹಾತಿ ರಾಜಾ ಪಾತ್ರೇ ಪ್ರತಿಷ್ಠಾಪಯತೇ ಧನಂ ಚ।
05033085c ವಿಶೇಷವಿಚ್ಚ್ರುತವಾನ್ ಕ್ಷಿಪ್ರಕಾರೀ ತಂ ಸರ್ವಲೋಕಃ ಕುರುತೇ ಪ್ರಮಾಣಂ।।

ಕಾಮ-ಕ್ರೋಧಗಳನ್ನು ತೊರೆದ, ಪಾತ್ರರಿಗೆ ಧನವನ್ನು ನೀಡುವ, ವಿವೇಕವುಳ್ಳ, ಕಲಿತ, ಚುರುಕಾಗಿರುವ ರಾಜನನ್ನು ಸರ್ವಲೋಕಗಳ ಅಧಿಕಾರಿಯೆಂದು ಪರಿಗಣಿಸುತ್ತಾರೆ.

05033086a ಜಾನಾತಿ ವಿಶ್ವಾಸಯಿತುಂ ಮನುಷ್ಯಾನ್ ವಿಜ್ಞಾತದೋಷೇಷು ದಧಾತಿ ದಂಡಂ।
05033086c ಜಾನಾತಿ ಮಾತ್ರಾಂ ಚ ತಥಾ ಕ್ಷಮಾಂ ಚ ತಂ ತಾದೃಶಂ ಶ್ರೀರ್ಜುಷತೇ ಸಮಗ್ರಾ।।

ಮನುಷ್ಯರಲ್ಲಿ ವಿಶ್ವಾಸವನ್ನು ಹೇಗೆ ತರಬೇಕು ಎಂದು ತಿಳಿದ, ತಪ್ಪನ್ನು ಸರಿಯಾಗಿ ತಿಳಿದುಕೊಂಡೇ ಶಿಕ್ಷೆಯನ್ನು ನೀಡುವ, ಕ್ಷಮೆಯು ಎಷ್ಟರ ಮಟ್ಟಿಗಿರಬೇಕು ಎಂದು ಚೆನ್ನಾಗಿ ತಿಳಿದುಕೊಂಡಿರುವವನಿಗೆ ಸಮಗ್ರ ಸಂಪತ್ತು ಬರುತ್ತದೆ.

05033087a ಸುದುರ್ಬಲಂ ನಾವಜಾನಾತಿ ಕಂ ಚಿದ್ ಯುಕ್ತೋ ರಿಪುಂ ಸೇವತೇ ಬುದ್ಧಿಪೂರ್ವಂ।
05033087c ನ ವಿಗ್ರಹಂ ರೋಚಯತೇ ಬಲಸ್ಥೈಃ ಕಾಲೇ ಚ ಯೋ ವಿಕ್ರಮತೇ ಸ ಧೀರಃ।।

ಅತಿ ದುರ್ಬಲನನ್ನೂ ನಿರ್ಲಕ್ಷಿಸದ, ಶತ್ರುವಿನ ವಿಷಯದಲ್ಲಿ ಬುದ್ಧಿಯನ್ನು ಉಪಯೋಗಿಸುವ, ಅವಕಾಶಕ್ಕೆ ಕಾಯುತ್ತಿರುವ, ತನಗಿಂತ ಬಲಶಾಲಿಯಾದವನೊಂದಿಗೆ ದ್ವೇಷವನ್ನು ಬೆಳೆಸದ, ಕಾಲಕ್ಕೆ ಸರಿಯಾಗಿ ತನ್ನ ವಿಕ್ರಮವನ್ನು ತೋರಿಸುವವನೇ ಧೀರನು.

05033088a ಪ್ರಾಪ್ಯಾಪದಂ ನ ವ್ಯಥತೇ ಕದಾ ಚಿದ್ ಉದ್ಯೋಗಮನ್ವಿಚ್ಚತಿ ಚಾಪ್ರಮತ್ತಃ।
05033088c ದುಃಖಂ ಚ ಕಾಲೇ ಸಹತೇ ಜಿತಾತ್ಮಾ ಧುರಂಧರಸ್ತಸ್ಯ ಜಿತಾಃ ಸಪತ್ನಾಃ।।

ಒಂದು ವೇಳೆ ಆಪತ್ತು ಬಂದರೆ ವ್ಯಥಿತನಾಗದ, ಅಪ್ರಮತ್ತನಾಗದೇ ಉದ್ಯೋಗನಿರತನಾದ, ದುಃಖದ ಸಮಯವು ಬಂದಾಗ ಜಿತಾತ್ಮನಾಗಿ ಸಹಿಸಿಕೊಳ್ಳುವವನೇ ಧುರಂಧರ ಮತ್ತು ಶತ್ರುಗಳನ್ನು ಗೆಲ್ಲುವವನು.

05033089a ಅನರ್ಥಕಂ ವಿಪ್ರವಾಸಂ ಗೃಹೇಭ್ಯಃ ಪಾಪೈಃ ಸಂಧಿಂ ಪರದಾರಾಭಿಮರ್ಶಂ।
05033089c ದಂಭಂ ಸ್ತೈನ್ಯಂ ಪೈಶುನಂ ಮದ್ಯಪಾನಂ ನ ಸೇವತೇ ಯಃ ಸ ಸುಖೀ ಸದೈವ।।

ವಿನಾಕಾರಣ ಮನೆಯಿಂದ ಹೊರಗೆ ಜೀವಿಸದೇ ಇರುವ, ಪಾಪಿಗಳೊಂದಿಗೆ ಗೆಳೆತನವನ್ನು ಬೆಳೆಸದಿರುವ, ಇತರರ ಪತ್ನಿಯನ್ನು ಬಯಸದಿರುವ, ಜಂಬವನ್ನು ಕೊಚ್ಚಿಕೊಳ್ಳದಿರುವ, ಕದಿಯದಿರುವ, ಕೃತಘ್ನನಾಗಿರದ, ಮತ್ತು ಮದ್ಯಪಾನ ಮಾಡದಿರುವವನು ಸದಾ ಸುಖಿಯಾಗಿರುವನು.

05033090a ನ ಸಂರಂಭೇಣಾರಭತೇಽರ್ಥವರ್ಗಂ ಆಕಾರಿತಃ ಶಂಸತಿ ತಥ್ಯಮೇವ।
05033090c ನ ಮಾತ್ರಾರ್ಥೇ ರೋಚಯತೇ ವಿವಾದಂ ನಾಪೂಜಿತಃ ಕುಪ್ಯತಿ ಚಾಪ್ಯಮೂಢಃ।।

ಅರ್ಥವರ್ಗವನ್ನು ಗಳಿಸಿದರೂ ಜಂಬಪಡದಿರುವ, ಕೇಳಿದಾಗ ಸತ್ಯವನ್ನೇ ಹೇಳುವ, ಮಿತ್ರರಿಗಾಗಿಯಾದರೂ ವಿವಾದದಲ್ಲಿ ತೊಡಗದ, ಅಪಮಾನಿತಗೊಂಡರೂ ಕುಪಿತನಾಗಿರದ ಅವನೇ ಅಮೂಢನು.

05033091a ನ ಯೋಽಭ್ಯಸೂಯತ್ಯನುಕಂಪತೇ ಚ ನ ದುರ್ಬಲಃ ಪ್ರಾತಿಭಾವ್ಯಂ ಕರೋತಿ।
05033091c ನಾತ್ಯಾಹ ಕಿಂ ಚಿತ್ಕ್ಷಮತೇ ವಿವಾದಂ ಸರ್ವತ್ರ ತಾದೃಗ್ಲಭತೇ ಪ್ರಶಂಸಾಂ।।

ಯಾರು ಅಸೂಯೆಪಡದೇ ಅನುಕಂಪಿತರಾಗಿರುವವರೋ, ದುರ್ಬಲನಾಗಿದ್ದರೆ ಇತರರೊಂದಿಗೆ ಸ್ಪರ್ಧಿಸುವುದಿಲ್ಲವೋ, ಜಂಬದಿಂದ ಮಾತನಾಡುವುದಿಲ್ಲವೋ, ವಿವಾದವನ್ನು ಕ್ಷಮಿಸುತ್ತಾರೋ ಅವರು ಎಲ್ಲೆಡೆಯೂ ಪ್ರಶಂಸೆಯನ್ನು ಪಡೆಯುತ್ತಾರೆ.

05033092a ಯೋ ನೋದ್ಧತಂ ಕುರುತೇ ಜಾತು ವೇಷಂ ನ ಪೌರುಷೇಣಾಪಿ ವಿಕತ್ಥತೇಽನ್ಯಾನ್।
05033092c ನ ಮೂರ್ಚ್ಚಿತಃ ಕಟುಕಾನ್ಯಾಹ ಕಿಂ ಚಿತ್ ಪ್ರಿಯಂ ಸದಾ ತಂ ಕುರುತೇ ಜನೋಽಪಿ।।

ಯಾರು ಉದ್ಧಟತನದ ರೂಪವನ್ನು ತೋರಿಸುವುದಿಲ್ಲವೋ, ಅಥವಾ ಇತರರಿಗೆ ತನ್ನ ಪೌರುಷವನ್ನು ಹೇಳಿಕೊಳ್ಳುವುದಿಲ್ಲವೋ, ಅಥವಾ ಎಚ್ಚರವನ್ನು ಕಳೆದುಕೊಂಡು ಕಟುಕಾಗಿ ಮಾತನ್ನಾಡುವುದಿಲ್ಲವೋ ಅಂಥವರನ್ನು ಜನರು ಸದಾ ತಮ್ಮ ಪ್ರಿಯರನ್ನಾಗಿ ಮಾಡಿಕೊಳ್ಳುತ್ತಾರೆ.

05033093a ನ ವೈರಮುದ್ದೀಪಯತಿ ಪ್ರಶಾಂತಂ ನ ದರ್ಪಮಾರೋಹತಿ ನಾಸ್ತಮೇತಿ।
05033093c ನ ದುರ್ಗತೋಽಸ್ಮೀತಿ ಕರೋತಿ ಮನ್ಯುಂ ತಮಾರ್ಯಶೀಲಂ ಪರಮಾಹುರಗ್ರ್ಯಂ।।

ತಣ್ಣಗಾಗಿರುವ ವೈರವನ್ನು ಪುನಃ ಉರಿದೆಬ್ಬಿಸದೇ ಇರುವವನನ್ನು, ದರ್ಪದಿಂದ ಮೇಲೇರದಿರುವ ಅಥವಾ ಅಸ್ತವಾಗದಿರುವವನನ್ನು, ದುರ್ಗತಿಯನ್ನು ಪಡೆದಿದ್ದೇನೆ ಎಂದು ಸಿಟ್ಟಾಗುವುದಿರುವವನನ್ನು ಹಿರಿಯರು ಪರಮ ಆರ್ಯಶೀಲನೆಂದು ಹೇಳುವರು.

05033094a ನ ಸ್ವೇ ಸುಖೇ ವೈ ಕುರುತೇ ಪ್ರಹರ್ಷಂ ನಾನ್ಯಸ್ಯ ದುಃಖೇ ಭವತಿ ಪ್ರತೀತಃ।
05033094c ದತ್ತ್ವಾ ನ ಪಶ್ಚಾತ್ಕುರುತೇಽನುತಾಪಂ ನ ಕತ್ಥತೇ ಸತ್ಪುರುಷಾರ್ಯಶೀಲಃ।।

ತನ್ನದೇ ಸುಖದಲ್ಲಿ ತುಂಬಾ ಹರ್ಷಿತನಾಗದ, ಇತರರ ದುಃಖಕ್ಕೆ ಸಂತೋಷಪಡದ, ದಾನ ಮಾಡಿದ ನಂತರ ಪಶ್ಚಾತ್ತಾಪ ಪಡದವನನ್ನು ಸತ್ಪುರುಷ-ಆರ್ಯಶೀಲನೆಂದು ಕರೆಯುತ್ತಾರೆ.

05033095a ದೇಶಾಚಾರಾನ್ಸಮಯಾಂ ಜಾತಿಧರ್ಮಾನ್ ಬುಭೂಷತೇ ಯಸ್ತು ಪರಾವರಜ್ಞಾಃ।
05033095c ಸ ತತ್ರ ತತ್ರಾಧಿಗತಃ ಸದೈವ ಮಹಾಜನಸ್ಯಾಧಿಪತ್ಯಂ ಕರೋತಿ।।

ದೇಶಾಚಾರ-ಪದ್ಧತಿಗಳನ್ನು, ಜಾತಿಧರ್ಮಗಳನ್ನು, ಮತ್ತು ಉತ್ತಮ-ಕನಿಷ್ಟಗಳನ್ನು ತಿಳಿದಿರುವವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲಿ ಸದಾ ಬಹುಜನರ ಅಧಿಪತ್ಯವನ್ನು ನಡೆಸುತ್ತಾನೆ.

05033096a ದಂಭಂ ಮೋಹಂ ಮತ್ಸರಂ ಪಾಪಕೃತ್ಯಂ ರಾಜದ್ವಿಷ್ಟಂ ಪೈಶುನಂ ಪೂಗವೈರಂ।
05033096c ಮತ್ತೋನ್ಮತ್ತೈರ್ದುರ್ಜನೈಶ್ಚಾಪಿ ವಾದಂ ಯಃ ಪ್ರಜ್ಞಾವಾನ್ವರ್ಜಯೇತ್ಸ ಪ್ರಧಾನಃ।।

ಜಂಭ, ಮೋಹ, ಮಾತ್ಸರ್ಯ, ಪಾಪಕೃತ್ಯ, ರಾಜನೊಂದಿಗೆ ದ್ವೇಷ, ಪಶುಗಳಂತೆ ನಡೆದುಕೊಳ್ಳುವುದು, ಹಲವರೊಂದಿಗೆ ವೈರ, ಮತ್ತ-ಉನ್ಮತ್ತ ಮತ್ತು ದುರ್ಜನರೊಂದಿಗೆ ವಾದ ಇವುಗಳನ್ನು ಪಜ್ಞಾವಂತನು ಪ್ರಧಾನವಾಗಿ ತೊರೆಯುತ್ತಾನೆ.

05033097a ದಮಂ ಶೌಚಂ ದೈವತಂ ಮಂಗಲಾನಿ ಪ್ರಾಯಶ್ಚಿತ್ತಂ ವಿವಿಧಾಽಲ್ಲೋಕವಾದಾನ್।
05033097c ಏತಾನಿ ಯಃ ಕುರುತೇ ನೈತ್ಯಕಾನಿ ತಸ್ಯೋತ್ಥಾನಂ ದೇವತಾ ರಾಧಯಂತಿ।।

ಆತ್ಮ ನಿಗ್ರಹ, ಶೌಚ, ದೇವಪೂಜೆ, ಮಂಗಲ ಕಾರ್ಯಗಳು, ಪ್ರಾಯಶ್ಚಿತ್ತ, ಮತ್ತು ವಿವಿಧ ಲೋಕ ಕಾರ್ಯಗಳನ್ನು ನಿತ್ಯವೂ ಮಾಡುವವನನ್ನು ದೇವತೆಗಳು ಮೇಲಕ್ಕೇರಿಸಲು ಬಯಸುತ್ತಾರೆ.

05033098a ಸಮೈರ್ವಿವಾಹಂ ಕುರುತೇ ನ ಹೀನೈಃ ಸಮೈಃ ಸಖ್ಯಂ ವ್ಯವಹಾರಂ ಕಥಾಶ್ಚ।
05033098c ಗುಣೈರ್ವಿಶಿಷ್ಟಾಂಶ್ಚ ಪುರೋದಧಾತಿ ವಿಪಶ್ಚಿತಸ್ತಸ್ಯ ನಯಾಃ ಸುನೀತಾಃ।।

ತನಗೆ ಸಮನಾಗಿರುವವರೊಂದಿಗೆ, ಕೀಳಾಗಿರುವವರೊಂದಿಗಲ್ಲ, ಮದುವೆ ಮಾಡಿಕೊಳ್ಳುವವನು, ಸಮನಾಗಿರುವವರೊಂದಿಗೆ ವ್ಯವಹಾರ ಮಾತುಕಥೆಗಳನ್ನಾಡುವವನು, ಮೊದಲು ಗುಣಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವವನು ವಿವೇಕಿ ಮತ್ತು ಸರಿಯಾದ ನಡತೆಯುಳ್ಳವನು.

05033099a ಮಿತಂ ಭುಂಕ್ತೇ ಸಂವಿಭಜ್ಯಾಶ್ರಿತೇಭ್ಯೋ ಮಿತಂ ಸ್ವಪಿತ್ಯಮಿತಂ ಕರ್ಮ ಕೃತ್ವಾ।
05033099c ದದಾತ್ಯಮಿತ್ರೇಷ್ವಪಿ ಯಾಚಿತಃ ಸಂಸ್ ತಮಾತ್ಮವಂತಂ ಪ್ರಜಹತ್ಯನರ್ಥಾಃ।।

ಕಡಿಮೆ ಊಟಮಾಡುವ, ಆಶ್ರಿತರೊಂದಿಗೆ ಹಂಚಿಕೊಳ್ಳುವ, ಹೆಚ್ಚುಕೆಲಸಮಾಡುವ ಆದರೆ ಕಡಿಮೆ ನಿದ್ರೆಮಾಡುವ, ಕೇಳಿದರೆ ಅಮಿತ್ರರಿಗೂ ಕೊಡುವವನು ಆತ್ಮವಂತ ಮತ್ತು ಅನರ್ಥವು ಅವನನ್ನು ಸುಳಿಯುವುದಿಲ್ಲ.

05033100a ಚಿಕೀರ್ಷಿತಂ ವಿಪ್ರಕೃತಂ ಚ ಯಸ್ಯ ನಾನ್ಯೇ ಜನಾಃ ಕರ್ಮ ಜಾನಂತಿ ಕಿಂ ಚಿತ್।
05033100c ಮಂತ್ರೇ ಗುಪ್ತೇ ಸಮ್ಯಗನುಷ್ಠಿತೇ ಚ ಸ್ವಲ್ಪೋ ನಾಸ್ಯ ವ್ಯಥತೇ ಕಶ್ಚಿದರ್ಥಃ।।

ಕೆಟ್ಟದ್ದನ್ನು ಮಾಡಬೇಕೆನ್ನುವುದೇ ಪುರುಷನ ಇಚ್ಛೆಯಾಗಿದ್ದಾಗ, ಅವನ ಆ ವಿಚಾರವನ್ನು ಗುಪ್ತವಾಗಿಟ್ಟುಕೊಂಡು ನಡೆಸಿದರೆ ಜನರಿಗೆ ಅವನು ಏನು ಮಾಡಿದನೆಂದೇ ತಿಳಿಯದು. ಅವನ ಕಾರ್ಯದಲ್ಲಿ ಅವನಿಗೆ ಸ್ವಲ್ಪವೂ ತೊಡಕಾಗುವುದಿಲ್ಲ.

05033101a ಯಃ ಸರ್ವಭೂತಪ್ರಶಮೇ ನಿವಿಷ್ಟಃ ಸತ್ಯೋ ಮೃದುರ್ದಾನಕೃಚ್ಚುದ್ಧಭಾವಃ।
05033101c ಅತೀವ ಸಂಜ್ಞಾಯತೇ ಜ್ಞಾತಿಮಧ್ಯೇ ಮಹಾಮಣಿರ್ಜಾತ್ಯ ಇವ ಪ್ರಸನ್ನಃ।।

ಸರ್ವಭೂತಗಳ ಶಾಂತಿಯನ್ನೇ ಬಯಸಿ, ಸತ್ಯ, ಮೃದು, ದಾನ ಮತ್ತು ಶುದ್ಧ ಭಾವಗಳಲ್ಲಿ ಇರುವವನು ಸಂಬಂಧಿಗಳ ಮಧ್ಯದಲ್ಲಿ ಮಹಾಮಣಿಯಂತೆ ಅತೀವವಾಗಿ ಪ್ರಕಾಶಿಸುತ್ತಾನೆ.

05033102a ಯ ಆತ್ಮನಾಪತ್ರಪತೇ ಭೃಶಂ ನರಃ ಸ ಸರ್ವಲೋಕಸ್ಯ ಗುರುರ್ಭವತ್ಯುತ।
05033102c ಅನಂತತೇಜಾಃ ಸುಮನಾಃ ಸಮಾಹಿತಃ ಸ್ವತೇಜಸಾ ಸೂರ್ಯ ಇವಾವಭಾಸತೇ।।

ತನ್ನ ಕೃತ್ಯದಿಂದಲೇ ನಾಚಿಕೊಳ್ಳುವ ನರನನ್ನು ಸರ್ವಲೋಕದ ಗುರುವೆಂದು ಪರಿಗಣಿಸುತ್ತಾರೆ. ಅನಂತ ತೇಜಸ್ಸುಳ್ಳವನಾಗಿ, ಸುಮನಸ್ಕನಾಗಿ, ಸಮಾಹಿತನಾಗಿ ಅವನು ತನ್ನದೇ ತೇಜಸ್ಸಿನಿಂದ ಸೂರ್ಯನಂತೆ ಬೆಳಗುತ್ತಾನೆ.

05033103a ವನೇ ಜಾತಾಃ ಶಾಪದಗ್ಧಸ್ಯ ರಾಜ್ಞಾಃ ಪಾಂಡೋಃ ಪುತ್ರಾಃ ಪಂಚ ಪಂಚೇಂದ್ರಕಲ್ಪಾಃ।
05033103c ತ್ವಯೈವ ಬಾಲಾ ವರ್ಧಿತಾಃ ಶಿಕ್ಷಿತಾಶ್ಚ ತವಾದೇಶಂ ಪಾಲಯಂತ್ಯಾಂಬಿಕೇಯ।।

ವನದಲ್ಲಿ ಶಾಪದಗ್ಧನಾದ ರಾಜ ಪಾಂಡುವಿಗೆ ಹುಟ್ಟಿದ ಐವರು ಇಂದ್ರರಂತಿರುವ ಪುತ್ರರನ್ನು ನೀನೇ ಬೆಳೆಸಿದೆ, ಶಿಕ್ಷಣ ನೀಡಿದೆ. ಅಂಬಿಕೇಯ! ಈಗ ಅವರು ನಿನ್ನ ಆದೇಶವನ್ನು ಪಾಲಿಸಲು ಕಾಯುತ್ತಿದ್ದಾರೆ.

05033104a ಪ್ರದಾಯೈಷಾಮುಚಿತಂ ತಾತ ರಾಜ್ಯಂ ಸುಖೀ ಪುತ್ರೈಃ ಸಹಿತೋ ಮೋದಮಾನಃ।
05033104c ನ ದೇವಾನಾಂ ನಾಪಿ ಚ ಮಾನುಷಾಣಾಂ ಭವಿಷ್ಯಸಿ ತ್ವಂ ತರ್ಕಣೀಯೋ ನರೇಂದ್ರ।।

ಅಯ್ಯಾ! ನರೇಂದ್ರ! ಅವರಿಗೆ ಉಚಿತವಾದ ರಾಜ್ಯವನ್ನು ಕೊಟ್ಟು ಪುತ್ರರೊಂದಿಗೆ ಮುದದಿಂದ ಸುಖಿಯಾಗಿದ್ದರೆ ನಿನ್ನ ಕುರಿತು ದೇವತೆಗಳಲ್ಲಿಯಾಗಲೀ ಮನುಷ್ಯರಲ್ಲಿಯಾಗಲೀ ಯಾರೂ ಅನುಮಾನಪಡುವುದಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ತ್ರ್ಯಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ಮೂರನೆಯ ಅಧ್ಯಾಯವು.