030 ಯುಧಿಷ್ಠಿರಸಂದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 30

ಸಾರ

ಸಂಜಯನು ಬೀಳ್ಕೊಳ್ಳಲು ಯುಧಿಷ್ಠಿರನು ಕೌರವರ ಕುಶಲವನ್ನು ಕೇಳಿದನೆಂದು ಹೇಳಿ “ಕುರುಗಳನ್ನು ಸಂಪೂರ್ಣವಾಗಿ ನಾನೇ ಆಳುತ್ತೇನೆ ಎಂದು ನಿನ್ನ ಶರೀರದಲ್ಲಿ ಹೃದಯವನ್ನು ಸುಡುತ್ತಿರುವ ಈ ಆಸೆಗೆ ಯಾವುದೇ ಅರ್ಥವೂ ವಿವೇಕವೂ ಇಲ್ಲ. ನಿನಗೆ ಅಪ್ರಿಯವಾದುದನ್ನು ಮಾಡುವಂಥವರು ನಾವಲ್ಲ. ಶಕ್ರಪುರವನ್ನು ನಮಗೆ ಹಿಂದಿರುಗಿಸು ಅಥವಾ ಯುದ್ಧಮಾಡು.” ಎಂಬ ಸಂದೇಶವನ್ನು ದುರ್ಯೋಧನನಿಗೆ ಕಳುಹಿಸುವುದು (1-47).

05030001 ಸಂಜಯ ಉವಾಚ।
05030001a ಆಮಂತ್ರಯೇ ತ್ವಾ ನರದೇವದೇವ ಗಚ್ಚಾಮ್ಯಹಂ ಪಾಂಡವ ಸ್ವಸ್ತಿ ತೇಽಸ್ತು।
05030001c ಕಚ್ಚಿನ್ನ ವಾಚಾ ವೃಜಿನಂ ಹಿ ಕಿಂ ಚಿದ್ ಉಚ್ಚಾರಿತಂ ಮೇ ಮನಸೋಽಭಿಷಂಗಾತ್।।

ಸಂಜಯನು ಹೇಳಿದನು: “ನರದೇವದೇವ! ಪಾಂಡವ! ನಿನ್ನಿಂದ ಬೀಳ್ಕೊಳ್ಳುತ್ತೇನೆ. ನಾನು ಹೋಗುತ್ತೇನೆ. ನಿನಗೆ ಮಂಗಳವಾಗಲಿ! ನನ್ನ ಈ ಪಕ್ಷಪಾತೀ ಹೃದಯವು ನಿನ್ನನ್ನು ನೋಯಿಸುವ ಹಾಗೆ ಏನನ್ನೂ ನನ್ನಿಂದ ಮಾತನಾಡಿಸಲಿಲ್ಲ ಎಂದು ಅಂದುಕೊಳ್ಳುತ್ತೇನೆ.

05030002a ಜನಾರ್ದನಂ ಭೀಮಸೇನಾರ್ಜುನೌ ಚ ಮಾದ್ರೀಸುತೌ ಸಾತ್ಯಕಿಂ ಚೇಕಿತಾನಂ।
05030002c ಆಮಂತ್ರ್ಯ ಗಚ್ಚಾಮಿ ಶಿವಂ ಸುಖಂ ವಃ ಸೌಮ್ಯೇನ ಮಾಂ ಪಶ್ಯತ ಚಕ್ಷುಷಾ ನೃಪಾಃ।।

ಜನಾರ್ದನನನ್ನೂ, ಭೀಮಸೇನ-ಅರ್ಜುನರನ್ನೂ, ಮಾದ್ರೀಸುತರನ್ನೂ, ಸಾತ್ಯಕಿಯನ್ನೂ, ಚೇಕಿತಾನನನ್ನೂ ಬೀಳ್ಕೊಂಡು ಹೋಗುತ್ತೇನೆ. ಮಂಗಳವೂ ಸುಖವೂ ನಿಮ್ಮದಾಗಲಿ. ಎಲ್ಲ ನೃಪರೂ ನನ್ನನ್ನು ಸೌಮ್ಯ ದೃಷ್ಟಿಯಿಂದ ಕಾಣಲಿ.”

05030003 ಯುಧಿಷ್ಠಿರ ಉವಾಚ।
05030003a ಅನುಜ್ಞಾತಃ ಸಂಜಯ ಸ್ವಸ್ತಿ ಗಚ್ಚ ನ ನೋಽಕಾರ್ಷೀರಪ್ರಿಯಂ ಜಾತು ಕಿಂ ಚಿತ್।
05030003c ವಿದ್ಮಶ್ಚ ತ್ವಾ ತೇ ಚ ವಯಂ ಚ ಸರ್ವೇ ಶುದ್ಧಾತ್ಮಾನಂ ಮಧ್ಯಗತಂ ಸಭಾಸ್ಥಂ।।

ಯುಧಿಷ್ಠಿರನು ಹೇಳಿದನು: “ಸಂಜಯ! ಅಪ್ಪಣೆಯಿದೆ. ಹೊರಡು. ನಿನಗೆ ಮಂಗಳವಾಗಲಿ. ನೀನು ಎಂದೂ ನಮ್ಮ ಕುರಿತು ಕೆಟ್ಟದ್ದನ್ನು ಯೋಚಿಸಿದವನಲ್ಲ. ಸಭಾಸದರಲ್ಲಿ ನೀನೇ ಶುದ್ಧಾತ್ಮನೆಂದು ಅವರಿಗೆ ಮತ್ತು ನಮಗೆಲ್ಲರಿಗೂ ಗೊತ್ತು,

05030004a ಆಪ್ತೋ ದೂತಃ ಸಂಜಯ ಸುಪ್ರಿಯೋಽಸಿ ಕಲ್ಯಾಣವಾಕ್ಶೀಲವಾನ್ದೃಷ್ಟಿಮಾಂಶ್ಚ।
05030004c ನ ಮುಹ್ಯೇಸ್ತ್ವಂ ಸಂಜಯ ಜಾತು ಮತ್ಯಾ ನ ಚ ಕ್ರುಧ್ಯೇರುಚ್ಯಮಾನೋಽಪಿ ತಥ್ಯಂ।।

ಸಂಜಯ! ಆಪ್ತ ದೂತನೂ, ಸುಪ್ರಿಯನೂ, ಕಲ್ಯಾಣಮಾತುಳ್ಳವನೂ, ಶೀಲವಂತನೂ, ದೃಷ್ಟಿವಂತನೂ ಆಗಿದ್ದೀಯೆ. ಸೂತ ಸಂಜಯ! ನೀನು ಮೋಹಿತನಾಗಿಲ್ಲ. ವಿಷಯವನ್ನು ಇದ್ದಹಾಗೆ ಹೇಳಿದರೂ ನೀನು ಸಿಟ್ಟಾಗುವುದಿಲ್ಲ.

05030005a ನ ಮರ್ಮಗಾಂ ಜಾತು ವಕ್ತಾಸಿ ರೂಕ್ಷಾಂ ನೋಪಸ್ತುತಿಂ ಕಟುಕಾಂ ನೋತ ಶುಕ್ತಾಂ।
05030005c ಧರ್ಮಾರಾಮಾಮರ್ಥವತೀಮಹಿಂಸ್ರಾಂ ಏತಾಂ ವಾಚಂ ತವ ಜಾನಾಮಿ ಸೂತ।।

ಸೂತ ನೀನು ಕಠೋರವಾದ ಮಾತುಗಳನ್ನಾಡಿ ಹೃದಯವನ್ನು ಚುಚ್ಚುವುದಿಲ್ಲ. ಕಟುಕವಾಗಿ ಅಥವಾ ಹುಳಿಯಾಗಿ ಸಂಬೋಧಿಸುವುದಿಲ್ಲ. ಸೂತ! ನಿನ್ನ ಮಾತು ಧರ್ಮಯುಕ್ತವೂ, ಅರ್ಥವತ್ತಾಗಿಯೂ, ಅಹಿಂಸಾಯುಕ್ತವೂ ಆಗಿದೆ ಎಂದು ನನಗೆ ತಿಳಿದಿದೆ.

05030006a ತ್ವಮೇವ ನಃ ಪ್ರಿಯತಮೋಽಸಿ ದೂತ ಇಹಾಗಚ್ಚೇದ್ವಿದುರೋ ವಾ ದ್ವಿತೀಯಃ।
05030006c ಅಭೀಕ್ಷ್ಣದೃಷ್ಟೋಽಸಿ ಪುರಾ ಹಿ ನಸ್ತ್ವಂ ಧನಂಜಯಸ್ಯಾತ್ಮಸಮಃ ಸಖಾಸಿ।।

ನಮಗೆ ನೀನು ಪ್ರಿಯತಮನಾದ ದೂತ. ನಿನ್ನನ್ನು ಬಿಟ್ಟರೆ ಇಲ್ಲಿಗೆ ವಿದುರನು ಬರಬೇಕಿತ್ತು. ನಿನ್ನನ್ನು ನಾವು ಈ ಹಿಂದೆಯೂ ನೋಡಲಿಲ್ಲವೇ? ನೀನು ಧನಂಜಯನ ಸಮನಾಗಿರುವೆ ಮತ್ತು ಸಖನಾಗಿರುವೆ.

05030007a ಇತೋ ಗತ್ವಾ ಸಂಜಯ ಕ್ಷಿಪ್ರಮೇವ ಉಪಾತಿಷ್ಠೇಥಾ ಬ್ರಾಹ್ಮಣಾನ್ಯೇ ತದರ್ಹಾಃ।
05030007c ವಿಶುದ್ಧವೀರ್ಯಾಂಶ್ಚರಣೋಪಪನ್ನಾನ್ ಕುಲೇ ಜಾತಾನ್ಸರ್ವಧರ್ಮೋಪಪನ್ನಾನ್।।
05030008a ಸ್ವಾಧ್ಯಾಯಿನೋ ಬ್ರಾಹ್ಮಣಾ ಭಿಕ್ಷವಶ್ಚ ತಪಸ್ವಿನೋ ಯೇ ಚ ನಿತ್ಯಾ ವನೇಷು।
05030008c ಅಭಿವಾದ್ಯಾ ವೈ ಮದ್ವಚನೇನ ವೃದ್ಧಾಃ ತಥೇತರೇಷಾಂ ಕುಶಲಂ ವದೇಥಾಃ।।

ಸಂಜಯ! ಇಲ್ಲಿಂದ ಕ್ಷಿಪ್ರವಾಗಿ ಹೋಗಿ ವಿಶುದ್ಧ ವೀರ್ಯರೂ, ಶರಣೋಪಪನ್ನರೂ, ಉತ್ತಮ ಕುಲದಲ್ಲಿ ಜನಿಸಿದವರೂ, ಸರ್ವಧರ್ಮೋಪಪನ್ನರೂ ಆದ ಅರ್ಹ ಬ್ರಾಹ್ಮಣರನ್ನು ನಮಸ್ಕರಿಸು. ಸ್ವಾಧ್ಯಾಯಿಗಳನ್ನೂ, ಬ್ರಾಹ್ಮಣರನ್ನೂ, ಭಿಕ್ಷುಗಳನ್ನೂ, ನಿತ್ಯವೂ ವನದಲ್ಲಿರುವ ತಪಸ್ವಿಗಳನ್ನೂ ಅಭಿವಂದಿಸಿ ನನ್ನ ಮಾತಿನಂತೆ ವೃದ್ಧರ ಮತ್ತು ಇತರರ ಕುಶಲವನ್ನು ಕೇಳು.

05030009a ಪುರೋಹಿತಂ ಧೃತರಾಷ್ಟ್ರಸ್ಯ ರಾಜ್ಞಾ ಆಚಾರ್ಯಾಶ್ಚ ಋತ್ವಿಜೋ ಯೇ ಚ ತಸ್ಯ।
05030009c ತೈಶ್ಚ ತ್ವಂ ತಾತ ಸಹಿತೈರ್ಯಥಾರ್ಹಂ ಸಂಗಚ್ಚೇಥಾಃ ಕುಶಲೇನೈವ ಸೂತ।।

ಅಯ್ಯಾ! ಸೂತ! ನೀನು ರಾಜಾ ಧೃತರಾಷ್ಟ್ರನ ಪುರೋಹಿತನನ್ನು, ಅವನ ಆಚಾರ್ಯನನ್ನೂ, ಋತ್ವಿಜನನ್ನೂ, ಅವರ ಜೊತೆಗಿರುವವರನ್ನೂ ಯಥಾರ್ಹವಾಗಿ ಭೇಟಿಮಾಡಿ ಅವರ ಕುಶಲವನ್ನೂ ಕೇಳಬೇಕು.

05030010a ಆಚಾರ್ಯ ಇಷ್ಟೋಽನಪಗೋ ವಿಧೇಯೋ ವೇದಾನೀಪ್ಸನ್ಬ್ರಹ್ಮಚರ್ಯಂ ಚಚಾರ।
05030010c ಯೋಽಸ್ತ್ರಂ ಚತುಷ್ಪಾತ್ಪುನರೇವ ಚಕ್ರೇ ದ್ರೋಣಃ ಪ್ರಸನ್ನೋಽಭಿವಾದ್ಯೋ ಯಥಾರ್ಹಂ।।

ಅನಂತರ ನಮ್ಮ ಪ್ರಿಯ ಆಚಾರ್ಯ, ವಿಧೇಯ, ಅನಪಗ, ವೇದವನ್ನು ಬಯಸಿ ಬ್ರಹ್ಮಚರ್ಯವನ್ನು ನಡೆಸಿರುವ, ಅಸ್ತ್ರಗಳನ್ನು ಅವುಗಳ ನಾಲ್ಕೂ ಕಾಲುಗಳನ್ನೂ ಪುನಃ ಪ್ರತಿಷ್ಠಾಪಿಸಿದ ಪ್ರಸನ್ನ ದ್ರೋಣನಿಗೆ ಯಥಾರ್ಹವಾಗಿ ಅಭಿವಾದಿಸು.

05030011a ಅಧೀತವಿದ್ಯಶ್ಚರಣೋಪಪನ್ನೋ ಯೋಽಸ್ತ್ರಂ ಚತುಷ್ಪಾತ್ಪುನರೇವ ಚಕ್ರೇ।
05030011c ಗಂಧರ್ವಪುತ್ರಪ್ರತಿಮಂ ತರಸ್ವಿನಂ ತಮಶ್ವತ್ಥಾಮಾನಂ ಕುಶಲಂ ಸ್ಮ ಪೃಚ್ಚೇಃ।।

ಅನಂತರ ನೀನು ಅಧ್ಯಯನದಲ್ಲಿ ನಿರತನಾಗಿರುವ, ಶರಣೋಪಪನ್ನನಾದ, ಅಸ್ತ್ರವನ್ನು ಪುನಃ ಪ್ರತಿಷ್ಠಾಪಿಸಿದ, ಗಂಧರ್ವಪುತ್ರನಂತಿರುವ, ತರಸ್ವಿ, ಅಶ್ವತ್ಥಾಮನ ಕುಶಲವನ್ನು ಕೇಳು.

05030012a ಶಾರದ್ವತಸ್ಯಾವಸಥಂ ಸ್ಮ ಗತ್ವಾ ಮಹಾರಥಸ್ಯಾಸ್ತ್ರವಿದಾಂ ವರಸ್ಯ।
05030012c ತ್ವಂ ಮಾಮಭೀಕ್ಷ್ಣಂ ಪರಿಕೀರ್ತಯನ್ವೈ ಕೃಪಸ್ಯ ಪಾದೌ ಸಂಜಯ ಪಾಣಿನಾ ಸ್ಪೃಶೇಃ।।

ಸಂಜಯ! ಶಾರದ್ವತನ ಮನೆಗೆ ಹೋಗಿ, ನನ್ನ ಹೆಸರನ್ನು ಪುನಃ ಪುನಃ ಹೇಳುತ್ತಾ ಆ ಮಹಾರಥಿಯ, ಅಸ್ತ್ರವಿದರಲ್ಲಿ ಶ್ರೇಷ್ಠ ಕೃಪನ ಪಾದಗಳನ್ನು ಕೈಗಳಿಂದ ಮುಟ್ಟಿ ನಮಸ್ಕರಿಸು.

05030013a ಯಸ್ಮಿಂ ಶೌರ್ಯಮಾನೃಶಂಸ್ಯಂ ತಪಶ್ಚ ಪ್ರಜ್ಞಾ ಶೀಲಂ ಶ್ರುತಿಸತ್ತ್ವೇ ಧೃತಿಶ್ಚ।
05030013c ಪಾದೌ ಗೃಹೀತ್ವಾ ಕುರುಸತ್ತಮಸ್ಯ ಭೀಷ್ಮಸ್ಯ ಮಾಂ ತತ್ರ ನಿವೇದಯೇಥಾಃ।।

ಯಾರಲ್ಲಿ ಶೌರ್ಯ, ಅಕ್ರೂರತೆ, ತಪಸ್ಸು, ಪ್ರಜ್ಞಾಶೀಲತೆ, ಶ್ರುತಿಸತ್ವ, ಧೃತಿಗಳಿವೆಯೋ ಆ ಕುರುಸತ್ತಮ ಭೀಷ್ಮನ ಪಾದಗಳನ್ನು ಹಿಡಿದು ನನ್ನ ನಿವೇದನೆಯನ್ನು ಹೇಳಬೇಕು.

05030014a ಪ್ರಜ್ಞಾಚಕ್ಷುರ್ಯಃ ಪ್ರಣೇತಾ ಕುರೂಣಾಂ ಬಹುಶ್ರುತೋ ವೃದ್ಧಸೇವೀ ಮನೀಷೀ।
05030014c ತಸ್ಮೈ ರಾಜ್ಞೇ ಸ್ಥವಿರಾಯಾಭಿವಾದ್ಯ ಆಚಕ್ಷೀಥಾಃ ಸಂಜಯ ಮಾಮರೋಗಂ।।

ಸಂಜಯ! ಪ್ರಜ್ಞಾಚಕ್ಷು, ಕುರುಗಳ ಪ್ರಣೀತ, ಬಹುಶ್ರುತ, ವೃದ್ಧಸೇವೀ, ಮನೀಷೀ ಆ ರಾಜನಿಗೆ ವಂದಿಸಿ ನನ್ನ ಆರೋಗ್ಯದ ಕುರಿತು ಹೇಳು.

05030015a ಜ್ಯೇಷ್ಠಃ ಪುತ್ರೋ ಧೃತರಾಷ್ಟ್ರಸ್ಯ ಮಂದೋ ಮೂರ್ಖಃ ಶಠಃ ಸಂಜಯ ಪಾಪಶೀಲಃ।
05030015c ಪ್ರಶಾಸ್ತಾ ವೈ ಪೃಥಿವೀ ಯೇನ ಸರ್ವಾ ಸುಯೋಧನಂ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಸಂಜಯ! ಧೃತರಾಷ್ಟ್ರನ ಜ್ಯೇಷ್ಠ ಪುತ್ರ ಮಂದಬುದ್ಧಿ, ಮೂರ್ಖ, ಹಠವಾದಿ, ಪಾಪಶೀಲ, ಈ ಎಲ್ಲ ಪೃಥ್ವಿಯನ್ನೂ ಆಳುತ್ತಿರುವ ಸುಯೋಧನನ ಕುಶಲವನ್ನು ಕೇಳು.

05030016a ಭ್ರಾತಾ ಕನೀಯಾನಪಿ ತಸ್ಯ ಮಂದಃ ತಥಾಶೀಲಃ ಸಂಜಯ ಸೋಽಪಿ ಶಶ್ವತ್।
05030016c ಮಹೇಷ್ವಾಸಃ ಶೂರತಮಃ ಕುರೂಣಾಂ ದುಃಶಾಸನಂ ಕುಶಲಂ ತಾತ ಪೃಚ್ಚೇಃ।।

ಅಯ್ಯಾ ಸಂಜಯ! ಅವನ ಕಿರಿಯ ತಮ್ಮ ಮಂದಬುದ್ಧಿಯ, ಯಾವಾಗಲೂ ಅವನಂತೆಯೇ ನಡೆದುಕೊಳ್ಳುವ, ಮಹೇಷ್ವಾಸ, ಕುರುಗಳಲ್ಲಿಯೇ ಅತ್ಯಂತ ಶೂರನಾದ ದುಃಶಾಸನನ ಕುಶಲವನ್ನು ಕೇಳು.

05030017a ವೃಂದಾರಕಂ ಕವಿಮರ್ಥೇಷ್ವಮೂಢಂ ಮಹಾಪ್ರಜ್ಞಾಂ ಸರ್ವಧರ್ಮೋಪಪನ್ನಂ।
05030017c ನ ತಸ್ಯ ಯುದ್ಧಂ ರೋಚತೇ ವೈ ಕದಾ ಚಿದ್ ವೈಶ್ಯಾಪುತ್ರಂ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಶ್ರೇಷ್ಠ ಕವಿ, ಎಲ್ಲ ವಿಷಯಗಳಲ್ಲಿಯೂ ವಿವೇಕಿಯಾದ, ಮಹಾಪ್ರಾಜ್ಞ, ಸರ್ವಧರ್ಮೋಪಪನ್ನ, ಯಾರೊಂದಿಗೂ ಎಂದೂ ಯುದ್ಧವನ್ನು ಬಯಸದ ವೈಶ್ಯಾಪುತ್ರ ಯುಯುತ್ಸುವಿನ ಕುಶಲವನ್ನು ಕೇಳು.

05030018a ನಿಕರ್ತನೇ ದೇವನೇ ಯೋಽದ್ವಿತೀಯಶ್ ಚನ್ನೋಪಧಃ ಸಾಧುದೇವೀ ಮತಾಕ್ಷಃ।
05030018c ಯೋ ದುರ್ಜಯೋ ದೇವಿತವ್ಯೇನ ಸಂಖ್ಯೇ ಸ ಚಿತ್ರಸೇನಃ ಕುಶಲಂ ತಾತ ವಾಚ್ಯಃ।।

ಅಯ್ಯಾ! ಕತ್ತರಿಸುವುದರಲ್ಲಿ ಮತ್ತು ಜೂಜಿನಲ್ಲಿ ಅದ್ವಿತೀಯನಾದ, ಕುಶಲ ಮೋಸಗಾರ, ದಾಳ ಮತ್ತು ಪಗಡೆಯಾಟಗಳಲ್ಲಿ ಪಳಗಿದ, ಜೂಜಿನ ಸ್ಪರ್ಧೆಯಲ್ಲಿ ಗೆಲ್ಲಲಸಾಧ್ಯನಾದ ಆ ಚಿತ್ರಸೇನನ ಕುಶಲವನ್ನು ಕೇಳು.

05030019a ಯಸ್ಯ ಕಾಮೋ ವರ್ತತೇ ನಿತ್ಯಮೇವ ನಾನ್ಯಃ ಶಮಾದ್ಭಾರತಾನಾಮಿತಿ ಸ್ಮ।
05030019c ಸ ಬಾಹ್ಲಿಕಾನಾಮೃಷಭೋ ಮನಸ್ವೀ ಪುರಾ ಯಥಾ ಮಾಭಿವದೇತ್ಪ್ರಸನ್ನಃ।।

ನಿತ್ಯವೂ ಭಾರತರ ನಡುವೆ ಶಾಂತಿಯ ಹೊರತು ಬೇರೆ ಏನನ್ನೂ ಬಯಸದ, ಬಾಹ್ಲೀಕರ ಹಿರಿಯ ವೃಷಭ, ಮನಸ್ವಿಗೆ ಮೊದಲಿನಂತೆ ಪ್ರಸನ್ನನ್ನಾಗಿ ನನ್ನ ನಮಸ್ಕಾರಗಳು.

05030020a ಗುಣೈರನೇಕೈಃ ಪ್ರವರೈಶ್ಚ ಯುಕ್ತೋ ವಿಜ್ಞಾನವಾನ್ನೈವ ಚ ನಿಷ್ಠುರೋ ಯಃ।
05030020c ಸ್ನೇಹಾದಮರ್ಷಂ ಸಹತೇ ಸದೈವ ಸ ಸೋಮದತ್ತಃ ಪೂಜನೀಯೋ ಮತೋ ಮೇ।।

ನನ್ನ ಮತದಂತೆ ಅನೇಕ ಉತ್ತಮ ಗಣಗಳಿಂದ ಯುಕ್ತನಾಗಿರುವ, ತಿಳಿದವನಾದರೂ ನಿಷ್ಠುರವಾಗಿರದ, ಸ್ನೇಹಭಾವದಿಂದ ಸಿಟ್ಟನ್ನು ಸದಾ ಸಹಿಸಿಕೊಳ್ಳುತ್ತಿರುವ ಆ ಸೋಮದತ್ತನೂ ಪೂಜನೀಯ.

05030021a ಅರ್ಹತ್ತಮಃ ಕುರುಷು ಸೌಮದತ್ತಿಃ ಸ ನೋ ಭ್ರಾತಾ ಸಂಜಯ ಮತ್ಸಖಾ ಚ।
05030021c ಮಹೇಷ್ವಾಸೋ ರಥಿನಾಮುತ್ತಮೋ ಯಃ ಸಹಾಮಾತ್ಯಃ ಕುಶಲಂ ತಸ್ಯ ಪೃಚ್ಚೇಃ।।

ಕುರುಗಳಲ್ಲಿ ಸೌಮದತ್ತಿ ಭೂರಿಶ್ರವನು ಅತ್ಯಂತ ಅರ್ಹನು. ಸಂಜಯ! ಅವನು ನನ್ನ ಭ್ರಾತಾ ಮತ್ತು ಸಖನೂ ಕೂಡ. ಮಹೇಷ್ವಾಸ, ರಥಿಗಳಲ್ಲಿ ಉತ್ತಮನಾದ ಅವನ, ಮಂತ್ರಿಗಳೊಡನೆ, ಕುಶಲವನ್ನು ಕೇಳು.

05030022a ಯೇ ಚೈವಾನ್ಯೇ ಕುರುಮುಖ್ಯಾ ಯುವಾನಃ ಪುತ್ರಾಃ ಪೌತ್ರಾ ಭ್ರಾತರಶ್ಚೈವ ಯೇ ನಃ।
05030022c ಯಂ ಯಮೇಷಾಂ ಯೇನ ಯೇನಾಭಿಗಚ್ಚೇಃ ಅನಾಮಯಂ ಮದ್ವಚನೇನ ವಾಚ್ಯಃ।।

ಅಲ್ಲಿ ಇನ್ನೂ ಇತರ ಕುರುಮುಖ್ಯ ಯುವಕರು, ನನ್ನ ಮಕ್ಕಳು, ಮೊಮ್ಮಕ್ಕಳು ಮತ್ತು ಸಹೋದರರು ಇದ್ದಾರೆ. ಯಾವುದೇ ರೀತಿಯಲ್ಲಿ ಅವರನ್ನು ಭೇಟಿಯಾದರೆ ನನ್ನ ಕಡೆಯಿಂದ ಅವರ ಆರೋಗ್ಯವನ್ನು ಕೇಳುತ್ತೀಯಾ?

05030023a ಯೇ ರಾಜಾನಃ ಪಾಂಡವಾಯೋಧನಾಯ ಸಮಾನೀತಾ ಧಾರ್ತರಾಷ್ಟ್ರೇಣ ಕೇ ಚಿತ್।
05030023c ವಸಾತಯಃ ಶಾಲ್ವಕಾಃ ಕೇಕಯಾಶ್ಚ ತಥಾಂಬಷ್ಠಾ ಯೇ ತ್ರಿಗರ್ತಾಶ್ಚ ಮುಖ್ಯಾಃ।।
05030024a ಪ್ರಾಚ್ಯೋದೀಚ್ಯಾ ದಾಕ್ಷಿಣಾತ್ಯಾಶ್ಚ ಶೂರಾಃ ತಥಾ ಪ್ರತೀಚ್ಯಾಃ ಪಾರ್ವತೀಯಾಶ್ಚ ಸರ್ವೇ।
05030024c ಅನೃಶಂಸಾಃ ಶೀಲವೃತ್ತೋಪಪನ್ನಾಃ ತೇಷಾಂ ಸರ್ವೇಷಾಂ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಪಾಂಡವರ ವಿರುದ್ಧ ಹೋರಾಡಲು ಧೃತರಾಷ್ಟ್ರನು ಒಟ್ಟುಗೂಡಿಸಿರುವ ರಾಜರ - ವಸಾತಿಗಳು, ಶಾಲ್ವಕರು, ಕೇಕಯರು, ಅಂಬಷ್ಠರು, ತ್ರಿಗರ್ತ ಮುಖ್ಯರು, ಪೂರ್ವ-ಉತ್ತರಗಳ ಪ್ರಮುಖರು, ದಕ್ಷಿಣದ ಶೂರರು, ಮತ್ತು ಹಾಗೆಯೇ ಪಶ್ಚಿಮದ ಪಾರ್ವತೇಯರು, ಎಲ್ಲರೂ ಕೇಡನ್ನು ಬಯಸದವರು, ಶೀಲ-ನಡತೆಯುಳ್ಳವರು, ಅವರೆಲ್ಲರ ಕುಶಲವನ್ನು ಕೇಳು.

05030025a ಹಸ್ತ್ಯಾರೋಹಾ ರಥಿನಃ ಸಾದಿನಶ್ಚ ಪದಾತಯಶ್ಚಾರ್ಯಸಂಘಾ ಮಹಾಂತಃ।
05030025c ಆಖ್ಯಾಯ ಮಾಂ ಕುಶಲಿನಂ ಸ್ಮ ತೇಷಾಂ ಅನಾಮಯಂ ಪರಿಪೃಚ್ಚೇಃ ಸಮಗ್ರಾಽನ್।

ಮಾವುತರಿಗೆ, ಅಶ್ವಾರೋಹಿಗಳಿಗೆ, ರಥಿಗಳಿಗೆ, ಸಾದಿನರಿಗೆ, ಪದಾಳುಗಳಿಗೆ, ಅಲ್ಲಿಸೇರಿದ ಆರ್ಯರ ಮಹಾಗುಂಪಿನ ಅವರಿಗೆ ನಾನು ಕುಶಲನಾಗಿದ್ದೇನೆಂದು ಹೇಳು. ಅವರೆಲ್ಲರ ಕುಶಲವನ್ನೂ ಕೇಳು.

05030026a ತಥಾ ರಾಜ್ಞೋ ಹ್ಯರ್ಥಯುಕ್ತಾನಮಾತ್ಯಾನ್ ದೌವಾರಿಕಾನ್ಯೇ ಚ ಸೇನಾಂ ನಯಂತಿ।
05030026c ಆಯವ್ಯಯಂ ಯೇ ಗಣಯಂತಿ ಯುಕ್ತಾ ಅರ್ಥಾಂಶ್ಚ ಯೇ ಮಹತಶ್ಚಿಂತಯಂತಿ।।

ಹಾಗೆಯೇ ರಾಜನಿಂದ ನಿಯುಕ್ತರಾಗಿರುವ ಅಮಾತ್ಯರು, ಕಂದಾಯದ ಅಧಿಕಾರಿಗಳು, ಸೇನೆಗಳನ್ನು ನಡೆಸುವವರು, ಖರ್ಚು-ವೆಚ್ಚಗಳನ್ನು ಲೆಖ್ಕಮಾಡುವವರು, ಮತ್ತು ಅವನ ಕಾರ್ಯಗಳ ಕುರಿತು ವಿಶೇಷವಾಗಿ ಚಿಂತಿಸುವವರು.

05030027a ಗಾಂಧಾರರಾಜಃ ಶಕುನಿಃ ಪಾರ್ವತೀಯೋ ನಿಕರ್ತನೇ ಯೋಽದ್ವಿತೀಯೋಽಕ್ಷದೇವೀ।
05030027c ಮಾನಂ ಕುರ್ವನ್ಧಾರ್ತರಾಷ್ಟ್ರಸ್ಯ ಸೂತ ಮಿಥ್ಯಾಬುದ್ಧೇಃ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಗಾಂಧಾರರಾಜ, ಶಕುನಿ, ಪಾರ್ವತೇಯ, ಕಡಿಯುವುದರಲ್ಲಿ ಮತ್ತು ಜೂಜಾಟದಲ್ಲಿ ಅದ್ವಿತೀಯನಾದ ಧಾರ್ತರಾಷ್ಟ್ರನ ಮಾನವನ್ನು ಹೆಚ್ಚಿಸುವ ಆ ಅಪ್ರಮಾಣಿಕನ ಕುಶಲವನ್ನೂ ಕೇಳಬೇಕು.

05030028a ಯಃ ಪಾಂಡವಾನೇಕರಥೇನ ವೀರಃ ಸಮುತ್ಸಹತ್ಯಪ್ರಧೃಷ್ಯಾನ್ವಿಜೇತುಂ।
05030028c ಯೋ ಮುಹ್ಯತಾಂ ಮೋಹಯಿತಾದ್ವಿತೀಯೋ ವೈಕರ್ತನಂ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಸೋಲಿಸಲಸಾಧ್ಯರಾದ ಪಾಂಡವರನ್ನು ಒಂದೇ ರಥದಿಂದ ಗೆಲ್ಲಲು ಉತ್ಸುಕನಾಗಿರುವ, ಮೋಹಿತರನ್ನು ಮೋಹಗೊಳಿಸುವರಲ್ಲಿ ಅದ್ವಿತೀಯನಾದ ಆ ವೈಕರ್ತನನ ಕುಶಲವನ್ನು ಕೇಳಬೇಕು.

05030029a ಸ ಏವ ಭಕ್ತಃ ಸ ಗುರುಃ ಸ ಭೃತ್ಯಃ ಸ ವೈ ಪಿತಾ ಸ ಚ ಮಾತಾ ಸುಹೃಚ್ಚ।
05030029c ಅಗಾಧಬುದ್ಧಿರ್ವಿದುರೋ ದೀರ್ಘದರ್ಶೀ ಸ ನೋ ಮಂತ್ರೀ ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ನಮ್ಮ ಭಕ್ತನಾಗಿರುವ, ಗುರುವೂ, ಭೃತ್ಯನೂ, ತಂದೆ-ತಾಯಂದಿರೂ, ಸ್ನೇಹಿತನೂ ಆಗಿರುವ ಅಗಾಧಬುದ್ಧಿಯ, ದೀರ್ಘದರ್ಶೀ ಮಂತ್ರಿ ವಿದುರನ ಕುಶಲವನ್ನೂ ಕೇಳಬೇಕು.

05030030a ವೃದ್ಧಾಃ ಸ್ತ್ರಿಯೋ ಯಾಶ್ಚ ಗುಣೋಪಪನ್ನಾ ಯಾ ಜ್ಞಾಯಂತೇ ಸಂಜಯ ಮಾತರಸ್ತಾಃ।
05030030c ತಾಭಿಃ ಸರ್ವಾಭಿಃ ಸಹಿತಾಭಿಃ ಸಮೇತ್ಯ ಸ್ತ್ರೀಭಿರ್ವೃದ್ಧಾಭಿರಭಿವಾದಂ ವದೇಥಾಃ।।
05030031a ಕಚ್ಚಿತ್ಪುತ್ರಾ ಜೀವಪುತ್ರಾಃ ಸುಸಮ್ಯಗ್ ವರ್ತಂತೇ ವೋ ವೃತ್ತಿಮನೃಶಂಸರೂಪಾಂ।
05030031c ಇತಿ ಸ್ಮೋಕ್ತ್ವಾ ಸಂಜಯ ಬ್ರೂಹಿ ಪಶ್ಚಾದ್ ಅಜಾತಶತ್ರುಃ ಕುಶಲೀ ಸಪುತ್ರಃ।।

ಸಂಜಯ! ನಮಗೆ ತಾಯಂದಿರೆಂದು ತಿಳಿಯಲ್ಪಟ್ಟಿರುವ, ಗುಣೋಪಪನ್ನ ವೃದ್ಧಸ್ತ್ರೀಯರು; ಅವರೆಲ್ಲರನ್ನೂ ಒಟ್ಟಿಗೇ ಭೇಟಿಮಾಡಿ ಆ ವೃದ್ಧಸ್ತ್ರೀಯರಿಗೆ ಅಭಿವಂದನೆಗಳನ್ನು ಈ ರೀತಿ ಹೇಳು: “ಯಾರ ಮಕ್ಕಳು ಜೀವತರಾಗಿದ್ದಾರೋ ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಯೇ?” ಇದರ ನಂತರ ಅಜಾತಶತ್ರುವು ಪುತ್ರರೊಂದಿಗೆ ಕುಶಲನಾಗಿದ್ದಾನೆ ಎಂದು ಹೇಳಬೇಕು.

05030032a ಯಾ ನೋ ಭಾರ್ಯಾಃ ಸಂಜಯ ವೇತ್ಥ ತತ್ರ ತಾಸಾಂ ಸರ್ವಾಸಾಂ ಕುಶಲಂ ತಾತ ಪೃಚ್ಚೇಃ।
05030032c ಸುಸಂಗುಪ್ತಾಃ ಸುರಭಯೋಽನವದ್ಯಾಃ ಕಚ್ಚಿದ್ಗೃಹಾನಾವಸಥಾಪ್ರಮತ್ತಾಃ।।

ಸಂಜಯ! ಅಯ್ಯಾ! ನಮ್ಮ ಭಾರ್ಯೆಯರಂತಿರುವವರನ್ನು ತಿಳಿದು ಅವರೆಲ್ಲರ ಕುಶಲವನ್ನೂ ಕೇಳಬೇಕು - “ನೀವೆಲ್ಲರೂ ಚೆನ್ನಾಗಿ ರಕ್ಷಿಸಲ್ಪಟ್ಟಿರುವಿರೇ? ನಿಮ್ಮ ಗೌರವಕ್ಕೆ ಏನೂ ಗಾಯಗಳಾಗಲಿಲ್ಲ ತಾನೇ? ತಮ್ಮ ತಮ್ಮ ಮನೆಗಳಲ್ಲಿ ಅಪ್ರಮತ್ತರಾಗಿ ವಾಸಿಸುತ್ತಿದ್ದಾರೆಯೇ?

05030033a ಕಚ್ಚಿದ್ವೃತ್ತಿಂ ಶ್ವಶುರೇಷು ಭದ್ರಾಃ ಕಲ್ಯಾಣೀಂ ವರ್ತಧ್ವಮನೃಶಂಸರೂಪಾಂ।
05030033c ಯಥಾ ಚ ವಃ ಸ್ಯುಃ ಪತಯೋಽನುಕೂಲಾಃ ತಥಾ ವೃತ್ತಿಮಾತ್ಮನಃ ಸ್ಥಾಪಯಧ್ವಂ।।

ನಿಮ್ಮ ಅತ್ತೆಮಾವಂದಿರೊಡನೆ ಚೆನ್ನಾಗಿ, ನೋವಾಗದಂತೆ, ನಡೆದುಕೊಳ್ಳುತ್ತಿರುವಿರಾ? ಪತಿಯಂದಿರಿಗೆ ಅನುಕೂಲವಾಗುವಂತಹ ನಡತೆಯನ್ನು ನಿಮ್ಮಲ್ಲಿ ನೆಲೆಮಾಡಿಸಿಕೊಂಡಿದ್ದೀರಾ?”

05030034a ಯಾ ನಃ ಸ್ನುಷಾಃ ಸಂಜಯ ವೇತ್ಥ ತತ್ರ ಪ್ರಾಪ್ತಾಃ ಕುಲೇಭ್ಯಶ್ಚ ಗುಣೋಪಪನ್ನಾಃ।
05030034c ಪ್ರಜಾವತ್ಯೋ ಬ್ರೂಹಿ ಸಮೇತ್ಯ ತಾಶ್ಚ ಯುಧಿಷ್ಠಿರೋ ವೋಽಭ್ಯವದತ್ಪ್ರಸನ್ನಃ।।

ಅಲ್ಲಿ ನಮ್ಮ ಸೊಸೆಯಂದಿರಂತಿರುವ ಗುಣೋಪಪನ್ನ, ಕುಲೀನ ಮಕ್ಕಳ ತಾಯಂದಿರಾದ ಯುವತಿಯರನ್ನು ಭೇಟಿಯಾದಾಗ ಯುಧಿಷ್ಠಿರನು ಅವರಿಗೆ ಪ್ರಸನ್ನ ಸಂದೇಶಗಳನ್ನು ಕಳುಹಿಸಿದ್ದಾನೆಂದು ಹೇಳು.

05030035a ಕನ್ಯಾಃ ಸ್ವಜೇಥಾಃ ಸದನೇಷು ಸಂಜಯ ಅನಾಮಯಂ ಮದ್ವಚನೇನ ಪೃಷ್ಟ್ವಾ।
05030035c ಕಲ್ಯಾಣಾ ವಃ ಸಂತು ಪತಯೋಽನುಕೂಲಾ ಯೂಯಂ ಪತೀನಾಂ ಭವತಾನುಕೂಲಾಃ।।
05030036a ಅಲಂಕೃತಾ ವಸ್ತ್ರವತ್ಯಃ ಸುಗಂಧಾ ಅಬೀಭತ್ಸಾಃ ಸುಖಿತಾ ಭೋಗವತ್ಯಃ।
05030036c ಲಘು ಯಾಸಾಂ ದರ್ಶನಂ ವಾಕ್ಚ ಲಘ್ವೀ ವೇಶಸ್ತ್ರಿಯಃ ಕುಶಲಂ ತಾತ ಪೃಚ್ಚೇಃ।।

ಸಂಜಯ! ನಮ್ಮ ಮನೆಯ ಹೆಣ್ಣುಮಕ್ಕಳನ್ನು ಆಲಂಗಿಸಿ ನನ್ನ ವತಿಯಿಂದ ಅವರ ಆರೋಗ್ಯದ ಕುರಿತು ಕೇಳಬೇಕು. ಅವರಿಗೆ ನೀನು ಹೇಳಬೇಕು - “ನಿಮ್ಮ ಪತಿಯಂದಿರು ನಿಮ್ಮೊಡನೆ ಚೆನ್ನಾಗಿರಲಿ. ನೀವು ಕೂಡ ನಿಮ್ಮ ಪತಿಯಂದಿರಿಗೆ ಅನುಕೂಲರಾಗಿರಿ. ಅಲಂಕೃತರಾಗಿ, ಉತ್ತಮ ವಸ್ತ್ರಗಳನ್ನುಟ್ಟು, ಸುಗಂಧಗಳನ್ನು ತೊಟ್ಟು, ಶುಚಿಯಾಗಿದ್ದುಕೊಂಡು ಸುಖವನ್ನು ಭೋಗಿಸಿ. ನಿಮ್ಮ ನೋಟವು ಚೆನ್ನಾಗಿರಲಿ ಮಾತು ಸುಖಕರವಾಗಿರಲಿ.” ಅಯ್ಯಾ! ನೀನು ಮನೆಯ ಸ್ತ್ರೀಯರ ಕುಶಲವನ್ನು ಕೇಳಬೇಕು.

05030037a ದಾಸೀಪುತ್ರಾ ಯೇ ಚ ದಾಸಾಃ ಕುರೂಣಾಂ ತದಾಶ್ರಯಾ ಬಹವಃ ಕುಬ್ಜಖಂಜಾಃ।
05030037c ಆಖ್ಯಾಯ ಮಾಂ ಕುಶಲಿನಂ ಸ್ಮ ತೇಭ್ಯೋ ಅನಾಮಯಂ ಪರಿಪೃಚ್ಚೇರ್ಜಘನ್ಯಂ।।

ಕುರುಗಳ ಆಶ್ರಯದಲ್ಲಿರುವ ದಾಸೀಪುತ್ರರಿಗೂ, ದಾಸರಿಗೂ, ಕುಬ್ಜರಿಗೂ, ಕುಳ್ಳರಿಗೂ ನಾನು ಕುಶಲನಾಗಿದ್ದೇನೆಂದು ಹೇಳು. ಅನಂತರ ಅವರ ಆರೋಗ್ಯದ ಕುರಿತೂ ಕೇಳಬೇಕು.

05030038a ಕಚ್ಚಿದ್ವೃತ್ತಿರ್ವರ್ತತೇ ವೈ ಪುರಾಣೀ ಕಚ್ಚಿದ್ಭೋಗಾನ್ಧಾರ್ತರಾಷ್ಟ್ರೋ ದದಾತಿ।
05030038c ಅಂಗಹೀನಾನ್ಕೃಪಣಾನ್ವಾಮನಾಂಶ್ಚ ಆನೃಶಂಸ್ಯಾದ್ಧೃತರಾಷ್ಟ್ರೋ ಬಿಭರ್ತಿ।।
05030039a ಅಂಧಾಶ್ಚ ಸರ್ವೇ ಸ್ಥವಿರಾಸ್ತಥೈವ ಹಸ್ತಾಜೀವಾ ಬಹವೋ ಯೇಽತ್ರ ಸಂತಿ।
05030039c ಆಖ್ಯಾಯ ಮಾಂ ಕುಶಲಿನಂ ಸ್ಮ ತೇಷಾಂ ಅನಾಮಯಂ ಪರಿಪೃಚ್ಚೇರ್ಜಘನ್ಯಂ।।

ಅವರು ಹಿಂದೆ ಮಾಡುತ್ತಿದ್ದ ವೃತ್ತಿಗಳಲ್ಲಿಯೇ ತೊಡಗಿದ್ದಾರೆಯೇ ಮತ್ತು ಧಾರ್ತರಾಷ್ಟ್ರರು ಅವರಿಗೆ ಮೊದಲಿನಂತೆಯೇ ಕೊಡುತ್ತಿದ್ದಾರೆಯೇ? ಧೃತರಾಷ್ಟ್ರನು ಪೊರೆಯುವ ಅಂಗಹೀನರಿಗೂ, ಕೃಪಣರಿಗೂ, ಗಿಡ್ಡರಿಗೂ, ವೃದ್ಧರಿಗೂ, ಕುರುಡರಿಗೂ, ಮತ್ತು ಕಾಲುಗಳನ್ನು ಕಳೆದುಕೊಂಡು ಕೇವಲ ಕೈಗಳಿಂದ ಕೆಲಸಮಾಡಬಲ್ಲ ಎಲ್ಲರಿಗೂ ನನ್ನ ಕುಶಲತೆಯ ಕುರಿತು ಹೇಳಿ ನಂತರ ಅವರ ಆರೋಗ್ಯದ ಕುರಿತು ಕೇಳಬೇಕು.

05030040a ಮಾ ಭೈಷ್ಟ ದುಃಖೇನ ಕುಜೀವಿತೇನ ನೂನಂ ಕೃತಂ ಪರಲೋಕೇಷು ಪಾಪಂ।
05030040c ನಿಗೃಹ್ಯ ಶತ್ರೂನ್ಸುಹೃದೋಽನುಗೃಹ್ಯ ವಾಸೋಭಿರನ್ನೇನ ಚ ವೋ ಭರಿಷ್ಯೇ।।

“ನಿಮ್ಮ ಕೆಟ್ಟ ಜೀವನ ದುಃಖದಿಂದ ಭಯಪಡಬೇಡಿ. ಪರಲೋಕಗಳಲ್ಲಿ ಪಾಪಗಳನ್ನು ಮಾಡಿರಬಹುದು. ಶತ್ರುಗಳನ್ನು ನಿಗ್ರಹಿಸಿ ಸುಹೃದರನ್ನು ಅನುಗ್ರಹಿಸಿ ನಾನು ನಿಮಗೆ ಊಟ ವಸ್ತ್ರಗಳನ್ನಿತ್ತು ತೃಪ್ತಿಗೊಳಿಸುತ್ತೇನೆ.

05030041a ಸಂತ್ಯೇವ ಮೇ ಬ್ರಾಹ್ಮಣೇಭ್ಯಃ ಕೃತಾನಿ ಭಾವೀನ್ಯಥೋ ನೋ ಬತ ವರ್ತಯಂತಿ।
05030041c ಪಶ್ಯಾಮ್ಯಹಂ ಯುಕ್ತರೂಪಾಂಸ್ತಥೈವ ತಾಮೇವ ಸಿದ್ಧಿಂ ಶ್ರಾವಯೇಥಾ ನೃಪಂ ತಂ।।

ಬ್ರಾಹ್ಮಣರಿಂದ ನನಗೆ ಇನ್ನೂ ಉತ್ತಮ ಫಲಗಳು ಬರುವುದಿದೆ. ಭವಿಷ್ಯದಲ್ಲಿ ನನಗೆ ಅವು ದೊರೆಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಪುನಃ ಯುಕ್ತರೂಪರಾಗುತ್ತೀರಿ. ಅದು ಸಿದ್ಧಿಯಾದಾಗ ನೃಪನಿಗೆ ತಿಳಿಸಿ.”

05030042a ಯೇ ಚಾನಾಥಾ ದುರ್ಬಲಾಃ ಸರ್ವಕಾಲಂ ಆತ್ಮನ್ಯೇವ ಪ್ರಯತಂತೇಽಥ ಮೂಢಾಃ।
05030042c ತಾಂಶ್ಚಾಪಿ ತ್ವಂ ಕೃಪಣಾನ್ಸರ್ವಥೈವ ಅಸ್ಮದ್ವಾಕ್ಯಾತ್ಕುಶಲಂ ತಾತ ಪೃಚ್ಚೇಃ।।

ಅಯ್ಯಾ! ಅನಾಥರಾಗಿರುವ, ದುರ್ಬಲರಾಗಿರುವ, ಸರ್ವಕಾಲದಲ್ಲಿಯೂ ತಮ್ಮ ಕುರಿತೇ ಚಿಂತಿಸುತ್ತಿರುವ, ಮೂಢ ಕೃಪಣರೆಲ್ಲರನ್ನು ಕೂಡ ನಮ್ಮ ಪರವಾಗಿ ಕುಶಲವನ್ನು ಕೇಳು.

05030043a ಯೇ ಚಾಪ್ಯನ್ಯೇ ಸಂಶ್ರಿತಾ ಧಾರ್ತರಾಷ್ಟ್ರಾನ್ ನಾನಾದಿಗ್ಭ್ಯೋಽಭ್ಯಾಗತಾಃ ಸೂತಪುತ್ರ।
05030043c ದೃಷ್ಟ್ವಾ ತಾಂಶ್ಚೈವಾರ್ಹತಶ್ಚಾಪಿ ಸರ್ವಾನ್ ಸಂಪೃಚ್ಚೇಥಾಃ ಕುಶಲಂ ಚಾವ್ಯಯಂ ಚ।।

ಸೂತಪುತ್ರ! ನಾನಾ ದಿಕ್ಕುಗಳಿಂದ ಬಂದು ಧಾರ್ತರಾಷ್ಟ್ರರೊಡನೆ ಸೇರಿದ ಇತರರಿಗೂ, ನೀನು ನೋಡಲು ಸಾಧ್ಯವಾದ ಎಲ್ಲರಿಗೂ ಕುಶಲ ಮತ್ತು ಆರೋಗ್ಯದ ಕುರಿತು ಕೇಳು.

05030044a ಏವಂ ಸರ್ವಾನಾಗತಾಭ್ಯಾಗತಾಂಶ್ಚ ರಾಜ್ಞೋ ದೂತಾನ್ಸರ್ವದಿಗ್ಭ್ಯೋಽಭ್ಯುಪೇತಾನ್।
05030044c ಪೃಷ್ಟ್ವಾ ಸರ್ವಾನ್ಕುಶಲಂ ತಾಂಶ್ಚ ಸೂತ ಪಶ್ಚಾದಹಂ ಕುಶಲೀ ತೇಷು ವಾಚ್ಯಃ।।

ಸೂತ! ಹೀಗೆ ಎಲ್ಲ ದಿಕ್ಕುಗಳಿಂದಲೂ ಬಂದವರ, ಇನ್ನೂ ಬರುತ್ತಿರುವ ರಾಜರಿಗೂ ದೂತರಿಗೂ ಎಲ್ಲರಿಗೂ ಅವರ ಕುಶಲವನ್ನು ಕೇಳಿ ನಂತರ ಅವರಿಗೆ ನಾನು ಕುಶಲನಾಗಿದ್ದೇನೆ ಎಂದು ಹೇಳು.

05030045a ನ ಹೀದೃಶಾಃ ಸಂತ್ಯಪರೇ ಪೃಥಿವ್ಯಾಂ ಯೇ ಯೋಧಕಾ ಧಾರ್ತರಾಷ್ಟ್ರೇಣ ಲಬ್ಧಾಃ।
05030045c ಧರ್ಮಸ್ತು ನಿತ್ಯೋ ಮಮ ಧರ್ಮ ಏವ ಮಹಾಬಲಃ ಶತ್ರುನಿಬರ್ಹಣಾಯ।।

ಧಾರ್ತರಾಷ್ಟ್ರರಿಗೆ ದೊರಕಿರುವ ಯೋಧಕರಂಥವರು ಬೇರೆ ಯಾರೂ ಭೂಮಿಯಲ್ಲಿಲ್ಲ. ಆದರೆ ಧರ್ಮವು ನಿತ್ಯ ಮತ್ತು ಧರ್ಮವೇ ಶತ್ರುಗಳನ್ನು ನಾಶಪಡಿಸಲು ನನ್ನಲ್ಲಿರುವ ಮಹಾಬಲ.

05030046a ಇದಂ ಪುನರ್ವಚನಂ ಧಾರ್ತರಾಷ್ಟ್ರಂ ಸುಯೋಧನಂ ಸಂಜಯ ಶ್ರಾವಯೇಥಾಃ।
05030046c ಯಸ್ತೇ ಶರೀರೇ ಹೃದಯಂ ದುನೋತಿ ಕಾಮಃ ಕುರೂನಸಪತ್ನೋಽನುಶಿಷ್ಯಾಂ।।
05030047a ನ ವಿದ್ಯತೇ ಯುಕ್ತಿರೇತಸ್ಯ ಕಾ ಚಿನ್ ನೈವಂವಿಧಾಃ ಸ್ಯಾಮ ಯಥಾ ಪ್ರಿಯಂ ತೇ।
05030047c ದದಸ್ವ ವಾ ಶಕ್ರಪುರಂ ಮಮೈವ ಯುಧ್ಯಸ್ವ ವಾ ಭಾರತಮುಖ್ಯ ವೀರ।।

ಸಂಜಯ! ನನ್ನ ಈ ಮಾತನ್ನು ಧಾರ್ತರಾಷ್ಟ್ರ ಸುಯೋಧನನಿಗೆ ಪುನಃ ಪುನಃ ಕೇಳಿಸಬೇಕು: “ಕುರುಗಳನ್ನು ಸಂಪೂರ್ಣವಾಗಿ ನಾನೇ ಆಳುತ್ತೇನೆ ಎಂದು ನಿನ್ನ ಶರೀರದಲ್ಲಿ ಹೃದಯವನ್ನು ಸುಡುತ್ತಿರುವ ಈ ಆಸೆಗೆ ಯಾವುದೇ ಅರ್ಥವೂ ವಿವೇಕವೂ ಇಲ್ಲ. ನಿನಗೆ ಅಪ್ರಿಯವಾದುದನ್ನು ಮಾಡುವಂಥವರು ನಾವಲ್ಲ. ವೀರ! ಭಾರತ ಮುಖ್ಯ! ಶಕ್ರಪುರವನ್ನು ನಮಗೆ ಹಿಂದಿರುಗಿಸು ಅಥವಾ ಯುದ್ಧಮಾಡು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರಸಂದೇಶೇ ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರಸಂದೇಶದಲ್ಲಿ ಮೂವತ್ತನೆಯ ಅಧ್ಯಾಯವು.