ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಸಂಜಯಯಾನ ಪರ್ವ
ಅಧ್ಯಾಯ 27
ಸಾರ
ಧರ್ಮಮಾರ್ಗವನ್ನು ಬಿಟ್ಟು, ಕೋಪಕ್ಕೆ ಸಿಲುಕಿ, ಜೀವನಾಶಕ್ಕೆ ಕಾರಣನಾಗಬೇಡವೆಂದೂ “ಒಂದುವೇಳೆ ನಿನ್ನ ಅಮಾತ್ಯರ ಬಯಕೆಯನ್ನು ಪೂರೈಸಲು ನೀನು ಈ ತಪ್ಪನ್ನು ಮಾಡಲು ಹೊರಟಿರುವೆಯಾದರೆ ನಿನ್ನಲ್ಲಿರುವ ಎಲ್ಲವನ್ನೂ ಅವರಿಗೆ ಕೊಟ್ಟು ಓಡಿ ಹೋಗು! ದೇವಯಾನದ ನಿನ್ನ ದಾರಿಯನ್ನು ತಪ್ಪಿ ನಡೆಯಬೇಡ!” ಎಂದು ಸಂಜಯನು ಯುಧಿಷ್ಠಿರನಿಗೆ ಉಪದೇಶಿಸುವುದು (1-27).
05027001 ಸಂಜಯ ಉವಾಚ।
05027001a ಧರ್ಮೇ ನಿತ್ಯಾ ಪಾಂಡವ ತೇ ವಿಚೇಷ್ಟಾ ಲೋಕೇ ಶ್ರುತಾ ದೃಶ್ಯತೇ ಚಾಪಿ ಪಾರ್ಥ।
05027001c ಮಹಾಸ್ರಾವಂ ಜೀವಿತಂ ಚಾಪ್ಯನಿತ್ಯಂ ಸಂಪಶ್ಯ ತ್ವಂ ಪಾಂಡವ ಮಾ ವಿನೀನಶಃ।।
ಸಂಜಯನು ಹೇಳಿದನು: “ಪಾರ್ಥ! ಪಾಂಡವ! ನೀನು ನಿತ್ಯವೂ ಧರ್ಮದಲ್ಲಿಯೇ ನಿರತನಾಗಿದ್ದೀಯೆ ಎಂದು ಲೋಕವು ಹೇಳುತ್ತದೆ. ಕಾಣುತ್ತದೆ ಕೂಡ. ಮಹಾ ಪ್ರವಾಹದ ಈ ಜೀವಿತವು ಅನಿತ್ಯ. ಅದರ ನಾಶವನ್ನು ನೀನು ಕಾಣ ಬಯಸಬೇಡ!
05027002a ನ ಚೇದ್ಭಾಗಂ ಕುರವೋಽನ್ಯತ್ರ ಯುದ್ಧಾತ್ ಪ್ರಯಚ್ಚಂತೇ ತುಭ್ಯಮಜಾತಶತ್ರೋ।
05027002c ಭೈಕ್ಷಚರ್ಯಾಮಂಧಕವೃಷ್ಣಿರಾಜ್ಯೇ ಶ್ರೇಯೋ ಮನ್ಯೇ ನ ತು ಯುದ್ಧೇನ ರಾಜ್ಯಂ।।
ಅಜಾತಶತ್ರೋ! ಯುದ್ಧವಿಲ್ಲದೇ ಕುರುಗಳು ನಿನ್ನ ಭಾಗವನ್ನು ಕೊಡದೇ ಇದ್ದರೆ, ನೀನು ಯುದ್ಧದಿಂದ ರಾಜ್ಯವನ್ನು ಪಡೆಯುವುದಕ್ಕಿಂತ ಅಂಧಕ-ವೃಷ್ಣಿ ರಾಜ್ಯದಲ್ಲಿ ಭಿಕ್ಷಾಟನೆಯನ್ನು ಮಾಡಿ ಜೀವುಸುವುದು ಶ್ರೇಯವೆಂದು ನನಗನ್ನಿಸುತ್ತದೆ.
05027003a ಅಲ್ಪಕಾಲಂ ಜೀವಿತಂ ಯನ್ಮನುಷ್ಯೇ ಮಹಾಸ್ರಾವಂ ನಿತ್ಯದುಃಖಂ ಚಲಂ ಚ।
05027003c ಭೂಯಶ್ಚ ತದ್ವಯಸೋ ನಾನುರೂಪಂ ತಸ್ಮಾತ್ಪಾಪಂ ಪಾಂಡವ ಮಾ ಪ್ರಸಾರ್ಷೀಃ।।
ಪಾಂಡವ! ಈ ಮನುಷ್ಯ ಜೀವನವು ಅಲ್ಪಕಾಲದ ಮಹಾಪ್ರವಾಹವು. ನಿತ್ಯವೂ ದುಃಖವನ್ನು ತರುವಂಥಹುದು. ಚಂಚಲವಾದುದು. ಬದುಕಿನ ಆಸೆಯನ್ನು ನೀಗಿಸಲು ಅನುರೂಪವಲ್ಲದ್ದು. ಆದುದರಿಂದ ಪಾಪವನ್ನು ಪಸರಿಸಬೇಡ.
05027004a ಕಾಮಾ ಮನುಷ್ಯಂ ಪ್ರಸಜಂತ ಏವ ಧರ್ಮಸ್ಯ ಯೇ ವಿಘ್ನಮೂಲಂ ನರೇಂದ್ರ।
05027004c ಪೂರ್ವಂ ನರಸ್ತಾನ್ಧೃತಿಮಾನ್ವಿನಿಘ್ನಽಲ್ ಲೋಕೇ ಪ್ರಶಂಸಾಂ ಲಭತೇಽನವದ್ಯಾಂ।।
ನರೇಂದ್ರ! ಕಾಮವು ಮನುಷ್ಯನನ್ನು ಅಂಟಿಕೊಂಡಿರುವುದೇ ಧರ್ಮದ ವಿಘ್ನಕ್ಕೆ ಮೂಲ. ಧೃತಿವಂತನಾಗಿ ಅವುಗಳನ್ನು ಮೊದಲೇ ನಾಶಪಡಿಸಿದ ನರನು ಲೋಕದಲ್ಲಿ ಕಳಂಕವಿಲ್ಲದ ಪ್ರಶಂಸೆಯನ್ನು ಪಡೆಯುತ್ತಾನೆ.
05027005a ನಿಬಂಧನೀ ಹ್ಯರ್ಥತೃಷ್ಣೇಹ ಪಾರ್ಥ ತಾಮೇಷತೋ ಬಾಧ್ಯತೇ ಧರ್ಮ ಏವ।
05027005c ಧರ್ಮಂ ತು ಯಃ ಪ್ರವೃಣೀತೇ ಸ ಬುದ್ಧಃ ಕಾಮೇ ಗೃದ್ಧೋ ಹೀಯತೇಽರ್ಥಾನುರೋಧಾತ್।।
ಪಾರ್ಥ! ಧನದ ದಾಹವು ಬಂಧನವಿದ್ದಂತೆ. ಇವನ್ನು ಬಯಸುವವನ ಧರ್ಮವು ಕುಂದಾಗುತ್ತದೆ. ಧರ್ಮವನ್ನೇ ತನ್ನದಾಗಿಸಿಕೊಳ್ಳುವವನು ತಿಳಿದವನು. ಕಾಮವನ್ನು ಹೆಚ್ಚಿಸಿಕೊಂಡವನು ಅರ್ಥವನ್ನು ಆಸೆಪಟ್ಟು ನಾಶಹೊಂದುತ್ತಾನೆ.
05027006a ಧರ್ಮಂ ಕೃತ್ವಾ ಕರ್ಮಣಾಂ ತಾತ ಮುಖ್ಯಂ ಮಹಾಪ್ರತಾಪಃ ಸವಿತೇವ ಭಾತಿ।
05027006c ಹಾನೇನ ಧರ್ಮಸ್ಯ ಮಹೀಮಪೀಮಾಂ ಲಬ್ಧ್ವಾ ನರಃ ಸೀದತಿ ಪಾಪಬುದ್ಧಿಃ।।
ತಾತ! ಧರ್ಮಕರ್ಮಗಳನ್ನು ಮುಖ್ಯವನ್ನಾಗಿ ಮಾಡಿಕೊಂಡವನು ಮಹಾಪ್ರತಾಪಿ ಸೂರ್ಯನಂತೆ ಹೊಳೆಯುತ್ತಾನೆ. ಧರ್ಮದ ಕೊರತೆಯಿರುವ, ಪಾಪ ಬುದ್ಧಿ ನರನು ಈ ಭೂಮಿಯನ್ನೇ ಪಡೆದರೂ ನಾಶಹೊಂದುತ್ತಾನೆ.
05027007a ವೇದೋಽಧೀತಶ್ಚರಿತಂ ಬ್ರಹ್ಮಚರ್ಯಂ ಯಜ್ಞೈರಿಷ್ಟಂ ಬ್ರಾಹ್ಮಣೇಭ್ಯಶ್ಚ ದತ್ತಂ।
05027007c ಪರಂ ಸ್ಥಾನಂ ಮನ್ಯಮಾನೇನ ಭೂಯ ಆತ್ಮಾ ದತ್ತೋ ವರ್ಷಪೂಗಂ ಸುಖೇಭ್ಯಃ।।
ನೀನು ವೇದವನ್ನು ಕಲಿತಿರುವೆ, ಬ್ರಹ್ಮಚರ್ಯವನ್ನು ಆಚರಿಸಿರುವೆ. ಯಜ್ಞ-ಇಷ್ಟಿಗಳಲ್ಲಿ ಬ್ರಾಹ್ಮಣರಿಗೆ ನೀಡಿದ್ದೀಯೆ. ಪರಮ ಸ್ಥಾನವನ್ನು ಮನ್ನಿಸಿ ನೀನು ಹಲವಾರು ವರ್ಷಗಳ ಸುಖವನ್ನು ನಿನಗೆ ನೀನೇ ಒದಗಿಸಿ ಕೊಂಡಿದ್ದೀಯೆ.
05027008a ಸುಖಪ್ರಿಯೇ ಸೇವಮಾನೋಽತಿವೇಲಂ ಯೋಗಾಭ್ಯಾಸೇ ಯೋ ನ ಕರೋತಿ ಕರ್ಮ।
05027008c ವಿತ್ತಕ್ಷಯೇ ಹೀನಸುಖೋಽತಿವೇಲಂ ದುಃಖಂ ಶೇತೇ ಕಾಮವೇಗಪ್ರಣುನ್ನಃ।।
ಸುಖ ಮತ್ತು ಬಯಕೆಗಳ ಸೇವೆಯಲ್ಲಿ ಅತಿಯಾಗಿ ತೊಡಗಿದವನು ಯೋಗಾಭ್ಯಾಸದ ಕೆಲಸವನ್ನು ಮಾಡುವುದಿಲ್ಲ. ಅವನ ವಿತ್ತವು ಕ್ಷಯವಾದಾಗ ಸುಖವೂ ಕಡಿಮೆಯಾಗಿ, ಅತ್ಯಂತ ದುಃಖವನ್ನು ಅನುಭವಿಸುತ್ತಾನೆ.
05027009a ಏವಂ ಪುನರರ್ಥಚರ್ಯಾಪ್ರಸಕ್ತೋ ಹಿತ್ವಾ ಧರ್ಮಂ ಯಃ ಪ್ರಕರೋತ್ಯಧರ್ಮಂ।
05027009c ಅಶ್ರದ್ದಧತ್ಪರಲೋಕಾಯ ಮೂಢೋ ಹಿತ್ವಾ ದೇಹಂ ತಪ್ಯತೇ ಪ್ರೇತ್ಯ ಮಂದಃ।।
ಹಾಗೆಯೇ ಅರ್ಥವನ್ನೇ ಕಾಣದ ಜೀವನವನ್ನು ನಡೆಸುವವನು ಧರ್ಮವನ್ನು ತೊರೆದು ಅಧರ್ಮದಲ್ಲಿ ನಿರತನಾಗಿರುತ್ತಾನೆ. ಆ ಮೂಢನು ಪರಲೋಕದಲ್ಲಿ ಶ್ರದ್ಧೆಯನ್ನಿಟ್ಟುಕೊಳ್ಳುವುದಿಲ್ಲ. ಆ ಮಂದಬುದ್ಧಿಯು ದೇಹವನ್ನು ತೊರೆದ ನಂತರವೂ ತಪಿಸುತ್ತಾನೆ.
05027010a ನ ಕರ್ಮಣಾಂ ವಿಪ್ರಣಾಶೋಽಸ್ತ್ಯಮುತ್ರ ಪುಣ್ಯಾನಾಂ ವಾಪ್ಯಥ ವಾ ಪಾಪಕಾನಾಂ।
05027010c ಪೂರ್ವಂ ಕರ್ತುರ್ಗಚ್ಚತಿ ಪುಣ್ಯಪಾಪಂ ಪಶ್ಚಾತ್ತ್ವೇತದನುಯಾತ್ಯೇವ ಕರ್ತಾ।।
ಇದರ ನಂತರದ ಲೋಕದಲ್ಲಿ ಪುಣ್ಯಗಳಿರಲಿ ಅಥವಾ ಪಾಪಗಳಿರಲಿ ನಾಶವಾಗುವುದಿಲ್ಲ. ಕರ್ತುವಿನ ಮೊದಲೇ ಪುಣ್ಯಪಾಪಗಳು ಹೋಗುತ್ತವೆ. ಅವುಗಳ ನಂತರ ಕರ್ತನು ಹಿಂಬಾಲಿಸುತ್ತಾನೆ.
05027011a ನ್ಯಾಯೋಪೇತಂ ಬ್ರಾಹ್ಮಣೇಭ್ಯೋ ಯದನ್ನಂ ಶ್ರದ್ಧಾಪೂತಂ ಗಂಧರಸೋಪಪನ್ನಂ।
05027011c ಅನ್ವಾಹಾರ್ಯೇಷೂತ್ತಮದಕ್ಷಿಣೇಷು ತಥಾರೂಪಂ ಕರ್ಮ ವಿಖ್ಯಾಯತೇ ತೇ।।
ನಿನ್ನ ಕರ್ಮವು ನ್ಯಾಯೋಪೇತವಾಗಿ ಬ್ರಾಹ್ಮಣರಿಗೆ ಕೊಡುವ ಶ್ರದ್ಧಾಪೂರಿತ ಅನ್ನ, ಗಂಧ, ರಸ ಉಪಪನ್ನಗಳಂತೆ ಮತ್ತು ಉತ್ತಮ ದಕ್ಷಿಣೆಗಳನ್ನಿತ್ತು ನಡೆಸುವ ದೇವತಾಕಾರ್ಯಗಳಂತೆ ಎಂದು ಹೇಳಬಹುದು.
05027012a ಇಹ ಕ್ಷೇತ್ರೇ ಕ್ರಿಯತೇ ಪಾರ್ಥ ಕಾರ್ಯಂ ನ ವೈ ಕಿಂ ಚಿದ್ವಿದ್ಯತೇ ಪ್ರೇತ್ಯ ಕಾರ್ಯಂ।
05027012c ಕೃತಂ ತ್ವಯಾ ಪಾರಲೋಕ್ಯಂ ಚ ಕಾರ್ಯಂ ಪುಣ್ಯಂ ಮಹತ್ಸದ್ಭಿರನುಪ್ರಶಸ್ತಂ।।
ಪಾರ್ಥ! ಈ ದೇಹವಿರುವವರೆಗೆ ಕಾರ್ಯಗಳನ್ನು ಮಾಡುತ್ತೇವೆ. ಮರಣದ ನಂತರ ಮಾಡಬೇಕಾದುದು ಏನೂ ಇಲ್ಲ. ನೀನು ಪರಲೋಕಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿದ್ದೀಯೆ. ಮಹಾ ಪುಣ್ಯವನ್ನೂ ಜನರ ಪ್ರಶಸ್ತಿಯನ್ನೂ ಪಡೆದಿರುವೆ.
05027013a ಜಹಾತಿ ಮೃತ್ಯುಂ ಚ ಜರಾಂ ಭಯಂ ಚ ನ ಕ್ಷುತ್ಪಿಪಾಸೇ ಮನಸಶ್ಚಾಪ್ರಿಯಾಣಿ।
05027013c ನ ಕರ್ತವ್ಯಂ ವಿದ್ಯತೇ ತತ್ರ ಕಿಂ ಚಿದ್ ಅನ್ಯತ್ರ ವೈ ಇಂದ್ರಿಯಪ್ರೀಣನಾರ್ಥಾತ್।।
ಪರಲೋಕದಲ್ಲಿ ಮೃತ್ಯುವಿನಿಂದ ಸ್ವತಂತ್ರವಿದೆ, ಮುಪ್ಪಿನ ಭಯವಿಲ್ಲ, ಮನಸ್ಸಿಗೆ ಅಪ್ರಿಯವಾದ ಹಸಿವು ಬಾಯಾರಿಕೆಗಳಿಲ್ಲ. ಇಂದ್ರಿಯಗಳನ್ನು ತೃಪ್ತಿಪಡಿಸುವ ಹೊರತಾಗಿ ಬೇರೆ ಏನೂ ಅಲ್ಲಿ ಇರುವುದಿಲ್ಲ.
05027014a ಏವಂರೂಪಂ ಕರ್ಮಫಲಂ ನರೇಂದ್ರ ಮಾತ್ರಾವತಾ ಹೃದಯಸ್ಯ ಪ್ರಿಯೇಣ।
05027014c ಸ ಕ್ರೋಧಜಂ ಪಾಂಡವ ಹರ್ಷಜಂ ಚ ಲೋಕಾವುಭೌ ಮಾ ಪ್ರಹಾಸೀಶ್ಚಿರಾಯ।।
ನರೇಂದ್ರ! ಕರ್ಮಫಲವು ಈ ರೂಪದ್ದು. ಆದುದರಿಂದ ಹೃದಯಕ್ಕೆ ಪ್ರಿಯವಾದುದರಂತೆ ಮಾತ್ರ ನಡೆದುಕೊಳ್ಳಬೇಡ. ಪಾಂಡವ! ಈ ಲೋಕದಲ್ಲಿ ಕ್ರೋಧ ಮತ್ತು ಹರ್ಷ ಇವೆರಡನ್ನೂ ನೀಡುವಂಥಹುದನ್ನು ಮಾಡಬೇಡ.
05027015a ಅಂತಂ ಗತ್ವಾ ಕರ್ಮಣಾಂ ಯಾ ಪ್ರಶಂಸಾ ಸತ್ಯಂ ದಮಶ್ಚಾರ್ಜವಮಾನೃಶಂಸ್ಯಂ।
05027015c ಅಶ್ವಮೇಧೋ ರಾಜಸೂಯಸ್ತಥೇಷ್ಟಃ ಪಾಪಸ್ಯಾಂತಂ ಕರ್ಮಣೋ ಮಾ ಪುನರ್ಗಾಃ।।
ಕರ್ಮಗಳ ಅಂತ್ಯದಲ್ಲಿ ಪ್ರಶಂಸೆಯಿದೆ - ಸತ್ಯ, ಆತ್ಮನಿಗ್ರಹ, ಪ್ರಾಮಾಣಿಕತೆ, ಮೃದುತ್ವ, ಅಶ್ವಮೇಧ, ರಾಜಸೂಯಗಳು, ಇಷ್ಟಿಗಳು ಇವೆ. ಆದರೆ ಪಾಪಕರ್ಮಗಳ ಕೊನೆಯನ್ನು ಅರಸಿ ಹೋಗಬೇಡ!
05027016a ತಚ್ಚೇದೇವಂ ದೇಶರೂಪೇಣ ಪಾರ್ಥಾಃ ಕರಿಷ್ಯಧ್ವಂ ಕರ್ಮ ಪಾಪಂ ಚಿರಾಯ।
05027016c ನಿವಸಧ್ವಂ ವರ್ಷಪೂಗಾನ್ವನೇಷು ದುಃಖಂ ವಾಸಂ ಪಾಂಡವಾ ಧರ್ಮಹೇತೋಃ।।
ಇಷ್ಟೊಂದು ಸಮಯದ ನಂತರ ಪಾಂಡವರು ಪದ್ಧತಿಯನ್ನು ಅನುಸರಿಸಿ ಪಾಪ ಕರ್ಮವನ್ನೇ ಮಾಡಬೇಕಾದರೆ ಧರ್ಮಹೇತುಗಳಾದ ಪಾಂಡವರು ಬಹು ವರ್ಷಗಳು ವನದಲ್ಲಿ ಏಕೆ ದುಃಖದ ವಾಸವನ್ನು ವಾಸಿಸಿದರು?
05027017a ಅಪ್ರವ್ರಜ್ಯೇ ಯೋಜಯಿತ್ವಾ ಪುರಸ್ತಾದ್ ಆತ್ಮಾಧೀನಂ ಯದ್ಬಲಂ ತೇ ತದಾಸೀತ್।
05027017c ನಿತ್ಯಂ ಪಾಂಚಾಲಾಃ ಸಚಿವಾಸ್ತವೇಮೇ ಜನಾರ್ದನೋ ಯುಯುಧಾನಶ್ಚ ವೀರಃ।।
ಹೊರಹಾಕಲ್ಪಡದೇ ನೀವು ಮೊದಲೇ ನಿಮ್ಮದಾಗಿದ್ದ ಸೇನೆಯನ್ನು ಕೂಡಿಸಬಹುದಾಗಿತ್ತು – ಪಾಂಚಾಲರು, ಜನಾರ್ದನ ಮತ್ತು ವೀರ ಯುಯುಧಾನರು ನಿತ್ಯವೂ ನಿಮ್ಮ ಸಚಿವರಾಗಿದ್ದವರು.
05027018a ಮತ್ಸ್ಯೋ ರಾಜಾ ರುಕ್ಮರಥಃ ಸಪುತ್ರಃ ಪ್ರಹಾರಿಭಿಃ ಸಹ ಪುತ್ರೈರ್ವಿರಾಟಃ।
05027018c ರಾಜಾನಶ್ಚ ಯೇ ವಿಜಿತಾಃ ಪುರಸ್ತಾತ್ ತ್ವಾಮೇವ ತೇ ಸಂಶ್ರಯೇಯುಃ ಸಮಸ್ತಾಃ।।
ಪುತ್ರನೊಡನೆ ರಾಜಾ ಮತ್ಸ್ಯ ವಿರಾಟನು ಬಂಗಾರದ ರಥದಲ್ಲಿ, ಪ್ರಹಾರಿ ಪುತ್ರರೊಂದಿಗೆ, ಮತ್ತು ಹಿಂದೆ ನೀವು ಸೋಲಿಸಿದ್ದ ರಾಜರು ಎಲ್ಲರೂ ನಿಮ್ಮಕಡೆಯೇ ಸೇರುತ್ತಿದ್ದರು.
05027019a ಮಹಾಸಹಾಯಃ ಪ್ರತಪನ್ಬಲಸ್ಥಃ ಪುರಸ್ಕೃತೋ ವಾಸುದೇವಾರ್ಜುನಾಭ್ಯಾಂ।
05027019c ವರಾನ್ ಹನಿಷ್ಯನ್ದ್ವಿಷತೋ ರಂಗಮಧ್ಯೇ ವ್ಯನೇಷ್ಯಥಾ ಧಾರ್ತರಾಷ್ಟ್ರಸ್ಯ ದರ್ಪಂ।।
ಎಲ್ಲರನ್ನೂ ಸುಡುವ ಮಹಾಸೇನೆಯ ಬಲವನ್ನು ಪಡೆದು ವಾಸುದೇವ-ಅರ್ಜುನರನ್ನು ಮುಂದಿಟ್ಟುಕೊಂಡು, ರಣಮಧ್ಯದಲ್ಲಿ ಶ್ರೇಷ್ಠ ದ್ವೇಷಿಗಳನ್ನು ಸಂಹರಿಸಿ ಧಾರ್ತರಾಷ್ಟ್ರರ ದರ್ಪವನ್ನು ಕೆಳಗಿಳಿಸಬಹುದಾಗಿತ್ತು!
05027020a ಬಲಂ ಕಸ್ಮಾದ್ವರ್ಧಯಿತ್ವಾ ಪರಸ್ಯ ನಿಜಾನ್ಕಸ್ಮಾತ್ಕರ್ಶಯಿತ್ವಾ ಸಹಾಯಾನ್।
05027020c ನಿರುಷ್ಯ ಕಸ್ಮಾದ್ವರ್ಷಪೂಗಾನ್ವನೇಷು ಯುಯುತ್ಸಸೇ ಪಾಂಡವ ಹೀನಕಾಲಂ।।
ಪಾಂಡವ! ಕಾಲವನ್ನು ಮೀರಿ ಯುದ್ಧಮಾಡಲಿಚ್ಛಿಸುವ ನೀನು ಏಕೆ ನಿನ್ನ ವೈರಿಗಳ ಬಲವನ್ನು ಹೆಚ್ಚುಗೊಳಿಸಲು ಅವಕಾಶ ನೀಡಿದೆ? ಏಕೆ ನಿನ್ನ ಬಲವನ್ನು ಕಡಿಮೆಮಾಡಿಕೊಂಡೆ? ಏಕೆ ಬಹುವರ್ಷಗಳು ವನಗಳಲ್ಲಿ ಕಳೆದೆ?
05027021a ಅಪ್ರಜ್ಞೋ ವಾ ಪಾಂಡವ ಯುಧ್ಯಮಾನೋ ಅಧರ್ಮಜ್ಞೋ ವಾ ಭೂತಿಪಥಾದ್ವ್ಯಪೈತಿ।
05027021c ಪ್ರಜ್ಞಾವಾನ್ವಾ ಬುಧ್ಯಮಾನೋಽಪಿ ಧರ್ಮಂ ಸಂರಂಭಾದ್ವಾ ಸೋಽಪಿ ಭೂತೇರಪೈತಿ।।
ಪಾಂಡವ! ತಿಳುವಳಿಕೆಯಿಲ್ಲದವನು ಯುದ್ಧಮಾಡುತ್ತಾನೆ. ಅಥವಾ ಧರ್ಮವನ್ನು ತಿಳಿಯದೇ ಇರುವವನು ಒಳಿತಿನ ದಾರಿಯನ್ನು ಬಿಡುತ್ತಾನೆ. ಅಥವಾ ಪ್ರಜ್ಞಾವಂತನಾಗಿದ್ದರೂ, ಬುದ್ಧಿವಂತನಾಗಿದ್ದರೂ ಕೂಡ ಕೋಪದಿಂದ ಧರ್ಮದ ದಾರಿಯನ್ನು ಬಿಡಬಹುದು.
05027022a ನಾಧರ್ಮೇ ತೇ ಧೀಯತೇ ಪಾರ್ಥ ಬುದ್ಧಿಃ ನ ಸಂರಂಭಾತ್ಕರ್ಮ ಚಕರ್ಥ ಪಾಪಂ।
05027022c ಅದ್ಧಾ ಕಿಂ ತತ್ಕಾರಣಂ ಯಸ್ಯ ಹೇತೋಃ ಪ್ರಜ್ಞಾವಿರುದ್ಧಂ ಕರ್ಮ ಚಿಕೀರ್ಷಸೀದಂ।।
ಪಾರ್ಥ! ಆದರೆ ನಿನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನೀನು ಕೋಪಗೊಂಡು ಪಾಪ ಕರ್ಮವನ್ನು ಮಾಡುವವನಲ್ಲ. ಹಾಗಿದ್ದಾಗ ಯಾವ ಕಾರಣಕ್ಕಾಗಿ ಯಾವುದನ್ನು ಬಯಸಿ ಪ್ರಜ್ಞಾವಿರುದ್ಧವಾದ ಕರ್ಮವನ್ನು ಮಾಡಲು ಹೊರಟಿರುವೆ?
05027023a ಅವ್ಯಾಧಿಜಂ ಕಟುಕಂ ಶೀರ್ಷರೋಗಂ ಯಶೋಮುಷಂ ಪಾಪಫಲೋದಯಂ ಚ।
05027023c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ।।
ಮಹಾರಾಜ! ಸಂತರು ಕುಡಿದುಬಿಡುವ, ಅಸಂತರು ಕುಡಿಯದೇ ಇರುವ, ವ್ಯಾಧಿಯಿಂದ ಹುಟ್ಟದ, ಕಹಿಯಾದ ತಲೆನೋವನ್ನು ಕೊಡುವ, ಯಶಸ್ಸನ್ನು ಕ್ಷೀಣಗೊಳಿಸುವ, ಪಾಪಫಲವನ್ನು ನೀಡುವ ಸಿಟ್ಟನ್ನು ಕುಡಿದು ಶಾಂತಗೊಳಿಸು.
05027024a ಪಾಪಾನುಬಂಧಂ ಕೋ ನು ತಂ ಕಾಮಯೇತ ಕ್ಷಮೈವ ತೇ ಜ್ಯಾಯಸೀ ನೋತ ಭೋಗಾಃ।
05027024c ಯತ್ರ ಭೀಷ್ಮಃ ಶಾಂತನವೋ ಹತಃ ಸ್ಯಾದ್ ಯತ್ರ ದ್ರೋಣಃ ಸಹಪುತ್ರೋ ಹತಃ ಸ್ಯಾತ್।।
05027025a ಕೃಪಃ ಶಲ್ಯಃ ಸೌಮದತ್ತಿರ್ವಿಕರ್ಣೋ ವಿವಿಂಶತಿಃ ಕರ್ಣದುರ್ಯೋಧನೌ ಚ।
ಎಲ್ಲಿ ಶಾಂತನವ ಭೀಷ್ಮನು ಹತನಾಗಬಲ್ಲನೋ, ಎಲ್ಲಿ ಪುತ್ರನೊಂದಿಗೆ ದ್ರೋಣನು ಹತನಾಗುವನೋ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ವಿವಿಂಶತಿ ಮತ್ತು ಕರ್ಣ-ದುರ್ಯೋಧನರು ಹತರಾಗುವರೋ ಆ ಪಾಪವನ್ನು ತಂದು ಕಟ್ಟಿಸುವುದನ್ನು ಯಾರುತಾನೇ ಬಯಸುತ್ತಾರೆ? ಭೋಗಗಳ ಹಿಂದೆ ಹೋಗುವುದಕ್ಕಿಂತ ನಿನಗೆ ಕ್ಷಮೆಯೇ ಒಳ್ಳೆಯದು.
05027025c ಏತಾನ್ ಹತ್ವಾ ಕೀದೃಶಂ ತತ್ಸುಖಂ ಸ್ಯಾದ್ ಯದ್ವಿಂದೇಥಾಸ್ತದನುಬ್ರೂಹಿ ಪಾರ್ಥ।।
05027026a ಲಬ್ಧ್ವಾಪೀಮಾಂ ಪೃಥಿವೀಂ ಸಾಗರಾಂತಾಂ ಜರಾಮೃತ್ಯೂ ನೈವ ಹಿ ತ್ವಂ ಪ್ರಜಹ್ಯಾಃ।
05027026c ಪ್ರಿಯಾಪ್ರಿಯೇ ಸುಖದುಃಖೇ ಚ ರಾಜನ್ನ ಏವಂ ವಿದ್ವಾನ್ನೈವ ಯುದ್ಧಂ ಕುರುಷ್ವ।।
ಪಾರ್ಥ! ಇವರನ್ನೆಲ್ಲಾ ಕೊಂದು ಅದರಲ್ಲಿ ನಿನಗೆ ಯಾವ ಸುಖವು ಸಿಗುತ್ತದೆ ಎನ್ನುವುದನ್ನು ಹೇಳು. ಸಾಗರಗಳೇ ಅಂಚಾಗಿರುವ ಈ ಭೂಮಿಯನ್ನು ಪಡೆದರೂ ನೀನು ಮುಪ್ಪು-ಮೃತ್ಯುಗಳಿಂದ, ಪ್ರಿಯ-ಅಪ್ರಿಯಗಳಿಂದ, ಮತ್ತು ಸುಖ-ದುಃಖಗಳಿಂದ ತಪ್ಪಿಸಿಕೊಳ್ಳಲಾರೆ. ರಾಜನ್! ಇವನ್ನು ತಿಳಿದೂ ಯುದ್ಧಮಾಡಬೇಡ!
05027027a ಅಮಾತ್ಯಾನಾಂ ಯದಿ ಕಾಮಸ್ಯ ಹೇತೋಃ ಏವಮ್ಯುಕ್ತಂ ಕರ್ಮ ಚಿಕೀರ್ಷಸಿ ತ್ವಂ।
05027027c ಅಪಾಕ್ರಮೇಃ ಸಂಪ್ರದಾಯ ಸ್ವಮೇಭ್ಯೋ ಮಾ ಗಾಸ್ತ್ವಂ ವೈ ದೇವಯಾನಾತ್ಪಥೋಽದ್ಯ।।
ಒಂದುವೇಳೆ ನಿನ್ನ ಅಮಾತ್ಯರ ಬಯಕೆಯನ್ನು ಪೂರೈಸಲು ನೀನು ಈ ತಪ್ಪನ್ನು ಮಾಡಲು ಹೊರಟಿರುವೆಯಾದರೆ ನಿನ್ನಲ್ಲಿರುವ ಎಲ್ಲವನ್ನೂ ಅವರಿಗೆ ಕೊಟ್ಟು ಓಡಿ ಹೋಗು! ದೇವಯಾನದ ನಿನ್ನ ದಾರಿಯನ್ನು ತಪ್ಪಿ ನಡೆಯಬೇಡ!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಸಪ್ತವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.