032 ಧೃತರಾಷ್ಟ್ರಸಂಜಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 32

ಸಾರ

ಹಸ್ತಿನಾಪುರಕ್ಕೆ ಹಿಂದಿರುಗಿದ ರಾತ್ರಿಯೇ ಸಂಜಯನು ಅಪ್ಪಣೆಯನ್ನು ಪಡೆದು ಧೃತರಾಷ್ಟ್ರನನ್ನು ಭೇಟಿಯಾದುದು (1-6). ಯುಧಿಷ್ಠಿರನು ಧರ್ಮದಿಂದ ಹೊಳೆಯುತ್ತಿದ್ದರೆ ಧೃತರಾಷ್ಟ್ರನು ಪಾಪಕೃತ್ಯಗಳಿಂದ ಮಂಕಾಗಿದ್ದಾನೆಂದೂ, ಪ್ರಯಾಣದಿಂದ ಬಳಲಿರುವುದರಿಂದ ಬೆಳಿಗ್ಗೆ ಸಭೆಯಲ್ಲಿ ಯುಧಿಷ್ಠಿರನ ಸಂದೇಶವನ್ನು ತಿಳಿಸುತ್ತೇನೆಂದೂ ಹೇಳಿ ಸಂಜಯನು ಹೊರಟು ಹೋದುದು (7-30).

05032001 ವೈಶಂಪಾಯನ ಉವಾಚ।
05032001a ಅನುಜ್ಞಾತಃ ಪಾಂಡವೇನ ಪ್ರಯಯೌ ಸಂಜಯಸ್ತದಾ।
05032001c ಶಾಸನಂ ಧೃತರಾಷ್ಟ್ರಸ್ಯ ಸರ್ವಂ ಕೃತ್ವಾ ಮಹಾತ್ಮನಃ।।

ವೈಶಂಪಾಯನನು ಹೇಳಿದನು: “ಆಗ ಮಹಾತ್ಮ ಧೃತರಾಷ್ಟ್ರನು ವಿಧಿಸಿದ ಎಲ್ಲ ಕೆಲಸಗಳನ್ನೂ ಪೂರೈಸಿ, ಸಂಜಯನು ಪಾಂಡವರಿಂದ ಅನುಜ್ಞೆಯನ್ನು ಪಡೆದು ಹೊರಟನು.

05032002a ಸಂಪ್ರಾಪ್ಯ ಹಾಸ್ತಿನಪುರಂ ಶೀಘ್ರಂ ಚ ಪ್ರವಿವೇಶ ಹ।
05032002c ಅಂತಃಪುರಮುಪಸ್ಥಾಯ ದ್ವಾಃಸ್ಥಂ ವಚನಮಬ್ರವೀತ್।।

ಹಾಸ್ತಿನಪುರವು ಹತ್ತಿರವಾದ ಕೂಡಲೇ ಶೀಘ್ರವಾಗಿ ಪ್ರವೇಶಿಸಿ, ಅಂತಃಪುರವನ್ನು ತಲುಪಿ, ದ್ವಾರದಲ್ಲಿ ನಿಂತಿರುವವನಿಗೆ ಹೇಳಿದನು:

05032003a ಆಚಕ್ಷ್ವ ಮಾಂ ಧೃತರಾಷ್ಟ್ರಾಯ ದ್ವಾಃಸ್ಥ ಉಪಾಗತಂ ಪಾಂಡವಾನಾಂ ಸಕಾಶಾತ್।
05032003c ಜಾಗರ್ತಿ ಚೇದಭಿವದೇಸ್ತ್ವಂ ಹಿ ಕ್ಷತ್ತಃ ಪ್ರವಿಶೇಯಂ ವಿದಿತೋ ಭೂಮಿಪಸ್ಯ।।

“ದ್ವಾರಪಾಲಕನೇ! ನಾನು ಪಾಂಡವರ ಬಳಿಯಿಂದ ಬಂದಿದ್ದೇನೆ ಎಂದು ಧೃತರಾಷ್ಟ್ರನಿಗೆ ಹೇಳು. ರಾಜನು ಎಚ್ಚರವಾಗಿದ್ದರೆ ಮಾತ್ರ, ನಾನು ಒಳಬರಲು ಬಯಸುತ್ತೇನೆ ಎಂದು ಹೇಳಬೇಕು.”

05032004 ದ್ವಾಃಸ್ಥ ಉವಾಚ।
05032004a ಸಂಜಯೋಽಯಂ ಭೂಮಿಪತೇ ನಮಸ್ತೇ ದಿದೃಕ್ಷಯಾ ದ್ವಾರಮುಪಾಗತಸ್ತೇ।
05032004c ಪ್ರಾಪ್ತೋ ದೂತಃ ಪಾಂಡವಾನಾಂ ಸಕಾಶಾತ್ ಪ್ರಶಾಧಿ ರಾಜನ್ಕಿಮಯಂ ಕರೋತು।।

ದ್ವಾರಪಾಲಕನು ಹೇಳಿದನು: “ಭೂಮಿಪತಿಗೆ ನಮಸ್ಕಾರ! ನಿನ್ನನ್ನು ಕಾಣಲು ಸಂಜಯನು ದ್ವಾರದಲ್ಲಿ ನಿಂತಿದ್ದಾನೆ. ಪಾಂಡವರ ಕಡೆಯಿಂದ ಸಂದೇಶವನ್ನು ತೆಗೆದುಕೊಂಡು ಬಂದಿದ್ದಾನೆ. ರಾಜನ್! ನಾನೇನು ಮಾಡಬೇಕೆಂದು ಆಜ್ಞಾಪಿಸು.”

05032005 ಧೃತರಾಷ್ಟ್ರ ಉವಾಚ।
05032005a ಆಚಕ್ಷ್ವ ಮಾಂ ಸುಖಿನಂ ಕಾಲ್ಯಮಸ್ಮೈ ಪ್ರವೇಶ್ಯತಾಂ ಸ್ವಾಗತಂ ಸಂಜಯಾಯ।
05032005c ನ ಚಾಹಮೇತಸ್ಯ ಭವಾಮ್ಯಕಾಲ್ಯಃ ಸ ಮೇ ಕಸ್ಮಾದ್ದ್ವಾರಿ ತಿಷ್ಠೇತ ಕ್ಷತ್ತಃ।।

ಧೃತರಾಷ್ಟ್ರನು ಹೇಳಿದನು: “ಅವನಿಗೆ ಹೇಳು - ನಾನು ಸುಖಿಯಾಗಿದ್ದೇನೆ ಮತ್ತು ಈಗ ಸಮಯವಿದೆ. ಅವನು ಪ್ರವೇಶಿಸಲಿ. ಸಂಜಯನಿಗೆ ಸ್ವಾಗತ. ನಿನ್ನನ್ನು ಯಾವ ಸಮಯದಲ್ಲಿಯೂ ಕಾಣಬಯಸುತ್ತೇನೆ. ಪ್ರವೇಶವು ಎಂದೂ ನಿಷೇದವಾಗಿರದ ಅವನು ಏಕೆ ಹೊರಗೆ ನಿಂತಿದ್ದಾನೆ?””

05032006 ವೈಶಂಪಾಯನ ಉವಾಚ।
05032006a ತತಃ ಪ್ರವಿಶ್ಯಾನುಮತೇ ನೃಪಸ್ಯ ಮಹದ್ವೇಶ್ಮ ಪ್ರಾಜ್ಞಾಶೂರಾರ್ಯಗುಪ್ತಂ।
05032006c ಸಿಂಹಾಸನಸ್ಥಂ ಪಾರ್ಥಿವಮಾಸಸಾದ ವೈಚಿತ್ರವೀರ್ಯಂ ಪ್ರಾಂಜಲಿಃ ಸೂತಪುತ್ರಃ।।

ವೈಶಂಪಾಯುನನು ಹೇಳಿದನು: “ಆಗ ನೃಪನ ಅನುಮತಿಯಂತೆ ಸೂತಪುತ್ರನು ವಿಶಾಲ ಅರಮನೆಯನ್ನು ಪ್ರವೇಶಿಸಿ, ಪ್ರಾಜ್ಞರೂ, ಶೂರರೂ ಮತ್ತು ಆರ್ಯರಿಂದ ರಕ್ಷಿಸಲ್ಪಟ್ಟ ಸಿಂಹಾಸನಸ್ಥ ವೈಚಿತ್ರವೀರ್ಯ ಪಾರ್ಥಿವನ ಬಳಿಸಾರಿ ಕೈಮುಗಿದನು.

05032007 ಸಂಜಯ ಉವಾಚ।
05032007a ಸಂಜಯೋಽಹಂ ಭೂಮಿಪತೇ ನಮಸ್ತೇ ಪ್ರಾಪ್ತೋಽಸ್ಮಿ ಗತ್ವಾ ನರದೇವ ಪಾಂಡವಾನ್।
05032007c ಅಭಿವಾದ್ಯ ತ್ವಾಂ ಪಾಂಡುಪುತ್ರೋ ಮನಸ್ವೀ ಯುಧಿಷ್ಠಿರಃ ಕುಶಲಂ ಚಾನ್ವಪೃಚ್ಚತ್।।

ಸಂಜಯನು ಹೇಳಿದನು: “ಭೂಮಿಪತೇ ನಮಸ್ಕಾರ! ನಾನು ಸಂಜಯ! ನರದೇವ! ಪಾಂಡವರಲ್ಲಿಗೆ ಹೋಗಿ ಬಂದಿದ್ದೇನೆ. ನಿನಗೆ ಅಭಿವಂದಿಸಿ ಮನಸ್ವೀ ಪಾಂಡುಪುತ್ರ ಯುಧಿಷ್ಠಿರನು ಕುಶಲವನ್ನೂ ಕೇಳಿದ್ದಾನೆ.

05032008a ಸ ತೇ ಪುತ್ರಾನ್ಪೃಚ್ಚತಿ ಪ್ರೀಯಮಾಣಃ ಕಚ್ಚಿತ್ಪುತ್ರೈಃ ಪ್ರೀಯಸೇ ನಪ್ತೃಭಿಶ್ಚ।
05032008c ತಥಾ ಸುಹೃದ್ಭಿಃ ಸಚಿವೈಶ್ಚ ರಾಜನ್ ಯೇ ಚಾಪಿ ತ್ವಾಮುಪಜೀವಂತಿ ತೈಶ್ಚ।।

ಅವನು ಪ್ರೀತಿಯಿಂದ ನಿನ್ನ ಮಕ್ಕಳನ್ನು ಕೇಳಿದ್ದಾನೆ. ಮತ್ತು ರಾಜನ್! ನೀನು ನಿನ್ನ ಮಕ್ಕಳು, ಮೊಮ್ಮಕ್ಕಳು, ಆಪ್ತರು, ಸ್ನೇಹಿತರು, ಸಚಿವರು ಮತ್ತು ನಿನ್ನನ್ನು ಅವಲಂಬಿಸಿರುವ ಎಲ್ಲರೊಡನೆ ಸಂತೋಷದಿಂದಿರುವೆಯಾ ಎಂದೂ ಕೇಳಿದ್ದಾನೆ.”

05032009 ಧೃತರಾಷ್ಟ್ರ ಉವಾಚ।
05032009a ಅಭ್ಯೇತ್ಯ ತ್ವಾಂ ತಾತ ವದಾಮಿ ಸಂಜಯ ಅಜಾತಶತ್ರುಂ ಚ ಸುಖೇನ ಪಾರ್ಥಂ।
05032009c ಕಚ್ಚಿತ್ಸ ರಾಜಾ ಕುಶಲೀ ಸಪುತ್ರಃ ಸಹಾಮಾತ್ಯಃ ಸಾನುಜಃ ಕೌರವಾಣಾಂ।।

ಧೃತರಾಷ್ಟ್ರನು ಹೇಳಿದನು: “ಮಗೂ ಸಂಜಯ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ - ಅಜಾತಶತ್ರು ಪಾರ್ಥನು ಸುಖದಿಂದ ಇದ್ದಾನೆಯೇ? ರಾಜನು ಪುತ್ರರೊಂದಿಗೆ, ಅಮಾತ್ಯರೊಂದಿಗೆ, ಕೌರವರ ಅನುಜರೊಂದಿಗೆ ಕುಶಲನಾಗಿದ್ದಾನೆ ತಾನೇ?”

05032010 ಸಂಜಯ ಉವಾಚ।
05032010a ಸಹಾಮಾತ್ಯಃ ಕುಶಲೀ ಪಾಂಡುಪುತ್ರೋ ಭೂಯಶ್ಚಾತೋ ಯಚ್ಚ ತೇಽಗ್ರೇ ಮನೋಽಭೂತ್।
05032010c ನಿರ್ಣಿಕ್ತಧರ್ಮಾರ್ಥಕರೋ ಮನಸ್ವೀ ಬಹುಶ್ರುತೋ ದೃಷ್ಟಿಮಾಂ ಶೀಲವಾಂಶ್ಚ।।

ಸಂಜಯನು ಹೇಳಿದನು: “ಅಮಾತ್ಯರೊಂದಿಗೆ ಪಾಂಡುಪುತ್ರನು ಕುಶಲನಾಗಿದ್ದಾನೆ. ಹಿಂದೆ ತನ್ನದಾಗಿಸಿಕೊಂಡಿದ್ದುದನ್ನು ಪಡೆಯಲು ಬಯಸುತ್ತಾನೆ. ಕೆಟ್ಟದ್ದನ್ನು ಏನನ್ನೂ ಮಾಡದೆಯೇ ಅವನು ಧರ್ಮ ಮತ್ತು ಅರ್ಥಗಳನ್ನು ಅರಸುತ್ತಾನೆ. ಅವನು ಮನಸ್ವೀ, ಬಹುಶ್ರುತ, ದೃಷ್ಟಿವಂತ ಮತ್ತು ಶೀಲವಂತ.

05032011a ಪರಂ ಧರ್ಮಾತ್ಪಾಂಡವಸ್ಯಾನೃಶಂಸ್ಯಂ ಧರ್ಮಃ ಪರೋ ವಿತ್ತಚಯಾನ್ಮತೋಽಸ್ಯ।
05032011c ಸುಖಪ್ರಿಯೇ ಧರ್ಮಹೀನೇ ನ ಪಾರ್ಥೋ ಽನುರುಧ್ಯತೇ ಭಾರತ ತಸ್ಯ ವಿದ್ಧಿ।।

ಆ ಪಾಂಡವನಿಗೆ ಅಹಿಂಸೆಯು ಪರಮ ಧರ್ಮ. ವಿತ್ತವನ್ನು ಒಟ್ಟುಮಾಡುವುದಕ್ಕಿಂತಲೂ ಅದು ಪರಮ ಧರ್ಮವೆಂದು ಅವನ ಮತ. ಪಾರ್ಥನು ಸುಖಪ್ರಿಯನಲ್ಲ, ಧರ್ಮಹೀನನಲ್ಲ. ಭಾರತ! ಅವನ ಬುದ್ಧಿಯು ಏಳಿಗೆಯ ಮುಖವಾಗಿದೆ.

05032012a ಪರಪ್ರಯುಕ್ತಃ ಪುರುಷೋ ವಿಚೇಷ್ಟತೇ ಸೂತ್ರಪ್ರೋತಾ ದಾರುಮಯೀವ ಯೋಷಾ।
05032012c ಇಮಂ ದೃಷ್ಟ್ವಾ ನಿಯಮಂ ಪಾಂಡವಸ್ಯ ಮನ್ಯೇ ಪರಂ ಕರ್ಮ ದೈವಂ ಮನುಷ್ಯಾತ್।।

ದಾರಕ್ಕೆ ಕಟ್ಟಲ್ಪಟ್ಟ ಮರದ ಗೊಂಬೆಯಂತೆ ಪುರುಷನು ಇನ್ನೊಂದರ ಕೈಯಲ್ಲಿರುತ್ತಾನೆ. ಪಾಂಡವನ ಈ ಕಷ್ಟಗಳನ್ನು ನೋಡಿ ಕರ್ಮವು ಮನುಷ್ಯನಿಗಿಂತಲೂ ದೊಡ್ಡದಾದ ದೈವ ಎಂದೆನಿಸುತ್ತದೆ.

05032013a ಇಮಂ ಚ ದೃಷ್ಟ್ವಾ ತವ ಕರ್ಮದೋಷಂ ಪಾದೋದರ್ಕಂ ಘೋರಮವರ್ಣರೂಪಂ।
05032013c ಯಾವನ್ನರಃ ಕಾಮಯತೇಽತಿಕಾಲ್ಯಂ ತಾವನ್ನರೋಽಯಂ ಲಭತೇ ಪ್ರಶಂಸಾಂ।।

ನಿನ್ನ ಈ ಅತಿ ಪಾಪವನ್ನು ತರುವ, ಹೇಳಲಸಾಧ್ಯ ಘೋರರೂಪಿನ ಕರ್ಮದೋಷವನ್ನು ನೋಡಿದರೆ ಎಲ್ಲಿಯವರೆಗೆ ಮನುಷ್ಯನು ತೋರುವಿಕೆಗೆ ಇರುವುದನ್ನು ಬಯಸುತ್ತಾನೋ ಅಲ್ಲಿಯ ವರೆಗೆ ಅವನಿಗೆ ಪ್ರಶಂಸೆಯು ದೊರೆಯುತ್ತದೆ.

05032014a ಅಜಾತಶತ್ರುಸ್ತು ವಿಹಾಯ ಪಾಪಂ ಜೀರ್ಣಾಂ ತ್ವಚಂ ಸರ್ಪ ಇವಾಸಮರ್ಥಾಂ।
05032014c ವಿರೋಚತೇಽಹಾರ್ಯವೃತ್ತೇನ ಧೀರೋ ಯುಧಿಷ್ಠಿರಸ್ತ್ವಯಿ ಪಾಪಂ ವಿಸೃಜ್ಯ।।

ಅಜೀರ್ಣವಾದ ಅಸಮರ್ಥವಾದ ಚರ್ಮವನ್ನು ಸರ್ಪವು ತೊರೆಯುವಂತೆ ಆ ಧೀರ ಅಜಾತಶತ್ರುವಾದರೋ ಪಾಪವನ್ನು ತೊರೆದು ಹೊಳೆಯುತ್ತಿದ್ದಾನೆ. ಯುಧಿಷ್ಠಿರನು ಪಾಪವನ್ನು ನಿನಗೆ ಬಿಟ್ಟಿದ್ದಾನೆ.

05032015a ಅಂಗಾತ್ಮನಃ ಕರ್ಮ ನಿಬೋಧ ರಾಜನ್ ಧರ್ಮಾರ್ಥಯುಕ್ತಾದಾರ್ಯವೃತ್ತಾದಪೇತಂ।
05032015c ಉಪಕ್ರೋಶಂ ಚೇಹ ಗತೋಽಸಿ ರಾಜನ್ ನೋಹೇಶ್ಚ ಪಾಪಂ ಪ್ರಸಜೇದಮುತ್ರ।।

ರಾಜನ್! ಧರ್ಮಾರ್ಥಯುಕ್ತವಲ್ಲದ, ಆರ್ಯರ ನಡತೆಗೆ ವಿರೋಧವಾಗಿರುವ ನಿನ್ನ ಕೆಲಸವನ್ನು ನೀನೇ ತಿಳಿದುಕೋ. ರಾಜನ್! ಕೇವಲ ಕೆಟ್ಟ ಹೆಸರನ್ನು ನೀನು ಗಳಿಸಿದ್ದೀಯೆ. ಇದನ್ನು ನೀನು ಅಳಿಸಲಾರೆ. ಇದು ನಿನ್ನೊಡನೆಯೇ ಬರುತ್ತದೆ.

05032016a ಸ ತ್ವಮರ್ಥಂ ಸಂಶಯಿತಂ ವಿನಾ ತೈಃ ಆಶಂಸಸೇ ಪುತ್ರವಶಾನುಗೋಽದ್ಯ।
05032016c ಅಧರ್ಮಶಬ್ದಶ್ಚ ಮಹಾನ್ಪೃಥಿವ್ಯಾಂ ನೇದಂ ಕರ್ಮ ತ್ವತ್ಸಮಂ ಭಾರತಾಗ್ರ್ಯ।।

ಇಂದು ನೀನು ಪುತ್ರರ ವಶಕ್ಕೆ ಬಂದು ಅವರ ವಿನಾ ಈ ಸಂಶಯಯುಕ್ತವಾದ ಸಂಪತ್ತನ್ನು ಭೋಗಿಸಲು ಆಶಿಸುತ್ತಿರುವೆ. ನಿನ್ನ ಈ ಅಧರ್ಮದ ವಿಷಯವು ಮಹಾ ಪೃಥ್ವಿಯೆಲ್ಲೆಲ್ಲಾ ಹರಡಿದೆ. ಭಾರತಾಗ್ರ್ಯ! ಇದು ನಿನಗೆ ಸಮನಾದುದಲ್ಲ.

05032017a ಹೀನಪ್ರಜ್ಞೋ ದೌಷ್ಕುಲೇಯೋ ನೃಶಂಸೋ ದೀರ್ಘವೈರೀ ಕ್ಷತ್ರವಿದ್ಯಾಸ್ವಧೀರಃ।
05032017c ಏವಂಧರ್ಮಾ ನಾಪದಃ ಸಂತಿತೀರ್ಷೇದ್ ಧೀನವೀರ್ಯೋ ಯಶ್ಚ ಭವೇದಶಿಷ್ಟಃ।।

ತಿಳುವಳಿಕೆ ಇಲ್ಲದಿರುವವನಿಗೆ, ಕೆಟ್ಟ ಕುಲದಲ್ಲಿ ಹುಟ್ಟಿದವನಿಗೆ, ಕ್ರೂರನಾದವನಿಗೆ, ಬಹುಕಾಲ ವೈರವನ್ನು ಪ್ರತಿಪಾದಿಸುವವನಿಗೆ, ಕ್ಷತ್ರಿಯ ವಿದ್ಯೆಗಳಲ್ಲಿ ಅಧೀರನಾದವನಿಗೆ, ಈ ಗುರುತುಗಳಿರುವವನಿಗೆ ಮತ್ತು ಬುದ್ಧಿಯಿಲ್ಲದಿರುವ ಅವೀರ್ಯ ಅಶಿಕ್ಷಿತನಿಗೆ ಕಷ್ಟಗಳನ್ನು ಎದುರಿಸಲು ಸಾಧ್ಯವಾಗಲಾರದು.

05032018a ಕುಲೇ ಜಾತೋ ಧರ್ಮವಾನ್ಯೋ ಯಶಸ್ವೀ ಬಹುಶ್ರುತಃ ಸುಖಜೀವೀ ಯತಾತ್ಮಾ।
05032018c ಧರ್ಮಾರ್ಥಯೋರ್ಗ್ರಥಿತಯೋರ್ಬಿಭರ್ತಿ ನಾನ್ಯತ್ರ ದಿಷ್ಟಸ್ಯ ವಶಾದುಪೈತಿ।।

ಉತ್ತಮ ಕುಲದಲ್ಲಿ ಹುಟ್ಟುವುದು, ಧರ್ಮವಂತನಾಗಿರುವುದು, ಯಶಸ್ವಿಯಾಗುವುದು, ಪ್ರಸಿದ್ಧನಾಗುವುದು, ಸುಖಜೀವಿಯಾಗಿರುವುದು, ಯತಾತ್ಮನಾಗಿರುವುದು, ಧರ್ಮ-ಅರ್ಥಗಳಲ್ಲಿ ಸಿಲುಕಿಕೊಂಡಿರುವವನ್ನು ಬಿಡಿಸಿಕೊಳ್ಳುವುದು - ಇವೆಲ್ಲವುಗಳಲ್ಲಿ ಅದೃಷ್ಟವಲ್ಲದೆ ಬೇರೆ ಯಾವುದರ ಕೈವಾಡವಿದೆ?

05032019a ಕಥಂ ಹಿ ಮಂತ್ರಾಗ್ರ್ಯಧರೋ ಮನೀಷೀ ಧರ್ಮಾರ್ಥಯೋರಾಪದಿ ಸಂಪ್ರಣೇತಾ।
05032019c ಏವಮ್ಯುಕ್ತಃ ಸರ್ವಮಂತ್ರೈರಹೀನೋ ಅನಾನೃಶಂಸ್ಯಂ ಕರ್ಮ ಕುರ್ಯಾದಮೂಢಃ।।

ಬುದ್ಧಿವಂತರಾದ ಹಿರಿಯರಿಂದ ಸಲಹೆಗಳನ್ನು ಪಡೆದ, ಧರ್ಮ-ಅರ್ಥಗಳಲ್ಲಿ ಪ್ರಣೀತನಾದ, ಸರ್ವಮಂತ್ರಗಳಿಂದಲೂ ರಹಿತನಾಗಿರದ, ಅಮೂಢನು ಹೇಗೆ ತಾನೇ ಕ್ರೂರ ಕೃತ್ಯವನ್ನು ಮಾಡಬಹುದು?

05032020a ತವಾಪೀಮೇ ಮಂತ್ರವಿದಃ ಸಮೇತ್ಯ ಸಮಾಸತೇ ಕರ್ಮಸು ನಿತ್ಯಯುಕ್ತಾಃ।
05032020c ತೇಷಾಮಯಂ ಬಲವಾನ್ನಿಶ್ಚಯಶ್ಚ ಕುರುಕ್ಷಯಾರ್ಥೇ ನಿರಯೋ ವ್ಯಪಾದಿ।।

ಇಲ್ಲಿ ಸೇರಿರುವ ಮಂತ್ರವಿದರು ನಿನ್ನನ್ನೇ ಬೆಂಬಲಿಸುತ್ತಿದ್ದಾರೆ ಮತ್ತು ನಿನ್ನ ಕೆಲಸದಲ್ಲಿಯೇ ನಿತ್ಯವೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಬಲವಾದ ನಿಶ್ಚಯದಿಂದ ಕುರುಕ್ಷಯವು ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

05032021a ಅಕಾಲಿಕಂ ಕುರವೋ ನಾಭವಿಷ್ಯನ್ ಪಾಪೇನ ಚೇತ್ಪಾಪಮಜಾತಶತ್ರುಃ।
05032021c ಇಚ್ಚೇಜ್ಜಾತು ತ್ವಯಿ ಪಾಪಂ ವಿಸೃಜ್ಯ ನಿಂದಾ ಚೇಯಂ ತವ ಲೋಕೇಽಭವಿಷ್ಯತ್।।

ಅಜಾತಶತ್ರುವು ಪಾಪದಿಂದ ಪಾಪವನ್ನು ಗೆಲ್ಲಲು ಅಕಾಲಿಕವಾಗಿ ಕುರುಗಳನ್ನು ನಾಶಪಡಿಸಬೇಕಾಗುವುದು. ನಿನಗೆ ಪಾಪವನ್ನೆಲ್ಲ ಬಿಟ್ಟುಕೊಟ್ಟು ಲೋಕದಲ್ಲಿ ನಿನ್ನ ನಿಂದೆಯೇ ನಡೆಯುವಂತೆ ಆಗುತ್ತದೆ.

05032022a ಕಿಮನ್ಯತ್ರ ವಿಷಯಾದೀಶ್ವರಾಣಾಂ ಯತ್ರ ಪಾರ್ಥಃ ಪರಲೋಕಂ ದದರ್ಶ।
05032022c ಅತ್ಯಕ್ರಾಮತ್ಸ ತಥಾ ಸಮ್ಮತಃ ಸ್ಯಾನ್ ನ ಸಂಶಯೋ ನಾಸ್ತಿ ಮನುಷ್ಯಕಾರಃ।।

ದೇವತೆಗಳು ಪಾರ್ಥನನ್ನು ಪರಲೋಕಕ್ಕೆ ಕರೆಯಿಸಿಕೊಂಡು ತೋರಿಸಿ ಸನ್ಮಾನಿಸಿದರು ಎನ್ನುವುದಕ್ಕೆ ಬೇರೆ ಏನಾದರೂ ಅರ್ಥವಿದೆಯೇ? ಅದು ಮನುಷ್ಯನು ಮಾಡಿದುದಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.

05032023a ಏತಾನ್ಗುಣಾನ್ಕರ್ಮಕೃತಾನವೇಕ್ಷ್ಯ ಭಾವಾಭಾವೌ ವರ್ತಮಾನಾವನಿತ್ಯೌ।
05032023c ಬಲಿರ್ಹಿ ರಾಜಾ ಪಾರಮವಿಂದಮಾನೋ ನಾನ್ಯತ್ಕಾಲಾತ್ಕಾರಣಂ ತತ್ರ ಮೇನೇ।।

ಕರ್ಮ ಮತ್ತು ಕೃತನ ಈ ಗುಣಗಳನ್ನು, ಭಾವಾಭಾವಗಳನ್ನು, ವರ್ತಮಾನ ಮತ್ತು ಹಿಂದೆ ನಡೆದವುಗಳನ್ನು ನೋಡಿಯೇ ರಾಜಾ ಬಲಿಯು ಆದಿ ಅಂತ್ಯಗಳನ್ನು ತಿಳಿಯಲಾರದೇ ಇವಕ್ಕೆ ಕಾಲವಲ್ಲದೇ ಬೇರೆ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟನು.

05032024a ಚಕ್ಷುಃ ಶ್ರೋತ್ರೇ ನಾಸಿಕಾ ತ್ವಕ್ಚ ಜಿಹ್ವಾ ಜ್ಞಾನಸ್ಯೈತಾನ್ಯಾಯತನಾನಿ ಜಂತೋಃ।
05032024c ತಾನಿ ಪ್ರೀತಾನ್ಯೇವ ತೃಷ್ಣಾಕ್ಷಯಾಂತೇ ತಾನ್ಯವ್ಯಥೋ ದುಃಖಹೀನಃ ಪ್ರಣುದ್ಯಾತ್।।

ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆಗಳು ಜಂತುವಿನ ಜ್ಞಾನದ ಬಾಗಿಲುಗಳು. ಆಸೆಗಳು ಕ್ಷಯವಾಗಲು ಇವು ತಮ್ಮಷ್ಟಕ್ಕೆ ತಾವೇ ಸುಖದಿಂದ ಇರುತ್ತವೆ. ಆದುದರಿಂದ ಇವುಗಳನ್ನು ವ್ಯಥೆಯಿಲ್ಲದೇ ದುಃಖಪಡದೇ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

05032025a ನ ತ್ವೇವ ಮನ್ಯೇ ಪುರುಷಸ್ಯ ಕರ್ಮ ಸಂವರ್ತತೇ ಸುಪ್ರಯುಕ್ತಂ ಯಥಾವತ್।
05032025c ಮಾತುಃ ಪಿತುಃ ಕರ್ಮಣಾಭಿಪ್ರಸೂತಃ ಸಂವರ್ಧತೇ ವಿಧಿವದ್ಭೋಜನೇನ।।

ಪುರುಷನು ಕರ್ಮಗಳನ್ನು ಸರಿಯಾಗಿ ಮಾಡಿದರೆ ಬೇಕಾದ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳುತ್ತಾರೆ. ತಂದೆ-ತಾಯಿಗಳ ಕರ್ಮದಿಂದ ಹುಟ್ಟಿದವನು ವಿಧಿವತ್ತಾದ ಆಹಾರಸೇವನೆಯಿಂದ ಬೆಳೆಯುತ್ತಾನೆ.

05032026a ಪ್ರಿಯಾಪ್ರಿಯೇ ಸುಖದುಃಖೇ ಚ ರಾಜನ್ ನಿಂದಾಪ್ರಶಂಸೇ ಚ ಭಜೇತ ಏನಂ।
05032026c ಪರಸ್ತ್ವೇನಂ ಗರ್ಹಯತೇಽಪರಾಧೇ ಪ್ರಶಂಸತೇ ಸಾಧುವೃತ್ತಂ ತಮೇವ।।

ರಾಜನ್! ಪ್ರಿಯವಾದುದು, ಅಪ್ರಿಯವಾದುದು, ಸುಖ, ದುಃಖ, ನಿಂದನೆ ಮತ್ತು ಪ್ರಶಂಸೆಗಳು ಇವನನ್ನು ಹಿಂಬಾಲಿಸುತ್ತವೆ. ಅಪರಾಧಮಾಡಿದಾಗ ಇತರರು ಇವನನ್ನು ಝರಿಯುತ್ತಾರೆ. ಒಳ್ಳೆಯದಾಗಿ ನಡೆದುಕೊಂಡರೆ ಅವನನ್ನೇ ಜನರು ಪ್ರಶಂಸಿಸುತ್ತಾರೆ.

05032027a ಸ ತ್ವಾ ಗರ್ಹೇ ಭಾರತಾನಾಂ ವಿರೋಧಾದ್ ಅಂತೋ ನೂನಂ ಭವಿತಾಯಂ ಪ್ರಜಾನಾಂ।
05032027c ನೋ ಚೇದಿದಂ ತವ ಕರ್ಮಾಪರಾಧಾತ್ ಕುರೂನ್ದಹೇತ್ಕೃಷ್ಣವರ್ತ್ಮೇವ ಕಕ್ಷಂ।।

ಭಾರತರಲ್ಲಿನ ಮನಸ್ತಾಪಕ್ಕೆ ನಾನು ನಿನ್ನನ್ನೇ ಬೈಯ್ಯುತ್ತೇನೆ. ಇದು ನಿಜವಾಗಿಯೂ ನಿನ್ನ ಮಕ್ಕಳ ಅಂತ್ಯವೆನಿಸಿಕೊಳ್ಳುತ್ತದೆ. ನಿನ್ನ ಕರ್ಮಾಪರಾಧದಿಂದ ಒಣಕರಡದಂತೆ ಕುರುಗಳು ಸುಟ್ಟುಹೋಗದೇ ಇರಲಿ.

05032028a ತ್ವಮೇವೈಕೋ ಜಾತಪುತ್ರೇಷು ರಾಜನ್ ವಶಂ ಗಂತಾ ಸರ್ವಲೋಕೇ ನರೇಂದ್ರ।
05032028c ಕಾಮಾತ್ಮನಾಂ ಶ್ಲಾಘಸೇ ದ್ಯೂತಕಾಲೇ ನಾನ್ಯಚ್ಚಮಾತ್ಪಶ್ಯ ವಿಪಾಕಮಸ್ಯ।।

ರಾಜನ್! ನರೇಂದ್ರ! ಈ ಸರ್ವಲೋಕದಲ್ಲಿ ನೀನೊಬ್ಬನೇ ಹುಟ್ಟಿದ ಮಕ್ಕಳ ವಶನಾಗಿ ಹೋಗಿದ್ದೀಯೆ. ದ್ಯೂತಕಾಲದಲ್ಲಿ ನೀನು ಕಾಮಾತ್ಮನನ್ನು ಪ್ರಶಂಸಿಸಿದೆ. ಶಾಂತಿಯ ಹೊರತಾಗಿ ಬೇರೆ ಏನೂ ಇದರಿಂದ ಬಿಡುಗಡೆಯು ಕಾಣುವುದಿಲ್ಲ.

05032029a ಅನಾಪ್ತಾನಾಂ ಪ್ರಗ್ರಹಾತ್ತ್ವಂ ನರೇಂದ್ರ ತಥಾಪ್ತಾನಾಂ ನಿಗ್ರಹಾಚ್ಚೈವ ರಾಜನ್।
05032029c ಭೂಮಿಂ ಸ್ಫೀತಾಂ ದುರ್ಬಲತ್ವಾದನಂತಾಂ ನ ಶಕ್ತಸ್ತ್ವಂ ರಕ್ಷಿತುಂ ಕೌರವೇಯ।।

ನರೇಂದ್ರ! ರಾಜನ್! ಕೌರವೇಯ! ಅನಾಪ್ತರನ್ನು ಸ್ವೀಕರಿಸಿ ಮತ್ತು ಹಾಗೆಯೇ ಆಪ್ತರನ್ನು ದೂರವಿಡಿಸಿ ದುರ್ಬಲನಾಗಿ ನೀನು ಈ ಅಪಾರ ಸಮೃದ್ಧ ಭೂಮಿಯನ್ನು ರಕ್ಷಿಸಲು ಅಸಮರ್ಥನಾಗಿದ್ದೀಯೆ.

05032030a ಅನುಜ್ಞಾತೋ ರಥವೇಗಾವಧೂತಃ ಶ್ರಾಂತೋ ನಿಪದ್ಯೇ ಶಯನಂ ನೃಸಿಂಹ।
05032030c ಪ್ರಾತಃ ಶ್ರೋತಾರಃ ಕುರವಃ ಸಭಾಯಾಂ ಅಜಾತಶತ್ರೋರ್ವಚನಂ ಸಮೇತಾಃ।।

ನರಸಿಂಹ! ರಥವೇಗದಿಂದ ತುಂಬಾ ಬಳಲಿದ್ದೇನೆ. ಮಲಗಿಕೊಳ್ಳಲು ನಿನ್ನ ಅನುಮತಿಯನ್ನು ಕೇಳುತ್ತಿದ್ದೇನೆ. ಬೆಳಿಗ್ಗೆ ಸಭೆಯಲ್ಲಿ ಕುರುಗಳು ಒಟ್ಟಿಗೇ ಅಜಾತಶತ್ರುವಿನ ಮಾತನ್ನು ಕೇಳುವರು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ದ್ವಾತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದದಲ್ಲಿ ಮೂವತ್ತೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-50/100, ಅಧ್ಯಾಯಗಳು-695/1995, ಶ್ಲೋಕಗಳು-೨೨೫೯೭/೭೩೭೮೪