028 ಯುಧಿಷ್ಠಿರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 28

ಸಾರ

ತಾನು ನಡೆಯುತ್ತಿರುವ ಮಾರ್ಗವು ಧರ್ಮವೋ ಅಧರ್ಮವೋ ಎಂದು ತಿಳಿಯದೇ ದೂರಬಾರದೆಂದೂ, ಕ್ಷತ್ರಿಯನಾದ ತನಗೆ ಇರುವ ಧರ್ಮಮಾರ್ಗದಲ್ಲಿಯೇ ತಾನು ನಡೆಯುತ್ತಿದ್ದೇನೆಂದೂ, ಕೃಷ್ಣನ ಮಾತನ್ನು ತಾನು ಮೀರುವುದಿಲ್ಲವೆಂದೂ ಯುಧಿಷ್ಠಿರನು ಸಂಜಯನಿಗೆ ಹೇಳಿದುದು (1-14).

05028001 ಯುಧಿಷ್ಠಿರ ಉವಾಚ।
05028001a ಅಸಂಶಯಂ ಸಂಜಯ ಸತ್ಯಮೇತದ್ ಧರ್ಮೋ ವರಃ ಕರ್ಮಣಾಂ ಯತ್ತ್ವಮಾತ್ಥ।
05028001c ಜ್ಞಾತ್ವಾ ತು ಮಾಂ ಸಂಜಯ ಗರ್ಹಯೇಸ್ತ್ವಂ ಯದಿ ಧರ್ಮಂ ಯದ್ಯಧರ್ಮಂ ಚರಾಮಿ।।

ಯುಧಿಷ್ಠಿರನು ಹೇಳಿದನು: “ಸಂಜಯ! ನೀನು ಹೇಳಿದಂತೆ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾದ ಕರ್ಮ. ಅದರಲ್ಲಿ ಸಂಶಯವೇ ಇಲ್ಲ. ಆದರೆ, ಸಂಜಯ! ನಾನು ನಡೆಯುತ್ತಿರುವುದು ಧರ್ಮದಲ್ಲಿಯೋ ಅಥವಾ ಅಧರ್ಮದಲ್ಲಿಯೋ ಎಂದು ತಿಳಿಯದೇ ನೀನು ನನ್ನನ್ನು ದೂರಬಾರದು.

05028002a ಯತ್ರಾಧರ್ಮೋ ಧರ್ಮರೂಪಾಣಿ ಬಿಭ್ರದ್ ಧರ್ಮಃ ಕೃತ್ಸ್ನೋ ದೃಶ್ಯತೇಽಧರ್ಮರೂಪಃ।
05028002c ತಥಾ ಧರ್ಮೋ ಧಾರಯನ್ಧರ್ಮರೂಪಂ ವಿದ್ವಾಂಸಸ್ತಂ ಸಂಪ್ರಪಶ್ಯಂತಿ ಬುದ್ಧ್ಯಾ।।

ಅಧರ್ಮವು ಧರ್ಮರೂಪಗಳಲ್ಲಿ ಕಾಣುವಾಗ ಅಥವಾ ಧರ್ಮವು ಅಧರ್ಮರೂಪದಲ್ಲಿ ಕಾಣುವಾಗ ಧರ್ಮವು ಧರ್ಮದ ರೂಪವನ್ನೇ ಧರಿಸಿದೆಯೋ ಇಲ್ಲವೋ ಎನ್ನುವುದನ್ನು ವಿದ್ವಾಂಸರು ಬುದ್ಧಿಯಿಂದ ಕಂಡುಕೊಳ್ಳುತ್ತಾರೆ.

05028003a ಏವಮೇತಾವಾಪದಿ ಲಿಂಗಮೇತದ್ ಧರ್ಮಾಧರ್ಮೌ ವೃತ್ತಿನಿತ್ಯೌ ಭಜೇತಾಂ।
05028003c ಆದ್ಯಂ ಲಿಂಗಂ ಯಸ್ಯ ತಸ್ಯ ಪ್ರಮಾಣಂ ಆಪದ್ಧರ್ಮಂ ಸಂಜಯ ತಂ ನಿಬೋಧ।।

ಸಂಜಯ! ಆಪತ್ತಿನಲ್ಲಿ ನಿತ್ಯವೃತ್ತಿಗೆ ಸಂಬಂಧಿಸಿದಂತೆ ಧರ್ಮ-ಅಧರ್ಮಗಳೆರಡೂ ಒಂದೇ ಲಕ್ಷಣಗಳನ್ನು ಹೊಂದುತ್ತವೆ. ಹೀಗಿರುವಾಗ ಮೊದಲು ಅವನ ಜಾತಿಗೆ ತಕ್ಕಂತಹುದನ್ನು ಆರಿಸಿಕೊಳ್ಳಬೇಕು. ಇದೇ ಆಪದ್ಧರ್ಮವೆನ್ನುವುದನ್ನು ತಿಳಿದುಕೋ.

05028004a ಲುಪ್ತಾಯಾಂ ತು ಪ್ರಕೃತೌ ಯೇನ ಕರ್ಮ ನಿಷ್ಪಾದಯೇತ್ತತ್ಪರೀಪ್ಸೇದ್ವಿಹೀನಃ।
05028004c ಪ್ರಕೃತಿಸ್ಥಶ್ಚಾಪದಿ ವರ್ತಮಾನ ಉಭೌ ಗರ್ಹ್ಯೌ ಭವತಃ ಸಂಜಯೈತೌ।।

ಜೀವನದ ಮಾರ್ಗಗಳನ್ನು ಸಂಪೂರ್ಣವಾಗಿ ಕಳೆದುಕೊಂಡವನು ತನ್ನದೇ ಜಾತಿಯು ವಿಹಿಸುವ ಬೇರೆ ಯಾವುದಾದರೂ ಮಾರ್ಗವನ್ನು ಹುಡುಕಿಕೊಳ್ಳಬೇಕು. ಸಂಜಯ! ವರ್ತಮಾನದಲ್ಲಿ ಆಪತ್ತಿನಲ್ಲಿ ಇಲ್ಲದಿರುವವನು ಮತ್ತು ಆಪತ್ತಿನಲ್ಲಿ ಇರುವವನು ಇಬ್ಬರನ್ನೂ ದೂರಲಾಗುತ್ತಿದೆ ಸಂಜಯ!

05028005a ಅವಿಲೋಪಮಿಚ್ಚತಾಂ ಬ್ರಾಹ್ಮಣಾನಾಂ ಪ್ರಾಯಶ್ಚಿತ್ತಂ ವಿಹಿತಂ ಯದ್ವಿಧಾತ್ರಾ।
05028005c ಆಪದ್ಯಥಾಕರ್ಮಸು ವರ್ತಮಾನಾನ್ ವಿಕರ್ಮಸ್ಥಾನ್ಸಂಜಯ ಗರ್ಹಯೇತ।।

ಆಪತ್ತಿನಲ್ಲಿ ತಮ್ಮ ನಾಶವನ್ನು ಬಯಸದೇ ತಮ್ಮ ಜಾತಿಗೆ ತಕ್ಕುದಾದುದಕಿಂತ ಬೇರೆಯ ಕರ್ಮವನ್ನು ಮಾಡುವ ಬ್ರಾಹ್ಮಣರಿಗೂ ವಿಧಾತನು ಪ್ರಾಯಶ್ಚಿತ್ತವನ್ನು ನೀಡಿದ್ದಾನೆ. ಇದರಲ್ಲಿ ದೂರುವುದು ಏನಿದೆ ಸಂಜಯ!

05028006a ಮನೀಷಿಣಾಂ ತತ್ತ್ವವಿಚ್ಚೇದನಾಯ ವಿಧೀಯತೇ ಸತ್ಸು ವೃತ್ತಿಃ ಸದೈವ।
05028006c ಅಬ್ರಾಹ್ಮಣಾಃ ಸಂತಿ ತು ಯೇ ನ ವೈದ್ಯಾಃ ಸರ್ವೋಚ್ಚೇದಂ ಸಾಧು ಮನ್ಯೇತ ತೇಭ್ಯಃ।।

ಅಬ್ರಾಹ್ಮಣರಿಗೆ ಮತ್ತು ಅವೈದೀಕರಿಗೆ ಸದೈವವಾದ ವೃತ್ತಿಯನ್ನು ಮನೀಷಿಗಳು ತತ್ತ್ವವಿಚ್ಛೇದನೆ ಮಾಡಿ ವಿಧಿಸಿದ್ದಾರೆ. ಅವುಗಳನ್ನೇ ಸರ್ವೋಚ್ಛವೆಂದು ಮನ್ನಿಸುವುದು ಒಳ್ಳೆಯದು.

05028007a ತದರ್ಥಾ ನಃ ಪಿತರೋ ಯೇ ಚ ಪೂರ್ವೇ ಪಿತಾಮಹಾ ಯೇ ಚ ತೇಭ್ಯಃ ಪರೇಽನ್ಯೇ।
05028007c ಪ್ರಜ್ಞೈಷಿಣೋ ಯೇ ಚ ಹಿ ಕರ್ಮ ಚಕ್ರುಃ ನಾಸ್ತ್ಯಂತತೋ ನಾಸ್ತಿ ನಾಸ್ತೀತಿ ಮನ್ಯೇ।।

ಇದೇ ಮಾರ್ಗದಲ್ಲಿ ನನ್ನ ತಂದೆಯಂದಿರು ಅವರ ಪೂರ್ವಜರು, ಪಿತಾಮಹರು ಮತ್ತು ಅವರ ಮೊದಲಿನವರು ಕೂಡ ಇದನ್ನೇ ಅರ್ಥೈಸಿದ್ದರು. ಪ್ರಜ್ಞೈಷಿಗಳಾಗಿ ಕರ್ಮಗಳನ್ನು ಮಾಡುವವರೂ ಕೂಡ ಕೊನೆಯಲ್ಲಿ ಇದು ಅಧರ್ಮವಲ್ಲ ಎಂದು ತಿಳಿಯುತ್ತಾರೆ.

05028008a ಯತ್ಕಿಂ ಚಿದೇತದ್ವಿತ್ತಮಸ್ಯಾಂ ಪೃಥಿವ್ಯಾಂ ಯದ್ದೇವಾನಾಂ ತ್ರಿದಶಾನಾಂ ಪರತ್ರ।
05028008c ಪ್ರಾಜಾಪತ್ಯಂ ತ್ರಿದಿವಂ ಬ್ರಹ್ಮಲೋಕಂ ನಾಧರ್ಮತಃ ಸಂಜಯ ಕಾಮಯೇ ತತ್।।

ಸಂಜಯ! ಈ ಭೂಮಿಯ ಮೇಲೆ ಎಷ್ಟೇ ಸಂಪತ್ತಿದ್ದರೂ, ಅಥವಾ ತ್ರಿದಿವದಲ್ಲಿರುವ ದೇವ ತ್ರಿದಶರರಲ್ಲಿ, ಪ್ರಜಾಪತಿ ಬ್ರಹ್ಮಲೋಕದಲ್ಲಿ ಎಷ್ಟೇ ಸಂಪತ್ತಿರಲಿ ಅವನ್ನು ನಾನು ಅಧರ್ಮದಿಂದ ಮಾತ್ರ ಬಯಸುವವನಲ್ಲ.

05028009a ಧರ್ಮೇಶ್ವರಃ ಕುಶಲೋ ನೀತಿಮಾಂಶ್ಚಾಪಿ ಉಪಾಸಿತಾ ಬ್ರಾಹ್ಮಣಾನಾಂ ಮನೀಷೀ।
05028009c ನಾನಾವಿಧಾಂಶ್ಚೈವ ಮಹಾಬಲಾಂಶ್ಚ ರಾಜನ್ಯಭೋಜಾನನುಶಾಸ್ತಿ ಕೃಷ್ಣಃ।।

ಧರ್ಮೇಶ್ವರ, ಕುಶಲ, ನೀತಿವಂತ, ಬ್ರಾಹ್ಮಣರನ್ನು ಉಪಾಸಿಸುವ, ಮನೀಷೀ ಕೃಷ್ಣನು ನಾನಾವಿಧದ ಮಹಾಬಲಶಾಲಿಗಳಾದ ರಾಜರಿಗೂ ಭೋಜರಿಗೂ ಸಲಹೆಗಾರನಾಗಿದ್ದಾನೆ.

05028010a ಯದಿ ಹ್ಯಹಂ ವಿಸೃಜನ್ಸ್ಯಾಮಗರ್ಹ್ಯೋ ಯುಧ್ಯಮಾನೋ ಯದಿ ಜಹ್ಯಾಂ ಸ್ವಧರ್ಮಂ।
05028010c ಮಹಾಯಶಾಃ ಕೇಶವಸ್ತದ್ಬ್ರವೀತು ವಾಸುದೇವಸ್ತೂಭಯೋರರ್ಥಕಾಮಃ।।

ನಾನು ಯುದ್ಧವನ್ನು ಬಿಟ್ಟರೆ ತಪ್ಪಿತಸ್ತನಾಗುವುದಿಲ್ಲ ಅಥವಾ ಯುದ್ಧವನ್ನು ಮಾಡಿದರೆ ಸ್ವಧರ್ಮವನ್ನು ತೊರೆದಂತಾಗುವುದಿಲ್ಲ ಎನ್ನುವುದನ್ನು ಮಹಾಯಶಸ್ವಿ ಕೃಷ್ಣನೇ ಹೇಳಲಿ. ವಾಸುದೇವನು ಇಬ್ಬರ ಏಳಿಗೆಯನ್ನೂ ಬಯಸುತ್ತಾನೆ.

05028011a ಶೈನೇಯಾ ಹಿ ಚೈತ್ರಕಾಶ್ಚಾಂಧಕಾಶ್ಚ ವಾರ್ಷ್ಣೇಯಭೋಜಾಃ ಕೌಕುರಾಃ ಸೃಂಜಯಾಶ್ಚ।
05028011c ಉಪಾಸೀನಾ ವಾಸುದೇವಸ್ಯ ಬುದ್ಧಿಂ ನಿಗೃಹ್ಯ ಶತ್ರೂನ್ಸುಹೃದೋ ನಂದಯಂತಿ।।

ಶೈನ್ಯರು, ಚೈತ್ರರು, ಅಂಧಕರು, ವಾರ್ಷ್ಣೇಯರು, ಭೋಜರು, ಕೌಕುರರು ಮತ್ತು ಸೃಂಜಯರು ವಾಸುದೇವನ ಬುದ್ಧಿಯನ್ನು ಬಳಸಿ ಶತ್ರುಗಳನ್ನು ನಿಗ್ರಹಿಸಿ ಸುಹೃದಯರನ್ನು ಆನಂದಿಸುತ್ತಿದ್ದಾರೆ.

05028012a ವೃಷ್ಣ್ಯಂಧಕಾ ಹ್ಯುಗ್ರಸೇನಾದಯೋ ವೈ ಕೃಷ್ಣಪ್ರಣೀತಾಃ ಸರ್ವ ಏವೇಂದ್ರಕಲ್ಪಾಃ।
05028012c ಮನಸ್ವಿನಃ ಸತ್ಯಪರಾಕ್ರಮಾಶ್ಚ ಮಹಾಬಲಾ ಯಾದವಾ ಭೋಗವಂತಃ।।

ಇಂದ್ರಕಲ್ಪರಾದ ವೃಷ್ಣಿ, ಅಂಧಕ, ಉಗ್ರಸೇನಾದಿಗಳು ಎಲ್ಲರೂ ಕೃಷ್ಣನ ಮಾರ್ಗದರ್ಶನದಂತೆ ನಡೆಯುತ್ತಾರೆ. ಮಹಾಬಲಿ ಯಾದವರು ಮನಸ್ವಿಗಳು, ಸತ್ಯಪರಾಕ್ರಮಿಗಳು ಮತ್ತು ಭೋಗವಂತರು.

05028013a ಕಾಶ್ಯೋ ಬಭ್ರುಃ ಶ್ರಿಯಮುತ್ತಮಾಂ ಗತೋ ಲಬ್ಧ್ವಾ ಕೃಷ್ಣಂ ಭ್ರಾತರಮೀಶಿತಾರಂ।
05028013c ಯಸ್ಮೈ ಕಾಮಾನ್ವರ್ಷತಿ ವಾಸುದೇವೋ ಗ್ರೀಷ್ಮಾತ್ಯಯೇ ಮೇಘ ಇವ ಪ್ರಜಾಭ್ಯಃ।।

ಕೃಷ್ಣನನ್ನು ಭ್ರಾತನನ್ನಾಗಿ ಮಾರ್ಗದರ್ಶಕನನ್ನಾಗಿ ಪಡೆದ ಕಾಶಿರಾಜ ಬಭ್ರುವು ಉತ್ತಮ ಶ್ರೀಯನ್ನು ಪಡೆದಿದ್ದಾನೆ. ಬೇಸಗೆಯ ಕೊನೆಯಲ್ಲಿ ಮೋಡಗಳು ಪ್ರಜೆಗಳ ಮೇಲೆ ಮಳೆಸುರಿಸುವಂತೆ ವಾಸುದೇವನು ಅವನ ಆಸೆಗಳನ್ನು ಪೂರೈಸಿದ್ದಾನೆ.

05028014a ಈದೃಶೋಽಯಂ ಕೇಶವಸ್ತಾತ ಭೂಯೋ ವಿದ್ಮೋ ಹ್ಯೇನಂ ಕರ್ಮಣಾಂ ನಿಶ್ಚಯಜ್ಞಾಂ।
05028014c ಪ್ರಿಯಶ್ಚ ನಃ ಸಾಧುತಮಶ್ಚ ಕೃಷ್ಣೋ ನಾತಿಕ್ರಮೇ ವಚನಂ ಕೇಶವಸ್ಯ।।

ತಾತ! ಕೇಶವನು ಇಂಥವನು! ಅವನಿಗೆ ಕರ್ಮಗಳನ್ನು ನಿಶ್ಚಯಿಸಲು ಗೊತ್ತು ಎನ್ನುವುದು ನಮಗೆ ತಿಳಿದಿದೆ. ಅತ್ಯಂತ ಸಾಧುವಾದ ಕೃಷ್ಣನು ನಮ್ಮೆಲ್ಲರ ಪ್ರಿಯ. ಕೇಶವನ ಮಾತನ್ನು ಮೀರುವುದಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರವಾಕ್ಯೇ ಅಷ್ಟಾವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರವಾಕ್ಯದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.