029 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 29

ಸಾರ

ಆಗ ಕೃಷ್ಣನು ಆಸೆಬುರುಕನಾದ ಧೃತರಾಷ್ಟ್ರನಿಗೂ ಕಷ್ಟದಲ್ಲಿದ್ದರೂ ಶಾಂತತೆಯನ್ನು ತೋರಿಸುತ್ತಿರುವ ಯುಧಿಷ್ಠಿರನಿಗೂ ಕಲಹವೇಕೆ ಆಗುವುದಿಲ್ಲವೆಂದೂ, “ತನ್ನ ಕರ್ತವ್ಯವನ್ನು ಪೂರೈಸಲು ಹೊರಟಿರುವ, ತನ್ನ ಕುಟುಂಬವನ್ನು ಸರಿಯಾಗಿ ಮಾರ್ಗದರ್ಶನದೊಂದಿಗೆ ನಡೆಸಿಕೊಂಡು ಹೋಗುತ್ತಿರುವ, ಮೊದಲಿಂದಲೂ ಸರಿಯಾಗಿಯೇ ನಡೆದುಕೊಂಡು ಬಂದಿರುವ ಈ ಪಾಂಡವನನ್ನು ಏಕೆ ನಿಂದಿಸುತ್ತಿರುವೆ” ಎಂದೂ, “ಕೌರವರನ್ನು ನಾಶಗೊಳಿಸದೇ ತಮ್ಮ ಕರ್ಮದ ದಾರಿಯನ್ನು ಪಾರ್ಥರು ಕಂಡರೆ ಅವರು ಧರ್ಮವನ್ನು ಉಳಿಸುವ ಆ ಪುಣ್ಯಕಾರ್ಯವನ್ನು ಮಾಡುತ್ತಾರೆ” ಎಂದೂ, “ಪಾಂಡವರ ಪಿತ್ರಾರ್ಜಿತ ಭಾಗವು ನಿರ್ದಿಷ್ಠವಾದುದು. ಇತರರು ಅದನ್ನು ಏಕೆ ನಮ್ಮಿಂದ ಕಸಿದುಕೊಳ್ಳಬೇಕು? ಈ ವಿಷಯದಲ್ಲಿ ನಾವು ಹೋರಾಡಿ ಸತ್ತರೂ ಶ್ಲಾಘನೀಯ. ಏಕೆಂದರೆ ಪರರ ರಾಜ್ಯಕ್ಕಿಂತ ಪಿತೃರಾಜ್ಯವು ವಿಶಿಷ್ಟವಾದುದು.” ಎಂದು ಹೇಳಿ, ದ್ಯೂತದ ಸಭೆಯಲ್ಲಿ ಕೌರವರು ಎಸೆದ ಅಪಚಾರಗಳನ್ನು ಸಂಜಯನಿಗೆ ನೆನಪಿಸಿಕೊಟ್ಟು “ಧರ್ಮಚಾರಿಗಳಾದ ಮಹಾತ್ಮ ಪಾಂಡವರು ಶಾಂತಿಗೆ ಕಾಯುತ್ತಿದ್ದಾರೆ. ಅವರು ಸಮೃದ್ಧ ಯೋಧರೂ ಕೂಡ” ಎಂದು ಹೇಳುವುದು (1-51).

05029001 ವಾಸುದೇವ ಉವಾಚ।
05029001a ಅವಿನಾಶಂ ಸಂಜಯ ಪಾಂಡವಾನಾಂ ಇಚ್ಚಾಮ್ಯಹಂ ಭೂತಿಮೇಷಾಂ ಪ್ರಿಯಂ ಚ।
05029001c ತಥಾ ರಾಜ್ಞೋ ಧೃತರಾಷ್ಟ್ರಸ್ಯ ಸೂತ ಸದಾಶಂಸೇ ಬಹುಪುತ್ರಸ್ಯ ವೃದ್ಧಿಂ।।

ವಾಸುದೇವನು ಹೇಳಿದನು: “ಸಂಜಯ! ನಾನು ಪಾಂಡವರ ಅವಿನಾಶವನ್ನು, ಅವರಿಗೆ ಪ್ರಿಯವಾದುದನ್ನು, ಮತ್ತು ಅವರ ಏಳಿಗೆಯನ್ನು ಬಯಸುತ್ತೇನೆ. ಸೂತ! ಹಾಗೆಯೇ ರಾಜ ಧೃತರಾಷ್ಟ್ರನ ಮತ್ತು ಅವನ ಬಹುಮಂದಿ ಮಕ್ಕಳ ವೃದ್ಧಿಯನ್ನು ಸದಾ ಬಯಸುತ್ತೇನೆ.

05029002a ಕಾಮೋ ಹಿ ಮೇ ಸಂಜಯ ನಿತ್ಯಮೇವ ನಾನ್ಯದ್ಬ್ರೂಯಾಂ ತಾನ್ಪ್ರತಿ ಶಾಮ್ಯತೇತಿ।
05029002c ರಾಜ್ಞಾಶ್ಚ ಹಿ ಪ್ರಿಯಮೇತಚ್ಚೃಣೋಮಿ ಮನ್ಯೇ ಚೈತತ್ಪಾಂಡವಾನಾಂ ಸಮರ್ಥಂ।।

ಸಂಜಯ! ನಿತ್ಯವೂ ನನ್ನ ಬಯಕೆಯು - ಅವರಿಗೆ ನಾನು ಬೇರೆ ಏನನ್ನೂ ಹೇಳಲಿಲ್ಲ- ಶಾಂತಿ ಎನ್ನುವುದು. ರಾಜನಿಗೂ ಕೂಡ ಅದು ಬೇಕಾಗಿದ್ದುದೆಂದು ಕೇಳುತ್ತಿದ್ದೇನೆ. ಅದು ಪಾಂಡವರಿಗೂ ಒಳ್ಳೆಯದು ಎಂದು ತಿಳಿದಿದ್ದೇನೆ.

05029003a ಸುದುಷ್ಕರಶ್ಚಾತ್ರ ಶಮೋ ಹಿ ನೂನಂ ಪ್ರದರ್ಶಿತಃ ಸಂಜಯ ಪಾಂಡವೇನ।
05029003c ಯಸ್ಮಿನ್ಗೃದ್ಧೋ ಧೃತರಾಷ್ಟ್ರಃ ಸಪುತ್ರಃ ಕಸ್ಮಾದೇಷಾಂ ಕಲಹೋ ನಾತ್ರ ಮೂರ್ಚ್ಚೇತ್।।

ಸಂಜಯ! ಪುತ್ರರೊಂದಿಗೆ ಧೃತರಾಷ್ಟ್ರನು ಆಸೆಬುರುಕನಾಗಿರುವಾಗ ಪಾಂಡವರಾದರೋ ತುಂಬಾ ದುಷ್ಕರವಾದ ಶಾಂತತೆಯನ್ನೇ ಪ್ರದರ್ಶಿಸಿದ್ದಾರೆ. ಹೇಗೆತಾನೇ ಇವರಿಬ್ಬರ ನಡುವೆ ಕಲಹವುಂಟಾಗುವುದಿಲ್ಲ?

05029004a ತತ್ತ್ವಂ ಧರ್ಮಂ ವಿಚರನ್ಸಂಜಯೇಹ ಮತ್ತಶ್ಚ ಜಾನಾಸಿ ಯುಧಿಷ್ಠಿರಾಚ್ಚ।
05029004c ಅಥೋ ಕಸ್ಮಾತ್ಸಂಜಯ ಪಾಂಡವಸ್ಯ ಉತ್ಸಾಹಿನಃ ಪೂರಯತಃ ಸ್ವಕರ್ಮ।
05029004e ಯಥಾಖ್ಯಾತಮಾವಸತಃ ಕುಟುಂಬಂ ಪುರಾಕಲ್ಪಾತ್ಸಾಧು ವಿಲೋಪಮಾತ್ಥ।।

ಧರ್ಮದ ತತ್ವವನ್ನು ನಿರ್ಧರಿಸುವಾಗ ಇಲ್ಲಿ ಸಂಜಯ! ನೀನು ನನ್ನಿಂದ ಮತ್ತು ಯುಧಿಷ್ಠಿರನಿಂದ ತಿಳಿದುಕೋ! ಹೀಗಿರುವಾಗ ಸಂಜಯ! ನೀನು ತನ್ನ ಕರ್ತವ್ಯವನ್ನು ಪೂರೈಸಲು ಹೊರಟಿರುವ, ತನ್ನ ಕುಟುಂಬವನ್ನು ಸರಿಯಾಗಿ ಮಾರ್ಗದರ್ಶನದೊಂದಿಗೆ ನಡೆಸಿಕೊಂಡು ಹೋಗುತ್ತಿರುವ, ಮೊದಲಿಂದಲೂ ಸರಿಯಾಗಿಯೇ ನಡೆದುಕೊಂಡು ಬಂದಿರುವ ಈ ಪಾಂಡವನನ್ನು ಏಕೆ ಅಲ್ಲಗಳೆಯುತ್ತಿರುವೆ?

05029005a ಅಸ್ಮಿನ್ವಿಧೌ ವರ್ತಮಾನೇ ಯಥಾವದ್ ಉಚ್ಚಾವಚಾ ಮತಯೋ ಬ್ರಾಹ್ಮಣಾನಾಂ।
05029005c ಕರ್ಮಣಾಹುಃ ಸಿದ್ಧಿಮೇಕೇ ಪರತ್ರ ಹಿತ್ವಾ ಕರ್ಮ ವಿದ್ಯಯಾ ಸಿದ್ಧಿಮೇಕೇ।।
05029005e ನಾಭುಂಜಾನೋ ಭಕ್ಷ್ಯಭೋಜ್ಯಸ್ಯ ತೃಪ್ಯೇದ್ ವಿದ್ವಾನಪೀಹ ವಿದಿತಂ ಬ್ರಾಹ್ಮಣಾನಾಂ।।

ವರ್ತಮಾನದ ವಿಷಯದ ಕುರಿತು ಸರಿಯಾದ ಮಾತನ್ನು ವಿವಿಧರೀತಿಗಳಲ್ಲಿ ಬ್ರಾಹ್ಮಣರು ಹೇಳಿದ್ದಾರೆ. ಕರ್ಮಗಳು ಪರತ್ರದಲ್ಲಿ ಸಿದ್ಧಿಯನ್ನು ನೀಡುತ್ತವೆ ಎಂದು ಕೆಲವರು ಹೇಳುತ್ತಾರೆ. ಇತರರು ಕರ್ಮವನ್ನು ತೊರೆದು ವಿದ್ಯೆಯೊಂದೇ ಸಿದ್ಧಿಯನ್ನು ನೀಡುತ್ತದೆ ಎನ್ನುತ್ತಾರೆ. ಭಕ್ಷ್ಯ-ಭೋಜ್ಯಗಳನ್ನು ತಿಳಿದಿದ್ದರೂ ಅದನ್ನು ತಿನ್ನದೇ ಇರುವವನು ಹಸಿವಿನಿಂದ ತೃಪ್ತನಾಗುವುದಿಲ್ಲ ಎಂದೂ ಬ್ರಾಹ್ಮಣರಿಗೆ ತಿಳಿದಿದೆ.

05029006a ಯಾ ವೈ ವಿದ್ಯಾಃ ಸಾಧಯಂತೀಹ ಕರ್ಮ ತಾಸಾಂ ಫಲಂ ವಿದ್ಯತೇ ನೇತರಾಸಾಂ।
05029006c ತತ್ರೇಹ ವೈ ದೃಷ್ಟಫಲಂ ತು ಕರ್ಮ ಪೀತ್ವೋದಕಂ ಶಾಮ್ಯತಿ ತೃಷ್ಣಯಾರ್ತಃ।।

ಕರ್ಮಗಳನ್ನು ಸಾಧಿಸುವಂತಹ ವಿದ್ಯೆ ಮಾತ್ರ ಫಲವನ್ನು ನೀಡುತ್ತದೆ. ಇತರ ವಿದ್ಯೆಗಳಲ್ಲ! ಕರ್ಮವೇ ಕಾಣಲಿಕ್ಕಾಗುವ ಫಲವನ್ನು ನೀಡುತ್ತದೆ. ಬಾಯಾರಿಕೆಯು ನೀರನ್ನು ಕುಡಿಯುವುದರಿಂದ ಶಾಂತವಾಗುತ್ತದೆ.

05029007a ಸೋಽಯಂ ವಿಧಿರ್ವಿಹಿತಃ ಕರ್ಮಣೈವ ತದ್ವರ್ತತೇ ಸಂಜಯ ತತ್ರ ಕರ್ಮ।
05029007c ತತ್ರ ಯೋಽನ್ಯತ್ಕರ್ಮಣಃ ಸಾಧು ಮನ್ಯೇನ್ ಮೋಘಂ ತಸ್ಯ ಲಪಿತಂ ದುರ್ಬಲಸ್ಯ।।

ಸಂಜಯ! ಈ ಕರ್ಮವೇ ವಿಧಿವಿಹಿತವಾದುದು. ಇಲ್ಲಿ ಕರ್ಮವೇ ನಡೆಯುವುದು. ಕರ್ಮಕ್ಕಿಂತಲೂ ಉತ್ತಮವಾದುದು ಏನೋ ಇದೆ ಎಂದು ತಿಳಿದುಕೊಳ್ಳುವುದು ದುರ್ಬಲ ಮತ್ತು ಪ್ರಯೋಜನವಿಲ್ಲದ್ದು ಎಂದು ನನ್ನ ಮತ.

05029008a ಕರ್ಮಣಾಮೀ ಭಾಂತಿ ದೇವಾಃ ಪರತ್ರ ಕರ್ಮಣೈವೇಹ ಪ್ಲವತೇ ಮಾತರಿಶ್ವಾ।
05029008c ಅಹೋರಾತ್ರೇ ವಿದಧತ್ಕರ್ಮಣೈವ ಅತಂದ್ರಿತೋ ನಿತ್ಯಮುದೇತಿ ಸೂರ್ಯಃ।।

ಕರ್ಮಗಳಿಂದಲೇ ಅಲ್ಲಿ ದೇವತೆಗಳು ಹೊಳೆಯುತ್ತಾರೆ. ಕರ್ಮದಿಂದಲೇ ವಾಯುವು ಇಲ್ಲಿ ಬೀಸುತ್ತಾನೆ. ಕರ್ಮದಿಂದಲೇ ಹಗಲು ರಾತ್ರಿಗಳನ್ನು ನಿರ್ಧರಿಸುತ್ತಾ ಸೂರ್ಯನು ನಿತ್ಯವೂ ಆಯಾಸಗೊಳ್ಳದೇ ಉದಯಿಸುತ್ತಾನೆ.

05029009a ಮಾಸಾರ್ಧಮಾಸಾನಥ ನಕ್ಷತ್ರಯೋಗಾನ್ ಅತಂದ್ರಿತಶ್ಚಂದ್ರಮಾ ಅಭ್ಯುಪೈತಿ।
05029009c ಅತಂದ್ರಿತೋ ದಹತೇ ಜಾತವೇದಾಃ ಸಮಿಧ್ಯಮಾನಃ ಕರ್ಮ ಕುರ್ವನ್ಪ್ರಜಾಭ್ಯಃ।।

ಹಾಗೆಯೇ ಆಯಾಸಗೊಳ್ಳದೇ ಚಂದ್ರಮನು ಮಾಸ-ಪಕ್ಷಗಳಲ್ಲಿ ನಡೆದು ನಕ್ಷತ್ರ ರಾಶಿಗಳಲ್ಲಿ ಸಂಚರಿಸುತ್ತಾನೆ. ಜಾತವೇದಗಳು ಕೂಡ ತಮ್ಮ ಕರ್ಮಗಳನ್ನು ಮಾಡುತ್ತ ಪ್ರಜೆಗಳ ಒಳಿತಿಗಾಗಿ ಆಯಾಸಗೊಳ್ಳದೇ ನಿರಂತರವಾಗಿ ಉರಿಯುತ್ತವೆ.

05029010a ಅತಂದ್ರಿತಾ ಭಾರಮಿಮಂ ಮಹಾಂತಂ ಬಿಭರ್ತಿ ದೇವೀ ಪೃಥಿವೀ ಬಲೇನ।
05029010c ಅತಂದ್ರಿತಾಃ ಶೀಘ್ರಮಪೋ ವಹಂತಿ ಸಂತರ್ಪಯಂತ್ಯಃ ಸರ್ವಭೂತಾನಿ ನದ್ಯಃ।।

ವಿಶ್ರಾಂತಿಯಿಲ್ಲದೇ ಈ ಮಹಾಭಾರವನ್ನು ಬಲವನ್ನುಪಯೋಗಿಸಿ ದೇವೀ ಪೃಥ್ವಿಯು ಹೊರುತ್ತಾಳೆ. ನಿದ್ದೆಯಿಲ್ಲದೇ ನದಿಗಳು ನೀರನ್ನು ಹೊತ್ತು ಶೀಘ್ರವಾಗಿ ಹರಿದು ಸರ್ವಭೂತಗಳನ್ನು ಸಂತೃಪ್ತಗೊಳಿಸುತ್ತವೆ.

05029011a ಅತಂದ್ರಿತೋ ವರ್ಷತಿ ಭೂರಿತೇಜಾಃ ಸಮ್ನಾದಯನ್ನಂತರಿಕ್ಷಂ ದಿವಂ ಚ।
05029011c ಅತಂದ್ರಿತೋ ಬ್ರಹ್ಮಚರ್ಯಂ ಚಚಾರ ಶ್ರೇಷ್ಠತ್ವಮಿಚ್ಚನ್ಬಲಭಿದ್ದೇವತಾನಾಂ।।

ಆಯಾಸಗೊಳ್ಳದೇ ಭೂರಿತೇಜಸ್ವಿಯು ಅಂತರಿಕ್ಷ-ಸ್ವರ್ಗಗಳಲ್ಲಿ ಗರ್ಜಿಸಿ ಮಳೆಯನ್ನು ಸುರಿಸುತ್ತಾನೆ. ಅವನು ಆಯಾಸಗೊಳ್ಳದೇ ಬ್ರಹ್ಮಚರ್ಯವನ್ನು ಪಾಲಿಸಿ ದೇವತೆಗಳ ಶ್ರೇಷ್ಠತ್ವವನ್ನು ಬಲವನ್ನೂ ಪಡೆಯುತ್ತಾನೆ.

05029012a ಹಿತ್ವಾ ಸುಖಂ ಮನಸಶ್ಚ ಪ್ರಿಯಾಣಿ ತೇನ ಶಕ್ರಃ ಕರ್ಮಣಾ ಶ್ರೈಷ್ಠ್ಯಮಾಪ।
05029012c ಸತ್ಯಂ ಧರ್ಮಂ ಪಾಲಯನ್ನಪ್ರಮತ್ತೋ ದಮಂ ತಿತಿಕ್ಷಾಂ ಸಮತಾಂ ಪ್ರಿಯಂ ಚ।।
05029012e ಏತಾನಿ ಸರ್ವಾಣ್ಯುಪಸೇವಮಾನೋ ದೇವರಾಜ್ಯಂ ಮಘವಾನ್ಪ್ರಾಪ ಮುಖ್ಯಂ।।

ಸುಖವನ್ನೂ ಮನಸ್ಸಿನ ಆಸೆಗಳನ್ನೂ ತೊರೆದು ಶಕ್ರನು ಕರ್ಮಗಳಿಂದ ಶ್ರೇಷ್ಠತ್ವವನ್ನು ಪಡೆದನು. ಅಪ್ರಮತ್ತನಾಗಿದ್ದುಕೊಂಡು ಸತ್ಯ ಧರ್ಮಗಳನ್ನು ಪಾಲಿಸುತ್ತಾ, ದಮ, ತಾಳ್ಮೆ, ಸಮತೆ ಮತ್ತು ಪ್ರೀತಿ ಈ ಏಲ್ಲ ಗುಣಗಳನ್ನೂ ಅನುಸರಿಸಿ ಮಘವಾನನು ದೇವರಾಜ್ಯದ ಮುಖಂಡತ್ವವನ್ನು ಪಡೆದನು.

05029013a ಬೃಹಸ್ಪತಿರ್ಬ್ರಹ್ಮಚರ್ಯಂ ಚಚಾರ ಸಮಾಹಿತಃ ಸಂಶಿತಾತ್ಮಾ ಯಥಾವತ್।
05029013c ಹಿತ್ವಾ ಸುಖಂ ಪ್ರತಿರುಧ್ಯೇಂದ್ರಿಯಾಣಿ ತೇನ ದೇವಾನಾಮಗಮದ್ಗೌರವಂ ಸಃ।।

ಬೃಹಸ್ಪತಿಯು ಸಮಾಹಿತನಾಗಿ, ಸಂಶಿತಾತ್ಮನಾಗಿ ಯಥಾವತ್ತಾಗಿ ಬ್ರಹ್ಮಚರ್ಯದಲ್ಲಿ ನಡೆಯುತ್ತಾನೆ. ಸುಖವನ್ನು ತೊರೆದು, ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವನು ದೇವತೆಗಳ ಗುರುಪದವಿಯನ್ನು ಪಡೆದನು.

05029014a ನಕ್ಷತ್ರಾಣಿ ಕರ್ಮಣಾಮುತ್ರ ಭಾಂತಿ ರುದ್ರಾದಿತ್ಯಾ ವಸವೋಽಥಾಪಿ ವಿಶ್ವೇ।
05029014c ಯಮೋ ರಾಜಾ ವೈಶ್ರವಣಃ ಕುಬೇರೋ ಗಂಧರ್ವಯಕ್ಷಾಪ್ಸರಸಶ್ಚ ಶುಭ್ರಾಃ।।
05029014e ಬ್ರಹ್ಮಚರ್ಯಂ ವೇದವಿದ್ಯಾಃ ಕ್ರಿಯಾಶ್ಚ ನಿಷೇವಮಾಣಾ ಮುನಯೋಽಮುತ್ರ ಭಾಂತಿ।।

ತಮ್ಮ ಕರ್ಮಗಳಿಂದಲೇ ನಕ್ಷತ್ರಗಳು ಹೊಳೆಯುತ್ತವೆ; ಹಾಗೆಯೇ ರುದ್ರ, ಆದಿತ್ಯ, ವಸುಗಳು ಮತ್ತು ವಿಶ್ವೇದೇವರು, ಯಮರಾಜ, ವೈಶ್ರವಣ ಕುಬೇರ, ಗಂಧರ್ವ-ಯಕ್ಷರು ಮತ್ತು ಶುಭ್ರ ಅಪ್ಸರೆಯರು. ಬ್ರಹ್ಮಚರ್ಯೆ, ವೇದವಿದ್ಯೆ ಮತ್ತು ಕ್ರಿಯೆಗಳಿಂದಲೇ ಮುನಿಗಳು ಆ ಲೋಕದಲ್ಲಿ ಹೊಳೆಯುತ್ತಾರೆ.

05029015a ಜಾನನ್ನಿಮಂ ಸರ್ವಲೋಕಸ್ಯ ಧರ್ಮಂ ಬ್ರಾಹ್ಮಣಾನಾಂ ಕ್ಷತ್ರಿಯಾಣಾಂ ವಿಶಾಂ ಚ।
05029015c ಸ ಕಸ್ಮಾತ್ತ್ವಂ ಜಾನತಾಂ ಜ್ಞಾನವಾನ್ಸನ್ ವ್ಯಾಯಚ್ಚಸೇ ಸಂಜಯ ಕೌರವಾರ್ಥೇ।।

ಸಂಜಯ! ಇದೇ ಸರ್ವಲೋಕದ - ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ - ಧರ್ಮವೆಂದು ತಿಳಿದೂ, ತಿಳಿದವರ ತಿಳುವಳಿಕೆಯನ್ನು ತಿಳಿದೂ ನೀನು ಏಕೆ ಕೌರವನನ್ನು ಅರ್ಥಮಾಡಿಕೊಳ್ಳಲು ಶ್ರಮಿಸುತ್ತಿರುವೆ?

05029016a ಆಮ್ನಾಯೇಷು ನಿತ್ಯಸಮ್ಯೋಗಮಸ್ಯ ತಥಾಶ್ವಮೇಧೇ ರಾಜಸೂಯೇ ಚ ವಿದ್ಧಿ।
05029016c ಸಮ್ಯುಜ್ಯತೇ ಧನುಷಾ ವರ್ಮಣಾ ಚ ಹಸ್ತತ್ರಾಣೈ ರಥಶಸ್ತ್ರೈಶ್ಚ ಭೂಯಃ।।

ವೇದಗಳಲ್ಲಿ ಅವನಿಗೆ ನಿತ್ಯವೂ ಮನಸ್ಸಿರುವುದನ್ನು ತಿಳಿದುಕೋ! ಹಾಗೆಯೇ ಅವನಿಗೆ ಅಶ್ವಮೇಧ-ರಾಜಸೂಯಗಳಲ್ಲಿ ಆಸಕ್ತಿಯಿದೆ. ಧನುಸ್ಸು ಕವಚಗಳಲ್ಲಿಯೂ, ಹಸ್ತತ್ರಾಣ, ರಥಗಳು ಮತ್ತು ಅಸ್ತ್ರಗಳಲ್ಲಿಯೂ ಆಸಕ್ತಿಯನ್ನಿಟ್ಟಿದ್ದಾನೆ.

05029017a ತೇ ಚೇದಿಮೇ ಕೌರವಾಣಾಮುಪಾಯಂ ಅಧಿಗಚ್ಚೇಯುರವಧೇನೈವ ಪಾರ್ಥಾಃ।
05029017c ಧರ್ಮತ್ರಾಣಂ ಪುಣ್ಯಮೇಷಾಂ ಕೃತಂ ಸ್ಯಾದ್ ಆರ್ಯೇ ವೃತ್ತೇ ಭೀಮಸೇನಂ ನಿಗೃಹ್ಯ।।

ಕೌರವರನ್ನು ನಾಶಗೊಳಿಸದೇ ತಮ್ಮ ಕರ್ಮದ ದಾರಿಯನ್ನು ಪಾರ್ಥರು ಕಂಡರೆ ಅವರು ಧರ್ಮವನ್ನು ಉಳಿಸುವ ಆ ಪುಣ್ಯಕಾರ್ಯವನ್ನು ಮಾಡುತ್ತಾರೆ. ಆಗ ಭೀಮಸೇನನನ್ನು ಪಳಗಿಸಿ ಆರ್ಯನಂತೆ ನಡೆಯುವ ಹಾಗೆ ಮಾಡುತ್ತಾರೆ.

05029018a ತೇ ಚೇತ್ಪಿತ್ರ್ಯೇ ಕರ್ಮಣಿ ವರ್ತಮಾನಾ ಆಪದ್ಯೇರನ್ದಿಷ್ಟವಶೇನ ಮೃತ್ಯುಂ।
05029018c ಯಥಾಶಕ್ತ್ಯಾ ಪೂರಯಂತಃ ಸ್ವಕರ್ಮ ತದಪ್ಯೇಷಾಂ ನಿಧನಂ ಸ್ಯಾತ್ಪ್ರಶಸ್ತಂ।।

ಆದರೆ ಅವರ ಪಿತೃಗಳಂತೆ ಮಾಡಿ ನಡೆದುಕೊಂಡು ವಿಧಿವಶದಿಂದ ಮೃತ್ಯುವನ್ನು ಪಡೆದರೂ, ತಮ್ಮ ಕರ್ಮವನ್ನು ಅವರು ಯಥಾವತ್ತಾಗಿ ಪೂರೈಸಲು ತೊಡಗಿದುದರಿಂದ ಅದರಲ್ಲಿ ಅವರ ನಿಧನವಾದರೂ ಅದು ಪ್ರಶಸ್ತವೆನಿಸುತ್ತದೆ.

05029019a ಉತಾಹೋ ತ್ವಂ ಮನ್ಯಸೇ ಸರ್ವಮೇವ ರಾಜ್ಞಾಂ ಯುದ್ಧೇ ವರ್ತತೇ ಧರ್ಮತಂತ್ರಂ।
05029019c ಅಯುದ್ಧೇ ವಾ ವರ್ತತೇ ಧರ್ಮತಂತ್ರಂ ತಥೈವ ತೇ ವಾಚಮಿಮಾಂ ಶೃಣೋಮಿ।।

ನಿನಗೆ ಎಲ್ಲವೂ ತಿಳಿದಿದೆಯೆಂದು ಅಭಿಪ್ರಾಯ ಪಡುತ್ತಿರುವೆಯಾದುದರಿಂದ ಈ ಪ್ರಶ್ನೆಗೆ ಉತ್ತರವಾಗಿ ನಿನ್ನ ಮಾತನ್ನು ನಾನು ಕೇಳುತ್ತೇನೆ. ಹೇಳು! ಧರ್ಮವು ರಾಜನಿಗೆ ಯುದ್ಧಮಾಡಲು ಹೇಳುತ್ತದೆಯೋ ಅಥವಾ ಧರ್ಮವು ರಾಜನಿಗೆ ಯುದ್ಧಮಾಡಬಾರದು ಎಂದು ಹೇಳುತ್ತದೆಯೋ?

05029020a ಚಾತುರ್ವರ್ಣ್ಯಸ್ಯ ಪ್ರಥಮಂ ವಿಭಾಗಂ ಅವೇಕ್ಷ್ಯ ತ್ವಂ ಸಂಜಯ ಸ್ವಂ ಚ ಕರ್ಮ।
05029020c ನಿಶಮ್ಯಾಥೋ ಪಾಂಡವಾನಾಂ ಸ್ವಕರ್ಮ ಪ್ರಶಂಸ ವಾ ನಿಂದ ವಾ ಯಾ ಮತಿಸ್ತೇ।।

ಸಂಜಯ! ಮೊದಲು ನೀನು ನಾಲ್ಕು ವರ್ಣಗಳ ವಿಭಾಗವನ್ನೂ ಪ್ರತಿಯೊಂದಕ್ಕಿರುವ ಕರ್ಮಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ನಂತರ ಪಾಂಡವರ ಸ್ವಕರ್ಮವೇನೆಂದು ಕೇಳಿ ನಿನಗಿಷ್ಟ ಬಂದಂತೆ ಅವರನ್ನು ಪ್ರಶಂಸಿಸಬಹುದು ಅಥವಾ ನಿಂದಿಸಬಹುದು.

05029021a ಅಧೀಯೀತ ಬ್ರಾಹ್ಮಣೋಽಥೋ ಯಜೇತ ದದ್ಯಾದಿಯಾತ್ತೀರ್ಥಮುಖ್ಯಾನಿ ಚೈವ।
05029021c ಅಧ್ಯಾಪಯೇದ್ಯಾಜಯೇಚ್ಚಾಪಿ ಯಾಜ್ಯಾನ್ ಪ್ರತಿಗ್ರಹಾನ್ವಾ ವಿದಿತಾನ್ಪ್ರತೀಚ್ಚೇತ್।।

ಬ್ರಾಹ್ಮಣನು ಅಧ್ಯಯನ ಮಾಡಬೇಕು, ಯಾಜಿಸಬೇಕು, ದಾನಮಾಡಬೇಕು, ಮುಖ್ಯ ತೀರ್ಥಗಳಿಗೆ ಹೋಗಬೇಕು, ಅರ್ಹರಾದವರಿಗೆ ಕಲಿಸಬೇಕು, ಪುರೋಹಿತನಾಗಿರಬೇಕು, ಮತ್ತು ತನಗೆ ತಿಳಿದಿರುವ ದಾನಗಳನ್ನು ಸ್ವೀಕರಿಸಬೇಕು.

05029022a ತಥಾ ರಾಜನ್ಯೋ ರಕ್ಷಣಂ ವೈ ಪ್ರಜಾನಾಂ ಕೃತ್ವಾ ಧರ್ಮೇಣಾಪ್ರಮತ್ತೋಽಥ ದತ್ತ್ವಾ।
05029022c ಯಜ್ಞೇರಿಷ್ಟ್ವಾ ಸರ್ವವೇದಾನಧೀತ್ಯ ದಾರಾನ್ಕೃತ್ವಾ ಪುಣ್ಯಕೃದಾವಸೇದ್ಗೃಹಾನ್।।

ಹಾಗೆಯೇ ರಾಜರು ಧರ್ಮದಿಂದ ಪ್ರಜೆಗಳ ರಕ್ಷಣೆಯನ್ನು ಮಾಡಬೇಕು, ದಾನಮಾಡಿ ಯಜ್ಞ-ಇಷ್ಟಿಗಳನ್ನು ಕೈಗೊಳ್ಳಬೇಕು, ಸರ್ವ ವೇದಗಳನ್ನು ತಿಳಿದಿರಬೇಕು, ಮದುವೆಯಾಗಿ ಪುಣ್ಯಕರ ಗೃಹಸ್ಥನಾಗಿರಬೇಕು.

05029023a ವೈಶ್ಯೋಽಧೀತ್ಯ ಕೃಷಿಗೋರಕ್ಷಪಣ್ಯೈಃ ವಿತ್ತಂ ಚಿನ್ವನ್ಪಾಲಯನ್ನಪ್ರಮತ್ತಃ।
05029023c ಪ್ರಿಯಂ ಕುರ್ವನ್ಬ್ರಾಹ್ಮಣಕ್ಷತ್ರಿಯಾಣಾಂ ಧರ್ಮಶೀಲಃ ಪುಣ್ಯಕೃದಾವಸೇದ್ಗೃಹಾಽನ್।

ವೈಶ್ಯನು ಅಧ್ಯಯನದಲ್ಲಿ ತೊಡಗಬೇಕು; ಅಪ್ರಮತ್ತನಾಗಿ ಕೃಷಿ-ಗೋರಕ್ಷಣೆಗಳ ಮೂಲಕ ವಿತ್ತವನ್ನು ಸಂಪಾದಿಸಬೇಕು. ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಪ್ರಿಯವಾದುದನ್ನು ಮಾಡಿಕೊಂಡು, ಧರ್ಮಶೀಲನಾಗಿ, ಗೃಹಸ್ಥನಾಗಿ ಪುಣ್ಯಕರ್ಮಗಳನ್ನು ಮಾಡುತ್ತಿರಬೇಕು.

05029024a ಪರಿಚರ್ಯಾ ವಂದನಂ ಬ್ರಾಹ್ಮಣಾನಾಂ ನಾಧೀಯೀತ ಪ್ರತಿಷಿದ್ಧೋಽಸ್ಯ ಯಜ್ಞಾಃ।
05029024c ನಿತ್ಯೋತ್ಥಿತೋ ಭೂತಯೇಽತಂದ್ರಿತಃ ಸ್ಯಾದ್ ಏಷ ಸ್ಮೃತಃ ಶೂದ್ರಧರ್ಮಃ ಪುರಾಣಃ।।

ಪುರಾಣಗಳಲ್ಲಿ ಹೇಳಿರುವ ಶೂದ್ರಧರ್ಮವು ಇವು: ಬ್ರಾಹ್ಮಣರನ್ನು ವಂದಿಸಿ ಅವರ ಪರಿಚರ್ಯ ಮಾಡುವುದು. ಇವರಿಗೆ ಯಜ್ಞಗಳು ಅಧ್ಯಯನ ಎರಡೂ ನಿಷಿದ್ಧ. ಆಯಾಸಗೊಳ್ಳದೇ ನಿತ್ಯವೂ ತನ್ನ ಏಳಿಗೆಯಲ್ಲಿ ತೊಡಗಿರಬೇಕು.

05029025a ಏತಾನ್ರಾಜಾ ಪಾಲಯನ್ನಪ್ರಮತ್ತೋ ನಿಯೋಜಯನ್ಸರ್ವವರ್ಣಾನ್ಸ್ವಧರ್ಮೇ।
05029025c ಅಕಾಮಾತ್ಮಾ ಸಮವೃತ್ತಿಃ ಪ್ರಜಾಸು ನಾಧಾರ್ಮಿಕಾನನುರುಧ್ಯೇತ ಕಾಮಾನ್।।

ಇವರೆಲ್ಲರನ್ನೂ ರಾಜನು ಅಪ್ರಮತ್ತನಾಗಿ, ಎಲ್ಲ ವರ್ಣದವರನ್ನೂ ತಮ್ಮ ತಮ್ಮ ಧರ್ಮಗಳಲ್ಲಿ ತೊಡಗಿಸಿಕೊಂಡು ಪಾಲಿಸಬೇಕು. ಕಾಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬಾರದು. ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡಿಕೊಳ್ಳಬೇಕು. ಅಧಾರ್ಮಿಕ ಆಸೆಗಳ ಹಿಂದೆ ಹೋಗಬಾರದು.

05029026a ಶ್ರೇಯಾಂಸ್ತಸ್ಮಾದ್ಯದಿ ವಿದ್ಯೇತ ಕಶ್ಚಿದ್ ಅಭಿಜ್ಞಾತಃ ಸರ್ವಧರ್ಮೋಪಪನ್ನಃ।
05029026c ಸ ತಂ ದುಷ್ಟಮನುಶಿಷ್ಯಾತ್ಪ್ರಜಾನನ್ ನ ಚೇದ್ಗೃಧ್ಯೇದಿತಿ ತಸ್ಮಿನ್ನ ಸಾಧು।।

ತನಗಿಂತಲೂ ಪ್ರಶಂಸನೀಯನಾದ, ಪ್ರಸಿದ್ಧನಾದ, ಸರ್ವಧರ್ಮೋಪಪನ್ನನಾದ ಪುರುಷನು ಯಾರಾದರೂ ಇದ್ದರೆ, ಅದನ್ನು ತಿಳಿದು ದುಷ್ಟರನ್ನು ಅವನು ಶಿಕ್ಷಿಸಬೇಕು. ಆದರೆ ಅವನ ರಾಜ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸಬಾರದು. ಅದು ಸರಿಯಲ್ಲ.

05029027a ಯದಾ ಗೃಧ್ಯೇತ್ಪರಭೂಮಿಂ ನೃಶಂಸೋ ವಿಧಿಪ್ರಕೋಪಾದ್ಬಲಮಾದದಾನಃ।
05029027c ತತೋ ರಾಜ್ಞಾಂ ಭವಿತಾ ಯುದ್ಧಮೇತತ್ ತತ್ರ ಜಾತಂ ವರ್ಮ ಶಸ್ತ್ರಂ ಧನುಶ್ಚ।।
05029027e ಇಂದ್ರೇಣೇದಂ ದಸ್ಯುವಧಾಯ ಕರ್ಮ ಉತ್ಪಾದಿತಂ ವರ್ಮ ಶಸ್ತ್ರಂ ಧನುಶ್ಚ।।

ಇನ್ನೊಬ್ಬರ ಭೂಮಿಯನ್ನು ಕ್ರೂರವಾಗಿ ಕಸಿದುಕೊಂಡು, ವಿಧಿಯನ್ನು ಪ್ರಕೋಪಗೊಳಿಸಿ ಬಲವನ್ನು ಕಸಿದುಕೊಂಡರೆ, ಇದು ರಾಜರ ಮಧ್ಯೆ ನಡೆಯುವ ಯುದ್ಧಕ್ಕೆ ಕಾರಣವಾಗುತ್ತದೆ. ಯಾಕೆಂದರೆ, ದಸ್ಯುಗಳ ವಧೆಗಾಗಿಯೇ ಇಂದ್ರನು ಈ ಕವಚ-ಶಸ್ತ್ರ-ಧನುಸ್ಸುಗಳನ್ನು ಸೃಷ್ಟಿಸಿದನು.

05029028a ಸ್ತೇನೋ ಹರೇದ್ಯತ್ರ ಧನಂ ಹ್ಯದೃಷ್ಟಃ ಪ್ರಸಹ್ಯ ವಾ ಯತ್ರ ಹರೇತ ದೃಷ್ಟಃ।
05029028c ಉಭೌ ಗರ್ಹ್ಯೌ ಭವತಃ ಸಂಜಯೈತೌ ಕಿಂ ವೈ ಪೃಥಕ್ತ್ವಂ ಧೃತರಾಷ್ಟ್ರಸ್ಯ ಪುತ್ರೇ।।
05029028e ಯೋಽಯಂ ಲೋಭಾನ್ಮನ್ಯತೇ ಧರ್ಮಮೇತಂ ಯಮಿಚ್ಚತೇ ಮನ್ಯುವಶಾನುಗಾಮೀ।।

ಸಂಜಯ! ಯಾರಿಗೂ ಕಾಣದೇ ಪರರ ಧನವನ್ನು ಕದಿಯುವವನು ಮತ್ತು ಎಲ್ಲರಿಗೂ ಕಾಣುವಂತೆ ಕಸಿದುಕೊಳ್ಳುವವನು ಇಬ್ಬರೂ ನಿಂದನೀಯರು. ಧೃತರಾಷ್ಟ್ರನ ಪುತ್ರರು ಇವರಿಗಿಂತ ಹೇಗೆ ಭಿನ್ನರಾಗಿದ್ದಾರೆ? ಇವರು ಲೋಭವೇ ಧರ್ಮವೆಂದು ತಿಳಿದಿದ್ದಾರೆ. ಕೋಪದ ವಶಕ್ಕೆ ಬಂದು ಅದನ್ನೇ ಮಾಡಲು ಬಯಸುತ್ತಾರೆ.

05029029a ಭಾಗಃ ಪುನಃ ಪಾಂಡವಾನಾಂ ನಿವಿಷ್ಟಸ್ ತಂ ನೋಽಕಸ್ಮಾದಾದದೀರನ್ಪರೇ ವೈ।
05029029c ಅಸ್ಮಿನ್ಪದೇ ಯುಧ್ಯತಾಂ ನೋ ವಧೋಽಪಿ ಶ್ಲಾಘ್ಯಃ ಪಿತ್ರ್ಯಃ ಪರರಾಜ್ಯಾದ್ವಿಶಿಷ್ಟಃ।
05029029e ಏತಾನ್ಧರ್ಮಾನ್ಕೌರವಾಣಾಂ ಪುರಾಣಾನ್ ಆಚಕ್ಷೀಥಾಃ ಸಂಜಯ ರಾಜ್ಯಮಧ್ಯೇ।।

ಪಾಂಡವರ ಪಿತ್ರಾರ್ಜಿತ ಭಾಗವು ನಿರ್ದಿಷ್ಠವಾದುದು. ಇತರರು ಅದನ್ನು ಏಕೆ ನಮ್ಮಿಂದ ಕಸಿದುಕೊಳ್ಳಬೇಕು? ಈ ವಿಷಯದಲ್ಲಿ ನಾವು ಹೋರಾಡಿ ಸತ್ತರೂ ಶ್ಲಾಘನೀಯ. ಏಕೆಂದರೆ ಪರರ ರಾಜ್ಯಕ್ಕಿಂತ ಪಿತೃರಾಜ್ಯವು ವಿಶಿಷ್ಟವಾದುದು. ಸಂಜಯ! ಈ ಪುರಾಣ ಧರ್ಮಗಳನ್ನು ರಾಜರ ಮಧ್ಯದಲ್ಲಿ ಕೌರವರಿಗೆ ತೋರಿಸಿಕೊಡು!

05029030a ಯೇ ತೇ ಮಂದಾ ಮೃತ್ಯುವಶಾಭಿಪನ್ನಾಃ ಸಮಾನೀತಾ ಧಾರ್ತರಾಷ್ಟ್ರೇಣ ಮೂಢಾಃ।
05029030c ಇದಂ ಪುನಃ ಕರ್ಮ ಪಾಪೀಯ ಏವ ಸಭಾಮಧ್ಯೇ ಪಶ್ಯ ವೃತ್ತಂ ಕುರೂಣಾಂ।।

ಮೂಢ ಧಾರ್ತರಾಷ್ಟ್ರನ ಜೊತೆ ಸೇರಿರುವವರು ಮೂಢಾತ್ಮರು ಮತ್ತು ಮೃತ್ಯುವಿನ ವಶಕ್ಕೆ ಸಿಲುಕಿದ್ದಾರೆ. ಮತ್ತೊಮ್ಮೆ ಸಭಾಮಧ್ಯದಲ್ಲಿ ಕುರುಗಳ ಪಾಪ ಕರ್ಮವನ್ನೂ ನಡತೆಯನ್ನೂ ನೋಡು.

05029031a ಪ್ರಿಯಾಂ ಭಾರ್ಯಾಂ ದ್ರೌಪದೀಂ ಪಾಂಡವಾನಾಂ ಯಶಸ್ವಿನೀಂ ಶೀಲವೃತ್ತೋಪಪನ್ನಾಂ।
05029031c ಯದುಪೇಕ್ಷಂತ ಕುರವೋ ಭೀಷ್ಮಮುಖ್ಯಾಃ ಕಾಮಾನುಗೇನೋಪರುದ್ಧಾಂ ರುದಂತೀಂ।।

ಪಾಂಡವರ ಪ್ರಿಯ ಭಾರ್ಯೆ ಯಶಸ್ವಿನೀ ಶೀಲನಡತೆಯಿಂದ ಲಕ್ಷಿತಳಾದ, ರೋದಿಸುತ್ತಿರುವ ದ್ರೌಪದಿಯನ್ನು ಆ ಕಾಮಾನುಗನು ಎಳೆದು ತರುವಾಗ ಭೀಷ್ಮ ಮತ್ತು ಇತರ ಕುರು ಮುಖ್ಯರು ಯಾರೂ ವಿರೋಧಿಸಲಿಲ್ಲ.

05029032a ತಂ ಚೇತ್ತದಾ ತೇ ಸಕುಮಾರವೃದ್ಧಾ ಅವಾರಯಿಷ್ಯನ್ಕುರವಃ ಸಮೇತಾಃ।
05029032c ಮಮ ಪ್ರಿಯಂ ಧೃತರಾಷ್ಟ್ರೋಽಕರಿಷ್ಯತ್ ಪುತ್ರಾಣಾಂ ಚ ಕೃತಮಸ್ಯಾಭವಿಷ್ಯತ್।।

ಅಲ್ಲಿ ಸೇರಿದ್ದ ಕುಮಾರ ವೃದ್ಧ ಕುರುಗಳೆಲ್ಲರೂ ಅವನನ್ನು ತಡೆದಿದ್ದರೆ ಧೃತರಾಷ್ಟ್ರನು ನನಗೆ ಪ್ರಿಯವಾದುದನ್ನು ಮಾಡಿದಂತೆ, ತನ್ನ ಪುತ್ರರಿಗೂ ಒಳ್ಳೆಯದನ್ನು ಮಾಡಿದಂತೆ ಆಗುತ್ತಿತ್ತು.

05029033a ದುಃಶಾಸನಃ ಪ್ರಾತಿಲೋಮ್ಯಾನ್ನಿನಾಯ ಸಭಾಮಧ್ಯೇ ಶ್ವಶುರಾಣಾಂ ಚ ಕೃಷ್ಣಾಂ।
05029033c ಸಾ ತತ್ರ ನೀತಾ ಕರುಣಾನ್ಯವೋಚನ್ ನಾನ್ಯಂ ಕ್ಷತ್ತುರ್ನಾಥಮದೃಷ್ಟ ಕಂ ಚಿತ್।।

ಎಲ್ಲ ಧರ್ಮಗಳನ್ನೂ ತುಳಿದು ದುಃಶಾಸನನು ಕೃಷ್ಣೆಯನ್ನು ಅವಳ ಮಾವಂದಿರಿರುವ ಸಭಾಮಧ್ಯಕ್ಕೆ ಎಳೆದು ತಂದನು. ಅಲ್ಲಿಗೆ ಎಳೆದು ತರಲ್ಪಟ್ಟಾಗ ಅವಳು ಕರುಣೆಯಿಂದ ಮಾತನಾಡಲು ಕ್ಷತ್ತ ವಿದುರನ ಹೊರತಾಗಿ ಬೇರೆ ಯಾವ ರಕ್ಷಕನನ್ನೂ ಅವಳು ಕಾಣಲಿಲ್ಲ.

05029034a ಕಾರ್ಪಣ್ಯಾದೇವ ಸಹಿತಾಸ್ತತ್ರ ರಾಜ್ಞೋ ನಾಶಕ್ನುವನ್ಪ್ರತಿವಕ್ತುಂ ಸಭಾಯಾಂ।
05029034c ಏಕಃ ಕ್ಷತ್ತಾ ಧರ್ಮ್ಯಮರ್ಥಂ ಬ್ರುವಾಣೋ ಧರ್ಮಂ ಬುದ್ಧ್ವಾ ಪ್ರತ್ಯುವಾಚಾಲ್ಪಬುದ್ಧಿಂ।।

ಸಭೆಯಲ್ಲಿದ್ದ ರಾಜರೆಲ್ಲರೂ ಕಾರ್ಪಣ್ಯದಿಂದ ಕೂಡಿದವರಾಗಿ ಉತ್ತರಿಸಲು ಅಶಕ್ಯರಾಗಿದ್ದರು. ಧರ್ಮಗಳ ಅರ್ಥವನ್ನು ಹೇಳಬಲ್ಲ ಕ್ಷತ್ತನೊಬ್ಬನೇ ಆ ಅಲ್ಪಬುದ್ಧಿಗೆ ಧರ್ಮವನ್ನು ತಿಳಿಸಿ ಹೇಳಿದನು.

05029035a ಅನುಕ್ತ್ವಾ ತ್ವಂ ಧರ್ಮಮೇವಂ ಸಭಾಯಾಂ ಅಥೇಚ್ಚಸೇ ಪಾಂಡವಸ್ಯೋಪದೇಷ್ಟುಂ।
05029035c ಕೃಷ್ಣಾ ತ್ವೇತತ್ಕರ್ಮ ಚಕಾರ ಶುದ್ಧಂ ಸುದುಷ್ಕರಂ ತದ್ಧಿ ಸಭಾಂ ಸಮೇತ್ಯ।
05029035e ಯೇನ ಕೃಚ್ಚ್ರಾತ್ಪಾಂಡವಾನುಜ್ಜಹಾರ ತಥಾತ್ಮಾನಂ ನೌರಿವ ಸಾಗರೌಘಾತ್।।

ನೀನೂ ಕೂಡ ಆ ಸಭೆಯಲ್ಲಿ ಧರ್ಮವೇನೆಂದು ಹೇಳಲಿಲ್ಲ. ಈಗ ಪಾಂಡವರಿಗೆ ಉಪದೇಶಿಸಲು ಬಯಸುತ್ತಿದ್ದೀಯಾ? ಆದರೆ ಕೃಷ್ಣೆಯೇ ಆ ಸಭೆಯಲ್ಲಿ ಸರಿಯಾಗಿದ್ದುಕೊಂಡು ಶುದ್ಧ ಕರ್ಮವನ್ನು ಮಾಡಿದಳು. ಸಾಗರದಲ್ಲಿ ಸಿಲುಕಿಕೊಂಡ ದೋಣಿಯಂತಿದ್ದ ಪಾಂಡವರನ್ನೂ ತನ್ನನ್ನೂ ಕಷ್ಟದಿಂದ ಪಾರುಮಾಡಿದಳು.

05029036a ಯತ್ರಾಬ್ರವೀತ್ಸೂತಪುತ್ರಃ ಸಭಾಯಾಂ ಕೃಷ್ಣಾಂ ಸ್ಥಿತಾಂ ಶ್ವಶುರಾಣಾಂ ಸಮೀಪೇ।
05029036c ನ ತೇ ಗತಿರ್ವಿದ್ಯತೇ ಯಾಜ್ಞಾಸೇನಿ ಪ್ರಪದ್ಯೇದಾನೀಂ ಧಾರ್ತರಾಷ್ಟ್ರಸ್ಯ ವೇಶ್ಮ।
05029036e ಪರಾಜಿತಾಸ್ತೇ ಪತಯೋ ನ ಸಂತಿ ಪತಿಂ ಚಾನ್ಯಂ ಭಾಮಿನಿ ತ್ವಂ ವೃಣೀಷ್ವ।।

ಆಗ ಆ ಸಭೆಯಲ್ಲಿ ಕೃಷ್ಣೆಯು ತನ್ನ ಮಾವಂದಿರ ಸಮೀಪ ನಿಂತಿರುವಾಗ ಸೂತಪುತ್ರನು ಹೇಳಿದನು: “ಯಾಜ್ಞಸೇನೀ! ನಿನಗೆ ಬೇರೆ ಯಾವ ಗತಿಯೂ ಇಲ್ಲವಾಗಿದೆ. ಧಾರ್ತರಾಷ್ಟ್ರನ ಮನೆಯನ್ನು ಸೇರು. ಪರಾಜಿತರಾದ ನಿನ್ನ ಪತಿಯಂದಿರು ಇನ್ನಿಲ್ಲ. ಭಾಮಿನೀ! ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ!”

05029037a ಯೋ ಬೀಭತ್ಸೋರ್ಹೃದಯೇ ಪ್ರೌಢ ಆಸೀದ್ ಅಸ್ಥಿಪ್ರಚ್ಚಿನ್ಮರ್ಮಘಾತೀ ಸುಘೋರಃ।
05029037c ಕರ್ಣಾಚ್ಚರೋ ವಾಮ್ಮಯಸ್ತಿಗ್ಮತೇಜಾಃ ಪ್ರತಿಷ್ಠಿತೋ ಹೃದಯೇ ಫಲ್ಗುನಸ್ಯ।।

ಈ ಭಯಂಕರವಾದ, ಹೃದಯವನ್ನು ಖಡ್ಗದಂತೆ ಕೊರೆಯುವ, ಮರ್ಮವನ್ನು ಘಾತಿಗೊಳಿಸುವ, ಸುಡುವ, ಸುಘೋರವಾದ ಕರ್ಣನ ಮಾತುಗಳು ಅತಿ ತೇಜಸ್ಸುಳ್ಳ ಬಾಣಗಳಂತೆ ಫಲ್ಗುನನ ಹೃದಯದಲ್ಲಿ ನಾಟಿ ನಿಂತಿವೆ.

05029038a ಕೃಷ್ಣಾಜಿನಾನಿ ಪರಿಧಿತ್ಸಮಾನಾನ್ ದುಃಶಾಸನಃ ಕಟುಕಾನ್ಯಭ್ಯಭಾಷತ್।
05029038c ಏತೇ ಸರ್ವೇ ಷಂಢತಿಲಾ ವಿನಷ್ಟಾಃ ಕ್ಷಯಂ ಗತಾ ನರಕಂ ದೀರ್ಘಕಾಲಂ।।

ಅವರು ಕೃಷ್ಣಾಜಿನಗಳನ್ನು ತೊಡುತ್ತಿರುವಾಗ ದುಃಶಾಸನನು ಕಟುಕಾದ ಈ ಮಾತುಗಳನ್ನಾಡಿದನು: “ಇವರೆಲ್ಲರೂ ಪೊಳ್ಳು ಎಳ್ಳಿನಂತೆ ವಿನಷ್ಟರಾಗಿದ್ದಾರೆ ಮತ್ತು ಕ್ಷಯರಾಗಿ ದೀರ್ಘಕಾಲದ ನರಕಕ್ಕೆ ಹೋಗಿದ್ದಾರೆ.”

05029039a ಗಾಂಧಾರರಾಜಃ ಶಕುನಿರ್ನಿಕೃತ್ಯಾ ಯದಬ್ರವೀದ್ದ್ಯೂತಕಾಲೇ ಸ ಪಾರ್ಥಾನ್।
05029039c ಪರಾಜಿತೋ ನಕುಲಃ ಕಿಂ ತವಾಸ್ತಿ ಕೃಷ್ಣಯಾ ತ್ವಂ ದೀವ್ಯ ವೈ ಯಾಜ್ಞಾಸೇನ್ಯಾ।।

ದ್ಯೂತಕಾಲದಲ್ಲಿ ಗಾಂಧಾರರಾಜ ಶಕುನಿಯು ಮೋಸದಿಂದ ಪಾರ್ಥರಿಗೆ ಹೇಳಿದ್ದನು: “ನಕುಲನನ್ನು ಸೋತೆ! ನಿನ್ನಲ್ಲಿ ಇನ್ನೇನಿದೆ? ಈಗ ಕೃಷ್ಣೆ ಯಾಜ್ಞಸೇನಿಯನ್ನು ಪಣವಾಗಿಡು!”

05029040a ಜಾನಾಸಿ ತ್ವಂ ಸಂಜಯ ಸರ್ವಮೇತದ್ ದ್ಯೂತೇಽವಾಚ್ಯಂ ವಾಕ್ಯಮೇವಂ ಯಥೋಕ್ತಂ।
05029040c ಸ್ವಯಂ ತ್ವಹಂ ಪ್ರಾರ್ಥಯೇ ತತ್ರ ಗಂತುಂ ಸಮಾಧಾತುಂ ಕಾರ್ಯಮೇತದ್ವಿಪನ್ನಂ।।

ಸಂಜಯ! ದ್ಯೂತದಲ್ಲಿ ಹೇಳಬಾರದಂತ ಮಾತುಗಳನ್ನಾಡಿದುದೆಲ್ಲವೂ ಆಡಿದಂತೆ ನಿನಗೆ ತಿಳಿದೇ ಇದೆ. ಸ್ವಯಂ ನಾನೇ ಅಲ್ಲಿಗೆ ಹೋಗಿ ಈ ಕಷ್ಟದ ವಿಷಯವನ್ನು, ಕೈತಪ್ಪಿ ಹೋಗುವುದರೊಳಗೆ ಸಮಾಧಾನ ಪಡಿಸಲು ಹೋಗುವವನಿದ್ದೇನೆ.

05029041a ಅಹಾಪಯಿತ್ವಾ ಯದಿ ಪಾಂಡವಾರ್ಥಂ ಶಮಂ ಕುರೂಣಾಮಥ ಚೇಚ್ಚರೇಯಂ।
05029041c ಪುಣ್ಯಂ ಚ ಮೇ ಸ್ಯಾಚ್ಚರಿತಂ ಮಹೋದಯಂ ಮುಚ್ಯೇರಂಶ್ಚ ಕುರವೋ ಮೃತ್ಯುಪಾಶಾತ್।।

ಪಾಂಡವರ ಆಸಕ್ತಿಗೆ ಬಾಧಕವಾಗದಂತೆ ಕುರುಗಳಲ್ಲಿ ಶಾಂತಿಯನ್ನು ತರುವುದರಲ್ಲಿ ಯಶಸ್ವಿಯಾದರೆ ಅದು ಅತ್ಯಂತ ವಿಶೇಷವೂ ಪುಣ್ಯತರವೂ ಆಗುತ್ತದೆ ಮತ್ತು ಕುರುಗಳನ್ನು ಮೃತ್ಯುಪಾಶದಿಂದ ಬಿಡಿಸಿದಂತಾಗುತ್ತದೆ.

05029042a ಅಪಿ ವಾಚಂ ಭಾಷಮಾಣಸ್ಯ ಕಾವ್ಯಾಂ ಧರ್ಮಾರಾಮಾಮರ್ಥವತೀಮಹಿಂಸ್ರಾಂ।
05029042c ಅವೇಕ್ಷೇರನ್ಧಾರ್ತರಾಷ್ಟ್ರಾಃ ಸಮಕ್ಷಂ ಮಾಂ ಚ ಪ್ರಾಪ್ತಂ ಕುರವಃ ಪೂಜಯೇಯುಃ।।

ಆ ವಿವೇಕಯುಕ್ತವಾದ, ಧರ್ಮಯುಕ್ತವಾದ, ಅರ್ಥವತ್ತಾದ, ಅಹಿಂಸೆಯ ಮಾತುಗಳನ್ನು ಧಾರ್ತರಾಷ್ಟ್ರರ ಎದುರು ಮಾತನಾಡುವಾಗ ಕುರುಗಳು ಸ್ವೀಕರಿಸುತ್ತಾರೆ ಮತ್ತು ನನ್ನನ್ನು ನೋಡಿ ಗೌರವಿಸುತ್ತಾರೆ ಎಂದು ಆಶಿಸುತ್ತೇನೆ.

05029043a ಅತೋಽನ್ಯಥಾ ರಥಿನಾ ಫಲ್ಗುನೇನ ಭೀಮೇನ ಚೈವಾಹವದಂಶಿತೇನ।
05029043c ಪರಾಸಿಕ್ತಾನ್ಧಾರ್ತರಾಷ್ಟ್ರಾಂಸ್ತು ವಿದ್ಧಿ ಪ್ರದಹ್ಯಮಾನಾನ್ಕರ್ಮಣಾ ಸ್ವೇನ ಮಂದಾನ್।।

ಇಲ್ಲದಿದ್ದರೆ ರಥದಲ್ಲಿ ಕುಳಿತ ಫಲ್ಗುನ ಮತ್ತು ಭೀಮರು, ಈ ಮೊದಲೇ ತಮ್ಮದೇ ಕರ್ಮಗಳಿಂದ ದಹಿಸಿ ಹೋಗಲ್ಪಡುವ ಮಂದಬುದ್ಧಿಯ ಧಾರ್ತರಾಷ್ಟ್ರರನ್ನು, ಸುಟ್ಟುಹಾಕುತ್ತಾರೆ.

05029044a ಪರಾಜಿತಾನ್ಪಾಂಡವೇಯಾಂಸ್ತು ವಾಚೋ ರೌದ್ರರೂಪಾ ಭಾಷತೇ ಧಾರ್ತರಾಷ್ಟ್ರಃ।
05029044c ಗದಾಹಸ್ತೋ ಭೀಮಸೇನೋಽಪ್ರಮತ್ತೋ ದುರ್ಯೋಧನಂ ಸ್ಮಾರಯಿತ್ವಾ ಹಿ ಕಾಲೇ।।

ಪಾಂಡವೇಯರು ಸೋತಾಗ ಧಾರ್ತರಾಷ್ಟ್ರನು ರೌದ್ರರೂಪದ ಮಾತುಗಳನ್ನಾಡಿದ್ದನು. ಗದೆಯನ್ನು ಹಿಡಿದ ಭೀಮಸೇನನು ಅಪ್ರಮತ್ತನಾಗಿ ಸಮಯ ಬಂದಾಗ ದುರ್ಯೋಧನನಿಗೆ ಅದನ್ನು ನೆನಪಿಸಿ ಕೊಡುತ್ತಾನೆ.

05029045a ಸುಯೋಧನೋ ಮನ್ಯುಮಯೋ ಮಹಾದ್ರುಮಃ ಸ್ಕಂಧಃ ಕರ್ಣಃ ಶಕುನಿಸ್ತಸ್ಯ ಶಾಖಾಃ।
05029045c ದುಃಶಾಸನಃ ಪುಷ್ಪಫಲೇ ಸಮೃದ್ಧೇ ಮೂಲಂ ರಾಜಾ ಧೃತರಾಷ್ಟ್ರೋಽಮನೀಷೀ1।।

ಮನ್ಯುಮಯ ದುರ್ಯೋಧನನು ಮಹಾವೃಕ್ಷ, ಕರ್ಣನು ಅದರ ಕಾಂಡ, ಶಕುನಿಯು ಅದರ ಶಾಖೆಗಳು, ದುಃಶಾಸನನು ಸಮೃದ್ಧವಾದ ಪುಷ್ಪಫಲಗಳು, ರಾಜಾ ಮನೀಷೀ ಧೃತರಾಷ್ಟ್ರನು ಅದರ ಬೇರುಗಳು.

05029046a ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ ಸ್ಕಂಧೋಽರ್ಜುನೋ ಭೀಮಸೇನೋಽಸ್ಯ ಶಾಖಾಃ।
05029046c ಮಾದ್ರೀಪುತ್ರೌ ಪುಷ್ಪಫಲೇ ಸಮೃದ್ಧೇ ಮೂಲಂ ತ್ವಹಂ ಬ್ರಹ್ಮ ಚ ಬ್ರಾಹ್ಮಣಾಶ್ಚ।।

ಧರ್ಮಮಯ ಯುಧಿಷ್ಠಿರನು ಮಹಾವೃಕ್ಷ, ಅರ್ಜುನನು ಅದರ ಕಾಂಡ, ಭೀಮಸೇನನು ಅದರ ಶಾಖೆಗಳು, ಮಾದ್ರೀಪುತ್ರರು ಸಮೃದ್ಧವಾದ ಪುಷ್ಪಫಲಗಳು, ನಾನು, ಬ್ರಹ್ಮ, ಮತ್ತು ಬ್ರಾಹ್ಮಣರು ಅದರ ಬೇರುಗಳು.

05029047a ವನಂ ರಾಜಾ ಧೃತರಾಷ್ಟ್ರಃ ಸಪುತ್ರೋ ವ್ಯಾಘ್ರಾ ವನೇ ಸಂಜಯ ಪಾಂಡವೇಯಾಃ।
05029047c ಮಾ ವನಂ ಚಿಂಧಿ ಸವ್ಯಾಘ್ರಂ ಮಾ ವ್ಯಾಘ್ರಾನ್ನೀನಶೋ ವನಾತ್।।

ಸಂಜಯ! ಪುತ್ರರೊಂದಿಗೆ ರಾಜಾ ಧೃತರಾಷ್ಟ್ರನು ವನ, ಪಾಂಡವೇಯರು ವನದಲ್ಲಿರುವ ಹುಲಿಗಳು. ವ್ಯಾಘ್ರಗಳೊಂದಿಗೆ ವನವನ್ನು ಕಡಿದುರಿಳಿಸಬೇಡ! ವ್ಯಾಘ್ರಗಳನ್ನೂ ವನದಿಂದ ಓಡಿಸಬೇಡ!

05029048a ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಚಿದ್ಯತೇ ವನಂ।
05029048c ತಸ್ಮಾದ್ವ್ಯಾಘ್ರೋ ವನಂ ರಕ್ಷೇದ್ವನಂ ವ್ಯಾಘ್ರಂ ಚ ಪಾಲಯೇತ್।।

ಕಾಡಿಲ್ಲದೇ ವ್ಯಾಘ್ರಗಳು ವಧೆಗೊಳ್ಳುತ್ತವೆ. ವ್ಯಾಘ್ರಗಳಿಲ್ಲದೇ ವನವು ಕಡಿಯಲ್ಪಡುತ್ತದೆ. ಆದುದರಿಂದ ವ್ಯಾಘ್ರಗಳು ವನವನ್ನು ರಕ್ಷಿಸಬೇಕು. ವನವು ವ್ಯಾಘ್ರಗಳನ್ನು ಪಾಲಿಸಬೇಕು.

05029049a ಲತಾಧರ್ಮಾ ಧಾರ್ತರಾಷ್ಟ್ರಾಃ ಶಾಲಾಃ ಸಂಜಯ ಪಾಂಡವಾಃ।
05029049c ನ ಲತಾ ವರ್ಧತೇ ಜಾತು ಅನಾಶ್ರಿತ್ಯ ಮಹಾದ್ರುಮಂ।।

ಸಂಜಯ! ಧಾರ್ತರಾಷ್ಟ್ರರು ಲತೆಗಳಂತಿದ್ದರೆ ಪಾಂಡವರು ಶಾಲವೃಕ್ಷಗಳಂತೆ. ಮಹಾವೃಕ್ಷವನ್ನು ಆಶ್ರಯಿಸದೇ ಲತೆಗಳು ಬೆಳೆಯಲಾರವು.

05029050a ಸ್ಥಿತಾಃ ಶುಶ್ರೂಷಿತುಂ ಪಾರ್ಥಾಃ ಸ್ಥಿತಾ ಯೋದ್ಧುಮರಿಂದಮಾಃ।
05029050c ಯತ್ಕೃತ್ಯಂ ಧೃತರಾಷ್ಟ್ರಸ್ಯ ತತ್ಕರೋತು ನರಾಧಿಪಃ।।

ಪಾರ್ಥರು ಸೇವೆಮಾಡಲೂ ನಿಂತಿದ್ದಾರೆ, ಮತ್ತು ಈ ಅರಿಂದಮರು ಯುದ್ಧಮಾಡಲೂ ನಿಂತಿದ್ದಾರೆ. ನರಾಧಿಪ ಧೃತರಾಷ್ಟ್ರನು ಏನು ಮಾಡಬೇಕೋ ಅದನ್ನು ಮಾಡಲಿ.

05029051a ಸ್ಥಿತಾಃ ಶಮೇ ಮಹಾತ್ಮಾನಃ ಪಾಂಡವಾ ಧರ್ಮಚಾರಿಣಃ।
05029051c ಯೋಧಾಃ ಸಮೃದ್ಧಾಸ್ತದ್ವಿದ್ವನ್ನಾಚಕ್ಷೀಥಾ ಯಥಾತಥಂ।।

ಧರ್ಮಚಾರಿಗಳಾದ ಮಹಾತ್ಮ ಪಾಂಡವರು ಶಾಂತಿಗೆ ಕಾಯುತ್ತಿದ್ದಾರೆ. ಅವರು ಸಮೃದ್ಧ ಯೋಧರೂ ಕೂಡ. ವಿದ್ವನ್! ಇದನ್ನು ಯಥಾವತ್ತಾಗಿ ಅವರಿಗೆ ಹೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಕೃಷ್ಣವಾಕ್ಯೇ ಏಕೋನತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ಇಪ್ಪತ್ತೊಂಭತ್ತನೆಯ ಅಧ್ಯಾಯವು.


  1. ಇದೇ ಶ್ಲೋಕವು ಆದಿಪರ್ವದ ಮೊದಲನೇ ಅಧ್ಯಾಯದಲ್ಲಿಯೂ ಬಂದಿದೆ. ↩︎