025 ಸಂಜಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 25

ಸಾರ

ಧೃತರಾಷ್ಟ್ರನ ಸಂದೇಶವನ್ನು ನೇರವಾಗಿ ಹೇಳೆಂದು ಯುಧಿಷ್ಠಿರನು ಕೇಳಲು ಸಂಜಯನು ಪಾಂಡವರು ಧರ್ಮಿಷ್ಠರು, ಅವರು ಜ್ಞಾತಿವಧೆಗೆ ಕಾರಣರಾಗಬಾರದು, ಆದುದರಿಂದ ಶಾಂತಿಯಿಂದ ಇರಬೇಕೆಂಬುದೇ ರಾಜ ಮತ್ತು ಭೀಷ್ಮರ ಮತವೆಂದು ವರದಿಮಾಡಿದುದು (1-15).

05025001 ಯುಧಿಷ್ಠಿರ ಉವಾಚ।
05025001a ಸಮಾಗತಾಃ ಪಾಂಡವಾಃ ಸೃಂಜಯಾಶ್ಚ ಜನಾರ್ದನೋ ಯುಯುಧಾನೋ ವಿರಾಟಃ।
05025001c ಯತ್ತೇ ವಾಕ್ಯಂ ಧೃತರಾಷ್ಟ್ರಾನುಶಿಷ್ಟಂ ಗಾವಲ್ಗಣೇ ಬ್ರೂಹಿ ತತ್ಸೂತಪುತ್ರ।।

ಯುಧಿಷ್ಠಿರನು ಹೇಳಿದನು: “ಗಾವಲ್ಗಣೇ! ಸೂತಪುತ್ರ! ಪಾಂಡವರು, ಸೃಂಜಯರು, ಜನಾರ್ದನ, ಯುಯುಧಾನ, ವಿರಾಟರು ಇಲ್ಲಿ ಸೇರಿದ್ದಾರೆ. ಧೃತರಾಷ್ಟ್ರನು ನಿನಗೆ ಏನು ಹೇಳಿ ಕಳುಹಿಸಿದ್ದಾನೋ ಅದನ್ನು ಹೇಳು.”

05025002 ಸಂಜಯ ಉವಾಚ।
05025002a ಅಜಾತಶತ್ರುಂ ಚ ವೃಕೋದರಂ ಚ ಧನಂಜಯಂ ಮಾದ್ರವತೀಸುತೌ ಚ।
05025002c ಆಮಂತ್ರಯೇ ವಾಸುದೇವಂ ಚ ಶೌರಿಂ ಯುಯುಧಾನಂ ಚೇಕಿತಾನಂ ವಿರಾಟಂ।।
05025003a ಪಾಂಚಾಲಾನಾಮಧಿಪಂ ಚೈವ ವೃದ್ಧಂ ಧೃಷ್ಟದ್ಯುಮ್ನಂ ಪಾರ್ಷತಂ ಯಾಜ್ಞಾಸೇನಿಂ।
05025003c ಸರ್ವೇ ವಾಚಂ ಶೃಣುತೇಮಾಂ ಮದೀಯಾಂ ವಕ್ಷ್ಯಾಮಿ ಯಾಂ ಭೂತಿಮಿಚ್ಚನ್ಕುರೂಣಾಂ।।

ಸಂಜಯನು ಹೇಳಿದನು: “ಅಜಾತಶತ್ರು, ವೃಕೋದರ, ಧನಂಜಯ, ಮಾದ್ರೀ ಸುತರು, ಶೌರಿ ವಾಸುದೇವ, ಯುಯುಧಾನ, ಚೇಕಿತಾನ, ವಿರಾಟ, ಪಾಂಚಾಲರ ವೃದ್ಧ ಅಧಿಪತಿ, ಪಾರ್ಷತ ಧೃಷ್ಟದ್ಯುಮ್ನ, ಮತ್ತು ಯಾಜ್ಞಸೇನಿ ಎಲ್ಲರಿಗೂ, ಕುರುಗಳ ಒಳ್ಳೆಯದನ್ನೇ ಬಯಸಿ ಹೇಳುವ, ನನ್ನ ಈ ಮಾತುಗಳನ್ನು ಕೇಳಲು ಆಮಂತ್ರಿಸುತ್ತೇನೆ.

05025004a ಶಮಂ ರಾಜಾ ಧೃತರಾಷ್ಟ್ರೋಽಭಿನಂದನ್ನ್ ಅಯೋಜಯತ್ತ್ವರಮಾಣೋ ರಥಂ ಮೇ।
05025004c ಸಭ್ರಾತೃಪುತ್ರಸ್ವಜನಸ್ಯ ರಾಜ್ಞಾಸ್ ತದ್ರೋಚತಾಂ ಪಾಂಡವಾನಾಂ ಶಮೋಽಸ್ತು।।

ಶಾಂತಿಯನ್ನು ಸ್ವಾಗತಿಸುತ್ತಾ ರಾಜಾ ಧೃತರಾಷ್ಟ್ರನು ಅವಸರ ಮಾಡಿ ನನ್ನ ರಥವನ್ನು ಆಯೋಜಿಸಿದನು. ಭ್ರಾತೃಗಳೊಂದಿಗೆ, ಪುತ್ರರೊಂದಿಗೆ, ಮತ್ತು ಸ್ವಜನ ರಾಜರೊಂದಿಗೆ ಪಾಂಡವರಿಗೆ ಶಾಂತಿಯೇ ಬೇಕೆಂದೆನಿಸಲಿ.

05025005a ಸರ್ವೈರ್ಧರ್ಮೈಃ ಸಮುಪೇತಾಃ ಸ್ಥ ಪಾರ್ಥಾಃ ಪ್ರಸ್ಥಾನೇನ ಮಾರ್ದವೇನಾರ್ಜವೇನ।
05025005c ಜಾತಾಃ ಕುಲೇ ಅನೃಶಂಸಾ ವದಾನ್ಯಾ ಹ್ರೀನಿಷೇಧಾಃ ಕರ್ಮಣಾಂ ನಿಶ್ಚಯಜ್ಞಃ।।

ಪಾರ್ಥರು ಸರ್ವಧರ್ಮಗಳಿಂದ ಸಮೋಪೇತರಾಗಿದ್ದಾರೆ. ನಡತೆಯಲ್ಲಿ ಮಾರ್ದವವಿದೆ. ಆರ್ಜವವಿದೆ. ಉತ್ತಮ ಕುಲದಲ್ಲಿ ಜನಿಸಿದ್ದಾರೆ. ಸುಳ್ಳನ್ನೇ ಆಡುವುದಿಲ್ಲ. ನಾಚಿಕೆಯನ್ನು ತರುವ ಕರ್ಮಗಳನ್ನು ನಿಶ್ಚಯವಾಗಿಯೂ ನಿಷೇಧಿಸುತ್ತಾರೆ.

05025006a ನ ಯುಜ್ಯತೇ ಕರ್ಮ ಯುಷ್ಮಾಸು ಹೀನಂ ಸತ್ತ್ವಂ ಹಿ ವಸ್ತಾದೃಶಂ ಭೀಮಸೇನಾಃ।
05025006c ಉದ್ಭಾಸತೇ ಹ್ಯಂಜನಬಿಂದುವತ್ತಃ ಶುಕ್ಲೇ ವಸ್ತ್ರೇ ಯದ್ಭವೇತ್ಕಿಲ್ಬಿಷಂ ವಃ।।

ನೀವು ಹೀನ ಕರ್ಮಗಳಲ್ಲಿ ತೊಡಗುವುದಿಲ್ಲ. ಸತ್ವಯುತರಾದ ನಿಮಗೆ ಭಯಂಕರ ಸೇನೆಗಳ ಬೆಂಬಲವಿದೆ. ನೀವು ಏನಾದರೂ ಪಾಪಕೃತ್ಯವನ್ನೆಸಗಿದರೆ ಅದು ಬಿಳೀ ಬಟ್ಟೆಯ ಮೇಲೆ ಬಿದ್ದ ಕಾಡಿಗೆಯಂತೆ ನಿಮ್ಮ ಶುದ್ಧ ಹೆಸರಿಗೆ ಕಳಂಕವನ್ನು ತರುತ್ತದೆ.

05025007a ಸರ್ವಕ್ಷಯೋ ದೃಶ್ಯತೇ ಯತ್ರ ಕೃತ್ಸ್ನಃ ಪಾಪೋದಯೋ ನಿರಯೋಽಭಾವಸಂಸ್ಥಃ।
05025007c ಕಸ್ತತ್ಕುರ್ಯಾಜ್ಜಾತು ಕರ್ಮ ಪ್ರಜಾನನ್ ಪರಾಜಯೋ ಯತ್ರ ಸಮೋ ಜಯಶ್ಚ।।

ತಿಳಿದೂ ಯಾರುತಾನೇ ಸರ್ವವೂ ಕ್ಷಯವಾಗುವುದನ್ನು ನೋಡಲು ಪ್ರಜೆಗಳೆಲ್ಲರನ್ನೂ ನಾಶಪಡಿಸಬಲ್ಲ, ಪಾಪಕಾರ್ಯವನ್ನು ಮಾಡಲು ತೊಡಗುತ್ತಾನೇ?

05025008a ತೇ ವೈ ಧನ್ಯಾ ಯೈಃ ಕೃತಂ ಜ್ಞಾತಿಕಾರ್ಯಂ ಯೇ ವಃ ಪುತ್ರಾಃ ಸುಹೃದೋ ಬಾಂಧವಾಶ್ಚ।
05025008c ಉಪಕ್ರುಷ್ಟಂ ಜೀವಿತಂ ಸಂತ್ಯಜೇಯುಃ ತತಃ ಕುರೂಣಾಂ ನಿಯತೋ ವೈ ಭವಃ ಸ್ಯಾತ್।।

ಜ್ಞಾತಿಕಾರ್ಯವನ್ನು ಮಾಡುವವರೇ ಧನ್ಯರು. ತಮ್ಮ ಉಪಕೃಷ್ಟ ಜೀವಿತವನ್ನು ತ್ಯಜಿಸಲು ಸಿದ್ಧರಾಗಿರುವ ಅವರೇ ಕುರುಗಳಿಗೆ ನಿಯತರಾದ ನಿಜವಾದ ಪುತ್ರರು, ಸುಹೃದಯರು ಮತ್ತು ಬಾಂಧವರು.

05025009a ತೇ ಚೇತ್ಕುರೂನನುಶಾಸ್ಯ ಸ್ಥ ಪಾರ್ಥಾ ನಿನೀಯ ಸರ್ವಾನ್ದ್ವಿಷತೋ ನಿಗೃಹ್ಯ।
05025009c ಸಮಂ ವಸ್ತಜ್ಜೀವಿತಂ ಮೃತ್ಯುನಾ ಸ್ಯಾದ್ ಯಜ್ಜೀವಧ್ವಂ ಜ್ಞಾತಿವಧೇ ನ ಸಾಧು।।

ಒಂದುವೇಳೆ ನೀವು ಪಾರ್ಥರು ನಿಮ್ಮ ದ್ವೇಷಿಗಳನ್ನು ಸೋಲಿಸಿ ಕೊಂದು ಕುರುಗಳನ್ನು ಆಳಿದರೆ ಅನಂತರದ ನಿಮ್ಮ ಜೀವನವು ಮೃತ್ಯುವಿನಂತೆಯೇ ಇರುವುದಿಲ್ಲವೇ? ಜ್ಞಾತಿವಧೆಯನ್ನು ಮಾಡಿ ನಂತರದ ಜೀವನವು ಸಾಧುವಾಗಿರುವುದಿಲ್ಲ.

05025010a ಕೋ ಹ್ಯೇವ ಯುಷ್ಮಾನ್ಸಹ ಕೇಶವೇನ ಸಚೇಕಿತಾನಾನ್ಪಾರ್ಷತಬಾಹುಗುಪ್ತಾನ್।
05025010c ಸಸಾತ್ಯಕೀನ್ವಿಷಹೇತ ಪ್ರಜೇತುಂ ಲಬ್ಧ್ವಾಪಿ ದೇವಾನ್ಸಚಿವಾನ್ಸಹೇಂದ್ರಾನ್।।

ಯಾರುತಾನೇ - ಅವನು ದೇವತೆಗಳನ್ನೆಲ್ಲ ಸಚಿವರನ್ನಾಗಿಸಿಕೊಂಡು ಇಂದ್ರನೇ ಆಗಿದ್ದರೂ - ಕೇಶವ, ಚೇಕಿತಾನ, ಸಾತ್ಯಕಿ, ಪಾರ್ಷತರ ಬಾಹುಗಳಿಂದ ರಕ್ಷಿಸಲ್ಪಟ್ಟ ನಿಮ್ಮನ್ನು ಸೋಲಿಸಲು ಶಕ್ಯರು?

05025011a ಕೋ ವಾ ಕುರೂನ್ದ್ರೋಣಭೀಷ್ಮಾಭಿಗುಪ್ತಾನ್ ಅಶ್ವತ್ಥಾಮ್ನಾ ಶಲ್ಯಕೃಪಾದಿಭಿಶ್ಚ।
05025011c ರಣೇ ಪ್ರಸೋಢುಂ ವಿಷಹೇತ ರಾಜನ್ ರಾಧೇಯಗುಪ್ತಾನ್ಸಹ ಭೂಮಿಪಾಲೈಃ।।

ರಾಜನ್! ಹಾಗೆಯೇ ದ್ರೋಣ, ಭೀಷ್ಮ, ಅಶ್ವತ್ಥಾಮ, ಶಲ್ಯ, ಕೃಪ, ಕರ್ಣ ಮತ್ತು ಇತರ ಭೂಮಿಪಾಲರಿಂದ ರಕ್ಷಿತರಾದ ಕುರುಗಳನ್ನು ಯಾರುತಾನೇ ಸೋಲಿಸಬಲ್ಲರು?

05025012a ಮಹದ್ಬಲಂ ಧಾರ್ತರಾಷ್ಟ್ರಸ್ಯ ರಾಜ್ಞಾಃ ಕೋ ವೈ ಶಕ್ತೋ ಹಂತುಮಕ್ಷೀಯಮಾಣಃ।
05025012c ಸೋಽಹಂ ಜಯೇ ಚೈವ ಪರಾಜಯೇ ಚ ನಿಃಶ್ರೇಯಸಂ ನಾಧಿಗಚ್ಚಾಮಿ ಕಿಂ ಚಿತ್।।

ತನಗೆ ನಷ್ಟಮಾಡಿಕೊಳ್ಳದೇ ಯಾರುತಾನೇ ರಾಜಾ ಧಾರ್ತರಾಷ್ಟ್ರನ ಮಹಾ ಸೇನೆಯನ್ನು ಸಂಹರಿಸಲು ಶಕ್ತ? ಆದುದರಿಂದ ನಾನು ಜಯದಲ್ಲಿಯಾಗಲೀ ಪರಾಜಯದಲ್ಲಿಯಾಗಲೀ ಶ್ರೇಯಸ್ಸನ್ನು ಕಾಣುತ್ತಿಲ್ಲ.

05025013a ಕಥಂ ಹಿ ನೀಚಾ ಇವ ದೌಷ್ಕುಲೇಯಾ ನಿರ್ಧರ್ಮಾರ್ಥಂ ಕರ್ಮ ಕುರ್ಯುಶ್ಚ ಪಾರ್ಥಾಃ।
05025013c ಸೋಽಹಂ ಪ್ರಸಾದ್ಯ ಪ್ರಣತೋ ವಾಸುದೇವಂ ಪಾಂಚಾಲಾನಾಮಧಿಪಂ ಚೈವ ವೃದ್ಧಂ।।

ದುಷ್ಕುಲದಲ್ಲಿ ಹುಟ್ಟಿದವರು ಮಾಡುವಂಥಹ ನೀಚ ಮತ್ತು ಅಧರ್ಮಯುಕ್ತ ಕೆಲಸವನ್ನು ಹೇಗೆ ತಾನೇ ಪಾರ್ಥರು ಮಾಡಬಲ್ಲರು? ಆದುದರಿಂದ ವಾಸುದೇವ ಮತ್ತು ಪಾಂಚಾಲರ ಅಧಿಪ ವೃದ್ಧರನ್ನು ಕರುಣೆಗಾಗಿ ನಮಸ್ಕರಿಸುತ್ತೇನೆ.

05025014a ಕೃತಾಂಜಲಿಃ ಶರಣಂ ವಃ ಪ್ರಪದ್ಯೇ ಕಥಂ ಸ್ವಸ್ತಿ ಸ್ಯಾತ್ಕುರುಸೃಂಜಯಾನಾಂ।
05025014c ನ ಹ್ಯೇವ ತೇ ವಚನಂ ವಾಸುದೇವೋ ಧನಂಜಯೋ ವಾ ಜಾತು ಕಿಂ ಚಿನ್ನ ಕುರ್ಯಾತ್।।

ಕೈಮುಗಿದು ಶರಣು ಬಿದ್ದು ಕೇಳಿಕೊಳ್ಳುತ್ತಿದ್ದೇನೆ. ಕುರು ಮತ್ತು ಸೃಂಜಯರು ಹೇಗೆ ಚೆನ್ನಾಗಿರಬಹುದು? ನಿನ್ನ ಮಾತಿಗೆ ಅತಿರಿಕ್ತವಾಗಿ ವಾಸುದೇವನಾಗಲೀ ಧನಂಜಯನಾಗಲೀ ನಡೆದುಕೊಳ್ಳುವುದಿಲ್ಲ.

05025015a ಪ್ರಾಣಾನಾದೌ ಯಾಚ್ಯಮಾನಃ ಕುತೋಽನ್ಯದ್ ಏತದ್ವಿದ್ವನ್ಸಾಧನಾರ್ಥಂ ಬ್ರವೀಮಿ।
05025015c ಏತದ್ರಾಜ್ಞೋ ಭೀಷ್ಮಪುರೋಗಮಸ್ಯ ಮತಂ ಯದ್ವಃ ಶಾಂತಿರಿಹೋತ್ತಮಾ ಸ್ಯಾತ್।।

ಕೇಳಿದರೆ ಅವರಿಬ್ಬರೂ ಪ್ರಾಣಗಳನ್ನೂ ಕೊಡುತ್ತಾರೆ. ಅನ್ಯಥಾ ಮಾಡುವುದಿಲ್ಲ. ಇದನ್ನು ತಿಳಿದೇ ಸಾಧನೆಗೊಳ್ಳಲೆಂದು ಹೇಳುತ್ತಿದ್ದೇನೆ. ಇದು ರಾಜ ಮತ್ತು ಭೀಷ್ಮನೇ ಮೊದಲಾದವರ ಉತ್ತಮ ಶಾಂತಿಯನ್ನು ತರುವ ಮತ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಪಂಚವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.