ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಸಂಜಯಯಾನ ಪರ್ವ
ಅಧ್ಯಾಯ 23
ಸಾರ
ಸಂಜಯನು ಉಪಪ್ಲವ್ಯಕ್ಕೆ ಬಂದು ಧೃತರಾಷ್ಟ್ರನು ಪಾಂಡವರ ಕುಶಲವನ್ನು ಕೇಳಿದ್ದಾನೆಂದು ಹೇಳಲು (1-5), ಯುಧಿಷ್ಠಿರನು ಕೌರವರ ಕುಶಲವನ್ನೂ (6-14), ಅವರು ಭೀಮಾರ್ಜುನರ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತಿದ್ದಾರೆಯೇ ಎಂದು ಕೇಳುವುದು (15-27).
05023001 ವೈಶಂಪಾಯನ ಉವಾಚ।
05023001a ರಾಜ್ಞಾಸ್ತು ವಚನಂ ಶ್ರುತ್ವಾ ಧೃತರಾಷ್ಟ್ರಸ್ಯ ಸಂಜಯಃ।
05023001c ಉಪಪ್ಲವ್ಯಂ ಯಯೌ ದ್ರಷ್ಟುಂ ಪಾಂಡವಾನಮಿತೌಜಸಃ।।
ವೈಶಂಪಾಯನನು ಹೇಳಿದನು: “ರಾಜಾ ಧೃತರಾಷ್ಟ್ರನ ಮಾತನ್ನು ಕೇಳಿ ಸಂಜಯನು ಅಮಿತೌಜಸ ಪಾಂಡವರನ್ನು ಕಾಣಲು ಉಪಪ್ಲವ್ಯಕ್ಕೆ ಬಂದನು.
05023002a ಸ ತು ರಾಜಾನಮಾಸಾದ್ಯ ಧರ್ಮಾತ್ಮಾನಂ ಯುಧಿಷ್ಠಿರಂ।
05023002c ಪ್ರಣಿಪತ್ಯ ತತಃ ಪೂರ್ವಂ ಸೂತಪುತ್ರೋಽಭ್ಯಭಾಷತ।।
ರಾಜಾ ಧರ್ಮಾತ್ಮ ಯುಧಿಷ್ಠಿರನ ಬಳಿಬಂದು ಮೊದಲಿಗೆ ನಮಸ್ಕರಿಸಿ ಸೂತಪುತ್ರನು ಮಾತನಾಡಿದನು.
05023003a ಗಾವಲ್ಗಣಿಃ ಸಂಜಯಃ ಸೂತಸೂನುರ್। ಅಜಾತಶತ್ರುಮವದತ್ಪ್ರತೀತಃ।
05023003c ದಿಷ್ಟ್ಯಾ ರಾಜಂಸ್ತ್ವಾಮರೋಗಂ ಪ್ರಪಶ್ಯೇ। ಸಹಾಯವಂತಂ ಚ ಮಹೇಂದ್ರಕಲ್ಪಂ।।
ಗಾವಲ್ಗಣಿ ಸೂತಸೂನು ಸಂಜಯನು ಅಜಾತಶತ್ರುವಿಗೆ ಸಂತೋಷದಿಂದ ಹೇಳಿದನು: “ರಾಜನ್! ಒಳ್ಳೆಯದಾಯಿತು ಮಹೇಂದ್ರ ಸಮನಾದವರ ಸಹಾಯವನ್ನು ಪಡೆದಿರುವ, ಆರೋಗ್ಯದಿಂದಿರುವ ನಿನ್ನನ್ನು ನೋಡುತ್ತಿದ್ದೇನೆ.
05023004a ಅನಾಮಯಂ ಪೃಚ್ಚತಿ ತ್ವಾಂಬಿಕೇಯೋ। ವೃದ್ಧೋ ರಾಜಾ ಧೃತರಾಷ್ಟ್ರೋ ಮನೀಷೀ।
05023004c ಕಚ್ಚಿದ್ಭೀಮಃ ಕುಶಲೀ ಪಾಂಡವಾಗ್ರ್ಯೋ। ಧನಂಜಯಸ್ತೌ ಚ ಮಾದ್ರೀತನೂಜೌ।।
ಅಂಬಿಕೇಯ, ವೃದ್ಧ ರಾಜಾ ಮನೀಷೀ ಧೃತರಾಷ್ಟ್ರನು ಪಾಂಡವಾಗ್ರಜನ, ಭೀಮನ, ಧನಂಜಯನ ಮತ್ತು ಮಾದ್ರೀಸುತರ ಕುಶಲವನ್ನು ಕೇಳುತ್ತಾನೆ.
05023005a ಕಚ್ಚಿತ್ಕೃಷ್ಣಾ ದ್ರೌಪದೀ ರಾಜಪುತ್ರೀ ಸತ್ಯವ್ರತಾ ವೀರಪತ್ನೀ ಸಪುತ್ರಾ।
05023005c ಮನಸ್ವಿನೀ ಯತ್ರ ಚ ವಾಂಚಸಿ ತ್ವಂ ಇಷ್ಟಾನ್ಕಾಮಾನ್ಭಾರತ ಸ್ವಸ್ತಿಕಾಮಃ।।
ಯಾರ ಕಾಮ-ಇಷ್ಟಗಳನ್ನು ನೀನು ಪೂರೈಸುತ್ತೀಯೋ ಆ ಕೃಷ್ಣೆ, ದ್ರೌಪದೀ, ಮನಸ್ವಿನೀ, ಸತ್ಯವ್ರತೆ, ವೀರಪತ್ನಿಯು ಕೂಡ ಪುತ್ರರೊಂದಿಗೆ ಚೆನ್ನಾಗಿದ್ದಾಳೆ ತಾನೇ?”
05023006 ಯುಧಿಷ್ಠಿರ ಉವಾಚ।
05023006a ಗಾವಲ್ಗಣೇ ಸಂಜಯ ಸ್ವಾಗತಂ ತೇ ಪ್ರೀತಾತ್ಮಾಹಂ ತ್ವಾಭಿವದಾಮಿ ಸೂತ।
05023006c ಅನಾಮಯಂ ಪ್ರತಿಜಾನೇ ತವಾಹಂ ಸಹಾನುಜೈಃ ಕುಶಲೀ ಚಾಸ್ಮಿ ವಿದ್ವನ್।।
ಯುಧಿಷ್ಠಿರನು ಹೇಳಿದನು: “ಗಾವಲ್ಗಣಿ! ಸಂಜಯ! ನಿನಗೆ ಸ್ವಾಗತ! ನಿನ್ನನ್ನು ನೋಡಿ ನಾವು ಸಂತೋಷಗೊಂಡಿದ್ದೇವೆ. ಸೂತ! ಹಿಂದಿರುಗಿ ನಿನ್ನ ಕುಶಲವನ್ನು ಕೇಳುತ್ತೇನೆ. ವಿದ್ವನ್! ನಾನು ಅನುಜರೊಂದಿಗೆ ಕುಶಲನಾಗಿದ್ದೇನೆ ಎಂದು ತಿಳಿ.
05023007a ಚಿರಾದಿದಂ ಕುಶಲಂ ಭಾರತಸ್ಯ ಶ್ರುತ್ವಾ ರಾಜ್ಞಾಃ ಕುರುವೃದ್ಧಸ್ಯ ಸೂತ।
05023007c ಮನ್ಯೇ ಸಾಕ್ಷಾದ್ದೃಷ್ಟಮಹಂ ನರೇಂದ್ರಂ ದೃಷ್ಟ್ವೈವ ತ್ವಾಂ ಸಂಜಯ ಪ್ರೀತಿಯೋಗಾತ್।।
ಸೂತ! ಬಹಳ ಸಮಯದ ನಂತರ ಈಗ ಆ ಭಾರತ ಕುರುವೃದ್ಧ ರಾಜನ ಕುಶಲತೆಯ ಕುರಿತು ಕೇಳುತ್ತಿದ್ದೇನೆ. ಸಂಜಯ! ನಿನ್ನನ್ನು ನೋಡಿ ಆ ನರೇಂದ್ರನನ್ನೇ ನೋಡಿದ್ದೇನೋ ಎನ್ನುವಷ್ಟು ಸಂತೋಷವಾಗುತ್ತಿದೆ.
05023008a ಪಿತಾಮಹೋ ನಃ ಸ್ಥವಿರೋ ಮನಸ್ವೀ ಮಹಾಪ್ರಾಜ್ಞಾಃ ಸರ್ವಧರ್ಮೋಪಪನ್ನಃ।
05023008c ಸ ಕೌರವ್ಯಃ ಕುಶಲೀ ತಾತ ಭೀಷ್ಮೋ ಯಥಾಪೂರ್ವಂ ವೃತ್ತಿರಪ್ಯಸ್ಯ ಕಚ್ಚಿತ್।।
ತಾತ! ಪಿತಾಮಹ, ವೃದ್ಧ, ಮನಸ್ವಿ, ಮಹಾಪ್ರಾಜ್ಞ, ಸರ್ವಧರ್ಮೋಪಪನ್ನ, ಕೌರವ್ಯ ಭೀಷ್ಮನು ಕುಶಲನಾಗಿದ್ದಾನೆ ತಾನೇ? ಮೊದಲಿನಂತೆಯೇ ಈಗಲೂ ವೃತ್ತಿಪರನಾಗಿದ್ದಾನೆಯೇ?
05023009a ಕಶ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರೋ ವೈಚಿತ್ರವೀರ್ಯಃ ಕುಶಲೀ ಮಹಾತ್ಮಾ।
05023009c ಮಹಾರಾಜೋ ಬಾಹ್ಲಿಕಃ ಪ್ರಾತಿಪೇಯಃ ಕಚ್ಚಿದ್ವಿದ್ವಾನ್ಕುಶಲೀ ಸೂತಪುತ್ರ।।
ಮಹಾತ್ಮ ವೈಚಿತ್ರವೀರ್ಯ, ಮಹಾರಾಜ ಧೃತರಾಷ್ಟ್ರನು ಪುತ್ರರೊಂದಿಗೆ ಕುಶಲನಾಗಿದ್ದಾನೆಯೇ? ಸೂತಪುತ್ರ! ಮಹಾರಾಜ ಬಾಹ್ಲೀಕ, ಪ್ರತೀಪನ ಮಗ, ವಿದ್ವಾನನು ಕುಶಲನಾಗಿದ್ದಾನೆಯೇ?
05023010a ಸ ಸೋಮದತ್ತಃ ಕುಶಲೀ ತಾತ ಕಚ್ಚಿದ್ ಭೂರಿಶ್ರವಾಃ ಸತ್ಯಸಂಧಃ ಶಲಶ್ಚ।
05023010c ದ್ರೋಣಃ ಸಪುತ್ರಶ್ಚ ಕೃಪಶ್ಚ ವಿಪ್ರೋ ಮಹೇಷ್ವಾಸಾಃ ಕಚ್ಚಿದೇತೇಽಪ್ಯರೋಗಾಃ।।
ತಾತ! ಸೋಮದತ್ತನು ಕುಶಲನಾಗಿದ್ದಾನೆಯೇ? ಹಾಗೆಯೇ ಭೂರಿಶ್ರವ, ಸತ್ಯಸಂಧ, ಶಲ, ಮಹೇಷ್ವಾಸ ವಿಪ್ರರಾದ ದ್ರೋಣ, ಅವನ ಮಗ ಮತ್ತು ಕೃಪರು ಆರೋಗ್ಯದಿಂದಿದ್ದಾರೆ ತಾನೇ?
05023011a ಮಹಾಪ್ರಾಜ್ಞಾಃ ಸರ್ವಶಾಸ್ತ್ರಾವದಾತಾ ಧನುರ್ಭೃತಾಂ ಮುಖ್ಯತಮಾಃ ಪೃಥಿವ್ಯಾಂ।
05023011c ಕಚ್ಚಿನ್ಮಾನಂ ತಾತ ಲಭಂತ ಏತೇ ಧನುರ್ಭೃತಃ ಕಚ್ಚಿದೇತೇಽಪ್ಯರೋಗಾಃ।।
ತಾತ! ಮಹಾಪ್ರಾಜ್ಞರು, ಸರ್ವಶಾಸ್ತ್ರಾವದಾತರು, ಭೂಮಿಯಲ್ಲಿಯೇ ಧನುಭೃತರಲ್ಲಿ ಮುಖ್ಯತಮರು ಗೌರವವನ್ನು ಪಡೆಯುತ್ತಿದ್ದಾರೆಯೇ? ಈ ಧನುಭೃತರು ಆರೋಗ್ಯದಿಂದಾರಲ್ಲವೇ?
05023012a ಸರ್ವೇ ಕುರುಭ್ಯಃ ಸ್ಪೃಹಯಂತಿ ಸಂಜಯ ಧನುರ್ಧರಾ ಯೇ ಪೃಥಿವ್ಯಾಂ ಯುವಾನಃ।
05023012c ಯೇಷಾಂ ರಾಷ್ಟ್ರೇ ನಿವಸತಿ ದರ್ಶನೀಯೋ ಮಹೇಷ್ವಾಸಃ ಶೀಲವಾನ್ದ್ರೋಣಪುತ್ರಃ।।
ಸಂಜಯ! ಇವರೆಲ್ಲರೂ ಕುರುಗಳಿಗೆ ಅಂಟಿಕೊಂಡಿದ್ದಾರೆ. ಪೃಥ್ವಿಯ ಧನುರ್ಧರ ಯುವಕರೆಲ್ಲಾ ಮತ್ತು ನೋಡಲು ಸುಂದರನಾದ ಮಹೇಷ್ವಾಸ ಶೀಲವಂತ ದ್ರೋಣಪುತ್ರನು ಅವರ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ.
05023013a ವೈಶ್ಯಾಪುತ್ರಃ ಕುಶಲೀ ತಾತ ಕಚ್ಚಿನ್ ಮಹಾಪ್ರಾಜ್ಞೋ ರಾಜಪುತ್ರೋ ಯುಯುತ್ಸುಃ।
05023013c ಕರ್ಣೋಽಮಾತ್ಯಃ ಕುಶಲೀ ತಾತ ಕಚ್ಚಿತ್ ಸುಯೋಧನೋ ಯಸ್ಯ ಮಂದೋ ವಿಧೇಯಃ।।
ತಾತ! ವೈಶ್ಯಾಪುತ್ರ, ಮಹಾಪ್ರಾಜ್ಞ, ರಾಜಪುತ್ರ ಯುಯುತ್ಸುವು ಕುಶಲನಾಗಿದ್ದಾನೆಯೇ? ತಾತ! ಮಂದ ಸುಯೋಧನ, ಮತ್ತು ಅವನಿಗೆ ವಿಧೇಯನಾಗಿರುವ ಅಮಾತ್ಯ ಕರ್ಣರು ಕುಶಲರಾಗಿದ್ದಾರೆಯೇ?
05023014a ಸ್ತ್ರಿಯೋ ವೃದ್ಧಾ ಭಾರತಾನಾಂ ಜನನ್ಯೋ ಮಹಾನಸ್ಯೋ ದಾಸಭಾರ್ಯಾಶ್ಚ ಸೂತ।
05023014c ವಧ್ವಃ ಪುತ್ರಾ ಭಾಗಿನೇಯಾ ಭಗಿನ್ಯೋ ದೌಹಿತ್ರಾ ವಾ ಕಚ್ಚಿದಪ್ಯವ್ಯಲೀಕಾಃ।।
ಸೂತ! ಭಾರತರ ವೃದ್ಧ ಸ್ತ್ರೀಯರು, ಜನನಿಯರು, ಅಡುಗೆಮನೆಯ ದಾಸಿಯರು, ಭಾರ್ಯೆಯರ ದಾಸಿಯರು, ಸೊಸೆಯಂದಿರು, ಮಕ್ಕಳು, ಸಹೋದರಿಯರು, ಸಹೋದರಿಯರ ಮಕ್ಕಳು, ಮತ್ತು ಮಗಳ ಮಕ್ಕಳು ಆರೋಗ್ಯದಿಂದ ಇದ್ದಾರೆಯೇ?
05023015a ಕಚ್ಚಿದ್ರಾಜಾ ಬ್ರಾಹ್ಮಣಾನಾಂ ಯಥಾವತ್ ಪ್ರವರ್ತತೇ ಪೂರ್ವವತ್ತಾತ ವೃತ್ತಿಂ।
05023015c ಕಚ್ಚಿದ್ದಾಯಾನ್ಮಾಮಕಾನ್ಧಾರ್ತರಾಷ್ಟ್ರೋ ದ್ವಿಜಾತೀನಾಂ ಸಂಜಯ ನೋಪಹಂತಿ।।
ಸಂಜಯ! ತಾತ! ಹಿಂದಿನಂತೆ ರಾಜನು ಬ್ರಾಹ್ಮಣರ ವೃತ್ತಿಯನ್ನು ಯಥಾವತ್ತಾಗಿ ಮಾಡಲು ಬಿಡುತ್ತಾನೆಯೇ? ನನ್ನ ದಾಯಾದಿಗಳಾದ ಧಾರ್ತರಾಷ್ಟ್ರರು ದ್ವಿಜಾತಿಯವರಿಗೆ ನಾನು ನೀಡಿದ್ದ ದಾನಗಳನ್ನು ಕಸಿದುಕೊಂಡಿಲ್ಲ ತಾನೇ?
05023016a ಕಚ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರ ಉಪೇಕ್ಷತೇ ಬ್ರಾಹ್ಮಣಾತಿಕ್ರಮಾನ್ವೈ।
05023016c ಕಚ್ಚಿನ್ನ ಹೇತೋರಿವ ವರ್ತ್ಮಭೂತ ಉಪೇಕ್ಷತೇ ತೇಷು ಸ ನ್ಯೂನವೃತ್ತಿಂ।।
ರಾಜ ಧೃತರಾಷ್ಟ್ರನು ಪುತ್ರರು ಬ್ರಾಹ್ಮಣರನ್ನು ಅತಿಕ್ರಮಿಸುವುದನ್ನು ಉಪೇಕ್ಷಿಸುತ್ತಾನೆ ತಾನೇ? ಅವರಲ್ಲಿ ಆ ನ್ಯೂನವೃತ್ತಿಯನ್ನು ಉಪೇಕ್ಷಿಸಬೇಕು. ಎಕೆಂದರೆ ಇದು ಸ್ವರ್ಗಕ್ಕಿರುವ ಒಂದೇ ಮಾರ್ಗ.
05023017a ಏತಜ್ಜ್ಯೋತಿರುತ್ತಮಂ ಜೀವಲೋಕೇ ಶುಕ್ಲಂ ಪ್ರಜಾನಾಂ ವಿಹಿತಂ ವಿಧಾತ್ರಾ।
05023017c ತೇ ಚೇಲ್ಲೋಭಂ ನ ನಿಯಚ್ಚಂತಿ ಮಂದಾಃ ಕೃತ್ಸ್ನೋ ನಾಶೋ ಭವಿತಾ ಕೌರವಾಣಾಂ।।
ಇದೇ ಜೀವಲೋಕದಲ್ಲಿ ವಿಧಾತ್ರನು ಪ್ರಜೆಗಳಿಗೆ ವಿಹಿಸಿರುವ ಉತ್ತಮ ಶ್ವೇತವರ್ಣದ ಜ್ಯೋತಿ. ಆ ಮಂದರು ಅವರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಕೌರವರ ಸರ್ವನಾಶವಾಗುತ್ತದೆ.
05023018a ಕಚ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರೋ ಬುಭೂಷತೇ ವೃತ್ತಿಮಮಾತ್ಯವರ್ಗೇ।
05023018c ಕಚ್ಚಿನ್ನ ಭೇದೇನ ಜಿಜೀವಿಷಂತಿ ಸುಹೃದ್ರೂಪಾ ದುರ್ಹೃದಶ್ಚೈಕಮಿತ್ರಾಃ।।
ರಾಜಾ ಧೃತರಾಷ್ಟ್ರನು ಪುತ್ರರೊಡನೆ ಅಮಾತ್ಯವರ್ಗಕ್ಕೆ ವೃತ್ತಿವೇತನವನ್ನು ಕೊಡುತ್ತಿದ್ದಾನೆಯೇ? ಅಮಿತ್ರರು ಸುಹೃದಯರಂತೆ ವೇಷಧರಿಸಿ ಅವರಲ್ಲಿ ಭೇದವನ್ನು ತರುವ ಶತ್ರುಗಳ್ಯಾರೂ ಅವರಿಗಿಲ್ಲ ತಾನೇ?
05023019a ಕಚ್ಚಿನ್ನ ಪಾಪಂ ಕಥಯಂತಿ ತಾತ ತೇ ಪಾಂಡವಾನಾಂ ಕುರವಃ ಸರ್ವ ಏವ।
05023019c ಕಚ್ಚಿದ್ದೃಷ್ಟ್ವಾ ದಸ್ಯುಸಂಘಾನ್ಸಮೇತಾನ್ ಸ್ಮರಂತಿ ಪಾರ್ಥಸ್ಯ ಯುಧಾಂ ಪ್ರಣೇತುಃ।।
ತಾತ! ಕೌರವರೆಲ್ಲರೂ ಪಾಂಡವರ ಪಾಪಗಳ ಕುರಿತು ಮಾತನಾಡಿಕೊಳ್ಳುವುದಿಲ್ಲ ತಾನೇ? ದಸ್ಯುಗಳ ದಂಡನ್ನು ನೋಡಿದಾಗ ಅವರು ಯುದ್ಧದಲ್ಲಿ ಪ್ರಣೀತನಾದ ಪಾರ್ಥನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023020a ಮೌರ್ವೀಭುಜಾಗ್ರಪ್ರಹಿತಾನ್ಸ್ಮ ತಾತ ದೋಧೂಯಮಾನೇನ ಧನುರ್ಧರೇಣ।
05023020c ಗಾಂಡೀವಮುಕ್ತಾನ್ಸ್ತನಯಿತ್ನುಘೋಷಾನ್ ಅಜಿಹ್ಮಗಾನ್ಕಚ್ಚಿದನುಸ್ಮರಂತಿ।।
ತಾತ! ಭುಜದ ಮೇಲೇರಿಸಿ ಗಾಂಡೀವ ಧನುಸ್ಸಿನಿಂದ ಬಿಟ್ಟ, ಗಾಳಿಯಲ್ಲಿ ನೇರವಾಗಿ, ಗುಡುಗಿನಂತೆ ಮೊಳಗುತ್ತ ಸಾಗುವ ಬಾಣಗಳನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ?
05023021a ನ ಹ್ಯಪಶ್ಯಂ ಕಂ ಚಿದಹಂ ಪೃಥಿವ್ಯಾಂ ಶ್ರುತಂ ಸಮಂ ವಾಧಿಕಮರ್ಜುನೇನ।
05023021c ಯಸ್ಯೈಕಷಷ್ಟಿರ್ನಿಶಿತಾಸ್ತೀಕ್ಷ್ಣಧಾರಾಃ ಸುವಾಸಸಃ ಸಮ್ಮತೋ ಹಸ್ತವಾಪಃ।।
ಒಂದೇ ಒಂದು ಹಸ್ತ ಚಳಕದಲ್ಲಿ ಅರವತ್ತೊಂದು ಖಡ್ಗಗಳಂತೆ ತೀಕ್ಷ್ಣ, ಗರಿಗಳುಳ್ಳ, ಹರಿತ ಬಾಣಗಳನ್ನು ಒಟ್ಟಿಗೇ ಬಿಡಬಲ್ಲ ಅರ್ಜುನನ್ನು ಹೋಲುವ ಅಥವಾ ಮೀರಿಸುವವರನ್ನು ಈ ಭೂಮಿಯಲ್ಲಿ ನಾನು ನೋಡಿಲ್ಲ ಅಥವಾ ಕೇಳಿಲ್ಲ.
05023022a ಗದಾಪಾಣಿರ್ಭೀಮಸೇನಸ್ತರಸ್ವೀ ಪ್ರವೇಪಯಂ ಶತ್ರುಸಂಘಾನನೀಕೇ।
05023022c ನಾಗಃ ಪ್ರಭಿನ್ನ ಇವ ನಡ್ವಲಾಸು ಚಂಕ್ರಮ್ಯತೇ ಕಚ್ಚಿದೇನಂ ಸ್ಮರಂತಿ।।
ವ್ಯೂಹಗಳಲ್ಲಿ ರಚಿತಗೊಂಡ ಶತ್ರುಸಂಘಗಳನ್ನು ಭಯದಿಂದ ಕಂಪಿಸುವಂತೆ ಮಾಡುವ, ಕಪಾಲಗಳು ಒಡೆದ ಆನೆಯಂತೆ ಸಂಚರಿಸುವ ಗದಾಪಾಣೀ, ತರಸ್ವೀ ಭೀಮಸೇನನನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ?
05023023a ಮಾದ್ರೀಪುತ್ರಃ ಸಹದೇವಃ ಕಲಿಂಗಾನ್ ಸಮಾಗತಾನಜಯದ್ದಂತಕೂರೇ।
05023023c ವಾಮೇನಾಸ್ಯನ್ದಕ್ಷಿಣೇನೈವ ಯೋ ವೈ ಮಹಾಬಲಂ ಕಚ್ಚಿದೇನಂ ಸ್ಮರಂತಿ।।
ಎಡ ಮತ್ತು ಬಲಗೈ ಎರಡರಿಂದಲೂ ಬಾಣಗಳನ್ನು ಪ್ರಯೋಗಿಸುತ್ತಾ ದಂತಕೂರದಲ್ಲಿ ಸೇರಿದ್ದ ಕಲಿಂಗರನ್ನು ಜಯಿಸಿದ ಮಾದ್ರೀಪುತ್ರ, ಮಹಾಬಲಿ, ಸಹದೇವನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023024a ಉದ್ಯನ್ನಯಂ ನಕುಲಃ ಪ್ರೇಷಿತೋ ವೈ ಗಾವಲ್ಗಣೇ ಸಂಜಯ ಪಶ್ಯತಸ್ತೇ।
05023024c ದಿಶಂ ಪ್ರತೀಚೀಂ ವಶಮಾನಯನ್ಮೇ ಮಾದ್ರೀಸುತಂ ಕಚ್ಚಿದೇನಂ ಸ್ಮರಂತಿ।।
ಗಾವಲ್ಗಣೇ! ಸಂಜಯ! ನೀನು ನೋಡುತ್ತಿದ್ದಂತೇ ಪೂರ್ವದಿಕ್ಕಿಗೆ ಕಳುಹಿಸಲ್ಪಟ್ಟ, ಮತ್ತು ನನಗಾಗಿ ಪೂರ್ವದಿಕ್ಕನ್ನು ವಶಪಡಿಸಿಕೊಂಡು ಬಂದ ಮಾದ್ರೀಸುತ ನಕುಲನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023025a ಅಭ್ಯಾಭವೋ ದ್ವೈತವನೇ ಯ ಆಸೀದ್ ದುರ್ಮಂತ್ರಿತೇ ಘೋಷಯಾತ್ರಾಗತಾನಾಂ।
05023025c ಯತ್ರ ಮಂದಾಂ ಶತ್ರುವಶಂ ಪ್ರಯಾತಾನ್ ಅಮೋಚಯದ್ಭೀಮಸೇನೋ ಜಯಶ್ಚ।।
05023026a ಅಹಂ ಪಶ್ಚಾದರ್ಜುನಮಭ್ಯರಕ್ಷಂ ಮಾದ್ರೀಪುತ್ರೌ ಭೀಮಸೇನಶ್ಚ ಚಕ್ರೇ।
05023026c ಗಾಂಡೀವಭೃಚ್ಚತ್ರುಸಂಘಾನುದಸ್ಯ ಸ್ವಸ್ತ್ಯಾಗಮತ್ಕಚ್ಚಿದೇನಂ ಸ್ಮರಂತಿ।।
ಕೆಟ್ಟದಾಗಿ ಆಲೋಚಿಸಿ ಘೋಷಯಾತ್ರೆಗೆಂದು ದ್ವೈತವನಕ್ಕೆ ಬಂದಾಗ ಅಲ್ಲಿ ಆ ಮಂದಬುದ್ಧಿಗಳು ಶತ್ರುಗಳ ವಶವಾದಾಗ ಭೀಮಸೇನ ಮತ್ತು ಜಯರು ಅವರನ್ನು ಬಿಡುಗಡೆಗೊಳಿಸಿದ್ದುದನ್ನು, ನಾನು ಅರ್ಜುನನನ್ನು ಹಿಂಬಾಲಿಸಿ, ಮಾದ್ರೀಪುತ್ರರು ಭೀಮಸೇನನ ರಥಚಕ್ರವನ್ನು ರಕ್ಷಿಸಿದುದನ್ನು, ಗಾಂಡೀವಧರನು ಶತ್ರುಸಂಘಗಳನ್ನು ನಾಶಪಡಿಸಿ ಏನೂ ತೊಂದರೆಗೊಳಗಾಗದೇ ಹಿಂದಿರುಗಿ ಬಂದಿದ್ದುದನ್ನು ಅವರು ನೆನಪಿಸಿಕೊಳ್ಳುತ್ತಾರೆಯೇ?
05023027a ನ ಕರ್ಮಣಾ ಸಾಧುನೈಕೇನ ನೂನಂ ಕರ್ತುಂ ಶಕ್ಯಂ ಭವತೀಹ ಸಂಜಯ।
05023027c ಸರ್ವಾತ್ಮನಾ ಪರಿಜೇತುಂ ವಯಂ ಚೇನ್ ನ ಶಕ್ನುಮೋ ಧೃತರಾಷ್ಟ್ರಸ್ಯ ಪುತ್ರಂ।।
ಸಂಜಯ! ನಮ್ಮೆಲ್ಲರ ಆತ್ಮಗಳಿಂದಲೂ ನಾವು ಧೃತರಾಷ್ಟ್ರ ಪುತ್ರನನ್ನು ಗೆಲ್ಲಲು ಶಕ್ಯರಾಗಿಲ್ಲದಿರುವಾಗ ಒಂದೇ ಒಂದು ಒಳ್ಳೆಯ ಕೆಲಸದಿಂದ ಇದನ್ನು ಮಾಡಲು ಸಾದ್ಯವಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರಪ್ರಶ್ನೇ ತ್ರಯೋವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರಪ್ರಶ್ನೆಯಲ್ಲಿ ಇಪ್ಪತ್ಮೂರನೆಯ ಅಧ್ಯಾಯವು.