031 ಯುಧಿಷ್ಠಿರಸಂದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 31

ಸಾರ

“ಇದ್ದುದೆಲ್ಲವನ್ನೂ ತನಗೊಬ್ಬನಿಗಾಗಿ ಮಾತ್ರ ಇಟ್ಟುಕೊಳ್ಳಲು ಯಾರೂ ಅರ್ಹನಿಲ್ಲ…ಐದು ಸಹೋದರರಿಗೆ ಐದು ಗ್ರಾಮಗಳನ್ನು ಕೊಡು….ನಾನು ಶಾಂತಿಗೆ ಹೇಗೋ ಹಾಗೆ ಯುದ್ಧಕ್ಕೂ ತಯಾರಿದ್ದೇನೆ. ಧರ್ಮ-ಅರ್ಥಗಳೆರಡನ್ನೂ ಬಯಸುತ್ತೇನೆ. ನಾನು ಮೃದುವಾಗಿರಬಲ್ಲೆ, ದಾರುಣವಾಗಬಲ್ಲೆ ಕೂಡ.” ಎಂಬ ಸಂದೇಶವನ್ನು ಯುಧಿಷ್ಠಿರನು ಸಂಜಯನ ಮೂಲಕ ಕಳುಹಿಸುವುದು (1-23).

05031001 ಯುಧಿಷ್ಠಿರ ಉವಾಚ।
05031001a ಉತ ಸಂತಮಸಂತಂ ಚ ಬಾಲಂ ವೃದ್ಧಂ ಚ ಸಂಜಯ।
05031001c ಉತಾಬಲಂ ಬಲೀಯಾಂಸಂ ಧಾತಾ ಪ್ರಕುರುತೇ ವಶೇ।।
05031002a ಉತ ಬಾಲಾಯ ಪಾಂಡಿತ್ಯಂ ಪಂಡಿತಾಯೋತ ಬಾಲತಾಂ।
05031002c ದದಾತಿ ಸರ್ವಮೀಶಾನಃ ಪುರಸ್ತಾಚ್ಚುಕ್ರಮುಚ್ಚರನ್।।

ಯುಧಿಷ್ಠಿರನು ಹೇಳಿದನು: “ಸಂಜಯ! ಸಂತರೂ ಅಸಂತರೂ, ಬಾಲರೂ ವೃದ್ಧರೂ, ಅಬಲರೂ ಬಲಶಾಲಿಗಳೂ ಎಲ್ಲರನ್ನೂ ಧಾತನು ವಶದಲ್ಲಿಟ್ಟುಕೊಂಡಿರುತ್ತಾನೆ. ಆ ಸರ್ವಗಳ ಒಡೆಯನೇ, ತನಗಿಷ್ಟವಾದ ಹಾಗೆ, ಬಾಲರಲ್ಲಿ ಪಾಂಡಿತ್ಯವನ್ನೂ ಪಂಡಿತರಲ್ಲಿ ಬಾಲಕತ್ವವನ್ನೂ ನೀಡುತ್ತಾನೆ. ಅವನು ಮೊದಲೇ ಬೀಜವನ್ನು ಬಿತ್ತುವಾಗಲೇ ಎಲ್ಲವನ್ನೂ ಕೊಟ್ಟುಬಿಟ್ಟಿರುತ್ತಾನೆ.

05031003a ಅಲಂ ವಿಜ್ಞಾಪನಾಯ ಸ್ಯಾದಾಚಕ್ಷೀಥಾ ಯಥಾತಥಂ।
05031003c ಅಥೋ ಮಂತ್ರಂ ಮಂತ್ರಯಿತ್ವಾ ಅನ್ಯೋನ್ಯೇನಾತಿಹೃಷ್ಟವತ್।।

ಉಪದೇಶವನ್ನು ಸಾಕುಮಾಡೋಣ. ಇದ್ದದ್ದನ್ನು ಇದ್ದಹಾಗೆ ನೀನು ಹೇಳುತ್ತೀಯೆ. ಈಗ ನಾವು ಅನ್ಯೋನ್ಯರಲ್ಲಿ ವಿಷಯವನ್ನು ಚರ್ಚಿಸಿ ತೃಪ್ತರಾಗಿದ್ದೇವೆ.

05031004a ಗಾವಲ್ಗಣೇ ಕುರೂನ್ಗತ್ವಾ ಧೃತರಾಷ್ಟ್ರಂ ಮಹಾಬಲಂ।
05031004c ಅಭಿವಾದ್ಯೋಪಸಂಗೃಹ್ಯ ತತಃ ಪೃಚ್ಚೇರನಾಮಯಂ।।

ಗಾವಲ್ಗಣೇ! ಕುರುಗಳ ಮಹಾಬಲ ಧೃತರಾಷ್ಟ್ರನಲ್ಲಿಗೆ ಹೋಗಿ, ಪಾದಗಳಿಗೆ ನಮಸ್ಕರಿಸಿ ನಂತರ ಅವನ ಆರೋಗ್ಯವನ್ನು ವಿಚಾರಿಸು.

05031005a ಬ್ರೂಯಾಶ್ಚೈನಂ ತ್ವಮಾಸೀನಂ ಕುರುಭಿಃ ಪರಿವಾರಿತಂ।
05031005c ತವೈವ ರಾಜನ್ವೀರ್ಯೇಣ ಸುಖಂ ಜೀವಂತಿ ಪಾಂಡವಾಃ।।

ಅವನು ಕುರುಗಳ ಮಧ್ಯದಲ್ಲಿ ಕುಳಿತಿರುವಾಗ ಅವನಿಗೆ ಹೇಳು: “ರಾಜನ್! ಪಾಂಡವರು ವೀರ್ಯದಿಂದ ಸುಖವಾಗಿ ಜೀವಿಸಿದ್ದಾರೆ.

05031006a ತವ ಪ್ರಸಾದಾದ್ಬಾಲಾಸ್ತೇ ಪ್ರಾಪ್ತಾ ರಾಜ್ಯಮರಿಂದಮ।
05031006c ರಾಜ್ಯೇ ತಾನ್ಸ್ಥಾಪಯಿತ್ವಾಗ್ರೇ ನೋಪೇಕ್ಷೀರ್ವಿನಶಿಷ್ಯತಃ।।

ಅರಿಂದಮ! ನಿನ್ನ ಪ್ರಸಾದಿಂದ ಅವರು ಬಾಲಕರಿದ್ದಾಗಲೇ ರಾಜ್ಯವನ್ನು ಪಡೆದರು. ಮೊದಲು ಅವರನ್ನು ರಾಜ್ಯದಲ್ಲಿ ಸ್ಥಾಪಿಸಿ ಈಗ ಅವರನ್ನು ನಿರ್ಲಕ್ಷಿಸಿ ನಾಶಗೊಳಿಸಬೇಡ.”

05031007a ಸರ್ವಮಪ್ಯೇತದೇಕಸ್ಯ ನಾಲಂ ಸಂಜಯ ಕಸ್ಯ ಚಿತ್।
05031007c ತಾತ ಸಂಹತ್ಯ ಜೀವಾಮೋ ಮಾ ದ್ವಿಷದ್ಭ್ಯೋ ವಶಂ ಗಮಃ।।

ಸಂಜಯ! “ಇದ್ದುದೆಲ್ಲವನ್ನೂ ತನಗೊಬ್ಬನಿಗಾಗಿ ಮಾತ್ರ ಇಟ್ಟುಕೊಳ್ಳಲು ಯಾರೂ ಅರ್ಹನಿಲ್ಲ. ಅಪ್ಪಾ! ನಾವು ಒಟ್ಟಾಗಿ ಜೀವಿಸೋಣ. ದ್ವೇಷಿಗಳ ವಶದಲ್ಲಿ ಹೋಗಬೇಡ!”

05031008a ತಥಾ ಭೀಷ್ಮಂ ಶಾಂತನವಂ ಭಾರತಾನಾಂ ಪಿತಾಮಹಂ।
05031008c ಶಿರಸಾಭಿವದೇಥಾಸ್ತ್ವಂ ಮಮ ನಾಮ ಪ್ರಕೀರ್ತಯನ್।।

ಅನಂತರ ಭಾರತರ ಪಿತಾಮಹ ಶಾಂತನವ ಭೀಷ್ಮನಿಗೆ ನನ್ನ ಹೆಸರನ್ನು ಹೇಳಿ ತಲೆಬಾಗಿ ನಮಸ್ಕರಿಸಬೇಕು.

05031009a ಅಭಿವಾದ್ಯ ಚ ವಕ್ತವ್ಯಸ್ತತೋಽಸ್ಮಾಕಂ ಪಿತಾಮಹಃ।
05031009c ಭವತಾ ಶಂತನೋರ್ವಂಶೋ ನಿಮಗ್ನಃ ಪುನರುದ್ಧೃತಃ।।

ನಮ್ಮ ಪಿತಾಮಹನಿಗೆ ನಮಸ್ಕರಿಸಿ ಹೇಳಬೇಕು: “ಹಿಂದೆ ನೀನು ಶಂತನುವಿನ ವಂಶವು ಮುಳುಗುತ್ತಿರುವಾಗ ಅದನ್ನು ಪುನಃ ಉದ್ಧರಿಸಿದೆ.

05031010a ಸ ತ್ವಂ ಕುರು ತಥಾ ತಾತ ಸ್ವಮತೇನ ಪಿತಾಮಹ।
05031010c ಯಥಾ ಜೀವಂತಿ ತೇ ಪೌತ್ರಾಃ ಪ್ರೀತಿಮಂತಃ ಪರಸ್ಪರಂ।।

ತಾತ! ಪಿತಾಮಹ! ಈಗ ನಿನ್ನದೇ ವಿಚಾರದಂತೆ ನಿನ್ನ ಮೊಮ್ಮಕ್ಕಳು ಪರಸ್ಪರ ಪ್ರೀತಿಯಿಂದ ಬದುಕಿರುವಂತೆ ಮಾಡು.”

05031011a ತಥೈವ ವಿದುರಂ ಬ್ರೂಯಾಃ ಕುರೂಣಾಂ ಮಂತ್ರಧಾರಿಣಂ।
05031011c ಅಯುದ್ಧಂ ಸೌಮ್ಯ ಭಾಷಸ್ವ ಹಿತಕಾಮೋ ಯುಧಿಷ್ಠಿರಃ।।

ಅನಂತರ ಕುರುಗಳ ಮಂತ್ರಧಾರಿಣಿ ವಿದುರನಿಗೆ ಹೇಳಬೇಕು: “ಸೌಮ್ಯ! ಯುಧಿಷ್ಠಿರನ ಹಿತವನ್ನು ಬಯಸಿ ಅಯುದ್ಧದ ಮಾತನಾಡು!”

05031012a ಅಥೋ ಸುಯೋಧನಂ ಬ್ರೂಯಾ ರಾಜಪುತ್ರಮಮರ್ಷಣಂ।
05031012c ಮಧ್ಯೇ ಕುರೂಣಾಮಾಸೀನಮನುನೀಯ ಪುನಃ ಪುನಃ।।

ಅನಂತರ ಕುರುಗಳ ಮಧ್ಯೆ ಕುಳಿತಿರುವ ರಾಜಪುತ್ರ, ಅಮರ್ಷಣ, ಸುಯೋಧನನನ್ನು ಪುನಃ ಪುನಃ ಪುಸಲಾಯಿಸುತ್ತಾ ಹೇಳಬೇಕು:

05031013a ಅಪಶ್ಯನ್ಮಾಮುಪೇಕ್ಷಂತಂ ಕೃಷ್ಣಾಮೇಕಾಂ ಸಭಾಗತಾಂ।
05031013c ತದ್ದುಃಖಮತಿತಿಕ್ಷಾಮ ಮಾ ವಧೀಷ್ಮ ಕುರೂನಿತಿ।।

“ಕುರುಗಳನ್ನು ವಧಿಸಬಾರದು ಎಂದು ಏಕಾಂಗಿಯಾಗಿ ಸಭಾಗತಳಾಗಿದ್ದ ಕೃಷ್ಣೆಯನ್ನು ನಾನು ಉಪೇಕ್ಷಿಸಿ ನೋಡುತ್ತಿದ್ದ ಆ ದುಃಖವನ್ನೂ ನಾನು ಸಹಿಸಿಕೊಳ್ಳುತ್ತೇನೆ.

05031014a ಏವಂ ಪೂರ್ವಾಪರಾನ್ಕ್ಲೇಶಾನತಿತಿಕ್ಷಂತ ಪಾಂಡವಾಃ।
05031014c ಯಥಾ ಬಲೀಯಸಃ ಸಂತಸ್ತತ್ಸರ್ವಂ ಕುರವೋ ವಿದುಃ।।

ಈ ರೀತಿಯಲ್ಲಿ ಅದರ ಮೊದಲು ಮತ್ತು ನಂತರ ತಂದೊಡ್ಡಿದ ಕ್ಲೇಶಗಳನ್ನೂ ಪಾಂಡವರು, ಬಲಶಾಲಿಗಳಾಗಿದ್ದರೂ, ಸಹಿಸಿಕೊಂಡಿದ್ದಾರೆ ಎನ್ನುವುದೆಲ್ಲವನ್ನೂ ಕುರುಗಳು ತಿಳಿದಿದ್ದಾರೆ.

05031015a ಯನ್ನಃ ಪ್ರಾವ್ರಾಜಯಃ ಸೌಮ್ಯ ಅಜಿನೈಃ ಪ್ರತಿವಾಸಿತಾನ್।
05031015c ತದ್ದುಃಖಮತಿತಿಕ್ಷಾಮ ಮಾ ವಧೀಷ್ಮ ಕುರೂನಿತಿ।।

ಸೌಮ್ಯ! ನೀನು ನಮ್ಮನ್ನು ಜಿಂಕೆಯ ಚರ್ಮಗಳನ್ನು ತೊಡಿಸಿ ಹೊರಗಟ್ಟಿದೆ. ಆ ದುಃಖವನ್ನು ಕೂಡ ಕುರುಗಳನ್ನು ಕೊಲ್ಲಬಾರದೆಂದು ಸಹಿಸಿಕೊಳ್ಳುತ್ತೇವೆ.

05031016a ಯತ್ತತ್ಸಭಾಯಾಮಾಕ್ರಮ್ಯ ಕೃಷ್ಣಾಂ ಕೇಶೇಷ್ವಧರ್ಷಯತ್।
05031016c ದುಃಶಾಸನಸ್ತೇಽನುಮತೇ ತಚ್ಚಾಸ್ಮಾಭಿರುಪೇಕ್ಷಿತಂ।।

ನಿನ್ನ ಅನುಮತಿಯಂತೆ ದುಃಶಾಸನನು ಸಭೆಯನ್ನು ಅತಿಕ್ರಮಿಸಿ ಕೃಷ್ಣೆಯ ಕೂದಲನ್ನು ಹಿಡಿದು ಎಳೆದುತಂದ. ಅದನ್ನೂ ನಾವು ಕ್ಷಮಿಸುತ್ತೇವೆ.

05031017a ಯಥೋಚಿತಂ ಸ್ವಕಂ ಭಾಗಂ ಲಭೇಮಹಿ ಪರಂತಪ।
05031017c ನಿವರ್ತಯ ಪರದ್ರವ್ಯೇ ಬುದ್ಧಿಂ ಗೃದ್ಧಾಂ ನರರ್ಷಭ।।

ಆದರೆ ಪರಂತಪ! ಯಥೋಚಿತವಾದ ನಮ್ಮ ಭಾಗವು ನಮಗೆ ದೊರೆಯಬೇಕು. ನರರ್ಷಭ! ಪರರ ಸ್ವತ್ತಿನ ಮೇಲಿರುವ ನಿನ್ನ ಆಸೆಬುರುಕ ಬುದ್ಧಿಯನ್ನು ಹಿಂದೆ ತೆಗೆದುಕೋ!

05031018a ಶಾಂತಿರೇವಂ ಭವೇದ್ರಾಜನ್ಪ್ರೀತಿಶ್ಚೈವ ಪರಸ್ಪರಂ।
05031018c ರಾಜ್ಯೈಕದೇಶಮಪಿ ನಃ ಪ್ರಯಚ್ಚ ಶಮಮಿಚ್ಚತಾಂ।।

ರಾಜನ್! ಹಾಗಿದ್ದರೆ ಮಾತ್ರ ಶಾಂತಿಯಾಗಿರುತ್ತದೆ ಮತ್ತು ಪರಸ್ಪರರಲ್ಲಿ ಪ್ರೀತಿಯಿರುತ್ತದೆ. ಶಾಂತಿಯನ್ನು ಬಯಸುವ ನಮಗೆ ರಾಜ್ಯದ ಒಂದು ಮೂಲೆಯನ್ನಾದರೂ ಕೊಡು.

05031019a ಕುಶಸ್ಥಲಂ ವೃಕಸ್ಥಲಮಾಸಂದೀ ವಾರಣಾವತಂ।
05031019c ಅವಸಾನಂ ಭವೇದತ್ರ ಕಿಂ ಚಿದೇವ ತು ಪಂಚಮಂ।।

ಕುಶಸ್ಥಲ, ವೃಕಸ್ಥಲ, ಆಸಂದೀ, ವಾರಣಾವತ ಮತ್ತು ಐದನೆಯದಾಗಿ ನೀನು ಬಯಸಿದ ಯಾವುದಾದರೂ ಒಂದು ತುಂಡನ್ನು ಕೊಡು.

05031020a ಭ್ರಾತೄಣಾಂ ದೇಹಿ ಪಂಚಾನಾಂ ಗ್ರಾಮಾನ್ಪಂಚ ಸುಯೋಧನ।
05031020c ಶಾಂತಿರ್ನೋಽಸ್ತು ಮಹಾಪ್ರಾಜ್ಞಾ ಜ್ಞಾತಿಭಿಃ ಸಹ ಸಂಜಯ।।

ಸುಯೋಧನ! ಹೀಗೆ ಐದು ಸಹೋದರರಿಗೆ ಐದು ಗ್ರಾಮಗಳನ್ನು ಕೊಡು.” ಮಹಾಪ್ರಾಜ್ಞ ಸಂಜಯ! “ಇದರಿಂದ ನಮ್ಮ ಮತ್ತು ನಮ್ಮ ದಾಯಾದಿಗಳ ನಡುವೆ ಶಾಂತಿಯು ನೆಲೆಸುತ್ತದೆ.

05031021a ಭ್ರಾತಾ ಭ್ರಾತರಮನ್ವೇತು ಪಿತಾ ಪುತ್ರೇಣ ಯುಜ್ಯತಾಂ।
05031021c ಸ್ಮಯಮಾನಾಃ ಸಮಾಯಾಂತು ಪಾಂಚಾಲಾಃ ಕುರುಭಿಃ ಸಹ।।

ಸಹೋದರರು ಸಹೋದರರನ್ನು ಸೇರಲಿ, ತಂದೆಯಂದಿರು ಮಕ್ಕಳನ್ನು ಕೂಡಲಿ. ಪಾಂಚಾಲರು ಕುರುಗಳೊಂದಿಗೆ ಸೇರಿ ನಲಿದಾಡಲಿ.

05031022a ಅಕ್ಷತಾನ್ಕುರುಪಾಂಚಾಲಾನ್ಪಶ್ಯೇಮ ಇತಿ ಕಾಮಯೇ।
05031022c ಸರ್ವೇ ಸುಮನಸಸ್ತಾತ ಶಾಮ್ಯಾಮ ಭರತರ್ಷಭ।।

ಕುರು-ಪಾಂಚಾಲರು ನಾಶವಾಗದೇ ಇರುವುದನ್ನು ನೋಡಬೇಕು ಎನ್ನುವುದೇ ನನ್ನ ಆಸೆ. ಭರತರ್ಷಭ! ಅಯ್ಯಾ! ಎಲ್ಲರು ಸುಮನಸ್ಕರಾಗಿ ಶಾಂತಿಯಿಂದ ಇರೋಣ!”

05031023a ಅಲಮೇವ ಶಮಾಯಾಸ್ಮಿ ತಥಾ ಯುದ್ಧಾಯ ಸಂಜಯ।
05031023c ಧರ್ಮಾರ್ಥಯೋರಲಂ ಚಾಹಂ ಮೃದವೇ ದಾರುಣಾಯ ಚ।।

ಸಂಜಯ! ನಾನು ಶಾಂತಿಗೆ ಹೇಗೋ ಹಾಗೆ ಯುದ್ಧಕ್ಕೂ ತಯಾರಿದ್ದೇನೆ. ಧರ್ಮ-ಅರ್ಥಗಳೆರಡನ್ನೂ ಬಯಸುತ್ತೇನೆ. ನಾನು ಮೃದುವಾಗಿರಬಲ್ಲೆ, ದಾರುಣವಾಗಬಲ್ಲೆ ಕೂಡ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರಸಂದೇಶೇ ಏಕತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರಸಂದೇಶದಲ್ಲಿ ಮೂವತ್ತೊಂದನೆಯ ಅಧ್ಯಾಯವು.