024 ಸಂಜಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಸಂಜಯಯಾನ ಪರ್ವ

ಅಧ್ಯಾಯ 24

ಸಾರ

ಕೌರವರೆಲ್ಲರೂ ಕುಶಲದಿಂದಿದ್ದಾರೆಂದೂ, ಅವರು ಪಾಂಡವರ ಪರಾಕ್ರಮಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆಂದೂ, ಆದರೆ ಪಾಂಡವರು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲವೆಂದೂ, ಯುಧಿಷ್ಠಿರನು ಶಾಂತಿಯನ್ನುಂಟುಮಾಡುತ್ತಾನೆಂದು ಧೃತರಾಷ್ಟ್ರನು ನಂಬಿದ್ದಾನೆಂದೂ ಸಂಜಯನು ಪಾಂಡವರಿಗೆ ತಿಳಿಸುವುದು (1-10).

05024001 ಸಂಜಯ ಉವಾಚ।
05024001a ಯಥಾರ್ಹಸೇ ಪಾಂಡವ ತತ್ತಥೈವ ಕುರೂನ್ ಕುರುಶ್ರೇಷ್ಠ ಜನಂ ಚ ಪೃಚ್ಚಸಿ।
05024001c ಅನಾಮಯಾಸ್ತಾತ ಮನಸ್ವಿನಸ್ತೇ ಕುರುಶ್ರೇಷ್ಠಾನ್ಪೃಚ್ಚಸಿ ಪಾರ್ಥ ಯಾಂಸ್ತ್ವಂ।।

ಸಂಜಯನು ಹೇಳಿದನು: “ಪಾಂಡವ! ನೀನು ಹೇಳಿದಂತೆಯೇ ಇದೆ. ತಾತ! ಮನಸ್ವೀ! ಕುರುಗಳ ಮತ್ತು ಕುರುಶ್ರೇಷ್ಠ ಜನರ ಕುಶಲವನ್ನು ಕೇಳುತ್ತಿದ್ದೀಯಲ್ಲ. ಪಾರ್ಥ! ಯಾವ ಕುರುಶ್ರೇಷ್ಠರ ಕುರಿತು ನೀನು ಕೇಳುತ್ತಿದ್ದೀಯೋ ಅವರು ಅನಾಮಯರಾಗಿದ್ದಾರೆ.

05024002a ಸಂತ್ಯೇವ ವೃದ್ಧಾಃ ಸಾಧವೋ ಧಾರ್ತರಾಷ್ಟ್ರೇ ಸಂತ್ಯೇವ ಪಾಪಾಃ ಪಾಂಡವ ತಸ್ಯ ವಿದ್ಧಿ।
05024002c ದದ್ಯಾದ್ರಿಪೋಶ್ಚಾಪಿ ಹಿ ಧಾರ್ತರಾಷ್ಟ್ರಃ ಕುತೋ ದಾಯಾಽಲ್ಲೋಪಯೇದ್ಬ್ರಾಹ್ಮಣಾನಾಂ।।

ಪಾಂಡವ! ಧಾರ್ತರಾಷ್ಟ್ರನ ಬಳಿ ಸಂತರೂ, ವೃದ್ಧರೂ ಮತ್ತು ಪಾಪಿಗಳೂ ಇದ್ದಾರೆಂದು ತಿಳಿ. ಧಾರ್ತರಾಷ್ಟ್ರನು ರಿಪುಗಳಿಗೂ ಕೊಡುತ್ತಾನೆ. ಹಾಗಿರುವಾಗ ಬ್ರಾಹ್ಮಣರಿಗೆ ಕೊಟ್ಟಿದ್ದುದನ್ನು ಹೇಗೆ ತಾನೇ ಕಸಿದುಕೊಳ್ಳುತ್ತಾನೆ?

05024003a ಯದ್ಯುಷ್ಮಾಕಂ ವರ್ತತೇಽಸೌ ನ ಧರ್ಮ್ಯಂ ಅದ್ರುಗ್ಧೇಷು ದ್ರುಗ್ಧವತ್ತನ್ನ ಸಾಧು।
05024003c ಮಿತ್ರಧ್ರುಕ್ಸ್ಯಾದ್ಧೃತರಾಷ್ಟ್ರಃ ಸಪುತ್ರೋ ಯುಷ್ಮಾನ್ದ್ವಿಷನ್ಸಾಧುವೃತ್ತಾನಸಾಧುಃ।।

ನಿಮ್ಮ ಈ ನಡವಳಿಕೆಯು ಧರ್ಮಯುತವಾದುದಲ್ಲ. ನಿಮಗೆ ಕೆಟ್ಟದ್ದನ್ನು ಬಯಸದೇ ಇರುವವರ ಮೇಲೂ ಹಗೆತನವನ್ನು ಸಾಧಿಸುವುದು ಒಳ್ಳೆಯದಲ್ಲ. ಪುತ್ರರೊಂದಿಗೆ ಧೃತರಾಷ್ಟ್ರನು ಸಾಧುನಡತೆಯುಳ್ಳ ನಿಮ್ಮೊಂದಿಗೆ ದ್ವೇಷಿಗಳಂತೆ ನಡೆದುಕೊಳ್ಳುವುದು ಸಾಧುವಲ್ಲ. ಇದು ಮಿತ್ರರೊಡನೆ ಹಗೆಸಾಧಿಸಿದಂತೆ.

05024004a ನ ಚಾನುಜಾನಾತಿ ಭೃಶಂ ಚ ತಪ್ಯತೇ ಶೋಚತ್ಯಂತಃ ಸ್ಥವಿರೋಽಜಾತಶತ್ರೋ।
05024004c ಶೃಣೋತಿ ಹಿ ಬ್ರಾಹ್ಮಣಾನಾಂ ಸಮೇತ್ಯ ಮಿತ್ರದ್ರೋಹಃ ಪಾತಕೇಭ್ಯೋ ಗರೀಯಾನ್।।

ಅಜಾತಶತ್ರೋ! ಅವನು ಈ ರೀತಿ ಕಾಡಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಆಗಿದ್ದುದಕ್ಕೆ ಅತ್ಯಂತ ದುಃಖಿತನಾಗಿದ್ದಾನೆ. ಮಿತ್ರದ್ರೋಹವು ಎಲ್ಲ ಪಾಪಗಳಿಗಿಂತಲೂ ಹೆಚ್ಚಿನದು ಎಂದು ಬ್ರಾಹ್ಮಣರು ಸೇರಿ ಅವನಿಗೆ ಹೇಳಿದ್ದಾರೆ.

05024005a ಸ್ಮರಂತಿ ತುಭ್ಯಂ ನರದೇವ ಸಂಗಮೇ ಯುದ್ಧೇ ಚ ಜಿಷ್ಣೋಶ್ಚ ಯುಧಾಂ ಪ್ರಣೇತುಃ।
05024005c ಸಮುತ್ಕೃಷ್ಟೇ ದುಂದುಭಿಶಂಖಶಬ್ದೇ ಗದಾಪಾಣಿಂ ಭೀಮಸೇನಂ ಸ್ಮರಂತಿ।।

ನರದೇವ! ಯುದ್ಧಕ್ಕೆ ಸೇರಿದಾಗ ನಿನ್ನನ್ನು ಮತ್ತು ಯೋಧರ ನಾಯಕನಾದ ಜಿಷ್ಣುವನ್ನು ನೆನಪಿಸಿಕೊಳ್ಳುತ್ತಾರೆ. ಶಂಖ ಮತ್ತು ದುಂಧುಭಿಗಳ ಶಬ್ದವು ಕೇಳಿದಾಗಲೆಲ್ಲ ಗದಾಪಾಣಿ ಭೀಮಸೇನನನ್ನು ಸ್ಮರಿಸಿಕೊಳ್ಳುತ್ತಾರೆ.

05024006a ಮಾದ್ರೀಸುತೌ ಚಾಪಿ ರಣಾಜಿಮಧ್ಯೇ ಸರ್ವಾ ದಿಶಃ ಸಂಪತಂತೌ ಸ್ಮರಂತಿ।
05024006c ಸೇನಾಂ ವರ್ಷಂತೌ ಶರವರ್ಷೈರಜಸ್ರಂ ಮಹಾರಥೌ ಸಮರೇ ದುಷ್ಪ್ರಕಂಪ್ಯೌ।।

ರಣದ ಮಧ್ಯದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಹೋಗಬಲ್ಲ, ಶತ್ರುಸೇನೆಯ ಮೇಲೆ ಒಂದೇಸಮನೆ ಶರಗಳ ಮಳೆಯನ್ನು ಸುರಿಸುವ, ಸಮರದಲ್ಲಿ ಇತರರನ್ನು ನಡುಗಿಸಬಲ್ಲ, ಮಹಾರಥಿ ಮಾದ್ರೀ ಸುತರಿಬ್ಬರನ್ನೂ ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ.

05024007a ನ ತ್ವೇವ ಮನ್ಯೇ ಪುರುಷಸ್ಯ ರಾಜನ್ನ್ ಅನಾಗತಂ ಜ್ಞಾಯತೇ ಯದ್ಭವಿಷ್ಯಂ।
05024007c ತ್ವಂ ಚೇದಿಮಂ ಸರ್ವಧರ್ಮೋಪಪನ್ನಃ ಪ್ರಾಪ್ತಃ ಕ್ಲೇಶಂ ಪಾಂಡವ ಕೃಚ್ಚ್ರರೂಪಂ।।

ರಾಜನ್! ಪುರುಷನಿಗೆ ಭವಿಷ್ಯದಲ್ಲಿ ಏನು ಬರುತ್ತದೆಯೋ ಎಂದು ತಿಳಿಯವುದು ಕಷ್ಟ. ಪಾಂಡವ! ಸರ್ವಧರ್ಮೋಪನ್ನನಾದ ನೀನೂ ಕೂಡ ಸಹಿಸಲಾಧ್ಯವಾದ ಕಷ್ಟಗಳನ್ನು ಪಡೆದೆ.

05024008a ತ್ವಮೇವೈತತ್ಸರ್ವಮತಶ್ಚ ಭೂಯಃ ಸಮೀಕುರ್ಯಾಃ ಪ್ರಜ್ಞಾಯಾಜಾತಶತ್ರೋ।
05024008c ನ ಕಾಮಾರ್ಥಂ ಸಂತ್ಯಜೇಯುರ್ಹಿ ಧರ್ಮಂ ಪಾಂಡೋಃ ಸುತಾಃ ಸರ್ವ ಏವೇಂದ್ರಕಲ್ಪಾಃ।।

ಅಜಾತಶತ್ರೋ! ಪ್ರಜ್ಞೆಯಿಂದ ನೀನೇ ಆದ ಇವೆಲ್ಲವನ್ನೂ ಸರಿಪಡೆಸಿಕೊಳುತ್ತೀಯೆ ಎನ್ನುವುದು ಖಂಡಿತ. ಇಂದ್ರಸಮರಾದ ಪಾಂಡುವಿನ ಮಕ್ಕಳು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲ.

05024009a ತ್ವಮೇವೈತತ್ಪ್ರಜ್ಞಾಯಾಜಾತಶತ್ರೋ ಶಮಂ ಕುರ್ಯಾ ಯೇನ ಶರ್ಮಾಪ್ನುಯುಸ್ತೇ।
05024009c ಧಾರ್ತರಾಷ್ಟ್ರಾಃ ಪಾಂಡವಾಃ ಸೃಂಜಯಾಶ್ಚ ಯೇ ಚಾಪ್ಯನ್ಯೇ ಪಾರ್ಥಿವಾಃ ಸಮ್ನಿವಿಷ್ಟಾಃ।।

ಅಜಾತಶತ್ರೋ! ಪ್ರಜ್ಞೆಯಿಂದಲೇ ನೀನು ಧಾರ್ತರಾಷ್ಟ್ರರು, ಪಾಂಡವರು, ಸೃಂಜಯರು ಮತ್ತು ಇಲ್ಲಿ ಸೇರಿರುವ ಇತರ ರಾಜರೂ ಕೂಡ ಶಾಂತಿಯನ್ನು ಹೊಂದುವಂತೆ ಮಾಡುತ್ತೀಯೆ.

05024010a ಯನ್ಮಾಬ್ರವೀದ್ಧೃತರಾಷ್ಟ್ರೋ ನಿಶಾಯಾಂ ಅಜಾತಶತ್ರೋ ವಚನಂ ಪಿತಾ ತೇ।
05024010c ಸಹಾಮಾತ್ಯಃ ಸಹಪುತ್ರಶ್ಚ ರಾಜನ್ ಸಮೇತ್ಯ ತಾಂ ವಾಚಮಿಮಾಂ ನಿಬೋಧ।।

ಅಜಾತಶತ್ರೋ! ರಾಜನ್! ನಿನ್ನ ತಂದೆ ಧೃತರಾಷ್ಟ್ರನ ಮಾತನ್ನು ನಾನು ಹೇಳಿದ್ದೇನೆ. ಅವನು ಅಮಾತ್ಯರೊಡನೆ ಮತ್ತು ಮಕ್ಕಳೊಂದಿಗೆ ವಿಚಾರಿಸಿ ನನಗೆ ಈ ಮಾತುಗಳನ್ನು ತಿಳಿಸಿದ್ದಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಚತುರ್ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ನಾಲ್ಕನೆಯ ಅಧ್ಯಾಯವು.